ಸಾಹಿತ್ಯಾನುಸಂಧಾನ

heading1

ದಶಾನನ ಸ್ವಪ್ನಸಿದ್ಧಿ-ಕುವೆಂಪು-ಭಾಗ-೨

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ದೀರ್ಘಪಠ್ಯ – ಭಾಗ-೨)

“ಕಟುದಿಟಂ. ದನುಜೇಂದ್ರ ೧೧೦

ನಿನ್ನ ವಾಕ್ ಸಿದ್ಧಿ!” “ಮತ್ತೇಕೆ ಕಂಬನಿಗರೆವೆ?

ಸುಯ್ವೆ?”

              “ಸಿದ್ಧಿ ತಾನಪ್ಪೊಡಂ, ನನ್ನ ಮಕ್ಕಳ್

ಲೆಕ್ಕಂಗಿಡಲ್ ಮಡಿವರೆಂದಳ್ಕು! ಬರಿದಾಗೆ

ಲಂಕೆ, ಸಿಂಹಾಸನವನೇರ್ದೊಡೇಂ? ಮಸಣಕೆನ್ನಂ

ರಾಣಿಯಾಗಿಪ್ಪೆಯೇಂ? ಕೊಲೆ ಸಾಲ್ಗುಮೀ ಛಲಂ

ಮಾಣ್!”

               “ಮತ್ತೆ? ನಿನ್ನಾಸೆಯೇನ್?”

                                                       “ನನ್ನಾಸೆಯೇನೆ?

ನಿನ್ನಂತರಾತ್ಮದೊಳ್ ಸಂಚರಿಸುತಿರ್ಪುದಯ್,

ಪುಡುಕಿ ಕಾಣ್?”

                          “ರಾಮನಂ ಗೆಲ್ದು ಮೈಥಿಲಿಗಾತನಂ

ಕಪ್ಪಂಗುಡುವುದೆಂಬೆಯೇನ್?”

                                                “ಅಹಂಕಾರಕ್ಕೆ

ಬಲಿಗೊಡುವೆಯೇನ್  ಲಂಕಾಪ್ರಜಾಸಂಖ್ಯೆಯಂ?   ೧೨೦

ಸಾಲದೇನಾದ ಬಲಿ? ತಾಯ್ ಸಂಕಟವನೇಕೆ

ಪೆರ್ಚಿಪೀ ಪೇಡಿತನಮಯ್? ನಿನ್ನ ಬಿಂಕಕ್ಕೆ

ಬೆಳೆಯ ವೇಳ್ಕುಮೆ ವಿಧವೆಯರ ಸಂಖ್ಯೆ? ಮಕ್ಕಳಂ

ಕಳೆದುಕೊಳ್ವಬ್ಬೆಯರ ಸಂಖ್ಯೆ? ಕೂಳ್ ಕೊಡುವರಂ

ಬಲಿಗೊಡುವನಾಥ ಶಿಶು ಸಂಖ್ಯೆ?”

                                                     “ಬಯ್ಯದಿರೆಲೆಗೆ

ಲಂಕೆ. ನಾಳೆಯ ಸಮರಕಾನೊರ್ವನೆಯೆ ಮಲೆವೆನ್.

ನಿನ್ನ ಕಂದರೊಳೊರ್ವನಾದೊಡಂ ಮಡಿಯನಿನ್!

ಇನ್ನುಳಿದುದೆನ್ನ ಕಾರ್ಯಂ, ನಿನ್ನವರನಾನ್ ದಿಟಂ

ಕೊಲಿಸೆನಿನ್. ಇತ್ತೆನಿದೊ ಭಾಷೆಯನ್; ಕೊಳ್, ಕೃಪಣೆ!

ಬೀಳ್ಕೊಡೆನ್ನಂ; ಪೋಪೆನೌದಾರ್ಯಮಿರ್ಪೆಡೆಗೆ      ೧೩೦

ಜಗದಂಬೆ ಶಿವೆಯ ಸಂದರ್ಶನಕೆ!”

ಅನ್ವಯಕ್ರಮ:

“ದನುಜೇಂದ್ರ, ನಿನ್ನ ವಾಕ್ ಸಿದ್ಧಿ ಕಟು ದಿಟಂ!” “ಮತ್ತೇಕೆ ಕಂಬನಿಗರೆವೆ? ಸುಯ್ವೆ?” “ಸಿದ್ಧಿ ತಾನ್ ಅಪ್ಪೊಡಂ, ಲೆಕ್ಕಂಗಿಡಲ್ ನನ್ನ ಮಕ್ಕಳ್ ಮಡಿವರೆಂದು ಅಳ್ಕುಂ! ಲಂಕೆ ಬರಿದಾಗೆ, ಸಿಂಹಾಸವನ್ ಏರ್ದೊಡೇಂ? ಮಸಣಕ್ಕೆ ಎನ್ನಂ ರಾಣಿಯಾಗಿಪ್ಪೆಯೇಂ? ಕೊಲೆ ಸಾಲ್ಗುಂ, ಈ ಛಲಂ  ಮಾಣ್!” “ಮತ್ತೆ ನಿನ್ನಾಸೆ ಏನ್?” ನನ್ನಾಸೆ ಏನೆ? ನಿನ್ನ ಅಂತರಾತ್ಮದೊಳ್ ಸಂಚರಿಸುತ ಇರ್ಪುದಯ್, ಪುಡುಕಿ ಕಾಣ್?”  “ರಾಮನಂ ಗೆಲ್ದು ಮೈಥಿಲಿಗೆ ಆತನಂ ಕಪ್ಪಂ ಕುಡುವೆನ್ ಎಂಬೆಯೇನ್?” “ಅಹಂಕಾರಕ್ಕೆ ಲಂಕಾ ಪ್ರಜಾ ಸಂಖ್ಯೆಯಂ  ಬಲಿ ಕೊಡುವೆ ಏನ್? ಸಾಲದೇನು ಆದ ಬಲಿ? ತಾಯ್ ಸಂಕಟವನ್ ಏಕೆ ಪೆರ್ಚಿಪ ಈ ಪೇಡಿತನಮಯ್? ನಿನ್ನ ಬಿಂಕಕ್ಕೆ ವಿಧವೆಯರ ಸಂಖ್ಯೆ ಬೆಳೆಯ ವೇಳ್ಕುಮೆ? ಮಕ್ಕಳಂ ಕಳೆದುಕೊಳ್ವ ಅಬ್ಬೆಯರ ಸಂಖ್ಯೆ? ಕೂಳ್ ಕೊಡುವರಂ ಬಲಿ ಕೊಡುವ ಅನಾಥ ಶಿಶು ಸಂಖ್ಯೆ?”, “ ಬಯ್ಯದಿರ್ ಎಲೆಗೆ ಲಂಕೆ. ನಾಳೆಯ ಸಮರದೊಳ್ ಆನ್ ಒರ್ವನೆಯೆ  ಮಲೆವೆನ್. ಇನ್ ನಿನ್ನ ಕಂದರೊಳ್ ಒರ್ವನ್ ಆದೊಡಂ ಇನ್ ಮಡಿಯನ್ ಕೊಲಿಸೆನ್  ದಿಟಂ ಇದೋ ಭಾಷೆಯನ್ ಇತ್ತೆನ್; ಕೊಳ್, ಕೃಪಣೆ! ಎನ್ನಂ ಬೀಳ್ಕೊಡು; ಪೋಪೆನ್ ಔದಾರ್ಯಂ ಇರ್ದ ಎಡೆಗೆ, ಜಗದಂಬೆ ಶಿವೆಯ ಸಂದರ್ಶನಕೆ!”   

ಪದ-ಅರ್ಥ:

ಕಟುದಿಟಂ-ತೀಕ್ಷ್ಣವಾದ ಸತ್ಯ;  ದನುಜೇಂದ್ರ-ರಾಕ್ಷಸರ ರಾಜ(ರಾವಣ);  ವಾಕ್ ಸಿದ್ಧಿ-ಮಾತಿನ ಕಾರ್ಯಸಾಧನೆ;  ಸುಯ್ವೆ-ನಿಟ್ಟುಸಿರು ಬಿಡುವೆ?;  ತಾನಪ್ಪೊಡಂ-ತಾನಾಗಿದ್ದರೂ;  ಲೆಕ್ಕಂಗಿಡಲ್-ಲೆಕ್ಕಹಾಕಿದರೆ, ಲೆಕ್ಕಮಾಡಿದರೆ;  ಮಡಿವರೆಂದಳ್ಕು-ಸಾಯುತ್ತಾರೆ ಎಂಬ ಅಳುಕು;  ಮಸಣಕ್ಕೆ-ಶ್ಮಶಾನಕ್ಕೆ, ಸುಡುಗಾಡಿಗೆ;  ರಾಣಿಯಾಗಿಪ್ಪೆಯೇಂ-ರಾಣಿಯನ್ನಾಗಿ ಮಾಡುವೆಯೇನು?;  ಸಾಲ್ಗುಂ-ಸಾಕು;  ಈ ಛಲಂ ಮಾಣ್-ಈ ಹಠವನ್ನು ಬಿಟ್ಟುಬಿಡು; ಅಂತರಾತ್ಮದೊಳ್-ಮನಸ್ಸಿನಾಳದಲ್ಲಿ;  ಪುಡುಕಿ ಕಾಣ್-ಹುಡುಕಿ ನೋಡು;  ಮೈಥಿಲಿ-ಮಿಥಿಲೆಯ ರಾಜಕುಮಾರಿ(ಸೀತೆ);  ಕಪ್ಪಂಗುಡುವುದು-ಕಪ್ಪವಾಗಿ ಕೊಡುವುದು;  ಪೆರ್ಚಿಪ-ಅಧಿಕವಾಗುತ್ತಿರುವ;  ಪೇಡಿತನ-ಹೇಡಿತನ;  ಬಿಂಕ-ಗರ್ವ;  ಬೆಳೆಯ ವೇಳ್ಕುಮೆ-ಬೆಳೆಯಬೇಕೆ?;  ಅಬ್ಬೆಯರ್-ತಾಯಂದಿರು; ಕೂಳ್ ಕೊಡುವರಂ-ಅನ್ನ ಹಾಕುವವರನ್ನು;  ಸಮರಕೆ-ಯುದ್ಧಕ್ಕೆ;  ಆನೊರ್ವನೆಯೆ-ನಾನೊಬ್ಬನೇ;  ಮಲೆವೆನ್-ಎದುರಿಸುತ್ತೇನೆ;  ಕಂದರೊಳ್-ಮಕ್ಕಳಲ್ಲಿ;  ಒರ್ವನಾದೊಡಂ-ಒಬ್ಬನನ್ನಾದರೂ; ಮಡಿಯನಿನ್-ಸಾಯಲಾರ;  ಕೃಪಣೆ-ನಿರ್ಗತಿಕಳಾದವಳು;  ಔದಾರ್ಯಮಿರ್ಪೆಡೆಗೆ-ಉದಾರತೆ ಇರುವಲ್ಲಿಗೆ;  ಶಿವೆ-ದುರ್ಗೆ, ಕಾಳಿಕಾದೇವಿ. 

            “ರಾಕ್ಷಸ ರಾಜನಾದ ರಾವಣನೇ, ನಿನ್ನ ಮಾತಿನ ಕಾರ್ಯಸಾಧನೆ ಎಂಬುದು ತೀಕ್ಷ್ಣವಾದ ಸತ್ಯವೇ ಹೌದು.” ಎಂದು ಲಂಕಿಣಿ ಹೇಳಿದಾಗ, ರಾವಣನು, “ಹಾಗಾದರೆ ಮತ್ತೇಕೆ ಕಣ್ಣೀರು ಸುರಿಸುತ್ತಿರುವೆ? ಏಕೆ ನಿಟ್ಟುಸಿರು ಬಿಡುತ್ತಿರುವೆ?” ಎಂದು ಪ್ರಶ್ನಿಸಿದನು. ಆಗ ಲಂಕಿಣಿಯು, “ನಿನಗೆ ಸಿದ್ಧಿ ಒದಗಿದ್ದರೂ ಲೆಕ್ಕವಿಡಲು ಸಾಧ್ಯವಾಗದಷ್ಟು ನನ್ನ ಮಕ್ಕಳು ಸಾಯುತ್ತಾರೆ ಎಂಬ ಅಳುಕು ನನ್ನದು. ಹೀಗೇ ಮುಂದುವರಿದು ಲಂಕೆಯೇ ಬರಿದಾದರೆ ಸಿಂಹಾನಸವನ್ನು ಏರಿದರೂ ಏನು ಪ್ರಯೋಜನ? ನೀನು ನನ್ನನ್ನು ಸುಡುಗಾಡಿಗೆ ರಾಣಿಯನ್ನಾಗಿ ಮಾಡುವೆಯೇನು? ಇನ್ನುಕೊಲೆ ಸಾಕು. ಈ ಛಲವನ್ನು ಬಿಟ್ಟುಬಿಡು” ಎಂದು ಲಂಕಿಣಿ ರಾವಣನಿಗೆ ತಿಳಿಹೇಳಿದಳು. ಆ ಮಾತಿಗೆ ರಾವಣನು, “ಮತ್ತೆ ನಿನ್ನ ಆಸೆಯೇನು?” ಎಂದು ಪ್ರಶ್ನಿಸಿದಾಗ, ಲಂಕಿಣಿ, “ನನ್ನಾಸೆಯೇ? ಅದು ನಿನ್ನ ಅಂತರಾತ್ಮದಲ್ಲಿ ಸಂಚರಿಸುತ್ತಿದೆಯಲ್ಲ! ಹುಡುಕಿ ನೋಡು” ಎಂದಳು.

            “ರಾಮನನ್ನು ಗೆದ್ದು, ಸೀತೆಗೆ ಆತನನ್ನು ಕಪ್ಪವಾಗಿ ಅರ್ಪಿಸಬೇಕೆಂದು ಭಾವಿಸಿರುವೆಯೇನು?” ಎಂದು ರಾವಣನು ಲಂಕಿಣಿಗೆ ಸವಾಲೆಸೆದನು. ಆಗ ಲಂಕಿಣಿಯು, “ನಿನ್ನ ಅಹಂಕಾರಕ್ಕೆ ಲಂಕೆಯ ಸಮಸ್ತ ಪ್ರಜೆಗಳನ್ನು ಇದಕ್ಕಾಗಿ ಬಲಿಕೊಡುವೆಯೇನು? ಈಗಾಗಲೇ ನಡೆದ ಸಾವು ಸಾಕಾಗಲಿಲ್ಲವೇ? ಮಕ್ಕಳನ್ನು ಕಳೆದುಕೊಂಡು ನೊಂದ ತಾಯಿಯ ಸಂಕಟವನ್ನು ಇನ್ನೂ ಏಕೆ ಹೆಚ್ಚಿಸುತ್ತಿರುವೆ?  ನಿನಗೆ ಈ ಹೇಡಿತನ ಏಕೆ? ನಿನ್ನ ಗರ್ವಕ್ಕೆ ಲಂಕೆಯಲ್ಲಿ ವಿಧವೆಯರ ಸಂಖ್ಯೆ, ಮಕ್ಕಳನ್ನು ಕಳೆದುಕೊಂಡು ಅನಾಥೆಯಾರಾಗುತ್ತಿರುವ ತಾಯಂದಿರ ಸಂಖ್ಯೆ  ಇನ್ನೂ ಬೆಳೆಯಬೇಕೇನು? ಅನ್ನವನ್ನು ಹಾಕುವ ಹೆತ್ತವರನ್ನು ಕೊಲ್ಲಿಸಿ ಅನಾಥ ಶಿಶುಗಳ ಸಂಖ್ಯೆಯನ್ನೂ ಹೆಚ್ಚಿಸಬೇಕೇನು?” ಎಂದು ಲಂಕಿಣಿ ಲಂಕೆಯ ವಾಸ್ತವ ಸ್ಥಿತಿಯನ್ನು ರಾವಣನಿಗೆ ಅರುಹಿದಳು. ಆಗ ರಾವಣನು, “ಎಲೆ ಲಂಕಿಣಿ, ನೀನು ನನ್ನನ್ನು ಬಯ್ಯಬೇಡ. ನಾಳೆ ನಡೆಯುವ ಯುದ್ಧದಲ್ಲಿ ನಾನು ಒಬ್ಬಂಟಿಗನಾಗಿ ವೈರಿಗಳನ್ನು ಎದುರಿಸುತ್ತೇನೆ. ಇನ್ನು ಮುಂದೆ ನಿನ್ನ ಮಕ್ಕಳಲ್ಲಿ ಒಬ್ಬನನ್ನೂ ಸಾಯುವುದಕ್ಕೆ ಅವಕಾಶವನ್ನು ಕೊಡುವುದಿಲ್ಲ. ಇನ್ನು ಉಳಿದುದು ನನ್ನ ಕಾರ್ಯ. ಸತ್ಯವಾಗಿಯೂ ನಾನು ನಿನ್ನವರನ್ನು ಇನ್ನು ಕೊಲ್ಲಿಸುವುದಿಲ್ಲ. ಇದೋ ನೋಡು ನಿನಗೆ ಭಾಷೆಯನ್ನು ಕೊಟ್ಟಿದ್ದೇನೆ. ಸ್ವೀಕರಿಸು ಕೃಪಣೆ, ನನ್ನನ್ನು ಇನ್ನು ಬೀಳ್ಕೊಡು. ಎಲ್ಲಿ ಉದಾರತೆ ಇದೆಯೋ ಅಲ್ಲಿಗೆ ಹೋಗಿ ಜಗದಂಬೆಯಾದ ಕಾಳಿಕಾದೇವಿಯ ಸಂದರ್ಶನಕ್ಕೆ ಪ್ರಯತ್ನಿಸುತ್ತೇನೆ” ಎಂದನು.

 

                                                    “ನಾನೆ ಶಿವೆ!

ಕಾಣದೇನಯ್?”

                          “ಅದೆಂತು?”

                                             “ಕಣ್ಣಂತೆ ಕಾಣ್ಕೆಯಯ್!”

ನೋಡಿದನು ಬೆರಗಾಗಿ ದಾನವೇಂದ್ರಂ, ಜ್ಯೋತಿ

ತಾಂ ಘನೀಭೂತಮಾಯ್ತೆನೆ ಮೆರೆದುದಂಬಿಕಾ

ಶ್ರೀಮೂರ್ತಿ. ಪಾಳ್ಗುಡಿಗೆ ಬದಲೊಂದು ಪರ್ಬಿದುದು

ಹೇಮ ನೀಹಾರಿಕೆ, ವಿಯತ್ತಳವನಾಕ್ರಮಿಸಿ;

ಗೂಬೆಗತ್ತಲ್ ಪರಿದುದಿಂದ್ರಕಾರ್ಮುಕ ಕಾಂತಿ

ತುಂಬಿದತ್ತಾಕಾಶ ಪದವಿಯಂ, ಕಾಣುತೆ

ಅತೀಂದ್ರಿಯ ನಿರಾಕಾರದತಿಮನೋತತ್ತ್ವೆಯಂ

ವರ್ಣನಾತೀತ ವರವರ್ಣಿನಿಯನಂಬೆಯಂ     ೧೪೦

ಭಾವಾಶ್ರುಮಯ ನೇತ್ರನೆರಗಿದನು ರಾವಣಂ

ಗದ್ಗದಿಸುತರ್ಭಕನವೋಲ್:

                                          “ದುಃಖಮೇನ್, ಕಂದ,

ನಿನಗೆ, ಲಂಕೇಶ್ವರಗೆ, ತ್ರಿಜಗದ್ ಭಯಂಕರಗೆ,

ಬಹು ತಪೋನಿಷ್ಠಂಗೆ, ಬಹು ವರ ಬಲಿಷ್ಠಂಗೆ,

ಕಲಿ ವಸಿಷ್ಠಂಗೆ?”

                           “ಮೂದಲಿಸದಿರ್ ಆಜ್ಞೆಯೋಲ್,

ಸರ್ವಜ್ಞೆ.  ನಿನ್ನ ಲೀಲೆಯನರಿಯೆನೆಂದಲ್ತು.

ನೀನಾಡಿಸಿದವೊಲೆ ಜಗನ್ನಾಟಕಂ. ನಿನ್ನ

ಇಚ್ಛಾ ಸೂತ್ರಮಿತ್ತಲೆಳೆದರೆ ರಾವಣೋತ್ಕರ್ಷ,

ಅತ್ತಲೆಳೆದರೆ ವೈರಿಯುತ್ಕರ್ಷ! ಪಾತ್ರಮನ್

ಸೋಲು ಗೆಲು ಸುಖದುಃಖ ಸೂತ್ರಂಗಳಿಂ ಪಿಡಿದು  ೧೫೦

ಆಡಿಪುದೆ ನಿನಗೆ ಹರ್ಷಂ! ಗಾಳಿಪಟಗಳಂ

ಆಡಿಸುವವೋಲ್! ನನ್ನ ಈ ದುಃಖಮುಂ ನಿನ್ನ

ಇಚ್ಛೆಯೆ ದಿಟಂ! ಅಲ್ಲದಿರೆ ತಿಳಿದುತಿಳಿದುಮೀ

ಶೋಕಮೆನ್ನಂ ದಹಿಸುತಿರ್ದುದೆ? ಅದಾತ್ಮಕ್ಕೆ

ಸಂಸ್ಕಾರಮಲ್ತೆ? ಜೀವಂಗಳಂ ಮಸೆಯಲ್ಕೆ,

ನಿಶಿತಗೊಳಿಸಲ್ಕೆ, ಬೆಳಗಲ್ಕೆ ದುಃಖಭೋಗಂ

ತಾಂ ಸಾಣೆಯಲ್ತೆ?”

ಅನ್ವಯಕ್ರಮ:

“ನಾನೆ ಶಿವೆ! ಕಾಣದೇನಯ್?”, “ಅದು ಎಂತು?”, “ಕಣ್ಣಂತೆ ಕಾಣ್ಕೆಯಯ್!” ದಾನವೇಂದ್ರಂ ಬೆರಗಾಗಿ ನೋಡಿದನು. ಜ್ಯೋತಿ ತಾಂ ಘನೀಭೂತಂ ಆಯ್ತು ಎನೆ ಅಂಬಿಕಾ ಮೂರ್ತಿ ಮೆರೆದುದು. ಪಾಳ್ ಗುಡಿಗೆ ಬದಲ್ ಒಂದು ಹೇಮ ನಿಹಾರಿಕೆ ವಿಯತ್ ತಳಮನ್ ಆಕ್ರಮಿಸಿ ಪರ್ಬಿದುದು, ಗೂಬೆಗತ್ತಲ್ ಪರಿದು, ಇಂದ್ರ ಕಾರ್ಮುಕ ಕಾಂತಿ ಆಕಾಶ ಪದವಿಯಂ ತುಂಬಿದತ್ತು. ಅತೀಂದ್ರಿಯ ನಿರಾಕಾರದ ಅತಿ ಮನೋತತ್ತ್ವೆಯಂ,  ವರ್ಣನ ಅತೀತ ವರವರ್ಣಿನಿಯಂ, ಅಂಬೆಯಂ ಕಾಣುತೆ ಭಾವಾಶ್ರುಮಯ ನೇತ್ರನ್ ರಾವಣಂ ಗದ್ಗದಿಸುತ ಅರ್ಭಕನವೋಲ್ ಎರಗಿದನು:  “ದುಃಖಂ ಏನ್, ಕಂದ, ನಿನಗೆ, ಲಂಕೇಶ್ವರಗೆ , ತ್ರಿಜಗದ್ ಭಯಂಕರಗೆ, ಬಹು ತಪೋನಿಷ್ಠಂಗೆ, ಬಹು ವರ ಬಲಿಷ್ಠಂಗೆ, ಕಲಿ ವಸಿಷ್ಠಂಗೆ?”,  “ಸರ್ವಜ್ಞೆ, ಮೂದಲಿಸದಿರ್ ಆಜ್ಞೆಯೋಲ್,  ನಿನ್ನ ಲೀಲೆಯನ್ ಅರಿಯೆನ್ ಎಂದು ಅಲ್ತು. ನೀನ್ ಆಡಿಸಿದವೊಲೆ ಜಗತ್ ನಾಟಕಂ, ನಿನ್ನ ಇಚ್ಛಾ ಸೂತ್ರಂ ಇತ್ತಲ್ ಎಳೆದರೆ ರಾವಣ ಉತ್ಕರ್ಷ, ಅತ್ತಲ್ ಎಳೆದರೆ ವೈರಿಯ ಉತ್ಕರ್ಷ! ಸೋಲು, ಗೆಲು, ಸುಖ ದುಃಖ ಸೂತ್ರಂಗಳಿಂ ಪಿಡಿದು ಗಾಳಿಪಟಂಗಳಂ ಆಡಿಸುವವೋಲ್ ಪಾತ್ರಮನ್ ಆಡಿಪುದೆ ನಿನಗೆ ಹರ್ಷಂ!  ನನ್ನ ಈ ದುಃಖಮುಂ ನಿನ್ನ ಇಚ್ಛೆಯೆ ದಿಟಂ! ಅಲ್ಲದೆ ಇರೆ ತಿಳಿದು ತಿಳಿದುಂ ಈ ಶೋಕಂ ಎನ್ನಂ ದಹಿಸುತ ಇರ್ದುದೆ? ಅದು ಆತ್ಮಕ್ಕೆ ಸಂಸ್ಕಾರಂ ಅಲ್ತೆ? ಜೀವಂಗಳಂ ಮಸೆಯಲ್ಕೆ, ನಿಶಿತಗೊಳಿಸಲ್ಕೆ, ಬೆಳಗಲ್ಕೆ, ದುಃಖಭೋಗಂ ತಾಂ ಸಾಣೆ ಅಲ್ತೆ?”

ಪದ-ಅರ್ಥ:

ಶಿವೆ-ದುರ್ಗೆ, ಚಂಡಿಕಾದೇವಿ;  ಕಾಣದೇನಯ್-ಕಾಣಿಸುತ್ತಿಲ್ಲವೇ?;  ಅದೆಂತು-ಅದು ಹೇಗೆ?;  ಕಣ್ಣಂತೆ ಕಾಣ್ಕೆಯಯ್-ಕಣ್ಣಿನಂತೆಯೇ ನೋಟ;  ದಾನವೇಂದ್ರ-ರಾಕ್ಷಸರ ರಾಜ(ರಾವಣ);  ಘನೀಭೂತ-ಹೆಪ್ಪುಗಟ್ಟು; ಪಾಳ್ಗುಡಿ-ಹಾಳುದೇಗುಲ;  ಹೇಮ-ಚಿನ್ನ; ನೀಹಾರಿಕೆ-ಜ್ಯೋತಿಃಪಟಲ;  ವಿಯತ್ತಲಮನಾಕ್ರಮಿಸಿ(ವಿಯತ್+ತಳಮನ್+ಆಕ್ರಮಿಸಿ) ಆಕಾಶವೆಲ್ಲವನ್ನೂ ಆಕ್ರಮಿಸಿಕೊಂಡು; ಗೂಬೆಗತ್ತಲ್-ಭಯಹುಟ್ಟಿಸುವ ಕತ್ತಲು;  ಪರಿದುದು-ಹರಡಿತು, ಆವರಿಸಿಕೊಂಡಿತು; ಇಂದ್ರಕಾರ್ಮಿಕ ಕಾಂತಿ-ಕಾಮನಬಿಲ್ಲಿನ ಕಾಂತಿ;  ತುಂಬಿದತ್ತು-ತುಂಬಿಕೊಂಡಿತು;  ಆಕಾಶ ಪದವಿ-ಆಕಾಶ ಮಾರ್ಗ;  ಅತೀಂದ್ರಿಯ-ಇಂದ್ರಿಯ ಗೋಚರವಲ್ಲದುದು;  ನಿರಾಕಾರ-ಆಕಾರವಿಲ್ಲದುದು;  ಅತಿಮನೋತತ್ತ್ವೆ-ಮನಸ್ಸಿನ ವ್ಯಾಪಾರಕ್ಕೆ ನಿಲುಕದವಳು;  ವರ್ಣನಾತೀತ-ವರ್ಣಿಸಲಾಗದ;  ಅಂಬೆ-ದುರ್ಗೆ;  ಭಾವಾಶ್ರುಮಯನೇತ್ರನ್-ಭಾವದ ಕಂಬನಿಗಳಿಂದ ಕೂಡಿದವನು(ರಾವಣ);  ಗದ್ಗದಿಸುತ-ಧ್ವನಿಕಂಪಿಸುತ್ತ;  ಅರ್ಭಕನವೋಲ್-ಮಗುವಿನ ಹಾಗೆ;  ತ್ರಿಜಗದ್ ಭಯಂಕರ-ಮೂರು ಲೋಕಗಳಿಗೂ ಭಯಂಕರನಾದವನು(ರಾವಣ);  ಬಹು ತಪೋನಿಷ್ಠ-ಹಲವು ತಪಸ್ಸುಗಳಿಂದ ನಿಷ್ಠನಾದವನು;  ಬಹು ವರ ಬಲಿಷ್ಠ-ಹಲವು ವರಗಳನ್ನು ಪಡೆದು ಬಲಿಷ್ಠನಾದವನು;  ಕಲಿ ವಸಿಷ್ಠ-ಪರಾಕ್ರಮಶಾಲಿಯಾಗಿದ್ದು ವಸಿಷ್ಠನಂತಿರುವವನು;  ಮೂದಲಿಸು-ಹೀಯಾಳಿಸು; ಅರಿಯೆನ್-ತಿಳಿಯಲಾರೆ;  ಜಗನ್ನಾಟಕಂ-ಜಗತ್ತೆಂಬ ನಾಟಕ;  ರಾವಣೋತ್ಕರ್ಷ-ರಾವಣನ ಅಭಿವೃದ್ಧಿ;  ವೈರಿಯುತ್ಕರ್ಷ-ವೈರಿಯ ಅಭಿವೃದ್ಧಿ(ರಾಮನ ಅಭಿವೃದ್ಧಿ);  ಮಸೆಯಲ್ಕೆ-ನಾಶಮಾಡಲು; ನಿಶಿತಗೊಳಿಸು-ಹರಿತಗೊಳಿಸು;  ಬೆಳಗಲ್ಕೆ-ಬೆಳಗಿಸಲು; ಸಾಣೆ– ಹರಿತಗೊಳಿಸುವ ಸಾಧನ.   

            “ನಾನೇ ದುರ್ಗೆ, ಕಾಣಿಸುತ್ತಿಲ್ಲವೇ?” ಎಂದು ಚಂಡಿಕಾದೇವಿ ಕೇಳಿದಾಗ, ಸಂಶಯಗೊಂಡ ರಾವಣ, “ಅದು ಹೇಗೆ?” ಎಂದು ಪ್ರಶ್ನಿಸುತ್ತಾನೆ. ಆತನ ಪ್ರಶ್ನೆಗೆ ಚಂಡಿಕಾದೇವಿ, “ಕಣ್ಣಿನಂತೆಯೇ ನೋಟ” ಎನ್ನುತ್ತಾಳೆ. ನೋಡುವ, ಕಾಣುವ ಮತ್ತು ಗ್ರಹಿಸುವ ಶಕ್ತಿಯಿದ್ದರೆ ಆತನಿಗೆ ಎಲ್ಲವೂ ಗೋಚರಿಸುತ್ತದೆ. ಅದು ಇಲ್ಲದವರಿಗೆ ಎಲ್ಲವೂ ಅಸಾಧ್ಯ. ಚಂಡಿಕಾದೇವಿಯ ಮಾತಿಗೆ ರಾವಣ ಬೆರಗಾದನು. ರಾವಣನ ಮುಂದೆ ಕಾಣಿಸಿಕೊಂಡ ಜ್ಯೋತಿ ಏಕಾಏಕಿ ಘನೀಭೂತಗೊಂಡು ಅಂಬಿಕಾ ತ್ರಿಮೂರ್ತಿಯಾಗಿ ಶೋಭಿಸಿತು. ಹಾಳು ದೇಗುಲದ ಬದಲಿಗೆ ಒಂದು ಚಿನ್ನದ ನೀಹಾರಿಕೆಯು ಆಕಾಶಮಾರ್ಗವನ್ನು ಆಕ್ರಮಿಸಿ  ಹರಡಿಕೊಂಡಿತು. ಭೀಕರವಾದ ಕತ್ತಲೆಯು ಮಾಯವಾಗಿ ಆಕಾಶವೆಲ್ಲವನ್ನೂ ವ್ಯಾಪಿಸಿ ಕಾಮನಬಿಲ್ಲಿನ ಕಾಂತಿ ತುಂಬಿಕೊಂಡಿತು. ಇದೆಲ್ಲವನ್ನು  ಕಾಣುತ್ತ ಅತೀಂದ್ರಿಯ ನಿರಾಕಾರದ ಅತಿಮನೋತತ್ತ್ವೆಯಾದ, ವರ್ಣನೆಗೆ ನಿಲುಕದ ವರವರ್ಣಿನಿಯಾದ ಅಂಬೆಯನ್ನು ಕಂಡು ರಾವಣನ ಕಣ್ಣುಗಳಲ್ಲಿ ಭಾವಾಶ್ರು ತುಂಬಿಕೊಂಡಿತು. ಕೂಡಲೇ ರಾವಣನು ಗದ್ಗದಿಸುತ್ತ ಮಗುವಿನಂತೆ ಅಂಬೆಯ ಪಾದಗಳಿಗೆ ನಮಸ್ಕರಿಸಿದನು.

            ತನ್ನ ಪಾದಗಳಿಗೆ ನಮಸ್ಕರಿಸಿದ ರಾವಣನನ್ನು ಕಂಡು ದುರ್ಗೆಯು, “ರಾವಣನೇ, ನೀನು ಲಂಕಾಧಿಪತಿ, ಮೂರು ಲೋಕಗಳಿಗೂ ಭಯಂಕರನಾದವನು, ಬಹಳ ತಪಸ್ಸನ್ನು ಮಾಡಿ ನಿಷ್ಠನೆನಿಸಿಕೊಂಡವನು, ಹಲವು ದೇವರನ್ನು ಮೆಚ್ಚಿಸಿ ಸಾಕಷ್ಟು ವರಗಳನ್ನು ಪಡೆದುಕೊಂಡವನು, ಮಾತ್ರವಲ್ಲ ಮಹಾ ಪರಾಕ್ರಮಿಯಾಗಿ ವಸಿಷ್ಠನಿಗೆ ಸಮಾನನಾಗಿರುವವನು ನಿನಗೆ ದುಃಖವೇಕೆ?” ಎಂದು ಪ್ರಶ್ನಿಸಿದಳು. ಆಗ ರಾವಣನು, “ಆಜ್ಞೆಯ ರೀತಿಯಲ್ಲಿ ನೀನು ನನ್ನನ್ನು ಹೀಯಾಳಿಸಬೇಡ. ನೀನು ಸರ್ವಜ್ಞೆ. ಎಲ್ಲವನ್ನೂ ಬಲ್ಲವಳು. ನಿನ್ನ ಲೀಲೆಗಳನ್ನು ನಾನು ಅರಿತಿಲ್ಲ ಎಂದಲ್ಲ. ನೀನು ಆಡಿಸಿದ ಹಾಗೆಯೇ ಜಗತ್ತಿನ ನಾಟಕ. ನೀನು ಸೂತ್ರಧಾರಿಣಿ. ನಿನ್ನ ಇಚ್ಛಾಸೂತ್ರವನ್ನು ಸ್ವಲ್ಪ ಈ ಕಡೆಗೆ ಎಳೆದರೆ ಈ ರಾವಣನ ಅಭಿವೃದ್ಧಿಯಾಗುತ್ತದೆ. ಸ್ವಲ್ಪ ಆ ಕಡೆಗೆ ಎಳೆದರೆ ನನ್ನ ವೈರಿಯಾದ ರಾಮನ ಅಭಿವೃದ್ಧಿಯಾಗುತ್ತದೆ. ನೀನು ಸೋಲು, ಗೆಲುವು, ಸುಖ, ದುಃಖ ಮೊದಲಾದ ಸೂತ್ರಗಳನ್ನು ಹಿಡಿದುಕೊಂಡು ಗಾಳಿಪಟಗಳನ್ನು ಆಡಿಸುವ ಹಾಗೆ ಪಾತ್ರಗಳನ್ನು ಆಡಿಸುವೆ. ಈಗ ನನಗೆ ಒದಗಿರುವ ಈ ದುಃಖವು ನಿನ್ನ ಇಚ್ಛೆಯಂತೆಯೇ ಇದೆ ಎಂಬುದು ನನಗೂ ಗೊತ್ತು. ಅಲ್ಲದಿದ್ದರೆ ತಿಳಿದೂ ತಿಳಿದೂ ಈ ಶೋಕವು ನನ್ನನ್ನು ಸುಡುತ್ತ ಇರುವುದಕ್ಕೆ ಸಾಧ್ಯವೇ? ಅದು ಆತ್ಮಕ್ಕೆ ಸಂಸ್ಕಾರವಲ್ಲವೇ? ಲೋಕದ ಜೀವಗಳನ್ನು ಮಸೆಯುವುದಕ್ಕೆ, ಹರಿತಗೊಳಿಸುವುದಕ್ಕೆ, ಬೆಳಗುವುದಕ್ಕೆ ದುಃಖವನ್ನು ಅನುಭವಿಸುವುದೇ ಸಾಣೆಯಲ್ಲವೆ?” ಎಂದು ರಾವಣನು ತನ್ನ ಮನದ ಮಾತುಗಳನ್ನು ದೇವಿಯ ಮುಂದೆ ನಿವೇದಿಸಿಕೊಂಡನು. 

 

                              “ಈ ಬುದ್ಧಿ ಸಿದ್ಧಿಯ ನೆಲೆಗೆ

ನಿಲ್ವಿನಂ ನಿನಗೆ ತಪ್ಪದು ನಾಟಕವನಲೆವ

ಪಾತ್ರಕರ್ಮಂ”

                       “ಹಿಂಜರಿಯೆನದಕೆ. ನೀಡೆನಗೆ

ಬಲ್ಮೆಯಂ: ನಾಟಕದೊಳಭಿನಯಕೆ ತಗುವಂತೆ  ೧೬೦

ಚಾತುರ್ಯಮಂ”

                           “ಬೇಡಿದುದನಾಂ ನೀಡುವೆನ್.

ನೀಡದುದುಮುಂಟೆ ಭಕ್ತಂಗೆ?”

                                              “ದಶರಥ ಸುತಂ

ರಣದಿ ಸೋಲ್ವಂತೆನಗೆ ಮಾಡು ಕೃಪೆಯನ್!”

                                                                   “ತಥಾಸ್ತು!”

“ಸೀತೆ ವಶವಪ್ಪಂತೆ!”

                                “ತಥಾಸ್ತು!”

                                                  “ನೀಂ ತಾಯ್ ದಿಟಂ!

ನೀಂ ಕೃಪಾಬ್ಧಿಯೆ ದಿಟಂ! ರಾಮ ಜಯಕಿಂ ಮಿಗಿಲ್

ಸೀತೆ ಸೋಲ್ವುದೆ ಸೋಜಿಗಂ!”

                                             “ಸೋಜಿಗಮದೇಕೆ?

ಒಲಿದ ಕಂದಗೆ ತಾಯಿ ಸೋಲ್ವುದೇನಚ್ಚರಿಯೆ?

ಸಹಜಂ!”

                “ಅದೇನ್ ಮತ್ತೆ ವಕ್ರೋಕ್ತಿ!”

                                                          “ವಕ್ರಮೇನ್!

ನಿನ್ನೆರ್ದೆಯ ಗೂಢವೃತ್ತಿಗೆ ನನ್ನದುಕ್ತಿಯಯ್!”

“ಸೀತೆ ಸೋಲ್ವಳೆ? ರಾಮನಂ ಗೆಲ್ವೆನಿದು ದಿಟಮೆ?”  ೧೭೦

“ಸೀತೆಯಾಲಿಂಗಿಪಳ್, ಚುಂಬಿಸೆರ್ದೆಗೊತ್ತುವಳ್;

ರಣದಿ ರಾಮನ ಸೋಲಿಪಯ್, ಪುನರ್ ಜನ್ಮದೊಳ್!

ಕಾಣ್ ತೋರ್ಪುದಂ:”

                                 ತಿರೋಹಿತಮಾದುದಾ ದರ್ಶನಂ.

ಮಿಳ್ಮಿಳನೆ ನೋಡುತಿರ್ದಸುರದೃಷ್ಟಿಗೆ ಮುಂದೆ

ಮೆರೆದತ್ತದೊಂದು ದೇವಾಲಯಂ. ಪೀಠಾಗ್ರದೊಳ್,

ದೇವವಿಗ್ರಹಮಲ್ತು. ನಿಂದುದೊಂದಶ್ವಂ

ಮಹದ್ ಭೀಮತನು, ತನ್ನ ಪಿಂಗಾಲ್ಗಳನ್ನೂರಿ,

ಮುಂಗಾಲ್ಗಳಂ ನೆಗಹಿ. ಮೇಣ್, ನಿಗುರ್ದಂಗದಿಂ

ನರ್ತಿಸುತೆ, ನೆಲವನೊದೆದುದು ಖುರಪುಟಧ್ವನಿಗೆ

ಕೆನೆವ ಹೇಷೆಗೆ ದಶಗ್ರೀವಾಸು ಗದ್ಗದಿಸೆ!                 ೧೮೦

ಇದೇನಿದೇನೆನುತಿರಲ್, ದೀರ್ಘಖಡ್ಗಂಬಿಡಿದು

ಮೂಡಿದುದು ನಭದೊಳ್ ಬೃಹನ್ಮುಷ್ಟಿ. ಇಳಿದುದದು

ಕುದುರೆಯ ಕೊರಳ್ಗೆ. ಕತ್ತರಿಸುರುಳ್ದುದು ಮಂಡೆ

ಮಣ್ಗೆ. ಖಂಡೆಯಮಿರದೆ ಕಾರಿದುದು, ನೆತ್ತರ್

ಪೊನಲ್ಪರಿಯೆ.

ಅನ್ವಯಕ್ರಮ:

“ಈ ಬುದ್ಧಿ ಸಿದ್ಧಿಯ ನೆಲೆಗೆ ನಿಲ್ವಿನಂ ನಿನಗೆ ತಪ್ಪದು ನಾಟಕವನ್ ಅಲೆವ ಪಾತ್ರಕರ್ಮಂ”, “ಹಿಂಜರಿಯೆನ್ ಅದಕೆ, ಎನಗೆ ಬಲ್ಮೆಯಂ, ನಾಟಕದೊಳ್ ಅಭಿನಯಕೆ ತಗುವ ಚಾತುರ್ಯಮಂ ನೀಡು”, “ಬೇಡಿದುದನ್ ಆಂ ನೀಡುವೆನ್. ಭಕ್ತಂಗೆ ನೀಡದುದುಂ ಉಂಟೆ?” , “ರಣದಿ ದಶರಥ ಸುತಂ ಸೋಲ್ವಂತೆ ಎನಗೆ ಕೃಪೆಯನ್ ಮಾಡು!”, “ತಥಾಸ್ತು!”, “ಸೀತೆ ವಶವಪ್ಪಂತೆ!”, “ತಥಾಸ್ತು!”, “ನೀನ್ ತಾಯ್ ದಿಟಂ! ನೀಂ ಕೃಪಾ ಅಬ್ಧಿಯೇ ದಿಟಂ! ರಾಮ ಜಯಕಿಂ ಮಿಗಿಲ್ ಸೀತೆ ಸೋಲ್ವುದೆ ಸೋಜಿಗಂ!”, “ಸೋಜಿಗಂ ಅದೇಕೆ?”, “ಒಲಿದ ಕಂದಂಗೆ ತಾಯಿ  ಸೋಲ್ವುದು ಏನ್ ಅಚ್ಚರಿಯೆ? ಸಹಜಂ!”, “ಅದೇನ್ ಮತ್ತೆ ವಕ್ರೋಕ್ತಿ!”, “ವಕ್ರಂ ಏನ್! ನಿನ್ನ ಎರ್ದೆಯ ಗೂಢವೃತ್ತಿಗೆ ನನ್ನದು ಉಕ್ತಿಯಯ್!”, “ಸೀತೆ ಸೋಲ್ವಳೆ? ರಾಮನಂ ಗೆಲ್ವೆನ್ ಇದು ದಿಟಮೆ?”, “ಸೀತೆ ಆಲಿಂಗಿಪಳ್, ಚುಂಬಿಸಿ ಎರ್ದೆಗೊತ್ತುವಳ್; ರಣದಿ ರಾಮನ ಸೋಲಿಪಯ್, ಪುನರ್ ಜನ್ಮದೊಳ್! ಕಾಣ್ ತೋರ್ಪುದಂ.” ತಿರೋಹಿತಂ ಆದುದು ಆ ದರ್ಶನಂ. ಮಿಳ್ಮಿಳನೆ ನೋಡುತ ಇರ್ದ ಅಸುರದೃಷ್ಟಿಗೆ ಮುಂದೆ ಮೆರೆದತ್ತು ಒಂದು ದೇವಾಲಯಂ. ಪೀಠಾಗ್ರದೊಳ್ ದೇವ ವಿಗ್ರಹಂ ಅಲ್ತು, ಒಂದು ಅಶ್ವಂ, ಮಹತ್ ಭೀಮತನು, ತನ್ನ ಪಿಂಗಾಲ್ಗಳನ್ ಊರಿ, ಮುಂಗಾಲ್ಗಳಂ ನೆಗಹಿ   ನಿಂದುದು. ಮೇಣ್, ನಿಗುರ್ದ ಅಂಗದಿಂ ನರ್ತಿಸುತೆ, ನೆಲವನ್ ಒದೆದುದು. ಖುರಪುಟ ಧ್ವನಿಗೆ, ಕೆನೆವ ಹೇಷೆಗೆ, ದಶಗ್ರೀವಾಸು ಗದ್ಗದಿಸೆ! ಇದೇನ್ ಇದೇನ್ ಎನುತಿರಲ್, ದೀರ್ಘಖಡ್ಗಂ ಪಿಡಿದು ಮೂಡಿದುದು ನಭದೊಳ್ ಬೃಹತ್ ಮುಷ್ಟಿ. ಇಳಿದುದು ಕುದುರೆಯ ಕೊರಳ್ಗೆ. ಕತ್ತರಿಸುತ ಮಂಡೆ ಮಣ್ಗೆ ಉರುಳ್ದುದು. ಖಂಡೆಯಂ ಇರದೆ ನೆತ್ತರ ಪೊನಲ್ ಪರಿಯೆ ಕಾರಿದುದು.

ಪದ-ಅರ್ಥ:

ಸಿದ್ಧಿಯ ನೆಲೆ-ಕಾರ್ಯ ಸಫಲತೆಯ ಸ್ಥಿತಿ;  ನಿಲ್ವಿನಂ-ಸ್ಥಿರಗೊಳ್ಳುವವರೆಗೆ;  ನಾಟಕವನಲೆವ-ನಾಟಕದಲ್ಲಿ ಅಭಿನಯಿಸುವ;  ಪಾತ್ರಕರ್ಮಂ-ಪಾತ್ರದ ಕಾರ್ಯ;  ಹಿಂಜರಿಯೆನ್-ಹಿಮ್ಮೆಟ್ಟಲಾರೆ;  ಬಲ್ಮೆ-ಶಕ್ತಿ;  ತಗುವಂತೆ-ಹೊಂದುವಂತೆ;  ಚಾತುರ್ಯ-ಚತುರತೆ, ಜಾಣ್ಮೆ;  ಕೃಪಾಬ್ಧಿ-ಕೃಪೆಯ ಸಾಗರ; ದಿಟ-ಸತ್ಯ;  ಸೋಜಿಗ-ವಿಸ್ಮಯ, ಆಶ್ಚರ್ಯಕರ;  ವಕ್ರೋಕ್ತಿ-ಕೊಂಕು ಮಾತು;  ಗೂಢವೃತ್ತಿ-ಗೌಪ್ಯನಡವಳಿಕೆ;  ದಿಟಮೆ-ಸತ್ಯವೆ?;  ಆಲಿಂಗಿಪಳ್-ಅಪ್ಪಿಕೊಳ್ಳುತ್ತಾಳೆ; ಎರ್ದೆಗೊತ್ತುವಳ್-ಎದೆಗವಚಿಕೊಳ್ಳುತ್ತಾಳೆ;  ರಣದಿ-ಯುದ್ಧದಲ್ಲಿ;  ಸೋಲಿಪಯ್-ಸೋಲಿಸುವೆ;  ಪುನರ್ಜನ್ಮದೊಳ್-ಮುಂದಿನ ಜನ್ಮದಲ್ಲಿ;  ತೋರ್ಪುದಂ-ತೋರಿಸುವುದನ್ನು;  ತಿರೋಹಿತಮಾದುದು-ಮರೆಯಾಯಿತು;  ದರ್ಶನಂ-ನೋಟ;  ಮಿಳ್ಮಿಳನೆ-ಕಣ್ಣನ್ನು ಮಿಟುಕಿಸದೆ;  ಅಸುರದೃಷ್ಟಿ-ರಾಕ್ಷಸ ನೋಟ;  ಮೆರೆದತ್ತು-ಶೋಭಿಸಿತು;  ಪೀಠಾಗ್ರ-ಪ್ರಧಾನವಾದ ಪೀಠ;  ದೇವವಿಗ್ರಹಮಲ್ತು-ದೇವ ಮೂರ್ತಿಯಲ್ಲ;  ಅಶ್ವ-ಕುದುರೆ;  ಮಹದ್ ಭೀಮತನು-ದೊಡ್ಡದಾದ ಭಯಂಕರ ದೇಹ;  ಪಿಂಗಾಲ್-ಹಿಂದಿನ ಕಾಲು;  ಮುಂಗಾಲ್-ಮುಂದಿನ ಕಾಲು;  ನೆಗಹಿ-ಮೇಲಕ್ಕೆತ್ತಿ;  ಮೇಣ್-ಮತ್ತು;  ನಿಗುರ್ದಂಗದಿಂ-ಸೆಟೆದುಕೊಂಡಿರುವ ದೇಹವನ್ನು ಹೊಂದಿ; ಖುರಪುಟಧ್ವನಿ-ಕುದುರೆಯ ಗೊರಸಿನ ಧ್ವನಿ;  ಕೆನೆವ ಹೇಷೆ-ಕುದುರೆಯ ಹೇಷಾರವ;  ದಶಗ್ರೀವಾಸು-ಹತ್ತು ತಲೆಗಳುಳ್ಳವನು(ರಾವಣ);  ನಭದೊಳ್-ಆಕಾಶದಲ್ಲಿ;  ಬೃಹನ್ಮುಷ್ಟಿ(ಬೃಹತ್+ಮುಷ್ಟಿ)-ದೊಡ್ಡ ಮುಷ್ಟಿ, ಭೀಕರವಾದ ಮುಷ್ಟಿ;  ಮಣ್ಗೆ-ಮಣ್ಣಿಗೆ, ನೆಲಕ್ಕೆ;  ಖಂಡೆಯಮಿರದೆ-ಕತ್ತಿಯಿಲ್ಲದೆ; ಪೊನಲ್ಪರಿಯೆ-ಹೊನಲು ಹರಿಯಲು.  

            “ರಾವಣನೆ, ನಿನ್ನ ಈ ಬುದ್ಧಿ ಕಾರ್ಯಸಫಲತೆಯ ಸ್ಥಿತಿಗೆ  ತಲುಪುವವರೆಗೆ ನಿನಗೆ ಈ ನಾಟಕದಲ್ಲಿ ಅಭಿನಯಿಸುವ ಪಾತ್ರದ ಕಾರ್ಯ ತಪ್ಪುವುದಿಲ್ಲ.” ಎಂದು ಚಂಡಿಕಾದೇವಿ ಹೇಳಿದಾಗ, ರಾವಣನು, “ಅದಕ್ಕೆ ನಾನು ಹಿಂಜರಿಯಲಾರೆ. ನೀನು ಸೃಜಿಸಿರುವ ನಾಟಕದಲ್ಲಿ ಅಭಿನಯಿಸುವುದಕ್ಕೆ ಪಾತ್ರಕ್ಕೆ ಹೊಂದುವಂತೆ ನನಗೆ ಶಕ್ತಿಯನ್ನೂ ಚತುರತೆಯನ್ನೂ ಕೊಡು” ಎಂದನು. ಆಗ ಚಂಡಿಕೆ “ನೀನು ಬೇಡಿದುದನ್ನು ನಾನು ನೀಡುತ್ತೇನೆ. ಭಕ್ತನಿಗೆ ನೀಡದಿರುವುದು ಏನಾದರೂ ಇದೆಯೇ?” ಎಂದಾಗ, ರಾವಣನು, “ದಶರಥನ ಮಗನಾದ ರಾಮನು ಯುದ್ಧದಲ್ಲಿ ನನಗೆ ಸೋಲುವಂತೆ ಕೃಪೆಮಾಡು!” ಎಂದು ಬೇಡಿದಾಗ ಆಕೆ, “ತಥಾಸ್ತು!” ಎಂದಳು. “ಸೀತೆ ನನಗೆ ವಶವಾಗುವ ಹಾಗೆ ಕರುಣಿಸು” ಎಂದು ಬೇಡಿದಾಗ ಆಕೆ, “ತಥಾಸ್ತು!” ಎಂದಳು. ಚಂಡಿಕೆಯ ವರಗಳಿಂದ ಸಂತೃಪ್ತನಾದ ರಾವಣನು, “ನೀನು ನಿಜವಾದ ತಾಯಿಯೇ ಆಗಿರುವೆ. ಮಾತ್ರವಲ್ಲ, ಕೃಪೆಯ ಸಾಗರವೂ ಆಗಿರುವೆ! ನಿನ್ನ ವರಗಳು ರಾಮನೊಂದಿಗಿನ ಜಯಕ್ಕಿಂತಲೂ ಮಿಗಿಲಾಗಿವೆ. ಇನ್ನು  ಸೀತೆ ತನಗೆ ಒಲಿಯುವುದು ಸೋಜಿಗವೇ ಸರಿ.” ಎಂದು ಸಂತೋಷದಿಂದ ಹೇಳಿದಾಗ, ಆಕೆ, ಇದರಲ್ಲಿ ಸೋಜಿಗವೇನಿದೆ? ಒಲಿದ ಕಂದನಿಗೆ ತಾಯಿ ಸೋಲುವುದು ಆಶ್ಚರ್ಯವೇನು? ಸಹಜವಲ್ಲವೆ?” ಎಂದಳು. ಆದರೆ ರಾವಣನಿಗೆ ಚಂಡಿಕೆಯ ಮಾತಿನಲ್ಲಿ ಏನೋ ವ್ಯಂಗ್ಯವಿದೆ ಎನಿಸಿತು. ಅವನು, “ಮತ್ತೆ ಅದೇನು ಕೊಂಕುಮಾತು?” ಎಂದು ಪ್ರಶ್ನಿಸಿದಾಗ, ಆಕೆ, “ಇದರಲ್ಲಿ ಕೊಂಕು ಮಾತೆಲ್ಲಿ? ನಿನ್ನ ಮನಸ್ಸಿನಲ್ಲಿನ ಗೌಪ್ಯನಡವಳಿಕೆಗೆ ನನ್ನ ಮಾತಷ್ಟೆ” ಎಂದಳು. ರಾವಣನಿಗೆ ಇನ್ನೂ ಸಂಶಯ ಬಗೆಹರಿಯಲಿಲ್ಲ. ಅವನು ಕೂಡಲೇ, “ಸೀತೆ ನನಗೆ ಒಲಿಯುತ್ತಾಳೆಯೇ? ರಾಮನನ್ನು ಗೆಲ್ಲುವುದು ಸತ್ಯವೇ?” ಎಂದು ಪ್ರಶ್ನಿಸಿದಾಗ, ಆಕೆ, “ಸೀತೆ ಆಲಿಂಗಿಸಿಕೊಳ್ಳುತ್ತಾಳೆ, ಚುಂಬಿಸಿ ಎದಿಗವಚಿಕೊಳ್ಳುತ್ತಾಳೆ. ಯುದ್ಧದಲ್ಲಿ ರಾಮನನ್ನು ಸೋಲಿಸುವೆ, ಪುನರ್ಜನ್ಮದಲ್ಲಿ, ಅಲ್ಲಿ ತೋರುವುದನ್ನು ನೋಡು” ಎಂದಳು.

            ಅಷ್ಟರಲ್ಲಿಯೇ ಅವಳ ದರ್ಶನವು ಮರೆಯಾಯಿತು. ದೇವಿ ಅದೃಶ್ಯಳಾದಳು. ಕಣ್ಣು ಮಿಟುಕಿಸದೆ ನೋಡುತ್ತಿದ್ದ ರಾವಣನ ದೃಷ್ಟಿಗೆ ಮುಂದೆ ಒಂದು ದೇವಾಲಯ ಮೆರೆಯತೊಡಗಿತು. ಆ ದೇವಾಲಯದ ಪ್ರಧಾನವಾದ ಪೀಠದಲ್ಲಿ ವಿಗ್ರಹವಿಲ್ಲ, ಒಂದು ದೊಡ್ಡದಾದ ಭಯಂಕರವಾದ ದೇಹವನ್ನು ಹೊಂದಿ, ತನ್ನ ಹಿಂಗಾಲುಗಳನ್ನು ಊರಿಕೊಂಡು, ಮುಂಗಾಲುಗಳನ್ನು ಮೇಲಕ್ಕೆತ್ತಿದ್ದು ಮಾತ್ರವಲ್ಲದೆ,  ಸೆಟೆದುಕೊಂಡಿರುವ ದೇಹದಿಂದ ನರ್ತಿಸುತ್ತ, ನೆಲವನ್ನು ಒದೆ ಒದೆಯುತ್ತ, ಕೆನೆದಾಗ ಉಂಟಾದ ಹೇಷಾರವಕ್ಕೆ ರಾವಣನ ಪ್ರಾಣ ಗದ್ಗದಿಸತೊಡಗಿತು. ಅವನು ಗಾಬರಿಗೊಂಡು ಇದೇನು? ಇದೇನು? ಎನ್ನುತ್ತಿರುವಾಗಲೇ ದೀರ್ಘವಾದ ಖಡ್ಗವನ್ನು ಹಿಡಿದು ಆಕಾಶದಲ್ಲಿ ಒಂದು ದೊಡ್ಡದಾದ ಮುಷ್ಟಿಯೊಂದು ಮೂಡಿತು. ಅದು ನೇರವಾಗಿ ಕುದುರೆಯ ಕೊರಳಿಗೆ ಇಳಿಯಿತು, ಕುದುರೆಯ ಕೊರಳನ್ನು ಕತ್ತರಿಸಿದಾಗ ಅದರ ತಲೆ ನೆಲಕ್ಕೆ ಉರುಳಿತು. ಖಡ್ಗವೇ ಇಲ್ಲದೆ ರಕ್ತವೆಲ್ಲ ಕಾರುತ್ತ ಪ್ರವಾಹವಾಗಿ ಹರಿಯತೊಡಗಿತು.    

 

                  ಓಡಿ ದಶಶಿರನೇರಿದನು ಬಳಿಯೆ

ಹೊಳೆದಡದೊಳಿರ್ದೊಂದು ದೋಣಿಯಂ.  ರುಂಡದಿಂ

ಬೇರ್ವರಿದು ದಿಂಡುರುಳ್ದಶ್ವಮುಂಡಂ ನೆಗೆದು,

ಕುಪ್ಪಳಿಸಿ, ಬೆದ್ದೆದ್ದು ಕುಣಿಕುಣಿದು, ಹಾರಾಡಿ,

ದೊಪ್ಪನಪ್ಪಳಿಸಿಳೆಗೆ ಚಿಮ್ಮಿ ಮುಂಬರಿದುದಾ

ಮಂಡೋದರಿಯ ಗಂಡರ್ನಿದೆಡೆಗೆ, ಬಿರುಬಿರನೆ    ೧೯೦

ತೇಲ್ದುದಸುರನ ನೌಕೆ, ನೆಗೆನೆಗೆದು ಮುಂದುರುಳಿ

ಧುಮ್ಮಿಕ್ಕಿದುದು ದುಢುಮ್ಮನೆ ಕುದುರೆಮುಂಡಂ

ನದೀ ಜೀವನಂ ನೆತ್ತರೋಕುಳಿಯಾಗಿ ಕೆರಳೆ.

ತೆರೆ ಮಸಗಿದುದು.ದೋಣಿ ಮಗುಚಿತು. ದಶಾನನಂ

ರಕ್ತಮಯ ಜೀವನ ತರಂಗಿಣಿಯ ವಾಹದೊಳ್

ಸಿಲ್ಕಿದನ್; ತೇಲ್ದನೀಜಿದನಯ್ಯೊ ಕಂತಿದನ್;

ಮುಳುಗಿದನ್, ಮುಳುಗಿದನ್, ಕೆಳಕೆಳಗೆ ಮುಳುಗಿದನ್.

ತೆಕ್ಕನೆಯೆ, ಕುಂಭಕರ್ಣನ ಕಂಡು, ಕೂಗಿದನ್

ತಮ್ಮನಂ. ಬರ್ದುಕುವಾಸೆಗೆ ಸಹೋದರರಿರ್ವರುಂ

ಹೊಳೆಯೊಡನೆ ಹೋರಾಡಿ ದಡಕೇರ್ದರೇನಿದೇನ್  ೨೦೦

ಶಿಶುಗಳೋಲ್! ಸುತ್ತಲೆಸೆದಿರ್ದುದೊಂದಾಶ್ರಮಂ.

ಚಿತ್ತಕಾದುದು ತಪಶ್ಯಾಂತಿ. ಮರೆತುದು ಮನಂ

ತನ್ನ ಪಿಂತಣ ಪೂರ್ವಮಂ.  ನೆನೆಯಲೆಳಸಿದನ್.

ಯತ್ನಮನಿತುಂ ವ್ಯರ್ಥಮಾದತ್ತು. ವಿಸ್ಮೃತಿಯ

ವೈರಣಿಗಳ್ದುದಾತ್ಮಂ. ಶಿಶು ಶರೀರದಿಂ

ಸಹೋದರಂ ಕುಂಭಕರ್ಣಂ ಪಸುಳೆಯೋಲಂತೆ

ರೋದಿಸುತ್ತಿರ್ದುದಂ ಕಂಡಾ ಶಿಶುಶರೀರಿ

ತಾನುಮಳತೊಡಗಿದನು ದೈತ್ಯೇಂದ್ರನಾಗಳೆಯೆ

ಪುಟ್ಟಿದರ್ಭಕನಂತೆವೋಲ್. ಬಂದಳಲ್ಲಿಗದೊ

ಸೀತೆ! ಮಕ್ಕಳನೆತ್ತಿ ಮುದ್ದಾಡಿದಳ್! ಪಾಡಿ         ೨೧೦

ಮೊಲೆಯೂಡಿದಳ್! ತೊಡೆಯನೇರಿಸಿದಳೆರ್ದೆಗಪ್ಪಿ

ಲಲ್ಲಯ್ಸಿದಳು ತನ್ನವಳಿಮಕ್ಕಳಂ, ತಮ್ಮನಂ

ಕುಂಭಕರ್ಣನನಂತೆ ತನ್ನನುಂ!

ಅನ್ವಯಕ್ರಮ:

ದಶಶಿರನ್ ಓಡಿ ಬಳಿಯೆ ಹೊಳೆದಡದೊಳ್ ಇರ್ದ ಒಂದು ದೋಣಿಯಂ ಏರಿದನು, ರುಂಡದಿಂ ಬೇರ್ ಪರಿದು ದಿಂಡುರುಳ್ದ ಅಶ್ವಮುಂಡಂ ನೆಗೆದು, ಕುಪ್ಪಳಿಸಿ, ಬಿದ್ದು ಎದ್ದು ಕುಣಿ ಕುಣಿದು, ಹಾರಾಡಿ, ದೊಪ್ಪನೆ ಇಳೆಗೆ ಅಪ್ಪಳಿಸೆ ಚಿಮ್ಮಿ ಮುಂ ಪರಿದುದು ಆ ಮಂಡೋದರಿಯ ಗಂಡನ್ ಇರ್ದ ಎಡೆಗೆ. ಬಿರುಬಿರನೆ ತೇಲ್ದುದು ಅಸುರನ ನೌಕೆ. ನೆಗೆನೆಗೆದು ಮುಂದೆ ಉರುಳಿ ಕುದುರೆ ಮುಂಡಂ  ನದೀ ಜೀವನಂ ನೆತ್ತರ ಓಕುಳಿಯಾಗಿ ಕೆರಳೆ  ದುಢುಮ್ಮನೆ ಧುಮ್ಮಿಕ್ಕಿದುದು, ತೆರೆ ಮಸಗಿದುದು. ದೋಣಿ ಮಗುಚಿತು. ದಶಾನನಂ ರಕ್ತಮಯ ಜೀವನ ತರಂಗಿಣಿಯ ವಾಹದೊಳ್ ಸಿಲ್ಕಿದನ್; ತೇಲ್ದನ್, ಈಜಿದನ್, ಅಯ್ಯೋ  ಕಂತಿದನ್ ಮುಳುಗಿದನ್ , ಮುಳುಗಿದನ್, ಕೆಳಕೆಳಗೆ ಮುಳುಗಿದನ್. ತೆಕ್ಕನೆಯೆ , ಕುಂಭಕರ್ಣನ ಕಂಡು, ಕೂಗಿದನ್ ತಮ್ಮನಂ. ಬರ್ದುಕುವ ಆಸೆಗೆ ಸಹೋದರರ್ ಇರ್ವರುಂ ಹೊಳೆಯೊಡನೆ ಹೋರಾಡಿ ದಡಕೆ ಏರ್ದರ್ ಏನ್ ಇದೇನ್ ಶಿಶುಗಳೋಲ್! ಸುತ್ತಲ್ ಎಸೆದುದು ಒಂದು ಆಶ್ರಮಂ. ಚಿತ್ತಕೆ ಆದುದು ತಪಶ್ಯಾಂತಿ.  ತನ್ನ ಪಿಂತಣ ಪೂರ್ವಮಂ ಮನಂ ಮರೆತುದು. ನೆನೆಯಲ್ ಎಳಸಿದನ್. ಯತ್ನಂ ಅನಿತುಂ ವ್ಯರ್ಥಂ ಆದತ್ತು. ವಿಸ್ಮೃತಿಯ ವೈತರಣಿಗೆ ಅಳ್ದುದು ಆತ್ಮಂ. ಶಿಶು ಶರೀರದಿಂ ಸಹೋದರಂ ಕುಂಭಕರ್ಣಂ  ಪಸುಳೆಯೋಲಂತೆ ರೋಧಿಸುತ ಇರ್ದುದಂ  ಕಂಡ ಆ ಶಿಶುಶರೀರಿ  ದೈತ್ಯೇಂದ್ರನ್ ಆಗಳೆಯೆ  ಪುಟ್ಟಿದ ಅರ್ಭಕನಂತೆವೋಲ್ ತಾನುಂ ಅಳತೊಡಗಿದನು. ಅದೋ ಸೀತೆ ಅಲ್ಲಿಗೆ ಬಂದಳ್! ಮಕ್ಕಳನ್ ಎತ್ತಿ ಮುದ್ದಾಡಿದಳ್! ಪಾಡಿ ಮೊಲೆಯೂಡಿದಳ್! ತೊಡೆಯನೇರಿಸಿ ಎರ್ದೆಗಪ್ಪಿ ತನ್ನ ಅಳಿಮಕ್ಕಳಂ,  ತಮ್ಮನಂ ಕುಂಭಕರ್ಣನಂ ಅಂತೆ ತನ್ನನುಂ ಲಲ್ಲಯಿಸಿದಳು! 

ಪದ-ಅರ್ಥ:

ದಶಶಿರನ್-ರಾವಣನು;  ಬೇರ್ವರಿದು-ಪ್ರತ್ಯೇಕವಾಗಿ, ಬೇರ್ಪಟ್ಟು;  ದಿಂಡುರುಳ್ದ-ಮರದ ಕಾಂಡದಂತೆ ನೆಲದ ಮೇಲೆ ಉರುಳಿದ;  ಅಶ್ವಮುಂಡ-ಕುದುರೆಯ ದೇಹ;  ನೆಗೆದು-ಹಾರಿ;  ಇಳೆ-ಭೂಮಿ; ಮುಂಬರಿ-ಮುಂದುವರಿ; ಮಂಡೋದರಿ-ರಾವಣನ ಹೆಂಡತಿ;  ಅಸುರ-ರಾಕ್ಷಸ(ರಾವಣ);  ನೌಕೆ-ದೋಣಿ;  ನದೀ ಜೀವನಂ-ನದಿಯೆಲ್ಲವೂ;  ನೆತ್ತರೋಕುಳಿ-ರಕ್ತದ ಪ್ರವಾಹ; ಕೆರಳೆ-ಕೆರಳಲು;  ತೆರೆ ಮಸಗಿದುದು-ತೆರೆ ರಭಸದಿಂದ ಸುತ್ತುವರಿಯಿತು;  ದಶಾನನಂ-ರಾವಣನು;  ರಕ್ತಮಯ ಜೀವನ ತರಂಗಿಣಿಯ-ರಕ್ತದ ತರಂಗಗಳಿಂದ ಕೂಡಿದ;  ವಾಹ-ಪ್ರವಾಹ;  ಸಿಲ್ಕಿದನ್-ಸಿಲುಕಿದನು;  ಕಂತಿದನ್-ಮುಳುಗಿದನು;  ತೆಕ್ಕನೆಯೆ-ತಕ್ಷಣವೆ;  ಬರ್ದುಕುವಾಸೆಗೆ-ಬದುಕುವ ಆಸೆಗೆ;  ದಡಕೇರ್ದರ್-ದಡಕ್ಕೆ ಏರಿದರು;  ಶಿಶುಗಳೋಲ್-ಮಕ್ಕಳ ಹಾಗೆ;  ಎಸೆದಿರ್ದುದು-ಶೋಭಿಸುತ್ತಿತ್ತು;  ಚಿತ್ತಕೆ-ಮನಸ್ಸಿಗೆ;  ಪಿಂತಣ-ಹಿಂದಿನ;  ನೆನೆಯಲೆಳಸಿದನ್-ನೆನಪಿಸಿಕೊಳ್ಳಲು ಬಯಸಿದನು; ವ್ಯರ್ಥಮಾದತ್ತು-ವ್ಯರ್ಥವಾಯಿತು;  ವಿಸ್ಮೃತಿಯ ವೈತರಣಿ-ಮರವೆ ಎಂಬ ನದಿ, ನೆನಪಿಲ್ಲದೆ ಇರುವಿಕೆ; (ವೈತರಣಿ ಎಂಬುದು ನರಕದ ಬಳಿ ಇರುವುದೆನ್ನಲಾಗುವ ಒಂದು ನದಿ),  ಅಳ್ದುದಾತ್ಮಂ(ಅಳ್ದುದು+ಆತ್ಮಂ)- ಆತ್ಮವು ಅದ್ದಿದಂತಾಯಿತು;  ಶಿಶುಶರೀರದಿಂ-ಮಕ್ಕಳ ದೇಹದೊಂದಿಗೆ; ಪಸುಳೆಯೋಲಂತೆ-ಹಸುಳೆಯ ಹಾಗೆ;  ಶಿಶುಶರೀರಿ-ಮಗುವಿನ ಶರೀರವನ್ನು ಹೊಂದಿದವನು;  ದೈತ್ಯೇಂದ್ರ-ರಾಕ್ಷಸರ ರಾಜ (ರಾವಣ);  ಆಗಳೆಯೆ-ಆ ಕೂಡಲೆ;  ಪುಟ್ಟಿದರ್ಭಕನಂತೆವೋಲ್-ಹುಟ್ಟಿದ ಹಸುಳೆಯ ಹಾಗೆ;  ಲಲ್ಲಯಿಸು-ಲಲ್ಲೆಗರೆ, ಮುದ್ದಾಡು; ಅಳಿಮಕ್ಕಳಂ-ಸಾವಿನಂಚಿನಲ್ಲಿರುವ ಮಕ್ಕಳನ್ನು.

            ಹರಿದ ರಕ್ತದ ಪ್ರವಾಹವನ್ನು ಕಂಡು ರಾವಣನು ಓಡಿಹೋಗಿ ಅಲ್ಲಿಯೇ ಸಮೀಪದ ಹೊಳೆದಡದಲ್ಲಿದ್ದ ಒಂದು ದೋಣಿಯನ್ನು ಏರಿದನು. ರುಂಡದಿಂದ ಬೇರ್ಪಟ್ಟ ಕುದುರೆಯ ದೇಹವು ಮರದ ಕಾಂಡದಂತೆ ನೆಲದ ಮೇಲೆ ಉರುಳುತ್ತ ನೆಗೆದು ಕುಪ್ಪಳಿಸಿ, ಬಿದ್ದು, ಎದ್ದು, ಕುಣಿಕುಣಿದು, ಹಾರಾಡಿ, ಭೂಮಿಗೆ ಧೊಪ್ಪನೆ ಅಪ್ಪಳಿಸಿ ಮುಂದುವರಿಯುತ್ತ ಮಂಡೋದರಿಯ ಗಂಡನಾದ ರಾವಣನಿದ್ದ ದೋಣಿಯ ಸಮೀಪಕ್ಕೆ ರಭಸವಾಗಿ ಆಗಮಿಸಿತು. ಅದು ಹರಿದುಕೊಂಡು ಬಂದ ರಭಸಕ್ಕೆ ರಾವಣನು ಏರಿದ್ದ ದೋಣಿಯು ಕಂಗಾಲಾಗುವಂತೆ ತೇಲಾಡಿತು. ಕುದುರೆಯ ದೇಹವು ನೆಗೆನೆಗೆಯುತ್ತ ಮುಂದೆ ಮುಂದೆ ಉರುಳುತ್ತ ಒಮ್ಮೆಗೆ ನದಿಯ ನೀರಿಗೆ ದುಢುಮ್ಮನೆ ಧುಮುಕಿತು. ಕುದುರೆಯ ದೇಹದಿಂದ ಒಸರುತ್ತಿರುವ ರಕ್ತದಿಂದಾಗಿ ನದಿಯ ನೀರೆಲ್ಲವೂ ರಕ್ತದ ಓಕುಳಿಯಾಗಿ ಕೆರಳಿದಂತಾಯಿತು. ಅದರ ರಭಸಕ್ಕೆ ನದಿಯಲ್ಲಿ ತೆರೆಗಳು ರಭಸದಿಂದ ಸುತ್ತುವರಿದವು. ತೆರೆಗಳ ರಭಸಕ್ಕೆ ದೋಣಿ ಮಗುಚಿತು. ರಾವಣನು ರಕ್ತಮಯವಾದ ನದಿಯ ನೀರಿನ ಪ್ರವಾಹದೊಳಗೆ ಸಿಲುಕಿದನು. ತೇಲಿದನು, ಈಜಿದನು, ಕಂತಿದನು, ಮುಳುಗಿದನು, ಆಳ ಆಳಕ್ಕೆ ಮುಳುಗತೊಡಗಿದನು.

            ಇವೆಲ್ಲವೂ ರಾವಣನ ಪಾಲಿಗೆ ಅನಿರೀಕ್ಷಿತವಾಯಿತು. ತಕ್ಷಣವೇ ತನ್ನ ತಮ್ಮನಾದ ಕುಂಭಕರ್ಣನನ್ನು ಕಂಡು ಅವನನ್ನು ಕೂಗಿದನು. ಬದುಕುವ ಆಸೆಯಿಂದ ಸಹೋದರರಾದ ರಾವಣ ಕುಂಭಕರ್ಣರಿಬ್ಬರೂ ಹೊಳೆಯೊಂದಿಗೆ ಹೋರಾಡಿ ನದಿಯ ದಡವನ್ನು ಸೇರಿದರು.  ಆದರೆ ಹಾಗೆ ನದಿಯಿಂದ ದಡಕ್ಕೆ ತಲುಪುವಷ್ಟರಲ್ಲಿಯೇ ಅವರ ಬೆಳೆದ ದೇಹಗಳು ಮಾಯವಾಗಿ ಹಸುಳೆಗಳ ದೇಹವನ್ನು ಹೊಂದಿದ್ದರು. ಸುತ್ತಲೂ ನೋಡಿದಾಗ ಅಲ್ಲೊಂದು ಆಶ್ರಮವು ಗೋಚರಿಸಿತು. ಅದನ್ನು ನೋಡಿದೊಡನೆಯೇ ಅವರಿಬ್ಬರ ಮನಸ್ಸಿಗೂ ತಪಸ್ಸಿನಿಂದ ಒದಗಬಹುದಾದ ಶಾಂತಿ ಲಭಿಸಿತು. ಆದರೆ ಅವರ ಮನಸ್ಸುಗಳು ತಮ್ಮ ಹಿಂದಿನ ನೆನಪುಗಳನ್ನು ಮರೆತುಬಿಟ್ಟಿದ್ದವು. ಅವುಗಳನ್ನು ನೆನಪಿಸಿಕೊಳ್ಳುವುದಕ್ಕೆ ರಾವಣನು ತುಂಬಾ ಪ್ರಯತ್ನಿಸಿದನು. ಆದರೆ ಅವನ ಪ್ರಯತ್ನವೆಲ್ಲವೂ ವ್ಯರ್ಥವಾಯಿತು. ಅವರ ಆತ್ಮವು ಮರವೆ ಎಂಬ ವೈತರಣಿಯಲ್ಲಿ ಅದ್ದಿದಂತಾಯಿತು. ಹಸುಳೆಯ ದೇಹವನ್ನು ಹೊಂದಿದ ಕುಂಭಕರ್ಣನು ಹಸುಳೆಯಂತೆ ಅಳುತ್ತಿರುವುದನ್ನು ನೋಡಿ ಹಸುಳೆಯ ದೇಹವನ್ನು ಹೊಂದಿದ್ದ ರಾವಣನೂ ಆಗ ತಾನೆ ಹುಟ್ಟಿದ ಹಸುಳೆಯ ಹಾಗೆ ತಾನೂ ಅಳತೊಡಗಿದನು. ಅಷ್ಟರಲ್ಲಿ ಸೀತೆ ಅಲ್ಲಿಗೆ ಬಂದಳು! ತನ್ನ ಮಕ್ಕಳನ್ನು ಎತ್ತಿಕೊಂಡು ಮುದ್ದಾಡಿದಳು! ಹಾಡಿ ಸಮಾಧಾನಿಸಿ ಮೊಲೆಯೂಡಿದಳು! ಸಾವಿನ ಅಂಚಿನಲ್ಲಿರುವ ಮಕ್ಕಳನ್ನು ತನ್ನ ತೊಡೆಯ ಮೇಲಿರಿಸಿಕೊಂಡು ತಮ್ಮನಾದ ಕುಂಭಕರ್ಣನನ್ನು ಮಾತ್ರವಲ್ಲದೆ, ರಾವನನನ್ನೂ ಎದೆಗವಚಿ ಮುದ್ದಾಡಿದಳು!

  (ಭಾಗ – ೩ರಲ್ಲಿ ಮುಂದುವರಿದಿದೆ)

Leave a Reply

Your email address will not be published. Required fields are marked *