ಸಾಹಿತ್ಯಾನುಸಂಧಾನ

heading1

ಆರೈದು ಅಡಿಯನಿಡು

                “ಆರೈದು ನಡೆವವನು, ಆರೈದು ನುಡಿವವನು, ಆರೈದು ಆಡಿಯನಿಡುವವನು ಲೋಕಕ್ಕೆ ಆರಾಧ್ಯನಕ್ಕು” ಎಂಬುದು ಸರ್ವಜ್ಞನ ಮಾತು. ’ಆರೈದು’ ಎಂದರೆ ’ವಿವೇಚಿಸಿ’  ಎಂದರ್ಥ. ಬದುಕಿನಲ್ಲಿ ವಿವೇಚಿಸಿ ನಡೆದರೆ, ವಿವೇಚಿಸಿ ನುಡಿದರೆ, ವಿವೇಚಿಸಿ ಹೆಜ್ಜೆಯಿರಿಸಿದರೆ  ಮನುಷ್ಯ ಲೋಕಕ್ಕೆ ಗೌರವಾನ್ವಿತನೆನಿಸಿಕೊಳ್ಳುತ್ತಾನೆ ಎಂಬುದು ಸರ್ವಜ್ಞನ ಅಭಿಪ್ರಾಯ. ಸರ್ವಜ್ಞನ ಈ ಮಾತು ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಜವಾಬ್ದಾರಿಯನ್ನು ಸೂಚಿಸುತ್ತದೆ. ಮನುಷ್ಯಜೀವನ ತುಂಬಾ ಕ್ಲಿಷ್ಟಕರ. ಅದನ್ನು ಸಮರ್ಥವಾಗಿ ನಿರ್ವಹಿಸುವುದು ನೀರು ಕುಡಿದಂತಲ್ಲ. ಲೋಕದಲ್ಲಿ ಹತ್ತಾರು ಸ್ತರಗಳ, ನೂರಾರು ಸ್ವಭಾವಗಳ, ಸಾವಿರಾರು ಸಮುದಾಯಗಳ, ಲಕ್ಷಾಂತರ ಅಭಿರುಚಿಗಳ, ಅಸಂಖ್ಯ ಮನೋಧರ್ಮಗಳ, ನೂರಾರು ವರ್ಗಗಳ, ಕೋಟ್ಯಂತರ ತಂತ್ರ-ಕುತಂತ್ರಗಳ ಜನರಿದ್ದಾರೆ. ಒಬ್ಬನೊಂದಿಗಿನ ವ್ಯವಹಾರ ಇನ್ನೊಬ್ಬನೊಂದಿಗೆ ಅಪ್ರಸ್ತುತ. ಒಬ್ಬನೊಂದಿಗಿನ ಮಾತು ಇನ್ನೊಬ್ಬನೊಂದಿಗೆ ಅಸಾಧ್ಯ. ಒಬ್ಬನೊಂದಿಗಿನ ಸಂಬಂಧ ಇನ್ನೊಬ್ಬನೊಂದಿಗೆ ನಿಷೇಧ. ಒಬ್ಬನೊಂದಿಗಿನ ಸ್ನೇಹ ಇನ್ನೊಬ್ಬನೊಂದಿಗೆ ಅರ್ಥಹೀನ. ಹಾಗಾಗಿ ಬದುಕಿನ ಎಲ್ಲಾ ಸಂದರ್ಭಗಳಲ್ಲಿಯೂ ಮೈಯೆಲ್ಲಾ ಕಣ್ಣಾಗಿ, ಕಿವಿಯಾಗಿರಲೇಬೇಕು. “ಲೋಕೋ ಭಿನ್ನ ರುಚಿಃ” ಎಂದರು ನಮ್ಮ ಪೂರ್ವಜರು. ಈ ಭಿನ್ನಭಿನ್ನ ರುಚಿ(ಸ್ವಭಾವ)ಗಳಿರುವ ಜನರೊಂದಿಗೆ ಜೀವಮಾನ ಪರ್ಯಂತ ಬದುಕುವುದಕ್ಕಾಗಿ  ಹತ್ತಾರು, ನೂರಾರು,ಸಾವಿರಾರು ಬಾರಿ ಯೋಚಿಸಿ, ಯೋಜಿಸಿ ಬದುಕಬೇಕಾಗುತ್ತದೆ.

                ಬದುಕಿನುದ್ದಕ್ಕೂ ನೂರಾರು ಜನರೊಂದಿಗಿನ ವ್ಯವಹಾರದ ಸಂದರ್ಭಗಳಲ್ಲಿ ಕೆಲಸದ ಬಗ್ಗೆ, ಮಾತಿನ ಬಗ್ಗೆ ಹಾಗೂ ಅವುಗಳಿಂದುಂಟಾಗಬಹುದಾದ ಪರಿಣಾಮಗಳ ಬಗ್ಗೆ ಕಲ್ಪನೆ ಇರಲೇಬೇಕು. ಹಾಗಿದ್ದರೆ ಮಾತ್ರ ಹೆಜ್ಜೆಯಿಡಲು ಸಾಧ್ಯ. ಜಗತ್ತೇ ನಾಟಕರಂಗವಾಗಿದ್ದು, ಜನರೆಲ್ಲರೂ ನಟರಾಗಿರುವಾಗ ಬದುಕೆಂಬುದು ಹತ್ತಾರು, ನೂರಾರು ಬಗೆಯ ನಟನೆಗಳಿಂದಲೇ ಕೂಡಿದೆ. ಯಾವುದು ತಪ್ಪು? ಯಾವುದು ಒಪ್ಪು? ತಪ್ಪು ಒಪ್ಪಾಗುತ್ತದೆ, ಒಪ್ಪು ತಪ್ಪಾಗುತ್ತದೆ. ಎಲ್ಲವೂ ಅವರವರ ಭಾವ, ಬುದ್ಧಿ, ತಂತ್ರ, ಕುತಂತ್ರಗಳಿಗನುಸಾರ. ಅವರವರ ಭಾವಕ್ಕನುಗುಣವಾಗಿ ಅವರವರ ಬದುಕು. ಸುಳ್ಳನ್ನು ಸತ್ಯವಾಗಿಸುವ, ಸತ್ಯವನ್ನು ಸುಳ್ಳಾಗಿಸುವ ನಟಭಯಂಕರರ ನಡುವೆ ಬದುಕು ಸುಲಭವಾಗಬಹುದು, ಕಷ್ಟವಾಗಬಹುದು, ಸರಳವಾಗಬಹುದು, ಅಸಾಧ್ಯವೆನಿಸಬಹುದು, ಅಪ್ರಸ್ತುತವಾಗಬಹುದು, ಅರ್ಥಹೀನವಾಗಬಹುದು. ಸತ್ಯ ಸುಳ್ಳಾಗಬಹುದು, ಸುಳ್ಳು ಸತ್ಯವಾಗಬಹುದು, ಧರ್ಮ ಅಧರ್ಮವಾಗಬಹುದು, ಅಧರ್ಮ ಧರ್ಮವಾಗಬಹುದು. ಹೀಗಿರುವಾಗ ಬದುಕಿನಲ್ಲಿ ಹೆಜ್ಜೆಯಿಡುವ ಬಗೆ ಹೇಗೆ? ಕಳ್ಳ, ಸುಳ್ಳ, ವಂಚಕ, ಅಧರ್ಮಿ, ವ್ಯಭಿಚಾರಿ, ಭ್ರಷ್ಟಾಚಾರಿಗಳ ಮಧ್ಯೆ ಬದುಕುವಾಗ ನಮ್ಮ ಅಸ್ತಿತ್ವಕ್ಕಾಗಿ ಅವರಂತೆಯೇ ಗೋಸುಂಬೆಗಳಾಗುವುದಕ್ಕೆ ಸಾಧ್ಯವೇ? ಸರ್ವಜ್ಞನ ಕಾಲದಲ್ಲಿಯೇ ಜನಸಾಮಾನ್ಯರ ಬದುಕು ಅಸ್ತವ್ಯಸ್ತವಾಗಿದ್ದಿದ್ದರೆ ಇಂದಿನ ಇಪ್ಪತ್ತೊಂದನೆಯ ಶತಮಾನದ ಹೊತ್ತಿನಲ್ಲಿ ನಾವು ಬದುಕುವುದಕ್ಕೆ ಹೆಣಗಾಡಬೇಕಾದ ಸ್ಥಿತಿಗತಿಗಳೇ ಒದಗಿವೆಯಲ್ಲ!

                ಭಾರತದಲ್ಲಿ ಪ್ರಾಚೀನಕಾಲದಿಂದಲೂ  ‘ಮನುಷ್ಯ’  ಜನ್ಮಕ್ಕೆ ಅಧಿಕ ಪ್ರಾಶಸ್ತ್ಯ ಸಂದಿದೆ. ಕೆಲವರು ಅದನ್ನರಿತುಕೊಂಡು ಬದುಕನ್ನು ಸಾರ್ಥಕಪಡಿಸಿಕೊಂಡರೆ, ಇನ್ನೆಷ್ಟೋ ಮಂದಿ ಅದನ್ನು ಅರಿಯದೆ ನಿರರ್ಥಕಪಡಿಸಿಕೊಂಡರು. ಇನ್ನೆಷ್ಟೋ ಮಂದಿ ಅನ್ಯರ ಬದುಕನ್ನು ಹಾಳುಗೆಡಹಿ ತಾವು ತೃಪ್ತಿಪಟ್ಟುಕೊಂಡರು. ಮನುಷ್ಯನಾಗಿ ಹುಟ್ಟಿದ ಮೇಲೆ ಅದನ್ನು ಸಾರ್ಥಕಪಡಿಸಿಕೊಳ್ಳಬೇಕಾದುದು ಪ್ರತಿಯೊಬ್ಬನ ಕರ್ತವ್ಯ. “ಮಾನವ ಜನ್ಮ ಬಲು ದೊಡ್ಡದು, ಅದನ್ನು ಹಾಳುಮಾಡಲು ಬೇಡಿ, ಹುಚ್ಚಪ್ಪಗಳಿರಾ” ಎಂಬ ದಾಸವಾಣಿಯೂ ಅದನ್ನೇ ಸಮರ್ಥಿಸುತ್ತದೆ. ವಿವೇಚನೆಯ ಮಾತು, ವಿವೇಚನೆಯ ನಡೆ,  ವಿವೇಚನಾಯುಕ್ತ ಬದುಕು ಮನುಷ್ಯನಿಗೆ ಸಾರ್ಥಕ್ಯವನ್ನು ತಂದುಕೊಡುತ್ತದೆ. ಈ ವಿವೇಚನೆ ಅನ್ಯರ ಬದುಕಿನ ಬಗ್ಗೆಯೂ ಇರಬೇಕಾಗುತ್ತದೆ. ಸರ್ವಜ್ಞನ ಪ್ರಕಾರ, ಹಾಗೆ ಬದುಕಿದರೆ ಸಾಮಾನ್ಯನೊಬ್ಬ ಅಸಾಮಾನ್ಯನಾಗಿ, ಲೋಕಮಾನ್ಯನಾಗಲು ಸಾಧ್ಯ. ಇದೇ ತುಂಬಿದ ಬದುಕು. ಸಾರ್ಥಕ ಬದುಕು. ಇದು ಅಳಿದ ಮೇಲೂ ಉಳಿಯಬಹುದಾದ ಬದುಕು.

***  

Leave a Reply

Your email address will not be published. Required fields are marked *