ಸಾಹಿತ್ಯಾನುಸಂಧಾನ

ಎಲ್ಲಿದನೆಲ್ಲಿದಂ ಕುರುಮಹೀಪತಿ – ರನ್ನ

ಎಲ್ಲಿದನೆಲ್ಲಿದಂ ಕುರುಮಹೀಪತಿಯೆಲ್ಲಿದನೆಲ್ಲಿದಂ ಮಹೀ

ವಲ್ಲಭನಿಂದುವಂಶತಿಲಕಾನ್ವಯನೆಲ್ಲಿದನೆಲ್ಲಿದಂ ಲಸ

ತ್ಪಲ್ಲವಕೀರ್ತಿ ಚಾರುತರಮೂರ್ತಿ ಫಣೀಂದ್ರಪತಾಕನೆಲ್ಲಿ ತಾ

ನೆಲ್ಲಿದನೆಲ್ಲಿದಂ ಗಡ ಮನಃಪ್ರಿಯನೆಲ್ಲಿದನೋ ಸುಯೋಧನಂ

(ಸಾಹಸಭೀಮವಿಜಯಂ, ೧೦-೧೪)

ಇದು ರನ್ನನ ಸಾಹಸಭೀಮವಿಜಯಂ (ಗದಾಯುದ್ಧ) ಕಾವ್ಯದ ಹತ್ತನೆಯ ಆಶ್ವಾಸದಲ್ಲಿ ಬರುವ ಪದ್ಯ. ಬಹುಶಃ ರನ್ನನ ಕಾವ್ಯದಲ್ಲಿಯೇ ಅತ್ಯಂತ ಧ್ವನಿಪೂರ್ಣವಾದ ಮಾತ್ರವಲ್ಲ, ಯಾವುದೇ ಕಾಲದ ಸಾಮಾಜಿಕ ಜೀವನದೊಂದಿಗೆ ಅನುಸಂಧಾನವನ್ನು ಹೊಂದಬಲ್ಲ ಪದ್ಯ ಎನ್ನಬಹುದು.  ಕುರುಕ್ಷೇತ್ರಯುದ್ಧದ ಹದಿನೇಳು ದಿನಗಳ ಯುದ್ಧ ಮುಗಿದ ಮೇಲೆ ದುರ್ಯೋಧನ ಒಬ್ಬಂಟಿಗನಾಗುತ್ತಾನೆ. ಆತನ ಸೇನೆಯೆಲ್ಲವೂ ನಾಶವಾಗಿದೆ. ಅಶ್ವತ್ಥಾಮ ಈಗಾಗಲೇ ಕೋಪಿಸಿಕೊಂಡು ಯುದ್ಧರಂಗದಿಂದ ನಿರ್ಗಮಿಸಿದ್ದಾನೆ. ಬಲರಾಮ ಯುದ್ಧ ಪ್ರಾರಂಭವಾಗುವುದಕ್ಕಿಂತ ಮೊದಲೇ ತೀರ್ಥಯಾತ್ರೆಗೆ ಹೋದವನು ಇನ್ನೂ ತಿರುಗಿಬಂದಿಲ್ಲ. ಕೃಪಾಚಾರ್ಯ ಹಾಗೂ ಕೃತವರ್ಮರು ಎಲ್ಲೋ ತಲೆಮರೆಸಿಕೊಂಡಿದ್ದಾರೆ. ಯುದ್ಧದ ಹದಿನೆಂಟನೆಯ ದಿನ ಯುದ್ಧಕ್ಕೆಂದು ಹೊರಟ ದುರ್ಯೋಧನ ದಿನಕಳೆದರೂ ತಿರುಗಿಬಂದಿಲ್ಲ. ಏನಾದನೆಂಬ ಸುದ್ಧಿಯೂ ಬಂದಿಲ್ಲ. ಹಾಗಾಗಿ ಆತನನ್ನು ಅರಸಿಕೊಂಡು ಧೃತರಾಷ್ಟ್ರ-ಗಾಂಧಾರಿಯರು, ದುರ್ಯೋಧನನ ರಾಣಿಯರಾದ ಭಾನುಮತಿ-ಚಂದ್ರಮತಿಯರು, ಪರಿವಾರದವರು, ಸಕಲ ಅತಿರಥ, ಮಹಾರಥ, ಅರ್ಧರಥ, ಮಾಂಡಳಿಕರ ಅಂತಃಪುರ ಕಾಂತೆಯರು ಯುದ್ಧರಂಗಕ್ಕೆ ಬಂದು ತಮ್ಮವರನ್ನು ಯುದ್ಧರಂಗದಲ್ಲಿ ಹುಡುಕಿ ಜಾಲಾಡಿ ಎಲ್ಲಿಯೂ ಕಾಣಸಿಗದೆ ಹತಾಶರಾಗುತ್ತಾರೆ. ಈ ಸಂದರ್ಭದಲ್ಲಿ ದುರ್ಯೋಧನನ ರಾಣಿಯರಾದ ಭಾನುಮತಿ ಹಾಗೂ ಚಂದ್ರಮತಿಯರು ಧೃತರಾಷ್ಟ್ರ ಹಾಗೂ ಗಾಂಧಾರಿಯ ಪಾದಗಳ ಮೇಲೆ ಬಿದ್ದುಬಿಟ್ಟು ದುರ್ಯೋಧನನ ಬಗ್ಗೆ ವಿಚಾರಿಸುತ್ತಾರೆ. ಈ ಸನ್ನಿವೇಶವನ್ನು ರನ್ನ ಈ ಕೆಳಗಿನ ಪದ್ಯದಲ್ಲಿ ಮಾರ್ಮಿಕವಾಗಿ ಚಿತ್ರಿಸಿದ್ದಾನೆ.

ಪದ್ಯದ ಅನ್ವಯಕ್ರಮ:

ಎಲ್ಲಿದನ್ ಎಲ್ಲಿದಂ ಕುರುಮಹೀಪತಿ, ಎಲ್ಲಿದನ್ ಎಲ್ಲಿದಂ ಮಹೀವಲ್ಲಭನ್, ಇಂದುವಂಶ ತಿಲಕಾನ್ವಯನ್, ಎಲ್ಲಿದನ್ ಎಲ್ಲಿದಂ ಲಸತ್ ಪಲ್ಲವ ಕೀರ್ತಿ, ಚಾರುತರ ಮೂರ್ತಿ ಫಣೀಂದ್ರ ಪತಾಕನ್ ಎಲ್ಲಿದನ್ ಎಲ್ಲಿದಂ ಗಡ ಮನಃಪ್ರಿಯನ್ ಎಲ್ಲಿದನೋ ಸುಯೋಧನಂ .

ಪದ-ಅರ್ಥ:

ಎಲ್ಲಿದನೆಲ್ಲಿದಂ-ಎಲ್ಲಿದ್ದಾನೆ? ಎಲ್ಲಿದ್ದಾನೆ?; ಕುರುಮಹೀಪತಿ-ಕುರುವಂಶದ ಮಹಾರಾಜ (ದುರ್ಯೋಧನ); ಮಹೀವಲ್ಲಭ-ಭೂಮಿಯ ಒಡೆಯ (ದುರ್ಯೋಧನ); ಇಂದುವಂಶ-ಚಂದ್ರವಂಶ;  ತಿಲಕಾನ್ವಯನ್-ತಿಲಕದಂತಿರುವ ವಂಶಸ್ಥನು(ದುರ್ಯೋಧನ); ಲಸತ್ಪಲ್ಲವಕೀರ್ತಿ-ಚಿಗುರಿನಂತೆ ಪ್ರಕಾಶಮಾನವಾದ ಕೀರ್ತಿಯುಳ್ಳವನು(ದುರ್ಯೋಧನ); ಚಾರುತರಮೂರ್ತಿ-ಸುಂದರವಾದ ಶಾರೀರವುಳ್ಳವನು, ಸುಂದರಾಂಗ(ದುರ್ಯೋಧನ); ಫಣೀಂದ್ರಪತಾಕ-ಸರ್ಪಧ್ವಜವುಳ್ಳವನು(ದುರ್ಯೋಧನ); ಮನಃಪ್ರಿಯ-ಮನದನ್ನ, ಮನಸ್ಸಿಗೆ ಪ್ರಿಯನಾದವನು (ದುರ್ಯೋಧನ); ಸುಯೋಧನ-ದುರ್ಯೋಧನ, ಕೌರವ.

ಕುರುವಂಶದ ಮಹಾರಾಜನೆನಿಸಿಕೊಂಡವನು ಎಲ್ಲಿದ್ದಾನೆ? ಎಲ್ಲಿದ್ದಾನೆ? ಕುರುಭೂಮಿಗೆ ಚಕ್ರವರ್ತಿ  ಎನಿಸಿಕೊಂಡವನು  ಎಲ್ಲಿದ್ದಾನೆ? ಎಲ್ಲಿದ್ದಾನೆ? ಚಂದ್ರವಂಶದಲ್ಲಿ ಹುಟ್ಟಿ ಅದಕ್ಕೆ ತಿಲಕಪ್ರಾಯನೆನಿಸಿಕೊಂಡವನು  ಎಲ್ಲಿದ್ದಾನೆ? ಎಲ್ಲಿದ್ದಾನೆ? ಚಿಗುರಿನಂತೆ ಪ್ರಕಾಶಮಾನವಾದ ಕೀರ್ತಿಯನ್ನು ಜಗತ್ತಿಗೆ ಪಸರಿಸಿದವನು ಎಲ್ಲಿದ್ದಾನೆ? ಎಲ್ಲಿದ್ದಾನೆ? ಸುಂದರವಾದ ಶಾರೀರವನ್ನು ಹೊಂದಿ ಸುಂದರಾಂಗನೆನಿಸಿಕೊಂಡವನು ಎಲ್ಲಿದ್ದಾನೆ? ಎಲ್ಲಿದ್ದಾನೆ? ಸರ್ಪಧ್ವಜನೆನಿಸಿಕೊಂಡು ಪ್ರಸಿದ್ಧನಾದವನು ಎಲ್ಲಿದ್ದಾನೆ? ಎಲ್ಲಿದ್ದಾನೆ? ನಮ್ಮ ಮನಸ್ಸಿಗೆ ಪ್ರಿಯನೆನಿಸಿರುವ ಮನದನ್ನನೆನಿಸಿರುವ ಸುಯೋಧನನು ಎಲ್ಲಿದ್ದಾನೆ? ಎಲ್ಲಿದ್ದಾನೆ? ಎಂದು ದುರ್ಯೋಧನನ ರಾಣಿಯರು ಧೃತರಾಷ್ಟ್ರ ಹಾಗೂ ಗಾಂಧಾರಿಯರ ಪಾದಗಳ ಮೇಲೆ ಬಿದ್ದು ತಮ್ಮ ಅಳಲನ್ನು ತೋಡಿಕೊಂಡರು.

ಈ ಪದ್ಯದಲ್ಲಿ ’ಎಲ್ಲಿದನೆಲ್ಲಿದಂ’ ಎಂಬ ಪದ ದ್ವಿರುಕ್ತಿಯಾಗಿ ಪುನರಾವರ್ತನೆಗೊಂಡು ಭಾನುಮತಿ, ಮೊದಲಾದ ದುರ್ಯೋಧನನ ರಾಣಿಯರ ಶೋಕ ಕ್ಷಣಕ್ಷಣಕ್ಕೂ ತೀವ್ರಗೊಳ್ಳುವಿಕೆಗೆ ಕಾರಣವಾಗಿದೆ. ಕರುಣರಸದ ಪ್ರತಿಪಾದನೆಗೆ ರನ್ನ ಔಚಿತ್ಯಪೂರ್ಣವಾದ ಸನ್ನಿವೇಶವೊಂದನ್ನು ಇಲ್ಲಿ ಕಲ್ಪಿಸಿಕೊಂಡಿದ್ದಾನೆ. ಇಲ್ಲಿ ವಾಚ್ಯಾರ್ಥ, ಲಕ್ಷ್ಯಾರ್ಥ ಹಾಗೂ ವ್ಯಂಗ್ಯಾರ್ಥಗಳೆಲ್ಲವೂ ಪದ್ಯದ ಅರ್ಥಪ್ರತೀತಿಗೆ ಕಾರಣವಾಗಿದ್ದರೂ ವಾಚ್ಯಾರ್ಥ, ಲಕ್ಷ್ಯಾರ್ಥಗಳಿಗಿಂತಲೂ ಹೆಚ್ಚಾಗಿ ವ್ಯಂಗ್ಯಾರ್ಥವೇ ಹೆಚ್ಚು ಪ್ರಧಾನವಾಗಿರುವುದು ಕಂಡುಬರುತ್ತದೆ.  ಒಟ್ಟಿನಲ್ಲಿ ರನ್ನ ಈ ಪದ್ಯದಲ್ಲಿ ದುರ್ಯೋಧನನ ರಾಣಿಯರ ದುಃಖವನ್ನು, ಶೋಕವನ್ನು ಅತ್ಯಂತ ಔಚಿತ್ಯಪೂರ್ಣವಾದ ಪದಸಂಯೋಜನೆಯ ಮೂಲಕ ಸಮರ್ಥವಾಗಿ ನಿರೂಪಿಸಿದ್ದಾನೆ.

ಮೇಲುನೋಟಕ್ಕೆ ಈ ಪದ್ಯದಲ್ಲಿ ಮೇಲುನೋಟಕ್ಕೆ ಭಾನುಮತಿ ಮೊದಲಾದವರ ಪ್ರಶ್ನೆಗಳೇ ಕಾಣಿಸಿಕೊಳ್ಳುತ್ತವೆ. ಆದರೆ ಪದ್ಯವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಬಹಳ ಮುಖ್ಯವಾದ ವಿಚಾರವೊಂದು  ಸ್ಪಷ್ಟವಾಗುತ್ತದೆ. ಇಲ್ಲಿ ಭಾನುಮತಿ, ಚಂದ್ರಮತಿಯರು ಧೃತರಾಷ್ಟ್ರ ಹಾಗೂ ಗಾಂಧಾರಿಯರಲ್ಲಿ ಏನನ್ನೂ ಕೇಳುತ್ತಿಲ್ಲ, ಆದರೆ ಬಹಳಷ್ಟನ್ನು  ಹೇಳುತ್ತಿದ್ದಾರೆ. ಮಾತುಗಳು ಪ್ರಶ್ನೆಗಳಾಗಿರದೆ ಪ್ರಶ್ನಾರೂಪದಲ್ಲಿರುವ ಹೇಳಿಕೆಗಳು ಎಂಬುದು ವಿದಿತವಾಗುತ್ತದೆ. ಆದರೆ ಮೇಲುನೋಟಕ್ಕೆ ಇವೆಲ್ಲವೂ ಪ್ರಶ್ನೆಗಳು ಮಾತ್ರ. ಈ ಪ್ರಶ್ನೆಗಳಿಗೆ ಧೃತರಾಷ್ಟ್ರ, ಗಾಂಧಾರಿಯರು ಎಲ್ಲಿಯೂ ಉತ್ತರಿಸುವ ಪ್ರಯತ್ನವನ್ನೇ ಮಾಡುವುದಿಲ್ಲ. ಅವುಗಳಿಗೆ ಅವರಲ್ಲಿ ಉತ್ತರವೂ ಇಲ್ಲ. ಮೇಲುನೋಟಕ್ಕೆ ಈ ಮಾತುಗಳು ಎಷ್ಟು ಕೋಮಲವಾಗಿ ಕಾಣಿಸುತ್ತವೆಯೋ ಅವುಗಳು ಅಷ್ಟೇ ಮೊನಚಾಗಿ ಧೃತರಾಷ್ಟ್ರ, ಗಾಂಧಾರಿಯರನ್ನು ಚುಚ್ಚುತ್ತವೆ ಮಾತ್ರವಲ್ಲದೆ, ಇರಿಯುತ್ತವೆ.

ಕುರುಭೂಮಿಯ ಒಡೆಯನೆಲ್ಲಿದ್ದಾನೆ? ಚಂದ್ರವಂಶಕ್ಕೆ ತಿಲಕಪ್ರಾಯದವನು ಎಲ್ಲಿದ್ದಾನೆ? ಚಿಗುರಿನಂತೆ ಪ್ರಕಾಶಮಾನವಾದ ಕೀರ್ತಿಯುಳ್ಳವನು ಎಲ್ಲಿದ್ದಾನೆ? ಸುಂದರಾಂಗನೆಲ್ಲಿದ್ದಾನೆ? ಸರ್ಪಧ್ವಜನೆಲ್ಲಿದ್ದಾನೆ? ಎಲ್ಲಕ್ಕಿಂತಲೂ ಹೆಚ್ಚಾಗಿ ನಮ್ಮ ಮನಃಪ್ರಿಯನಾದ ಸುಯೋಧನನು ಎಲ್ಲಿದ್ದಾನೆ? ಎಂಬ ಹಲವಾರು ಪ್ರಶ್ನೆಗಳಿಗೆ ಇರುವುದು ಒಂದೇ ಒಂದು ಉತ್ತರ. ಅದೂ ಆ ಪ್ರಶ್ನೆಗಳಲ್ಲಿಯೇ ಅಡಗಿಕೊಂಡಿದೆ ಎಂಬುದನ್ನು ಪರಿಭಾವಿಸಬೇಕು.  “ಇಂತಹ ದುರ್ಯೋಧನನನ್ನು ನೀವಿಬ್ಬರೂ ಸೇರಿ ಸಾಯಿಸಿ, ನಮಗೆ ವೈಧವ್ಯ ಪ್ರಾಪ್ತವಾಗುವಂತೆ ಮಾಡಿದಿರಿ” ಎಂಬುದೇ ಭಾನುಮತಿ ಚಂದ್ರಮತಿಯರ ಮಾತುಗಳ ವ್ಯಂಗ್ಯಾರ್ಥ. ಹೀಗೆ ಪರಿಭಾವಿಸುವುದಕ್ಕೂ ಒಂದು ಮುಖ್ಯವಾದ ಮಾತ್ರವಲ್ಲ, ಔಚಿತ್ಯಪೂರ್ಣವಾದ ಕಾರಣವೂ ಇದೆ.

ಭಾನುಮತಿ, ಚಂದ್ರಮತಿಯರು ಈ ಪ್ರಶ್ನೆಗಳನ್ನು ಕೇಳುತ್ತಿರುವುದು ಕುರುಕ್ಷೇತ್ರದಲ್ಲಿ, ಅರ್ಥಾತ್ ದುರ್ಯೋಧನನ ಆಳ್ವಿಕೆಗೆ ಸೇರಿದ ಮತ್ತು ಆತನ ಅಳಿವು ಉಳಿವುಗಳಿಗೆ ಕಾರಣವಾದ ಕುರುಭೂಮಿಯಲ್ಲಿ. ದುರ್ಯೋಧನನ ಆಳ್ವಿಕೆಯ ಭೂಮಿಯಲ್ಲಿಯೇ ದುರ್ಯೋಧನ ಎಲ್ಲಿದ್ದಾನೆ? ಎಂದು ವಿಚಾರಿಸುವುದು ಅತ್ಯಂತ ವಿಪರ್ಯಾಸ ಮಾತ್ರವಲ್ಲ, ದುರದೃಷ್ಟಕರವೂ ಹೌದು. ಇಲ್ಲಿ ಎರಡು ವಿಚಾರಗಳನ್ನು ಪರಿಭಾವಿಸಬೇಕು. ಮೊದಲನೆಯದು, ಭಾನುಮತಿ, ಚಂದ್ರಮತಿಯರು ಧೃತರಾಷ್ಟ್ರ ಹಾಗೂ ಗಾಂಧಾರಿಯರಲ್ಲಿ ಕ್ರಮವಾಗಿ ಕುರುಭೂಮಿಯ ಒಡೆಯನನ್ನು, ಚಕ್ರವರ್ತಿಯನ್ನು, ಚಂದ್ರವಂಶಕ್ಕೆ ತಿಲಕಪ್ರಾಯನಾದವನನ್ನು, ಚಿಗುರಿನಂತೆ ಪ್ರಕಾಶಮಾನವಾದ ಕೀರ್ತಿಯುಳ್ಳವನನ್ನು,  ಫಣೀಂದ್ರಪತಾಕನನ್ನು,  ಮನಃಪ್ರಿಯನಾದ ಸುಯೋಧನನ್ನು ವಿಚಾರಿಸುತ್ತಾರೆ. ಅವರಿಬ್ಬರೂ ಮೊದಲು ತಮ್ಮ ಗಂಡನಾದ, ಮನಃಪ್ರಿಯನಾದ ಸುಯೋಧನನನ್ನು ವಿಚಾರಿಸದೆ ಕುರುಕುಲಮಹೀಪತಿಯನ್ನು, ಚಕ್ರವರ್ತಿಯನ್ನು ವಿಚಾರಿಸಿದುದರ ಹಿಂದಿನ ಮರ್ಮ. ಎರಡನೆಯದು, ಭಾನುಮತಿ, ಚಂದ್ರಮತಿಯರು ತಾವು ದೃಷ್ಟಿಯುಳ್ಳವರಾಗಿಯೂ ದುರ್ಯೋಧನ ಕಾಣಸಿಗದಿದ್ದಾಗ ಕುರುಡನಾಗಿರುವ ಹಾಗೂ ಕಣ್ಣುಗಳಿಗೆ ಬಟ್ಟೆಕಟ್ಟಿಕೊಂಡು ಕುರುಡಿಯಂತಾಗಿರುವ ಗಾಂಧಾರಿಯರಲ್ಲಿ ವಿಚಾರಿಸಿದುದರ ಹಿಂದಿನ ಮರ್ಮ. ಈ ಎರಡೂ ವಿಚಾರಗಳು ಅತ್ಯಂತ ಮಹತ್ವಪೂರ್ಣವಾದವು. ಏಕೆಂದರೆ, ಭಾನುಮತಿ ಹಾಗೂ ಚಂದ್ರಮತಿಯರು ತಮ್ಮ ಗಂಡನಾದ ದುರ್ಯೋಧನನನ್ನು ಮೊದಲು ವಿಚಾರಿಸಬಹುದಿತ್ತು. ಹಾಗೆಯೇ ದುರ್ಯೋಧನ ಕಾಣಸಿಗದಿದ್ದಾಗ ತಮ್ಮೊಂದಿಗೆ ಬಂದಿರುವ, ದೃಷ್ಟಿಶಕ್ತಿಯಿರುವ ಪರಿವಾರದವರಲ್ಲಿ ವಿಚಾರಿಸಬಹುದಿತ್ತು. ಆದರೆ ಅವರಿಬ್ಬರೂ ಹಾಗೆ ಮಾಡದೆ ನೇರವಾಗಿ ಧೃತರಾಷ್ಟ್ರ ಹಾಗೂ ಗಾಂಧಾರಿಯರ ಕಾಲಿಗೆ ಬಿದ್ದು ಅವರಿಬ್ಬರಲ್ಲಿಯೇ ನೇರವಾಗಿ ವಿಚಾರಿಸುವುದರಲ್ಲಿ ಅವರಿಬ್ಬರ ಮನದಿಂಗಿತವನ್ನು ಕಂಡುಕೊಳ್ಳಬಹುದು.

ವಾಸ್ತವವಾಗಿ ದುರ್ಯೋಧನಾದಿಗಳ ಸಾವಿಗೆ, ಒಂದು ಸಾಮ್ರಾಜ್ಯದ ಸರ್ವನಾಶಕ್ಕೆ ಕಾರಣಕರ್ತರು ಯಾರು? ಎಂಬ ಪ್ರಶ್ನೆಗೆ  ಉತ್ತರವನ್ನು ಕಂಡುಕೊಳ್ಳುವುದು ಸುಲಭವಲ್ಲ. ಒಂದೆಡೆ ಪಾಂಡವರಿದ್ದಾರೆ, ಇನ್ನೊಂದೆಡೆ ಶಕುನಿಯಿದ್ದಾನೆ, ಮತ್ತೊಂದೆಡೆ ಕರ್ಣನಿದ್ದಾನೆ ಎಂದು ಮೇಲುನೋಟಕ್ಕೆ ಅನ್ನಿಸಿದರೂ ಅವರಾರೂ ನೇರವಾಗಿ ಕಾರಣಕರ್ತರಲ್ಲ. ದುರ್ಯೋಧನನ ಸಕಲ ಅಪರಾಧಗಳಿಗೆ ಪಾಂಡವರು ಸೇಡುತೀರಿಸಿಕೊಂಡಿದ್ದಾರೆ. ಶಕುನಿ ದಾರಿತಪ್ಪಿದ ದುರ್ಯೋಧನಾದಿಗಳನ್ನು  ಇನ್ನಷ್ಟು ಅಡ್ಡದಾರಿಗಿಳಿಸಿ ತನ್ನ ಸ್ವಾರ್ಥವನ್ನು ಸಾಧಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದ್ದಾನೆ. ಕರ್ಣನೋ ದುರ್ಯೋಧನಾದಿಗಳ ಅವ್ಯವಹಾರಗಳಿಗೆ, ಅನೈತಿಕ ಕೃತ್ಯಗಳಿಗೆ ಕುಮ್ಮಕ್ಕುನೀಡಿದ್ದಾನೆ ನಿಜ. ಆದರೆ ಇವರಾರೂ ಕುರುವಂಶದ ನಾಶಕ್ಕಾಗಲೀ, ಕುರುಸಾಮ್ರಾಜ್ಯದ ನಾಶಕ್ಕಾಗಲೀ ನೇರವಾಗಿ ಹೊಣೆಗಾರರಲ್ಲ. ಇದಕ್ಕೆ ನೇರ ಹೊಣೆಗಾರರೆಂದರೆ ಧೃತರಾಷ್ಟ್ರ ಹಾಗೂ ಗಾಂಧಾರಿಯರು. ಅದನ್ನೇ ಭಾನುಮತಿ ಹಾಗೂ ಚಂದ್ರಮತಿಯರು ಪರೋಕ್ಷವಾಗಿ ತಮ್ಮ ಪ್ರಶ್ನಾರೂಪದ ಹೇಳಿಕೆಗಳ  ಮೂಲಕ ಧೃತರಾಷ್ಟ್ರ ಹಾಗೂ ಗಾಂಧಾರಿಯರನ್ನು ಚುಚ್ಚಿದ್ದಾರೆ. ಮಿಕ್ಕವರಿಗೆ ಈ ಚುಚ್ಚುಮಾತುಗಳ ಮೊನಚು ಅರ್ಥ ಆಗದಿದ್ದರೂ ಧೃತರಾಷ್ಟ್ರ ಹಾಗೂ ಗಾಂಧಾರಿಯರಿಗೆ ಸ್ಪಷ್ಟವಾಗಿ ಮನದಟ್ಟಾಗಿದೆ. ಹಾಗಾಗಿಯೇ ಅವರು ಈ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ಸಾಧ್ಯವಾಗದೆ ತಟಸ್ಥರಾಗುತ್ತಾರೆ.

ದುರ್ಯೋಧನಾದಿಗಳ ಸಾವಿಗೆ ಮಾತ್ರವಲ್ಲ, ಕುರುಸಾಮ್ರಾಜ್ಯದ ಸರ್ವನಾಶಕ್ಕೆ ಧೃತರಾಷ್ಟ್ರ ಹಾಗೂ ಗಾಂಧಾರಿಯರೇ ನೇರ ಹೊಣೆಗಾರರು. ಏಕೆಂದರೆ, ಸಮಸ್ತ ಭರತಖಂಡಕ್ಕೆ ದುರ್ಯೋಧನನೇ ಚಕ್ರವರ್ತಿಯಾಗಿ ಮೆರೆಯಬೇಕು, ಸಕಲ ಸಂಪತ್ತಿಗೆ ಅವನೇ ಒಡೆಯನಾಗಬೇಕು, ತನ್ನ ಮಕ್ಕಳು ಸುಖವಾಗಿರಬೇಕು ಎಂಬ  ಇತಿಮಿತಿಯಿಲ್ಲದ ಸ್ವಾರ್ಥವೇ ಧೃತರಾಷ್ಟ್ರ ಹಾಗೂ ಗಾಂಧಾರಿಯರಲ್ಲಿ ತುಂಬಿಕೊಂಡಿತ್ತು. ಈ ಸ್ವಾರ್ಥಮಯ ಸಂಕಲ್ಪವನ್ನು ಜತನದಿಂದ ಕಾಪಾಡಿಕೊಂಡಿದ್ದರಿಂದಲೇ ಅವರಿಬ್ಬರೂ ತಮ್ಮ ಮಕ್ಕಳು ತಪ್ಪಿದಾಗ ತಿದ್ದಿದುದಕ್ಕೆ, ಬುದ್ಧಿವಾದ ಹೇಳಿದುದಕ್ಕೆ, ಸಂಬಂಧಗಳ ಮಹತ್ವವನ್ನು ತಿಳಿಸಿದುದಕ್ಕೆ ಮಹಾಭಾರತದಲ್ಲಿಯೇ ಯಾವುದೇ ಪುರಾವೆಗಳು ಸಿಗುವುದಿಲ್ಲ. ಧೃತರಾಷ್ಟ್ರೆನೇನೋ ಹುಟ್ಟುಕುರುಡ. ಗಾಂಧಾರಿ ಹುಟ್ಟುಕುರುಡಿಯೇನೂ ಅಲ್ಲ. ಗಂಡನಿಗಿಲ್ಲದ ದೃಷ್ಟಿ ತನಗೂ ಬೇಡ ಎಂದುಕೊಂಡು ಕಣ್ಣಿಗೆ ಬಟ್ಟೆಕಟ್ಟಿಕೊಂಡು ಕುರುಡಿಯಾದಳು. ಇದು ಯಾವ ಸೀಮೆಯ ಪಾತ್ರಿವ್ರತ್ಯ? ಮುಂದೆ ಮಕ್ಕಳಾದಾಗ ಅವರನ್ನು ನೋಡಿಕೊಳ್ಳುವುದಕ್ಕೆ, ತಪ್ಪಿದಾಗ ತಿದ್ದುವುದಕ್ಕೆ, ಒಳ್ಳೆಯ ಪ್ರಜೆಗಳಾಗಿ ರೂಪಿಸುವುದಕ್ಕೆ ತಾನಾದರೂ ಇಬ್ಬರ ದೃಷ್ಟಿಶಕ್ತಿಯನ್ನು ಹೊಂದಿರಬೇಕು ಎಂಬ ಕನಿಷ್ಠ ತಿಳಿವಳಿಕೆ ಗಾಂಧಾರಿಗಿಲ್ಲದೆ ಹೋದುದೇ ಮುಂದಿನ ಎಲ್ಲಾ ದುರಂತಗಳಿಗೆ ನಾಂದಿಯಾಯಿತು. ಯಾರೋ ಹೇಳಿದ್ದನ್ನು ಪರಾಂಬರಿಸಿ ನೋಡುವುದಕ್ಕೆ ಕಣ್ಣುಗಳನ್ನೇ ಮುಚ್ಚಿಕೊಂಡಾಗಿದೆಯಲ್ಲ!

ನೂರೊಂದು ಮಂದಿ ಮಕ್ಕಳಲ್ಲಿ ಉಳಿದವರ ವರ್ತನೆಗಳು ಒಂದು ರೀತಿಯದ್ದಾದರೆ ದುರ್ಯೋಧನ ಹಾಗೂ ದುಶ್ಶಾಸನರದ್ದು ಮತ್ತೊಂದು ರೀತಿಯದು. ಇವರಿಬ್ಬರೂ ತಮ್ಮ ಜೀವಮಾನದಲ್ಲಿ ಎಂದೂ ಧರ್ಮಮಾರ್ಗದಲ್ಲಿ ನಡೆದೇ ಇಲ್ಲವೆಂದೆನಿಸುತ್ತದೆ. ಭೀಮನಿಗೆ ವಿಷಾನ್ನವನ್ನು, ವಿಷದ ಲಡ್ಡುಗೆಗಳನ್ನು ಉಣಿಸುವ ಮೂಲಕ, ನೀರಿಗೆ ತಳ್ಳುವ ಮೂಲಕ, ಅರಗಿನ ಮನೆಗೆ ಬೆಂಕಿಕೊಟ್ಟು ಪಾಂಡವರನ್ನು ಸುಡುವುದಕ್ಕೆ ಪ್ರಯತ್ನಿಸುವ ಮೂಲಕ, ಕಪಟದ್ಯೂತವನ್ನಾಡಿ ಪಾಂಡವರನ್ನು ಕಪಟದಿಂದ ಸೋಲಿಸುವ ಮೂಲಕ, ದ್ರೌಪದಿಯನ್ನು ಅವಮಾನಕರವಾಗಿ ರಾಜಸಭೆಗೆ ಎಳೆದೊಯ್ಯುವುದರ ಮೂಲಕ, ತುಂಬಿದ ರಾಜಸಭೆಯಲ್ಲಿ ದ್ರೌಪದಿಯ ಸೀರೆಯನ್ನು ಸೆಳೆದು ಅವಮಾನಿಸುವ ಮೂಲಕ, ಪಾಂಡವರ ರಾಜ್ಯವನ್ನು ಕಸಿದುಕೊಂಡು ಅವರನ್ನು ಕಾಡಿಗಟ್ಟುವ ಮೂಲಕ ಒಂದಲ್ಲ, ಹತ್ತಲ್ಲ ನೂರಾರು ಅಪರಾಧಗಳನ್ನು ಎಸಗಿದ್ದಾರೆ. ಇವೆಲ್ಲವೂ ಧೃತರಾಷ್ಟ್ರ ಗಾಂಧಾರಿಯರಿಗೆ ತಿಳಿದಿದ್ದರೂ ಅವರೆಂದೂ ಮಕ್ಕಳನ್ನು ತಿದ್ದುವುದಕ್ಕಾಗಲೀ ಬುದ್ಧಿಹೇಳುವುದಕ್ಕೆ  ಪ್ರಯತ್ನಿಸಿದ್ದಕ್ಕಾಗಲೀ ದಂಡನೆಗೆ ಒಳಪಡಿಸಿದ್ದಕ್ಕಾಗಲೀ ಎಲ್ಲಿಯೂ ಪುರಾವೆಗಳೇ ಸಿಗುವುದಿಲ್ಲ. ಅವರಿಬ್ಬರಿಗೂ ಮಕ್ಕಳನ್ನು ತಿದ್ದುವ, ಬುದ್ಧಿಹೇಳುವ, ದಂಡಿಸುವ ನೈತಿಕಹಕ್ಕು ಮಾತ್ರವಲ್ಲ, ಅಧಿಕಾರವೂ ಇತ್ತು. ಆದರೂ ಅವರಿಬ್ಬರೂ ಪ್ರಯತ್ನಿಸಲೇ ಇಲ್ಲ. ಮಕ್ಕಳ ಮೇಲಿನ ಕುರುಡುವಾತ್ಸಲ್ಯ, ಕುರುಡುಮಮಕಾರಗಳು ಹಾಗೂ ಸಮಸ್ತ ಭೂಮಿಗೆ ತಮ್ಮ ಮಕ್ಕಳೇ ಹಕ್ಕುದಾರರಾಗಬೇಕು ಎಂಬ ಮಹತ್ವಾಕಾಂಕ್ಷೆ ಅವರಿಬ್ಬರನ್ನೂ ಪದೇಪದೇ ತಡೆಯುತ್ತಿದ್ದುವೆಂಬುದು ಸ್ಪಷ್ಟ. ಹೆತ್ತವರಾಗಿ ತಮ್ಮ ಜವಾಬ್ದಾರಿಯನ್ನು ಅವರಿಬ್ಬರೂ ನಿಷ್ಪಕ್ಷಪಾತದಿಂದ ನಿಭಾಯಿಸದೇ ಇದ್ದುದರಿಂದ ಮುಂದೆ ನಡೆದ ದುಷ್ಟ, ನೀಚ ಹಾಗೂ ಅನೈತಿಕಪರಂಪರೆಗಳಿಗೆ ಇದೇ ನಾಂದಿಯಾಯಿತು.

ದುರ್ಯೋಧನಾದಿಗಳ ಮಾತ್ರವಲ್ಲ ಒಂದು ವಂಶದ ನಾಶಕ್ಕೆ ಪ್ರಧಾನ ಕಾರಣಕರ್ತರಾದವರು ಧೃತರಾಷ್ಟ್ರ ಹಾಗೂ ಗಾಂಧಾರಿ ಎಂಬುದನ್ನು ಭಾನುಮತಿ ಹಾಗೂ ಚಂದ್ರಮತಿಯರು ಅರ್ಥಮಾಡಿಕೊಳ್ಳದಷ್ಟು ಮೂರ್ಖರಲ್ಲ. ಅವರ ಸ್ವಾರ್ಥಸಾಧನೆ ಕೇವಲ ದುರ್ಯೋಧನಾದಿ ತಮ್ಮ ನೂರು ಮಂದಿ ಮಕ್ಕಳನ್ನು ಮಾತ್ರ ಬಲಿಕೊಡಲಿಲ್ಲ. ಅವರೊಂದಿಗೆ ಅವರೆಲ್ಲರ ಹೆಂಡತಿಯರ ಬದುಕನ್ನೂ ಮಗಳು ದುಶ್ಶಲೆಯ ಬದುಕನ್ನೂ ಹೊಸಕಿಹಾಕಿದರು. ಹೆತ್ತವರ ಇಂತಹ ಸ್ವಾರ್ಥಸಾಧನೆ ಒಂದು ವಂಶದ ನಾಶಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಇಲ್ಲಿ ಅರ್ಥಮಾಡಿಕೊಳ್ಳಬಹುದು. ಭಾನುಮತಿ, ಚಂದ್ರಮತಿಯರು ಒಂದು ರಾಜವಂಶದ ಸೊಸೆಯಂದಿರಾಗಿ ತಮ್ಮ ಅತ್ತೆ ಮಾವಂದಿರ ಈ ಸಾಮಾಜಿಕ ಅಪರಾಧಗಳನ್ನು ಎತ್ತಿ ಆಡಿಕೊಳ್ಳುವುದಕ್ಕಾಗಲೀ ಅತ್ತೆ ಮಾವಂದಿರಿಗೆ ತಿಳಿಹೇಳುವುದಕ್ಕಾಗಲೀ ಅಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಸಾಧ್ಯವೂ ಇರಲಿಲ್ಲ. ತಮ್ಮ ಗಂಡನ ಹಾಗೂ ಮೈದುನಂದಿರ ಸಾವಿಗೆ ಮಾತ್ರವಲ್ಲ ಒಂದು ವಂಶದ ನಾಶಕ್ಕೆ ನೀವೇ ಕಾರಣರಾದಿರಿ ಎಂಬುದನ್ನು ನೇರವಾಗಿ ಹೇಳುವುದು ಉದ್ಧಟತನವೆನಿಸಿಕೊಳ್ಳುತ್ತದೆ.  ಅಲ್ಲದೆ, ತಮ್ಮ ಅತ್ತೆ ಮಾವಂದಿರ ಮುಂದೆ ನಿಂತು ತಮ್ಮ ಗಂಡನನ್ನು ನಿಮ್ಮ ಸ್ವಾರ್ಥಸಾಧನೆಗಾಗಿ ನೀವೇ ಬಲಿಕೊಟ್ಟಿರಿ ಎಂದು ನೇರವಾಗಿ ಆಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಮಹಾಭಾರತದ ದ್ರೌಪದಿಗೆ ಹೋಲಿಸಿದರೆ ಭಾನುಮತಿ ಹಾಗೂ ಚಂದ್ರಮತಿಯರಿಬ್ಬರೂ ಕೋಮಲ ಸ್ವಭಾವದವರು. ಅವರಿಬ್ಬರೂ ದ್ರೌಪದಿಯಷ್ಟು ನಿಷ್ಠುರ ಮನಃಸ್ಥಿತಿಯವರೂ ಅಲ್ಲ, ಕಟುಮಾತಿನವರೂ ಅಲ್ಲ. ಹಾಗಾಗಿ ಅವರು ಕಡ್ಡಿಮುರಿದಂತೆ ಹೇಳುವುದಕ್ಕೆ ಅಸಮರ್ಥರು. ಹಾಗಾಗಿಯೇ ಇಲ್ಲಿ ಭಾನುಮತಿ ಹಾಗೂ ಚಂದ್ರಮತಿಯರು ವಸ್ತುಸ್ಥಿತಿಯನ್ನು ಪರೋಕ್ಷವಾಗಿ ಹಾಗೂ ಅಷ್ಟೇ ಖಾರವಾಗಿ ಆಡಿಕೊಳ್ಳುತ್ತಾರೆ. ಧೃತರಾಷ್ಟ್ರ ಗಾಂಧಾರಿಯರಿಗೆ ಅವರ ಮಾತುಗಳ ಹಿಂದಿನ ಮರ್ಮವೆಲ್ಲವೂ ಅರ್ಥವಾಯಿತು. ಆದರೆ, ಅವುಗಳಿಗೆ ಉತ್ತರಿಸುವ ನೈತಿಕತೆಯಾಗಲೀ ಧೈರ್ಯವಾಗಲೀ ಅವರಿಬ್ಬರಲ್ಲೂ ಇಲ್ಲ. ಹಾಗಾಗಿ ಇಬ್ಬರೂ ಮೌನವಾಗುತ್ತಾರೆ. ಸೊಸೆಯಂದಿರ ಮುಂದೆ ತಲೆತಗ್ಗಿಸುತ್ತಾರೆ. ಈ ಹೀನಾಯಸ್ಥಿತಿ ಧೃತರಾಷ್ಟ್ರ ಗಾಂಧಾರಿಯರಿಗೆ ತಮ್ಮ ಸ್ವಯಂಕೃತಾಪರಾಧಗಳಿಂದ ಪ್ರಾಪ್ತವಾದುದು. ಈಗ ಅವರಿಬ್ಬರೂ ಅವುಗಳ ಫಲವನ್ನು ಅನುಭವಿಸುತ್ತಿದ್ದಾರೆ. ಆದರೆ ಯಾವ ಅಪರಾಧಗಳನ್ನೂ ಎಸಗದ ಭಾನುಮತಿ ಹಾಗೂ ಚಂದ್ರಮತಿ ಮೊದಲಾದ ತಮ್ಮ ಸೊಸೆಯಂದಿರಿಗೆ ಇಂತಹ ಘೋರಶಿಕ್ಷೆ ಏಕೆ? ಲೋಕದಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ನಾರೋ ಶಿಕ್ಷೆಯನ್ನು ಅನುಭವಿಸಬೇಕೆ?!

ಇಲ್ಲಿ ಇನ್ನೊಂದು ವಿಚಾರವನ್ನೂ ಪರಿಭಾವಿಸಬೇಕು. ದುರಹಂಕಾರಿಯಾದ, ಹಠಮಾರಿಯಾದ ನಿರಂಕುಶವಾದಿಯಾದ ದುರ್ಯೋಧನ ಹಾಗೂ ನೀಚಸ್ವಭಾವಗಳನ್ನು, ನೈತಿಕತೆಯ ಲವಲೇಶವೂ ಇಲ್ಲದ ದುರಹಂಕಾರವನ್ನು ಮೈಗೂಡಿಸಿಕೊಂಡಿರುವ ದುಶ್ಶಾಸನರ ಹೆಂಡತಿಯರು ಹಾಗೂ ದುರ್ಯೋಧನ ಮತ್ತು ದುಶ್ಶಾಸನರಿಗೆ ಸಹಾಯಮಾಡಬೇಕಾದ  ಅನಿವಾರ್ಯತೆಗೆ ಸಿಲುಕಿ ತಮ್ಮ ಬದುಕನ್ನೇ ನಾಶಮಾಡಿಕೊಂಡ ಅವರಿಬ್ಬರ ತಮ್ಮಂದಿರ ಹೆಂಡತಿಯರು ಅವರ ಬದುಕಿನಾದ್ಯಂತ ಅನುಭವಿಸಿದ ನೋವು, ಅವಮಾನ, ಹಿಂಸೆಗಳನ್ನು ನಾವು ಅರ್ಥಮಾಡಿಕೊಳ್ಳಲೇಬೇಕು. ರಾಜವಂಶದಲ್ಲಿ ಹುಟ್ಟಿದವರ  ಇಂತಹ ನೀಚಕೃತ್ಯಗಳ ಬಗ್ಗೆ ಪ್ರಜೆಗಳು ಸಾರ್ವಜನಿಕವಾಗಿ ಆಡಿಕೊಳ್ಳದಿದ್ದರೂ ಅವರ ಮನಃಸ್ಥಿತಿ ಹಾಗೂ ಅದರಿಂದ ಉಂಟಾಗಿರುವ ಸಾಮಾಜಿಕ ಅಪರಾಧಗಳ ಪರಿಣಾಮಗಳು ಅರ್ಥವಾಗದೇ ಹೋಗಲಾರವು. ಹೆತ್ತವರ ಮಾತುಗಳನ್ನೇ ಉಪೇಕ್ಷಿಸಿದವರು ತಮ್ಮತಮ್ಮ ಹೆಂಡತಿಯರ ಸಲಹೆಸೂಚನೆಗಳನ್ನಾಗಲೀ ಹಿತನುಡಿಗಳನ್ನಾಗಲೀ ಬುದ್ಧಿವಾದವನ್ನಾಗಲೀ ಕೇಳುವುದಕ್ಕೆ ಹೇಗೆ ಸಾಧ್ಯ? ತಮ್ಮ ಈ ರೀತಿಯ ಅನೈತಿಕವಾದ ವರ್ತನೆಗಳು ಸಾಮಾಜಿಕವಾಗಿ ಹೆಂಡತಿಯರ ಮಾನಕಳೆಯುತ್ತವೆ, ಅವರು ಸಾಮಾಜಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಕುಗ್ಗುತ್ತಾರೆ  ಎಂಬುದನ್ನು ಗಂಡಂದಿರು, ಕುಟುಂಬದ ಹಿರಿಯರು ಅರ್ಥಮಾಡಿಕೊಳ್ಳಬೇಕು. ಆದರೆ ಗುರುಹಿರಿಯರ ಮಾತುಗಳನ್ನು, ಬುದ್ಧಿವಾದವನ್ನೇ ಕೇಳದ ದುರ್ಯೋಧನ ಹಾಗೂ ದುಶ್ಶಾಸನರಿಬ್ಬರೂ ತಮ್ಮ ತಮ್ಮ ಹೆಂಡತಿಯರ ಮಾತುಗಳನ್ನು ಕೇಳಲು ಸಾಧ್ಯವೆ?

ಅಂದಿನ ಮಹಾಭಾರತದ ಕಥೆ ಅಂದಿಗೇ ಮುಗಿದುಹೋಗಿದೆ ಎಂದು ನಾವೆಲ್ಲರೂ ಭಾವಿಸಿಕೊಂಡಿದ್ದೇವೆ. ಸೂಕ್ಷ್ಮವಾಗಿ ಅವಲೋಕಿಸಿದರೆ ಅದೆಂದಿಗೂ ಮುಗಿಯದೆ ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ. ನಿರಂತರ ಮುಂದುವರಿಯುತ್ತಲೇ ಇರುತ್ತದೆ. ಅಂದು ದ್ವಾಪರಯುಗದಲ್ಲಿ ಒಬ್ಬ ಧೃತರಾಷ್ಟ್ರ ಹಾಗೂ ಒಬ್ಬ ಗಾಂಧಾರಿ ಇದ್ದರು. ಆದರೆ ಇಂದು ಲಕ್ಷ, ಕೋಟಿ ಸಂಖ್ಯೆಯಲ್ಲಿದ್ದಾರೆ. ಅಂದು ಒಬ್ಬ ದುರ್ಯೋಧನ ಹಾಗೂ ಒಬ್ಬ ದುಶ್ಶಾಸನರಿದ್ದರು. ಆದರೆ ಇಂದು ಲಕ್ಷ, ಕೋಟಿ ಸಂಖ್ಯೆಯಲ್ಲಿದ್ದಾರೆ. ಅಂದು ಕರ್ಣ ಹಾಗೂ ಶಕುನಿಯಂತಹವರು ಒಬ್ಬೊಬ್ಬರಿದ್ದರು. ಆದರೆ ಇಂದು ಲಕ್ಷ, ಕೋಟಿ ಸಂಖ್ಯೆಯಲ್ಲಿದ್ದಾರೆ. ಅಂದು ಪಾಂಡವರಂತಹ ಧರ್ಮಿಷ್ಠರು ಒಬ್ಬೊಬ್ಬರಿದ್ದರು. ಆದರೆ ಇಂದು ಅವರಂತಹವರು ಹುಡುಕಿದರೂ ಕಾಣಿಸಲಾರರು. ಹಾಗಾಗಿಯೇ ಇಂದು ಅನ್ನಕ್ಕೆ ವಿಷಬೆರೆಸುವ, ವಿವಿಧ ರೀತಿಗಳಿಂದ ಕೊಲೆಗೈಯುವ, ಜೀವಂತ ಸುಡುವ, ಮನೆಗಳಿಗೆ ಬೆಂಕಿಯಿಡುವ, ಅತ್ಯಾಚಾರ ಎಸಗುವ, ಸ್ತ್ರೀಮಾನಹಾನಿಗೆ ಹಪಹಪಿಸುವ, ನೀತಿನಿಯಮ ಹಾಗೂ ಕಾನೂನುವ್ಯವಸ್ಥೆಯನ್ನೇ ಮೀರಿ ಸರ್ವಾಧಿಕಾರಿಗಳಂತೆ ನಡೆದುಕೊಳ್ಳುವ, ಆಂತರಿಕವಾಗಿಯೇ ದೇಶವನ್ನು ದುರ್ಬಲಗೊಳಿಸುವ, ಧರ್ಮಿಷ್ಠರನ್ನು ನಾಶಗೈಯುವ, ಸಮಾಜವ್ಯವಸ್ಥೆಯನ್ನೇ ಬುಡಮೇಲು ಮಾಡುವ  ದುರ್ಯೋಧನಾದಿಗಳ ಮನೋಭಾವದವರ ಸಂಖ್ಯೆ ಬೆಳೆಯುತ್ತಲೇ ಇದೆ. ಇಂತಹ ಸ್ವಭಾವಗಳಿಗೆ ನೀರೆರೆದು ಪೋಷಿಸುವ ಧೃತರಾಷ್ಟ್ರ, ಗಾಂಧಾರಿಯರ ಮನೋಭಾವದವರ ಸಂಖ್ಯೆಯೂ ಬೆಳೆಯುತ್ತಲೇ ಇದೆ. ಇಂತಹವರಿಂದ ಸಮಾಜವೂ ದುರ್ಬಲಗೊಳ್ಳುತ್ತಿದೆ, ದೇಶವೂ ಕೂಡಾ. ಇಂದಿಗೂ ಮುಂದುವರಿದುಕೊಂಡು ಬರುತ್ತಿರುವ ಈ ಮಹಾಭಾರತಕ್ಕೆ ಕೊನೆಯೆಂಬುದೇ ಇಲ್ಲ.

ಡಾ. ವಸಂತ್ ಕುಮಾರ್ ಉಡುಪಿ

*****

One thought on “ಎಲ್ಲಿದನೆಲ್ಲಿದಂ ಕುರುಮಹೀಪತಿ – ರನ್ನ

  1. ….ಧರ್ಮಿಷ್ಠರು ಇಂದಿಗೂ ಇಲ್ಲದಿಲ್ಲ.ತೀರಾ ಕಡಿಮೆ ಎನ್ನಬಹುದೇನೊ. ಚೆನ್ನಾದ ವಿಶ್ಲೇಷಣೆ. ಧನ್ಯವಾದಗಳು ಸರ್.

Leave a Reply

Your email address will not be published. Required fields are marked *