ಸಾಹಿತ್ಯಾನುಸಂಧಾನ

heading1

ವಚನಗಳು- ಅಂಬಿಗರ ಚೌಡಯ್ಯ

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಬಿ.ಎ. (ಎನ್.ಇ.ಪಿ.) ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ವಚನಭಾಗ) (ನಿರ್ವಹಣಾ ಮಂಗಳ-೩)

ಅರಿಯದ ಗುರು ಅರಿಯದ ಶಿಷ್ಯಂಗೆ

ಅನುಗ್ರಹವ ಮಾಡಿದಡೇನಪ್ಪುದೆಲವೊ?

ಅಂಧಕನ ಕೈಯನಂಧಕ ಹಿಡಿದೆಡೆ,

ಮುಂದನಾರು ಕಾಂಬರು ಹೇಳೆಲೆ ಮರುಳೆ?

ತೊರೆಯಲದ್ದವನನೀಸಲರಿಯದವ

ತೆಗೆವ ತೆರನಂತೆಂದನಂಬಿಗರ ಚೌಡಯ್ಯ    ೧

            ಅರಿಯದವನು ಅರಿಯದವನಿಗೆ ಮಾಡುವ ಉಪದೇಶವನ್ನು ಮಾಡುವ ದುಸ್ಸಾಹಸವನ್ನು ಹಾಗೂ ಅದರಿಂದ ಉಂಟಾಗಬಹುದಾದ ಅಪಾಯವನ್ನು ಅಂಬಿಗರ ಚೌಡಯ್ಯ ಈ ವಚನದಲ್ಲಿ ಎರಡು ದೃಷ್ಟಾಂತಗಳ ಮೂಲಕ ಸ್ಪಷ್ಟಪಡಿಸಿದ್ದಾನೆ. ಮೊದಲನೆಯದು, ಕುರುಡನೊಬ್ಬ ಇನ್ನೊಬ್ಬ ಕುರುಡನ ಕೈಯನ್ನು ಹಿಡಿದುಕೊಂಡು ದಾರಿನಡೆಸುವ ದುಸ್ಸಾಹಸ. ಕಣ್ಣೇ ಕಾಣದವನು ಕಣ್ಣುಕಾಣದ ಇನ್ನೊಬ್ಬನನ್ನು ಹೇಗೆ ದಾರಿನಡೆಸಲು ಸಾಧ್ಯ? ದಾರಿಯಲ್ಲಿನ ಕಲ್ಲು, ಮುಳ್ಳು, ಹೊಂಡ, ಗುಂಡಿಗಳಿಂದ ತಪ್ಪಿಸಿಕೊಳ್ಳುವುದು ಹೇಗೆ? ಇಬ್ಬರೂ ಹೊಂಡ, ಗುಂಡಿಗಳಿಗೆ ಬಿದ್ದು ಪ್ರಾಣಕಳೆದುಕೊಳ್ಳಬೇಕಷ್ಟೆ. ಎರಡನೆಯದು, ನದಿಯಲ್ಲಿ ಬಿದ್ದವನನ್ನು ಈಜು ಬಾರದವನು ದಡಸೇರಿಸುವ ದುಸ್ಸಾಹಸ. ನೀರಲ್ಲಿ ಬಿದ್ದವನನ್ನು ರಕ್ಷಿಸಬೇಕಾದರೆ ಈಜುವಿಕೆಯಲ್ಲಿ ನಿಷ್ಣಾತನಾಗಿರಬೇಕು. ಅದರಲ್ಲೂ ನೀರಲ್ಲಿ ಮುಳುಗುವವನನ್ನು ಎತ್ತುವ ಕೌಶಲ ತಿಳಿದಿರಬೇಕು. ಹಾಗಿದ್ದರೆ ಮಾತ್ರ ರಕ್ಷಿಸಿ ದಡಸೇರಿಸಬಹುದು. ಇಲ್ಲದಿದ್ದರೆ ನೀರಲ್ಲಿ ಬಿದ್ದವನೊಂದಿಗೆ ರಕ್ಷಿಸಲು ಹೋದವನೂ ನೀರುಪಾಲಾಗುವುದರಲ್ಲಿ ಸಂಶಯವಿಲ್ಲ.

            ಲೋಕದಲ್ಲಿ ಒಬ್ಬ ಇನ್ನೊಬ್ಬನಿಗೆ ತಿಳಿಹೇಳಬೇಕಾದರೆ, ಮಾರ್ಗದರ್ಶನ ಮಾಡಬೇಕಾದರೆ ಮೊದಲು ತಾನು ಅವುಗಳಿಗೆ ಪೂರಕವಾದ ಕೌಶಲಗಳನ್ನು, ಅರ್ಹತೆಗಳನ್ನು ಆರ್ಜಿಸಿಕೊಳ್ಳಬೇಕು. ಆಗ ಮಾತ್ರ ವ್ಯಕ್ತಿಯೊಬ್ಬನಿಗೆ ಅನ್ಯರನ್ನು ತಿದ್ದುವ ಅರ್ಹತೆ ಪ್ರಾಪ್ತವಾಗುತ್ತದೆ. ಏನೂ ಅರಿಯದವನು ಏನೊಂದನ್ನೂ ಅರಿಯದವನಿಗೆ ಮಾರ್ಗದರ್ಶನ ಮಾಡುವುದು ಮೂರ್ಖತನದ ಪರಮಾವಧಿ ಎನಿಸಿಕೊಳ್ಳುತ್ತದೆ. ಅಲ್ಲದೆ ಹಾಗೆ ಮಾಡಿದ ಉಪದೇಶವಾಗಲೀ ಮಾರ್ಗದರ್ಶನವಾಗಲೀ ಅನರ್ಥಕ್ಕೆ ದಾರಿಮಾಡಿಕೊಡುತ್ತದೆ. ಅನ್ಯರಿಗೆ ಮಾಡುವ ಸಹಾಯ, ಆಪತ್ತಿನಲ್ಲಿನ ಸಹಕಾರ, ಬದುಕಿನ ಮಾರ್ಗದರ್ಶನ ಮೊದಲಾದವುಗಳಲ್ಲಿ ಮೂಲಭೂತ ಅರ್ಹತೆ ಅತ್ಯಂತ ಅಗತ್ಯ. ಇಲ್ಲದಿದ್ದರೆ ಕುರುಡನನ್ನು ದಾರಿ ನಡೆಸಲು ಪ್ರಯತ್ನಿಸಿದ ಕುರುಡನೂ, ನೀರಲ್ಲಿ ಬಿದ್ದವನನ್ನು ರಕ್ಷಿಸಲು ಪ್ರಯತ್ನಿಸಿದ ಈಜು ಬಾರದವನೂ ತಮ್ಮ ಪ್ರಾಣವನ್ನು ಕಳೆದುಕೊಳ್ಳುವಂತಹ ದುಃಸ್ಥಿತಿ ಒದಗುತ್ತದೆ. ಅಪರಿಪೂರ್ಣತೆ, ಅರ್ಥವಿಲ್ಲದ ಆತ್ಮವಿಶ್ವಾಸ ಹಾಗೂ ಅಸಾಮರ್ಥ್ಯಗಳು ನಮ್ಮನ್ನು ಹೇಗೆ ನಾಶದ ಕಡೆಗೆ ಕೊಂಡೊಯ್ಯುತ್ತವೆ ಎಂಬುದನ್ನು ಅಂಬಿಗರ ಚೌಡಯ್ಯ ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾನೆ.     

 

ಗಾಳಿ ಬಿಟ್ಟಲ್ಲಿ ತೂರಿಕೊಳ್ಳಿರಯ್ಯಾ

ಗಾಳಿ ನಿನ್ನಾಧೀನವಲ್ಲವಯ್ಯಾ

ನಾಳೆ ತೂರಿಹೆನೆಂದರೆ ಇಲ್ಲವಯ್ಯಾ

ಶಿವಶರಣ ಎಂಬುದೊಂದು ಗಾಳಿ ಬಿಟ್ಟಲ್ಲಿ

ಬೇಗ ತೂರೆಂದ ಅಂಬಿಗರ ಚೌಡಯ್ಯ      ೨

            ಯುಕ್ತಸಮಯದಲ್ಲಿ ಹಾಗೂ ಯುಕ್ತಸನ್ನಿವೇಶದಲ್ಲಿ  ಶಿವಶರಣರನ್ನು ಗೌರವಿಸುವ ಉಚಿತಕಾರ್ಯಗಳನ್ನು ಕೈಗೊಳ್ಳಬೇಕೆಂಬುದನ್ನು ಅಂಬಿಗರ ಚೌಡಯ್ಯ ಈ ವಚನದಲ್ಲಿ ಒಂದು ದೃಷ್ಟಾಂತದ ಮೂಲಕ ವಿವರಿಸಿದ್ದಾನೆ. ರೈತರು ತಾವು ಬೆಳೆದ ಧಾನ್ಯಗಳನ್ನು ಹಸನುಗೊಳಿಸುವುದಕ್ಕೆ ಗಾಳಿಯ ವಿರುದ್ಧದಿಕ್ಕಿನಲ್ಲಿ ಅವುಗಳನ್ನು ತೂರಬೇಕಾಗುತ್ತದೆ. ಹೀಗೆ ಧಾನ್ಯಗಳನ್ನು ತೂರುವುದಕ್ಕೆ ಗಾಳಿ ರಭಸವಾಗಿ ಬೀಸುವ ಸಮಯದವರೆಗೆ ಕಾಯಬೇಕಾಗುತ್ತದೆ.  ಗಾಳಿ ದಿನವಿಡೀ ನಿರಂತರವಾಗಿ ಬೀಸಲಾರದು. ಅದು ಬೀಸತೊಡಗಿದಾಗ  ಧಾನ್ಯವನ್ನು ತೂರಿ ಕಾಳು ಮತ್ತು ಜಳ್ಳನ್ನು ಬೇರ್ಪಡಿಸಬೇಕಾಗುತ್ತದೆ. ಸಮರ್ಪಕವಾಗಿ ಗಾಳಿ ಬೀಸದಿದ್ದರೆ ತೂರಿಯೂ ಪ್ರಯೋಜನವಿಲ್ಲ. ಮತ್ತೆ ತೂರೋಣವೆಂದು ಕಾದರೆ, ನಾಳೆ ತೂರೋಣವೆಂದರೆ ಗಾಳಿಯು ಮರಳಿ ಬೀಸುವ ಭರವಸೆಯಿಲ್ಲ. ಏಕೆಂದರೆ ಗಾಳಿಯು ನಮ್ಮ ಅಧೀನದಲ್ಲಿಲ್ಲ. ಅದು ಬೀಸುವ ಸಮಯಕ್ಕಾಗಿ ಕಾಯಬೇಕು. ಅಂಬಿಗರ ಚೌಡಯ್ಯ ಈ ವಚನದಲ್ಲಿ ಶಿವಶರಣರನ್ನು ಅಪರೂಪವಾಗಿ ಬೀಸುವ ಗಾಳಿಗೆ ಹೋಲಿಸಿದ್ದಾನೆ. ಗಾಳಿ ಹೇಗೆ ಅಪರೂಪವೋ ಹಾಗೆಯೇ ಶಿವಶರಣರ ಆಗಮನವು ಅಪರೂಪ.  ಮಾತ್ರವಲ್ಲ, ಸಮರ್ಪಕವಾಗಿ ಬೀಸುವ ಗಾಳಿಗೆ ಹೇಗೆ ಕಾಯಬೇಕೋ  ಹಾಗೆಯೇ ನಮ್ಮಲ್ಲಿಗೆ ಬರುವ ಶಿವಶರಣರೂ ಅಪರೂಪ. ಮಾತ್ರವಲ್ಲ, ಯೋಗ್ಯರಾದ ಶಿವಶರಣರಿಗೂ ಕಾಯಲೇಬೇಕು. ಅವರು ನಮ್ಮಲ್ಲಿಗೆ ಬಂದಾಗಲೇ ಅವರನ್ನು ಕರೆದು ಗೌರವಿಸಬೇಕು, ಆರೋಗಿಸಬೇಕು. ಇಂದಲ್ಲ ನಾಳೆ ಗೌರವಿಸೋಣ, ನಾಳೆ ಆರೋಗಿಸೋಣ ಎಂದು ಉದಾಸೀನ ಮಾಡಿದರೆ ಮತ್ತೆ ಶಿವಶರಣರು ನಮ್ಮಲ್ಲಿಗೆ ಬರುವ ಸಂಭವವೇ ಇರಲಾರದು. ಹೀಗಾದರೆ ಅವರನ್ನು ಆದರಿಸುವ, ಆರೋಗಿಸುವ, ಅವರ ಆಶೀರ್ವಾದಕ್ಕೆ ಪಾತ್ರವಾಗುವ ಅವಕಾಶ ತಪ್ಪಿಹೋಗುತ್ತದೆ.

            ಗಾಳಿಗೆ ತೂರಿದೊಡನೆ ಕಾಳು ಜಳ್ಳಿನಿಂದ ಬೇರ್ಪಟ್ಟು ಹಸನಾಗುತ್ತದೆ, ಬಳಕೆಗೆ ಪೂರಕವಾಗುತ್ತದೆ, ಆರೋಗ್ಯವರ್ಧನೆಗೆ ಕಾರಣವಾಗುತ್ತದೆ. ಇಂತಹ ವಿಚಾರಗಳಲ್ಲಿ ಪರಿಸ್ಥಿತಿ, ಸಮಯ, ಸಂದರ್ಭಗಳ ಪರಿಜ್ಞಾನ ಇರಲೇಬೇಕು. ಹಾಗೆಯೇ ಶಿವಶರಣರು ಆಗಮಿಸಿದಾಗ ಅವರನ್ನು ಗೌರವಿಸುವ ಕೆಲಸ ಧಾನ್ಯವನ್ನು ಗಾಳಿಗೆ ತೂರಿ ಕಾಳನ್ನು ಹಸನುಗೊಳಿಸಿದಂತೆ. ಶಿವಶರಣರಿಗೆ ನೀಡುವ ಗೌರವ, ದಾಸೋಹಗಳು ನಮ್ಮನ್ನು ನಾವು ಹಸನುಗೊಳಿಸಿದಂತೆ. ಧಾನ್ಯ ಹಸನುಗೊಂಡ ಮೇಲೆ ಪೂರಕವಾಗುವಂತೆ, ಜನಸಾಮಾನ್ಯನ ಬದುಕು ಶಿವಶರಣರನ್ನು ಗೌರವಿಸಿದ ಮೇಲೆ ಪೂರಕವಾಗುತ್ತದೆ, ಸಾರ್ಥಕವಾಗುತ್ತದೆ ಎಂಬುದು ಅಂಬಿಗರ ಚೌಡಯ್ಯನ ನಿಲುವು.

 

ಹಿತ್ತಿಲಸೊಪ್ಪಿಂಗೆ ನೀರ ಹೊಯಿದು

ಮತ್ತೆ ಪುನರಪಿಯಾಗಿ ಕೊಯಿವವನಂತೆ

ಭಕ್ತರಿಗೆ ಬೋಧೆಯ ಹೇಳಿ ಚಿತ್ತವೃತ್ತಿಯನರಿದು

ಬೇಡುವಂಗೆ ಇನ್ನೆತ್ತಣ್ಣ ಮುಕ್ತಿಯೆಂದನಂಬಿಗ ಚೌಡಯ್ಯ     ೩

            ಅಂಬಿಗರ ಚೌಡಯ್ಯ ಈ ವಚನದಲ್ಲಿ  ವ್ಯಕ್ತಿಯೊಬ್ಬ ಅನ್ಯರಿಗೆ ಬೋಧೆಯನ್ನು ಮಾಡಿ ಅನಂತರ ತನ್ನ ಬೋಧೆಗೆ ವಿರುದ್ಧವಾಗಿ ನಡೆದುಕೊಳ್ಳುವುದನ್ನು ದೃಷ್ಟಾಂತವೊಂದರ ಮೂಲಕ ವಿವರಿಸಿದ್ದಾನೆ. ವ್ಯಕ್ತಿಯೊಬ್ಬ ತನ್ನ ಹಿತ್ತಲಲ್ಲಿ ಸೊಪ್ಪುತರಕಾರಿಗಳನ್ನು ನೆಟ್ಟು, ಅದಕ್ಕೆ ನೀರು ಗೊಬ್ಬರ ಹಾಕಿ ಬೆಳೆಸಿ ಆಗಾಗ ಅದನ್ನು ಕೊಯ್ಯುತ್ತ ತನ್ನಿಷ್ಟದಂತೆ ಬಳಸಿಕೊಳ್ಳುವ ಮನೋಭಾವದಂತೆಯೇ ಒಬ್ಬ ಭಕ್ತ ಇತರ ಭಕ್ತರಿಗೆ ಸತ್ಯ ನ್ಯಾಯ ನೀತಿಗಳನ್ನು ಆಗಾಗ ಬೋಧಿಸುತ್ತ ಮತ್ತೆ ಅವರಿಂದಲೇ ತನಗೆ ಬೇಕಾದುದನ್ನು ಬೇಡುವುದಾದರೆ ಅಂತಹವರಿಗೆ ಹೇಗೆ ಮುಕ್ತಿ ದೊರಕೀತು ಎಂದು ಪ್ರಶ್ನಿಸಿದ್ದಾನೆ.

            ಒಬ್ಬ ವ್ಯಕ್ತಿ ಭಕ್ತನೆನಿಸಿಕೊಳ್ಳಬೇಕಾದರೆ  ಮೊದಲು ತನ್ನಲ್ಲಿರುವ ನ್ಯೂನತೆಗಳನ್ನು, ಸ್ವಾರ್ಥವನ್ನು ಕಳೆದುಕೊಂಡು ಪರಿಶುದ್ಧನಾಗಬೇಕು. ಆಗ ಮಾತ್ರ ಅವನಿಗೆ ಅನ್ಯರಿಗೆ ಬುದ್ಧಿಹೇಳುವ, ತಿದ್ದುವ, ಮಾರ್ಗದರ್ಶನ ಮಾಡುವ ಅರ್ಹತೆ, ಯೋಗ್ಯತೆ ಪ್ರಾಪ್ತವಾಗುತ್ತದೆ. ಹಾಗೆ ಅವೆಲ್ಲವನ್ನೂ ಆರ್ಜಿಸಿಕೊಂಡ ಮೇಲೆ ಅನ್ಯರಿಗೆ ಬೋಧಿಸುತ್ತಿದ್ದಂತೆಯೇ ಆತ ತನ್ನ ಸ್ಥಾನಮಾನಗಳನ್ನು ಎತ್ತರಿಸಿಕೊಳ್ಳಬೇಕೇ ವಿನಾ ತನ್ನಿಂದ ಉಪದೇಶ ಪಡೆದವರಿಂದಲೇ ಬೇಡುವ ಸ್ಥಿತಿಗೆ ಕುಸಿಯಬಾರದು. ಹಾಗೆ ಕುಸಿದನೆಂದಾದರೆ ಆತ ಅನ್ಯರಿಗೆ ಬೋಧಿಸುವುದಕ್ಕೆ ಅರ್ಹನಲ್ಲ, ಆತನಿಗೆ ಅಂತಹ ಯೋಗ್ಯತೆಯೂ ಇರುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.  ಬಹುಶಃ ಅಂಬಿಗರ ಚೌಡಯ್ಯನ ಕಾಲದಲ್ಲಿ ಏನೂ ಅರಿಯದವರು ಅನ್ಯರಿಗೆ ಬೋಧಿಸುತ್ತ ಮತ್ತೆ ಅವರಿಂದಲೇ ತಮಗೆ ಬೇಕಾದುದನ್ನು ಬೇಡುವ ಹೀನಮನೋಭಾವವನ್ನು ಹೊಂದಿದ್ದರೆಂದು ತೋರುತ್ತದೆ. ಇಂತಹವರು ಸಮಾಜದ ಮನ್ನಣೆಗೂ ಪಾತ್ರವಾಗಲಾರರು ಮಾತ್ರವಲ್ಲ ಇಂತಹವರಿಗೆ ಮುಕ್ತಿಯೂ ದೊರೆಯಲಾರದು. ಜೊತೆಗೆ ಇಂತಹವರು ಸಮಾಜದ ಅವನತಿಗೆ ಕಾರಣರಾಗುತ್ತಾರೆ ಎಂಬುದನ್ನು ಚೌಡ್ಯಯ್ಯ ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾನೆ.

 

ಎಲುಬು ಮಾಂಸವನು ತುಂಬಿಟ್ಟುಕೊಂಡು

ನನ್ನ ಕುಲ ಹೆಚ್ಚು, ನಿನ್ನ ಕುಲ ಕಡಿಮೆ ಎಂದು

ಹೊಡೆದಾಡುವಂತಹ ಅಣ್ಣಗಳನ್ನು ಹಿಡಿತಂದು

ಮೂಗನೆ ಸವರಿ ಮೆಣಸಿನ ಹಿಟ್ಟು ತುಪ್ಪವ ತುಂಬಿ

ನಮ್ಮ ಪಡಿಹಾರಿ ಉತ್ತಣ್ಣನ ಎಡದ ಪಾದುಕೆಯಿಂದ

ಪಢಪಢನೆ ಹೊಡೆ ಎಂದಾತ

ನಮ್ಮ ಅಂಬಿಗರ ಚೌಡಯ್ಯ ನಿಜಶರಣನು     ೪

            ಅಂಬಿಗರ ಚೌಡಯ್ಯ ಈ ವಚನದಲ್ಲಿ ಮನುಷ್ಯರೊಳಗಿನ ವರ್ಗಭೇದ, ಜಾತಿಭೇದ, ಕುಲಭೇದಗಳನ್ನು ಪುರಸ್ಕರಿಸುವವರನ್ನು, ಸಮರ್ಥಿಸುವವರನ್ನು  ಎಂತಹ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂಬುದನ್ನು ವಿವರಿಸಿದ್ದಾನೆ. ಪ್ರತಿಯೊಬ್ಬನ ದೇಹವೂ ಎಲುಬು ಮಾಂಸಗಳಿಂದಲೇ ತುಂಬಿಕೊಂಡಿದೆ. ಹೀಗಿದ್ದರೂ ಕೆಲವರು ತನ್ನ ಕುಲ ಹೆಚ್ಚು, ನಿನ್ನ ಕುಲ ಕಡಿಮೆ, ನಾನು ಉಚ್ಚ ನೀನು ನೀಚ ಎಂದೆಲ್ಲ ಭೇದಭಾವವನ್ನು ತೋರುತ್ತಾ, ವ್ಯಕ್ತಿ ವ್ಯಕ್ತಿಗಳ ನಡುವಿನ ದ್ವೇಷಕ್ಕೆ, ಹೊಡೆದಾಟ ಬಡಿದಾಟಗಳಿಗೆ, ಆ ಮೂಲಕ ಸಮಾಜದ ಅಸಮಾನತೆಗೆ ಕಾರಣರಾಗುತ್ತಿದ್ದಾರೆ. ಇಂತಹವರನ್ನು ಹಿಡಿದುತಂದು ಅವರ ಮೂಗನ್ನು ಕೊಯ್ದು ಮೆಣಸಿಹುಡಿ ಹಾಗೂ ತುಪ್ಪವನ್ನು ಮೂಗಿಗೆ ತುಂಬಿ ಪಡಿಹಾರಿ ಉತ್ತಣ್ಣನ ಎಡದ ಪಾದುಕೆಯಿಂದ ಪಢಪಢನೆ ಹೊಡೆದು ಶಿಕ್ಷಿಸಬೇಕು ಎನ್ನುತ್ತಾನೆ ಅಂಬಿಗರ ಚೌಡಯ್ಯ.  ಸಮಾಜದ ಅಸಮತೋಲನಕ್ಕೆ, ವ್ಯಕ್ತಿ ವ್ಯಕ್ತಿಗಳೊಳಗಿನ ದ್ವೇಷಕ್ಕೆ ತರತಮ ಭಾವನೆಗಳಿಗೆ ಕಾರಣರಾಗುವವರನ್ನು ಇದೇ ರೀತಿಯಲ್ಲಿ ಶಿಕ್ಷಿಸಬೇಕೆಂಬುದು ಆತನ ದೃಢವಾದ ಅಭಿಪ್ರಾಯ.

             ಮನುಷ್ಯರೊಳಗೆ ಕುಲಭೇದ, ಜಾತಿಭೇದ, ವರ್ಗಭೇದಗಳು ಅನಾದಿಕಾಲದಿಂದಲೂ ಮುಂದುವರಿದುಕೊಂಡು ಬಂದಿವೆ. ಮನುಷ್ಯ ಮನುಷ್ಯರೊಳಗೆ ದ್ವೇಷ ಹುಟ್ಟಿಕೊಂಡು ಅನರ್ಥಗಳಿಗೆ ಕಾರಣವಾಗುತ್ತಿವೆ. ಇವುಗಳಿಂದ ಪ್ರತಿಯೊಂದು ಹಂತದಲ್ಲಿಯೂ ಸಮಾಜವ್ಯವಸ್ಥೆ ಕುಸಿಯುತ್ತಲೇ ಬಂದಿದೆ. ಜಾತಿ ಜಾತಿಗಳೊಳಗೆ, ಕುಲ ಕುಲಗಳೊಳಗೆ, ವರ್ಗ ವರ್ಗಗಳೊಳಗೆ ತರತಮವನ್ನು ನಿರ್ಧರಿಸುವ ಮಾನದಂಡ ಯಾವುದು? ಎಲ್ಲ ಮನುಷ್ಯರ ದೇಹಗಳೂ ಎಲುಬು, ಮಾಂಸಖಂಡಗಳಿಂದಲೇ ರಚನೆಯಾಗಿವೆ. ಬಣ್ಣದಲ್ಲಿ ವ್ಯತ್ಯಾಸವಿದ್ದರೂ ದೇಹರಚನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹೀಗಿರುವಾಗ ಒಬ್ಬ ವ್ಯಕ್ತಿ ತನ್ನ ಜಾತಿ, ಕುಲ, ವರ್ಗಗಳೇ ಶ್ರೇಷ್ಠ, ಇನ್ನೊಬ್ಬನದು ಕನಿಷ್ಠ ಎಂದು ಯಾವ ಆಧಾರದ ಮೇಲೆ ವರ್ಗೀಕರಿಸಿಕೊಳ್ಳಲು ಸಾಧ್ಯ? ಹೀಗೆ ವರ್ಗೀಕರಿಸುತ್ತಾ, ಅನ್ಯರನ್ನು ಕೀಳೆಂದು ಭಾವಿಸುತ್ತಾ ಹೋದರೆ ವ್ಯಕ್ತಿ ವ್ಯಕ್ತಿಗಳೊಳಗೆ, ಜಾತಿ ಜಾತಿಗಳೊಳಗೆ, ವರ್ಗ ವರ್ಗಗಳೊಳಗೆ ದ್ವೇಷ ಹುಟ್ಟಿಕೊಳ್ಳುತ್ತದೆ. ಇದು ಪರಸ್ಪರ ಹೊಡೆದಾಟ, ಬಡಿದಾಟಗಳಿಗೆ ಎಡೆಮಾಡಿಕೊಟ್ಟು ಸಾವುನೋವಿಗೆ ಕಾರಣವಾಗುತ್ತದೆ. ಹೀಗೆ ವ್ಯಕ್ತಿ, ಜಾತಿ, ಕುಲಗಳೊಳಗೆ,  ದ್ವೇಷ ತಂದಿಕ್ಕುವ, ಸಮಾಜವ್ಯವಸ್ಥೆಯನ್ನು ಕೆಡಿಸುವ, ಸಾವು-ನೋವುಗಳಿಗೆ ಕಾರಣವಾಗುವ ವ್ಯಕ್ತಿಗಳ ಮೂಗನ್ನು ಕೊಯ್ದು ಮೆಣಸಿನ ಹುಡಿ ಹಾಗೂ ತುಪ್ಪವನ್ನು ಬೆರೆಸಿ ಮೂಗಿನೊಳಗೆ ತುಂಬಿ, ಜೊತೆಗೆ ಸಮಾನತೆಯನ್ನು ಸಾರಿದ ಪಡಿಹಾರಿ ಉತ್ತಣ್ಣನ ಎಡದ ಪಾದುಕೆಯಿಂದ ಹೊಡೆದು ಅತ್ಯಂತ ಕ್ರೂರವಾದ ಹಾಗೂ ಅವಮಾನಕರವಾದ ಶಿಕ್ಷೆಯನ್ನು ನೀಡಬೇಕೆನ್ನುತ್ತಾನೆ.

 

ತಟಾಕ ಒಡೆದಡೆ ಕಟ್ಟುವಡೆವುದಲ್ಲದೆ

ಅಂಬುಧಿ ತುಂಬಿ ಮೇರೆದಪ್ಪಿದಲ್ಲಿ ಕಟ್ಟಿಂಗೆ ಹಿಂಗಿ ನಿಂದುದುಂಟೆ?

ಅರಿಯದವಂಗೆ ಅರಿಕೆಯ ಹೇಳಿದಡೆ ಅರಿವನಲ್ಲದೆ

ಅರಿದು ಮರೆದವಂಗೆ ಬೇರೊಂದೆಡೆಯ ಹೇಳಿಹೆನೆಂದಡೆ

ಕಡೆ ನಡು ಮೊದಲಿಲ್ಲಾ

ಅರಿವೆಂಬೆನೆ ಕಾಣಬಾರದೆ ಬಯಲ

ಒಂದನಹುದು ಒಂದನಲ್ಲಾಯೆಂದು ಬಿಡಬಾರದು

ಬಿಟ್ಟೊಡೆ ಸಮಯವಿಲ್ಲ ಜಿಡ್ಡ ಹಿಡಿದಡೆ ಜ್ಞಾನವಿಲ್ಲ

ಉಭಯರ ಗುಟ್ಟಿನಲ್ಲಿ ತೊಳಲುತ್ತಿದ್ದೇನೆ

ಎಂದನಂಬಿಗ ಚೌಡಯ್ಯ     ೫

            ಅಂಬಿಗರ ಚೌಡಯ್ಯ ಈ ವಚನದಲ್ಲಿ ಅರಿಯದವನಿಗೆ ಅರಿವನ್ನು ಹೇಳುವುದಕ್ಕೂ ಅರಿತವನಿಗೆ ಅರಿವನ್ನು ಹೇಳುವುದಕ್ಕೂ ಇರುವ ವ್ಯತ್ಯಾಸವನ್ನು ದೃಷ್ಟಾಂತವೊಂದರ ಮೂಲಕ ಹೇಳಿದ್ದಾನೆ. ಕೆರೆಯೊಂದು ತುಂಬಿಕೊಂಡರೆ ಅದರ ಕಟ್ಟೆ(ಬದು ಅಥವಾ ತಡೆಗೋಡೆ) ನೀರನ್ನು ತಡೆಹಿಡಿಯಬಹುದು. ಆದರೆ ಸಮುದ್ರವೇ ಮೇರೆ ಮೀರಿದರೆ ಅದು ತೀರಕ್ಕೆ ಹೆದರಿ ನಿಲ್ಲಲಾರದು. ಹಾಗೆಯೇ ಏನೂ ಅರಿಯದವನಿಗೆ ತಿಳಿವನ್ನು ಹೇಳಿದರೆ ಆತ ಅದೆಲ್ಲವನ್ನು ತನ್ನ ಜ್ಞಾನದ ಕೆರೆಯೊಳಗೆ ಸೇರಿಸಿಕೊಳ್ಳುತ್ತಾನೆ. ಅದರಿಂದ ಆತನ ಜ್ಞಾನದ ಕೆರೆ ತುಂಬಿಕೊಳ್ಳುತ್ತದೆ. ಆದರೆ ಈಗಾಗಲೇ ಸಾಕಷ್ಟು ಜ್ಞಾನವನ್ನು ಪಡೆದವನಿಗೆ, ಅರಿವಿನಿಂದ ಮೆರೆಯುತ್ತಿದ್ದವನಿಗೆ ತಿಳಿವನ್ನು ಹೇಳಹೊರಟರೆ ಅದು ಆತನಲ್ಲಿ ತುಂಬಿಕೊಂಡಿರದೆ ಹೊರಹೊಮ್ಮುತ್ತದೆ. ಮೇರೆದಪ್ಪಿದ ಸಮುದ್ರದ ಹಾಗೆ, ಅದಕ್ಕೆ ಯಾವ ತಡೆಯೂ ಇರಲಾರದು. ಜೊತೆಗೆ ಯಾವ ತಿಳಿವಳಿಕೆಯನ್ನೂ ಸಾಧಿಸಿಕೊಳ್ಳಲು ಆಸ್ಥೆಯಿರದವರಿಗೆ ತಿಳಿವಳಿಕೆಯನ್ನು ಹೇಳುವುದರಿಂದ ಯಾವ ಒಳಿತನ್ನೂ ಸಾಧಿಸಲಾಗದು.  ಹೀಗೆ ಅರಿತವನಿಗೆ ತಿಳಿವಳಿಕೆಯನ್ನು ಹೇಳುವುದು ಆದಿ, ಮಧ್ಯ ಹಾಗೂ ಅಂತ್ಯವಿಲ್ಲದ, ಅರ್ಥವಿಲ್ಲದ ಕಾರ್ಯ. ಅದು ವ್ಯರ್ಥ. ತಿಳಿಹೇಳುವವರೂ ಜ್ಞಾನಾರ್ಜನೆಯ ಹಸಿವನ್ನು ಉಳ್ಳವರಿಗೆ ಮಾತ್ರ ಹೇಳಬೇಕೇ ವಿನಾ ಸಿಕ್ಕಸಿಕ್ಕವರಿಗೆ ಹೇಳುವ ಪ್ರಯತ್ನಮಾಡುವುದು ಮೂರ್ಖತನ ಎನಿಸಿಕೊಳ್ಳುತ್ತದೆ.

            ಅರಿವು ಎಂಬುದು ಬಯಲಿಗೆ ಸಮಾನ. ಅದರ ಆರ್ಜನೆಗೆ ಮಿತಿಯೆಂಬುದೇ ಇಲ್ಲ. ಮೊಗೆದಷ್ಟೂ ಅರಿವು ಅಲ್ಲಿದೆ, ಪಡೆದಷ್ಟೂ ನಮ್ಮಲ್ಲಿ ತುಂಬಿಕೊಳ್ಳಲೂ ಸಾಧ್ಯ. ಅರಿವೆಂಬುದು ಸಮುದ್ರದಂತೆ. ಅದಕ್ಕೆ ಆದಿ, ಮಧ್ಯ, ಅಂತ್ಯಗಳಿಲ್ಲ. ಮೊಗೆದಷ್ಟೂ ನೀರು ಅಲ್ಲಿದೆ. ನಮಗೆಷ್ಟು ಸಾಧ್ಯವೋ ಅಷ್ಟನ್ನು ಮೊಗೆದುಕೊಳ್ಳುವುದರಿಂದ ನಮ್ಮ ಜ್ಞಾನದ, ತಿಳಿವಳಿಕೆಯ, ಅರಿವಿನ ಪರಿಧಿಯನ್ನು ಹೆಚ್ಚಿಸಿಕೊಂಡಂತೆ.  ಅದನ್ನು ಬಿಟ್ಟು ನಾನು ಎಲ್ಲವನ್ನೂ ತಿಳಿದಿದ್ದೇನೆ, ತಿಳಿದುಕೊಳ್ಳುವಂತಹುದು ಏನೂ ಇಲ್ಲ ಎಂಬ ದುರಹಂಕಾರ ಸಲ್ಲದು. ಅರಿವು ನಮ್ಮಲ್ಲಿಗೆ ಪ್ರವಹಿಸಿದಾಗ ಅದನ್ನು ಮನಸಾ ಸ್ವೀಕರಿಸಬೇಕಲ್ಲದೆ, ಅದನ್ನು ಬೇಡವೆಂದೋ ಕ್ಷುಲ್ಲಕವೆಂದೋ ನಾಳೆ ನೋಡೋಣವೆಂದೋ ಅಸಡ್ಡೆಮಾಡಿದರೆ ನಮಗೆ ಯಾವ ಜ್ಞಾನವೂ ಪ್ರಾಪ್ತವಾಗಲಾರದು. ಹೀಗೆ ಸಮಾಜದಲ್ಲಿ ಒಂದೆಡೆ ಅರಿವನ್ನು ಬಯಸಿ ಬರುವವರು, ಇನ್ನೊಂದೆಡೆ ನಾವು ಎಲ್ಲವನ್ನೂ ಅರಿತಿದ್ದೇವೆ ಎಂದು ದುರಹಂಕಾರ ಪಡುವವರು –ಈ ಎರಡು ಬಗೆಯ ಜನರ ನಡುವೆ ತೊಳಲಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಅಂಬಿಗರ ಚೌಡಯ್ಯ ವಿಡಂಬಿಸುತ್ತಾನೆ.

 

ಕಟ್ಟಿದ ಲಿಂಗವ ಬಿಟ್ಟು

ಅಡಿ ಮೇಲಾಗಿ ಬೀಳುವ

ಲೊಟ್ಟೆ ಮೂಳರ ಕಂಡರೆ

ಗಟ್ಟಿ ಪಾದರಕ್ಷೆಯ ತೆಗೆದುಕೊಂಡು

ಟೊಕಟೊಕನೆ ಹೊಡೆಯೆಂದ ನಮ್ಮ ಅಂಬಿಗರ ಚೌಡಯ್ಯ     ೬

            ಅಂಬಿಗರ ಚೌಡಯ್ಯ, ಶಿವಶರಣರಲ್ಲಿನ ಇಷ್ಟಲಿಂಗಧಾರಣೆಯನ್ನು ಗೌರವಿಸದೆ  ಆಲಯಗಳಲ್ಲಿನ ಲಿಂಗವನ್ನು ಗೌರವಿಸುವ, ಅದಕ್ಕೆ ನಾನಾ ವಿಧದ ಪೂಜೆ, ಪುರಸ್ಕಾರಗಳನ್ನು ಸಲ್ಲಿಸುವ ಡಾಂಬಿಕರ ವರ್ತನೆಗಳನ್ನು ಈ ವಚನದಲ್ಲಿ ವಿಡಂಬಿಸಿದ್ದಾನೆ. ಶರಣರು ಇಷ್ಟಲಿಂಗಧಾರಿಗಳಾದ ಮೇಲೆ ಧರಿಸಿದ ಲಿಂಗವನ್ನೇ ಶಿವನೆಂದು ಪೂಜಿಸಿ ಗೌರವಿಸಬೇದಾದುದು ಮೊದಲ ಕರ್ತವ್ಯ. ವ್ಯಕ್ತಿಯೊಬ್ಬ ತನ್ನ ಆಚಾರವಿಚಾರಗಳನ್ನು, ನಡೆನುಡಿಗಳನ್ನು, ಆಗುಹೋಗುಗಳನ್ನು ಸುಧಾರಿಸಿಕೊಂಡು ತನ್ನನ್ನು ತಾನು ಶಿವನೆಡೆಗೆ ಕೊಂಡೊಯ್ಯಬೇಕೆಂಬುದೇ ಅದರ ಉದ್ದೇಶ. ಆದರೆ, ಲಿಂಗಧಾರಿಯಾಗಿದ್ದರೂ ಅದನ್ನು ನಿರಾಕರಿಸಿ, ನಿರ್ಲಕ್ಷಿಸಿ ಹೊರಗೆ ಸ್ಥಾವರರೂಪದಲ್ಲಿರುವ ಆಲಯದಲ್ಲಿನ ಲಿಂಗವೇ ಶ್ರೇಷ್ಠವೆಂದು ನಾನಾ ವಿಧಗಳಿಂದ ಪೂಜಿಸಿ ಗೌರವಿಸುವುದು, ಅದೇ ಶ್ರೇಷ್ಠವೆಂದು ಪರಿಭಾವಿಸುವುದು ಶರಣರೆನಿಸಿಕೊಂಡವರ ಬೌದ್ಧಿಕ ದಾರಿದ್ರ್ಯವನ್ನು ಸೂಚಿಸುತ್ತದೆ ಎಂಬುದು ಅಂಬಿಗರ ಚೌಡಯ್ಯನ ಅಭಿಪ್ರಾಯ.

            ಇಷ್ಟಲಿಂಗಧಾರಿಗಳಾದ ಮೇಲೆ, ಗುರು ಹಿರಿಯರ ಮಾತುಗಳನ್ನು ಕೇಳುತ್ತ, ಅವರು ಹಾಕಿಕೊಟ್ಟ ಅರಿವಿನ ದಾರಿಯಲ್ಲಿ ನಡೆಯುತ್ತ, ತಿಳಿದವರಿಂದ ಸಾಧ್ಯವಾದಷ್ಟು ಅರಿವನ್ನು ಪಡೆಯಲು ಪ್ರಯತ್ನಿಸುತ್ತ, ತಾವು ಅರಿತಿದ್ದನ್ನು ಅರಿಯದವರಿಗೆ ತಿಳಿಸಿಕೊಡುತ್ತ ಸಮಾಜದ ಹಿತಚಿಂತನೆಗೆ ತೊಡಗಬೇಕಲ್ಲದೆ, ಇದ್ದುದರಲ್ಲಿ ತೃಪ್ತಿಯನ್ನು ಕಾಡದೆ, ಹೆಜ್ಜೆಗೊಂದು ನಿಲುವು, ದಿನಕ್ಕೊಂದು ಬಗೆಯ ಪೂಜೆ ಪುರಸ್ಕಾರಗಳನ್ನು ನಡೆಸುವ, ಯಾವುದರಲ್ಲಿಯೂ  ತೃಪ್ತಿಯನ್ನೇ ಕಾಣದ ದಡ್ಡಶಿಖಾಮಣಿಗಳಿಗೆ  ಗಟ್ಟಿಯಾದ ಪಾದರಕ್ಷೆಯನ್ನು ಹಿಡಿದು ಹೊಡೆಯುವ ಶಿಕ್ಷೆಯನ್ನು ಕೊಡಬೇಕೆಂಬುದು ಚೌಡಯ್ಯನ ನಿಲುವು. ಬಹುಶಃ ಆತನ ಕಾಲದಲ್ಲಿ ಇಷ್ಟಲಿಂಗಧಾರಿಗಳಾಗಿದ್ದರೂ ಅದಕ್ಕೆ ಪೂರಕವಾಗಿ ನಡೆದುಕೊಳ್ಳದೆ, ಗುರುಹಿರಿಯರಿಂದ ಜ್ಞಾನವನ್ನು ಸಂಪಾದಿಸುವುದಕ್ಕೆ ಪ್ರಯತ್ನಿಸದೆ, ತಾನೇ ಶ್ರೇಷ್ಠನೆಂದೋ, ತಾನೇ ಜ್ಞಾನಿಯೆಂದೋ ಮೆರೆದಾಡುವ, ನಿಜವಾದ ಜ್ಞಾನಿಗಳನ್ನು ನಿರ್ಲಕ್ಷಿಸುವ, ಗುರುಹಿರಿಯರನ್ನು ಕಡೆಗಣಿಸುವ ಸ್ವಯಂಘೋಷಿತ ಜ್ಜಾನಿಗಳ ಸಂಖ್ಯೆ ಬೆಳೆಯುತ್ತಿತ್ತೆಂದು ತೋರುತ್ತದೆ. ಹಾಗಾಗಿಯೇ ಅಂಬಿಗರ ಚೌಡಯ್ಯ ಈ ವಚನದಲ್ಲಿ ಅಂತಹ ಬೂಟಾಟಿಕೆಯವರನ್ನು, ಡಾಂಬಿಕರನ್ನು  ತೀವ್ರವಾಗಿ ಖಂಡಿಸಿದ್ದಾನೆ.

***

Leave a Reply

Your email address will not be published. Required fields are marked *