ಸಾಹಿತ್ಯಾನುಸಂಧಾನ

heading1

ಕುವರಿಯಾದೊಡೆ ಕುಂದೇನು-ಸಂಚಿಯ ಹೊನ್ನಮ್ಮ – ಭಾಗ ೧

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ)

ತಂದೆ ತಾಯನು ಬಿಟ್ಟು ತನ್ನ ಕೈಗೆಡೆಯಾಗಿ

ಬಂದ ಸೊಸೆಯರ ಬಾಧಿಸದೆ

ಅಂದಂದಿಗುಡಿಗೆ ತೊಡಿಗೆಯೂಟ ಮೀಹಗ

ಳಿಂದ ಸಂತಸಗೊಳಿಸುವುದು.                     ೧

(ತಂದೆ ತಾಯನು ಬಿಟ್ಟು, ತನ್ನ ಕೈಗೆ ಎಡೆಯಾಗಿ ಬಂದ ಸೊಸೆಯನು ಬಾಧಿಸದೆ, ಅಂದಂದಿಗೆ ಉಡಿಗೆ, ತೊಡಿಗೆ, ಊಟ, ಮೀಹಗಳಿಂದ ಸಂತಸಗೊಳಿಸುವುದು)

ಹೆಣ್ಣೊಬ್ಬಳು ಮದುವೆಯಾಗಿ ತನ್ನ ತಂದೆ, ತಾಯಂದಿರನ್ನು ಬಿಟ್ಟು ತಮ್ಮ ಸುಪರ್ದಿಗೆ ಬಂದಾಗ ಅತ್ತೆ-ಮಾವಂದಿರು ತೊಂದರೆ ಕೊಡದೆ, ನಿಂದಿಸದೆ, ನೋಯಿಸದೆ, ಆಯಾ ಸಮಯಕ್ಕೆ ಸರಿಯಾಗಿ ಉಡುವುದಕ್ಕೆ ಬಟ್ಟೆಬರೆಗಳನ್ನು, ತೊಡುವುದಕ್ಕೆ ಬೇಕಾದ ಆಭರಣಗಳನ್ನು, ಹೊತ್ತಿಗೆ ಸರಿಯಾಗಿ ಸ್ನಾನ, ಊಟೋಪಚಾರಗಳನ್ನು ವ್ಯವಸ್ಥೆಗೊಳಿಸಿ ಸೊಸೆಯನ್ನು ಸಂತೋಷದಲ್ಲಿ ಇರಿಸಿಕೊಂಡು ಒಳ್ಳೆಯ ಬಾಂಧವ್ಯವನ್ನು ಹೊಂದಬೇಕು.

(ಸೊಸೆಯನ್ನು ನೋಡಿಕೊಳ್ಳಬೇಕಾದ ಕ್ರಮವನ್ನು ಸಂಚಿಯ ಹೊನ್ನಮ್ಮ ಈ ಪದ್ಯದಲ್ಲಿ ವಿವರಿಸಿದ್ದಾಳೆ. ಹೆಣ್ಣೊಬ್ಬಳು ಮದುವೆಯಾಗಿ ತನ್ನ ತಂದೆ ತಾಯಿಗಳನ್ನು, ಒಡಹುಟ್ಟಿದವರನ್ನು ಬಿಟ್ಟು ಗಂಡನ ಮನೆಗೆ ಬರುತ್ತಾಳೆ. ಗಂಡನಿಗೆ ಹೆಂಡತಿಯಾಗಿ ಅತ್ತೆ-ಮಾವಂದಿರಿಗೆ ಸೊಸೆಯಾಗಿ, ಮನೆಗೆ ಲಕ್ಷ್ಮೀಯಾಗಿ ಬದುಕುತ್ತಾಳೆ. ಸೊಸೆ ಬೇರೆ ಮನೆಯಿಂದ ಬಂದವಳಾದುದರಿಂದ, ಆಕೆಯ ಬುದ್ಧಿ ಇನ್ನೂ ಬೆಳೆಯದಿರುವುದರಿಂದ ಆಕೆಯಿಂದ ತಪ್ಪಾದಾಗ ಅದನ್ನು ಪ್ರೀತಿ, ವಿಶ್ವಾಸಗಳಿಂದ ತಿದ್ದಿ, ಆಕೆಯ ಮೇಲೆ ಪ್ರೀತಿ, ವಾತ್ಸಲ್ಯಗಳನ್ನು ತೋರಿ ಸಲಹಬೇಕು. ಸಣ್ಣಪ್ರಾಯದಲ್ಲಿಯೇ ಮದುವೆಯಾಗಿ ಬಂದಿರುವುದರಿಂದ ಸ್ನಾನದ ಸಮಯದಲ್ಲಿ ಹಾಗೂ ಹಸಿವೆಯಾದಾಗ ಹಿರಿಯರ ಮುಂದೆ  ಆಕೆ ಸಂಕೋಚಪಟ್ಟುಕೊಳ್ಳುವ ಸಾಧ್ಯತೆ ಇರುವುದರಿಂದ ಅದನ್ನು ಅರಿತುಕೊಂಡು ಅತ್ತೆಯಾದವಳು ಸಹಕರಿಸಬೇಕು. ಆಕೆಯ ದೈನಂದಿನ ಅವಶ್ಯಕತೆಗಳಿಗೆ ಮನ್ನಣೆಯನ್ನು ನೀಡಿ, ಹಿರಿಯರಾದ ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು,   ಮಗಳಿಗೆ ಸಮಾನವಾಗಿ ನೋಡಿಕೊಳ್ಳಬೇಕೆಂದೂ ಹೇಳುವ ಹೊನ್ನಮ್ಮ ಸುಖೀಸಂಸಾರದ ಆಶಯವನ್ನು ಹೊಂದಿರುವುದು ಕಂಡುಬರುತ್ತದೆ.)

 

ಬಸವಳಿಸದೆ ಪಳಿಯದೆ ಭಂಗಪಡಿಸದೆ

ಹಸಗೆಡಿಸದೆ ಹುದುಗಿಸದೆ

ಬಸಿರೊಳು ಬಂದ ಪೆಣ್ಮಕ್ಕಳ ಮರುಕವ

ಸೊಸೆಯರೆಡೆಯೊಳೆಸಗುವುದು            ೨

(ಬಸವಳಿಸದೆ, ಪಳಿಯದೆ, ಭಂಗಪಡಿಸದೆ, ಹಸಗೆಡಿಸದೆ, ಹುದುಗಿಸದೆ, ಬಸಿರೊಳು ಬಂದ ಪೆಣ್ಮಕ್ಕಳ ಮರುಕವ ಸೊಸೆಯರ ಎಡೆಯೊಳ್ ಎಸಗುವುದು)

ಮನೆಬೆಳಗಲು ಬಂದಿರುವ ಸೊಸೆಯಿಂದ ಹತ್ತಾರು ಕೆಲಸಗಳನ್ನು ಮಾಡಿಸಿ ಆಯಾಸಗೊಳಿಸದೆ, ವಿನಾಕಾರಣ ನಿಂದಿಸದೆ, ಹೆಜ್ಜೆಹೆಜ್ಜೆಗೂ ಅಡ್ಡಿಪಡಿಸದೆ, ದೈಹಿಕವಾಗಿ ಅಥವಾ ಮಾನಸಿಕವಾಗಿ ಅಸ್ತವ್ಯಸ್ತಗೊಳಿಸದೆ, ಅವಮಾನಗೊಳಿಸದೆ, ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಗಳಂದಿರ ಮೇಲೆ ತೋರುವ ಅನುಕಂಪವನ್ನು ಸೊಸೆಯರ ಮೇಲೂ ತೋರಬೇಕು.

(ಅತ್ತೆ, ಮಾವಂದಿರು ಸೊಸೆಗೆ ಕೊಡಬಹುದಾದ ಕಷ್ಟ, ಹಿಂಸೆಗಳನ್ನು ಈ ಪದ್ಯದಲ್ಲಿ ಹೊನ್ನಮ್ಮ ವಿವರಿಸಿದ್ದಾಳೆ. ಸಾಮಾನ್ಯವಾಗಿ ಅತ್ತೆ, ಮಾವಂದಿರು ಮಗಳಲ್ಲಿ ಇರಿಸಿಕೊಳ್ಳುವ ಪ್ರೀತಿ, ವಿಶ್ವಾಸಗಳನ್ನು ಸೊಸೆಯ ಮೇಲೆ ಇರಿಸಿಕೊಳ್ಳುವುದಿಲ್ಲ. ಸೊಸೆಯಿಂದಲೇ ಎಲ್ಲಾ ಮನೆಗೆಲಸಗಳನ್ನು ಮಾಡಿಸುವುದು, ವಿನಾಕಾರಣ ನಿಂದಿಸುವುದು, ಅವಳ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಪಡಿಸುವುದು, ಸ್ವಚ್ಛವಾಗಿರುವುದಕ್ಕೆ ಅವಕಾಶಕೊಡದೆ ಅಸ್ತವ್ಯಸ್ತಗೊಳಿಸುವುದು, ಅವಳ ಆಸೆ-ಆಕಾಂಕ್ಷೆಗಳನ್ನು ವಿಚಾರಿಸದೆ ತುಚ್ಛವಾಗಿ ಕಾಣುವುದು, ಕೀಳಾಗಿ ಕಂಡು ಅವಮಾನಗೊಳಿಸುವುದು ಸಾಮಾನ್ಯವಾದುದು. ಇವೆಲ್ಲವೂ ಒಂದು ಸಂಸಾರದ ನಾಶಕ್ಕೆ ಕಾರಣವಾಗುವುದರಿಂದ ಆ ರೀತಿಯ ಯಾವುದೇ ತೊಂದರೆಗಳನ್ನು ಕೊಡದೆ ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಹೆಣ್ಣುಮಕ್ಕಳ ಮೇಲೆ ತೋರುವ ಪ್ರೀತಿ, ವಿಶ್ವಾಸ, ಅನುಕಂಪಗಳನ್ನು ಸೊಸೆಯಂದಿರ ಮೇಲೂ ತೋರಿದರೆ ಮನೆ ಸಂತಸದ ಬೀಡಾಗುತ್ತದೆ, ಮನೆ ಬೆಳಗುತ್ತದೆ ಎಂಬುದು ಹೊನ್ನಮ್ಮನ ಅಭಿಪ್ರಾಯ. ಈ ಮಾತುಗಳಿಂದ ಒಂದು ಆರೋಗ್ಯಪೂರ್ಣ ಸಂಸಾರದ ಬಗೆಗಿನ ಹೊನ್ನಮ್ಮನ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಬಹುದು.)

 

ಬಸಿರನಿಟ್ಟಿಸಿಯುಣಬಡಿಸುವುದೊಳುಮುಡಿ

ಯೆಸಕವರಿತು ಮೀಯಿಸುವುದು

ಒಸೆದು ಸಿಂಗರಿಸುವುದೊಲಿದು ನೋಡುವುದಿಂತು

ಸೊಸೆಯರ ಸುಖಬಡಿಸುವುದು                             ೩

(ಬಸಿರ ನಿಟ್ಟಿಸಿ ಉಣಬಡಿಸುವುದು, ಒಳುಮುಡಿ ಎಸಕವರಿತು ಮೀಯಿಸುವುದು, ಒಸೆದು ಸಿಂಗರಿಸುವುದು, ಒಲಿದು ನೋಡುವುದು, ಇಂತು ಸೊಸೆಯರ ಸುಖ ಪಡಿಸುವುದು.)

ಸೊಸೆಯರ ಹೊಟ್ಟೆಯನ್ನು ಗಮನಿಸಿ ಹಸಿವಾಗಿದೆ ಎಂಬುದನ್ನು ಅರಿತುಕೊಂಡು ಅವರಿಗೆ ಉಣಬಡಿಸಬೇಕು, ಸೊಸೆಯರ ಕೇಶದ ಚೆಲುವನ್ನು ಅರಿತುಕೊಂಡು ಅವರಿಗೆ ಸ್ನಾನಮಾಡಿಸಿ, ತಲೆಬಾಚಿ ಪ್ರೀತಿಯಿಂದ ಅವರನ್ನು ಶೃಂಗರಿಸಬೇಕು, ಪ್ರೀತಿ-ವಾತ್ಸಲ್ಯಗಳಿಂದ ನೋಡಿಕೊಳ್ಳುತ್ತ ಸೊಸೆಯಂದಿರನ್ನು ಖುಷಿಪಡಿಸಬೇಕು.

(ಹೊನ್ನಮ್ಮನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಸಣ್ಣಪ್ರಾಯದಲ್ಲಿ ಮದುವೆಯಾಗಿ ಗಂಡನ ಮನೆಗೆ ಬರುವುದರಿಂದ ಸೊಸೆಯಂದಿರಿಗೆ ಅತ್ತೆಮಾವಂದಿರ ಜೊತೆ ಮಾತಾಡಲು, ಹಸಿವೆಯಾಗಿದೆ ಎಂದು  ಹೇಳಲು ಅಂಜಿಕೆ, ಭಯಗಳಿರುವುದರಿಂದ ಅತ್ತೆ ಮಾವಂದಿರೇ ಆಕೆಯ ಹೊಟ್ಟೆಯನ್ನು ಗಮನಿಸಿ ಹಸಿವಾಗಿದೆ ಎಂಬುದನ್ನು ಅರ್ಥಮಾಡಿಕೊಂದು ಉಣಬಡಿಸಬೇಕು. ಆಕೆ ಸ್ವತಃ ಸ್ನಾನಮಾಡಲು, ತಲೆಗೂದಲನ್ನು ತೊಳೆಯಲು, ತಲೆಬಾಚಲು ಅಸಮರ್ಥಳಾಗಿರುವುದರಿಂದ ಅತ್ತೆ, ಸೊಸೆಯನ್ನು ತನ್ನ ಮಗಳೆಂದೇ ಭಾವಿಸಿ ಸಹಕರಿಸಬೇಕು. ಸೊಸೆಯಂದಿರು ಸಣ್ಣವರಾಗಿರುವುದರಿಂದ ಬಗೆಬಗೆಯ ಬಟ್ಟೆಗಳನ್ನು ಧರಿಸಲು, ಹೂಮುಡಿದುಕೊಳ್ಳಲು, ಶೃಂಗರಿಸಿಕೊಳ್ಳಲು ಬಯಸುವುದರಿಂದ ಅತ್ತೆಯಂದಿರು ಸೊಸೆಯಂದಿರ ಅಂತಹ ಆಸೆಗಳನ್ನು ಪೂರೈಸಬೇಕು. ಮಗಳಂದಿರನ್ನು ನೋಡಿಕೊಳ್ಳುವ ರೀತಿಯಲ್ಲಿಯೇ ಸೊಸೆಯಂದಿರನ್ನು ಸುಖವಾಗಿರುವಂತೆ ನೋಡಿಕೊಳ್ಳಬೇಕು. ಮಾತ್ರವಲ್ಲದೆ, ತಮ್ಮ ಮಗಳು ಮದುವೆಯಾಗಿ ಹೋದ ಮೇಲೆ ಗಂಡನ ಮನೆಯಲ್ಲಿ ಅವಳ ಅತ್ತೆಯಾದವಳು ಮಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಭಾವಿಸುವಂತೆಯೇ ತನ್ನ ಸೊಸೆಯನ್ನೂ ಚೆನ್ನಾಗಿ ನೋಡಿಕೊಳ್ಳಬೇಕೆಂಬುದನ್ನು ಹೊನ್ನಮ್ಮ ಸ್ಪಷ್ಟಪಡಿಸುತ್ತಾಳೆ. )

 

ಅಕ್ಕ ತಂಗಿಯರಣ್ಣ ತಮ್ಮಂದಿರ ತಮ್ಮ ತಮ್ಮ

ಮಕ್ಕಳು ಮೊಮ್ಮಕ್ಕಳೊಳು

ಕಕ್ಕಸಗೊಂಡು ಕನಲಿ ಕಾದದೆ ಮಿಗೆ

ಯಕ್ಕರವನುಗೊಳಿಸುವುದು   ೪

(ಅಕ್ಕ ತಂಗಿಯರ, ಅಣ್ಣ ತಮ್ಮಂದಿರ, ತಮ್ಮ ತಮ್ಮ ಮಕ್ಕಳು, ಮೊಮ್ಮಕ್ಕಳೊಳು ಕಕ್ಕಸಗೊಂದು ಕನಲಿ ಕಾಯದೆ ಮಿಗೆ ಅಕ್ಕರವನು ಅನುಗೊಳಿಸುವುದು)

ಮನೆಯೊಳಗೆ ವಾಸವಾಗಿರುವ ಅಕ್ಕ-ತಂಗಿಯರ, ಅಣ್ಣ-ತಮ್ಮಂದಿರ, ಮಕ್ಕಳು-ಮೊಮ್ಮಕ್ಕಳ ನಡುವೆ ಭೇದವೆಣಿಸದೆ, ಅವರೊಂದಿಗೆ ಒರಟಾಗಿ ವರ್ತಿಸದೆ,  ಕೋಪಗೊಳ್ಳದೆ, ಜಗಳವಾಡದೆ, ಹಿರಿಯರು ಅತ್ಯಂತ ಪ್ರೀತಿ-ವಾತ್ಸಲ್ಯಗಳನ್ನು ತೋರಿ ಮನೆಮಂದಿಯನ್ನೆಲ್ಲ ಖುಷಿಪಡಿಸಬೇಕು.

(ಹೊನ್ನಮ್ಮ ಈ ಪದ್ಯದಲ್ಲಿ ಕುಟುಂಬದೊಳಗೆ ಹಿರಿಯರು ನಡೆಸಬೇಕಾದ ಹೊಂದಾಣಿಕೆಯನ್ನು ವಿವರಿಸಿದ್ದಾಳೆ. ಸಂಸಾರವೆಂದ ಮೇಲೆ ಹಲವು ಸಂಬಂಧಗಳಿರುತ್ತವೆ. ಅಣ್ಣ, ತಮ್ಮ, ಅಕ್ಕ, ತಂಗಿ, ಮಕ್ಕಳು, ಮೊಮ್ಮಕ್ಕಳು-  ಹೀಗೆ ಅವರವರ ವಯಸ್ಸಿಗನುಗುಣವಾಗಿ ಹಿರಿಯರು ಪ್ರೀತಿ, ವಾತ್ಸಲ್ಯಗಳನ್ನು ತೋರಬೇಕು. ಅಲ್ಲದೆ, ತಮ್ಮ ಮಕ್ಕಳು, ಇತರರ ಮಕ್ಕಳು ಎಂದು ಭೇದವೆಣಿಸದೆ, ತಪ್ಪಿದಾಗ ಕೋಪಿಸಿಕೊಳ್ಳದೆ, ಜಗಳವಾಡದೆ, ಕಠಿಣವಾಗಿ ನಡೆದುಕೊಳ್ಳದೆ, ಹೊಡೆದು ಬಡಿಯದೆ,  ಪ್ರೀತಿಯಿಂದ ತಿಳಿಹೇಳಿ ತಿದ್ದಬೇಕು. ಹಿರಿಯರಾದವರು ಮನೆಯೊಳಗೆ ತಮ್ಮ ಮಕ್ಕಳೊಳಗೆ ಗಂಡು-ಹೆಣ್ಣೆಂಬ, ಹಿರಿಯ-ಕಿರಿಯವೆಂಬ, ಬೇಕು-ಬೇಡವೆಂಬ ಭೇದ-ಭಾವ ತೋರದೆ ಎಲ್ಲರೂ ತಮ್ಮ ಮಕ್ಕಳು, ಮೊಮ್ಮಕ್ಕಳು ಎಂದು ಭಾವಿಸಿಕೊಂಡು ಎಲ್ಲರ ಮೇಲೂ ಪ್ರೀತಿ, ವಾತ್ಸಲ್ಯಗಳನ್ನು ತೋರಿಸಿ, ಭರವಸೆಗಳನ್ನು ಇರಿಸಿಕೊಂಡು ಮನೆಯನ್ನು ಸಂಭಾಳಿಸಬೇಕು. ಇದರಿಂದ ಮನೆಮಂದಿಯೊಳಗೆ, ಮಕ್ಕಳೊಳಗೆ ಭೇದಭಾವಗಳು ಬೆಳೆಯದೆ ಒಳ್ಳೆಯ ಮನೋಭಾವ, ಗುಣಗಳು ಬೆಳೆಯಲು ಸಾಧ್ಯವೆಂಬುದು ಹೊನ್ನಮ್ಮನ ಅಭಿಪ್ರಾಯ)

 

ಪೆಣ್ಣ ಪೆತ್ತವರ ಬಳಗ ಬಳೆವುದು ಬೇಗ

ಪೆಣ್ಣ ಪೆತ್ತವರು ಪೆರ್ಚುವರು

ಪೆಣ್ಣ ಪೆತ್ತುದರಿಂದೆ ಪೆಸರೆನಿಸಿತು ಮಿಗೆ

ಬಣ್ಣವೇರಿತು ಪಾಲ್ಗಡಲು                    ೫

(ಪೆಣ್ಣ ಪೆತ್ತವರ ಬಳಗ ಬಳೆವುದು ಬೇಗ, ಪೆಣ್ಣ ಪೆತ್ತವರು ಪೆರ್ಚುವರು, ಪೆಣ್ಣ ಪೆತ್ತುದರಿಂದೆ ಪೆಸರ್ ಎನಿಸಿತು, ಮಿಗೆ ಪಾಲ್ ಕಡಲು ಬಣ್ಣವೇರಿತು)

ಹೆಣ್ಣು ಹೆತ್ತವರ ಬಳಗ ಬಹಳ ಬೇಗ ಬೆಳೆಯುತ್ತದೆ, ಹೆಣ್ಣು ಹೆತ್ತವರು ತುಂಬಾ ಖುಷಿಪಡುತ್ತಾರೆ, ಹೆಣ್ಣು ಹೆತ್ತಿದ್ದರಿಂದ ಅವರ ಬಳಗಕ್ಕೆ ಹೆಚ್ಚಿನ ಹೆಸರು ಪ್ರಾಪ್ತಿಯಾಗುತ್ತದೆ. ಮಾತ್ರವಲ್ಲ, ಹೆಣ್ಣು ಹೆತ್ತಿದ್ದರಿಂದಾಗಿ ಕುಟುಂಬವು  ಹಾಲಿನ ಕಡಲಿನಂತೆ ಶೋಭಿಸುತ್ತದೆ..

(ಹೆಣ್ಣು ಮಕ್ಕಳಿಂದ ಕುಟುಂಬಕ್ಕೆ, ಸಮಾಜಕ್ಕೆ  ಆಗುವ ಲಾಭವನ್ನು ಹೊನ್ನಮ್ಮ ಈ ಪದ್ಯದಲ್ಲಿ ವಿವರಿಸಿದ್ದಾಳೆ. ಒಂದು ಕುಟುಂಬ ಬೆಳೆಯುವುದಕ್ಕೆ, ಸಮಾಜದಲ್ಲಿ ಒಳ್ಳೆಯ ಸ್ಥಾನಮಾನಗಳನ್ನು ಪಡೆಯುವುದಕ್ಕೆ, ಕೀರ್ತಿಗಳಿಸುವುದಕ್ಕೆ ಹೆಣ್ಣುಮಕ್ಕಳನ್ನು ಹೆರುವುದರಿಂದ ಮಾತ್ರ ಸಾಧ್ಯ. ಹೆಣ್ಣಿಲ್ಲದೆ ಸಂಸಾರ ನಡೆಯದು, ಕುಟುಂಬ ಬೆಳೆಯದು. ಯಾವ ಕುಟುಂಬದಲ್ಲಿ ಹೆಚ್ಚು ಹೆಣ್ಣುಮಕ್ಕಳಿದ್ದಾರೋ ಅಂತಹ ಕುಟುಂಬ ಬಹಳ ಬೇಗ ಬೆಳೆಯುತ್ತದೆ. ಮಾತ್ರವಲ್ಲ, ಹೆಣ್ಣುಹೆತ್ತವರೂ ಅದರಿಂದ ಹೆಮ್ಮೆಪಟ್ಟುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ತಮ್ಮ ಮಗಳಂದಿರು ಮದುವೆಯಾಗಿ  ಗಂಡಂದಿರ ಮನೆಗಳನ್ನು ಬೆಳಗುವುದರಿಂದ ಹೆತ್ತವರು ಸಂತಸಗೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಅಲ್ಲದೆ, ಹೆತ್ತ ಹೆಣ್ಣು ಮಕ್ಕಳು ಗಂಡಂದಿರ ಮನೆಯಲ್ಲಿ ಒಳ್ಳೆಯ ಬಾಳನ್ನು ಬಾಳಿದಾಗ ಅದರಿಂದ ಹೆತ್ತವರಿಗೂ  ತವರುಮನೆಗೂ ಕೀರ್ತಿಪ್ರಾಪ್ತವಾಗುತ್ತದೆ. ಇವೆಲ್ಲದರಿಂದ ಎರಡೂ ಕುಟುಂಬಗಳು ಹಾಲ್ಗಡಲಿನಂತೆ ಶೋಭಿಸುತ್ತ, ಸಾರ್ಥಕ್ಯವನ್ನು ಹೊಂದುತ್ತವೆ ಎಂಬುದು ಹೊನ್ನಮ್ಮನ ಅಭಿಪ್ರಾಯ.)

 

ಪೆಣ್ಣಿಂದ ಪೆರ್ಮೆಗೊಂಡನು ಹಿಮವಂತನು

ಪೆಣ್ಣಿಂದ ಭೃಗು ಪೆರ್ಚಿದನು

ಪೆಣ್ಣಿಂದ ಜನಕರಾಯ ಜಸವಡೆದನು

ಪೆಣ್ಣ ನಿಂದಿಸಲೇಕೆ ಪೆರರು                ೬

(ಹಿಮವಂತನು ಪೆಣ್ಣಿಂದ ಪೆರ್ಮೆಗೊಂಡನು, ಭೃಗು ಪೆಣ್ಣಿಂದ ಪೆರ್ಚಿದನು, ಜನಕರಾಯನು ಪೆಣ್ಣಿಂದ ಜಸವಡೆದನು, ಪರರು ಪೆಣ್ಣ ನಿಂದಿಸಲೇಕೆ?)

ಹಿಮವಂತನು ಹೆಣ್ಣುಮಕ್ಕಳಿಂದಲೇ ಹೆಮ್ಮೆಪಟ್ಟುಕೊಳ್ಳುವಂತಾಯಿತು. ಭೃಗು ಮಹರ್ಷಿ ಹೆಣ್ಣಿನಿಂದಲೇ ಸಂಭ್ರಮಪಟ್ಟುಕೊಂಡನು, ಜನಕಮಹಾರಾಜ ಸೀತೆ ಮೊದಲಾದ ಹೆಣ್ಣುಮಕ್ಕಳನ್ನು ಪಡೆದದ್ದರಿಂದ ಕೀರ್ತಿಯನ್ನು ಹೊಂದಿದನು. ಹಾಗಿರುವಾಗ ಜನರು ಹೆಣ್ಣನ್ನು  ಏಕೆ ನಿಂದಿಸಬೇಕು?.

(ಹೊನ್ನಮ್ಮ ಈ ಪದ್ಯದಲ್ಲಿ ಹೆಣ್ಣುಮಕ್ಕಳನ್ನು ಹೆತ್ತಿದ್ದರಿಂದ ಹೆತ್ತವರು ಹೊಂದಿದ ಯಶಸ್ಸನ್ನು ಕುರಿತು ಮೂರು ಉದಾಹರಣೆಗಳ ಮೂಲಕ ವಿವರಿಸಿದ್ದಾಳೆ. ಹಿಮವಂತ ಅಪರ್ಣಾ(ಪಾರ್ವತಿ) ಮೊದಲಾದ ಮೂರು ಹೆಣ್ಣುಮಕ್ಕಳನ್ನು ಹೆತ್ತಿದ್ದರಿಂದ ಹಾಗೂ ಅವರನ್ನು ಯೋಗ್ಯರಿಗೆ ಕೊಟ್ಟು ಮದುವೆಮಾಡಿದ್ದರಿಂದ ಮತ್ತು ಆ ಮಕ್ಕಳು ಮದುವೆಯಾಗಿ ಒಳ್ಳೆಯ ಸ್ಥಾನಮಾನಗಳನ್ನು ಪಡೆದುಕೊಂಡಿದ್ದರಿಂದ ಆತನು ಹೆಮ್ಮೆಪಟ್ಟುಕೊಳ್ಳುವುದಕ್ಕೆ ಸಾಧ್ಯವಾಯಿತು. ಭೃಗು ಮಹರ್ಷಿ ಲಕ್ಷ್ಮೀಯನ್ನು ಮಗಳಾಗಿ ಪಡೆದುದರಿಂದ ಹೆಮ್ಮೆಪಟ್ಟುಕೊಳ್ಳುವುದಕ್ಕೆ ಸಾಧ್ಯವಾಯಿತು. ಮಹಾಪತಿವ್ರತೆಯಾದ ಸೀತೆಯಿಂದಾಗಿ ತಂದೆಯಾದ ಜನಕರಾಜನೂ ಕೀರ್ತಿಯನ್ನು ಪಡೆಯುವುದಕ್ಕೆ ಸಾಧ್ಯವಾಯಿತು. ಇವರೆಲ್ಲರೂ ಹೆಣ್ಣುಮಕ್ಕಳಿಂದಲೇ ಯಶಸ್ಸು, ಕೀರ್ತಿ, ಹಿರಿತನಗಳನ್ನು ಪಡೆದುಕೊಂಡವರು. ನಮ್ಮ ಪುರಾಣ, ಇತಿಹಾಸಗಳಲ್ಲಿ ಹೆಣ್ಣುಮಕ್ಕಳಿಂದ ಹೆತ್ತವರು ಕೀರ್ತಿಸಂಪಾದಿಸಿದ್ದಕ್ಕೆ, ಹಿರಿಯರೆನಿಸಿಕೊಂಡಿದ್ದಕ್ಕೆ, ಬದುಕನ್ನು ಸಾರ್ಥಕಪಡಿಸಿಕೊಂಡಿದ್ದಕ್ಕೆ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ. ಹೀಗಿರುವಾಗ ಹೆಣ್ಣನ್ನು ನಿಂದಿಸುವುದು ಭೂಷಣವಲ್ಲ ಎಂಬುದು ಸಂಚಿಯ ಹೊನ್ನಮ್ಮನ ಅಭಿಪ್ರಾಯ.)

ವಿಶೇಷ ಟಿಪ್ಪಣಿಗಳು:

 ೧. ಹಿಮವಂತನೆಂದರೆ ಪರ್ವತರಾಜ. ಈತ ಮೇನೆ ಎಂಬವಳನ್ನು ಮದುವೆಯಾಗಿ ಮೈನಾಕ ಎಂಬ ಪುತ್ರನನ್ನೂ, ಅಪರ್ಣಾ, ಏಕಪರ್ಣಾ, ಹಾಗೂ ಏಕಪಾಟಲಾ ಎಂಬ ಮೂವರು ಪುತ್ರಿಯರನ್ನು ಪಡೆದನು. ಇವರಲ್ಲಿ ಅಪರ್ಣಾ(ಪಾರ್ವತಿ) ಶಿವನನ್ನೂ ಏಕಪರ್ಣಾ ಅಸಿತಮುನಿಯನ್ನೂ ಏಕಪಾಟಲಾ ಜೈಗೀಷವ್ಯ ಮಹರ್ಷಿಯನ್ನೂ ಮದುವೆಯಾದರು. ಈ ಮೂರೂ ಹೆಣ್ಣುಮಕ್ಕಳಿಂದಾಗಿ ಹಿಮವಂತನ ಕೀರ್ತಿ ಹೆಚ್ಚಾಯಿತು. ಮಾತ್ರವಲ್ಲದೆ, ಪರ್ವತರಾಜನೇ ಹಿಮಾಲಯವಾಗಿರುವುದರಿಂದ ಈ ಪರ್ವತದಿಂದ ಗಂಗಾ, ಸಿಂಧು, ಸರಸ್ವತಿ, ಸರಯೂ, ಶತದ್ರು, ಚಂದ್ರಭಾಗಾ, ಯಮುನಾ, ಇರಾವತಿ, ವಿತಸ್ತಾ, ವಿಶಾಲಾ, ದೇವಿಕಾ, ಕುಹೂ, ಗೋಮತಿ, ಧೂತಪಾಪಾ, ಬಾಹುದಾ, ದೃಷದ್ವತಿ, ಕೌಶಿಕಿ, ನಿಶ್ಚಲಾ, ಗಂಡಕಿ, ಇಕ್ಷುಮತಿ, ಲೋಹಿತಾ ಮತ್ತು ಕೃತಮಾಲಾಗಳೆಂಬ ಇಪ್ಪತ್ತೆರಡು ನದಿಗಳು ಹುಟ್ಟಿ ಭಾರತದಾದ್ಯಂತ ಹರಿಯುವುದರಿಂದಲೂ, ಈ ನದಿಗಳೆಲ್ಲವೂ ಮಗಳಂದಿರಿಗೆ ಸಮವಾಗಿರುವುದರಿಂದಲೂ ಹಿಮವಂತನಿಗೆ ವಿಶೇಷ ಪ್ರಾಶಸ್ತ್ಯ ಸಂದಿದೆ.

೨. ಭೃಗು ಮಹರ್ಷಿಯು ಬ್ರಹ್ಮನ ಹೃದಯದಿಂದ ಜನಿಸಿದವನು. ಖ್ಯಾತಿ ಎಂಬವಳು ಈತನ ಹೆಂಡತಿ. ಈತನಿಗೆ ಕವಿ, ಚ್ಯವನ, ಧಾತ ಹಾಗೂ ವಿಧಾತರೆಂಬ ಗಂಡು ಮಕ್ಕಳೂ ಲಕ್ಷ್ಮೀ ಎಂಬ ಹೆಣ್ಣು ಮಗಳೂ ಜನಿಸಿದರು.  ಲಕ್ಷ್ಮೀ ಭೃಗುವಿನಲ್ಲಿ ಅವತರಿಸಿದ ಕಾರಣದಿಂದಾಗಿ ಲಕ್ಷ್ಮೀಗೆ ಭಾರ್ಗವಿ ಎಂಬ ಹೆಸರಾಯಿತು. ಲಕ್ಷ್ಮೀಯನ್ನು ವಿಷ್ಣು ವರಿಸಿದ್ದರಿಂದಲೂ ಲಕ್ಷ್ಮೀಯು ಸಂಪತ್ತಿನ ಅಧಿದೇವತೆಯಾದುದರಿಂದಲೂ ಲೋಕಮಾನ್ಯಳಾದಳು. ಇವಳಿಂದಾಗಿ ಭೃಗು ಮಹರ್ಷಿಗೂ ಮಾನ್ಯತೆ ಪ್ರಾಪ್ತವಾಯಿತು.

೩. ಜನಕ ಮಿಥಿಲೆಯ ರಾಜ. ಈತನ ನಿಜವಾದ ಹೆಸರು ಸೀರಧ್ವಜ. ಮಕ್ಕಳಿಲ್ಲದಿದ್ದಾಗ ಪುತ್ರಕಾಮೇಷ್ಟಿ ಯಾಗಕ್ಕಾಗಿ ನೆಲವನ್ನು ಸಮಗೊಳಿಸುತ್ತಿದ್ದಾಗ ಹೆಣ್ಣು ಮಗುವೊಂದು ಸಿಕ್ಕಿ ಸೀತಾ ಎಂದು ನಾಮಕರಣ ಮಾಡಿ ಸಾಕಿದನು. ಸೀತೆ ಮಗುವಾಗಿ ಬಂದಮೇಲೆ ಸೀರಧ್ವಜನ ಸಂಪತ್ತೆಲ್ಲವೂ ವೃದ್ಧಿಸಿತು. ಅನಂತರ ಅವನಿಗೆ ಊರ್ಮಿಳಾ ಎಂಬ ಹೆಣ್ಣುಮಗಳು ಜನಿಸಿದಳು. ಪ್ರಾಯಪ್ರಬುದ್ಧರಾಗಾಗ ಸೀತೆಯನ್ನು ಸ್ವಯಂವರದಲ್ಲಿ ರಾಮನಿಗೂ, ಊರ್ಮಿಳೆಯನ್ನು ಲಕ್ಷ್ಮಣನಿಗೂ ತನ್ನ ತಮ್ಮನಾದ ಕುಶಧ್ವಜನ ಮಕ್ಕಳಾದ ಮಾಡವಿ ಹಾಗೂ ಶ್ರುತಕೀರ್ತಿಯರನ್ನು ಭರತ ಹಾಗೂ ಶತ್ರುಘ್ನರಿಗೂ ಮದುವೆಮಾಡಿಕೊಟ್ಟನು. ಈ ಹೆಣ್ಣುಮಕ್ಕಳಿಂದಾಗಿಯೇ ಜನಕ ಹಾಗೂ ಆತನ ಸಹೋದರ ಕುಶಧ್ವಜನ ಹೆಸರು ಲೋಕವಿಖ್ಯಾತವಾಯಿತು.

 

ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ

ಪೆಣ್ಣಲ್ಲವೆ ಪೊರೆದವಳು

ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು

ಕಣ್ಣು ಕಾಣದ ಗಾವಿಲರು.              ೭

(ನಮ್ಮನೆಲ್ಲ ಪಡೆದ ತಾಯಿ ಪೆಣ್ಣಲ್ಲವೆ? ಪೊರೆದವಳು ಪೆಣ್ಣಲ್ಲವೆ? , ಕಣ್ಣು ಕಾಣದ ಗಾವಿಲರು ಪೆಣ್ಣು ಪೆಣ್ಣು ಎಂದು ಏಕೆ ಬೀಳುಗಳೆವರು?)

ಲೋಕದಲ್ಲಿ ಎಲ್ಲರನ್ನೂ ಹಡೆಯುವವಳು ಹೆಣ್ಣು, ಹೆಣ್ಣಿಲ್ಲದೆ ಈ ಲೋಕದಲ್ಲಿ ಹುಟ್ಟುವುದಕ್ಕೆ ಸಾಧ್ಯವಿಲ್ಲ. ಹೆತ್ತ ಮೇಲೆ ಮಕ್ಕಳನ್ನು ಸಾಕುವವಳೂ, ಕಾಪಾಡುವವಳೂ ಹೆಣ್ಣು. ಹುಟ್ಟಿನಿಂದ ಸಾಯುವಲ್ಲಿಯವರೆಗೂ ಪ್ರತಿಯೊಂದು ಹಂತದಲ್ಲಿ ಹೆಣ್ಣಿನ ಜವಾಬ್ದಾರಿಯೇ ಅಧಿಕವಾಗಿರುವಾಗ ಲೋಕದ ಜನರು ಹೆಣ್ಣು, ಹೆಣ್ಣು ಎಂದು ಏಕೆ ತಾತ್ಸಾರದಿಂದ ಆಡಿಕೊಳ್ಳಬೇಕು? ಏಕೆ ಹೆಣ್ಣನ್ನು ನಿಂದಿಸಬೇಕು? ಏಕೆ ಹೀಯಾಳಿಸಬೇಕು? ಹಾಗೆ ಮಾಡುವವರೆಲ್ಲರೂ ಕಣ್ಣುಕಾಣದ, ಬುದ್ಧಿ ಇಲ್ಲದ ಅಜ್ಞಾನಿಗಳು.

(ಹೊನ್ನಮ್ಮ ಈ ಪದ್ಯದಲ್ಲಿ ಕುಟುಂಬವ್ಯವಸ್ಥೆಯಲ್ಲಿ ಹೆಣ್ಣಿನ ಅವಶ್ಯಕತೆಯನ್ನು ವಿವರಿಸಿ, ಹೆಣ್ಣನ್ನು ಅವಹೇಳನ ಮಾಡುವುದನ್ನು ಹೆಣ್ಣನ್ನು ನಿಂದಿಸುವವರನ್ನು ಖಂಡಿಸಿದ್ದಾಳೆ., ಲೋಕದಲ್ಲಿ ಗಂಡಿರಲೀ ಹೆಣ್ಣಿರಲೀ ಎಲ್ಲರನ್ನೂ ಹಡೆದವಳು ಹೆಣ್ಣು. ಹಡೆದು ಹಾಲೂಡಿಸಿ, ಉಣಿಸಿ ಸಾಕುವವಳು ಹೆಣ್ಣು. ನಡೆ ಕಲಿಸುವವಳು, ನುಡಿಕಲಿಸುವವಳು, ತಪ್ಪಿದಾಗ ತಿದ್ದುವವಳು ಹೆಣ್ಣು. ಒಳ್ಳೆಯ ಪ್ರಜೆಗಳನ್ನಾಗಿ ಮೇಲಾಗಿ ಮನುಷ್ಯರನ್ನಾಗಿ ರೂಪಿಸುವವಳು ಹೆಣ್ಣು. ಬದುಕಿನ ಎಲ್ಲಾ ಹಂತಗಳಲ್ಲಿಯೂ ಹೆಣ್ಣಿನ ಅಗತ್ಯ, ಅವಶ್ಯಕತೆ ಹಾಗೂ ಅನಿವಾರ್ಯತೆಗಳೇ ತುಂಬಿಕೊಂಡಿರುವಾಗ ಇದೆಲ್ಲವನ್ನೂ ಅರ್ಥಮಾಡಿಕೊಳ್ಳದೆ, ’ಹೆಣ್ಣು ಹೆಣ್ಣು’ ಎಂದು  ತುಚ್ಛವಾಗಿ ಕಾಣುವುದು, ಕೆಟ್ಟದಾಗಿ ಹೆಣ್ಣನ್ನು ನಡೆಸಿಕೊಳ್ಳುವುದು, ನೋಯುವಂತೆ ನಿಂದಿಸುವುದು, ಅವಮಾನಪಡಿಸುವುದು, ಹಿಂಸಿಸುವುದು ಯುಕ್ತವಲ್ಲ, ಹಾಗೆ ಹೆಣ್ಣನ್ನು ನಡೆಸಿಕೊಳ್ಳುವವರು ಬುದ್ಧಿ ಇಲ್ಲದವರು, ಅಜ್ಞಾನಿಗಳು ಎಂದು ಸಂಚಿಯ ಹೊನ್ನಮ್ಮ ನಿಷ್ಥುರವಾಗಿನುಡಿಯುತ್ತಾಳೆ.)

 

ಕುವರನಾದೊಡೆ ಬಂದ ಗುಣವೇನದರಿಂದ

ಕುವರಿಯಾದೊಡೆ ಕುಂದೇನು

ಇವರಿರ್ವರೊಳೇಳ್ಗೆವಡೆದವರಿಂದ

ಸವನಿಪುದಿಹಪರಸೌಖ್ಯ                 ೮

(ಕುವರನ್ ಆದೊಡೆ ಅದರಿಂದ ಬಂದ ಗುಣವೇನು? ಕುವರಿಯಾದೊಡೆ ಕುಂದೇನು? ಇವರ್ ಈರ್ವರೊಳ್ ಏಳ್ಗೆ ಪಡೆದವರಿಂದ ಇಹ ಪರ ಸೌಖ್ಯ ಸವನಿಪುದು)

ಮಗನು ಹುಟ್ಟಿದ್ದರಿಂದ ಹೆತ್ತವರಿಗೆ ಸಿಕ್ಕಿರುವ ವಿಶೇಷ ಬೆಲೆಯಾದರೂ ಏನು? ಮಗಳು ಹುಟ್ಟಿದ್ದರಿಂದ ಹೆತ್ತವರಿಗೆ ಉಂಟಾದ ಕಷ್ಟನಷ್ಟಗಳಾದರೂ ಏನು? ಗಂಡಾಗಲೀ ಹೆಣ್ಣಾಗಲೀ ಇಬ್ಬರನ್ನೂ ಸಮಾನವಾಗಿ ಪರಿಭಾವಿಸಿ ಸಾಕಿ ಸಲಹಿದ ಹೆತ್ತವರಿಗೆ ಇಹದಲ್ಲೂ(ಬದುಕಿರುವಾಗಲೂ) ಪರದಲ್ಲೂ(ಸತ್ತ ಮೇಲೂ) ಸುಖ, ಸಂತೋಷಗಳು ಲಭಿಸುತ್ತವೆ.

(ಲೋದಲ್ಲಿ ಹೆತ್ತವರು ಮಕ್ಕಳೊಳಗೆ ಗಂಡು, ಹೆಣ್ಣು ಎಂಬ ಭೇದಭಾವ ತೋರುವುದನ್ನು ಹೊನ್ನಮ್ಮ ಈ ಪದ್ಯದಲ್ಲಿ ವಿರೋಧಿಸಿದ್ದಾಳೆ.  ಮಗನನ್ನು ಪಡೆದುದರಿಂದ ಹೆತ್ತವರಿಗೆ ಯಾವ ಲಾಭ, ಹೆಚ್ಚುಗಾರಿಕೆ ಅಥವಾ ಕೀರ್ತಿಗಳು ಒದಗಿವೆ? ಅಥವಾ ಅದರಿಂದ ಪಡೆದುಕೊಂಡ ಹೆಚ್ಚಿನ ಸ್ಥಾನಮಾನಗಳೇನು? ಮಗಳನ್ನು ಪಡೆದುದರಿಂದ ಹೆತ್ತವರಿಗೆ ಒದಗಿರುವ ನಷ್ಟವೇನು? ಅಥವಾ ಹೆಣ್ಣುಮಗಳಿಂದ ಉಂಟಾದ ಸಮಸ್ಯೆಗಳೇನು? ಗಂಡಾಗಲೀ ಹೆಣ್ಣಾಗಲೀ ಸಮಾನವಾಗಿ ಪರಿಭಾವಿಸಿ ಸಾಕಿ, ಸಲಹಿ, ಬವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸುವುದರಿಂದ ಹೆತ್ತವರಿಗೆ ಮತ್ತು ಕುಟುಂಬಸ್ಥರಿಗೆ ಬದುಕಿರುವಾಗಲೂ ಸತ್ತಮೇಲೆಯೂ ಸುಖ, ನೆಮ್ಮದಿಗಳು ದೊರೆಯುತ್ತವೆ. ಹಾಗಾಗಿ ಗಂಡೆಂದು ವಿಶೇಷ ಮನ್ನಣೆ ನೀಡದೆ, ಹೆಣ್ಣೆಂದು ನಿರ್ಲಕ್ಷಿಸದೆ ಇಬ್ಬರೂ  ಸಮಾನವೆಂದು ಸಾಕಿ ಸಲಹಿದರೆ ಮಕ್ಕಳೊಳಗೂ ಸಮಾನತೆ ಹಾಗೂ ಹೊಂದಾಣಿಕೆಯ ಮನೋಭಾವ ಬೆಳೆಯುತ್ತದೆ, ಹೆತ್ತವರಲ್ಲೂ ಸುಖ, ಸಂತೋಷಗಳು ನೆಲೆಸುತ್ತವೆ. ಆರೋಗ್ಯಪೂರ್ಣ ಕುಟುಂಬವ್ಯವಸ್ಥೆ ಹಾಗೂ ಸಮಾಜವ್ಯವಸ್ಥೆಗೆ ಮಕ್ಕಳ ಬಗೆಗಿನ ಈ ರೀತಿಯ ಸಮಾನ ಮನೋಭಾವ, ಆರೈಕೆ, ಪ್ರೀತಿ, ವಿಶ್ವಾಸಗಳು ಅತ್ಯಂತ ಅವಶ್ಯಕ ಎಂಬುದನ್ನು ಸಂಚಿಯ ಹೊನ್ನಮ್ಮ ಸ್ಪಷ್ಟಪಡಿಸಿದ್ದಾಳೆ.) 

 

ಕುಲಪುತ್ರನೋದಿ ತಿಳಿದು ನಡೆದಲ್ಲದೆ

ಕುಲವನುದ್ಧರಿಸಲರಿಯನು

ಕುಲಪುತ್ರಿಯೊಳ್ಗುವರನಿಗಿತ್ತ ಮಾತ್ರಕೆ

ಕುಲಕೋಟಿಯನುದ್ಧರಿಪಳು              ೯

(ಕುಲಪುತ್ರನ್ ಓದಿ, ತಿಳಿದು, ನಡೆದಲ್ಲದೆ ಕುಲವನ್ ಉದ್ಧರಿಸಲ್ ಅರಿಯನು, ಕುಲಪುತ್ರಿಯ ಒಳ್ ಕುವರನಿಗೆ ಇತ್ತ ಮಾತ್ರಕೆ ಕುಲಕೋಟಿಯನ್ ಉದ್ಧರಿಪಳು)

ಕುಲಪುತ್ರನಾದವನು ಸಕಲ ಶಾಸ್ತ್ರಗಳನ್ನು ಓದಿ ಜಾಣ, ಜ್ಞಾನಿ, ಮೇಧಾವಿ ಎನಿಸಿಕೊಳ್ಳಬಲ್ಲ. ಆದರೆ ಅವನು ಕುಲವನ್ನು ಉದ್ಧರಿಸುವುದಕ್ಕೆ ತಿಳಿಯಲಾರ. ಆದರೆ ಕುಲಪುತ್ರಿಯಾದವಳನ್ನು ಒಬ್ಬ ಒಳ್ಳೆಯ ಗುಣವಂತ ಕುವರನಿಗೆ ಮದುವೆಮಾಡಿಕೊಟ್ಟರೆ ಆಕೆ ತನ್ನ ಗಂಡನ ಮನೆಯನ್ನು ಮಾತ್ರವಲ್ಲದೆ, ತನ್ನ ತವರು ಮನೆಯನ್ನೂ ಉದ್ಧರಿಸುತ್ತಾಳೆ.

(ಹೊನ್ನಮ್ಮ ಈ ಪದ್ಯದಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳೊಳಗಿನ ಪ್ರಧಾನ ವ್ಯತ್ಯಾಸವೊಂದನ್ನು ವಿವರಿಸಿದ್ದಾಳೆ. ಗಂಡು ವಂಶೋದ್ಧಾರಕ, ಹೆತ್ತವರನ್ನು ನೋಡಿಕೊಳ್ಳುವವನು, ಮೋಕ್ಷಕ್ಕೆ ಕಾರಣನಾಗುವವನು ಎಂಬ ಮನೋಭಾವ ಬಹುತೇಕರಲ್ಲಿ ಮನೆಮಾಡಿಕೊಂಡಿದೆ. ಹಾಗಾಗಿಯೇ ಅವರು ಗಂಡುಮಕ್ಕಳಿಗೆ ಹೆಚ್ಚು ಪ್ರಾಶಸ್ತ್ಯವನ್ನು ಕೊಟ್ಟು, ಹೆಣ್ಣು ಮಕ್ಕಳನ್ನು ತಿರಸ್ಕಾರದಿಂದ ನೋಡುತ್ತಾರೆ. ಮಗನಾದವನು ಸಕಲ ಶಾಸ್ತ್ರಗಳನ್ನು ಓದಿ ಜ್ಞಾನಿ ಎನಿಸಿಕೊಳ್ಳಬಲ್ಲ. ಸಮಾಜದಲ್ಲಿ ಹಿರಿಯ ಸ್ಥಾನಮಾನಗಳನ್ನು ಹೊಂದಬಲ್ಲ, ಸಾಕಷ್ಟು ಸಂಪತ್ತನ್ನೂ ಸಂಪಾದಿಸಬಲ್ಲ. ಆದರೆ ಅವನು ವಂಶವನ್ನು ಉದ್ಧರಿಸಲು ಅಸಮರ್ಥ. ಏಕೆಂದರೆ ಗಂಡಾದವನು ಮಕ್ಕಳನ್ನು ಹೆರುವುದಕ್ಕೆ ಸಾಧ್ಯವಿಲ್ಲ. ಆ ಸೌಭಾಗ್ಯವೇನಿದ್ದರೂ ಹೆಣ್ಣಿಗೆ ಮಾತ್ರ. ಕುಲಪುತ್ರಿಯೊಬ್ಬಳು ಒಳ್ಳೆಯ ಹುಡುಗನನ್ನು ಮದುವೆಯಾಗಿ ಗಂಡನ ಮನೆಗೂ ತವರು ಮನೆಗೂ ಕೀರ್ತಿಯನ್ನು ತರುತ್ತಾಳೆ. ನಾಲ್ಕಾರು ಮಕ್ಕಳನ್ನು ಹೆತ್ತು, ಸಾಕಿ, ಸಲಹಿ, ವಿದ್ಯಾಬುದ್ದಿಗಳನ್ನು ನೀಡಿ ವಂಶದ ಉದ್ಧಾರಕ್ಕೆ ಕಾರಣಳಾಗುತ್ತಾಳೆ. ಅವಳಿಂದಾಗಿಯೇ ವಂಶ ಬೆಳೆಯುತ್ತದೆ, ಮನೆ ಬೆಳಗುತ್ತದೆ ಎಂಬುದು ಹೊನ್ನಮ್ಮನ ದೃಢ ನಂಬಿಕೆ.)

 

ಪುಟ್ಟಿದ ಮನೆಯೊಳು ಪೋರಿ ಪುರುಳುಗೊಂಬ

ದಿಟ್ಟ ಗಂಡುಗಳಂತಿರಲಿ

ಕೊಟ್ಟುದರಿಂದ ತಣಿವ ಕುವರಿಗೆ ಮನ

ಮುಟ್ಟಿ ಕೊಡುವುದು ಕೋವಿದರು.               ೧೦

(ಪುಟ್ಟಿದ ಮನೆಯೊಳು ಪೋರಿ ಪುರುಳು ಕೊಂಬ ದಿಟ್ಟ ಗಂಡುಗಳ್ ಅಂತಿರಲಿ, ಕೊಟ್ಟುದರಿಂದ ತಣಿವ ಕುವರಿಗೆ ಕೋವಿದರು ಮನಮುಟ್ಟಿ ಕೊಡುವುದು.)

ಹುಟ್ಟಿದ ಮನೆಯಲ್ಲಿ ಜಗಳವಾಡಿ, ಅಥವಾ ಹೋರಾಟಮಾಡಿ ತಮಗೆ ಸಿಗಬೇಕಾಗಿರುವ ಆಸ್ತಿ, ಸಂಪತ್ತನ್ನು ವಶಪಡಿಸಿಕೊಳ್ಳುವ ಮನೋಭಾವದ ಗಂಡುಮಕ್ಕಳು ಹಾಗಿರಲಿ, ಹೆತ್ತವರು ಕೊಟ್ಟಿದ್ದನ್ನು ಮನಸಾ ಸ್ವೀಕರಿಸಿ, ಅದರಿಂದ ತೃಪ್ತಿಯನ್ನು ಹೊಂದಿ, ಪಾಲಿನ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಂಡು ಬದುಕುವಂತಹ ಹೆಣ್ಣುಮಕ್ಕಳಿಗೆ ಹಿರಿಯರು ಮನಮೆಚ್ಚಿ ಉಡುಗೊರೆಗಳನ್ನು ಕೊಡಬೇಕು.

(ಹೊನ್ನಮ್ಮ, ಈ ಪದ್ಯದಲ್ಲಿ ಗಂಡು ಹಾಗೂ ಹೆಣ್ಣುಮಕ್ಕಳ ಮನೋಭಾವದಲ್ಲಿನ ಸೂಕ್ಷ್ಮವ್ಯತ್ಯಾಸಗಳನ್ನು ವಿವರಿಸಿದ್ದಾಳೆ. ಮಕ್ಕಳು ಬೆಳೆದಂತೆ  ಅವರ ಮನಸ್ಸಿನಲ್ಲಿ ಸ್ವಾರ್ಥಮನೆಮಾಡಿಕೊಳ್ಳುತ್ತದೆ. ಆಸ್ತಿಗಾಗಿ, ಹಣಕ್ಕಾಗಿ, ವಸ್ತು ಒಡವೆಗಳಿಗಾಗಿ, ಜಗಳ, ಹೊಡೆದಾಟ ಬಡಿದಾಟ ಮೊದಲಾದ ರೀತಿಯಲ್ಲಿ ಹೋರಾಟ ನಡೆಯುತ್ತದೆ. ಗಂಡುಮಕ್ಕಳು ಹೆತ್ತವರೊಂದಿಗೆ ಹೋರಾಡಿ, ಜಗಳವಾಡಿಕೊಂಡು ತಮಗೆ ಬರಬೇಕಾದ ಆಸ್ತಿ, ಹಣ, ಒಡವೆಗಳನ್ನು ವಶಪಡಿಸಿಕೊಳ್ಳುತ್ತಾರೆ. ಅಂತಹ ಸಂದರ್ಭಗಳಲ್ಲಿ ಅವರಿಗೆ ಹೆತ್ತವರ ಮನಃಸ್ಥಿತಿಯಾಗಲೀ ಒಡಹುಟ್ಟಿದವರ ಮನಃಸ್ಥಿತಿಯಾಗಲೀ ಅರ್ಥವಾಗುವುದಿಲ್ಲ. ಆದರೆ ಹೆಣ್ಣುಮಕ್ಕಳು ತವರು ಮನೆಯ ಆಸ್ತಿಪಾಸ್ತಿಗಳ ಬಗ್ಗೆಯಾಗಲೀ, ಹಣ-ಚಿನ್ನ ಮೊದಲಾದವುಗಳಿಗಾಗಲೀ ಹೆತ್ತವರೊಂದಿಗೆ ಜಗಳವಾಡುವುದಿಲ್ಲ. ಹೆತ್ತವರು ತಮಗೆ ಮನತುಂಬಿ ಕೊಟ್ಟಿದ್ದನ್ನು ನಮಸಾ ಸ್ವೀಕರಿಸುತ್ತಾರೆ. ತಮ್ಮಿಂದಾಗಿ ತವರುಮನೆಯ ನೆಮ್ಮದಿ ಕೆಡಬಾರದು ಎಂಬ ತಿಳಿವಳಿಕೆಯೂ ಇರುತ್ತದೆ. ಅವರಿಗೆ ಹೆತ್ತವರ ಪರಿಸ್ಥಿತಿ, ಮನಃಸ್ಥಿತಿಗಳು ಅರ್ಥವಾಗುತ್ತವೆ. ಹಾಗಾಗಿ ಹಿರಿಯರು, ತಿಳಿದವರು ಇಂತಹ ಹೆಣ್ಣುಮಕ್ಕಳಿಗೆ ಮನಮೆಚ್ಚಿ ಉಡುಗೊರೆಗಳನ್ನು ಕೊಡಬೇಕು. ಮನಮೆಚ್ಚಿ ಕೊಟ್ಟಿದ್ದು ಹೆಣ್ಣುಮಕ್ಕಳಿಗೆ ತೃಪ್ತಿಯನ್ನು ನೀಡುವುದರ ಜೊತೆಗೆ, ಹೆಣ್ಣುಮಕ್ಕಳು  ಮನಮೆಚ್ಚಿ ಸ್ವೀಕರಿಸಿದ್ದು ಹಿರಿಯರಿಗೂ ತೃಪ್ತಿಯನ್ನು ನೀಡಬಲ್ಲುದು ಎಂಬುದು ಹೊನ್ನಮ್ಮನ ವಾದ.)

(ಭಾಗ-೨ರಲ್ಲಿ ಮುಂದುವರಿದಿದೆ.)

 

Leave a Reply

Your email address will not be published. Required fields are marked *