ಸಾಹಿತ್ಯಾನುಸಂಧಾನ

heading1

ಪರಹಿಂಸೆಯಂ ಮಾಡಿ ಮಾನವಂ ಬಾಳ್ದಪನೆ -ಲಕ್ಷ್ಮೀಶ, ಭಾಗ-೩

ವಿಧುಹಾಸನಂ ಪಲವುಪಾಯದಿಂದೀಗ ನಾಂ

ವಧಿಸದಿರ್ದೊಡೆ ತನ್ನ ಸಂತತಿಗೆ ಧರೆಯನಾ

ಳ್ವಧಿಕಸಂಪದಮಾಗದದಱಿಂದೆ ಕುಲಘಾತಕಗೆ ಮದುವೆಯಾದ ವಿಷಯೆ

ವಿಧವೆಯಾಗಿರಲೆಂದು ಹೃದಯದೊಳ್ ನಿಶ್ಚೈಸಿ

ಮಧುರೋಕ್ತಿಯಿಂದೆ ಮದುಮಕ್ಕಳಂ ಮನ್ನಿಸಿ ವಿ

ವಿಧ ವೈಭವಂಗಳಂ ನಡೆಸಿ ಜಾಮಾತನಂ ಮಂತ್ರಿ ಕರೆದಿಂತೆಂದನು         ೨೫

ಪದ್ಯದ ಅನ್ವಯಕ್ರಮ:

ವಿಧುಹಾಸನಂ ಈಗ ಪಲವು ಉಪಾಯದಿಂದ ನಾಂ ವಧಿಸದೆ ಇರ್ದೊಡೆ ತನ್ನ ಸಂತತಿಗೆ ಧರೆಯನ್ ಆಳ್ವ ಸಂಪದಂ ಆಗದು ಅದಱಿಂದೆ ಕುಲಘಾತಕಗೆ ಮದುವೆಯಾದ ವಿಷಯೆ ವಿಧವೆಯಾಗಿರಲಿ ಎಂದು ಹೃದಯದೊಳ್ ನಿಶ್ಚೈಸಿ ಮಧುರ ಉಕ್ತಿಯಿಂದ ಮದುಮಕ್ಕಳಂ ಮನ್ನಿಸಿ ವಿವಿಧ ವೈಭವಂಗಳಂ ನಡೆಸಿ ಮಂತ್ರಿ ಜಾಮಾತನಂ ಕರೆದು ಇಂತೆಂದನು.

ಪದ-ಅರ್ಥ:

ವಿಧುಹಾಸ-ಚಂದ್ರಹಾಸ; ಪಲವು-ಹಲವು; ವಧಿಸು-ಕೊಲ್ಲು; ಸಂತತಿ-ವಂಶ; ಧರೆಯನ್ನಾಳ್ವ-ಭೂಮಿಯನ್ನು ಆಳುವ; ಮಧುರೋಕ್ತಿ-ಹಿತವಾದ ಮಾತುಗಳು; ಮನ್ನಿಸಿ-ಗೌರವಿಸಿ; ಜಾಮಾತ-ಅಳಿಯ.

ನಾನೀಗ ಚಂದ್ರಹಾಸನನ್ನುಹಲವು ಉಪಾಯಗಳಿಂದ ಕೊಲ್ಲದೇ ಇದ್ದರೆ, ನನ್ನ ವಂಶಕ್ಕೆ ಈ ರಾಜ್ಯದ ಒಡೆತನ ಸಿಗಲಾರದು. ಅದರಿಂದಾಗಿ ಕುಲಘಾತಕನೆನಿಸಿರುವ ಚಂದ್ರಹಾಸನನ್ನು ಮದುವೆಯಾದ ಮಗಳು ವಿಷಯೆ ವಿಧವೆಯಾದರೂ ಅಡ್ಡಿಯಿಲ್ಲ ಎಂದು ಮನಸ್ಸಿನಲ್ಲಿಯೇ ನಿರ್ಧರಿಸಿ, ಅತ್ಯಂತ ಹಿತವಾದ ಮಾತುಗಳಿಂದ ಮದುಮಕ್ಕಳನ್ನು ಗೌರವಿಸಿ, ವಿವಿಧ ಬಗೆಯಲ್ಲಿ ವೈಭವಯುಕ್ತವಾದ ಆಚರಣೆಗಳನ್ನು ನಡೆಸಿ ಅನಂತರ ದುಷ್ಟಬುದ್ಧಿ ತನ್ನ ಅಳಿಯನಾದ ಚಂದ್ರಹಾಸನನ್ನು ಕರೆದು ಹೀಗೆ ಹೇಳಿದನು.

ವೀರ ಬಾರೈ ಚಂದ್ರಹಾಸ ನೀನಿನ್ನೆಗಂ

ದೂರಮಾಗಿರ್ದೆ ನಮಗಿನ್ನಳಿಯನಾದೆ ಬಳಿ

ಕೂರ ಹೊರಬನದೊಳಿಹ ಚಂಡಿಕಾಲಯಕೆ ಮದುವೆಯ ನಾಲ್ಕನೆಯ ದಿನದೊಳು

ನೀರಜಸಖಾಸ್ತ ಸಮಯದೊಳೊರ್ವನೇ ಪೋಗಿ

ಗೌರಿಯಂ ಪೂಜಿಸಿ ಬಹುದು ನಮ್ಮ ವಂಶದಾ

ಚಾರಮಿದು ವರನಾದವಂಗೆ ನೀನಿಂದಿದಂ ಮಾಡೆಂದು ನೇಮಿಸಿದನು.                    ೨೬

ಪದ್ಯದ ಅನ್ವಯಕ್ರಮ:

ವೀರ ಚಂದ್ರಹಾಸ ಬಾರೈ, ನೀನ್ ಇನ್ನೆಗಂ ದೂರಂ ಆಗಿರ್ದೆ, ನಮಗೆ ಇನ್ನು ಅಳಿಯನಾದೆ, ಮದುವೆಯ ಬಳಿಕ ನಾಲ್ಕನೆಯ ದಿನದೊಳು ನೀರಜಸಖ ಅಸ್ತಸಮಯದೊಳ್ ಊರ ಹೊರಬನದೊಳ್ ಇಹ ಚಂಡಿಕಾಲಯಕೆ ಒರ್ವನೇ ಪೋಗಿ ಗೌರಿಯಂ ಪೂಜಿಸಿ ಬಹುದು. ವರನಾದವಂಗೆ ನಮ್ಮ ವಂಶದ ಆಚಾರಂ ಇದು, ನೀನಿದಂ ಮಾಡು ಎಂದು ನೇಮಿಸಿದನು.

ಪದ-ಅರ್ಥ:

ಇನ್ನೆಗಂ-ಇದುವರೆಗೆ; ದೂರಮಾಗಿರ್ದೆ-ದೂರವಾಗಿದ್ದೆ, ಅಪರಿಚಿತನಾಗಿದ್ದೆ; ನೀರಜಸಖ-ಸೂರ್ಯ; ಅಸ್ತಸಮಯ-ಸೂರ್ಯ ಮುಳಿಗುವ ಹೊತ್ತು; ಬಹುದು-ಬರಬೇಕು.

ವೀರನಾದ ಚಂದ್ರಹಾಸನೆ, ನೀನು ಇದುವರೆಗೆ ಬಹುತೇಕ ನಮಗೆ ಅಪರಿಚಿತನಾಗಿ ದೂರವಿದ್ದೆ. ಈಗ ನಮಗೆ ಅಳಿಯನಾದೆ. ಮದುವೆಯ ಬಳಿಕ ನಾಲ್ಕನೆಯ ದಿನದಂದು ನಮ್ಮ ವಂಶದ ಆಚಾರದಂತೆ ಸೂರ್ಯ ಮುಳುಗುವ ಹೊತ್ತಿನಲ್ಲಿ ಊರ ಹೊರಗೆ ಕಾಡಿನಲ್ಲಿರುವ ಚಂಡಿಕಾಲಯಕ್ಕೆ ಒಬ್ಬನೇ  ಹೋಗಿ ಗೌರಿ(ಚಂಡಿಕಾದೇವಿ)ಯನ್ನು ಪೂಜಿಸಿ ಬರಬೇಕು. ನೀನು ಇದನ್ನು ನೆರವೇರಿಸು ಎಂದು ಆಜ್ಞಾಪಿಸಿದನು.

ಲೇಸಾದುದೆಂದು ಮಾವನ ಮಾತಿಗೊಪ್ಪಿ ಶಶಿ

ಹಾಸಂ ಪ್ರಸೂನ ಗಂಧಾಕ್ಷತೆಗಳಂ ತರಿಸ

ಲಾ ಸಚಿವನತಿ ಗೂಢದಿಂದೆ ಚಂಡಾಲರಂ ಕರೆಸಿ ನೀವಂದಿನಂತೆ

ಮೋಸದಿಂ ಬಿಟ್ಟು ಬಾರದೆ ಚಂಡಿಕಾಲಯಕೆ

ನೇಸರಂಬುಧಿಗಿಳಿಯಲರ್ಚನೆಗೆ ಬಹನೋರ್ವ

ನೋಸರಿಸದಡಗಿಕೊಂಡಿರ್ದಾತನಂ ಕೊಲ್ವುದೆಂದು ಬೆಸಸಿದನವರ್ಗೆ   ೨೭

ಪದ್ಯದ ಅನ್ವಯಕ್ರಮ:

ಲೇಸು ಆದುದು ಎಂದು ಮಾವನ ಮಾತಿಗೆ ಒಪ್ಪಿ, ಶಶಿಹಾಸಂ ಪ್ರಸೂನ, ಗಂಧ, ಅಕ್ಷತೆಗಳಂ ತರಿಸಲ್ ಆ ಸಚಿವನ್ ಅತಿ ಗೂಢದಿಂದೆ ಚಂಡಾಲರಂ ಕರೆಸಿ, ನೀವು ಅಂದಿನಂತೆ ಮೋಸದಿಂ ಬಿಟ್ಟು ಬಾರದೆ  ನೇಸರ್ ಅಂಬುಧಿಗೆ ಇಳಿಯಲ್ ಚಂಡಿಕಾಲಯಕ್ಕೆ ಬಹನೋರ್ವನ್ ಅಡಗಿಕೊಂಡಿರ್ದು ಓಸರಿಸದೆ ಆತನಂ ಕೊಲ್ವುದು ಎಂದು ಅವರ್ಗೆ ಬೆಸಸಿದನ್.

ಪದ-ಅರ್ಥ:

ಲೇಸಾದುದು-ಒಳಿತಾಯಿತು; ಶಶಿಹಾಸಂ-ಚಂದ್ರಹಾಸನು; ಪ್ರಸೂನ-ಹೂವು; ಸಚಿವ-ಮಂತ್ರಿ; ಚಂಡಾಲರಂ-ಕೊಲೆಗಡುಕರನ್ನು; ನೇಸರ್-ಸೂರ್ಯ; ಅಂಬುಧಿ-ಸಮುದ್ರ; ಇಳಿಯಲ್-ಮುಳುಗಲು; ಅರ್ಚನೆ-ಪೂಜೆ; ಓಸರಿಸದೆ-ಹಿಂಜರಿಯದೆ, ಹೇಸದೆ; ಬೆಸಸಿದನ್-ಆಜ್ಞಾಪಿಸಿದನು.

ಮಾವನ ಮಾತೆಗೆ ಒಳಿಯಾಯಿತು ಎಂದು ಚಂದ್ರಹಾಸನು ಒಪ್ಪಿಕೊಂಡು ಪೂಜೆಗೆ ಹೂವು, ಗಂಧ, ಅಕ್ಷತೆ ಮೊದಲಾದವುಗಳನ್ನು ತರಿಸಿಕೊಂಡನು. ಅದೇ ಸಮಯದಲ್ಲಿ ಮಂತ್ರಿ ದುಷ್ಟಬುದ್ಧಿಯು ಅತ್ಯಂತ ಗೂಢವಾಗಿ ಕೊಲೆಗಡುಕರನ್ನು ಕರೆಸಿಕೊಂಡು ನೀವು ಅಂದಿನಂತೆ(ಹಿಂದಿನಂತೆ) ವಹಿಸಿದ ಕಾರ್ಯವನ್ನು ಮೋಸದಿಂದ ಪೂರ್ಣಗೊಳಿಸದೆ ಇಂದು ಸೂರ್ಯಾಸ್ತದ ಸಮಯದಲ್ಲಿ ಚಂಡಿಕಾಲಯದಲ್ಲಿ ಅಡಗಿಕೊಂಡಿದ್ದು ಅಲ್ಲಿಗೆ ಬರುವ ವ್ಯಕ್ತಿಯನ್ನು ಹಿಂದುಮುಂದಾಲೋಚಿಸದೆ ಕೊಲ್ಲಬೇಕು ಎಂದು ಆಜ್ಞಾಪಿಸಿದನು.

ಉತ್ತಮ ಹಯಾರೂಢನಾಗಿ ಮದನಂ ಜವದೊ

ಳಿತ್ತಣಿಂದೈದೆ ರವಿ ಪಶ್ಚಿಮಾಂಬುಧಿಗಿಳಿವ

ಪೊತ್ತು ಪೊಂದಳಿಗೆಯೊಳ್ ಪುಷ್ಪ ಫಲ ತಾಂಬೂಲ ಗಂಧಾಕ್ಷತೆಗಳನಿರಿಸಿ

ಎತ್ತಿಕೊಂಡತ್ತಣಿಂ ಬಹ ಚಂದ್ರಹಾಸನನಿ

ದೆತ್ತ ಪೋದಪೆಯೆಂದು ಬೆಸಗೊಳಲ್ ತವ ಪಿತಂ

ತೆತ್ತ ಸುವ್ರತಮೆನಲ್ ಚಂಡಿಕಾಪೂಜೆಯಂ ಮಾಡಿ ಬಂದಪೆನೆಂದನು         ೨೮

ಪದ್ಯದ ಅನ್ವಯಕ್ರಮ:

ರವಿ ಪಶ್ಚಿಮಾಂಬುಧಿಗೆ ಇಳಿವ ಪೊತ್ತು, ಇತ್ತಣಿಂದ ಉತ್ತಮ ಹಯ ಆರೂಢನಾಗಿ ಮದನಂ ಜವದೊಳ್ ಐದೆ, ಅತ್ತಣಿಂ ಪೊನ್ ತಳಿಗೆಯೊಳ್ ಪುಷ್ಪ, ಫಲ, ತಾಂಬೂಲ ಗಂಧಾಕ್ಷತೆಗಳನ್ ಇರಿಸಿ ಎತ್ತಿಕೊಂಡು ಬಹ ಚಂದ್ರಹಾಸನನ್ ಎತ್ತ ಪೋದಪೆ ಎಂದು ಬೆಸಗೊಳಲ್ ತವ ಪಿತಂ ತೆತ್ತ ಸುವ್ರತಂ ಎನಲ್ ಚಂಡಿಕಾಪೂಜೆಯಂ ಮಾಡಿ ಬಂದಪೆನ್ ಎಂದನು.

ಪದ-ಅರ್ಥ:

ಉತ್ತಮ ಹಯ-ಶ್ರೇಷ್ಠವಾದ ಕುದುರೆ; ಆರೂಢನಾಗಿ-ಏರಿಕೊಂಡು;  ಜವದೊಳ್-ವೇಗವಾಗಿ; ಇತ್ತಣಿಂದ-ಈ ಕಡೆಯಿಂದ; ಐದೆ-ಬರಲು; ಪಶ್ಛಿಮಾಂಬುಧಿ-ಪಶ್ಚಿಮ ಸಮುದ್ರ; ಪೊಂದಳಿಗೆ(ಪೊನ್+ತಳಿಗೆ) ಚಿನ್ನದ ಹರಿವಾಣ; ಅತ್ತಣಿಂ-ಆ ಕಡೆಯಿಂದ; ಬಹ-ಬರುತ್ತಿರುವ; ಎತ್ತ ಪೋದಪೆ-ಯಾವ ಕಡೆಗೆ ಹೋಗುವೆ; ಬೆಸಗೊಳಲ್-ವಿಚಾರಿಸಿದಾಗ; ತವ ಪಿತಂ-ನಿನ್ನ ತಂದೆಯು; ತೆತ್ತ-ವಹಿಸಿದ;  ಸುವ್ರತ-ಒಳ್ಳೆಯ ವ್ರತ.

ಶ್ರೇಷ್ಠವಾದ ಕುದುರೆಯನ್ನೇರಿಕೊಂಡು ಈ ಕಡೆಯಿಂದ ಅತ್ಯಂತ ವೇಗವಾಗಿ ಮದನನು ಬರುತ್ತಿರಲು, ಸೂರ್ಯ ಪಶ್ಚಿಮ ಸಮುದ್ರಕ್ಕೆ ಇಳಿಯುವ ಹೊತ್ತಿನಲ್ಲಿ ಆ ಕಡೆಯಿಂದ ಚಿನ್ನದ ಹರಿವಾಣದಲ್ಲಿ ಪುಷ್ಪ, ಫಲ, ತಾಂಬೂಲ, ಗಂಧ, ಅಕ್ಷತೆಗಳನ್ನು ಇರಿಸಿಕೊಂಡು ಬರುತ್ತಿರುವ ಚಂದ್ರಹಾಸನನ್ನು ಕಂಡು, ಯಾವ ಕಡೆಗೆ ಹೋಗುತ್ತಿರುವೆ ಎಂದು ಕೇಳಿದಾಗ, ಚಂದ್ರಹಾಸನು ನಿನ್ನ ತಂದೆಯು ನನಗೆ ಒಳ್ಳೆಯ ವ್ರತವನ್ನು ವಹಿಸಿದ್ದು, ಚಂಡಿಕಾಲಯಕ್ಕೆ ಹೋಗಿ ಪೂಜೆ ಮಾಡಿ ಬರುತ್ತೇನೆ ಎಂದನು.

ತಟ್ಟನೆ ತುರಂಗಮವನಿಳಿದಿಳೆಗೆ ಮತ್ಪಿತನ

ಕಟ್ಟಳೆಯ ಚಂಡಿಕಾಪೂಜೆಗಾಂ ಪೋದಪೆಂ

ನೆಟ್ಟನೆ ಮಹೀಶ್ವರಂ ಪಿಱಿದು ಕಜ್ಜಕೆ ನಿನ್ನೊಡಗೊಂಡು ಬಾಯೆನಲ್ಕೆ

ಕಟ್ಟವಸರಕೆ ಬಂದೆನೆಂದರ್ಚನಾ ದ್ರವ್ಯ

ಮಿಟ್ಟ ಪೊಂದಳಿಗೆಯಂ ತೆಗೆದುಕೊಂಡಶ್ವಮಂ

ಕೊಟ್ಟಾತನಂ ಕಳುಹಿ ಪೊಱಮಟ್ಟನೇಕಾಕಿಯಾಗಿ ಮದನಂ ಪೊಳಲನು  ೨೯

ಪದ್ಯದ ಅನ್ವಯಕ್ರಮ:

ಅವನ್ ತಟ್ಟನೆ ತುರಂಗಂ ಇಳಿಗೆ ಇಳಿದು ನೆಟ್ಟನೆ ಮಹೀಶ್ವರಂ ಪಿಱಿದು ಕಜ್ಜಕೆ ನಿನ್ನನ್ ಒಡಗೊಂಡು ಬಾ ಎನಲ್ಕೆ ಬಂದೆನ್, ಮತ್ ಪಿತನ ಕಟ್ಟಳೆಯ ಚಂಡಿಕಾ ಪೂಜೆಗೆ ಆಂ ಪೋದಪೆನ್ ಎಂದು ಅರ್ಚನಾ ದ್ರವ್ಯಂ ಇಟ್ಟ ಪೊನ್ ತಳಿಗೆಯಂ ತೆಗೆದುಕೊಂಡು ಅಶ್ವಮಂ ಕೊಟ್ಟು ಆತನಂ ಕಳುಹಿ ಮದನಂ ಏಕಾಕಿಯಾಗಿ ಪೊಳಲನ್ ಪೊಱಮಟ್ಟನ್.

ಪದ-ಅರ್ಥ:

ತಟ್ಟನೆ-ಕೂಡಲೆ; ತುರಂಗ-ಕುದುರೆ; ಇಳೆ-ಭೂಮಿ; ಮತ್ಪಿತ(ಮತ್+ಪಿತ)-ನನ್ನ ತಂದೆ; ಕಟ್ಟಳೆ-ಆಚಾರ; ನೆಟ್ಟನೆ-ನೇರವಾಗಿ; ಮಹೀಶ್ವರ-ರಾಜ; ಪಿಱಿದು-ಹಿರಿದು; ಕಜ್ಜ-ಕಾರ್ಯ; ಒಡಗೊಂಡು-ಸೇರಿಕೊಂಡು; ಕಟ್ಟವಸರ-ಅತ್ಯಂತ ಅವಸರ; ಪೊಂದಳಿಗೆ-ಚಿನ್ನದ ಹರಿವಾಣ; ಪೊಱಮಟ್ಟನ್-ಹೊರಟನು; ಏಕಾಕಿಯಾಗಿ-ಒಬ್ಬಂಟಿಯಾಗಿ; ಪೊಳಲ್-ಪಟ್ಟಣ.

ಮದನನು ಕೂಡಲೇ ಕುದುರೆಯಿಂದ ಕೆಳಗಿಳಿದು, ರಾಜನು ಯಾವುದೋ ಹಿರಿಯ ಕಾರ್ಯಕ್ಕೆ ನಿನ್ನನ್ನು ಸೇರಿಕೊಂಡು ಬಾ ಎಂದುದರಿಂದ  ಅತ್ಯಂತ ಆತುರದಲ್ಲಿ ಬಂದಿದ್ದೇನೆ. ನೀನು ರಾಜನ ಆಸ್ಥಾನಕ್ಕೆ ಹೋಗು. ನನ್ನ ತಂದೆಯ ಕುಲಾಚಾರದ ಚಂಡಿಕಾ ಪೂಜೆಗೆ ನಾನು ಹೋಗುತ್ತೇನೆ ಎಂದು ಹೊನ್ನಿನ ಹರಿವಾಣವನ್ನು ತೆಗೆದುಕೊಂಡು ತನ್ನ ಕುದುರೆಯನ್ನು ಚಂದ್ರಹಾಸನಿಗೆ ಕೊಟ್ಟು ಅರಮನೆಗೆ ಕಳುಹಿಸಿ ಮದನನು ಒಬ್ಬಂಟಿಗನಾಗಿ ಚಂಡಿಕಾಪೂಜೆಗೆ ಪಟ್ಟಣದಿಂದ ಹೊರಟನು.

ಖಳರಂತರಂಗ ಪ್ರವೇಶದ ವಿವೇಕಮಂ

ಬಳಸಿದರಿಷಡ್ವರ್ಗಮೊತ್ತರಿಸಿ ಮುಱಿವಂತೆ

ಪೊಲಬಱಿಯದೊಳಪುಗುವ ಮದನನಂ ಮಂತ್ರಿ ಕಳುಹಿದೊಡಲ್ಲಿ ಬಂಡಡಗಿದ

ಕೊಲೆಗಡಿಕ ಚಂಡಾಲರುಗಿದ ಕೈದುಗಳಿಂದೆ

ಕೆಲಬಲದೊಳಿರ್ದು ಪೊಯ್ದಿಱಿದು ಕೆಡಹಿದೊಡೆ ಭೂ

ತಳಕೆ ಬೀಳುತ್ತವಂ ಮಾಧವ ಸ್ಮರಣೆಯಿಂದಸುದೊಱೆದನಾ ಕ್ಷಣದೊಳು.         ೩೦

ಪದ್ಯದ ಅನ್ವಯಕ್ರಮ:

ಖಳರ ಅಂತರಂಗ ಪ್ರವೇಶದ ವಿವೇಕಮಂ ಬಳಸಿದ ಅರಿಷಡ್ವರ್ಗಂ ಒತ್ತರಿಸಿ ಮುಱಿವಂತೆ, ಮಂತ್ರಿ ಕಳುಹಿದೊಡೆ ಅಲ್ಲಿ ಬಂದು ಅಡಗಿದ ಕೊಲೆಗಡಿಕ ಚಂಡಾಲರು ಉಗಿದ ಕೈದುಗಳಿಂದೆ ಕೆಲಬಲದೊಳ್ ಇರ್ದು, ಪೊಲಬನ್ ಅರಿಯದೆ ಒಳಪುಗುವ ಮದನನಂ ಪೊಯ್ದು ಇಱಿದು ಕೆಡಹಿದೊಡೆ, ಅವಂ ಮಾಧವನ ಸ್ಮರಣೆಯಿಂದ ಭೂತಳಕೆ ಬೀಳುತ್ತ ಆ ಕ್ಷಣದೊಳು ಅಸು ತೊರೆದನ್.

ಪದ-ಅರ್ಥ:

ಖಳರು-ದುಷ್ಟರು; ಅರಿಷಡ್ವರ್ಗ-ಮನುಷ್ಯನ ಆರು ವೈರಿಗಳು(ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ); ಒತ್ತರಿಸಿ-ಧಾವಿಸಿ, ನುಗ್ಗಿ; ಮುಱಿ-ನಾಶಮಾಡು; ಪೊಲಬು-ದಾರಿ, ಸೂಚನೆ;  ಅರಿಯದೆ-ತಿಳಿಯದೆ; ಒಳಪುಗುವ-ಒಳಪ್ರವೇಶಿಸುವ; ಉಗಿದ ಕೈದು-ಒರೆ ಕಿತ್ತ ಖಡ್ಗ; ಕೆಲಬಲ-ಅಕ್ಕಪಕ್ಕ; ಪೊಯ್ದಿಱಿದು-ಹೊಡೆದು ಇರಿದು; ಕೆಡಹು-ಬೀಳಿಸು; ಅಸು-ಪ್ರಾಣ; ತೊಱೆ-ಬಿಡು.

ದುಷ್ಟರ ಅಂತರಂಗವನ್ನು ಪ್ರವೇಶಿಸಿದ ವಿವೇಕವನ್ನು ಷಡ್ವೈರಿಗಳು(ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ) ಸುತ್ತುವರಿದು ನುಗ್ಗಿ ನಾಶಮಾಡುವಂತೆ, ಮಂತ್ರಿ ದುಷ್ಟಬುದ್ಧಿಯಿಂದ ನಿಯೋಜಿತರಾದ ಕೊಲೆಗಡಿಕ ಚಂಡಾಲರು ಒರೆಕಿತ್ತ ಖಡ್ಗಗಳನ್ನು ಹಿಡಿದುಕೊಂಡು ಚಂಡಿಕಾಲಯದೊಳಗೆ ಅಕ್ಕಪಕ್ಕದಲ್ಲಿ ನಿಂತುಕೊಂಡು ಕಾಯುತ್ತಿರುವಾಗ ಇದರ ಯಾವ ಸೂಚನೆಯನ್ನೂ ತಿಳಿಯದೆ ಮದನನು ಚಂಡಿಕಾಲಯವನ್ನು ಪ್ರವೇಶಿಸಿದನು.  ಅವರು ಹಿಂದುಮುಂದಾಲೋಚಿಸದೆ ಖಡ್ಗಗಳಿಂದ ಹೊಡೆದು, ಇರಿದಾಗ ಮದನನು ಆ ಕ್ಷಣದಲ್ಲಿಯೇ ಮಾಧವನ ಸ್ಮರಣೆಯನ್ನು ಮಾಡುತ್ತ ನೆಲದ ಮೇಲೆ ಬಿದ್ದು ಪ್ರಾಣವನ್ನು ಬಿಟ್ಟನು.

ಅವಗಡಿಸಿ ಮದನನಂ ಘಾತುಕರ್ ಚಂಡಿಕಾ

ಭವನದೊಳ್ ಕೊಂದು ನಿಲ್ಲದೆ ಪೋದರಿತ್ತಲು

ತ್ಸವದಿಂದ ಚಂದ್ರಹಾಸಂ ಕುಂತಳೇಂದ್ರನಂ ಕಾಣಲಾ ನೃಪನವಂಗೆ

ಅವನಿಯಂ ಕೊಟ್ಟರಸುಪಟ್ಟವಂ ಕಟ್ಟಿ ಗಾ

ಲವನ ಮತದಿಂದೆ ಗಾಂಧರ್ವ ವೈವಾಹದಿಂ

ಕುವರಿ ಚಂಪಕಮಾಲಿನಿಯನಿತ್ತು ಸತ್ಕರಿಸಿ ಬನಕೆ ತಾಂ ಪೊಱಮಟ್ಟನು   ೩೧

ಪದ್ಯದ ಅನ್ವಯಕ್ರಮ:

ಚಂಡಿಕಾಭವನದೊಳ್ ಘಾತುಕರ್ ಮದನನಂ ಅವಗಡಿಸಿ ಕೊಂದು ನಿಲ್ಲದೆ ಪೋದರ್, ಇತ್ತಲ್ ಉತ್ಸವದಿಂದ ಚಂದ್ರಹಾಸಂ ಕುಂತಳೇಂದ್ರನಂ ಕಾಣಲ್ ಆ ನೃಪನ್ ಅವಂಗೆ ಅವನಿಯಂ ಕೊಟ್ಟು ಅರಸುಪಟ್ಟವಂ ಕಟ್ಟಿ ಗಾಲವನ ಮತದಿಂದೆ ಗಾಂಧರ್ವ ವೈವಾಹದಿಂ ಕುವರಿ ಚಂಪಕಮಾಲಿಯನ್ ಇತ್ತು ಸತ್ಕರಿಸಿ ತಾಂ ಬನಕೆ ಪೊಱಮಟ್ಟನು.

ಪದ-ಅರ್ಥ:

ಅವಗಡಿಸಿ-ವಿರೋಧಿಸಿ; ಘಾತುಕರ್-ಕೊಲ್ಲುವವರು, ಕೊಲೆಗಡಿಕರು; ಉತ್ಸವದಿಂದ-ವಿಜೃಂಭಣೆಯಿಂದ; ಅವನಿ-ಭೂಮಿ; ಅರಸುಪಟ್ಟವಂ ಕಟ್ಟಿ-ರಾಜಪದವಿಯನ್ನು ನೀಡಿ; ಗಾಲವ-ರಾಜಪುರೋಹಿತ; ಮತ-ಅಭಿಪ್ರಾಯ; ಗಾಂಧರ್ವ ವೈವಾಹ-ವಿವಾಹದಲ್ಲಿನ ಒಂದು ಬಗೆ.

ಚಂಡಿಕಾಲಯದಲ್ಲಿ ದುಷ್ಟಬುದ್ಧಿ ನೇಮಿಸಿದ ಕೊಲಗಡಿಕರು ಮದನನನ್ನು ವಿರೋಧಿಸಿ, ಕೊಂದು, ಅಲ್ಲಿ ನಿಲ್ಲದೆ ಹೊರಟುಹೋದರು. ಈ ಕಡೆ ಪಟ್ಟಣದಲ್ಲಿ ಚಂದ್ರಹಾಸನು ಮದನನ ಮಾತಿನಂತೆ ಕುಂತಳ ದೇಶದ ರಾಜನನ್ನು ಭೇಟಿಯಾದಾಗ ರಾಜನು ಚಂದ್ರಹಾಸನಿಗೆ ತನ್ನ ರಾಜ್ಯವೆಲ್ಲವನ್ನು ಕೊಟ್ಟು, ಪಟ್ಟಾಭಿಷೇಕವನ್ನು ನೆರವೇರಿಸಿ, ಪುರೋಹಿತನಾದ ಗಾಲವನ ಅಭಿಪ್ರಾಯದಂತೆ ಗಾಂಧರ್ವ ರೀತಿಯಿಂದ ಮಗಳಾದ ಚಂಪಕಮಾಲಿನಿಯನ್ನು ಕೊಟ್ಟು ಮದುವೆ ಮಾಡಿದನು. ಅವರಿಬ್ಬರನ್ನೂ ಸತ್ಕರಿಸಿ ತಾನು ವಾನಪ್ರಸ್ಥಕ್ಕೆ ಕಾಡಿಗೆ ಹೊರಟುಹೋದನು.

ಗಾಲವನ ಮತದೊಳೆನ್ನಂ ಕರೆಸದಿಂದುಭೂ

ಪಾಲಂ ಕುಳಿಂದತನಂಗಿಳೆಯಯನೊಪ್ಪಿಸಿ ವ

ನಾಲಯಕೆ ತೆರಳಿದನೆ ಮದನ ನಿದ್ದೆಗೈದನೆಂದು ಪಲ್ಮೊಱೆದು ಮಗನ

ಮೇಲೆ ಕೋಪಿಸುತಿರ್ದನನ್ನೆಗಂ ಭ್ರಮರಾರಿ

ಮಾಲಿನಿವೆರಸು ಮಾವನಂ ಕಾಣಲೆಂದು ಶುಂ

ಡಾಲಮಸ್ತಕದಿಂದಮಿಳಿತಂದ ಶಶಿಹಾಸನೆಱಗಿದಂ ಸಚಿವನಡಿಗೆ      ೩೨

ಪದ್ಯದ ಅನ್ವಯಕ್ರಮ:

ಗಾಲವನ ಮತದೊಳ್ ಇಂದು ಎನ್ನಂ ಕರೆಸದೆ ಭೂಪಾಲಂ ಕುಳಿಂದ ತನಯಂಗೆ ಇಳೆಯನ್ ಒಪ್ಪಿಸಿ ವನಾಲಯಕೆ ತೆರಳಿದನೆ? ಮದನ ನಿದ್ದೆಗೈದನ್ ಎಂದು ಪಲ್ ಮೊಱೆದು, ಮಗನ ಮೇಲೆ ಕೋಪಿಸುತಿರ್ದನ್,  ಅನ್ನೆಗಂ ಭ್ರಮರಾರಿಮಾಲಿನಿ ಬೆರಸು ಮಾವನಂ ಕಾಣಲೆಂದು ಶುಂಡಾಲ ಮಸ್ತಕದಿಂದಂ ಇಳಿತಂದ ಶಶಿಹಾಸನ್ ಸಚಿವನ ಅಡಿಗೆ ಎಱಗಿದನ್.

ಪದ-ಅರ್ಥ:

ಗಾಲವನ ಮತ-ಪುರೋಹಿತನಾದ ಗಾಲವನ ಅಭಿಪ್ರಾಯ; ಭೂಪಾಲನ್-ರಾಜನು(ಕುಂತಳೇಂದ್ರನು); ಕುಳಿಂದ ತನಯ-ಕುಳಿಂದನ ಮಗ(ಚಂದ್ರಹಾಸ); ಇಳೆಯನ್-ಭೂಮಿಯನ್ನು, ರಾಜ್ಯವನ್ನು; ವನಾಲಯ-ಕಾಡು; ಪಲ್ಮೊಱೆದು-ಹಲ್ಲು ಕಡಿಯುತ್ತ; ಅನ್ನೆಗಂ-ಅಷ್ಟರಲ್ಲಿ; ಭ್ರಮರಾರಿಮಾಲಿನಿ-ಚಂಪಕಮಾಲಿನಿ; ಬೆರಸು-ಕೂಡಿಕೊಂಡು; ಶುಂಡಾಲಮಸ್ತಕ-ಆನೆಯ ಮೇಲೆ ಅಂಬಾರಿ ಇರಿಸುವ ಸ್ಥಳ; ಇಳಿತಂದ-ಇಳಿದುಬಂದ; ಸಚಿವ-ಮಂತ್ರಿ; ಅಡಿ-ಪಾದ; ಎಱಗು-ನಮಸ್ಕರಿಸು.

ರಾಜಪುರೋಹಿತನಾದ ಗಾಲವನ ಅಭಿಪ್ರಾಯದಂತೆ ಇಂದು ನನ್ನನ್ನು ಸಭೆಗೆ ಕರೆಸದೆ ರಾಜನು ಕುಳಿಂದನ ಮಗನಾದ ಚಂದ್ರಹಾಸನಿಗೆ ರಾಜ್ಯವನ್ನು ಒಪ್ಪಿಸಿ ವಾನಪ್ರಸ್ಥಕ್ಕೆ ತೆರಳಿದನೇ?ಮಗ ಮದನ ನಿದ್ದೆ ಮಾಡಿದನು(ಅವಕಾಶವನ್ನು ಕಳೆದುಕೊಂಡನು) ಎಂದು ದುಷ್ಟಬುದ್ಧಿ ಸಿಟ್ಟಿನಿಂದ ಹಲ್ಲುಗಳನ್ನು ಕಡಿಯುತ್ತ, ಮಗನ ಮೇಲೆ ಕೋಪಿಸುವಷ್ಟರಲ್ಲಿ ಚಂದ್ರಹಾಸನು ಪತ್ನಿಯಾದ ಚಂಪಕಮಾಲಿನಿಯನ್ನು ಕೂಡಿಕೊಂಡು ಆನೆಯ ಮೇಲೆ ಅಂಬಾರಿಯಲ್ಲಿ ಬಂದು ಕೆಲಗಿಳಿದು ಮಂತ್ರಿಯಾದ ದುಷ್ಟಬುದ್ಧಿಯ ಪಾದಗಳಿಗೆ ನಮಸ್ಕರಿಸಿದನು.

ಕೞಿವರಿವ ಕೋಪದಿಂ ಮಂತ್ರಿ ವಂಶಾಚಾರ

ಮುಳಿಯಲಾಗದು ಚಂಡಿಕಾರ್ಚನೆಗೆ ನಡೆಯೆಂದು

ಕಳುಹಿದೊಡೆ ನೀಂ ಮಾಡಿದದುಜ್ಜುಗಮಿದೇನೆಂದು ಕೇಳ್ದೊಡಾ ಶಶಿಹಾಸನು

ಅಳವಡಿಸಿಕೊಂಡು ನಾಂ ಪೋಗುತಿರೆ ನಡುವೆ ಕುಂ

ತಳರಾಜನರಮನೆಗೆ ತನಗವಸರವನಿತ್ತು

ತಳರ್ದನೊರ್ವನೆ ನಿನ್ನ ಮಗನಂಬಿಕಾ ಪೂಜೆಗಿಂತಾಯ್ತು ಬಳಿಕೆಂದನು         ೩೩

ಪದ್ಯದ ಅನ್ವಯಕ್ರಮ:

ಮಂತ್ರಿ ಕೞಿವರಿವ ಕೋಪದಿಂ ವಂಶಾಚಾರಂ ಉಳಿಯಲಾಗದು, ಚಂಡಿಕಾರ್ಚನೆಗೆ ನಡೆ ಎಂದು ಕಳುಹಿದೊಡೆ ನೀಂ ಮಾಡಿದ ಉಜ್ಜುಗಂ ಇದೇನ್ ಎಂದು ಕೇಳ್ದೊಡೆ, ಆ ಶಶಿಹಾಸನು, ನಾಂ ಅಳವಡಿಸಿಕೊಂಡು ಪೋಗುತಿರೆ ನಡುವೆ ಕುಂತಳ  ರಾಜನ್ ಅರಮನೆಗೆ ತನಗೆ ಅವಸರವನಿತ್ತು, ಅಂಬಿಕಾ ಪೂಜೆಗೆ ನಿನ್ನ ಮಗನ್ ಒರ್ವನೆ ತಳರ್ದನ್, ಬಳಿಕ ಇಂತಾಯ್ತು ಎಂದನು.

ಪದ-ಅರ್ಥ:

ಕೞಿವರಿವ-ಮಿತಿಮೀರುತ್ತಿರುವ; ವಂಶಾಚಾರ-ವಂಶದ ಆಚಾರ, ವಂಶದ ಕಟ್ಟುಕಟ್ಟಳೆ; ಉಳಿಯಲಾಗದು-ಮೀರಬಾರದು; ಉಜ್ಜುಗ-ಕೆಲಸ; ಅಳವಡಿಸಿಕೊಂಡು-ಹೊಂದಿಸಿಕೊಂಡು; ಅವಸರ-ಅವಕಾಶ; ಇತ್ತು-ನೀಡಿ; ತಳರ್ದನ್-ತೆರಳಿದನು.

ಮಿತಿಮೀರುತ್ತಿರುವ ಕೋಪದಿಂದ ದುಷ್ಟಬುದ್ಧಿಯು ನಮ್ಮ ವಂಶದ ಕಟ್ಟುಕಟ್ಟಳೆಗಳನ್ನು ಮೀರಬಾರದು ಎಂದು ನಾನು ನಿನ್ನನ್ನು ಚಂಡಿಕಾಪೂಜೆಗೆ ಕಳುಹಿಸಿದರೆ, ನೀನು ಮಾಡಿದ ಕೆಲಸ ಇದೇನು? ಎಂದು ಚಂದ್ರಹಾಸನಲ್ಲಿ ಕೇಳಿದಾಗ, ಆ ಚಂದ್ರಹಾಸನು, ನಾನು ಪೂಜೆಗೆ ಸಕಲ ಪರಿಕರಗಳನ್ನು ವ್ಯವಸ್ಥೆಗೊಳಿಸಿಕೊಂಡು ಹೋಗುತ್ತಿದ್ದಾಗ, ನಿಮ್ಮ ಮಗನಾದ ಮದನನು ಕುಂತಳ ರಾಜನ ಅರಮನೆಗೆ ಹೋಗುವ ಅವಕಾಶವನ್ನು ನೀಡಿ ತಾನೊಬ್ಬನೇ ಚಂಡಿಕಾಲಯಕ್ಕೆ ತೆರಳಿದನು ಎಂದನು.

ಹಮ್ಮೈಸಿದಂ ದುಷ್ಟಬುದ್ಧಿ ನಯದೊಳಗಳಿಯ

ನಮ್ಮನೆಗೆ ಬೀಳ್ಕೊಟ್ಟನಱಿದಱಿದು ಪರಹಿಂಸೆ

ಯಮ್ಮಾಡಿ ಮಾನವಂ ಪಾಳ್ದಪನೆ ದೀಪಮಂ ಕೆಡಿಸುವ ಪತಂಗದಂತೆ

ನಮ್ಮುಪಾಯವೆ ನಮಗಪಾಯಮಂ ತಂದುದೆಂ

ದೊಮ್ಮೆ ನಿಜಸದನಮಂ ಪೊಕ್ಕಾರುಮಱಿಯದವೊ

ಲುಮ್ಮಳಿಸಿ ಶೋಕದಿಂ ಪೊಱಮಟ್ಟನೇಱಿಳಿದು ಕೋಟೆಯಂ ಕತ್ತಲೆಯೊಳು.    ೩೪

ಪದ್ಯದ ಅನ್ವಯಕ್ರಮ:

ದುಷ್ಟಪುದ್ಧಿ ಹಮ್ಮೈಸಿದಂ, ನಯದೊಳಗೆ ಅಳಿಯನಂ ಮನೆಗೆ ಬೀಳ್ಕೊಟ್ಟನ್, ಅಱಿದಱಿದು ಪರಹಿಂಸೆಯಂ ಮಾಡಿ ಮಾನವಂ ಬಾಳ್ದಪನೆ, ದೀಪಮಂ ಕೆಡಿಸುವ ಪತಂಗದಂತೆ ನಮ್ಮ ಉಪಾಯವೆ ನಮಗೆ ಅಪಾಯಮಂ ತಂದುದೆಂದು ಒಮ್ಮೆ ನಿಜಸದನಮಂ ಪೊಕ್ಕು ಆರುಂ ಅಱಿಯದವೊಲ್ ಉಮ್ಮಳಿಸಿ, ಶೋಕದಿಂ ಕತ್ತಲೆಯೊಳು ಕೋಟೆಯಂ ಏಱಿ ಇಳಿದು ಪೊಱಮಟ್ಟನ್.

ಪದ-ಅರ್ಥ:

ಕಮ್ಮೈಸಿದಂ-ಮೂರ್ಛೆಹೋದನು; ನಯದೊಳ್-ಉಪಾಯದಿಂದ; ಅಱಿದಱಿದು-ತಿಳಿದು ತಿಳಿದೂ; ಪರಹಿಂಸೆ-ಅನ್ಯರಿಗೆ ಕೊಡುವ ಹಿಂಸೆ; ನಿಜಸದನ-ತನ್ನ ಮನೆ; ಉಮ್ಮಳಿಸಿ-ದುಃಖಿಸಿ; ಶೋಕ-ಅಳಲು; ಪೊಱಮಟ್ಟನ್-ಹೊರಟನು.

ಚಂದ್ರಹಾಸನ ಮಾತನ್ನು ಕೇಳಿ ದುಷ್ಟಬುದ್ಧಿ ಮೂರ್ಛೆಹೋದನು. ಉಪಾಯದಿಂದ ಅಳಿಯ ಚಂದ್ರಹಾಸನನ್ನು ಅರಮನೆಗೆ ಕಳುಹಿಸಿದನು. ತಿಳಿದೂ ತಿಳಿದೂ ಅನ್ಯರಿಗೆ ಹಿಂಸೆಯನ್ನು ಕೊಟ್ಟು ಮನುಷ್ಯ ಬಾಳಲು ಸಾಧ್ಯವೇ? ದೀಪದ ಜ್ವಾಲೆಯನ್ನು ಕೆಡಿಸುವ ಪತಂಗದಂತೆ ನಮ್ಮ ಉಪಾಯವೇ ನಮಗೆ ಅಪಾಯವನ್ನು ತಂದೊಡ್ಡಿತು ಎಂದುಕೊಂಡು ಒಮ್ಮೆ ತನ್ನ ಮನೆಯನ್ನು ಸೇರಿಕೊಂಡು ಯಾರು ತಿಳಿಯದ ಹಾಗೆ ದುಃಖಿಸಿ, ಶೋಕದಿಂದ ಕತ್ತಲೆಯಲ್ಲಿಯೇ ಕೋಟೆಯನ್ನು ಏರಿ ಆ ಕಡೆಗೆ ಇಳಿದು ಹೊರಟನು.

ಉನ್ನಿಸಿದ ನಿಜಮನೋರಥಮುಡಿದೊಱಗಿದಂತೆ

ತನ್ನ ಕುಲತರು ಮುಱಿದು ಬಿದ್ದಂತೆ ಸೌಭಾಗ್ಯ

ದುನ್ನತ ಪ್ರಾಸಾದಮೊರ್ಗುಡಿಸಿ ಕೆಡೆದಂತೆ ಮುರಿದ ಮೀಸೆಗಳ ಮೊಗದ

ಬಿನ್ನಣದ ಬಿಟ್ಟ ಕಂಗಳ ಬಿಗಿದ ಪುರ್ಬುಗಳ

ಕೆನ್ನೀರೊಳದ್ದ ಕೇಶದ ಶೋಣಿತಾಂಬರದ

ಭಿನ್ನಮಾದವಯವದ ನಂದನಂ ಕಾತ್ಯಾಯಿನಿಯ ಮುಂದೆ ಮಡಿದಿರ್ದನು  ೩೫

ಪದ್ಯದ ಅನ್ವಯಕ್ರಮ:

ಉನ್ನಿಸಿದ ನಿಜಮನೋರಥಂ ಉಡಿದು ಒಱಗಿದಂತೆ, ತನ್ನ ಕುಲತರು ಮುಱಿದು ಬಿದ್ದಂತೆ, ಸೌಭಾಗ್ಯದ ಉನ್ನತ ಪ್ರಾಸಾದಂ ಒರ್ಗುಡಿಸಿ ಕೆಡೆದಂತೆ, ಮುರಿದ ಮೀಸೆಗಳ, ಮೊಗದ ಬಿನ್ನಣದ, ಬಿಟ್ಟ ಕಂಗಳ, ಬಿಗಿದ ಪುರ್ಬುಗಳ, ಕೆನ್ನೀರೊಳ್ ಅದ್ದ ಕೇಶದ, ಶೋಣಿತ ಅಂಬರದ, ಭಿನ್ನಂ ಆದ ಅವಯವದ, ನಂದನಂ ಕಾತ್ಯಾಯಿನಿಯ ಮುಂದೆ ಮಡಿದಿರ್ದನ್

ಪದ-ಅರ್ಥ:

ಉನ್ನಿಸಿದ-ಹಿರಿದಾಗಿ ಕಲ್ಪಿಸಿಕೊಂಡ; ನಿಜಮನೋರಥ-ತನ್ನ ಮನಸ್ಸಿನ ಬಯಕೆ; ಉಡಿದು-ಚೂರಾಗಿ; ಒಱಗಿದಂತೆ-ನಾಶವಾದಂತೆ; ಉನ್ನತ-ಎತ್ತರವಾದ; ಪ್ರಾಸಾದ-ಅರಮನೆ; ಒರ್ಗುಡಿಸಿ-ಒಮ್ಮಿಂದೊಮ್ಮೆಗೆ;  ಒಱಗು-ಬಿದ್ದುಹೋಗು; ಮುರಿದ-ವಕ್ರವಾದ; ಬಿನ್ನಣ-ಭ್ರಾಂತಿ; ಬಿಟ್ಟಕಂಗಳ-ತೆರೆದುಕೊಂಡ ಕಣ್ಣುಗಳ; ಬಿಗಿದ ಪುರ್ಬು-ಬಿಗಿದುಕೊಂಡ ಹುಬ್ಬು; ಕೆನ್ನೀರ್-ರಕ್ತ; ಶೋಣಿತ-ರಕ್ತಸಿಕ್ತವಾದ; ಅಂಬರ-ಬಟ್ಟೆ; ಭಿನ್ನಮಾದ-ತುಂಡುತುಂಡಾದ, ಛಿದ್ರಛಿದ್ರವಾದ; ಅವಯವ-ಅಂಗಾಂಗ; ನಂದನ-ಮಗ, ಕಾತ್ಯಾಯಿನಿ-ಚಂಡಿಕಾದೇವಿ; ಮಡಿ-ಸಾಯು.

ದುಷ್ಟಬುದ್ಧಿ ಹಿರಿದಾಗಿ ಕಲ್ಪಿಸಿಕೊಂಡ ತನ್ನ ಮನಸ್ಸಿನ ಬಯಕೆಗಳೆಲ್ಲವೂ ಚೂರುಚೂರಾಗಿ ನಾಶವಾದಂತೆ, ಎತ್ತರವಾದ ಅರಮನೆಯು ಒಮ್ಮಿಂದೊಮ್ಮೆಗೆ ಬಿದ್ದುಹೋದಂತೆ, ವಕ್ರವಾದ ಮೀಸೆಗಳ, ಮುಖದ ಭ್ರಾಂತಿಯ, ತೆರೆದುಕೊಂಡ ಕಣ್ಣುಗಳ, ಬಿಗಿದುಕೊಂಡ ಹುಬ್ಬುಗಳ, ರಕ್ತದಲ್ಲಿ ಅದ್ದಿರುವ ತಲೆಗೂದಲಿನ, ರಕ್ತಸಿಕ್ತವಾದ ಬಟ್ಟೆಬರೆಗಳ, ಛಿದ್ರಛಿದ್ರವಾದ ಅಂಗಾಂಗಗಳಿಂದ ಕೂಡಿದ ಮಗ ಮದನನು ಕಾತ್ಯಾಯಿನಿಯ ಮುಂದೆ ಸತ್ತುಬಿದ್ದಿದ್ದನು.

ಕೈಯೊಳಿಹ ಕಾಷ್ಠಂಗಳಂ ಬಿಸುಟು ತನುಭವನ

ಮೆಯ್ಯ ಗಾಯಂಗಳಂ ತಡಹಿ ತಕ್ಕೈಸಿ ಮಗು

ಳೊಯ್ಯಳೊಯ್ಯನೆ ಕುಳ್ಳಿರಿಸಿ ಮೊಗಕೆ ಮೊಗವಿಟ್ಟು ಚುಂಬಿಸಿ ಕುಮಾರ ನಿನ್ನ

ಅಯ್ಯನಾಂ ಬಂದೆನೇಳೈ ತಂದ ನಾಡನಾ

ರಯ್ಯಬೇಡವೆ ಕಂದ ಕುಂತಳಾಧೀಶನೇ

ಗೈಯ್ಯ ಹೇಳಿದನೆನಗೆ ವಿವರಿಸದೆ ಸುಮ್ಮನಿರ್ದಪೆಯೆಂದೊಱಲ್ದನವನಂ        ೩೬

ಪದ್ಯದ ಅನ್ವಯಕ್ರಮ:

ಕಯ್ಯೊಳ್ ಇಹ ಕಾಷ್ಠಂಗಳಂ ಬಿಸುಟು, ತನುಭವನ ಮೆಯ್ಯ ಗಾಯಂಗಳಂ ತಡಹಿ ತಕ್ಕೈಸಿ ಮಗುಳ್ ಒಯ್ಯನೆ ಒಯ್ಯನೆ ಕುಳ್ಳಿರಿಸಿ ಮೊಗಕೆ ಮೊಗವಿಟ್ಟು ಚುಂಬಿಸಿ, ಕುಮಾರ ನಿನ್ನ ಅಯ್ಯನ್ ಆಂ ಬಂದೆನ್ ಏಳೈ, ತಂದ ನಾಡನ್ ಆರಯ್ಯಬೇಡವೇ ಕಂದ? ಕುಂತಳಾಧೀಶನ್ ಏಗೆಯ್ಯ ಹೇಳಿದನ್? ಎನಗೆ ವಿವರಿಸದೆ ಸುಮ್ಮನಿರ್ದಪೆ ಎಂದು ಅವನು ಒಱಲ್ದನು.

ಪದ-ಅರ್ಥ:

ಕಾಷ್ಠ-ಕಟ್ಟಿಗೆ, ರಾತ್ರಿ ದಾರಿ ಕಾಣಲು ಬಳಸಿದ ಉರಿಯುತ್ತಿರುವ ಕಟ್ಟಿಗೆ; ತನುಭವ-ಮಗ; ತಕ್ಕೈಸಿ-ಆಲಂಗಿಸಿ; ಮಗುಳ್-ಮತ್ತೆ; ಒಯ್ಯನೊಯ್ಯನೆ-ಮೆಲ್ಲನೆ; ಅಯ್ಯ-ಅಪ್ಪ; ತಂದ ನಾಡು-ಪಾಲಿಗೆ ಬಂದಿರುವ ಸಾಮ್ರಾಜ್ಯ; ಆರಯ್ಯಬೇಡವೇ-ಆಳಬೇಡವೇ?; ಗೆಯ್-ಮಾಡು; ಒಱಲ್ದನ್-ಗೋಳಾಡಿದನು.

ಚಂಡಿಕಾಲಯಕ್ಕೆ ಬಂದ ದುಷ್ಟಬುದ್ಧಿಯು ತನ್ನ ಕೈಯಲ್ಲಿನ ಉರಿಯುತ್ತಿರುವ ಕಟ್ಟಿಗೆಯನ್ನು ಬಿಸಾಡಿ, ತನ್ನ ಮಗನ ಮೈಮೇಲಿನ ಗಾಯಗಳನ್ನು ತಡಕಾಡುತ್ತ, ಆತನನ್ನು ಆಲಂಗಿಸಿ, ಮೆಲ್ಲನೆ ಆತನನ್ನು ಕುಳ್ಳಿರಿಸಿ, ಮುಖಕ್ಕೆ ಮುಖನ್ನಿರಿಸಿ ಚುಂಬಿಸಿ, ಮಗನೇ ನಿನ್ನ ಅಪ್ಪ ನಾನು ಬಂದಿದ್ದೇನೆ. ಏಳು ಮಗನೇ, ನಿನ್ನ ಪಾಲಿಗೆ ಬಂದಿರುವ ಸಾಮ್ರಾಜ್ಯವನ್ನು ನೀನು ಆಳಬೇಡವೇ? ಮಗನೇ ಕುಂತಳ ರಾಜನು ನಿನ್ನಲ್ಲಿ ಏನು ಮಾಡಲು ಹೇಳಿದನೆಂದು ನನಗೆ ವಿವರಿಸದೆ ಏಕೆ ಸುಮ್ಮನಿರುವೆ? ಎಂದು ಗೋಳಾಡಿದನು.

ಕಂಬನಿಗಳರುಣಾಂಬುವಂ ತೊಳೆಯೆ ಮುಂಡಾಡಿ

ಪಂಬಲಿಸಿ ಹಲುಬಿದಂ ಮಱುಗಿ ತನ್ನಿಂದಳಿದ

ನೆಂಬಳಲ್ ಮಿಗೆ ಮಂತ್ರಿ ಸೈರಿಸದೆ ಕೆಲಬಲದ ಕಂಬಂಗಳಂ ಪಾಯಲು

ಕುಂಬಳದ ಕಾಯಂತೆ ಚಿಪ್ಪಾಗಿ ನಿಜಮಸ್ತ

ಕಂ ಬಿರಿದು ಬಿದ್ದನುರ್ವಿಗೆ ಪೋದುದಸು ಕಾಯ

ದಿಂ ಬಳಿಕ ನಂದಿದ ಸೊಡರ್ಗಳೆನೆ ಮೃತರಾಗಿ ಸುತ ತಾತರಿರುತಿರ್ದರು  ೩೭

ಪದ್ಯದ ಅನ್ವಯಕ್ರಮ:

ಕಂಬನಿಗಳು ಅರುಣಾಂಬುವಂ ತೊಳೆಯೇ ಮುಂಡಾಡಿ, ಪಂಬಲಿಸಿ, ಮಱುಗಿ, ಹಲುಬಿದಂ. ತನ್ನಿಂದ ಅಳಿದನೆಂಬ ಅಳಲ್ ಮಿಗೆ ಮಂತ್ರಿ ಸೈರಿಸದೆ ಕೆಲಬಲದ ಕಂಬಂಗಳನ್ ಪಾಯಲು ನಿಜಮಸ್ತಕಂ ಕುಂಬಳದ ಕಾಯಂತೆ ಚಿಪ್ಪಾಗಿ ಬಿರಿದು ಉರ್ವಿಗೆ ಬಿದ್ದನ್, ಕಾಯದಿಂ ಅಸು ಪೋದುದು. ಬಳಿಕ ನಂದಿದ ಸೊಡರ್ಗಳ್ ಎನೆ ಸುತ ತಾತರ್ ಮೃತರಾಗಿ ಇರುತಿರ್ದರು.

ಪದ-ಅರ್ಥ:

ಅರುಣಾಂಬು-ರಕ್ತ; ಮುಂಡಾಡಿ-ಮುದ್ದಾಡಿ; ಪಂಬಲಿಸಿ-ಹಂಬಲಿಸಿ; ಮಱುಗಿ-ನೊಂದು; ತನ್ನಿಂದಳಿದ-ತನ್ನಿಂದ ನಾಶವಾದ; ಅಳಲ್-ದುಃಖ; ಮಿಗೆ-ಮಿತಿಮೀರಲು; ಕೆಲಬಲ-ಅಕ್ಕಪಕ್ಕ; ಚಿಪ್ಪಾಗಿ-ಚೂರುಚೂರಾಗಿ; ನಿಜಮಸ್ತಕ-ತನ್ನ ತಲೆ; ಬಿರಿದು-ಒಡೆದು; ಉರ್ವಿ-ಭೂಮಿ; ನಂದಿದ-ಆರಿಹೋದ; ಸೊಡರ್-ದೀಪ; ಸುತ-ಮಗ; ತಾತ-ತಂದೆ.

ದುಷ್ಟಬುದ್ಧಿಯ ಕಣ್ಣೀರು ಮದನನ ಮೈಯ ರಕ್ತವನ್ನು ತೊಳೆಯಲು, ಮಗನನ್ನು ಮುದ್ದಾಡಿ, ಹಂಬಲಿಸಿ ದುಃಖಿಸಿದನು. ತನ್ನಿಂದಾಗಿಯೇ ಮಗ ಸತ್ತುಹೋದನಲ್ಲ ಎಂಬ ದುಃಖ ಮಿತಿಮೀರಿ, ಸಹಿಸಿಕೊಳ್ಳಲಾರದೆ ಎದ್ದು ಅತ್ತಿತ್ತ ಸರಿದಾಗ ಅಕ್ಕಪಕ್ಕದ ಕಂಬಗಳಿಗೆ ಹಾಯಲು ದುಷ್ಟಬುದ್ಧಿಯ ತಲೆ ಕುಂಬಳದ ಕಾಯಂತೆ ಚೂರುಚೂರಾಗಿ ಒಡೆದು ನೆಲದ ಮೇಲೆ ಬಿದ್ದುಬಿಟ್ಟನು. ಪ್ರಾಣ ಹೊರಟುಹೋಯಿತು. ನಂದಿಹೋದ ದೀಪಗಳಂತೆ ಮಗ ಮತ್ತು ತಂದೆ ಸತ್ತು ಬಿದ್ದಿದ್ದರು.

***

 

Leave a Reply

Your email address will not be published. Required fields are marked *