ಸಾಹಿತ್ಯಾನುಸಂಧಾನ

heading1

ಪತ್ನಿ-ಪುತ್ರ ವಿಕ್ರಯ-ರಾಘವಾಂಕ-ಭಾಗ-೨

(ಮಂಗಳೂರು ವಿಶ್ವವಿದ್ಯಾನಿಲದ  ಬಿ.ಕಾಂ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ (ಭಾಗ-೨)

 

ಗಡಿಗೆಟ್ಟ ಲಿಂಗಂಗಳೊಪ್ಪಕ್ಕೆ ಭೋಗಂಗ

ಳಡಕಕ್ಕೆ ಮಂಗಳದ ಮಸಕಕ್ಕೆ ರಚನೆಗಳ

ಸಡಗರಕೆ ಬೆಱಗಾಗುತೆಲ್ಲಾ ನಿರೋಧಮಂ ಮಱೆದು ನೋಡುತ್ತರಸನು

ನಡೆಯುತಿರಲಿದಿರೆದ್ದು ಮಾರಿಯಂದದಿ ಬಂದು

ಕೊಡು ಹೊನ್ನನಿನ್ನು ತಳುವಿದಡೆನ್ನ ಪತಿಯೆನಗೆ

ಕಡುಮುಳಿವನೆಂದು ಜಱೆಯುತ್ತ ನಕ್ಷತ್ರಕಂ ತುಡುಕಿ ಸೆಱಗಂ ಪಿಡಿದನು  ೧೨

ಪದ್ಯದ ಅನ್ವಯಕ್ರಮ:

ಗಡಿಗೆಟ್ಟ ಲಿಂಗಂಗಳ ಒಪ್ಪಕ್ಕೆ, ಭೋಗಂಗಳ ಅಡಕಕ್ಕೆ, ಮಂಗಳದ ಮಸಕಕ್ಕೆ, ರಚನೆಗಳ ಸಡಗರಕೆ, ಬೆಱಗಾಗುತ ಎಲ್ಲಾ ನಿರೋಧಮಂ ಮಱೆದು ನೋಡುತ್ತ ಅರಸನು ನಡೆಯುತಿರಲ್, ಇದಿರೆದ್ದು ಮಾರಿಯಂದದಿ ಬಂದು ಕೊಡು ಹೊನ್ನನ್, ಇನ್ನು ತಳುವಿದಡೆ ಎನ್ನ ಪತಿ ಎನಗೆ ಕಡುಮುಳಿವನ್ ಎಂದು ಜಱೆಯುತ್ತ ನಕ್ಷತ್ರಕಂ ತುಡುಕಿ ಸೆಱಗಂ ಪಿಡಿದನು.

ಪದ-ಅರ್ಥ:

ಗಡಿಗೆಟ್ಟ-ಎಲ್ಲೆಮೀರಿದ;  ಲಿಂಗಂಗಳ ಒಪ್ಪ-ಶಿವಲಿಂಗಗಳ ಚೆಲುವು;  ಭೋಗಂಗಳ-ಹೆಡೆಗಳ;  ಅಡಕಕ್ಕೆ-ಒತ್ತೊತ್ತಾಗಿರುವಿಕೆಗೆ;   ಮಂಗಳ-ಶುಭ;  ಮಸಕ-ಆಧಿಕ್ಯ, ಹೆಚ್ಚಳ;  ರಚನೆ-ವಾಸ್ತು;  ಸಡಗರ-ಸಂಭ್ರಮ;  ನಿರೋಧ-ಅಡ್ಡಿ, ಆತಂಕ;  ಇದಿರೆದ್ದು-ಮುಂದೆ ನಿಂತು, ತಡೆದು ನಿಂತು;  ಮಾರಿಯಂದದಿ-ಮಾರಿಯ ರೀತಿಯಲ್ಲಿ;  ತಳುವಿದಡೆ-ತಡಮಾಡಿದರೆ;  ಎನ್ನ ಪತಿ-ನನ್ನ ಒಡೆಯ(ವಿಶ್ವಾಮಿತ್ರ);  ಕಡುಮುಳಿವನ್-ಅತಿಯಾಗಿ ಸಿಟ್ಟುಗೊಳ್ಳುವನು;  ಜಱೆಯುತ್ತ– ನಿಂದಿಸುತ್ತ, ಧಿಕ್ಕರಿಸುತ್ತ;  ತುಡುಕಿ-ಹಿಡಿದು;  ಸೆರಗಂ-ಉತ್ತರೀಯವನ್ನು;   ಪಿಡಿದನು-ಹಿಡಿದನು.   

ಎಲ್ಲೆಮೀರಿದ ಶಿವಲಿಂಗಗಳ ಚೆಲುವಿಗೆ, ಒತ್ತೊತ್ತಾಗಿರುವ ಹಾವಿನ ಹೆಡೆಗಳ ನಿಬಿಡತೆಗೆ, ನಿರಂತರ ಕೇಳುತ್ತಿರುವ ಶುಭಕರವಾದ ಮಂತ್ರಗಳ ಘೋಷಕ್ಕೆ, ವಾಸ್ತುಶಿಲ್ಪಗಳ ಸಡಗರಕ್ಕೆ ಬೆರಗಾಗುತ್ತ ತನಗಾಗುತ್ತಿರುವ ಎಲ್ಲಾ ನೋವು, ದುಃಖಗಳನ್ನು ಎದುರಾದ ಎಲ್ಲಾ ಅಡ್ಡಿಆತಂಕಗಳನ್ನು ಮರೆತು ಕಾಶಿಕ್ಷೇತ್ರದ ಸೌಂದರ್ಯವನ್ನು ನೋಡುತ್ತ ಸಂಭ್ರಮಿಸುತ್ತಿರಲು, ಒಡನೆಯೇ ಮಾರಿಯ ರೀತಿಯಲ್ಲಿ  ಮುಂದೆಬಂದು ತಡೆದು ನಿಂತುಕೊಂಡು ನನಗೆ ಕೊಡಬೇಕಾದ ಹೊನ್ನನ್ನು ಕೊಟ್ಟುಬಿಡು, ಇನ್ನೂ ತಡಮಾಡಿದರೆ ನನ್ನ ಒಡೆಯನಾದ ವಿಶ್ವಾಮಿತ್ರನು ನನ್ನ ಮೇಲೆ ಅತಿಯಾಗಿ ಕೋಪಿಸಿಕೊಳ್ಳುತ್ತಾನೆ ಎಂದು ನಕ್ಷತ್ರಕನು ಹರಿಶ್ಚಂದ್ರನ ಉತ್ತರೀಯವನ್ನು ಹಿಡಿದುಕೊಂಡನು.

(ತನ್ನ ದೇಶದಿಂದ ಹೊರಟ ಹರಿಶ್ಚಂದ್ರನಿಗೆ ದಾರಿಯುದ್ದಕ್ಕೂ ಕಷ್ಟ, ಸಮಸ್ಯೆ, ಹಿಂಸೆ, ಅಪಮಾನ, ನೋವುಗಳೇ ಉಂಟಾದವು. ಈಗ ಕಾಶಿಕ್ಷೇತ್ರಕ್ಕೆ ಬಂದೊಡನೆ ಅಲ್ಲಿಯ ಸೊಬಗು, ಭಕ್ತರ ಸಂಭ್ರಮ, ಸಡಗರಗಳನ್ನು ಕಂಡಾಗ, ಜೊತೆಗೆ ಕಾಶಿಯ ಶಿವಾಲಯಗಳ ಮೇಲ್ಮೆ, ಚೆಲುವು, ಗಂಗಾನದಿಯ ಹಿರಿಮೆಗರಿಮೆಗಳನ್ನು ಕಂಡಾಗ ಆತನಿಗೆ ಮತ್ತು ಆತನ ಪರಿವಾರಕ್ಕೆ ತಾವು ದಾರಿಯುದ್ದಕ್ಕೂ ಅನುಭವಿಸಿದ ನೋವೆಲ್ಲವೂ ಮರೆತುಹೋಗುವಂತಾಯಿತು. ಒಂದೆಡೆ ಅಸಂಖ್ಯ ಶಿವಲಿಂಗಗಳ ಚೆಲುವಿಗೆ ಮಾರುಹೋಗುತ್ತಿರುವ ಭಕ್ತರ ಸಂಭ್ರಮ, ಶಿವಾಲಯಗಳಲ್ಲಿ ಶಿವಲಿಂಗಕ್ಕೆ ಆಸರೆಯಾಗಿ ಮೆರೆಯುತ್ತಿರುವ ಹಾವಿನ ಹೆಡೆಗಳ ನಿಬಿಡತೆಯ ಚೆಲುವು, ಕಿವಿಗಳಿಗೆ ಮಂಗಲಕರವಾದ ಪುರೋಹಿತ ವರ್ಗದ ವೇದಘೋಷಗಳನ್ನು ಕೇಳಿ ಆನಂದಿಸುತ್ತಿರುವ ಭಕ್ತಜನರ  ಸಂಭ್ರಮ, ಕಾಶಿಯಲ್ಲಿ ನಿಬಿಡವಾಗಿರುವ ಶಿವಾಲಯಗಳ ಚೆಲುವು ಮೊದಲಾದವುಗಳನ್ನು ನೋಡಿ ಭಕ್ತಜನರು ಸಡಗರಪಟ್ಟುಕೊಳ್ಳುತ್ತಿರುವುದನ್ನು ಕಂಡು ಹರಿಶ್ಚಂದ್ರನೂ  ತನ್ನ ಪರಿವಾರ ಸಮೇತ ಭಾಗಿಯಾದನು. ಅವನಿಗೆ ಅದುವರೆಗಿನ ನೋವು, ದುಃಖಗಳೆಲ್ಲವೂ ಮರೆತುಹೋಗುವಂತಾಯಿತು. ಹರಿಶ್ಚಂದ್ರನು ಭಕ್ತರನ್ನು ಬದಿಗೆ ಸರಿಸಿಕೊಳ್ಳುತ್ತ ಮುಂದೆ ಬಂದು ಕಾಶಿವಿಶ್ವನಾಥನನ್ನು ಕಂಡು ಪುಳಕಿತನಾದನು. ಬಹಳ ವರ್ಷಗಳ ಆತನ ಕನಸು ನನಸಾದಂತಾಯಿತು. ಆದರೆ ಹೆಚ್ಚು ಹೊತ್ತು ಸಂಭ್ರಮಿಸಲು ಸಾಧ್ಯವಾಗಲಿಲ್ಲ. ಕೂಡಲೇ ನಕ್ಷತ್ರಿಕನು ಮುಂದೆ ಬಂದು ಹರಿಶ್ಚಂದ್ರನನ್ನು ತಡೆದು, “ಕೊಡಬೇಕಾದ ಹೊನ್ನನ್ನು ಕೊಟ್ಟುಬಿಡು, ಈಗಾಗಲೇ ತಡವಾಗಿದೆ, ಇನ್ನೂ ತಡಮಾಡಿದರೆ ನನ್ನ ಒಡೆಯನಾದ ವಿಶ್ವಾಮಿತ್ರನು ನನ್ನ ಮೇಲೆ ಇನ್ನಷ್ಟು ಕೋಪಿಸಿಕೊಳ್ಳುತ್ತಾನೆ” ಎಂದು ಹರಿಶ್ಚಂದ್ರನನ್ನು ಮುಂದುವರಿಯಲು ಅವಕಾಶ ಕೊಡದೆ ಆತನ ಉತ್ತರೀಯವನ್ನು ಹಿಡಿದುಕೊಂಡನು.)

 

ಕೊಟ್ಟವಧಿಯಂ ನೆನೆದು ನೋಡಿ ಹವ್ವನೆ ಹಾಱಿ

ಮುಟ್ಟಿ ಬಂದುದು ದಿನಂ ಕೈಕೊಂಡ ತೆಱದವಂ

ಕಟ್ಟುಗ್ರನಭ್ಯಾಸದವರಿಲ್ಲ ಚಾಚಲಡಪಿಲ್ಲ ತಾನಭಿಮಾನವ

ಬಿಟ್ಟು ತಿರಿವವನಲ್ಲವೋಲೈಸಿ ನೆಱೆ ಲಜ್ಜೆ

ಗೆಟ್ಟು ಬೇಡುವಡಿಲ್ಲಿ ದೊರೆಯಿಲ್ಲ ಕೃಷಿಯಿಂದ

ಹುಟ್ಟಿಸುವೆನೆಂಬಡೆಡೆಯಿಲ್ಲವಿನ್ನೇಗೆಯ್ವೆನೆಂದು ಮಱುಗಿದನರಸನು  ೧೩

ಪದ್ಯದ ಅನ್ವಯಕ್ರಮ:

ಕೊಟ್ಟ ಅವಧಿಯಂ ನೆನೆದು ನೋಡಿ, ಹವ್ವನೆ ಹಾಱಿ, ದಿನಂ ಮುಟ್ಟಿ ಬಂದುದು, ಕೈಕೊಂಡ ತೆಱದವಂ ಕಟು ಉಗ್ರನ್, ಅಭ್ಯಾಸದವರಿಲ್ಲ, ಚಾಚಲ್ ಅಡಪಿಲ್ಲ, ತಾನ್ ಅಭಿಮಾನವ ಬಿಟ್ಟು ತಿರಿವವನಲ್ಲ, ಓಲೈಸಿ ನೆಱೆ ಲಜ್ಜೆಗೆಟ್ಟು ಬೇಡುವಡೆ ದೊರೆಯಿಲ್ಲ, ಕೃಷಿಯಿಂದ ಹುಟ್ಟಿಸುವೆನ್ ಎಂಬಡೆ ಎಡೆಯಿಲ್ಲ, ಇನ್ನು ಏಗಯ್ವೆನ್ ಎಂದು ಅರಸನು ಮಱುಗಿದನ್.

ಪದ-ಅರ್ಥ:

ಕೊಟ್ಟವಧಿ-ನೀಡಿದ ಗಡುವು;  ಹವ್ವನೆ-ಒಮ್ಮೆಗೆ;  ಹಾಱಿ-ಹೌಹಾರಿ;  ಮುಟ್ಟಿಬಂದುದು-ಹತ್ತಿರಬಂದಿದೆ;  ಕೈಕೊಂಡ-ನಿಯುಕ್ತನಾದ;  ತೆಱದವಂ-ಸಾಲವಸೂಲಿಗಾರ;  ಕಟ್ಟುಗ್ರನ್-ಅತಿಯಾದ ಕ್ರೂರಿ;  ಅಭ್ಯಾಸದವರಿಲ್ಲ-ಪರಿಚಯಸ್ಥರು ಇಲ್ಲ;  ಚಾಚಲ್-ಸಹಾಯಪಡೆಯಲು;  ಅಡಪಿಲ್ಲ-ಅವಕಾಶವಿಲ್ಲ, ಆಶ್ರಯವಿಲ್ಲ;  ತಿರಿವವನಲ್ಲ-ಬೇಡುವವನಲ್ಲ;  ಓಲೈಸಿ-ಮೆಚ್ಚಿಸಿ;  ನೆಱೆ-ಅತಿಯಾಗಿ;  ಲಜ್ಜೆಗೆಟ್ಟು-ನಾಚಿಕೆಬಿಟ್ಟು;  ಬೇಡುವಡೆ-ಬೇಡುವುದಾದರೆ;  ದೊರೆಯಿಲ್ಲ-ರಾಜನಿಲ್ಲ;  ಹುಟ್ಟಿಸುವೆನೆಂಬಡೆ– ಸಂಪಾದಿಸೋಣವೆಂದರೆ;  ಎಡೆಯಿಲ್ಲ-ಅವಕಾಶವಿಲ್ಲ;  ಏಗೆಯ್ವೆನ್-ಏನು ಮಾಡಲಿ;  ಮಱುಗಿದನ್-ನೊಂದುಕೊಂಡನು.     

ನಕ್ಷತ್ರಕನು ತಡೆದ ಕೂಡಲೇ ತಾನು ವಿಶ್ವಾಮಿತ್ರನ ಯಾಗದಕ್ಷಿಣೆಯ ಸಂದಾಯಕ್ಕೆ ಕೊಟ್ಟ ಗಡುವನ್ನು ನೆನೆದುಕೊಂಡು ಒಮ್ಮೆಗೆ ಹೌಹಾರಿ, ಗಡುವಿನ ದಿನವು ಹತ್ತಿರ ಬರುತ್ತಿದೆ, ವಸೂಲಿಗಾಗಿ ನಿಯುಕ್ತನಾಗಿರುವ  ನಕ್ಷತ್ರಕ ಅತ್ಯಂತ ಕ್ರೂರಿಯಾಗಿದ್ದಾನೆ. ಕಾಶಿಯಲ್ಲಿ ನನ್ನ ಪರಿಚಯಸ್ಥರು ಮೊದಲೇ ಇಲ್ಲ. ಯಾರದ್ದಾದರೂ ಸಹಾಯ ಪಡೆಯೋಣವೆಂದರೆ ಅವಕಾಶವೂ ಇಲ್ಲ,  ತಾನು ಹಿಂದೆ ರಾಜನಾಗಿದ್ದುದರಿಂದ ಬೇಡುವುದಕ್ಕೂ ಸಾಧ್ಯವಿಲ್ಲ. ಯಾವುದೇ ರಾಜನನ್ನಾದರೂ ಮೆಚ್ಚಿಸಿ ನಾಚಿಕೆಯೆಲ್ಲವನ್ನು ಬಿಟ್ಟುಬಿಟ್ಟು ಬೇಡೋಣವೆಂದರೆ ಇಲ್ಲಿ ಅಂತಹ ರಾಜರೂ ಇಲ್ಲ.  ಕೃಷಿಯಿಂದ ಸಂಪಾದಿಸೋಣವೆಂದರೆ ತನಗೆ ಒಂದಿಷ್ಟು ಭೂಮಿಯೂ ಇಲ್ಲ. ಇನ್ನೇನು ಮಾಡಲಿ ಎಂದು ಹರಿಶ್ಚಂದ್ರನು ನೊಂದುಕೊಂಡನು.

(ತನ್ನ ಇಷ್ಟದೇವನಾದ ಕಾಶಿ ವಿಶ್ವನಾಥನನ್ನು ಕಾಣುವ ತವಕ, ಕಂಡ ಮೇಲೆ ಆತನ ಮೇಲಿನ ಭಕ್ತಿಯಲ್ಲಿಯೇ ತನ್ಮಯನಾಗಿ ಹರಿಶ್ಚಂದ್ರ ತನ್ನ ಮುಂದಿರುವ ಕರ್ತವ್ಯವನ್ನು ಒಂದು ಕ್ಷಣ ಮರೆಯುವಂತಾಯಿತು. ಆತ ಭಕ್ತಿಯಲ್ಲಿಯೇ ಮುಳುಗಿದಾಗ ನಕ್ಷತ್ರಕ ಅಡ್ಡನಿಂತು ಎಚ್ಚರಿಸುತ್ತಾನೆ. ಆತ ಮುಂದುವರಿಯದಂತೆ ಉತ್ತರೀಯವನ್ನು ಹಿಡಿದು ತಡೆಯುತ್ತಾನೆ. ತಕ್ಷಣವೇ ಹರಿಶ್ಚಂದ್ರನಿಗೆ ತಾನು ವಿಶ್ವಾಮಿತ್ರನಿಗೆ ಯಾಗದಕ್ಷಿಣೆಯ ಸಂದಾಯಕ್ಕೆ ನೀಡಿದ ಮಾತು, ಹಾಗೂ ಅದರ ಗಡುವು ನೆನಪಿಗೆ ಬಂತು. ಇನ್ನು ಹೆಚ್ಚು ದಿನಗಳು ಉಳಿದಿಲ್ಲ. ಏನು ಮಾಡಲಿ? ಎಂಬುದನ್ನು ನೆನಪಿಸಿಕೊಂಡು ಹೌಹಾರಿದ. ಅದರ ಮೇಲೆ ದಕ್ಷಿಣೆಯ ಹಣವಸೂಲಿಗೆ ಬಂದವನು ಸಾಮಾನ್ಯನಲ್ಲ. ವಿಶ್ವಾಮಿತ್ರನ ಶಿಷ್ಯನಾದರೂ ಈತ ವಿಶ್ವಾಮಿತ್ರನಿಗಿಂತಲೂ ಕ್ರೂರಿಯೂ ನಿರ್ದಯಿಯೂ ಆಗಿದ್ದಾನೆ. ಅವನಿಂದ ತಪ್ಪಿಸಿಕೊಳ್ಳುವಂತಿಲ್ಲ. ದಾರಿಯುದ್ದಕ್ಕೂ ಎಷ್ಟು ಸಾಧ್ಯವೋ ಅಷ್ಟು ಕಾಡಿ ಪೀಡಿಸಿದ್ದಾನೆ. ಕಾಶಿಯಲ್ಲಿ ಯಾರದ್ದಾದರೂ ಸಹಾಯವನ್ನು ಕೇಳೋಣವೆಂದರೆ ತನಗೆ ಪರಿಚಯಸ್ಥರೂ ಇಲ್ಲ, ಅದಕ್ಕೆ ಅವಕಾಶವೂ ಇಲ್ಲ. ಒಂದು ವೇಳೆ ಇದ್ದರೂ ತಾನು ತನ್ನನ್ನು ಅವರಿಗೆ ಪರಿಚಯಿಸಿಕೊಳ್ಳಲು ಸಾಧ್ಯವೆ? ಇನ್ನು ಕಾಶಿಯಲ್ಲಿ ಬೇಡಿಯಾದರೂ ಸಂಪಾದಿಸಿ ಸಂದಾಯಮಾಡೋಣವೆಂದರೆ ತಾನು ಹಿಂದೆ ರಾಜನಾಗಿದ್ದು, ಬೇಡಿದವರಿಗೆಲ್ಲ ನೀಡುತ್ತಿದ್ದವನು, ಈಗ ತಾನು ಬೇಡುವುದಕ್ಕಾದರೂ ಸಾಧ್ಯವೆ? ಬೇಡಿದರೂ ಸಾಲವನ್ನು ಸಂದಾಯ ಮಾಡುವುದಕ್ಕಾದರೂ ಸಾಧ್ಯವೆ? ಹೋಗಲಿ, ಇಲ್ಲಿ ಯಾರಾದರೂ ರಾಜನನ್ನು ಮೆಚ್ಚಿಸಿ, ಆತನಿಂದ ಸಾಲಪಡೆದು ವಿಶ್ವಾಮಿತ್ರನಿಗೆ ಕೊಟ್ಟು ತನ್ನ ಹೊರೆಯನ್ನು ಇಳಿಸೋಣವೆಂದರೆ ಕಾಶಿಗೆ ಯಾವ ರಾಜನೂ ಇಲ್ಲ. ಕೃಷಿಯನ್ನು ಮಾಡಿ ಸಂಪಾದಿಸೋಣವೆಂದರೆ ಅದು ಅಷ್ಟು ಸುಲಭದಲ್ಲಿ ಸಾಧ್ಯವೂ ಇಲ್ಲ, ಮೇಲಾಗಿ ತನ್ನದೇ ಆದ ಭೂಮಿಯೂ ಇಲ್ಲ. ಇನ್ನೇನು ಮಾಡಲಿ? ವಿಶ್ವಾಮಿತ್ರನ ಕೋಪಕ್ಕೆ ಗುರಿಯಾಗಬೇಕಾಯಿತಲ್ಲ! ನಕ್ಷತ್ರಕನ ಕಾಟಕ್ಕೆ ಈಡಾಗಬೇಕಾಯಿತಲ್ಲ! ಎಂದು ಹರಿಶ್ಚಂದ್ರನು ಮರುಗಿದನು.)

 

ಏಗೆಯ್ವೆ ಚಿಂತಾಗ್ನಿಯುರಿಯ ಹೊಯ್ಲಿಂ ಕರಗಿ

ಹೋಗದಿರನೆಚ್ಚಱಿಸಬೇಕೆಂದು ಸತಿಯವಧಿ

ಮೇಗೆರಡು ಜಾವವಿದಱೊಳಗೆ ತಿದ್ದುವ ಬುದ್ಧಿಯಂ ಕಾಣಬೇಕಲ್ಲದೆ

ಮೂಗುವಟ್ಟಿರ್ದಡೇನಹುದೆಂದಡಿರದೆ ಬಳಿ

ಕೇಗೆಯ್ವೆ ಪೇಳೆನಲು ಸಾಲದೊಳು ಪೋದನಿತು

ಪೋಗಲೆಮ್ಮಿಬ್ಬರಂ ಮಾಱಿ ಬಳಿಕುಳಿದುದು ಕಾಣು ಭೂಭುಜ ಎಂದಳು  ೧೪

ಪದ್ಯದ ಅನ್ವಯಕ್ರಮ:

ಏಗೆಯ್ವೆ ಚಿಂತಾಗ್ನಿ ಉರಿಯ ಹೊಯ್ಲಿಂ ಕರಗಿಹೋಗದಿರನ್ ಎಚ್ಚರಿಸಬೇಕೆಂದು ಅವಧಿ ಮೇಗೆರಡು ಜಾವವು ಇದಱೊಳಗೆ ತಿದ್ದುವ ಬುದ್ಧಿಯಂ ಕಾಣಬೇಕಲ್ಲದೆ ಮೂಗುವಟ್ಟಿ ಇರ್ದಡೆ ಏನಹುದೆಂದು ಸತಿ ಎಂದಡೆ, ಇರದೆ ಬಳಿಕ ಏಗೆಯ್ವೆ ಪೇಳ್ ಎನಲು, ಸಾಲದೊಳು ಪೋದ ಅನಿತು ಪೋಗಲಿ ಎಮ್ಮಿಬ್ಬರಂ ಮಾಱಿ ಬಳಿಕ ಉಳಿದುದು ಕಾಣು ಭೂಭುಜ ಎಂದಳು.

ಪದ-ಅರ್ಥ:

ಏಗೆಯ್ವೆ-ಏನು ಮಾಡಲಿ;  ಚಿಂತಾಗಿಯುರಿ-ಚಿಂತೆಯೆಂಬ ಬೆಂಕಿಯ ಉರಿ;  ಹೊಯ್ಲಿಂ-ಜ್ವಾಲೆಯಿಂದ;  ಮೇಗೆ-ಮೇಲೆ, ಇನ್ನೂ;  ಜಾವ-ದಿನದ ಎಂಟನೆಯ ಒಂದು ಭಾಗದಷ್ಟು ಅವಧಿ(ಏಳೂವರೆ ಘಳಿಗೆ; ಒಂದು ಗಳಿಗೆ=೨೪ ನಿಮಿಷಗಳು); ತಿದ್ದುವ-ಸರಿಪಡಿಸುವ, ಹೊಂದಿಸುವ;   ಬುದ್ಧಿ– ತಿಳಿವಳಿಕೆ;  ಕಾಣಬೇಕಲ್ಲದೆ-ಹುಡುಕಬೇಕಲ್ಲದೆ;  ಮೂಗುವಟ್ಟಿರ್ದಡೆ-ಮೂಕನಾಗಿದ್ದರೆ, ಮೌನವಾಗಿದ್ದರೆ;  ಏನಹುದು-ಏನು ಮಾಡಲು ಸಾಧ್ಯ;  ಇರದೆ-ಸುಮ್ಮನಿರದೆ.

ಗಂಡನಾದ ಹರಿಶ್ಚಂದ್ರನ ಸ್ಥಿತಿಯನ್ನು ನೋಡಿ ಚಂದ್ರಮತಿಯು ಏನು ಮಾಡಲಿ? ಎಚ್ಚರಿಸದಿದ್ದರೆ ತನ್ನ ಗಂಡ ಚಿಂತೆಯೆಂಬ ಬೆಂಕಿಯ ಉರಿಯ ಜ್ವಾಲೆಯಿಂದ  ಕರಗಿಹೋಗದೇ ಇರಲಾರನೆಂದು ಅರ್ಥೈಸಿಕೊಂಡು, “ಸಮಯವೂ ಮೀರುತ್ತಿದೆ. ಇನ್ನು ಎರಡು ಜಾವದಷ್ಟು ಸಮಯ ಮಾತ್ರ ಉಳಿದಿದೆ. ಅಷ್ಟರೊಳಗೆ ಸಾಲ ತೀರಿಸುವಿಕೆಗೆ ಏನಾದರೂ ಪ್ರಯತ್ನವನ್ನು ಮಾಡಬೇಕಲ್ಲದೆ ಹೀಗೆ ಮೂಕನಾಗಿ ಕುಳಿತುಕೊಂಡರೆ ಏನು ತಾನೆ ಮಾಡಲು ಸಾಧ್ಯ?” ಎಂದು ಹೇಳೀದಾಗ, ಹರಿಶ್ಚಂದ್ರನು, “ಮೂಕನಾಗಿರದೆ ಇನ್ನೇನು ಮಾಡಲಿ?” ಎಂದು ಕೇಳಿದನು. ಆಗ ಚಂದ್ರಮತಿಯು, “ಮೊದಲು ನಮ್ಮಿಬ್ಬರನ್ನು ಮಾರಿಬಿಡು, ಸಾಲದಲ್ಲಿ ಸಂದಾಯವಾಗುವಷ್ಟು ಸಂದಾಯವಾಗಲಿ, ಅನಂತರ ಮುಂದಿನದನ್ನು ಯೋಚಿಸು” ಎಂದು ಗಂಡನಲ್ಲಿ ವಿನಂತಿಸಿಕೊಂಡಳು.

(ತನ್ನ ಗಂಡ ರಾಜ್ಯಸಂಪತ್ತೆಲ್ಲವನ್ನೂ ಕಳೆದುಕೊಂಡಿರುವ, ತನ್ನ ಹೆಂಡತಿ ಮಗ ಇನ್ನಿಲ್ಲದ ಪಾಡುಪಡಬೇಕಾಯಿತಲ್ಲ ಎಂದು ಹಲುಬುತ್ತಿರುವ, ಅಗಣಿತವಾದ ಸಂಪತ್ತನ್ನು ವಿಶ್ವಾಮಿತ್ರನಿಗೆ ಸಂದಾಯಮಾಡುವ ಹೊರೆ ತನ್ನ ಹೆಗಲಮೇಲಿದೆಯಲ್ಲ ಎಂಬ ನೋವಿನಿಂದ ಕಂಗಾಲಾಗಿರುವ ವಿಚಾರ ಚಂದ್ರಮತಿಗೆ ಅರ್ಥವಾಗುತ್ತಿದೆ. ಈಗ ಆತನನ್ನು ಹೀಗೆಯೇ ಇರಲು ಬಿಟ್ಟರೆ ಇನ್ನಿಲ್ಲದ ಅಪವಾದವನ್ನು ಹೊತ್ತುಕೊಳ್ಳಬೇಕಾದೀತು. ಜೊತೆಗೆ ಇದೇ ಚಿಂತೆ ಬೆಂಕಿಯಾಗಿ ಆತನನ್ನು ದಹಿಸದೇ ಇರಲಾರದು.  ತನ್ನ ಗಂಡ ಅದುವರೆಗೆ ಗಳಿಸಿದ ಎಲ್ಲಾ ಮೇಲ್ಮೆಯನ್ನು ಕಳೆದುಕೊಳ್ಳಬೇಕಾದೀತು ಎಂದುಕೊಂಡು ಚಂದ್ರಮತಿ ತನ್ನ ಗಂಡನನ್ನು ಎಚ್ಚರಿಸಿ ಕರ್ತವ್ಯದ ಕಡೆಗೆ ಸೆಳೆಯುವುದಕ್ಕೆ ಮುಂದಾಗುತ್ತಾಳೆ.  “ನೀವು ವಿಶ್ವಾಮಿತ್ರನಿಗೆ ಕೊಟ್ಟ ಭಾಷೆಯ ಗಡುವು ಮೀರುತ್ತಿದೆ. ಆತನಿಗೆ ಸಂದಾಯಮಾಡಬೇಕಾದ ಸಾಲದ ಹೊರೆ ನಿಮ್ಮ ತಲೆಯ ಮೇಲಿದೆ. ಕೊಟ್ಟ ಅವಧಿ ಕೇವಲ ಇನ್ನುಎರಡು ಜಾವದಷ್ಟು ಮಾತ್ರ ಬಾಕಿ ಉಳಿದಿದೆ. ಅಷ್ಟರೊಳಗೆ ಸಾಲವನ್ನು ತೀರಿಸುವ ಯಾವುದಾದರೂ ಉಪಾಯವನ್ನು ಕಂಡುಕೊಳ್ಳಲೇಬೇಕು. ಎದುರಾದ ಪರಿಸ್ಥಿತಿಗೆ ಹೀಗೆ ಮೂಕನಾಗಿ ಕುಳಿತುಕೊಳ್ಳುವುದರಿಂದ ಏನು ಪ್ರಯೋಜನ?” ಎಂದು ಚಂದ್ರಮತಿಯು ಪ್ರೀತಿಯಿಂದ ಎಚ್ಚರಿಸಿದಳು. ಆಗ ಹರಿಶ್ಚಂದ್ರನು, “ಸುಮ್ಮನೆ ಕುಳಿತುಕೊಳ್ಳದೆ ಇನ್ನೇನು ಮಾಡಲಿ?” ಎಂದು ತನ್ನ ಅಸಹಾಯಕತೆಯನ್ನು ತೋರುತ್ತಾನೆ. ಆಗ ಚಂದ್ರಮತಿಯು, “ಏನಾದರೂ ಪ್ರಯತ್ನವನ್ನು ಮಾಡಬೇಕು. ಸಂಪಾದನೆಗೆ ಬೇರೆ ದಾರಿಯಿಲ್ಲ, ಯಾರಿಂದಲಾದರೂ ಸಹಾಯ ಪಡೆಯೋಣವೆಂದರೆ, ಯಾರಲ್ಲಾದರೂ ಬೇಡೋಣವೆಂದರೆ ನಮ್ಮಿಂದ ಸಾಧ್ಯವಿಲ್ಲ ಎಂಬುದು ನನಗೂ ತಿಳಿದಿದೆ ಹಾಗಾಗಿ ಈಗ ಉಳಿದಿರುವ ದಾರಿ ಒಂದೇ. ನಮ್ಮಿಬ್ಬರನ್ನು ಮೊದಲು ಮಾರಿಬಿಡು. ಎಷ್ಟು ಹೊನ್ನು ದೊರಕುತ್ತದೋ ಅಷ್ಟು ಸಂದಾಯವಾಗುತ್ತದೆ. ಮಿಕ್ಕುಳಿದುದನ್ನು ಸಂದಾಯಮಾಡುವುದರ ಬಗ್ಗೆ ಯೋಚಿಸು” ಎಂದು ಬೇಡಿಕೊಂಡಳು.)

 

ಕಡುನಿರೋಧಂಗೊಳಿಸಿ ದೇಶದಿಂ ಪರದೇಶ

ಕೊಡವರಿಸಿತಲ್ಲದಾನಿರ್ದು ನಿಮ್ಮಂ ಮಾಱು

ಗೊಡಲಾಪೆನೇ ಎಂದಡೆಲೆ ಮರುಳೆ ಸರ್ವಕೆ ಮೊದಲು ಸತಿಸುತರು ತನ್ನ

ಒಡಲು ಕಡೆ ನೇಮಕ್ಕೆ ಸತ್ಯಕ್ಕೆ ಬಂಧನ

ಕ್ಕೆಡೆಯಲಳುಪಲು ಶಿವ ಮನಂ ನೋಳ್ಪನೈ ಲಜ್ಜೆ

ಗೆಡದೆಮ್ಮ ಮಾಱು ಮತ್ತಾದುದಾಗಲಿ ಎಂದಡವನಿಪನೊಡಂಬಟ್ಟನು  ೧೫

ಪದ್ಯದ ಅನ್ವಯಕ್ರಮ:

ಕಡು ನಿರೋಧಂಗೊಳಿಸಿ ದೇಶದಿಂ ಪರದೇಶಕೆ ಒಡವರಿಸಿತು ಅಲ್ಲದೆ ಆನಿರ್ದು ನಿಮ್ಮಂ ಮಾಱುಗೊಡಲ್ ಆಪೆನೇ? ಎಂದಡೆ ಎಲೆ ಮರುಳೆ ಸರ್ವಕೆ ಮೊದಲು ಸತಿಸುತರು ತನ್ನ ಒಡಲು ಕಡೆ, ನೇಮಕ್ಕೆ ಸತ್ಯಕ್ಕೆ ಬಂಧನಕ್ಕೆ ಎಡೆ, ಅಳುಪಲು ಶಿವ ಮನಂ ನೋಳ್ಪನೈ ಲಜ್ಜೆಗೆಡದೆ ಎಮ್ಮ ಮಾಱು ಮತ್ತೆ ಆದುದಾಗಲಿ ಎಂದಡೆ ಅವನಿಪನ್ ಒಡಂಬಟ್ಟನು.

ಪದ-ಅರ್ಥ:

ಕಡು-ಅತಿ, ಹೆಚ್ಚು;  ನಿರೋಧಂಗೊಳಿಸಿ-ಅಡ್ಡಿಪಡಿಸಿ; ಪರದೇಶಕೊಡವರಿಸು (ಪರದೇಶಕೆ+ ಒಡವರಿಸು)-ಬೇರೆ ದೇಶವನ್ನು ಸೇರು;  ಆನಿರ್ದು-ನಾನಿದ್ದು;  ಮಾಱುಗುಡಲಾಪೆನೇ-ಮಾರಿಕೊಳ್ಳುವುದಕ್ಕೆ ಒಪ್ಪುವೆನೆ;  ಸರ್ವಕೆ-ಎಲ್ಲಕ್ಕೂ;  ಒಡಲು-ದೇಹ;  ಕಡೆ-ಕೊನೆಯದು;  ನೇಮ-ವ್ರತ;  ಎಡೆ-ಅವಕಾಶ;  ಅಳುಪಲ್-ನಿರಾಕರಿಸಿದರೆ, ಹಿಂಜರಿದರೆ;  ಮನಂ ನೋಳ್ಪನೈ-ಮನಸ್ಸನ್ನು ಪರೀಕ್ಷಿಸಿ ನೋಡುತ್ತಾನೆ;  ಲಜ್ಜೆಗೆಡದೆ-ಹೇಸಿಕೊಳ್ಳದೆ, ನಾಚಿಕೊಳ್ಳದೆ;  ಎಮ್ಮ-ನಮ್ಮನ್ನು;  ಮಾಱು-ಮಾರಿಬಿಡು;  ಮತ್ತಾದುದು-ಮುಂದೆ ಆಗುವಂತಹುದು;  ಒಡಂಬಟ್ಟನು-ಒಪ್ಪಿಕೊಂಡನು.

ಅತಿಯಾಗಿ ಅಡ್ಡಿಆತಂಕಗಳನ್ನು ಎದುರಿಸಿ ಬೇರೆ ದೇಶವನ್ನು ಸೇರಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ನಮಗೆ ಒದಗಿತಲ್ಲದೆ, ನಾನು ಬದುಕಿದ್ದೂ ನಿಮ್ಮನ್ನು ಮಾರಿಕೊಳ್ಳುವುದಕ್ಕೆ ಒಪ್ಪುವೆನೆ?  ಅದು ಸಾಧ್ಯವೆ? ಎಂದು ಹರಿಶ್ಚಂದ್ರನು ಹೇಳಿದಾಗ ಚಂದ್ರಮತಿಯು, “ಎಲೆ ಮರುಳೆ, ಎಲ್ಲಕ್ಕೂ ಮೊದಲ ಸ್ಥಾನದಲ್ಲಿರುವವರು  ಹೆಂಡತಿ, ಮಕ್ಕಳು, ಅತ್ಯಂತ ಕೊನೆಯಲ್ಲಿರುವುದು ತನ್ನ ದೇಹ. ಹೆಂಡತಿ ಮಕ್ಕಳು ಜೊತೆಗಿದ್ದರೆ ವ್ರತಕ್ಕೆ, ಸತ್ಯಕ್ಕೆ, ಬಂಧನಕ್ಕೆ ಅವಕಾಶವನ್ನು  ಕೊಟ್ಟಂತೆ. ಕೊಟ್ಟ ಮಾತು ಎಲ್ಲಕ್ಕೂ ಮೊದಲು. ಅದನ್ನು ಈಡೇರಿಸಿಕೊಳ್ಳುವಲ್ಲಿ ಹಿಂಜರಿಯದೆ ಸಾಧಿಸಲು ನಿರಾಕರಿಸಿದರೆ ಅಥವಾ ಹಿಂಜರಿದರೆ ಶಿವನೇ  ನಮ್ಮ ಮನಸ್ಸನ್ನು ಪರೀಕ್ಷೆಮಾಡುತ್ತಾನೆ. ಹಾಗಾಗಿ ನಾಚಿಕೊಳ್ಳದೆ ನಮ್ಮನ್ನು ಮಾರಿಬಿಡು, ಮುಂದೆ ಆಗುವಂತಹುದು ಆಗಲಿ” ಎಂದು ತಿಳಿಸಿ ಹೇಳಿದಾಗ ಹರಿಶ್ಚಂದ್ರನು ಒಪಿಕೊಂಡನು.

(ತಮಗೊದಗಿರುವ ಈ ದುಃಸ್ಥಿತಿ, ಅಸಹಾಯಕ ಸ್ಥಿತಿಗತಿಗಳ ಬಗ್ಗೆ ಹರಿಶ್ಚಂದ್ರನಿಗೂ ನೋವಿದೆ. ಮದುವೆಯಾಗಿ ಹೆಂಡತಿ, ಮಗನನ್ನು ಸುಖದಲ್ಲಿ ಬಾಳಿಸಿಕೊಳ್ಳಲು ಸಾಧ್ಯವಾಗಲಿಲ್ಲವಲ್ಲ! ಎಂಬ ಕೊರಗಿದೆ. ಎಂತಹ ಕಷ್ಟಬಂದರೂ ಹೆಂಡತಿ ಮಗನನ್ನು ನೋಡಿಕೊಳ್ಳಬೇಕು ಎಂಬುದು ಆತನ ನಿಲುವು. ತನ್ನ ನಿರ್ಧಾರಗಳು, ನಂಬಿದ ಮೌಲ್ಯಗಳಿಗೆ ಬದ್ಧನಾಗಿದ್ದುದರಿಂದ ತಾನು ಇಂದು ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕನಾಗಬೇಕಾದ ಪರಿಸ್ಥಿತಿ ಒದಗಿದೆ ಎಂಬುದು ಆತನಿಗೂ ತಿಳಿದಿದೆ. ಈಗ ತನ್ನ ರಾಜ್ಯವನ್ನು ಬಿಟ್ಟುಬಿಟ್ಟು ನಿರ್ಗತಿಕನಾಗಿ ಪರದೇಶವನ್ನು ಸೇರಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾದರೂ ತಾನು ಬದುಕಿರುವಲ್ಲಿಯವರೆಗೆ ಹೆಂಡತಿ ಮಗನನ್ನು ಮಾಡಿಕೊಳ್ಳದಿರುವುದಕ್ಕೆ ಸಾಧ್ಯವೇ? ಇದುವರೆಗೆ ಕೇವಲ ಮೌಲ್ಯಗಳನ್ನು ನಂಬಿ ಬದುಕಿದ ಹರಿಶ್ಚಂದ್ರ ಇಂದು ಅವುಗಳನ್ನು ಗಾಳಿಗೆ ತೂರಿ ಹೆಂಡತಿ ಮಗನನ್ನು ಮಾರಿದನೆ? ಎಂದು ಜನ ಆಡಿಕೊಳ್ಳಲಿಕ್ಕಿಲ್ಲವೆ? ಹಾಗಾಗಿ ಹೆಂಡತಿ ಮಗನನ್ನು ಮಾರುವುದಕ್ಕೆ ಆತ ಒಪ್ಪುವುದಿಲ್ಲ. ಇಂತಹ ಸಂದರ್ಭದಲ್ಲಿ ಚಂದ್ರಮತಿಯೇ ಆತನನ್ನು ಸಮಾಧಾನಿಸುತ್ತಾಳೆ. ಸಂಸಾರ ಬಂಧನದಲ್ಲಿ ಹೆಂಡತಿ ಮಕ್ಕಳು ಎಲ್ಲಕ್ಕಿಂತ ಮೊದಲಿಗರಾಗುತ್ತಾರೆ. ಅವರು ಜೊತೆಯಲ್ಲಿದ್ದಾಗ, ಅವರ ಯೋಗಕ್ಷೇಮ, ಕಾಳಜಿಗಳ ವಿಚಾರದಲ್ಲಿ ಕರ್ತವ್ಯವಿಮುಖತೆಯೆ ಹೆಚ್ಚು. ಸಂಸಾರಬಂಧನಕ್ಕೆ ಮೊದಲ ಕಾರಣರು ಹೆಂಡತಿ-ಮಕ್ಕಳೆ. ಹಾಗಾಗಿ ತಮ್ಮನ್ನು ಮಾರಿಬಿಡು, ಅನಂತರ ಮಿಕ್ಕ ಸಂಪಾದನೆಯ ಕುರಿತು ಆಲೋಚಿಸು ಎಂದು ಚಂದ್ರಮತಿ ತಿಳಿಹೇಳಿದಾಗ ಹರಿಶ್ಚಂದ್ರ ಒಪ್ಪಿಕೊಳ್ಳಲೇಬೇಕಾಯಿತು.)

 

ಪೊಡವಿಪಂ ಸತಿಸುತರ ತಲೆಗಳಲಿ ಹುಲುಗಟ್ಟಿ

ನಡೆನಡೆದು ಕೈವಿಡಿದು ಮುಂದೊಡ್ಡಿ ತೋಱುತಂ

ಗಡಿಗಳೊಳು ಬೀದಿಯೊಳು ಸಂದಿಯೊಳು ಪುರದೊಳೋರಂತೆ ನಾಚಿಕೆಯನುಳಿದು

ತಡೆಯದೆ ಹರಿಶ್ಚಂದ್ರಭೂವರನ ತನಯನಂ

ಮಡದಿಯಂ ಮಾಱುಗೊಂಬಧಿಕರಿಲ್ಲಾ ಎಂದು

ನಿಡುಸರದೊಳೊಱಲಿ ಜನಕಱಪುತ್ತ ತೊಳಲಿದಂ ಸತ್ಯನಿಧಿಭೂಪಾಲನು  ೧೬

ಪದ್ಯದ ಅನ್ವಯಕ್ರಮ:

ಪೊಡವಿಪಂ ಸತಿಸುತರ ತಲೆಗಳಲಿ ಹುಲು ಕಟ್ಟಿ ನಡೆನಡೆದು ಕೈವಿಡಿದು ಮುಂದೊಡ್ಡಿ ತೋಱುತಂ ಗಡಿಗಳೊಳು ಬೀದಿಯೊಳು ಸಂಧಿಯೊಳು ಪುರದೊಳ್ ಓರಂತೆ ನಾಚಿಕೆಯನ್ ಉಳಿದು ತಡೆಯದೆ ಹರಿಶ್ಚಂದ್ರಭೂವರನ ತನಯನಂ ಮಡದಿಯಂ ಮಾಱು ಕೊಂಬ ಅಧಿಕರಿಲ್ಲಾ ಎಂದು ಸತ್ಯನಿಧಿ ಭೂಪಾಲನು ನಿಡುಸರದೊಳ್ ಒಱಲಿ ಜನಕೆ ಅಱಪುತ್ತ ತೊಳಲಿದಂ.

ಪದ-ಅರ್ಥ:

ಪೊಡವಿಪಂ-ರಾಜ(ಹರಿಶ್ಚಂದ್ರ);  ಸತಿಸುತರ-ಹೆಂಡತಿ ಮತ್ತು ಮಗನ;  ಹುಲುಗಟ್ಟಿ-ಹುಲ್ಲನ್ನು ಕಟ್ಟಿ(ಮಾರಾಟದ ವಸ್ತುವೆಂದು ಜನರಿಗೆ ತಿಳಿಯುವುದಕ್ಕಾಗಿ  ಸೂಚನೆ);  ಮುಂದೊಡ್ದಿ-ಮುಂದೆ ಕಾಣುವಂತೆ ತೋರಿ, ಮುಂದಿರಿಸಿಕೊಂಡು;  ಗಡಿ-ಸರಹದ್ದು;  ಸಂದಿ-ಓಣಿ;  ಪುರ-ಪಟ್ಟಣ;  ಓರಂತೆ-ಒಂದೇ ಸಮನೆ;  ನಾಚಿಕೆಯನುಳಿದು-ನಾಚಿಕೆಯನ್ನು ಬಿಟ್ಟುಬಿಟ್ಟು;  ತಡೆಯದೆ-ನಿಧಾನಿಸದೆ, ತಡಮಾಡದೆ;  ತನಯ-ಮಗ;  ಮಾಱುಗೊಂಬ-ಖರೀದಿಸುವ;  ಅಧಿಕರಿಲ್ಲಾ-ಸಿರಿವಂತರಿಲ್ಲವೇ;  ನಿಡುಸರ-ಗಟ್ಟಿಯಾದ ಧ್ವನಿ;  ಒಱಲಿ-ಅರಚಿ;  ಅಱುಪುತ್ತ-ತಿಳಿಸುತ್ತ; ತೊಳಲು-ಅಲೆದಾಡು.

ರಾಜನಾದ ಹರಿಶ್ಚಂದ್ರನು ತನ್ನ ಹೆಂಡತಿ ಹಾಗೂ ಮಗನ ತಲೆಗೆ ಹುಲ್ಲನ್ನು ಕಟ್ಟಿಕೊಂಡು ಬೀದಿಗಳಲ್ಲಿ, ಗಡಿಗಳಲ್ಲಿ, ಓಣಿಗಳಲ್ಲಿ, ಪಟ್ಟಣದಲ್ಲಿ, ಒಂದೇ ಸಮನೆ ನಾಚಿಕೆಯನ್ನು ಬಿಟ್ಟುಬಿಟ್ಟು    ಜೋರಾಗಿ ಹರಿಶ್ಚಂದ್ರ ರಾಜನ ಹೆಂಡತಿ ಮಗನನ್ನು ಕೊಂಡುಕೊಳ್ಳುವ ಶ್ರೀಮಂತರು ಯಾರಿದ್ದೀರಿ? ಎಂದು ಗಟ್ಟಿಯಾಗಿ ಅರಚುತ್ತ ಸುತ್ತಮುತ್ತೆಲ್ಲ ಅಲೆದಾಡತೊಡಗಿದನು.

(ಹರಿಶ್ಚಂದ್ರ  ಅನಿವಾರ್ಯವಾಗಿ ತನ್ನ ಹೆಂಡತಿ ಚಂದ್ರಮತಿಯ ಮಾತುಗಳನ್ನು ಒಪ್ಪಿಕೊಳ್ಳುತ್ತಾನೆ. ಆಕೆ ಹೇಳಿದಂತೆ ಎಲ್ಲಕ್ಕೂ ಮೊದಲು  ಹೆಂಡತಿ ಮಕ್ಕಳು. ಅವರು ಜೊತೆಗಿದ್ದರೆ ತಾನು ಏನನ್ನೂ ಸಾಧಿಸಲು ಸಾಧ್ಯವಾಗದು, ಸಾಲತೀರಿಸಲೂ ಸಾಧ್ಯವಾಗದು, ಕೊಟ್ಟ ಮಾತನ್ನು ಉಳಿಸಿಕೊಳ್ಳಲೂ ಸಾಧ್ಯವಾಗದು ಎಂಬುದನ್ನು ಅರ್ಥಮಾಡಿಕೊಂಡು ಹೆಂಡತಿ ಮಗನನ್ನು ಮಾರಿಬಿಡುವುದಕ್ಕೆ ಮುಂದಾಗುತ್ತಾನೆ. ಮೊದಲು ಅವರಿಬ್ಬರೂ ಮಾರಾಟಕ್ಕಿರುವವರು ಎಂಬುದು ಲೋಕಕ್ಕೆ ತಿಳಿಯುವಂತೆ ಅವರಿಬ್ಬರ ತಲೆಗೆ ಹುಲ್ಲನ್ನು ಕಟ್ಟುತ್ತಾನೆ. ಅನಂತರ ಅವರನ್ನು  ಮುಂದಿಟ್ಟುಕೊಂಡು ಕಾಶಿಯ ಬೀದಿ ಬೀದಿಗಳಲ್ಲಿ, ಓಣಿಗಳಲ್ಲಿ, ಪಟ್ಟಣದ ಗಡಿಗಳಲ್ಲಿ, ಅನಂತರ ಪಟ್ಟಣದೊಳಗೆ ರಾಜ ಹರಿಶ್ಚಂದ್ರನು ತನ್ನ ಹೆಂಡತಿ ಮಗನನ್ನು ಮಾರಾಟ ಮಾಡಲು ಹೊರಟಿದ್ದಾನೆ. ಅವರಿಬ್ಬರನ್ನು ಅಧಿಕ ಹೊನ್ನನ್ನು ಕೊಟ್ಟು ಖರೀದಿಸುವ ಶ್ರೀಮಂತರು ಈ ಕಾಶಿಪಟ್ಟದಲ್ಲಿ ಯಾರೂ ಇಲ್ಲವೇ ಎಂದು ನಾಚಿಕೆಯನ್ನು, ಸಂಕೋಚವನ್ನು ಬಿಟ್ಟುಬಿಟ್ಟು ಒಂದೇ ಸಮನೆ ಕೂಗಿ ಹೇಳುವುದಕ್ಕೆ ತೊಡಗುತ್ತಾನೆ. ತನ್ನ ಮಾತನ್ನು ಮೀರುವಲ್ಲಿ, ತಾನು ನಂಬಿದ ಮೌಲ್ಯವನ್ನು ಮೀರುವಲ್ಲಿ ಹರಿಶ್ಚಂದ್ರನಿಗೆ ಆಗಬಹುದಾದ ನೋವು ಈಗ ಹೆಂಡತಿ ಮಗನನ್ನು ಮಾರಲು ತೀರ್ಮಾನಿಸಿದ ಸಂದರ್ಭದಲ್ಲೂ ಆಗದೇ ಹೋಗಲಾರದು.  ಹೆಂಡತಿ ಮಗನ  ಮಾರಾಟ ಆತ ನಂಬಿದ ಹಾಗೂ ಅನುಸರಿಸಿದ ಮೌಲ್ಯಗಳಿಗೆ ವಿರುದ್ಧವಾದುದು. ಆದರೆ, ಈಗ ತನ್ನ ಮುಂದೆ ಗುರುತರವಾದ ಜವಾಬ್ದಾರಿಯೊಂದು ಪರ್ವತಾಕಾರದಲ್ಲಿ ಬಂದು ನಿಂತಿದೆ. ಅದನ್ನು ಈಡೇರಿಸಿಕೊಳ್ಳಬೇಕಾದರೆ ಹೆಂಡತಿ ಮಗನನ್ನು ಮಾರುವ ಅನಿವಾರ್ಯತೆ ಇದೆ ಎಂಬುದೂ ಜೊತೆಗೆ ಚಂದ್ರಮತಿ ಮಾತೂ ಅದಕ್ಕೆ ಪೂರಕವಾದುದೂ ಆತ ತನ್ನ ಮನಸ್ಸನ್ನು ಗಟ್ಟಿಮಾಡಿಕೊಳ್ಳುವಂತೆ ಮಾಡಿತು.)

 

ಅನಿಮಿತ್ತ ಮುನಿವ ಮುನಿಪನ ಬೆಸಗೊಳಗ್ನಿ ವಿ

ಪ್ರನ ವೇಷದಿಂದ ಬಂದಾವಾವ ಸತಿಪುತ್ರ

ರೆನಿಬರವರೆಂದಡಿವರಿಬ್ಬರೆನಲಿವನಬಲನೀ ವನಿತೆ ಮುಪ್ಪಿನವಳು

ಮನೆಯೊಳಿನ್ನೊಳ್ಳಿದಹರಾರುಂಟು ತಾಯೆಂದ

ಡೆನಗುಳ್ಳರಿವರಯ್ಯ ಕೊಂಡೆನ್ನ ಸಾಕಿಕೊ

ಳ್ಳೆನೆ ಬೆಲೆಯ ಹೇಳೆನಗೆ ಲಾಗಾಗೆ ಹೊಂಗೊಡುವೆನೇಳೆಂಟು ದಿನಕೆಂದನು  ೧೭

ಪದ್ಯದ ಅನ್ವಯಕ್ರಮ:

ಅನಿಮಿತ್ತ ಮುನಿವ ಮುನಿಪನ ಬೆಸದೊಳ್ ಅಗ್ನಿ ವಿಪ್ರನ ವೇಷದಿಂದ ಬಂದು ಆವ ಆವ ಸತಿ ಪುತ್ರರ್? ಎನಿಬರ್? ಎಂದಡೆ, ಇವರ್ ಇಬ್ಬರ್ ಎನಲ್, ಇವನ್ ಅಬಲನ್, ಈ ವನಿತೆ ಮುಪ್ಪಿನವಳು, ಮನೆಯೊಳ್ ಇನ್ನು ಒಳ್ಳಿದಹರ್ ಆರ್ ಉಂಟು? ತಾ ಎಂದಡೆ, ಅಯ್ಯ ಎನಗೆ ಉಳ್ಳವರ್ ಇವರ್ ಕೊಂಡು ಎನ್ನ ಸಾಕಿಕೊಳ್ ಎನೆ, ಬೆಲೆಯ ಹೇಳೆ ಎನಗೆ ಲಾಗಾಗೆ ಏಳ್ ಏಂಟು ದಿನಕೆ ಹೊನ್ ಕೊಡುವೆನ್ ಎಂದನು.

ಪದ-ಅರ್ಥ:

ಅನಿಮಿತ್ತ-ವಿನಾಕಾರಣ;  ಮುನಿಪ-ಋಷಿ(ವಿಶ್ವಾಮಿತ್ರ);  ಬೆಸದೊಳ್-ಆಜ್ಞೆಯಂತೆ;  ವಿಪ್ರ-ಬ್ರಾಹ್ಮಣ;  ಆವಾವ-ಯಾವ ಯಾವ;  ಎನಿಬರ್-ಎಷ್ಟು ಮಂದಿ;  ಅಬಲ-ಸಣ್ಣವ, ಅಶಕ್ತ; ಮುಪ್ಪಿನವಳು-ಮುದುಕಿಯಾದವಳು;  ಒಳ್ಳಿದಹರ್-ಗಟ್ಟಿಮುಟ್ಟಾಗಿರುವವರು;  ಆರುಂಟು-ಯಾರಿದ್ದಾರೆ;  ತಾಯೆಂದಡೆ-ಕರೆದುಕೊಂಡು ಬಾ ಎಂದಾಗ;  ಎನಗುಳ್ಳವರ್-ನನಗಿರುವವರು;  ಕೊಂಡು-ಖರೀದಿಸಿ;  ಲಾಗಾಗೆ-ಸುಲಭವಾದರೆ, ಶಕ್ತನಾದರೆ;  ಹೊಂಗೊಡುವೆನ್-ಹೊನ್ನನ್ನು ಕೊಡುತ್ತೇನೆ.

ಕಾರಣವಿಲ್ಲದೆ ಕೋಪಿಸುವ ಮುನಿ ವಿಶ್ವಾಮಿತ್ರನ ಆಜ್ಞೆಯಂತೆ ಅಗ್ನಿಯು ಬ್ರಾಹ್ಮಣನ ವೇಷವನ್ನು ತಾಳಿಕೊಂಡು ಬಂದು, ’ಯಾವ ಹೆಂಡತಿ ಮಕ್ಕಳು? ಎಷ್ಟು ಮಂದಿ?’ ಎಂದು ಕೇಳಿದಾಗ, ಹರಿಶ್ಚಂದ್ರನು, ’ಇವರಿಬ್ಬರನ್ನು’ ಎಂದನು. ಆಗ ಬ್ರಾಹ್ಮಣ ವೇಷದ ಅಗ್ನಿಯು, ’ಇವನು ಇನ್ನೂ ಬಾಲಕ, ಇವಳು ಮುದುಕಿಯಾಗಿದ್ದಾಳೆ. ಮನೆಯಲ್ಲಿ ಇನ್ನು ಗಟ್ಟಿಮುಟ್ಟಾಗಿರುವವರು ಬೇರೆ ಯಾರಾದರೂ ಇದ್ದಾರೆಯೇ? ಅವರನ್ನು ಕರೆದುಕೊಂಡು ಬಾ’ ಎಂದಾಗ ಹರಿಶ್ಚಂದ್ರನು, ’ಅಯ್ಯಾ ನನಗಿರುವವರು ಇವರಿಬ್ಬರು ಮಾತ್ರ. ಇವರನ್ನೇ ಕೊಂಡುಕೊಂಡು ನನ್ನನ್ನು ಉದ್ಧರಿಸು’ ಎಂದು ವಿನಂತಿಸಿಕೊಂಡನು. ಆಗ ಅವನು, ’ಇವರಿಬ್ಬರ ಬೆಲೆಯನ್ನು ಹೇಳು, ನನಗೆ ಶಕ್ತವಾದರೆ ಏಳೆಂಟು ದಿನಗಳೊಳಗೆ ಹೊನ್ನನ್ನು ಕೊಡುತ್ತೇನೆ’ ಎಂದನು.

(ಹರಿಶ್ಚಂದ್ರನ ಹೆಂಡತಿ ಹಾಗೂ ಮಗನ ಮೇಲಿರುವ ವ್ಯಾಮೋಹ, ಆತನ ಏಕಪತ್ನೀವ್ರತವನ್ನು ಹಾಗೂ ಅದರ ನಿಷ್ಠೆಯನ್ನು ವಿಶ್ವಾಮಿತ್ರನಿಗೆ ಪರೀಕ್ಷಿಸಬೇಕಾಗಿತ್ತು. ಅದಕ್ಕಾಗಿ ಆತ ಅಷ್ಟದಿಕ್ಪಾಲಕರಲ್ಲಿ ಒಬ್ಬನಾದ ಅಗ್ನಿಯಲ್ಲಿ ಬ್ರಾಹ್ಮಣ ವೇಷದಲ್ಲಿ ಹೋಗಿ ಹರಿಶ್ಚಂದ್ರನ ಹೆಂಡತಿ ಹಾಗೂ ಮಗನನ್ನು ಖರೀದಿಸುವಂತೆ ವಿನಂತಿಸಿಕೊಳ್ಳುತ್ತಾನೆ. ವಿಶ್ವಾಮಿತ್ರ ಕಾರಣವಿಲ್ಲದೆ ಕೋಪಿಸಿಕೊಳ್ಳುವ ಮುನಿ. ಈತನ ಮನದ ಇಂಗಿತವನ್ನು ಅರಿತುಕೊಂಡ ಅಗ್ನಿ ಬ್ರಾಹ್ಮಣವೇಷವನ್ನು ತಾಳಿಕೊಂಡು ಹರಿಶ್ಚಂದ್ರನಲ್ಲಿ ಬಂದು, “ಯಾವ ಹೆಂಡತಿ ಮಕ್ಕಳು? ಎಷ್ಟು ಮಂದಿಯನ್ನು ಮಾರುತ್ತಿದ್ದಿಯಾ?” ಎಂದು ಪ್ರಶ್ನಿಸಿದಾಗ, ಹರಿಶ್ಚಂದ್ರನು “ಇವರೆ ನನ್ನ ಹೆಂಡತಿ ಹಾಗೂ ಮಗ, ಇವರಿಬ್ಬರನ್ನೇ ಮಾರುತ್ತಿದ್ದೇನೆ”, ಎಂದನು. ವಿಶ್ವಾಮಿತ್ರನಂತೆ ಅಗ್ನಿಗೂ ಹರಿಶ್ಚಂದ್ರನನ್ನು ಸಾಧ್ಯವಾದಷ್ಟು ಕಾಡಿ ಪೀಡಿಸಬೇಕಾಗಿತ್ತು. ಹಾಗಾಗಿ ಇಲ್ಲಸಲ್ಲದ ಆಕ್ಷೇಪಗಳನ್ನು ಎತ್ತುತ್ತಾನೆ. “ಇವನು ಇನ್ನೂ ಬಾಲಕ, ಏನು ಕೆಲಸ ಮಾಡಿಯಾನು? ಇವಳು ಈಗಾಗಲೇ ಮುದುಕಿಯಾಗಿದ್ದಾಳೆ, ಇವಳೇನು ಕೆಲಸ ಮಾಡಿಯಾಳು? ಇವರಲ್ಲದೆ ನಿನ್ನ ಮನೆಯಲ್ಲಿ ಗಟ್ಟಿಮುಟ್ಟಾದ ವ್ಯಕ್ತಿಗಳು ಇದ್ದರೆ ಅವರನ್ನು ಕರೆದುಕೊಂಡು ಬಾ, ಖರೀದಿಸೋಣ” ಎಂದನು. ಹರಿಶ್ಚಂದ್ರ ತನಗಿರುವವರು ಇವರಿಬ್ಬರೆ, ಇವರನ್ನೇ ದೊಡ್ಡ ಮನಸ್ಸುಮಾಡಿ ಕೊಂಡುಕೊಂಡು ನನ್ನನ್ನು ಉದ್ಧರಿಸಿ” ಎಂದು ವಿನಂತಿಸಿಕೊಂಡಾಗ ವೇಷಧಾರಿ ಬ್ರಾಹ್ಮಣ, “ನೀನು ಕೇಳಿದಷ್ಟು ಹೊನ್ನನ್ನು  ನನ್ನಿಂದ  ಕೊಡಲಾಗುವುದಿಲ್ಲ. ನೀನು ಬೆಲೆಯನ್ನು ಹೇಳು, ನನ್ನಿಂದ ಸಾಧ್ಯವಾಗುವುದಾದರೆ ಕೊಂಡುಕೊಂಡು ಏಳೆಂಟು ದಿನಗಳೊಳಗೆ ಹೊನ್ನನ್ನು ಕೊಡುತ್ತೇನೆ” ಎಂದನು. ಹರಿಶ್ಚಂದ್ರನಿಗೆ ಸಮಯಾವಕಾಶವಿಲ್ಲ ಎಂಬುದು ಆತನಿಗೂ ಗೊತ್ತು. ಹೇಗಾದರೂ ಹರಿಶ್ಚಂದ್ರನನ್ನು ಮಾತುತಪ್ಪುವಂತೆ ನೋಡಿಕೊಳ್ಳಬೇಕೆಂಬುದು ವಿಶ್ವಾಮಿತ್ರ ಹಾಗೂ ಅಗ್ನಿಯರ ಕುಟಿಲೋಪಾಯ.)

 

ಇಂದು ಬೈಗಿಂದೊಳಗೆ ರಾಸಿ ಹೊನ್ನಂ ಕೊಡುವೆ

ನೆಂದು ಭಾಷೆಯನಿತ್ತೆನೀಯದಿರ್ದಡೆ ಹಾನಿ

ಬಂದಪುದು ಲಾಗನಱಸದೆ ನಿನ್ನ ಮನಕೆ ಬಂದನಿತರ್ಥಮಂ ಕರುಣಿಸು

ತಂದೆಯೆನೆ ವನಿತೆಗಿಪ್ಪತ್ತು ಸಾವಿರವನೀ

ನಂದನಂಗಿಪ್ಪತ್ತು ಸಾವಿರವನೀವೆನೆನೆ

ಬಂದುದೆನಿಸುವುದೆಮ್ಮ ತೆಱಕಾಱಗೆಂದೆನಲು ಬಂದುದೆನಿಸಿದನಾಗಳು  ೧೮

 ಪದ್ಯದ ಅನ್ವಯಕ್ರಮ:

’ಇಂದು ಬೈಗಿಂದ ಒಳಗೆ ರಾಸಿ ಹೊನ್ನಂ ಕೊಡುವೆನ್ ಎಂದು ಭಾಷೆಯನ್ ಇತ್ತೆನ್, ಈಯದೆ ಇರ್ದಡೆ ಹಾನಿ ಬಂದಪುದು, ಲಾಗನ್ ಅಱಸದೆ ನಿನ್ನ ಮನಕೆ ಬಂದ ಅನಿತು ಅರ್ಥಮಂ ಕರುಣಿಸು ತಂದೆ’ ಎನೆ, ಈ ವನಿತೆಗೆ ಇಪ್ಪತ್ತು ಸಾವಿರವನ್, ಈ ನಂದನಂಗೆ ಇಪ್ಪತ್ತು ಸಾವಿರವನ್ ಈವೆನ್ ಎನೆ, ಬಂದುದನ್ ಎನಿಸುವುದು ಎಮ್ಮ ತೆಱಕಾಱಗೆ ಎಂದು ಎನಲು ಬಂದುದನ್ ಎನಿಸಿದನ್ ಆಗಳು.

ಪದ-ಅರ್ಥ:

ಬೈಗು-ಸಾಯಂಕಾಲ; ಈಯದಿರ್ದಡೆ-ಕೊಡದಿದ್ದರೆ;  ಹಾನಿ-ತೊಂದರೆ;  ಲಾಗನ್-ಅಗ್ಗ, ಉಳಿತಾಯ;  ಅಱಸದೆ-ಬಯಸದೆ, ನಿರೀಕ್ಷಿಸದೆ;  ಅನಿತು-ಅಷ್ಟು;  ಅರ್ಥ-ಹಣ;  ಕರುಣಿಸು-ದಯಪಾಲಿಸು, ನೀಡು;  ವನಿತೆ– ಸ್ತ್ರೀ  (ಚಂದ್ರಮತಿ);  ನಂದನ-ಮಗ (ಲೋಹಿತಾಶ್ವ);  ತೆಱಕಾಱ-ಸಾಲ ವಸೂಲಿಗಾರ;  ಎನಿಸು-ಲೆಕ್ಕಮಾಡು, ಲೆಕ್ಕಮಾಡು.

ಇಂದು ಬೆಳಗ್ಗಿನಿಂದ ಸಾಯಂಕಾಲದೊಳಗೆ ರಾಶಿ ಹೊನ್ನನ್ನು ಕೊಡುತ್ತೇನೆ ಎಂದು ಭಾಷೆಯನ್ನು ಕೊಟ್ಟಿದ್ದೇನೆ. ಒಂದು ವೇಳೆ ಕೊಡದಿದ್ದರೆ ನನ್ನ ಮೇಲೆ ಅಪವಾದ ಬರುತ್ತದೆ. ಚೌಕಾಸಿ ಮಾಡದೆ, ನಿನ್ನ ಉಳಿತಾಯವನ್ನು ಪರಿಭಾವಿಸದೆ ನಿನ್ನ ಮನಸ್ಸಿಗೆ ಬಂದಷ್ಟು ಹಣವನ್ನು ಕೊಡು ಎಂದು ಹರಿಶ್ಚಂದ್ರ ಹೇಳಿದಾಗ, ಬ್ರಾಹ್ಮಣವೇಷದ ಅಗ್ನಿಯು, ’ಈ ವನಿತೆಗೆ ಇಪ್ಪತ್ತು ಸಾವಿರ ಹಾಗೂ ಈ ಬಾಲಕನಿಗೆ ಇಪ್ಪತ್ತು ಸಾವಿರ ಕೊಡುತ್ತೇನೆ’ ಎಂದನು. ’ಬಂದುದನ್ನು ಎಣಿಸಿಕೊ’ ಎಂದು ಹರಿಶ್ಚಂದ್ರ ನಕ್ಷತ್ರಿಕನಿಗೆ ಹೇಳೀದಾಗ ಅವನು ಅದೆಲ್ಲವನ್ನೂ ಎಣಿಸಿದನು.

(ಹರಿಶ್ಚಂದ್ರನಿಗೆ ತಾನು ಸಾಧ್ಯವಾದಷ್ಟು ಬೇಗ ವಿಶ್ವಾಮಿತ್ರನ ಋಣದಿಂದ ಮುಕ್ತನಾಗಬೇಕೆಂಬ ಹಂಬಲ. ಚೌಕಾಸಿ ಮಾಡುತ್ತ ಕುಳಿತರೆ ಸಮಯ ಸಂದುಹೋಗುತ್ತದೆ. ಹಾಗಾಗಿ ಬ್ರಾಹ್ಮಣನನ್ನು ಸಮಜಾಯಿಸುವುದಕ್ಕೆ ಮುಂದಾಗುತ್ತಾನೆ. ತಾನು ಇಂದು ಸಾಯಂಕಾಲದ ಒಳಗೆ ರಾಶಿ ಹೊನ್ನನ್ನು ಕೊಡುತ್ತೇನೆ ಎಂದು ಭಾಷೆಕೊಟ್ಟಿರುವುದರಿಂದ ತಾನದನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕು. ಒಂದು ವೇಳೆ ತನ್ನ ಮಾತನ್ನು ತಾನೇ ಮೀರಿದರೆ, ಕೊಟ್ಟ ಭಾಷೆಯನ್ನು ನಡೆಸಿಕೊಡದೇ ಹೋದರೆ ತನ್ನ ಮೇಲೆ ಆಪವಾದ ಬಂದುಬಿಡುತ್ತದೆ. ಇದುವರೆಗೆ ಮಾತುಮೀರದವನು ಇಂದು ಮಾತುಮೀರಿದನು ಎಂದೆನಿಸಿಕೊಳ್ಳುವುದು ಸಾಧ್ಯವೆ? ಸಮಯವೂ ಮೀರಿಹೋಗುತ್ತಿರುವುದರಿಂದ ಚೌಕಾಸಿ ಮಾಡದೆ ತನ್ನ ಮೇಲೆ ಕರುಣೆತೋರಿ ನಿನ್ನ ಮನಸ್ಸಿಗೆ ಎಷ್ಟು ಕೊಡಬೇಕೆನಿಸುತ್ತದೊ ಅಷ್ಟನ್ನು ಕೊಟ್ಟು ನನ್ನನ್ನು ಕಾಪಾಡು’ ಎಂದು ಹರಿಶ್ಚಂದ್ರ ವಿನಂತಿಸಿಕೊಳ್ಳುತ್ತಾನೆ. ಇನ್ನು ಹೆಚ್ಚು ಕಾಡುವುದು ಬೇಡವೆಂದು ಭಾವಿಸಿದ ಬ್ರಾಹ್ಮಣ ಚಂದ್ರಮತಿಗೆ ಇಪ್ಪತ್ತು ಸಾವಿರ ಹಾಗೂ ಲೋಹಿತಾಶ್ವನಿಗೆ ಇಪ್ಪತ್ತು ಸಾವಿರ ಹೊನ್ನನ್ನು ಕೊಡುತ್ತೇನೆ ಎಂದು ಹೇಳಿದಾಗ ಹರಿಶ್ಚಂದ್ರ ಮರುಮಾತಿಲ್ಲದೆ ಒಪ್ಪಿಕೊಳ್ಳುತ್ತಾನೆ. ಬಂದ ಹೊನ್ನನ್ನು ತಾನು ತೆಗೆದುಕೊಳ್ಳದೆ ನಕ್ಷತ್ರಕನಿಗೆ ಎಣಿಸಲು ವಿನಂತಿಸಿಕೊಳ್ಳುತ್ತಾನೆ. ವಿಶ್ವಾಮಿತ್ರನಿಗೆ ಕೊಡಬೇಕಾದ ಹಣಕ್ಕಾಗಿ ಹೆಂಡತಿ ಮಕ್ಕಳನ್ನು ಮಾರುವ ಪ್ರಸಂಗ ಹರಿಶ್ಚಂದ್ರನ ಪಾಲಿಗೆ ಅತ್ಯಂತ ದಾರುಣವಾದ ಪ್ರಸಂಗ ಮಾತ್ರವಲ್ಲದೆ ಆತನ ಪಾಲಿಗೆ ಸತ್ವಪರೀಕ್ಷೆಯ ಪ್ರಸಂಗವೂ ಹೌದು.)

 

ಬಂದುದೇ ನಕ್ಷತ್ರನಾಮಮುನಿ ಎನಲೇನು

ಬಂದುದಾಂ ಬಂದ ದಿನ ಮೊದಲಿಂದುತನಕೆನ್ನ

ಹಿಂದುಳಿದ ಬತ್ತಾಯ ಬಂದುದೆನ್ನೊಡೆಯಂಗೆ ಕೊಡುವ ಹೊಸ ರಾಶಿ ಹೊನ್ನ

ತಂದೀಗ ಕೊಡು ಕೊಡದೊಡಿಲ್ಲೆನ್ನು ಹೋಗಬೇ

ಕೆಂದಡೀ ಹೊನ್ನ ಬತ್ತಾಯಕ್ಕೆ ತೆಱುವನ

ಲ್ಲೆಂದಡೀ ಮಧ್ಯಸ್ಥ ವಿಪ್ರ ಮೆಚ್ಚಲು ಕೊಂಬೆನವನೀಶ ಕೇಳೆಂದನು  ೧೯

ಪದ್ಯದ ಅನ್ವಯಕ್ರಮ:

ಬಂದುದೇ ನಕ್ಷತ್ರನಾಮ ಮುನಿ ಎನಲ್, ಏನು ಬಂದುದು? ಆಂ ಬಂದ ದಿನ ಮೊದಲಿಂದ ಇಂದುತನಕ ಎನ್ನ ಹಿಂದುಳಿದ ಬತ್ತಾಯ ಬಂದುದು, ಎನ್ನ ಒಡೆಯಂಗೆ ಕೊಡುವ ಹೊಸ ರಾಶಿ ಹೊನ್ನ ತಂದು ಈಗ ಕೊಡು, ಕೊಡದೊಡೆ ಇಲ್ಲ ಎನ್ನು, ಹೋಗಬೇಕು ಎಂದಡೆ ಈ ಹೊನ್ನ ಬತ್ತಾಯಕ್ಕೆ ತೆಱುವವನ್ ಅಲ್ಲ ಎಂದಡೆ ಈ ಮಧ್ಯಸ್ಥ ವಿಪ್ರ ಮೆಚ್ಚಲು ಕೊಂಬೆನ್ ಅವನೀಶ ಕೇಳ್ ಎಂದನು.

ಪದ-ಅರ್ಥ:

ಬಂದುದೇ-ಸಂದಾಯವಾಯಿತೆ;  ನಕ್ಷತ್ರನಾಮಮುನಿ-ನಕ್ಷತ್ರಕನೆಂಬ ಹೆಸರಿನ ಮುನಿ;  ಬಂದ ದಿನ ಮೊದಲಿಂದ-ಬಂದ ಮೊದಲನೆಯ ದಿನದಿಂದ;  ಎನ್ನೊಡೆಯ-ನನ್ನ ಒಡೆಯ(ವಿಶ್ವಾಮಿತ್ರ);  ಕೊಡುವ-ಸಲ್ಲಿಸುವ;  ಕೊಡದೊಡೆ-ಕೊಡುವುದಿಲ್ಲವಾದರೆ;  ಬತ್ತಾಯ-ಬತ್ತೆ, ಭತ್ಯೆ;  ಮಧ್ಯಸ್ಥ-ಎರಡೂ ಕಡೆಗೆ ಸೇರದವನು.

ಹಣ ಬಂತಲ್ಲವೆ? ಎಂದು ಹರಿಶ್ಚಂದ್ರ ನಕ್ಷತ್ರಕನಲ್ಲಿ ಕೇಳಿದಾಗ ಅವನು ಬಂದುದಾದರೂ ಏನು? ನಾನು ನಿನ್ನೊಂದಿಗೆ ಹೊರಟ ದಿನದಿಂದ ಇದುವರೆಗೆ ನಿನ್ನ ಹಿಂದೆ ತಿರುಗಿದುದಕೆ  ಬತ್ತೆಗೆ ಸರಿಹೋಯಿತಷ್ಟೆ. ನನ್ನ ಒಡೆಯ ವಿಶ್ವಾಮಿತ್ರನಿಗೆ ಕೊಡಬೇಕಾಗಿರುವ ರಾಶಿ ಹೊನ್ನನ್ನು ಕೂಡಲೇ ತಂದುಕೊಡು. ಕೊಡಲು ಸಾಧ್ಯವಿಲ್ಲ ಎಂದಾದರೆ ಕೊಡಲಾರೆ ಎಂದು ಹೇಳು. ನಾನೀಗ ಹಿಂದಕ್ಕೆ ಹೋಗಬೇಕು ಎಂದಾಗ, ಹರಿಶ್ಚಂದ್ರನು ಈಗಾಗಲೇ ನೀಡಿರುವ ಹೊನ್ನನ್ನು ಬತ್ತೆಗೆ ತೆರುವವನು ನಾನಲ್ಲ ಎಂದಾಗ ನಕ್ಷತ್ರಕನು ಈ ಮಧ್ಯಸ್ಥ ಬ್ರಾಹ್ಮಣ ಸಮ್ಮತಿಸುವುದಾದರೆ ಇದೆಲ್ಲವನ್ನೂ ನನ್ನ ಬತ್ತೆಯಾಗಿ ತೆಗೆದುಕೊಳ್ಳುತ್ತೇನೆ ಎಂದನು.

(ಬ್ರಾಹ್ಮಣ ವೇಷದ ಅಗ್ನಿಯು ಚಂದ್ರಮತಿ ಹಾಗೂ ಲೋಹಿತಾಶ್ವರನ್ನು ಕೊಂಡುಕೊಂಡು ಹೊನ್ನನ್ನು ನೀಡಿದಾಗ ಹರಿಶ್ಚಂದ್ರನ ಮಾತಿನಂತೆ ನಕ್ಷತ್ರಕನು ಅದೆಲ್ಲವನ್ನೂ ಎಣಿಸಿಕೊಳ್ಳುತ್ತಾನೆ. ಹರಿಶ್ಚಂದ್ರ ಹಣ ಬಂತಲ್ಲವೆ? ಎಂದು ಪ್ರಶ್ನಿಸಿದಾಗ ಎಲ್ಲಿ ಬಂದಿದೆ? ಕಳೆದ ಹಲವಾರು ದಿನಗಳಿಂದ ಅನ್ನನೀರು ಬಿಟ್ಟು ನಿನ್ನ ಹಿಂದೆ ಅಲೆದಾಡಿಲ್ಲವೆ? ಈ ಬ್ರಾಹ್ಮಣ ಕೊಟ್ಟಿದ್ದು ಅಷ್ಟು ದಿನಗಳ ನನ್ನ ಬತ್ತೆಗೆ ಸರಿಯಾಯಿತು. ಇನ್ನು ಒಡೆಯನಾದ ವಿಶ್ವಾಮಿತ್ರನಿಗೆ ಕೊಡಬೇಕಾದ ಹೊನ್ನನ್ನು ಪ್ರತ್ಯೇಕವಾಗಿ ಕೊಟ್ಟುಬಿಡು. ಇನ್ನು ಹೆಚ್ಚು ತಡಮಾಡುವಂತಿಲ್ಲ. ಒಂದು ವೇಳೆ ನಿನಗೆ ಅದನ್ನು ಕೊಡಲು ಸಾಧ್ಯವಿಲ್ಲ ಎಂದಾದರೆ ಅದನ್ನಾದರೂ ಹೇಳಿಬಿಡು, ನಾನು ಹೊರಟುಹೋಗುತ್ತೇನೆ ಎಂದನು. ಕಾಡಿ ಪೀಡಿಸುವುದರಲ್ಲಿ ಈ ನಕ್ಷತ್ರಕ ಮುನಿ ವಿಶ್ವಾಮಿತ್ರನಿಗಿಂತಲೂ ನಿಸ್ಸೀಮನಾಗಿದ್ದಾನೆ ಎನಿಸಿತು ಹರಿಶ್ಚಂದ್ರನಿಗೆ. ಹರಿಶ್ಚಂದ್ರನಿಗೆ ಬೇಸರವಾಯಿತು. ನಕ್ಷತ್ರಕನನ್ನು ನಿಯೋಜಿಸಿದವನು ತಾನಲ್ಲ, ವಿಶ್ವಾಮಿತ್ರ. ಹಾಗಾಗಿ ನಕ್ಷತ್ರಕನಿಗೆ ಏನಾದರೂ ಬತ್ತೆಯನ್ನು ಕೊಡಬೇಕಿದ್ದರೆ ಅದನ್ನು ವಿಶ್ವಾಮಿತ್ರನೇ ಕೊಡಬೇಕು, ತನ್ನಿಂದ ಈ ನಕ್ಷತ್ರಕ ವಸೂಲಿ ಮಾಡುವುದು ನ್ಯಾಯವೇ? ಎಂಬುದು ಹರಿಶ್ಚಂದ್ರನ ಪ್ರಶ್ನೆ. ಹರಿಶ್ಚಂದ್ರನ ಪ್ರಶ್ನೆ ನ್ಯಾಯವೇ ಅದರೂ ನಕ್ಷತ್ರಕ ಅಲ್ಲೂ ಬ್ರಾಹ್ಮಣನನ್ನು ಮುಂದಿಟ್ಟುಕೊಂಡು ಹರಿಶ್ಚಂದ್ರನನ್ನು ಸಿಕ್ಕಿಸಿಹಾಕುವುದಕ್ಕೆ ಮುಂದಾಗುತ್ತಾನೆ. ಇಬ್ಬರೂ ಕಪಟಿಗಳೆ, ಕಾಡುವವರೆ. ಇಬ್ಬರೊಂದಿಗೂ ವಾದಿಸಿ ಗೆಲ್ಲುವುದು ಕಷ್ಟ ಎಂಬುದು ಹರಿಶ್ಚಂದ್ರನಿಗೆ ಸ್ಪಷ್ಟವಾಯಿತು.)

 

ಈತನಿನಿತರ್ಥಮಂ ಕೊಂಬುದುಚಿತವೆ ಹೇಳು

ತಾತ ಪಕ್ಷೀಕರಿಸದೆಂದೆನಲು ನಾಲ್ಕೆರಡು

ಮಾತಂಗದುದ್ದದರ್ಥದ ಸಾಲಮಂ ಬೇಡಬಂದವಂಗಿನಿತು ಘನವೇ

ಭೂತಳಾಧಿಪ ಮುನಿದು ಪೇಳೆನಿರ್ದುದನೆಂಬೆ

ನೀತಗಿದು ಮರಿಯಾದೆಯೆನೆ ಜಲವನುಳಿದಬುಜ

ಕಾ ತರಣಿ ಮುನಿವನೆನೆ ನೆಲೆಗೆಟ್ಟು ಬಂದವರ್ಗೆ ಮುನಿಯದವರಾರೆಂದನು  ೨೦

ಪದ್ಯದ ಅನ್ವಯಕ್ರಮ:

ತಾತ, ಈತನ್ ಇನಿತು ಅರ್ಥಮಂ ಕೊಂಬುದು ಉಚಿತವೆ ಹೇಳು? ಪಕ್ಷೀಕರಿಸದೆ? ಎಂದೆನಲು, ನಾಲ್ಕೆರಡು ಮಾತಂಗದುದ್ದದ ಅರ್ಥದ ಸಾಲಮಂ ಬೇಡ ಬಂದವಂಗೆ ಇನಿತು ಘನವೇ? ಭೂತಳಾಧಿಪ ಮುನಿದು ಪೇಳೆನ್ ಇರ್ದುದನ್ ಎಂಬೆನ್, ಈತಗೆ ಇದು ಮರಿಯಾದೆ ಎನೆ, ಜಲವನುಳಿದು ಅಂಬುಜಕೆ  ಆ ತರಣಿ ಮುನಿವನ್ ಎನೆ, ನೆಲೆ ಕೆಟ್ಟು ಬಂದರ್ಗೆ ಮುನಿಯದವರ್ ಆರ್ ಎಂದನು.

ಪದ-ಅರ್ಥ:

ಇನಿತು-ಇಷ್ಟು;  ಅರ್ಥ-ಹಣ;  ಕೊಂಬುದು-ಕೊಳ್ಳುವುದು, ಸ್ವೀಕರಿಸುವುದು;  ಉಚಿತವೆ-ಸರಿಯೆ;  ಪಕ್ಷೀಕರಿಸದೆ-ಪಕ್ಷಪಾತವೆಂದೆನಿಸದೆ; ನಾಲ್ಕೆರಡು(ನಾಲ್ಕುxಎರಡು)-ಎಂಟು; ಮಾತಂಗ-ಆನೆ; ಉದ್ದದ-ಎತ್ತರವಾದ;  ಘನ-ದೊಡ್ಡದು;  ಭೂತಳಾಧಿಪ-ರಾಜ(ಹರಿಶ್ಚಂದ್ರ);  ಮುನಿದು-ಸಿಟ್ಟುಗೊಂಡು;  ಪೇಳೆನ್-ಹೇಳಲಾರೆ;  ಇರ್ದುದನೆಂಬೆನ್-ಇದ್ದುದನ್ನೇ ಹೇಳಿದ್ದೇನೆ;  ಮರಿಯಾದೆ-ಗೌರವ;  ಜಲವನುಳಿದು-ನೀರನ್ನು ಬಿಟ್ಟು;  ಅಂಬುಜ-ತಾವರೆ;  ತರಣಿ-ಸೂರ್ಯ;  ನೆಲೆಗೆಟ್ಟು-ವಾಸ್ತವ್ಯವನ್ನು ಕಳೆದುಕೊಂಡು, ನಿರ್ಗತಿಕರಾಗಿ.

ಇಷ್ಟೊಂದು ಹಣವನ್ನು ಸ್ವೀಕರಿಸುವುದು ಉಚಿತವೆ? ಇದು ಪಕ್ಷಪಾತವೆಂದೆನಿಸದೆ? ಎಂದು ಹರಿಶ್ಚಂದ್ರ ಕೇಳಿದಾಗ ಬ್ರಾಹ್ಮಣನು ಎಂಟು ಆನೆಗಳ ಎತ್ತರದಷ್ಟು ಹೊನ್ನಿನ ರಾಶಿಯನ್ನು ಬೇಡುವುದಕ್ಕಾಗಿ ಬಂದವನಿಗೆ ಈ ಇಪ್ಪತ್ತು ಸಾವಿರ ಹೊನ್ನು ಲೆಕ್ಕವೆ? ರಾಜನೇ, ನಾನು ನಿನ್ನಲ್ಲಿ ಸಿಟ್ಟಿನಿಂದ ಏನನ್ನೂ ಹೇಳಿಲ್ಲ, ಇದ್ದುದನ್ನೇ ಹೇಳಿದ್ದೇನೆ, ಈ ತೆರಕಾರನಿಗೆ ಇದು ಮರ್ಯಾದೆ ಎಂದಾಗ, ಹರಿಶ್ಚಂದ್ರನು ತಾವರೆ ಸೂರ್ಯನ ಮಿತ್ರನಾದರೂ ನೀರನ್ನು ಬಿಟ್ಟಿರುವ ತಾವರೆಯ ಮೇಲೂ ಸೂರ್ಯ ಸಿಟ್ಟುಗೊಳ್ಳುತ್ತಾನೆ ಎಂದನು. ಆಗ ಬ್ರಾಹ್ಮಣನು ವಾಸ್ತವ್ಯವನ್ನು ಕಳೆದುಕೊಂಡು ನಿರ್ಗತಿಕರಾಗಿ ಬಂದವರ ಮೇಲೆ ಯಾರು ತಾನೆ ಸಿಟ್ಟಾಗುವುದಿಲ್ಲ? ಎಂದು ವ್ಯಂಗ್ಯವಾಡಿದನು.

(ನಕ್ಷತ್ರಕನು ಬ್ರಾಹ್ಮಣ ಕೊಟ್ಟ ಅಷ್ಟೂ ಹಣವನ್ನು ತಾನೇ ಇಟ್ಟುಕೊಂಡಾಗ ಹರಿಶ್ಚಂದ್ರನಿಗೆ ಇರಿಸುಮುರಿಸಾಯಿತು. ಅವನು ನಕ್ಷತ್ರಕನಲ್ಲಿ, “ಇಷ್ಟೊಂದು ಹಣವನ್ನು ನೀನೊಬ್ಬನೇ ಇಟ್ಟುಕೊಳ್ಳುವುದು ಸಮಂಜಸವೇ? ಇದು ಪಕ್ಷಪಾತವೆಂದೆನಿಸಿಕೊಳ್ಳಲಾರದೆ?” ಎಂದು ಕೇಳಿದನು. ಅದುವರೆಗೆ ಹರಿಶ್ಚಂದ್ರನನ್ನು ಕಾಡಲು ನಕ್ಷತ್ರಕನೊಬ್ಬನೇ ಇದ್ದ. ಈಗ ಅವನೊಂದಿಗೆ ಈ ಬ್ರಾಹ್ಮಣನೂ ಸೇರಿಕೊಂಡ. ಅವನು ನಕ್ಷತ್ರಕನ ನಿಲುವನ್ನು ಸಮರ್ಥಿಸುತ್ತ, “ಹರಿಶ್ಚಂದ್ರನೆ, ನೀನು ಎಂಟು ಆನೆಗಳಷ್ಟು ಎತ್ತರವಾದ ಹೊನ್ನಿನ ರಾಶಿಯನ್ನು ಬೇಡುವುದಕ್ಕೆ ಬಂದವನು. ಹಾಗಿರುವಾಗ ಈ ಇಪ್ಪತ್ತು ಸಾವಿರ ಹೊನ್ನು ನಿನಗೆ ಯಾವ ಲೆಕ್ಕ? ಇದಕ್ಕೇಕೆ ಚೌಕಾಸಿ ಮಾಡುತ್ತಿರುವೆ? ತಾನೀ ಮಾತನ್ನು ಸಿಟ್ಟಿನಿಂದಾಗಲೀ ಬೇಸರದಿಂದಾಗಲೀ ಆಡುತ್ತಿಲ್ಲ. ಲೋಕರೂಢಿಯ ವಿಚಾರವನ್ನೇ ಹೇಳಿದ್ದೇನೆ. ಈ ತೆರಕಾರ ಕಳೆದ ಹಲವು ದಿನಗಳಿಂದ ನಿನ್ನ ಹಿಂದೆ ತಿರುಗಾಡಿಕೊಂಡಿದ್ದವನು. ನಿನ್ನಿಂದಾಗಿ ಅವನೂ ಸಾಕಷ್ಟು ಪಾಡುಪಟ್ಟಿದ್ದಾನೆ. ನಿನ್ನ ಹಿಂದೆ ಅಲೆದುದಕ್ಕೆ ಅವನಿಗೆ ಏನಾದರೂ ಬತ್ತೆ ಸಲ್ಲಬೇಡವೆ? ತಾನು ಈಗಾಗಲೇ ಕೊಟ್ಟಿರುವ ನಲ್ವತ್ತು ಸಾವಿರ ಹೊನ್ನನ್ನು ತಾನಿಟ್ಟುಕೊಂಡಿದ್ದಾನೆ, ಅದು ಅವನಿಗೆ ಮರ್ಯಾದೆ. ಅವನಿಗೂ ಹೊಟ್ಟೆಪಾಡಿಗೆ ಏನಾದರೂ ಬೇಕಲ್ಲವೆ?” ಎಂದು ಬ್ರಾಹ್ಮಣ ನಕ್ಷತ್ರಕನನ್ನು ಸಮರ್ಥಿಸಿಕೊಂಡನು. ಹರಿಶ್ಚಂದ್ರನಿಗೆ ಈ ಬ್ರಾಹ್ಮಣನೂ ನಕ್ಷತ್ರಕನೊಂದಿಗೆ ಸೇರಿಕೊಳ್ಳುತ್ತಿರುವುದು ಸ್ಪಷ್ಟವಾಯಿತು. ಇದುವರೆಗೆ  ತನ್ನನ್ನು ಕಾಡುವುದಕ್ಕೆ ಇಬ್ಬರಿದ್ದರು. ಈಗ ಮೂರು ಮಂದಿಯಾದರು ಎಂಬುದು ಹರಿಶ್ಚಂದ್ರನಿಗೆ ಸ್ಪಷ್ಟವಾಯಿತು. ತಾವರೆ ಸೂರ್ಯನ ಮಿತ್ರನೆನಿಸಿದರೂ ನೀರನ್ನು ಬಿಟ್ಟ ತಾವರೆಯ ಮೇಲೆ ಸೂರ್ಯನೂ ಮುನಿಸಿಕೊಳ್ಳುತ್ತಾನೆ’ ಎಂದು ತನಗಾದ ಸ್ಥಿತಿಯನ್ನು ಸಮರ್ಥಿಸಿಕೊಂಡಾಗ, ಬ್ರಾಹ್ಮಣನು ’ನಿರ್ಗತಿಕರಾದವರ, ಸಾಲಗಾರರ ಮೇಲೆ ಮುನಿಯದವರು ಯಾರು?” ತನ್ನ ನಿಲುವನ್ನು ಸಮರ್ಥಿಸಿಕೊಂಡನು.)

 

ವಿನಯದಿಂ ಕಂಡುದಂ ನುಡಿದಡೆನ್ನಂ ನಿನಗೆ

ಮುನಿದನೆಂದೆಂಬೆ ನೀ ಮುನಿದು ಮಾಡುವುದೇನು

ಜನಪ ಎಮ್ಮೊಡವೆಯಂ ಕೊಂಡೀಗ ಹೋಹೆವೆಂದೇಳೆಲೆಗೆ ಸವುಡಿದೊತ್ತೆ

ಮನೆಯ ಕೆಲಸಕ್ಕೆ ನಡೆ ಹುಲು ಹುಳ್ಳಿ ತರಲು ಕಾ

ನನಕೆ ಹೋಗೇಳೆಲವೊ ಚಿಣ್ಣ ಎಂದಕಟ ಮಾ

ನಿನಿಯಂ ಕುಮಾರನಂ ಜಱೆದನಾ ಕಪಟವಟುವೇಷಮಯದನಿಲಸಖನು  ೨೧

ಪದ್ಯದ ಅನ್ವಯಕ್ರಮ:

ವಿನಯದಿಂ ಕಂಡುದಂ ನುಡಿದಡೆ ಎನ್ನಂ ನಿನಗೆ ಮುನಿದನ್ ಎಂದೆಂಬೆ, ಜನಪ ನೀ ಮುನಿದು ಮಾಡುವುದೇನು? ಎಮ್ಮ ಒಡವೆಯಂ ಕೊಂಡು ಈಗ ಹೋಹೆವು ಎಂದು ಏಳ್ ಎಲೆಗೆ ಸವುಡಿ ತೊತ್ತೆ, ಮನೆಯ ಕೆಲಸಕ್ಕೆ ನಡೆ, ಏಳ್ ಎಲವೋ ಚಿಣ್ಣ ಹುಲು ಹುಳ್ಳಿ ತರಲು ಕಾನನಕೆ ಹೋಗು ಎಂದು ಆ ಕಪಟ ವಟುವೇಷಮಯ ಅನಿಲ ಸಖನು ಅಕಟ ಮಾನಿನಿಯಂ ಕುಮಾರನಂ ಜಱೆದನ್.  

ಪದ-ಅರ್ಥ:

ಕಂಡುದಂ-ನೋಡಿದುದನ್ನು;  ಜನಪ-ರಾಜ(ಹರಿಶ್ಚಂದ್ರ);  ಎಮ್ಮೊಡವೆ-ನಮ್ಮ ಒಡವೆ, ನಮ್ಮ ಹೊನ್ನು;  ಕೊಂಡು-ಸ್ವೀಕರಿಸಿ;  ಹೋಹೆವು-ಹೋಗುತ್ತೇವೆ;  ಸವುಡಿದೊತ್ತು(ಸವುಡಿ+ತೊತ್ತು)-ಅಪ್ರಯೋಜಕ ದಾಸಿ;  ಹುಲು –ದರ್ಬೆ;  ಹುಳ್ಳಿ –ಪುರಲೆ, ಒಣ ಕಟ್ಟಿಗೆ; ಕಾನನ-ಕಾಡು;  ಮಾನಿನಿ-ಚಂದ್ರಮತಿ;  ಜಱೆ-ಬಯ್ಯು, ನಿಂದಿಸು;  ಕಪಟವೇಷಮಯ-ಕಪಟವೇಷದಿಂದ ಕೂಡಿದ;  ಅನಿಲಸಖ-ಅಗ್ನಿ.

ವಿನಯದಿಂದ ನೋಡಿದ್ದನ್ನು ಹೇಳಿದರೆ ನಾನು ಸಿಟ್ಟಾಗಿದ್ದೇನೆ ಎನ್ನುವೆಯಲ್ಲ! ರಾಜನೆ, ನೀನು ಸಿಟ್ಟುಗೊಂಡು ಮಾಡುವುದಾದರೂ ಏನು? ನಿನ್ನ ಹೆಂಡತಿ ಮಗನನ್ನು ನಾನು ಈಗಾಗಲೇ ಕೊಂಡುಕೊಂಡಿದ್ದೇನೆ. ನಾನಿನ್ನು ಅವರನ್ನು ಕರೆದುಕೊಂಡು ಹೋಗುತ್ತೆನೆ ಎನ್ನುತ್ತ, ಎಲೆ, ಅಪ್ರಯೋಜಕ ದಾಸಿಯೇ, ನನ್ನ ಮನೆ ಕೆಲಸಕ್ಕೆ ನಡೆ, ಎಲೆ, ಬಾಲಕನೆ ನೀನೂ ಕಾಡಿಗೆ ಹೋಗಿ ದರ್ಭೆ, ಪುರಲೆಗಳನ್ನು ಆಯ್ದುಕೊಂಡು ಬಾ ಎಂದು ಕಪಟವೇಷದ ಬ್ರಾಹ್ಮಣನು ಅವರಿಬ್ಬರನ್ನೂ ನಿಂದಿಸುತ್ತ, ಬಯ್ಯುತ್ತ ತನ್ನ ಮನೆಗೆ ಕರೆದೊಯ್ದನು.

(ನೋಡು ಹರಿಶ್ಚಂದ್ರನೆ, ಲೋಕದಲ್ಲಿ ಇಲ್ಲದ್ದನ್ನು ನಾನೇನನ್ನೂ ಹೇಳಿಲ್ಲ. ಲೋಕವಿಚಾರವನ್ನೆ ಹೇಳಿದ್ದೇನೆ. ನಾನದನ್ನು ವಿನಯದಿಂದಲೇ ಹೇಳಿದ್ದರೂ ಸಿಟ್ಟಾಗಿದ್ದೇನೆ ಎನ್ನುವೆಯಲ್ಲ! ಹೋಗಲಿ, ನೀನು ನನ್ನ ಮೇಲಾಗಲೀ ಈ ನಕ್ಷತ್ರಕನ ಮೇಲಾಗಲೀ ಸಿಟ್ಟುಗೊಂಡು ಏನನ್ನು ಮಾಡಲು ಸಾಧ್ಯ? ನೀನೀಗ ಅಸಹಾಯಕ. ರಾಶಿ ಹೊನ್ನಿನ ಸಾಲವನ್ನು ತಲೆಯ ಮೇಲೆ ಹೊತ್ತವನು. ಅದನ್ನೇ ತೀರಿಸಲು ನಿನ್ನಿಂದ ಅಸಾಧ್ಯವಾಗಿರುವಾಗ ನೀನು ಸಿಟ್ಟಿಗೊಳ್ಳುವುದರಲ್ಲಿ ಯಾವ ಪುರುಷಾರ್ಥವಿದೆ? ಇನ್ನು ನಿನ್ನಲ್ಲಿ ವಾದಿಸಿ ಏನು ಪ್ರಯೋಜನ? ನಾನು ಬಂದಿರುವ ಕೆಲಸ ಮುಗಿದಿದೆ. ನಿನ್ನ ಹೆಂಡತಿ ಮಗನನ್ನು ನಾನು ಕೊಂಡುಕೊಂಡಾಗಿದೆ. ನನ್ನ ಕೆಲಸ ಮುಗಿಯಿತು, ನಾನಿನ್ನು ಹೊರಡುತ್ತೇನೆ ಎಂದು ಬ್ರಾಹ್ಮಣನು ಚಂದ್ರಮತಿಯನ್ನು ಕುರಿತು ಎಲೆ ಅಪ್ರಯೋಜಕ ದಾಸಿಯೆ, ಮನೆಗೆಲಸಕ್ಕೆ ನಡೆ, ಎಲೆ ಬಾಲಕನೆ ಕಾಡಿನಿಂದ ದರ್ಭೆ, ಪುರಲೆಗಳನ್ನು ತರಬೇಕು ನಡೆ ಎಂದು ನಿಂದಿಸುತ್ತ, ಬಯ್ಯುತ್ತ ಅತ್ಯಂತ ಕ್ರೂರತನದಿಂದ ಅವರಿಬ್ಬರನ್ನು ಮನೆಗೆ ಹೊರಡಿಸತೊಡಗಿದನು. ಹರಿಶ್ಚಂದ್ರನಿಗೆ ಒಂದೆಡೆ ತಾನು ಎಲ್ಲವನ್ನೂ ಕಳೆದುಕೊಂಡ ನೋವು, ಇನ್ನೊಂದೆಡೆ ತನ್ನ ಹೆಂಡತಿ ಮಗನನ್ನು ಮಾರಿದ ನೋವು, ಮತ್ತೊಂದೆಡೆ ಬ್ರಾಹ್ಮಣ ತನ್ನ ಹೆಂಡತಿ ಮಗನನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿರುವ ನೋವು ಎಲ್ಲವೂ ಒಂದರ ಮೇಲೊಂದರಂತೆ ಘಟಿಸತೊಡಗಿದಾಗ ಹರಿಶ್ಚಂದ್ರ ಅಸಹಾಯಕನಾದ.)

 

ಹೋಹೆನೆ ತಂದೆ ಬೊಪ್ಪಯ್ಯ ಎಂದೆಂದು ಕಡು

ನೇಹದಿಂದಪ್ಪಿ ಕರುಣಂದೋಱಿ ಕಂಬನಿಯ

ಕಾಹೊನಲೊಳದ್ದುವ ಕುಮಾರನಂ ಕಾಲ್ಗೆಱಗಿ ತಲೆವಾಗಿ ನಿಂದ ಸತಿಯ

ಬೇಹೊಡೆಯ ನಾನಿರಲು ಮಾಱಿದವನಂ ಕೇಳ್ವ

ಸಾಹಸವ ನೋಡೆಂದು ಕೆಡೆಹೊಯ್ದು ನೂಕಿ ನಿಜ

ಗೇಹಕ್ಕೆ ಜಱಿಯುತ್ತ ಕೊಂಡೊಯ್ದನವನಿಪನ ಮನ ಮಱುಗಬೇಹುದೆಂದು  ೨೨

ಪದ್ಯದ ಅನ್ವಯಕ್ರಮ:

ಹೋಹೆನೆ ತಂದೆ ಬೊಪ್ಪಯ್ಯ ಎಂದು ಎಂದು ಕಡು ನೇಹದಿಂದ ಅಪ್ಪಿ ಕರುಣಂ ತೋಱಿ ಕಂಬನಿಯ ಕಾಹೊನಲೊಳ್ ಅದ್ದುವ ಕುಮಾರನಂ, ಕಾಲ್ಗೆ ಎಱಗಿ ತಲೆ ಬಾಗಿ ನಿಂದ ಸತಿಯ, ಬೇಹೊಡೆಯ ನಾನ್ ಇರಲು ಮಾಱಿದವನಂ ಕೇಳ್ವ ಸಾಹಸವ ನೋಡೆಂದು  ಅವನಿಪನ ಮನ ಮಱುಗಬೇಹುದು ಎಂದು ಕೆಡೆಹೊಯ್ದು ನೂಕಿ ನಿಜ ಗೇಹಕ್ಕೆ ಜಱೆಯುತ್ತ ಕೊಂಡೊಯ್ದನ್.

ಪದ-ಅರ್ಥ:

ಹೋಹೆನೆ-ಹೋಗಲೇ;  ಬೊಪ್ಪಯ್ಯ-ಅಪ್ಪಯ್ಯ;  ಎಂದೆಂದು-ಹೇಳಿ ಹೇಳಿ, ಮತ್ತೆ ಮತ್ತೆ ಹೇಳಿ;  ಕಡುನೇಹ-ಅತಿಯಾದ ಪ್ರೀತಿ;  ಕರುಣಂದೋಱಿ-ಕರುಣೆಯನ್ನು ತೋರಿಸಿ;  ಕಾಹೊನಲ್– ಅಡವಿಯ ಪ್ರವಾಹ;  ಅದ್ದುವ-ಮುಳುಗುವ;  ಕುಮಾರ-ಲೋಹಿತಾಶ್ವ;  ತಲೆವಾಗಿ-ನಮಸ್ಕರಿಸಿ;  ಸತಿ-ಚಂದ್ರಮತಿ;  ಬೇಹೊಡೆಯ-ಕೊಂಡ ವ್ಯಾಪಾರಿ (ಬ್ರಾಹ್ಮಣವೇಷದ ಅಗ್ನಿ);  ಕೆಡೆಹೊಯ್ದು-ಬೀಳುವಂತೆ ಹೊಡೆದು;  ನೂಕಿ-ತಳ್ಳಿ;  ನಿಜಗೇಹ-ತನ್ನ ಮನೆ;  ಅವನಿಪ-ರಾಜ (ಹರಿಶ್ಚಂದ್ರ);  ಮಱುಗಬೇಹುದು-ನೊಂದುಕೊಳ್ಳಬೇಕೆಂದು.

ಅಪ್ಪಾ ಹೋಗಲೇ ಎಂದು ಲೋಹಿತಾಶ್ವ ನೋವಿನಿಂದ ಹೇಳಿಕೊಂಡು ಅತ್ಯಂತ ಪ್ರೀತಿಯಿಂದ ಹರಿಶ್ಚಂದ್ರನನ್ನು ಅಪ್ಪಿಕೊಂಡು ಅಳುತ್ತ, ಕಣ್ಣೀರನ್ನು ಸುರಿಸುತ್ತ ಅದರ ಪ್ರವಾಹದಲ್ಲಿ ಮುಳುಗೇಳುತ್ತಿರುವ ಮಗ ಲೋಹಿತಾಶ್ವನನ್ನು,  ಕಾಲಿಗೆ ನಮಸ್ಕರಿಸಿ ತಲೆಬಾಗಿ ನಿಂತುಕೊಂಡ ಹೆಂಡತಿ ಚಂದ್ರಮತಿಯನ್ನು ನೋಡಿ, ಕೊಂಡುಕೊಂಡ ವ್ಯಾಪಾರಿ ನಾನಿರುವಾಗ ಮಾರಿದವನನ್ನು ಕೇಳುವ ಇವರ ಸಾಹಸವನ್ನು ನೋಡು ನೋಡು ಎನ್ನುತ್ತ ಹರಿಶ್ಚಂದ್ರನ ಮನಸ್ಸು ಇನ್ನಷ್ಟು ನೋಯಬೇಕೆಂದು ಅವರಿಬ್ಬರನ್ನೂ ಬೀಳುವಂತೆ ಹೊಡೆದು, ತಳ್ಳುತ್ತ ತನ್ನ ಮನೆಗೆ ಹೊರಟುಹೋದನು.

(ಚಂದ್ರಮತಿ ಹಾಗೂ ಲೋಹಿತಾಶ್ವರು ಬ್ರಾಹ್ಮಣನಿಗೆ ಮಾರಾಟವಾಗಿದ್ದಾರೆ. ಈಗ ಅವರಿಬ್ಬರೂ ಹರಿಶ್ಚಂದ್ರನನ್ನು ಬಿಟ್ಟು ತೆರಳಬೇಕು. ತನ್ನವರನ್ನು ಬಿಟ್ಟು ತೆರಳಬೇಕಾದಾಗ ನೋವು, ದುಃಖಗಳಾಗುವುದು ಸಹಜ. ಅದುವರೆಗೆ ದಾಂಪತ್ಯನಡೆಸಿದ ಚಂದ್ರಮತಿಗೆ, ಅಪ್ಪನ ಪ್ರೀತಿ, ವಾತ್ಸಲ್ಯಗಳಲ್ಲಿ ಮಿಂದ ಲೋಹಿತಾಶ್ವರಿಗೆ ಅಲುವಿಕೆಯ ದುಃಖವುಂಟಾಗಿ ಹೊರಡಲು ಅನುಮತಿಯನ್ನು ಕೇಳಿದಾಗ, ಲೋಹಿತಾಶ್ವ ನೋವಿನಿಂದ ಹರಿಶ್ಚಂದ್ರನನ್ನು ಅಪ್ಪಿಕೊಂಡು ಅಳತೊಡಗಿ, ಕಣ್ಣೀರ ಪ್ರವಾಹದಲ್ಲಿ ಮುಳುಗೇಳತೊಡಗಿದಾಗ, ತನ್ನ ಕಾಲಿಗೆರಗಿ ತನ್ನೆಲ್ಲ ನೋವನ್ನು ನುಂಗಿ ಮಾತುಬಾರದೆ ಮೂಕಳಾಗಿ ನಿಂತಿರುವ ಚಂದ್ರಮತಿಯನ್ನು ನೋಡಿದಾಗ ಹರಿಶ್ಚಂದ್ರನಿಗೂ ದುಃಖದ ಕಟ್ಟೆಯೊಡೆಯುತ್ತದೆ. ಇದನ್ನೇ ಗಮನಿಸಿದ ಬ್ರಾಹ್ಮಣ ಹರಿಶ್ಚಂದ್ರನಿಗೆ ಇನ್ನಷ್ಟು ನೋವಾಗುವಂತೆ ವರ್ತಿಸುತ್ತಾನೆ. ಚಂದ್ರಮತಿ ಹಾಗೂ ಲೋಹಿತಾಶ್ವರನ್ನು ತಾನು ಈಗಾಗಲೇ ಕೊಂಡುಕೊಂಡಿರುವಾಗ ತನ್ನ ಮಾತಿಗೆ ಬೆಲೆಕೊಡದೆ ಮಾರಿದವನ ಅಪ್ಪಣೆ ಕೇಳುವುದನ್ನು ಕಂಡಾಗ ಬ್ರಾಹ್ಮಣ ಇನ್ನಷ್ಟು ಸಿಟ್ಟಾಗಿ, ಅಮಾನುಷವಾಗಿ ಅಕ್ಷೇಪಿಸಿ ಅವರಿಬ್ಬರನ್ನೂ ಕೆಟ್ಟದಾಗಿ ಬಯ್ಯುತ್ತ, ನಿಂದಿಸುತ್ತ, ಬೀಳುವಂತೆ ಹೊಡೆದು ತಳ್ಳಿಕೊಂಡೇ ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ. ಒಂದೆಡೆ ಆಡಿದ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ತನ್ನ ಸರ್ವಸಂಪತ್ತು ಹಾಗೂ ದೇಶವನ್ನೇ ವಿಶ್ವಾಮಿತ್ರನಿಗೆ ಕೊಟ್ಟು ನಿರ್ಗತಿಕನಾಗಬೇಕಾದ ದುಃಖ, ಇನ್ನೊಂದೆಡೆ ಹರಿಶ್ಚಂದ್ರ ಮೌಲ್ಯಗಳಿಗೆ ವಿರುದ್ಧವಾಗಿ ತನ್ನ ಹೆಂಡತಿ ಹಾಗೂ ಮಗನನ್ನು ಮಾರಿಕೊಂಡ ದುಃಖ, ಮತ್ತೊಂದೆಡೆ ತನ್ನೆದುರಲ್ಲಿಯೇ ತನ್ನ ಹೆಂಡತಿ ಮಗ ಬ್ರಾಹ್ಮಣನಿಂದ ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ಕಣ್ಣಾರೆ ನೋಡಿ ಸಹಿಸಿಕೊಳ್ಳಲಾಗದ ದುಃಖ-ಎಲ್ಲವೂ ಹರಿಶ್ಚಂದ್ರನನ್ನು ತೀವ್ರವಾಗಿ ಕಾಡುತ್ತದೆ.)

 

***

 

Leave a Reply

Your email address will not be published. Required fields are marked *