ಪ್ರಸ್ತಾವನೆ:
ಇದು ೧೯೪೬ ರಲ್ಲಿ ಪ್ರಕಟವಾದ ನವ್ಯಕವಿ ಎಂ. ಗೋಪಾಲಕೃಷ್ಣ ಅಡಿಗರ “ಭಾವತರಂಗ” ಎಂಬ ಮೊದಲ ಕವನಸಂಕಲನದಲ್ಲಿರುವ ಭಾವಗೀತೆ. ಈ ಭಾವಗೀತೆ ನವೋದಯದ ಧೋರಣೆಯನ್ನು ಮೈಗೂಡಿಸಿಕೊಂಡು ಬದುಕಿನ ರಮ್ಯತೆಯೊಂದಿಗೆ ಅದರ ಗೂಢತೆಯನ್ನೂ ಮನುಷ್ಯಬದುಕಿನ ಏರಿಳಿತಗಳನ್ನೂ ವಾಸ್ತವತೆಯನ್ನೂ ಹೋರಾಟವನ್ನೂ ಅನಾವರಣಗೊಳಿಸುತ್ತದೆ. ಕನ್ನಡದಲ್ಲಿ ನವ್ಯದ ಧೋರಣೆ ಇನ್ನೂ ತಳವೂರಲು ಹಾತೊರೆಯುತ್ತಿದ್ದ ಕಾಲದಲ್ಲಿ ರಚನೆಯಾದ ಭಾವಗೀತೆಯಾದರೂ ಇಲ್ಲಿ ನವ್ಯದ ಹೊಳಹುಗಳನ್ನು ಕಾಣಬಹುದು. ಕವಿ ಎಂ. ಗೋಪಾಲಕೃಷ್ಣ ಅಡಿಗರ ಅತ್ಯುತ್ತಮ ಭಾವಗೀತೆಗಳಲ್ಲಿ ಇದೂ ಒಂದಾಗಿದ್ದು, ಒಂದೆಡೆ ಬದುಕಿನ ದರ್ಶನವನ್ನು ಮಾಡಿಸಿದರೆ ಇನ್ನೊಂದೆಡೆ ಅದರ ಕಟುವಾಸ್ತವತೆಯನ್ನೂ ಅನಾವರಣಗೊಳಿಸುತ್ತದೆ. ಹುಟ್ಟುಸಾವುಗಳ ನಡುವೆ ಮನುಷ್ಯಬದುಕಿನ ಹೊಯ್ದಾಟ ಹಾಗೂ ಹೋರಾಟಗಳು ಹೇಗೆ ನಡೆಯುತ್ತವೆ ಎಂಬುದನ್ನು ಅಡಿಗರು ಇಲ್ಲಿ ತಳ ಒಡೆದ ಹಾಯಿದೋಣಿಯ ಪ್ರತಿಮೆಯ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ, ಭಾವನಾತ್ಮಕವಾಗಿ ಹಾಗೂ ಅಷ್ಟೇ ನಿಷ್ಠುರವಾಗಿ ಚಿತ್ರಿಸಿದ್ದಾರೆ. ಇದು ಭಾವಗೀತೆಯಾದರೂ ಅದಕ್ಕಿಂತಲೂ ಮಿಗಿಲಾಗಿ ಬದುಕಿನ ದರ್ಶನಗೀತೆ ಎನಿಸಿಕೊಳ್ಳುತ್ತದೆ.
ಈ ಭಾವಗೀತೆ ರಚನೆಯಾಗಿ ಸುಮಾರು ಎಂಬತ್ತು ವರ್ಷಗಳು ಸಂದುಹೋಗುತ್ತಿದ್ದರೂ ಇದರ ವಸ್ತುನಿಷ್ಠತೆಗೆ, ಅದು ಪ್ರತಿಪಾದಿಸುವ ಮೌಲ್ಯಗಳಿಗೆ ಹಾಗೂ ಅದು ತೋರಿಸುವ ದರ್ಶನ- ನಿದರ್ಶನಗಳಿಗೆ ಯಾವ ಧಕ್ಕೆಯೂ ಒದಗಿಲ್ಲ, ಲೋಪವೂ ಉಂಟಾಗಿಲ್ಲ. ಅದು ಇಂದಿಗೂ ಬದುಕಿನ ದರ್ಶನವನ್ನು ಮಾಡಿಸುತ್ತ ಅದರ ವಾಸ್ತವತೆಯನ್ನು ಕಣ್ಣಮುಂದಿಡುತ್ತ, ಸಹೃದಯರಲ್ಲಿ ತಿಳಿವಳಿಕೆಯನ್ನು ಮೂಡಿಸುತ್ತ, ಸಾರ್ವಕಾಲಿಕಮೌಲ್ಯವನ್ನು ಪಡೆದುಕೊಳ್ಳುತ್ತಲೇ ಇದೆ. ಇನ್ನೂ ಒಂದಷ್ಟು ವರ್ಷಗಳು ಸಂದುಹೋದರೂ ಇದರ ಸಾರ್ವಕಾಲಿಕಮೌಲ್ಯಗಳಿಗೆ ಯಾವ ಧಕ್ಕೆಯೂ ಒದಗಲಾರದು. ಹೊಸಗನ್ನಡದ ಅತ್ಯಂತ ಶ್ರೇಷ್ಠವಾದ, ಅತ್ಯಂತ ಮಧುರವಾದ, ಅರ್ಥಪೂರ್ಣವಾದ ಹಾಗೂ ಜೀವನದರ್ಶನ ಮಾಡಿಸುವ ಭಾವಗೀತೆಗಳಲ್ಲಿ ಇದೂ ಒಂದಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಎಂದೆಂದಿಗೂ ಆ ಸ್ಥಾನಮಾನಗಳನ್ನು ಕಾಯ್ದಿಟ್ಟುಕೊಳ್ಳುವ ಹಾಗೂ ಕಾಪಿಟ್ಟುಕೊಳ್ಳುವ ಶಕ್ತಿಯೂ ಸತ್ವವೂ ಅದಕ್ಕಿದೆ. ಈ ಭಾವಗೀತೆಯನ್ನು ಕವಿ ಅಡಿಗರು, “ಇದು ಬಾಳು” ಎಂದು ಹೆಸರಿಸಿದರೂ ಕನ್ನಡ ಕಾವ್ಯವಾಙ್ಮಯದಲ್ಲಿ ಇದು “ಅಳುವ ಕಡಲೊಳು” ಎಂಬ ಹೆಸರಿನಲ್ಲಿಯೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.
೧
ಅಳುವ ಕಡಲೊಳು ತೇಲಿ ಬರುತಲಿದೆ
ನಗೆಯ ಹಾಯಿದೋಣಿ;
ಬಾಳ ಗಂಗೆಯ ಮಹಾಪೂರದೊಳೂ
ಸಾವಿನೊಂದು ವೇಣಿ
ನೆರೆತಿದೆ, ಬೆರೆತಿದೆ, ಕುಣಿವ ಮೊರೆವ
ತೆರೆತೆರೆಗಳೋಳಿಯಲ್ಲಿ
ಜನನ ಮರಣಗಳ ಉಬ್ಬುತಗ್ಗು ಹೊರ
ಳುರುಳುವಾಟದಲ್ಲಿ!
ಕಡಲು ಅತ್ಯಂತ ಅಗಾಧವೂ ವಿಶಾಲವೂ ಭೀಕರವೂ ಆಗಿದ್ದು, ಗಾಳಿಯ ಬೀಸುವಿಕೆ ಅನುಗುಣವಾಗಿ ನೆರೆಯುವ, ಬೆರೆಯುವ, ಮೊರೆಯುವ ಹತ್ತಾರು, ನೂರಾರು, ಸಾವಿರಾರು ತೆರೆಗಳ ಮಹಾಪೂರವನ್ನು ತನ್ನೊಳಗೆ ಹುದುಗಿಟ್ಟುಕೊಂಡಿದೆ. ಅದು ತನ್ನ ವರ್ತುಲಕ್ಕೆ ಸಿಕ್ಕಿದುದನ್ನು ಸೆಳೆದುಕೊಂಡು, ಎಳೆದುಕೊಂಡು ಉಲ್ಲೋಲಕಲ್ಲೋಲಗೊಳಿಸುತ್ತ ತನ್ನಿಷ್ಟದಂತೆ ಬಳಸಿಕೊಂಡು ವಿರೂಪಗೊಳಿಸಬಹುದು, ಅಧ್ವಾನಗೊಳಿಸಬಹುದು ಅಥವಾ ಇನ್ನೂ ಮುಂದುವರಿದು ಹೊಸಕಿಹಾಕಬಹುದು. ಅದರಲ್ಲಿ ಸಂಚರಿಸುವ ಹಾಯಿದೋಣಿಗಳನ್ನು ಅದು ತನ್ನ ಅಲೆಗಳ ಉಬ್ಬುತಗ್ಗುಗಳಲ್ಲಿ ಓಲಾಡಿಸುತ್ತ, ಹೊರಳಾಡಿಸುತ್ತ ಸೆಳೆದು ಎಳೆದೊಯ್ಯುತ್ತದೆ, ಉರುಳಾಡಿಸುತ್ತ ತನ್ನಾಟವನ್ನು ಮೆರೆಸುತ್ತದೆ. ಮೆರೆಸಿ ಭಯಭೀತಗೊಳಿಸುತ್ತದೆ. ಗೊತ್ತುಗುರಿಯಿಲ್ಲದೆಡೆಗೆ ಸೆಳೆದೆಳೆಯುತ್ತ ಸಾವಿನ ದವಡೆಗೂ ತಳ್ಳುತ್ತದೆ. ಅದರ ಅಗಾಧಶಕ್ತಿಯನ್ನು, ಸೆಳೆತದ ತೀವ್ರತೆಯನ್ನು, ನೊಣೆಯುವ ಹಪಹಪಿಕೆಯನ್ನು ತಡೆಯಲಾಗದು, ನಿವಾರಿಸಲೂ ಆಗದು. ಹಾಗೆಂದು ಮನುಷ್ಯ ಕಡಲಿಂದ ದೂರವಿದ್ದುಕೊಂಡು ದೋಣಿ ನಡೆಸದೆ ತಾನು ಸುರಕ್ಷಿತವಾಗಿರುತ್ತೇನೆ ಎನ್ನಲಾಗದು. ಮನುಷ್ಯನ ಬದುಕಿಗೆ ಹಾಗೂ ಅದರ ಉಳಿವಿಗೆ ಅಳುವ, ಅಳಿಸುವ ಕಡಲೂ ಬೇಕು. ಮನಸ್ಸಿನ ತಣಿವಿಕೆಗೆ ಅದರ ನೆರೆತೆರೆಗಳೂ ಅವುಗಳ ಹೊರಳುವ, ಉರುಳುವ ಆಟಾಟೋಪಗಳೂ ಬೇಕು. ಹೀಗೆ ನೆರೆಯುತ್ತ ನೆರೆಸುವ, ಬೆರೆಯುತ್ತ ಬೆರೆಸುವ, ಹೊರಳುತ್ತ ಹೊರಳಿಸುವ, ಉರುಳುತ್ತ ಉರುಳಿಸುವ ಕಡಲಿನ ಆಟದಲ್ಲಿ, ಅದರ ಸಹವಾಸದಲ್ಲಿ ವಾಸ್ತವವನ್ನು ಮನಗಂಡು, ಹೆಜ್ಜೆಹೆಜ್ಜೆಗೂ ತಿಳಿವಳಿಕೆಯನ್ನು ಪಡೆದುಕೊಳ್ಳುತ್ತ ಜಾಣತನದಿಂದ ದೋಣಿನಡೆಸುವುದೇ ನಾವಿಕನಿಗಿರುವ ಅನಿವಾರ್ಯ ದಾರಿ.
ಮನುಷ್ಯಬದುಕು ಎಂಬುದು ಅಳುವಿನ ತೆರೆಗಳನ್ನೇ ತುಂಬಿಕೊಂಡಿರುವ ಕಡಲು. ಹಾಗಾಗಿ ಅದು ಅಳುವ ಕಡಲು. ಜೀವನವೆಂಬುದು ಆ ಕಡಲಿನಲ್ಲಿ ತೇಲಿಬರುತ್ತಿರುವ ನಗೆಯ ಹಾಯಿದೋಣಿ. ಹಾಯಿಯನ್ನು ಕಟ್ಟಿಕೊಂಡಿರುವ ದೋಣಿ ಗಾಳಿಬೀಸುವಿಕೆಯ ವಿರುದ್ಧದಿಕ್ಕಿನಲ್ಲಿ ಚಲಿಸುತ್ತದೆ. ಗಾಳಿಯ ಬೀಸುವಿಕೆಗನುಗುಣವಾಗಿ ಅದು ವೇಗವಾಗಿಯೋ ನಿಧಾನವಾಗಿಯೋ ಯಾವ ಹಿಡಿತವೂ ಇಲ್ಲದೆ ಅಪಾಯಕಾರಿಯಾಗಿಯೋ ಯದ್ವಾತದ್ವವಾಗಿಯೋ ಸಾಗಬಹುದು. ಗಾಳಿಯ ಬೀಸುವಿಕೆ ಹಾಗೂ ದೋಣಿಯ ಸಾಗುವಿಕೆ ನಮ್ಮ ವಶದಲ್ಲಿಲ್ಲ. ಪ್ರಯತ್ನ ನಮ್ಮದು, ಆದರೆ ಹಿಡಿತವಿಲ್ಲ. ಬದುಕೆಂಬುದು ಕಷ್ಟಕಾರ್ಪಣ್ಯಗಳನ್ನು, ದುಃಖನೋವುಗಳನ್ನು, ಹಿಂಸೆ- ಅವಮಾನಗಳನ್ನು ಮೈಗೂಡಿಸಿಕೊಂಡು ಭೋರ್ಗರೆಯುವ, ಮೊರೆಯುವ, ಅಳುವ ಕಡಲು. ಮುನುಷ್ಯನ ಹುಟ್ಟು ಎಂಬುದು ಅಳುವ ಕಡಲಿನಲ್ಲಿ ತೇಲಿ ಬರುತ್ತಿರುವ ಸಂಭ್ರಮದ ಹಾಯಿದೋಣಿ. ಕಡಲಿನಂತೆ ಬದುಕಿನಲ್ಲಿಯೂ ಹತ್ತಾರು ನೂರಾರು ಕಷ್ಟಕಾರ್ಪಣ್ಯಗಳು, ಹಿಂಸೆ ಅವಮಾನಗಳು, ದುಃಖದುಮ್ಮಾನಗಳು. ಇವೆಲ್ಲವೂ ಕಡಲಲ್ಲಿ ಬೀಸುವ ಗಾಳಿಯಂತೆ. ಗಾಳಿಯ ಸೆಳೆತಕ್ಕೆ, ಅದರ ರಭಸಕ್ಕೆ ಒಳಗಾದ ಹಾಯಿದೋಣಿಯಂತೆ ಬದುಕನ್ನು ಎಲ್ಲಿಗೋ ಒಯ್ಯಬಲ್ಲವು. ಇವೆಲ್ಲವೂ ಬಾಳಗಂಗೆಯ ಮಹಾಪೂರದಲ್ಲಿ ಒತ್ತೊತ್ತಾಗಿ ಬಂದು ಸೆಳೆಯುವ ಸಾವಿನ ಪ್ರವಾಹ. ಈ ಸಾವಿನ ಪ್ರವಾಹವು ಜೀವನದ ಸುತ್ತ ನೆರೆಯುತ್ತ, ಬೆರೆಯುತ್ತ, ಕುಣಿದು ಕುಣಿದು ಮೊರೆಯುತ್ತ ತೆರೆತೆರೆಗಳನ್ನು ಸೃಷ್ಟಿಸುತ್ತ ಓಳಿಯೋಳಿಯಾಗಿ ಸುತ್ತುವರಿಯುತ್ತದೆ. ನೋಡುವುದಕ್ಕೇನೋ ಸುಂದರ, ಮನೋಹರ. ಆದರೆ ಮೈಮರೆತರೆ ಅಷ್ಟೇ ಅಪಾಯಕಾರಿ. ಈ ಬದುಕೇ ಹೀಗೆ ಜನನ ಮರಣಗಳೆಂಬ ಉಬ್ಬುತಗ್ಗುಗಳ ನಡುವ ಹೊರಳುವ ಉರುಳುವ ಆಟದಲ್ಲಿ ದಾಳವಾಗಿ ನೊಣೆದು ನುಂಗುತ್ತದೆ. ಹುಟ್ಟಿದ ಮೇಲೆ ಜೀವಿಸದೆ ವಿಧಿಯಿಲ್ಲ. ಹಾಗಾಗಿ ಬದುಕೆಂಬ ಅಳುವ ಕಡಲಿನ ಉಲ್ಲೋಲಕಲ್ಲೋಲತೆಯನ್ನು ಮನಗಂಡು, ಅದರಲ್ಲಿನ ಕಷ್ಟಕಾರ್ಪಣ್ಯಗಳನ್ನು, ದುಃಖನೋವುಗಳನ್ನು ಕಂಡುಕೊಂಡು ನೋವುಂಡು ನಗುಚೆಲ್ಲುತ್ತ, ನಮಗೆ ನಾವೇ ಇತಿಮಿತಿಗಳನ್ನು ಹಾಕಿಕೊಳ್ಳುತ್ತ ಆರಕ್ಕೇರದೆ ಮೂರಕ್ಕಿಳಿಯದೆ, ಸುಖದಲ್ಲಿ ಅತಿಯಾಗಿ ಹಿಗ್ಗದೆ, ದುಃಖದಲ್ಲಿ ಅತಿಯಾಗಿ ಕುಗ್ಗದೆ, ನಾಳೆ ಒದಗಬಹುದಾದ ಸುಖಸಂತೋಷಗಳ ಮೇಲೆ ಭರವಸೆಗಳನ್ನಿಟ್ಟುಕೊಂಡು ಬದುಕೆಂಬ ಹಾಯಿದೋಣಿಯನ್ನು ನಗೆಯ ಹೊನಲಿನೆಡೆಗೆ ಸಾಗಿಸಬೇಕಾದುದು ಅನಿವಾರ್ಯವೂ ಹೌದು, ಅಗತ್ಯವೂ ಹೌದು, ಕರ್ತವ್ಯವೂ ಕೂಡಾ.
೨
ಆಶೆಬೂದಿತಳದಲ್ಲು ಕೆರಳುತಿವೆ
ಕಿಡಿಗಳೆನಿತೊ ಮರಳಿ
ಮುರಿದು ಬಿದ್ದ ಮನಮರದ ಕೊರಡೊಳೂ
ಹೂವು ಹೂವು ಅರಳಿ!
ಕೂಡಲಾರದೆದೆಯಾಳದಲ್ಲು ಕಂ
ಡೀತು ಏಕಸೂತ್ರ
ಕಂಡುದುಂಟು ಬೆಸೆದೆದೆಗಳಲ್ಲು ಭಿ
ನ್ನತೆಯ ವಿಕಟ ಹಾಸ್ಯ!
ಮನುಷ್ಯನ ದುಃಖಕ್ಕೆ, ನೋವಿಗೆ, ಅಳುವಿಗೆ, ಆಳಿವಿಗೆ, ಹಿಂಸೆಗೆಳೆಲ್ಲವಕ್ಕೂ ಆತನ ಆಶೆಯೇ ಮೂಲ. ಅದು ಬೂದಿಮುಚ್ಚಿಕೊಂಡು ಒಳಗೊಳಗೆ ಉರಿಯುತ್ತಿರುವ ಕೆಂಡದಂತೆ. ಬೂದಿತಳದಲ್ಲಿರುವ ಕೆಂಡವು ಸುಮ್ಮನಿರಲಾರದೆ ಮರಳಿ ಮರಳಿ ಕಿಡಿಗಳನ್ನು ಕೆದರುತ್ತಿರುವಂತೆ ಮನುಷ್ಯನ ಮನದಾಳದಲ್ಲೂ ಆಶೆಯೆಂಬ ಬೂದಿತಳದಲ್ಲಿಯೂ ಹತ್ತಾರು, ನೂರಾರು, ಸಾವಿರಾರು ಆಶೆಗಳ ಕಿಡಿಗಳು ಕೆದರುತ್ತಲೇ ಇರುತ್ತವೆ. ಬೆಂಕಿಕಿಡಿಗಳು ಮೆಲ್ಲಮೆಲ್ಲನೆ ಸುಡುತ್ತಲೇ ಹೋಗುವಂತೆ ಆಶೆಯೆಂಬ ಬೂದಿತಳದಲ್ಲಿ ಅಗೋಚರವಾಗಿ ಹುದುಗಿರುವ ಬೆಂಕಿಕಿಡಿಗಳು ಮನುಷ್ಯನ ಜೀವಿತವನ್ನೇ ಮೆಲ್ಲಮೆಲ್ಲನೆ ಸುಡಲಾರಂಭಿಸುತ್ತವೆ. ಆದರೂ ಅವು ಮನುಷ್ಯನ ಅರಿವಿಗೆ ಬರುವುದೇ ಇಲ್ಲ. ಒಂದನ್ನು ಈಡೇರಿಸಿದಂತೆ ಅವುಗಳನ್ನನುಸರಿಸಿ ಹತ್ತಾರು, ನೂರಾರು ಹೊಸ ಆಶೆಗಳು ಹುಟ್ಟಿಕೊಳ್ಳುವುದರಿಂದ ಮತ್ತು ಅವುಗಳೆಲ್ಲವನ್ನೂ ಈಡೇರಿಸಿಕೊಳ್ಳಲು ಮನುಷ್ಯ ಹಾತೊರೆಯುವುದರಿಂದ ಬದುಕು ಕ್ಷಯವಾಗಬಹುದೆಂಬ ಕನಿಷ್ಠ ಜ್ಞಾನವೂ ಅವನಿಗಿರುವುದಿಲ್ಲ. ಮತ್ತೆಮತ್ತೆ ಹುಟ್ಟಿಕೊಳ್ಳುವ ಹೊಸಹೊಸ ಆಶೆಗಳ ಈಡೇರಿಸುವಿಕೆಯ ಭರದಲ್ಲೆಲ್ಲ ಎಲ್ಲವೂ ಸೊಗಸಾಗಿ, ಹಿತವಾಗಿ, ಸುಂದರವಾಗಿ, ಮನೋಹರವಾಗಿ, ಆಪ್ಯಾಯಮಾನವಾಗಿ ಕಾಣಿಸುತ್ತವೆ. ಅಸಾಧ್ಯವೆನಿಸುವಂತಹುದೂ ಸಾಧ್ಯವೆನಿಸುತ್ತದೆ. ಅಗತ್ಯವಿಲ್ಲದವೂ ಅಗತ್ಯವೆನಿಸುತ್ತವೆ. ಸುಂದರವಲ್ಲದವೂ ಸುಂದರವೆನಿಸುತ್ತವೆ. ಇವೆಲ್ಲವುಗಳ ಈಡೇರಿಕೆಯ ಸಂದರ್ಭಗಳಲ್ಲೆಲ್ಲ ಎಲ್ಲವನ್ನೂ ಕಳಕೊಂಡು ಮನಸ್ಸೆಂಬ ಮರ ಮುರಿದುಬಿದ್ದರೂ ಅದರ ಕೊರಡುಕೊರಡುಗಳ ತುಂಬ ಹೂವುಗಳು ಅರಳುತ್ತಿರುವಂತೆ, ಸುವಾಸನೆಯನ್ನು ಬೀರುತ್ತಿರುವಂತೆ, ಮತ್ತೆಮತ್ತೆ ಆಕರ್ಷಿಸುತ್ತ ಸುತ್ತಮುತ್ತೆಲ್ಲ ಆಪ್ಯಾಯಮಾನಗೊಳಿಸುತ್ತಿರುವಂತೆ ಭಾಸವಾಗಿ ಕನಸಿನ ಲೋಕವೊಂದು ಸೃಷ್ಟಿಯಾಗುತ್ತದೆ. ಮುರಿದುಬಿದ್ದ ಮರದ ಕೊರಡು ಮತ್ತೆ ಚಿಗುರಲಾರದು, ಹೂಬಿಡಲಾರದು ಎಂಬ ಕನಿಷ್ಠ ತಿಳಿವಳಿಕೆಯೂ ಮನಸ್ಸಿನಿಂದ ದೂರಸರಿಯುತ್ತದೆ. ಆಶೆಗಳ ಈಡೇರಿಕೆಯ ಸಂದರ್ಭಗಳಲ್ಲೆಲ್ಲ ಎಲ್ಲವೂ ಸೊಗಸಾಗಿದೆ, ಸುಂದರವಾಗಿದೆ, ಅಸಾಧ್ಯವಾದುದು ಯಾವುದೂ ಇಲ್ಲ ಈ ಮೊದಲಾದ ಕಲ್ಪನೆಗಳೇ ಮನಸ್ಸು, ದೇಹಗಳನ್ನು ವ್ಯಾಪಿಸಿಕೊಂಡಿರುವಾಗ ಯಥಾರ್ಥತೆಯ ಅರಿವಾದರೂ ಹೇಗೆ ಸುಳಿದೀತು?!
ಆಶೆಗಳ ಈಡೇರಿಸುವಿಕೆಯ ಹಪಹಪಿಕೆಯಲ್ಲಿ ಈ ಬದುಕೇ ಸುಂದರ, ಎಲ್ಲವೂ ಆಪ್ಯಾಯಮಾನ, ಸುಲಭಸಾಧ್ಯ, ಅಸಾಧ್ಯವೆಂಬುದೇ ಇಲ್ಲ, ಮನುಷ್ಯ ಮನುಷ್ಯರ ಸ್ವಭಾವಗಳಲ್ಲಿ, ಅಭಿರುಚಿಗಳಲ್ಲಿ, ಆಶೋತ್ತರಗಳಲ್ಲಿ, ನಡೆನುಡಿಗಳಲ್ಲಿ ಯಾವುದೇ ಅಂತರವಿಲ್ಲ ಎಂದೇ ಭಾಸವಾಗುತ್ತದೆ. ಈ ರೀತಿಯ ಚಿಂತನೆಗಳ, ಅಭಿಲಾಷೆಗಳ ಸಂದರ್ಭಗಳಲ್ಲಿ ಅಸಹ್ಯವಾದ ಅಭಿರುಚಿಗಳೂ ಸಹ್ಯವೆನಿಸಿ, ವಿರುದ್ಧವಾದ ಸ್ವಭಾವಗಳೂ ಪೂರಕವೆನಿಸಿ, ಅಪೂರ್ಣ ಎನಿಸಿದವುಗಳೆಲ್ಲವೂ ಪೂರ್ಣವೆನಿಸಿಕೊಂಡು ಭಿನ್ನಭಿನ್ನವಾದ ಅಭಿರುಚಿಗಳನ್ನು, ಸ್ವಭಾವಗಳನ್ನು, ನಡೆನುಡಿಗಳನ್ನು, ಆಶೋತ್ತರಗಳನ್ನು ಹೊಂದಿದ್ದರೂ ಎಲ್ಲೆಲ್ಲೂ ಸಮಾನತೆ, ಒಗ್ಗಟ್ಟು, ಸಹಬಾಳ್ವೆಯೇ ತುಂಬಿಕೊಂಡಿದೆ ಎಂಬ ಭ್ರಮೆಯೇ ಮನಸ್ಸು ದೇಹದ ನರನಾಡಿಗಳೊಳಗೆ ವ್ಯಾಪಿಸಿಕೊಳ್ಳುತ್ತದೆ. ಆದರೆ ಇಂತಹ ಸ್ಥಿತಿಯೊಂದು ಸಾಧ್ಯವೇ? ಒಬ್ಬನ ಕೈಯ ಬೆರಳುಗಳೇ ಭಿನ್ನಭಿನ್ನ ರಚನೆ, ಗಾತ್ರ, ಆಕಾರಗಳನ್ನು ಹೊಂದಿರುವಾಗ; ಮನುಷ್ಯ-ಮನುಷ್ಯರೊಳಗೆ ದೈಹಿಕವಾದ, ಮಾನಸಿಕವಾದ, ಬೌದ್ಧಿಕವಾದ ಭಿನ್ನತೆಗಳಿರುವಾಗ; ಸ್ವಭಾವಗಳಲ್ಲಿ, ಅಭಿರುಚಿಗಳಲ್ಲಿ, ಆಶೋತ್ತರಗಳಲ್ಲಿ ಭಿನ್ನತೆಗಳಿರುವಾಗ ಮೇಲುನೋಟಕ್ಕೆ ಎಲ್ಲರೂ ಒಂದೆಂಬಂತೆ ಬೆಸೆದುಕೊಂಡಿದ್ದೇವೆ ಎನಿಸಿದರೂ ಒಳಗೊಳಗೇ ಭಿನ್ನತೆಯ ವಿಕಟತೆ ಬೆಳೆಯುತ್ತಲೇ ಇರುತ್ತದೆ. ಅದು ಮನುಷ್ಯನ ಈ ರೀತಿಯ ತಳಪಾಯರಹಿತ, ಮೌಲ್ಯರಹಿತ, ಕ್ಷಣಿಕವಾದ ಚಿಂತನೆಗಳನ್ನು, ಆಲೋಚನೆಗಳನ್ನು ಅಣಕಿಸುತ್ತಲೇ ಇರುತ್ತದೆ. ಒಂದೇ ತಾಯಿಯ ಗರ್ಭದಲ್ಲಿ ಜನಿಸಿದ ಮಕ್ಕಳಲ್ಲಿ ರೂಪ, ಆಕಾರ, ಬಣ್ಣ, ಗುಣಸ್ವಭಾವಗಳಲ್ಲಿ ಸಾಮ್ಯತೆಯೇ ಇಲ್ಲದಿರುವಾಗ ಲೋಕದ ಮನುಷ್ಯ ಮನುಷ್ಯರೊಳಗೆ ರೂಪ, ಆಕಾರ, ಸ್ವಭಾವ, ಅಭಿರುಚಿ, ಚಿಂತನೆ ಮೊದಲಾದವುಗಲ್ಲಿ ಏಕತೆ, ಸಮಾನತೆಗಳು ಹೇಗೆ ಸಾಧ್ಯ? ಮೇಲುನೋಟಕ್ಕೆ ಪರಸ್ಪರ ಬೆಸೆದಂತೆ ಕಂಡರೂ ಒಳಗೊಳಗೇ ವಿಕಟತೆ ಅಣಕಿಸುತ್ತಲೇ ಇರುತ್ತದೆ.
೩
ಎತ್ತರೆತ್ತರಕೆ ಏರುವ ಮನಕೂ
ಕೆಸರ ಲೇಪ, ಲೇಪ;
ಕೊಳೆಯ ಕೊಳಚೆಯಲಿ ಮುಳುಗಿ ಕಂಡೆನೋ
ಬಾನಿನೊಂದು ಪೆಂಪ;
ತುಂಬುಗತ್ತಲಿನ ಬಸಿರನಾಳುತಿದೆ
ಒಂದು ಅಗ್ನಿಪಿಂಡ;
ತಮದಗಾಧ ಹೊನಲಲ್ಲು ಹೊಳೆಯುತಿದೆ
ಸತ್ವವೊಂದಖಂಡ!
ಬದುಕೆಂಬುದು ಸರಳವೂ ಅಲ್ಲ, ಸುಲಭವೂ ಅಲ್ಲ. ಸುಂದರೂ ಅಲ್ಲ. ಅದನ್ನು ಸರಳಗೊಳಿಸುವುದು, ಸುಲಭಗೊಳಿಸುವುದು, ಸುಂದರಗೊಳಿಸುವುದು ಎಲ್ಲವೂ ಮನುಷ್ಯನ ಕೈಯಲ್ಲಿದೆ. ಸಾಧಿಸಬೇಕೆಂಬುದು, ಹೊಸತನ್ನು ಕಂಡುಕೊಳ್ಳಬೇಕೆಂಬುದು, ಲೋಕಪ್ರಸಿದ್ಧಿಯನ್ನು ಪಡೆಯಬೇಕೆಂಬುದು ಮನುಷ್ಯನ ಸ್ವಭಾವವಾದರೂ ಅದಕ್ಕೆ ಅಡೆತಡೆಗಳು ನೂರಾರು, ಸಾವಿರಾರು. ಕಾಲೆಳೆಯುವವರ, ಬೆಣ್ಣೆಹಚ್ಚುವವರ, ಹೊಸಕುವವರ,ದಾರಿತಪ್ಪಿಸುವವರ ಸಂಖ್ಯೆ ಬೆಳೆಯುತ್ತಲೇ ಇರುತ್ತದೆ ರಕ್ತಬೀಜಾಸುರರ ಹಾಗೆ. ಅನ್ಯರ ಅವನತಿಗೆ ಹಾತೊರೆಯುವ, ಮೂಲೆಗುಂಪುಮಾಡುವ, ಅನ್ಯರ ಅವಕಾಶಗಳನ್ನು ಕಿತ್ತುಕೊಳ್ಳುವ, ಬೆನ್ನಹಿಂದೆ ಇರಿಯುವ, ಮರುಳುಮಾಡಿ ಲೂಟಿಗೈಯುವ, ಅನ್ಯರ ಸಾಧನೆಯನ್ನು ತನ್ನದೆಂದು ಬಿಂಬಿಸುವ ವಿಕೃತಸ್ವಭಾವದವರೇ ಸುತ್ತಮುತ್ತಲೂ ತುಂಬಿಕೊಂಡಿರುವಾಗ ಸಾಧನೆಯ ಹಾದಿಯಲ್ಲಿ ಗಮಿಸುವವರು ಅಡೆತಡೆಗಳ, ಅವಹೇಳನಗಳ, ಹಿಂಸೆ-ಅವಮಾನಗಳ, ವಿರೋಧಗಳ ಕೆಸರನ್ನು ಎರಚಿಸಿಕೊಂಡು, ಎಲ್ಲವನ್ನೂ ಸಹಿಸಿಕೊಳ್ಳುತ್ತ, ಯಾವುದಕ್ಕೂ ಜಗ್ಗದೆ ಎದುರಿಸಿಕೊಂಡೇ ಮುಂದುವರಿಯಬೇಕಾಗುತ್ತದೆ. ನೀರು ಬೇಕು, ಕೆಸರು ಬೇಡ ಎನ್ನಲಾಗದು. ನೀರಿದ್ದಲ್ಲಿ ಕೆಸರು ಸಹಜ. ನಿರಂತರ ನೀರು ಬೀಳುತ್ತಿದ್ದಲ್ಲಿ ಕೊಳಚೆಯೂ ಅಷ್ಟೇ ಸಹಜ. ಹಾಗೆಯೇ ಮನುಷ್ಯನಿದ್ದಲ್ಲಿ ಕಾಮ, ಕ್ರೋಧಾದಿ ಕೆಸರೂ, ದುರ್ಬುದ್ಧಿ, ದುರ್ಗುಣಗಳೆಂಬ ಕೊಳಚೆಯೂ ಸಹಜ. ನೀರಿನ ಕೆಸರು, ಕೊಳಚೆಗಳನ್ನು ಪ್ರಯತ್ನಪೂರ್ವಕ ನಿವಾರಿಸಿಕೊಳ್ಳಬಹುದಾದರೂ ಮನುಷ್ಯನೊಳಗಿನ ಕೆಸರು, ಕೊಳಚೆಗಳನ್ನು ನಿವಾರಿಸಿಕೊಳ್ಳುವುದಕ್ಕೆ ಸಾಧ್ಯವೆ? ಕೆಸರು, ಕೊಳಚೆಯಲ್ಲಿ ಮುಳುಗಿದ್ದರೂ ಮೇಲೆ ಕಾಣುವ ಬಾನು ತಿಳಿವಳಿಕೆಯನ್ನು ಮೂಡಿಸುತ್ತದೆ. ಮೋಡ ದಟ್ಟೈಸಿಕೊಂಡು ಬಾನಿನ ಸೊಗಸು ಮರೆಯಾದರೂ ಅದೆಲ್ಲವೂ ನಿವಾರಣೆಯಾದ ಮೇಲೆ ಬಾನು ಶುಭ್ರವಾಗಿ ಕಂಗೊಳಿಸದೆ? ಮೋಡಗಳಿಂದ ಬಾನಿನ ಮೇಲ್ಮೆಗಾಗಲೀ ಸೊಬಗಿಗಾಗಲೀ ಘನತೆಗಾಗಲೀ ಎಳ್ಳಷ್ಟೂ ಕೊರತೆಯಾಗಲಾರದು. ಹಾಗಾಗಿ ಮನುಷ್ಯ ಛಲದಿಂದ, ನಿಷ್ಠೆಯಿಂದ, ಸ್ವಪ್ರಯತ್ನದಿಂದ ತನ್ನ ಬದುಕಿನಲ್ಲಿ ತುಂಬಿಕೊಳ್ಳುವ ಕೆಸರು, ಕೊಳಚೆಗಳನ್ನು ನಿವಾರಿಸಿಕೊಳ್ಳುತ್ತ ಬದುಕನ್ನು ಶುಭ್ರಗೊಳಿಸಿಕೊಳ್ಳುತ್ತ ಆದರಣೀಯಗೊಳಿಸಲು, ಬಾನಿನಂತೆ ಆಧಿಕ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗದೆ? ಪ್ರಯತ್ನ ಅನಿವಾರ್ಯ. ಫಲ ದೈವಾಧೀನ.
ಈ ಜಗತ್ತಿನಲ್ಲಿ ಕಷ್ಟ-ಕಾರ್ಪಣ್ಯಗಳು, ಮೋಸ-ವಂಚನೆಗಳು, ದುಃಖ-ದುಮ್ಮಾನಗಳು, ರೋಗ-ರುಜಿನಗಳು, ಸುಖ-ದುಃಖಗಳು, ನಗು-ಅಳುಗಳು, ಕ್ಷಾಮ-ಸಮೃದ್ಧಿಗಳು, ಒಳಿತು-ಕೆಡುಕುಗಳು, ಹಿತ-ಅಹಿತಗಳು ಎಲ್ಲವೂ ಮೇಳೈಸಿಕೊಂಡಿವೆ. ಇಲ್ಲಿ ಕೇವಲ ಬದುಕಿಗೆ ಹಿತವಾದುದನ್ನು ಮಾತ್ರ ನೆಚ್ಚಿಕೊಂಡು ಬದುಕುತ್ತೇನೆ ಎನ್ನುವಂತಿಲ್ಲ. ಒಂದು ಪೂಜ್ಯ, ಇನ್ನೊಂದು ತ್ಯಾಜ್ಯವೆನ್ನುವಂತಿಲ್ಲ. ಒಂದು ಬೇಕು, ಇನ್ನೊಂದು ಬೇಡವೆನ್ನುವಂತಿಲ್ಲ. ಒಂದನ್ನನುಸರಿಸಿ ಇನ್ನೊಂದು ಬಂದೇ ಬರುತ್ತದೆ. ಸ್ವೀಕರಿಸದೆ ಬೇರೆ ದಾರಿಯಿಲ್ಲ. ಅದು ಒಳಿತೂ ಇದ್ದೀತು, ಕೆಡುಕು ಕೂಡಾ. ಕಷ್ಟ, ದುಃಖ, ಮೋಸ, ಹಿಂಸೆಗಳೆಂದು ಕುಗ್ಗುವಂತಿಲ್ಲ, ಎದ್ದು ನಿಲ್ಲಬೇಕು, ಎದುರಿಸಿ ಮುನ್ನಡೆಯಬೇಕು. ಕಹಿಯನ್ನುಂಡು ನಗು ಚೆಲ್ಲಬೇಕು. ಈ ಲೋಕದಲ್ಲಿ ಯಾವುದೂ ನಮ್ಮ ವಶದಲ್ಲಿಲ್ಲ. ಇಂದು ಕಷ್ಟವಿದೆ, ನಾಳೆ ಸುಖ ಒದಗೀತು ಎಂಬ ನಂಬಿಕೆ. ಇಂದು ಕೆಡುಕಿಗಿದೆ, ನಾಳೆ ಒಳಿತಾಗಬಹುದೆಂಬ ಭರವಸೆ. ಬಡತನದಿಂದ ನಲುಗಿ ಬದುಕೇ ಬೇಡವಾಗಿದೆ, ನಾಳೆಯಾದರೂ ಸಿರಿತನ ಬರಬಹುದೆಂಬ ನಿರೀಕ್ಷೆ. ಮನುಷ್ಯ ಬದುಕುವುದೇ ನಂಬಿಕೆ, ಭರವಸೆ, ನಿರೀಕ್ಷೆಗಳ ಮೇಲೆ. ಇವುಗಳನ್ನು ಕಳಕೊಂಡರೆ ಎಲ್ಲವನ್ನೂ ಕಳಕೊಂಡಂತೆ. ಸೂರ್ಯನು ಅಸ್ತಮಿಸಿದಾಗ ಭೂಮಿ ಕತ್ತಲಲ್ಲಿ ಮುಳುಗಿದರೂ ಮರುದಿನ ಸೂರ್ಯ ಮತ್ತೆ ಉದಯಿಸುವುದರೊಂದಿಗೆ ಬದುಕಿನಲ್ಲಿ ಭರವಸೆಗಳನ್ನು, ನಂಬಿಕೆಗಳನ್ನು, ನಿರೀಕ್ಷೆಗಳನ್ನು ಮೂಡಿಸುತ್ತಾನೆ. ಸೂರ್ಯ ಈ ಭೂಮಿಯಲ್ಲಿರುವ ಸಕಲಜೀವಜಂತುಗಳಿಗೆ ಜೀವನಾಡಿ. ನಿನ್ನೆಯ ನೋವನ್ನು ಮರೆಸುತ್ತಾನೆ, ಇಂದು ಹೊಸ ಭರವಸೆಗಳನ್ನು ಮೂಡಿಸುತ್ತಾನೆ. ಈ ಭೂಮಿಯೇ ಒಂದು ತುಂಬುಗತ್ತಲಿನ ಬಸಿರು. ಸೂರ್ಯನೆಂಬ ಅಗ್ನಿಪಿಂಡ ಅದನ್ನು ಬೆಳಗುತ್ತಿದ್ದಾನೆ. ಉದಯವಾಗುತ್ತಲೇ ತುಂಬುಗತ್ತಲೆಯನ್ನು ಮರೆಗೆ ಸರಿಸಿ ಹೊಸಭರವಸೆಗಳ ಬೆಳಕನ್ನು ಚೆಲ್ಲುತ್ತಾನೆ. ಹೊಸ ನಂಬಿಕೆಗಳ ಹೊನಲನ್ನು ಹರಿಸುತ್ತಾನೆ. ಹೊಸ ನಿರೀಕ್ಷೆಗಳ ಚಿಲುಮೆಯನ್ನು ಸೃಷ್ಟಿಸುತ್ತಾನೆ. ಕಷ್ಟ, ನೋವು, ಹಿಂಸೆ, ದುಃಖ ಪರಂಪರೆಗಳ ನಡುವೆ ಬದುಕಿನಲ್ಲಿ ಹೊಸ ಆಶಾಕಿರಣವನ್ನು ಮೂಡಿಸುತ್ತಾನೆ. ಅವನು ಕತ್ತಲೆಯ ಅಗಾಧತೆಯ ಹೊನಲಿನಲ್ಲಿಯೂ ಅಖಂಡವಾದ ಸತ್ವವನ್ನು ಹೊಳೆಸಿ ಬದುಕಿನಲ್ಲಿ ಮತ್ತೆಮತ್ತೆ ಭರವಸೆಗಳನ್ನು, ನಿರೀಕ್ಷೆಗಳನ್ನು, ನಂಬಿಕೆಗಳನ್ನು ಮೂಡಿಸುತ್ತಾನೆ. ಸೂರ್ಯ ತಾನುರಿದರೂ ಜಗತ್ತಿಗೆ ಬೆಳಕು ಚೆಲ್ಲುವ ಅಗ್ನಿಪಿಂಡ. ಆತನ ಉದಯಾಸ್ತಗಳು ಈ ಭೂಮಿಯಲ್ಲಿನ ಸಕಲ ಜೀವರಾಶಿಯ ಜೊಸಬದುಕಿಗೆ ಹೊಸಸಂದೇಶವನ್ನು, ಅದಮ್ಯವಾದ ಭರವಸೆಯನ್ನು ಮೂಡಿಸುತ್ತವೆ. ಬದುಕೂ ಹೀಗೆಯೇ, ಜಂಜಾಟಗಳ ಉರಿಯಲ್ಲಿ ಬೆಂದರೂ ಸೂರ್ಯನಂತೆ ಹೊಸದರ್ಶನದ ಬೆಳಕನ್ನು ಚೆಲ್ಲಬೇಕು.
೪
ಇದನರಿತೆನೆಂದೆ; ಆ ಅರಿವು ಕಿರಣವನೆ
ನುಂಗಿತೊಂದು ಮೇಘ;
ಆ ಮುಗಿಲ ಬಸಿರನೇ ಬಗೆದು ಬಂತು ನವ
ಕಿರಣವೊಂದಮೋಘ!
ಹಿಡಿದ ಹೊನ್ನೆ ಮಣ್ಣಹುದು! ಮಣ್ಣೊಳೂ
ಹೊಳೆದುದುಂಟು ಹೊನ್ನು;
ಇದು ಹೀಗೆ ಎಂಬ ನಂಬುಗೆಯ ಊರೆಗೋ
ಲಿಲ್ಲ ಇನ್ನು ಮುನ್ನು!
ಬದುಕಿನಲ್ಲಿ ಏರಿಳಿತಗಳು, ಕಷ್ಟನಷ್ಟಗಳು, ದುಃಖದುಮ್ಮಾನಗಳು, ಮೋಸವಂಚನೆಗಳು ಅತ್ಯಂತ ಸಹಜ. ಅವೆಲ್ಲವುಗಳನ್ನು ಮೆಟ್ಟಿ ನಿಲ್ಲಬೇಕು, ಬದುಕಿನ ಇತಿಮಿತಿಗಳನ್ನು ಅರಿತು ಬಾಳಬೇಕು, ಸಮಸ್ಯೆಗಳ ಸಿಕ್ಕುಗಳನ್ನು ಜಾಣತನದಿಂದ ಬಿಡಿಸಿ ಹೊಸಬದುಕಿಗೆ ನಾಂದಿಹಾಡಬೇಕು ಎಂಬ ಅರಿವಿನ ಕಿರಣವೊಂದು ಮೂಡಿದರೂ ಬಾನಿನಲ್ಲಿ ಪ್ರಜ್ವಲಿಸುತ್ತಿರುವ ಸೂರ್ಯನನ್ನೇ ಆವರಿಸಿಕೊಂಡು ಮರೆಮಾಡುವ ಮೋಡಗಳಂತೆ ಕೆಲವೇ ಕ್ಷಣಗಳಲ್ಲಿ ಆ ಅರಿವಿನ ಕಿರಣವನ್ನೇ ಹೊಸಹೊಸ ಕಷ್ಟ, ಕಾರ್ಪಣ್ಯಗಳು, ಮೋಸ ವಂಚನೆಗಳು ಮರೆಸಿಬಿಡುತ್ತವೆ. ಆದರೂ ಸೂರ್ಯನನ್ನು, ಆತನ ಪ್ರಕಾಶವನ್ನು ಮರೆಮಾಡುವ ಮೋಡಗಳ ಹುನ್ನಾರ ನಿರಂತರ ನಡೆಯದು. ಕೆಲವೇ ಕ್ಷಣಗಳಲ್ಲಿ ಮತ್ತೆ ಸೂರ್ಯನ ಕಿರಣಗಳು ಎಂತಹ ದಟ್ಟವಾದ ಮೋಡವಾದರೂ ಅವುಗಳ ಬಸಿರನ್ನೇ ಬಗಿದು ಲೋಕವನ್ನು ಪ್ರಕಾಶಿಸುತ್ತವೆ. ಹಾಗಾಗಿ ಬದುಕನ್ನು ನೊಣೆಯುವ ದುಃಖದುರಿತಗಳಾಲೀ ಕಷ್ಟಕಾರ್ಪಣ್ಯಗಳಾಲೀ ನಿರಂತರವಾಗಿ ಬದುಕಿನ ಸಾಧನೆಯನ್ನು, ಸುಖಸಂತೋಷಗಳನ್ನು ಮರೆಮಾಡಲು, ನಾಶಗೊಳಿಸಲು, ಬದುಕನ್ನು ಅಧೋಗತಿಗಿಳಿಸಲು ಸಾಧ್ಯವೇ ಇಲ್ಲ. ಸೂರ್ಯಕಿರಣಗಳಂತೆ ಉನ್ನತಬದುಕೆಂಬ ಸಂಕಲ್ಪವು ಎಲ್ಲವನ್ನೂ ನಿವಾರಿಸಬಲ್ಲುದು, ಮೆಟ್ಟಿನಿಲ್ಲಬಲ್ಲುದು, ಮತ್ತೆ ಬದುಕನ್ನು ಬೆಳಗಬಲ್ಲುದು ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಲೇಬೇಕು, ಅರಿತುಬಾಳಲು ಪ್ರಯತ್ನಿಸುತ್ತಿರಲೇಬೇಕು. ಹೀಗೆ ಸೂರ್ಯನ ಸ್ಥಿತಿಗತಿಗಳನ್ನೇ ಮಾದರಿಯಾಗಿಟ್ಟುಕೊಂಡರೆ ಆರಕ್ಕೆ ಹಿಗ್ಗದ, ಮೂರಕ್ಕೆ ಕುಗ್ಗದ ಬದುಕಾಗುತ್ತದೆ, ಅನ್ಯರಿಗೂ ಸ್ಫೂರ್ತಿಯಾಗುತ್ತದೆ, ಮಾದರಿಯೂ ಕೂಡಾ.
ಬದುಕಿನಲ್ಲಿ ಯಾವುದೂ ನಮ್ಮ ವಶದಲ್ಲಿಲ್ಲ. ನಿರೀಕ್ಷಿಸಿದ್ದು ಸಿಗಲಾರದು, ಆದರೆ ಅನಿರೀಕ್ಷಿತವಾದದ್ದು ದಕ್ಕದೆ ಹೋಗಲಾರದು. ಮಾನವ ಒಂದು ಬಗೆದರೆ, ದೈವ ಇನ್ನೊಂದನ್ನು ಬಗೆಯುತ್ತದೆ. ಹಾಗಾಗಿ ಹಿಡಿದ ಹೊನ್ನೇ ಮಣ್ಣಾಗಬಹುದು. ಹಾಗೆಂದು ಮಣ್ಣನ್ನು ತಿರಸ್ಕರಿಸುವಂತಿಲ್ಲ. ಏಕೆಂದರೆ, ಮಣ್ಣಲ್ಲಿಯೇ ಹೊನ್ನೂ ಆಡಗಿಕೊಂಡಿದೆ. ಬಡತನ ಸಿರಿತನಗಳೆರಡು ನಿರಂತರವೂ ಅಲ್ಲ, ಶಾಶ್ವತವೂ ಅಲ್ಲ. ಒಂದನ್ನನುಸರಿಸಿ ಇನ್ನೊಂದು ಬರಬಹುದು. ಹಾಗೆಂದು ಅವು ನಿರಂತರವಾಗಿ ನೆಲೆನಿಲ್ಲಲಾರವು. ಗಳಿಸಿದುದೆಲ್ಲ ಹೋಯಿತಲ್ಲ! ಎಂದು ನೋಯುವ, ಕಳವಳಪಡುವ ಅಗತ್ಯವೂ ಇಲ್ಲ. ಯಾವ ಸಿರಿವಂತಿಕೆಗೂ ಇಲ್ಲಿನ ಮಣ್ಣೇ ಮೂಲ. ಅದನ್ನು ಮರೆತವನು ಗಳಿಸಿದರೂ ಕಳೆದುಕೊಳ್ಳುತ್ತಾನೆ. ಮಣ್ಣಲ್ಲೇ ಹೊನ್ನನ್ನು ಕಾಣುವವನು ಮುಂದೊಂದು ದಿನ ಗಳಿಸಿಕೊಳ್ಳುತ್ತಾನೆ. ಹುಟ್ಟಿದ್ದೂ ಈ ಮಣ್ಣಿನ ಮೇಲೆ, ಬದುಕೆಂಬುದೂ ಈ ಮಣ್ಣಿನ ಮೇಲೆ, ಹಾಗೆಯೇ ಕೊನೆಯಲ್ಲಿ ಸೇರಿಕೊಳ್ಳುವುದೂ ಈ ಮಣ್ಣಿನೊಳಗೇ. ಆದುದರಿಂದ ಬದುಕಿಗೆ ಹಿಂದೆ ದೊರಕಿರುವ, ಇಂದು ದೊರಕುತ್ತಿರುವ, ಮುಂದೆ ದೊರಕಲಿರುವ ಸೌಕರ್ಯಗಳನ್ನು, ಸವಲತ್ತುಗಳನ್ನು, ಅನುವುಗಳನ್ನು ಮರೆತುಬಿಡುವುದು, ನಿರ್ಲಕ್ಷಿಸುವುದು, ತಿರಸ್ಕರಿಸುವುದೆಂದರೆ ಎಲ್ಲವನ್ನೂ ಮಾತ್ರವಲ್ಲ, ಬದುಕನ್ನೂ ಕಳೆದುಕೊಂಡಂತೆ. ಹಾಗಾಗಿ ಇಲ್ಲಿನ ಬದುಕಿನಲ್ಲಿ ’ಇದು ಹೀಗೆಯೇ’ ಎಂಬ ಊರೆಗೋಲೆಂಬುದಿಲ್ಲ. ಮನುಷ್ಯ ವಿಧಿಯ ಕೈಗೊಂಬೆಯಾಗಿರುವಾಗ ವಿಧಿಯ ಸೂತ್ರಕ್ಕನುಗುಣವಾಗಿ ಆಡುವುದಷ್ಟೇ ನಮ್ಮ ಕೆಲಸ. ಬದುಕು ಹೀಗೆಯೇ ಇರಬೇಕು ಎಂಬುದಕ್ಕಾಗಲೀ ಹೀಗೆಯೇ ಬದುಕಬೇಕು ಎಂಬುದಕ್ಕಾಗಲೀ ಯಾವ ಪ್ರಮಾಣವೂ ಇಲ್ಲ, ಮಾನದಂಡವೂ ಇಲ್ಲ, ಮಾದರಿಸೂತ್ರಗಳೂ ಇಲ್ಲ. ಎಲ್ಲವೂ ಅವರವರ ಜೀವನಾನುಭವದ, ನಂಬಿಕೆಯ ಊರೆಗೋಲು. ಪ್ರದೇಶದಿಂದ ಪ್ರದೇಶಕ್ಕೆ ಭಿನ್ನ, ಸಮುದಾಯದಿಂದ ಸಮುದಾಯಕ್ಕೆ ಭಿನ್ನ, ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಈ ಭಿನ್ನತೆಯಲ್ಲಿಯೇ ಬದುಕಿನ ವೈವಿಧ್ಯ.
೫
ಆಶೆಯೆಂಬ ತಳವೊಡೆದ ದೋಣಿಯಲಿ
ದೂರ ತೀರ ಯಾನ;
ಯಾರ ಲೀಲೆಗೊ ಯಾರೋ ಏನೊ ಗುರಿ
ಯಿರದೆ ಬಿಟ್ಟ ಬಾಣ!
ಇದು ಬಾಳು ನೋಡು; ಇದು ತಿಳಿದೆನೆಂದರೂ
ತಿಳಿದ ಧೀರನಿಲ್ಲ;
ಹಲವುತನದ ಮೈಮರೆಸುವಾಟವಿದು;
ನಿಜವು ತೋರದಲ್ಲ!
ಕಡಲಲ್ಲಿ ಸಾಗಬೇಕಾದ ದೋಣಿ ಹಾಗೂ ಅದರ ಎಲ್ಲಾ ಭಾಗಗಳು ಸಮರ್ಪಕವಾಗಿರಬೇಕು. ಮುರಿದಿದ್ದರೆ, ತಳವೊಡೆದಿದ್ದರೆ ಕಡಲಲ್ಲಿ ಮುಳುಗಿಹೋದೀತೇ ವಿನಾ ತೇಲಲಾರದು. ಬದುಕೂ ಹೀಗೆಯೇ. ಅದು ಆಶೆ ಎಂಬ ತಳವೊಡೆದ ದೋಣಿ. ಬದುಕಿನಲ್ಲಿನ ಇತಿಮಿತಿಯಿಲ್ಲದ, ತಲೆಬುಡವಿಲ್ಲದ ನೂರಾರು, ಸಾವಿರಾರು ಆಶೆಗಳು ಬದುಕಿನ ತಳವನ್ನೇ ಒಡೆದುಬಿಡುತ್ತವೆ. ಬದುಕಿನ ಪ್ರಯಾಣ ಒಂದೆರಡು ದಿನಗಳದ್ದಲ್ಲ. ಅದು ಒಂದಷ್ಟು ವರ್ಷಗಳದ್ದು. ಕ್ಷಣಕ್ಷಣಕ್ಕೂ ಮನಸ್ಸಿನಲ್ಲಿ ಹುಟ್ಟಿಕೊಳ್ಳುವ ಆದ್ಯಂತರಹಿತವಾದ ಆಶೆಗಳು ಬದುಕೆಂಬ ದೋಣಿಯ ತಳವನ್ನೇ ಒಡೆಯುತ್ತಿವೆ. ಇಂತಹ ತಳವೊಡೆದ ದೋಣಿಯಲ್ಲಿ ದೂರತೀರದ ಪ್ರಯಾಣ ಹೇಗೆ ಸಾಧ್ಯ? ಮುಳುಗಿ ನೀರಸಮಾಧಿಯಾಗದೇ? ಎಂಬ ಕಲ್ಪನೆಯಾಗಲೀ ವಿವೇಚನೆಯಾಗಲೀ ಕನಿಷ್ಠ ತಿಳಿವಳಿಕೆಯಾಗಲೀ ಮನುಷ್ಯನಲ್ಲಿ ಇರುವುದಿಲ್ಲ. ಆಶೆಗಳು ಕಲ್ಪನೆಗೆ, ವಿವೇಚನೆಗೆ, ತಿಳಿವಳಿಕೆಗೆ ಆಸ್ಪದವನ್ನೇ ಕೊಡಲಾರವು. ಬದುಕೆಂಬ ಹಾಯಿದೋಣಿ ಎಷ್ಟೋ ಸಂದರ್ಭಗಳಲ್ಲಿ ನಮ್ಮ ವಿವೇಚನೆಗೆ, ನಮ್ಮ ಗುರಿಗೆ, ನಮ್ಮ ತಿಳಿವಳಿಕೆಗೆ ಅನುಗುಣವಾಗಿ ಸಾಗದೆ ಇನ್ಯಾರದ್ದೋ ಆಶೆಗಳಿಗೆ, ಚಿಂತನೆಗಳಿಗೆ, ಮಾರ್ಗದರ್ಶನಕ್ಕೆ ಅನುಗುಣವಾಗಿ ಸಾಗುತ್ತ, ಕ್ಷಣಕ್ಷಣಕ್ಕೂ ದಿಕ್ಕನ್ನು ಬದಲಾಯಿಸಿಕೊಳ್ಳುತ್ತ ಯಾರದ್ದೋ ಲೀಲೆಗೆ ತುತ್ತಾಗಿ, ಗುರಿಯಿರದೆ ಬಿಟ್ಟ ಬಾಣದಂತೆ ಅತಂತ್ರಗೊಳ್ಳುತ್ತದೆ. ಮಾತ್ರವಲ್ಲ, ವ್ಯರ್ಥವೂ ಆಗುತ್ತದೆ. ಬದುಕಿನಲ್ಲಿ ಮತ್ತೆಮತ್ತೆ ಮೂಡುವ ಆಶೆಗಳು, ಯಾರದ್ದೋ ಉಪದೇಶಗಳು, ಇನ್ಯಾರದ್ದೋ ಚಿಂತನೆಗಳು, ಮತ್ಯಾರದ್ದೋ ಮಾರ್ಗದರ್ಶನಗಳು ಅನ್ಯರ ಲೀಲೆಗಳು ಗುರಿಯಿಲ್ಲದ ಬಾಣದಂತೆ ಎರಗಿ ಬದುಕನ್ನು ಹಾಳುಗೆಡಹುತ್ತವೆ. ಎಷ್ಟೋ ಮಂದಿ ತಾವು ನೆಮ್ಮದಿಯಿಂದ ಬದುಕಲಾರರು, ಅನ್ಯರನ್ನು ನೆಮ್ಮದಿಯಿಂದ ಬದುಕಗೊಡಲಾರರು. ಕೆಲವು ಸ್ವಯಂಕೃತಾಪರಾಧಗಳು, ಇನ್ನುಳಿದವು ಅನ್ಯಕೃತಾಪರಾಧಗಳು. ಇವುಗಳಿಗನುಗುಣವಾಗಿ ಬದುಕು ಸಾಗುತ್ತದೆ. ಮುಗ್ಗರಿಸುತ್ತಲೇ ಉಳಿಯಲೂಬಹುದು ಇಲ್ಲಾ ಮುಗ್ಗರಿಸಿ ಅಳಿಯಲೂಬಹುದು.
ಬಾಳೆಂಬುದು ಹೀಗೆಯೇ ಇರುವಂತಹುದು, ಬದುಕಿನ ಅನುಭವದಿಂದ ಎಲ್ಲವನ್ನೂ ಅರಿತುಕೊಂಡೆ ಎಂದೆನಿಸಿದರೂ ಅದು ಅರಿವಾಗದೆ ಇರುವಂತಹುದು. ಹೆಜ್ಜೆಹೆಜ್ಜೆಗೂ ಹುಟ್ಟಿಕೊಳ್ಳುವ ಮನುಷ್ಯನ ಆಶೆಗಳು ಹಾಗೂ ಅವುಗಳನ್ನು ಈಡೇರಿಸಿಕೊಳ್ಳುವ ದಾರಿಗಳು ಹೆಜ್ಜೆಹೆಜ್ಜೆಗೂ ಬದಲಾಗುತ್ತಿರುವಾಗ, ಅವು ಭಿನ್ನಭಿನ್ನ ಫಲಿತಗಳನ್ನು ಉಂಟುಮಾಡುತ್ತಿರುವಾಗ ಮನುಷ್ಯಬಾಳು ಹೀಗೆಯೇ ಅಥವಾ ಇಷ್ಟೇ ಎಂದು ತೀರ್ಮಾನಕ್ಕೆ ಬರುವುದಕ್ಕಾದರೂ ಹೇಗೆ ಸಾಧ್ಯ? ಪ್ರಾಚೀನಕಾಲದಿಂದಲೂ ಅದೆಷ್ಟೋ ಮೇಧಾವಿಗಳು ತಮ್ಮ ಸಾಧನೆಯಿಂದ, ತಿಳಿವಳಿಕೆಯಿಂದ, ಅನುಭವದಿಂದ ಬಾಳನ್ನು ಅರಿತುಕೊಂಡಿದ್ದೇವೆ ಎಂದು ಹೇಳಿಕೊಂಡರೂ ಅವರು ಹೇಳಿಕೊಂಡಿದ್ದು ಪೂರ್ಣಸತ್ಯವೂ ಅಲ್ಲ, ಪರಿಪೂರ್ಣವೂ ಅಲ್ಲ. ಹರಿಯುವ ನೀರಿನ ಹರಿತದ ಗತಿ ಪರಿಸ್ಥಿತಿಗಳಿಗನುಗುಣವಾಗಿ ಅಡಿಗಡಿಗೂ ಬದಲಾದಂತೆ ಬದುಕಿನ ಗತಿಯೂ ಪರಿಸ್ಥಿತಿಗಳಿಗನುಗುಣವಾಗಿ ಬದಲಾಗುತ್ತಲೇ ಹೋಗುತ್ತದೆ. ಹಿಂದಿನದು ಇಂದಿಗಿಲ್ಲ, ಇಂದಿನದು ಮುಂದಿಗಿಲ್ಲ. ಹಾಗಿರುವಾಗ ಬಾಳನ್ನು ಅರಿತುಕೊಂಡೆನೆಂದು ಭಾವಿಸಿದರೂ “ಅರಿತುಕೊಂಡೆ”ನೆಂದು ಎದೆತಟ್ಟಬಲ್ಲ ಧೀರ ಈ ಲೋಕದಲ್ಲಿ ಇದುವರೆಗೆ ಹುಟ್ಟಿಲ್ಲ. ಮುಂದೆ ಹುಟ್ಟುವುದಕ್ಕೆ ಸಾಧ್ಯವೂ ಇಲ್ಲ. ಬದುಕೆಂಬುದು ಹಲವು ರೀತಿನೀತಿಗಳನ್ನೊಳಗೊಂಡಿರುವ, ವಿವಿಧ ರೀತಿಗಳಿಂದ ಆಕರ್ಷಿಸುವ, ಮತ್ತೆಮತ್ತೆ ಸೆಳೆಯುತ್ತ ಮೈಮರೆಸುವ ಆಟ. ಅದರ ರೀತಿನೀತಿಗಳಲ್ಲಿ ಇದು ಹೀಗಿನೇ ಎಂಬುದಿಲ್ಲ. ಅದರ ಆಕರ್ಷಣೆಗಳಿಗೆ, ಸೆಳೆತಗಳಿಗೆ ಇತಿಮಿತಿಗಳೆಂಬುದಿಲ್ಲ. ಇವೆಲ್ಲವುಗಳಿಂದ ಮೈಮರೆಯುವಂತಾಗುತ್ತದೆಯೇ ವಿನಾ ವಾಸ್ತವದ ದರ್ಶನವೇ ಮೂಡುವುದಿಲ್ಲ. ಹೀಗಿದ್ದರೂ ಬದುಕನ್ನು ತಿರಸ್ಕರಿಸಲಾಗದು. ಅದು ಆಯಾ ಕಾಲಘಟ್ಟದಲ್ಲಿ ಆಯಾ ಕಾಲಘಟ್ಟದ ಧೋರಣೆಗಳನ್ನೊಳಗೊಂಡ ಒಂದಷ್ಟು ದರ್ಶನವನ್ನು ಮಾಡಿಸುತ್ತದೆ. ಹೆಜ್ಜೆಹೆಜ್ಜೆಗೂ ಪಾಠಕಲಿಸುತ್ತದೆ, ನಂಬಿಕೆಯನ್ನು ಹುಟ್ಟಿಸುತ್ತದೆ, ಭರವಸೆಗಳನ್ನು ಮೂಡಿಸುತ್ತದೆ. ಇದು ಬದುಕನ್ನು, ಅದರ ಇತಿಮಿತಿಗಳನ್ನು, ಧೋರಣೆಗಳನ್ನು ಅರಿತುಕೊಳ್ಳುವ ಪ್ರಯತ್ನವೆನಿಸಿಕೊಳ್ಳುತ್ತದೆ. ಜೀವಮಾನದಲ್ಲಿ ಇಂತಹ ಪ್ರಯತ್ನ ಬಹಳ ಮುಖ್ಯ. ದಕ್ಕಿದರೆ ಫಲ ನಮ್ಮದು, ದಕ್ಕದಿರೆ ಪ್ರಯತ್ನ ಮಾತ್ರ ನಮ್ಮದು.
೬
ಬೆಂಗಾಡು ನೋಡು ಇದು; ಕಾಂಬ ಬಯಲುದೊರೆ
ಗಿಲ್ಲ ಆದಿ-ಅಂತ್ಯ;
ಅದ ಕುಡಿದೆನೆಂದ ಹಲರುಂಟು; ತಣಿದೆನೆಂ
ದವರ ಕಾಣೆನಯ್ಯ!
ಅರೆಬೆಳಕಿನಲ್ಲಿ ಬಾಳಲ್ಲಿ ಸುತ್ತಿ ನಾ
ವೇಕೋ ಮಲೆತು ಮೆರೆದು
ಕೊನೆಗೆ ಕರಗುವೆವು ಮರಣತೀರಘನ
ತಿಮಿರದಲ್ಲಿ ಬೆರೆತು!
ಬದುಕು ಪರಿಪೂರ್ಣವಲ್ಲ, ಅದರಲ್ಲಿ ಎಷ್ಟು ಸಾಧಿಸಿದರೂ ಸಾಧನೆಯುದ್ದಕ್ಕೂ ಇನ್ನಷ್ಟು ಇದೆ ಎಂಬುದರ ಅರಿವಾಗುತ್ತಲೇ ಇರುತ್ತದೆ. ಅದನ್ನು ಪರಿಪೂರ್ಣತೆಯ ಹಾದಿಯಲ್ಲಿ ಸಾಗಿಸುವ ಪ್ರಯತ್ನ ಮಾತ್ರ ನಮ್ಮದು. ಅದರಲ್ಲಿ ಕಿಂಚಿತ್ ಫಲ ದೊರೆತರೂ ಅದಕ್ಕೆ ಜೀವಮಾನದ ಸಾಧನೆಯಲ್ಲಿ ಪಾಲಿದೆ. ಬದುಕಿನಲ್ಲಿ ಎದುರಾಗುವ ಕಷ್ಟಕಾರ್ಪಣ್ಯಗಳು, ದುಃಖದುಮ್ಮಾನಗಳು, ಹಿಂಸೆನೋವುಗಳು, ಅಡೆತಡೆಗಳು, ಅವಮಾನ ಅವಹೇಳನಗಳೆಲ್ಲವೂ ಬದುಕನ್ನು ಬೆಂಗಾಡನ್ನಾಗಿ ಪರಿವರ್ತಿಸುತ್ತವೆ. ಬದುಕನ್ನು ದುಸ್ತರಗೊಳಿಸುತ್ತವೆ. ಅವಲೋಕಿಸಿದಷ್ಟೂ ವಿಶಾಲವಾಗಿ ವ್ಯಾಪಿಸಿರುವ ಬೆಂಗಾಡಿನಂತೆ ಕಾಣುತ್ತದೆ. ಹರಿದ್ವರ್ಣದ ಕಾಡಿನಂತೆ ಬೆಂಗಾಡು ಶೋಭಿಸಲಾರದು, ಮನಸ್ಸಿಗೆ ಮುದನೀಡಲಾರದು, ಮೈನವಿರೇಳಿಸದು, ಮೈಮನಗಳಲ್ಲಿ ಹೊಸಭಾವಗಳನ್ನು ಚಿಗುರಿಸದು. ಬೆಂಗಾಡು ಏನಿದ್ದರೂ ಹಿಂಸೆ, ದೌರ್ಜನ್ಯ, ರೌದ್ರತೆ, ನಾಶದ ಸಂಕೇತವಾಗಿಯೇ ಕಾಣಿಸುತ್ತದೆ. ಬದುಕು ಇದಕ್ಕಿಂತ ಭಿನ್ನವಲ್ಲ. ಇವೆಲ್ಲವುಗಳಿಂದಾಗಿ ಹೆಜ್ಜೆಹೆಜ್ಜೆಗೂ ಬದುಕೆಂಬುದು ಆದಿ ಅಂತ್ಯಗಳಿಲ್ಲದ ಬಯಲುದೊರೆ(ಬಿಸಿಲ್ಗುದುರೆ, ಮರೀಚಿಕೆ)ಯೋ?! ಎಂಬ ಭ್ರಾಂತಿಯನ್ನೂ ಕಳವಳವನ್ನೂ ಉಂಟುಮಾಡುತ್ತದೆ. ಕಷ್ಟಕಾರ್ಪಣ್ಯಗಳನ್ನು, ದುಃಖದುಮ್ಮಾನಗಳನ್ನು, ಅಡೆತಡೆಗಳನ್ನು, ಹಿಂಸೆ ಅವಮಾನಗಳನ್ನು ನಿವಾರಿಸಿಕೊಂಡಷ್ಟೂ ಅವು ಮತ್ತೆಮತ್ತೆ ಹುಟ್ಟಿಕೊಳ್ಳುತ್ತವೆ, ಕಾಡುತ್ತವೆ, ಪೀಡಿಸುತ್ತವೆ, ಹಿಂಸಿಸುತ್ತವೆ. ಇವೆಲ್ಲವುಗಳಿಂದ ಬದುಕೆಂಬುದು ಆಸರೆಯಿಲ್ಲದೆ, ತಣಿವಿಗಾಸ್ಪದವಿಲ್ಲೆದೆ, ಸಂಭ್ರಮಕ್ಕೆ ಎಡೆಯಿಲ್ಲದೆ ಮತ್ತೆಮತ್ತೆ ಭ್ರಮೆಹುಟ್ಟಿಸುವ ಬಯಲ್ದೊರೆಗೆ ಸದೃಶವಾಗುತ್ತದೆ. ಅದರ ಆದಿಯೂ ದೊರಕದು, ಅಂತ್ಯವೂ ಕೂಡಾ. ಇರುವುದೆಂಬ ಭ್ರಮೆಹುಟ್ಟಿಸುದರೂ ಅದು ಇರಲಾರದು. ಕಣ್ಣಿಗೆ ಗೋಚರಿಸಿದಂತಾದರೂ ಪರಾಂಬರಿಸಿದಾಗ ಕಾಣಿಸದು. ಬದುಕಿನ ವಾಸ್ತವ ಅಸ್ತಿತ್ವವೂ ಹೀಗೆಯೇ. ದೂರದಿಂದಲೇ ಆಕರ್ಷಿಸುತ್ತದೆ, ಹತ್ತಿರವಾದೊಡನೆ ದೂರಸರಿಯುತ್ತದೆ. ಹಿಡಿತಕ್ಕೆ ಸಿಗದು, ತೃಷೆಯನ್ನು ತಣಿಸದು, ತೃಪ್ತಿಪಡಿಸದು. ಅದರ ನೀರನ್ನು ಕುಡಿದು ತಣಿದಿದ್ದೇನೆ ಎಂಬುದೇ ಬರೀ ಬೂಟಾಟಿಯಲ್ಲದೆ ಬೇರೇನೂ ಅಲ್ಲ. ಹಾಗೆಯೇ “ಅಗಮ್ಯವಾದ, ದುರ್ಗಮ್ಯವಾದ, ಸುಗಮ್ಯವಲ್ಲದ ಬದುಕಿನ ದಾರಿಯನ್ನು ಕಂಡುಕೊಂಡಿದ್ದೇನೆ, ಅದರ ಆಗುಹೋಗುಗಳೆಲ್ಲವನ್ನೂ ಅರೆದು ಕುಡಿದಿದ್ದೇನೆ, ಬಾಳಸಾಗರವನ್ನು ಈಜಿ ದಾಟಿದ್ದೇನೆ” ಎಂದು ಬಡಾಯಿಯಿಂದ ಮೆರೆದವರು ಲೋಕದಲ್ಲಿ ಸಾವಿರಾರು ಮಂದಿ ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಆದರೆ, “ಬಾಳಸಾಗರದಲ್ಲಿನ ಕಷ್ಟಕಾರ್ಪಣ್ಯಗಳ, ದುಃಖದುಮ್ಮಾನಗಳ ತೆರೆತೆರೆಗಳೆಲ್ಲವನ್ನೂ ಎದುರಿಸಿಕೊಂಡು ಈಜಿ ಜಯಿಸಿದ್ದೇನೆ, ಕುಡಿದು ತಣಿದಿದ್ದೇನೆ, ಜಯಿಸಿ ಸಾಧಿಸಿದ್ದೇನೆ” ಎಂದು ಆತ್ಮಸಾಕ್ಷಿಯಾಗಿ ಎದೆತಟ್ಟಿ ಹೇಳಿದವರು ಲೋಕದಲ್ಲಿ ಹಿಂದೆಯೂ ಇದ್ದಿಲ್ಲ. ಇಂದೂ ಇಲ್ಲ, ಮುಂದೆಯೂ ಇರುವುದಕ್ಕೆ ಸಾಧ್ಯವಿಲ್ಲ.
ಬದುಕಿನ ರೀತಿನೀತಿಗಳು, ಧ್ಯೇಯಧೋರಣೆಗಳು, ಆಚಾರವಿಚಾರಗಳು, ಆಗುಹೋಗುಗಳು ದಿನದಿಂದ ದಿನಕ್ಕೆ ಬದಲಾಗುತ್ತಿರುವಾಗ, ಬದುಕಿನುದ್ದಕ್ಕೂ ಯಾವುದೇ ರೀತಿಯಲ್ಲಿ ಬಾಳಿನ ನಿಖರವಾದ ದರ್ಶನವಾಗದೇ ಇರುವಾಗ, ಒಮ್ಮೆ ಗೈದ ಸಾಧನೆ ಇನ್ನೊಮ್ಮೆ ಸಾಧನೆಯೇ ಅಲ್ಲವೆನಿಸುತ್ತಿರುವಾಗ, ನಿನ್ನೆಯದು ಇಂದಿಗೆ ಹಾಗೂ ಇಂದಿನದು ನಾಳೆಗೆ ಅಪ್ರಸ್ತುತವೆನಿಸಿಕೊಳ್ಳುತ್ತಿರುವಾಗ ಬದುಕು ಪರಿಪೂರ್ಣ ಎನಿಸಿಕೊಳ್ಳುವುದಾದರೂ ಹೇಗೆ? ಬದುಕಿಗೆ ಪೂರ್ಣಬೆಳಕು ಎಂದಿಗೂ ದಕ್ಕದು. ದಕ್ಕಿರುವ ಅರೆಬೆಳಕಿನಲ್ಲಿ ಮನುಷ್ಯ ತನ್ನಿಷ್ಟದಂತೆ ಸುತ್ತುತ್ತಾನೆ, ಅಲೆಯುತ್ತಾನೆ, ಮಲೆಯುತ್ತಾನೆ, ಮೆರೆಯುತ್ತಾನೆ. ಹೀಗೆ ಸುತ್ತುವ, ಅಲೆಯುವ, ಮಲೆಯುವ ಮೆರೆಯುವ ಸ್ವಭಾವಗಳ ಹಿಂದೆ ಯಾವುದೇ ಗೊತ್ತುಗುರಿಗಳಿಲ್ಲ, ರೀತಿನೀತಿಗಳಿಲ್ಲ, ಧ್ಯೇಯಧೋರಣೆಗಳಿಲ್ಲ, ಹೋಗಲಿ ಸ್ವಂತ ತಿಳಿವಳಿಕೆಯೂ ಇರುವುದಿಲ್ಲ. ಬದುಕು ಮೂರುದಿನಗಳದ್ದು, ಅದನ್ನು ಮೂರಾಬಟ್ಟೆಯಾಗಿಸಬಾರದು ಎಂಬ ಕನಿಷ್ಠ ಕಲ್ಪನೆಯೂ ಇರುವುದಿಲ್ಲ. ಕೈಯಲ್ಲಿದ್ದುದನ್ನು ವ್ಯಯಿಸೋಣ, ಇಂದು ಖುಷಿಯಾಗಿರೋಣ, ನಾಳೆಗೆ ಮುಂದೆ ನೋಡಿಕೊಂಡರಾಯಿತು ಎಂಬ ಉಡಾಫೆ, ಬೇಜವಾಬ್ದಾರಿತನ. ತಾನೊಬ್ಬನೇ ಶ್ರೇಷ್ಠ, ಉಳಿದವರು ಕನಿಷ್ಠ, ತಾನೇ ಮೇಲು ಉಳಿದವರು ಕೀಳು, ತಾನು ಮಾತ್ರ ಪಂಡಿತ ಮಿಕ್ಕವರೆಲ್ಲ ಪಾಮರರು – ಈ ಮೊದಲಾದ ದುರಹಂಕಾರ, ದುಷ್ಟ ಪ್ರವೃತ್ತಿ, ಭೇದಭಾವ, ಹಠಮಾರಿತನಗಳು ಬದುಕನ್ನು ಮೂರಾಬಟ್ಟೆಯಾಗಿಸುತ್ತಿದ್ದರೂ ಅದನ್ನು ಅರಿತುಕೊಳ್ಳುವಷ್ಟು ವ್ಯವಧಾನವಾಗಲೀ ತಿಳಿವಳಿಕೆಯಾಗಲೀ ಕನಿಷ್ಠ ಜ್ಞಾನವಾಗಲೀ, ಹಂಬಲವಾಗಲೀ ಮನುಷ್ಯನಲ್ಲಿಲ್ಲ. ತಾನು ಬದುಕಿ ಉಳಿದವರನ್ನು ಬದುಕಗೊಡೋಣ ಎಂಬ ಉದಾತ್ತಮನೋಭಾವವೂ ಇಲ್ಲ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಅದನ್ನು ತಿಳಿದಿದ್ದರೂ ಬದುಕನ್ನು ತಳ ಒಡೆದ, ಹಾಯಿ ಹರಿದ ದೋಣಿಯನ್ನಾಗಿ ಮಾಡಿ, ಕೊನೆಗೊಂದು ದಿನ ಮರಣತೀರದಲ್ಲಿನ ದಟ್ಟವಾದ ಕತ್ತಲೆಯಲ್ಲಿ ಕಲೆತು, ಬೆರೆತು ಕರಗಿಹೋಗುತ್ತೇವೆ. ಹುಟ್ಟಿ ಒಂದಷ್ಟು ದಿನಗಳ ಕಾಲ ಹೇಗೋ ಬದುಕಿ ಕೊನೆಗೊಂದು ದಿನ ಸಾಯುವುದು ಮಾತ್ರ ಬದುಕೇ? ಅದೇ ಬದುಕು ಎಂದಾದರೆ ಭೂಮಿಯಲ್ಲಿನ ಸಕಲ ಜೀವರಾಶಿಗಳೂ ಬದುಕುತ್ತವೆ, ಅವಧಿ ಮುಗಿದೊಡನೆ ಸಾಯುತ್ತವೆ. ಆದರೆ ಮನುಷ್ಯ ಅವೆಲ್ಲವುಗಳಿಗಿಂತ ಭಿನ್ನವಾಗಿರುವುದರಿಂದ ನಮ್ಮ ಜೀವಮಾನದ ಸಾಧನೆ ಏನು? ಮುಂದಿನ ಜನಾಂಗಕ್ಕೆ ನಮ್ಮ ಜೀವನದರ್ಶನ, ಮಾರ್ಗದರ್ಶನಗಳೇನು?! ಎಲ್ಲವೂ ಶೂನ್ಯವಲ್ಲದೆ ಇನ್ನೇನು?! ಕಾಯ ಅಳಿದರೂ ಸಾಧನೆ ಉಳಿಯುವಂತೆ ಬದುಕಬೇಕಲ್ಲ! ಅಳಿದ ಮೇಲೂ ಬದುಕುಳಿಯಬೇಕಲ್ಲ! ಅದಿಲ್ಲದೆ “ಬದುಕು” ಎಂಬುದಕ್ಕೆ ಅರ್ಥವೇನು?! ಗುರಿಯೇನು?! ಸಾರ್ಥಕ್ಯವಾದರೂ ಏನು?!
ಉಪಸಂಹಾರ:
ಎಂ. ಗೋಪಾಲಕೃಷ್ಣ ಅಡಿಗರ “ಅಳುವ ಕಡಲೊಳು” ಎಂದೇ ಪ್ರಸಿದ್ಧವಾದ “ಇದು ಬಾಳು” ಎಂಬ ಈ ಭಾವಗೀತೆ ಒಂದರ್ಥದಲ್ಲಿ ಬದುಕಿನ ದರ್ಶನಗೀತೆ, ಇನ್ನೊಂದರ್ಥದಲ್ಲಿ ಬದುಕಿನ ಮೀಮಾಂಸಾ ಗೀತೆ. ಇದು ಮನುಷ್ಯನ ಹುಟ್ಟಿನ ಸಂಭ್ರಮದ ನಗೆಯೊಂದಿಗೆ ಪ್ರಾರಂಭವಾಗಿ ಆತನ ಅವಸಾನದ ನಿರಾಸೆಯೊಂದಿಗೆ ಕೊನೆಗೊಳ್ಳುತ್ತದೆ. ಹುಟ್ಟು ನಗುವಿಗೆ, ಸಾವು ಅಳುವಿಗೆ ಕಾರಣವಾಗುವುದು ಸಹಜವಾದರೂ ಅವೆರಡರ ನಡುವೆ ಆಗಬೇಕಾದ ಸಾಧನೆ, ಗಳಿಸಿಕೊಳ್ಳಬೇಕಾದ ತಿಳಿವಳಿಕೆ, ಬೆಸೆಯಬೇಕಾದ ಬಂಧ, ತೋರಬೇಕಾದ ಪಥದರ್ಶನ ಎಲ್ಲವೂ ಗೌಣ. ಈ ರೀತಿಯ ಪ್ರವೃತ್ತಿ, ಉಡಾಳತನ ಇಂದು ನಿನ್ನೆಯದಲ್ಲ. ನಿರಂತರವಾದದ್ದು. ಬದುಕಿನ ವಾಸ್ತವವನ್ನು ಅರಿತುಕೊಂಡರೂ ಸಾಧಿಸಬೇಕೆಂಬ, ಅಳಿದ ಮೇಲೂ ಸಾಧನೆ ಉಳಿಯಬೇಕೆಂಬ ಇರಾದೆ ಯಾರಿಗೂ ಇದ್ದಂತಿಲ್ಲ ಎಂಬುದನ್ನು ಈ ಭಾವಗೀತೆ ದರ್ಶಿಸುತ್ತದೆ. ಬಾಹ್ಯ ಆಕರ್ಷಣೆಗಳು, ಅನ್ಯರ ಮೋಡಿಯ ಮಾತುಗಳು ಹೇಗೆ ಇನ್ನೊಬ್ಬರ ಬದುಕಿನ ದಾರಿಯನ್ನು ಹೊರಳಿಸುತ್ತವೆ, ಬದುಕೆಂಬ ದೋಣಿಯಲ್ಲಿ ಜೀವನಯಾನವನ್ನು ಕೈಗೊಂಡಿರುವಾಗ ಅದು ತಳವೊಡೆದಿದೆ, ಅದನ್ನು ಆ ಕ್ಷಣದಲ್ಲಿಯೇ ದುರಸ್ತಿಗೊಳಿಸಬೇಕೆಂಬ ಕನಿಷ್ಠ ತಿಳಿವಳಿಕೆಯನ್ನು ಮರೆಸುತ್ತವೆ. ಹೆಜ್ಜೆಹೆಜ್ಜೆಯ ಅನುಭವದಿಂದ ಮುಂದಿನ ಹೆಜ್ಜೆಯ ಸಂದರ್ಭದಲ್ಲಿ ಎಚ್ಚರವಹಿಸಬೇಕೆಂಬ ಕಾಳಜಿಯನ್ನು ಮರೆಸುತ್ತವೆ. ಬದುಕು ನಮಗಾಗಿ ಅಲ್ಲ, ಇನ್ಯಾರಿಗೋ ಎಂಬಂತಹ ಮನೋಭಾವ ಮನಸ್ಸಿನಲ್ಲಿ ತುಂಬಿಕೊಂಡಿರುವುದರಿಂದಲೇ ಬದುಕಿನಲ್ಲಿ ಶೂನ್ಯವನ್ನೇ ಸಂಪಾದಿಸುವ ಪ್ರವೃತ್ತಿ ನಿರಂತರ ನಡೆದುಕೊಂಡೇ ಬರುತ್ತಿದೆ. ಮನುಷ್ಯ ಸ್ವಯಂ ತಿಳಿವಳಿಕೆಯಿಂದ ಎಚ್ಚೆತ್ತುಕೊಳ್ಳಬೇಕು, ಸ್ವಾನುಭವದಿಂದ ಹೊಸಪಾಠವನ್ನು ಕಲಿಯಬೇಕು, ಪರಸ್ಪರರಿಗೆ ಪರಸ್ಪರರ ಬದುಕು ಪೂರಕವಾಗಬೇಕು. ಅದರ ಆದ್ಯಂತಗಳನ್ನು ತಿಳಿಯುವ ಪ್ರಯತ್ನಮಾಡಬೇಕು. ಬದುಕು ಪರಿಪೂರ್ಣವಲ್ಲದಿದ್ದರೂ ಅದನ್ನು ಸಾಧ್ಯವಾದಷ್ಟು ನೇರ್ಪುಗೊಳಿಸಿ ಸರ್ವಾಂಗ ಸುಂದರಗೊಳಿಸಬೇಕು. ಅದು ಮುಂದಿನ ಜನಾಂಗಕ್ಕೆ ಮಾತ್ರವಲ್ಲ, ಲೋಕಕ್ಕೆ ಮಾದರಿಯಾಗಬೇಕು ಎಂಬುದೇ ಕವಿಯ ಆಶಯ.
*****
ಡಾ. ವಸಂತ್ ಕುಮಾರ್ ಉಡುಪಿ.
ಈ ಭಾವಗೀತೆಯನ್ನು ಸಂಗೀತದ ಹಿನ್ನೆಲೆಯಲ್ಲಿ ಆಲಿಸಿ. ಈ ಭಾವಗೀತೆಯನ್ನು ಸಾಕಷ್ಟು ಮಂದಿ ಸಂಗೀತಜ್ಞರು ಹಾಡಿದ್ದರೂ ಯಾರೊಬ್ಬರೂ ಈ ಭಾವಗೀತೆಯ ಎಲ್ಲಾ ಕಂಡಿಕೆಗಳು ಹಾಡುವುದಕ್ಕೆ ಅನುಕೂಲಕರವಾಗಿಯೇ ಇದ್ದರೂ ಭಾವಗೀತೆಯ ಪೂರ್ಣಪಾಠವನ್ನು ಯಾರೂ ಹಾಡಿಲ್ಲ. ಇಲ್ಲಿ ಎರಡು ಲಿಂಕ್ ಗಳನ್ನು ನೀಡಲಾಗಿದೆ. ಮೊದಲಿನ ಲಿಂಕ್ ನಲ್ಲಿ ಹಾಡದ ಒಂದು ಕಂಡಿಕೆ ಎರಡನೆಯ ಲಿಂಕ್ ನಲ್ಲಿದೆ. ಆಸಕ್ತ ಸಹೃದಯರು ಕೇಳಿ ಆನಂದಿಸಬಹುದು. ಸಹೃದಯರು ತಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ನಮೂದಿಸಬಹುದು. (ಭಾವಗೀತೆಯನ್ನು ಹಾಡುವ ಸಂದರ್ಭದಲ್ಲಿ ಕೆಲವು ಪಾಠಾಂತರಗಳನ್ನು ಕಾಣಬಹುದು. ವ್ಯಾಖ್ಯಾನಕ್ಕೆ ಬಳಸಿರುವ ಭಾವಗೀತೆ ಮೂಲಪಾಠವನ್ನು ಹೊಂದಿದೆ)