’ಶಾನುಭೋಗರ ಮಗಳು’ ಎಂಬುದು ಕೆ.ಎಸ್. ನರಸಿಂಹಸ್ವಾಮಿಯವರ ’ಮೈಸೂರ ಮಲ್ಲಿಗೆ’ ಕವನಸಂಕಲನದಲ್ಲಿನ ಒಂದು ಭಾವಗೀತೆ. ಈ ಸಂಕಲನದಲ್ಲಿ ಮನಸೆಳೆಯುವ, ಸಹೃದಯರಿಗೆ ಆಪ್ಯಾಯಮಾನವಾಗುವ ಭಾವಗೀತೆಗಳಲ್ಲಿ ಇದೂ ಒಂದು. ಈ ಭಾವಗೀತೆಯು ಹಲವು ಕಾರಣಗಳಿಂದ ಸಹೃದಯರ ಮನಸೆಳೆಯುತ್ತದೆ. ಮೇಲುನೋಟಕ್ಕೆ ಇದು ಬಹಳ ಸರಳವಾದ ರಚನೆಯಾಗಿರುವಂತೆ ಕಂಡರೂ ಮಾನವೀಯ ಹಾಗೂ ಸಾಂಸಾರಿಕ ನೆಲೆಗಳಲ್ಲಿ ಗಹನತೆಯನ್ನು ಪಡೆದುಕೊಳ್ಳುತ್ತದೆ. ಸುಮಾರು ೧೯೪೨ಕ್ಕಿಂತಲೂ ಮೊದಲು ರಚನೆಯಾಗಿರಬಹುದಾದ ಈ ಭಾವಗೀತೆ ಆ ಕಾಲಘಟ್ಟದ ಒಂದು ಸಾಂಪ್ರದಾಯಿಕ ಬ್ರಾಹ್ಮಣ ಸಮಾಜದ ಸಾಮಾಜಿಕ ಚಿತ್ರಣವನ್ನು ನೀಡುವುದರ ಜೊತೆಗೆ ಪರಿವರ್ತನೆಗೆ ತುಡಿಯುತ್ತಿರುವ, ಹೊಸಬದುಕಿಗೆ ಮೆಲ್ಲನೆ ಹೆಜ್ಜೆಯಿಡುತ್ತಿರುವ ಸೂಚನೆಯನ್ನೂ ನೀಡುತ್ತದೆ. ಸುಮಾರು ಎಂಬತ್ತು ವರ್ಷಗಳ ಹಿಂದೆ ರಚನೆಯಾಗಿರುವ ಈ ಭಾವಗೀತೆ ಇಂದಿಗೂ ತನ್ನ ಮೌಲ್ಯವನ್ನು ಕಳೆದುಕೊಳ್ಳದೆ ಸಹೃದಯದ ಗಮನಸೆಳೆಯುತ್ತಿರುವುದು ಅದರ ನಿತ್ಯನೂತನತೆಗೆ ಸಾಕ್ಷಿ. ಈ ನಿಟ್ಟಿನಲ್ಲಿ ಕೆ.ಎಸ್. ನರಸಿಂಹಸ್ವಾಮಿಯವರು ಸಹೃದಯರ ಅಭಿನಂದನೆಗಳಿಗೆ ಪಾತ್ರರಾಗಿದ್ದಾರೆ.
ಕಳೆದ ಶತಮಾನದ ೪೦ರ ದಶಕದ ಸಾಂಸಾರಿಕ, ಕೌಟುಂಬಿಕ ಚಿತ್ರಣವನ್ನು ನೀಡುವ ಈ ಭಾವಗೀತೆ ಇಂದಿನ ಆಧುನಿಕ ಕೌಟುಂಬಿಕ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ವಿಡಂಬಿಸುತ್ತದೆ. ಅಂದಿನ ಕುಟುಂಬವ್ಯವಸ್ಥೆಯಲ್ಲಿ ಕಂಡುಬರುವ ಪ್ರೀತಿ, ಪ್ರೇಮ, ವಿಶ್ವಾಸ, ವಾತ್ಸಲ್ಯ, ಮಮಕಾರ, ಅಭಿಮಾನಗಳು ಇಂದಿನ ಕುಟುಂಬವ್ಯವಸ್ಥೆಯಲ್ಲಿ ವ್ಯಾವಹಾರಿಕತೆಯನ್ನು ಪಡೆದುಕೊಂಡಿರುವುದು ಸ್ಪಷ್ಟವಾಗುತ್ತದೆ. ಅಂದಿನ ಸಾಂಸಾರಿಕ ಸ್ಥಿತಿಗತಿಗಳನ್ನು, ಮನೆಮಂದಿಯ ಹಾಗೂ ನೆರೆಹೊರೆಯವರ ಮನೋಭಾವವನ್ನು, ಹಳ್ಳಿಯ ಹೆಣ್ಣುಮಕ್ಕಳ ಆಲೋಚನಾಕ್ರಮ ಹಾಗೂ ಅಭಿರುಚಿಗಳನ್ನು ಇದು ವಾಸ್ತವತೆಯ ನೆಲೆಯಲ್ಲಿ ಚಿತ್ರಿಸುತ್ತದೆ. ಅದರ ಜೊತೆಗೆ, ಈ ಭಾವಗೀತೆಯಲ್ಲಿ ನಿರೂಪಕ ಸೀತಾದೇವಿಯ ಬಗೆಗಿನ ತನ್ನ ನವಿರುಭಾವನೆಗಳನ್ನು ಸೂಕ್ಷ್ಮವಾಗಿ ನಿರೂಪಿಸುತ್ತ ಸಾಗುವುದನ್ನು ಗಮನಿಸಬಹುದು.
ಶಾನುಭೋಗರ ಮಗಳು, ತಾಯಿಯಿಲ್ಲದ ಹುಡುಗಿ,
ರತ್ನದಂತಹ ಹುಡುಗಿ ಊರಿಗೆಲ್ಲ!
ಬಲುಜಾಣೆ, ಗಂಭೀರೆ, ಹೆಸರು ಸೀತಾದೇವಿ
ಹನ್ನೆರಡು ತುಂಬಿಹುದು, ಮದುವೆಯಿಲ್ಲ.
ತಾಯಿಯಿಲ್ಲದ ಹೆಣ್ಣು, ಮಿಂಚು ಬೀರುವ ಕಣ್ಣು
ಒಮ್ಮೊಮ್ಮೆ ಕಣ್ಣೀರ ಸರಸಿಯಹುದು.
ತಾಯಿಯಂದದಿ ಬಂದು ತಂಪನೆರೆಯುವುದೆಂದು
ಇಂಥ ಬಾಳಿಗೆ ಒಲವೆ, ನಿನ್ನ ಕನಸು?
ಹತ್ತಿರದ ಕೆರೆಯಿಂದ ತೊಳೆದ ಬಿಂದಿಗೆಯೊಳಗೆ
ನೀರ ತರುವಾಗವಳ ನೋಡಬೇಕು;
ಕರುವನಾಡಿಸುವಾಗ ಮಲ್ಲಿಗೆಯ ಬನದೊಳಗೆ
ಅವಳ ಗಂಡನ ಹೆಸರ ಕೇಳಬೇಕು!
ಮೊನ್ನೆ ತಾವರೆಗೆರೆಯ ಜೋಯಿಸರ ಮೊಮ್ಮಗನು
ಹೆಣ್ಣ ನೋಡಲು ಬಂದನವರ ಮನೆಗೆ,
ವೈದಿಕರ ಮನೆಗಳಲಿ ಊಟ ಹೊತ್ತಾಗುವುದೆಂದು-
ಒಲ್ಲೆ’ನೆಂದಳು ಸೀತೆ ಕೋಣೆಯೊಳಗೆ!
ಮಗಳ ಮಾತನು ಕೇಳಿ ನಕ್ಕುಬಿಟ್ಟರು ತಂದೆ;
ಒಳಗೆ ನಂದಾದೀಪ ನಂದಿ ಹೋಗಿ,
ಫಲವ ನುಡಿದುದು ಹಲ್ಲಿ; ಹೇಳಲೇನಿದೆ ಮುಂದೆ?
ತೆರಳಿದನು ಜೋಯಿಸನು ತಣ್ಣಗಾಗಿ.
ಬೆಳಗಾಗ ಕೆರೆಯ ಬಳಿ ನನ್ನ ತಂಗಿಯ ಕಂಡು
ಕನ್ನೆ ತೋರಿದಳಂತೆ ಕಾರಣವನು-
’ಹೊನ್ನೂರ ಕೇರಿಯಲಿ ಬಂದಿದ್ದ ಹೊಸಗಂಡು
ತನ್ನ ಕೂದಲಿಗಿಂತ ಕಪ್ಪು’ ಎಂದು
ನಮ್ಮೂರಿನಕ್ಕರೆಯ ಸಕ್ಕರೆಯ ಬೊಂಬೆಯನು
ನೋಡಬೇಕೇ ಇಂಥ ಕಪ್ಪು ಗಂಡು?
ಶಾನುಭೋಗರ ಮನೆಯ ತೋರಣವೆ ಹೇಳುವುದು
ಬಂದ ದಾರಿಗೆ ಸುಂಕವಿಲ್ಲವೆಂದು.
ಶಾನುಭೋಗರ ಮಗಳು ರತ್ನದಂತಹ ಹುಡುಗಿ;
ಗಂಡು ಸಿಕ್ಕುವುದೊಂದು ಕಷ್ಟವಲ್ಲ;
ಸರಿಯಾದ ಗಂಡೊದಗಿ ಹೆಣ್ಣು ಸುಖವಾಗಿರಲಿ,
ತಡವಾದರೇನಂತೆ?-ನಷ್ಟವಿಲ್ಲ.
-ಕೆ.ಎಸ್. ನರಸಿಂಹಸ್ವಾಮಿ
ಶಾನುಭೋಗರ ಮಗಳಾದ ಸೀತಾದೇವಿ ಹೊನ್ನೂರಿನ ಕೇರಿಯಲ್ಲಿ ಮಾತ್ರವಲ್ಲ ಆ ಊರಿನಲ್ಲಿಯೇ ಚೆಲುವೆ. ಅವಳು ಊರಿಗೆಲ್ಲ ರತ್ನದಂತಹ ಹುಡುಗಿ ಎಂದು ಗುರುತಿಸಿಕೊಂಡವಳು. ಮಾತಿನಲ್ಲೂ ವ್ಯವಹಾರದಲ್ಲೂ ಬಲುಜಾಣೆ ಹುಡುಗಿ. ಪ್ರಾಯಕ್ಕೆ ಬರುತ್ತಿದ್ದರೂ ಚೆಲ್ಲುಮಾತಾಡುವುದಿಲ್ಲ. ಗಂಭೀರ ಸ್ವಭಾವದವಳು. ಸೀತಾದೇವಿ ಎಂಬ ಹೆಸರು ಅವಳ ರೂಪ, ಗುಣ, ಮಾತು, ವ್ಯವಹಾರಗಳಿಗೆ ಅನ್ವರ್ಥವಾಗಿದೆ. ಮೇಲಾಗಿ ತಾಯಿಯಿಲ್ಲದ ಹುಡುಗಿಯಾದರೂ ತಬ್ಬಲಿಯಲ್ಲ! ಏಕೆಂದರೆ ತಂದೆಯ ಹಾಗೂ ಒಡಹುಟ್ಟಿದವರ ಪ್ರೀತಿ-ವಾತ್ಸಲ್ಯ, ಜೊತೆಗಾತಿ-ಜೊತೆಗಾರರ ಸ್ನೇಹ, ನೆರೆಹೊರೆಯವರ ವಾತ್ಸಲ್ಯ, ಊರವರ ಮಮತೆ ಎಲ್ಲವನ್ನೂ ಪಡೆದುಕೊಂಡ ಪುಣ್ಯವಂತೆ. ತಾಯಿಯಿಲ್ಲ ಎಂಬುದೊಂದೇ ಕೊರಗು, ತನಗೂ ಇತರರಂತೆ ತಾಯಿ ಇದ್ದಿದ್ದರೆ! ಎಂಬ ನೋವು ಅವಳ ಮನಸ್ಸಿನ ಮೂಲೆಯಲ್ಲಿ ಇದ್ದಿತೋ ಏನೋ! ಆದರೆ ಮನೆಮಂದಿಯ, ನೆರೆಹೊರೆಯವರ ಪ್ರೀತಿ-ವಾತ್ಸಲ್ಯಗಳು ಅದನ್ನು ಮರೆಸಿವೆ. ಸೀತಾದೇವಿ ಈಗ ಹನ್ನೆರಡರ ಚೆಲುವೆ. ತಂದೆಗೋ ಅವಳನ್ನು ಯೋಗ್ಯ ಹಾಗೂ ಅವಳಷ್ಟೇ ಚೆಲುವನಿಗೆ ಮದುವೆಮಾಡಿಕೊಡಬೇಕೆಂಬ ಮಹದಾಸೆ. ಆದರೂ ಕಾಲಕೂಡಿ ಬಂದಿಲ್ಲ. ಯೋಗ್ಯವರ ಬರುವವರೆಗೂ ಶಾನುಭೋಗರು ಕಾಯುತ್ತಿದ್ದಾರೆ.
ಸಣ್ಣವರಿರುವಾಗ ಎಲ್ಲರಿಗೂ ತಂದೆಯೂ ಬೇಕು, ತಾಯಿಯೂ ಬೇಕು. ಇಬ್ಬರೊಂದಿಗಿನ ಸಂಬಂಧದ ಸ್ವಾರಸ್ಯವೇ ಬೇರೆಬೇರೆ. ಸೀತಾದೇವಿಗಂತೂ ತಂದೆಯ ಪ್ರೀತಿ, ವಾತ್ಸಲ್ಯಗಳು ದೊರಕಿದ್ದರೂ ತಾಯಿಯದು ದೊರಕಿಲ್ಲ. ಆಕೆ ತಾಯಿಯಿಲ್ಲದ ಹುಡುಗಿ. ಮನೆಮಂದಿಯ ಹಾಗೂ ನೆರೆಹೊರೆಯವರ ಪ್ರೀತಿ, ವಾತ್ಸಲ್ಯಗಳ ಮಹಾಪೂರದಲ್ಲಿ ತಾಯಿಯಿಲ್ಲದ ನೋವನ್ನು ಆಕೆ ಮರೆತಿದ್ದಾಳೆ. ಅವಳ ಕಣ್ಣುಗಳಿಗೆ ಆಕರ್ಷಣೆಯಿದೆ, ಮೋಹಕತೆಯಿದೆ, ಅವು ನಗುತ್ತವೆ, ಮಿಂಚುಬೀರುತ್ತವೆ. ತಾಯಿಯನ್ನು ಅಗಲಿದ ನೋವನ್ನು ಮರೆಯಲು ಸಾಧ್ಯವೇ? ತನ್ನ ಜೊತೆಗಾತಿಯರು ತಾಯಂದಿರ ಮಡಿಲಲ್ಲಿ ಕೂತು ಬೆಳೆದಿರುವಾಗ ತನಗವಕಾಶವಿಲ್ಲವಲ್ಲ ಎಂಬ ನೋವು, ತಲೆಸ್ನಾನಕ್ಕೆ, ಸೀರೆ ಉಡಿಸುವುದಕ್ಕೆ, ಹೂಮುಡಿಯುವುದಕ್ಕೆ ತಾಯಿ ಇದ್ದಿದ್ದರೆ ಎಂಬ ನೋವು ಮನಸ್ಸಿನಲ್ಲಿ ಮತ್ತೆ ಮತ್ತೆ ಮರುಕೊಳಿಸದಿರಲು ಸಾಧ್ಯವೇ? ಹಾಗಾಗಿ ಸೀತಾದೇವಿ ಒಮ್ಮೊಮ್ಮೆ ಕಣ್ಣೀರಿನ ಸರಸಿಯಾಗುತ್ತಾಳೆ. ತಾಯಿಯ ನೆನಪು ಮತ್ತೆ ಮತ್ತೆ ಮರುಕೊಳಿಸಿ ಆಕೆಯ ಮನಸ್ಸು ನೊಂದುಕೊಂಡಾಗ, ನಿರೂಪಕನಿಗೆ ತಾನು ತಾಯಿಯಂತೆಯೇ ಬಂದು ಅವಳ ಮೇಲೆ ಪ್ರೀತಿ, ವಾತ್ಸಲ್ಯವನ್ನು ತೋರುವಾಸೆ. ಅವಳ ಏಕಾಂಗಿ ಬಾಳಿಗೆ ಒಲವಿನ ಆಸರೆಯಾಗುವ ಆಸೆ-ಹೀಗೆ ನಿರೂಪಕನಿಗೆ ಏನೇನೋ ಕನಸುಗಳು.
ನಿರೂಪಕ ಸೀತಾದೇವಿಯ ಚೆಲುವನ್ನು ಮನದಣಿಯೇ ಆಸ್ವಾದಿಸುವುದನ್ನು ತಪ್ಪಿಸಲಾರ. ಸೀತಾದೇವಿ ಬಿಂದಿಗೆಯನ್ನು ತೊಳೆದು, ಹತ್ತಿರದ ಕೆರೆಗೆ ಹೋಗಿ ನೀರನ್ನು ತುಂಬಿಸಿಕೊಂಡು ಬಳುಕುತ್ತ ನಡೆದುಬರುತ್ತಿರುವುದನ್ನು ನೋಡಿದಷ್ಟೂ ಸಾಲದು. ತಾನು ಆ ಬಿಂದಿಗೆಯಾಗಿರುತ್ತಿದ್ದರೆ! ಎಂದು ನಿರೂಪಕ ಎಷ್ಟು ಬಾರಿ ಕಲ್ಪಿಸಿಕೊಂಡನೋ! ಆ ಬಿಂದಿಗೆಯದು ಅದೇನು ಭಾಗ್ಯ? ಮನಸೂರೆಗೊಂಡ ಚೆಲುವೆ ನೀರಿಗಾಗಿ ಬಿಂದಿಗೆಯೊಂದಿಗೆ ನಡೆಯುವುದು, ಕೆರೆಯಲ್ಲಿ ನೀರು ತುಂಬಿಸಿಕೊಳ್ಳುವುದು, ಅದನ್ನು ಹೊತ್ತು ನಡೆಯುವುದು-ಎಲ್ಲವೂ ಚೆಂದವಲ್ಲದೆ ಇನ್ನೇನು? ಆಕೆಯ ಮೇಲೆ ಒಲವು, ಪ್ರೀತಿ, ಪ್ರೇಮಗಳಿದ್ದರೂ, ನೆರೆಹೊರೆಯವಳೆಂಬ ಸಲುಗೆಯಿದ್ದರೂ ಪ್ರೇಮನಿವೇದನೆ ಸುಲಭಸಾಧ್ಯವೇ? ಹೇಗಾದರೂ ಮಾಡಿ ತನ್ನ ಪ್ರೇಮವನ್ನು ನಿವೇದಿಸಿಕೊಳ್ಳಬೇಕೆಂದು ಮಾಡಿದ ಪ್ರಯತ್ನವೇನು ಕಡಿಮೆಯೇ? ಮಲ್ಲಿಗೆಯ ಬನದೊಳಗೆ ಮನೆಯ ಕರುಗಳನ್ನು ಆಡಿಸಲು ಆಕೆ ಬಂದೇ ಬರುತ್ತಾಳೆ. ಆಕೆ ಅವುಗಳನ್ನು ಆಡಿಸುವುದನ್ನು, ಅವಳ ಚೆಲುವನ್ನು ಕಣ್ತುಂಬಿಕೊಳ್ಳಬೇಕು. ಅವಳ ಇನಿದಾದ ಮಾತುಗಳನ್ನು ಕಿವಿತುಂಬಿಕೊಳ್ಳಬೇಕು ಎಂಬೆಲ್ಲ ಹಂಬಲ. ಆಕೆಯೇನೋ ತನ್ನ ಮೈ ಮನಸ್ಸನ್ನು ತುಂಬಿಕೊಂಡಿದ್ದಾಳೆ. ತನ್ನಲ್ಲಿ ಒಲವಿನ ತುಡಿತಗಳನ್ನು ಎಬ್ಬಿಸಿದ್ದಾಳೆ. ಅವಳಿಗೂ ತನ್ನಲ್ಲಿ ಅಷ್ಟೇ ಒಲವು, ಪ್ರೀತಿ, ಪ್ರೇಮಗಳು ಇರಬಹುದೆಂಬ ಭರವಸೆ. ಆದರೂ ಅವು ಅವಳ ಬಾಯಿಂದಲೇ ಬಂದರೆ! ಅದೋ ಇದೋ ಆಡುತ್ತ ’ನಿನ್ನ ಗಂಡನ ಹೆಸರೇನೆ?’ ಎಂದು ಕೇಳಬೇಕು. ಆಕೆ ನಾಚಿಕೊಂಡು ತನ್ನ ಹೆಸರನ್ನು ಹೇಳಬೇಕು ಎಂದೆಲ್ಲ ಹಂಬಲ.
ಹುಡುಗಿ ಪ್ರಾಯಕ್ಕೆ ಬಂದಾಗ ಹುಡುಗನಿಗೆ ಹುಡುಗಿಯನ್ನು, ಹುಡುಗಿಗೆ ಹುಡುಗನನ್ನು ಹುಡುಕುವುದು ಸಹಜ. ಅದು ಹೆತ್ತವರ, ಹಿರಿಯರ ಕರ್ತವ್ಯ. ಹೊನ್ನೂರಿನಲ್ಲಿಯೇ ಚೆಲುವೆ ಎನಿಸಿರುವ ಸೀತಾದೇವಿಯ ರೂಪ-ಲಾವಣ್ಯಗಳ, ಗುಣ-ಸ್ವಭಾವಗಳ ಸುದ್ದಿ ಅಕ್ಕಪಕ್ಕದ ಊರುಗಳಿಗೆ ತಲುಪುವುದಕ್ಕೆ ಅಸಾಧ್ಯವೇ? ಪಕ್ಕದೂರು ತಾವರೆಗೆರೆಯ ಜೋಯಿಸರ ಮೊಮ್ಮಗನಿಗೆ ಸೀತಾದೇವಿಯ ಚೆಲುವಿನ, ನಡಿ-ನುಡಿಗಳ ಸುದ್ಧಿ ಕೇಳಿ ಆಕೆಯನ್ನು ನೋಡದಿದ್ದರೂ ಮದುವೆಯಾಗುವ ಹಂಬಲ. ಹಗಲುಗನಸು ಕಾಣುತ್ತ ಹೊನ್ನೂರಿನ ಹಾದಿ ತುಳಿದವನಿಗೆ ಶಾನುಭೋಗರ ಮನೆಯಲ್ಲಿ ಮಾತ್ರ ನಿರಾಸೆಯಾಯಿತು. “ವೈದಿಕರ ಮನೆಗಳಲ್ಲಿ ಊಟ ಹೊತ್ತಾಗುತ್ತದೆ, ನಾನು ಒಲ್ಲೆ” ಎಂದು ಒಳಕೋಣೆಯಿಂದಲೇ ನುಡಿದ ಸೀತಾದೇವಿಯ ಮಾತು ಶಾನುಭೋಗರ ಮೂಲಕ ತಲುಪಿದಾಗ ಜೋಯಿಸರ ಮೊಮ್ಮಗನಿಗೆ ಸಿಡಿಲಿನಂತೆ ಕೇಳಿಸಿರಬಹುದೇನೋ!. ಚೆಲುವೆಯನ್ನು ಮದುವೆಯಾಗಬೇಕೆಂಬ ಹಂಬಲ ತಪ್ಪೇ? ಪಾಪ, ಬಂದ ದಾರಿಗೆ ಸುಂಕವಿಲ್ಲ ಎಂಬಂತಾಯಿತು. ವೈದಿಕರ ಮನೆಗಳಲಿ ಊಟ ಹೊತ್ತಾಗುವುದು ನಿಜವೇ? ಇರಬಹುದೇನೋ! ಅದೊಂದೇ ಕಾರಣಕ್ಕೆ ಸೀತಾದೇವಿ ಜೋಯಿಸರ ಮೊಮ್ಮಗನನ್ನು ನಿರಾಕರಿಸಿದಳೇ? ಅಥವಾ ಸೀತಾದೇವಿಯ ಮನಸ್ಸಿಗೆ ಲಗ್ಗೆಹಾಕಿರುವ ಚೆಲುವ ಯಾರಾದರೂ ಇರಬಹುದೇ? ಆಕೆ ಹೇಳಲಿಲ್ಲ.
“ವೈದಿಕರ ಮನೆಗಳಲಿ ಊಟ ಹೊತ್ತಾಗುವುದು” ಎಂಬ ಮಗಳ ಮಾತನ್ನು ಕೇಳಿ ಶಾನುಭೋಗರು ಕೋಪಗೊಳ್ಳಲಿಲ್ಲ, ಸಿಡುಕಲಿಲ್ಲ. ಮದುವೆ ಪ್ರಾಯ ದಾಟುತ್ತಿದೆ, ಒಪ್ಪಿಕೋ ಎನ್ನಲಿಲ್ಲ. ಇನೂ ತಡಮಾಡಿದರೆ ಮದುವೆ ಕಷ್ಟ ಅನ್ನಲಿಲ್ಲ. ಅವರಿಗೂ ಗೊತ್ತು, ಮಗಳಿಗೆ ಹೇಳಿಸಿದ ಗಂಡಲ್ಲ, ತನಗೆ ಸರಿಯಾದ ಅಳಿಯನಲ್ಲ ಎಂದು. ಮಗಳ ಜಾಣತನದ ಉತ್ತರವನ್ನು ಕೇಳಿ ಅವರಿಗೋ ನಗು ಬಂತು. ಮಗಳ ಜಾಣತನವನ್ನು ಮೆಚ್ಚಿಕೊಂಡರು. ಮಗಳಿಗೆ ತಾಯಿಯಂತೂ ಇಲ್ಲ, ಮುದ್ದುಮಾಡುವ, ಜೀವನಪೂರ್ತಿ ಚೆನ್ನಾಗಿ ಬಾಳಿಸಿಕೊಳ್ಳುವ ಒಳ್ಳೆಯ ಚೆಲುವ ಗಂಡನಾದರೂ ಬೇಡವೇ?! ಇನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಮದುವೆಮಾಡುವುದೇ? ತಪ್ಪೆನಿಸಿತು. ಎಲ್ಲವೂ ಅರ್ಥವಾಯಿತು ಶಾನುಭೋಗರಿಗೆ. ಮಗಳ ಜಾಣತನಕ್ಕೆ ಮೆಚ್ಚಿ ನಕ್ಕುಬಿಟ್ಟರು. ಒಳಗೆ ನಂದಾದೀಪ ನಂದಿಹೋಯಿತು, ಗೋಡೆಯ ಮೇಲಿದ್ದ ಹಲ್ಲಿ ಲೊಚಗುಟ್ಟಿತು. ಇದು ಅಪಶಕುನದ ಲಕ್ಷಣಗಳಲ್ಲವೇ? ಶಾನುಭೋಗರು ಬಜಾವಾದರು. ಇಲ್ಲದಿದ್ದರೆ ಮಗಳ ಉತ್ತರವನ್ನು ಜೋಯಿಸರ ಮೊಮ್ಮಗನಿಗೆ ತಿಳಿಸಲು ಸಾಧ್ಯವೇ? ಅದು ಸಂಬಂಧವನ್ನು ನಿರಾಕರಿಸಲು ಸಮಂಜಸವಾದ ಕಾರಣವೇ? ನಂದಾದೀಪ ನಂದಿಹೋಗುವುದು, ಹಲ್ಲಿ ಲೊಚಗುಟ್ಟುವುದು ಎರಡೂ ಕಾಕತಾಳೀಯವಾಯಿತಲ್ಲ! ಆದರೆ ಶಾನುಭೋಗರಿಗೆ ಸಂಬಂಧವನ್ನು ನಿರಾಕರಿಸುವುದಕ್ಕೆ ಅದೇ ಒಂದು ದಾರಿಯಾಯಿತು. ತಾವರೆಗೆರೆಯ ಜೋಯಿಸನಿಗೆ ತಣ್ಣಗಾಗದೆ ಬೇರೆ ದಾರಿಯೆಲ್ಲಿ?
ಸೀತಾದೇವಿಯನ್ನು ಹುಡುಗನೊಬ್ಬ ನೋಡುವುದಕ್ಕೆ ಬಂದಿದ್ದ ಎಂಬ ವಿಷಯ ಅವಳ ಸ್ನೇಹಿತೆಯರಿಗೆ ತಿಳಿಯದೆ ಇರುವುದಕ್ಕೆ ಸಾಧ್ಯವೇ? ಹೇಗಿದ್ದ ಹುಡುಗ? ಚೆಲುವನೋ? ಅವರಿಗೋ ಕುತೂಹಲ. ಸಹಜ ತಾನೆ! ಅವರಿಗೂ ಆಸೆಯಿಲ್ಲವೇ ಚೆಲುವೆ ಸೀತಾದೇವಿಗೆ ಚೆಲುವ ಹುಡುಗನೇ ಸಿಗಬೇಕೆಂದು. ಬೆಳಗಾಗಲು ತಡ, ಕೆರೆಗೆ ನೀರಿಗೆ ಬಿಂದಿಗೆ ತೆಗೆದುಕೊಂಡು ಬಂದ ಸೀತಾದೇವಿ ನಿರೂಪಕನ ತಂಗಿಯಲ್ಲಿ ತನ್ನನ್ನು ನೋಡಲು ಬಂದ ತಾವರೆಗೆರೆಯ ಜೋಯಿಸರ ಮೊಮ್ಮಗನನ್ನು ನಿರಾಕರಿಸಿದ್ದನ್ನು, ಅದಕ್ಕೆ ಕಾರಣವನ್ನು ಹೇಳಿಯೇ ಬಿಟ್ಟಳು. ತನ್ನ ಕೂದಲಿಗಿಂತಲೂ ಕರಿಕಪ್ಪು ಹುಡುಗನನ್ನು ಮೆಚ್ಚುವುದಕ್ಕೆ, ಮದುವೆಯಾಗುವುದಕ್ಕೆ ಸಾಧ್ಯವೇ? ಚೆಲುವನಲ್ಲದಿದ್ದರೂ ಹೋಗಲಿ, ಆಕರ್ಷಕ ಬಣ್ಣವಾದರೂ ಇಲ್ಲದಿದ್ದರೆ ಹೇಗೆ? ಹುಡುಗ ಕರಿಕಪ್ಪು, ಇಷ್ಟವಿಲ್ಲ ಎನ್ನಲಾದೀತೆ? ಕೇಳಿದ ಹುಡುಗನ ಕಡೆಯವರು ಏನೆಂದಾರು? ಸೀತಾದೇವಿ ಜೋಯಿಸರ ಹುಡುಗನನ್ನು ತಿರಸ್ಕರಿಸಿದ್ದು ವೈದಿಕರ ಮನೆಯಲ್ಲಿ ಊಟ ಹೊತ್ತಾಗುವುದೆಂದಲ್ಲ, ಹುಡುಗ ಕರಿಕಪ್ಪೆಂದು. ಅದೂ ಅಕೆ ಈ ಬಗ್ಗೆ ಚರ್ಚಿಸಿದ್ದು, ತನ್ನ ಮನದಾಳದ ಅಭಿಪ್ರಾಯವನ್ನು ತಿಳಿಸಿದ್ದು ನಿರೂಪಕನ ತಂಗಿಗಲ್ಲದೆ ಇತರ ಸ್ನೇಹಿತೆಯರಿಗಲ್ಲ. ಹೀಗಿರುವಾಗ ಅವಳ ಮನದಾಳದಲ್ಲಿ ಬೀಡುಬಿಟ್ಟಿರುವ ಚೆಲುವ ಯಾರೆಂದು ತಿಳಿಯಲಾರದೇ?!
ಸೀತಾದೇವಿ ಹೊನ್ನೂರಿನ ಚೆಲುವೆ, ಬಲುಜಾಣೆ, ಗಂಭೀರೆ, ರತ್ನದಂಥವಳು ಮಾತ್ರವಲ್ಲ, ಆಕೆ ಹೊನ್ನೂರಿನ ಅಕ್ಕರೆಯ ಸಕ್ಕರೆಯ ಬೊಂಬೆ. ಮನೆಮಂದಿಗೆ ಮಾತ್ರವಲ್ಲ, ಊರವರಿಗೂ ಮಮತೆಯ ಮಗಳು. ಇಂತಹ ಅಕ್ಕರೆ ಸಕ್ಕರೆಯ ಬೊಂಬೆಯನ್ನು ಜೋಯಿಸರಾದರೇನಂತೆ? ಯಾರೋ ಕರಿ ಹುಡುಗ ಮದುವೆಯಾಗಬೇಕೇ? ಒಮ್ಮೆ ನೋಡಿದರೆ ಸಾಕು, ಮತ್ತೊಮ್ಮೆ ನೋಡಲಾಗದವನನ್ನು ಹೊನ್ನೂರ ಅಳಿಯನೆಂದು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಹೊನ್ನೂರಿನ ಸಕ್ಕರೆಯ ಬೊಂಬೆ ಸೀತಾದೇವಿ ಆತನೊಂದಿಗೆ ಹೇಗೆ ಬಾಳಲು ಸಾಧ್ಯ? ಶಾನುಭೋಗರ ಮನೆಯ ಅಳಿಯನಾಗುವ ಅರ್ಹತೆ ಜೋಯಿಸರ ಮೊಮ್ಮಗನಿಗೆ ಇದೆಯೇ? ಅವರ ಮನೆಯ ತೋರಣವೇ ಅತ್ಯಂತ ಸುಂದರವಾಗಿರುವಾಗ, ಅಂತಹ ಸುಂದರವಾದ ತೋರಣವನ್ನು ಮನೆಬಾಗಿಲಿಗೆ ಅಲಂಕರಿಸಿದ ಸೀತಾದೇವಿಯೂ ಅಷ್ಟೇ ಚೆಲುವೆಯಾಗಿರುವಾಗ ಅವಳು ಕರಿಕಪ್ಪು ಹುಡುಗನನ್ನು ಮದುವೆಯಾಗುವುದನ್ನು ಹೇಗೆ ಒಪ್ಪಲಾದೀತು? ಮನೆಯ ತೋರಣವೇ ಬಂದ ದಾರಿಗೆ ಸುಂಕವಿಲ್ಲ ಎಂದು ಸಾರುತ್ತಿತ್ತಲ್ಲ!
ಶಾನುಭೋಗರ ಮಗಳು ಊರಿಗೆಲ್ಲ ಚೆಲುವೆ. ಅದಕ್ಕಾಗಿಯೇ ತಾನೇ ಜೋಯಿಸರು ತಮ್ಮ ಮೊಮ್ಮಗನಿಗೆ ಅವಳನ್ನು ತಂದುಕೊಳ್ಳಲು ಬಯಸಿದ್ದು. ಬಂದವರನ್ನು ಉಪಾಯವಾಗಿ ಕಳುಹಿಸಿ ಬಲುಜಾಣೆ ಎಂದು ಸಾಧಿಸಿ ತೋರಿಸಿದಳಲ್ಲ! ಮೇಲಾಗಿ ಆಕೆ ರತ್ನದಂತಹ ಹುಡುಗಿ, ಅವಳಿಗೆ ಗಂಡು ಸಿಗುವುದಕ್ಕೆ ಕಷ್ಟವಿದೆಯೇ? ಎಂಬುದು ನಿರೂಪಕನ ವಾದ. ಪ್ರಾಯ ಹನ್ನೆರಡು ದಾಟಿತೆಂದು ತರಾತುರಿಯಿಂದ ಯಾರೋ ಗಂಡನ್ನು ಹುಡುಕಿ ಹಿಂದು ಮುಂದಾಲೋಚಿಸದೆ ಮದುವೆಮಾಡಿಕೊಡುವುದು ಸರಿಯೇ? ರೂಪ, ಗುಣ, ಬಣ್ಣ, ನಡೆ, ನುಡಿಗಳ ವಿಚಾರದಲ್ಲಿ ಸಾಮಾನತೆ ಬೇಡವೇ? ಅದಿಲ್ಲದಿದ್ದರೆ ಆಕೆ ಹೇಗೆ ಸಂಸಾರ ನಡೆಸಿಯಾಳು?! ಏನು ಸಂತಸಪಟ್ಟಾಳು?! ಅಸಮಜೋಡಿ ಎಂದಾದರೆ ಹೇಗೆ ಸಂಸಾರಸುಖವನ್ನು ಅನುಭವಿಸಿಯಾಳು?! ಹೀಗಿರುವಾಗ ಅವಳ ಚೆಲುವಿಗೆ ಸರಿಸಮಾನ ಗಂಡು ಸಿಗಲಾರನೇ? ಅಂತಹ ಚೆಲುವನೊಬ್ಬ ಗಂಡನಾಗಿ ಸಿಕ್ಕಿ ಆತನನ್ನು ಮದುವೆಯಾಗಿ ಸುಖವಾಗಿರಲಿ, ಸಂತಸಪಡಲಿ. ಅಂತಹ ಗಂಡು ಸಿಗುವುದಾದರೆ ಮದುವೆ ತಡವಾದರೂ ನಷ್ಟವಿಲ್ಲ ಎಂಬುದು ನಿರೂಪಕನ ನಿಲುವು.
ಕವನದಲ್ಲಿ ಮೊದಲಿನಿಂದ ಕೊನೆಯವರೆಗೂ ನಿರೂಪಕನಿಗೆ ಸೀತಾದೇವಿಯ ಮೇಲೆ ಒಲವು ಇರುವುದು ಸ್ಪಷ್ಟವಾಗುತ್ತದೆ. ಅವಳು ಚೆಲುವೆ, ರತ್ನದಂತಹ ಹುಡುಗಿ, ಬಲುಜಾಣೆ ಮೊದಲಾದ ಮೆಚ್ಚುಗೆಯ ಮಾತುಗಳು ನಿರೂಪಕನ ಒಲವನ್ನು ಸೂಚಿಸುತ್ತವೆ. ’ಅವಳ ಗಂಡನ ಹೆಸರ ಕೇಳಬೇಕು’ ಎಂಬ ಮಾತು ಅವಳ ಬಾಯಿಂದಲೇ ತನ್ನ ಹೆಸರನ್ನು ಕೇಳಬೇಕೆಂಬ ಸೂಕ್ಷ್ಮವಿಚಾರ ದೃಢವಾಗುತ್ತದೆ. ಜೊತೆಗೆ ಆಕೆಯ ಮನಸ್ಸಿನಲ್ಲೂ ’ಅವನ ಹೆಂಡತಿಯ ಹೆಸರ ಕೇಳಬೇಕು’ ಎಂಬ ಪ್ರಶ್ನೆಯೂ ಇದ್ದಿರಬಹುದೇನೋ! ಎಂಬ ಸಂಶಯವೂ ಮೂಡುತ್ತದೆ. ಇದಕ್ಕೆ ಪೂರಕವೆಂಬಂತೆ ಜೋಯಿಸರ ಮೊಮ್ಮಗನನ್ನು ನಯವಾಗಿ ತಿರಸ್ಕರಿಸಿದ್ದನ್ನು ಸೀತಾದೇವಿ ಹೇಳುವುದು ನಿರೂಪಕನ ತಂಗಿಯಲ್ಲಿ ಎಂಬುದನ್ನು ಗಮನಿಸಿಕೊಳ್ಳಬೇಕು. ಈ ವಿಚಾರ ಅವರಿಬ್ಬರೊಳಗಿನ ಪರಸ್ಪರ ಒಲವನ್ನು, ಮೆಚ್ಚುಗೆಯನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ. ಇಡೀ ಕವನ ಮಧುರಪ್ರೇಮದ ತಳಹದಿಯ ಮೇಲೆ ನಿರೂಪಿತವಾಗಿರುವುದನ್ನು ಕಾಣಬಹುದು. ಒಂದೆರಡು ಕಡೆಗಳಲ್ಲಿ ಪ್ರೇಮದ ಹೊಳಹುಗಳನ್ನು ನೀಡಿದರೂ ಕವಿ ಅದನ್ನು ಎಲ್ಲೂ ಬಹಿರಂಗಪಡಿಸದೆ ಸಹೃದಯರ ಕುತೂಹಲವನ್ನು ಭಾವಗೀತೆಯುದ್ದಕ್ಕೂ ಕಾಯ್ದುಕೊಂಡಿದ್ದಾರೆ. ಬಹಳ ಆಪ್ಯಾಯಮಾನವಾದ ಪ್ರೇಮಸನ್ನಿವೇಶವನ್ನು ಇಲ್ಲಿ ಆಸ್ವಾದಿಸಬಹುದು.
ಈ ಭಾವಗೀತೆಯನ್ನು ಸಂಗೀತದ ಹಿನ್ನೆಲೆಯಲ್ಲಿ ಕೇಳಿ ಆನಂದಿಸಿರಿ.
***
Good article
Thank you 🙏
ಶಾನುಭೋಗರ ಮಗಳು ಈ ಕವನದ ವಿವರಣೆ ಅಪ್ಯಾಯಮಾನವಾಗಿ ಮೂಡಿಬಂದಿದೆ. ವಿದ್ಯಾರ್ಥಿಗಳು ಇದನ್ನು ಓದುವುದರ ಮೂಲಕ ಇನ್ನಷ್ಟು ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಓದುಗರಿಗೆ ಆಪ್ತವಾಗುವ ನೆಲೆಯಲ್ಲಿ ಕವನವನ್ನು ವಿಶ್ಲೇಷಣೆ ಮಾಡಿದ್ದೀರಿ. ಇತ್ತೀಚಿನ ನಿಮ್ಮ ಎಲ್ಲ ಬರವಣಿಗೆ ಸೊಗಸಾಗಿ ಸರಳವಾಗಿ ಓದುಗರಿಗೆ ಆಪ್ತವಾಗುವ ನೆಲೆಯಲ್ಲಿ ಮೂಡಿ ಬರುತ್ತಿದೆ
ಧನ್ಯವಾದಗಳು ಸರ್