ವೇದಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನ ಮಗನ ತ
ಳೋದರಿಯ ಮಾತುಳನ ಮಾವನತುಳ ಭುಜಬಲದಿ
ಕಾದಿ ಗೆಲಿದನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ
ಪದ್ಯದ ಅನ್ವಯಕ್ರಮ:
ವೇದಪುರುಷನ, ಸುತನ, ಸುತನ, ಸಹೋದರನ, ಹೆಮ್ಮಗನ, ಮಗನ, ತಳೋದರಿಯ, ಮಾತುಳನ, ಮಾವನ, ಅತುಳ ಭುಜಬಲದಿ ಕಾದಿ ಗೆಲಿದನ, ಅಣ್ಣನ, ಅವ್ವೆಯ, ನಾದಿನಿಯ ಜಠರದಲಿ ಜನಿಸಿದನ್ ಆದಿ ಮೂರುತಿ ಸಲಹೊ ಗದುಗಿನ ವೀರನಾರಯಣ.
ಪದ-ಅರ್ಥ:
ವೇದಪುರುಷ-ಆದಿಪುರುಷ, ವೇದಗಳನ್ನು ರಕ್ಷಿಸಿದವನು (ವಿಷ್ಣು); ಸುತನ-ಮಗನ (ಬ್ರಹ್ಮನ); ಸುತನ-ಮಗನ (ನಾರದನ); ಸಹೋದರನ-ಒಡಹುಟ್ಟಿದವನ (ಮರೀಚಿಯ); ಹೆಮ್ಮಗನ-ಮೊಮ್ಮಗನ(ದೇವೇಂದ್ರನ); ಮಗನ-ದೇವೇಂದ್ರನ ಮಗನ (ಅರ್ಜುನನ); ತಳೋದರಿಯ-ಹೆಂಡತಿಯ-(ಸುಭದ್ರೆಯ); ಮಾತುಳನ-ಸೋದರಮಾವನ (ಕಂಸನ); ಮಾವನ(ರೂಪನ ಎಂಬ ಪಾಠಾಂತರವೂ ಇದೆ)-ಹೆಣ್ಣುಕೊಟ್ಟ ಮಾವ (ಜರಾಸಂಧನ); ಅತುಳ ಭುಜಬಲದಿ-ಅಪ್ರತಿಮ ಬಾಹುಬಲದಿಂದ; ಕಾದಿ-ಹೋರಾಡಿ; ಗೆಲಿದನ-ಗೆದ್ದವನ (ಭೀಮನ); ಅಣ್ಣನ-ಹಿರಿಯ ಸಹೋದರನ (ಧರ್ಮಜನ); ಅವ್ವೆಯ-ತಾಯಿಯ (ಕುಂತಿಯ); ನಾದಿನಿಯ-ತಮ್ಮನ ಹೆಂಡತಿಯ (ದೇವಕಿಯ); ಜಠರದಲಿ-ಗರ್ಭದಲ್ಲಿ; ಆದಿಮೂರುತಿ (ಅನಾದಿಮೂರುತಿ ಎಂದೂ ಕೆಲವರು ಅರ್ಥೈಸಿಕೊಳ್ಳುತ್ತಾರೆ. ಅನಾದಿ ಮೂರುತಿ ಎಂದರೆ ಆದಿಯಿಲ್ಲದವನು. ಅರ್ಥದಲ್ಲೇನೂ ವ್ಯತ್ಯಾಸವಾಗುವುದಿಲ್ಲ)-ಸೃಷ್ಟಿಯಲ್ಲಿ ಮೊದಲಿಗನು (ಕೃಷ್ಣ); ಸಲಹೋ-ಕಾಪಾಡು.
ಇದು ಕುಮಾರವ್ಯಾಸನ “ಕರ್ಣಾಟ ಭಾರತ ಕಥಾಮಂಜರಿ”ಯ ಆದಿಪರ್ವದ ಪೀಠಿಕಾ ಸಂಧಿಯ ಕೊನೆಯ ಪದ್ಯ. ಇನ್ನೊಂದರ್ಥದಲ್ಲಿ ಕುಮಾರವ್ಯಾಸನ ಕಾವ್ಯದ ಕೊನೆಯ ನಾಂದಿಪದ್ಯ. ಕರ್ನಾಟಕದಲ್ಲಿ ಮಹಾಭಾರತದ ಕಥೆಯನ್ನು ಜನಸಾಮಾನ್ಯರಿಗೂ ತಲುಪಿಸಿದ ಕಾವ್ಯ ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ. ಎಳೆಯ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಮನಸೂರೆಗೊಳ್ಳುವ, ಜನಸಾಮಾನ್ಯರಿಂದ ಹಿಡಿದು ವಿದ್ಯಾವಂತರವರೆಗೂ ಆಪ್ಯಾಯಮಾನವೆನಿಸುವ, ಪಾಮರರಿಂದ ಹಿಡಿದು ಪಂಡಿತರವರೆಗೂ ಅವರವರ ಬುದ್ಧಿಮತ್ತೆಗೆ ರಸಾನುಭವವನ್ನು ಉಂಟುಮಾಡುವ ಕಾವ್ಯ ಎಂಬ ಹಲವು ಹೆಗ್ಗಳಿಕೆಗಳು ಈ ಕಾವ್ಯಕ್ಕಿವೆ. ಸರಳತೆಯಲ್ಲಿ ಗಹನತೆಯನ್ನೂ ಗಹನತೆಯಲ್ಲಿ ಪಾಂಡಿತ್ಯವನ್ನೂ ಮೈಗೂಡಿಸಿಕೊಂಡಿರುವ ಕುಮಾರವ್ಯಾಸನ ಈ ಕಾವ್ಯ ಹತ್ತು ಹಲವು ನೆಲೆಗಳಲ್ಲಿ ಪ್ರಾಮುಖ್ಯವನ್ನು ಪಡೆದುಕೊಂಡು ಇಂದಿಗೂ ವಿವಿಧ ರೀತಿಗಳಲ್ಲಿ, ವಿವಿಧ ಆಯಾಮಗಳಲ್ಲಿ ಪ್ರಸ್ತುತವಾಗಿಯೇ ಉಳಿದುಕೊಂಡಿದೆ.
ಕುಮಾರವ್ಯಾಸ ಕೇವಲ ಪಾಂಡಿತ್ಯ ಪ್ರದರ್ಶನಕ್ಕೆ ಈ ಕಾವ್ಯವನ್ನು ರಚಿಸದಿದ್ದರೂ ಅಲ್ಲಲ್ಲಿ ಪಂಡಿತೋತ್ತಮರನ್ನು ದೃಷ್ಟಿಯಲ್ಲಿಟ್ಟುಕೊಂಡು ಪಾಂಡಿತ್ಯಪೂರ್ಣವಾದ ಪದ್ಯಗಳನ್ನು ರಚಿಸಿದ್ದಾನೆ. ಈ ಮೇಲಿನ ಪದ್ಯ ಆತನ ಪಾಂಡಿತ್ಯಪ್ರತಿಭೆಗೆ ಒಂದು ನಿದರ್ಶನ. ಈ ಪದ್ಯದಲ್ಲಿ ಆತನಿಗೆ ಧರ್ಮಸಂಸ್ಥಾಪನೆಗೆ ಕಾರಣೀಭೂತನಾದ ತನ್ನ ಆರಾಧ್ಯದೈವನಾದ ಕೃಷ್ಣನೊಂದಿಗೆ ಅಂತಹ ಧರ್ಮಸಂಸ್ಥಾಪನೆಗೆ ಆತನ್ನೊಂದಿಗೆ ಸಹಕರಿಸಿದ ಪಾಂಡವರನ್ನು ಒಳಗೊಳಿಸಿಕೊಳ್ಳಬೇಕೆನ್ನುವುದು ಒಂದೆಡೆಯಾದರೆ, ತನ್ನ ಆರಾಧ್ಯದೈವ ಕೃಷ್ಣನ ಹಿಂದಣ ಚರಿತ್ರೆಯನ್ನು ಪಾಂಡವರೊಂದಿಗೆ ಮೇಳೈಸಿ ಕೃಷ್ಣನ ಮೇಲ್ಮೆಯನ್ನು ಮನದಟ್ಟುಮಾಡಿಸಬೇಕೆನ್ನುವುದು ಇನ್ನೊಂದೆಡೆ. ಹಾಗಾಗಿ ಕೃಷ್ಣನ ಮೂಲವನ್ನು ವೈಕುಂಠದಿಂದ ಆರಂಭಿಸಿ ಭೂಮಿಯಲ್ಲಿ ಅದು ವಿಸ್ತಾರಗೊಳ್ಳುವ ರೀತಿಯನ್ನು, ಅದರ ಮಹತ್ವವನ್ನು ವಿವರಿಸಿದ್ದಾನೆ.
ವೇದಪುರುಷನೆಂದರೆ ವಿಷ್ಣು. ಆತನ ಮಗ ಬ್ರಹ್ಮ. ಈ ಬ್ರಹ್ಮನ ಮಗ ನಾರದ. ಈತನ ಸಹೋದರ ಮರೀಚಿ. ಈ ಮರೀಚಿಯ ಹೆಮ್ಮಗ(ಹಿರಿಮಗ)(ಕೆಲವು ಪ್ರತಿಗಳಲ್ಲಿ ಮೊಮ್ಮಗ ಎಂಬ ಪಾಠಾಂತರವೂ ಇದೆ) ಇಂದ್ರ. ಈ ಇಂದ್ರನ ಮಗ ಅರ್ಜುನ. ಅರ್ಜುನನ ತಳೋದರಿ ಸುಭದ್ರೆ. ಈ ಸುಭದ್ರೆಯ ಸೋದರಮಾವ ಕಂಸ. ಈ ಕಂಸನ ಮಾವ(ಹೆಣ್ಣುಕೊಟ್ಟ ಮಾವ) ಜರಾಸಂಧ. ಈ ಜರಾಸಂಧನನ್ನು ಅಪ್ರತಿಮ ಬಾಹುಬಲದಿಂದ ಕಾದಾಡಿ ಜಯಿಸಿದವನು ಭೀಮ. ಈ ಭೀಮನ ಅಣ್ಣ ಧರ್ಮರಾಯ. ಧರ್ಮರಾಯನ ಅವ್ವೆ(ತಾಯಿ) ಕುಂತಿ. ಈ ಕುಂತಿಯ ನಾದಿನಿ ದೇವಕಿ. ಇಂತಹ ದೇವಕಿಯ ಗರ್ಭದಲ್ಲಿ ಜನಿಸಿದವನು ಆದಿಮೂರುತಿಯೇ ಗದುಗಿನ ವೀರನಾರಾಯಣನೆನಿಸಿರುವ ಕೃಷ್ಣ.
ಮೇಲಿನ ಪದ್ಯವನ್ನುಅರ್ಥಾನುಸಾರ ಹೀಗೆ ಅನ್ವಯಮಾಡಿಕೊಳ್ಳಬಹುದು. ವೇದಪುರುಷ ವಿಷ್ಣುವಿನ, ಸುತ ಬ್ರಹ್ಮನ, ಸುತ ನಾರದನ, ಸಹೋದರ ಮರೀಚಿಯ, ಹೆಮ್ಮಗ ಇಂದ್ರನ, ಮಗ ಅರ್ಜುನನ, ತಳೋದರಿ ಸುಭದ್ರೆಯ, ಮಾತುಳ ಕಂಸನ, ಮಾವ ಜರಾಸಂಧನ, ಅತುಳಭುಜಬಲದಿ ಕಾದಿ ಗೆಲಿದ ಭೀಮನ, ಅಣ್ಣ ಧರ್ಮಜನ, ಅವ್ವೆ ಕುಂತಿಯ, ನಾದಿನಿ ದೇವಕಿಯ ಜಠರದಲಿ ಜನಿಸಿದ ಆದಿಮೂರುತಿ ಕೃಷ್ಣ ಸಲಹೊ ಗದುಗಿನ ವೀರನಾರಾಯಣ.
ಕುಮಾರವ್ಯಾಸನ ಜಾಣ್ಮೆ ಹಾಗೂ ಪಾಂಡಿತ್ಯಗಳಿಗೆ ಈ ಪದ್ಯ ಒಂದು ನಿದರ್ಶನ. ಧರ್ಮಿಷ್ಠರಾದ ಪಾಂಡವರ ಮೇಲ್ಮೆಯನ್ನು ಹಾಗೂ ಅವರನ್ನು ಬಳಸಿಕೊಂಡು ಧರ್ಮಸಂಸ್ಥಾಪನೆ ಮಾಡಹೊರಟ ತನ್ನ ಇಷ್ಣದೇವನಾದ ಶ್ರೀಕೃಷ್ಣನನ್ನು ಹಾಗೂ ಆತನ ಔನ್ನತ್ಯವನ್ನು ಒಂದೇ ಪದ್ಯದೊಳಗೆ ಕೊಂಡಾಡಿದ್ದಾನೆ. ಮೇಲುನೋಟಕ್ಕೆ ಈ ಪದ್ಯ ಪಾಂಡಿತ್ಯಪೂರ್ಣವೆನಿಸಿದರೂ ಒಳಹೊಕ್ಕು ನೋಡಿದಾಗ ಅಷ್ಟೊಂದು ಪಾಂಡಿತ್ಯಪೂರ್ಣವೆನಿಸಿಕೊಳ್ಳದಿದ್ದರೂ ಇದೊಂದು ಪಾಂಡಿತ್ಯಪ್ರತಿಭೆಯ ಪದ್ಯ. ಕುಮಾರವ್ಯಾಸನ ಉದ್ದೇಶವೆಂದರೆ, ತನ್ನ ವಿಚಾರಗಳು ಹಿರಿಯರಿಗೂ ತಲುಪಬೇಕು. ಕಿರಿಯರಿಗೂ ಮುಟ್ಟಬೇಕು. ಅದಕ್ಕಾಗಿಯೇ ಆತ ಈ ರೀತಿಯಲ್ಲಿ ಪ್ರತಿಭೆಯೊಂದಿಗೆ ಪಾಂಡಿತ್ಯವನ್ನು ಬೆರೆಸುತ್ತಾನೆ. ಕನ್ನಡ ಕಾವ್ಯ ಪ್ರಪಂಚದಲ್ಲಿ ಕಿರಿಯರಿಂದ ಹಿಡಿದು ಹಿರಿಯರವರೆಗೂ, ಪಾಮರರಿಂದ ಹಿಡಿದು ಪಂಡಿತರವರೆಗೂ ತಲುಪುವ ಕವಿಗಳಲ್ಲಿ ಕುಮಾರವ್ಯಾಸನೇ ಮೊದಲಿಗೆನೆನಿಸಿಕೊಂಡಿದ್ದಾನೆ.
ಟಿಪ್ಪಣೆಗಳು:
೧. ವೇದಪುರುಷ
ವೇದಪುರುಷನೆಂದರೆ ವಿಷ್ಣು. ಈತನನ್ನು ಆದಿಪುರುಷನೆಂದೂ ಅನಾದಿಪುರುಷನೆಂದೂ ಕರೆಯುತ್ತಾರೆ. ಸೃಷ್ಟಿಯ ಮೊದಲಲ್ಲಿ ಆವಿರ್ಭವಿಸಿದವನು. ಆದಿಯೇ ಇಲ್ಲದವನು. ಅಲ್ಲದೆ, ಮಧುಕೈಟಭರೆಂಬ ರಾಕ್ಷಸರು ವೇದಗಳನ್ನು ಅಪಹರಿಸಿದಾಗ ವಿಷ್ಣು ಅವರಿಬ್ಬರನ್ನೂ ಕೊಂಡು ವೇದಗಳನ್ನು ರಕ್ಷಿಸಿ ವೇದಪುರುಷ ಎನಿಸಿಕೊಂಡನು. ಧರ್ಮಸಂಸ್ಥಾಪನೆಗೆ ಭೂಮಿಯಲ್ಲಿ ಕೃಷ್ಣನಾಗಿ ಆವಿರ್ಭವಿಸಿದನು.
೨. ವೇದಪುರುಷನ ಸುತ (ಬ್ರಹ್ಮ)
ಈ ಸೃಷ್ಟಿಯಲ್ಲಿ ಮೊದಲು ಆವಿರ್ಭವಿಸಿದವನು ವಿಷ್ಣು. ಆತ ಉಳಿದವರನ್ನು ಸೃಷ್ಟಿಸುತ್ತಾನೆ ಬ್ರಹ್ಮ ವಿಷ್ಣುವಿನ ನಾಭಿಕಮಲದಲ್ಲಿ ಆವಿರ್ಭವಿಸಿರುವುದರಿಂದ ಬ್ರಹ್ಮನನ್ನು ನಮ್ಮ ಕವಿಗಳು ವಿಷ್ಣುವಿನ ಮಗ ಎಂದು ವರ್ಣಿಸಿದ್ದಾರೆ.
೩. ಬ್ರಹ್ಮನ ಸುತ (ನಾರದ)
ಸ್ವಾಯಂಭುವ ಮನ್ವಂತರದ ಬ್ರಹ್ಮನ ಹತ್ತುಮಂದಿ ಮಾನಸಪುತ್ರರಲ್ಲಿ ಈತ ಒಂಬತ್ತನೆಯವನು. ಮರೀಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ, ಕ್ರತು, ಪ್ರಚೇತಸ, ವಸಿಷ್ಠ, ಹಾಗೂ ಭೃಗು ಎಂಬ ಹಿರಿಯ ಎಂಟು ಸಹೋದರರನ್ನು ಈತ ಹೊಂದಿದ್ದ. ಈತ ತ್ರಿಲೋಕ ಸಂಚಾರಿ. ಪಾಂಡವರ ಧರ್ಮಸಂಸ್ಥಾಪನೆಯ ಕಾರ್ಯದಲ್ಲಿ ಪರೋಕ್ಷವಾಗಿ ಕೈಜೋಡಿಸಿದವನು. ನಾರದನನ್ನು ಹೊರತುಪಡಿಸಿದರೆ ಮಹಾಭಾರತ ಪರಿಪೂರ್ಣವಾಗಲಾರದು.
೪. ಸಹೋದರ (ಮರೀಚಿ)
ಈತ ಸ್ವಾಯಂಭುವ ಮನ್ವಂತರದ ಬ್ರಹ್ಮನ ಮಾನಸಪುತ್ರರಲ್ಲಿ ಹಿರಿಯವನು. ಬ್ರಹ್ಮರ್ಷಿಯೆನಿಸಿರುವ ಈತ ಪ್ರಜೆಗಳ ಸೃಷ್ಟಿಕರ್ತನಾಗಿರುವುದರಿಂದ ಈತನನ್ನು ಪ್ರಜಾಪತಿ ಎಂದೂ ಕರೆಯುತ್ತಾರೆ. ಅಂಗೀರಸ ಮೊದಲಾದ ಈತನ ಕಿರಿಯ ಸಹೋದರರೆಲ್ಲರೂ ಪ್ರಜಾಪತಿಗಳು ಎನಿಸಿಕೊಂಡಿದ್ದಾರೆ.
೫. ಹೆಮ್ಮಗ (ಇಂದ್ರ)
ಮೇಲಿನ ಪದ್ಯದಲ್ಲಿ ಈತನನ್ನು ಮರೀಚಿಯ ಹೆಮ್ಮಗ ಎಂದು ಉಲ್ಲೇಖಿಸಲಾಗಿದೆ. ಮೊಮ್ಮಗ ಎಂಬ ಪಾಠಾಂತರವೂ ಇದೆ. ಮರೀಚಿಯ ಮಗನಾದ ಕಶ್ಯಪ ದಕ್ಷನ ಅದಿತಿ, ದಿತಿ, ಕದ್ರು ಮೊದಲಾದ ಹದಿಮೂರು ಮಂದಿ ಮಕ್ಕಳನ್ನು ಮದುವೆಯಾದವನು. ಕಶ್ಯಪನಿಗೆ ಅದಿತಿಯಲ್ಲಿ ಹುಟ್ಟಿದ ಮಕ್ಕಳಲ್ಲಿ ದೇವೇಂದ್ರನೂ ಒಬ್ಬ. ಮಹಾಭಾರತ ಕಥೆಯಲ್ಲಿ ಧರ್ಮಿಷ್ಠರಾದ ಪಾಂಡವರಿಗೆ ಹಲವು ರೀತಿಗಳಿಂದ ಸಹಾಯಮಾಡಿದವನು. ದೂರ್ವಾಸರ ಮಂತ್ರದ ಫಲವಾಗಿ ಕುಂತಿಗೆ ವರಮುಖೇನ ಅರ್ಜುನನನ್ನು ದಯಪಾಲಿಸಿದವನು. ಅರ್ಜುನನ ಸಾಧನೆಯಲ್ಲಿ ಪರೋಕ್ಷವಾಗಿ ಸಹಕರಿಸಿದವನು.
೫. ಮಗ (ಅರ್ಜುನ)
ಪಂಚಪಾಂಡವರಲ್ಲಿ ಮೂರನೆಯವನು. ಕುಂತಿಗೆ ದೂರ್ವಾಸರ ವರಮುಖೇನ ದೇವೇಂದ್ರನಿಂದ ಅನುಗ್ರಹೀತನಾದವನು. ಹಾಗಾಗಿ ದೇವೇಂದ್ರನ ಮಗ ಎನಿಸಿಕೊಂಡಿದ್ದಾನೆ. ಕುರುಕ್ಷೇತ್ರ ಯುದ್ಧದ ಯಶಸ್ಸಿಗೆ ಕಾರಣಕರ್ತರಲ್ಲಿ ಒಬ್ಬನಾಗಿದ್ದಾನೆ. ದೇವೇಂದ್ರನೂ ತನ್ನಿಂದ ಸಾಧ್ಯವಾದಷ್ಟು ರೀತಿಗಳಿಂದ ಅರ್ಜುನ ಕುರುಕ್ಷೇತ್ರ ಯುದ್ಧದಲ್ಲಿ ಜಯಗಳಿಸುವುದಕ್ಕೆ ಸಹಕಾರಿಯಾಗಿದ್ದಾನೆ.
೬. ತಳೋದರಿ (ಸುಭದ್ರೆ)
ಪದ್ಯದಲ್ಲಿ ಕುಮಾರವ್ಯಾಸ ಈಕೆಯನ್ನು ಅರ್ಜುನನ ತಳೋದರಿ ಎಂದು ಕರೆದಿದ್ದಾನೆ. ತಳೋದರಿ ಎಂದರೆ ಚೆಲುವೆ, ಹೆಂಡತಿ ಎಂದರ್ಥ. ಈಕೆ ವಸುದೇವ ಹಾಗೂ ದೇವಕಿಯರ ಮಗಳು. ಕಂಸನ ಸೋದರಸೊಸೆ. ಬಲರಾಮ ತನ್ನ ತಂಗಿಯಾದ ಸುಭದ್ರೆಯನ್ನು ದುರ್ಯೋಧನನಿಗೆ ಮದುವೆಮಾಡಿ ಕೊಡುವ ಪ್ರಯತ್ನದಲ್ಲಿದ್ದಾಗ ಹಾಗೂ ಉಳಿದವರಿಗೆ ಅದು ಇಷ್ಟವೂ ಇಲ್ಲದಿದ್ದಾಗ ಅರ್ಜುನನು ಇದನ್ನರಿತು ತೀರ್ಥಯಾತ್ರೆಯ ಸಂದರ್ಭದಲ್ಲಿ ಯತಿರೂಪದಿಂದ ದ್ವಾರಕೆಗೆ ಬಂದು ಕೃಷ್ಣನ ಸಲಹೆಯಂತೆ ಆಕೆಯನ್ನು ಅಪಹರಿಸಿಕೊಂಡು ಹೋಗಿ ಮದುವೆಯಾದನು.
೭. ಮಾತುಳ (ಕಂಸ)
ಈತ ಯದುವಂಶದ ರಾಜ ಉಗ್ರಸೇನನ ಮಗ. ಅಪ್ಪನನ್ನು ಸೆರೆಯಲ್ಲಿರಿಸಿ ತಾನೇ ಪಟ್ಟಾಭಿಷಿಕ್ತನಾದವನು. ಜರಾಸಂಧನ ಮಕ್ಕಳಾದ ಆಸ್ತಿ ಹಾಗೂ ಪಾಸ್ತಿಯರನ್ನು ಮದುವೆಯಾದವನು. ಈತನ ತಂಗಿ ದೇವಕಿಯ ವಿವಾಹದ ಕಾಲದಲ್ಲಿ ಕೇಳಿದ ಅಶರೀರವಾಣಿಯಿಂದ ಭ್ರಾಂತನಾಗಿ ಆಗತಾನೇ ವಿವಾಹಬಂಧನಕ್ಕೊಳಗಾದ ದೇವಕಿ ಹಾಗೂ ವಸುದೇವರನ್ನು ಸೆರೆಯಲ್ಲಿರಿಸಿ ಆಕೆಗೆ ಹುಟ್ಟಿದ ಏಳು ಮಕ್ಕಳನ್ನೂ ಕೊಂದು ಎಂಟನೆಯ ಗರ್ಭದಲ್ಲಿ ಹುಟ್ಟಿದ ಕೃಷ್ಣನನ್ನು ಕೊಲ್ಲುವುದಕ್ಕೆ ನೂರಾರು ಪ್ರಯತ್ನಗಳನ್ನು ಮಾಡಿದರೂ ಸಫಲನಾಗದೆ ಮುಂದೆ ಕೃಷ್ಣನಿಂದಲೇ ಹತನಾದನು.
೮. ಮಾವ(ಜರಾಸಂಧ)
ಈತ ಚೇದಿದೇಶದ ಬೃಹದ್ರಥ ರಾಜನ ಮಗ. ಬೃಹದ್ರಥ ರಾಜನಿಗೆ ಇಬ್ಬರು ರಾಣಿಯರಲ್ಲಿಯೂ ಮಕ್ಕಳಾಗದೇ ಇದ್ದಾಗ ಚಂಡಕೌಶಿಕನೆಂಬ ಮುನಿಯು ನೀಡಿದ ಮಾವಿನ ಹಣ್ಣನ್ನು ಪಾಲುಮಾಡಿ ತನ್ನ ಇಬ್ಬರು ರಾಣಿಯರಿಗೆ ಕೊಟ್ಟನು. ಇದರ ಫಲವಾಗಿ ಇಬ್ಬರೂ ರಾಣಿಯರು ಒಂದೊಂದು ಹೋಳನ್ನು ಹೆತ್ತರು. ಜರಾ ಎಂಬ ರಕ್ಕಸಿಯು ಆ ಎರಡೂ ಹೋಳುಗಳನ್ನು ಜೋಡಿಸಿ ಒಂದು ಜೀವಂತವಾಗುವಂತೆ ಮಾಡಿದುದರಿಂದ ಆ ಮಗುವಿಗೆ ಜರಾಸಂಧನೆಂಬ ಹೆಸರಾಯಿತು. ಇವನು ತನ್ನ ಇಬ್ಬರು ಹೆಣ್ಣುಮಕ್ಕಳಾದ ಆಸ್ತಿ ಹಾಗೂ ಪಾಸ್ತಿಯರನ್ನು ಕಂಸನಿಗೆ ಮದುವೆ ಮಾಡಿಕೊಟ್ಟಿದ್ದನು. ಹಾಗಾಗಿ ಜರಾಸಂಧ ಕಂಸನಿಗೆ ಹೆಣ್ಣುಕೊಟ್ಟ ಮಾವ. ಈ ಜರಾಸಂಧ ಲೋಕಕಂಟಕನಾದಾಗ ಮಾತ್ರವಲ್ಲದೆ ಕೃಷ್ಣನನ್ನು ಜನ್ಮತಃ ದ್ವೇಷಿಸುತ್ತ ಮಥುರೆಯ ಮೇಲೆ ಪದೇಪದೇ ದಾಳಿಮಾಡತೊಡಗಿದಾಗ ಈತನ ಉಪಟಳವನ್ನು ತಾಳಲಾರದೆ ಕೃಷ್ಣನು ಆನರ್ತದೇಶದಲ್ಲಿ ದ್ವಾರಕಾ ಎಂಬ ಪಟ್ಟಣವನ್ನು ನಿರ್ಮಿಸಿ ಅಲ್ಲಿ ತನ್ನ ವಂಶಸ್ಥರಾದ ಯಾದವರೊಡನೆ ವಾಸಿಸತೊಡಗಿದನು. ಮುಂದೆ ಕೃಷ್ಣನು ಉಪಾಯದಿಂದ ಭೀಮನನ್ನು ಹುರಿದುಂಬಿಸಿ ಜರಾಸಂಧನೊಡನೆ ಕಾದಾಡುವಂತೆ ಮಾಡಿ ಜರಾಸಂಧನ ದೇಹವನ್ನು ಎರಡಾಗಿ ಸೀಳಿ ಮೇಲೆ ಕೆಳಗಾಗಿ ಜೋಡಿಸಿ ಸಾಯುವಂತೆ ಮಾಡಿದನು.
೯. ಭೀಮ(ಭೀಮಸೇನ)
ಈತ ಪಂಚಪಾಂಡವರಲ್ಲಿಎರಡನೆಯವನು. ಕುಂತಿಗೆ ದೂರ್ವಾಸರ ಮಂತ್ರಬಲದಿಂದ ವಾಯುವಿನ ಅನುಗ್ರಹದಿಂದ ಜನಿಸಿದವನು. ಪಾಂಡವರಲ್ಲಿ ಮಹಾ ಬಲಶಾಲಿ. ಚಿಕ್ಕಂದಿನಿಂದಲೂ ಪಾಂಡವರಿಗೆ ಸಂಕಷ್ಟಗಳು ಬಂದಾಗ ಲೀಲಾಜಾಲವಾಗಿ ನಿವಾರಿಸಿದವನು. ಭೀಮನನ್ನು ಕೌರವನು ಹಲವಾರು ರೀತಿಗಳಿಂದ ಕೊಲ್ಲಲು ಪ್ರಯತ್ನಿಸಿದರೂ ಫಲಕಾರಿಯಾಗದೆ ಭೀಮಸೇನ ಇನ್ನಷ್ಟು ಬಲಶಾಲಿಯಾಗಿ ಬೆಳೆದನು. ಜರಾಸಂಧ ಹಲವಾರು ವರ್ಷಗಳಿಂದ ಕೃಷ್ಣನ ಮಥುರಾ ನಗರದ ಮೇಲೆ ದಂಡೆತ್ತಿ ಹೋಗಿ ದಾಳಿಮಾಡಿದನು. ಈತನನನ್ನು ವಧಿಸಲು ಕೃಷ್ಣ ಭೀಮಸೇನನನ್ನು ಬಳಸಿಕೊಂಡನು. ಭೀಮ ತನ್ನ ಶಕ್ತಿಸಾಮರ್ಥ್ಯದಿಂದ ಅಜೇಯನೆನಿಸಿರುವ ಜರಾಸಂಧನನ್ನು ಎರಡು ಭಾಗವಾಗಿ ಸೀಳಿ ಕೃಷ್ಣನ ಸಲಹೆಯಂತೆ ಮೇಲೆ ಕೆಳಗಾಗಿ ಜೋಡಿಸಿ ಕೊಂದುಹಾಕಿದನು.
೧೦. ಅಣ್ಣ(ಧರ್ಮರಾಯ)
ಭೀಮಸೇನನ ಅಣ್ಣ ಧರ್ಮರಾಯ. ಪಂಚಪಾಂಡವರಲ್ಲಿ ಹಿರಿಯವನು. ಅಜಾತಶತ್ರು ಎನಿಸಿಕೊಂಡವನು. ಕುಂತಿಗೆ ದೂರ್ವಾಸರ ಮಂತ್ರಬಲದಿಂದ ಯಮಧರ್ಮನ ಅನುಗ್ರಹದಿಂದ ಜನಿಸಿದವನು. ಧರ್ಮಿಷ್ಠನೂ ಸತ್ಯಸಂಧನೂ ಆಗಿದ್ದನು. ಕುರುಕ್ಷೇತ್ರ ಯುದ್ಧದ ಅನಂತರ ಹಸ್ತಿನಾವತಿಯಲ್ಲಿ ಪಟ್ಟಾಭಿಷಿಕ್ತನಾದನು. ಮಹಾಭಾರತ ಕಥೆಯಲ್ಲಿ ಧರ್ಮರಾಯನಿಗೆ ಬಹಳ ದೊಡ್ಡ ಸ್ಥಾನ ಪ್ರಾಪ್ತವಾಗಿದೆ.
೧೧. ಅವ್ವೆ(ಕುಂತಿ)
ಈಕೆ ಯದುವಂಶದ ಶೂರರಾಜನ ಮಗಳು. ವಸುದೇವನ ಸಹೋದರಿ. ಈಕೆಯ ನಿಜವಾದ ಹೆಸರು ಪೃಥಾ. ಶೂರರಾಜನ ಸೋದರತ್ತೆಯ ಮಗನಾದ ಕುಂತಲದೇಶದ ಕುಂತಿಭೋಜನು ಈಕೆಯನ್ನು ದತ್ತುಸ್ವೀಕರಿಸಿದ್ದರಿಂದ ಈಕೆ ಕುಂತಿ ಎನಿಸಿಕೊಂಡಳು. ಬಾಲ್ಯದಲ್ಲಿ ದೂರ್ವಾಸರನ್ನು ತನ್ನ ಆತಿಥ್ಯದಿಂದ ಮೆಚ್ಚಿಸಿ ಐದು ವರಗಳನ್ನು ಪಡೆದುಕೊಂಡಳು. ಮುಂದೆ ಹಸ್ತಿನಾವತಿಯ ಪಾಂಡುರಾಜನನ್ನು ವರಿಸಿ ಹಸ್ತಿನಾವತಿಯ ರಾಣಿಯಾದಳು. ಗಂಡ ಪಾಂಡುರಾಜ ಶಾಪಗ್ರಸ್ತನಾದಾಗ ಆತನೊಂದಿಗೆ ರಾಜ್ಯವನ್ನು ತ್ಯಜಿಸಿ ವನವಾಸಿಯಾದಳು. ಮಕ್ಕಳಾಗದೇ ಇದ್ದಾಗ ತನ್ನ ಪತಿಯನ್ನು ಒಪ್ಪಿಸಿ ದೂರ್ವಾಸರ ಮಂತ್ರಬಲದಿಂದ ತಾನು ಧರ್ಮರಾಯ, ಭೀಮಸೇನ ಹಾಗೂ ಅರ್ಜುನರನ್ನೂ ಮಕ್ಕಳಾಗಿ ಪಡೆದಳು. ಇನ್ನೊಂದು ಮಂತ್ರವನ್ನು ತನ್ನ ಸವತಿ ಮಾದ್ರಿಗೆ ನೀಡಿ ಅಶ್ವಿನಿ ದೇವತೆಗಳ ಮಂತ್ರಬಲದಿಂದ ನಕುಲ, ಸಹದೇವರೆಂಬ ಅವಳಿ ಮಕ್ಕಳನ್ನು ಪಡೆಯುವಂತೆ ಮಾಡಿದಳು. ಪಾಂಡುವಿನ ಮರಣಾನಂತರ ಹಲವಾರು ಕಷ್ಟನಷ್ಟಗಳನ್ನು ಅನುಭವಿಸಿದರೂ ಮುಂದೆ ಕುರುಕ್ಷೇತ್ರ ಯುದ್ಧಾನಂತರ ದೃತರಾಷ್ಟ್ರ ಗಾಂಧಾರಿಯರೊಂದಿಗೆ ವಾನಪ್ರಸ್ಥಕ್ಕೆ ಹೊರಟುಹೋದಳು. ಮಕ್ಕಳನ್ನು ಹೆರುವುದು ಮಾತ್ರವಲ್ಲ ಹೆತ್ತ ಮಕ್ಕಳನ್ನು ಹೇಗೆ ಬೇಧಭಾವವಿಲ್ಲದೆ ಸಾಕಿ ಅವರನ್ನು ಲೋಕಮಾನ್ಯರನ್ನಾಗಿ ಧರ್ಮಿಷ್ಠರನ್ನಾಗಿ ಬೆಳೆಸಬೇಕೆಂಬುದನ್ನು ಲೋಕಕ್ಕೆ ಸಾರಿ ಮಹಾಮಾತೆ ಎನಿಸಿಕೊಂಡವಳು.
೧೨. ನಾದಿನಿ(ದೇವಕಿ)
ಈಕೆ ಯದುವಂಶದ ಉಗ್ರಸೇನನ ಮಗಳು. ಯದುವಂಶದ ಶೂರರಾಜನ ಮಗನಾದ ವಸುದೇವನ ಹೆಂಡತಿ. ಮದುವೆಯ ಸಂದರ್ಭದಲ್ಲಿ ಕಂಸನಿಗೆ ಕೇಳಿದ ಅಶರೀರವಾಣಿಯಿಂದಾಗ ಕಂಸನ ಕೆಂಗಣ್ಣಿಗೆ ಗುರಿಯಾಗಿ ಗಂಡನೊಂದಿಗೆ ಸೆರೆಮನೆವಾಸವನ್ನು ಅನುಭವಿಸಿದಳು. ಮುಂದೆ ಕಂಸನ ಸೆರೆಮನೆಯಲ್ಲಿಯೇ ಏಳು ಮಕ್ಕಳನ್ನು ಹೆತ್ತರೂ ತನ್ನ ಕಣ್ಣಮುಂದೆಯೇ ಅಷ್ಟೂ ಮಕ್ಕಳನ್ನು ಕಂಸನಿಂದ ಹತರಾಗುವುದನ್ನು ನೋಡಬೇಕಾದ ದಾರುಣಸ್ಥಿತಿಯೊದಗಿತು. ಎಂಟನೆಯ ಗರ್ಭದಲ್ಲಿ ಕೃಷ್ಣನನ್ನು ಹೆತ್ತು ಕಂಸನ ರೋಷಾವಿಷ್ಟತೆಗೆ ಗುರಿಯಾದಳು. ಮುಂದೆ ಕೃಷ್ಣ ಬಲರಾಮನೊಂದಿಗೆ ಸೇರಿ ಮಥುರೆಯಲ್ಲಿ ಕಂಸನನ್ನು ಕೊಂದು ಉಗ್ರಸೇನ ಮಹಾರಾಜನನ್ನು ಸಿಂಹಸನದಲ್ಲಿ ಕುಳ್ಳಿರಿಸಿ, ತನ್ನ ತಂದೆ ತಾಯಿಯರಾದ ವಸುದೇವ ಹಾಗೂ ದೇವಕಿಯರನ್ನು ಸೆರೆಮನೆಯಿಂದ ಬಿಡುಗಡೆಗೊಳಿಸಿದನು. ಪಾಂಡವರ ತಾಯಿ ಕುಂತಿ ವಸುದೇವನ ಸಹೋದರಿಯಾದುದರಿಂದ ಸಂಬಂಧದಲ್ಲಿ ಕುಂತಿಗೆ ದೇವಕಿ ನಾದಿನಿ ಎನಿಸಿಕೊಂಡಿದ್ದಾಳೆ.
ಡಾ. ವಸಂತ್ ಕುಮಾರ್, ಉಡುಪಿ
*****
ಮೇಲಿನ ಪದ್ಯವನ್ನು ಗಮಕದ ಮೂಲಕ ಆಸ್ವಾದಿಸಿ.
ಚೆನ್ನಾಗಿ ಸರಳವಾದ ಮಾತುಗಳಲ್ಲಿ ಪದ್ಯವನ್ನು ವ್ಯಾಖ್ಯಾನಿಸಿದ್ದೀರಿ ನಿಮ್ಮ ಬರವಣಿಗೆ ಹೀಗೆ ಮುಂದುವರೆಯಲಿ