ಸಾಹಿತ್ಯಾನುಸಂಧಾನ

heading1

ಜೀವ ಜಡರೂಪ-ಡಿ.ವಿ.ಜಿ.

೨. ಜೀವ ಜಡರೂಪ ಪ್ರಪಂಚವನದಾವುದೋ

    ಆವರಿಸಿಕೊಂಡುಮೊಳನೆರೆದುಮಿಹುದಂತೆ

    ಭಾವಕೊಳಪಡದಂತೆ ಅಳತೆಗಳವಡದಂತೆ

    ಆ ವಿಶೇಷಕೆ ಮಣಿಯೊ – ಮಂಕುತಿಮ್ಮ

ಅನ್ವಯಕ್ರಮ:

ಅದು ಆವುದೋ ಜೀವ ಜಡರೂಪ ಪ್ರಪಂಚವನ್ ಆವರಿಸಿಕೊಂಡುಂ ಅಂತೆ ಒಳನೆರೆದುಂ, ಭಾವಕೆ ಒಳಪಡದಂತೆ, ಅಳತೆಗೆ ಅಳವಡದಂತೆ  ಇಹುದೋ ಆ ವಿಶೇಷಕೆ ಮಣಿಯೋ –ಮಂಕುತಿಮ್ಮ.

ಪದ-ಅರ್ಥ:

ಜೀವ-ಶಕ್ತಿ, ಪ್ರಾಣ, ಜೀವಾತ್ಮ; ಜಡರೂಪ-ನಿಸ್ತೇಜವಾದ ಸ್ಥಿತಿ, ಭಾವನಾರಹಿತವಾದ ಸ್ಥಿತಿ,ಸ್ಥಿರವಾಗುಳ್ಳ ಸ್ಥಿತಿ; ಪ್ರಪಂಚ-ವಿಶ್ವ, ಜಗತ್ತು; ಅದಾವುದೋ-ಹೆಸರಿಸಲಾಗದ್ದು, ಗುರುತಿಸಲಾಗದ್ದು; ಆವರಿಸಿಕೊಂಡುಂ-ವ್ಯಾಪಿಸಿಕೊಂಡಿದ್ದರೂ, ಸೇರಿಕೊಂಡಿದ್ದರೂ; ಒಳನೆರೆದುಂ-ಒಳಗೊಳಗೆ ಸೇರಿಕೊಂಡಿದ್ದರೂ, ಒಳಗೊಳಗೆ ವ್ಯಾಪಿಸಿಕೊಂಡಿದ್ದರೂ; ಅಂತೆ-ಹಾಗೆಯೇ; ಭಾವಕೊಳಪಡದಂತೆ-ಭಾವಗೋಚರವಾಗದ ರೀತಿಯಲ್ಲಿ; ಅಳತೆಗಳವಡದಂತೆ– ಬುದ್ಧಿಗೆ ಗೋಚರವಾಗದಂತೆ, ಅರಿವಿಗೆ ಬಾರದ ರೀತಿಯಲ್ಲಿ; ವಿಶೇಷ-ಅತಿಶಯತೆ, ಆಧಿಕ್ಯ; ಮಣಿಯೊ-ಶರಣಾಗು, .

            ಈ ಲೋಕದಲ್ಲಿ ಅದಾವುದೋ ಜೀವಾತ್ಮವೆಂಬುದು ಜಡರೂಪದಲ್ಲಿ ವಿಶ್ವವೆಲ್ಲವನ್ನೂ ಆವರಿಸಿಕೊಂಡಿದೆ. ವಿಶ್ವವ್ಯಾಪಿಯಾಗಿದ್ದರೂ ಅದು ನಮ್ಮ  ಭಾವಕ್ಕೂ ಒಳಗಾಗದೆ ಹಾಗೆಯೇ ಅಳತೆಗೂ ಒಳಪಡದೆ ಸಕಲ ಅಣು ರೇಣು ತೃಣ ಕಾಷ್ಠಗಳ   ಒಳಗೊಳಗೇ ಅಗೋಚರವಾಗಿ ಸೇರಿಕೊಂಡಿದೆ. ಅದು ಮನುಷ್ಯಬುದ್ಧಿಗೆ ನಿಲುಕದೆ, ಆತನ ಅರಿವಿಗೆ ಎಟುಕದೆ, ಕಣ್ಣಿನ ನೋಟಕ್ಕೆ ಸುಲಭಗೋಚರವಾಗದೆ, ಜ್ಞಾನಪರಿಧಿಯೊಳಗೆ ಹಿಡಿದಿಡಲಾಗದೆ ಸರ್ವಾಂತರ್ಯಾಮಿ ಎನಿಸಿಕೊಂಡು ಏಕೈಕ ಸೂತ್ರಧಾರನಂತೆ ಎಲ್ಲವೂ ತನ್ನ ವಶವರ್ತಿ ಎಂಬಂತೆ ಸಮಸ್ತ ವಿಶ್ವವನ್ನೇ ಹತೋಟಿಯಲ್ಲಿರಿಸಿಕೊಂಡು ಲಾಲಿಸಿ ಪಾಲಿಸಿ ಬೆಳಗುತ್ತಿದೆ. ಅದು ತಿಳಿದಷ್ಟೂ ಗೂಢವಾಗಿ, ಅರಿತಷ್ಟೂ ಸೂಕ್ಷ್ಮವಾಗಿ, ದೃಷ್ಟಿಸಿದಷ್ಟೂ ಅಗೋಚರವಾಗಿ ಮೆರೆದಾಡುತ್ತ ವಿಶ್ವವನ್ನೇ ಬೆಳಗುತ್ತಿರುವುದರಿಂದ  ಆ ಅತಿಶಯತೆಗೆ ಮಣಿಯಬೇಕೆನ್ನುತ್ತಾನೆ ಮಂಕುತಿಮ್ಮ.

            ಈ ಜಗತ್ತು, ಅದರಲ್ಲಿನ ಎಲ್ಲಾ ಸ್ಥಿರ, ಚರಗಳೆಲ್ಲವೂ ಒಂದು ಅಗೋಚರವಾದ ಸೂತ್ರಕ್ಕೆ ಬದ್ಧವಾಗಿವೆ. ಎಲ್ಲವೂ ಒಂದು ನಿರ್ದಿಷ್ಟ ವ್ಯವಸ್ಥೆಗೆ ಒಳಪಟ್ಟಿವೆ. ಇವೆಲ್ಲವೂ ಮಾನವನಿರ್ಮಿತವಲ್ಲ. ಮನುಷ್ಯನ ನಿರ್ಮಾಣಶಕ್ತಿಗೂ ಮಿಗಿಲಾದವು. ಬೆಳಕು-ಕತ್ತಲೆ, ಮಳೆ-ಗಾಳಿಗಳು, ನೀರಿನ ಹರಿವು, ಪ್ರಕೃತಿಯ ಕಾಲಾನುಕ್ರಮವಾದ ಬದಲಾವಣೆಗಳು, ಜೀವವೈವಿಧ್ಯ ಹಾಗೂ ಅವುಗಳಿಗೆ ಅನುಕೂಲಕರವಾದ ಸಸ್ಯವೈವಿಧ್ಯ ಎಲ್ಲವೂ ಇಲ್ಲಿ ಅನೂಚಾನವಾಗಿ, ವ್ಯವಸ್ಥಿತರೂಪದಲ್ಲಿ ರೂಢಿಗೊಂಡಿವೆ. ಈ ವ್ಯವಸ್ಥೆ ಕೇವಲ ಮನುಷ್ಯನಿಗೆ ಮಾತ್ರವಲ್ಲ, ಈ ಸೃಷ್ಟಿಯಲ್ಲಿ ಬದುಕುತ್ತಿರುವ ಸಕಲ ಜೀವಜಂತುಗಳಿಗೂ ಅನುಕೂಲಕರವಾಗಿ ವ್ಯವಸ್ಥಿತವಾಗಿದೆ. ಇವಾವುದನ್ನೂ ಮನುಷ್ಯ ನಿರ್ಮಿಸಿದ್ದಲ್ಲ. ಹಾಗಾಗಿ ಇದರ ಹಿಂದೊಂದು ಶಕ್ತಿಯಿದೆ ಎಂದಾಯಿತು. ಅದೇ ವಿಶ್ವಜೀವಾತ್ಮ. ಅದು ಜಡರೂಪದಲ್ಲಿರುವ ಈ ಜಗತ್ತಿಗೆ ಚಲನಶೀಲತ್ವವನ್ನು ರೂಢಿಗೊಳಿಸಿದೆ. ನಿರಂತರ ನಿತ್ಯನೂತನತೆಯನ್ನು ತುಂಬುತ್ತಿದೆ. ಕಣ್ಣುಗಳಿಗೆ ದೃಷ್ಟಿಗೋಚರವಾಗದ, ಮನಸ್ಸಿಗೆ ತಿಳಿವುಗೋಚರವಾಗದ, ಬುದ್ಧಿಗೆ ಅರಿವುಗೋಚರವಾಗದ ಈ ವಿಶ್ವಜೀವಾತ್ಮವನ್ನೇ ನಮ್ಮ ಹಿರಿಯರು ಒಂದು ಶಕ್ತಿ ಎಂದು ನಂಬಿದರು. ಅದನ್ನು ಭಗವಂತನೆಂದೂ ಸರ್ವಶಕ್ತನೆಂದೂ ತಿಳಿದು ಅದಕ್ಕೆ ಶರಣಾದರು. ತಮ್ಮ ಬದುಕಿಗೆ ಪೂರಕವಾಗಿರುವ ಈ ಅಗೋಚರ ಶಕ್ತಿಯನ್ನು ಅದನ್ನು ಮೀರಲಾಗದು, ನಿವಾರಿಸಲಾಗದು, ತಮ್ಮ ಹತೋಟಿಗೆ ತರಲಾಗದು ಎಂಬ ಸತ್ಯವನ್ನು ಅರಿತುಕೊಂಡು ಅದನ್ನು ಬೇರೆಬೇರೆ ಹೆಸರುಗಳಿಂದ ಕರೆದು ಕೊಂಡಾಡಿದರು, ಆರಾಧಿಸಿದರು, ಪೂಜಿಸಿದರು.

            ಈ ಪ್ರಕೃತಿ ಒಂದರ್ಥದಲ್ಲಿ ಜಡವಾಗಿ ತೋರಿದರೂ ಅದು ನಿತ್ಯ ಚಲನಶೀಲತೆಯನ್ನು ಪಡೆದುಕೊಂಡಿದೆ. ಇಲ್ಲಿ ಸಸ್ಯವೈವಿಧ್ಯವಿದೆ, ಜೀವವೈವಿಧ್ಯವೂ ಕೂಡಾ. ಕಾಲಕಾಲಕ್ಕೆ ಆಗಸದಲ್ಲಿ ಮೋಡ ದಟ್ಟೈಸುತ್ತದೆ, ಮಳೆಸುರಿಯುತ್ತದೆ, ಪ್ರಕೃತಿ ಹೊಸಚೈತನ್ಯವನ್ನು ಪಡೆದುಕೊಳ್ಳುತ್ತದೆ. ಜೀವವೈವಿಧ್ಯದ ಬದುಕಿಗೆ ಜೀವತುಂಬುತ್ತದೆ. ಒಂದೇ ಮಣ್ಣಿನಲ್ಲಿ ಹುಟ್ಟಿ, ಒಂದೇ ನೀರನ್ನುಂಡು ಬೆಳೆದ ಮರ, ಗಿಡ, ಬಳ್ಳಿಗಳು ಬಗೆಬಗೆಯ ಹೂಗಳನ್ನು ಬಿಟ್ಟು, ಬಗೆಬಗೆಯ ರುಚಿಯ ಹಣ್ಣುಹಂಪಲುಗಳನ್ನು ನೀಡಿ ಲೋಕದ ಜೀವವೈವಿಧ್ಯಕ್ಕೆ ಆಧಾರವಾಗಿವೆ. ಇವಾವುದೂ ಮಾನವನಿರ್ಮಿತವಾದವುಗಳಲ್ಲ. ಅದು ಅಸಾಧ್ಯವೂ ಕೂಡಾ. ಇವೆಲ್ಲವುಗಳ ಹಿಂದೆ ಒಂದು ಗಹನವಾದ, ಅಗಮ್ಯವಾದ, ಅಗೋಚರವಾದ, ಅವಿನಾಭಾವವೆನಿಸುವ ಶಕ್ತಿಯೊಂದಿದೆ. ಈ ಶಕ್ತಿ ಸಮಸ್ತ ವಿಶ್ವವನ್ನು, ಅದರಲ್ಲಿರುವ ಸಕಲ ಜೀವವೈವಿಧ್ಯವನ್ನು ಕಾಪಾಡುತ್ತಿದೆ. ಇವೆಲ್ಲವನ್ನೂ ಗಮನಿಸಿದಾಗ ಮಾನವ ತಾನು, ತನ್ನದು ಎಂದು ತೋರುವ ದುರಹಂಕಾರಕ್ಕೆ, ಕಾಮಕ್ರೋಧಾದಿಗಳ ದರ್ಪಕ್ಕೆ, ಅನಾಚಾರಗಳಿಗೆ, ಮೇಲ್ಮೆಗೆ ಯಾವ ಅರ್ಥವೂ ಇಲ್ಲ ಎಂಬುದನ್ನು ಹಿರಿಯರು ಕಂಡುಕೊಂಡರು. ಹಾಗಾಗಿಯೇ ವ್ಯಕ್ತವಾದಂತಿದ್ದರೂ ಅವ್ಯಕ್ತವೆನಿಸುವ, ಗೋಚರವಾದಂತಿದ್ದರೂ ಅಗೋಚರವೆನಿಸುವ,  ಅರಿವಿಗೆ ಬಂದಂತಿದ್ದರೂ ಅರಿವಾಗದಂತಿರುವ,  ವೈವಿಧ್ಯಗಳಿಂದ ಕೂಡಿದ್ದರೂ ಅದರ ಹಿಂದಿರುವ ಮರ್ಮವನ್ನೇ ಅರಿಯಲಾರದಂತಿರುವ ಈ ಶಕ್ತಿಯನ್ನು, ಅದರ ಅಸ್ತಿತ್ವವನ್ನು, ಮೇಲ್ಮೆಯನ್ನು, ಅಗಾಧತೆಯನ್ನು ಎಲ್ಲಕ್ಕಿಂತ ಮಿಗಿಲಾಗಿ ಅದರ ಸರ್ವಾಂತರ್ಯಾಮಿಯತ್ವವನ್ನು ಹಿರಿಯರು ಕಂಡುಕೊಂಡರು. ಅದಕ್ಕೆ ಮಣಿದರು, ಪೂಜಿಸಿದರು, ಗೌರವಿಸಿದರು, ಅರಿತುಕೊಂಡು ಬಾಳಿದರು. ಹಾಗಾಗಿಯೇ ಅವರ ಬಾಳಿಗೊಂದು ಸಾರ್ಥಕತೆ ಲಭಿಸಿತು. ಪ್ರಕೃತಿಯೂ ಅವರಿಂದ ಮೇಲ್ಮೆಯನ್ನು ಪಡೆದುಕೊಂಡಿತು.

            ಇಂದಿನ ಆಧುನಿಕಯುಗದಲ್ಲಿ ನಾವು ಕಣ್ಣಿಗೆ ಕಂಡದ್ದನ್ನು, ಬುದ್ಧಿಗೆ ತಿಳಿದದ್ದನ್ನು, ಅರಿವಿಗೆ ಬಂದದ್ದನ್ನು ಎಲ್ಲಕ್ಕಿಂತ ಮಿಗಿಲಾಗಿ ತಾನು ತಿಳಿದದ್ದನ್ನು ಮಾತ್ರ ಒಪ್ಪಿಕೊಳ್ಳುವ, ಸನಾತನವಾದುದನ್ನು ಸಾರಾಸಗಟಾಗಿ ತಿರಸ್ಕರಿಸುವ, ತನಗೆ ತಿಳಿದದ್ದೇ ಸತ್ಯ ಎಂದು ಪ್ರತಿಪಾದಿಸುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿದ್ದೇವೆ. ಹಣ, ಅಧಿಕಾರ, ಆಸ್ತಿ, ಅಂತಸ್ತು, ರೂಪ, ಯೌವನ, ವಿದ್ಯಾಭ್ಯಾಸ ಮೊದಲಾದವುಗಳ ಮದಗಳು ಸತ್ಯವನ್ನು, ವಾಸ್ತವವನ್ನು ಮರೆಮಾಚುತ್ತಿವೆ. ಹಾಗಾಗಿಯೇ ಸಂಬಂಧಗಳು ಕಳಚಿಕೊಂಡು ಮಾನವೀಯತೆ ಅಳಿಯುತ್ತಿದೆ. ದ್ವೇಷ, ಅಸೂಯೆ, ಮೋಸ, ವಂಚನೆಗಳು ಬೆಳೆಯುತ್ತ  ಸುಖ, ಸಂತೋಷ, ನೆಮ್ಮದಿಗಳು ಕಾಣೆಯಾಗಿವೆ. ಮನುಷ್ಯ ತಾನು ಬದುಕುತ್ತಿಲ್ಲ, ಇತರರನ್ನು ಬದುಕಗೊಡುತ್ತಿಲ್ಲ. ಪ್ರಕೃತಿಯಲ್ಲಿನ ರೂಢಿಗತವ್ಯವಸ್ಥೆಯನ್ನೇ ಮನುಷ್ಯ ಅಧ್ವಾನ ಮಾಡುತ್ತಿದ್ದಾನೆ. ತನ್ನ ಲಾಭಕ್ಕಾಗಿ, ಸ್ವಾರ್ಥಕ್ಕಾಗಿ ಬುಡಮೇಲು ಮಾಡುತ್ತಿದ್ದಾನೆ. ಆದುದರಿಂದಲೇ ಹಿಂದೆಂದೂ ಕಾಣದ ಪ್ರಾಕೃತಿಕ ವಿಕೋಪಗಳು ಕಾಣಿಸಿಕೊಂಡು ಸಕಲ ಜೀವರಾಶಿಯ ನಾಶಕ್ಕೆ ಕಾರಣವಾಗುತ್ತಿವೆ. ಇವೆಲ್ಲವನ್ನೂ ಗಮನಿಸಿದಾಗ, “ದೇವರ ಭಯವೇ ಜ್ಞಾನದ ಆರಂಭ” ಎಂಬ ಹಿಂದಿನವರ ಅನುಭವದ ಮಾತನ್ನೇ ಗಮನದಲ್ಲಿಟ್ಟುಕೊಂಡು, “ಅಗೋಚರಶಕ್ತಿಯ ಅವಗಣನೆಯೇ ನಾಶದ ಆರಂಭ” ಎಂಬುದಾಗಿ ಪರಿಭಾವಿಸಬಹುದು. ಈ ನಿಟ್ಟಿನಲ್ಲಿ ಡಿವಿಜಿಯವರ “ಆ ವಿಶೇಷಕೆ ಮಣಿಯೊ” ಎಂಬ ಮಾತು ಸದಾ ಸ್ಮರಣೀಯ ಹಾಗೂ ಮನನೀಯವಾಗಿದೆ.

ಡಾ. ವಸಂತ್ ಕುಮಾರ್, ಉಡುಪಿ

*****

Leave a Reply

Your email address will not be published. Required fields are marked *