ಸಾಹಿತ್ಯಾನುಸಂಧಾನ

heading1

ಕಳಬೇಡ, ಕೊಲಬೇಡ

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗಶುದ್ಧಿ ,ಇದೇ ಬಹಿರಂಗಶುದ್ಧಿ,
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ
                                                                        -ಬಸವಣ್ಣ

                ಬಸವಣ್ಣನವರ ಪ್ರಸಿದ್ಧ ಆತ್ಮವಿಮರ್ಶೆ ಮತ್ತು ಸಮಾಜವಿಮರ್ಶೆಯ ವಚನಗಳಲ್ಲಿ ಇದೂ ಒಂದು. ಮೇಲುನೋಟಕ್ಕೆ ಇದು ತುಂಬಾ ಸರಳವಾದ ವಚನದಂತೆ ಕಂಡರೂ ಆಳಕ್ಕಿಳಿದಂತೆ ಅತ್ಯಂತ ಗಹನವಾಗಿ ಕಾಣುತ್ತದೆ. ಮನುಷ್ಯನಾಗಿ ಯಾವ ಅಪಮೌಲ್ಯಗಳನ್ನೂ ಹೊಂದದೆ ಬದುಕಿನಲ್ಲಿ ತ್ರಿಕರಣಶುದ್ಧಿಯನ್ನು ಹೇಗೆ ಸಾಧಿಸಿಕೊಳ್ಳಬೇಕು ಎಂಬುದನ್ನು ವಿವರಿಸಿದ್ದಾರೆ.

                ಕಳವು ಸಾಮಾಜಿಕ ಅಪರಾಧಗಳಲ್ಲಿ ಒಂದು. ಹಾಗಾಗಿ ಇದೊಂದು ಅಪಮೌಲ್ಯ. ಇನ್ನೊಬ್ಬರಿಗೆ ಸಂಬಂಧಿಸಿದ ವಸ್ತುಗಳನ್ನು ಅವರ ಅರಿವಿಗೆ ಬಾರದಂತೆ ಲಪಟಾಯಿಸುವುದೇ ಕಳವು. ಹಾಗೆ ಲಪಟಾಯಿಸಿದವನು ‘ಕಳ್ಳ’ನೆನಿಸಿಕೊಳ್ಳುತ್ತಾನೆ. ಅನ್ಯರ ಸಂಪಾದನೆಯನ್ನು ಲಪಟಾಯಿಸುವುದಕ್ಕೆ ಅಥವಾ ಕೊಳ್ಳೆಹೊಡೆಯುವುದಕ್ಕೆ ಯಾರಿಗೂ ಹಕ್ಕಿಲ್ಲ. ಕಳ್ಳತನದಲ್ಲಿ ಸಿಕ್ಕಿಹಾಕಿಕೊಂಡು ಶಿಕ್ಷೆಯಾದರೂ ಆತನ ಮನಃಸ್ಥಿತಿಯಲ್ಲಿ ಬಹಳ ಬದಲಾವಣೆಗಳೇನೂ ಆಗದು. ಆತನಿಗೆ ಸಂಬಂಧಿಸಿದವರು (ತಂದೆ, ತಾಯಿ, ಹೆಂಡತಿ, ಮಕ್ಕಳು) ಕೂಡಾ  ಪರೋಕ್ಷವಾಗಿ ಅಪರಾಧಿಗಳೆನಿಸಿಕೊಳ್ಳುತ್ತಾರೆ. ಕಳ್ಳನ ಅಪ್ಪ, ಕಳ್ಳನ ಅಮ್ಮ, ಕಳ್ಳನ ಹೆಂಡತಿ, ಕಳ್ಳನ ಮಕ್ಕಳು-ಹೀಗೆ ಸಾಮಾಜಿಕವಾಗಿ ಗುರುತಿಸಿಕೊಳ್ಳುವ ಪ್ರಸಂಗ ಒದಗುತ್ತದೆ. ಒಬ್ಬನಿಂದ ಇಡೀ ಕುಟುಂಬದ ನೆಮ್ಮದಿಯೇ ಅಳಿದುಹೋಗುತ್ತದೆ. ಇನ್ನೊಂದೆಡೆ ಕಳ್ಳನಿಂದಾಗಿ ತಾವು ಕಷ್ಟಪಟ್ಟು ಸಂಪಾದಿಸಿದ ಹಣ, ಒಡವೆ ಮೊದಲಾದ ವಸ್ತುಗಳನ್ನು ಕಳೆದುಕೊಂಡವರು ತಮ್ಮ ಮಾನಸಿಕ ನೆಮ್ಮದಿಯನ್ನೂ ಕಳೆದುಕೊಳ್ಳುತ್ತಾರೆ. ಒಬ್ಬನ ಅಕೃತ್ಯ ಎರಡು ಕುಟುಂಬಗಳ ನೆಮ್ಮದಿಯನ್ನು ಕಳೆಯುತ್ತದೆ. ಊರವರೂ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. ಅದಕ್ಕೇ ಬಸವಣ್ಣನವರು ಹೇಳಿರುವುದು ’ಕಳಬೇಡ’ ಎಂದು.

                ಕೊಲೆಯೂ ಸಾಮಾಜಿಕ ಅಪರಾಧಗಳಲ್ಲಿ ಒಂದು. ಹಾಗಾಗಿ ಇದೂ ಒಂದು ಅಪಮೌಲ್ಯ. ತನಗಾಗದ, ತನ್ನ ವೈರಿಯ, ತನ್ನ ಪ್ರತಿಸ್ಪರ್ಧಿಯ ಜೀವತೆಗೆಯುವುದೇ ಕೊಲೆ. ಹೀಗೆ ಕೊಲೆಮಾಡಿದವನು ‘ಕೊಲೆಗಾರ’ ಅಥವಾ ‘ಕೊಲೆಗಡುಕ’ ಎನಿಸಿಕೊಳ್ಳುತ್ತಾನೆ. ಒಬ್ಬನಿಗೆ ಜೀವಕೊಡುವ ಹಕ್ಕು ಹೇಗೆ ಇಲ್ಲವೋ ಹಾಗೆಯೇ ಜೀವತೆಗೆಯುವ ಹಕ್ಕೂ ಇರುವುದಿಲ್ಲ. ಒಮ್ಮೆ ಕೊಲೆಯ ಪಿಪಾಸೆ ಹಿಡಿಯಿತೆಂದರೆ ಅದು ಸುಲಭದಲ್ಲಿ ಬಿಟ್ಟುಹೋಗದು. ಕೊಲೆಗಾರ ಸಿಕ್ಕಿಹಾಕಿಕೊಂಡು ಅಪರಾಧ ಸಾಬೀತಾಗಿ ಜೈಲುಶಿಕ್ಷೆಯಾದರೂ ಆತ ಬದಲಾಗುತ್ತಾನೆ ಎಂಬ ಭರವಸೆಯಿಲ್ಲ. ಇಲ್ಲಿಯೂ ಕೊಲೆಗಾರನಿಂದಾಗಿ ಆತನ ಮನೆಮಂದಿ(ತಂದೆ, ತಾಯಿ, ಹೆಂಡತಿ, ಮಕ್ಕಳು) ಕೂಡಾ ತಾವು ಮಾಡದ ಅಪರಾಧಕ್ಕಾಗಿ ಪರೋಕ್ಷವಾಗಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ಕೊಲೆಗಾರನ ಅಪ್ಪ, ಕೊಲೆಗಾರನ ಅಮ್ಮ, ಕೊಲೆಗಾರನ ಹೆಂಡತಿ, ಕೊಲೆಗಾರನ ಮಕ್ಕಳು-ಹೀಗೆ ಸಮಾಜದಲ್ಲಿ ಗುರುತಿಸಿಕೊಂಡು ಪ್ರತಿನಿತ್ಯ ಹಿಂಸೆ ಅನುಭವಿಸಬೇಕಾಗುತ್ತದೆ. ಕೊಲೆಗಾರನಿಂದಾಗಿ ತಮ್ಮವರನ್ನು ಕಳೆದುಕೊಂಡವರು ಕೂಡಾ ನೆಮ್ಮದಿಯನ್ನು, ಸಂಸಾರದ ಆಧಾರವನ್ನು  ಕಳೆದುಕೊಳ್ಳುತ್ತಾರೆ. ಕೊಲೆಯೂ ಎರಡು ಕುಟುಂಬಗಳ ನೆಮ್ಮದಿಯನ್ನು ಕಳೆಯುತ್ತದೆ. ಬಸವಣ್ಣನವರು ಕೊಲಬೇಡ ಎಂದಿರುವುದೂ ಇದೇ ಕಾರಣಕ್ಕಾಗಿ.

                ಹುಸಿ ನುಡಿಯುವುದೂ ಒಂದು ಸಾಮಾಜಿಕ ಅಪರಾಧ. ಭಾರತೀಯ ಪರಂಪರೆಯಲ್ಲಿ ಇದನ್ನೂ ಅಪಮೌಲ್ಯವೆಂದೇ ಪರಿಗಣಿಸಲಾಗಿದೆ. ಸ್ವಾರ್ಥಕ್ಕಾಗಿ, ತನ್ನ ಲಾಭಕ್ಕಾಗಿ, ಯಾರನ್ನೋ ಮೆಚ್ಚಿಸಲು, ಯಾರನ್ನೋ ವಂಚಿಸಲು ಮನುಷ್ಯ ಸುಳ್ಳಾಡುವುದನ್ನು ಅಭ್ಯಾಸಮಾಡಿಕೊಳ್ಳುತ್ತಾನೆ. ಹುಸಿನುಡಿಯುವವನು  ಸಾಮಾಜಿಕವಾಗಿ ‘ಸುಳ್ಳ’ ಎನಿಸಿಕೊಳ್ಳುತ್ತಾನೆ. ಒಂದು ಸುಳ್ಳನ್ನು ಸಾಬೀತುಪಡಿಸಲು ಹತ್ತು ಸುಳ್ಳುಗಳನ್ನು ಹೇಳಬೇಕಾಗುವುದರಿಂದ ಸುಳ್ಳಿನ ಪರಂಪರೆಯೇ ಬೆಳೆಯುತ್ತದೆ. ಒಂದು ಸುಳ್ಳು ತನ್ನನ್ನೇ ನಾಶಮಾಡಬಲ್ಲುದು ಅಥವಾ ಒಂದು ಕುಟುಂಬದ ನೆಮ್ಮದಿಯನ್ನೇ ಕಳೆಯಬಲ್ಲುದು. ಸಾವು-ನೋವು ಸಂಭವಿಸಬಲ್ಲುದು. ಈ ಸಂದರ್ಭದಲ್ಲಿಯೂ ಸುಳ್ಳನ ಕುಟುಂಬಿಕರು ಸಾಮಾಜಿಕವಾಗಿ ತಾವು ಮಾಡದ ಕೃತ್ಯಗಳಿಗೆ ಅಪರಾಧಿಗಳೆನಿಸಿಕೊಂಡು ಹಿಂಸೆ ಅನುಭವಿಸುತ್ತಾರೆ.  ಇನ್ನೆಷ್ಟೋ ಮಂದಿ ಸುಳ್ಳರಿಂದ ಮಾನಸಿಕ ಕಿರಿಕಿರಿಯನ್ನು, ತೊಂದರೆಗಳನ್ನು ಅನುಭವಿಸುತ್ತಾರೆ.

                ಮುನಿಯುವುದೂ ಒಂದು ಸಾಮಾಜಿಕ ಅಪರಾಧ. ಒಂದು ಅಪಮೌಲ್ಯ. ಸದಾ ಮುನಿಯುವವನನ್ನು ‘ಕೋಪಿಷ್ಠ’ಎಂದು   ಸಮಾಜ ಗುರುತಿಸುತ್ತದೆ. ಮನುಷ್ಯದೇಹ  ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳಿಗೆ  ಆಗರವಾದರೂ ಇವುಗಳನ್ನು ಪ್ರತಿಯೊಬ್ಬನೂ ಹತೋಟಿಯಲ್ಲಿಟ್ಟುಕೊಳ್ಳಬೇಕಾಗುತ್ತದೆ. ಕ್ಷಣಕ್ಷಣಕ್ಕೂ ಮುನಿಯುವವನನ್ನು ‘ಮುಂಗೋಪಿ’ ಎಂದು ಗುರುತಿಸಲಾಗುತ್ತದೆ.  ಮುನಿಸು ಅತ್ಯಂತ ಅಪಾಯಕಾರಿ. ಅದು ಮಾನಸಿಕ ನೆಮ್ಮದಿಯನ್ನು ಕೆಡಿಸಿ, ದೇಹದ ಸಮತೋಲನವನ್ನು ತಪ್ಪಿಸಿ ಕೆಲವುಸಂದರ್ಭಗಳಲ್ಲಿ ಕೊಲೆಯಂತಹ  ಅಕೃತ್ಯಗಳನ್ನು ಮಾಡಿಸುತ್ತದೆ. ಇದರಿಂದ ಮನೆಮಂದಿಯ ನೆಮ್ಮದಿಯೂ ಹಾಳಾಗುತ್ತದೆ. ಕಳ್ಳತನ, ಕೊಲೆಗಳ ಹಾಗೆಯೇ ಕೋಪವೂ ಸಮಾಜದ ಆರೋಗ್ಯವನ್ನು ಕೆಡಿಸುತ್ತದೆ.

                ಅನ್ಯರಿಗೆ ಅಸಹ್ಯಪಡುವುದು ಒಂದು ಸಾಮಾಜಿಕ ಅಪರಾಧ. ಈ ಲೋಕದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ, ಇತರರನ್ನು ಬದುಕಗೊಡುವ ಹಕ್ಕೂ ಇದೆ. ಆದರೆ ಎಷ್ಟೋ ಮಂದಿ ತಾವು ಅಸಹ್ಯವಾಗಿದ್ದು ಉಳಿದವರನ್ನು ಅಸಹ್ಯಗೊಳ್ಳುವಂತೆ ಮಾಡುತ್ತಾರೆ. ಮನುಷ್ಯ ಮಾತಿನಿಂದ, ವರ್ತನೆಯಿಂದ, ಬಟ್ಟೆಬರೆಗಳಿಂದ, ತಿಂದುಣ್ಣುವ ರೀತಿಗಳಿಂದ, ದುರಭ್ಯಾಸಗಳಿಂದ-ಹಲವು ರೀತಿಗಳಿಂದ ಇತರರಿಗೆ ಅಸಹ್ಯಪಡುತ್ತಾನೆ. ಅನ್ಯರಿಂದ ತನಗೆ ತೊಂದರೆಯಾಗಬಾರದು ಎಂದು ಮನುಷ್ಯ ಭಾವಿಸುವುದಾದರೆ ಆತ ಇತರರಿಗೆ ಯಾವುದೇ ರೀತಿಯಲ್ಲಿ ತೊಂದರೆಯನ್ನು ಕೊಡಬಾರದು.  ಮನುಷ್ಯ ಸಂಘಜೀವಿಯಾದುದರಿಂದ ಪರಸ್ಪರ ಸಹನೆ ಸಹಕಾರಗಳು ಬಹಳ ಮುಖ್ಯ. ತಾನು ಗೌರವದಿಂದ, ಅನ್ಯರಿಗೆ ಹಿತವೆನಿಸುವಂತೆ ಬದುಕಬೇಕಾದುದು ಅಗತ್ಯ. ಆದರೆ ಎಷ್ಟೋ ಮಂದಿ ಹಾಗೆ ಬದುಕದೆ ಸದಾ ಅನ್ಯರಿಗೆ ಅಸಹ್ಯಪಡುತ್ತಲೇ ಇರುತ್ತಾರೆ. ಸಮಾಜದ ನೆಮ್ಮದಿಯನ್ನು ಕೆಡಿಸುತ್ತಲೇ ಇರುತ್ತಾರೆ.

                ತನ್ನನ್ನು ತಾನು ಬಣ್ಣಿಸುವುದೂ ಒಂದು ಸಾಮಾಜಿಕ ಅಪರಾಧ. ಇದನ್ನು ಆತ್ಮಪ್ರಶಂಸೆ ಎನ್ನಲಾಗುತ್ತದೆ.  ಲೋಕದಲ್ಲಿ ಸಾಧಿಸಿ, ಕೀರ್ತಿಯನ್ನು ಗಳಿಸುವುದು ಒಂದಾದರೆ, ಏನನ್ನೂ ಸಾಧಿಸದೆ ಕೀರ್ತಿಯನ್ನು ಗಳಿಸಲು ಪ್ರಯತ್ನಿಸುವುದು ಇನ್ನೊಂದು. ಹೊಗಳಿಕೆಯೇ ಮರಣದಂಡನೆಗೆ ಸಮಾನವೆನಿಸಿರುವಾಗ  ಸ್ವಪ್ರಶಂಸೆ ಅದಕ್ಕಿಂತಲೂ ದೊಡ್ಡ ಶಿಕ್ಷೆ. ಆದರೆ ತಮ್ಮನ್ನು ತಾವೇ ಹೊಗಳುವವರಿಗೆ ಅದು ತಿಳಿಯುವುದೇ ಇಲ್ಲ. ಇತರರನ್ನು ಹೊಗಳುವುದು ತಮ್ಮ ಬೇಳೆಬೇಯಿಸಿಕೊಳ್ಳುವುದಕ್ಕೆ. ತಮ್ಮನ್ನು ತಾವೇ ಹೊಗಳುವುದು ತಮ್ಮ ನ್ಯೂನತೆ, ಕೀಳರಿಮೆಗಳನ್ನು ಮುಚ್ಚಿಡುವುದಕ್ಕೆ. ಇದು ಒಂದು ರೀತಿಯಲ್ಲಿ ಗೋಸುಂಬೆತನ. ಇದರಿಂದ ಯಾವ ಘನಕಾರ್ಯವೂ ಸಾಧಿತವಾಗುವುದಿಲ್ಲ. ಆದರೆ ಒಂದಲ್ಲ ಒಂದು ದಿನ ಬಣ್ಣ ಬಯಲಾಗಿ ಎಲ್ಲವನ್ನೂ ಕಳೆದುಕೊಂಡು ನಿಕೃಷ್ಟನಾಗಬೇಕಾಗುತ್ತದೆ.

                ಇದಿರ ಹಳಿಯುವುದೂ ಒಂದು ಸಾಮಾಜಿಕ ಅಪರಾಧ. ಇನ್ಯಾರದೋ ತಪ್ಪುಗಳಿದ್ದಾಗ ಅದನ್ನೇ ದೊಡ್ಡದಾಗಿ ನಿಂದಿಸುವುದು, ಕಿರಿದನ್ನು ಹಿರಿದುಗೊಳಿಸುವುದು, ಅವಮಾನ ಮಾಡುವುದೆಲ್ಲವೂ ಅನ್ಯರನ್ನು ಕುಗ್ಗಿಸುವ, ತನ್ನನ್ನು ಹಿಗ್ಗಿಸಿಕೊಳ್ಳುವ ದುಷ್ಟಪ್ರವೃತ್ತಿ. ಲೋಕದಲ್ಲಿ ಎಷ್ಟೋ ಮಂದಿಗೆ ತಾವು ಮಾತ್ರ ಶ್ರೇಷ್ಠರು, ಉಳಿದವರೆಲ್ಲ ಕನಿಷ್ಠರು ಎಂಬ ಮೇಲರಿಮೆ ಇರುತ್ತದೆ. ಅವರು ಉಳಿದವರನ್ನು ಕೀಳೆಂದು ಭಾವಿಸುತ್ತಾರೆ. ಲೋಕದಲ್ಲಿ ತಪ್ಪನ್ನೆಸಗದ ವ್ಯಕ್ತಿಯೇ ಇಲ್ಲ. ಎಸಗಿದ ತಪ್ಪನ್ನು ತಿದ್ದಿಕೊಳ್ಳುವುದಕ್ಕೆ ಅವಕಾಶವಿದ್ದೇ ಇದೆ. ಆದರೆ ವ್ಯಕ್ತಿಯ ಎದುರೆದುರೇ ನಿಂದಿಸಿ ಅವಮಾನಿಸುವುದು ಮಾನವೀಯತೆಯಲ್ಲ.ಇದಿರ ಹಳಿಯುವುದು ಇನ್ನೊಬ್ಬ ಮಾನಸಿಕ ನೆಮ್ಮದಿಯನ್ನು ನಾಶಮಾಡಿದಂತೆ. ಇಂತಹವರು ಸಮಾಜದ್ರೋಹಿಗಳು  ಎನಿಸಿಕೊಳ್ಳುತ್ತಾರೆ.

                ಕಳ್ಳತನ, ಕೊಲೆಗಡಿಕತನ, ಹುಸಿನುಡಿಯುವುದು, ಮುನಿಯುವುದು, ಅನ್ಯರಿಗೆ ಅಸಹ್ಯಪಡುವುದು, ತನ್ನನ್ನು ತಾನೇ ಬಣ್ಣಿಸುವುದು, ಎದುರಲ್ಲೇ ನಿಂದಿಸುವುದು ಮೊದಲಾದ ದುಷ್ಟ ಪ್ರವೃತ್ತಿ, ದುರ್ಗುಣ, ದುಶ್ಚಾರಿತ್ರ್ಯಗಳನ್ನು ತ್ಯಜಿಸುವುದೇ ಅಂತರಂಗಶುದ್ಧಿ ಹಾಗೂ ಬಹಿರಂಗಶುದ್ಧಿ ಎನಿಸಿಕೊಳ್ಳುತ್ತದೆ. ಬಸವಣ್ಣನವರು ಉಲ್ಲೇಖಿಸಿರುವ ದುರ್ಗುಣಗಳೆಲ್ಲವೂ ದೇಹ, ಮನಸ್ಸು ಹಾಗೂ ಮಾತು ಎಂಬ ಮೂರು ಜ್ಞಾನೇಂದ್ರಿಯಗಳಿಗೆ ಸಂಬಂಧಿಸಿದವು. ಮನುಷ್ಯನ ನಾಶಕ್ಕೆ ಇವೇ ಮುಖ್ಯ ಕಾರಣ. ಈ ದುರ್ಗುಣಗಳೆಲ್ಲವನ್ನು  ಕಳೆದುಕೊಂಡರೆ ತ್ರಿಕರಣಶುದ್ಧಿ. ಹಾಗೆ ಸಾಧಿಸಿದವನೇ ಪರಿಪೂರ್ಣ ಮನುಷ್ಯ. ಅಂತಹವನು ಕೂಡಲಸಂಗಮದೇವನಿಗೆ ಪ್ರಿಯನಾಗುತ್ತಾನೆ. ಇದು ಬಸವಣ್ಣನವರ ಆತ್ಮವಿಮರ್ಶೆ. ಮಾತ್ರವಲ್ಲ, ಸರ್ವರದೂ.

                ಆಧುನಿಕಕಾಲದಲ್ಲಿ ಈ ರೀತಿಯ ತ್ರಿಕರಣಶುದ್ಧಿಯನ್ನು ಸಾಧಿಸಿಕೊಳ್ಳಲು ಸಾಧ್ಯವೇ? ಎಂಬ ಸವಾಲು ನಮ್ಮ ಮುಂದಿದೆ. ಬಸವಣ್ಣನವರು ಉಲ್ಲೇಖಿಸುವ ಈ ಸಾಮಾಜಿಕ ಅಪಮೌಲ್ಯಗಳೆಲ್ಲವೂ ಅಸಂಖ್ಯ ರೂಪಗಳನ್ನು ಹೊಂದಿ, ಪರಿಷ್ಕರಣೆಗಳನ್ನು ವಿಶ್ವವ್ಯಾಪಕತೆಯನ್ನು ಪಡೆದುಕೊಂಡು ತಮ್ಮ ಕಬಂಧಬಾಹುಗಳನ್ನು ಎಲ್ಲೆಡೆಗೂ ಚಾಚಿಕೊಂಡು ಸಮಾಜವ್ಯವಸ್ಥೆಯನ್ನೇ ನುಚ್ಚುನೂರು ಮಾಡುತ್ತಿವೆ. ಯಾರೂ ಯಾರನ್ನೂ ನಂಬದಂತಹ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶ ಅಭಿವೃದ್ಧಿಪಥದಲ್ಲಿ ಕುಂಟುತ್ತಿದೆ. ಹಾಗಾಗಿ ಬಸವಣ್ಣನವರ ಈ ಮಾತುಗಳು ಸಾರ್ವಕಾಲಿಕ ಸತ್ಯವಾದರೂ ಅಂದಿಗಿಂತ ಇಂದಿನ ಕಾಲಕ್ಕೆ ಹೆಚ್ಚು ಪ್ರಸ್ತುತವಾಗಿವೆ ಎನಿಸುತ್ತದೆ.

***

2 thoughts on “ಕಳಬೇಡ, ಕೊಲಬೇಡ

  1. ಬಸವಣ್ಣನವರ ಎಷ್ಟೋ ವಚನಗಳಲ್ಲಿ ಎಲ್ಲರ ಮನಸ್ಸಿಗೆ ಪ್ರಮುಖವಾಗಿ ನನ್ನ ಮನಸ್ಸಿಗೆ ಬಹಳ ನಾಟಿದಂತಹ ವಚನ ಇದು. ಬಹಳ ಸರಳವಾಗಿ ಪ್ರತಿಯೊಬ್ಬರಿಗೂ ಒಂದೇ ಓದಿಗೆ ಅರ್ಥೈಸುವಂತಹ ಸರಳವಾದ ಆಡುಭಾಷೆಯಲ್ಲಿದ್ದರೂ ಅದರ ಸತ್ವ ಮಾತ್ರ ಅದನ್ನು ಓದಿದಷ್ಟು ಸುಲಭವಾಗಿ ಆಚರಣೆಗೆ ತರಲು ಆಗುವಂತದ್ದಲ್ಲ. ಒಬ್ಬ ಮನುಷ್ಯ ತನ್ನ ಮನಸ್ಸನ್ನು ತನ್ನ ದೇಹವನ್ನು( ಚಾರಿತ್ರ್ಯವನ್ನು) ಶುದ್ಧವಾಗಿ ಇಟ್ಟುಕೊಳ್ಳಲು ಯಾವುದೇ ಧ್ಯಾನ, ಜಪ, ತಪ ಮಾಡುವಂತಹ ಅಗತ್ಯವಿಲ್ಲ. ತನ್ನ ನಿತ್ಯ ಜೀವನದಲ್ಲಿ ಬಸವಣ್ಣನವರು ಈ ವಚನದಲ್ಲಿ ಹೇಳಿರುವ ಹಾಗೆ ನಡೆದುಕೊಂಡರೆ ಅದೇ ನಮ್ಮನ್ನು ಮುಕ್ತಿಯ ದಾರಿಯೆಡೆಗೆ ಕರೆದುಕೊಂಡು ಹೋಗುತ್ತದೆ. ಬಸವಣ್ಣನವರ ಈ ವಚನವು ನೈತಿಕತೆಯ ಅಧಃಪತನದ ಕಡೆಗೆ ಸಾಗುತ್ತಿರುವ ನಮ್ಮ ಇಂದಿನ ಸಮಾಜಕ್ಕೆ ಬಹಳ ಅಗತ್ಯವಾಗಿದೆ ಎಂಬುದನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್. ಧನ್ಯವಾದಗಳು 🙏

    1. ನಿಮ್ಮ ಅನಿಸಿಕೆಗಳೆಲ್ಲವೂ ಸಮರ್ಪಕ. ಬಹುಶಃ ಈ ವಚನದ ಹಿಂದಿನ ಅರ್ಥಪ್ರತೀತಿಯನ್ನು ಹೆಚ್ಚಿನವರು ಅರ್ಥೈಸಲು ಪ್ರಯತ್ನಿಸಿಲ್ಲ. ಇದೊಂದು ಸಮಾಜ ವಿಮರ್ಶೆಯ ವಚನವೂ ಹೌದು. ಇಲ್ಲಿನ ವಿಷಯಗಳನ್ನು ಅರ್ಥೈಸಿ ಅಳವಡಿಸಿಕೊಂಡರೆ ಭಾರತೀಯರು ಮಾತ್ರವಲ್ಲ, ಭಾರತವೂ ವಿಶ್ವಗುರು ಎನಿಸಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಆದರೆ ನಮ್ಮಲ್ಲಿರುವ ಸ್ವಾರ್ಥ, ವಿಕೃತ ಸ್ವಭಾವಗಳು ಹೇಗೆ ನಾಶವಾದಾವು?! ಬಸವಣ್ಣನವರು ಕೇವಲ ಶಿವಶರಣರಲ್ಲ, ಅವರೊಬ್ಬ ಸಮಾಜಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ ಕೂಡಾ. ನಾವು ಅರ್ಥಮಾಡಿಕೊಂಡಿಲ್ಲ ಅಷ್ಟೇ. ನಾವು ಜಾತಿ, ಪಂಥಗಳ ವರ್ತುಲದಿಂದ ಹೊರಬಂದು ಪರಿಶೀಲಿಸಬೇಕಷ್ಟೇ.
      ಈ ವಚನದ ಮೇಲಿನ ವ್ಯಾಖ್ಯಾನವನ್ನು ಓದಿ ನಿಮ್ಮಲ್ಲಿ ಹೊಸ ವಿಚಾರಗಳು ಹೊಳೆದರೆ ಅವು ಈ ವಚನದ ಶ್ರೇಷ್ಟತೆ ಹಾಗೂ ಇಂದಿನ ಪ್ರಸ್ತುತತೆಗೆ ಸಾಕ್ಷಿ. ಈ ಬ್ಲಾಗಿನ ಬರಹಗಳನ್ನು ನಿರಂತರ ಓದಿ ಪ್ರತಿಕ್ರಿಯಿಸಿ. ನನಗೂ ಇತರರಿಗೂ ಅದರಿಂದ ಉಪಕಾರವಾಗಬಹುದು. ಮಾತೇ ಇದೆಯಲ್ಲ, “ವಾದೇ ವಾದೇ ಜಾಯತೇ ತತ್ತ್ವ ಬೋಧಃ” ಎಂದು.
      ಅನಿಸಿಕೆಗಳಿಗೆ ಧನ್ಯವಾದಗಳು.🙏

Leave a Reply

Your email address will not be published. Required fields are marked *