ಬಂಜೆ ಬೇನೆಯನಱಿವಳೆ?
ಮಲತಾಯಿ ಮುದ್ದ ಬಲ್ಲಳೆ?
ನೊಂದ ನೋವ ನೋಯದವರೆತ್ತ ಬಲ್ಲರು?
ಚೆನ್ನಮಲ್ಲಿಕಾರ್ಜುನನಿಱಿದಲಗು ಒಡಲಲ್ಲಿ ಮುರಿದು
ಹೊರಳುವೆನ್ನಳಲನು ನೀವೆತ್ತ ಬಲ್ಲಿರೇ, ಎಲೆ ತಾಯಿಗಳಿರಾ!
-ಅಕ್ಕಮಹಾದೇವಿ
ಇದು ಅಕ್ಕನ ಬದುಕಿನ ವಿಮರ್ಶೆ. ಆಕೆ ತನ್ನ ಬದುಕಿನ ಘಟನೆಗಳನ್ನು ‘ಬಂಜೆಯ ಬೇನೆ’ ಹಾಗೂ ‘ಮಲತಾಯಿಯ ಮುದ್ದು’ ಎಂಬ ಎರಡು ದೃಷ್ಟಾಂತಗಳ ಮೂಲಕ ಸ್ಪಷ್ಟಪಡಿಸಿದ್ದಾಳೆ. ಲೋಕದಲ್ಲಿ ಬಂಜೆಯಾದವಳಿಗೆ ಹೆರಿಗೆಯ ನೋವಿನ ತೀವ್ರತೆ, ಹಿಂಸೆಗಳು ತಿಳಿಯವು. ನಾಲ್ಕು ಮಕ್ಕಳನ್ನು ಹೆತ್ತವಳಿಗೂ ಹೆರುವುದು ಹೇಗೆಂದು ಹೇಳಿಕೊಟ್ಟಾಳು! ಹಾಗೆಯೇ ಮಲತಾಯಿ ತನ್ನ ಸವತಿಯ ಮಕ್ಕಳನ್ನು ಮುದ್ದುಮಾಡಲು ತಿಳಿಯಳು. ತಾನೊಬ್ಬ ತಾಯಿಯಾದರೂ ತನ್ನಂತೆಯೇ ಇರುವ ಇನ್ನೊಬ್ಬ ತಾಯಿಯ ಕಷ್ಟಗಳನ್ನು ಅಥವಾ ಆಕೆಯ ಮಕ್ಕಳ ಸುಖಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಅಸಮರ್ಥಳು. ಹಾಗಾಗಿ ಅನುಭವಿಸಿದ ನೋವು ನೊಂದವರಿಗಲ್ಲದೆ ನೋಯದವರಿಗೆ ಅರ್ಥವಾಗದು. ನೋಯಿಸುವವರಿಗೂ ಕೂಡಾ.
ಅಕ್ಕಮಹಾದೇವಿ ಅಂದಿನ ಸಾಮಾಜಿಕ ಕಟ್ಟಳೆಗಳನ್ನು ಮೀರಿ ಒಲ್ಲದ ಗಂಡ ಕೌಶಿಕನನ್ನು ತ್ಯಜಿಸಿ, ಹುಟ್ಟುಡುಗೆಯಲ್ಲಿ ಚೆನ್ನಮಲ್ಲಿಕಾರ್ಜುನನನ್ನು ಹುಡುಕಿಕೊಂಡು ಹೊರಟು ಪರಿತಪಿಸಿದವಳು. ಆಕೆಯದು ಲೋಕಕ್ಕೆ ವ್ಯತಿರಿಕ್ತವಾದ, ಅಸಹಜವಾದ ಪ್ರೇಮ ಹಾಗೂ ದಾಂಪತ್ಯ ಪರಿಕಲ್ಪನೆ. ಗಂಡ ಕೌಶಿಕನ ಕಾಮಲೋಲುಪತೆಯನ್ನು ವಿರೋಧಿಸುವುದಕ್ಕೆ ಬಟ್ಟೆಯೆಲ್ಲವನ್ನೂ ಕಳಚಿ ನಗ್ನಳಾಗಿ ನಿಲ್ಲುವ ಆಕೆಯ ಮನಃಸ್ಥಿತಿಯ ಒಳಹೊರಗನ್ನಾಗಲೀ ಅದೇ ಸ್ಥಿತಿಯಲ್ಲಿ ಚೆನ್ನಮಲ್ಲಿಕಾರ್ಜುನನನ್ನು ಅರಸಿಕೊಂಡು ಹೊರಡುವ ಆಕೆಯ ತೀವ್ರವಾದ ಮಾನಸಿಕ ತುಡಿತವನ್ನಾಗಲೀ ದಾರಿಯುದ್ದಕ್ಕೂ ಕಾಮುಕಪುರುಷರಿಂದ ಒದಗಿದ ಅವಮಾನ, ಹಿಂಸೆಗಳನ್ನಾಗಲೀ ಜೀವಮಾನದುದ್ದಕ್ಕೂ ಆಕೆ ಅನುಭವಿಸಿದ ವ್ಯತಿರಿಕ್ತವಾದ, ವಿಲಕ್ಷಣವಾದ ಅನುಭವಗಳನ್ನಾಗಲೀ ಚೆನ್ನಮಲ್ಲಿಕಾರ್ಜುನನನ್ನು ಕಾಣದೆ ಕ್ಷಣಕ್ಷಣಕ್ಕೂ ಅನುಭವಿಸುವ ತಳಮಳ, ಅಸಹಾಯಕತೆಗಳನ್ನಾಗಲೀ ಆಕೆಯಲ್ಲದೆ ಅನ್ಯರು ಅರಿಯಲಾರರು, ಅರ್ಥೈಸಿಕೊಳ್ಳಲಾರರು. ಅಕ್ಕನದು ಚೆನ್ನಮಲ್ಲಿಕಾರ್ಜುನನೊಂದಿಗಿನ ಅಲೌಕಿಕಪ್ರೇಮ ಹಾಗೂ ಅಲೌಕಿಕದಾಂಪತ್ಯ. ಅದರ ಮಹತ್ವ, ಅದರ ಆಳ-ಹರಹುಗಳು ಅವಳಿಗಲ್ಲದೆ ಲೋಕದ ಇತರ ಮಹಿಳೆಯರಿಗೆ ಅರಿಯವು. ಹೇಗೆಂದರೆ ಬಂಜೆ ಬೇನೆ ಅರಿಯದಂತೆ, ಮಲತಾಯಿ ಮುದ್ದ ಅರಿಯದಂತೆ. ಪ್ರತಿಯೊಬ್ಬರಿಗೂ ಮಿತಿಗಳು ಇರುವುದು ಸಹಜವಾದರೂ ಅವುಗಳನ್ನು ಮೀರಿನಿಲ್ಲುವ ಪ್ರಯತ್ನವನ್ನೇ ಮಾಡದಿರುವುದು ವಿಪರ್ಯಾಸ. ಚೆನ್ನಮಲ್ಲಿಕಾರ್ಜುನ ಆಕೆಯಲ್ಲಿ ಹುಟ್ಟಿಸಿದ ಪ್ರೇಮಕಾಮಗಳು ಆಕೆಯ ದೇಹಕ್ಕೆ ಅಲಗಿನಂತೆ ಇರಿಯುತ್ತಿವೆ. ಅಥವಾ ಆಯುಧದ ತುಣುಕೊಂದು ತುಂಡಾಗಿ ದೇಹದೊಳಗೆ ಉಳಿದುಕೊಂಡು ಸಿಡಿಯುತ್ತ ಹಿಂಸಿಸುವ ಹಾಗೆ ಚೆನ್ನಮಲ್ಲಿಕಾರ್ಜುನ ತನ್ನಲ್ಲಿ ಉದಿಸುವಂತೆ ಮಾಡಿದ ‘ಪ್ರೇಮ’ ಅಲಗಿನ ತುಣುಕಿನಂತೆ ದೇಹದೊಳಗೆ ಉಳಿದುಕೊಂಡು ತನ್ನನ್ನು ಹಿಂಸಿಸುತ್ತಿರುವ ನೋವನ್ನು ಲೋಕದ ಇತರ ಮಹಿಳೆಯರು ಹೇಗೆ ಅರಿಯಬಲ್ಲರು? ಎಂಬುದು ಅಕ್ಕನ ಪ್ರಶ್ನೆ. ಏಕೆಂದರೆ ಇದು ಅಕ್ಕನಿಗೆ ಮಾತ್ರ ಎದುರಾದ ಸಮಸ್ಯೆ.
ಒಬ್ಬ ಹೆಣ್ಣಿನ ಮನಸ್ಥಿತಿಯನ್ನು ಇತರ ಹೆಣ್ಣುಗಳು ಅರ್ಥಮಾಡಿಕೊಳ್ಳಲಾಗದ ಪರಿಸ್ಥಿತಿ ಅಂದಿನಂತೆ ಇಂದೂ ಇದೆ. ಈ ಮನಸ್ಥಿತಿ ಕೇವಲ ಹೆಣ್ಣುಗಳಿಗೆ ಮಾತ್ರ ಸೀಮಿತವಲ್ಲ, ಪುರುಷರಿಗೂ ಅನ್ವಯ. ಲೋಕದಲ್ಲಿ ತಾವೇ ಶ್ರೇಷ್ಠರು, ಇತರರು ಕನಿಷ್ಠರು; ತಾವೇ ಮೇಧಾವಿಗಳು, ಇತರರು ದಡ್ಡರು; ತಾವೇ ಸಮರ್ಥರು, ಇತರರು ಅಸಮರ್ಥರು ಎಂದೆಲ್ಲ ಭಾವಿಸಿಕೊಂಡು ಅನ್ಯರನ್ನು ನೋಯಿಸುತ್ತ, ಹಿಂಸಿಸುತ್ತ, ಪೀಡಿಸುತ್ತ ಅನ್ಯರ ನೆಮ್ಮದಿಯನ್ನು ಕದಡಿ ಬದುಕುತ್ತಿರುವ ಬಂಜೆಯಂತಹ, ಮಲತಾಯಿಯಂತಹ ವಿಕೃತಮನೋಭಾವದವರು ಇಂದು ಸಮಾಜದಲ್ಲೆಲ್ಲ ತುಂಬಿಕೊಂಡಿದ್ದಾರೆ. ಹಾಗಾಗಿಯೇ ಸಾಂಸಾರಿಕ, ಸಾಮಾಜಿಕ ಅಧಃಪತನ ನಿರಂತರ ನಡೆಯುತ್ತಲೇ ಇದೆ. ಈ ನಿಟ್ಟಿನಲ್ಲಿ ಅಕ್ಕನ ವಚನದ ಅರ್ಥವ್ಯಾಪ್ತಿ ಕಾಲದಿಂದ ಕಾಲಕ್ಕೆ, ಕ್ಷೇತ್ರದಿಂದ ಕ್ಷೇತ್ರಕ್ಕೆ ವಿಸ್ತರಿಸಿಕೊಳ್ಳುವುದು ಅದರ ಮಹತ್ವವನ್ನು ಸಾರುತ್ತದೆ.
***
ತುಂಬಾ ಅರ್ಥಪೂರ್ಣವಾದ ವಚನ. ಈ ಸೃಷ್ಟಿಯೇ ಹಾಗೆ, ಪ್ರತಿ ಜೀವಿಗೂ ಅದರದ್ದೇ ಆದ ನೋವಿರುತ್ತದೆ. ಅದರದ್ದೇ ಆದ ದುಃಖ ದುಮ್ಮಾನಗಳಿರುತ್ತದೆ. ಬಹುಶಃ ಈ ವಚನ ಸರ್ವಕಾಲಕ್ಕೂ ಸರಿಹೊಂದುವಂತೆ ರಚಿತವಾಗಿದೆ ಎಂದರೆ ತಪ್ಪಾಗಲಾರದು.. ಯುಗಯುಗಾಂತರ ಗಳಿಂದಲೂ ಮನುಷ್ಯನ ಜೀವನ ಕೇವಲ ಅವನಿಗೆ ಮಾತ್ರವೇ ಸೀಮಿತವಾಗಿದೆ. ಬೇರೆಯವರ ದುಃಖ, ನೋವು, ಅವಮಾನ ಇದು ಯಾವುದನ್ನೂ ಕೂಡ ಪರಿಗಣನೆಗೆ ತೆಗೆದುಕೊಳ್ಳದೇ ಬದುಕುತಿದ್ದಾನೆ. ಅಂತಹ ದ್ವಾಪರಯುಗದಲ್ಲೂ ಕೌರವರು, ಪಾಂಡವರ ನೋವನ್ನು ಅರಿಯಲಿಲ್ಲ. ಸಾಕ್ಷಾತ್ ವಿಷ್ಣುವಿನ ಅವತಾರವಾದ ರಾಮನ ನೋವನ್ನು ಕೂಡ ಕೈಕೇಯಿ ಅರಿಯಲಿಲ್ಲ.. ಅರಿಯುವುದು ಬಿಟ್ಟು ಕೊನೆಯ ಪಕ್ಷ ಅವರಿಗೆ ಅನ್ಯಾಯ ಮಾಡುವಂತಹ ದುಸ್ಸಾಹಸಕ್ಕಾದರೂ ಅವರು ಇಳಿಯಬಾರದಿತ್ತು… ಅಂತಹ ದೇವಾನುದೇವತೆಗಳೇ ಇಂತಹ ನೋವಿಗೆ ಸಿಲುಕಿರಬೇಕಾದರೆ ಹುಲುಮಾನವರಾದ ನಾವೆಲ್ಲ ಯಾವ ಲೆಕ್ಕ. ಅಕ್ಕಮಹಾದೇವಿ ಅವರು ಚೆನ್ನ ಮಲ್ಲಿಕಾರ್ಜುನನ ಪ್ರೀತಿಗೆ ಪರಿತಪಿಸಿದಂತೆ ಇಂದು ಎಷ್ಟೋ ಮುಗ್ಧ ಮನಸುಗಳು ತಮ್ಮದೇ ಸಾಧನೆಯ ಹಾದಿಯಲ್ಲಿ ಅಕ್ಕಮ್ಮಹಾದೇವಿಯವರಂತೆಯೇ ಹಿಂಸೆಗೆ ಒಳಗಾಗಿ ತಮ್ಮ ಬದುಕಿನಲ್ಲಿ ಅನೇಕ ಅಡೆ ತಡೆ ನೋವುಗಳನ್ನು ಅನುಭವಿಸುತ್ತಿದ್ದಾರೆ. ಆಧ್ಯಾತ್ಮ ಸಾಧನೆಯಲ್ಲಿ ಹೂವಿನ ಹಾದಿ ಆಗ ಬೇಕಾಗಿದ್ದ ಅಕ್ಕನ ಬದುಕು, ಈ ಕ್ರೂರ ಸಮಾಜಕ್ಕೆ ಸಿಲುಕಿ ಮುಳ್ಳಿನ ಹಾದಿಯಾಯಿತು. ಅಕ್ಕನಿಗೆ ಚೆನ್ನ ಮಲ್ಲಿಕಾರ್ಜುನನ ಮೇಲೆ ಇದ್ದ ನಿಸ್ವಾರ್ಥ, ನಿಷ್ಕಲ್ಮಶ ಪ್ರೀತಿಯನ್ನು ಈ ಸಮಾಜ ಅರಿತಿದ್ದರೆ ಅಕ್ಕಮಹಾದೇವಿಯ ಸಾಧನೆಯ ದಾರಿ ಸುಗಮವಾಗಿ ಇರಬಹುದಿತ್ತು. ಆದರೆ ಹಾಗಾಗದೆ ಈ ಸಮಾಜದ ಕ್ರೂರತ್ವದ ತೀವ್ರತೆಯನ್ನು ತಡೆಯಲಾಗದೆ ತಾನೆಷ್ಟು ಹಿಂಸೆ ಪಡುತ್ತಿದ್ದೇನೆ, ತನ್ನ ಚೆನ್ನ ಮಲ್ಲಿಕಾರ್ಜುನನ ಮೇಲಿನ ಪ್ರೀತಿ ತನ್ನನ್ನು ಯಾವೆಲ್ಲ ಪರೀಕ್ಷೆಗೆ ಒಡ್ಡುತ್ತಿದೆ ಎಂದು ಅಕ್ತಮ್ಮಹಾದೇವಿಯವರು ತಮ್ಮ ವಚನದ ಮೂಲಕ ಹೇಳಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಮನಸ್ಸಿಗೆ ತುಂಬಾ ನಾಟುವಂತಹ ವಚನ. ಅಷ್ಟೇ ಮನಸ್ಸಿಗೆ ನಾಟುವಂತೆ ಸುಂದರವಾಗಿ ವಿವರಿಸಿದ್ದೀರಿ. ಧನ್ಯವಾದಗಳು ಸರ್ 🙏
ನಿಮ್ಮ ವಿವರವಾದ ಹಾಗೂ ಸೋದಾಹರಣವಾದ ಅನಿಸಿಕೆಗಳಿಗೆ ಧನ್ಯವಾದಗಳು. ಈ ಲೇಖನದಿಂದ ನಿಮ್ಮಲ್ಲಿಯೂ ಹೊಸ ಚಿಂತನೆಗಳು ಮೂಡುತ್ತಿವೆ ಎನ್ನುವುದಾದರೆ ವಚನಗಳಿಗೆ ಸಾರ್ವಕಾಲಿಕ ಮೌಲ್ಯವಿದೆ ಎಂದರ್ಥ.
ಶಿವಶರಣರ ವಚನಗಳು ಅವರವರ ಅನುಭವದ ಮೂಸೆಯಲ್ಲಿ ಪುಟಗೊಂಡವುಗಳು. ಹಾಗಾಗಿ ಅದು ಅನುಭಾವ ಸಾಹಿತ್ಯ. ಯಾವುದು ಅನುಭಾವವೊ ಅದು ಸಾರ್ವಕಾಲಿಕ ಮಹತ್ವವನ್ನು ಪಡೆದುಕೊಳ್ಳುತ್ತದೆ. ನಿಮ್ಮ ಮಾತಿನಂತೆ, ಅಕ್ಕನ ಪ್ರತಿನಿಧಿಗಳು ಇಂದು ಲಕ್ಷ, ಕೋಟಿ ಸಂಖ್ಯೆಯಲ್ಲಿದ್ದಾರೆ. ಆಧುನಿಕ ಶಿಕ್ಷಣವನ್ನು ಪಡೆದರೂ ಬುದ್ಧಿವಂತ ಅಜ್ಞಾನಿಗಳಾಗಿರುವುದು ವಿಪರ್ಯಾಸ. ವಚನಗಳು ಯಾವತ್ತೂ ಪ್ರಸ್ತುತವೇ. ಅದೊಂದು ರೀತಿಯ ಜೀವನ ವಿಮರ್ಶೆ. ಅರ್ಥ ಮಾಡಿಕೊಂಡು ಅನುಸರಿಸುವ ಮನಸ್ಸಿದ್ದರೆ!.
🙏