ಸಾಹಿತ್ಯಾನುಸಂಧಾನ

heading1

ಸತ್ತವರು ಸಾಯದಿರಲಿ!

“ಸತ್ತವರು ಸಾಯದಿರಲಿ” ಎಂಬುದು ಬೇಂದ್ರೆಯವರ “ಸಾಯೋ ಆಟ” ನಾಟಕದಲ್ಲಿನ ಪದ್ಯದ ಒಂದು ಸಾಲು. ಏನಿದು ಅಸಂಬದ್ಧ ಮಾತು?! ಸತ್ತವರು ಸಾಯದಿರುವುದು ಹೇಗೆ? ಇದೂ ಸಾಧ್ಯವೇ? ಮೊದಲಾದ ಪ್ರಶ್ನೆಗಳು ಎಲ್ಲರನ್ನೂ ಕಾಡಬಹುದು. ಆದರೆ ಈ ಮಾತಿನ ಬಗ್ಗೆ ಆಲೋಚಿಸಿದಂತೆಲ್ಲ ಅದರ ಬಗೆಗಿನ ಗಹನತೆಯ ಅರಿವಾಗುತ್ತದೆ. ಇದೊಂದು ಅರ್ಥವತ್ತಾದ, ಮರಳಿ ಮರಳಿ ಪರಾಮರ್ಶಿಸಬೇಕಾದ ಹಾಗೂ ಸದಾ ನೆನಪಿನಲ್ಲಿಡಬೇಕಾದ ಮಾತು.

            ವಾಸ್ತವವಾಗಿ ಮನುಷ್ಯನಿಗೆ ಎರಡು ಬದುಕು. ಲೋಕದಲ್ಲಿ ಹಲವರಿಗೆ ಕೇವಲ ಒಂದೇ ಬದುಕಾದರೆ, ಕೆಲವರಿಗೆ ಎರಡು ಬದುಕು.   ಒಂದು ಸಾವಿನ ಮೊದಲನೆಯದು, ಇನ್ನೊಂದು ಸಾವಿನ ಅನಂತರದ್ದು. ಹಲವರಿಗೆ  ಮೊದಲನೆಯ ಬದುಕಿನಲ್ಲಿಯೇ ಎಲ್ಲವೂ ಕೊನೆಗೊಂಡರೆ, ಕೆಲವರಿಗೆ ಮೊದಲನೆಯ ಬದುಕಿನಿಂದ ಎರಡನೆಯ ಬದುಕು ಸಾಧಿತವಾಗುವಂತಹುದು.

            ಮೊದಲನೆಯ ಬದುಕಿನಲ್ಲಿ ಒಬ್ಬ ವ್ಯಕ್ತಿ ಅಮೂಲ್ಯ ಸಾಧನೆಗಳನ್ನು ಮಾಡಿ, ಸಮಾಜಕ್ಕೆ, ನಾಡಿಗೆ  ಮತ್ತು ಆ ಮೂಲಕ ದೇಶಕ್ಕೆ ಒಳಿತನ್ನು ಮಾಡಿದರೆ, ವಿಶಿಷ್ಟವಾದ ಕೊಡುಗೆಯನ್ನು ನೀಡಿದರೆ, ಆತ ಅಳಿದ ಮೇಲೂ ತನ್ನ ಜೀವಿತಕಾಲದ ಸಾಧನೆಗಳಿಂದ ಜನಮಾನ್ಯನೂ ಜಗಮಾನ್ಯನೂ ಆಗುತ್ತಾನೆ. ಇದು ಆತನ ಎರಡನೆಯ ಬದುಕು. ಯಾರು ಇಹದ ಬದುಕನ್ನು ಪರಿಪೂರ್ಣವಾಗಿ ಬದುಕಬೇಕೆಂದು ಬಯಸುತ್ತಾನೋ ಆತ ಯಾವತ್ತೂ ಪರದ ಬಗ್ಗೆ ಯೋಚಿಸುವುದಿಲ್ಲ.

            ಭಾರತದಲ್ಲಿ ಪುರಾಣಕಾಲದಿಂದ ಹಿಡಿದು ಇಂದಿನವರೆಗೂ ಎಷ್ಟೋ ಮಂದಿ ತಮ್ಮ ಅಮ್ಯೂಲ್ಯ ಸಾಧನೆಯಿಂದ ಅಳಿದ ಮೇಲೂ ಉಳಿದಿದ್ದಾರೆ. ಋಷಿ-ಮುನಿಗಳು, ರಾಜ-ಮಹಾರಾಜರು, ಮಂತ್ರಿ-ಮಹೋದಯರು, ಕವಿ-ಸಾಹಿತಿಗಳು, ಶಿಲ್ಪಿಗಳು, ದಾರ್ಶನಿಕರು, ಸಂಗೀತಜ್ಞರು, ನೃತ್ಯವಿಶಾರದರು, ಆಡಳಿತ ತಜ್ಞರು, ವೈದ್ಯವಿದರು –ಮೊದಲಾದವರೆಲ್ಲ ತಮ್ಮ ಜೀವಿತಕಾಲದ ಸಾಧನೆಯಿಂದ ಬದುಕಿದ್ದಾರೆ. ಭೌತಿಕವಾಗಿ ಅಳಿದಿದ್ದರೂ ಸಾಧನೆಯಿಂದ ಬದುಕಿದ್ದಾರೆ. ಇದೇ ’ತುಂಬುಜೀವನ’, ಅಥವಾ ’ಅಳಿದ ಮೇಲಿನ ಬದುಕು”.

            ಶಿಲ್ಪಿಗಳು ಭೌತಿಕವಾಗಿ ಅಳಿದಿದ್ದರೂ ಅವರು ಕೆತ್ತಿದ ಶಿಲ್ಪಗಳು, ದೇವಾಲಯಗಳು, ಕೋಟಿಕೊತ್ತಲಗಳು; ಕವಿ-ಸಾಹಿತಿ-ಶಾಸ್ತ್ರವಿದರು ಅಳಿದಿದ್ದರೂ ಅವರು ರಚಿಸಿರುವ ಕಾವ್ಯ, ಸಾಹಿತ್ಯ, ಶಾಸ್ತ್ರಗ್ರಂಥಗಳು;  ಮಂತ್ರಿಮಹೋದಯರು ಅಳಿದಿದ್ದರೂ ಅವರು ಆಡಳಿತದಲ್ಲಿ ಬಳಸಿಕೊಂಡ ಜಾಣ್ಮೆ, ಮೇಧಾವಿತನ; ರಾಜ-ಮಹಾರಾಜರು ಅಳಿದಿದ್ದರೂ ಅವರು ಕೈಗೊಂಡ ಅಭಿವೃದ್ಧಿಕಾರ್ಯಗಳು, ಕಟ್ಟಿಸಿದ ವಾಸ್ತುಶಿಲ್ಪ, ಕೋಟೆಗಳು; ಋಷಿ-ಮುನಿಗಳು ಅಳಿದಿದ್ದರೂ ಅವರು  ರಚಿಸಿರುವ ಧಾರ್ಮಿಕಗ್ರಂಥಗಳು; ಸಂಗೀತಜ್ಞರು ಅಳಿದಿದ್ದರೂ ಅವರು ರಚಿಸಿರುವ ಸಂಗೀತಕೃತಿಗಳು; ನೃತ್ಯವಿಶಾರದರು ಅಳಿದಿದ್ದರೂ  ಅವರು ನೀಡಿರುವ ಸಾಂಸ್ಕೃತಿಕ ಕೊಡುಗೆಗಳು; ವಿಜ್ಞಾನಿಗಳು ಅಳಿದಿದ್ದರೂ ಅವರು ಮಾಡಿದ ಸಂಶೋಧನೆಗಳು ಇಂದಿಗೂ ನಮ್ಮ ನಡುವೆ ಇವೆ. ನಮ್ಮನ್ನು ಹೆಜ್ಜೆಹೆಜ್ಜೆಗೂ ಮಾರ್ಗದರ್ಶನ ಮಾಡುತ್ತಿವೆ. ನಾಡಿನ ಹಾಗೂ ದೇಶದ ಕೀತಿಯನ್ನು ವಿಶ್ವದ ಉದ್ದಗಲಕ್ಕೂ ಸಾರುತ್ತಿವೆ. ನಮ್ಮನ್ನು ಮೇಧಾವಿಗಳನ್ನಾಗಿ ರೂಪಿಸುತ್ತಿವೆ. ಅವರೆಲ್ಲರ ಕರ್ತೃತ್ವಶಕ್ತಿಯನ್ನು ಮೇಧಾವಿತನವನ್ನು ನಮ್ಮಲ್ಲಿ ಇನ್ನೂ ಜೀವಂತವಾಗಿರಿಸಿವೆ. ಇದೇ ತಾನೇ ಅವರೆಲ್ಲರ ಅಳಿದ ಮೇಲಿನ ಬದುಕು! “

            ಮನುಷ್ಯ ತಾನು ಹುಟ್ಟಿ ಬದುಕಿನಾದ್ಯಂತ ಸಿಕ್ಕಸಿಕ್ಕವರಿಗೆ ಕಾಟಕೊಟ್ಟು, ಹಿಂಸೆಗೊಳಪಡಿಸಿ; ಅನ್ಯಾಯ, ಮೋಸ, ವಂಚನೆಗಳನ್ನು ಮಾಡಿ; ಅನ್ಯರ ಅನ್ನಕ್ಕೆ ಕಲ್ಲುಹಾಕಿ, ಸಾರ್ವಜನಿಕ ಆಸ್ತಿಯನ್ನು ಲೂಟಿಮಾಡಿ; ಘಾತುಕತನದಿಂದ ಸಮಾಜದ್ರೋಹಿ, ದೇಶದ್ರೋಹಿಗಳಾಗಿ ಬಾಳುವುದಕ್ಕಿಂತ ಅಥವಾ ಏನನ್ನೂ ಸಾಧಿಸದೆ ನಾಶವಾಗುವುದಕ್ಕಿಂತ ಜೀವಿತಾವಧಿಯಲ್ಲಿ ಸಾಧನೆಗೈದು ಉಳಿದವರಿಗೆ ತಮ್ಮ ಸಾಧನೆಗಳ ಮೂಲಕ ಮಾರ್ಗದರ್ಶನ ಮಾಡುತ್ತ ಅಳಿದ ಮೇಲೂ ಬದುಕುವುದು ಶ್ರೇಯಸ್ಕರವಲ್ಲವೇ? “ಸತ್ತವರು ಸಾಯದಿರುವುದು” ಎಂದರೆ ಇದೇ ತಾನೆ?!

***

 

3 thoughts on “ಸತ್ತವರು ಸಾಯದಿರಲಿ!

  1. ಅಬ್ಬಾ..! ಒಂದೇ ಒಂದು ಪುಟ್ಟ ಸಾಲಿನಲ್ಲಿ ಇಡೀ ಜೀವನದ ಅಂಶವನ್ನು ಹಿಡಿದಿಡುವ ಕಲೆ ಕೇವಲ ದ. ರಾ ಬೇಂದ್ರೆಯವರ ಬರವಣಿಗೆಗೆ ಮಾತ್ರವೇ ಸಾಧ್ಯವೇನೋ. ತುಂಬಾ ಅರ್ಥಪೂರ್ಣವಾದ ವಾಕ್ಯವನ್ನು ಅಷ್ಟೇ ಸರಳವಾಗಿ, ಅರ್ಥವಾಗುವಂತೆ ವಿವರಿಸಿದ್ದೀರಿ. ಧನ್ಯವಾದಗಳು ಸರ್ 🙏

    1. ನಿಮ್ಮ ಮಾತು ಸತ್ಯ. ಕಿರಿದರೊಳ್ ಪಿರಿದರ್ಥಮಂ ತುಂಬಿ ಹೇಳುವ ಪ್ರತಿಭೆ ಬಹುಶಃ ಬೇಂದ್ರೆಯವರಿಗೆ ಮಾತ್ರ ಸಿದ್ಧಿಸಿತ್ತು. ಅವರ ಸಾಹಿತ್ಯಪ್ರಪಂಚದೊಳಗೆ ಪ್ರವೇಶ ಸ್ವಲ್ಪ ಕಷ್ಟ. ಹಾಗೆ ಪಡೆಯುವುದಕ್ಕೆ ಸಾಧ್ಯವಾದರೆ ಮನಸೋ ಇಚ್ಛೆ ವಿಹರಿಸಬಹುದು.
      ಧನ್ಯವಾದಗಳು.🙏

Leave a Reply

Your email address will not be published. Required fields are marked *