ಸಾಹಿತ್ಯಾನುಸಂಧಾನ

heading1

ಇಹುದೊ ಇಲ್ಲವೊ – ಡಿ.ವಿ.ಜಿ.

ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ

ಮಹಿಮೆಯಿಂ ಜಗವಾಗಿ ಜೀವವೇಷದಲಿ

ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ

ಗಹನ ತತ್ತ್ವಕೆ ಶರಣೊ – ಮಂಕುತಿಮ್ಮ

ಅನ್ವಯಕ್ರಮ:

ವಸ್ತುವೊಂದು ಇಹುದೊ ಇಲ್ಲವೊ ತಿಳಿಯಗೊಡದು, ನಿಜ ಮಹಿಮೆಯಿಂ ಜೀವವೇಷದಲಿ ಜಗವಾಗಿ ವಿಹರಿಪುದು, ಅದು ಒಳ್ಳಿತು ಎಂಬುದು ನಿಸದವಾದೊಡೆ ಆ ಗಹನ ತತ್ತ್ವಕೆ ಶರಣೊ – ಮಂಕುತಿಮ್ಮ.

ಪದ-ಅರ್ಥ:

ಇಹುದೊ-ಜೀವವನ್ನು ಹೊಂದಿದೆಯೊ; ಇಲ್ಲವೊ-ಜೀವವನ್ನು ಹೊಂದಿಲ್ಲವೊ; ತಿಳಿಯಗೊಡದು-ತಿಳಿಯಲು ಅವಕಾಶನೀಡದು;  ವಸ್ತು-ಇಂದ್ರಿಯಗೋಚರವಾಗುವ ಪದಾರ್ಥ;  ನಿಜ ಮಹಿಮೆಯಿಂ-ತನ್ನ ಹಿರಿಮೆಯಿಂದ; ಜಗವಾಗಿ– ಲೋಕಹಿತವಾಗಿ ಪರಿವರ್ತನೆಗೊಂಡು,; ಜೀವವೇಷದಲಿ-ಪ್ರಾಣವನ್ನು ಹೊಂದಿ, ಚೈತನ್ಯವನ್ನು ಹೊಂದಿ; ವಿಹರಿಪುದು-ಸಂಚಾರಮಾಡುತ್ತದೆ, ವ್ಯವಹರಿಸುತ್ತದೆ; ಅದು ಒಳ್ಳಿತು-ಅದು ಒಳ್ಳೆಯದು, ಅದು ಹಿತವಾದುದು; ನಿಸದವಾದೊಡೆ-ಸತ್ಯವೆಂದಾದರೆ, ಋಜುವೆಂದಾದರೆ, ನಿಶ್ಚಯವೆಂದಾದರೆ; ಗಹನ ತತ್ತ್ವ-ರಹಸ್ಯವಾದ ಸಿದ್ಧಾಂತ;  ಶರಣೊ-ಪ್ರಣಾಮ.

ಈ ಲೋಕದಲ್ಲಿನ ಪ್ರತಿಯೊಂದು ವಸ್ತುವೂ ಹತ್ತುಹಲವು ಬಗೆಗಳಲ್ಲಿ ಅಸ್ತಿತ್ವವನ್ನು ಹೊಂದುವ, ಈ ಜಗದ ಚಲನಶೀಲತೆಯಲ್ಲಿ ಸಮ್ಮಿಳಿತಗೊಳ್ಳುವ, ಚೈತನ್ಯವನ್ನು ಹೊಂದಿ ಆಪ್ಯಾಯಮಾನವೆನಿಸುವ, ಸಕಲ ಜೀವಸಂಕುಲಕ್ಕೆ ಪೂರಕವಾಗಿರುವ ಲೋಕಸತ್ಯವೊಂದನ್ನು ಡಿ.ವಿ.ಜಿ.ಯವರು ಈ ಪದ್ಯದಲ್ಲಿ ಪ್ರಸ್ತುತಪಡಿಸಿದ್ದಾರೆ. ಈ ಜಗತ್ತಿನಲ್ಲಿರುವ ಒಂದೊಂದು ವಸ್ತುವಿನಲ್ಲಿಯೂ ಅಗೋಚರವಾಗಿ ಇರಬಹುದಾದ, ಅಲೌಕಿಕವಾದ ಅಥವಾ ಚಲನಶೀಲವಾದ ಶಕ್ತಿಯನ್ನು ತಿಳಿದುಕೊಳ್ಳುವುದು ಸುಲಭಸಾಧ್ಯವಲ್ಲ. ಲೋಕದಲ್ಲಿ ಇಂದ್ರಿಯಗೋಚರವಾಗುವ ಪ್ರತಿಯೊಂದು ಪದಾರ್ಥವೂ ತನ್ನ ಹಿರಿಮೆಯಿಂದ, ತನಗೆ ಪ್ರಕೃತಿಯಲ್ಲಿ ಆರೋಪಿತವಾದ ಶಕ್ತಿಯಿಂದ ಚೈತ್ಯನ್ಯವನ್ನು ಹೊಂದಿ ಹೊಸರೂಪವನ್ನು ತಾಳುತ್ತದೆ. ಜೀವತುಂಬಿಕೊಂಡು ಈ ಜೀವಜಗತ್ತಿನ ಅವಿಭಾಜ್ಯ ಅಂಗವಾಗುತ್ತದೆ. ಲೋಕವ್ಯವಹಾರದಲ್ಲಿ ಸಕ್ರಿಯಗೊಳ್ಳುತ್ತದೆ. ಸಕಲ ಚರಾಚರಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದುತ್ತದೆ. ಹೀಗಿರುವುದರಿಂದಲೇ ಸಕಲ ಚರಾಚರಗಳಿಗೆ ಅದು ಒಳಿತಾಗಿ ಪರಿಣಮಿಸುತ್ತದೆ. ಹಿತವೆನಿಸಿಕೊಳ್ಳುತ್ತದೆ. ಅದೇ ಸತ್ಯವೆಂದೆನಿಸಿಕೊಂಡಿರುವುದರಿಂದ ಅಂತಹ ರಹಸ್ಯವಾದ ತತ್ತ್ವಕ್ಕೆ ಮಣಿಯಲೇಬೇಕು ಎನ್ನುತ್ತಾನೆ ಮಂಕುತಿಮ್ಮ.

ಈ ಲೋಕ ಜಡವೆಂಬಂತೆ ಕಾಣಿಸಿದರೂ ಅದು ಜಡವಲ್ಲ. ಇಲ್ಲಿನ ಪ್ರತಿಯೊಂದು ವಸ್ತುಗಳಲ್ಲಿಯೂ ಈ ಲೋಕದ ಆಗುಹೋಗುಗಳಿಗೆ ಸ್ಪಂದಿಸುವ, ಎಲ್ಲವನ್ನೂ ನೇರ್ಪುಗೊಳಿಸುವ ಶಕ್ತಿಯೂ ಇದೆ, ಸತ್ವವೂ ಇದೆ. ಆದರೆ ಯಾವುದರಲ್ಲಿ ಯಾವ ರೀತಿಯ ಶಕ್ತಿಯಿದೆ? ಯಾವ ವಿಧದ ಸತ್ವವಿದೆ? ಎಂಬುದನ್ನು ಕಂಡುಕೊಳ್ಳುವುದು ಸುಲಭಸಾಧ್ಯವಲ್ಲ. ಸ್ಥಿರವಾಗಿದ್ದು ಆಪ್ಯಾಯಮಾನವೆನಿಸುವ ಪರ್ವತಗಳು, ಬೆಟ್ಟಗುಡ್ಡಗಳು, ಶಿಲಾಪ್ರಕಾರಗಳು; ಸದಾ ಬೆಳೆಯುತ್ತ ಹೊಸತನವನ್ನು ಮೈಗೂಡಿಸಿಕೊಳ್ಳುವ ಮರ, ಗಿಡ, ಬಳ್ಳಿಗಳು; ಪ್ರಾಣಿ, ಸಸ್ಯ, ಜೀವಸಂಕುಲಕ್ಕೆ ನೀರುಣಿಸುವ ಸರೋವರಗಳು, ನಿರಂತರ ಹರಿಯುವ ನದಿಗಳು; ಧುಮುಕುತ್ತ ಕಂಗೊಳಿಸುವ ಜಲಪಾತಗಳು;  ವಿವಿಧ ಪರಿಸರಗಳಲ್ಲಿ ವಾಸಿಸುವ ವೈವಿಧ್ಯಮಯ ಜೀವಜಂತುಗಳು; ಒಂದೇ ನೀರನ್ನುಂಡರೂ ರುಚಿವೈವಿಧ್ಯವನ್ನು ಹೊಂದಿರುವ ಹಣ್ಣು-ಹಂಪಲುಗಳು, ಪರಿಮಳಯುಕ್ತವಾಗಿ ಆಕಾರವೈವಿಧ್ಯಗಳಿಂದ ಅರಳುವ ಹೂವುಗಳು – ಹೀಗೆ ಎಲ್ಲವೂ ಹತ್ತು ಹಲವು ಬಗೆಗಳಲ್ಲಿ ಈ ಪ್ರಕೃತಿಗೆ ವೈವಿಧ್ಯಮಯವಾಗಿ ಜೀವಚೈತನ್ಯವನ್ನು ತುಂಬಿವೆ. ಹಾಗಾಗಿಯೇ ಇವೆಲ್ಲವೂ ಚರಾಚರಗಳೆನಿಸಿದರೂ ಇಲ್ಲಿ ವಾಸಿಸುವ ಜೀವಸಂಕುಲಕ್ಕೆ ಹೊಸಹುರುಪನ್ನು, ಹೊಸಶಕ್ತಿಯನ್ನು, ಹೊಸತನವನ್ನು, ಹೊಸಭಾವವನ್ನು, ಹೊಸಜೀವವನ್ನು ನೀಡುತ್ತಲೇ ಇವೆ. ಹೀಗೆ ವೈವಿಧ್ಯವನ್ನು ತುಂಬಿಕೊಂಡು ಕ್ಷಣಕ್ಷಣಕ್ಕೂ ನಾವೀನ್ಯವನ್ನು ನೀಡುತ್ತಲೇ ಇರುವುದರಿಂದ ಲೋಕವ್ಯವಹಾರಗಳು ಸಕ್ರಿಯಗೊಳ್ಳುತ್ತಲೇ ಇವೆ. ಇವೆಲ್ಲವುಗಳ ಹಿಂದಿರುವ ಶಕ್ತಿ ನಿಸ್ತೇಜವಲ್ಲ, ನೀರಸವಲ್ಲ, ಜಡವೂ ಅಲ್ಲ. ಅದು ನಿತ್ಯನೂತನ.

ಈ ಸೃಷ್ಟಿಯ ವೈಚಿತ್ರ್ಯಗಳಲ್ಲಿ ಹುದುಗಿರುವ ನಾವೀನ್ಯದ ಹಿಂದೆ ಒಂದು ಅಲೌಕಿಕ ಹಾಗೂ ಅಗಾಧಶಕ್ತಿಯೊಂದು ವ್ಯವಸ್ಥಿತವಾಗಿ  ಪ್ರವರ್ತಿಸುತ್ತಿದೆ.          ಆ ಶಕ್ತಿಯಿಂದಾಗಿಯೇ ಮನುಷ್ಯ ಸಹಿತ ಸಕಲ ಜೀವಜಂತುಗಳ ಬದುಕಿಗೆ ಪೂರಕವಾದ ವ್ಯವಸ್ಥೆಯೊಂದು ಕಲ್ಪಿತವಾಗಿದೆ.  ಅದು ಮಾನವ ನಿರ್ಮಿತವಲ್ಲ. ಅದರ ಮೇಲೆ ಮನುಷ್ಯನಿಗೆ ಹಿಡಿತವಿಲ್ಲ. ಅದು ಆತನ ಅಂಕೆಗೆ ಸಿಗುವುದೂ ಇಲ್ಲ. ಯಾವುದು ಅನಾದಿಯೊ, ಯಾವುದು ನಮ್ಮ ಶಕ್ತಿ-ಸಾಮರ್ಥ್ಯಗಳಿಗೆ ಮೀರಿರುವುದೊ, ಯಾವುದು ತನ್ನ ಅಲೌಕಿಕಶಕ್ತಿಯಿಂದ ಇಡೀ ಜಗತ್ತನ್ನೇ ಬೆಳಗುತ್ತಿದೆಯೊ, ಯಾವುದು ಈ ಭೂಮಿಯಲ್ಲಿ ಮತ್ತೆಮತ್ತೆ ಹೊಸತನವನ್ನು ತುಂಬಿ ಇಲ್ಲಿ ವಾಸಿಸುವ ಸಕಲ ಜೀವಜಂತುಗಳ ಬದುಕಿಗೆ ಪೂರಕವಾಗಿದ್ದು ಆಶಾದಾಯಕವಾಗಿದೆಯೊ, ಯಾವುದು ಸಕಲಜೀವಜಂತುಗಳಲ್ಲಿ ಹೊಸಹೊಸ ಭರವಸೆಗಳನ್ನು ಮೂಡಿಸುತ್ತ ಸಕಲಜೀವಜಂತುಗಳನ್ನು ಕ್ರಿಯಾತ್ಮಕಗೊಳಿಸುತ್ತಿದೆಯೊ, ಯಾವುದು ನೊಂದ ಮನಸ್ಸನ್ನು ಹತ್ತುಹಲವು ರೀತಿಗಳಿಂದ ಸಾಂತ್ವಾನಗೊಳಿಸುತ್ತಿದೆಯೊ, ಯಾವುದು ಸತತವಾಗಿ ಗೂಢವಾಗಿದ್ದು ದೃಷ್ಟಿಗಗೋಚರವಾಗಿಯೇ ಉಳಿದು ಭೂಮಿಯಲ್ಲಿನ ಸುವ್ಯವಸ್ಥೆಗೆ ಕಾರಣವಾಗಿದೆಯೊ ಅಂತಹ ವ್ಯವಸ್ಥೆಗೆ, ಅಂತಹ ಸತ್ಯಕ್ಕೆ, ಅದರ ಗಹನತೆಗೆ  ಹಾಗೂ ಅದನ್ನು ವಿರೋಧಿಸದೆ, ಕ್ಷುಲ್ಲಕವೆಂದು ಪರಿಭಾವಿಸದೆ ಅದರಿಂದ ಭೂಮಿಯ ಸಕಲ ಜೀವಜಂತುಗಳ ಬದುಕಿಗೆ ಒಳಿತಿದೆ ಎಂದು ಪರಿಭಾವಿಸಿ ಮಣಿಯುವುದೇ ಮನುಷ್ಯನಿಗೆ ಭೂಷಣ.

ಈ ವ್ಯವಸ್ಥೆಯಲ್ಲಿ ಅಧ್ವಾನವಾದರೆ ಅದು ಒಂದಲ್ಲ ಒಂದು ರೀತಿಯಲ್ಲಿ ಸಕಲ ಜೀವರಾಶಿಯ ಆಳಿವುಗಳಿಗೆ ಕಾರಣವಾಗುತ್ತದೆ ಎಂಬುದನ್ನು ಅರ್ಥೈಸುವಲ್ಲಿ ನಾವುಂದು ಸೋಲುತ್ತಿದ್ದೇವೆ. ಇಂದಿನ  ಅತಾರ್ಕಿಕತೆಯಿಂದ ಕೂಡಿದ ಆಧುನಿಕತೆ, ಹಣದ ಮದದೊಂದಿಗೆ ಜೊತೆಗೂಡಿರುವ  ಮಿತಿಮೀರಿದ ದುರಹಂಕಾರ, ವಿವೇಚನಾರಹಿತವಾದ ಕಾರ್ಯವೈಖರಿ, ರೂಢಿಗತ ವ್ಯವಸ್ಥೆಯನ್ನೇ ಅಧ್ವಾನಗೊಳಿಸಿ ಲಾಭಗಳಿಸುವ ಅತಿಯಾದ ಬುದ್ಧಿವಂತಿಕೆ,  ಪ್ರಕೃತಿಧರ್ಮವನ್ನು ಮೀರಿನಿಲ್ಲುವಂತಹ ದುಷ್ಟಪ್ರವೃತ್ತಿಗಳು ರೂಢಿಗತವಾದ ಲೋಕವ್ಯವಸ್ಥೆಯನ್ನು ಅರ್ಥಮಾಡಿಸುವಲ್ಲಿ ಸೋಲುತ್ತಲೇ ಇವೆ. ಹಾಗಾಗಿ ಮನುಷ್ಯ ತಾನು ಬದುಕಿನಲ್ಲಿ ವಿಶ್ವಾಸವನ್ನು ಕಳೆದುಕೊಳ್ಳುವುದರ ಜೊತೆಗೆ ಇತರ ಜೀವಿಗಳಿಗೂ ಕಂಟಕಪ್ರಾಯನೂ ವಿನಾಶಕಾರಿಯೂ ಆಗುತ್ತಿದ್ದಾನೆ. ಹಾಗಾಗಿ ಪ್ರಕೃತಿದತ್ತವಾದ ವ್ಯವಸ್ಥೆಯನ್ನು ಉಳಿಸಿಕೊಂಡು “ಲೋಕಾ ಸಮಸ್ತಾ ಸುಖಿನೋ ಭವಂತು” ಎಂಬ ಪೂರ್ವಸೂರಿಗಳ ಮಾತನ್ನು ಪುರಸ್ಕರಿಸುತ್ತ, ತಾನು ಬದುಕಿ ಇನ್ನಿತರ ಜೀವಜಾಲವನ್ನು ಬದುಕಗೊಡಬೇಕು ಎಂದಾದರೆ ಈ ಗಹನ ತತ್ತ್ವಕ್ಕೆ ಶರಣಾಗದೆ ವಿಧಿಯಿಲ್ಲ.

ಡಾ. ವಸಂತ್ ಕುಮಾರ್, ಉಡುಪಿ

*****

 

Leave a Reply

Your email address will not be published. Required fields are marked *