ಸಾಹಿತ್ಯಾನುಸಂಧಾನ

heading1

ಋಣವೆಂಬ ಪಾತಕವು-ಪುರಂದರದಾಸರು

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎಸ್ಸಿ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ)

ಋಣವೆಂಬ ಪಾತಕವು ಬಹು ಬಾಧೆಪಡಿಸುತಿದೆ  ||ಪ||

ಗುಣನಿಧಿಯೆ ನೀನೆನ್ನ ಋಣವ ಪರಿಹರಿಸೊ  ||ಅ.ಪ.||

ಪದ-ಅರ್ಥ: 

ಋಣ-ಸಾಲ; ಪಾತಕ-ಪಾಪ, ದೋಷ;  ಬಾಧೆಪಡಿಸು-ಪೀಡಿಸು;  ಗುಣನಿಧಿ-ಗುಣವನ್ನೇ ನಿಧಿಯಾಗುಳ್ಳವನು, ಭಗವಂತ.

            ಋಣ(ಸಾಲ)ವೆಂಬುದು ಒಂದು ಪಾಪ. ಅದು ಜೀವಕ್ಕೆ ಅಂಟಿಕೊಳ್ಳುವ ದೋಷ. ಇದು ಅತ್ಯಂತ ಘೋರವಾದುದು. ಅದು ಜೀವಕ್ಕೆ ಅಂಟಿಕೊಂಡು ನಿರಂತರ ಪೀಡಿಸುತ್ತಿದೆ. ಅದನ್ನು ಪರಿಹರಿಸಬೇಕಾದವನು ಭಗವಂತ. ಆತ ಸಕಲ ಗುಣಗಳಿಗೆ ನಿಧಿ, ಹಾಗೂ ಭಕ್ತವತ್ಸಲನೂ ಆಗಿರುವುದರಿಂದ  ಭಕ್ತನನ್ನು ಕಾಡುತ್ತಿರುವ ಈ ಋಣದ ಪಾಪವನ್ನು ಪರಿಹರಿಸಿ ಕಾಪಾಡಬೇಕು ಎಂದು ಪುರಂದರದಾಸರು ವಿಷ್ಣುವಿನಲ್ಲಿ ಮೊರೆಯಿಡುತ್ತಾರೆ. ಈ ಕೀರ್ತನೆಯ ಪಲ್ಲವಿಯು ಸಾಲವೆಂಬ ಪಾಪವು ಜೀವವನ್ನು ಪೀಡಿಸುತ್ತಿರುವುದನ್ನು ಉಲ್ಲೇಖಿಸಿದರೆ, ಅನುಪಲ್ಲವಿಯು ಅಂತಹ ಪಾಪದಿಂದ ಜೀವವನ್ನು ಪಾರುಮಾಡೆಂಬ ಕಳಕಳಿಯ ಪ್ರಾರ್ಥನೆಯನ್ನು ಸೂಚಿಸುತ್ತದೆ.

            ಮನುಷ್ಯ ತನ್ನ ಬದುಕಿನುದ್ದಕ್ಕೂ ತನ್ನ ಪ್ರಾರಬ್ಧಕರ್ಮಗಳಿಂದಾಗಿ ಹತ್ತಾರು ರೀತಿಯ ಸಾಲಗಳಿಗೆ, ಋಣಗಳಿಗೆ ಬಾಧ್ಯನಾಗುತ್ತಾನೆ. ಕೆಲವು ತಿಳಿದು ಮಾಡುವ ಋಣಗಳು ಅಥವಾ ಸಾಲಗಳು, ಇನ್ನು ಕೆಲವು ತಿಳಿಯದೆ ಮಾಡುವಂಥವು. ಇನ್ನು ಕೆಲವು ಜನ್ಮಾಂತರವಾಗಿ ಬರುವಂಥವು.  ಇವೆಲ್ಲವನ್ನೂ ಕಳೆದುಕೊಳ್ಳದೆ ಮುಕ್ತಿಯಿಲ್ಲ. ಕಳೆದುಕೊಳ್ಳಬೇಕಾದರೆ ಪ್ರತಿಯೂಬ್ಬನಿಗೂ ಅದಕ್ಕೆ ಪೂರಕವಾದ ಅನುಷ್ಠಾನಗಳು ಅಗತ್ಯ. ಹಾಗೆಯೇ, ಭಗವಂತನ ಅನುಗ್ರಹವೂ ಅತ್ಯಗತ್ಯ. ಆದುದರಿಂದಲೇ ಪುರಂದರದಾಸರು ಭಗವಂತನ ಅನುಗ್ರಹಕ್ಕಾಗಿ ನಿವೇದಿಸಿಕೊಳ್ಳುತ್ತಾರೆ.

 

ಒಡಲಿನಾಸೆಗೆ ಪರರ ಒಡವೆಗಳನೆ ತಂದು

ಬಿಡದೆ ವೆಚ್ಚವ ಮಾಡಿ ತೋಷ ಪಡುವೆ

ಕೊಡುವ ವೇಳೆಗೆ ಅವರ ಕೆಡು ನುಡಿಗಳನು ನುಡಿವೆ

ಕಡು ಮಹಾ ಪಾತಕವ ಪರಿಹರಿಸೊ ಹರಿಯೆ

ಪದ-ಅರ್ಥ:

ಒಡಲಿನಾಸೆ-ದೇಹದ ಬಯಕೆ;  ಪರರ ಒಡವೆ-ಅನ್ಯರ (ನಮ್ಮದಲ್ಲದ) ಸೊತ್ತು(ಹಣ, ಚಿನ್ನ ಉಡುಗೆ ಇತ್ಯಾದಿ);  ಬಿಡದೆ-ನಿರಂತರ;  ವೆಚ್ಚವಮಾಡಿ-ಖರ್ಚುಮಾಡಿ;  ತೋಷಪಡು-ಸಂತಸಪಡು;  ಕೊಡುವ-ಹಿಂತಿರುಗಿಸುವ;  ಅವರ-ಅವರಿಗೆ;  ಕೇಡುನುಡಿ-ಕೆಟ್ಟಮಾತು;  ಕಡು-ಅತಿಯಾದ;  ಮಹಾ ಪಾತಕ-ದೊಡ್ಡ ಪಾಪ. 

            ಮನುಷ್ಯದೇಹ ಹಲವನ್ನು ಬಯಸುತ್ತದೆ. ಹೊಟ್ಟೆಗೆ ಅನ್ನ, ಧರಿಸುವುದಕ್ಕೆ ಬಟ್ಟೆ, ತೊಡುವುದಕ್ಕೆ ಆಭರಣ ಇತ್ಯಾದಿ. ಇವೆಲ್ಲ ಆಸೆಗಳನ್ನು ತೀರಿಸುವುದಕ್ಕೆ ಹಣ ಬೇಕು. ತನ್ನಲ್ಲಿ ಇಲ್ಲದಿದ್ದಾಗ ಅನ್ಯರಿಂದ ಸಾಲವಾಗಿ ತಂದು, ಸಾಲದ ಪರಿವೆಯೇ ಇಲ್ಲದೆ, ಮರುಸಂದಾಯದ ಕಲ್ಪನೆಯನ್ನೇ ಮಾಡಿಕೊಳ್ಳದೆ ಒಂದಿಷ್ಟನ್ನೂ ಬಿಡದೆ ವೆಚ್ಚಮಾಡಿದ್ದೇನೆ. ಅದರಿಂದ ಸಂತಸವನ್ನು ತಾಳಿದ್ದೇನೆ. ಹಿಂದಿರುಗಿಸುವ ವಿಚಾರವನ್ನೇ ಮರೆತುಬಿಟ್ಟಿದ್ದೇನೆ. ಆದರೆ ಒಂದಲ್ಲ ಒಂದು ದಿನ ಹಿಂದಿರುಗಿಸಬೇಕಾದ ಸಂದರ್ಭಬಂದಾಗ, ಸಾಲವನ್ನು ಕೊಟ್ಟವರು ಮರಳಿ ಕೇಳಿದಾಗ ಸಾಲಕೊಟ್ಟವರಿಗೆ ಕೆಟ್ಟಮಾತುಗಳನ್ನು ಆಡಿದ್ದೇನೆ. ಹಿಂದಿರುಗಿಸುವುದಕ್ಕೆ ಹಣ, ಒಡವೆಗಳಿಲ್ಲದಿದ್ದಾಗ, ಹಿಂದಿರುಗಿಸುವುದಕ್ಕೆ ಮನಸ್ಸೂ ಇಲ್ಲದಿದ್ದಾಗ ಸಾಲಕೊಟ್ಟವರನ್ನೇ ಹೆದರಿಸುವ, ಕೆಟ್ಟಮಾತನಾಡುವ ಉದ್ಧಟತನವನ್ನು ತೋರಿದ್ದೇನೆ.  ಅನ್ಯರಿಂದ ಸಾಲಪಡೆಯುವ, ಬೇಕಾಬಿಟ್ಟಿ ಖರ್ಚುಮಾಡಿ ಖುಷಿಪಡುವ, ಮರುಸಂದಾಯದ ವೇಳೆಗೆ ಕೆಟ್ಟಮಾತಾಡುವ ಇಂತಹ ದೊಡ್ಡ ಪಾಪಗಳನ್ನು ಪರಿಹರಿಸಿ ನನ್ನನ್ನು ಕಾಪಾಡಬೇಕು ಎಂದು ಪುರಂದರದಾಸರು ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ.

            ಮನುಷ್ಯದೇಹಕ್ಕೆ ಹಲವಾರು ಆಸೆ, ಆಕಾಂಕ್ಷೆಗಳು. ಸಾಂಸಾರಿಕವಾದ ಇನ್ನಷ್ಟು ಬಯಕೆಗಳು. ಅವುಗಳನ್ನು ತೀರಿಸಿಕೊಳ್ಳುವುದಕ್ಕೆ ಹಲವಾರು ಮಾರ್ಗೋಪಾಯಗಳ ಹುಡುಕಾಟ.  ಹಣವಿಲ್ಲದಿದ್ದಾಗ ಸಾಲಕ್ಕೆ ಮೊರೆ. ಸಾಲ ಕೊಳ್ಳುವಾಗ ಖುಷಿ, ವ್ಯಯಿಸುವಾಗಲೂ ಅಷ್ಟೇ. ಹಿಂತಿರುಗಿಸುವ ವಿಚಾರವೇ ಮರೆತುಹೋಗುತ್ತದೆ. ತಿನ್ನುವ, ಧರಿಸುವ, ಉಡುವ ಖುಷಿಯು ಸಾಲ ಮರುಪಾವತಿಯ ವಿಚಾರವನ್ನು ಮರೆಸಿಬಿಡುತ್ತದೆ. ’ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ’ ಎಂಬಂತೆ ಯಾರದ್ದೋ ದುಡ್ಡಿನಲ್ಲಿ ಸಂತಸಪಡುವ, ಸಂಸಾರದ ಆಸೆಗಳನ್ನು ತೀರಿಸಿಕೊಳ್ಳುವ, ಅನ್ಯರನ್ನು ಖುಷಿಪಡಿಸುವ ಅನಗತ್ಯ ಹಂಬಲ. ಕೊನೆಗೆ ಸಾಲಕೊಟ್ಟವರನ್ನೇ ದೂಷಿಸುವ, ನಿಂದಿಸುವ ಪ್ರಸಂಗ. ಅಂತೂ ಪಡೆದ ಸಾಲದಿಂದಲೂ ಉಳಿಗಾಲವಿಲ್ಲ, ಸಾಲಕೊಟ್ಟವರಿಗೂ ಸಾಲಗಾರರಿಂದ ಉಳಿಗಾಲವಿಲ್ಲ. ಈ ಪ್ರಕ್ರಿಯೆ ನಿರಂತರ ಸಾಗುತ್ತಲೇ ಇರುತ್ತದೆ. ಇದರಿಂದ ಪಾರಾಗಬೇಕಾದರೆ ಭಗವಂತನ ಅನುಗ್ರಹ ಬೇಕು. ಈ ಅನುಗ್ರಹ ಬೇಕಾದರೆ ಭಕ್ತಿಯೂ ಬೇಕು, ವಿರಕ್ತಿಯೂ ಬೇಕು ಎಂಬುದನ್ನು ಪುರಂದರದಾಸರು ಸ್ಪಷ್ಟಪಡಿಸಿದ್ದಾರೆ. 

 

ಕೊಟ್ಟವರು ಬಂದೆನ್ನ ನಿಷ್ಠೂರಗಳನಾಡಿ

ಕೆಟ್ಟ ಬೈಗಳ ಬೈದು ಮನದಣಿಯಲು

ದಿಟ್ಟತನವನು ಬಿಟ್ಟು ಕಳೆಗುಂದಿದೆನಯ್ಯ

ಸೃಷ್ಟಿಗೊಡೆಯನೆ ಎನ್ನ ಋಣವ ಪರಿಹರಿಸೊ

ಪದ-ಅರ್ಥ:

ಕೊಟ್ಟವರು-ಸಾಲನೀಡಿದವರು;  ನಿಷ್ಠೂರಗಳನ್ನಾಡಿ-ಕೆಟ್ಟಮಾತಾಡಿ, ತೀಕ್ಷ್ಣವಾದ ಮಾತನ್ನಾಡಿ;  ಮನದಣಿಯಲು-ಮನಸ್ಸು ತಣಿಯುವಂತೆ;  ದಿಟ್ಟತನ-ಧೈರ್ಯ, ಸಾಹಸ;  ಕಳೆಗುಂದಿದೆ-ನಿಸ್ತೇಜನಾದೆ;  ಸೃಷ್ಟಿಗೊಡೆಯ-ಭಗವಂತ;  ಋಣ-ಸಾಲ.

            ದೈಹಿಕ, ಮಾನಸಿಕ ಹಾಗೂ ಸಾಂಸಾರಿಕ ಬಯಕೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಒಂದಷ್ಟು ಸಾಲಮಾಡುವುದು ಮನುಷ್ಯನ ಸ್ವಭಾವ. ದೊರೆತ ಸಾಲಗಳಿಂದ ಬಯಕೆಗಳೆಲ್ಲವನ್ನೂ ಈಡೇರಿಸಿಕೊಳ್ಳುತ್ತಾ ಸಂತಸದ ಗುಂಗಿನಲ್ಲಿರುವಾಗ ಸಾಲದ ವಿಚಾರವೇ ಮರೆತುಹೋಗುತ್ತದೆ.  ಸಾಲಕೊಟ್ಟವರು ಸುಮ್ಮನೆ ಬಿಡಲು ಸಾಧ್ಯವೇ? ಅವರು ಬಂದು ಸಾಲಕ್ಕಾಗಿ ತನ್ನನ್ನು ಪೀಡಿಸಿದಾಗ, ತಪ್ಪಿಸಿಕೊಳ್ಳಲು ಏನೇನೋ ಕಥೆಗಳು, ಉಪಕಥೆಗಳ ಸೃಷ್ಟಿ. ಅವುಗಳಿಂದ ಸಾಲಕೊಟ್ಟವರು ಮಣಿಯದಿದ್ದಾಗ ಏನೇನೋ ಭರವಸೆ, ಅದೂ ನಡೆಯದಿದ್ದಾಗ  ಸಾಲಕೊಟ್ಟವರು ಕೆಟ್ಟದಾಗಿ ಬೈದು ಕೋಪವನ್ನು ತೋರಿಸಿ ಮನಸ್ಸನ್ನು ತಣಿಸಿಕೊಳ್ಳುತ್ತಾರೆ. ಸಮಾಜದಲ್ಲಿ ಘನತೆಯನ್ನು ಕಳೆದುಕೊಂಡು ಬದುಕುವ ಪ್ರಸಂಗ ಎದುರಾಗುತ್ತದೆ. ಆಲ್ಲದೆ, ತೆಗೆದುಕೊಂಡ ಸಾಲವನ್ನು ಮರಳಿಸದಿದ್ದರೆ ಅದು ಮತ್ತೆ ಮತ್ತೆ ಒಂದಲ್ಲ ಒಂದು ರೀತಿಯಲ್ಲಿ ನೆನಪಾಗಿ ಕಾಡುತ್ತಲೇ ಇರುತ್ತದೆ. ಮನಸ್ಸಿನ ಧೈರ್ಯ, ಸ್ಥೈರ್ಯಗಳೆಲ್ಲವೂ ಅಳಿಯುತ್ತವೆ. ಮನುಷ್ಯ ನೈತಿಕಹಾದಿಯಲ್ಲಿದ್ದಾಗ ತನ್ನಲ್ಲಿ ಧೈರ್ಯ, ಸಾಹಸಗಳಿರುತ್ತವೆ. ನೈತಿಕತೆ ಇಲ್ಲದಿದ್ದಾಗ ಅವೆಲ್ಲವೂ ಅಳಿದು ನಿಸ್ತೇಜನಾಗುತ್ತೇನೆ. ತಾನು ಈ ಸ್ಥಿತಿಗೆ ಕುಸಿಯದಂತೆ ತನ್ನ ಸಾಲವೆಲ್ಲವನ್ನೂ ಪರಿಹರಿಸೆಂದು ಪುರಂದರದಾಸರು ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ.

            ’ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ ಋಣಂ ಕೃತ್ವಾ ಘೃತಂ ಪಿಬೇತ್’ ಎಂಬುದು ಚಾರ್ವಾಕ ಸಿದ್ಧಾಂತದಲ್ಲಿ ಕೇಳಿಬರುವ ಒಂದು ಮಾತು. ಮನುಷ್ಯನಲ್ಲಿ ತಿಳಿದೋ ತಿಳಿಯದೆಯೋ ಈ ವಿಚಾರ ದೃಢವಾಗಿ ಬೇರೂರಿದೆ. ’ಸತ್ತು ಬೂದಿಯಾಗುವ ಈ ದೇಹ ಮರಳಿ ಹುಟ್ಟಿಬರುವುದು ಯಾವಾಗ? ಹಾಗಾಗಿ ಸಾಲಮಾಡು, ತುಪ್ಪ ತಿನ್ನು’ ಎಂಬ ವಿಚಾರವೇ ಇಂದು ಬಹುತೇಕ ಮನುಷ್ಯರ ಮನಸ್ಸಿನಲ್ಲಿ ಮನೆಮಾಡಿಕೊಂಡಿದೆ. ಸಾಲಮಾಡಿ ಖುಷಿಪಡುವುದಷ್ಟೇ. ಸಾಲ ತೀರಿಸಬೇಕೆಂದು ಎಲ್ಲೂ ಹೇಳಿಲ್ಲ. ಸಾಲಮಾಡಿ ಖುಷಿಪಡುವಾಗ ಸಾಲತೀರಿಸಬೇಕೆಂಬ ವಿಚಾರ ಎಲ್ಲೂ ನೆನಪಾಗುವುದಿಲ್ಲ. ಸಾಲಗಾರರಿಂದ ತಪ್ಪಿಸಿಕೊಳ್ಳಲು ಏನೇನೋ ತಂತ್ರ-ಕುತಂತ್ರಗಳ ಪ್ರಯೋಗ. ಹದ್ದುಮೀರಿದ ಮಾತು, ಸಾಲಕೊಟ್ಟು ಸಹಾಯಮಾಡಿದವನಿಗೇ ಕೆಟ್ಟಮಾತುಗಳಿಂದ ಮರ್ಯಾದೆ. ಇವು ಮನುಷ್ಯನ ಸಾಮಾನ್ಯ ಪ್ರವೃತ್ತಿಗಳು. ಅದಕ್ಕಾಗಿಯೇ ಪುರಂದರದಾಸರು ಸಾಲಮಾಡುವ ಪ್ರವೃತ್ತಿ, ಹಾಗೂ ಅದರಿಂದ ಒದಗಬಹುದಾದ ವೈಪರೀತ್ಯಗಳನ್ನು ಪರಿಹರಿಸೆಂದು ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ.

 

ಆಳಿದೊಡೆಯನ ಮಾತು ಕೇಳಿ ನಡೆಯಲುಬಹುದು

ಊಳಿಗವ ಮಾಡಿ ಮನದಣಿಯಬಹುದು

ಕಾಳಗವ ಪೊಕ್ಕು ಕಡಿದಾಡಿ ಜಯಿಸಲುಬಹುದು

ಪೇಳಲಳವಲ್ಲ ಋಣದವಗೊಂದು ಸೊಲ್ಲ

 ಪದ-ಅರ್ಥ:

ಆಳಿದೊಡೆಯ-ಕೆಲಸಕೊಟ್ಟು ಸಲಹುವವನು, ಮಾಲೀಕ;  ಊಳಿಗ-ಸೇವೆ, ಜೀತ;  ಮನದಣಿ-ಮನಸ್ಸನ್ನು ಸಂತಸಪಡಿಸಿಕೊಳ್ಳು;  ಕಾಳಗ-ಯುದ್ಧ;  ಕಡಿದಾಡಿ-ಕಾದಾಡಿ, ಯುದ್ಧಮಾಡಿ;  ಅಳವಲ್ಲ-ಸಾಧ್ಯವಿಲ್ಲ;  ಋಣದವ-ಸಾಲಗಾರ;  ಸೊಲ್ಲ-ಮಾತನ್ನು.

            ಪುರಂದರದಾಸರು ಈ ಚರಣದಲ್ಲಿ ಸಾಲಗಾರರಿಗೆ ಬುದ್ಧಿವಾದವನ್ನು ಹೇಳುವುದು ಅಸಾಧ್ಯವೆಂಬುದನ್ನು ಮೂರು ದೃಷ್ಟಾಂತಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ಜಗತ್ತಿನಲ್ಲಿ ಆಳುವವರು ಕೆಲವರು, ಆಳಿಸಿಕೊಳ್ಳುವವರು ಹಲವರು. ಆಳಿಸಿಕೊಳ್ಳುವವರು ತಮ್ಮನ್ನು ಆಳುವವರ ಮಾತುಗಳನ್ನು ಕೇಳಿಕೊಂಡು ಬದುಕಬಹುದು. ಆಳುವವರ ದಬ್ಬಾಳಿಕೆಯಿರಲಿ, ಕೆಟ್ಟಮಾತಿರಲಿ, ನಿಂದೆಯಿರಲಿ ಎಲ್ಲವನ್ನೂ ಸಹಿಸಿಕೊಂಡು ಅಥವಾ ಆಳುವವರನ್ನು ಸಮಾಧಾನಿಸಿ ಬಾಳುವುದಕ್ಕೆ ಸಮಸ್ಯೆಯಾಗಲಾರದು. ಹಾಗೆಯೇ  ಒಡೆಯರ ಮನೆಯಲ್ಲಿ, ಜಮೀನಿನಲ್ಲಿ ಜೀತದಾಳಾಗಿ ದುಡಿದು, ಒಡೆಯನ ಹಿಂಸೆಗಳನ್ನು ಸಹಿಸಿಕೊಂಡು, ತಾವು ಮಾಡುವ ಕೆಲಸಗಳಿಂದಾಗಿ ಮನಸ್ಸಿನಲ್ಲಿಯೇ ಸಂತಸಪಟ್ಟುಕೊಳ್ಳಬಹುದು. ಹಾಗೆಯೇ, ಯುದ್ಧರಂಗವನ್ನು ಪ್ರವೇಶಿಸಿ, ಅಂಗಾಂಗಗಳು ಘಾಸಿಯಾಗುವ ಸಂಭವವಿದ್ದರೂ  ಪ್ರಾಣಾಪಾಯವಿದ್ದರೂ ವೈರಿಗಳೊಂದಿಗೆ ಹೋರಾಡಿ ಜಯಿಸಬಹುದು. ಆದರೆ ಸಾಲದ ಗುಂಗಿನಲ್ಲಿರುವವನಿಗೆ, ಅಥವಾ ಸಾಲವನ್ನೇ ನೆಚ್ಚಿಕೊಂಡು ಅದನ್ನು ಹಿಂದಿರುಗಿಸದೆ ಕಾಡುವವನಿಗೆ ಯಾವ ಸಮಾಧಾನದ ಮಾತುಗಳನ್ನೂ ಆಡುವುದು ಸಾಧ್ಯವಿಲ್ಲ. ಅವನು ಅವುಗಳನ್ನು ಕೇಳಿಸಿಕೊಳ್ಳುವ ಮನಃಸ್ಥಿತಿಯನ್ನೂ ಹೊಂದಿರುವುದಿಲ್ಲ ಎಂದು ಪುರಂದರದಾಸರು  ಸ್ಪಷ್ಟಪಡಿಸಿದ್ದಾರೆ.

            ಲೋಕದಲ್ಲಿ ಕೆಲವು ಅಸಾಧ್ಯದ, ಹಿಂಸೆಯ, ಅವಮಾನಕರವಾದ ಮತ್ತು ಕಿರಿಕಿರಿಯನ್ನುಂಟುಮಾಡುವ ಕೆಲಸಗಳಿವೆ. ಒಡೆಯನ ಹೊಲದಲ್ಲಿ ದುಡಿಯುವುದಿರಬಹುದು, ಜೀತಗಾರಿಕೆಯಿರಬಹುದು, ಯುದ್ಧರಂಗದಲ್ಲಿ ವೈರಿಗಳೊಂದಿಗೆ ಹೋರಾಡುವುದಿರಬಹುದು-ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಮಾನಸಿಕ ಹಾಗೂ ದೈಹಿಕ ಹಿಂಸೆ, ಅವಮಾನ, ದುಃಖಗಳನ್ನು ನೀಡಬಹುದಾದರೂ ಸಾವುನೋವುಗಳನ್ನು ತಂದೊಡ್ಡಬಹುದಾದರೂ ಮನಸ್ಸನ್ನು ಗಟ್ಟಿಗೊಳಿಸಿ, ಎದುರಾದ ಕಷ್ಟಗಳೆಲ್ಲವನ್ನೂ ಮರೆಯುತ್ತ ಹೇಗೋ ನಿಭಾಯಿಸಬಹುದು. ಆದರೆ ಸಾಲಪಡೆದವರಿಗೆ ಸಾಲದಿಂದಾಗುವ ಸಮಸ್ಯೆಗಳನ್ನು, ಬದುಕಿಗೊದಗುವ ಹಾನಿಯನ್ನು, ಸಂಬಂಧಗಳ ನಾಶವನ್ನು ತಿಳಿಸಿಹೇಳುವುದು, ಅವರ ಮನಃಸ್ಥಿತಿಯನ್ನು ಸುಧಾರಿಸುವುದು ತುಂಬಾ ಕಷ್ಟದ ಮಾತ್ರವಲ್ಲ ಅಸಾಧ್ಯದ ಕೆಲಸ ಎಂಬುದು ಪುರಂದರದಾಸರ ಅಭಿಪ್ರಾಯ.

 

ಹರಿವ ಹಾವನು ತೆಗೆದು ಶಿಕೆ ಸುತ್ತಲುಬಹುದು

ಉರಿವ ಉರಿಯೊಳು ಪೊಕ್ಕು ಕುಣಿಯಬಹುದು

ಮುರಿವ ಮಾಳಿಗೆಗೆ ಕೈಯೊಡ್ಡಿ ನಿಲ್ಲಿಸಬಹುದು

ಧರೆಯೊಳಗೆ ಋಣದವನ ಜಯಿಸಲಳವಲ್ಲ

ಪದ-ಅರ್ಥ:

ಹರಿವ ಹಾವು-ಹರಿದಾಡುತ್ತಿರುವ ಹಾವು;  ಶಿಕೆ-ಜುಟ್ಟು; ಉರಿ-ಬೆಂಕಿ;  ಮುರಿವ ಮಾಳಿಗೆ-ಕುಸಿದುಬೀಳುತ್ತಿರುವ ಮಾಳಿಗೆಮನೆ;  ಧರೆ-ಭೂಮಿ;  ಋಣದವನು-ಸಾಲಗಾರ;  ಅಳವಲ್ಲ-ಸಾಧ್ಯವಿಲ್ಲ.

            ಜಗತ್ತಿನಲ್ಲಿ ಸಾಲಗಾರನೊಂದಿಗೆ ವಾದಮಾಡಿ ಜಯಿಸುವುದು ಸಾಧ್ಯವಿಲ್ಲ ಎಂಬುದನ್ನು ಪುರಂದರದಾಸರು ಈ ಚರಣದಲ್ಲಿ ಮೂರು ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ಎಲ್ಲೆಂದರಲ್ಲಿ ಹರಿದಾಡುತ್ತಿರುವ ವಿಷದ ಹಾವನ್ನು, ಅದು ಕಚ್ಚುವ ಸಾಧ್ಯತೆಗಳಿದ್ದರೂ  ಅದೊಂದು ಅಪಾಯಕಾರಿಯಾದ ಕೆಲಸವಾದರೂ ಅದನ್ನು ಹಿಡಿದು ತನ್ನ ಜುಟ್ಟಿನ ಸುತ್ತ ಸುತ್ತಿಕೊಂಡು ಸಾಹಸವನ್ನು ಮೆರೆಯಬಹುದು. ಬೆಂಕಿ ಉರಿಯುತ್ತ ಎಲ್ಲವನ್ನೂ ಸುಟ್ಟುಹಾಕುವ, ದೇಹವೆಲ್ಲವನ್ನೂ ಸುಡುವ ಶಕ್ತಿಯಿರುವುದಾದರೂ ಅಂತಹ ಉರಿಯುತ್ತಿರುವ ಬೆಂಕಿಯಲ್ಲಿ ಹಾರಿ ಕುಣಿಯಬಹುದು. ನಾವು ವಾಸಿಸುವ ಮಾಳಿಗೆಮನೆ ಅಕಸ್ಮಾತ್ ಕುಸಿಯತೊಡಗಿದರೂ ನಮ್ಮ ಕೈಗಳನ್ನು ಆಧರಿಸಿಕೊಂಡು ಅದನ್ನು ಬೀಳದಂತೆ ತಡೆದು ನಿಲ್ಲಸಬಹುದು. ಇದು ಅಸಾಧ್ಯದ ಹಾಗೂ ಬಹುಪ್ರಯಾಸದ ಕೆಲಸವಾದರೂ ಹೇಗೋ ನಿಭಾಯಿಸಬಹುದು. ಆದರೆ ಸಾಲಗಾರನೊಡನೆ ವಾದಹೂಡಿ, ಆತನಿಗೆ ಬುದ್ಧಿವಾದವನ್ನು ಹೇಳಿ, ಆತನಿಗೆ ಸಾಲದಿಂದಾಗುವ ಸಮಸ್ಯೆಗಳನ್ನು ಹಾಗೂ ಅದರಿಂದ  ನಶಿಸಬಹುದಾದ ಮಾನವೀಯ ಸಂಬಂಧಗಳನ್ನು ವಿವರಿಸಿ, ಆತನ ಮನಸ್ಸನ್ನು ಗೆಲ್ಲುವುದು ಸಾಧ್ಯವಿಲ್ಲದ ಕೆಲಸ ಎಂಬುದು ಪುರಂದರದಾಸರ ಅಭಿಪ್ರಾಯ.

            ಲೋಕದಲ್ಲಿ ಕೆಲವು ಅಸಾಧ್ಯದ ಕೆಲಸಗಳಿವೆ. ಅವು ಬಹಳ ಅಪಾಯಕಾರಿ ಕೆಲಸಗಳೂ ಕೂಡಾ. ಅಂತಹ ಕೆಲಸಗಳಿಂದ ಮನುಷ್ಯನಿಗೆ, ಅತನ ಪ್ರಾಣಕ್ಕೆ ಕೇಡುಂಟಾಗಬಹುದಾದರೂ ಅವುಗಳನ್ನು ಜಾಣತನದಿಂದ, ಸಮಯಪ್ರಜ್ಞೆಯಿಂದ, ಯುಕ್ತಿಯಿಂದ ನಿಭಾಯಿಸಿಕೊಳ್ಳಬಹುದು. ಅವುಗಳಲ್ಲಿ ವಿಷದ ಹಾವಿನೊಂದಿಗಿನ ಸಾಹಸವಿರಬಹುದು, ಸುಡುವ ಬೆಂಕಿಯೊಳಗೆ ಕುಣಿಯುವುದಿರಬಹುದು ಅಥವಾ ಉರುಳುತ್ತಿರುವ ಮಾಳಿಗೆಮನೆಯನ್ನು ಉರಳದಂತೆ ತಡೆಯುವುದಿರಬಹುದು-ಇವೆಲ್ಲವೂ ಅಸಾಧ್ಯವಾದರೂ ನಿಭಾಯಿಸಬಹುದು. ಆದರೆ ಸಾಲಗಾರರಿಗೆ ತಿಳಿಸಿಹೇಳುವುದು, ಅವರ ಮನಸ್ಸನ್ನು ಬದಲಾಯಿಸುವುದು,  ಅವರನ್ನು ಸುಧಾರಿಸುವುದು ಅಸಾಧ್ಯದ ಕೆಲಸಗಳೇ ಸರಿ. ಮನುಷ್ಯನ ಮನಸ್ಸು ಒಮ್ಮೆ ಸಾಲಕ್ಕೆ ದಾಸನಾಯಿತೆಂದರೆ  ಮತ್ತೆ ಅದರಿಂದ ಮುಕ್ತಿಯನ್ನು ಪಡೆಯಲಾರದು ಎಂಬುದನ್ನು ಪುರಂದರದಾಸರು ಸ್ಪಷ್ಟಪಡಿಸಿದ್ದಾರೆ. 

 

ಹೆತ್ತ ಸೂತಕ ಮತ್ತೆ ಹತ್ತುದಿನ ಪರಿಯಂತ

ಮೃತ್ಯು ಸೂತಕವು ಹನ್ನೊಂದು ದಿವಸ

ಮತ್ತೆ ಋಣ ಸೂತಕವು ಜನ್ಮ ಜನ್ಮಾಂತರದಿ

ಎತ್ತ ಪೋದರು ಬಿಡದೆ ಬೆನ್ನಟ್ಟಬಹುದು

ಪದ-ಅರ್ಥ:

ಹೆತ್ತ ಸೂತಕ-ಹುಟ್ಟಿನ ಮೈಲಿಗೆ;  ಹತ್ತು ದಿನ ಪರಿಯಂತ-ಹತ್ತು ದಿನಗಳ ಕಾಲ;  ಮೃತ್ಯು ಸೂತಕ-ಸಾವಿನ ಮೈಲಿಗೆ;  ಋಣ ಸೂತಕ-ಸಾಲದ ಮೈಲಿಗೆ.

            ಸಾಲದ ಸೂತಕವು ಹುಟ್ಟು ಹಾಗೂ ಮರಣದ ಸೂತಕಗಳಿಗಿಂತಲೂ ಮಿಗಿಲಾದುದು ಎಂಬುದನ್ನು ಪುರಂದರದಾಸರು ಈ ಚರಣದಲ್ಲಿ ಸ್ಪಷ್ಟಪಡಿಸಿದ್ದಾರೆ.  ಮನುಷ್ಯನಿಗೆ ತನ್ನ ಬದುಕಿನಲ್ಲಿ ಮುಖ್ಯವಾಗಿ ಎರಡು ಸೂತಕಗಳಿವೆ. ಮೊದಲನೆಯದು ಹುಟ್ಟಿನ ಸೂತಕ. ಮನೆಯಲ್ಲಿ ಅಥವಾ ಕುಟುಂಬದೊಳಗೆ ಮಗುವೊಂದು ಜನಿಸಿತು ಎಂದಾದರೆ ಆ ಕುಟುಂಬಕ್ಕೆಲ್ಲ ಹತ್ತು ದಿನಗಳ ಕಾಲ ಹುಟ್ಟಿನ ಸೂತಕವಿರುತ್ತದೆ. ಹಾಗೆಯೇ ಒಂದು  ಮನೆಯಲ್ಲಿ ಅಥವಾ ಒಂದು ಕುಟುಂಬದಲ್ಲಿ ಒಂದು ಸಾವು ಸಂಭವಿಸಿತು ಎಂದಾದರೆ ಆ ಕುಟುಂಬದವರಿಗೆ ಹನ್ನೊಂದು ದಿನಗಳವರೆಗೆ  ಮರಣದ ಸೂತಕವಿರುತ್ತದೆ. ಎರಡಲ್ಲಿಯೂ ಅಷ್ಟೂ ದಿನಗಳ ಅವಧಿ ಮುಗಿದ ಮೇಲೆ ಶುದ್ಧಕ್ರಿಯೆಗಳನ್ನು ನೆರೆವೇರಿಸಿ ಸೂತಕಗಳಿಂದ ಮುಕ್ತಿಯನ್ನು ಪಡೆಯಬಹುದು. ಆದರೆ ಸಾಲದ ಸೂತಕ ಮಾತ್ರ ಒಂದು ಜನ್ಮದಲ್ಲಿ ಮುಗಿಯದೆ, ಮನುಷ್ಯನ ಜನ್ಮ ಜನ್ಮಾಂತರಗಳವರೆಗೂ ಬಿಡದೆ ಬೆನ್ನಟ್ಟುತ್ತದೆ. ಹಾಗಾಗಿ ಸಾಲ ಕೊಳ್ಳುವುದು ಮುಖ್ಯವಲ್ಲ, ಅದನ್ನು ಸರಿಯಾದ ಸಮಯದೊಳಗೆ ಮರುಪಾವತಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಅದರಿಂದ ಒದಗಬಹುದಾದ ಹಿಂಸೆಗಳು ಸೂತಕಕ್ಕೆ ಸಮ ಎಂಬುದು ಪುರಂದರದಾಸರ ಅಭಿಪ್ರಾಯ.

            ಸೂತಕ ಎಂಬುದು ಮನುಷ್ಯನ ಬದುಕಿನಲ್ಲಿನ ಒಂದು ಸಾಮಾನ್ಯವಾದ ಆಚರಣೆ. ಹುಟ್ಟಿನ ಹಾಗೂ ಮರಣದ ಸಮಯದಲ್ಲಿನ ಸೂತಕಗಳಿಗೆ ಕೆಲವು ವಿಧಿನಿಷೇಧಗಳಿವೆ. ಅವುಗಳಿಂದ ಮುಕ್ತನಾಗದೆ ಮನೆಯಲ್ಲಾಗಲೀ  ಇತರೆಡೆಗಳಲ್ಲಾಗಲೀ ಮಂಗಲಕಾರ್ಯಗಳನ್ನು ನಡೆಸುವುದು ನಿಷಿದ್ಧ. ಆದರೆ ಈ ಸೂತಕಗಳು ನಿರ್ದಿರ್ಷ್ಟ ದಿನಗಳವರೆಗೆ ಮಾತ್ರ. ಆದರೆ ಸಾಲದ ಸೂತಕ ಮಾತ್ರ ಇವೆರಡಕ್ಕಿಂತಲೂ ಅಪಾಯಕಾರಿಯಾಗಿದ್ದು, ಅನಿರ್ದಿಷ್ಟಾವಧಿಯವರೆಗೆ ವಿಸ್ತಾರಗೊಳ್ಳುವಂತಹುದು. ಮಾತ್ರವಲ್ಲ, ಅದು ಜನ್ಮ ಜನ್ಮಾಂತರಗಳವರೆಗೂ ಕಾಡುವಂತಹುದು. ಹಾಗಾಗಿ ಸಾಲಮಾಡಿ ಸೂತಕದೊಳಗೆ ಬಿದ್ದು ನಮ್ಮನ್ನು ನಾವು ಹಲವು ನಿಷೇಧಗಳಿಗೆ ಒಳಪಡಿಸಿಕೊಳ್ಳುವುದು, ಸಮಾಜದಲ್ಲಿ ಸ್ಥಾನಮಾನಗಳೆಲ್ಲವನ್ನೂ ಕಳೆದುಕೊಳ್ಳುವುದು  ಬುದ್ಧಿವಂತಿಕೆಯ ವಿಚಾರವಲ್ಲ ಎಂಬುದು ಪುರಂದರದಾಸರ ಅಭಿಪ್ರಾಯ.

 

ಅವನ ಒಡವೆಗಳಿಂದ ದಾನ ಧರ್ಮವ ಮಾಡಿ

ಅವನಿಗಲ್ಲದೆ ಪುಣ್ಯ ಇವನಿಗುಂಟೆ?

ಅವನ ದ್ರವ್ಯಗಳಿಂದ ತೀರ್ಥಯಾತ್ರೆಯ ಮಾಡೆ

ಇವನ ಜೀವನವು ಬಾಡಿಗೆ ಎತ್ತಿನಂತೆ

ಪದ-ಅರ್ಥ:

ಅವನ ಒಡವೆ-ಅನ್ಯರ ಒಡವೆ, ಅವನಿಗಲ್ಲದೆ-ಸಾಲಕೊಟ್ಟವನಿಗಲ್ಲದೆ; ಇವನಿಗೆ-ಸಾಲಕೊಂಡವನಿಗೆ, ಮನುಷ್ಯನಿಗೆ;  ದ್ರವ್ಯ-ಹಣ, ಹೊನ್ನು.

            ದಾನವೆಂಬುದು ಭಾರತೀಯ ಜೀವನಮೌಲ್ಯಗಳಲ್ಲಿ ಒಂದು. ಹೆಚ್ಚುವರಿಯಾಗಿ ತನ್ನಲ್ಲಿರುವ ವಸ್ತು, ಒಡವೆ, ಧಾನ್ಯ, ಭೂಮಿ ಮೊದಲಾದವುಗಳನ್ನು ದಾನದ ಅಗತ್ಯವಿರುವವರಿಗೆ, ದಾನವನ್ನು ಸ್ವೀಕರಿಸುವ ಅರ್ಹತೆಯುಳ್ಳವರಿಗೆ  ದಾನಮಾಡುವುದು ಒಂದು ಪರಂಪರೆಯಾಗಿ ನಮ್ಮಲ್ಲಿ ಬೆಳೆದುಬಂದಿದೆ. ಆದರೆ ದಾನಮಾಡಬೇಕಾದುದು ನಾವು ಸಂಪಾದಿಸಿರುವ ವಸ್ತು, ಒಡವೆ, ಧಾನ್ಯ ಮೊದಲಾದವುಗಳನ್ನಲ್ಲದೆ ಅನ್ಯರಿಂದ ಸಾಲವಾಗಿ ಪಡೆದ ವಸ್ತು, ಒಡವೆ, ಧಾನ್ಯ ಮೊದಲಾದವುಗಳನ್ನಲ್ಲ. ಅನ್ಯರಿಂದ ಸಾಲವಾಗಿ ತಂದು ತಾನು ಇತರರಿಗೆ ದಾನಮಾಡಿದರೆ ಅದು ದಾನವೆನಿಸಿಕೊಳ್ಳಲಾರದು, ಮಾತ್ರವಲ್ಲ, ಅಂತಹ ದಾನದಿಂದ ದೊರೆಯುವ ಪುಣ್ಯ ದಾನಮಾಡಿದವನಿಗೆ ಸಲ್ಲುವುದಿಲ್ಲ. ಬದಲಾಗಿ ಅದು ಸಾಲಕೊಟ್ಟವನಿಗೆ ಮಾತ್ರ ಸಲ್ಲುತ್ತದೆ. ಹಾಗೆಯೇ ಯಾರಿಂದಲೋ ಹಣವನ್ನು ಸಾಲವಾಗಿ ಪಡೆದುಕೊಂಡು ತಾನು ತೀರ್ಥಯಾತ್ರೆಯನ್ನು ಮಾಡಿದರೆ ಅದರಿಂದ ಯಾವುದೇ ಪುಣ್ಯವೂ ದೊರೆಯದೆ ಬದುಕೇ ಬಾಡಿಗೆ ಎತ್ತಿನಂತಾಗುತ್ತದೆ. ಬಾಡಿಗೆಗೆ ಪಡೆದುಕೊಂಡ ಎತ್ತಿನ ದುಡಿತಕ್ಕೆ ದೊರೆಯುವ ಪ್ರತಿಫಲವೆಲ್ಲವೂ ಅದರ ಮಾಲೀಕನಿಗೆ ಸಲ್ಲುತ್ತದೆಯೇ ವಿನಾ ಎತ್ತಿಗೇನೂ ದೊರೆಯದು ಎಂಬುದು ಪುರಂದರದಾಸರ ನಿಲುವು.

            ದಾನ, ತೀರ್ಥಸ್ನಾನ ಮೊದಲಾದವುಗಳೆಲ್ಲವೂ ನಮ್ಮ ಪರಂಪರೆಯಲ್ಲಿ ಧಾರ್ಮಿಕ ಅನುಷ್ಠಾನಗಳು ಮಾತ್ರವಲ್ಲ,  ಪುಣ್ಯಕಾರ್ಯಗಳು. ಆದರೆ ಅವುಗಳಿಂದ ಪುಣ್ಯಪ್ರಾಪ್ತಿ ಆಗಬೇಕಾದರೆ ಅವೆಲ್ಲವೂ ನಮ್ಮ ಸಂಪಾದನೆಯಿಂದ ಅನುಷ್ಠಾನಗೊಂಡಿರಬೇಕು. ನಮ್ಮ ಸಂಪಾದನೆಯ ವಸ್ತು, ಒಡವೆ, ಧಾನ್ಯ ಮೊದಲಾದವುಗಳನ್ನು ನಾವೇ ದಾನಮಾಡಿದರೆ ಅದು ನಿಜವಾದ ದಾನವೆನಿಸಿಕೊಳ್ಳುತ್ತದೆ. ಯಾರಿಂದಲೋ ಸಾಲವಾಗಿ ಪಡೆದುಕೊಂಡ ವಸ್ತುಗಳನ್ನು ತಾನು ’ದಾನಿ’ ಎನಿಸಿಕೊಳ್ಳುವುದಕ್ಕೆ ಅನ್ಯರಿಗೆ ದಾನಮಾಡಿದರೆ ಅದರಿಂದ ಬರುವ ಪುಣ್ಯವು ಸಾಲಕೊಟ್ಟವನಿಗಲ್ಲದೆ ಸಾಲಪಡೆದು ದಾನಮಾಡಿದವನಿಗೆ ಸಲ್ಲದು. ಹಾಗೆಯೇ ತೀರ್ಥಸ್ನಾನದಿಂದ ಪುಣ್ಯಪ್ರಾಪ್ತಿಯಾಗಬೇಕಾದರೆ ನಮ್ಮ ಸಂಪಾದನೆಯ ಹಣವನ್ನು ಖರ್ಚುಮಾಡಿ ತೀರ್ಥಸ್ನಾನಮಾಡಬೇಕು. ಯಾರಿಂದಲೋ ಸಾಲವಾಗಿ ಪಡೆದು ನಾವು ತೀರ್ಥಸ್ನಾನಮಾಡಿದರೆ  ನಮ್ಮ ಯಾತ್ರೆ ಬಾಡಿಗೆ ಎತ್ತಿನಂತಾಗುತ್ತದೆಯೇ ವಿನಾ ನಮಗೇನೂ ದೊರೆಯದು ಎಂಬುದು ಪುರಂದರದಾಸರ ನಿಲುವು.

 

ಬಂಧು ಜನಗಳ ಮುಂದೆ ಬಹು ಮಾನವು ಹೋಗಿ

ಅಂದವಳಿದೆನು ನಾನು ನೊಂದು ಋಣದಿ

ಇಂದಿರೆಯ ಅರಸ ಶ್ರೀ ಪುರಂದರವಿಠ್ಠಲನೆ

ಇಂದೆನ್ನ ಋಣವ ಪರಿಹರಿಸಯ್ಯ ದೊರೆಯೆ

ಪದ-ಅರ್ಥ:

ಬಹು-ಹಲವು ವಿಧದಿಂದ; ಅಂದವಳಿ-ರೀತಿಗೆಡು, ವರ್ಚಸನ್ನು ಕಳೆದುಕೊಳ್ಳು;  ಋಣ-ಸಾಲ;  ಇಂದಿರೆಯ ಅರಸ-ಲಕ್ಷ್ಮೀಯ ಪತಿ, ವಿಷ್ಣು; ಪರಿಹರಿಸು-ನಿವಾರಿಸು, ಕಳೆ.

            ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆಯಬೇಕಾದರೆ ನಮ್ಮ ಬದುಕು, ಆಲೋಚನೆಗಳು, ವ್ಯವಹಾರಗಳು ಸಮರ್ಪಕವಾಗಿರಬೇಕು. ಸಿಕ್ಕಸಿಕ್ಕವರಿಂದ ಸಾಲವನ್ನು ಪಡೆದುಕೊಂಡು, ಸಮಯಕ್ಕೆ ಅದನ್ನು ಹಿಂದಿರುಗಿಸದೆ, ಸಾಲಕೊಟ್ಟವರಿಗೆ ತೊಂದರೆ ಕೊಡುತ್ತ ಇದ್ದುದರಿಂದ  ತನ್ನ ಮಾನವೆಲ್ಲವೂ ಹರಾಜಾಗಿದೆ. ಒಮ್ಮೆ ಮಾನಕಳೆದು ಹೋಯಿತೆಂದರೆ ಮತ್ತೆ ಅದನ್ನು ಗಳಿಸಲು ಸಾಧ್ಯವಿಲ್ಲ. ತಾನು  ಸಾಲದಿಂದ ರೀತಿಗೆಟ್ಟಿದ್ದೇನೆ. ತನ್ನ ವರ್ಚಸ್ಸನ್ನು ಕಳೆದುಕೊಂಡಿದ್ದೇನೆ. ಭಗವಂತನಿಂದ ಪಡೆದುಕೊಂಡ ಸಾಲವನ್ನು ಹಿಂದಿರುಗಿಸಲು ಸಾಧ್ಯವಾಗದೆ ಸಾಲದ ಹೊರೆಯಲ್ಲಿ ನಲುಗುತ್ತಿದ್ದೇನೆ. ತನ್ನ ಈ ಸಾಲದ ಹೊರೆಯನ್ನು ಪರಿಹರಿಸಿಕೊಂಡು ತನ್ನನ್ನು ಕಾಪಾಡಬೇಕು ಎಂದು ಪುರಂದರದಾಸರು ತನ್ನ ಇಷ್ಟದೇವನಾದ ವಿಷ್ಣುವಿನಲ್ಲಿ  ಕಳಕಳಿಯಿಂದ ಪ್ರಾರ್ಥಿಸುತ್ತಾರೆ. 

            ಮನುಷ್ಯನ ಜನ್ಮವೇ ಭಗವಂತ ಪ್ರೇರಿತವಾದುದು. ಬದುಕಿನಲ್ಲಿ ನಾವು ಪಡೆಯುತ್ತಿರುವ ಸಮಸ್ತ ಸೌಕರ್ಯಗಳೆಲ್ಲವೂ ಭಗವಂತನ ಕೊಡುಗೆ. ನಾವಿಲ್ಲಿ ನಮ್ಮ ಬದುಕಿಗೆ ಹತ್ತು ಹಲವು ನೆಲೆಗಳಲ್ಲಿ ಭಗವಂತನಿಂದ ಹತ್ತು ಹಲವು ವಸ್ತುಗಳನ್ನು ಪಡೆದುಕೊಂಡು ಬದುಕುತ್ತಿರುವ   ಸಾಲಗಾರರು.  ಇಲ್ಲಿ ನಮ್ಮದೆನ್ನುವುದು ಏನೂ ಇಲ್ಲ. ಭಗವಂತನಿಂದ ಪಡೆದ ಸಾಲವನ್ನು ಸಾಧ್ಯವಾದಷ್ಟು ಹಿಂದಿರುಗಿಸುವುದಕ್ಕೆ ಪ್ರಯತ್ನಿಸಲೇಬೇಕು. ಸತ್ಯ, ನ್ಯಾಯ, ನೀತಿ, ದಾನ, ಧರ್ಮ, ಪರೋಪಕಾರ, ಕರುಣೆ, ಅಹಿಂಸೆ ಮೊದಲಾದ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಭಗವಂತನಿಂದ ಪಡೆದ ಸಾಲವನ್ನು ಹಿಂದಿರುಗಿಸಿ  ಸಾಲದಿಂದ ಮುಕ್ತರಾಗಬಹುದು. ಆದರೆ ಭಗವಂತನಿಂದ ಪಡೆದು ಆತನನ್ನೇ ಮರೆತುಬಿಡುವ, ಆತನಿಗೆ ವಿರುದ್ಧವಾಗಿ ವರ್ತಿಸುವ, ಹಗುರವಾಗಿ ಕಾಣುವ ಪ್ರವೃತ್ತಿ ಮನುಷ್ಯನಲ್ಲಿದೆ. ಆದುದರಿಂದಲೇ ನಾವು ಆತನಿಂದ ಪಡೆದ ಸಾಲವನ್ನು ಹಿಂದಿರುಗಿಸಲಾಗದೆ ಸದಾ ಸಾಲದಲ್ಲಿಯೇ ಬದುಕಿ, ಸಾಲದಲ್ಲಿಯೇ ಸತ್ತುಹೋಗಿ, ಜನ್ಮಾಂತರಗಳವರೆಗೂ ಅದರಲ್ಲಿಯೇ ಮುಳುಗುತ್ತಲೇ ಇದ್ದೇವೆ. ನಾವು ನಮ್ಮನ್ನು ಸಾಲದಿಂದ ಮುಕ್ತಗೊಳಿಸಿಕೊಳ್ಳುವುದು ಹೇಗೆ?  ಸಾಲ ತೀರಿಸದೆ ಮುಕ್ತಿ ಸಿಗದು. ಅದಕ್ಕಾಗಿಯೇ ಪುರಂದರದಾಸರು ಸಾಲದಿಂದ, ಅದರ ಹೊರೆಯಿಂದ ತನ್ನನ್ನು ಮುಕ್ತಗೊಳಿಸು ಎಂದು ಕಳಕಳಿಯಿಂದ ಪ್ರಾರ್ಥಿಸಿದ್ದಾರೆ.

            ಈ ಕೀರ್ತನೆ ಲೌಕಿಕ ಹಾಗೂ ಪಾರಮಾರ್ಥಿಕಗಳೆಂಬ ಎರಡು ನೆಲೆಗಳಲ್ಲಿ ಅರ್ಥವ್ಯಾಪ್ತಿಯನ್ನು ಹೊಂದಿದೆ. ಕೀರ್ತನೆಯ ಪಲ್ಲವಿ ಹಾಗೂ ಕೊನೆಯ ಚರಣಗಳು ನೇರವಾಗಿ ಪಾರಮಾರ್ಥಿಕ ನೆಲೆಗಳನ್ನು ಸೂಚಿಸಿದರೆ ಮಿಕ್ಕ ಚರಣಗಳೆಲ್ಲವು  ಮೇಲು ನೋಟಕ್ಕೆ ಲೌಕಿಕ ನೆಲೆಯನ್ನು ಸೂಚಿಸುತ್ತವೆಯಾದರೂ ಆಂತರಿಕವಾಗಿ ಪಾರಮಾರ್ಥಿಕ ನೆಲೆಗೆ ವ್ಯಾಪಿಸಿಕೊಳ್ಳುತ್ತವೆ. ಮನುಷ್ಯನ ಲೌಕಿಕಬದುಕಿಗೆ ಬೇಕಾಗಿರುವ ಎಲ್ಲ ಸಾಮಗ್ರಿಗಳೂ ಭಗವಂತನ ಕೊಡುಗೆಗಳು. ಅವನು ನೀಡಿರುವ ಸಾಲಗಳು. ನಾವು ಅವುಗಳನ್ನು ನಮ್ಮ ಸಂಪಾದನೆ ಎಂದುಕೊಂಡು  ನಮಗಿಷ್ಟವಾದಂತೆ, ಬೇಕಾಬಿಟ್ಟಿ ಬಳಸಿಕೊಳ್ಳುತ್ತಿದ್ದೇವೆ. ನಾವೇ ಶ್ರೇಷ್ಠರೆನಿಸಿಕೊಳ್ಳುವುದಕ್ಕೆ ಬೇಕಾಬಿಟ್ಟಿ ದಾನಮಾಡುತ್ತಿದ್ದೇವೆ. ನಮ್ಮ ದಾನಗುಣಕ್ಕೆ ನಾವೇ ಬೀಗುತ್ತಿದ್ದೇವೆ. ಅದರೊಂದಿಗೆ ಭಗವಂತನನ್ನೇ ಮರೆತುಬಿಡುತ್ತಿದ್ದೇವೆ. ಭಗವಂತ ನೀಡಿರುವ ಸಾಲವು ದೇವಋಣ ಎನಿಸಿಕೊಳ್ಳುತ್ತದೆ. ನಾವು ಇವುಗಳನ್ನು ತೀರಿಸದೆ ಹೋಗುವುದರಿಂದ ಇವು ಜನ್ಮಾಂತರದವರೆಗೂ ನಮ್ಮನ್ನು ಕಾಡುತ್ತವೆ. ಇದರಿಂದ ಪಾರಾಗಲು ಮೊದಲು ಋಣದಿಂದ ಮುಕ್ತನಾಗುವುದಕ್ಕೆ ಪ್ರಯತ್ನಿಸಬೇಕು ಎಂಬುದು ಪುರಂದರದಾಸರ ನಿಲುವು.

            ಬಹುತೇಕ ದಾಸಕೀರ್ತನೆಗಳು ಆಯಾ ದಾಸರ ಆತ್ಮವಿಮರ್ಶೆಗಳಾಗಿವೆ ಎಂಬುದು ನಾವು ಯಾವತ್ತೂ ನೆನಪಿಡಬೇಕಾದ ವಿಚಾರ.  ಈ ಕೀರ್ತನೆಯಲ್ಲಿಯೂ ಪುರಂದರದಾಸರು ಉಲ್ಲೇಖಿಸಿರುವ ವಿಚಾರಗಳೆಲ್ಲವೂ ಅವರ ಪೂರ್ವಾಶ್ರಮಕ್ಕೆ ಸಂಬಂಧಿಸಿದಂತಿರುವುದರಿಂದ ಈ ಕೀರ್ತನೆ ಅವರ ಆತ್ಮವಿಮರ್ಶೆ ಎನ್ನಬಹುದು. ಅದೇ ಸಮಯದಲ್ಲಿ  ಜನಸಾಮಾನ್ಯರ ಆತ್ಮವಿಮರ್ಶೆಗೂ ಅನುವು ಮಾಡಿಕೊಡುವುದು ಈ ಕೀರ್ತನೆಯ ವಿಶೇಷತೆ.  

***

 

Leave a Reply

Your email address will not be published. Required fields are marked *