ಸಾಗರದೊಳಗಿನ ಕಿಚ್ಚಿನ ಸಾಕಾರದಂತೆ
ಸಸಿಯೊಳಗಣ ಫಲಪುಷ್ಪಂಗಳ ರುಚಿ ಪರಿಮಳದಂತೆ
ಮನದ ಮರೆಯ ಮಾತು ನೆನಹಿನಲ್ಲಿರಿದು
ನಾಲಗೆ ನುಡಿವಾಗಲಲ್ಲದೆ ಕಾಣಬಾರದು ಕೇಳಬಾರದು
ಒಂದಂಗದೊಳಡಗಿದ ನೂರೊಂದರ ಪರಿ ರಾಮನಾಥ
-ಜೇಡರದಾಸಿಮಯ್ಯ
ಜೇಡರ ದಾಸಿಮಯ್ಯ ಈ ವಚನದಲ್ಲಿ ಈ ಭೂಮಿಯಲ್ಲಿ ಶಿವನ ಅಸ್ತಿತ್ವವು ನೂರೊಂದರ ಪರಿಯಲ್ಲಿ ಅಡಗಿರುವುದನ್ನು ಮೂರು ದೃಷ್ಟಾಂತಗಳ ಮೂಲಕ ಸ್ಪಷ್ಟಪಡಿಸಿದ್ದಾನೆ.
ಮೊದಲನೆಯದು, ಸಾಗರದೊಳಗೆ ಬೆಂಕಿ ಅಡಗಿಕೊಂಡಿರುವಂತೆ ಇರುವ ಶಿವನ ಅಸ್ತಿತ್ವ. ಸಾಗರವೆಂಬುದು ಅಪರಿಮಿತವಾದ ನೀರಿನ ಆಗರ. ಬೆಂಕಿಯನ್ನು ನಂದಿಸುವ ಸಕಲ ಶಕ್ತತೆಯೂ ಅದಕ್ಕಿದೆ. ಆದರೆ ಅದರೊಳಗೂ ಬೆಂಕಿ ಅಡಗಿಕೊಂಡಿದೆ. ಅದು ಮೇಲುನೋಟಕ್ಕೆ ಕಾಣಲಾರದು. ಆದರೆ ಯಾವುದೋ ಪ್ರಕೃತಿವೈಚಿತ್ರ್ಯದ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಬೆಂಕಿಯನ್ನು ಬಡಬಾನಲ, ವಡಬಶಿಖಿ, ಬಾಡಬಾಗ್ನಿ, ವಡಬ ಎಂಬೆಲ್ಲ ಹೆಸರಿನಿಂದ ಗುರುತಿಸಲಾಗುತ್ತದೆ. ಅದು ತನ್ನ ಅಸ್ತಿತ್ವಕ್ಕೆ ಕೊಂಚವೂ ಧಕ್ಕೆಯಾಗದ ರೀತಿಯಲ್ಲಿ ಸಾಗರದ ನೀರಿನೊಳಗೆ ಸಮ್ಮಿಳಿತವಾಗಿದೆ. ಶಿವನ ಅಸ್ತಿತ್ವವೂ ಹೀಗೆಯೇ. ಮೇಲು ನೋಟಕ್ಕೆ ಕಾಣಿಸದು. ಆದರೆ ಸಮಯಾನುಸಾರ ತನ್ನ ಅಸ್ತಿತ್ವವನ್ನು ಪ್ರಕಟಿಸಬಲ್ಲುದು.
ಎರಡನೆಯದು, ಸಸಿಗಳ ಫಲಗಳಲ್ಲಿರುವ ರುಚಿ ಹಾಗೂ ಪುಷ್ಪಗಳಲ್ಲಿರುವ ಪರಿಮಳದಲ್ಲಿ ಅಡಗಿರುವಂತೆ ಇರುವ ಶಿವನ ಅಸ್ತಿತ್ವ. ಲೋಕದಲ್ಲಿ ಕೋಟಿ ಸಂಖ್ಯೆಯಲ್ಲಿ ಸಸಿಗಳಿವೆ. ಪ್ರತಿಯೊಂದರ ಫಲಗಳು ನೂರಾರು ಬಗೆಯ ರುಚಿಯನ್ನು ಹೊಂದಿವೆ. ಮಾತ್ರವಲ್ಲದೆ, ಪ್ರತಿಯೊಂದರ ಹೂಗಳೂ ನೂರಾರು ಬಗೆಯ ಬಣ್ಣಗಳನ್ನೂ ಆಕಾರಗಳನ್ನೂ ಪರಿಮಳಗಳನ್ನೂ ಹೊಂದಿವೆ. ಒಂದೇ ನೆಲದಲ್ಲಿ, ಒಂದೇ ನೀರನ್ನು ಹೀರಿಕೊಂಡು ಬೆಳೆದ ಸಸಿಗಳ ಫಲ ಹಾಗೂ ಹೂಗಳಲ್ಲಿನ ಈ ವೈವಿಧ್ಯಮಯ ರುಚಿ ಹಾಗೂ ಪರಿಮಳಗಳು ಲೋಕದಲ್ಲಿನ ವೈಚಿತ್ರ್ಯ. ಶಿವನ ಅಸ್ತಿತ್ವವೂ ಹೀಗೆಯೇ ನೂರಾರು, ಸಾವಿರಾರು ಬಗೆಯಲ್ಲಿದ್ದು ತನ್ನ ಅಸ್ತಿತ್ವವನ್ನು ಸಂದರ್ಭಾನುಸಾರ ಪ್ರಕಟಿಸಬಲ್ಲುದು.
ಮೂರನೆಯದು, ಮನದ ಮರೆಯಲ್ಲಿ ಹುಟ್ಟಿಕೊಳ್ಳುವ ಮಾತು. ಅದು ಸ್ಮರಣೆಯಲ್ಲಿ ಪರಿಪಕ್ವಗೊಂಡು ನಾಲಗೆಯ ಮೂಲಕ ಪ್ರಕಟಗೊಳ್ಳುತ್ತದೆ. ಆದರೆ ಅದು ಪ್ರಕಟಗೊಳ್ಳುವವರೆಗೂ ಆ ಮಾತಿನ ರೂಪುರೇಷೆಗಳನ್ನಾಗಲೀ ಅದರ ಆಳ ಹರಹುಗಳನ್ನಾಗಲೀ ಅದರ ಅರ್ಥಗಾಂಭೀರ್ಯವನ್ನಾಗಲೀ ಕಾಣುವುದಕ್ಕೆ ಅಥವಾ ಕೇಳುವುದಕ್ಕೆ ಸಾಧ್ಯವಿಲ್ಲ. ಒಂದೇ ವಿಷಯ ನೂರಾರು ಮಂದಿಯ ಮನಸ್ಸಿನಲ್ಲಿ ನೂರಾರು ಬಗೆಯಲ್ಲಿ ಹುಟ್ಟಿಕೊಳ್ಳಬಲ್ಲುದು, ನೂರಾರು ಬಗೆಗಳಲ್ಲಿ ಪ್ರಕಟವಾಗಬಲ್ಲುದು. ಶಿವನ ಅಸ್ತಿತ್ವವು ಪ್ರತಿಯೊಂದು ಮಾತಿನ ಹಿಂದೆ ಭಿನ್ನಭಿನ್ನ ಸ್ವರೂಪಗಳಲ್ಲಿ ಅಡಗಿಕೊಂಡಿರುತ್ತದೆ.
ಶಿವ ಸರ್ವಾಂತರ್ಯಾಮಿಯಾದವನು. ಅವನ ಅಸ್ತಿತ್ವ ಹಾಗೂ ಅದರ ಸ್ವರೂಪವನ್ನು ಅರ್ಥೈಸಿಕೊಳ್ಳುವುದಾಗಲೀ ಕಂಡುಕೊಳ್ಳುವುದಾಗಲೀ ಸಾಧ್ಯವಿಲ್ಲ. ಆತನ ವೈವಿಧ್ಯಮಯ ಅಸ್ತಿತ್ವವೇ ಈ ಪ್ರಕೃತಿಯನ್ನು ಸುಂದರವಾಗಿ ರೂಪುಗೊಳಿಸಿದೆ. ಈ ಭೂಮಿಯಲ್ಲಿ ವಾಸಿಸುವ ಸಕಲ ಜೀವಸಂಕುಲಕ್ಕೆ ವಾಸಯೋಗ್ಯವನ್ನಾಗಿಸಿದೆ. ಬದುಕಿಗೆ ಪ್ರೇರಣೆಯನ್ನೊದಗಿಸಿದೆ. ಈ ಭೂಮಿಯ ಮೇಲಿರುವ ಸಕಲ ವಸ್ತುವಿಶೇಷದಲ್ಲಿಯೂ ಸಕಲ ಸಸ್ಯರಾಶಿಯಲ್ಲಿಯೂ ಸಕಲ ಫಲರಾಶಿಯಲ್ಲಿಯೂ ಸಕಲ ಪುಷ್ಪರಾಶಿಯಲ್ಲಿಯೂ ವೈವಿಧ್ಯವಿದೆ. ಶಿವ ಪ್ರತಿಯೊಂದರಲ್ಲಿ ನೂರೊಂದು ವಿಧದಲ್ಲಿ, ನೂರೊಂದು ಸ್ವರೂಪದಲ್ಲಿ, ನೂರೊಂದು ಪರಿಯಲ್ಲಿ ಅಡಗಿಕೊಂಡಿದ್ದಾನೆ. ಶಿವ ಒಂದೊಂದು ಅಂಗದೊಳಗೆ ಅಡಗಿಕೊಂಡಿರುವ ನೂರೊಂದರ ಪರಿಯನ್ನು ಕಂಡುಕೊಳ್ಳುವ ವಿಧಾನದಲ್ಲಿಯೇ ಭಕ್ತನೊಬ್ಬ ಅರಿವನ್ನು ತಂದುಕೊಳ್ಳುವುದರ ಮೂಲಕ ಪರಿಪೂರ್ಣತೆಯನ್ನು ಸಾಧಿಸಬೇಕೆನ್ನುವುದು ದಾಸಿಮಯ್ಯನ ಇಂಗಿತ.
ಇಂದಿನ ಇಪ್ಪತ್ತೊಂದನೆಯ ಶತಮಾನದ ಕಾಲಘಟ್ಟದಲ್ಲಿ ಶಿವನ ಅಸ್ತಿತ್ವ ಅಥವಾ ಶಿವಾನುಗ್ರಹದ ವಿಚಾರ ಹಾಗಿರಲಿ. ಆದರೆ ಪ್ರಕೃತಿಯಲ್ಲಿನ ನಿಗೂಢತೆಯನ್ನು, ಅದರ ವೈವಿಧ್ಯವನ್ನು, ಅದರ ಸ್ವರೂಪವನ್ನು, ಅವುಗಳಲ್ಲಿನ ಸೌಂದರ್ಯವನ್ನು ನಾವಿಂದು ಅರಿತುಕೊಳ್ಳಬೇಕಾಗಿದೆ. ಈ ಪ್ರಕೃತಿ ಸಕಲ ಜೀವಸಂಕುಲದ ವಾಸಕ್ಕೆ ಅನುಕೂಲಕರವಾಗಿದೆ. ವೈವಿಧ್ಯಮಯವಾದ ಸಸ್ಯಸಂಕುಲ, ಪ್ರಾಣಿಸಂಕುಲಗಳಿಂದ ಕೂಡಿ ಗಾಳಿ, ನೀರು, ಆಹಾರ ಮೊದಲಾದ ಮೂಲಭೂತ ಜೀವನಾವಶ್ಯಕ ಸೌಕರ್ಯಗಳು ಇರುವುದರಿಂದಲೇ ಈ ಭೂಮಿಯ ಮೇಲೆ ಪ್ರತಿಯೊಬ್ಬರ ಮೈಮನಗಳನ್ನು ಮುದಗೊಳಿಸುವ, ಬದುಕನ್ನು ಸಾರ್ಥಕಗೊಳಿಸುವ, ಹೆಜ್ಜೆಹೆಜ್ಜೆಗೂ ಅರಿವನ್ನು ಒದಗಿಸುವ ಈ ವೈವಿಧ್ಯದ ಹಿಂದೆ ಒಂದು ವಿಶೇಷ ಶಕ್ತಿಯಿದೆ, ವಿಶೇಷ ವ್ಯವಸ್ಥೆಯಿದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ದಾಸಿಮಯ್ಯ ಹೇಳುವಂತೆ ಇದು ಒಂದೊಂದು ಅಂಗದಲ್ಲಿ ಅಡಗಿಕೊಂಡಿರುವ ನೂರೊಂದು ಬಗೆಯ ವ್ಯವಸ್ಥೆ. ಆದರೆ ನಾವಿಂದು ಈ ವ್ಯವಸ್ಥೆಯನ್ನು ಬೇಕಾಬಿಟ್ಟಿ ಬದಲಾಯಿಸುತ್ತ, ನಮಗೆ ಪೂರಕವಾಗಿರುವ ವ್ಯವಸ್ಥೆಯನ್ನು ನಮ್ಮಿಂದಾದಷ್ಟು ರಕ್ಷಿಸಿಕೊಳ್ಳದೆ ಅಧ್ವಾನ ಮಾಡುತ್ತಿದ್ದೇವೆ. ಹಾಗಾಗಿಯೇ ಪ್ರತಿಹಂತದಲ್ಲಿಯೂ ನಾವು ಪ್ರಕೋಪಗಳ ಮೂಲಕ ಸಾಕಷ್ಟು ಕಷ್ಟನಷ್ಟಗಳನ್ನು, ಜೀವಹಾನಿಗಳನ್ನು, ಆಸ್ತಿಪಾಸ್ತಿಗಳ ಹಾನಿಗಳನ್ನು ಎದುರಿಸುತ್ತಿದ್ದರೂ ಇನ್ನೂ ಎಚ್ಚೆತ್ತುಕೊಂಡಿಲ್ಲ. ಎಚ್ಚೆತ್ತುಕೊಳ್ಳುವ ಯಾವ ಸೂಚನೆಯೂ ಕಾಣುತ್ತಿಲ್ಲ.
***