ಸಾಹಿತ್ಯಾನುಸಂಧಾನ

heading1

ದಶಾನನ ಸ್ವಪ್ನಸಿದ್ಧಿ-ಕುವೆಂಪು-ಭಾಗ-೧

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ದೀರ್ಘಪಠ್ಯ – ಭಾಗ-೧)

ನಕ್ಷತ್ರ ಖಚಿತ ಮೇಖಳೆಯಾದುದಯ್ ವೇಳೆ

ಕೃಷ್ಣಾಂಬರಾ ನಿಶಿ ಚತುರ್ದಶಿಗೆ. ನಡು ರಾತ್ರಿ,

ಶ್ರೀರಾಮ ಚಿತ್ತಪಸ್ ತೇಜಮುರಿಪಿದ ತನ್ನ

ಮೂಲಬಲ ಸಂಹೃತಿಗೆ ಧೃತಿ ಕಲಂಕಿದ ರೋಷ

ರಕ್ತಾಕ್ಷ ರಾತ್ರಿಂಚರೇಶ್ವರಂ, ಪೇಳ್ ತಾಯೆ

ಓ ವಾಗಧಿಷ್ಠಾತ್ರಿ, ತೊಡಗಿಹನದೇನಂ

ಮಹತ್ ಪೂಜೆಯಂ ಶರ್ವಮಂದಿರದೊಳೇಕಾಂಗಿ?

ಜ್ಞಾನಾಧಿದೇವಿ ನೀಂ, ಮೇಣ್ ವಿಜ್ಞಾನ ನೇತ್ರಿ:

ಹೊರ ನನ್ನಿಯೊಂದಲ್ಲದಂತಶ್ಚಕ್ಷು ತಾಂ ಕಾಣ್ಬ

ಲೌಕಿಕಾತೀತಮಹ ನಿತ್ಯಸತ್ಯಂಗಳಂ      ೧೦

ತೋರೆನಗೆ, ದೇವಿ, ವಿಶ್ವಾಂತರಾತ್ಮೆ! ಸ್ಥೂಲಮಂ

ಸೂಕ್ಷ್ಮಮಂ, ಕೋಶಕೋಶಗಳಿತರ ಕಾಲಮಂ

ದೇಶಮಂ. ಕಾರಣವನಂತೆ ಕಾರಣದಾಚೆ

ಲೀಲಾ ಮಹೋದ್ದೇಶಮಂ ಬಲ್ಲೆ ನೀಂ: ಕವಿಗೆ

ಕೃಪೆಗೆಯ್, ಅವಿದ್ಯೆ, ಹೇ ವಿದ್ಯೆ, ವಿದ್ಯಾತೀತೆ!

ಬಹಿರ್ ಘಟನೆಯಂ ಪ್ರತಿಕೃತಿಸುವಾ ಲೌಕಿಕ

ಚರಿತ್ರೆಯಲ್ತಿದು; ಅಲೌಕಿಕ ನಿತ್ಯಸತ್ಯಂಗಳಂ

ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ

ಶೀ ಕುವೆಂಪುವ ರಚಿಸಿದೀ ಮಹಾಛಂದಸಿನ

ಕೃತಿಮೇರು, ಕೇಳ್, ಜಗದ್ಭವ್ಯ ರಾಮಾಯಣಂ!  ೨೦

 ಅನ್ವಯಕ್ರಮ:

ಚತುರ್ದಶಿಗೆ ಕೃಷ್ಣಾಂಬರಾ ನಿಶಿ ನಕ್ಷತ್ರ ಖಚಿತ ಮೇಖಳೆ ಆದುದಯ್ ವೇಳೆ, ನಡುರಾತ್ರಿ, ಶ್ರೀರಾಮ ಚಿತ್ ತಪಸ್ ತೇಜಂ ಉರಿಪಿದ ತನ್ನ ಮೂಲಬಲ ಸಂಹೃತಿಗೆ ಧೃತಿ ಕಲಂಕಿದ ರೋಷ ರಕ್ತಾಕ್ಷ ರಾತ್ರಿಂಚರೇಶ್ವರಂ, ತೊಡಗಿಹನ್ ಅದೇನಂ ಮಹತ್ ಪೂಜೆಯಂ ಶರ್ವಮಂದಿರದೊಳ್ ಏಕಾಂಗಿ? ಪೇಳ್ ತಾಯೆ ಓ ವಾಕ್ ಅಧಿಷ್ಠಾತ್ರಿ, ಜ್ಞಾನ ಅಧಿದೇವಿ  ನೀಂ,  ಮೇಣ್ ವಿಜ್ಞಾನ ನೇತ್ರಿ; ಹೊರ ನನ್ನಿಯೊಂದು ಅಲ್ಲದೆ ಅಂತಶ್ಚಕ್ಷು ತಾಂ ಕಾಣ್ಬ ಲೌಕಿಕ ಅತೀತಮಹ ನಿತ್ಯಸತ್ಯಂಗಳಂ ಎನಗೆ ತೋರ್, ದೇವಿ, ವಿಶ್ವ ಅಂತರಾತ್ಮೆ! ಸ್ಥೂಲಮಂ ಸೂಕ್ಷ್ಮಮಂ. ಕೋಶ ಕೋಶಗಳ ಇತರ ಕಾಲಮಂ ದೇಶಮಂ. ಕಾರಣವನ್ ಅಂತೆ ಕಾರಣದ ಆಚೆ ಲೀಲಾ ಮಹಾ ಉದ್ದೇಶಮಂ ಬಲ್ಲೆ ನೀಂ, ಕವಿಗೆ ಕೃಪೆಗೆಯ್, ಅವಿದ್ಯೆ, ಹೇ ವಿದ್ಯೆ, ವಿದ್ಯಾ ಅತೀತೆ! ಇದು ಬಹಿರ್ ಘಟನೆಯಂ ಪ್ರತಿಕೃತಿಸುವ ಆ ಲೌಕಿಕ ಚರಿತ್ರೆಯಲ್ತು; ಅಲೌಕಿಕ ನಿತ್ಯಸತ್ಯಂಗಳಂ ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ ಶ್ರೀ ಕುವೆಂಪುವ ರಚಿಸಿದ ಈ ಮಹಾಛಂದಸಿನ ಮೇರು ಕೃತಿ, ಕೇಳ್, ಜಗತ್ ಭವ್ಯ ರಾಮಾಯಣಂ!  

ಪದ-ಅರ್ಥ:

ನಕ್ಷತ್ರಖಚಿತ-ನಕ್ಷತ್ರಗಳಿಂದ ಕೂಡಿದ; ಮೇಖಳೆಯಾದುದಯ್-ಒಡ್ಯಾಣವಾಯಿತು;   ಕೃಷ್ಣಾಂಬರಾ ನಿಶಿ-ಕಪ್ಪುಬಟ್ಟೆಯನ್ನು ಹೊದ್ದುಕೊಂಡಿರುವ ರಾತ್ರಿ;  ಚತುರ್ದಶಿ-ಹುಣ್ಣಿಮೆ ಅಥವಾ ಅಮವಾಸ್ಯೆಯ ಅನಂತರದ ಹದಿನಾಲ್ಕನೆಯ ದಿನ;  ಚಿತ್ತಪಸ್(ಚಿತ್+ತಪಸ್)-ಗುರಿಯೆಂಬ ತಪಸ್ಸು;  ತೇಜಮುರಿಪಿದ(ತೇಜಂ+ಉರಿಪಿದ)- ಶಕ್ತಿಯು ನಾಶಮಾಡಿದ;  ಸಂಹೃತಿ-ಸಂಹಾರ, ನಾಶ;  ಧೃತಿ ಕಲಂಕಿದ ರೋಷ-ಧೈರ್ಯವನ್ನು ಕದಡಿದ ಕೋಪ;  ರಕ್ತಾಕ್ಷ-ರಕ್ತದಂತೆ ಕೆಂಪಾದ ಕಣ್ಣುಳ್ಳವನು(ರಾವಣ);  ರಾತ್ರಿಂಚರೇಶ್ವರ-ರಾಕ್ಷಸರ ರಾಜ(ರಾವಣ); ವಾಗಧಿಷ್ಠಾತ್ರಿ-ವಾಗಧಿದೇವತೆ, ಸರಸ್ವತಿ;  ಶರ್ವಮಂದಿರ-ಶಿವಮಂದಿರ, ಶಿವಾಲಯ;  ಏಕಾಂಗಿ-ಒಬ್ಬಂಟಿ;  ಜ್ಞಾನಾಧಿದೇವಿ-ಜ್ಞಾನದ ಅಧಿದೇವತೆ  (ಸರಸ್ವತಿ);  ಮೇಣ್-ಮತ್ತು;  ವಿಜ್ಞಾನನೇತ್ರಿ-ವಿಶೇಷ ಜ್ಞಾನದೃಷ್ಟಿಯುಳ್ಳವಳು (ಸರಸ್ವತಿ);  ಹೊರನನ್ನಿ-ಬಾಹ್ಯಸತ್ಯ, ದೃಷ್ಟಿಗೆ ಗೋಚರವಾಗುವ ಸತ್ಯ; ಅಂತಶ್ಚಕ್ಷು-ಅಂತರ್ ದೃಷ್ಟಿ;  ಲೌಕಿಕಾತೀತಮಹ-ಇಹಲೋಕಕ್ಕೆ ಮೀರಿರುವ; ವಿಶ್ವಾಂತರಾತ್ಮೆ-ವಿಶ್ವದ ಅಂತರಾತ್ಮದಲ್ಲಿ ನೆಲೆಸಿರುವವಳು;  ಸ್ಥೂಲವಂ-ಬೃಹತ್ತನ್ನು;  ಕೋಶ-ಭಂಡಾರ, ಆಯುಧಾಗರ; ಮಹೋದ್ದೇಶ-ಹಿರಿಯ ಉದ್ದೇಶ;  ಅವಿದ್ಯೆ-ಮಾಯೆ;  ವಿದ್ಯಾತೀತೆ-ವಿದ್ಯೆಗೆ ಮೀರಿದವಳು;  ಬಹಿರ್ ಘಟನೆ-ಕಣ್ಣಿಗೆ ಕಾಣಿಸುವ ಘಟನೆ; ಪ್ರತಿಕೃತಿಸುವ-ರಚಿಸುವ, ನಿರ್ಮಿಸುವ;  ಅಲೌಕಿಕ-ಇಹಲೋಕಕ್ಕೆ ಮೀರಿದ, ಪರಲೋಕಕ್ಕೆ ಸಂಬಂಧಿಸಿದ;  ಪ್ರತಿಮಿಸುವ-ರೂಪಿಸುವ;  ಸತ್ಯಸ್ಯ ಸತ್ಯ-ಸತ್ಯದಲ್ಲಿ ಸತ್ಯವಾಗಿರುವ, ಅಪ್ಪಟ ಸತ್ಯ;  ಕೃತಿಮೇರು-ಹಿರಿದಾದ ಕೃತಿ, ಮಹತ್ತಾದ ಕೃತಿ; ಜಗದ್ಭವ್ಯ-ಜಗತ್ತಿಗೆ ಭವ್ಯವಾಗಿರುವ. 

            ತನ್ನ ಸಹೋದರ ಕುಂಭಕರ್ಣನ, ತನ್ನ ಮಗನಾದ ಇಂದ್ರಜಿತ್ತುವಿನ, ತನ್ನ ಕಡೆಯ ಮಹಾವೀರಾಧಿ ವೀರರ  ಸಾವಿನಿಂದಾಗಿ ರಾವಣ ತನ್ನ ಅರ್ಧಕ್ಕರ್ಧ ಶಕ್ತಿಯನ್ನು ಕಳೆದುಕೊಂಡಿದ್ದಾನೆ. ಎಲ್ಲೆಲ್ಲೂ ವಿಷಾಧದ ಛಾಯೆ ಆವರಿಸಿದೆ. ಹಾಗಾಗಿ ಲಂಕಾಧಿಪತಿ ರಾವಣನ ಪಾಲಿಗೆ ಚತುರ್ದಶಿಯ ರಾತ್ರಿಯು ಕತ್ತಲೆಯ ಕಪ್ಪುಬಟ್ಟೆಯನ್ನು ಹೊದ್ದುಕೊಂಡಂತಿದೆ. ಅವನ ಸ್ಥಿತಿಯು ಕಪ್ಪಾಗಿರುವ ಆಕಾಶವು ನಕ್ಷತ್ರಗಳಿಂದ ರಚಿತವಾದ ಮೇಖಲೆಯನ್ನು ಕಟ್ಟಿಕೊಂಡಂತೆ ಕಾಣಿಸುತ್ತಿದೆ. ಶ್ರೀರಾಮನ ಗುರಿ ಎಂಬ ತಪಸ್ಸು ತನ್ನ ಸಮಸ್ತ ಸೈನ್ಯವನ್ನು ಸಂಹರಿಸಿ ನಾಶಮಾಡಿದೆ. ತನ್ನವರನ್ನೂ ನಾಮಾವಶೇಷಗೊಳಿಸಿದೆ. ಇವೆಲ್ಲವುಗಳಿಂದ ಕ್ರೋಧೋದಿಕ್ತನಾಗಿ, ರಕ್ತದಂತೆ ಕೆಂಪಾದ ಕಣ್ಣುಗಳಿಂದ ಕೂಡಿದ ರಾವಣೇಶ್ವರನು ನಡುರಾತ್ರಿಯಲ್ಲಿ ಒಬ್ಬಂಟಿಗನಾಗಿ ಶಿವಮಂದಿರದಲ್ಲಿ ತನ್ನ ಗೆಲುವಿನ ಸಂಕಲ್ಪಸಿದ್ಧಿಗಾಗಿ ಯಾವುದೋ ಮಹಾಪೂಜೆಯಲ್ಲಿ ತೊಡಗಿಕೊಂಡಿದ್ದಾನೆ.

            ಕವಿ ಕುವೆಂಪುರವರು ರಾವಣನ ಈ ಗೆಲುವಿನ ಹಾಗೂ ಸಂಕಲ್ಪದ ಸಿದ್ಧಿಗಾಗಿ ನಡೆಸುತ್ತಿರುವ ಮಹಾಪೂಜೆಯ ಕಥಾನಕವನ್ನು ಕಾವ್ಯವಾಗಿ ರಚಿಸಲು ಸಂಕಲ್ಪಿಸಿದ್ದಾರೆ. ಅದಕ್ಕೆ ಪೂರಕವಾಗಿ, “ಮಾತಿನ, ಜ್ಞಾನದ ಮತ್ತು ವಿಜ್ಞಾನದ ಅಧಿದೇವತೆಯಾದ ಸರಸ್ವತಿಯೇ, ನಮ್ಮ ಹೊರಗಣ್ಣಿಗೆ ಕಾಣಿಸುವ ಸತ್ಯವನ್ನಲ್ಲದೆ, ಹೊರಗಣ್ಣಿಗೆ ಕಾಣಿಸದ ನಮ್ಮ ಅಂತರ್ ದೃಷ್ಟಿಗೆ   ಮಾತ್ರ ಗೋಚರವಾಗುವ  ಶಾಶ್ವತಸತ್ಯಗಳನ್ನು ನಮಗೆ ತೋರಿಸು” ಎಂದು ಬೇಡಿಕೊಳ್ಳುತ್ತಾರೆ. “ದೇವಿ ಸರಸ್ವತಿಯೇ, ನೀನು ವಿಶ್ವದ ಅಂತರಾತ್ಮದಲ್ಲಿ ನೆಲೆಸಿರುವವಳು, ಸ್ಥೂಲವನ್ನೂ ಸೂಕ್ಷ್ಮವನ್ನೂ ಬಲ್ಲವಳು, ಕೋಶ ಕೋಶಗಳನ್ನು ಹಾಗೂ ಇತರ ಕಾಲ ದೇಶಾದಿಗಳನ್ನು ಬಲ್ಲವಳು. ಲೋಕದ ಪ್ರತಿಯೊಂದು ಘಟನೆಗಳಿಗೂ ಮೂಲವಾಗಿರುವ  ಕಾರ್ಯ ಕಾರಣಗಳನ್ನೂ ಅದರ ಆಚೆಗಿರುವ ಮಹಾ ಉದ್ದೇಶಗಳನ್ನೂ  ಬಲ್ಲವಳು. ನೀನು ಮಾಯೆಯೂ ವಿದ್ಯೆಯೂ ವಿದ್ಯೆಯನ್ನು ಮೀರಿದವಳೂ ಆಗಿರುವೆ. ತಾನು ರಚಿಸುತ್ತಿರುವ ಈ ಕಥಾನಕನವು ಕೇವಲ ಮನುಷ್ಯರ  ಕಣ್ಣಿಗೆ ಕಾಣಿಸುವ ಘಟನೆಯೂ ಅಲ್ಲ, ಲೌಕಿಕ ಚರಿತ್ರೆಯೂ ಅಲ್ಲ. ಇದು ಶಾಶ್ವತವಾದ ಸತ್ಯಗಳನ್ನು ನಿರೂಪಿಸುವ, ಸತ್ಯದಲ್ಲೂ ಸತ್ಯವೆನಿಸಿರುವ ಕಥೆ, ತಾನು ರಚಿಸುತ್ತಿರುವ ಮಹಾಛಂದಸ್ಸಿನ ಮೇರುಕೃತಿ, ಜಗತ್ತಿಗೆ ಭವ್ಯವೆನಿಸಿರುವ ರಾಮಾಯಣ ಕೃತಿ. ಈ ಕಾವ್ಯದ ಕಥನ ನಿರ್ವಹಣೆಯಲ್ಲಿ ತನಗೆ ಆಶೀರ್ವದವಿರಲಿ” ಎಂದು ಕುವೆಂಪು ಸರಸ್ವತಿಯನ್ನು ಬೇಡಿಕೊಳ್ಳುತ್ತಾರೆ.     

 

    ರತ್ನಪ್ರದೀಪಮಯ ಹೇಮಮಂದಿರದಲ್ಲಿ

ಸಂಕಲ್ಪ ಸಿದ್ಧಿಗೆ ಮಹಾದುರ್ಗೆಯಂ ತಣಿಸಿ

ವೈರಿವಿಧ್ವಂಸನ ವರಂಗಳಂ ಪಡೆಯಲ್

ಮನಂದಂದು ದೃಢಮತಿ ತಪಃಕೃತಿಯೊಳಿರ್ದ್ದಂ

ದಶಾನನಂ. ಧವಳ ಶಿವ ವಕ್ಷ ವೇದಿಯನೇರಿ,

ಜೋಲ್ವ ಜಿಹ್ವೆಯ ಶೋಣಿತಸ್ರೋತಮಂ ಕಾರಿ,

ರುಂಡ ಮಾಲಾಭೀಳ ಕಂಠಾವತಂಸದಿಂ

ನರಕರ ಸ್ತೋಮ ವಿರಚಿತ ಕಟಿಯ ವಸ್ತ್ರದಿಂ

ಬಹು ಬಾಹು ಭೀಕರಾಯುಧಪಾಣಿ, ದಿಗ್ ವ್ಯಸ್ತ

ಕಾಳೋಗ್ರ ವೇಣಿ, ತ್ರಿಣೇತ್ರೆ, ತ್ರಿಜಗನ್ಮಾತೆ,      ೩೦

ಮಾಯೆ ಮೇಣ್ ಪ್ರಕೃತಿ ಮೇಣ್ ಶಕ್ತಿ ಮೇಣ್ ಲೀಲೆ,

ಸೃಷ್ಟಿಸ್ಥಿತಿಪ್ರಲಯ ಶೀಲೆ ತಾನೆಸೆದಳಯ್

ದೈತ್ಯ ಪೂಜಾ ಮೂರ್ತಿ, ಕಾಲಾತ್ಮಕೆ, ಕರಾಳಿ,

ನಾಟ್ಯ ಭಂಗಿಯ ಜಗನ್ನಟರಾಜ್ಞಿ! ಸುತ್ತುಂ

ಜಪಾ ಕುಸುಮ ಕುಂಕುಮ ಬಲಿಗಳೆಸೆದುವಯ್ ಕಣ್

ಪೆಳರ್ವವೋಲ್, ವರಲೋಭಿ ಲೋಹಿತಾಂಬರ ಶೋಭಿ

ರಾವಣಂ ಹೋಮ ಧೂಮಾವರಣ ನೀಲಾಭ

ಕಾಳಿಕಾ ಮೂರ್ತಿಯಂ ದಿಟ್ಟಿ ನಟ್ಟೀಕ್ಷಿಸುತೆ

ಕಾಯುತಿರ್ದನು ತನ್ನಭೀಷ್ಟಕೆ ಮುಹೂರ್ತಮಂ

ತನ್ನಿಷ್ಟ ದೇವತಾವಿಷ್ಕಾರದಾ. ಸೃಷ್ಟಿಯುಂ     ೪೦

 ಅನ್ವಯಕ್ರಮ:

ದಶಾನನಂ, ರತ್ನಪ್ರದೀಪಮಯ ಹೇಮಮಂದಿರದಲ್ಲಿ ಸಂಕಲ್ಪಸಿದ್ಧಿಗೆ ದುರ್ಗೆಯಂ ತಣಿಸಿ, ವೈರಿವಿಧ್ವಂಸನ ವರಂಗಳಂ ಪಡೆಯಲ್ ಮನಂದಂದು ದೃಢಮತಿ ತಪಃಕೃತಿಯೊಳ್ ಇರ್ದಂ. ಧವಳ ಶಿವ ವಕ್ಷ ವೇದಿಯನ್ ಏರಿ, ಜೋಲ್ವ ಜಿಹ್ವೆಯ ಶೋಣಿತಸ್ರೋತಮಂ ಕಾರಿ, ರುಂಡ ಮಾಲ ಆಭೀಳ ಕಂಠ ಅವತಂಸದಿಂ ನರಕರ ಸ್ತೋಮ ವಿರಚಿತ ಕಟಿಯ ವಸ್ತ್ರದಿಂ, ಬಹು ಬಾಹು ಭೀಕರ ಆಯುಧಪಾಣಿ, ದಿಗ್ ವ್ಯಸ್ತ ಕಾಳೋಗ್ರವೇಣಿ, ತ್ರಿಣೇತ್ರೆ, ತ್ರಿಜಗನ್ಮಾತೆ, ಮಾಯೆ, ಮೇಣ್ ಪ್ರಕೃತಿ ಮೇಣ್ ಶಕ್ತಿ ಮೇಣ್ ಲೀಲೆ, ಸೃಷ್ಟಿ ಸ್ಥಿತಿ ಪ್ರಲಯಶೀಲೆ  ತಾನ್ ಎಸೆದಳಯ್ ದೈತ್ಯ ಪೂಜಾ ಮೂರ್ತಿ, ಕಾಲಾತ್ಮಕೆ, ಕರಾಳಿ, ನಾಟ್ಯ ಭಂಗಿಯ ಜಗತ್ ನಟರಾಜ್ಞಿ! ಸುತ್ತುಂ ಜಪಾ ಕುಸುಮ ಕುಂಕುಮ ಬಲಿಗಳ್ ಕಣ್ ಪೆಳರ್ವವೋಲ್ ಎಸೆದುವಯ್, ವರಲೋಭಿ ಲೋಹಿತ ಅಂಬರ ಶೋಭಿ ರಾವನಂ ಹೋಮ ಧೂಮಾವರಣ ನೀಲಾಭ ಕಾಳಿಕಾ ಮೂರ್ತಿಯಂ ದಿಟ್ಟಿ ನಟ್ಟು ಈಕ್ಷಿಸುತೆ ತನ್ನ ಇಷ್ಟದೇವತಾ ಆವಿಷ್ಕಾರದ ತನ್ನ ಆ ಅಭೀಷ್ಟಕೆ, ಮುಹೂರ್ತಮಂ ಕಾಯುತ ಇರ್ದನು.  

ಪದ-ಅರ್ಥ:

ರತ್ನಪ್ರದೀಪಮಯ-ರತ್ನದ ದೀಪಗಳಿಂದ ಕೂಡಿದ;  ಹೇಮಮಂದಿರ-ಚಿನ್ನದ ಮಂದಿರ;  ಸಂಕಲ್ಪಸಿದ್ಧಿ-ಕಲ್ಪಿಸಿಕೊಂಡುದರ ಸಫಲತೆ;  ದುರ್ಗೆಯಂ ತಣಿಸಿ-ದುರ್ಗೆಯನ್ನು ಮೆಚ್ಚಿಸಿ;  ವೈರಿವಿಧ್ವಂಸನ ವರಂಗಳಂ-ವೈರಿಯನ್ನು ನಾಶಮಾಡುವ ವರಗಳನ್ನು;  ಮನಂದಂದು-ಮನಸ್ಸಿನಲ್ಲಿ ನಿಶ್ಚಯಿಸಿ;  ದೃಢಮತಿ-ನಿಶ್ಚಲವಾದ ಬುದ್ಧಿಯವನು;  ತಪಃಕೃತಿ-ತಪಸ್ಸೆಂಬ ಕಾರ್ಯ;  ದಶಾನನ-ರಾವಣ;  ಧವಳ-ಬೆಳ್ಳಗಿನ;  ಶಿವವಕ್ಷ ವೇದಿ-ಶಿವೆಯ ಎದೆಯೆಂಬ ವೇದಿಕೆ;  ಜೋಲ್ವ ಜಿಹ್ವೆ-ಜೋತಾಡುವ ನಾಲಗೆ;  ಶೋಣಿತಸ್ರೋತ– ರಕ್ತದ ಪ್ರವಾಹ;  ರುಂಡ ಮಾಲಾಭೀಳ-ರುಂಡಗಳ ಮಾಲೆಗಳಿಂದ ಭಯಂಕರವಾದ;   ಕಂಠಾವತಂಸ-ಕುತ್ತಿಗೆಯ ಆಭರಣ; ನರಕರಸ್ತೋಮ-ಮನುಷ್ಯರ ಕೈಗಳ ಸಮೂಹ;  ವಿರಚಿತ-ರಚಿತವಾದ; ಕಟಿಯ ವಸ್ತ್ರ-ಸೊಂಟಕ್ಕೆ ಸುತ್ತುವ ಬಟ್ಟೆ;  ಬಹುಬಾಹು-ಹಲವು ಭುಜಗಳು;  ಭೀಕರಾಯುಧಪಾಣಿ-ಭೀಕರವಾದ ಆಯುಧಗಳನ್ನು ಕೈಗಳಲ್ಲಿ ಹಿಡಿದುಕೊಂಡವಳು;  ದಿಗ್ ವ್ಯಸ್ತ-ದಿಕ್ಕುಗಳವರೆಗೆ ಹರಡಿದ;  ಕಾಳೋರಗವೇಣಿ-ಕಾಳಿಂಗ ಹಾವಿನಂತಹ ಜಡೆಯುಳ್ಳವಳು;  ತ್ರಿಣೇತ್ರೆ-ಮೂರು ಕಣ್ಣುಗಳುಳ್ಳವಳು;  ತ್ರಿಜಗನ್ಮಾತೆ-ಮೂರು ಲೋಕಗಳಿಗೆ ಮಾತೆಯಾದವಳು(ಕಾಳಿಕಾದೇವಿ);  ಮೇಣ್-ಮತ್ತು;  ಸ್ಥಿತಿಪ್ರಲಯಶೀಲೆ-ಇರವು ಹಾಗೂ ನಾಶ ಮಾಡುವವಳು;  ಎಸೆದಳ್– ಶೋಭಿಸಿದಳು; ದೈತ್ಯ-ಹಿರಿದಾದ; ಕಲಾತ್ಮಕೆ-ಕಲಾತ್ಮಕತೆಯನ್ನು ಉಳ್ಳವಳು;  ಕರಾಳಿ-ಭೀಕರಳಾದವಳು;  ಜಗನ್ನಟರಾಜ್ಞಿ-ಪಾರ್ವತಿದೇವಿ( ಕಾಳಿಕಾದೇವಿ);  ಸುತ್ತುಂ-ಸುತ್ತಲೂ;  ಜಪಾ ಕುಸುಮ-ದಾಸವಾಳ ಹೂ;  ಬಲಿ-ಆಹುತಿ; ಎಸೆದುವಯ್-ಶೋಭಿಸಿದವು; ಪೆಳರ್ವವೋಲ್-ಭಯಹುಟ್ಟಿಸುವ ಹಾಗೆ;  ವರಲೋಭಿ-ವರಗಳ ಆಸೆಬುರುಕ(ರಾವಣ);  ಲೋಹಿತಾಂಬರಶೋಭಿ-ರಕ್ತವರ್ಣದ ಬಟ್ಟೆಯಿಂದ ಶೋಭಿಸುವವನು;  ಹೋಮ ಧೂಮಾವರಣ-ಹೋಮದ ಹೊಗೆಯಿಂದ ಆವೃತ್ತವಾದ;  ನೀಲಾಭ-ಕಪ್ಪಾದ;  ದಿಟ್ಟಿ ನಟ್ಟು ಈಕ್ಷಿಸು-ನೆಟ್ಟ ದೃಷ್ಟಿಯಿಂದ ನೋಡು; ಅಭೀಷ್ಟ-ಬಯಸಿದ;  ಆವಿಷ್ಕಾರದ-ಪ್ರಕಟವಾಗುವ.

            ದಶಾನನನಾಗಿರುವ ರಾವಣನು ರತ್ನದ ದೀಪಗಳಿಂದ ಕೂಡಿದ ತನ್ನ ಹೇಮಮಂದಿರದಲ್ಲಿ  ತಾನು ತನ್ನ ಮನಸ್ಸಿನಲ್ಲಿ ಸಂಕಲ್ಪಿಸಿರುವ ಇಷ್ಟಾರ್ಥಸಿದ್ಧಿಗೆ ಮಹಾದುರ್ಗೆಯನ್ನು ವಿವಿಧ ಆರಾಧನೆಯಿಂದ ತೃಪ್ತಿಪಡಿಸುತ್ತ, ತನ್ನ ವೈರಿಯಾಗಿರುವ ರಾಮನನ್ನು ನಾಶಮಾಡಲು ಸೂಕ್ತ ವರಗಳನ್ನು ಪಡೆಯಲು ಮನಸ್ಸಿನಲ್ಲಿಯೇ ನಿರ್ಧರಿಸಿದ್ದಾನೆ. ಅದಕ್ಕಾಗಿಯೇ ಕಾಳಿಕಾಲಯದಲ್ಲಿ ಏಕಾಂಗಿಯಾಗಿದ್ದು  ಮನಸ್ಸನ್ನು ಸ್ಥಿರಗೊಳಿಸಿಕೊಂಡು ಪೂಜೆಯನ್ನೇ ತಪಸ್ಸೆಂದು ಭಾವಿಸಿಕೊಂಡು  ಆರಾಧನಾಕಾರ್ಯದಲ್ಲಿ ನಿಶ್ಚಲಬುದ್ಧಿಯಿಂದ ಮಗ್ನನಾಗಿದ್ದಾನೆ. ಆತನ ಮುಂಭಾಗದಲ್ಲಿ, ಬೆಳ್ಳಗೆ ಸುಂದರವಾಗಿದ್ದು, ಎದೆಯ ಭಾಗದಲ್ಲಿ, ನಾಲಗೆಗಳನ್ನು ಹೊರಚಾಚುತ್ತ ರಕ್ತದ ಪ್ರವಾಹವನ್ನು ಹರಿಸುತ್ತ, ಕಣ್ಣಿಗೆ ಭಯಹುಟ್ಟಿಸುತ್ತಿರುವ ರುಂಡಗಳಿಂದ ರಚಿತವಾಗಿ, ಭೀಕರವಾಗಿ ಕಾಣುವ ಕಂಠಾಭರಣ; ತನ್ನ ವಿವಿಧ ಬಾಹುಗಳಲ್ಲಿ ವಿವಿಧ ಆಯುಧಗಳನ್ನು ಹಿಡಿದುಕೊಂಡು ರೌದ್ರವಾಗಿ ಕಾಣುತ್ತಿರುವ ಮುಖ; ತನ್ನ ಜಡೆಗಳನ್ನು ದಿಕ್ಕಿಗಳವರೆಗೂ ಚಾಚಿಕೊಂಡಿರುವ ಕೇಶರಾಶಿ; ಮೂರು ಕಣ್ಣುಗಳಿಂದ ಕೂಡಿದ, ಮೂರೂ ಲೋಕಗಳಿಗೂ ಒಡತಿಯಾಗಿರುವ, ಮಾಯೆ ಎನಿಸಿಕೊಂಡು, ಮತ್ತು ಪ್ರಕೃತಿಯೂ ಆಗಿರುವ, ಶಕ್ತಿಸ್ವರೂಪಿಣಿ ಹಾಗೂ ವಿವಿಧ ಲೀಲೆಗಳನ್ನು ತೋರಿಸುವ, ಸೃಷ್ಟಿ, ಸ್ಥಿತಿ ಹಾಗೂ ಪ್ರಳಯಗಳನ್ನು ನಿರ್ವಹಿಸುವ,  ಕಾಳಿಕಾದೇವಿ ಕಲಾತ್ಮಕತೆಯಿಂದ ಕೂಡಿ, ಭೀಕರಳಾದ, ನಾಟ್ಯಭಂಗಿಯ ಚಂಡಿಕಾದೇವಿ(ಪಾರ್ವತಿದೇವಿ) ಅತ್ಯಂತ ದೊಡ್ಡದಾದ ಮೂರ್ತಿರೂಪದಲ್ಲಿ ಶೋಭಿಸುತ್ತಿದ್ದಾಳೆ.

            ಕಾಳಿಕಾದೇವಿಯ ಬೃಹತ್ ಮೂರ್ತಿಯ ಸುತ್ತಲೂ ಈಗಾಗಲೇ ಅರ್ಪಿಸಲಾಗಿರುವ ದಾಸವಾಳ ಹೂವುಗಳು, ಕುಂಕುಮ, ಆಹುತಿಗಳು ಕಣ್ಣುಗಳಿಗೆ ಭಯಭೀತವಾಗುವಂತೆ ಶೋಭಿಸುತ್ತಿವೆ.  ತನ್ನ ವೈರಿಯನ್ನು ನಾಶಮಾಡುವ ವರಗಳನ್ನು ಪಡೆಯುವ ಅತಿಯಾದ  ಹಂಬಲದಿಂದ ವರಲೋಭಿ ಎನಿಸಿಕೊಂಡಿರುವ ರಾವಣನು ಕೆಂಪುಬಟ್ಟೆಯನ್ನು ಧರಿಸಿಕೊಂಡು, ಪೂಜಾಕಾರ್ಯದಲ್ಲಿ ತನ್ಮಯನಾಗಿದ್ದಾನೆ.  ರಾವಣನು ಗೈದ ಸಂಕಲ್ಪಸಿದ್ಧಿಯ ಹೋಮದ ಹೊಗೆಯಿಂದ ಆವೃತ್ತಳಾಗಿ ಕಾಳಿಕಾದೇವಿ ಮತ್ತಷ್ಟು ಕಪ್ಪಾಗಿ ಕಾಣುತ್ತಿದ್ದಾಳೆ. ಹಾಗೆ ಭೀಕರವಾಗಿ ಕಾಣುತ್ತಿರುವ  ಕಾಳಿಕಾದೇವಿಯ ಮೂರ್ತಿಯ ಮೇಲೆ ತನ್ನ ದೃಷ್ಟಿಯನ್ನು ದೃಢವಾಗಿ ನೆಟ್ಟು, ಆಕೆಯನ್ನೇ ನೋಡುತ್ತ ತನ್ನ ಇಷ್ಟದೇವತೆಯಾದ ಕಾಳಿಕಾದೇವಿಯಿಂದ ಪ್ರಕಟವಾಗುವ ವರಗಳನ್ನು ಕೇಳುವುದಕ್ಕೆ ಮತ್ತು ತನ್ನ ಇಷ್ಟಾರ್ಥ ನೆರವೇರುವುದಕ್ಕೆ ಮುಹೂರ್ತವನ್ನು ಕಾಯುತ್ತಿದ್ದಾನೆ.

 

                                                  ಸೃಷ್ಟಿಯುಂ     ೪೦

ನಿಂದುದುತ್ಕಂಠ ಭೀತಿಯಿನಸುರ ದೃಷ್ಟಿಗ್ರಹಂ

ಬಡಿದವೋಲ್. ದೈತ್ಯಭಕ್ತನ ಭೀಷ್ಮಭಕ್ತಿಗೆ

ಜಗಜ್ಜನನಿ ತನ್ನ್ ಅಚಿತ್ ತಾಟಸ್ಥ್ಯವಂ ತೊರೆದು

ಗೋಚರಿಸಲೆಳಸುತಿರೆ ಚಿದ್ರೂಪದಿಂ: “ತಾಳ್,

ಮಹಾ ತಾಯಿ, ತಾಳ್!”  ದೇವಗಣಮೊದರಿದುದು ಗಗನ

ಗಂಗಾಮೃತಾರ್ಘ್ಯಪಾದ್ಯಂಗಳಿಂ ತಾಯ್ಗೆರಗಿ,

“ನೀನಿಂದು ಮೈದೋರಲೀ ಭುವನಭೀಕರಗೆ

ಕೇಳ್ವನು ವರಂಗಳಂ ಧರ್ಮಕ್ಷಯಕೆ ದಿಟಂ

ಸಾಧನಗಳಂ!” ಹೊಸ್ತಿಲೊಳ್ ನಿಂದಳೋಲಂತೆ

ಚಿತ್ತಚಿತ್ತುಗಳೆಡೆಯೊಳಿರ್ಬಗೆಯೊಳಾ ದುರ್ಗೆ  ೫೦

ಅತ್ತಲಿತ್ತಲ್ ತೂಗಿದಳ್ ಲೀಲಾ ವಿನೋದೆ!

ಕಾಲ್ವಿಡಿದ ದೇವರ್ಕಳಿಗೆ ಸಮಾಧಾನಮಂ

ಮುಗುಳುನಗೆಯಿಂ ಮನೋಗೋಚರಮೆನಲ್ ದೇವಿ

ಸೂಚಿಸುತಿರಲ್, ತಾಯಿ ತಡೆದುದಕೆ ಕಡುಮುಳಿದು

ತುಡುಕಿದನು ಕಡುಗಮಂ ದೈತ್ಯರೊಡೆಯಂ:

                                                                    “ಏಕೆ

ತಡೆಯುತಿಹೆ, ತಾಯಿ? ಭಕ್ತನ ಧೃತಿ ಪರೀಕ್ಷೆಗೇಂ?

ಪೂ ಪಣ್ಣು ಬಲಿ ನಿನಗೆ ಸಾಲದಿರೆ, ಇದೊ ನೋಡು,

ಒಂದುರುಳಲಾಯೆಡೆಯೆ ಮತ್ತೊಂದು ಮೂಡುವಾ

ಹತ್ತು ತಲೆಗಳವರೆಗೆ ಕತ್ತರಿಸಿ ಕೊಡಲೆನಗೆ

ಇರ್ಪುದಾಯುಶ್ರೀ! ನಿವೇದಿಸುವೆನಿದೆ ಕೊಳ್!”    ೬೦

ವಿಕಂಪಿಸೆ ಶಿಲಾಶರೀರಂ, ವಿಕಂಪಿಸಿತು ಕೇಳ್

ಶಿವಮಂದಿರಂ! ತಟಿದ್ ರೋಚಿಮಯ ವೀಚಿಮಯ

ಸಾಗರಂ ಮೇರೆಯಿಲ್ಲದ ಮಹಾದೂರದಿಂ

ಮೇಲ್ವಾಯ್ದುದಾ ರುಂದ್ರ ದರ್ಶನಕೆ ಚೇತನಂ-

ಗೆಟ್ಟನೋಲುರುಳಿದನು ದೈತ್ಯೇಂದ್ರನದ್ಭುತ

ಸಮಾಧಿಗಾ ಸ್ವಾಪ್ನಿಕ ಮನೋಮಯಕೆ:

ಅನ್ವಯಕ್ರಮ:

ಸೃಷ್ಟಿಯುಂ ನಿಂದುದು ಉತ್ಕಂಠ ಭೀತಿಯಿನ್ ಅಸುರ ದೃಷ್ಟಿಗ್ರಹಂ ಬಡಿದವೋಲ್, ದೈತ್ಯಭಕ್ತನ ಭೀಷ್ಮಭಕ್ತಿಗೆ ಜಗತ್ ಜನನಿ ತನ್ನ ಅಚಿತ್ ತಾಟಸ್ಥ್ಯಮಂ ತೊರೆದು ಚಿದ್ರೂಪದಿಂ ಗೋಚರಿಸಲ್ ಎಳಸುತಿರೆ: “ತಾಳ್, ಮಹಾ ತಾಯಿ, ತಾಳ್!” ದೇವಗಣಂ ಒದರಿದುದು ಗಗನ ಗಂಗಾ ಅಮೃತ ಅರ್ಘ್ಯ ಪಾದ್ಯಂಗಳಿಂ ತಾಯ್ಗೆ ಎರಗಿ, “ನೀನ್ ಇಂದು ಈ ಭುವನಭೀಕರಗೆ ಮೈದೋರಲ್ ಧರ್ಮಕ್ಷಯಕೆ ದಿಟಂ ವರಂಗಳಂ, ಸಾಧನಂಗಳಂ ಕೇಳ್ವನು!” ಆ ದುರ್ಗೆ   ಹೊಸ್ತಿಳೊಳ್ ಚಿತ್ತ ಚಿತ್ತುಗಳ ಎಡೆಯೊಳ್ ಇರ್ಬಗೆಯೊಳ್ ಓಲಂತೆ ನಿಂದಳ್, ಲೀಲಾ ವಿನೋದೆ ಅತ್ತಲ್ ಇತ್ತಲ್ ತೂಗಿದಳ್. ಕಾಲ್ ಪಿಡಿದ ದೇವರ್ಕಳಿಗೆ ದೇವಿ ಸಮಾಧಾನಮಂ ಮುಗುಳುನಗೆಯಿಂ ಮನೋ ಗೋಚರಂ ಎನಲ್ ಸೂಚಿಸುತಿರಲ್, ತಾಯಿ ತಡೆದುದಕೆ ದೈತ್ಯರ ಒಡೆಯ ಕಡುಮುಳಿದು ಕಡುಗಮಂ ತುಡುಕಿದನು:  “ಏಕೆ ತಡೆಯುತಿಹೆ , ತಾಯಿ? ಭಕ್ತನ ಧೃತಿ ಪರೀಕ್ಷೆಗೇಂ? ಪೂ ಪಣ್ಣು ಬಲಿ ನಿನಗೆ ಸಾಲದಿರೆ, ಇದೋ ನೋಡು, ಒಂದು ಉರುಳಲ್ ಆ ಎಡೆಯೆ ಮತ್ತೊಂದು ಮೂಡುವ ಆ ಹತ್ತು ತಲೆಗಳವರೆಗೆ ಕತ್ತರಿಸಿ ಕೊಡಲ್ ಎನಗೆ ಆಯುಶ್ರೀ ಇರ್ಪುದು! ನಿವೇದಿಸುವೆನ್ ಇದೆ ಕೊಳ್! ವಿಕಂಪಿಸೆ ಶಿಳಾಶರೀರಂ, ಕೇ॑ಳ್ ಶಿವಮಂದಿರಂ ವಿಕಂಪಿಸಿತು . ತಟಿದ್ ರೋಚಿಮಯ ವೀಚಿಮಯ ಸಾಗರಂ ಮೇರೆಯಿಲ್ಲದ ಮಹಾದೂರದಿಂ ಮೇಲ್ ಹಾಯ್ದುದು ಆ ರುಂದ್ರ ದರ್ಶನಕೆ ಚೇತನಂ ಕೆಟ್ಟನೋಲ್ ಉರುಳಿದನು ದೈತ್ಯೇಂದ್ರನ್ ಅದ್ಭುತ ಸಮಾಧಿಗೆ ಆ ಸ್ವಾಪ್ನಿಕ ಮನೋಮಯಕೆ:

ಪದ-ಅರ್ಥ:

ನಿಂದುದು-ತಟಸ್ಥವಾಯಿತು; ಉತ್ಕಂಠ ಭೀತಿ-ಅತಿಯಾದ ಭಯ;  ಅಸುರ ದೃಷ್ಟಿಗ್ರಹಂ-ರಾಕ್ಷಸನ ಕೆಟ್ಟದೃಷ್ಟಿ;  ಬಡಿದವೋಲ್-ತಾಗಿದಂತೆ;  ದೈತ್ಯಭಕ್ತ-ರಾಕ್ಷಸಭಕ್ತ(ರಾವಣ);  ಭೀಷ್ಮಭಕ್ತಿ-ಭೀಕರವಾದ ಭಕ್ತಿ; ಜಗಜ್ಜನನಿ(ಜಗತ್+ಜನನಿ)-ಲೋಕಮಾತೆ(ಕಾಳಿಕಾದೇವಿ);  ಅಚಿತ್-ಅಚೇತನವಾದ, ಜಡವಾದ;  ತಾಟಸ್ಥ್ಯಮಂ-ತಟಸ್ಥತೆಯನ್ನು; ತೊರೆದು-ತ್ಯಜಿಸಿ, ಬಿಟ್ಟುಬಿಟ್ಟು;  ಗೋಚರಿಸಲ್ –ಕಾಣಿಸಿಕೊಳ್ಳುವುದಕ್ಕೆ;  ಎಳಸುತಿರೆ-ಬಯಸುತ್ತಿರಲು, ಅಪೇಕ್ಷಿಸುತ್ತಿರಲು;  ಚಿದ್ರೂಪದಿಂ-ಚೈತನ್ಯಸ್ವರೂಪದಿಂದ;  ದೇವಗಣ-ದೇವತೆಗಳ ಸಮೂಹ;  ಒದರಿದುದು-ಕಿರುಚಿತು, ಬೊಬ್ಬೆಹಾಕಿತು;  ಮೈದೋರಲ್-ಪ್ರತ್ಯಕ್ಷವಾದರೆ;  ಭುವನಭೀಕರ-ಭೂಮಿಗೆ ಭೀಕರನಾದವನು(ರಾವಣ);  ಧರ್ಮಕ್ಷಯಕೆ-ಧರ್ಮದ ನಾಶಕ್ಕೆ;   ದಿಟಂ-ಸತ್ಯ;  ಸಾಧನಂಗಳಂ-ಸಾಮಗ್ರಿಗಳನ್ನು; ಹೊಸ್ತಿಲೊಳ್-ಬಾಗಿಲಲ್ಲಿ;  ಓಲಂತೆ-ಹಾಗೆ;  ಚಿತ್ತಚಿತ್ತುಗಳೆಯೊಳ್-ಮನಸ್ಸಿನ ಹೊಯ್ದಾಟದ ನಡುವೆ;  ತೂಗಿದಳ್-ತೊನೆದಳು;  ಲೀಲಾವಿನೋದೆ-ಲೀಲೆಗಳಲ್ಲಿ ವಿನೋದವನ್ನು ಹೊಂದಿದವಳು(ಚಂಡಿಕಾದೇವಿ);  ಕಾಲ್ವಿಡಿದ-ಕಾಲನ್ನು ಹಿಡಿದ; ದೇವರ್ಕಳ್-ದೇವತೆಗಳು;  ಮನೋಗೋಚರಮೆನಲ್-ಮನಸ್ಸಿಗೆ ಗೋಚರವಾಗುವಂತೆ;  ಕಡುಮುಳಿದು-ಅತಿಯಾಗಿ ಸಿಟ್ಟುಗೊಂಡು;  ತುಡುಕಿದನು-ಬೇಗನೆ ಹಿಡಿದನು;  ಕಡುಗಮಂ-ಖಡ್ಗವನ್ನು;  ದೈತ್ಯರೊಡೆಯ-ರಾಕ್ಷಸರ ರಾಜ(ರಾವಣ);  ಧೃತಿ-ತಾಳ್ಮೆ;  ಆ ಎಡೆಯೆ-ತಕ್ಷಣವೇ;  ಇರ್ಪುದು-ಇರುವುದು;  ಆಯುಶ್ರೀ-ಆಯುಸ್ಸೆಂಬ ಸಂಪತ್ತು;  ನಿವೇದಿಸುವೆನ್-ಅರ್ಪಿಸುತ್ತೇನೆ;  ವಿಕಂಪಿಸೆ-ಅತಿಯಾಗಿ ನಡುಗಲು;  ಶಿಲಾಶರೀರಂ-ದೇವತಾಮೂರ್ತಿ;  ವಿಕಂಪಿಸಿತು-ನಡುಗಿತು;  ತಟಿದ್ ರೋಚಿಮಯ-ಮಿಂಚಿನ ಕಾಂತಿಯುಕ್ತ; ವೀಚಿಮಯ-ತರಂಗಯುಕ್ತ;  ಮೇಲ್ವಾಯ್ದು-ಮೇಲೆ ಹಾಯ್ದು; ರುಂದ್ರ-ಭೀಕರವಾದ;  ದರ್ಶನ-ಕಾಣಿಸಿಕೊಳ್ಳುವಿಕೆ;  ಚೇತನಂಗೆಟ್ಟನೋಲ್-ಚೇತನವನ್ನು ಕಳೆದುಕೊಂಡವನಂತೆ;  ದೈತ್ಯೇಂದ್ರ-ರಾಕ್ಷರ ರಾಜ(ರಾವಣ);  ಸಮಾಧಿ-ಏಕಾಗ್ರತೆ;  ಸ್ವಾಪ್ನಿಕ-ಕನಸಿಗೆ  ಸಂಬಂಧಿಸಿದ.

            ರಾವಣನು ಕೈಗೊಂಡಿದ್ದ ಚಂಡಿಕಾಪೂಜೆಯ ಹಾಗೂ ಅದರ ಸಂಕಲ್ಪದ  ಭೀಕರತೆಗೆ ರಾಕ್ಷಸನ ಕೆಟ್ಟದೃಷ್ಟಿ ತಾಗಿದಂತೆ ಸಮಸ್ತ ಸೃಷ್ಟಿಯೂ ತಟಸ್ಥವಾಯಿತು. ರಾವಣನ ಭಯಂಕರವಾದ ಭಕ್ತಿಗೆ ಲೋಕಮಾತೆಯಾದ ಕಾಳಿಕಾದೇವಿಯು ತನ್ನ ಅಚೇತನವಾದ ರೂಪವನ್ನು ತ್ಯಜಿಸಿ ಚೈತ್ಯನ್ಯಸ್ವರೂಪದಿಂದ ಪ್ರತ್ಯಕ್ಷವಾಗುವುದಕ್ಕೆ ಯತ್ನಿಸುತ್ತಿದ್ದಾಗ “ತಾಳು ಮಹಾ ತಾಯಿ ತಾಳು” ಎಂದು ದೇವತೆಗಳ ಸಮೂಹ ಬೊಬ್ಬೆಹಾಕಿತು. ಗಗನ ಗಂಗಾಮೃತ ಅರ್ಘ್ಯ ಪಾದ್ಯಗಳಿಂದ ಕಾಳಿಕಾದೇವಿಯ ಪಾದಗಳಿಗೆ ನಮಸ್ಕರಿಸಿ, “ ನೀನು ಈ ದಿನ ಲೋಕಕ್ಕೆ ಭೀಕರನಾಗಿರುವ ರಾವಣನಿಗೆ ಪ್ರತ್ಯಕ್ಷವಾದರೆ ಅವನು  ವರಗಳನ್ನು ಕೇಳುತ್ತಾನೆ. ಆತ  ಅವುಗಳನ್ನು ಧರ್ಮನಾಶಕ್ಕೆ ಸಾಧನಗಳನ್ನಾಗಿ ಬಳಸಿಕೊಳ್ಳುತ್ತಾನೆ. ಹಾಗಾಗಿ  ರಾವಣನಿಗೆ ಪ್ರತ್ಯಕ್ಷವಾಗಬೇಡ, ಅವನಿಗೆ ಯಾವ ವರಗಳನ್ನೂ ನೀಡಬೇಡ” ಎಂದು ದೇವತೆಗಳ ಸಮೂಹ ಕಾಳಿಕಾದೇವಿಯನ್ನು ಬೇಡಿಕೊಂಡಿತು. ದೇವತೆಗಳ ಈ ವಿನಂತಿಯಿಂದ ಒಂದು ಕ್ಷಣ ಮನಸ್ಸಿನ ಹೊಯ್ದಾಟದ ನಡುವೆ ಲೀಲಾವಿನೋದೆಯಾಗಿರುವ ದುರ್ಗೆಯು ಅತ್ತ ಇತ್ತ ತೊನೆದಳು. ಅವಳ ಮನಸ್ಸಿನಲ್ಲಿಯೂ ರಾವಣನಿಗೆ ದರ್ಶನ ನೀಡಬೇಕೆ? ಬೇಡವೇ? ಎಂಬ ಗೊಂದಲ ಉಂಟಾಯಿತು. ರಾವಣನಿಗೆ ದರ್ಶನ ನೀಡಬಾರದು ಎಂದು ದೇವತೆಗಳು ದುರ್ಗೆಯ ಕಾಲನ್ನು ಹಿಡಿದು ಬೇಡಿಕೊಂಡಾಗ ದುರ್ಗೆಯು ದೇವತೆಗಳ ಮನಸ್ಸಿಗೆ ತಿಳಿಯುವಂತೆ ಮುಗುಳುನಗೆಯಿಂದಲೇ ಸಮಾಧಾನವನ್ನು ಸೂಚಿಸಿದಳು.

            ತಾನು ದೇವಿಯನ್ನು ಪೂಜಿಸತೊಡಗಿ ಬಹಳ ಹೊತ್ತಾದರೂ ದೇವಿ ತನಗೆ ಒಲಿಯುವುದಕ್ಕೆ ತಡಮಾಡುತ್ತಿರುವುದು ರಾವಣನ ಅಸಹನೆಗೆ ಕಾರಣವಾಯಿತು. ಅವನು ದೇವಿಯನ್ನು ಕುರಿತು, “ಏಕೆ ದೇವಿ ತಡಮಾಡುತ್ತಿರುವೆ? ಈ ಭಕ್ತನ ತಾಳ್ಮೆಯನ್ನು ಪರೀಕ್ಷಿಸುತ್ತಿರುವೆಯೇನು? ನಾನು ಈಗಾಗಲೇ ಅರ್ಪಿಸಿರುವ ಹೂವು, ಹಣ್ಣು, ಬಲಿಗಳು ನಿನಗೆ ಸಾಲದು ಎಂದಾದರೆ ಇದೋ ನೋಡು, ನನ್ನ ಒಂದು ತಲೆ ಉರುಳಿದೊಡನೆಯೇ ಮತ್ತೊಂದು ಮೂಡುತ್ತಿರುವ ಹತ್ತು ತಲೆಗಳವರೆಗೆ ಒಂದೊಂದನ್ನೇ ಕತ್ತರಿಸಿ ನಿನಗೆ ಅರ್ಪಿಸಬಲ್ಲೆ. ಆದರೂ ನನಗೆ ಆಯುಷ್ಯಸಂಪತ್ತು ಧಾರಾಳವಾಗಿಯೇ ಇದೆ. ಅದನ್ನೇ ನಿನಗೆ ಅರ್ಪಿಸುತ್ತೇನೆ, ಸ್ವೀಕರಿಸು” ಎಂದು ರಾವಣ ಗಟ್ಟಿಯಾಗಿ ನಿವೇದಿಸಿಕೊಂಡಾಗ ದುರ್ಗೆಯ ಬೃಹತ್ ಶಿಲಾಮೂರ್ತಿಯೇ ಕಂಪಿಸತೊಡಗಿತು. ಮಾತ್ರವಲ್ಲ, ಶಿವಮಂದಿರವೇ ಕಂಪಿಸತೊಡಗಿತು. ಅಲ್ಲದೆ ಮಿಂಚಿನ ಕಾಂತಿಯುಕ್ತ,  ಹಾಗೂ ಅಲೆಗಳಿಂದ ಕೂಡಿದ ಸಾಗರವು ಮಿತಿಯಿಲ್ಲದ ಮಹಾದೂರದಿಂದ ಮೇಲೆ ಹಾಯ್ದಂತಾಯಿತು. ಸಾಗರದ ಆ ಭಯಂಕರವಾದ ಅಲ್ಲೋಲಕಲ್ಲೋಲತೆಯ ದರ್ಶನಕ್ಕೆ ರಾಕ್ಷಸ ರಾಜ ರಾವಣನು ತನ್ನ ಚೇತನವನ್ನೇ ಕಳೆದುಕೊಂಡಂತೆ ಒಂದು ಅದ್ಭುತವಾದ ಕನಸಿನ ಮನೋಮಯ  ಸಮಾಧಿಗೆ ಉರುಳಿದನು.

 

                                                             “ಅದಾರಲ್ಲಿ?

ಧಾನ್ಯಮಾಲಿನಿ! ಅದೇಕಿಲ್ಲಿ ನೀನೀ ಪಾಳು

ದೇಗುಲದಿ? ಏನ್ ಗೆಯ್ವೆಯೀ ಗೂಬೆಗತ್ತಲೊಳ್

ನೀನೊರ್ವೆಳೆಯೆ, ಪ್ರಿಯೆ? ಹುಬ್ಬು ಗಂಟಿಕ್ಕದಿರ್!

ನೀನೇಂ ಪಿಶಾಚಿಯೆ? ಪ್ರಿಯೆ ಎಂಬುದಪ್ರಿಯಮೆ?   ೭೦

ಏನ್ ಭ್ರಾಂತಿ ನಿನಗೆ? ನಿನ್ನಂ ಚಿತೆಯೊಳುರಿಪಿದೊಲ್

ಕನಸಾದುದೀ ಜಾಗ್ರತಕೆ ಬರ್ಪ ಮುನ್ನಮಾ

ನಿಷ್ಠುರಸ್ವಪ್ನಪ್ರಪಂಚದೊಳ್! ಇದಾವುದೀ

ಸೀಮೆ? ಲಂಕೆಯೆ? ಅಲ್ತು! ಕನಕ ಲಂಕೆಯೊಳೆಲ್ಲಿ

ಪಾಳ್ಗುಡಿಯ ಗೂಬೆಗತ್ತಲ್ ಮಸಣದೀ ಶಿಥಿಲ

ಶೀತಲ ನಿಶೀಥಿನಿಯ ಸುಪ್ತಿಮಯ ನಿಶ್ಯಬ್ದ

ನಿರ್ಜನತ್ವಂ? ಅದೇಕುಸಿಕನಿಹೆ? ಮೂಗಿಯೇಂ

ಮೇಣೆನ್ನ ಮೇಲ್ ಮುಳಿಸೊ?”

                                                “ಗುರುತು ನಿಕ್ಕದೆ ನಿನಗೆ?

ನಾನೆ ಲಂಕಾಲಕ್ಷ್ಮಿ! ಈ ಪಾಳೆ ಆ ಲಂಕೆ!”     

“ಪುಸಿಯದಿರ್, ಕನಕಮಯಮಾ ನನ್ನತುಳ ಲಂಕೆ! ೮೦

ತ್ರೈಭುವನ ಲಕ್ಶ್ಮಿ. ಆ ನನ್ನ ಲಂಕಾಲಕ್ಷ್ಮಿ!”

“ಸುಕೃತಿಗಳ್ಗಾಂ ಶ್ರೀ; ಅಲಕ್ಶ್ಮಿ ತಿಳಿ ನಾಂ ಸ್ವಯಂ

ಪಾಪರುಚಿಗಳ್ಗೆ! ನೀಂ ಬಣ್ಣಿಪಾ ಲಂಕೆ, ಮೇಣ್

ನೀಂ ಪೊಗಳ್ವಾ ಲಕ್ಷ್ಮಿ, ಕಳೆದ ಕನಸುಗಳಲ್ತೆ!

ಕಾಣಿದೊ ಮುರಿದ ಕಿರೀಟಂ, ಮಣಿಗಣಗಳುದುರಿ

ದಾರಿದ್ರ್ಯ ಸಾಕ್ಷಿ! ಮಲಿನಂ ಛಿನ್ನ ಚೀನಾಂಬರಂ!

ಬಳೆಯೊಡೆದ ಬೋಳುಗೈ! ತೈಲಮಿಲ್ಲದ ವೇಣಿ

ಪೊದರಾಗಿಹುದು ಪಿಣಿಲ್ಗೊಂಡು! ಶಸ್ತ್ರಕ್ಷತಂ

ಶತವಿಕ್ಷತಂ ಗೆಯ್ದು, ನೋಡು, ಜಜ್ಜರಿತಮೀ 

ಮೆಯ್! ಸೋರ್ದು ನೆತ್ತರ್ ವೊನಲ್ ತತ್ತರಿಸುತಿಹೆನ್ ೯೦

ಪತನಾಭಿಮುಖಿ! ಪೊರೆವರಾರ್? ಮೊರೆಗೇಳ್ವರಾರ್?”

ಕಂಗೆಟ್ಟ ಲಂಕಿಣಿ ನಿರಾಭರಣಹಸ್ತದಿಂ

ನಿರ್ವೀರ್ಯ ವದನಮಂ ಮುಚ್ಚುತಳತೊಡಗಿದಳ್.

ಅನ್ವಯಕ್ರಮ:

“ಅದಾರು ಅಲ್ಲಿ? ಧಾನ್ಯಮಾಲಿನಿ! ಅದೇಕೆ ನೀನು ಇಲ್ಲಿ ಈ ಪಾಳುದೇಗುಲದಿ? ಪ್ರಿಯೆ, ಈ ಗೂಬೆ ಕತ್ತಲೊಳ್  ನೀನ್ ಒರ್ವಳೆಯೆ ಏನ್ ಗೆಯ್ವೆ?  ಹುಬ್ಬು ಗಂಟಿಕ್ಕದಿರ್,! ನೀನ್ ಏಂ ಪಿಶಾಚಿಯೆ? ಪ್ರಿಯೆ ಎಂಬುದು ಅಪ್ರಿಯಮೆ? ನನಗೆ ಏನ್ ಭ್ರಾಂತಿ?  ಆ ನಿಷ್ಠುರ ಸ್ವಪ್ನಪ್ರಪಂಚದೊಳ್, ಈ ಜಾಗ್ರತಕೆ ಬರ್ಪ ಮುನ್ನಂ ನಿನ್ನಂ ಚಿತೆಯೊಳ್ ಉರಿಪಿದೊಲ್ ಕನಸಾದುದು, ಇದಾವುದು ಈ ಸೀಮೆ? ಲಂಕೆಯೆ? ಅಲ್ತು! ಕನಕ ಲಂಕೆಯೊಳ್ ಪಾಳ್ ಗುಡಿಯ ಗೂಬೆ ಕತ್ತಲ್ ಮಸಣದ ಈ ಶಿಥಿಲ ಶೀತಲ ನಿಶೀಥಿನಿಯ ಸುಪ್ತಿಮಯ ನಿಶ್ಯಬ್ದ ನಿರ್ಜನತ್ವಂ ಎಲ್ಲಿ? ಅದೇಕೆ ಉಸಿಕನ್ ಇಹೆ? ಮೂಗಿಯೇಂ? ಮೇಣ್ ಎನ್ನ ಮೇಲ್ ಮುಳಿಸೊ?”, “ನಿನಗೆ ಗುರುತು ಸಿಕ್ಕದೆ? ನಾನೆ ಲಂಕಾಲಕ್ಷ್ಮಿ! ಈ ಪಾಳೆ ಆ ಲಂಕೆ!”, “ಪುಸಿಯದಿರ್: ಕನಕಮಯಂ ಆ ಲಂಕೆ! ತ್ರೈಭುವನ ಲಕ್ಷ್ಮಿ ಆ ನನ್ನ ಲಂಕಾಲಕ್ಷ್ಮಿ”. “ಸುಕೃತಿಗಳ್ಗೆ ಆಂ ಶ್ರೀ; ತಿಳಿ ನಾಂ ಸ್ವಯಂ ಪಾಪರುಚಿಗಳ್ಗೆ ಅಲಕ್ಷ್ಮಿ! ನೀಂ ಬಣ್ಣಿಪ ಆ ಲಂಕೆ, ಮೇಣ್ ನೀಂ ಪೊಗಳ್ವ ಆ ಲಕ್ಷ್ಮಿ, ಕಳೆದ ಕನಸುಗಳ್ ಅಲ್ತೆ! ಕಾಣ್ ಇದೋ ಮುರಿದ ಕಿರೀಟಂ, ಮಣಿಗಣಗಳ್ ಉದುರಿ ದಾರಿದ್ರ್ಯ ಸಾಕ್ಷಿ! ಛಿನ್ನ ಚೀನಾಂಬರಂ ಮಲಿನಂ! ಬಳೆ ಒಡೆದ ಬೋಳು ಕೈ! ತೈಲಂ ಇಲ್ಲದ ವೇಣಿ ಪಿಣಿಲ್ಗೊಂಡು ಪೊದರ್ ಆಗಿಹುದು! ಶಸ್ತ್ರಕ್ಷತಂ ಶತವೀಕ್ಷತಂ ಗೆಯ್ದು, ನೋಡು, ಜಜ್ಜರಿತಂ ಈ ಮೆಯ್! ನೆತ್ತರ್ ಹೊನಲ್ ಸೋರ್ದು ತತ್ತರಿಸುತ ಇಹೆನ್ ಪತನ ಅಭಿಮುಖಿ! ಪೊರೆವರ್ ಆರ್? ಮೊರೆ ಕೇಳ್ವರ್ ಆರ್? ಕಂಗೆಟ್ಟ ಲಂಕಿಣಿ ನಿರಾಭರಣ ಹಸ್ತದಿಂ ನಿರ್ವೀರ್ಯ ವದನಮಂ ಮುಚ್ಚುತ ಅಳತೊಡಗಿದಳ್.   

ಪದ-ಅರ್ಥ:

ಅದಾರಲ್ಲಿ-ಅಲ್ಲಿ ಅದು ಯಾರು?;  ಧಾನ್ಯಮಾಲಿನಿ-ಭೂ ತಾಯಿ;  ಪಾಳು ದೇಗುಲ-ಹಾಳು ದೇವಾಲಯ; ಏನ್ ಗೆಯ್ವೆ-ಏನು ಮಾಡುವೆ?;  ಗೂಬೆಗತ್ತಲ್-ಭಯಹುಟ್ಟಿಸುವ ಕತ್ತಲು, ಗೂಬೆಗಳು ಸ್ವಚ್ಛಂದವಾಗಿ ವಿಹರಿಸುವ ಕತ್ತಲು;  ಚಿತೆ-ಶವವನ್ನು ಸುಡಲು ಒಟ್ಟಿದ ಕಟ್ಟಿಗೆ ರಾಶಿ;  ಉರಿಪಿದೋಲ್-ಸುಟ್ಟ ಹಾಗೆ;  ಜಾಗ್ರತಕ್ಕೆ –ಎಚ್ಚರಕ್ಕೆ;  ಮುನ್ನ-ಮೊದಲು;   ಕನಕ ಲಂಕೆ-ಶ್ರೀಮಂತ ಲಂಕೆ, ಚಿನ್ನಖಚಿತವಾದ ಲಂಕೆ;  ಪಾಳ್ಗುಡಿ-ಹಾಳಾದ ಗುಡಿ;  ಮಸಣ-ಶ್ಮಶಾನ;  ಶಿಥಿಲ-ಹಾಳಾದ, ಮುರಿದುಬಿದ್ದ;  ನಿಶೀಥಿನಿ-ಮಧ್ಯರಾತ್ರಿ;  ಸುಪ್ತಿಮಯ-ನಿದ್ರೆಯಿಂದ ಕೂಡಿದ;  ಅದೇಕುಸಿಕನಿಹೆ-ಅದೇಕೆ ಸುಮ್ಮನಿರುವೆ?;  ಮೂಗಿಯೇಂ-ಮೂಕಿಯೇನು?;  ಮೇಣ್-ಮತ್ತು; ಎನ್ನಮೇಲ್-ನನ್ನ ಮೇಲೆ;  ಮುಳಿಸೊ-ಸಿಟ್ಟೇ?;  ಪುಸಿಯದಿರ್-ಸುಳ್ಳು ಹೇಳಬೇಡ;  ಅತುಳ-ವಿಶೇಷ, ಅಸಮಾನವಾದ; ತ್ರೈಭುವನ-ಮೂರು ಲೋಕ; ಸುಕೃತಿ-ಒಳ್ಳೆಯ ಕಾರ್ಯ;  ಶ್ರೀ-ಲಕ್ಷ್ಮಿ;  ಅಲಕ್ಷ್ಮಿ-ಲಕ್ಷ್ಮಿಯಲ್ಲ; ಪಾಪರುಚಿಗಳ್ಗೆ-ಪಾಪಿಷ್ಠರಿಗೆ;  ಮಣಿಗಣ-ಮಣಿಗಳ ಸಮೂಹ;  ಮಲಿನ-ಅಶುದ್ಧ;  ಛಿನ್ನ ಚೀನಾಂಬರ-ಛಿದ್ರವಾದ ರೇಷ್ಮೆಬಟ್ಟೆ;  ವೇಣಿ-ಜಡೆ;  ಪಿಣಿಲ್ಗೊಂಡು-ಜಟೆಗಟ್ಟಿಕೊಂಡು; ಶಸ್ತ್ರಕ್ಷತ-ಆಯುಧಗಳ ಗಾಯ;  ಶತವಿಕ್ಷತಂ-ನೂರು ಏಟುಗಳು ಬಿದ್ದು;  ಜಜ್ಜರಿತ-ಶಿಥಿಲವಾದ;  ಸೋರ್ದು-ಹರಿದು;  ನೆತ್ತರ್ ವೊನಲ್-ರಕ್ತದ ಪ್ರವಾಹ;  ಪತನಾಭಿಮುಖಿ-ಅವನತಿಯ ಕಡೆಗೆ ಸರಿಯುತ್ತಿರುವ;  ಪೊರೆವರಾರ್-ಕಾಪಾಡುವವರು ಯಾರು?;  ಮೊರೆಗೇಳ್ವರಾರ್-ಗೋಳಾಟ ಕೇಳುವವರು ಯಾರು?;  ನಿರ್ವೀರ್ಯ-ಬಲಹೀನ.  

            “ಅಲ್ಲಿ ಅದು ಯಾರು?  ಭೂಮಿತಾಯಿಯೆ, ಅದೇಕೆ ನೀನು ಈ ಹಾಳು ದೇಗುಲದಲ್ಲಿರುವೆ? ಈ ಭಯಹುಟ್ಟಿಸುವ ಕತ್ತಲೆಯೊಳಗೆ ನೀನೊಬ್ಬಳೇ  ಏನು ಮಾಡುತ್ತಿರುವೆ?  ಪ್ರಿಯೆ, ಹುಬ್ಬು ಗಂಟಿಕ್ಕಬೇಡ! ನೀನೇನಾದರೂ ಪಿಶಾಚಿಯೇ? ನಾನು ’ಪ್ರಿಯೆ’ ಎಂದರೂ ನಿನಗೆ ಅದು ಇಷ್ಟವಿಲ್ಲವೇ? ಏನು ಭ್ರಾಂತಿ ನನಗೆ? ನಾನು ಈ ಜಾಗ್ರತಾವಸ್ಥೆಗೆ ಬರುವ ಮೊದಲು ನಿನ್ನನ್ನು ಚಿತೆಯಲ್ಲಿಟ್ಟು ಸುಟ್ಟಹಾಗೆ ಕನಸು ಬಿತ್ತು. ಅದೊಂದು ನಿಷ್ಠುರವಾದ ಸ್ವಪ್ನಪ್ರಪಂಚ. ಇದು ಯಾವ ಸೀಮೆ? ಲಂಕೆಯೇ? ಅಲ್ಲ! ನನ್ನ ಕನಕಮಯವಾದ ಲಂಕೆಯೆಲ್ಲಿ? ಈ ರೀತಿಯ ಹಾಳು ಗುಡಿಯ ಭಯಂಕರವಾದ ಕತ್ತಲೆ, ಶ್ಮಶಾನದಲ್ಲಿರುವ ಈ ಹಾಳಾದ ಶೀತಲ ಮಧ್ಯರಾತ್ರಿಯ ನಿದ್ದೆಯಿಂದ ಕೂಡಿದ ನಿಶ್ಯಬ್ದ ನಿರ್ಜನತ್ವ ಎಲ್ಲಿ? ನನ್ನ ಪ್ರಶ್ನೆಗಳಿಗೆ ಉತ್ತರಿಸದೆ ಅದೇಕೆ ಸುಮ್ಮನಿರುವೆ? ನೀನೇನು ಮೂಕಿಯೆ? ಅಥವಾ ನನ್ನ ಮೇಲೆ ಕೋಪವೆ? ಎಂದು ರಾವಣ ಆಕೆಯನ್ನು ಪ್ರಶ್ನಿಸಿದನು.

            ಆಗ ಆಕೆ, “ನಿನಗೆ ನನ್ನ ಗುರುತು ಸಿಗಲಿಲ್ವೇ? ನಾನೇ ಲಂಕಾಲಕ್ಷ್ಮಿ! ಈ ಹಾಳಾದ ನಾಡೇ ಆ ಲಂಕೆ!” ಎಂದಾಗ ರಾವಣನು, “ಸುಳ್ಳು ಹೇಳಬೇಡ, ನನ್ನ ವಿಶೇಷವಾದ ಲಂಕೆ ಕನಕಮಯವಾಗಿದೆ. ಅದು ಮೂರೂ ಲೋಕಗಳಿಗೂ ಲಕ್ಷ್ಮಿಯಾಗಿ ಲಂಕಾಲಕ್ಷ್ಮಿ  ಎನಿಸಿ ಕೊಂಡಿದೆ.” ಎಂದನು. ಆಗ ಲಂಕಾಲಕ್ಷ್ಮಿಯು, “ಒಳ್ಳೆಯ ಕೆಲಸಗಳನ್ನು ಮಾಡುವವರಿಗೆ ನಾನು ಲಕ್ಷ್ಮಿ ಎನಿಸಿಕೊಂಡಿದ್ದೇನೆ. ಆದರೆ ಸ್ವಯಂ ಪಾಪಕೆಲಸಗಳನ್ನು ಮಾಡುವವರಿಗೆ ನಾನು ಅಲಕ್ಷ್ಮಿಯಾಗಿದ್ದೇನೆ. ಈಗ ನೀನು ವರ್ಣಿಸುತ್ತಿರುವ ಆ ಲಂಕೆ, ಮತ್ತು ನೀನು ಹೊಗಳುತ್ತಿರುವ ಆ ಲಕ್ಷ್ಮಿ ಎಂಬುದು ಕಳೆದುಹೋದ ಕನಸುಗಳಲ್ಲವೆ! ನೋಡಲ್ಲಿ, ಮುರಿದುಬಿದ್ದಿರುವ ಕಿರೀಟಗಳು, ಉದುರಿಬಿದ್ದಿರುವ ಮಣಿಗಳ ರಾಶಿಗಳು ದಾರಿದ್ರ್ಯಕ್ಕೆ ಸಾಕ್ಷಿಗಳಾಗಿವೆಯಲ್ಲ! ಉಟ್ಟುಕೊಂಡಿರುವ ರೇಷ್ಮೆವಸ್ತ್ರ ತುಂಡುತುಂಡಾಗಿ ಹರಿದುಹೋಗಿದೆ. ಬಳೆಗಳು ಒಡೆದುಹೋಗಿ ಕೈಗಳು ಬೋಳಾಗಿವೆ. ಎಣ್ಣೆಯಿಲ್ಲದೆ ತಲೆಗೂದಲು ಪೊದರು ಪೊದರಾಗಿ ಜಡೆಗಟ್ಟಿದೆ. ದೇಹಕ್ಕೆ ಆಯುಧಗಳ ನೂರಾರು ಗಾಯಗಳಾಗಿ ಮೈಯೆಲ್ಲ ಜರ್ಜರಿತಗೊಂಡಿದೆ. ದೇಹದಿಂದ ರಕ್ತವೆಲ್ಲವೂ ಪ್ರವಾಹರೂಪದಲ್ಲಿ ಸೋರಿಹೋಗಿ ತತ್ತರಿಸುತ್ತಿದ್ದೇನೆ. ನಾಶದ ಕಡೆಗೆ ಸರಿಯುತ್ತಿದ್ದೇನೆ. ನನ್ನನ್ನು ಕಾಪಾಡುವವರು ಯಾರಿದ್ದಾರೆ? ನನ್ನ ನೋವನ್ನು, ಗೋಳಾಟವನ್ನು ಕೇಳುವವರು ಯಾರಿದ್ದಾರೆ?” ಎಂದು ಕಂಗೆಟ್ಟ ಲಂಕಿಣಿ ತನ್ನ ಬೋಳುಬೋಳಾದ ಕೈಗಳಿಂದ ಬಲಹೀನವಾದ ಮುಖವನ್ನು ಮುಚ್ಚಿಕೊಂಡು ಅಳತೊಡಗಿದಳು.

 

ಲಂಕಾಧಿನಾಥನಾ ಕಂಕಾಲ ಮಯಿಯಂ

ಅನಾಥೆಯೋಲಾಕ್ರಂದಿಸುತ್ತಿರ್ದಳಂ ನೋಡಿ

ಬಿಂಕಂ ಜಗುಳ್ದು:

                           “ನಾಂ ಬರ್ದುಕಿರ್ದ್ದು ಸತ್ತನೆಂ!

ನಿನ್ನನಾರ್ ಈ ಗತಿಗೆ ತಂದವರ್ ಪೇಳ್, ತಾಯಿ.

ದೇವತೆಗಳಾಳ್ಗಳಮರಾವತಿಯೆ ತೊಳ್ತು; ಪೇಳ್,

ನಿನಗೇತಕೀ ಪಾಡು?”

                                  “ನಿನ್ನಿಂದಲೆಯೆ ನನಗೆ  

ಬಂದುದೀ ಗೋಳ್! ವಾನರಧ್ವಜಿನಿಯಿಂ, ಅಯ್ಯೊ, ೧೦೦

ಮಕ್ಕಳೆಲ್ಲರ್ ಮಡಿದರೆನಗುಮೀ ಗತಿಯಾಯ್ತು!”

“ಓಹೊ ಮರೆತಿರ್ದೆನದನಾಂ. ಏಕೊ? ಸೋಜಿಗಂ!

ಏನ್ ವಿಚಿತ್ರಮೊ ಇಲ್ಲಿ! ಏನೇನೊ ಮೂಡುತಿದೆ

ಮನಕೆ; ಬೇಕಾದುದೆಯೆ ಮರೆಯುತಿದೆ! ಬಂದೆನಾಂ

ಇಲ್ಲಿಗದೆ ಉದ್ಯೋಗಮಾಗಿ. ಯುದ್ಧಂ ನಾಳೆ

ಸಿದ್ಧಿಪುದೆನಗೆ ಕಪಿಧ್ವಜಿನಿಯೊಳ್. ರಾಮನಂ

ಗೆಲ್ವ ಸಿದ್ಧಿಗೆ ಶಿವಾಣಿಯ ಕೃಪೆಯನೆರೆಯಲ್ಕೆ

ಪೋದಪೆನ್. ಅಧೀರೆಯಾಗದಿರೆಲಗೆ ಲಂಕೆ. ನೀನ್

ನಾಳೆಯೆ ಮರಳಿ ಕಿರೀಟಿನಿ ದಿಟಂ ಮುನ್ನಿನೋಲ್.  

ಮೇಣ್ ಮೊದಲ್ಗಿಂ ಮಿಗಿಲ್!”

ಅನ್ವಯಕ್ರಮ:

ಲಂಕಾಧಿನಾಥನ್ ಆ ಕಂಕಾಲಮಯಿಯಂ ಅನಾಥೆಯೋಲ್ ಆಕಂದಿಸುತ ಇರ್ದಳಂ ನೋಡಿ ಬಿಂಕಂ ಜಗುಳ್ದು: “ನಾಂ ಬರ್ದುಕಿ ಇರ್ದು ಸತ್ತನೆಂ! ನಿನ್ನನ್ ಆರ್ ಈ ಗತಿಗೆ ತಂದವರ್ ಪೇಳ್? ತಾಯಿ, ದೇವತೆಗಳ್ ಆ ಅಮಳ್ಗಳ್ ಅಮರಾವತಿಯೆ ತೊಳ್ತು; ಪೇಳ್, ನಿನಗೆ ಏತಕೆ ಈ ಪಾಡು?”  “ನನಗೆ ನಿನ್ನಿಂದಲೆಯೆ ಈ ಗೋಳ್ ಬಂದುದು! ವಾನರಧ್ವಜಿನಿಯಿಂ, ಅಯ್ಯೋ, ಮಕ್ಕಳ್ ಎಲ್ಲರ್ ಮಡಿದರ್ ಎನಗುಂ ಈ ಗತಿಯಾಯ್ತು!” “ ಓಹೊ ನಾನ್ ಅದನ್ ಮರೆತು ಇರ್ದೆನ್. ಏಕೊ? ಸೋಜಿಗಂ! ಇಲ್ಲಿ ಏನ್ ವಿಚಿತ್ರಮೊ? ಮನಕೆ ಏನೇನೊ ಮೂಡುತಿದೆ; ಬೇಕಾದುದೆಯೆ ಮರೆಯುತಿದೆ! ಇಲ್ಲಿಗದೆ ಉದ್ಯೋಗಂ ಆಗಿ ಆಂ ಬಂದೆನ್. ನಾಳೆ ಕಪಿಧ್ವಜಿನಿಯೊಳ್  ಯುದ್ಧಂ ಎನಗೆ ಸಿದ್ಧಿಪುದು. ರಾಮನಂ ಗೆಲ್ವ ಸಿದ್ಧಿಗೆ ಶಿವಾಣಿಯ ಕೃಪೆಯನ್ ಎರೆಯಲ್ಕೆ ಪೋದಪೆನ್. ಎಲೆಗೆ ಲಂಕೆ ಅಧೀರೆ ಅಗದಿರ್. ನೀನ್ ನಾಳೆಯೆ ಮರಳಿ ಮುನ್ನಿನೋಲ್ ಕಿರೀಟಿನಿ ದಿಟಂ. ಮೇಣ್ ಮೊದಲ್ಗಿಂ ಮಿಗಿಲ್!”

ಪದ-ಅರ್ಥ:

ಲಂಕಾಧಿನಾಥನ್-ರಾವಣನು;  ಕಂಕಾಲಮಯಿ-ಅಸ್ಥಿಪಂಜರದಂತೆ ಇರುವವಳು;  ಅನಾಥೆಯೋಲ್-ದಿಕ್ಕಿಲ್ಲದವಳಂತೆ;  ಆಕ್ರಂದಿಸುತ್ತ-ರೋದಿಸುತ್ತ, ಗಟ್ಟಿಯಾಗಿ ಅಳುತ್ತ;  ಬಿಂಕಂ-ಬಿನ್ನಾಣವನ್ನು;  ಜಗುಳ್ದು-ಕಳಚಿಕೊಂಡು, ಬಿಟ್ಟುಬಿಟ್ಟು;  ಬರ್ದುಕಿರ್ದು(ಬರ್ದುಕಿ+ಇರ್ದು)-ಬದುಕಿ ಇದ್ದೂ;  ನಿನ್ನನಾರ್-ನಿನ್ನನ್ನು ಯಾರು?  ದೇವತೆಗಳಾಳ್ಗಳ್-ದೇವತೆಗಳ ಆಳುಗಳು;  ತೊಳ್ತು-ಸೇವಕ;  ನಿನ್ನಿಂದಲೆಯೆ-ನಿನ್ನಿಂದಲೇ;  ಗೋಳ್-ನೋವು;  ವಾನರಧ್ವಜಿನಿ-ವಾನರ ಸೇನೆ;  ಬೇಕಾದುದೆಯೆ-ಬೇಕಾದುದೇ;  ಕಪಿಧ್ವಜಿನಿಯೊಳ್-ಕಪಿಸೈನ್ಯದೊಂದಿಗೆ;  ಶಿವಾಣಿ-ಕಾಳಿಕಾದೇವಿ, ದುರ್ಗೆ;  ಕೃಪೆಯನೆರೆಯಲ್ಕೆ-ಕೃಪೆಯನ್ನು ಬೇಡುವುದಕ್ಕೆ; ಅಧೀರೆ-ಧೈರ್ಯವಿಲ್ಲದವಳು;  ಕಿರೀಟಿನಿ-ಕಿರೀಟಧಾರಿಣಿ, ರಾಜ್ಯಲಕ್ಷ್ಮಿ;  ದಿಟಂ-ಸತ್ಯ;  ಮುನ್ನಿನೊಲ್-ಮೊದಲಿನ ಹಾಗೆ;  ಮೇಣ್-ಮತ್ತು;   ಮೊದಲ್ಗಿಂ-ಮೊದಲಿಗಿಂತಲೂ.   

            ಲಂಕಾಧಿಪತಿಯಾದ ರಾವಣನು ತನ್ನ ಮುಂದೆ ಅಸ್ಥಿಪಂಜರದಂತೆ ಕಾಣಿಸುತ್ತಿರುವ, ಅನಾಥೆಯ ಹಾಗೆ ಗಟ್ಟಿಯಾಗಿ ಅಳುತ್ತಿರುವ ಲಂಕಿಣಿಯನ್ನು ನೋಡಿ ತನ್ನ ಬಿನ್ನಾಣವನ್ನು, ಘನತೆಯನ್ನು ಬಿಟ್ಟುಬಿಟ್ಟು, “ನಾನು ಬದುಕಿದ್ದೂ ಸತ್ತಿರುವೆನೆಂದು ತಿಳಿದಿರುವೆಯೇನು? ನಿನ್ನನ್ನು ಈ ದಯನೀಯ ಸ್ಥಿತಿಗೆ ತಂದವರು ಯಾರು? ಹೇಳು ತಾಯೆ, ನಿನಗೆ ಈ ಸ್ಥಿತಿ ಅದೇಕೆ ಉಂಟಾಯಿತು?” ಎಂದು ರಾವಣನು ಪ್ರಶ್ನಿಸಿದನು.  ಆಗ ಆ ಲಂಕಿಣಿಯು “ಇದೆಲ್ಲವೂ ನಿನ್ನಿಂದಲೇ ಒದಗಿದ ಗೋಳು. ಮಾತ್ರವಲ್ಲ ಕಪಿಸೈನ್ಯದಿಂದಲೂ ಕೂಡಾ. ನಿನ್ನ ಮತ್ತು ಕಪಿಸೈನ್ಯದ ನಡುವೆ ನಡೆದ ಯುದ್ಧದಿಂದಾಗಿ ನನ್ನ ಮಕ್ಕಳೆಲ್ಲರೂ ಸತ್ತುಹೋದರು. ನನಗೆ ಈ ಸ್ಥಿತಿಯೊದಗಿ ನಿರ್ಗತಿಕಳಾಗಿದ್ದೇನೆ!” ಎಂದಳು. ಆಗ ರಾವಣನು, “ಓಹೋ! ನಾನು ಏಕೋ ಇದನ್ನು ಮರೆತ್ತಿದ್ದೆನಲ್ಲ! ಮನಸ್ಸಿನಲ್ಲಿ ಏನೇನೋ ಭಾವನೆಗಳು, ವಿಚಾರಗಳು ಮೂಡುತ್ತಿವೆ. ನೆನಪಿಡಬೇಕಾಗಿರುವ ವಿಚಾರಗಳೆಲ್ಲ ಮರೆತುಹೋಗುತ್ತಿವೆ. ಹೆದರಬೇಡ,  ಅದೇ ಕಾರಣಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನಾಳೆ ನನಗೆ ವಾನರಸೈನ್ಯದೊಂದಿಗೆ ಮತ್ತೆ ಯುದ್ಧ ನಡೆಯಲಿಕ್ಕಿದೆ. ನಾಳಿನ ಯುದ್ಧದಲ್ಲಿ ರಾಮನನ್ನು, ಕಪಿಸೈನ್ಯವನ್ನು ಗೆಲ್ಲಬೇಕಾಗಿದೆ. ಅದರ ಸಿದ್ಧಿಗಾಗಿ ಕಾಳಿಕಾದೇವಿಯ ಕೃಪೆಯನ್ನು ಬೇಡುವುದಕ್ಕಾಗಿ ಹೊರಟಿದ್ದೇನೆ. ಎಲೆ, ಲಂಕಿಣಿ ನೀನು ಧೈರ್ಯಗೆಡಬೇಡ. ನೀನು ನಾಳೆಯೆ ಹಿಂದಿನಂತೆ ಮತ್ತೆ  ಈ ಲಂಕೆಗೆ ಕಿರೀಟಧಾರಿಣಿಯಾಗಿ ಮಾತ್ರವಲ್ಲ, ಮೊದಲಿಗಿಂತಲೂ ಅಧಿಕವಾಗಿ ಮೆರೆಯುವೆ” ಎಂದು ರಾವಣನು ಲಂಕಿಣಿಯನ್ನು ಸಮಾಧಾನಿಸಿದನು.  

(ಭಾಗ – ೨ರಲ್ಲಿ ಮುಂದುವರಿದಿದೆ)

Leave a Reply

Your email address will not be published. Required fields are marked *