ಸಾಹಿತ್ಯಾನುಸಂಧಾನ

heading1

ಅಂಗದ ಗುಣವನರತು – ಅಂಬಿಗರ ಚೌಡಯ್ಯ

ಅಂಗದ ಗುಣವನರತು

ಲಿಂಗವನರಿಯಬೇಕೆಂಬರು

ಅಂಗವರತ ಮತ್ತೆ ಲಿಂಗಕ್ಕೆ ಕುರುಹುಂಟೆ?

ಅಂಗವೆ ಲಿಂಗ, ನಿರಂಗವೆ ಸಂಗ

ಭಾವದ ಅಂಗವನರಿಯಬೇಕೆಂದನಂಬಿಗ ಚೌಡಯ್ಯ

ವಚನದ ಅನ್ವಯಕ್ರಮ:

ಅಂಗದ ಲಿಂಗವನ್ ಅರತು ಲಿಂಗವನ್ ಅರಿಯಬೇಕು ಎಂಬರು. ಅಂಗವನ್ ಅರತ ಮತ್ತೆ ಲಿಂಗಕ್ಕೆ ಕುರುಹು ಉಂಟೆ? ಅಂಗವೆ ಲಿಂಗ, ನಿರಂಗವೆ ಸಂಗ, ಭಾವದ ಅಂಗವನ್ ಅರಿಯಬೇಕೆಂದನ್ ಅಂಬಿಗ ಚೌಡಯ್ಯ

ಪದ-ಅರ್ಥ:

ಅಂಗ-ದೇಹ, ಶರೀರ;  ಗುಣ-ಸ್ವಭಾವ, ದೇಹಸ್ಥಿತಿ; ಅರತು-ಅರಿತುಕೊಂಡು, ತಿಳಿದುಕೊಂಡು; ಲಿಂಗ-ಶಿವ, ಶಿವಲಿಂಗ;  ಅರಿ-ತಿಳಿದುಕೊಳ್ಳು, ಅರ್ಥೈಸಿಕೊಳ್ಳು;  ಎಂಬರು-ಎನ್ನುತ್ತಾರೆ, ಹೇಳುತ್ತಾರೆ;  ಅಂಗವರತ-ಅಂಗವನ್ನು ಅರಿತುಕೊಂಡ, ದೇಹಸ್ಥಿತಿಯನ್ನು ಅರಿತುಕೊಂಡ;  ಮತ್ತೆ-ಬಳಿಕ, ಆಮೇಲೆ;  ಕುರುಹು -ಗುರುತು, ಅಸ್ತಿತ್ವದ ಚಿಹ್ನೆ;  ನಿರಂಗ-ದೇಹವಿಲ್ಲದ ಸ್ಥಿತಿ, ಶಿವೈಕ್ಯ ಸ್ಥಿತಿ;  ಭಾವದ ಅಂಗ– ಅಲೌಕಿಕ ಸ್ವರೂಪದ ಸ್ಥಿತಿ, ಅಲೌಕಿಕವಾದ  ಮಾನಸಿಕ ಸ್ಥಿತಿ.

            ತಮ್ಮ ದೇಹಸ್ವಭಾವಗಳನ್ನು ಅರಿತುಕೊಳ್ಳದೆ ಲಿಂಗಧಾರಿಗಳಾಗಿ, ಕೇವಲ ಬೂಟಾಟಿಕೆಯನ್ನು ಮೈಗೂಡಿಸಿಕೊಂಡು ಶಿವಭಕ್ತರೆಂದು ಮೆರೆಯುವ ಡಾಂಬಿಕರನ್ನು ಅಂಬಿಗರ ಚೌಡಯ್ಯ ಈ ವಚನದಲ್ಲಿ ವಿಡಂಬಿಸಿದ್ದಾನೆ. ಆತನ ಪ್ರಕಾರ, ಲೋಕದಲ್ಲಿ ಪ್ರತಿಯೊಂದಕ್ಕೂ ಪೂರ್ವಭಾವಿ ತಯಾರಿ, ಸಾಧನೆ ಹಾಗೂ ಆ ಮೂಲಕ ಅರ್ಹತೆಯನ್ನು ಗಳಿಸಿಕೊಳ್ಳುವುದು ಅತ್ಯಂತ ಅಗತ್ಯ. ಹೀಗೆ ಅರ್ಹತೆಯನ್ನು ಗಳಿಸಿಕೊಂಡ ಅನಂತರವೇ ಅನ್ಯರಿಗೆ ಬೋಧಿಸುವ, ಮಾರ್ಗದರ್ಶನಮಾಡುವ, ತಿಳಿಹೇಳುವ ಯೋಗ್ಯತೆಗಳು ಪ್ರಾಪ್ತಿಯಾಗುತ್ತವೆ. ಇಂತಹ ಅರ್ಹತೆಗಳಿಲ್ಲದೆ ಗೈಯುವ ಎಲ್ಲಾ ಧಾರ್ಮಿಕ ಆಚರಣೆಗಳು ಡಾಂಬಿಕವೂ ಸಮಾಜಘಾತುಕವೂ ಎನಿಸಿಕೊಳ್ಳುತ್ತವೆ.

            ’ಭಕ್ತ’ ಎನಿಸಿಕೊಳ್ಳಬೇಕು ಅಥವಾ ’ಲಿಂಗಧಾರಿ’ ಎನಿಸಿಕೊಳ್ಳಬೇಕು ಎಂದು ಬಯಸುವವನು ಮೊದಲು ತನ್ನ ದೈಹಿಕ ಪ್ರಕೃತಿ ಹಾಗೂ ಅದರ ಗುಣಸ್ವಭಾವಗಳನ್ನು, ಇತಿಮಿತಿಗಳನ್ನು, ಒಳಿತು-ಕೆಡುಕುಗಳನ್ನು ಅರ್ಥೈಸಿಕೊಳ್ಳಬೇಕು. ಇಂತಹ ಅರ್ಥೈಸುವಿಕೆಯು ಲಿಂಗರಹಸ್ಯವನ್ನು ಅರಿತುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಅಥವಾ ಇನ್ನೊಂದರ್ಥದಲ್ಲಿ ಶಿವಮಹಿಮೆಯನ್ನು ಅರಿತುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಅಂಗದ ಗುಣಸ್ವಭಾವಗಳನ್ನು ಅರಿಯದಿದ್ದರೆ, ಅದರ ಒಳಿತುಕೆಡುಕುಗಳನ್ನು, ನ್ಯೂನತೆಗಳನ್ನು ಮನಗಂಡು ತನ್ನನ್ನು ತಾನು ಪರಿಷ್ಕರಿಸಿಕೊಳ್ಳದೆ ಲಿಂಗಧಾರಿಗಳೆನಿಸಿಕೊಂಡರೂ ಶಿವಾನುಗ್ರಹಕ್ಕೆ ಪಾತ್ರನಾಗುವುದಕ್ಕೆ  ಸಾಧ್ಯವಿಲ್ಲ. ಅಂಗವು ಷಡ್ವೈರಿಗಳ,  ಸಕಲ ಭಾವಗಳ  ಆಶ್ರಯತಾಣ. ಅವುಗಳಿಗೆ ಅನುಗುಣವಾಗಿ ದೇಹದ ಗುಣಸ್ವಭಾವಗಳಲ್ಲಿ ಆಕಾರ ವಿಕಾರಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಅವು ಪ್ರತಿಯೊಂದು ಹಂತದಲ್ಲಿಯೂ ಮನುಷ್ಯನ ಸಾಧನೆಯ ದಾರಿಯಲ್ಲಿ ತಡೆಯನ್ನು ಒಡ್ದುತ್ತಲೇ ಇರುತ್ತವೆ.  ಹಾಗಾಗಿ ಮೊದಲು ಶುದ್ಧೀಕರಣ, ಆಮೇಲೆ ಅನುಸರಣ. ಕಲುಷಿತಗೊಂಡ ಬಾವಿನೀರನ್ನು ತಿಳಿಗೊಳಿಸಿ ಕುಡಿಯಲು ಉಪಯೋಗಿಸಿದ ಹಾಗೆ. ನೀರು ತಿಳಿಗೊಂಡ ಮೇಲೆಯೇ ಕುಡಿಯಲು ಪ್ರಶಸ್ತ. ಮನುಷ್ಯದೇಹ ಷಡ್ವೈರಿಗಳಿಂದ, ವಿಕಾರಭಾವಗಳಿಂದ ಕಲುಷಿತಗೊಂಡಿದ್ದರೆ ಅದು ಶಿವಾನುಗ್ರಹಕ್ಕೆ ಪಾತ್ರವಾಗುವುದಕ್ಕೆ ಅಸಮರ್ಥ. ಹಾಗಾಗಿ ಅದನ್ನು ತಿಳಿಗೊಳಿಸ(ಶುದ್ಧೀಕರಿಸ)ಬೇಕು. ಹೀಗೆ ಮನುಷ್ಯನೊಬ್ಬ ತನ್ನ ದೇಹವನ್ನು, ಅದರ ಇತಿಮಿತಿಗಳನ್ನು ಅರಿತು ಶುದ್ಧನಾಗುವ ಪ್ರಕ್ರಿಯೆಯೇ ಅಂಗವನ್ನು ಅರಿತ ಸ್ಥಿತಿ.

            ಅಂಗವನ್ನು ಅದರ ಸ್ಥಿತಿಗತಿಗಳನ್ನು ಅರಿಯುವ ಮೊದಲು ಲಿಂಗಕ್ಕೊಂದು ಕುರುಹು ಇರುತ್ತದೆ. ಅದು ಕಣ್ಣಿಗೆ ಕಾಣುವಂತಹುದು. ಅದಕ್ಕೊಂದು ಮಿತಿಯೂ ಇರುತ್ತದೆ. ಆದರೆ ಸಾಧನೆಯಿಂದ ಅಂಗವನ್ನು ಅರಿತ ಬಳಿಕ ಲಿಂಗಕ್ಕೆ ಕುರುಹು ಎಂಬುದು ಇರುವುದಿಲ್ಲ. ಅದು ಅಗಾಧವೆನಿಸಿಕೊಂಡು ಸರ್ವಾಂತರ್ಯಾಮಿ ಎನಿಸಿಕೊಳ್ಳುತ್ತದೆ. ಇದುವೇ ಭಕ್ತಸ್ಥಿತಿ. ಮಾತ್ರವಲ್ಲ ಪರಿಶುದ್ಧಸ್ಥಿತಿ. ಇದು ಶಿವನಿಗೆ ಅತ್ಯಂತ ಪ್ರಿಯವಾದುದು. ಈ ಸ್ಥಿತಿಯಲ್ಲಿ ಅಂಗವೇ ಲಿಂಗವೆನಿಸಿಕೊಳ್ಳುತ್ತದೆ. ಇದರ ಮುಂದುವರಿದ ಸ್ಥಿತಿಯೇ ನಿರಂಗಸ್ಥಿತಿ. ಅಂದರೆ, ದೇಹವಿಲ್ಲದ ಸ್ಥಿತಿ, ಶಿವೈಕ್ಯವೆನಿಸುವ ಸ್ಥಿತಿ. ಈ ಸ್ಥಿತಿ ಸುಲಭದಲ್ಲಿ ದಕ್ಕುವಂತಹುದಲ್ಲ. ಅದಕ್ಕೆ ದೈಹಿಕ ಮಾನಸಿಕ ಸ್ಥಿತಿಗತಿಗಳ ಅತ್ಯಗತ್ಯ ಪೂರ್ವಭಾವಿ ತಯಾರಿ, ತತ್ತ್ವಾನುಸರಣೆ,  ಅವುಗಳಿಗನುಗುಣವಾದ ಸಾಧನೆಗಳೆಲ್ಲವೂ ಬೇಕು. ಇದೊಂದು ಪರಿವರ್ತನಾ ಪ್ರಕ್ರಿಯೆ. ಈ ಪರಿವರ್ತನಾ ಪ್ರಕ್ರಿಯೆ ಭಕ್ತನನ್ನು  ಅಂಗಸಂಗದಿಂದ ನಿರಂಗಸಂಗ(ಶಿವಸಾನ್ನಿಧ್ಯ)ಕ್ಕೆ ಕೊಂಡೊಯ್ಯುತ್ತದೆ.  ಅದಕ್ಕಾಗಿಯೇ ಮನುಷ್ಯ ಭಕ್ತನೆನಿಸಿಕೊಳ್ಳುವ ಮೊದಲು  ಅಂಗಸಂಬಂಧಿ ನ್ಯೂನತೆಗಳನ್ನು ಕಳೆದುಕೊಂಡು ಅಲೌಕಿಕವಾದ ಮಾನಸಿಕಸ್ಥಿತಿಯನ್ನು ಆರ್ಜಿಸಿಕೊಳ್ಳಬೇಕು. ಅದಿಲ್ಲದೆ ಮಾಡುವ ಭಸ್ಮಧಾರಣೆ,  ಲಿಂಗಧಾರಣೆ, ಶಿವಪೂಜೆ, ದಾಸೋಹಗಳೆಲ್ಲವೂ ಕೇವಲ ಬೂಟಾಟಿಕೆಯೆಂದೂ ಡಾಂಬಿಕವೆಂದೂ ವಂಚನೆಯೆಂದೂ ಅನ್ನಿಸಿಕೊಳ್ಳುವುದರಿಂದ  ಅಂಬಿಗರ ಚೌಡಯ್ಯ ಈ ರೀತಿಯ ಪ್ರವೃತ್ತಿಗಳೆಲ್ಲವನ್ನೂ ಖಂಡಿಸಿದ್ದಾನೆ.

            ಬಹುಶಃ ಅಂಬಿಗರ ಚೌಡಯ್ಯನ ಕಾಲದಲ್ಲಿ ಸಾಕಷ್ಟು ಮಂದಿ ತಾವು ಭಕ್ತರೆಂದು ತೋರಿಸಿಕೊಳ್ಳುವುದಕ್ಕೆ, ಅನ್ಯರನ್ನು ಮೋಸಗೊಳಿಸುವುದಕ್ಕೆ, ನಂಬಿಸಿ ಮೆರೆಯುವುದಕ್ಕೆ ಯಾವ ಪೂರ್ವಭಾವಿ ಅರ್ಹತೆಯೂ ಇಲ್ಲದೆ, ತಮ್ಮನ್ನು ತಾವು ಸುಧಾರಿಸಿಕೊಳ್ಳದೆ ತಾವೂ ಭಸ್ಮಧಾರಣೆ, ಲಿಂಗಧಾರಣೆ, ದಾಸೋಹ ಮೊದಲಾದ ಶಿವಸಂಬಂಧಿ ಆಚರಣೆಗಳನ್ನು, ಕಾರ್ಯಗಳನ್ನು ಕೈಗೊಳ್ಳುತ್ತಿದ್ದರೆಂದು ತೋರುತ್ತದೆ. ಭಯಭಕ್ತಿ ಲವಲೇಶವೂ ಇಲ್ಲದ, ವ್ಯಕ್ತಿಗತ ಸುಧಾರಣೆ ಎಳ್ಳಷ್ಟೂ ಇಲ್ಲದ, ಕೇವಲ ಪ್ರಚಾರ ಪ್ರಸಿದ್ಧಿಗಳನ್ನೇ ನೆಚ್ಚಿಕೊಂಡ ಸಾಕಷ್ಟು ಮಂದಿ ತಾವೂ ಶಿವಭಕ್ತರು ಎನಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದರೆಂದೂ ಇದರಿಂದ ಸಾರ್ವಜನಿಕರು ಮೋಸಹೋಗುತ್ತಿದ್ದರೆಂದೂ ತೋರುತ್ತದೆ. ಅದಕ್ಕಾಗಿಯೇ ಅಂಬಿಗರ ಚೌಡಯ್ಯ ಈ ರೀತಿಯ ವರ್ತನೆಗಳನ್ನು ನಿರ್ದಾಕ್ಷಿಣ್ಯವಾಗಿ ಕಟುವಾದ ಮಾತುಗಳಲ್ಲಿ ಖಂಡಿಸಿದ್ದಾನೆ.

            ಇಂದು ಇಪ್ಪತ್ತೊಂದನೆಯ ಶತಮಾನದ ಆಧುನಿಕತೆಯ ಯುಗದಲ್ಲಿ ನಾವು ಬದುಕುತ್ತಿದ್ದೇವೆ. ಅಂದಿನ ಸಾಮಾಜಿಕ ಪರಿಸ್ಥಿತಿಗೂ ಇಂದಿನದಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದರೂ ಮೂಲಭೂತವಾದ ಗುಣಗಳು ಇನ್ನೂ ಬಿಟ್ಟುಹೋಗಿಲ್ಲ. ಅಂದಿನ ಕಾಲದಲ್ಲಿ ಪ್ರಚಾರ, ಪ್ರಸಿದ್ಧಿಗಳ ಹುಚ್ಚು ಸಾಕಷ್ಟು ಮಂದಿಗಿತ್ತು. ಅದೊಂದು ಭಕ್ತಿಯುಗವಾದುದರಿಂದ ಪ್ರಸಿದ್ಧಿಗಾಗಿ, ಪ್ರಚಾರಕ್ಕಾಗಿ ಭಕ್ತನೆನಿಸಿಕೊಳ್ಳುವುದು ಹಲವರಿಗೆ  ಅನಿವಾರ್ಯವಾಯಿತು. ಆದರೆ ಇಂದು ಇಂತಹುದೇ ಒಂದು ನಿರ್ದಿಷ್ಟ ಧೋರಣೆ ಕಂಡುಬರುವುದಿಲ್ಲವಾದರೂ ಕೇವಲ ಪ್ರಚಾರ, ಪ್ರಸಿದ್ಧಿ, ಲಾಭಗಳ ಬೆನ್ನುಹತ್ತಿದವರು ಸಾರ್ವಜನಿಕರನ್ನು ನಂಬಿಸುವುದಕ್ಕೆ, ತಾವು ಮೆರೆಯುವುದಕ್ಕೆ, ಸಮಾಜದಲ್ಲಿ ಧುರೀಣರು, ಸರ್ವಶ್ರೇಷ್ಠರು, ಜ್ಞಾನಿಗಳು, ಮೇಧಾವಿಗಳು ಎನಿಸಿಕೊಳ್ಳುವುದಕ್ಕೆ ನೂರಾರು ದಾರಿಗಳನ್ನು ಕಂಡುಕೊಂಡಿದ್ದಾರೆ. ಮತ್ತೆಮತ್ತೆ ಹೊಸಹೊಸ ದಾರಿಗಳನ್ನು ಕಂಡುಕೊಳ್ಳುತ್ತಲೇ ಇದ್ದಾರೆ. ಸಮಾಜದಲ್ಲಿ ಮೆರೆಯುತ್ತಲೇ ಮೆರೆಯುತ್ತಲೇ ಇತರರನ್ನು ನಂಬಿಸಿ ಕೊಳ್ಳೆಹೊಡೆಯುತ್ತಲೇ ಇದ್ದಾರೆ. ಹನ್ನೆರಡನೆಯ ಶತಮಾನದಲ್ಲಿ ಸಾಕಷ್ಟು ಮಂದಿ ಸಾಧಕ ಶಿವಶರಣರ ಮಾತುಗಳನ್ನು ಕೇಳಿ ತಿಳಿದು ತಮ್ಮ ಡಾಂಬಿಕತನವನ್ನು ತ್ಯಜಿಸಿ ತಮ್ಮನ್ನು ತಾವು ಸುಧಾರಿಸಿಕೊಂಡಿದ್ದರೂ ಇಂದಿನ ಪ್ರಸಿದ್ಧಿ, ಪ್ರಚಾರಗಳ ಬೆನ್ನುಹತ್ತಿದವರು, ಡಾಂಬಿಕತನವನ್ನು ಮೈಗೂಡಿಸಿಕೊಂಡವರು ಯಾರ ಮಾತಿಗೂ ಬುದ್ಧಿವಾದಕ್ಕೂ ಹಿತನುಡಿಗಳಿಗೂ ಬಗ್ಗುವವರೂ ಅಲ್ಲ, ಜಗ್ಗುವವರೂ ಅಲ್ಲ. ಈ ನಿಟ್ಟಿನಲ್ಲಿ ಹನ್ನೆರಡನೆಯ ಶತಮಾನದ ಸಾಮಾಜಿಕ ಸಂದರ್ಭದಲ್ಲಿ ಅಂಬಿಗರ ಚೌಡಯ್ಯನಾಡಿದ ಮಾತುಗಳು ಭಿನ್ನಭಿನ್ನ ನೆಲೆಗಳಲ್ಲಿ ಇಂದಿಗೂ ಅನ್ವಯವಾಗುತ್ತಿರುವುದು, ಇಂದಿನ ಡಾಂಬಿಕತನಕ್ಕೆ ಕನ್ನಡಿಹಿಡಿಯುತ್ತಿರುವುದು ಕುತೂಹಲಕಾರಿಯಾದ  ವಾಸ್ತವವಿಚಾರ.

ಡಾ. ವಸಂತ ಕುಮಾರ್, ಉಡುಪಿ.

*****

Leave a Reply

Your email address will not be published. Required fields are marked *