ಸಾಹಿತ್ಯಾನುಸಂಧಾನ

heading1

ಮಯೂರಧ್ವಜನ ದೇಹಾರ್ಧ ದಾನ – ಲಕ್ಷ್ಮೀಶ-ಭಾಗ-೨

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎಸ್ಸಿ ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ) (ಭಾಗ-೨)

ಮತ್ತೆ ಮನುಜೇಂದ್ರನಾ ವಿಪ್ರನಂ ಕರೆದು ನಿನ

ಗಿತ್ತೆನೀ ದೇಹಾರ್ಧಮಂ ಪರಿಗ್ರಹಿಸೆಂದು

ಚಿತ್ತದೊಳ್ ಮಿಗೆ ಹರ್ಷಮಂ ತಾಳ್ದು ಪೊರೆಯೊಳಿಹ ಸೂದಕರ್ಮಜ್ಞರೊಡನೆ

ಪೊತ್ತುಗಳೆಯದೆ ತನ್ನ ತನುವನೆರಡಾಗಿ ಮಸೆ

ವೆತ್ತ ಕರಪತ್ರದಿಂ ಸೀಳ್ವುದೆಂದಾಜ್ಞಾಪಿ

ಸುತ್ತಿರೆ ಶಿಖಿಧ್ವಜನ ಸತಿ ಕುಮುದ್ವತಿ ನುಡಿದಳತಿವಿನಯದಿಂದ ಪತಿಗೆ  ೧೪

ಪದ್ಯದ ಅನ್ವಯಕ್ರಮ:

ಮನುಜೇಂದ್ರನ್ ಆ ವಿಪ್ರನಂ ಕರೆದು, ಈ ದೇಹಾರ್ಧಮಂ ನಿನಗೆ ಇತ್ತೆನ್ ಪರಿಗ್ರಹಿಸು ಎಂದು, ಚಿತ್ತದೊಳ್ ಮಿಗೆ ಹರ್ಷಮಂ ತಾಳ್ದು, ಪೊತ್ತು ಕಳೆಯದೆ ಪೊರೆಯೊಳ್ ಇಹ ಸೂದಕರ್ಮಜ್ಞರೊಡನೆ ಮಸೆವೆತ್ತ ಕರಪತ್ರದಿಂ ತನ್ನ ತನುವನ್ ಎರಡಾಗಿ ಸೀಳ್ವುದು ಎಂದು ಆಜ್ಞಾಪಿಸುತ್ತಿರೆ ಸಿಖಿಧ್ವಜನ ಸತಿ ಕುಮುದ್ವತಿ ಪತಿಗೆ ಅತಿವಿನಯದಿಂದ ನುಡಿದಳ್.

ಪದ-ಅರ್ಥ:

ಮನುಜೇಂದ್ರ-ರಾಜ, (ಮಯೂರಧ್ವಜ); ವಿಪ್ರ-ಬ್ರಾಹ್ಮಣ; ನಿನಗಿತ್ತೆನ್-ನಿನಗೆ ನೀಡಿದ್ದೇನೆ;  ಪರಿಗ್ರಹಿಸು-ಸ್ವೀಕರಿಸು; ಚಿತ್ತದೊಳ್-ಮನಸ್ಸಿನಲ್ಲಿ;  ಮಿಗೆ-ಅಧಿಕವಾಗಿ;  ಪೊರೆಯೊಳಿಹ-ಪಕ್ಕದಲ್ಲಿರುವ;  ಸೂದಕರ್ಮಜ್ಞರೊಡನೆ-ಕೊಯ್ಯುವ ಆಳುಗಳೊಡನೆ;  ಪೊತ್ತುಗಳೆಯದೆ-ಸಮಯ ವ್ಯರ್ಥಮಾಡದೆ; ತನುವನ್-ದೇಹವನ್ನು; ಮಸೆವೆತ್ತ-ಮಸೆದಿರುವ; ಕರಪತ್ರದಿಂ-ಗರಗಸದಿಂದ;  ಶಿಖಿಧ್ವಜ-ಮಯೂರಧ್ವಜ;  ಸತಿ-ಹೆಂಡತಿ, ರಾಣಿ; 

            ರಾಜನಾದ ಮಯೂರಧ್ವಜನು ಆ ಬ್ರಾಹ್ಮಣನನ್ನು ಕರೆದು, ಈ ದೇಹದ ಅರ್ಧಭಾಗವನ್ನು ನಿನಗೆ ನೀಡುತ್ತಿದ್ದೇನೆ, ಸ್ವೀಕರಿಸು ಎಂದು ಮನಸ್ಸಿನಲ್ಲಿ ಅತ್ಯಂತ ಸಂತೋಷವನ್ನು ತಾಳಿಕೊಂಡು ಸಮಯ ವ್ಯರ್ಥಮಾಡದೆ, ಪಕ್ಕದಲ್ಲಿಯೇ ನಿಂತುಕೊಂಡಿರುವ ಕೊಯ್ಯುವ ಆಳುಗಳೊಡನೆ ಹರಿತಗೊಳಿಸಿದ ಗರಗಸದಿಂದ ನನ್ನ ದೇಹವನ್ನು ಎರಡಾಗಿ ಸೀಳಿ ಎಂದು ಆಜ್ಞಾಪಿಸುತ್ತಿದ್ದ ಸಂದರ್ಭದಲ್ಲಿ ಮಯೂರಧ್ವಜನ ರಾಣಿಯಾದ ಕುಮುದ್ವತಿಯು ಗಂಡನನ್ನು ಉದ್ದೇಶಿಸಿ ಅತ್ಯಂತ ವಿನಯದಿಂದ ಹೀಗೆಂದಳು.

 

ನೀಂ ತಿಳಿದುದಿಲ್ಲರಸ ವಿಪ್ರೇಂದ್ರನಱಿಯಂ ವ

ನಾಂತರದೊಳಾ ಸಿಂಹಮೆಂದ ನುಡಿ ಶಾಸ್ತ್ರಸಿ

ದ್ಧಾಂತಮಂಗನೆ ಪುರುಷನರ್ಧಾಂಗಮೆಂಬುದಕೆ ನಿನ್ನ ವಾಮಾಂಗಿಯಾದ

ಕಾಂತೆಯಂ ಬೇಡಿದೊಡೆ ಕೊಯ್ದು ಕಾಯವನೀವ

ಭ್ರಾಂತಿಯೇತಕೆ ತನ್ನಯಸುವೆರಸಿ ಕೊಟ್ಟು ಕಳೆ

ತಾಂ ತಳೆವೆನೈದೆತನದಿಂದೆ ಸದ್ಗತಿಯನೆಂದಾ ಕುಮುದ್ವತಿ ನುಡಿದಳು  ೧೫

ಪದ್ಯದ ಅನ್ವಯಕ್ರಮ:

ವನಾಂತರದೊಳ್ ಆ ಸಿಂಹಂ ಎಂದ ನುಡಿ  ಅರಸ ನೀಂ ತಿಳಿದುದಿಲ್ಲ, ವಿಪ್ರೇಂದ್ರನ್ ಅಱಿಯಂ, ಅಂಗನೆ ಪುರುಷನ ಅರ್ಧಾಂಗಂ ಎಂಬುದಕೆ ಶಾಸ್ತ್ರ ಸಿದ್ಧಾಂತಂ, ನಿನ್ನ ವಾಮಾಂಗಿಯಾದ ಕಾಂತೆಯಂ ಬೇಡಿದೊಡೆ ಕೊಯ್ದು ಕಾಯವನ್ ಈವ ಭ್ರಾಂತಿಯೇತಕೆ ತನ್ನಯ ಅಸುವೆರಸಿ ಕೊಟ್ಟು ಕಳೆ ,ತಾಂ ಐದೆತನದಿಂದೆ ಸದ್ಗತಿಯನ್ ತಳೆವೆನ್ ಎಂದು ಆ ಕುಮುದ್ವತಿ ನುಡಿದಳು.

ಪದ-ಅರ್ಥ:

ವಿಪ್ರೇಂದ್ರ-ಬ್ರಾಹ್ಮಣ;  ಅಱಿಯಂ-ತಿಳಿದಿಲ್ಲ;  ವನಾಂತರದೊಳ್-ಕಾಡಿನೊಳಗೆ;  ಸಿಂಹಮೆಂದ ನುಡಿ-ಸಿಂಹವು ಹೇಳಿದ ಮಾತು;  ಶಾಸ್ತ್ರಸಿದ್ಧಾಂತಂ-ಶಾಸ್ತ್ರಸಮ್ಮತವಾದುದು;  ಅಂಗನೆ-ಹೆಂಡತಿ; ಪುರುಷನರ್ಧಾಂಗಂ-ಪುರುಷ ಅರ್ಧಭಾಗ; ವಾಮಾಂಗಿ-ಎಡಭಾಗದಲ್ಲಿರುವವಳು, ಹೆಂಡತಿ;  ಕಾಂತೆ-ಹೆಂಡತಿ, ಸ್ತ್ರೀ;  ಕಾಯವನೀವ-ದೇಹವನ್ನು ನೀಡುವ;  ಭ್ರಾಂತಿ-ತಪ್ಪುಗ್ರಹಿಕೆ;  ಅಸುವೆರಸಿ-ಪ್ರಾಣದೊಂದಿಗೆ, ಪ್ರಾಣಸಮೇತ;  ಕೊಟ್ಟುಕಳೆ-ಕೊಟ್ಟುಬಿಡು;  ತಳೆವೆನ್-ಪಡೆಯುತ್ತೇನೆ;  ಐದೆತನ-ಮುತ್ತೈದೆತನ.

            ಅರಸನೇ, ಕಾಡಿನೊಳಗೆ ಸಿಂಹವು ಹೇಳಿದ ಮಾತುಗಳನ್ನು ನೀನಾಗಲೀ ಈ ಬ್ರಾಹ್ಮಣನಾಗಲೀ ಪರಿಶೀಲಿಸಿಲ್ಲ. ಹೆಂಡತಿಯಾದವಳು ಗಂಡನ ಅರ್ಧಾಂಗವೆಂಬುದಕ್ಕೆ ಶಾಸ್ತ್ರಸಿದ್ಧಾಂತವೇ ಇದೆ. ಅದನ್ನು ಪರಿಭಾವಿಸಿದರೆ ನಾನು ನಿನ್ನ ದೇಹದ ಅರ್ಧಭಾಗವಾಗಿದ್ದೇನೆ. ನಾನು ನಿನ್ನ ದೇಹದ ಎಡಭಾಗವಾಗಿರುವಾಗ ನಿನ್ನ ದೇಹದ ಒಂದು ಭಾಗವನ್ನು ಕೊಯ್ದು ಕೊಡುವ ವಿಚಾರದಲ್ಲಿ ಭ್ರಾಂತಿ ಏತಕೆ? ಅದರ ಬದಲು ನಾನೂ ನಿನ್ನ ಅರ್ಧಾಂಗಿಯಾಗಿರುವುದರಿಂದ ನನ್ನನ್ನೇ ಪ್ರಾಣಸಮೇತ ಕೊಟ್ಟುಬಿಡು, ನಾನು ಮುತ್ತೈದೆತನದಿಂದಲೇ ಸದ್ಗತಿಯನ್ನು ಹೊಂದುತ್ತೇನೆ ಎಂದು ಕುಮುದ್ವತಿ ಹೇಳಿದಳು.

 

ಸಮ್ಮತವಿಹುದೆಂದರೆಲ್ಲರುಂ ಭೂವರಂ

ಸುಮ್ಮನಿರೆ ಕಂಡನೀ ತೆಱನಂ ದ್ವಿಜೋತ್ತಮಂ

ನೆಮ್ಮಿದ ಮುಕುಂದನೆಲೆ ರಾಯ ನಿನ್ನರಸಿ ನುಡಿದುತ್ತರವನೊಪ್ಪಬಹುದು

ಸುಮ್ಮಾನದಿಂ ಜನೇಶ್ವರನ ದಕ್ಷಿಣಭಾಗ

ಮಂ ಮೆಲ್ವೆನೆಂದುವೊಕ್ಕಣಿಸಿತಲ್ಲದೆ ಸಿಂಹ

ವೆಮ್ಮೊಡನೆ ವಾಮಾಂಗಮೆಂದಾಡಿತಿಲ್ಲೆನಲ್ ನೃಪನ ಸುತನಿಂತೆಂದನು  ೧೬

ಪದ್ಯದ ಅನ್ವಯಕ್ರಮ:

ಎಲ್ಲರುಂ ಸಮ್ಮತವಿಹುದು ಎಂದು ಭೂವರಂ ಸುಮ್ಮನಿರೆ, ದ್ವಿಜೋತ್ತಮಂ ನೆಮ್ಮಿದ ಮುಕುಂದನ್ ಈ ತೆಱನಂ ಕಂಡನ್, ಎಲೆ ರಾಯ, ನಿನ್ನ ಅರಸಿ ನುಡಿದ ಉತ್ತರವನ್ ಒಪ್ಪಬಹುದು, ಸಿಂಹವು, ಜನೇಶ್ವರನ ದಕ್ಷಿಣಭಾಗಮಂ ಸುಮ್ಮಾನದಿಂ ಮೆಲ್ವೆನ್ ಎಂದು ಒಕ್ಕಣಿಸಿತು ಅಲ್ಲದೆ, ಎಮ್ಮೊಡನೆ ವಾಮಾಂಗಂ ಎಂದು ಆಡಿತಿಲ್ಲ ಎನಲ್ ನೃಪನ ಸುತನ್ ಇಂತೆಂದನು.  

ಪದ-ಅರ್ಥ:

ಸಮ್ಮತವಿಹುದು-ಒಪ್ಪಿಗೆಯಿದೆ;  ಭೂವರಂ-ರಾಜನು;   ದಿಜೋತ್ತಮ-ಬ್ರಾಹ್ಮಣಶ್ರೇಷ್ಠ;  ನೆಮ್ಮಿದ-ಧರಿಸಿದ, ಹೊಂದಿದ;   ಸುಮ್ಮಾನದಿಂ-ಸಂತೋಷದಿಂದ; ಜನೇಶ್ವರ-ರಾಜ; ದಕ್ಷಿಣಭಾಗ-ಬಲಭಾಗ;  ಮೆಲ್ವೆನ್-ತಿನ್ನುತ್ತೇನೆ;  ವಾಮಾಂಗ-ಎಡಭಾಗ;   ಆಡಿತಿಲ್ಲ-ಹೇಳಲಿಲ್ಲ;   ಸುತ-ಮಗ.

            ರಾಣಿ ಕುಮುದ್ವತಿಯು ಆಡಿದ ಮಾತುಗಳನ್ನು ಕೇಳಿ  ರಾಜನೂ ಸಭಾಸದರೆಲ್ಲರೂ ಇದು ಸರಿಯಾದ ನಿರ್ಧಾರ ಎಂದು ಸುಮ್ಮನಿದ್ದಾಗ, ಬ್ರಾಹ್ಮಣವೇಷವನ್ನು ತಾಳಿದ ಕೃಷ್ಣನು ಇದನ್ನು ಗಮನಿಸಿ, ಎಲೈ ರಾಜನೆ, ನಿನ್ನ ರಾಣಿಯಾದ ಕುಮುದ್ವತಿಯು ಹೇಳಿದ ಮಾತನ್ನು ಯಾರೂ ಒಪ್ಪಬಹುದು. ಆದರೆ ಸಿಂಹವು ಮಯೂರಧ್ವಜನ ದೇಹದ ಬಲಭಾಗವನ್ನು ಸಂತೋಷದಿಂದ ತಿನ್ನುತ್ತೇನೆ ಎಂದು ಹೇಳಿತಲ್ಲದೆ, ಆತನ ಎಡಭಾವನ್ನು ತಿನ್ನುತ್ತೇನೆ ಎಂದು ಹೇಳಿಲ್ಲ ಎಂದಾಗ ರಾಜನ ಮಗನಾದ ತಾಮ್ರಧ್ವಜನು ಹೀಗೆಂದನು.

 

ಕರುಣಿಸೆಲೆ ವಿಪ್ರ ನಿನ್ನಂ ಬೇಡಿಕೊಂಬೆನಾಂ

ತರುಣಂ ಸುಪುಷ್ಟವಪು ತುಷ್ಟಿ ಮೃಗಪತಿಗಾಗ

ದಿರದು ತಾತನ ಋಣತ್ರಯಕೆ ಹಱಿವಹುದು ರಾಘವ ಭೀಷ್ಮರಂತೆ ಕೀರ್ತಿ

ಸ್ಥಿರವಹುದು ಪಿತನ ಭಾಷೆಗೆ ನಿಲಲ್ ಜನಕನವ

ತರಿಪನಾತ್ಮಜನಾಗಿ ತಂದೆ ಮಕ್ಕಳಿವರೊಳ

ಗೆರವಿಲ್ಲ ತನ್ನಂಗಮಂ ತೆಗೆದುಕೊಳ್ಳೆಂದು ತಾಮ್ರಧ್ವಜಂ ನುಡಿದನು  ೧೭

ಪದ್ಯದ ಅನ್ವಯಕ್ರಮ:

ಎಲೆ ವಿಪ್ರ ಕರುಣಿಸು, ಆಂ ತರುಣಂ ನಿನ್ನಂ ಬೇಡಿಕೊಂಬೆನ್, ಮೃಗಪತಿಗೆ ಸುಪುಷ್ಟ ವಪು ತುಷ್ಟಿ ಆಗದೆ ಇರದು, ತಾತನ ಋಣತ್ರಯಕೆ ಹಱಿವು ಅಹುದು, ರಾಘವ, ಭೀಷ್ಮರಂತೆ ಕೀರ್ತಿ ಸ್ಥಿರವಹುದು, ಪಿತನ ಭಾಷೆಗೆ ನಿಲಲ್ ಜನಕನ್ ಆತ್ಮಜನಾಗಿ ಅವತರಿಪನ್, ತಂದೆ ಮಕ್ಕಳಿವರೊಳಗೆ ಎರವಿಲ್ಲ ತನ್ನಂಗಮಂ ತೆಗೆದುಕೊಳ್ ಎಂದು ತಾಮ್ರಧ್ವಜಂ ನುಡಿದನು.

ಪದ-ಅರ್ಥ:

ಕರುಣಿಸು-ಕರುಣೆಯನ್ನು ತೋರು;  ವಿಪ್ರ-ಬ್ರಾಹ್ಮಣ;   ಸುಪುಷ್ಟ ವಪು-ಗಟ್ಟಿಮುಟ್ಟಾದ ದೇಹ;  ತುಷ್ಟಿ-ಸಂತೃಪ್ತಿ;  ಮೃಗಪತಿ-ಸಿಂಹ;  ತಾತನ-ತಂದೆಯ; ಋಣತ್ರಯ-ಮೂರು ವಿಧದ ಋಣಗಳು(ದೇವ ಋಣ, ಋಷಿ ಋಣ; ಪಿತೃ ಋಣ); ಹಱಿವು –ತೀರುವಿಕೆ;  ರಾಘವ-ರಾಮ, ಭೀಷ್ಮ-ಗಂಗೆಯ ಮಗ, ಪಾಂಡವ-ಕೌರವರ ಅಜ್ಜ;  ಸ್ಥಿರ-ಶಾಶ್ವತ; ಪಿತನ-ತಂದೆಯ; ಭಾಷೆಗೆ-ಕೊಟ್ಟ ಮಾತಿಗೆ; ನಿಲಲ್-ಸಮರ್ಥಿಸುವುದಕ್ಕೆ; ಅವತರಿಪನ್-ಹುಟ್ಟುತ್ತಾನೆ; ಆತ್ಮಜನಾಗಿ-ಮಗನಾಗಿ;  ಎರವಿಲ್ಲ-ಭೇದವಿಲ್ಲ;  ತನ್ನಂಗ-ತನ್ನ ದೇಹದ ಭಾಗ.

            ಎಲೆ ಬ್ರಾಹ್ಮಣನೇ, ನಾನು ಇನ್ನೂ ತರುಣ(ಎಳೆಯವನು), ನಾನು ನಿನ್ನಲ್ಲಿ ಬೇಡಿಕೊಳ್ಳುತ್ತೇನೆ. ಕಾಡಿನೊಳಗಿನ ಸಿಂಹಕ್ಕೆ ದಷ್ಟಪುಷ್ಟವಾದ ದೇಹವು ಸಂತೋಷವನ್ನು ನೀಡದೆ ಇರಲಾರದು. ಇದು ತಂದೆಯ ಋಣವನ್ನು ತೀರಿಸಲು ಇರುವ ಒಂದು ದಾರಿಯೂ ಹೌದು. ರಾಮ ಹಾಗೂ ಭೀಷ್ಮರು ಭಾವಿಸಿರುವಂತೆ ಕೀರ್ತಿ ಎಂಬುದು ಶಾಶ್ವತವಾದುದು. ತಂದೆಯ ಮಾತನ್ನು ಮಗ ನಡೆಸಿಕೊಟ್ಟರೆ ತಂದೆಯು ಮಗನಾಗಿ ಜನಿಸುತ್ತಾನೆ. ಆದುದರಿಂದ ತಂದೆ ಹಾಗೂ ಮಗನೊಳಗೆ ಭೇದವಿಲ್ಲ. ಹಾಗಾಗಿ ನೀನು ನನ್ನ ತಂದೆಯ ಬದಲಿಗೆ ನನ್ನ ದೇಹವನ್ನು ಸ್ವೀಕರಿಸು ಎಂದು ತಾಮ್ರಧ್ವಜನು ನುಡಿದನು.

 

ಭೂಪಾಲ ಕೇಳವನ ಮಾತಿಗೆ ಮಹೀಸುರಂ

ಕಾಪಟ್ಯಮಿಲ್ಲೆಲೆ ಕುಮಾರ ನೀನೆಂದ ನುಡಿ

ಪಾಪಿ ಕೇಸರಿ ತನ್ನೊಳವನಿಪನ ಸತಿಯೆಂದು ಸುತನೆಂದು ಪೇಳ್ದುದಿಲ್ಲ

ಆಪೊಡೆ ಮಯೂರಧ್ವಜನ ದಕ್ಷಿಣಾಂಗಮಂ

ತಾ ಪುತ್ರನಂ ಬಿಡುವೆನೆಂದೋಡಿಲ್ಲಿಗೆ ಬಂದೆ

ನೀ ಪರಿಯೊಳಳುಕುವರೆ ಕುಡಬೇಡ ಪೋಪೆನೆನೆ ನರನಾಥನಿಂತೆಂದನು ೧೮

ಪದ್ಯದ ಅನ್ವಯಕ್ರಮ:

ಭೂಪಾಲ ಕೇಳ್, ಅವನ ಮಾತಿಗೆ ಮಹೀಸುರಂ, ಎಲೆ ಕುಮಾರ ನೀನೆಂದ ನುಡಿ ಕಾಪಟ್ಯವಿಲ್ಲ ಪಾಪಿ ಕೇಸರಿ ತನ್ನೊಳ್ ಅವನಿಪನ ಸತಿಯೆಂದು ಸುತನೆಂದು ಪೇಳ್ದುದಿಲ್ಲ, ಆಪೊಡೆ ಮಯೂರಧ್ವಜನ ದಕ್ಷಿಣಭಾಗಮಂ ತಾ  ಪುತ್ರನಂ ಬಿಡುವೆನ್ ಎಂದೊಡೆ ಓಡಿ ಇಲ್ಲಿಗೆ ಬಂದೆನ್, ಈ ಪರಿಯೊಳ್ ಅಳುಕುವರೆ ಕುಡಬೇಡ, ಪೋಪೆನ್ ಎನೆ ನರನಾಥನ್ ಇಂತೆಂದನು.

ಪದ-ಅರ್ಥ:

ಭೂಪಾಲ-ರಾಜ (ಜನಮೇಜಯ); ಅವನ ಮಾತಿಗೆ-ತಾಮ್ರಧ್ವಜನ ಮಾತಿಗೆ; ಮಹೀಸುರಂ-ಬ್ರಾಹ್ಮಣನು;  ಕಾಪಟ್ಯಮಿಲ್ಲೆಲೆ-ಕಪಟವಿಲ್ಲವಲ್ಲವೇ;  ನೀನೆಂದ-ನೀನು ಹೇಳಿದ;  ನುಡಿ-ಮಾತು; ಕೇಸರಿ-ಸಿಂಹ;  ಆಪೊಡೆ-ಆಗುವುದಾದರೆ, ಸಾಧ್ಯವಿದ್ದರೆ;  ಅವನಿಪನ-ರಾಜನ(ಮಯೂರಧ್ವಜನ);  ದಕ್ಷಿಣಭಾಗಮಂ-ಬಲಭಾಗವನ್ನು;  ತಾ-ತೆಗೆದುಕೊಂಡು ಬಾ;  ಈ ಪರಿಯೊಳ್-ಈ ರೀತಿಯಲ್ಲಿ;  ಅಳುಕುವರೆ-ಹಿಂಜರಿಯುವರೆ; ಕುಡಬೇಡ-ಕೊಡಬೇಡ;  ಪೋಪೆನ್-ಹೋಗುತ್ತೇನೆ;   ನರನಾಥ-ರಾಜ(ಮಯೂರಧ್ವಜ).

            ಜನಮೇಜಯ ರಾಜನೇ ಕೇಳು, ತಾಮ್ರಧ್ವಜನು ಆಡಿದ ಮಾತಿಗೆ ಬ್ರಾಹ್ಮಣನು, ಎಲೆ ಕುಮಾರ, ನೀನು ಆಡಿದ ಮಾತುಗಳಲ್ಲಿ ಕಪಟವಿಲ್ಲ. ಆದರೆ ಪಾಪಿ ಸಿಂಹವು ನನ್ನಲ್ಲಿ ರಾಜನ ಹೆಂಡತಿ ಎಂದೋ ಮಗನೆಂದೋ ಹೇಳಲೇ ಇಲ್ಲ. ಆಗುವುದಾದರೆ ರಾಜನಾದ ಮಯೂರಧ್ವಜನ ಬಲಭಾಗವನ್ನು ತೆಗೆದುಕೊಂಡು ಬಾ, ನಿನ್ನ ಮಗನನ್ನು ಬಿಟ್ಟುಬಿಡುತ್ತೇನೆ ಎಂದು ಹೇಳಿದೊಡನೆಯೇ ಇಲ್ಲಿಗೆ ಓಡಿಬಂದೆನು. ಆದರೆ ನೀನು ಈ ರೀತಿಯಲ್ಲಿ ಹಿಂಜರಿಯುವುದಾದರೆ ನಿನ್ನ ದೇಹದ ಭಾಗವನ್ನು ಕೊಡಬೇಡ, ನಾನು ಹೊರಟುಹೋಗುತ್ತೇನೆ ಎಂದಾಗ ರಾಜನಾದ ಮಯೂರಧ್ವಜನು ಹೀಗೆ ಹೇಳಿದನು.

 

ರಾಣಿಯಂ ಕುಡುವುದಿಲ್ಲಾತ್ಮಜನನೀವುದಿ

ಲ್ಲೂಣೆಯಂ ತನ್ನ ಭಾಷೆಗೆ ಬಾರದಂತಬ್ಜ

ಪಾಣಿ ಮೆಚ್ಚುವೊಲರ್ಧದೇಹಮಂ ಕೊಯ್ದು ಕೊಟ್ಟಪೆನೀಗ ಸೈರಿಸೆನುತೆ

ಸಾಣೆವಿಡಿದಿರ್ದ ಕರಪತ್ರಮಂ ಕೊಡಿಸಿದಂ

ಪ್ರಾಣನಾಥೆಯ ಕೈಯೊಳೆನ್ನುತ್ತಮಾಂಗಮಂ

ಕೇಣಮಿಲ್ಲದೆ ತನುಜನಂ ಕೂಡಿಕೊಂಡು ನೀಂ ಸೀಳೆಂದು ನೇಮಿಸಿದನು  ೧೯

ಪದ್ಯದ ಅನ್ವಯಕ್ರಮ:

ರಾಣಿಯಂ ಕುಡುವುದಿಲ್ಲ, ಆತ್ಮಜನನ್ ಈವುದಿಲ್ಲ, ತನ್ನ ಭಾಷೆಗೆ ಊಣೆಯಂ ಬಾರದಂತೆ ಅಬ್ಜಪಾಣಿ ಮೆಚ್ಚುವೊಲ್ ಅರ್ಧದೇಹಮಂ ಕೊಯ್ದು ಕೊಟ್ಟಪೆನ್ ಈಗ ಸೈರಿಸು ಎನುತೆ ಸಾಣೆ ಪಿಡಿದಿರ್ದ ಕರಪತ್ರಮಂ ಪ್ರಾಣನಾಥೆಯ ಕೈಯೊಳ್ ಕೊಡಿಸಿದಂ ನೀಂ ತನುಜನಂ ಕೂಡಿಕೊಂಡು ಎನ್ನ ಉತ್ತಮಾಂಗಮಂ ಕೇಣಂ ಇಲ್ಲದೆ ಸೀಳ್ ಎಂದು ನೇಮಿಸಿದನು. 

ಪದ-ಅರ್ಥ:

ರಾಣಿ-ಕುಮುದ್ವತಿ;  ಆತ್ಮಜ-ಮಗ(ತಾಮ್ರಧ್ವಜ);  ಈವುದಿಲ್ಲ-ಕೊಡುವುದಿಲ್ಲ;   ಊಣೆಯ-ಕೊರತೆ; ಅಬ್ಜಪಾಣಿ-ವಿಷ್ಣು;  ಮೆಚ್ಚುವೊಲ್-ಮೆಚ್ಚುವಂತೆ;  ಸೈರಿಸು-ತಾಳು;  ಸಾಣೆವಿಡಿದಿರ್ದ-ಸಾಣೆ ಹಿಡಿದ, ಹರಿತಗೊಳಿಸಿದ;  ಕರಪತ್ರ-ಗರಗಸ; ಪ್ರಾಣನಾಥೆ-ಹೆಂಡತಿ; ಉತ್ತಮಾಂಗ-ತಲೆ; ಕೇಣಮಿಲ್ಲದೆ-ಹಿಂಜರಿಕೆಯಿಲ್ಲದೆ;   ತನುಜ-ಮಗ(ತಾಮ್ರಧ್ವಜ). 

            ರಾಣಿ ಕುಮುದ್ವತಿಯ ದೇಹವನ್ನೂ ಕೊಡುವುದಿಲ್ಲ, ಮಗನ ದೇಹವನ್ನೂ ಕೊಡುವುದಿಲ್ಲ. ನನ್ನ ಭಾಷೆಗೆ ಕೊರತೆ ಉಂಟಾಗದಂತೆ ಹಾಗೂ ಅಬ್ಜಪಾಣಿಯಾಗಿರುವ ವಿಷ್ಣು ಮೆಚ್ಚಿಕೊಳ್ಳುವಂತೆ ನನ್ನ ದೇಹದ ಬಲಭಾಗವನ್ನೇ ಕೊಯ್ದು ಕೊಡುತ್ತೇನೆ. ಈಗ ತಾಳು ಎಂದು ಬ್ರಾಹ್ಮಣನಿಗೆ ಹೇಳುತ್ತ, ಸಾಣೆಹಿಡಿದು ಹರಿತಗೊಳಿಸಿದ ಗರಗಸವನ್ನು ತನ್ನ ಹೆಂಡತಿಯಾದ ಕುಮುದ್ವತಿಯ ಕೈಯಲ್ಲಿ ಕೊಟ್ಟು, ಮಗನಾದ ತಾಮ್ರಧ್ವಜನನ್ನು ಕೂಡಿಕೊಂಡು ಈ ಗರಗಸದಿಂದ ನನ್ನ ಉತ್ತಮಾಂಗ(ತಲೆ)ವನ್ನು ಯಾವುದೇ ಹಿಂಜರಿಕೆಯಿಲ್ಲದೆ, ಸೀಳಿ ಎಂದು ಆಜ್ಞಾಪಿಸಿದನು.

 

ಸ್ತಂಭದ್ವಯದ ನಡುವೆ ನಿಂದ ನೃಪನಂ ತನ್ನ

ಸಂಭವನುಮರಸಿಯುಂ ಪಿಡಿದೊಬ್ಬರೊಂದು ಕಡೆ

ಯಿಂ ಭಾಳಮಧ್ಯಮಂ ತೀಕ್ಷ್ಣ ಕರಪತ್ರದಿಂ ಘರಘರನೆ ಸೀಳುತಿರಲು

ಜಂಭರಿಪುನಂದನ ಮುರಾರಿಗಳ್ ಬೆಱಗಾದ

ರಂಬೋಧಿಘೋಷದಿಂದೆದ್ದು ಹಾಹಾಕಾರ

ದಿಂ ಭಯಂಗೊಂಡೊಱಲುತಿರ್ದುದಾಸ್ಥಾನಮೆಲೆ ಭೂಪ ಕೇಳ್ ಕೌತುಕವನು  ೨೦

ಪದ್ಯದ ಅನ್ವಯಕ್ರಮ:

ಸ್ತಂಭದ್ವಯದ ನಡುವೆ ನಿಂದ ನೃಪನಂ ತನ್ನ ಸಂಭವನುಂ ಅರಸಿಯುಂ ಪಿಡಿದು ಒಬ್ಬರೊಂದು ಕಡೆಯಿಂ ಭಾಳಮಧ್ಯದಿಂ ತೀಕ್ಷ್ಣ ಕರಪತ್ರದಿಂ ಘರಘರನೆ ಸೀಳುತಿರಲು ಜಂಭರಿಪುನಂದನ ಮುರಾರಿಗಳ್ ಬೆಱಗಾದರ್ ಅಂಬೋಧಿ ಘೋಷದಿಂದ ಎದ್ದು ಹಾಹಾಕಾರದಿಂ ಭಯಗೊಂಡು ಒಱಲುತಿರ್ದುದು ಆಸ್ಥಾನಂ ಎಲೆ ಭೂಪ ಕೌತುಕವನು ಕೇಳ್.

ಪದ-ಅರ್ಥ:

ಸ್ತಂಭದ್ವಯ- ಎರಡು ಕಂಬಗಳು;  ನಿಂದ-ನಿಂತುಕೊಂಡ;   ತನ್ನ ಸಂಭವನುಂ-ತನ್ನ ಮಗನೂ; ಅರಸಿಯುಂ-ರಾಣಿಯೂ;  ಭಾಳಮಧ್ಯದಿಂ-ಹಣೆಯ ಮಧ್ಯದಿಂದ;  ತೀಕ್ಷ್ಣಕರಪತ್ರದಿಂ-ಹರಿತವಾದ ಗರಗಸದಿಂದ;  ಜಂಭರಿಪುನಂದನ-ಅರ್ಜುನ(ದೇವೇಂದ್ರನ ಮಗನಾದ ಅರ್ಜುನ);  ಮುರಾರಿ-ಕೃಷ್ಣ;  ಅಂಬೋಧಿಘೋಷ-ಕಡಲಿನ ಅಬ್ಬರ;  ಹಾಹಾಕಾರ-ಗೋಳಾಟ;  ಒಱಲುತಿರ್ದುದು-ಬೊಬ್ಬೆಹಾಕುತ್ತಿತ್ತು;    ಭೂಪ-ರಾಜ (ಜನಮೇಜಯ).

            ಎಲೆ ಜನಮೇಜಯನೇ, ಬ್ರಾಹ್ಮಣನ ಕೋರಿಕೆಯನ್ನು ಮನ್ನಿಸಲು, ಎರಡು ಕಂಬಗಳ ನಡುವೆ ನಿಂತುಕೊಂಡ ರಾಜ ಮಯೂರಧ್ವಜನನ್ನು ಆತನ ಹೆಂಡತಿ ಕುಮುದ್ವತಿ ಹಾಗೂ ಮಗ ತಾಮ್ರಧ್ವಜ ಇಬ್ಬರೂ ಒಂದೊಂದು ಕಡೆ ನಿಂತುಕೊಂಡು ಹಣೆಯ ಮಧ್ಯಭಾಗದಿಂದ ಹರಿತವಾದ ಗರಗಸದಿಂದ ಘರಘರನೆ ಸೀಳತೊಡಗಿದಾಗ ಬ್ರಾಹ್ಮಣ ವೇಶದಲ್ಲಿದ್ದ ಅರ್ಜುನ ಹಾಗೂ ಶ್ರೀಕೃಷ್ಣರಿಬ್ಬರೂ ಮಾತ್ರವಲ್ಲದೆ ಸಭೆಯಲ್ಲಿದ್ದವರೆಲ್ಲರೂ ಬೆರಗಾಗಿ ಭಯಗೊಂಡು ಕಡಲಮೊರೆತದಂತೆ ಗೋಳಾಡಿ ಬೊಬ್ಬಿಡುತ್ತಿದ್ದ ಸಮಯದಲ್ಲಿ ನಡೆದ ಕೌತುಕವನ್ನು ಕೇಳು ಎಂದನು.

 

ಪೆಂಡತಿಯೊಳಾತ್ಮಜನೊಳರಸನೊಳ್ ಮಿಗೆ ನೋಡಿ

ಕಂಡುದಿಲ್ಲೊಂದಿನಿಸು ಖಯಖೋಡಿಯಂ ಬಳಿಕ

ಪುಂಡರೀಕಾಂಬಂ ನೃಪನ ವಾಮಾಕ್ಷಿಯೊಳ್ ಕಂಬನಿಗಳೊಸರುತಿರಲು

ಅಂಡಲೆದಳುತಳುತೆ ಕುಡುವವನ ದಾನಮಂ

ಕೊಂಡಪರೆ ಬುಧರಕಟ ಲೋಕದೊಳ್ ಬೇಡುವಂ

ಭಂಡನೆನುತೊಡಮುರಿದು ತಿರುಗಿದಂ ತನಯನಂ ತಿನಲಿ ಹರಿ ಬನದೊಳೆನುತೆ  ೨೧

ಪದ್ಯದ ಅನ್ವಯಕ್ರಮ:

ಪೆಂಡತಿಯೊಳ್ ಆತ್ಮಜನೊಳ್ ಅರಸನೊಳ್ ಒಂದಿನಿಸು ಖಯ ಖೋಡಿಯಂ,ಮಿಗೆ ನೋಡಿ ಕಂಡುದಿಲ್ಲ ಬಳಿಕ ಪುಂಡರೀಕಾಂಬಂ, ನೃಪನ ವಾಮಾಕ್ಷಿಯೊಳ್ ಕಂಬನಿಗಳ್ ಒಸರುತಿರಲು ಅಂಡಲೆದು ಅಳುತೆ ಅಳುತೆ ಕುಡುವವನ ದಾನಮಂ ಕೊಂಡಪರೆ ಬುಧರ್ ಅಕಟ ಲೋಕದೊಳ್ ಬೇಡುವಂ ಭಂಡನೆನುತ ಒಡಮುರಿದು ಬನದೊಳ್ ತನಯನಂ ಹರಿ ತಿನಲಿ ಎನುತೆ ತಿರುಗಿದಂ.

ಪದ-ಅರ್ಥ:

ಪೆಂಡತಿ-ಹೆಂಡತಿ(ಕುಮುದ್ವತಿ); ಆತ್ಮಜ-ಮಗ(ತಾಮ್ರಧ್ವಜ);  ಅರಸ(ಮಯೂರಧ್ವಜ);  ಮಿಗೆ-ವಿಶೇಷವಾಗಿ;  ಒಂದಿನಿಸು-ಒಂದಿಷ್ಟೂ;  ಖಯಖೋಡಿ-ಮೋಸ, ವಂಚನೆ;  ಪುಂಡರೀಕಾಂಬ-ವಿಷ್ಣು(ಕೃಷ್ಣ); ನೃಪನ-ರಾಜನ; ವಾಮಾಕ್ಷಿಯೊಳ್-ಎಡಗಣ್ಣಿನಲ್ಲಿ; ಕಂಬನಿಗಳ್-ಕಣ್ಣೀರ ಹನಿಗಳು; ಅಂಡಲೆದು-ಅಲೆದಾಡಿ; ಕೊಂಡಪರೆ-ಸ್ವೀಕರಿಸುವರೆ?;  ಬುಧರ್-ಜ್ಞಾನಿಗಳು, ತಿಳಿದವರು; ಭಂಡ-ನಾಚಿಕೆಗೆಟ್ಟವ;  ಒಡಮುರಿದು-ಒಡನೆ ಬೇಸರಗೊಂಡು;  ಬನದೊಳ್-ಕಾಡಿನಲ್ಲಿ;   ಹರಿ-ಸಿಂಹ.

            ಮಯೂರಧ್ವಜನ ದೇಹವನ್ನು ಸೀಳುವ ಸಂದರ್ಭದಲ್ಲಿ ಆತನ ಹೆಂಡತಿಯಲ್ಲಿ, ಆತನ ಮಗನಲ್ಲಿ ಒಂದಿಷ್ಟೂ ಮೋಸ ವಂಚನೆಗಳು ಕಾಣಲಿಲ್ಲ. ಆದರೆ ಶ್ರೀಕೃಷ್ಣನು ಅರಸನಾದ ಮಯೂರಧ್ವಜನ ಎಡಗಣ್ಣಿನಲ್ಲಿ ಕಣ್ಣೀರ ಹನಿಗಳು ಒಸರುತ್ತಿರಲು ಅದನ್ನು ಕಂಡು ಅತ್ತಿತ್ತ ಅಲೆದಾಡಿ ಅಳುತ್ತ ಅಳುತ್ತ ಕೊಡುವವನ ದಾನವನ್ನು ತಿಳಿದವರು ಸ್ವೀಕರಿಸುತ್ತಾರೆಯೇ? ಅಕಟ ಲೋಕದಲ್ಲಿ ಬೇಡುವವನು ನಿಜವಾಗಿಯೂ ನಾಚಿಕೆಗೆಟ್ಟವನೇ ಸರಿ, ಎನ್ನುತ್ತ ನನ್ನ ಮಗನನ್ನು ಕಾಡಿನಲ್ಲಿ ಸಿಂಹ ತಿಂದರೆ ತಿನ್ನಲಿ ಎಂದು ಒಡನೆ ಬೇಸರಗೊಂಡು ಹೊರಡಲು ಸಿದ್ಧನಾದನು.

 

ಬೆಱಗಾದಳಾ ಕುಮುದ್ವತಿ ನುಡಿದಳರಸಂಗೆ

ಬಱಿದೆ ಕೊಯ್ಸಿದೆ ನಿನ್ನ ಮಸ್ತಕವನೆಡಗಣ್ಣೊ

ಳೊಱೆವ ಕಂಬನಿಗಳಂ ಕಂಡಾ ದ್ವಿಜೋತ್ತಮಂ ನೀನಳುತ ಕುಡುವೆಯೆಂದು

ಪೊಱಮಟ್ಟು ಪೋದನೊಲ್ಲದೆ ವಿಫಲಮಾದುದ

ಕ್ಕಱೊಳಿತ್ತ ದಾನಮಿದಕೆಂತೆನಲ್ ಭೂವರಂ

ಮಱುಗಿ ಕರಸಾತನಂ ತಿಳಿಪುವೆಂ ಪೋಳ್ಗಳೆರಡಂ ಕೂಡಿ ಪಿಡಿಯೆಂದನು  ೨೨

ಪದ್ಯದ ಅನ್ವಯಕ್ರಮ:

ಆ ಕುಮುದ್ವತಿ ಬೆಱಗಾದಳ್, ಅರಸಂಗೆ ನುಡಿದಳ್, ನಿನ್ನ ಮಸ್ತಕವನ್ ಬಱಿದೆ ಕೊಯ್ಸಿದೆ, ಆ ದ್ವಜೋತ್ತಮಂ ಎಡಗಣ್ಣೊಳ್ ಒಱೆವ ಕಂಬನಿಗಳಂ ಕಂಡು, ನೀನ್ ಅಳುತ ಕುಡುವೆ ಎಂದು ಒಲ್ಲದೆ ಪೊಱಮಟ್ಟು ಪೋದನ್, ಅಕ್ಕಱೊಳ್ ಇತ್ತ ದಾನಂ ವಿಫಲಂ ಆದುದು, ಇದಕೆ ಎಂತು ಎನಲ್ ಭೂವರಂ ಮಱುಗಿ ಪೋಳ್ಗಳ್ ಎರಡಂ ಕೂಡಿ ಪಿಡಿ ಆತನಂ ಕರೆಸು ತಿಳಿಪುವೆಂ ಎಂದನು.

ಪದ-ಅರ್ಥ:

ಬೆಱಗಾದಳ್-ಆಶ್ಚರ್ಯಚಕಿತಳಾದಳು; ಬಱಿದೆ-ಸುಮ್ಮನೆ; ಮಸ್ತಕ-ತಲೆ;  ಒಱೆದ-ಹರಿದ; ದ್ವಿಜೋತ್ತಮಂ-ಬ್ರಾಹ್ಮಣಶ್ರೇಷ್ಠ:  ಪೊರಮಟ್ಟು-ಹೊರಟು;  ಒಲ್ಲದೆ-ಇಷ್ಟಪಡದೆ, ಒಪ್ಪಿಕೊಳ್ಳದೆ;  ಅಕ್ಕಱೊಳಿತ್ತ-ಪ್ರೀತಿಯಿಂದ ಕೊಟ್ಟ;  ಇದಕೆಂತೆನಲ್-ಇದಕ್ಕೇನು ಮಾಡೋಣ?;  ಭೂವರಂ-ರಾಜನು(ಮಯೂರಧ್ವಜ);  ಮಱುಗಿ-ನೊಂದು;  ಪೋಳ್ಗಳೆರಡಂ- ಎರಡು ಹೋಳುಗಳನ್ನು;  ಕೂಡಿ ಪಿಡಿ-ಕೂಡಿಸಿ ಹಿಡಿ.

            ಬ್ರಾಹ್ಮಣನು ಅಲ್ಲಿಂದ ಎದ್ದು ಹೊರಟ ಕೂಡಲೇ ಕುಮುದ್ವತಿ ಬೆರಗಾಗಿ ಅರಸನಿಗೆ ಹೇಳಿದಳು, ನಿನ್ನ ದೇಹವನ್ನು ಸುಮ್ಮನೆ ಕೊಯ್ಸಿದೆ. ಆ ಬ್ರಾಹ್ಮಣನು ನಿನ್ನ ಎಡಗಣ್ಣಿನಲ್ಲಿ ಹರಿಯುತ್ತಿರುವ ಕಣ್ಣೀರನ್ನು ಕಂಡು ನೀನು ಅಳುತ್ತ ದಾನವನ್ನು ನೀಡುತ್ತಿರುವೆ ಎಂದು ಭಾವಿಸಿ ಹೊರಟುಹೋದನು. ಬಹಳ ಪ್ರೀತಿಯಿಂದ ನೀಡಿದ ದಾನ ವ್ಯರ್ಥವಾಯಿತು ಇದಕ್ಕೇನು ಮಾಡೋಣ? ಎಂದು ಹೇಳಿದಾಗ, ರಾಜ ಮಯೂರಧ್ವಜನು ಮರುಗಿ ನನ್ನ ದೇಹದ ಎರಡೂ ಭಾಗಳನ್ನು ಕೂಡಿಸಿ ಹಿಡಿದು ಆ ಬ್ರಾಹ್ಮಣರನ್ನು ಕರೆಸು, ನಾನು ಅವರಿಗೆ  ಕಾರಣವನ್ನು ತಿಳಿಸುತ್ತೇನೆ ಎಂದನು.

 

ಬಳಿಕಾ ಕುಮುದ್ವತಿ ನರೇಂದ್ರನ ಮಸ್ತಕದ ಪೋ

ಳ್ಗಳನೊಂದುಗೂಡಿ ಪಿಡಿದಾಗ ನಿಜತನಯನಂ

ಕಳುಹಲವನಾ ಪಾರ್ವನಂ ತಡೆದೊಡಂಬಡಿಸಿ ವಿನಯದಿಂ ಕರೆತರಲ್ಕೆ

ತಿಳಿಪಿದಂ ಭೂಪನೆಲೆ ವಿಪ್ರ ಕರಪತ್ರಹತಿ

ಗಳುಕಿತಿಲ್ಲುಪಕಾರಕಾಯ್ತು ದಕ್ಷಿಣಭಾಗ

ಮುಳಿದುದು ನಿರರ್ಥಕಂ ವಾಮಾಂಗಮೆಂದೊಸರಿತೆಡಗಣ್ಣ ಜಲಮೆಂದನು  ೨೩

ಪದ್ಯದ ಅನ್ವಯಕ್ರಮ:

ಬಳಿಕ ಆ ಕುಮುದ್ವತಿ ನರೇಂದ್ರನ ಮಸ್ತಕದ ಪೋಳ್ಗಳನ್ ಒಂದುಗೂಡಿ ಪಿಡಿದಾಗ ನಿಜತನಯನಂ ಕಳುಹಲ್, ಅವನ್ ಆ ಪಾರ್ವನಂ ತಡೆದು ಒಡಂಬಡಿಸಿ ವಿನಯದಿಂ ಕರೆತರಲ್ಕೆ, ಭೂಪನ್ ತಿಳಿಪಿದಂ ಎಲೆ ವಿಪ್ರ, ಕರಪತ್ರಹತಿಗೆ ಅಳುಕಿತಿಲ್ಲ, ದಕ್ಷಿಣಭಾಗಂ ಉಪಕಾರಕೆ ಆಯ್ತು ವಾಮಾಂಗಂ ನಿರರ್ಥಕಂ ಉಳಿದುದೆಂದು ಎಡಗಣ್ಣ ಜಲಂ ಒಸರಿತು ಎಂದನು.

ಪದ-ಅರ್ಥ:

ಬಳಿಕ-ಅನಂತರ; ನರೇಂದ್ರನ-ರಾಜನ; ಮಸ್ತಕದ ಪೋಳ್ಗಳನ್-ತಲೆಯ ಹೋಳುಗಳನ್ನು; ಒಂದುಗೂಡಿ ಪಿಡಿದಾಗ-ಒಂದುಗೂಡಿಸಿ ಹಿಡಿದಾಗ; ನಿಜತನಯನಂ-ತನ್ನ ಮಗನನ್ನು;  ಪಾರ್ವನಂ-ಬ್ರಾಹ್ಮಣನನ್ನು;  ತಡೆದೊಡಂಬಡಿಸಿ-ತಡೆದು ಒಪ್ಪಿಸಿಕೊಂಡು; ವಿಪ್ರ-ಬ್ರಾಹ್ಮಣ; ಕರಪತ್ರಹತಿಗೆ-ಗರಗಸದ ಕೊರೆತಕ್ಕೆ;  ಅಳುಕಿತಿಲ್ಲ-ಅಳುಕಲಿಲ್ಲ; ಉಪಕಾರಕಾಯ್ತು-ಒಳಿತಿಗಾಯ್ತು;  ದಕ್ಷಿಣಭಾಗ-ಬಲಭಾಗ;  ವಾಮಾಂಗ-ಎಡಭಾಗ.  

            ಅನಂತರ ರಾಣಿ ಕುಮುದ್ವತಿಯು ರಾಜ ಮಯೂರಧ್ವಜನ ತಲೆಯ ಎರಡೂ ಹೋಳುಗಳನ್ನು ಜೋಡಿಸಿ ಹಿಡಿದೊಡನೆ ರಾಜನು ತನ್ನ ಮಗನನ್ನು ಬ್ರಾಹ್ಮಣನಲ್ಲಿಗೆ ಕಳುಹಿಸಿದಾಗ ಅವನು ಆ ಬ್ರಾಹ್ಮಣನನ್ನು ತಡೆದು ಒಪ್ಪಿಸಿಕೊಂಡು ವಿನಯದಿಂದ ಹಿಂದಕ್ಕೆ ಕರತಂದನು. ಆಗ ರಾಜನು ಎಲೆ ಬ್ರಾಹ್ಮಣನೇ ಗರಗಸದ ಕೊರೆತಕ್ಕೆ ನಾನು ಅಳುಕಲಿಲ್ಲ. ನನ್ನ ದೇಹದ ಬಲಭಾಗ ಉಪಕಾರಕ್ಕೆ ಒದಗಿತು. ಆದರೆ ನನ್ನ ದೇಹದ ಎಡಭಾಗ ನಿರರ್ಥಕವಾಗಿಯೇ ಉಳಿಯಿತಲ್ಲ! ಎಂದು ಎಡಗಣ್ಣು ಕಂಬನಿಯನ್ನು ಸುರಿಸಿತು ಎಂದನು. 

 

ಮೆಚ್ಚಿದಂ ನೃಪೇಂದ್ರನೆಂದ ಮಾತಿಗೆ ಮುರಧ್ವಂಸಿ

ಹಚ್ಚಿರ್ದ ರಾಯನ ಕಳೇಬರದ ಪೋಳ್ಗಳಂ

ಬೆಚ್ಚು ಕಾರುಣ್ಯದಿಂ ಮೈದಡವಿ ತಕ್ಕೈಸಿ ನಿನ್ನಂ ಪರೀಕ್ಷಿಸಿದೆನು

ನಿಚ್ಚಟದ ಭಕ್ತಿಯಂ ಕಂಡೆನಿವನರ್ಜುನಂ

ಮುಚ್ಚುಮಱೆಯೇಕಿನ್ನು ತಾನೀಗ ಕೃಷ್ಣನೆಂ

ದೆಚ್ಚಱಿಸಿ ನಿಗಮದಱಿಕೆಯ ತನ್ನ ಸಾಕಾರ ಮೂರ್ತಿಯಂ ತೋಱಿಸಿದನು  ೨೪

ಪದ್ಯದ ಅನ್ವಯಕ್ರಮ:

ನೃಪೇಂದ್ರನ್ ಎಂದ ಮಾತಿಂಗೆ ಮುರಧ್ವಂಸಿ ಮೆಚ್ಚಿದಂ, ರಾಯನ ಕಳೇಬರದ ಪೋಳ್ಗಳಂ ಬೆಚ್ಚು ಕಾರುಣ್ಯದಿಂ ಮೈದಡವಿ ತಕ್ಕೈಸಿ ನಿನ್ನಂ ಪರೀಕ್ಷಿಸಿದೆನು, ನಿಚ್ಚಟದ ಭಕ್ತಿಯಂ ಕಂಡೆನ್, ಇವನ್ ಅರ್ಜುನಂ, ಇನ್ನು ಮುಚ್ಚು ಮರೆಯೇಕೆ? ತಾನ್ ಈಗ ಕೃಷ್ಣನ್ ಎಂದು ಎಚ್ಚರಿಸಿ ನಿಗಮದ ಅಱಿಕೆಯ ತನ್ನ ಸಾಕಾರ ಮೂರ್ತಿಯಂ ತೋಱಿಸಿದನು.

ಪದ-ಅರ್ಥ:

ನೃಪೇಂದ್ರನೆಂದ ಮಾತಿಗೆ-ರಾಜನು ಹೇಳಿದ ಮಾತಿಗೆ;  ಮುರಧ್ವಂಸಿ-ಕೃಷ್ಣ; ಹೆಚ್ಚಿರ್ದ-ಸೀಳಿದ; ರಾಯನ-ರಾಜನ;  ಕಳೇಬರದ-ಹೆಣದ;  ಪೋಳ್ಗಳಂ ಬೆಚ್ಚು –ಹೋಳುಗಳನ್ನು ಜೋಡಿಸಿ;  ಕಾರುಣ್ಯದಿಂ-ಕರುಣೆಯಿಂದ; ತಕ್ಕೈಸಿ-ಆಲಿಂಗಿಸಿ; ನಿಚ್ಚಟದ-ಕಪಟವಿಲ್ಲದ, ನಿಶ್ಚಲವಾದ;  ನಿಗಮದಱಿಕೆಯ-ವೇದೋಕ್ತವಾದ;  ಸಾಕಾರಮೂರ್ತಿ-ಆಕಾರ ಸಹಿತವಾದ  ರೂಪ. 

            ರಾಜನಾದ ಮಯೂರಧ್ವಜನ ಮಾತಿಗೆ ಶ್ರೀಕೃಷ್ಣನು ಮೆಚ್ಚಿದನು. ರಾಜನ ಕಳೇಬರದ ಹೋಳುಗಳನ್ನು(ಭಾಗಗಳನ್ನು) ಜೋಡಿಸಿ ಕರುಣೆಯಿಂದ ಆತನ ಮೈಯನ್ನು ತಡವಿ, ಆಲಿಂಗಿಸಿ, ಮಯೂರಧ್ವಜನೇ ನಿನ್ನನ್ನು ಪರೀಕ್ಷಿಸಿದೆನು. ಕಪಟವಿಲ್ಲದ, ನಿಶ್ಚಲವಾದ ನಿನ್ನ ಭಕ್ತಿಯನ್ನು ಕಂಡು ಮೆಚ್ಚಿದೆನು. ಇವನು ಬ್ರಾಹ್ಮಣವೇಷಧಾರಿಯಾದ ಅರ್ಜುನ. ಇನ್ನು ಮುಚ್ಚುಮರೆಯ ಮಾತೇಕೆ? ನಾನೇ ಶ್ರೀಕೃಷ್ಣನೆಂದು ವೇದೋಕ್ತವಾದ ತನ್ನ ಸಾಕಾರ ರೂಪವನ್ನು ಮಯೂರಧ್ವಜನಿಗೆ ತೋರಿಸಿದನು.  

 

ಪನ್ನಗಾರಿಧ್ವಜಂ ಬಳಿಕಾ ನೃಪಾಲನಂ

ಮನ್ನಿಸಿ ಕೃತಾರ್ಥನಹೆ ನೀನರ್ಧದೇಹಮಂ

ನನ್ನಿಯಿಂದೀಯೆ ಮೆಚ್ಚಿದೆನೀಗ ನಿನಗೆ ಸಂಗ್ರಾಮದೊಳ್ ತಾಮ್ರಕೇತು

ನಿನ್ನೆ ಪಡೆಯೆಲ್ಲಮುಮನೀ ಸವ್ಯ ಸಾಚಿಯುಮ

ನೆನ್ನುವಂ ಮೂರ್ಛೆಗಾಣಿಸಿ ಕೆಡಹಿ ಬಂದುದಕೆ

ಮುನ್ನೆ ಹರ್ಷಿತನಾದೆನಿನ್ನು ಸತಿಸುತರೊಡನೆ ಮಾಡು ಯಜ್ಞವನೆಂದನು  ೨೫

ಪದ್ಯದ ಅನ್ವಯಕ್ರಮ:

ಪನ್ನಗಾರಿಧ್ವಜಂ ಬಳಿಕ ಆ ನೃಪಾಲನಂ ಮನ್ನಿಸಿ ಕೃತಾರ್ಥನಹೆ, ಈಗ ನೀನ್ ಅರ್ಧ ದೇಹಮಂ ನನ್ನಿಯಿಂದ ಈಯೆ ನಿನಗೆ ಮೆಚ್ಚಿದೆನ್ ನಿನ್ನೆ ಸಂಗ್ರಾಮದೊಳ್ ತಾಮ್ರಕೇತು ಪಡೆ ಎಲ್ಲಮುಮಂ ಈ ಸವ್ಯಸಾಚಿಯುಮನ್ ಎನ್ನುವಂ ಮೂರ್ಛೆಗಾಣಿಸಿ ಕೆಡಹಿ ಬಂದುದಕೆ ಮುನ್ನೆ ಹರ್ಷಿತನಾದೆನ್ ಇನ್ನು ಸತಿಸುತರೊಡನೆ ಯಜ್ಞವನ್ ಮಾಡು ಎಂದನು.

ಪದ-ಅರ್ಥ:

ಪನ್ನಗಾರಿಧ್ವಜಂ-ಕೃಷ್ಣನು; ನೃಪಾಲನಂ-ರಾಜನನ್ನು(ಮಯೂರಧ್ವಜನನ್ನು);  ಮನ್ನಿಸಿ-ಗೌರವಿಸಿ;  ಕೃತಾರ್ಥನಹೆ-ಕೃತಾರ್ಥನಾದೆ;  ನನ್ನಿಯಿಂದೀಯೆ-ಸತ್ಯದಿಂದ ಕೊಡಲು;  ಸಂಗ್ರಾಮ-ಯುದ್ಧ; ತಾಮ್ರಕೇತು-ತಾಮ್ರಧ್ವಜ;  ಪಡೆಯೆಲ್ಲಮುಮನ್-ಸೈನ್ಯವೆಲ್ಲವನ್ನು;  ಸವ್ಯಸಾಚಿ-ಅರ್ಜುನ;  ಎನ್ನುವಂ-ನನ್ನನ್ನೂ;  ಮೂರ್ಛೆಗಾಣಿಸಿ-ಮೂರ್ಛೆಗೊಳಿಸಿ;  ಕೆಡಹಿ-ಬೀಳುವಂತೆ ಮಾಡಿ;  ಮುನ್ನೆ-ಮೊದಲು.

            ಪನ್ನಗಾರಿಧ್ವಜನಾದ ಕೃಷ್ಣನು ಅನಂತರ ಮಯೂರಧ್ವಜನನ್ನು ಗೌರವಿಸಿ, ನೀನೀಗ ಕೃತಾರ್ಥನಾಗಿರುವೆ. ಈಗ ನೀನು ನಿನ್ನ ದೇಹದ ಅರ್ಧಭಾವನ್ನು ಸತ್ಯದಿಂದಲೇ ನೀಡಿದುದಕ್ಕೆ ನಿನ್ನನ್ನು ಮೆಚ್ಚಿದ್ದೇನೆ. ನಿನ್ನೆಯ ದಿನ ಯುದ್ಧಭೂಮಿಯಲ್ಲಿ ನಿನ್ನ ಮಗನಾದ ತಾಮ್ರಧ್ವಜನು ನಮ್ಮ ಸೈನ್ಯವೆಲ್ಲವನ್ನೂ ಈ ಅರ್ಜುಜನನ್ನೂ ಜೊತೆಗೆ ನನ್ನನ್ನೂ ಮೂರ್ಛಿತನನ್ನಾಗಿಸಿ ಬೀಳುವಂತೆ ಮಾಡಿ ಬಂದಿದ್ದಾನೆ. ಅವನ ಈ ಸಾಹಸಕ್ಕಾಗಿ ನಾನು ಹರ್ಷಿತನಾಗಿದ್ದೇನೆ. ಇನ್ನು ನೀನು ನಿನ್ನ ಹೆಂಡತಿ ಮಗನೊಡನೆ ಯಜ್ಞವನ್ನು ಮುಂದುವರಿಸು ಎಂದನು.   

 

ಸುರನದಿಯ ತೋಯಮಿರೆ ನೀರಡಸಿ ಹಿಮಜಲಕೆ

ಪರಿವಂತೆ ನಿನ್ನ ದರ್ಶನಮಿರ್ದುಮೀ ಮಹಾ

ಧ್ವರಕೆಳಸುವವನಲ್ಲ ತನ್ನುಮಂ ತನ್ನ ಸತಿಸುತರುಮಂ ತನ್ನೊಳಿರ್ದ

ತುರಂಗಗಳಂ ತನ್ನ ಯಜ್ಞಮಂ ಯಜ್ಞೋಪ

ಕರಣಂಗಳಂ ತನ್ನ ರಾಜ್ಯಮಂ ತನ್ನ ಮಂ

ದಿರದ ಸರ್ವಸ್ವಮಂ ನಿನ್ನಪದಕರ್ಪಿಸಿದೆನೆಂದವಂ ಕೈಮುಗಿದನು  ೨೬

ಪದ್ಯದ ಅನ್ವಯಕ್ರಮ:

ಸುರನದಿಯ ತೋಯಂ ಇರೆ, ನೀರಡಸಿ ಹಿಮಜಲಕೆ ಪರಿವಂತೆ, ನಿನ್ನ ದರ್ಶನಂ ಇರ್ದುಂ ಈ ಮಹಾಧ್ವರಕೆ ಎಳಸುವವನ್ ಅಲ್ಲ, ತನ್ನುಮಂ ತನ್ನ ಸತಿ ಸುತರುಮಂ ತನ್ನೊಳ್ ಇರ್ದ ತುರಂಗಗಳಂ ತನ್ನ ರಾಜ್ಯಮಂ ತನ್ನ ಮಂದಿರದ ಸರ್ವಸ್ವಮಂ ನಿನ್ನ ಪದಕೆ ಅರ್ಪಿಸಿದೆನ್ ಎಂದು ಅವಂ ಕೈಮುಗಿದನು.

 

ಪದ-ಅರ್ಥ:ಸುರನದಿ-ಗಂಗಾನದಿ; ತೋಯಮಿರೆ-ನೀರು ಇರಲು; ನೀರಡಸಿ-ಬಾಯಾರಿ;  ಹಿಮಜಲ-ಮಂಜುನೀರು;  ಪರಿವಂತೆ-ಕಾತರಿಸುವಂತೆ;  ನಿನ್ನ ದರ್ಶನಮಿರ್ದುಂ-ನಿನ್ನ ಭೇಟಿಯಾದ ಮೇಲೂ;  ಮಹಾಧ್ವರ-ಮಹಾಯಜ್ಞ;  ಎಳಸುವವನಲ್ಲ-ಬಯಸುವವನಲ್ಲ;  ತನ್ನುಮಂ-ತನ್ನನ್ನೂ;  ತುರಂಗ-ಕುದುರೆ;  ಯಜ್ಞೋಪಕರಣ-ಯಜ್ಞಸಾಮಗ್ರಿ;  ಮಂದಿರದ ಸರ್ವಸ್ವ-ಅರಮನೆಯ ಸಮಸ್ತ ವಸ್ತುಗಳು;  ಪದಕೆ-ಪಾದಗಳಿಗೆ. 

            ಗಂಗಾನದಿಯ ಪಾವನವಾದ ಶುದ್ಧನೀರು ಇರುವಾಗ ಬಾಯಾರಿ ಮಂಜುನೀರಿಗೆ ಕಾತರಿಸಿದಂತಾಯಿತು. (ನಿನ್ನ ದರ್ಶನ ಶುದ್ಧವಾದ ಗಂಗೆಯ ನೀರಿಗೆ ಸಮಾನವಾಗಿರುವಾಗ ಇನ್ನು ಮಹಾಯಜ್ಞವೆಂಬ ಮಂಜುನೀರಿಗೆ ಏಕೆ ಹಾತೊರೆಯಲಿ?) ನಿನ್ನ ದರ್ಶನವಾದ ಮೇಲೆ ಇನ್ನು ಮಹಾಯಜ್ಞಕ್ಕೆ ನಾನು ಆಸೆಪಡುವವನಲ್ಲ. ನನ್ನನ್ನೂ ನನ್ನ ಹೆಂಡತಿ , ಮಕ್ಕಳನ್ನೂ ನನ್ನ ವಶದಲ್ಲಿರುವ ಕುದುರೆಗಳನ್ನೂ ನನ್ನ ಯಜ್ಞವನ್ನೂ ಯಜ್ಞದ ಉಪಕರಣಗಳನ್ನೂ ನನ್ನ ರಾಜ್ಯವನ್ನೂ ಅರಮನೆಯ ಸರ್ವಸಂಪತ್ತನ್ನೂ ನಿನ್ನ ಪಾದಕಮಲಗಳಲ್ಲಿ ಅರ್ಪಿಸಿದ್ದೇನೆ ಎಂದು ಮಯೂರಧ್ವಜನು ಕೃಷ್ಣನಿಗೆ ಕೈಮುಗಿದನು.

 

ಇಂತೆಂದು ಭೂವರಂ ನುಡಿಯೆ ಹರ್ಷಿತನಾಗಿ

ಕುಂತೀಸುತಂಗವನ ಭಕ್ತಿಯಂ ತೋಱಿಸುತ

ನಂತರದೋಳಾ ನೃಪನ ನಗರದೊಳ್ ಮೂಱು ದಿನಮಿರ್ದು ನಿಜಸೇನೆ ಬರಲು

ದಂತಿಪುರಕಲ್ಲಿಯ ಸಮಸ್ತವಸ್ತುಗಳೈದು

ವಂತೆ ನೇಮಿಸಿ ಮಯೂರಧ್ವಜಂ ಸಹಿತ ನಡೆ

ದಂ ತುರಗಮೆರಡುಮಂ  ಬಿಡಿಸಿ ಮುಂದಕೆ ದೇವಪುರದ ಲಕ್ಷ್ಮೀಕಾಂತನು  ೨೭

ಪದ್ಯದ ಅನ್ವಯಕ್ರಮ:

ಇಂತು ಎಂದು ಭೂವರಂ ನುಡಿಯೆ, ಹರ್ಷಿತನಾಗಿ ಕುಂತೀಸುತಂಗೆ ಅವನ ಭಕ್ತಿಯಂ ತೋಱಿಸುತ, ನಂತರದೊಳ್ ಆ ನೃಪನ ನಗರದೊಳ್ ಮೂಱು ದಿನಂ ಇರ್ದು ನಿಜಸೇನೆ ಬರಲು, ದಂತಿಪುರಕೆ ಅಲ್ಲಿಯ ಸಮಸ್ತ ವಸ್ತುಗಳ್ ಐದುವಂತೆ ನೇಮಿಸಿ, ಎರಡುಂ ತುರಗಮಂ ಬಿಡಿಸಿ, ಮಯೂರಧ್ವಜಂ ಸಹಿತ ದೇವಪುರದ ಲಕ್ಷ್ಮೀಕಾಂತನು ಮುಂದಕೆ ನಡೆದಂ.

ಪದ-ಅರ್ಥ:

ಇಂತೆಂದು-ಹೀಗೆಂದು;  ಭೂವರಂ-ರಾಜನು(ಮಯೂರಧ್ವಜನು);  ಹರ್ಷಿತನಾಗಿ-ಸಂತಸಪಟ್ಟು;  ಕುಂತೀಸುತಂಗೆ-ಕುಂತಿಯ ಮಗನಿಗೆ(ಅರ್ಜುನನಿಗೆ);  ಅವನ-ಮಯುರಧ್ವಜನ;  ಆ ನೃಪನ-ಮಯೂರಧ್ವಜನ;  ನಿಜಸೇನೆ-ತನ್ನ ಸೇನೆ(ಪಾಂಡವಸೇನೆ);  ದಂತಿಪುರಕೆ-ಹಸ್ತಿನಾವತಿಗೆ;  ಐದುವಂತೆ-ತಲುಪುವಂತೆ;  ನೇಮಿಸಿ-ವ್ಯವಸ್ಥೆಗೊಳಿಸಿ;  ತುರಗ-ಕುದುರೆ.

            ಹೀಗೆಂದು ಮಯೂರಧ್ವಜನು ಹೇಳಿದಾಗ, ಕೃಷ್ಣನು ಅತ್ಯಂತ ಸಂತಸಪಟ್ಟು, ಕುಂತೀಸುತನಾದ ಅರ್ಜುನನಿಗೆ ಮಯೂರಧ್ವಜನ ಭಕ್ತಿಯನ್ನು ತೋರಿಸಿ, ಅನಂತರ ಆತನ ನಗರದಲ್ಲಿ ಮೂರು ದಿನಗಳ ಕಾಲ ತಂಗಿದ್ದು, ತಮ್ಮ ಸೈನ್ಯ ಮಯೂರಧ್ವಜನ ರಾಜಧಾನಿಗೆ  ಆಗಮಿಸಿದಾಗ ಮಯೂರಧ್ವಜನು ಅರ್ಪಿಸಿದ ಸಮಸ್ತ ವಸ್ತುಗಳನ್ನು ಕಾವಲಿನಲ್ಲಿ ಹಸ್ತಿನಾವತಿಗೆ ತಲುಪುವಂತೆ ವ್ಯವಸ್ಥೆಗೊಳಿಸಿ, ಕೃಷ್ಣನು ಮಯೂರಧ್ವಜನ ವಶದಲ್ಲಿದ್ದ ಎರಡು ಯಾಗ ಕುದುರೆಗಳನ್ನು ಬಿಡಿಸಿಕೊಂಡು ಆತನನ್ನು ಕೂಡಿಕೊಂಡು ಮುಂದಕೆ ನಡೆದನು.

 

***   

Leave a Reply

Your email address will not be published. Required fields are marked *