ಸಾಹಿತ್ಯಾನುಸಂಧಾನ

heading1

ವಸಿಷ್ಠ ವಿಶ್ವಾಮಿತ್ರ ಕಲಹ – ರಾಘವಾಂಕ, ಭಾಗ-೧

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಸಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ)  (ಭಾಗ-೧)

ಪರುಷವಂಗಣದ ಕಲು ಸುರಭಿ ಕಱಹಂ  ಕಲ್ಪ

ತರು ವನಂ ಸ್ವರ್ಗ ನಿಜದೇಶವಮರಾವತಿಯೆ

ಪುರದುರ್ಗವಮರರಾಳ್ ಮೇರು ಕೇಳೀಶೈಲವಮೃತವೇ ಮನೆಯ ಬೀಯ

ವರರಂಭೆ ಸೂಳೆ ಶಚಿ ರಾಣಿಯೈರಾವತಂ

ಕರಿ ವಜ್ರವಾಯುಧಂ ನವನಿಧಿಯೆ ಭಂಡಾರ

ಹೊರೆವಾಳ್ದನಭವನೆಂದೆನಿಪ ದೇವೇಂದ್ರನೊಂದಿರುಳೋಲಗವಿತ್ತನು  ||೧||

ಪದ್ಯದ ಅನ್ವಯಕ್ರಮ:

ಪರುಷವು ಅಂಗಣದ ಕಲು, ಕಱಹಂ ಸುರಭಿ, ವನಂ ಕಲ್ಪತರು, ನಿಜದೇಶವು ಸ್ವರ್ಗ, ಅಮರಾವತಿಯೆ ಪುರದುರ್ಗವು, ಅಮರರ್ ಆಳ್, ಮೇರು ಕೇಳೀಶೈಲವು, ಅಮೃತವೇ ಮನೆಯ ಬೀಯ, ವರರಂಭೆ ಸೂಳೆ, ಶಚಿ ರಾಣಿ, ಐರಾವತಂ ಕರಿ, ವಜ್ರವು ಆಯುಧಂ, ನವನಿಧಿಯೆ ಭಂಡಾರ, ಹೊರೆವ ಆಳ್ದನ್ ಅಭವನ್ ಎಂದೆನಿಪ ದೇವೇಂದ್ರನು ಒಂದು ಇರುಳು ಓಲಗವಿತ್ತನು.

ಪದ-ಅರ್ಥ:

ಪರುಷ-ಮುಟ್ಟಿದ್ದನ್ನು ಚಿನ್ನವಾಗಿರುವ ಮಣಿ;   ಅಂಗಣ-ಅಂಗಳ, ನೆಲ;   ಸುರಭಿ-ಕಾಮಧೇನು;  ಕಱಹಂ-ಆಕಳು;  ಕಲ್ಪತರು-ಕಲ್ಪವೃಕ್ಷ, ಬಯಸಿದ್ದನ್ನು ನೀಡುವ ಮರ;   ವನಂ-ಉದ್ಯಾನವನ;  ಅಮರಾವತಿ-ಸ್ವರ್ಗದ ರಾಜಧಾನಿ;   ಪುರಂ-ಪಟ್ಟಣ;   ಅಮರರ್-ದೇವತೆಗಳು;   ಆಳ್-ಸೇವಕರು; ಮೇರು ಕೇಳೀಶೈಲ-ಮೇರುಪರ್ವತವೆಂಬುದು ಆಡುಂಬೊಲ;  ಕ್ರೀಡಾವಿನೋದಕ್ಕಿರುವ ಸ್ಥಳ;  ಬೀಯ-ಆಹಾರ;  ಐರಾವತ-ಇಂದ್ರನ ಆನೆ;  ವಜ್ರ-ದೇವೇಂದ್ರನ ಕೈಯಲ್ಲಿರುವ ಬಲಿಷ್ಠವಾದ ಆಯುಧ(ವಜ್ರಾಯುಧ);  ನವನಿಧಿ-ಒಂಬತ್ತು ಬಗೆಯ ನಿಧಿಗಳ ಭಂಡಾರ (ಮಹಾಪದ್ಮ, ಪದ್ಮ, ಶಂಖ, ಮಕರ, ಕಚ್ಛಪ, ಮುಕುಂದ, ಕುಂದ ಅಥವಾ ನಂದಕ, ನೀಲ, ವರ ಅಥವಾ ಖರ್ವ);  ಹೊರೆವಾಳ್ದನ್-ಪಾಲಿಸುವವನು;  ಅಭವನೆಂದೆನಿಪ-ಶಿವನಂತಿರುವವನು;  ಓಲಗ-ರಾಜ ದರ್ಬಾರ್.

            ಪರುಷಮಣಿಯ ಶಿಲೆಗಳಿಂದ ಕೂಡಿದ ಅಪೂರ್ವವಾದ ಅರಮನೆಯ ಅಂಗಳ, ಕಾಮಧೇನುವೇ ಹಾಲುಕರೆಯುವ ಹಸು, ಬಯಸಿದ್ದನ್ನು ನೀಡುವ ಕಲ್ಪವೃಕ್ಷದ ಉದ್ಯಾನವನ, ಸುಂದರವಾದ ರಾಜಧಾನಿ ಅಮರಾವತಿ, ಸೇವಕರಾಗಿ ದೇವತೆಗಳು,  ಕ್ರೀಡಾವಿನೋದಕ್ಕೆ ಮೇರುಪರ್ವತ, ಅಮೃತವೇ ಆಹಾರ, ವೇಶ್ಯೆಯಾಗಿ ಅಪ್ಸರೆಯರಲ್ಲಿ ಶ್ರೇಷ್ಠಳಾದ ರಂಭೆ, ರಾಣಿಯಾಗಿ ಶಚೀದೇವಿ, ಐರಾವತವೇ ಪಟ್ಟದಾನೆ,  ರಕ್ಷಣೆಗೆ ವಜ್ರಾಯುಧ,  ನವನಿಧಿಗಳ ಭಂಡಾರ-ಇವೆಲ್ಲವುಗಳನ್ನು ಕಾಪಾಡುತ್ತ ಶಿವನಂತಿರುವ(ಶಿವನಿಗೆ ಸಮಾಜನಾಗಿರುವ) ಸ್ವರ್ಗದ ಅಧಿಪತಿಯಾದ ದೇವೇಂದ್ರನು ಒಂದು ದಿನ ರಾತ್ರಿಯ ಸಮಯದಲ್ಲಿ ತನ್ನ ಆಸ್ಥಾನದಲ್ಲಿ ಒಡ್ಡೋಲಗವನ್ನು ಕೊಟ್ಟನು.

 

ಒಡಲನಾವರಿಸಿದಂಗೋಪಾಂಗಸಂಕುಳದ

ನಡುವೆ ನಯನದ್ವಯಂಗಳು ಸಲೆ ನವಗ್ರಹದ

ನಡುವೆ ಚಂದ್ರಾದಿತ್ಯರುರ್ವಿಯಂ ಪರ್ವಿ ಪಸರಿಸಿದ ನಾನಾ ನದಿಗಳ

ನಡುವೆ ಸುರುಚಿರ ಗಂಗೆ ತುಂಗಭದ್ರೆಗಳೊಪ್ಪ

ವಡೆದು ಮಹಿಮೆಯೊಳೆಸೆವ ತೆಱದಿ ಸುರಪನ ಸಭೆಯ

ನೆಡೆಗೊಂಡ ಮುನಿಕುಲದ ನಡುವಿರ್ದರಧಿಕ ವಿಶ್ವಾಮಿತ್ರ ವಾಸಿಷ್ಠರು  ||೨||

ಪದ್ಯದ ಅನ್ವಯಕ್ರಮ:

ಅಧಿಕ ವಿಶ್ವಾಮಿತ್ರ, ವಾಸಿಷ್ಠರು, ಒಡಲನ್ ಆವರಿಸಿದ ಅಂಗ ಉಪಾಂಗ ಸಂಕುಳದ ನಡುವೆ ನಯನದ್ವಯಂಗಳು ಸಲೆ, ನವಗ್ರಹದ ನಡುವೆ ಚಂದ್ರ ಆದಿತ್ಯರು, ಉರ್ವಿಯಂ ಪರ್ವಿ ಪಸರಿಸಿದ ನಾನಾ ನದಿಗಳ ನಡುವೆ ಸುರುಚಿರ ಗಂಗೆ, ತುಂಗಭದ್ರೆಗಳ್ ಒಪ್ಪವಡೆದು ಮಹಿಮೆಯೊಳ್ ಎಸೆವ ತೆಱದಿ ಸುರಪನ ಸಭೆಯನ್ ಎಡೆಗೊಂಡ ಮುನಿಕುಲದ ನಡುವೆ ಇರ್ದರ್.  

ಪದ-ಅರ್ಥ:

ಒಡಲನ್-ದೇಹವನ್ನು;   ಆವರಿಸಿದ-ಸುತ್ತುವರಿದ, ಹೊಂದಿದ;   ಅಂಗೋಪಾಂಗ-ಅಂಗಾಂಗಗಳು;  ನಯನದ್ವಯ-ಎರಡು ಕಣ್ಣುಗಳು; ಆದಿತ್ಯ-ಸೂರ್ಯ;  ಉರ್ವಿಯಂ-ಭೂಮಿಯನ್ನು;  ಪರ್ವಿ-ಹಬ್ಬಿ, ಆವರಿಸಿ;  ಸುರುಚಿರ-ಸುಂದರವಾದ;  ಒಪ್ಪವಡೆದು-ಸೌಂದರ್ಯವನ್ನು ಪಡೆದುಕೊಂಡು;  ಎಸೆವ-ಶೋಭಿಸುವ;  ತೆಱದಿ-ರೀತಿಯಲ್ಲಿ;  ಸುರಪ-ದೇವತೆಯರನ್ನು ಪಾಲಿಸುವವನು (ದೇವೇಂದ್ರ); ಎಡೆಗೊಂಡ-ಸೇರಿಕೊಂಡ;  ಮುನಿಕುಲ-ಮುನಿಗಳ ಸಮೂಹ;  ಅಧಿಕ-ಶ್ರೇಷ್ಠ.

            ಮನುಷ್ಯದೇಹದ ಅಂಗಾಂಗಗಳ ನಡುವೆ ಎರಡು ಕಣ್ಣುಗಳು ಸುಂದರವಾಗಿ  ಶೋಭಿಸುವಂತೆ, ನವಗ್ರಹಗಳ ಗುಂಪಿನಲ್ಲಿ ಚಂದ್ರ ಮತ್ತು ಸೂರ್ಯರು ಶೋಭಿಸುವಂತೆ, ಭೂಮಿಯನ್ನು ಆವರಿಸಿಕೊಂಡಿರುವ ಹಲವಾರು ನದಿಗಳ ನಡುವೆ ಮನೋಹರವಾದ ಗಂಗೆ ಹಾಗೂ ತುಂಗಭದ್ರಾ ನದಿಗಳು ಸೌಂದರ್ಯವನ್ನು ಪಡೆದುಕೊಂಡು ಸುಂದರವಾಗಿ ಶೋಭಿಸುವಂತೆ ದೇವೇಂದ್ರನ ಒಡ್ಡೋಲಗದ ಸಭೆಯಲ್ಲಿ ಆಸೀನರಾದ ಮುನಿಗಳ ಸಮೂಹದಲ್ಲಿ ವಿಶ್ವಾಮಿತ್ರ ಹಾಗೂ ವಸಿಷ್ಠರು, ಶೋಭಿಸಿದರು.      

 

ಅಲಸದೆ ಸಮಸ್ತಭೂಮಂಡಲವನಾಳ್ವ ರವಿ

ಕುಲಜರಪ್ಪಿಕ್ಷ್ವಾಕುವಂಶದರಸುಗಳೊಳತಿ

ಬಲರೆನಿಸಿ ಮನವಚನಕಾಯದೂಳಗೊಮ್ಮೆಯುಂ ಹುಸಿ ಹೊದ್ದದಂತೆ ನಡೆವ

ಕಲಿಗಳಾರಯ್ಯ ಹೇಳವರ ಪಾರಂಪರೆಗೆ

ಸಲೆ ಸಂದ ರಾಜಗುರು ನೀನಱಿಯದವರಿಲ್ಲ

ವೆಲೆ ಮುನಿಪ ಹೇಳೆಂದು ಹಲವುಕಣ್ಣಾದವಂ ನುಡಿದನು ವಸಿಷ್ಠಮುನಿಗೆ  ||೩||

ಪದ್ಯದ ಅನ್ವಯಕ್ರಮ:

ಅಲಸದೆ ಸಮಸ್ತ ಭೂಮಂಡಲವನ್ ಆಳ್ವ ರವಿಕುಲಜರಪ್ಪ ಇಕ್ಷ್ವಾಕು ವಂಶದ ಅರಸುಗಳೊಳ್ ಅತಿಬಲರ್ ಎನಿಸಿ ಮನ, ವಚನ, ಕಾಯದೊಳಗೆ ಒಮ್ಮೆಯುಂ ಹುಸಿ ಹೊದ್ದದಂತೆ ನಡೆವ ಕಲಿಗಳ್ ಆರಯ್ಯ? ಹೇಳ್. ಅವರ ಪಾರಂಪರೆಗೆ ಸಲೆ ಸಂದ ರಾಜಗುರು, ನೀನು ಅಱಿಯದವರ್ ಇಲ್ಲವಲೆ, ಮುನಿಪ ಹೇಳ್ ಎಂದು ವಸಿಷ್ಠಮುನಿಗೆ ಹಲವು ಕಣ್ಣಾದವಂ ನುಡಿದನು.  

ಪದ-ಅರ್ಥ:

ಅಲಸದೆ-ಬೇಸರಿಸದೆ, ಆಯಾಸಗೊಳ್ಳದೆ;   ಸಮಸ್ತಭೂಮಂಡಲ-ಸಮಸ್ತ ಭೂಮಿ;  ಆಳ್ವ-ಆಳುವ;   ರವಿಕುಲಜರ್-ಸೂರ್ಯವಂಶದಲ್ಲಿ ಹುಟ್ಟಿದವರು;  ಇಕ್ಷ್ವಾಕುವಂಶದೊಳಗೆ-ಇಕ್ಷ್ವಾಕು ಎಂಬ ರಾಜನಿಂದ ಪ್ರಸಿದ್ಧವಾದ ವಂಶದಲ್ಲಿ;  ಅತಿಬಲರೆನಿಸಿ-ಮಹಾಪ್ರರಾಕ್ರಮಿಯೆನಿಸಿ;  ಮನ-ಮನಸ್ಸು;  ವಚನ-ಮಾತು;  ಕಾಯ-ದೇಹ;  ಹುಸಿಹೊದ್ದದಂತೆ-ಸುಳ್ಳು ಸೇರದಂತೆ, ಸುಳ್ಳ ಎನಿಸಿಕೊಳ್ಳದಂತೆ;  ಕಲಿ-ಪರಾಕ್ರಮಿ;  ಹಲವುಕಣ್ಣಾದವಂ-ಹಲವು ಕಣ್ಣುಗಳುಳ್ಳವನು(ದೇವೇಂದ್ರ).

            ಬೇಸರಿಸದೆ, ಅತ್ಯಂತ ಲವಲವಿಕೆಯಿಂದ ಸಮಸ್ತಭೂಮಂಡಲವನ್ನು ಆಳುವ, ಸೂರ್ಯವಂಶವೆಂದು ಪ್ರಸಿದ್ಧವಾಗಿರುವ ಇಕ್ಷ್ವಾಕು ವಂಶದ ಅರಸರಲ್ಲಿ ಮಹಾ ಬಲಿಷ್ಠರೆಂದು ಪ್ರಸಿದ್ಧರಾಗಿ ಮನಸ್ಸು, ಮಾತು ಹಾಗೂ ದೇಹದ ವಿಚಾರದಲ್ಲಿ(ತ್ರಿಕರಣಪೂರ್ವಕವಾಗಿ) ಒಮ್ಮೆಯೂ ಸುಳ್ಳು ಹೇಳದೆ ನಡೆದುಕೊಂಡ ಪರಾಕ್ರಮಶಾಲಿಗಳು ಯಾರಿದ್ದಾರೆ? ವಸಿಷ್ಠನೇ ನೀನು  ಆ ರಾಜವಂಶಕ್ಕೆ ಪರಂಪರೆಯಿಂದ ರಾಜಗುರುವಾಗಿರುವೆ, ನೀನು ತಿಳಿಯದ ಅರಸರೆ ಇಲ್ಲವಲ್ಲ ಎಂದು ಸ್ವರ್ಗಾಧಿಪತಿ ದೇವೇಂದ್ರನು ವಸಿಷ್ಠನಲ್ಲಿ ಕೇಳಿದನು. 

 

ಬೆಸಗೊಂಡೊಡಿಕ್ಷ್ವಾಕುವಂಶದೊಳಗಣ ಚತು

ರ್ದಶಭುವನಪತಿಗಳೊಳಗಿಂದುತನಕಾನಱಿಯೆ

ಹುಸಿಹೊದ್ದದವರಿಲ್ಲ ಹಿಂದಣರಸುಗಳನುದ್ಧರಿಸಲೆಂದವತರಿಸಿದ

ವಸುಧಾಧಿಪತಿ ಹರಿಶ್ಚಂದ್ರನಾತನ ಸತ್ಯ

ದೆಸಕಮಂ ಪೊಗಳಲೆನ್ನಳವೆ ಫಣಿಪತಿಗರಿದು

ಶಶಿಮೌಳಿಯಾಣೆಯೆನಲಾ ವಸಿಷ್ಠಂಗೆ ಕೋಪಿಸಿದ ವಿಶ್ವಾಮಿತ್ರನು  ||೪||

ಪದ್ಯದ ಅನ್ವಯಕ್ರಮ:

ಬೆಸಗೊಂಡೊಡೆ ಇಕ್ಷ್ವಾಕು ವಂಶದೊಳಗಣ ಚತುರ್ದಶ ಭುವನಪತಿಗಳೊಳ್ ಇಂದುತನಕ ಆನ್ ಆಱಿಯೆ ಹುಸಿಹೊದ್ದದವರು ಇಲ್ಲ, ಹಿಂದಣ ಅರಸುಗಳನ್ ಉದ್ಧರಿಸಲೆಂದು ಅವತರಿಸಿದ ವಸುಧಾಧಿಪತಿ ಹರಿಶ್ಚಂದ್ರನ್ ಆತನ ಸತ್ಯದ ಎಸಕಮಂ ಪೊಗಳಲ್ ಎನ್ನ ಅಳವೆ? ಫಣಿಪತಿಗೆ ಅರಿದು, ಶಶಿಮೌಳಿಯ ಆಣೆ, ಎನಲ್ ಆ ವಸಿಷ್ಠಂಗೆ ವಿಶ್ವಾಮಿತ್ರನು ಕೋಪಿಸಿದನು.

ಪದ-ಅರ್ಥ:

ಬೆಸಗೊಂಡೊಡೆ-ವಿಚಾರಿಸಿದಾಗ;  ಇಕ್ಷ್ವಾಕುವಂಶದೊಳಗಣ-ಇಕ್ಷ್ವಾಕುವಂಶದೊಳಗೆ;  ಚತುರ್ದಶ –ಹದಿನಾಲ್ಕು;  ಭುವನಪತಿ-ರಾಜ;  ಇಂದುತನಕ-ಇದುವರೆಗೆ;  ಹುಸಿಹೊದ್ದದವರು-ಸುಳ್ಳಾಡದವರು; ಉದ್ಧರಿಸಲೆಂದು-ಉದ್ಧಾರಮಾಡಲೆಂದು;  ಅವತರಿಸಿದ-ಹುಟ್ಟಿದ;  ವಸುಧಾಧಿಪತಿ-ರಾಜ;  ಸತ್ಯದೆಸಕಮಂ-ಸತ್ಯದ ರೀತಿಯನ್ನು; ಪೊಗಳಲ್-ಹೊಗಳುವುದಕ್ಕೆ; ಎನ್ನಳವೇ-ನನ್ನಿಂದ ಸಾಧ್ಯವೇ?;  ಫಣಿಪತಿಗರಿದು-ಆದಿಶೇಷನಿಗೂ ಅಸಾಧ್ಯ;  ಶಶಿಮೌಳಿ-ಶಿವ.

            ದೇವೇಂದ್ರನು ವಸಿಷ್ಠಮುನಿಯನ್ನು ವಿಚಾರಿಸಿದಾಗ, ಅವನು ಇಕ್ಷ್ವಾಕುವಂಶದ ಹದಿನಾಲ್ಕು ರಾಜರೊಳಗೆ ನಾನು ತಿಳಿದಿರುವಂತೆ  ಇದುವರೆಗೂ ಸುಳ್ಳನ್ನಾಡದೇ ಇದ್ದವರು ಯಾರೂ ಇಲ್ಲ. ಹಿಂದಿನ ರಾಜರನ್ನು ಉದ್ಧಾರ ಮಾಡಲೆಂದೇ ಹುಟ್ಟಿಬಂದಿರುವ ರಾಜ ಹರಿಶ್ಚಂದ್ರ ಹಾಗೂ ಆತನ ಸತ್ಯದ ರೀತಿಯನ್ನು ಹೊಗಳುವುದಕ್ಕೆ ನನ್ನಿಂದ ಸಾಧ್ಯವೇ? ನಾನು ಹಾಗಿರಲಿ, ಆದಿಶೇಷನಿಗೂ ಅಸಾಧ್ಯ. ಇದು ಶಿವನಾಣೆಗೂ ಸತ್ಯವೆಂದು ವಸಿಷ್ಠನು ಹೇಳಿದಾಗ ವಿಶ್ವಾಮಿತ್ರನು ಕೋಪಿಸಿದನು.

 

ತೀವಿದೊಡ್ಡೋಲಗದ ನಡುವೆ ತನ್ನಂ ಮೊದಲೊ

ಳೋವಿ ನುಡಿಸದ ಕೋಪವೊಂದಾ ವಸಿಷ್ಠಮುನಿ

ಯಾವುದಂ ಪೇಳ್ದಡದನಲ್ಲೆಂಬ ಭಾಷೆಯೆರಡಖಿಳಜೀವಾವಳಿಯಲಿ

ಭಾವಿಪಡೆ ಕುಂದನಲ್ಲದೆ ಲೇಸ ಕಾಣದಿಹ

ಭಾವ ಮುಪ್ಪುರಿಗೊಂಡು ಕುಡಿವರಿದು ಕಡುಗೋಪ

ವಾವರಿಸಿ ಕೌಶಿಕಂ ನಿಂದು ನಿಲ್ ನುಡಿಯಬೇಡೆಂದು ಜಱೆದಿಂತೆಂದನು  ||೫||

ಪದ್ಯದ ಅನ್ವಯಕ್ರಮ:

ತೀವಿದ ಒಡ್ಡೋಲಗದ ನಡುವೆ ಮೊದಲೊಳ್ ತನ್ನಂ ಓವಿ ನುಡಿಸದ ಕೋಪವೊಂದು, ಆ ವಸಿಷ್ಠಮುನಿ ಯಾವುದಂ ಪೇಳ್ದಡೆ ಅದನ್ ಅಲ್ಲೆಂಬ ಭಾಷೆಯೆರಡು, ಭಾವಿಪಡೆ ಅಖಿಳ ಜೀವಾವಳಿಯಲಿ ಕುಂದನ್ ಅಲ್ಲದೆ ಲೇಸ ಕಾಣದಿಹ ಭಾವ ಮುಪ್ಪುರಿಗೊಂಡು ಕುಡಿವರಿದು ಕಡು ಕೋಪ ಆವರಿಸಿ ಕೌಶಿಕಂ ನಿಂದು ನಿಲ್ ನುಡಿಯಬೇಡ ಎಂದು ಜಱೆದು ಇಂತೆಂದನು.

ಪದ-ಅರ್ಥ:

ತೀವಿದ-ತುಂಬಿದ; ಒಡ್ಡೋಲಗದ ನಡುವೆ-ಒಡ್ಡೋಲಗದಲ್ಲಿ;   ತನ್ನಂ-ತನ್ನನ್ನು;  ಓವಿ-ಪ್ರೀತಿಯಿಂದ, ವಿಶ್ವಾಸದಿಂದ; ನುಡಿಸದ –ಮಾತನಾಡಿಸದ;  ಪೇಳ್ದಡೆ-ಹೇಳಿದರೂ;  ಅಲ್ಲೆಂಬ- ಅಲ್ಲ ಎನ್ನುವ;  ಅಖಿಳ ಜೀವಾವಳಿ-ಸಮಸ್ತ ಜೀವಸಮೂಹ;  ಭಾವಿಪಡೆ-ಪರಿಭಾವಿಸುವುದಾದರೆ;  ಕುಂದನ್-ಕೊರತೆಯನ್ನು;  ಲೇಸ-ಒಳಿತನ್ನು;  ಮುಪ್ಪುರಿಗೊಂಡು-ದೃಢವಾಗಿ ಸೇರಿ;  ಕುಡಿವರಿದು-ಚಿಗುರಿಟ್ಟು;  ಕಡುಗೋಪ-ಅತಿಯಾದ ಕೋಪ;  ಕೌಶಿಕ-ವಿಶ್ವಾಮಿತ್ರ;  ಜಱೆದು-ನಿಂದಿಸಿ.

            ತುಂಬಿದ ಒಡ್ಡೋಲಗದ ಸಭೆಯಲ್ಲಿ ತನ್ನನ್ನು ಮೊದಲಿಗೆ ವಿಶ್ವಾಸದಿಂದ ಮಾತನಾಡಿಸದ ಕೋಪ ಒಂದೆಡೆ,  ಆ ವಸಿಷ್ಠಮುನಿ ಯಾವ ವಿಚಾರವನ್ನು ಹೇಳಿದರೂ ಅದನ್ನು ಅಲ್ಲ ಎಂದು ವಾದಿಸುವ ಮಾತು ಇನ್ನೊಂದೆಡೆ, ಸಮಸ್ತ ಜೀವಸಂಕುಲದಲ್ಲಿ ಕೊರತೆಯನ್ನಲ್ಲದೆ ಒಳಿತನ್ನು ಕಾಣದೇ ಇರುವ ಭಾವ ದೃಢವಾಗಿ ಸೇರಿಕೊಂಡು ಚಿಗುರಿಟ್ಟು, ಅತಿಯಾದ ಕೋಪವು ದೇಹವೆಲ್ಲವನ್ನೂ ಆವರಿಸಿ ವಿಶ್ವಾಮಿತ್ರನು ಎದ್ದುನಿಂತು, ನಿಲ್ಲು ವಸಿಷ್ಠ ಇನ್ನು ಮಾತಾಡಬೇಡ ಎಂದು ಕೋಪದಿಂದ ನಿಂದಿಸಿದನು.

 

ಬೇಸಱದೆ ಕೇಳ್ವ ದೇವೇಂದ್ರನುಂಟೆಂದಿಂತು

ಹೇಸದಕಟಕಟ ಸೊರಹುವರೆ ವಾಸಿಷ್ಠಯೆನ

ಲಾಂ ಸೊರಹುವನೆಯಾತನಧಿಕನಲ್ಲವೆ ಹೇಳು ಮುನಿದ ಮೋಱೆಯೊಳೆಂದೆನೆ

ರಾಸಿ ಹೊನ್ನುಂಟಧಿಕನಹನೆನಲು ಹೊನ್ನ ಮಾ

ತೀ ಸಭೆಯೊಳೇಕೆ ಸತ್ಯನೆ ಹೇಳೆನಲು ಸತ್ಯ

ಲೇಶವಂತನಾಳ್ವ ದೇಶದೊಳು ಕೇಳ್ದಱಿಯೆನೆಂದ ವಿಶ್ವಾಮಿತ್ರನು  ||೬||

ಪದ್ಯದ ಅನ್ವಯಕ್ರಮ:

ಬೇಸಱದೆ ಕೇಳ್ವ ದೇವೇಂದ್ರನ್ ಉಂಟೆಂದು ಹೇಸದೆ ಇಂತು ಸೊರಹುವರೆ, ವಾಸಿಷ್ಠ ಅಕಟಕಟ ಎನಲ್, ಮುನಿದ ಮೋಱೆಯೊಳ್ ಆಂ ಸೊರಹುವನೆ? ಆತನ್ ಅಧಿಕನಲ್ಲವೆ ಹೇಳು, ಎಂದು ಎನೆ, ರಾಸಿ ಹೊನ್ನುಂಟು ಅಧಿಕನಹನ್ ಎನಲು, ಹೊನ್ನ ಮಾತು ಈ ಸಭೆಯೊಳ್ ಏಕೆ? ಹೇಳ್ ಎನಲು, ಸತ್ಯಲೇಶವಂತು ಅವನ ಆಳ್ವ ದೇಶದೊಳು ಕೇಳ್ದರಿಯೆನ್ ಎಂದ ವಿಶ್ವಾಮಿತ್ರನು.

ಪದ-ಅರ್ಥ:

ಬೇಸಱದೆ-ಬೇಸರಿಸದೆ;  ದೇವೇಂದ್ರನುಂಟೆಂದು-ದೇವೇಂದ್ರನಿದ್ದಾನೆ ಎಂದು; ಇಂತು-ಹೀಗೆ;  ಹೇಸದೆ-ಹೇಸಿಕೊಳ್ಳದೆ;  ಸೊರಹುವರೆ-ಗಳಹುತ್ತಾರೆಯೇ?, ಹರಟುತ್ತಾರೆಯೇ?;  ಅಧಿಕನಲ್ಲವೆ-ಶ್ರೇಷ್ಠನಲ್ಲವೇ?.

            ನೀನು ಮನಸ್ಸಿಗೆ ಬಂದಂತೆ ಆಡಿದರೂ ಅದನ್ನು ಬೇಸರಿಸಿಕೊಳ್ಳದೆ ಕೇಳುವ ದೇವೇಂದ್ರನಿದ್ದಾನೆ ಎಂದುಕೊಂಡು ಯಾರಾದರೂ ಈ ರೀತಿಯಲ್ಲಿ ಗಳಹುತ್ತಾರೆಯೇ ವಸಿಷ್ಠ? ಎಂದು ವಿಶ್ವಾಮಿತ್ರ  ಹೇಳಿದಾಗ, ವಸಿಷ್ಠನು, ನಾನು ಗಳಹುತ್ತಿದ್ದೇನೆಯೇ? ಹರಿಶ್ಚಂದ್ರ ಶ್ರೇಷ್ಠನಲ್ಲವೇ ಹೇಳು? ಎಂದು ಕೋಪದಿಂದ ಕೇಳಿದನು. ಆಗ ವಿಶ್ವಾಮಿತ್ರನು, ಅವನಲ್ಲಿ ರಾಶಿ ಸಂಪತ್ತಿದೆ, ಹಾಗಾಗಿ ಶ್ರೇಷ್ಠನಾಗಿದ್ದಾನೆ ಎಂದನು. ಆಗ, ವಸಿಷ್ಠನು ಈ ಸಭೆಯಲ್ಲಿ ಸಂಪತ್ತಿನ ಮಾತೇಕೆ? ಅವನು ಸತ್ಯವಂತನಲ್ಲವೇ ಹೇಳು ಎಂದು ಕೇಳಿದನು. ಆಗ ವಿಶ್ವಾಮಿತ್ರನು ಸತ್ಯಲೇಶವಂತೂ ಅವನು ಆಳುತ್ತಿರುವ ದೇಶದಲ್ಲಿ ನಾನು ಕೇಳಿ ತಿಳಿದಿಲ್ಲ ಎಂದನು. 

 

ಎಸೆವ ಮಗನಿಲ್ಲದೊಡೆ ನರಕವಹುದೆಂದು ಚಿಂ

ತಿಸಿ ವರುಣನಲಿ ವರಂಬಡೆಯಲಾತನ ಯಾಗ

ಪಶುವ ಮಾಡುವೆನೆಂದು ಮರಳೀವೆಯಾದೊಡೀವೆನು ಮಗನ ನಿನಗೆಂದೆನೆ

ಶಿಶುವಾದನೆಂಬುದಾದಡೆ ಸಾಕೆನಲ್ ಕೊಡಲು

ಹುಸಿದಡವಿಗಟ್ಟಿ ಬೈಚಿಟ್ಟನೆಂಬುದನಿಂತು

ಎಸೆವ ವೇದಂಗಳೊಳು ಕೇಳಿ ಪೊಗಳುವಡರಿದು ನಿನ್ನ ಧೀವಸವೆಂದನು  ||೭||

ಪದ್ಯದ ಅನ್ವಯಕ್ರಮ:

ಎಸೆವ ಮಗನ್ ಇಲ್ಲದೊಡೆ ನರಕವಹುದು ಎಂದು ಚಿಂತಿಸಿ, ಆತನ ಯಾಗಪಶುವ ಮಾಡುವೆನ್ ಎಂದು ವರುಣನಲಿ ವರಂ ಪಡೆಯಲ್, ಮರಳಿ ಮಗನ ಈವೆಯಾದೊಡೆ ನಿನಗೆ ಈವೆನು ಎಂದು ಎನೆ, ಶಿಶುವಾದನ್ ಎಂಬುದು ಆದೊಡೆ ಸಾಕು ಎನಲ್, ಕೊಡಲು ಹುಸಿದು ಅಡವಿಗಟ್ಟಿ ಬೈಚಿಟ್ಟನ್ ಎಂಬುದನ್ ಇಂತು ಎಸೆವ ವೇದಂಗಳೊಳು ಕೇಳಿ ಪೊಗಳುವಡೆ ನಿನ್ನ ಧೀವಸ ಅರಿದು ಎಂದನು.

ಪದ-ಅರ್ಥ:

ಎಸೆವ-ಶೋಭಿಸುವ;  ನರಕವಹುದು-ನರಕಪ್ರಾಪ್ತಿಯಾಗುತ್ತದೆ;  ವರಂಬಡೆ-ವರವನ್ನು ಪಡೆ; ಆತನ-ಮಗನನ್ನು; ಯಾಗಪಶು-ಯಾಗಕ್ಕೆ ಬಲಿಪಶು;  ಮರಳೀವೆಯಾದೊಡೆ-ತಿರುಗಿ ಒಪ್ಪಿಸುವೆ ಎಂದಾದರೆ;  ಈವೆನು-ನೀಡುತ್ತೇನೆ;  ಶಿಶುವಾದನೆಂಬುದಾದಡೆ-ಮಗುವಾಗಿದೆ ಎಂದಾದರೆ;  ಕೊಡಲು ಹುಸಿದು-ನೀಡಲು ಸುಳ್ಳಾಡಿ;  ಅಡವಿಗಟ್ಟಿ-ಕಾಡಿಗಟ್ಟಿ;  ಬೈಚಿಟ್ಟನ್-ಅಡಗಿಸಿಟ್ಟನು;  ಇಂತು-ಹೀಗೆ;  ಅರಿದು-ಅಸಾಮಾನ್ಯ;  ಧೀವಸ-ಉದ್ಧಟತನ.

            ಹರಿಶ್ಚಂದ್ರ ಮಹಾರಾಜನು ತನಗೆ ಒಬ್ಬ ಮಗನಿಲ್ಲದಿದ್ದರೆ ನರಕಪ್ರಾಪ್ತಿಯಾಗುತ್ತದೆ ಎಂದು ಬಹಳ ಆಲೋಚಿಸಿ ವರುಣನನ್ನು ಮೆಚ್ಚಿಸಿ, ’ತನಗೆ ಮಗನನ್ನು ಕರುಣಿಸಿದರೆ ಆತನನ್ನು ಯಾಗಪಶುವನ್ನಾಗಿ ನೀಡುತ್ತೇನೆ’ ಎಂದು  ವರವನ್ನು ಪಡೆದು, ಹುಟ್ಟಿದ ಮಗನನ್ನು ಮರಳಿ ತನಗೆ ಒಪ್ಪಿಸುವೆಯಾದರೆ ನಿನಗೆ ಮಗುವನ್ನು ಕರುಣಿಸುತ್ತೇನೆ ಎಂದು ವರುಣ ಕೇಳಿದಾಗ, ಹರಿಶ್ಚಂದ್ರನು ತನಗೆ ಮಗುವಾದರೆ ಸಾಕು ಎಂದು ವರುಣನಿಗೆ  ಮಾತುಕೊಟ್ಟು, ಮುಂದೆ ಮಗುವಾದ ಮೇಲೆ ವರುಣನಿಗೆ ಸುಳ್ಳುಹೇಳಿ ಮಗುವನ್ನು ಕಾಡಿಗೆ ಅಟ್ಟಿ ಅಡಗಿಸಿಟ್ಟನೆಂಬುದನ್ನು ವೇದಗಳೇ ಹೇಳುತ್ತಿರುವಾಗ, ಆತನನ್ನು ಹೊಗಳುವುದಕ್ಕೆ ನಿನ್ನ ಈ ಉದ್ಧಟತನವೆಂಬುದು ಅಸಾಮಾನ್ಯವಲ್ಲವೆ? ಎಂದು ವಿಶ್ವಾಮಿತ್ರನು ಹೇಳಿದನು.  

 

ಹಿರಿದು ಹುಸಿಗಬುಧಿಪತಿ ಮುನಿದು ಮಾಡಿದ ಜಳೋ

ದರವ ಭಾವಿಸದೆ ಕಂಗೆಟ್ಟ ಜಾಡ್ಯಂ ಮಹಾ

ಧ್ವರಕೆ ಪಶುವಂ ಮಗನ ಮಾಡಲಾಱದೆ ಮೋಹದಿಂದಜೀಗರ್ತ ಮುನಿಯ

ವರಸುತ ಶುನಶ್ಯೇಫನಂ ತಂದು ಯಾಗವಿಧಿ

ಗರಿದು ಬೇಳಲ್ಕೆ ಮನದಂದ ಪಾತಕನು ಭೂ

ವರನನೇತಕ್ಕೆ ಹೇಸದೆ ಹೊಗಳ್ವೆಯೆಂದು ವಾಸಿಷ್ಠನಂ ಕೆಡೆನುಡಿದನು  ||೮||

ಪದ್ಯದ ಅನ್ವಯಕ್ರಮ:

ಅಬುಧಿಪತಿ ಮುನಿದು ಮಾಡಿದ ಜಳೋದರವ ಹಿರಿದು ಹುಸಿಗ ಭಾವಿಸದೆ ಕಂಗೆಟ್ಟ ಜಾಡ್ಯಂ ಮಹಾ ಅಧ್ವರಕೆ ಮೋಹದಿಂದ ಮಗನ ಪಶುವಂ ಮಾಡಲಾಱದೆ, ಅಜೀಗರ್ತ ಮುನಿಯ ವರಸುತ ಶುನಶ್ಶೇಫನಂ ತಂದು ಯಾಗವಿಧಿಗೆ ಅರಿದು ಬೇಳಲ್ಕೆ ಮನದಂದ ಪಾತಕನು, ಭೂವರನನ್ ಏತಕ್ಕೆ ಹೇಸದೆ ಹೊಗಳ್ವೆ ಎಂದು ವಾಸಿಷ್ಠನಂ ಕೆಡೆ ನುಡಿದನು.

ಪದ-ಅರ್ಥ:

ಅಬುಧಿಪತಿ-ವರುಣದೇವ;  ಮುನಿದು-ಸಿಟ್ಟುಗೊಂಡು;  ಮಾಡಿದ-ಶಪಿಸಿದ;  ಜಳೋದರವ-ಜಲೋದರ ಎಂಬ ರೋಗ(ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವ ರೋಗ);  ಹಿರಿದು ಹುಸಿಗ-ಅತ್ಯಂತ ಸುಳ್ಳ(ಹರಿಶ್ಚಂದ್ರ); ಭಾವಿಸದೆ-ಯೋಚಿಸದೆ;  ಕಂಗೆಟ್ಟ ಜಾಡ್ಯಂ-ಕಂಗೆಡಿಸುವ ರೋಗ;  ಮಹಾಧ್ವರ-ಮಹಾಯಾಗ; ಪಶುವಂ ಮಾಡಲಾಱದೆ-ಯಾಗಪಶುವನ್ನಾಗಿ ಮಾಡಲಾರದೆ;  ಅರಿದು-ಕತ್ತರಿಸಿ;  ಬೇಳಲ್ಕೆ-ಬಲಿಯಾಗಿ ಅರ್ಪಿಸುವುದಕ್ಕೆ;  ಮನದಂದ-ಮನಸ್ಸುಮಾಡಿದ; ಪಾತಕನ್-ಪಾಪಿ;  ಭೂವರ-ರಾಜ(ಹರಿಶ್ಚಂದ್ರ); ಕೆಡೆನುಡಿ-ಕೆಟ್ಟದಾಗಿ ಆಡು.

            ವರುಣದೇವನು ಸುಳ್ಳಾಡಿದ ಹರಿಶ್ಚಂದ್ರನ ಮೇಲೆ ಸಿಟ್ಟುಗೊಂಡು ಶಾಪಕೊಟ್ಟುದರಿಂದ ಜಲೋದರ ರೋಗಕ್ಕೆ ಗುರಿಯಾಗಿ ತನ್ನ ತಪ್ಪನ್ನು ಯೋಚಿಸದೆ, ಜಲೋದರ ರೋಗದಿಂದ ಕಂಗೆಟ್ಟು ಅದರ ಪರಿಹಾರಕ್ಕಾಗಿ ಮಹಾಯಾಗವನ್ನು ಆಯೋಜಿಸಿ, ಆ ಯಾಗಕ್ಕೆ ಮೋಹದಿಂದ ತನ್ನ ಮಗನನ್ನು ಯಾಗಪಶುವನ್ನಾಗಿ ಮಾಡಲಾರದೆ, ಅಜೀಗರ್ತ ಮುನಿಯ ಮಗನಾದ ಶುನಶ್ಶೇಫನನ್ನು ಕೊಂಡುಕೊಂಡು ಯಾಗಪಶುವಾಗಿ ಸಂಕಲ್ಪಿಸಿ ಆತನನ್ನು ಕತ್ತರಿಸಿ ಬಲಿಕೊಡಲು ಮನಸ್ಸುಮಾಡಿದ ಪಾಪಿ ಹರಿಶ್ಚಂದ್ರ, ಅಂತಹವನನ್ನು ನೀನು ಏತಕ್ಕೆ ಹೇಸದೆ ಹೊಗಳುತ್ತಿರುವೆ ಎಂದು ವಿಶ್ವಾಮಿತ್ರನು ವಸಿಷ್ಠನನ್ನು ಕೆಟ್ಟದಾಗಿ ನಿಂದಿಸಿದನು.  

 

ಹಲವು ಮಾತೇಕಾ ಹರಿಶ್ಚಂದ್ರಭೂನಾಥ

ನೊಳಗಸತ್ಯವನು ಕಾಣಿಸಲು ಬಲ್ಲರು ಧಾತ್ರಿ

ಯೊಳು ಮುನ್ನ ಹುಟ್ಟಿದವರಿಲ್ಲಿನ್ನು ಹುಟ್ಟುವರ ಕಾಣೆ ನಾನಿದ ಬಲ್ಲೆನು

ಉಳಿದವರ ಹವಣಾವುದೆಂದು ವಾಸಿಷ್ಠಮುನಿ

ಕುಲತಿಲಕನೆನಲು ವಿಶ್ವಾಮಿತ್ರ ಮನದೊಳತಿ

ಮುಳಿದು ನಿಲ್ಲಾಡದಿರು ಬಾಯಿ ಹಿರಿದುಂಟೆಂದೆನುತ್ತ ಮತ್ತಿಂತೆಂದನು  ||೯||

ಪದ್ಯದ ಅನ್ವಯಕ್ರಮ:

ಹಲವು ಮಾತೇಕೆ ಹರಿಶ್ಚಂದ್ರ ಭೂನಾಥನೊಳಗೆ ಅಸತ್ಯವನು ಕಾಣಿಸಲು ಬಲ್ಲರು ಧಾತ್ರಿಯೊಳು ಮುನ್ನ ಹುಟ್ಟಿದವರಿಲ್ಲ, ಇನ್ನು ಹುಟ್ಟುವರ ಕಾಣೆ, ನಾನಿದ ಬಲ್ಲೆನು. ಉಳಿದವರ ಹವಣು ಆವುದು ಎಂದು ವಾಸಿಷ್ಠಮುನಿ ಕುಲತಿಲಕನ್ ಎನಲು ವಿಶ್ವಾಮಿತ್ರ ಮನದೊಳ್ ಅತಿ ಮುಳಿದು ನಿಲ್ ಬಾಯಿ ಹಿರಿದುಂಟೆಂದು ಆಡದಿರು, ಎನುತ್ತ ಮತ್ತೆ ಇಂತು ಎಂದನು.

ಪದ-ಅರ್ಥ:

ಹಲವು ಮಾತೇಕೆ-ಹೆಚ್ಚು ಮಾತೇಕೆ?;  ಭೂನಾಥ-ರಾಜ;  ಅಸತ್ಯವನು ಕಾಣಿಸಲು-ಸುಳ್ಳನ್ನು ಗುರುತಿಸಲು;  ಬಲ್ಲರು-ತಿಳಿದವರು;  ಧಾತ್ರಿ-ಭೂಮಿ;  ಮುನ್ನ-ಹಿಂದೆ;  ಹವಣು-ಪ್ರಮಾಣ;  ಕುಲತಿಲಕ-ಕುಲಕ್ಕೆ ತಿಲಕಪ್ರಾಯನಾದವನು, ಕುಲದಲ್ಲಿ ಶ್ರೇಷ್ಠನಾದವನು;  ಅತಿಮುಳಿದು-ಅತ್ಯಂತ ಸಿಟ್ಟಾಗಿ;  ಆಡದಿರು-ಮಾತಾಡಬೇಡ;  ಬಾಯಿ ಹಿರಿದುಂಟೆಂದು-ಬಾಯಿ ದೊಡ್ಡದಿದೆಯೆಂದು.

            ಹೆಚ್ಚು ಮಾತೇಕೆ? ಹರಿಶ್ಚಂದ್ರ ಮಹಾರಾಜನಲ್ಲಿ ಅಸತ್ಯವನ್ನು ಗುರುತಿಸಲು ತಿಳಿದವರು ಈ ಭೂಮಿಯಲ್ಲಿ ಹಿಂದೆ  ಹುಟ್ಟಿಲ್ಲ, ಇನ್ನು ಹುಟ್ಟುವವರನ್ನು ನೋಡಲು ಸಾಧ್ಯವಿಲ್ಲ. ಇನ್ನು ಉಳಿದವರ ಪ್ರಮಾಣವಾದರೂ ಏನು? ಎಂದು ವಸಿಷ್ಠಮುನಿಯು ಹೇಳಿದಾಗ, ವಿಶ್ವಾಮಿತ್ರನು  ಮನಸ್ಸಿನಲ್ಲಿಯೇ ಅತ್ಯಂತ ಸಿಟ್ಟಾಗಿ, ನಿಲ್ಲು, ನಿನ್ನ ಬಾಯಿ ದೊಡ್ಡದಿದೆ ಎಂದುಕೊಂಡು ಇಷ್ಟಬಂದಂತೆ ಮಾತಾಡಬೇಡ ಎನ್ನುತ್ತ ಮತ್ತೆ ಹೀಗೆಂದನು.

 

ವನಧಿಪರಿಯಂತ ಧರೆಗರಸುತನವದಱ ಮೇ

ಲನುವುಳ್ಳ ಶಿಷ್ಯನಾಗಿಹನು ನಿನಗತಿವಿಪುಳ

ಧನವನಾರಾಧಿಸುವನೆಂತಲ್ಲದಾತನಾರೈಕೆಯೊಳಿಗಿಪ್ಪೆ ನೀನು

ಎನಿತನಗ್ಗಳಿಸಿ  ಬಣ್ಣಿಸಲೊಪ್ಪದಯ್ಯ ಹೇ

ಳೆನಲು ರಾಜಪ್ರತಿಗ್ರಹದ ಬಲದವನೆ ನಾ

ನೆನೆ ಮುನಿಯಬೇಡಾತ ಹುಸಿದನಾದಡೆ ನಿನ್ನನೇಗಯ್ಯಬಹುದೆಂದನು  ||೧೦||

ಪದ್ಯದ ಅನ್ವಯಕ್ರಮ:

ವನಧಿ ಪರಿಯಂತ ಧರೆಗೆ ಅರಸುತನವು, ಅದಱ ಮೇಲೆ ಅನುವಾಗುಳ್ಳ ಶಿಷ್ಯನಾಗಿ ಇಹನು, ನಿನಗೆ ಅತಿ ವಿಪುಳ ಧನವನ್ ಆರಾಧಿಸುವನ್, ಅಂತಲ್ಲದೆ ನೀನು ಆತನ ಆರೈಕೆಯೊಳಗೆ ಇಪ್ಪೆ, ಎನಿತನ್ ಅಗ್ಗಳಿಸಿ ಬಣ್ಣಿಸಲ್ ಒಪ್ಪದಯ್ಯ ಹೇಳ್ ಎನಲು, ರಾಜಪ್ರತಿಗ್ರಹದ ಬಲದವನೆ ನಾನ್? ಎನೆ, ಮುನಿಯಬೇಡ ಆತ ಹುಸಿದನಾದಡೇ ನಿನ್ನ ಏಗಯ್ಯಬಹುದು? ಎಂದನು.

ಪದ-ಅರ್ಥ:

ವನಧಿ ಪರಿಯಂತ –ಸಮುದ್ರಗಳವರೆಗೆ, ಸಮುದ್ರಗಳಿಂದ ಆವೃತ್ತವಾದ;   ಧರೆಗರಸುತನ-ಭೂಮಿಯ ಒಡೆತನ;   ಅನುವಾಗುಳ್ಳ-ಅನುಕೂಲವಾಗಿರುವ;  ವಿಪುಳ ಧನ-ಅತಿಯಾದ ಸಂಪತ್ತು; ಆರಾಧಿಸುವನ್-ಮೆಚ್ಚಿಸುತ್ತಾನೆ;  ಅಂತಲ್ಲದೆ-ಹಾಗಲ್ಲದೆ;  ಎನಿತನ್-ಎಷ್ಟನ್ನೂ; ಅಗ್ಗಳಿಸಿ-ಹೆಚ್ಚಿಸಿ; ಬಣ್ಣಿಸಲ್-ವರ್ಣಿಸಿದರೆ;  ಒಪ್ಪದಯ್ಯ-ಒಪ್ಪಲು ಅಸಾಧ್ಯ;  ರಾಜಪ್ರತಿಗ್ರಹದ ಬಲದವನೆ-ರಾಜನಿಂದ ದಾನತೆಗೆದುಕೊಳ್ಳುವ ವರ್ಗದವನೆ?;  ನಿನ್ನ-ನೀನು(ವಿಭಕ್ತಿ ಪಲ್ಲಟ-ಪ್ರಥಮಾ ವಿಭಕ್ತಿಗೆ ಬದಲಾಗಿ ಷಷ್ಟೀ ವಿಭಕ್ತಿ ಪ್ರಯೋಗ) ಏಗಯ್ಯಬಹುದು-ಏನು ಮಾಡಬಹುದು?

            ಹರಿಶ್ಚಂದ್ರನಿಗೆ ಸಮುದ್ರಗಳಿಂದ ಆವೃತ್ತವಾದ ಭೂಮಂಡಲಕ್ಕೆ ಅರಸುತನ ದೊರೆತಿದೆ, ಮೇಲಾಗಿ ನಿನಗೆ ಅನುಕೂಲವಾಗಿರುವ ಶಿಷ್ಯನಾಗಿದ್ದಾನೆ. ನಿನಗೆ ಬೇಕಾದಷ್ಟು ಸಂಪತ್ತನ್ನು ದಾನಮಾಡಿ ಮೆಚ್ಚಿಸುತ್ತಾನೆ. ಅಷ್ಟು ಮಾತ್ರವಲ್ಲದೆ, ನೀನು ಆತನ ಆರೈಕೆಯೊಳಗೆ ಇರುವಂತಹವನು. ನೀನು ಹರಿಶ್ಚಂದ್ರನನ್ನು ಎಷ್ಟೇ ಹೊಗಳಿ ವರ್ಣಿಸಿದರೂ ಅದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ವಿಶ್ವಾಮಿತ್ರ ಹೇಳಿದಾಗ, ವಸಿಷ್ಠನು ನಾನೇನು ರಾಜನಿಂದ ದಾನವನ್ನು ತೆಗೆದುಕೊಳ್ಳುವ ವರ್ಗದವನೇ?ಎಂದು ಪ್ರಶ್ನಿಸಿದನು. ಆಗ ವಿಶ್ವಾಮಿತ್ರನು ಹೋಗಲಿ, ಸಿಟ್ಟಾಗಬೇಡ, ಒಂದು ವೇಳೆ ಹರಿಶ್ಚಂದ್ರ ಸುಳ್ಳನ್ನಾಡಿದರೆ ನೀನು ಏನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದನು. 

(ಭಾಗ-೨ರಲ್ಲಿ ಮುಂದುವರಿದಿದೆ)

 

Leave a Reply

Your email address will not be published. Required fields are marked *