ಹರಿವ ಹಾವಿಗಂಜೆ, ಉರಿಯ ನಾಲಗೆಗಂಜೆ,
ಸುರಗಿಯ ಮೊನೆಗಂಜೆ!
ಒಂದಕ್ಕಂಜುವೆ, ಒಂದಕ್ಕಳುಕುವೆ,
ಪರಸ್ತ್ರೀ ಪರಧನವೆಂಬ ಜೂಬಿಂಗಂಜುವೆ!
ಮುನ್ನಂಜದ ರಾವಣನೇವಿಧಿಯಾದ!
ಅಂಜುವೆನಯ್ಯಾ ಕೂಡಲಸಂಗಮದೇವಾ!
-ಬಸವಣ್ಣ
ಪರಸ್ತ್ರೀಸಂಗ, ಪರಧನ ಅಪೇಕ್ಷೆಗಳು ಭಾರತೀಯ ಸಮಾಜವನ್ನು ಪ್ರಾಚೀನಕಾಲದಿಂದಲೂ ಕಾಡುತ್ತಿರುವ ಎರಡು ಘೋರಪಿಡುಗುಗಳು. ಬಸವಣ್ಣನವರು ಈ ವಚನದಲ್ಲಿ ಮೂರು ಉದಾಹರಣೆಗಳ ಮೂಲಕ ಅವುಗಳನ್ನು ಹಾಗೂ ಅವುಗಳಿಂದ ಉಂಟಾಗುವ ದುಷ್ಪರಿಣಾಮಗಳನ್ನು ಸ್ಪಷ್ಟಪಡಿಸಿದ್ದಾರೆ.
ಎಲ್ಲೆಂದರಲ್ಲಿ ಹರಿದಾಡುವ ಹಾವು ಮನುಷ್ಯನಿಗೆ ಅಪಾಯಕಾರಿಯಾದರೂ ಅಂಜದೆ ಅದರಿಂದ ತಪ್ಪಿಸಿಕೊಳ್ಳಬಹುದು. ಅಕಸ್ಮಾತ್ ಅದು ಕಡಿದರೂ ಸೂಕ್ತಚಿಕಿತ್ಸೆ ಮಾಡಿ ಪ್ರಾಣಾಪಾಯದಿಂದ ಪಾರಾಗಬಹುದು. ಹಾಗೆಯೇ ಉರಿ(ಬೆಂಕಿ)ಯ ನಾಲಗೆ(ಜ್ವಾಲೆ)ಗಳು ನಮ್ಮ ಅಂಗಾಂಗಗಳನ್ನು, ಮನೆಮಠಗಳನ್ನು ಸುಡಬಹುದಾದರೂ ಅಂಜದೆ ಅದನ್ನೂ ನಿಭಾಯಿಸಬಹುದು. ಉರಿಯಿಂದ ಮೈಸುಟ್ಟರೂ ಸೂಕ್ತ ಚಿಕಿತ್ಸೆಮಾಡಿ ಗುಣಪಡಿಸಿಕೊಳ್ಳಬಹುದು. ಹಾಗೆಯೇ ಆತ್ಮರಕ್ಷಣೆಗಿರುವ ಸುರಗಿ(ಕಿರಿದಾದ ಚಾಕು)ಯ ಚೂಪಾದ ತುದಿ ಅಕಸ್ಮಾತ್ ತಾಗಿ ಗಾಯವಾದರೂ ಅಂಜದೆ ಸೂಕ್ತಚಿಕಿತ್ಸೆಯಿಂದ ಅದನ್ನು ಗುಣಪಡಿಸಿಕೊಳ್ಳಬಹುದು.
ಇವೆಲ್ಲವುಗಳಿಗಿಂತಲೂ ಅತ್ಯಂತ ಅಪಾಯಕಾರಿಯಾದವುಗಳೆಂದರೆ ಪರಸ್ತ್ರೀ ಹಾಗೂ ಪರಧನಾಪೇಕ್ಷೆಗಳು. ಬಸವಣ್ಣವವರು ಇವೆರಡನ್ನೂ ಜೂಬಿಗೆ ಹೋಲಿಸಿದ್ದಾರೆ. ಜೂಬು ಎಂದರೆ ದೆವ್ವ ಎಂದರ್ಥ. ದೆವ್ವ, ಭೂತ, ಪ್ರೇತ, ಪಿಶಾಚಿಗಳು ಮನುಷ್ಯನನ್ನು ಒಮ್ಮೆ ಹಿಡಿದುಕೊಂಡರೆ ನಿರಂತರ ಕಾಡುತ್ತಿರುತ್ತವೆ ಎಂಬುದು ಪರಂಪರೆಯಿಂದ ಬಂದ ನಂಬಿಕೆ. ಪರಸ್ತ್ರೀಸಂಗವೂ ಒಂದು ಜೂಬು. ಒಮ್ಮೆ ಅದರ ಸಹವಾಸ ಪ್ರಾರಂಭವಾಯಿತೆಂದರೆ ಮುಂದೆ ಅದೊಂದು ವ್ಯಸವವೆಂಬ ಜೂಬಾಗಿ ಸದಾ ಕಾಡುತ್ತಿರುತ್ತದೆ. ಪರಸ್ತ್ರೀ ಸಂಗವೆಂಬುದು ಇನ್ನೊಂದರ್ಥದಲ್ಲಿ ಪರಪುರುಷಸಂಗವೂ ಹೌದು. ಪರಸ್ತ್ರೀಸಂಗಕ್ಕೆ ಹಾತೊರೆದು ರಾವಣನೇ ಎಂತಹ ಸಾವನ್ನು ತಂದುಕೊಂಡನೆಂಬುದನ್ನು ಉಲ್ಲೇಖಿಸುವ ಮೂಲಕ ಬಸವಣ್ಣನವರು ಇದು ಸಾಮಾಜಿಕವಾಗಿ ಎಷ್ಟು ಘೋರವಾದುದು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಪರಧನವೂ ಒಂದು ಜೂಬು. ಅದನ್ನು ಅಪೇಕ್ಷಿಸುವುದು, ಅದನ್ನು ಕೊಳ್ಳೆಹೊಡೆಯುವುದು ಇವೆಲ್ಲವೂ ಇತರರನ್ನು ನಿರ್ಗತಿಕರನ್ನಾಗಿ ಹಾಗೂ ಸಮಾಜವ್ಯವಸ್ಥೆಯನ್ನು ಕುಸಿಯುವಂತೆ ಮಾಡುವ ದಂಧೆಗಳು. ಕಳ್ಳತನ, ದರೋಡೆಗಳೆಲ್ಲವೂ ಇದರ ಬೇರೆಬೇರೆ ರೂಪಗಳು. ಒಮ್ಮೆ ಇವುಗಳ ರುಚಿಹಿಡಿಯಿತೆಂದರೆ ಅದರಿಂದ ಹೊರಬರುವುದು ತುಂಬಾ ಕಷ್ಟ. ನಾವು ಕಾಯಕದ ಮೂಲಕ ಸಂಪಾದಿಸುವ ಧನಕ್ಕೆ ಮಾತ್ರ ನಾವು ಅಧಿಕಾರಸ್ಥರೇ ವಿನಾ ಕಳ್ಳತನ, ಮೋಸ-ವಂಚನೆಗಳ ಮೂಲಕ ಅನಾಯಾಸವಾಗಿ, ಅನೈತಿಕವಾಗಿ ಸಂಪಾದಿಸುವ ಧನಕ್ಕಲ್ಲ.
ಹನ್ನೆರಡನೆಯ ಶತಮಾನದ ಕಾಲದಲ್ಲೇ ಪರಸ್ತ್ರೀಸಂಗ ಹಾಗೂ ಪರಧನ ಅಪೇಕ್ಷೆಗಳು ದೊಡ್ಡ ಪಿಡುಗುಗಳಾಗಿ ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗಿದ್ದವೆಂದು ತೋರುತ್ತದೆ. ಅದಕ್ಕಾಗಿಯೇ ಬಸವಣ್ಣನವರು ಅವುಗಳನ್ನು ಜೂಬಿಗೆ ಹೋಲಿಸಿ, ಅವುಗಳ ಪರಿಣಾಮದ ಕಠೋರತೆಯನ್ನು ಅರ್ಥೈಸುವುದಕ್ಕೆ ಪ್ರಯತ್ನಿಸಿದ್ದಾರೆ. ಇಂದಿನ ಆಧುನಿಕಯುಗದಲ್ಲಿ ಶಿಕ್ಷಣವ್ಯವಸ್ಥೆ, ಆರ್ಥಿಕವ್ಯವಸ್ಥೆ, ಮೂಲಭೂತಸೌಕರ್ಯಗಳ ವ್ಯವಸ್ಥೆ ಸಾಕಷ್ಟಿದ್ದರೂ ಒಳಿತು-ಕೆಡುಕುಗಳ ಪರಿಜ್ಞಾನವಿದ್ದರೂ ಪರಸ್ತ್ರೀಸಂಗ ಹಾಗೂ ಪರಧನಾಪೇಕ್ಷೆಗಳೆಂಬ ಜೂಬುಗಳಿಂದಾಗಿ ಸಾಮಾಜಿಕ ನೆಮ್ಮದಿ ಅಳಿದುಹೋಗುತ್ತಿದೆ. ಇವೆರಡೂ ಏಕಕಾಲದಲ್ಲಿ ಹಲವಾರು ಕುಟುಂಬಗಳ ನೆಮ್ಮದಿಯನ್ನು ಕಳೆಯುತ್ತಿವೆ. ಇದರಿಂದುಂಟಾಗುವ ಘೋರ ಪರಿಣಾಮಗಳು ಕಣ್ಣಮುಂದಿದ್ದರೂ ಅವುಗಳ ಪರಿಶೀಲನೆ, ಪರಾಮರ್ಶೆಗಳು ನಡೆಯುತ್ತಿಲ್ಲ.
ಆಧುನಿಕಕಾಲದಲ್ಲಂತೂ ಬಹುಮಂದಿಗೆ ಪರಸ್ತ್ರೀಸಂಗ/ಪರಪುರುಷಸಂಗ ಎಂಬುದು ಒಂದು ಪ್ರತಿಷ್ಠೆಯ, ಗೌರವದ, ಹೆಮ್ಮೆಯ ಸಂಗತಿಯಾಗಿದೆ. ಇದರಿಂದಾಗಿ ಭಾರತೀಯ ಪರಂಪರೆಯ ಕುಟುಂಬವ್ಯವಸ್ಥೆ, ಸಮಾಜವ್ಯವಸ್ಥೆಗಳು ಕುಸಿಯುತ್ತಿವೆ. ದಾಂಪತ್ಯಸಂಬಂಧಗಳು ಅಳಿದುಹೋಗುತ್ತಿವೆ. ಮಕ್ಕಳು ಬೀದಿಪಾಲಾಗುತ್ತಿದ್ದಾರೆ. ಆದರೆ ಇದಕ್ಕೆ ಕಾರಣರಾದವರು ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸ. ಇನ್ನೊಂದೆಡೆ ಪರಧನವನ್ನು ಲಪಟಾಯಿಸುವುದಕ್ಕೆ ಹತ್ತು ಹಲವು ಮಾರ್ಗಗಳನ್ನು ಕಂಡುಕೊಂಡು ಸಿಕ್ಕಸಿಕ್ಕವರನ್ನು ದೋಚುತ್ತಿದ್ದಾರೆ. ಒಟ್ಟಾರೆಯಾಗಿ ದೇಶದ ಆರ್ಥಿಕವ್ಯವಸ್ಥೆಯೇ ಬುಡಮೇಲಾಗುತ್ತಿರುವುದು ಸತ್ಯ. ಬಸವಣ್ಣನವರು ಉಲ್ಲೇಖಿಸಿರುವ ಪರಸ್ತ್ರೀ, ಪರಧನವೆಂಬ ಜೂಬುಗಳು ಇಂದಿಗೂ ಹೇಗೆ ಸಮಾಜವನ್ನು, ದೇಶವನ್ನು ಕಾಡುತ್ತಿವೆ ಎಂಬುದನ್ನು ಪರಿಭಾವಿಸಿದರೆ ಬಸವಣ್ಣನವರ ಮಾತುಗಳ ಸಾರ್ವಕಾಲಿಕತೆ ಏನು ಎಂಬುದು ಅರಿವಾಗುತ್ತದೆ.
***