ಮರವಿದ್ದು ಫಲವೇನು? ನೆಳಲಿಲ್ಲದನ್ನಕ!
ಧನವಿದ್ದು ಫಲವೇನು? ದಯವಿಲ್ಲದನ್ನಕ!
ಹಸುವಿದ್ದು ಫಲವೇನು? ಹಯನಿಲ್ಲದನ್ನಕ!
ರೂಪಿದ್ದು ಫಲವೇನು? ಗುಣವಿಲ್ಲದನ್ನಕ!
ಅಗಲಿದ್ದು ಫಲವೇನು? ಬಾನವಿಲ್ಲದನ್ನಕ!
ನಾನಿದ್ದು ಫಲವೇನು? ನಿಮ್ಮ ಜ್ಞಾನವಿಲ್ಲದನ್ನಕ!
ಚೆನ್ನಮಲ್ಲಿಕಾರ್ಜುನ!
-ಅಕ್ಕಮಹಾದೇವಿ
ಅಕ್ಕನ ಈ ವಚನ ಭಕ್ತನ ಪರಿಪೂರ್ಣತೆಯ ಅವಶ್ಯಕತೆಯನ್ನು ಸಾರುತ್ತದೆ. ಇನ್ನೊಂದರ್ಥದಲ್ಲಿ ಇದು ಭಕ್ತನ ಬಗೆಗಿನ ಅಕ್ಕಮಹಾದೇವಿಯ ಒಂದು ಅರ್ಥಪೂರ್ಣವ್ಯಾಖ್ಯೆ. ಭಗವಂತನ ಜ್ಞಾನವಿಲ್ಲದೆ ಬದುಕಿಯೂ ಏನು ಪ್ರಯೋಜನ? ಎಂಬುದನ್ನು ಅಕ್ಕ ಇಲ್ಲಿ ಐದು ದೃಷ್ಟಾಂತಗಳ ಮೂಲಕ ಸ್ಪಷ್ಟಪಡಿಸಿದ್ದಾಳೆ.
ಮೊದಲನೆಯದು ನೆರಳನ್ನು ಕೊಡುವ, ಹಸಿರೆಲೆಗಳಿಂದ ಸಮೃದ್ಧವಾದ ಮರ. ನೆರಳನ್ನು, ಹಣ್ಣುಹಂಪಲುಗಳನ್ನು, ಪ್ರಾಣವಾಯುವನ್ನು ನೀಡುವುದು ಪ್ರತಿಯೊಂದು ಮರದ ಮೂಲಭೂತಗುಣ. ಅದರ ನೆರಳು ಪಕ್ಷಿಗಳಿಗೆ, ಪ್ರಾಣಿಗಳಿಗೆ, ಮನುಷ್ಯರಿಗೆ ಆಶ್ರಯತಾಣ. ನೆರಳನ್ನೇ ನೀಡದ ಮರದಿಂದ ಪ್ರಯೋಜನವಾದರೂ ಏನು? ಇದು ಅಕ್ಕನ ಪ್ರಶ್ನೆ.
ಎರಡನೆಯದು ದಯೆ. ಇದು ಮನುಷ್ಯನಲ್ಲಿ ಇರಲೇಬೇಕಾದ ಒಂದು ಮೌಲ್ಯ. ಅದು ಸಹಬಾಳ್ವೆಗೆ, ಸಾಮರಸ್ಯಕ್ಕೆ ಮೂಲ. ಇದರಿಂದಲೇ ಮನುಷ್ಯತ್ವ ಸಿದ್ಧಿ. ದಯೆಯೇ ಇಲ್ಲದ ಮನುಷ್ಯನಲ್ಲಿ ಎಷ್ಟು ಹಣವಿದ್ದರೂ ಅದು ಆತನ ನಿರ್ದಯತೆಯಿಂದಾಗಿ ಮಹತ್ವವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ದಯೆಯೇ ಇಲ್ಲದ ಮನುಷ್ಯನಲ್ಲಿ ಹಣವಿದ್ದು ಪ್ರಯೋಜನವೇನು?
ಮೂರನೆಯದು ಹಾಲುಕೊಡುವ ಹಸು. ಭಾರತೀಯ ಪರಂಪರೆಯಲ್ಲಿ ಹಸುವಿಗೆ ಬಹಳ ಪ್ರಾಶಸ್ತ್ಯವಿದೆ. ಈಯುವುದು, ಹಾಲು ಕೊಡುವುದು ಹಸುವಿನ ಮೂಲಭೂತಗುಣ. ಅದು ತನ್ನ ಜೀವಿತಾವಧಿಯನ್ನು ಈಯುವ ಹಾಗೂ ಹಾಲುಕೊಡುವುದರ ಮೂಲಕ ಸಾರ್ಥಕಗೊಳಿಸುತ್ತದೆ. ಅದರಿಂದ ಹಾಲು, ಮೊಸರು, ಬೆಣ್ಣೆ, ತುಪ್ಪ ಮಾತ್ರವಲ್ಲದೆ ಬೆರಣಿ, ಕೃಷಿಗೆ ಗೊಬ್ಬರ-ಹೀಗೆ ಹಲವು ಕಾರ್ಯಗಳು ಸಾಧಿತವಾಗುತ್ತವೆ. ಆದರೆ ಈಯದ, ಹಾಲು ಕೊಡದ ಹಸುವಿನಿಂದ ಪ್ರಯೋಜನವಾದರೂ ಏನು?
ನಾಲ್ಕನೆಯದು ರೂಪ. ಮನುಷ್ಯ ಇತರ ಪ್ರಾಣಿವರ್ಗದಿಂದ ಭಿನ್ನನೆನಿಸಿಕೊಳ್ಳುವುದೇ ಆತನ ದೈಹಿಕ ಆಕಾರ ಮತ್ತು ರೂಪದಿಂದಾಗಿ. ಮನುಷ್ಯನಾಗಿ ಹುಟ್ಟಿದವನಿಗೆ ಸುಂದರ ರೂಪವಿದ್ದು ನೋಡುವವರೆಲ್ಲರಿಗೂ ಖುಷಿಯೆನಿಸಬೇಕು ಎನ್ನುವುದು ಎಲ್ಲರ ನಿರೀಕ್ಷೆ ಕೂಡಾ. ರೂಪಕ್ಕೆ ಅನುರೂಪವಾದ ಗುಣಗಳನ್ನು ಮನುಷ್ಯನಲ್ಲಿ ನಿರೀಕ್ಷಿಸುವುದು ತಪ್ಪಲ್ಲ. ಅದು ಹಾಗಿರಲೇಬೇಕೆಂಬ ನಿಯಮವೇನೂ ಇಲ್ಲ. ರೂಪಕ್ಕೆ ಅನುರೂಪವಾದ ಗುಣಗಳಿದ್ದರೆ ಆತನ ರೂಪಕ್ಕೆ ಇನ್ನಷ್ಟು ಮಹತ್ವ, ಗೌರವ. ಆದರೆ ಆ ರೂಪಕ್ಕೆ ಪೂರಕವಾದ ಗುಣವೇ ಇಲ್ಲದಿದ್ದರೆ ರೂಪಕ್ಕೇನು ಬೆಲೆ? ರೂಪವು ಗುಣಗಳಿಂದ ಶೋಭಿಸದಿದ್ದರೆ ಅಂತಹ ರೂಪದಿಂದ ಏನು ಪ್ರಯೋಜನ?
ಐದನೆಯದು ಊಟದ ಬಟ್ಟಲು. ತೃಪ್ತಿಯ ಭೋಜನದಲ್ಲಿ ಬಟ್ಟಲಿನ ದೇಣಿಗೆಯೂ ಇರುತ್ತದೆ. ಚಿನ್ನ, ಬೆಳ್ಳಿ, ಕಂಚು, ಹಿತ್ತಾಳೆ ಬಟ್ಟಲುಗಳು ಅವರವರ ಯೋಗ್ಯತೆಗೆ ಅನುಗುಣವಾಗಿ ಇರುತ್ತವೆ. ಊಟದ ವ್ಯಂಜನಗಳನ್ನು ತನ್ನೊಳಗೆ ಇರಿಸಿಕೊಂಡು ಮನುಷ್ಯನನ್ನು ತೃಪ್ತಿಪಡಿಸಲು ಬಟ್ಟಲು ಪ್ರಶಸ್ತವಾಗಿದ್ದರೂ ಉಣ್ಣುವುದಕ್ಕೆ ಅನ್ನವಾಗಲೀ ಪಲ್ಯಗಳಾಗಲೀ ಇಲ್ಲದಿದ್ದರೆ ಏನು ಪ್ರಯೋಜನ? ಬಟ್ಟಲನ್ನು ನೋಡಿದ ತಕ್ಷಣ ಹಸಿವೆ ತೀರಲು ಸಾಧ್ಯವೇ?
ಈ ಐದು ದೃಷ್ಟಾಂತಗಳ ಮೂಲಕ ಅಕ್ಕ ಚೆನ್ನಮಲ್ಲಿಕಾರ್ಜುನನ ಜ್ಞಾನವಿಲ್ಲದಿದ್ದರೆ ತಾನು ಬದುಕಿದ್ದೂ ಪ್ರಯೋಜನವೇನು? ಎಂದು ತನ್ನನ್ನೇ ಪ್ರಶ್ನಿಸುತ್ತಾಳೆ. ’ವ್ಯಕ್ತಿಯೊಬ್ಬ ನೆರಳನ್ನೀಯುವ ಮರವಾಗಿ, ದಯಾಮಯನಾದ ಸಿರಿವಂತನಾಗಿ, ಹಾಲನ್ನೀಯುವ ಹಸುವಾಗಿ, ಗುಣವುಳ್ಳ ರೂಪವಂತನಾಗಿ, ಅನ್ನವನ್ನು ತುಂಬಿರುವ ಬಟ್ಟಲಾಗಿ, ಭಗವಂತನ ಜ್ಞಾನವುಳ್ಳ ಭಕ್ತನೆನಿಸಿಕೊಳ್ಳಬೇಕು’ ಎಂಬುದು ಆಕೆಯ ನಿಲುವು. ಮೇಲು ನೋಟಕ್ಕೆ ಇದು ಅಕ್ಕನ ಆತ್ಮವಿಮರ್ಶೆಯ ವಚನದಂತೆ ಕಂಡರೂ ಸಮಸ್ತರ ಆತ್ಮವಿಮರ್ಶೆಗೂ ಒದಗಬಹುದಾದ ವಚನ.
ಅಕ್ಕನ ಪ್ರಕಾರ, ಭಕ್ತನಾದವನು ಮೊದಲು ತನ್ನನ್ನು ತಾನು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಈ ಪ್ರಯತ್ನದಲ್ಲಿ ತನ್ನಲ್ಲಿನ ಲೋಪದೋಷಗಳು ನಿವಾರಣೆಯಾಗುತ್ತ ಭಗವಂತನ ಜ್ಞಾನ ಪ್ರಾಪ್ತವಾಗತೊಡಗುತ್ತದೆ. ದೇವರ ಅಸ್ತಿತ್ವ ಹಾಗೂ ಆತನ ಸ್ವರೂಪಗಳನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸದೆ, ಭಯಭಕ್ತಿಗಳನ್ನು ಹೊಂದದೆ ಜ್ಞಾನಸಂಪಾದನೆಯಾದರೂ ಹೇಗೆ ಸಾಧ್ಯ? ಭಗವಂತನ ಜ್ಞಾನವಿಲ್ಲದ ಭಕ್ತ ನೆರಳಿಲ್ಲದ ಮರಕ್ಕೆ, ದಯವಿಲ್ಲದ ಧನಕ್ಕೆ, ಹಯನಿಲ್ಲದ ಹಸುವಿಗೆ, ಗುಣವಿಲ್ಲದ ರೂಪಕ್ಕೆ, ಅನ್ನವಿಲ್ಲದ ಬರೀ ತಟ್ಟೆಗೆ ಸಮಾನವೆನಿಸಿಕೊಳ್ಳುತ್ತಾನೆ. ಆಕೆ ಹೇಳುವಂತೆ, ಮನುಷ್ಯ ಮೂಲಭೂತ ಅರ್ಹತೆಗಳನ್ನು ಮೊದಲು ಆರ್ಜಿಸಿಕೊಳ್ಳಬೇಕು. ಅದಿಲ್ಲದೆ ಕೈಗೊಳ್ಳುವ ಪ್ರತಿಯೊಂದು ಕೆಲಸವೂ ವ್ಯರ್ಥ. ಅಕ್ಕ ತನ್ನನ್ನೇ ಕೇಂದ್ರೀಕರಿಸಿಕೊಂಡು ಸಮಾಜದ ಇತರ ಡಾಂಬಿಕರನ್ನು ಈ ವಚನದಲ್ಲಿ ವಿಡಂಬನೆಮಾಡಿದ್ದಾಳೆ. ತನ್ನ ಕಾಲದಲ್ಲಿ ಅನ್ಯರನ್ನು ಅನುಕರಿಸುತ್ತ ಭಕ್ತನಂತೆ ವೇಷಧರಿಸಿಕೊಂಡು ತನ್ನನ್ನೂ ವಂಚಿಸಿಕೊಳ್ಳುತ್ತ, ಸಮಾಜವನ್ನೇ ವಂಚಿಸುತ್ತಿದ್ದ ಡಾಂಬಿಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಅಕ್ಕ ಈ ಮಾತುಗಳನ್ನು ಆಡಿದ್ದಾಳೆ.
ಆಧುನಿಕಕಾಲದಲ್ಲಿ ಅಕ್ಕನ ವಚನ ಇನ್ನೂ ಹೆಚ್ಚಿನ ಅರ್ಥವ್ಯಾಪ್ತಿಯನ್ನು ಪಡೆದುಕೊಳ್ಳುತ್ತದೆ. ಇಂದು ಹೆಚ್ಚಿನವರ ಬದುಕು ಕೇವಲ ಡಾಂಬಿಕತನದಿಂದಲೇ ತುಂಬಿಕೊಂಡಿದೆ. ಈ ನಿಟ್ಟಿನಲ್ಲಿ ಅಕ್ಕನ ವಚನವನ್ನೇ ಪರಿಭಾವಿಸುವುದಾದರೆ, ಒಂದಾದ ಮೇಲೊಂದರಂತೆ ಪದವಿಗಳಿಸಿದರೂ ತಿಳಿವಳಿಕೆ ಇಲ್ಲದಿದ್ದರೆ ಏನು ಪ್ರಯೋಜನ? ಹತ್ತು ಹಲವು ವ್ರತಗಳನ್ನು ಮಾಡಿದರೂ ಮನಸ್ಸಿನೊಳಗೆ ಮತ್ಸರವೇ ತುಂಬಿಕೊಂಡಿದ್ದರೆ ಏನು ಪ್ರಯೋಜನ? ಮೌಲ್ಯಗಳ ಬಗ್ಗೆ, ಅವುಗಳ ಮಹತ್ವದ ಬಗ್ಗೆ ಒಂದಷ್ಟು ಕಥೆಗಳನ್ನು ಹೇಳುತ್ತ; ವಿಧವಿಧವಾಗಿ ಜನರನ್ನು ರಂಜಿಸುತ್ತ; ಮಹಾಸಂಭಾವಿತರಂತೆ ಮೆರೆಯುತ್ತ ತಮ್ಮ ನೀಚಬುದ್ಧಿಯನ್ನು ತಿದ್ದಿಕೊಳ್ಳದಿದ್ದರೆ ಏನು ಪ್ರಯೋಜನ? ವಿವಿಧ ಅಧಿಕಾರದಲ್ಲಿದ್ದು ಆ ಸ್ಥಾನಕ್ಕೆ ಅನುಗುಣವಾಗಿ ತನ್ನನ್ನು ರೂಪಿಸಿಕೊಳ್ಳದೆ ಒಂದಷ್ಟು ಹಿಂಬಾಲಕರನ್ನು ಕೂಡಿಕೊಂಡು ತನಗಾಗದವರನ್ನು ತುಳಿಯುತ್ತಿದ್ದರೆ ಏನು ಪ್ರಯೋಜನ? ಆಧುನಿಕಕಾಲದಲ್ಲಿ ಈ ರೀತಿಯ ಡಾಂಬಿಕತನ ಹಾಗೂ ಎಡಬಿಡಂಗಿತನಗಳನ್ನು ಮೈಗೂಡಿಸಿಕೊಂಡು ವ್ಯವಸ್ಥೆಯನ್ನೇ ಬುಡಮೇಲುಮಾಡುವವರು, ಅನ್ಯರನ್ನು ದಾರಿತಪ್ಪಿಸುವವರು, ಇತರರನ್ನು ನಂಬಿಸಿ ಸಂಪತ್ತನ್ನು ಲೂಟಿಮಾಡುವವರು ಎಲ್ಲೆಲ್ಲೂ ತುಂಬಿಕೊಂಡಿದ್ದಾರೆ. ಇದೆಲ್ಲವನ್ನೂ ಪರಿಭಾವಿಸಿದರೆ ಹನ್ನೆರಡನೆಯ ಶತಮಾನದಲ್ಲಿ ರಚನೆಯಾದ ವಚನಗಳು ಇಂದಿಗೂ ವಿವಿಧ ನೆಲೆಗಳಲ್ಲಿ ಡಾಂಬಿಕರಿಗೆ, ಮಾನವರೂಪಿ ದಾನವರಿಗೆ ಚಾಟಿಬೀಸುತ್ತಿರುವುದು ಆಶ್ಚರ್ಯಕರವಾದ ಸತ್ಯ.
***
Super explanation sir.
ಧನ್ಯವಾದಗಳು ಸರ್.🙏
ಉತ್ತಮ ವ್ಯಾಖ್ಯಾನ. ಬದುಕಿಗೆ ಅಗತ್ಯ ಮೂಲಭೂತ ಅವಶ್ಯಕತೆಗಳು ಮಾತ್ರ. ತನ್ನ ಇರವಿನ ಹಿಂದಿನ ಅರಿವು ಉಳ್ಳವ ಮಾತ್ರ ಇದನ್ನು ಅರ್ಥವಿಸಿಕೊಳ್ಳಬಲ್ಲ.
ಕೊಳ್ಳುಬಾಕ ಸಂಸ್ಕೃತಿಗೆ ಒಳಗಾಗಿ ಬದುಕಿಗೆ ಅನಿವಾರ್ಯವಾದುದನ್ನು ಬಿಟ್ಟು ಏನೇನೋ ತಂದು ತುಂಬಿಕೊಂಡು ಬದುಕುವ ಆಧುನಿಕ ಸಮಾಜವನ್ನು ಇದು ಖಂಡಿತವಾಗಿಯೂ ಎಚ್ಚರಿಸುತ್ತದೆ.
ವಚನಗಳಲ್ಲಿ ವ್ಯಕ್ತವಾಗುವ ವಿಚಾರಗಳು ವಚನಕಾರರ ಆತ್ಮವಿಮರ್ಶೆಯಾದರೂ ಅವು ನಮ್ಮೆಲ್ಲರ ಆತ್ಮವಿಮರ್ಶೆಗೂ ಒಳಪಡುತ್ತವೆ. ಸರ್ವಜ್ಞನ ಮಾತಿನಂತೆ, ‘ಆರೈದು ಅಡಿಯನಿಡು’ವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ನಿಮ್ಮ ಅನಿಸಿಕೆ ಇನ್ನಷ್ಟು ಜಿಜ್ಞಾಸೆಗಳಿಗೆ ಅವಕಾಶ ನೀಡುವಂತಿದೆ.
ಅಕ್ಕ, ಧನ್ಯವಾದಗಳು 🙏
ಸೊಗಸಾಗಿದೆ ನಿಮ್ಮ ವ್ಯಾಖ್ಯಾನ.