ಸಾಹಿತ್ಯಾನುಸಂಧಾನ

heading1

ವಸಿಷ್ಠ ವಿಶ್ವಾಮಿತ್ರ ಕಲಹ – ರಾಘವಾಂಕ, ಭಾಗ-೨

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಸಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ) (ಭಾಗ-೨) 

ಶ್ರುತಿಮತ ಕುಲಾಚಾರ ಧರ್ಮಮಾರ್ಗಂ ಮಹಾ

ವ್ರತವನುಷ್ಠಾನ ಗುರುವಾಜ್ಞೆ ಲಿಂಗಾರ್ಚನೋ

ನ್ನತತಪಂ ಬ್ರಹ್ಮಕರ್ಮಂ ಬೆಳೆದ ಪುಣ್ಯವೊಳಗಾದವಂ ತೊಱೆದು ಕಳೆದು

ಸತಿಯುಳಿದತಿದಿಗಂಬರನಾಗಿ ಮುಕ್ತಕೇ

ಶಿತನಾಗಿ ನರಕಪಾಲದೊಳು ಸುರೆಯೆಱೆದು ಕುಡಿ

ಯುತ ತೆಂಕಮುಖನಾಗಿ ಹೋಹೆಂ ಹರಿಶ್ಚಂದ್ರ ಮಱೆದು ಹುಸಿಯಂ ನುಡಿದಡೆ  ||೧೧||

 

ಪದ್ಯದ ಅನ್ವಯಕ್ರಮ:

ಹರಿಶ್ಚಂದ್ರ ಮಱೆದು ಹುಸಿಯಂ ನುಡಿದಡೆ ಶ್ರುತಿಮತ, ಕುಲಾಚಾರ, ಧರ್ಮಮಾರ್ಗಂ, ಮಹಾ ವ್ರತ ಅನುಷ್ಠಾನ, ಗುರುವಾಜ್ಞೆ, ಲಿಂಗಾರ್ಚನೆ, ಉನ್ನತ ತಪಂ, ಬ್ರಹ್ಮಕರ್ಮಂ ಬೆಳೆದ ಪುಣ್ಯವೊಳಗೆ ಆದವಂ ತೊಱೆದು ಕಳೆದು, ಸತಿಯನ್ ಉಳಿದು ಅತಿ ದಿಗಂಬರನಾಗಿ ಮುಕ್ತಕೇಶಿತನಾಗಿ ನರ ಕಪಾಲದೊಳು ಸುರೆ ಎಱೆದು ಕುಡಿಯುತ್ತ ತೆಂಕಮುಖನಾಗಿ ಹೋಹೆಂ.

ಪದ-ಅರ್ಥ:

ಶ್ರುತಿಮತ-ವೇದಸಮ್ಮತ ವಿಚಾರ; ಕುಲಾಚಾರ-ವಂಶದ ಆಚಾರ;  ಧರ್ಮಮಾರ್ಗ-ಪುರುಷಾರ್ಥಗಳ ಅನುಸರಣೆ;  ಮಹಾವ್ರತ-ವಿಶೇಷ ವ್ರತ;  ಅನುಷ್ಠಾನ-ಆಚರಣೆ;  ಗುರುವಾಜ್ಞೆ-ಗುರುವಿನ ಆದೇಶ;  ಲಿಂಗಾರ್ಚನೆ-ಶಿವಾರಾಧನೆ;  ಉನ್ನತತಪ-ಕಠಿಣವಾದ ತಪಸ್ಸು;  ಬ್ರಹ್ಮಕರ್ಮ-ಪರತತ್ತ್ವದ ವಿಚಾರಗಳು;  ಆದವಂ ತೊಱೆದು-ಅಷ್ಟನ್ನೂ ತ್ಯಜಿಸಿಬಿಟ್ಟು, ಅಷ್ಟನ್ನೂ  ಮರೆತುಬಿಟ್ಟು;  ಸತಿಯನುಳಿದು-ಹೆಂಡತಿಯನ್ನು ಬಿಟ್ಟುಬಿಟ್ಟು;  ದಿಗಂಬರನಾಗಿ-ನಗ್ನನಾಗಿ;  ಮುಕ್ತಕೇಶಿತನಾಗಿ-ತಲೆಯಲ್ಲಿ ಕೇಶವೇ ಇಲ್ಲದೆ, ತಲೆ ಬೋಳಿಸಿಕೊಂಡು;  ನರಕಪಾಲ-ಮನುಷ್ಯನ ತಲೆಬುರುಡೆ; ಸುರೆ-ಮದ್ಯ, ಕಳ್ಳು;  ತೆಂಕಮುಖನಾಗಿ-ದಕ್ಷಿಣ ದಿಕ್ಕಿಗೆ ಮುಖಮಾಡಿ; ಹೋಹೆಂ-ಹೋಗುತ್ತೇನೆ;  ಮಱೆದು-ಮರೆತು;   ಹುಸಿಯಂ-ಸುಳ್ಳನ್ನು. 

            ಒಂದು ವೇಳೆ ಹರಿಶ್ಚಂದ್ರ ಮರೆತು ಸುಳ್ಳನ್ನಾಡಿದರೆ, ನಾನು ವೇದಸಮ್ಮತ ವಿಚಾರಗಳನ್ನು, ವಂಶದ ಆಚಾರಗಳನ್ನು, ಪುರುಷಾರ್ಥಗಳ ಅನುಸರಣೆಯನ್ನು, ಮುನಿಗಳು ಸಾಧಿಸಬೇಕಾದ ವಿಶೇಷ ವ್ರತಗಳನ್ನು, ಧಾರ್ಮಿಕ ಆಚರಣೆಗಳನ್ನು, ಗುರುವಿನ ಆಜ್ಞೆಯನ್ನು, ಶಿವಾರಾಧನೆಯನ್ನು, ಉನ್ನತವಾದ ತಪಸ್ಸನ್ನು, ಪರತತ್ತ್ವದ ವಿಚಾರಗಳೆಲ್ಲವನ್ನೂ ತ್ಯಜಿಸಿಬಿಟ್ಟು, ಹೆಂಡತಿಯನ್ನೂ ತ್ಯಜಿಸಿ, ನಗ್ನನಾಗಿ, ತಲೆಯನ್ನು ಬೋಳಿಸಿಕೊಂಡು, ಮನುಷ್ಯನ ತಲೆಬುರುಡೆಯಲ್ಲಿ ಸುರೆಯನ್ನು ಎರೆದು ಕುಡಿಯುತ್ತ ದಕ್ಷಿಣದಿಕ್ಕಿಗೆ ಹೊರಟುಹೋಗುತ್ತೇನೆ ಎಂದು ವಸಿಷ್ಠನು ಭೀಕರವಾದ ಪ್ರತಿಜ್ಞೆಯನ್ನು ಮಾಡಿದನು.

 

ಧರೆ ಗಗನವಡಸಿ ಕಾದುವಡೆಡೆಯಲಿಹ ಚರಾ

ಚರವೆಲ್ಲಿ ಹೊಗಲಿ ಮುನಿದಖಿಳಮಂ ಸುಟ್ಟೊಸೆದು

ಮರಳಿ ಹುಟ್ಟಿಸಬಲ್ಲ ಮುನಿಗಳಿಬ್ಬರ ಶಾಂತಿ ಸವೆದ ಕದನದ ಮುಖದಲಿ

ಇರಬಾರದೇಳಬಾರದು ನುಡಿಯಬಾರದಂ

ತಿರಬಾರದಹುದೆನಲುಬಾರದಲ್ಲೆನಬಾರ

ದೆರಡಱ ನಿರೋಧದಿಂದೊಡ್ಡೋಲಗಂ ಚಿಂತೆ ಮುಸುಕಿ ಸೈವೆಱಗಾದುದು  ||೧೨||

ಪದ್ಯದ ಅನ್ವಯಕ್ರಮ:

ಧರೆ ಗಗನವ ಅಡಸಿ ಕಾದುವಡೆ ಎಡೆಯಲಿಹ ಚರ ಅಚರ ಎಲ್ಲಿ ಹೋಗಲಿ? ಮುನಿದು ಅಖಿಳಮಂ ಸುಟ್ಟು, ಒಸೆದು ಮರಳಿ ಹುಟ್ಟಿಸಬಲ್ಲ ಮುನಿಗಳ್ ಇಬ್ಬರ ಶಾಂತಿ ಸವೆದ ಕದನದ ಮುಖದಲಿ ಇರಬಾರದು, ಏಳಬಾರದು, ನುಡಿಯಬಾರದು, ಅಂತಿರಬಾರದು, ಅಹುದೆನಲುಬಾರದು, ಅಲ್ಲೆನಬಾರದು, ಎರಡಱ ನಿರೋಧದಿಂದ ಒಡ್ಡೋಲಗಂ ಚಿಂತೆ ಮುಸುಕಿ ಸೈವಱಗಾದುದು.

ಪದ-ಅರ್ಥ:

ಧರೆ-ಭೂಮಿ;  ಗಗನವ ಅಡಸಿ-ಆಕಾಶದ ಮೇಲೆಬಿದ್ದು, ಆಕಾಶವನ್ನು ಆಕ್ರಮಿಸಿ;  ಕಾದುವಡೆ-ಹೋರಾಡುತ್ತಿರುವಾಗ;  ಎಡೆಯಲಿಹ-ಮಧ್ಯದಲ್ಲಿರುವ;  ಚರಾಚರ(ಚರ+ಅಚರ)- ಸ್ಥಾವರ ಹಾಗೂ ಜಂಗಮ ವಸ್ತುಗಳು;  ಎಲ್ಲಿಹೋಗಲಿ-ಹೇಗೆ ಬದುಕಲು ಸಾಧ್ಯ?;  ಮುನಿದು-ಸಿಟ್ಟುಗೊಂಡು, ಕೋಪಗೊಂಡು;  ಅಖಿಳಮಂ-ಸಮಸ್ತವನ್ನೂ;  ಸುಟ್ಟು-ನಾಶಮಾಡಿ;  ಒಸೆದು-ಪ್ರೀತಿಸಿ, ಮೆಚ್ಚಿಕೊಂಡು;  ಮರಳಿ ಹುಟ್ಟಿಸಬಲ್ಲ-ಮತ್ತೆ ಸೃಷ್ಟಿಸಬಲ್ಲ;  ಮುನಿಗಳಿಬ್ಬರ-ವಿಶ್ವಾಮಿತ್ರ ಹಾಗೂ ವಸಿಷ್ಠರ;  ಶಾಂತಿ ಸವೆದ ಕದನಮುಖದಲಿ-ಶಾಂತಿ ಕ್ಷೀಣಿಸಿದ ಕಾದಾಟದಲ್ಲಿ; ಇರಬಾರದು-ಸುಮ್ಮನಿರಲು ಸಾಧ್ಯವಿಲ್ಲ;  ಏಳಬಾರದು-ಸಭೆಯಿಂದ ಎದ್ದುಹೋಗಲು ಸಾಧ್ಯವಿಲ್ಲ;  ನುಡಿಯಬಾರದು-ಮಾತಾಡಲು ಸಾಧ್ಯವಿಲ್ಲ;  ಅಂತಿರಬಾರದು- ಸುಮ್ಮನಿರಲು ಸಾಧ್ಯವಿಲ್ಲ;  ಅಹುದೆನಲುಬಾರದು-ಹೌದು ಎನ್ನಲು ಸಾಧ್ಯವಿಲ್ಲ; ಅಲ್ಲೆನಬಾರದು-ಅಲ್ಲ ಎನ್ನಲೂ ಸಾಧ್ಯವಿಲ್ಲ;  ನಿರೋಧ-ಅಡ್ಡಿ, ತೊಂದರೆ;  ಸೈವೆಱಗಾಗು-ಆಶ್ಚರ್ಯಚಕಿತವಾಗು.

            ಭೂಮಿಯು ಆಕಾಶವನ್ನು ಆಕ್ರಮಿಸಿ ಹೋರಾಡತೊಡಗಿದರೆ ಈ ಭೂಮಿ ಹಾಗೂ ಆಕಾಶಗಳ ಮಧ್ಯೆ ಇರುವ ಚರಾಚರ ವಸ್ತುಗಳು(ಜೀವಸಂಕುಲಗಳು) ಹೇಗೆ ಬದುಕಲು ಸಾಧ್ಯ? ಕೋಪದಿಂದ ಭೂಮಿಯ ಮೇಲಿನ ಸಮಸ್ತವನ್ನೂ ನಾಶಮಾಡಿ, ಮನಸ್ಸುಮಾಡಿದರೆ ಮತ್ತೆ ತಮ್ಮ ತಪಸ್ಸಿನ ಶಕ್ತಿಯಿಂದ ಅಷ್ಟನ್ನೂ ಮರಳಿ ಸೃಷ್ಟಿಸಬಲ್ಲ ಸಾಮರ್ಥ್ಯದ ಮುನಿಗಳಾದ ವಿಶ್ವಾಮಿತ್ರ ಹಾಗೂ ವಸಿಷ್ಠರ ಮನಸ್ಸಿನ ಶಾಂತಿ ಕ್ಷೀಣಿಸಿದ ಈ ಕಾದಾಟದಲ್ಲಿ ಸಭಾಸದರಿಗೆ ಸುಮ್ಮನಿರಲು ಸಾಧ್ಯವಿಲ್ಲ, ಸಭೆಯಿಂದ ಎದ್ದು ಹೋಗಲೂ ಸಾಧ್ಯವಿಲ್ಲ, ಅವರಿಬ್ಬರ ಮಾತುಗಳಿಗೆ ಆಕ್ಷೇಪವ್ಯಕ್ತಪಡಿಸಲೂ ಸಾಧ್ಯವಿಲ್ಲ, ಎಲ್ಲವನ್ನೂ ಕೇಳಿಕೊಂಡು ಸುಮ್ಮನಿರಲೂ ಸಾಧ್ಯವಿಲ್ಲ, ಅವರಿಬ್ಬರ ವಾದಗಳನ್ನು ಹೌದೆನ್ನಲೂ ಅಲ್ಲವೆನ್ನಲೂ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಉಂಟಾಗಿ,  ಸಾಧ್ಯ ಅಸಾಧ್ಯಗಳೆಂಬ ಎರಡು ತೊಂದರೆಗಳಿಂದಾಗಿ ದೇವೇಂದ್ರನ ಒಡ್ಡೋಲಗದ ಸಭೆಯಲ್ಲಿ ಚಿಂತೆ ಮುಸುಕಿ ಸಭೆಯಿಲ್ಲವೂ ಆಶ್ಚರ್ಯಚಕಿತವಾಯಿತು.      

 

ಒಂದಕ್ಕೆ ಹಿತನುಡಿಯೆ ಪಕ್ಷವೆಂದೆರಡುವಂ

ಹಿಂದುಗಳೆದಿರಲುಪೇಕ್ಷಿತನೆಂದು  ಜಱೆದೊಡೆ

ಮ್ಮಿಂದಧಿಕನೇ ಎಂದು ಹೊಗಳ್ದೊಡುಪಚಾರವೆಂದೆತ್ತಿದೊಡೆ ಧೂರ್ತನೆಂದು

ನೊಂದು ಶಾಪವನೀಯದಿರರೆಂದು ಸುರಪನಾ

ನಂದರಸವಱತು ಬೆಱಗಿನ ಮೊಗದೊಳಿರಲು ನಾ

ರಂದ ಧಟ್ಟಿಸುತೆದ್ದು ಕೊಡು ವಸಿಷ್ಠಂಗೆ ಭಾಷೆಯನು ಕೌಶಿಕ ಎಂದನು  ||೧೩||

ಪದ್ಯದ ಅನ್ವಯಕ್ರಮ:

ಒಂದಕ್ಕೆ ಹಿತನುಡಿಯೆ ಪಕ್ಷಂ, ಎರಡುವಂ ಹಿಂದುಗಳೆದಿರಲು ಉಪೇಕ್ಷಿತನ್ ಎಂದು, ಜಱೆದೊಡೆ  ಎಮ್ಮಿಂದ ಅಧಿಕನೇ? ಎಂದು, ಹೊಗಳ್ದೊಡೆ ಉಪಚಾರವೆಂದು, ಎತ್ತಿದೊಡೆ ಧೂರ್ತನೆಂದು ನೊಂದು ಶಾಪವನ್ ಈಯದಿರರ್ ಎಂದು ಸುರಪನ್ ಆನಂದರಸ ಅಱತು ಬೆಱಗಿನ ಮೊಗದೊಳ್ ಇರಲು ನಾರಂದ ದಟ್ಟಿಸುತ ಎದ್ದು, ಕೌಶಿಕ, ವಸಿಷ್ಠಂಗೆ ಭಾಷೆಯನು ಕೊಡು ಎಂದನು.

ಪದ-ಅರ್ಥ:

ಒಂದಕ್ಕೆ ಹಿತನುಡಿಯೆ-ಒಬ್ಬರ ವಾದವನ್ನು ಸಮರ್ಥಿಸಿದರೆ;  ಪಕ್ಷಂ-ಪಕ್ಷಪಾತ;  ಎರಡುವಂ ಹಿಂದುಗಳೆದಿರಲು-ಇಬ್ಬರ ವಾದಗಳನ್ನೂ ತಿರಸ್ಕರಿಸಿದರೆ;  ಉಪೇಕ್ಷಿತನ್-ನಿರ್ಲಕ್ಷಿತನು; ಜಱೆದೊಡೆ-ನಿಂದಿಸಿದರೆ;  ಎಮ್ಮಿಂದ ಅಧಿಕನೇ-ನಮಗಿಂತ ಹಿರಿಯನೇ?;  ಹೊಗಳ್ದೊಡೆ-ಹೊಗಳಿದರೆ;  ಉಪಚಾರ-ಮುಖಸ್ತುತಿ;  ಎತ್ತಿದೊಡೆ-ಸಮರ್ಥಿಸಿದರೆ;  ಧೂರ್ತ-ದುಷ್ಟ; ಈಯದಿರರ್-ಕೊಡದಿರಲಾರರು;  ಸುರಪನ್-ದೇವೇಂದ್ರನು;  ಆನಂದರಸವಱತು-ಸಂತೋಷ ಬತ್ತಿಹೋಗಿ;  ಬೆಱಗಿನ-ಆಶ್ಚರ್ಯದ;  ನಾರಂದ-ನಾರದಮುನಿ;   ಧಟ್ಟಿಸುತ-ಗದರಿಸುತ್ತ. 

            ವಸಿಷ್ಠ ವಿಶ್ವಾಮಿತ್ರರ ಕಾದಾಟದಲ್ಲಿ ಒಬ್ಬರ ಮಾತನ್ನು ಸಮರ್ಥಿಸಿದರೆ ಪಕ್ಷಪಾತ ಎಂದಾಗುತ್ತದೆ. ಇಬ್ಬರ ವಾದವನ್ನೂ ತಿರಸ್ಕರಿಸಿದರೆ ನಿರ್ಲಕ್ಷವೆಂದಾಗುತ್ತದೆ. ಇಬ್ಬರನ್ನೂ ನಿಂದಿಸಿದರೆ ಇವನು ನಮಗಿಂತ ಹಿರಿಯನೇ? ಎಂಬ ಪ್ರಶ್ನೆ ಎದುರಾಗುತ್ತದೆ. ಇಬ್ಬರನ್ನೂ ಹೊಗಳಿದರೆ ಮುಖಸ್ತುತಿ ಎನಿಸಿಕೊಳ್ಳುತ್ತದೆ. ಇಬ್ಬರ ವಾದಗಳನ್ನು ಸಮರ್ಥಿಸಿದರೆ ದುಷ್ಟ ಎಂದುಕೊಂಡು ಶಾಪವನ್ನು ಕೊಡದೇ ಇರಲಾರರು ಎಂದುಕೊಂಡು ದೇವೇಂದ್ರನು ತನ್ನ ಸಂತೋಷವೆಲ್ಲವನ್ನೂ ಕಳೆದುಕೊಂಡು ಆಶ್ಚರ್ಯ ಹಾಗೂ ಗಾಬರಿಯ ಮನಃಸ್ಥಿತಿಯಲ್ಲಿದ್ದಾಗ ಸಭೆಯಲ್ಲಿ ಆಸೀನನಾಗಿದ್ದ ನಾರದನು ಗದರಿಸುತ್ತ ಎದ್ದು ನಿಂತು ವಿಶ್ವಾಮಿತ್ರನೇ, ವಸಿಷ್ಠನಿಗೆ ಭಾಷೆಯನ್ನು ಕೊಡು ಎಂದನು.

 

ಧರೆಯೊಳು ಚತುರ್ಯುಗಂಗಳು ಮರಳಿ ಮರಳಿ ಸಾ

ವಿರ ಬಾರಿ ಬಂದಡಜಂಗೊಂದು ದಿನವಾ ದಿನದ

ಪರಿ ದಿನಂ ಮೂವತ್ತು ಬರಲೇಕಮಾಸವಾ ಮಾಸ ಹನ್ನೆರಡಾಗಲು

ವರುಷವಾ ವರುಷ ಶತವೆಂಬುದೀ ಸುರಪತಿಗೆ

ಪರಮಾಯುವೀತನೀರೇಳ್ಭವಂ ಬಪ್ಪನ್ನೆ

ವರ ದೇವಲೋಕಕ್ಕೆ ಬಾರೆಂ ಪ್ರತಿಜ್ಞೆನೆನಗೆಂದ ವಿಶ್ವಾಮಿತ್ರನು  ||೧೪||

ಪದ್ಯದ ಅನ್ವಯಕ್ರಮ:

ಧರೆಯೊಳು ಚತುರ್ ಯುಗಂಗಳು ಮರಳಿ ಮರಳಿ ಸಾವಿರ ಬಾರಿ ಬಂದಡೆ ಅಜಂಗೆ ಒಂದು ದಿನವು, ಆ ದಿನದ ಪರಿ ಮೂವತ್ತು ದಿನಂ ಬರಲ್ ಏಕ ಮಾಸವು, ಆ ಮಾಸ ಹನ್ನೆರಡಾಗಲು ವರುಷವು, ಆ ವರುಷ ಶತಂ ಎಂಬುದು ಈ ಸುರಪತಿಗೆ ಪರಮ ಆಯುವು, ಈತನ್ ಈರೇಳ್ ಭವಂ ಬಪ್ಪ ಅನ್ನೆಗಂ ದೇವಲೋಕಕ್ಕೆ ಬಾರೆಂ ಎನಗೆ ಪ್ರತಿಜ್ಞೆ ಎಂದ ವಿಶ್ವಾಮಿತ್ರನು.

ಪದ-ಅರ್ಥ:

ಧರೆಯೊಳು-ಭೂಮಿಯಲ್ಲಿ; ಚತುರ್ಯುಗಂಗಳು-ನಾಲ್ಕು ಯುಗಗಳು(ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ);  ಅಜ-ಬ್ರಹ್ಮ;  ಪರಿ-ರೀತಿ;   ಏಕಮಾಸ-ಒಂದು ತಿಂಗಳು;  ಶತ-ನೂರು;  ಸುರಪತಿ-ದೇವೇಂದ್ರ;  ಪರಮಾಯು-ವಿಶೇಷವಾದ ಆಯುಸ್ಸು;  ಈರೇಳ್ಭವಂ (ಈರ್+ಏಳ್+ಭವಂ) ಹದಿನಾಲ್ಕು ಜನ್ಮಗಳಲ್ಲಿ;  ಬಪ್ಪನ್ನೆವರಂ-(ಅಧಿಕಾರಕ್ಕೆ) ಬರುವಲ್ಲಿಯವರೆಗೆ;  ಬಾರೆಂ-ಬರುವುದಿಲ್ಲ.

            ಈ ಭೂಮಿಯಲ್ಲಿ ನಾಲ್ಕು ಯುಗಗಳು ಮರಳಿ ಮರಳಿ ಸಾವಿರ ಬಾರಿ ಬಂದಾಗ ಬ್ರಹ್ಮನಿಗೆ ಒಂದು ದಿನವಾಗುತ್ತದೆ. ಅಂತಹ ಮೂವತ್ತು ದಿನಗಳಾದಾಗ ಒಂದು ತಿಂಗಳಾಗುತ್ತದೆ. ಅಂತಹ ಹನ್ನೆರಡು ತಿಂಗಳುಗಳಾದಾಗ ಒಂದು ವರುಷ ಎನಿಸಿಕೊಳ್ಳುತ್ತದೆ. ಅಂತಹ ನೂರು ವರುಷಗಳು ಸೇರಿದಾಗ ದೇವೇಂದ್ರನ ವಿಶೇಷವಾದ ಆಯುಸ್ಸಾಗುತ್ತದೆ. ಹೀಗೆ ದೇವೇಂದ್ರ ಹದಿನಾಲ್ಕು ಬಾರಿ ಇಂದ್ರನಾಗಿ ಅಧಿಕಾರಕ್ಕೆ ಬರುವಲ್ಲಿಯವರೆಗೂ ನಾನು ದೇವಲೋಕಕ್ಕೆ ಕಾಲಿಡುವುದಿಲ್ಲ, ಇದು ನನ್ನ ಪ್ರತಿಜ್ಞೆ ಎಂದನು.

 

ಭಕ್ತಿ ಶಮೆ ದಮೆ ಯೋಗ ಯಾಗ ಶ್ರುತಿಮತಮಯ ವಿ

ರಕ್ತಿ ಘೋರವ್ರತ ತಪೋನಿಷ್ಠೆ ಜಪ ಗುಣಾ

ಸಕ್ತತೆ ಸ್ನಾನ ಮೌನ ಧ್ಯಾನವಾಚಾರ ಸತ್ಯತಪ ನಿತ್ಯನೇಮ

ಯುಕ್ತಿ ಶೈವಾಗಮಾವೇಶ ಲಿಂಗಾರ್ಚನಾ

ಸಕ್ತಿಯಿಂ ಬೆಳೆದ ಪುಣ್ಯದೊಳರ್ಧಮಂ ಸುಧಾ

ಭುಕ್ತರಱಿಯಲು ಕೊಡುವೆನಾ ಹರಿಶ್ಚಂದ್ರ ಹುಸಿಯಂ ನುಡಿಯದಿರಲೆಂದನು  ||೧೫||

ಪದ್ಯದ ಅನ್ವಯಕ್ರಮ:

ಭಕ್ತಿ, ಶಮೆ, ದಮೆ, ಯೋಗ, ಯಾಗ, ಶ್ರುತಿಮತಮಯ ವಿರಕ್ತಿ, ಘೋರವ್ರತ, ತಪೋನಿಷ್ಠೆ, ಜಪ, ಗುಣಾಸಕ್ತತೆ, ಸ್ನಾನ, ಮೌನ, ಧ್ಯಾನವಾಚಾರ ಸತ್ಯತಪ, ನಿತ್ಯನೇಮ, ಯುಕ್ತಿ, ಶೈವಾಗಮ ಆವೇಶ, ಲಿಂಗಾರ್ಚನ ಆಸಕ್ತಿಯಿಂ ಬೆಳೆದ ಪುಣ್ಯದೊಳ್ ಅರ್ಧಮಂ ಸುಧಾಭುಕ್ತರ್ ಅಱಿಯಲು ಕೊಡುವೆನ್ ಆ ಹರಿಶ್ಚಂದ್ರ ಹುಸಿಯಂ ನುಡಿಯದೆ ಇರಲ್ ಎಂದನು.

ಪದ-ಅರ್ಥ:

ಭಕ್ತಿ-ನಿಷ್ಠೆ;  ಶಮೆ-ಮನೋನಿಗ್ರಹ;   ದಮೆ-ಇಂದ್ರಿಯನಿಗ್ರಹ;  ಯೋಗ-ಷಡ್ದರ್ಶನಗಳಲ್ಲಿ ಒಂದು;  ಯಾಗ-ಯಜ್ಞ;  ಶ್ರುತಿಮತಮಯ ವಿರಕ್ತಿ, ವೇದಸಮ್ಮತವಾದ ವೈರಾಗ್ಯ;   ಘೋರವ್ರತ-ಕಠಿಣವ್ರತ; ತಪೋನಿಷ್ಠೆ-ತಪಸ್ಸಿನಲ್ಲಿನ ಶ್ರದ್ಧೆ;  ಜಪ-ವಿಧಿಪೂರ್ವಕ ಮಂತ್ರೋಚ್ಛಾರಣೆ;  ಗುಣಾಸಕ್ತತೆ-ಒಳಿತಿನಲ್ಲಿನ ಆಸಕ್ತಿ;  ಸ್ನಾನ-ನಿತ್ಯದ ಆಚರಣೆಗಳಲ್ಲಿ ಒಂದು;  ಮೌನ-ಒಂದು ವ್ರತ;  ಧ್ಯಾನ-ಮನನ;  ನಿತ್ಯನೇಮ-ದೈನಂದಿನ ವ್ರತ;  ಯುಕ್ತಿ-ತರ್ಕ;  ಶೈವಾಗಮಾವೇಶ-ಶಿವಪೂಜಾ ತಂತ್ರವಿಧಾನದ ಬಗೆಗಿನ ನಿಷ್ಠೆ;  ಲಿಂಗಾರ್ಚನಾಸಕ್ತಿ-ಶಿವಪೂಜಾಸಕ್ತಿ;  ಬೆಳೆದ ಪುಣ್ಯದೊಳ್-ಸಾಧಿಸಿದ ಪುಣ್ಯದಲ್ಲಿ;  ಅರ್ಧಮಂ-ಅರ್ಧಭಾಗವನ್ನು;  ಸುಧಾಭುಕ್ತರ್-ಅಮೃತಪಾನ ಮಾಡಿದವರು, ದೇವತೆಗಳು;   ಹುಸಿ-ಸುಳ್ಳು;   ನುಡಿಯದಿರಲ್-ನುಡಿಯದಿದ್ದರೆ.

            ಒಂದು ವೇಳೆ ಹರಿಶ್ಚಂದ್ರ ಸುಳ್ಳನ್ನು ಆಡದೇ ಇದ್ದರೆ, ನಾನು ನನ್ನ ಭಕ್ತಿ, ಮನೋನಿಗ್ರಹ, ಇಂದ್ರಿಯನಿಗ್ರಹ, ಯೋಗ, ಯಾಗ, ವೇದಸಮ್ಮತವಾದ ವೈರಾಗ್ಯ, ಕಠಿಣವ್ರತ, ತಪಸ್ಸಿನಲ್ಲಿನ ನಿಷ್ಠೆ, ಜಪ, ಒಳಿತಿನಲ್ಲಿನ ಆಸಕ್ತಿ, ಸ್ನಾನ, ಮೌನ, ಧ್ಯಾನ, ಆಚಾರ, ಸತ್ಯತಪ, ನಿತ್ಯವ್ರತ,  ಯುಕ್ತಿ, ಶಿವಪೂಜಾತಂತ್ರವಿಧಾನದ ಬಗೆಗಿನ ನಿಷ್ಠೆ, ಶಿವಪೂಜಾಸಕ್ತಿ ಮೊದಲಾದವುಗಳಿಂದ ಸಂಪಾದಿಸಿದ ಪುಣ್ಯದಲ್ಲಿ ಅರ್ಧಭಾಗವನ್ನು ದೇವತೆಗಳು ತಿಳಿಯುವಂತೆ ಹರಿಶ್ಚಂದ್ರನಿಗೆ ಧಾರಾಪೂರ್ವಕ ನೀಡುತ್ತೇನೆ ಎಂದು ವಿಶ್ವಾಮಿತ್ರನು ಪ್ರತಿಜ್ಞೆಮಾಡಿದನು.

 

ಎಂದು ಭೂವರನಂ ಪರೀಕ್ಷಿಸುವೆಯೆನ್ನ ಮನ

ಬಂದ ದಿನಮೆನಿತು ಸೂಳಾತನೀ ಧರೆಯೊಳಿ

ಪ್ಪಂದುತನಕಾವಾವ ಪರಿಯೊಳು ಸಹಸ್ರವಿಧದೊಳು ದಿಟವೆ ದಿಟವೆಂದೆನೆ

ಹಿಂದುಗಳೆಯಲದೇಕೆ ನಡೆಯನಲು ನೀನಾಡು

ವಂದವನುವಾಗಿರದೆನುತ್ತ ಕೌಶಿಕನಣಕ

ದಿಂದಾಡಲೆಮ್ಮ ಕೂಡಿನಿತಣಕವೇಕೆಂದು ವಾಸಿಷ್ಠಮುನಿ ನುಡಿದನು  ||೧೬||

ಪದ್ಯದ ಅನ್ವಯಕ್ರಮ:

ಎಂದು ಭೂವರನಂ ಪರೀಕ್ಷಿಸುವೆ?, ಎನ್ನ ಮನ ಬಂದ ದಿನಂ. ಎನಿತು ಸೂಳ್? ಆತನ್ ಈ ಧರೆಯೊಳ್ ಇಪ್ಪಂದು ತನಕ. ಆವಾವ ಪರಿಯೊಳು?, ಸಹಸ್ರ ವಿಧದೊಳು. ದಿಟವೇ? ದಿಟ ಎಂದು ಎನೆ, ಹಿಂದುಗಳಯಲ್ ಅದೇಕೆ ನಡೆ ಎನಲು, ನೀನಾಡುವ ಅಂದವು ಅನುವಾಗಿ ಇರದು ಎನುತ್ತ ಕೌಶಿಕನ್ ಅಣಕದಿಂದ ಆಡಲ್ ಎಮ್ಮ ಕೂಡ ಇನಿತು ಅಣಕವೇಕೆ? ಎಂದು ವಾಸಿಷ್ಠಮುನಿ ನುಡಿದನು.

ಪದ-ಅರ್ಥ:

ಎಂದು-ಯಾವಾಗ?; ಭೂವರನಂ-ರಾಜನನ್ನು(ಹರಿಶ್ಚಂದ್ರನನ್ನು);  ಪರೀಕ್ಷಿಸುವೆ-ಪರೀಕ್ಷೆ ಮಾಡುವೆ?;  ಎನ್ನ ಮನ ಬಂದ ದಿನ- ನನ್ನ ಮನಸ್ಸಿಗೆ ತೋರಿದ ದಿನ;  ಎನಿತು ಸೂಳ್ -ಎಷ್ಟು  ಬಾರಿ;  ಆತನ್-ಹರಿಶ್ಚಂದ್ರನು;  ಈ ಧರೆಯೊಳ್ –ಈ ಭೂಮಿಯಲ್ಲಿ ;  ಇಪ್ಪಂದುತನಕ-ಇರುವಲ್ಲಿಯವರೆಗೆ;  ಆವಾವ ಪರಿಯೊಳು-ಯಾವ ಯಾವ ವಿಧದಲ್ಲಿ;  ಸಹಸ್ರವಿಧದೊಳು-ಸಾವಿರ ರೀತಿಗಳಲ್ಲಿ;  ದಿಟವೆ-ಸತ್ಯವೇ;  ಹಿಂದುಗಳೆಯಲದೇಕೆ-ಹಿಂಜರಿಯುವುದೇಕೆ;  ನೀನಾಡುವಂದವು- ನೀನು ಮಾತನಾಡುವ ರೀತಿಯು;  ಅನುವಾಗಿರದು-ಅನುಕೂಲವಾಗಿರದು;  ಅಣಕದಿಂದಾಡಲ್-ಅಪಹಾಸ್ಯದಿಂದ ಮಾತಾಡಲು;  ಎಮ್ಮ ಕೂಡ-ನಮ್ಮೊಂದಿಗೆ;  ಇನಿತು-ಇಷ್ಟು.

            ಹರಿಶ್ಚಂದ್ರನನ್ನು ಯಾವಾಗ ಪರೀಕ್ಷಿಸುವೆ? ಎಂದು ವಸಿಷ್ಠ ಕೇಳಿದಾಗ, ವಿಶ್ವಾಮಿತ್ರನು ನನ್ನ ಮನಸ್ಸಿಗೆ ತೋರಿದ  ದಿನದಂದು ಎಂದನು. ಎಷ್ಟು ಬಾರಿ ಪರೀಕ್ಷಿಸುವೆ? ಎಂದು ವಸಿಷ್ಠ ಕೇಳಿದಾಗ, ವಿಶ್ವಾಮಿತ್ರನು, ಹರಿಶ್ಚಂದ್ರನು ಈ ಭೂಮಿಯಲ್ಲಿ ಬದುಕಿರುವವರೆಗೆ ಎಂದನು. ಎಷ್ಟು ವಿಧದಲ್ಲಿ ಪರೀಕ್ಷಿಸುವೆ? ಎಂದು ವಸಿಷ್ಠ ಕೇಳಿದಾಗ, ವಿಶ್ವಾಮಿತ್ರನು  ಸಾವಿರಾರು ವಿಧಗಳಲ್ಲಿ ಎಂದನು. ವಸಿಷ್ಠನು ಇದು ಸತ್ಯವೇ? ಎಂದು ಕೇಳಿದಾಗ ವಿಶ್ವಾಮಿತ್ರನು ಸತ್ಯ ಎಂದನು. ಹಾಗಾದರೆ ಯಾಕೆ ಹಿಂಜರಿಯುತ್ತಿರುವೆ? ನಡೆ ಎಂದಾಗ, ವಿಶ್ವಾಮಿತ್ರನು ನೀನು ಮಾತಾಡುವ ರೀತಿಯು ಅನುಕೂಲಕರವಾಗಿಲ್ಲ ಎಂದು ಅಪಹಾಸ್ಯದಿಂದ ಮಾತಾಡಿದಾಗ, ವಸಿಷ್ಠನು ನಮ್ಮೊಂದಿಗೆ ಇಷ್ಟು ಅಪಹಾಸ್ಯವೇಕೆ? ಎಂದು ವಿಶ್ವಾಮಿತ್ರನನ್ನು ಪ್ರಶ್ನಿಸಿದನು. 

 

ಇನಿತು ಮುಳಿಸಾವುದು ಹರಿಶ್ಚಂದ್ರ ಭೂಭುಜನ

ಮನೆಗೀಗಳಿಂತು ನೀ ಹೋಗಿ ಕೌಶಿಕಂ ನೆ

ಟ್ಟನೆ ನಿನ್ನನಂತಿಂತು ಕೆಡಿಸಿದಪ ನೀನಾವ ಪರಿಯಲೆಚ್ಚತ್ತಿರೆಂದು

ನೆನಸಿಕೊಂಡು ಹೋಗೆಂದಡಾನಾಡುವವನೆ ಹೇ

ಳೆನಲೆನ್ನ ಗಾಸಿಗಾಱದೆ ನೃಪಂ ಹುಸಿನುಡಿಯೆ

ಮುನಿತನವನೀಡಾಡಿ ಹೋಹಂತಿರಾದಪುದು ಹೋಗಿ ನೀಂ ಹೇಳೆಂದನು||೧೭||

ಪದ್ಯದ ಅನ್ವಯಕ್ರಮ:

ಇನಿತು ಮುಳಿಸು ಆವುದು, ಹರಿಶ್ಚಂದ್ರ ಭೂಭುಜನ ಮನೆಗೆ ನೀ ಈಗಳ್ ನೆಟ್ಟನೆ ಪೋಗಿ ಇಂತು ಕೌಶಿಕಂ ನಿನ್ನನ್ ಅಂತು ಇಂತು ಕೆಡಿಸಿದಪ, ನೀನ್ ಆವ ಪರಿಯಲಿ ಎಚ್ಚತ್ತಿರು ಎಂದು ನೆನಸಿಕೊಂಡು ಹೋಗು ಎಂದಡೆ, ಆನ್ ಆಡುವವನೆ ಹೇಳ್ ಎನಲ್, ಎನ್ನ ಗಾಸಿಗೆ ಆಱದೆ ನೃಪಂ ಹುಸಿ ನುಡಿಯೆ ಮುನಿತನವನ್ ಈಡಾಡಿ ಹೋಹಂತಿರ್ ಆದಪುದು ನೀಂ ಹೋಗಿ ಹೇಳ್ ಎಂದನು.

ಪದ-ಅರ್ಥ:

ಇನಿತು-ಇಷ್ಟು;  ಮುಳಿಸು-ಸಿಟ್ಟು;  ಆವುದು-ಏಕೆ?;  ಭೂಭುಜ-ರಾಜ;  ಈಗಳ್-ಈ ಕ್ಷಣದಲ್ಲಿ;  ಇಂತು-ಹೀಗೆ;  ನೆಟ್ಟನೆ-ನೇರವಾಗಿ;  ಅಂತಿಂತು-ಹಾಗೂ ಹೀಗೂ, ಹಲವು ವಿಧಗಳಲ್ಲಿ;  ಕೆಡಿಸಿದಪ-ಕೆಡಿಸುತ್ತಾನೆ, ಸುಳ್ಳಾಡಿಸುತ್ತಾನೆ;  ನೀನಾವ-ನೀನು ಯಾವುದೇ;  ಪರಿಯಲಿ-ರೀತಿಯಿಂದ;  ಎಚ್ಚತ್ತಿರು-ಜಾಗರೂಕನಾಗಿರು;  ನೆನಸಿಕೊಂಡು-ನೆನಪಿಸಿಕೊಂಡು;  ಗಾಸಿಗಾಱದೆ-ತೊಂದರೆ ಎದುರಿಸುವುದಕ್ಕೆ ಶಕ್ತನಾಗದೆ;  ನೃಪಂ-ರಾಜ(ಹರಿಶ್ಚಂದ್ರ);  ಹುಸಿನುಡಿಯೆ-ಸುಳ್ಳಾಡಿದರೆ;  ಮುನಿತನವನ್-ತಪಸ್ವಿಯ ಸ್ಥಾನಮಾನವನ್ನು;  ಈಡಾಡಿ-ನಾಶವಾಗಿ;  ಹೋಹಂತಿರಾಪುದು-ಹೋಗುವಂತಾದೀತು.

            ನನ್ನ ಮೇಲೆ ಇಷ್ಟೊಂದು ಕೋಪವೇಕೆ? ನೀನು ಈಗಲೇ  ನೇರವಾಗಿ ಹರಿಶ್ಚಂದ್ರ ಮಹಾರಾಜನ ಅರಮನೆಗೆ ಹೋಗಿ ಹೀಗೆ ವಿಶ್ವಾಮಿತ್ರ ನಿನ್ನನ್ನು ಹಾಗೂ ಹೀಗೂ ಸುಳ್ಳಾಡಿಸಿ ಕೆಡಿಸುತ್ತಾನೆ. ನೀನು ಯಾವುದೇ ರೀತಿಯಲ್ಲಾದರೂ ಎಚ್ಚರವಾಗಿರು ಎಂದು ಆತನಿಗೆ ನೆನಪಿಸಿಕೊಂಡು ಹೋಗು ಎಂದು ವಿಶ್ವಾಮಿತ್ರನು ಹೇಳಿದಾಗ, ವಸಿಷ್ಠನು ನಾನು ಹಾಗೆ ಹೇಳುವವನೇ? ಎಂದು ಕೇಳಿದಾಗ, ವಿಶ್ವಾಮಿತ್ರ ನು ನನ್ನ ತೊಂದರೆಗಳನ್ನು ಸಹಿಸಿಕೊಳ್ಳಲಾರದೆ ಹರಿಶ್ಚಂದ್ರನು ಸುಳ್ಳಾಡಿದರೆ ನಿನ್ನ ಮುನಿತನವೇ ನಾಶವಾಗಿ ಹೋಗುವಂತಾದೀತು. ಹಾಗಾಗಿ ಕೂಡಲೇ ಹೋಗಿ ಆತನಿಗೆ ಹೇಳಿಬಿಡು ಎಂದನು.

 

ತರಣಿ ತೇಜಂಗೆಡದಿರಗ್ನಿ ಬಿಸುಪಾಱದಿರು

ಸರಸಿರುಹವೈರಿ ತಂಪಂ ಬಿಡದಿರೆಲೆಲೆ ಮಂ

ದರವೆ ಚಲಿಸದಿರೆಂದು ಬೋಧಿಸಲದೇಕೆ ನಿಜವಳಿವವೇ ಸುಮ್ಮನಿರಲು

ವರಹರಿಶ್ಚಂದ್ರ ಸತ್ಯಂಗೆಡದಿರೆಂದು ಬೋ

ಸರಿಸುವಂತಾಗಿ ಹುಸಿಯುಂಟೆ ಕೊಂಡೆಯವೆಮಗೆ

ಹಿರಿಯತನ ಕೆಟ್ಟಿಂತು ನುಡಿಯಲಹುದೇಯೆಂದು ವಾಸಿಷ್ಠಮುನಿ ನುಡಿದನು  ||೧೮||

ಪದ್ಯದ ಅನ್ವಯಕ್ರಮ:

ತರಣಿ ತೇಜಂ ಕೆಡದಿರು, ಅಗ್ನಿ ಬಿಸುಪು ಆಱದಿರು, ಸರಸಿರುಹವೈರಿ ತಂಪಂ ಬಿಡದಿರು ಎಲೆಲೆ ಮಂದರವೆ ಚಲಿಸದಿರು ಎಂದು ಬೋಧಿಸಲ್ ಅದೇಕೆ ಸುಮ್ಮನಿರಲು ನಿಜವ ಅಳಿವವೇ? ವರ ಹರಿಶ್ಚಂದ್ರ ಸತ್ಯಂ ಕೆಡದಿರು ಎಂದು ಬೋಸರಿಸುವಂತೆ ಆಗಿ ಹುಸಿ ಉಂಟೆ? ಕೊಂಡೆಯವೆ ಎಮಗೆ ಹಿರಿಯತನ ಕೆಟ್ಟು ಇಂತು ನುಡಿಯಲ್ ಅಹುದೇ ಎಂದು ವಾಸಿಷ್ಠಮುನಿ ನುಡಿದನು.

ಪದ-ಅರ್ಥ:

ತರಣಿ-ಸೂರ್ಯ;  ತೇಜಂ-ತೇಜಸ್ಸನ್ನು, ಪ್ರಕಾಶವನ್ನು;  ಕೆಡದಿರು-ಬಿಡಬೇಡ;  ಅಗ್ನಿ-ಬೆಂಕಿ;  ಬಿಸುಪು-ಶಾಖ;  ಆಱದಿರು-ತಣಿಯದಿರು;  ಸರಸಿರುಹವೈರಿ-ಚಂದ್ರ;  ಮಂದರ-ಮಂದರ ಪರ್ವತ;  ನಿಜವಳಿವವೇ-ತಮ್ಮತನವನ್ನು ಬಿಡುತ್ತವೆಯೇ?;  ಸತ್ಯಂಗೆಡದಿರು-ಸತ್ಯವನ್ನು ಬಿಡಬೇಡ;  ಬೋಸರಿಸು-ಪ್ರೇರಿಸು;  ಹುಸಿಯುಂಟೆ-ಸುಳ್ಳು ಸಾಧ್ಯವೇ?;  ಕೊಂಡೆಯವೆ-ಚಾಡಿಯೆ; ಎಮಗೆ-ನಮಗೆ;  ಕೆಟ್ಟು-ನಾಶವಾಗಿ;  ನುಡಿಯಲಹುದೆ-ಹೇಳಲು ಸಾಧ್ಯವೇ?

            ಸೂರ್ಯನೇ ನೀನು ನಿನ್ನ ಪ್ರಕಾಶವನ್ನು ಬಿಡಬೇಡ, ಅಗ್ನಿಯೇ ನೀನು ನಿನ್ನ ಶಾಖವನ್ನು ತ್ಯಜಿಸಿ ತಣಿಯಬೇಡ, ಚಂದ್ರನೇ ನೀನು ನಿನ್ನ ತಂಪನ್ನು ಬಿಡಬೇಡ, ಮಂದರ ಪರ್ವತವೇ ನೀನು ಚಲಿಸಬೇಡ ಎಂದು ಬೋಧಿಸಿದರೆ ಅವು ತಮ್ಮ ನಿಜಸ್ವಾಭಾವಗಳನ್ನು ಬಿಟ್ಟಿಬಿಡಲು ಸಾಧ್ಯವೇ? ಹಾಗೆಯೇ ಹರಿಶ್ಚಂದ್ರ ನೀನು ನಿನ್ನ ಸತ್ಯವನ್ನು ಬಿಡಬೇಡ ಎಂದು ಪ್ರೇರಿಸಿದರೂ ಅವನು ಸುಳ್ಳಾಡುವುದಕ್ಕೆ  ಸಾಧ್ಯವೇ?  ನನ್ನ ಹಿರಿತನ ನಾಶವಾಗುವಂತೆ ನಾನು ಆ ರೀತಿಯಲ್ಲಿ ಚಾಡಿ ಹೇಳುವುದಕ್ಕೆ ಸಾಧ್ಯವೇ? ಎಂದು ವಸಿಷ್ಠನು ವಿಶ್ವಾಮಿತ್ರನನ್ನು ಪ್ರಶ್ನಿಸಿದನು.

 

ಸಿಡಿಲು ಹೊಡೆವಡೆ ಹಿಡಿದ ಕೊಡೆ ಕಾವುದೇ ಮುನಿದು

ಪೊಡವಿ ನುಂಗುವಡೆ ಮನೆ ತಾಗುವುದೆ ಕವಿದು ಹೆ

ಗ್ಗಡಲುಕ್ಕಿ ಜಗವ ಮೊಗೆವಡೆ ಮೆಳೆಗಳಡ್ಡ ಬಹವೇ ಹೇಳು ಮುನಿಪ ನಿನ್ನ

ಬಡಬೋಧೆಗೀಧೆಗಳು ರಕ್ಷಿಸುವುವಲ್ಲ ನಾಂ

ಕಡುಮುಳಿದ ಬಳಿಕಲೇಗುವವು ನೀ ಹೇಳದಿ

ರ್ದಡೆ ಮದನಹರನಾಣೆ  ಹೋಗೆಂದು ಕೌಶಿಕಂ ನುಡಿದನು ವಸಿಷ್ಠಮುನಿಗೆ   ||೧೯||

ಪದ್ಯದ ಅನ್ವಯಕ್ರಮ:

ಸಿಡಿಲು ಹೊಡೆವಡೆ ಹಿಡಿದ ಕೊಡೆ ಕಾವುದೇ? ಮುನಿದು ಪೊಡವಿ ನುಂಗುವಡೆ ಮನೆ ತಾಗುವುದೆ? ಕವಿದು ಹೆಗ್ಗಡಲುಕ್ಕಿ ಜಗವ ಮೊಗೆವಡೆ ಮೆಳೆಗಳ್ ಅಡ್ಡ ಬಹವೇ ಹೇಳು ಮುನಿಪ, ನಿನ್ನ ಬಡ ಬೋಧೆ ಗೀಧೆಗಳು ರಕ್ಷಿಸುವುವಲ್ಲ ನಾಂ ಕಡುಮುಳಿದ ಬಳಿಕಲಿ ಏಗುವವು? ನೀ ಹೇಳದಿರ್ದಡೆ ಮದನಹರನ ಆಣೆ, ಹೋಗು ಎಂದು ಕೌಶಿಕಂ ವಾಸಿಷ್ಠಮುನಿಗೆ ನುಡಿದನು.

ಪದ-ಅರ್ಥ:

ಹೊಡೆವಡೆ-ಹೊಡೆದಾಗ;  ಕಾವುದೇ-ಕಾಪಾಡುವುದೇ?;  ಮುನಿದು-ಸಿಟ್ಟುಗೊಂಡು;  ಪೊಡವಿ-ಭೂಮಿ;  ನುಂಗುವಡೆ-ನುಂಗುವಾಗ;  ತಾಗುವುದೆ-ಎದುರಿಸುವುದೇ? ಹೆಗ್ಗಡಲ್-ಹಿರಿದಾದ ಕಡಲು;  ಉಕ್ಕಿ ಕವಿದು-ಮಿತಿಮೀರಿ ಆವರಿಸಿ;   ಜಗವ ಮೊಗೆವಡೆ-ಜಗತ್ತನ್ನು ಮುಳುಗಿಸುವಾಗ;  ಮೆಳೆಗಳ್-ದಟ್ಟವಾಗಿ ಬೆಳೆದ ಗಿಡಗಳ ಗುಂಪು;  ಅಡ್ಡಬಹವೇ-ತಡೆಯುತ್ತವೆಯೇ?  ಬೋಧೆ-ಉಪದೇಶ;  ಕಡುಮುಳಿದ-ಅತಿಯಾಗಿ ಕೋಪಗೊಂಡಾಗ;  ಏಗುವವು-ಏನು ಮಾಡಲು ಸಾಧ್ಯ?;  ಮದನಹರ-ಶಿವ.

            ಸಿಡಿಲು ಹೊಡೆದಾಗ ನಾವು ರಕ್ಷಣೆಗೆಂದು ಕೊಡೆಯನ್ನು ಅಡ್ಡವಾಗಿ ಹಿಡಿದರೆ ಅದು ನಮ್ಮನ್ನು ಕಾಪಾಡಲು ಸಾಧ್ಯವೇ? ಭೂಮಿಯೇ ಕೋಪಗೊಂಡು ಸಕಲ ಜೀವಸಂಕುಲವನ್ನು ನುಂಗತೊಡಗಿದರೆ ವಾಸಕ್ಕೆಂದು ಕಟ್ಟಿದ ಮನೆ ಅದನ್ನು ಎದುರಿಸಿ ತಡೆಯಲು ಸಾಧ್ಯವೇ? ಸಮುದ್ರವೆಲ್ಲವೂ ಭೂಮಿಯನ್ನು ಆವರಿಸಿಕೊಂಡು ನುಂಗತೊಡಗಿದರೆ ಈ ಭೂಮಿಯ ಮೇಲಿರುವ ಸಮಸ್ತ ಗಿಡಗಂಟಿಗಳ ಗುಂಪು ಅದನ್ನು ತಡೆಯಲು ಸಾಧ್ಯವೇ? ಹೇಳು ವಸಿಷ್ಠನೇ, ನಿನ್ನ ಬಡ ಉಪದೇಶದ ಮಾತುಗಳು ಹರಿಶ್ಚಂದ್ರನನ್ನು ರಕ್ಷಿಸಲಾರವು. ನಾನು ಸಿಟ್ಟುಗೊಂಡ ಬಳಿಕ ಏನು ಮಾಡಲು ಸಾಧ್ಯ? ನೀನು ಹೋಗಿ ಹರಿಶ್ಚಂದ್ರನಿಗೆ ಹೇಳದಿದ್ದರೆ ಶಿವನಾಣೆ ಎಂದು ವಿಶ್ವಾಮಿತ್ರನು ವಸಿಷ್ಠನಿಗೆ ಹೇಳಿದನು.

 

ಕುಲವ ನಾಲಗೆಯಱುಹಿತೆಂಬ ನಾಣ್ನುಡಿಗಿಂದು

ನೆಲೆಯಾಯ್ತಲಾ ಬ್ರಹ್ಮಋಷಿಯಾದಡೊಳಗು ನಿ

ರ್ಮಳವಪ್ಪುದಯ್ಯ  ನೀಂ ರಾಜರ್ಷಿ ಕೋಪಿಸದೆ ಧಟ್ಟಿಸದೆ ಕೆಡೆನುಡಿಯದೆ

ನಿಲಲೆಂತು ಬಲ್ಲೆಯೆನಲೆನ್ನ ನೀನೀಗ ಹೆ

ಪ್ಪಳಿಸದಾಡಿದೆಯೆಂದಡಹುದಹುದು ನಿನ್ನಲಿಹ

ನೆಲೆಯಾಡಿತೆನೆ ಕೌಶಿಕಂ ಕುಪಿತನಾದನವನಾವ ಕವಿ ಬಣ್ಣಿಸುವನು  ||೨೦||

ಪದ್ಯದ ಅನ್ವಯಕ್ರಮ:

ಕುಲವ ನಾಲಗೆ ಅಱುಹಿತು ಎಂಬ ನಾಣ್ನುಡಿಗೆ ಇಂದು ನೆಲೆಯಾಯ್ತಲಾ, ಬ್ರಹ್ಮಋಷಿಯಾದೊಡೆ ಒಳಗು ನಿರ್ಮಳವಪ್ಪುದು ಅಯ್ಯ, ನೀಂ ರಾಜರ್ಷಿ, ಕೋಪಿಸದೆ, ಧಟ್ಟಿಸದೆ, ಕೆಡೆ ನುಡಿಯದೆ ನಿಲಲ್ ಎಂತು ಬಲ್ಲೆ? ಎನಲ್ ಎನ್ನ ನೀನ್ ಈಗ ಹೆಪ್ಪಳಿಸದೆ ಆಡಿದೆ ಎಂದಡೆ, ಅಹುದು ನಿನ್ನಲಿ ಇಹ ನೆಲೆ ಆಡಿತು ಎನೆ, ಕೌಶಿಕಂ ಕುಪಿತನಾದನ್ ಅದನ್ ಆವ ಕವಿ ಬಣ್ಣಿಸುವನು

ಪದ-ಅರ್ಥ:

ಕುಲವ-ವಂಶವನ್ನು;  ನಾಲಗೆ ಅಱುಹಿತು-ನಾಲಗೆ ಹೇಳಿಬಿಟ್ಟಿತು, ಮಾತು ಹೇಳಿಬಿಟ್ಟಿತು;  ನಾಣ್ನುಡಿ-ಗಾದೆಮಾತು;  ನೆಲೆಯಾಯ್ತು-ಆಶ್ರಯವಾಯಿತು, ಸಮಾನವಾಯಿತು; ಬ್ರಹ್ಮಋಷಿ-ಬ್ರಹ್ಮಜ್ಞ, ಋಷಿಗಳಲ್ಲಿ ಅತ್ಯುನ್ನತ ಸಾಧನೆ ಮಾಡಿ ಬ್ರಹ್ಮನಿಗೆ ಸಮಾನನಾದವನು;  ಒಳಗು-ಅಂತರಂಗ;  ನಿರ್ಮಳವಪ್ಪುದು-ಪರಿಶುದ್ಧವಾಗಿರುತ್ತದೆ;  ರಾಜರ್ಷಿ-ಋಷಿಗಳಲ್ಲಿ ಒಂದು ವರ್ಗ, ರಾಜನ ಹಾಗೂ ಋಷಿಗಳಿಬ್ಬರ ವ್ಯಕ್ತಿತ್ವಗಳನ್ನು ಮೈಗೂಡಿಸಿಕೊಂಡವನು;  ಧಟ್ಟಿಸದೆ-ಗದರಿಸದೆ;  ಕೆಡೆನುಡಿಯದೆ-ಕೆಟ್ಟಮಾತಾಡದೆ;  ನಿಲಲ್-ಇರುವುದಕ್ಕೆ;  ಎಂತು-ಹೇಗೆ;  ಬಲ್ಲೆ-ತಿಳಿದಿರುವೆ;  ಹೆಪ್ಪಳಿಸದೆ-ಹಿಂದುಮುಂದು ನೋಡದೆ, ವಿವೇಚಿಸದೆ;  ನಿನ್ನಲಿಹ ನೆಲೆ-ನಿನ್ನಲ್ಲಿ ರೂಢಿಯಾಗಿರುವ ಸ್ವಭಾವ. 

            ನಿನ್ನ ಈ ಸ್ಥಿತಿ ಎಂಬುದು ’ಕುಲವನ್ನು ನಾಲಗೆ ಹೇಳುತ್ತದೆ’ ಎಂಬ ಗಾದೆಯ ಮಾತಿಗೆ ಸಮಾನವಾಯಿತು. ನೀನು ಬ್ರಹ್ಮರ್ಷಿಯಾಗಿ ಇದ್ದಿದ್ದರೆ ನಿನ್ನ ಅಂತರಂಗವೂ ಶುದ್ಧವಾಗಿರುತ್ತಿತ್ತು, ನೀನು ರಾಜರ್ಷಿಯಾಗಿರುವುದರಿಂದ ಪದೇ ಪದೇ ಕೋಪಗೊಳ್ಳದೆ, ಅನ್ಯರನ್ನು ಗದರಿಸದೆ, ಕೆಟ್ಟಮಾತುಗಳನ್ನಾಡದೆ ಇರಲು ಹೇಗೆ ಸಾಧ್ಯ? ಎಂದು ವಸಿಷ್ಠ ಹೇಳಿದಾಗ, ವಿಶ್ವಾಮಿತ್ರನು, ನನ್ನನ್ನು ನೀನೀಗ ಹಿಂದುಮುಂದಾಲೋಚಿಸದೆ ಅವಮಾನಿಸಿದೆ ಎಂದಾಗ, ವಸಿಷ್ಠನು ಹೌದು, ಹೌದು, ನಿನ್ನಲ್ಲಿ ರೂಢಿಯಾಗಿರುವ ಸ್ವಭಾವವೇ ನಿನ್ನಿಂದ ಈ ಮಾತುಗಳನ್ನಾಡಿಸಿತು ಎಂದಾಗ ವಿಶ್ವಾಮಿತ್ರನು ವಸಿಷ್ಠನ ಮೇಲೆ ಅತ್ಯಂತ ಕೋಪಗೊಂಡನು.   

 

ನೋಡು ನೋಡಿಂದೆನ್ನ ರಾಜಋಷಿಯೆಂದು ಕೆ

ಟ್ಟಾಡಿತಕ್ಕಾ ಹರಿಶ್ಚಂದ್ರನನಸತ್ಯನಂ

ಮಾಡಿಸುವೆನಧಿಕಪ್ರತಿಜ್ಞೆಗಳನಾಂತ ನಿನ್ನಂ ವ್ರತಭ್ರಷ್ಟನೆನಿಸಿ

ಱೋಡಾಡಿ ಕಾಡುವೆನೆನುತ್ತೆದ್ದು ಸಾವನೀ

ಡಾಡಿದವರೊಡೆಯನೋಲಗದಿಂದ ಹೊಱವಂಟ

ನಾಡಂಬರದ ಸಿಡಿಲು ಜಗಱಿ ಗರ್ಜಿಸಿ ಮೇಘದಿಂದ ಪೊಱಮಡುವಂದದಿ  ||೨೧||

ಪದ್ಯದ ಅನ್ವಯಕ್ರಮ:

ನೋಡು ನೋಡು ಇಂದು ಎನ್ನ ರಾಜಋಷಿ ಎಂದು ಕೆಟ್ಟು ಆಡಿಸಿತಕ್ಕೆ ಆ ಹರಿಶ್ಚಂದ್ರನನ್ ಅಸತ್ಯವಂತನಂ ಮಾಡಿಸುವೆನ್ ಅಧಿಕ ಪ್ರತಿಜ್ಞೆಗಳನ್ ಆಂತ ನಿನ್ನಂ ವ್ರತಭ್ರಷ್ಟನ್ ಎನಿಸಿ ಱೋಡಾಡಿ ಕಾಡುವೆನ್ ಎನುತ್ತ ಎದ್ದು ಸಾವನ್ ಈಡಾಡಿದವರ ಒಡೆಯನ ಓಲಗದಿಂದ ಹೊಱವಂಟನ್ ಆಡಂಬರದ ಸಿಡಿಲು ಗಜಱಿ ಗರ್ಜಿಸಿ ಮೇಘದಿಂ ಪೊಱಮಡುವ ಅಂದದಿ.

ಪದ-ಅರ್ಥ:

ಕೆಟ್ಟಾಡಿಸಿತಕ್ಕೆ-ಕೆಟ್ಟದಾಗಿ ಆಡಿದ್ದಕ್ಕೆ; ಅಸತ್ಯವಂತ-ಸುಳ್ಳ;  ಅಧಿಕಪ್ರತಿಜ್ಞೆಗಳನಾಂತ-ಹಲವು ಪ್ರತಿಜ್ಞೆಗಳನ್ನು ಮಾಡಿದ;  ವ್ರತಭ್ರಷ್ಟ-ವ್ರತಗೇಡಿ, ಮಾತುಮೀರಿದವನು;  ಱೋಡಾಡಿ-ಅಪಹಾಸ್ಯಮಾಡಿ;  ಕಾಡುವೆನ್-ಕಾಟಕೊಡುತ್ತೇನೆ;  ಸಾವನೀಡಾಡಿದವರ-ಸಾವನ್ನು ಗೆದ್ದವರ, ಮರಣವಿಲ್ಲದವರ, ದೇವತೆಗಳ;  ಒಡೆಯ-ರಾಜ, ದೇವೇಂದ್ರ;  ಹೊಱವಂಟನ್-ಹೊರಟನು;  ಆಡಂಬರದ-ಭೀಕರವಾದ;  ಗಜಱಿ –ಭಯಭೀತಗೊಳಿಸಿ; ಗರ್ಜಿಸಿ-ಆರ್ಭಟಿಸಿ; ಮೇಘ-ಮೋಡ; ಪೊಱಮಡುವಂದದಿ-ಹೊರಡುವರೀತಿಯಲ್ಲಿ. 

            ನೋಡು, ನೋಡು ಇಂದು ನನ್ನನ್ನು ರಾಜರ್ಷಿ ಎಂದು ಕೆಟ್ಟದಾಗಿ ನಿಂದಿಸಿದ್ದಕ್ಕೆ ಆ ಹರಿಶ್ಚಂದ್ರನನ್ನು ಅಸತ್ಯವಂತನನ್ನಾಗಿ ಮಾಡಿ, ಹಲವಾರು ಪ್ರತಿಜ್ಞೆಗಳನ್ನು ಮಾಡಿರುವ ನಿನ್ನನ್ನು ವ್ರತಗೇಡಿಯನ್ನಾಗಿ ಮಾಡಿ, ಅಪಹಾಸ್ಯಮಾಡಿ ಕಾಡುತ್ತೇನೆ ಎನ್ನುತ್ತ ವಿಶ್ವಾಮಿತ್ರನು ದೇವೇಂದ್ರನ ಒಡ್ಡೋಲಗದ ಸಭೆಯಿಂದ ಎದ್ದು, ಭೀಕರವಾದ ಸಿಡಿಲು ಸಮಸ್ತರನ್ನು ಭಯಭೀತಗೊಳಿಸುತ್ತ ಆರ್ಭಟಿಸಿ ಮೋಡದಿಂದ ಹೊರಚಿಮ್ಮುವಂತೆ ಕೋಪಾವಿಷ್ಟನಾದ ವಿಶ್ವಾಮಿತ್ರನು ದೇವೇಂದ್ರನ ಆಸ್ಥಾನದಿಂದ ಹೊರಹೊರಟನು.

 ***

Leave a Reply

Your email address will not be published. Required fields are marked *