ಸಾಹಿತ್ಯಾನುಸಂಧಾನ

heading1

ಸಿರಿಗರದ ಮಹಿಮೆ

ಹಾವು ತಿಂದವರ ನುಡಿಸಬಹುದು!

ಗರ ಹೊಡೆದವರ ನುಡಿಸಬಹುದು!

ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ!

ಬಡತನವೆಂಬ ಮಂತ್ರವಾದಿ ಹೊಗಲು

ಒಡನೆ ನುಡಿವರಯ್ಯ ಕೂಡಲಸಂಗಮದೇವಾ

                                                                      -ಬಸವಣ್ಣ.

          ಬಸವಣ್ಣನವರು ಈ ವಚನದಲ್ಲಿ ಸಿರಿವಂತಿಕೆ ಹಾಗೂ ಸಿರಿವಂತರ ದುರಹಂಕಾರಗಳನ್ನು ಎರಡು ದೃಷ್ಟಾಂತಗಳ ಮೂಲಕ ವಿಡಂಬಿಸಿದ್ದಾರೆ. ಸಿರಿವಂತರ ದರ್ಪ ಹಾಗೂ ಅಹಂಕಾರಗಳು ಕಾಲದಿಂದ ಕಾಲಕ್ಕೆ ವಿವಿಧ ರೂಪಗಳನ್ನು ತಾಳಿಕೊಂಡೇ ಬಂದಿವೆ. ಹಾವು ತಿಂದವರನ್ನು ಅಂದರೆ ಹಾವಿನಿಂದ ಕಡಿಸಿಕೊಂಡವರನ್ನು ಸುಲಭವಾಗಿ ಮಾತನಾಡಿಸಬಹುದು. ಹಾವಿನ ವಿಷದಿಂದ ಅವರು ಸಾವಿನ ಪರಿಸ್ಥಿತಿಯಲ್ಲಿದ್ದು ಭಯಭೀತರಾಗಿದ್ದರೂ  ಅಂತಹವರನ್ನು ಮಾತನಾಡಿಸಿ ಆರೋಗ್ಯ ವಿಚಾರಿಸಬಹುದು. ಅವರು ತಮ್ಮನ್ನು ತಾವು ಸಂಬಾಳಿಸಿಕೊಂಡು ಮಾತನಾಡಬಲ್ಲರು. ಹಾಗೆಯೇ ಗರ(ಭೂತ) ಹೊಡೆದವರು ಅತಿಮಾನುಷವಾಗಿ ವರ್ತಿಸುತ್ತಿದ್ದರೂ ಭಯಹುಟ್ಟಿಸುವಂತಿದ್ದರೂ ಅವರನ್ನು ಮಾತನಾಡಿಸಲು ಪ್ರಯತ್ನಿಸಿದರೆ ಅವರು ಎಂತಹ  ಆವೇಶದಲ್ಲಿದ್ದರೂ ಮಾತನಾಡಬಲ್ಲರು.

          ಆದರೆ ಸಿರಿಗರ(ಸಂಪತ್ತಿನ ಭೂತ) ಹೊಡೆದವರನ್ನು (ಸಿರಿವಂತರನ್ನು) ಸುಲಭವಾಗಿ ಮಾತನಾಡಿಸಲು ಸಾಧ್ಯವಿಲ್ಲ. ಅವರು ತಮ್ಮ ಸಮಾನರನ್ನು(ಸಿರಿವಂತರಾಗಿರುವವರನ್ನು) ಮಾತ್ರ ಮಾತನಾಡಿಸುತ್ತಾರೆಯೇ ಹೊರತು ಅನ್ಯರನ್ನು ಕಣ್ಣೆತ್ತಿಯೂ ನೋಡಲಾರರು. ಸಿರಿಗರ ಬಡಿದವರು ಭೂತಬಡಿದವರ ಹಾಗೆಯೇ ಅತಿಮಾನುಷವಾಗಿ ವರ್ತಿಸುತ್ತಿರುತ್ತಾರೆ. ಅವರಲ್ಲಿ ತಮ್ಮ ಬಗೆಗಿನ ಮೇಲರಿಮೆ, ಇತರರ ಬಗೆಗಿನ ಕೀಳರಿಮೆ, ಮೋಸ, ದಬ್ಬಾಳಿಕೆ, ಹಿಂಸೆಗಳೆಲ್ಲವೂ ಬೆರೆತುಕೊಂಡಿರುತ್ತವೆ. ಇತರರನ್ನು ಅತ್ಯಂತ ಕೀಳಾಗಿ ಕಾಣುವ ಮನೋಭಾವ ಎದ್ದುಕಾಣುತ್ತಿರುತ್ತದೆ. ಹಣಬಲದಿಂದ ಎಲ್ಲವನ್ನೂ ಸಾಧಿಸಿಕೊಳ್ಳುತ್ತ, ತಮಗಾಗದವರನ್ನು ತುಳಿದು ನಾಶಮಾಡುತ್ತ ಸಮಾಜದ್ರೋಹಿಗಳಾಗಿ, ಲೋಕಕಂಟಕರಾಗಿ ಭಗವಂತನನ್ನೂ ಮರೆತು ಬದುಕುತ್ತಿರುತ್ತಾರೆ.  ಆದರೆ ಅವರೂ ಮಾತನಾಡಬಲ್ಲರು. ಯಾವಾಗ ಅವರ ಬದುಕಿನಲ್ಲಿ ‘ಬಡತನ’ ಎಂಬ ಮಂತ್ರವಾದಿ ಪ್ರವೇಶಮಾಡುತ್ತಾನೋ ಆ ಕ್ಷಣದಲ್ಲಿಯೇ ಅವರೂ ಜನಸಾಮಾನ್ಯರ ರೀತಿಯಲ್ಲಿ ಮಾತನಾಡಬಲ್ಲರು. ಸುಖಕಷ್ಟ ವಿಚಾರಿಸಬಲ್ಲರು, ಭಗವಂತನನ್ನೂ ಸ್ಮರಿಸಬಲ್ಲರು. ಬಡತನಕ್ಕೂ ಸಿರಿವಂತರನ್ನು ಮಾತನಾಡಿಸುವಂತೆ ಮಾಡುವ ಶಕ್ತಿಯಿದೆ. ಸಿರಿಗರವನ್ನು, ಅದರ ಪ್ರಭಾವವನ್ನು ಮರೆಸಬೇಕಾದರೆ, ಮತ್ತು ಅದರಿಂದ ಉಂಟಾದ ಕೆಡುಕನ್ನು ತಡೆಯಬೇಕಾದರೆ ಬಡತನವೆಂಬ ಮಂತ್ರವಾದಿಯೇ ಬೇಕಾಗುತ್ತಾನೆ.

          ಸಿರಿಗರ ಹಾಗೂ ಬಡತನಮಂತ್ರವಾದಿಗಳೆಂಬುದು ಬಸವಣ್ಣನವರು ಸೃಜಿಸಿರುವ ಎರಡು ಅರ್ಥಪೂರ್ಣ ರೂಪಕಗಳು. ಸಿರಿತನ ಹಾಗೂ ಭೂತ, ಬಡತನ ಹಾಗೂ ಮಂತ್ರವಾದಿ ಈ ಎರಡೂ ಪರಿಕಲ್ಪನೆಗಳು ಅವುಗಳಿಂದ ಉಂಟಾಗಬಹುದಾದ ಪರಿಣಾಮಗಳನ್ನು ಸ್ಪಷ್ಟಪಡಿಸುತ್ತವೆ. ಜಗತ್ತಿನ ವಾಸ್ತವಸತ್ಯವನ್ನು ಬಸವಣ್ಣನವರು ಇಲ್ಲಿ ಅರ್ಥಪೂರ್ಣವಾಗಿ ವಿಡಂಬಿಸಿದ್ದಾರೆ. ಅವರ ಕಾಲದಲ್ಲಿಯೂ ಸಿರಿವಂತ ಹಾಗೂ ಬಡವರ ನಡುವೆ ಅಗಾಧವಾದ ವ್ಯತ್ಯಾಸಗಳು ಇತ್ತೆಂಬುದೂ ಹಾಗೂ ಸಿರಿವಂತರಿಂದಾಗಿ  ಸಾಮಾಜಿಕವಾಗಿ ಅಸಮತೋಲನಗಳು ಉಂಟಾಗುತ್ತಿದ್ದವು ಎಂಬುದೂ ಸ್ಪಷ್ಟವಾಗುತ್ತದೆ.

          ಆಧುನಿಕಕಾಲದಲ್ಲಂತೂ ಸಿರಿಗರವೆಂಬುದು ಮಿತಿಮೀರಿ ಬೆಳೆದು ತನ್ನ ಕಬಂಧಬಾಹುಗಳನ್ನು ಎಲ್ಲೆಡೆ ಚಾಚಿಕೊಂಡಿದೆ. ಸಿರಿಗರ ಬಡಿದವರು ಮಿತಿಮೀರಿ ವರ್ತಿಸುತ್ತ, ಅಧಿಕಾರ ಚಲಾಯಿಸುತ್ತ, ಹಣಬಲದಿಂದಲೇ ಎಲ್ಲವನ್ನೂ ಕೊಂಡುಕೊಳ್ಳುವ, ತಮಗಾಗದವನ್ನು ನಾಶಮಾಡುವ, ಇತರರನ್ನು ತುಳಿದು ಬದುವ, ತಮ್ಮ ನೀತಿಬಾಹಿರ ಕಾರ್ಯಗಳೆಲ್ಲವನ್ನು ಮುಚ್ಚಿಹಾಕುವ ಹುನ್ನಾರ ನಡೆಸುತ್ತಲೇ ಇದ್ದಾರೆ. ಸಿರಿಗರ ಹೊಡೆದವರ ಸಂಖ್ಯೆಯೇ ಇಂದು ಅತಿಯಾಗಿರುವುದರಿಂದ ಇಂದು ಬಡತನವೆಂಬ ಮಂತ್ರವಾದಿ ತನ್ನ ಶಕ್ತಿಸಾಮರ್ಥ್ಯಗಳನ್ನು ಕಳೆದುಕೊಂಡಿದ್ದಾನೇನೋ ಎನಿಸುತ್ತದೆ. ಸಾಮಾಜಿಕ ಅಸಮತೋಲನ ಇಂದು ಹಿಂದಿಗಿಂತಲೂ ಅಧಿಕವಾಗಿದೆ. ಹಾಗಾಗಿ ಸಿರಿವಂತರ ಪಾಲಿಗೆ ಬಡತನವೆಂಬ ಮಂತ್ರವಾದಿ ಇನ್ನಷ್ಟು ಬಲಿಷ್ಠನಾಗಬೇಕಿದೆ. ಏನಿದ್ದರೂ ಬಸವಣ್ಣನವರ ಅಂದಿನ ಈ ಸಾಮಾಜಿಕ ವಿಡಂಬನೆ ಇಂದಿಗೂ ಪ್ರಸ್ತುತವೆನಿಸುತ್ತಿರುವುದು ಪರಮಸತ್ಯ.

***

Leave a Reply

Your email address will not be published. Required fields are marked *