ಸಾಹಿತ್ಯಾನುಸಂಧಾನ

heading1

ಹಡೆದೊಡಲು ಹುಡಿಯಾಯ್ತು ಮಗನೆ – ರಾಘವಾಂಕ-ಭಾಗ-೧

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಬಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾದ ಪದ್ಯಭಾಗ)

ಎಂದಿನಂತುದಯಕಾಲದೊಳೆದ್ದು ಹುಲುಹುಳ್ಳಿ

ಗೆಂದರಣ್ಯಕ್ಕೆ ನಡೆದಲ್ಲಲ್ಲಿ ಹೋಗಿ ಹಲ

ವಂದದಡುಗಬ್ಬನಾಯ್ದೊಟ್ಟಿ ಹೊಱೆಗಟ್ಟಿ ಹೊತ್ತೋರಗೆಯ ಮಕ್ಕಳೊಡನೆ

ನಿಂದು ಮಧ್ಯಾಹ್ನದುರಿಬಿಸಿಲೊಳೆದೆ ಬಿರಿಯೆ ಜವ

ಗುಂದಿ ತಲೆಕುಸಿದು ನಡೆಗೆಟ್ಟು ಬಾಯಾಱಿ ಹಣೆ

ಯಿಂದ ಬೆವರುಗೆ ನೆತ್ತಿ ಹೊತ್ತಿ ತೇಂಕುತ್ತ ಹರಿತಪ್ಪಾಗಳೇವೊಗಳ್ವೆನು   ೧

ಪದ್ಯದ ಅನ್ವಯಕ್ರಮ:

ಎಂದಿನಂತೆ ಉದಯಕಾಲದೂಳ್ ಎದ್ದು, ಹುಲುಹುಳ್ಳಿಗೆ ಎಂದು, ಓರಗೆಯ ಮಕ್ಕಳೊಡನೆ ನಿಂದು, ಅರಣಕ್ಕೆ ನಡೆದು ಅಲ್ಲಲ್ಲಿ ಹೋಗಿ, ಹಲವು ಅಂದದ ಅಡುಗಬ್ಬನ್ ಆಯ್ದು ಒಟ್ಟಿ, ಹೊಱೆಕಟ್ಟಿ ಹೊತ್ತು, ಮಧ್ಯಾಹ್ನದ ಉರಿಬಿಸಿಲೊಳ್ ಎದೆ ಬಿರಿಯೆ, ಜವ ಕುಂದಿ, ತಲೆಕುಸಿದು, ನಡೆ ಕೆಟ್ಟು, ಬಾಯಾಱಿ ಹಣೆಯಿಂದ ಬೆವರ್ ಉಗೆ ನೆತ್ತಿ ಹೊತ್ತಿ ತೇಂಕುತ್ತ ಹರಿತಪ್ಪಾಗಳ್ ಏವೊಗಳ್ವೆನು.

ಪದ-ಅರ್ಥ:

ಎಂದಿನಂತೆ-ದಿನನಿತ್ಯದಂತೆ; ಹುಲುಹುಳ್ಳಿ-ಸಣ್ಣಕಟ್ಟಿಗೆ, ಪುರಲೆ; ಅಲವಂದದ-ವಿವಿಧ ಬಗೆಯ; ಅಡುಗಬ್ಬ-ಕಟ್ಟಿಗೆ, ಸೌದೆ; ಆಯ್ದೊಟ್ಟಿ-ಆರಿಸಿ ರಾಶಿಹಾಕಿ; ಹೊಱೆಗಟ್ಟಿ-ಹೊರೆಯಾಗಿ ಕಟ್ಟಿ; ಓರಗೆ-ಸಮವಯಸ್ಕ; ಎದೆಬಿರಿಯೆ-ಎದೆನಡುಗಲು; ನಡೆಗೆಟ್ಟು-ನಡೆಯಲಾಗದೆ; ಬೆವರುಗೆ-ಬೆವರು ಚಿಮ್ಮುತ್ತಿರಲು; ನೆತ್ತಿ ಹೊತ್ತಿ-ತಲೆ ಬಿಸಿಯಾಗಿ; ತೇಂಕುತ್ತ-ಏದುಸಿರು ಬಿಡುತ್ತ; ಹರಿತಪ್ಪಾಗಳ್-ನಡೆದು ಬರುತ್ತಿರುವಾಗ.

ಲೋಹಿತಾಶ್ವನು ದಿನನಿತ್ಯದಂತೆ ಬೆಳಗ್ಗಿನ ಜಾವದಲ್ಲಿ ಎದ್ದು, ತನ್ನ ಸಮವಯಸ್ಕ ಮಕ್ಕಳೊಡನೆ ಸೇರಿಕೊಂಡು, ಕಾಡಿಗೆ ಹೋಗಿ ಅಲ್ಲಲ್ಲಿ ಬಿದ್ದುಕೊಂಡಿರುವ ಹಲವು ರೀತಿಯ ಪುರಳೆ, ಕಟ್ಟಿಗೆಗಳನ್ನು ಆರಿಸಿ ರಾಶಿಹಾಕಿ,  ಹೊರೆಯಾಗಿ ಕಟ್ಟಿ, ತಲೆಯ ಮೇಲಿರಿಸಿ ಹೊತ್ತುಕೊಂಡು ಬರುತ್ತಿರುವಾಗ, ಮಧ್ಯಾಹ್ನದ ಉರಿಬಿಸಿಲಿನಲ್ಲಿ ಎದೆಒಡೆಯುವಂತಾಗಿ, ಶಕ್ತಿಕುಂದಿ, ತಲೆಕುಸಿದು, ನಡೆಯಲಾಗದೆ ಬಾಯಾರಿಕೆಯಾಗಿ, ಹಣೆಯಿಂದ ಧಾರಾಕಾರವಾಗಿ ಬೆವರು ಚಿಮ್ಮುತ್ತಿರಲು ತಲೆಬಿಸಿಯೇರಿ ಎದುಸಿರು ಬಿಡುತ್ತ ನಡೆದುಬರುತ್ತಿದ್ದನು.

 

ಕೆಲದ ಮೆಳೆಯೊತ್ತಿನೊಳಗಿರ್ದ ಹುತ್ತಿನೊಳು ನಳ

ನಳಿಸಿ ಕೋಮಲತೆಯಿಂ ಕೊಬ್ಬಿ ಕೊನೆವಾಯ್ದು ಕಂ

ಗಳವಟ್ಟು ಬೆಳೆದೆಳೆಯ ದರ್ಭೆಯಂ ಕಂಡು ಹಾರಯಿಸಿ ನಾನಿದನೆಲ್ಲವ

ಗಳಗಳನೆ ಕೊಯ್ದು ಕೊಂಡೊಯ್ದಿತ್ತಡೆನ್ನೊಡೆಯ

ಮುಳಿಯದಿಹನಿದು ಹದಿಹ ಎಂಬಾಸೆಯಿಂ ಹೊಱೆಯ

ನಿಳುಹಿ ಕುಡುಗೋಲ್ವಿಡಿದು ಸಾರ್ದನಸ್ತಾದ್ರಿಯಂ ಸಾರುತಿಹ ಸೂರ್ಯನಂತೆ  ೨

ಪದ್ಯದ ಅನ್ವಯಕ್ರಮ:

ಕೆಲದ ಮೆಳೆಯ ಒತ್ತಿನೊಳ್, ಒಳಗಿರ್ದ ಹುತ್ತಿನೊಳು, ನಳನಳಿಸಿ ಕೋಮಲತೆಯಿಂ ಕೊಬ್ಬಿ ಕೊನೆವಾಯ್ದು ಕಣ್ಗೆ ಅಳವಟ್ಟು  ಬೆಳೆದ ಎಳೆಯ ದರ್ಭೆಯಂ ಕಂಡು ಹಾರಯಿಸಿ, ನಾನ್ ಇದನೆಲ್ಲವ ಗಳಗಳನೆ ಕೊಯ್ದು ಕೊಂಡೊಯ್ದು ಇತ್ತೆನಾದೊಡೆ ಎನ್ನೊಡೆಯನ್ ಮುಳಿಯದಿಹನ್, ಇದು ಹದಿಹ, ಎಂಬಾಸೆಯಿಂ ಹೊಱೆಯನ್ ಇಳುಹಿ, ಕುಡುಗೋಲ್ ಪಿಡಿದು ಅಸ್ತಾದ್ರಿಯಂ ಸಾರುತಿಹ ಸೂರ್ಯನಂತೆ ಸಾರ್ದನ್ 

ಪದ-ಅರ್ಥ:

ಕೆಲದ-ಪಕ್ಕದ; ಮೆಳೆ-ಪೊದೆ; ಒತ್ತಿನೊಳ್-ಪಕ್ಕದಲ್ಲಿ; ಹುತ್ತಿನೊಳು-ಹುತ್ತದ ಮೇಲೆ; ನಳನಳಿಸಿ-ಸೊಂಪಾಗಿ; ಕೊನೆವಾಯ್ದು-ಚಿಗುರಿ; ಕಂಗಳವಟ್ಟು-ಕಣ್ಣಿಗೆ ಹಿತವೆನಿಸಿ; ದರ್ಭೆ-ವೈದಿಕ ಕಾರ್ಯಗಳಲ್ಲಿ ಬಳಸುವ ಒಂದು ಬಗೆಯ ಹುಲ್ಲು; ಹಾರಯಿಸಿ-ಬಯಸಿ; ಗಳಗಳನೆ-ಕ್ಷಿಪ್ರವಾಗಿ, ತ್ವರಿತವಾಗಿ; ಇತ್ತಡೆ-ನೀಡಿದರೆ; ಮುಳಿ-ಸಿಟ್ಟಾಗು; ಹದಿಹ-ಯೋಗ್ಯ, ಸಮಂಜಸ; ಕುಡುಗೋಲ್-ಕತ್ತಿ; ಸಾರ್ದನ್-ನಡೆದನು; ಅಸ್ತಾದ್ರಿ-ಪಶ್ಚಿಮ ಪರ್ವತ.

ದಾರಿಬದಿಯ ಪೊದರಿನ ಪಕ್ಕದ ಹುತ್ತದ ಮೇಲೆ ಸೊಂಪಾಗಿ ಕೋಮಲವಾಗಿ ಚಿಗುರಿ ಕಣ್ಣುಗಳಿಗೆ ಸುಂದರವಾಗಿ ಕಾಣುವಂತೆ ಬೆಳೆದ ಎಳೆಯ ದರ್ಭೆಯನ್ನು  ನೋಡಿ, ಅಪೇಕ್ಷಿಸಿ ನಾನು ಇದೆಲ್ಲವನ್ನೂ ಕ್ಷಿಪ್ರವಾಗಿ ಕತ್ತರಿಸಿ ಕೊಂಡೊಯ್ದು ನನ್ನ ಒಡೆಯನಿಗೆ ಕೊಟ್ಟರೆ ಆತನು ನನ್ನ ಮೇಲೆ ಕೋಪಿಸಿಕೊಳ್ಳಲಾರ, ಹೀಗೆ ಮಾಡುವುದೇ ಯೋಗ್ಯವೆಂದು ಭಾವಿಸಿಕೊಂಡು ಆಸೆಯಿಂದ ತಲೆಯ ಮೇಲಿನ ಕಟ್ಟಿಗೆಯ ಹೊರೆಯನ್ನು ಕೆಳಗಿಳಿಸಿ, ಕತ್ತಿಯನ್ನು ಹಿಡಿದುಕೊಂಡು ಪಶ್ಚಿಮ ಪರ್ವತದ ಕಡೆಗೆ ಸಾಗುತ್ತಿರುವ ಸೂರ್ಯನಂತೆ ಹುತ್ತದ ಕಡೆಗೆ ಹೊರಟನು.

 

ಹೊದೆಗಡಿದು ಹತ್ತಿ ಹುತ್ತವ ಸುತ್ತಿದೆಳಹುಲ್ಲ

ಹೊದಱ ಹಿಡಿದಡಸಿ ಬಿಡದರಿದು ಸೆಳೆಯಲ್ ಕಯ್ಯ

ಹದರನೊಡೆಗಚ್ಚಿ ಜಡಿಯುತ್ತ ಭೋಂಕನೆ ಬಂದ ರೌದ್ರಸರ್ಪನನು ಕಂಡು

ಹೆದಱಿ ಹವ್ವನೆ ಹಾಱಿ ಹಾ ಎಂದು ಕೈಕಾಲ

ಕೆದಱಿ ಕೊರಳಡಿಯಾಗಿ ಕೆಡೆದನಕಟಕಟ ಮದ

ಮುದಿತ ರಾಹುಗ್ರಸ್ತವಾದ ತರುಣೇಂದುಬಿಂಬಂ ನೆಲಕೆ ಬೀಳ್ವಂದದೆ  ೩

ಪದ್ಯದ ಅನ್ವಯಕ್ರಮ:

ಹೊದೆ ಕಡಿದು, ಹುತ್ತವ ಹತ್ತಿ ಸುತ್ತಿದ ಎಳಹುಲ್ಲ ಹೊದಱ ಹಿಡಿದು ಅಡಸಿ ಬಿಡದೆ ಅರಿದು ಸೆಳೆಯಲ್ ಕಯ್ಯ ಹದರನ್ ಒಡೆಗಚ್ಚಿ ಜಡಿಯುತ್ತ ಭೋಂಕನೆ ಬಂದ ರೌದ್ರಸರ್ಪನನು ಕಂಡು ಹೆದಱಿ ಹವ್ವನೆ ಹಾಱಿ ಹಾ! ಎಂದು ಕೈಕಾಲ ಕೆದಱಿ ಕೊರಳ್ ಅಡಿಯಾಗಿ ಕೆಡೆದನ್ ಅಕಟಕಟ ಮದಮುದಿತ ರಾಹುಗ್ರಸ್ತವಾದ ತರುಣ ಇಂದು ಬಿಂಬಂ ನೆಲಕೆ ಬೀಳ್ವಂದದೆ.

ಪದ-ಅರ್ಥ:

ಹೊದೆಗಡಿದು-ಪೊದೆ ಕಡಿದು; ಸುತ್ತಿದ-ಆವರಿಸಿಕೊಂಡಿರುವ; ಹೊದಱ-ಪೊದರನ್ನು; ಅಡಸಿ-ಒಟ್ಟಾಗಿಸಿ; ಹದರ-ಮಣಿಕಟ್ಟು; ಒಡೆಗಚ್ಚಿ-ಒಡನೆ ಕಚ್ಚಿ; ಜಡಿಯುತ್ತ-ಹೆದರಿಸುತ್ತ; ಭೋಂಕನೆ-ತಟ್ಟನೆ; ರೌದ್ರಸರ್ಪ-ಭಯಂಕರ ಸರ್ಪ; ಹವ್ವನೆ-ಒಮ್ಮಿಂದೊಮ್ಮೆಗೆ; ಕೈಕಾಲ ಕೆದಱಿ-ಕೈಕಾಲು ನಡುಗಿ; ಕೊರಳಡಿಯಾಗಿ-ತಲೆಕೆಳಗಾಗಿ; ಕೆಡೆದಂ-ಬಿದ್ದನು; ಅಕಟಕಟ-ಭಯವಾದಾಗ ಹೊರಡುವ ಉದ್ಗಾರ; ಮದಮುದಿತ-ಅಮಲಿನಿಂದ ಕೂಡಿದ; ರಾಹುಗ್ರಸ್ತವಾದ-ರಾಹುವಿನಿಂದ ಆವೃತ್ತವಾದ; ತರುಣೇಂದು ಬಿಂಬ- ಬಾಲ ಚಂದ್ರ.

ಕತ್ತಿಯಿಂದ ದಾರಿಯಲ್ಲಿನ ಪೊದೆಗಳನ್ನು ಕಡಿದುಕೊಂಡು, ಹುತ್ತವನ್ನು ಹತ್ತಿ ಅಲ್ಲೆಲ್ಲ ಹರಡಿಕೊಂಡಿರುವ ದರ್ಭೆಯ ಪೊದರನ್ನು ಮುಷ್ಟಿಯಲ್ಲಿ ಹಿಡಿದುಕೊಂಡು ಕತ್ತಿಯಿಂದ ಕೊಯ್ಯುವಷ್ಟರಲ್ಲಿಯೇ ಕೈಯ ಮಣಿಕಟ್ಟನ್ನು ಕಚ್ಚಿ ಹೆದರಿಸುತ್ತ, ತಟ್ಟನೆ ಹೆಡೆಯೆತ್ತಿ ಬಂದ ಭಯಂಕರ ಸರ್ಪವನ್ನು ಕಂಡು ಲೋಹಿತಾಶ್ವನು ಹೆದರಿ ಒಮ್ಮಿಂದೊಮ್ಮೆಗೆ ಹಾರಿ ಹಾ! ಎಂದು ಕೈಕಾಲು ನಡುಗಿ ಬೀಳುವ ರಭಸಕ್ಕೆ ತಲೆಯಡಿಯಾಗಿ, ಅಮಲಿನಿಂದ ಕೂಡಿ ರಾಹುವಿನಿಂದ ಆವೃತ್ತವಾದ ಬಾಲಚಂದ್ರನ ಬಿಂಬವು ಆಗಸದಿಂದ ನೆಲಕೆ ಉರುಳುವಂತೆ ಲೋಹಿತಾಶ್ವನು ಹುತ್ತದ ಮೇಲಿನಿಂದ ನೆಲಕ್ಕೆ ಉರುಳಿದನು.

 

ತನಯನೆಂದುಂ ಬಪ್ಪ ಹೊತ್ತಿಂಗೆ ಬಾರದಿರೆ

ಮನನೊಂದಿದೇಕೆ ತಳುವಿದನೆನ್ನ ಕಂದನೆಂ

ದೆನುತ ಸುಯ್ಯುತ್ತ ಮಱುಗುತ್ತ ಬಸುಱಂ ಹೊಸೆದು ಕೊನೆವೆರಳ ಮುರಿದುಕೊಳುತ

ತನುವ ಮಱೆದಡಿಗಡಿಗೆ ಹೊರಗನಾಲಿಸಿ ಮತ್ತೆ

ಮನೆಯೊಡತಿಗಂಜಿ ಕೆಲಸವನು ಮಾಡುತ್ತಿಪ್ಪ

ವನಿತೆಗಾದಾಪತ್ತನಾಲಿಸದೆ ಕೆಟ್ಟು ದಟ್ಟಿಸುವರದನೇನೆಂಬೆನು   ೪

ಪದ್ಯದ ಅನ್ವಯಕ್ರಮ:

ತನಯನ್ ಎಂದುಂ ಬಪ್ಪ ಹೊತ್ತಿಂಗೆ ಬಾರದೆ ಇರೆ, ಮನನೊಂದು ಇದೇಕೆ ತಳುವಿದನ್ ಎನ್ನ ಕಂದನ್ ಎಂದೆನುತ, ಸುಯ್ಯುತ್ತ ಮಱುಗುತ್ತ ಬಸುಱಂ ಹೊಸೆದು ಕೊನೆ ಬೆರಳ ಮುರಿದುಕೊಳುತ, ತನುವ ಮಱೆದು ಅಡಿಗಡಿಗೆ ಹೊರಗನ್ ಆಲಿಸಿ, ಮತ್ತೆ ಮನೆಯೊಡತಿಗೆ ಅಂಜಿ ಕೆಲಸವನು ಮಾಡುತ್ತಿಪ್ಪ ವನಿತೆಗೆ ಆದ ಆಪತ್ತನ್ ಆಲಿಸದೆ ಕೆಟ್ಟು ದಟ್ಟಿಸುವರ್ ಅದನ್ ಏನೆಂಬೆನು.

ಪದ-ಅರ್ಥ:

ತನಯ-ಮಗ; ಎಂದುಂ-ಯಾವತ್ತೂ; ಬಪ್ಪ-ಬರುವ; ಬಾರದಿರೆ-ಬಾರದೆ ಇರಲು; ತಳುವಿದನ್-ತಡಮಾಡಿದನ್; ಸುಯ್ಯುತ್ತ-ನಿಟ್ಟುಸಿರು ಬಿಡುತ್ತ; ಮಱುಗುತ್ತ-ನೊಂದುಕೊಳ್ಳುತ್ತ; ಬಸುಱಂ-ಹೊಟ್ಟೆಯನ್ನು; ಹೊಸೆದು-ತಿಕ್ಕಿಕೊಳ್ಳುತ್ತ; ಕೊನೆವೆರಳು-ಕಿರುಬೆರಳು; ಮುರಿದುಕೊಳ್ಳು-ನೆಟಿಕೆ ಮುರಿಯು; ತನು-ದೇಹ; ಮಱೆದು-ಮರೆತು; ಅಡಿಗಡಿಗೆ-ಹೆಜ್ಜೆಹೆಜ್ಜೆಗೆ; ಹೊರಗನಾಲಿಸಿ-ಮನೆಯ ಹೊರಗಿನ ಸದ್ದನ್ನು ಆಲಿಸಿ; ವನಿತೆ-ಚಂದ್ರಮತಿ; ಆಪತ್ತು-ಕೇಡು, ತೊಂದರೆ; ಆಲಿಸದೆ-ಕೇಳದೆ; ಕೆಟ್ಟುದಟ್ಟಿಸು-ಕಟ್ಟದಾಗಿ ಗದರಿಸು.

ಮಗನಾದ ಲೋಹಿತಾಶ್ವನು ಯಾವತ್ತೂ ಮನೆಗೆ ಬರುವ ಹೊತ್ತಿಗೆ ಬಾರದಿರಲು, ಚಂದ್ರಮತಿಯು ಮನಸ್ಸಿನಲ್ಲಿಯೇ ನೊಂದು, ಇಂದೇಕೆ ನನ್ನ ಮಗ ತಡಮಾಡಿದನೆಂದು ನಿಟ್ಟುಸಿರು ಬಿಡುತ್ತ, ನೊಂದುಕೊಳ್ಳುತ್ತ, ಹೊಟ್ಟೆಯನ್ನು ತಿಕ್ಕಿಕೊಳ್ಳುತ್ತ, ಕೊನೆಬೆರಳ ನಿಟಿಕೆ ಮುರಿಯುತ್ತ, ತನ್ನ ದೇಹವನ್ನು ಮರೆತು ಹೆಜ್ಜೆಹೆಜ್ಜೆಗೂ ಮನೆಯ ಹೊರಗಿನ ಸದ್ದನ್ನು ಆಲಿಸುತ್ತ, ಮತ್ತೆ ಮನೆಯ ಒಡತಿಗೆ ಹೆದರಿ ಮನೆಗೆಲಸವನ್ನು ಮಾಡುತ್ತಿದ್ದ ಚಂದ್ರಮತಿಗೆ ಉಂಟಾದ ಆಪತ್ತನ್ನು ಮನೆಯವರಾರೂ ವಿಚಾರಿಸದೆ ಕೆಟ್ಟದಾಗಿ ಗದರಿಸುತ್ತಿದ್ದರು.

 

ಉರಿವ ಬಿಸಿಲೊಳು ಹಸಿದು  ಬಳಲಿ ಬಸವಳಿದು ಕೆಡೆ

ದಿರುತಿಪ್ಪನೋ ಎಂದು ಕೀಳಿಲೊಳು ಮಿಗೆ ಕಟ್ಟು

ತಿರೆ ಹಸುಗಳಿಱಿದು ಕೆಡೆದಿರುತಿಪ್ಪನೋ ಎಂದು ನೋಡುತ್ತ ಹುಲುಹುಳ್ಳಿಯು

ದೊರಕದಿರೆ ಮನೆಗೆ ಬರಲಂಜಿ ಹೊಱಹೊಱಗಾಡು

ತಿರುತಿಪ್ಪನೋ ಎಂದು ಬೀದಿಯೊಳು ನೋಡಿ ತಡ

ವರಿಸಿ ಕಾಣದೆ ಮಱುಗುತಳಲಿಂದ ಮನದೊಳಗೆ ಸತ್ತು ಹುಟ್ಟುತಿರ್ಪಳು   ೫

ಪದ್ಯದ ಅನ್ವಯಕ್ರಮ:

ಉರಿವ ಬಿಸಿಲೊಳು ಹಸಿದು ಬಳಲಿ ಬಸವಳಿದು ಕೆಡೆದು ಇರುತಿಪ್ಪನೋ ಎಂದು, ಕೀಳಿಲೊಳು ಮಿಗೆ ಕಟ್ಟುತಿರೆ ಹಸುಗಳ್ ಇಱಿದು ಕೆಡೆದು ಇರುತಿಪ್ಪನೋ ಎಂದು ನೋಡುತ್ತ, ಹುಲುಹುಳ್ಳಿಯು ದೊರಕದಿರೆ ಮನೆಗೆ ಬಲರ್ ಅಂಜಿ ಹೊಱಹೊಱಗೆ ಆಡುತ ಇರುತಿಪ್ಪನೋ ಎಂದು ಬೀದಿಯೊಳು ನೋಡಿ, ತಡವರಿಸಿ ಕಾಣದೆ ಮಱುಗುತ ಅಳಲಿಂದ ಮನದೊಳಗೆ ಸತ್ತು ಹುಟ್ಟುತಿರ್ಪಳು.

ಪದ-ಅರ್ಥ:

ಉರಿವ ಬಿಸಿಲು-ಭೀಕರವಾದ ಬಿಸಿಲು; ಬಸವಳಿದು-ಶಕ್ತಿಗುಂದಿ; ಕೆಡೆದು-ಬಿದ್ದು; ಕೀಳಿಲೊಳ್-ದನದ ಕೊಟ್ಟಿಗೆಯಲ್ಲಿ; ಹುಲುಹುಳ್ಳಿ-ಕಟ್ಟಿಗೆ, ಪುರಲೆ; ಹೊಱಹೊಱಗಾಡು-ಮನೆಯಿಂದ ಹೊರಗಿದ್ದು ಕಾಲಹರಣ ಮಾಡು; ಮಱುಗುತ-ನೊಂದುಕೊಳ್ಳುತ್ತ.

ಭೀಕರವಾದ ಬಿಸಿಲಿನಲ್ಲಿ ಹೊಟ್ಟೆಹಸಿದು ಆಯಾಸಗೊಂಡು ಶಕ್ತಿಗುಂದಿ ಎಲ್ಲಾದರೂ ಬಿದ್ದುಕೊಂಡಿದ್ದಾನೋ! ಎಂದು ಭಾವಿಸುತ್ತ, ದನಗಳ ಕೊಟ್ಟಿಗೆಯಲ್ಲಿ ಹಸುಗಳನ್ನು ಕಟ್ಟುತ್ತಿರುವ ಸಂದರ್ಭದಲ್ಲಿ ಹಸುಗಳು ಲೋಹಿತಾಶ್ವನನ್ನು ಇರಿದಾಗ ಅಲ್ಲಿಯೇ ಬಿದ್ದುಕೊಂಡಿದ್ದಾನೋ! ಎಂದು ನೋಡುತ್ತ, ಕಾಡಿನಲ್ಲಿ ಕಟ್ಟಿಗೆ, ಪುರಲೆಗಳು ಸಿಗದಿದ್ದಾಗ ಮನೆಗೆ ಬರಲು ಹೆದರಿ ಮನೆಯಿಂದ ಹೊರಹೊರಗೆ ಆಡಿಕೊಂಡಿದ್ದಾನೋ! ಎಂದು ಬೀದಿಯಲ್ಲಿ ನೋಡುತ್ತ, ತಡವರಿಸಿ ಮಗನನ್ನು ಕಾಣದೆ ನೊಂದುಕೊಳ್ಳುತ್ತ, ದುಃಖಿಸುತ್ತ ಚಂದ್ರಮತಿ ಮನಸ್ಸಿನಲ್ಲಿಯೇ ಸತ್ತು ಹುಟ್ಟುತ್ತಿದ್ದಳು.

 

ಅಡವಿಯೊಳು ಹೊಲಬುಗೆಟ್ಟನೊ ಗಿಡುವಿನೊಳಗೆ ಹುಲಿ

ಹಿಡಿದುದೋ ಕಳ್ಳರೊಯ್ದರೊ ಭೂತಸಂಕುಲಂ

ಹೊಡೆದುವೋ ನೀರೊಳದ್ದನೊ ಮರದ  ಕೊಂಬೇಱಿ ಬಿದ್ದನೋ ಫಣಿ ತಿಂದುದೊ

ಕಡುಹಸಿದು ನಡೆಗೆಟ್ಟು ನಿಂದನೋ ಎಂದಿಂತು                                                              

ಮಡದಿ ಹಲವಂ ಹಲುಬುತಂಗಣದೊಳಿರೆ ಹೊತ್ತಿ

ಹೊಡಕರಿಸಿದಳಲ ಕರ್ಬೊಬೆಯಂತೆ ಕವಿದ ಕತ್ತಲೆಯೊಳಗೆ ನಿಂದಿರ್ದಳು  ೬

ಪದ್ಯದ ಅನ್ವಯಕ್ರಮ:

ಅಡವಿಯೊಳು ಹೊಲಬುಗೆಟ್ಟನೊ, ಗಿಡುವಿನೊಳಗೆ ಹುಲಿ ಹಿಡಿದುದೋ, ಕಳ್ಳರ್ ಒಯ್ದರೊ, ಭೂತಸಂಕುಲಂ ಹೊಡೆದುವೋ, ನೀರೊಳ್ ಅದ್ದನೊ, ಮರದ ಕೊಂಬೆ ಏಱಿ ಬಿದ್ದನೋ, ಫಣಿ ತಿಂದುದೊ, ಕಡುಹಸಿದು ನೆಲೆಗೆಟ್ಟುನಿಂದನೋ, ಎಂದು ಮಡದಿ ಇಂತು ಹಲವಂ ಹಲುಬುತ ಅಂಗಣದೊಳ್ ಇರೆ, ಹೊತ್ತಿ ಹೊಡಕರಿಸಿದ ಕರ್ಬೊಗೆಯಂತೆ್ ಕವಿವ ಕತ್ತಲೆಯೊಳಗೆ ನಿಂದಿರ್ದಳು.

ಪದ-ಅರ್ಥ:

ಅಡವಿ-ಕಾಡು; ಹೊಲಬುಗೆಟ್ಟನೊ-ದಾರಿ ತಪ್ಪಿದನೊ; ಗಿಡು-ಪೊದರು; ಕಳ್ಳರೊಯ್ದರೊ-ಕಳ್ಳರು ಕದ್ದು ಒಯ್ದರೊ; ಭೂತ ಸಂಕುಲ-ಭೂತ, ಪ್ರೇತಗಳ ಸಮೂಹ; ನೀರೊಳದ್ದನೋ-ನೀರಿನಲ್ಲಿ ಮುಳುಗಿದನೋ; ಫಣಿ-ಹಾವು; ತಿಂದುದೊ-ಕಚ್ಚಿತೊ; ನಡೆಗೆಟ್ಟು-ನಡೆಯಲಾಗದೆ; ಮಡದಿ-ಚಂದ್ರಮತಿ; ಹಲುಬುತ್ತ-ನೊಂದುಕೊಳ್ಳುತ್ತ, ಕೊರಗುತ್ತ; ಅಂಗಣ-ಅಂಗಳ; ಹೊತ್ತಿ ಹೊಡಕರಿಸಿದ-ಉರಿಯಿಂದಾಗಿ ಕಾಣಿಸಿಕೊಂಡಿರುವ; ಅಳಲ ಕರ್ಬೊಗೆ-ದುಃಖದ ಕಪ್ಪು ಹೊಗೆ.

ಮಗ ಲೋಹಿತಾಶ್ವ ಕಾಡಿನಲ್ಲಿ ದಾರಿತಪ್ಪಿದನೋ, ಬರುತ್ತಿರುವಾಗ ಪೊದೆಯಲ್ಲಿ ಆಡಗಿಕೊಂಡಿದ್ದ ಹುಲಿ ಹಿಡಿಯಿತೊ, ಕಾಡಿನಲ್ಲಿ ಕಳ್ಳರು ಹಿಡಿದು ಕೊಂಡೊಯ್ದರೊ, ಭೂತ, ಪ್ರೇತಾದಿಗಳು ಹೊಡೆದುಹಾಕಿದವೊ,. ನೀರನ್ನು ಕುಡಿಯಲು ಹೋಗಿ ನೀರಲ್ಲಿ ಮುಳುಗಿದನೋ, ಹಾವು ಕಚ್ಚಿತೊ, ಹಸಿವಿನಿಂದ ನಡೆಯಲಾಗದೆ ಎಲ್ಲಾದರೂ ನಿಂತುಕೊಂಡಿದ್ದಾನೋ ಎಂದು ಚಂದ್ರಮತಿ ಹಲವು ರೀತಿಗಳಿಂದ ನೊಂದುಕೊಳ್ಳುತ್ತ ದುಃಖದ ಬೆಂಕಿಯಿಂದಾಗಿ ಕಾಣಿಸಿಕೊಂಡಿರುವ ಕಪ್ಪಾದ ಹೊಗೆಯಂತೆ ಕತ್ತಲೆಯಲ್ಲಿ ಅಂಗಳದಲ್ಲಿ ನಿಂತುಕೊಂಡಿದ್ದಳು.

 

ಬಂದರಂ ಲೋಹಿತಾಶ್ವಾ ಎಂದು ಬಟ್ಟೆಯೊಳು

ನಿಂದರಂ ಲೋಹಿತಾಶ್ವಾ ಎಂದು ಗಾಳಿ ಗಿಱಿ

ಕೆಂದಡಂ ಲೋಹಿತಾಶ್ವಾ ಎಂದು ಕರೆಕರೆದು ಬಿಡೆ ಬೀದಿಗಱುವಿನಂತೆ

ಮಂದಮತಿಯಾಗಿರ್ದ ಚಂದ್ರಮತಿಗೊಬ್ಬನೈ

ತಂದಿಂದು ಕೂಡೆ ಹೋಗಿರ್ದು ಕಂಡೆಂ ನಿನ್ನ

ಕಂದನೊಂದುಗ್ರಫಣಿ ತಿಂದು ಜೀವಂಗಳೆದನೆಂದು ಹೇಳಿದನಾಗಳು.   ೭

ಪದ್ಯದ ಅನ್ವಯಕ್ರಮ:

ಬಂದರಂ ಲೋಹಿತಾಶ್ವಾ ಎಂದು, ಬಟ್ಟೆಯೊಳು ನಿಂದರಂ ಲೋಹಿತಾಶ್ವಾ ಎಂದು, ಗಾಳಿ ಗಿಱಿಕೆಂದಡಂ ಲೋಹಿತಾಶ್ವಾ ಎಂದು ಕರೆಕರೆದು ಬಿಡೆ ಬೀದಿ ಕಱುವಿನಂತೆ ಮಂದಮತಿಯಾಗಿ ಇರ್ದ ಚಂದ್ರಮತಿಗೆ ಆಗಳು, ಒಬ್ಬನ್ ಐತಂದು ಇಂದು ಕೂಡೆ ಹೋಗಿರ್ದು ಕಂಡೆಂ ನಿನ್ನ ಕಂದನನ್ ಒಂದು ಉಗ್ರಫಣಿ ತಿಂದು ಜೀವಂ ಕಳೆದನ್ ಎಂದು ಹೇಳಿದನ್.

ಪದ-ಅರ್ಥ:

ಬಂದರಂ-ಬಂದವರನ್ನು; ಬಟ್ಟೆಯೊಳು-ದಾರಿಯಲ್ಲಿ; ನಿಂದರಂ-ನಿಂತಿರುವವರನ್ನು; ಗಾಳಿ ಗಿಱಿಕು-ಗಾಳಿಯ ಸದ್ದು; ಬೀದಿಗಱು-ಬೀದಿಯಲ್ಲಿ ಬಿಟ್ಟುಹಾಕಿದ ಸಣ್ಣ ಕರು; ಮಂದಮತಿ-ಬುದ್ಧಿಭ್ರಮಣೆಯಾದವಳು; ಐತಂದು-ಆಗಮಿಸಿ; ಕೂಡೆ ಹೋಗಿರ್ದು-ಜೊತೆಯಲ್ಲಿ ಹೋಗಿದ್ದು; ಉಗ್ರಫಣಿ-ಉಗ್ರಸರ್ಪ; ಜೀವಂಗಳೆದನ್-ಪ್ರಾಣಬಿಟ್ಟನು.

ಮನೆಗೆ ಬಂದವರನ್ನು ಲೋಹಿತಾಶ್ವಾ ಎಂದು ಕರೆಯುತ್ತ, ದಾರಿಯಲ್ಲಿ ನಿಂತವರನ್ನು ಲೋಹಿತಾಶ್ವಾ ಎಂದು ಕರೆಯುತ್ತ, ಗಾಳಿಯ ಬೀಸುವಿಕೆಯ ಸದ್ದಾದಾಗ ಲೋಹಿತಾಶ್ವಾ ಎಂದು ಕರೆಯುತ್ತ, ಬೀದಿಯಲ್ಲಿ ಬಿಟ್ಟುಹಾಕಿದ ಬೀದಿಕರುವಿನಂತೆ ಬುದ್ಧಿಭ್ರಮಣೆಯಾದಂತೆ ಅತ್ತಿತ್ತ ಓಡಾಡಿಕೊಂಡಿದ್ದ ಚಂದ್ರಮತಿಯ ಬಳಿಗೆ ಒಬ್ಬ ಬಾಲಕನು ಬಂದು, ’ನಾವು ಜೊತೆಯಾಗಿ ಕಾಡಿಗೆ ಹೋಗಿದ್ದೆವು, ಕಾಡಿನಲ್ಲಿ ನಿನ್ನ ಮಗನನ್ನು ಒಂದು ಉಗ್ರಸರ್ಪ ಕಡಿದು ಆತ ಪ್ರಾಣಬಿಟ್ಟನು’ ಎಂದನು.

 

ಏಕೆ ಕಚ್ಚಿತ್ತಾವ ಕಡೆಯಾವ ಹೊಲನಕ್ಕ

ಟಾ ಕುಮಾರಂ ಮಡಿದ ಠಾವೆನಿತುದೂರವೆನ

ಲೀ ಕಡೆಯೊಳೀ ಹೊಲದೊಳೀ ಮರದ ಕೆಲದ ಹುತ್ತಿನ ಹುಲ್ಲ ಕೊಯ್ಯೆ ಕೈಯ

ನೂಕಿ ಫಣಿಯಗಿಯೆ ಕೆಡೆದಂ ದೂರವಲ್ಲಲ್ಲ

ಬೇಕಾದಡೀಗ ಹೋಗಲ್ಲದಿರ್ದೊಡೆ ಬಳಿಕ

ನೇಕ ಭಲ್ಲುಕು, ಜಂಜುಕಂ ಘೂಕವೃಕಗಳೆಳೆಯದೆ ಬಿಡವು ಕೇಳೆಂದನು  ೮

ಪದ್ಯದ ಅನ್ವಯಕ್ರಮ:

ಏಕೆ ಕಚ್ಚಿತ್ತು?, ಆವ ಕಡೆ? ಯಾವ ಹೊಲನ್? ಅಕ್ಕಟಾ ಕುಮಾರಂ ಮಡಿದ ಠಾವು ಎನಿತು ದೂರ? ಎನಲ್, ಈ ಕಡೆಯೊಳ್, ಈ ಹೊಲದೊಳ್, ಈ ಮರದ ಕೆಲದ ಹುತ್ತಿನ ಹುಲ್ಲ ಕೈಯನೂಕಿ ಕೊಯ್ಯೆ , ಫಣಿ ಅಗಿಯೆ, ಕೆಡೆದಂ. ದೂರವಲ್ಲಲ್ಲ, ಬೇಕಾದಡೀಗ ಹೋಗಲ್ಲದೆ ಇರ್ದೊಡೆ ಬಳಿಕ ಅನೇಕ ಭಲ್ಲುಕ, ಜಂಬುಕಂ, ಘೂಕ, ವೃಕಗಳ್ ಎಳೆಯದೆ ಬಿಡವು ಕೇಳ್ ಎಂದನು.

ಪದ-ಅರ್ಥ:

ಹೊಲ-ಪ್ರದೇಶ; ಮಡಿದ ಠಾವು-ಸತ್ತ ಸ್ಥಳ; ಈ ಕಡೆಯೊಳ್-ಇಂತಹ ಕಡೆಯಲ್ಲಿ; ಈ ಹೊಲದೊಳ್-ಇಂತಹ ಪ್ರದೇಶದಲ್ಲಿ; ಈ ಮರದ-ಇಂತಹ ಮರದ;  ಕೆಲದ-ಪಕ್ಕದ; ಕೈಯನೂಕಿ-ಕೈ ಚಾಚಿ; ಕೊಯ್ಯೆ-ಕೊಯ್ಯಲು; ಫಣಿ-ಹಾವು; ಅಗಿಯೆ-ಕಚ್ಚಲು; ಕೆಡೆದಂ-ಬಿದ್ದಿದ್ದಾನೆ; ಹೋಗಲ್ಲದಿರ್ದೊಡೆ-ಹೋಗದೇ ಇದ್ದರೆ; ಭಲ್ಲುಕ-ಕರಡಿ; ಜಂಬುಕ-ನರಿ; ಘೂಕ-ಗೂಬೆ; ವೃಕ-ತೋಳ; ಎಳೆಯದೆ-ಹೆಣವನ್ನು ಎಳೆಯದೆ, ಹೆಣವನ್ನು ತಿನ್ನದೆ; ಬಿಡವು-ಬಿಡಲಾರವು.

ಹಾವು ನನ್ನ ಮಗನನ್ನು ಏಕೆ ಕಚ್ಚಿತು? ಯಾವ ಕಡೆಯಲ್ಲಿ? ಯಾವ ಪ್ರದೇಶದಲ್ಲಿ? ಅಯ್ಯೋ ಮಗನು ಸತ್ತ ಸ್ಥಳ ಇಲ್ಲಿಂದ ಎಷ್ಟು ದೂರವಿದೆ? ಎಂದು ಚಂದ್ರಮತಿ ಬಾಲಕನಲ್ಲಿ ಕೇಳಿದಾಗ, ಆತ, ಇಂತಹ  ಕಡೆಯಲ್ಲಿ, ಇಂತಹ ಪ್ರದೇಶದಲ್ಲಿ, ಇಂತಹ ಮರದ ಪಕ್ಕದಲ್ಲಿ ಹುತ್ತದ ಮೇಲೆ ಬೆಳೆದಿರುವ ದರ್ಭೆಯನ್ನು ಕೈನೀಡಿ ಕೊಯ್ಯುತ್ತಿದ್ದಾಗ ಉಗ್ರವಾದ ಸರ್ಪವೊಂದು ಕಚ್ಚಿ, ಸತ್ತು ಬಿದ್ದಿದ್ದಾನೆ. ಈಗಲೇ ಹೋಗದಿದ್ದರೆ ನಿನ್ನ ಮಗನ ಹೆಣವನ್ನು ಕರಡಿ, ನರಿ, ತೋಳ, ಗೂಬೆಗಳು ಕಚ್ಚಿ, ಎಳೆದಾಡಿ ತಿನ್ನದೆ ಇರಲಾರವು ಎಂದನು.

 

ನುಡಿಯಲರಿದೆನಿಸಿ ಮೇರೆಯ ಮೀಱುವಳಲನಳ

ವಡಿಸಿ ಬಂದೊಡೆಯನಡಿಗಳ ಮೇಲೆ ಕೆಡೆದು ಬಾ

ಯ್ವಿಡುತರಣ್ಯದೊಳೆನ್ನ ಮಗನುಗ್ರಕಾಳೋರಗಂ ಕಚ್ಚಿ ಮಡಿದನೆಂದು

ನುಡಿಯೆ ಲೇಸಾಯ್ತು ಮಡೆದಡೆ ಮಡಿದನೆಂದು ಕೆಡೆ

ನುಡಿಯೆ ಬಂಟರನು ಕೊಟ್ಟಱಸಿಸೈ ತಂದೆ ಎನೆ

ನಡುವಿರುಳು ಬಂಟರುಂಟೇ ನಿದ್ದೆಗೆಯ್ಯಬೇಕೇಳು ಕಾಡದಿರೆಂದನು.  ೯

ಪದ್ಯದ ಅನ್ವಯಕ್ರಮ:

ನುಡಿಯಲ್ ಅರಿದೆನಿಸಿ, ಮೇರೆಯ ಮೀಱುವ ಅಳಲನ್ ಅಳವಡಿಸಿ, ಬಂದು ಒಡೆಯನ ಅಡಿಗಳ ಮೇಲೆ ಕೆಡೆದು, ಬಾಯ್ ಬಿಡುತ ಅರಣ್ಯದೊಳ್ ಎನ್ನ ಮಗನ್ ಉಗ್ರ ಕಾಳೋರಗಂ ಕಚ್ಚಿ ಮಡಿದನ್ ಎಂದು ನುಡಿಯೆ, ಲೇಸಾಯ್ತು ಮಡಿದಡೆ ಮಡಿದನ್ ಎಂದು ಕೆಡೆ ನುಡಿಯೆ, ಬಂಟರನು ಕೊಟ್ಟು ಅಱಸಿಸೈ ತಂದೆ ಎನೆ, ನಡುವಿರುಳು ಬಂಟರುಂಟೇ ನಿದ್ದೆಗೈಯ್ಯಬೇಕು ಕಾಡದಿರ್ ಎಂದನು.

ಪದ-ಅರ್ಥ:

ನುಡಿಯಲ್ ಅರಿದೆನಿಸಿ-ಮಾತಾಡಲು ಅಸಾಧ್ಯವೆನಿಸಿ; ಮೇರೆಯ ಮೀಱುವ-ಮಿತಿಮೀರುವ; ಅಳಲನ್-ದುಃಖವನ್ನು; ಅಳವಡಿಸಿ-ಹತೋಟಿಗೆ ತಂದುಕೊಂಡು; ಒಡೆಯನಡಿ-ಒಡೆಯನ ಪಾದ; ಕೆಡೆದು-ಬಿದ್ದು; ಬಾಯ್ವಿಡುತ್ತ-ಬಾಯಿ ಬಿಡುತ್ತ, ಬೊಬ್ಬೆಹಾಕುತ್ತ; ಕಾಳೋರಗ-ಕಾಳಸರ್ಪ; ಮಡಿ-ಸಾಯು; ಕೆಡೆನುಡಿ-ಕೆಟ್ಟಮಾತಾಡು; ಬಂಟ-ಸೇವಕ; ಅಱಸಿಸೈ-ಹುಡುಕಿಸಿ; ನಡುವಿರುಳು-ಮಧ್ಯರಾತ್ರಿ; ಕಾಡದಿರ್-ತೊಂದರೆ ಕೊಡಬೇಡ.

ಬಾಲಕನ ಮಾತನ್ನು ಕೇಳಿದೊಡನೆಯೆ ಚಂದ್ರಮತಿಗೆ ಮಾತಾಡಲು ಅಸಾಧ್ಯವೆನಿಸಿ, ಮಿತಿಮೀರುತ್ತಿರುವ ದುಃಖವನ್ನು ಹತೋಟಿಗೆ ತಂದುಕೊಂಡು, ಮನೆಯ ಒಡೆಯನ ಪಾದಗಳ ಮೇಲೆ ಬಿದ್ದು ಗೋಳಾಡುತ್ತ, ’ಕಾಡಿನಲ್ಲಿ ನನ್ನ ಮಗನನ್ನು ಉಗ್ರಸರ್ಪವೊಂದು ಕಚ್ಚಿ ಸತ್ತುಹೋಗಿದ್ದಾನೆ’ ಎಂದು ಹೇಳಿದಾಗ, ಒಡೆಯನು, ’ಸತ್ತರೆ ಸತ್ತ, ಒಳ್ಳೆಯದಾಯಿತು’, ಎಂದು ಕೆಟ್ಟ ಮಾತುಗಳನ್ನಾಡಿದಾಗ, ಚಂದ್ರಮತಿಯು, ’ಸೇವರಕನ್ನು ಕಳುಹಿಸಿ ಹುಡುಕಿಸಿ’ ಎಂದು ಬೇಡಿಕೊಂಡಳು. ಆಗ ಆ ಒಡೆಯನು, ’ಮಧ್ಯರಾತ್ರಿಯಲ್ಲಿ ಯಾವ ಸೇವಕರು ಸಿಗುತ್ತಾರೆಯೇ? ನನಗೆ ನಿದ್ದೆಮಾಡಬೇಕು. ತೊಂದರೆ ಕೊಡಬೇಡ’ ಎಂದನು.

 

ನರಿಗಳೆಳೆಯದ ಮುನ್ನ ದಹಿಸಬೇಡವೆ ತಂದೆ

ಕರುಣಿಸೆನೆ ದುರ್ಮರಣವಟ್ಟ ಶೂದ್ರನನು ಸಂ

ಸ್ಕರಿಸುವವರಾವಲ್ಲವೆಂದೆನಲ್ಕಾನಾದಡಂ ಹೋಗಿ ಕಂಡು ಮಗನ

ಉರಿಗಿತ್ತು ಬಪ್ಪೆನೇ ಎನೆ ಕೆಲಸಮಂ ಬಿಟ್ಟು

ಹರಿಯದಿರ್ದುದನೆಯ್ದೆ ಗೆಯ್ದು ಹೋಗೆನನು ಚ

ಚ್ಚರದಿ ಮಾಡುವ ಕಜ್ಜವೆಲ್ಲಮಂ ಮಾಡಿ ಹೊಱವಂಟಳೊಯ್ಯನೆ ಮನೆಯನು ೧೦

ಪದ್ಯದ ಅನ್ವಯಕ್ರಮ:

ತಂದೆ, ನರಿಗಳ್ ಎಳೆಯದ ಮುನ್ನ ದಹಿಸಬೇಡವೆ? ಕರುಣಿಸು ಎನೆ, ’ದುರ್ಮರಣವಟ್ಟ ಶೂದ್ರನನು ಸಂಸ್ಕರಿಸುವವರು ಆವಲ್ಲ’ ಎನಲ್ಕೆ, ’ಆನಾದೊಡಂ ಹೋಗಿ ಮಗನ ಕಂಡು ಉರಿಗಿತ್ತು ಬಪ್ಪೆನೆ?’ ಎನೆ, ’ಕೆಲಸಮಂ ಬಿಟ್ಟು ಹರಿಯದೆ, ಇರ್ದುದನ್ ಎಯ್ದೆ ಗೆಯ್ದು ಹೋಗು’ ಎನಲು, ಚಚ್ಚರದಿ ಮಾಡುವ ಕಜ್ಜವೆಲ್ಲಮಂ ಮಾಡಿ ಮನೆಯನು ಒಯ್ಯನೆ ಹೊಱವಂಟಳ್.

ಪದ-ಅರ್ಥ:

ನರಿಗಳ್ ಎಳೆಯದ  ಮುನ್ನ-ನರಿಗಳು ಹೆಣವನ್ನು ತಿನ್ನುವುದಕ್ಕಿಂತ ಮೊದಲು; ದಹಿಸಬೇಡವೇ-ಸುಡಬೇಡವೇ?; ಕರುಣಿಸು-ಕರುಣೆಯನ್ನು ತೋರು; ದುರ್ಮರಣವಟ್ಟ-ಅಸಹಜ ಮರಣಕ್ಕೀಡಾದ; ಶೂದ್ರ-ಒಂದು ವರ್ಣ; ಸಂಸ್ಕರಿಸುವವರು-ಸುಡುವವರು; ಆವಲ್ಲ-ನಾವಲ್ಲ; ಆನಾದಡಂ-ನಾನಾದರೂ; ಉರಿಗಿತ್ತು-ಬೆಂಕಿಕೊಟ್ಟು, ಹೆಣವನ್ನು ಸುಟ್ಟು; ಬಪ್ಪೆನೆ-ಬರಬಹುದೇ?; ಹರಿಯದೆ-ಹೋಗದೆ; ಇರ್ದುದನ್-ಇರುವ ಕೆಲಸವನ್ನು; ಎಯ್ದೆ-ಚೆನ್ನಾಗಿ; ಗೆಯ್ದು-ಮುಗಿಸಿ; ಚಚ್ಚರದಿ-ಜಾಗರೂಕವಾಗಿ, ಎಚ್ಚರದಿಂದ; ಕಜ್ಜ-ಕೆಲಸ; ಒಯ್ಯನೆ-ಬೇಗನೆ.

ಒಡೆಯನೇ, ’ನರಿ ಮೊದಲಾದ ಕಾಡು ಪ್ರಾಣಿಗಳು ನನ್ನ ಮಗನ ಹೆಣವನ್ನು ಎಳೆದು ತಿನ್ನುವುದಕ್ಕಿಂತ ಮೊದಲೇ ಶವಸಂಸ್ಕಾರ ಮಾಡಬೇಕಲ್ಲವೇ? ನನ್ನ ಮೇಲೆ ಕರುಣೆಯನ್ನು ತೋರಿಸಿ’ ಎಂದು ಬೇಡಿಕೊಂಡಾಗ ಆತ, ’ದುರ್ಮರಣಕ್ಕೆ ಈಡಾದ ಶೂದ್ರನನ್ನು ನಾವು ಸಂಸ್ಕಾರ ಮಾಡುವುದಕ್ಕೆ ಸಾಧ್ಯವಿಲ್ಲ’. ಎಂದನು. ಆಗ ಚಂದ್ರಮತಿಯು, ’ನಾನಾದರೂ ಕಾಡಿಗೆ ಹೋಗಿ ಮಗನ ಹೆಣವನ್ನು ಕಂಡು ಸುಟ್ಟುಬರುತ್ತೇನೆ’ ಎಂದಾಗ, ಒಡೆಯನು, ’ಕೆಲಸವನ್ನು ಬಿಟ್ಟು ಹೊರಟುಹೋಗದೆ, ಬಾಕಿ ಇರುವ ಕೆಲಸವೆಲ್ಲವನ್ನೂ ಚೆನ್ನಾಗಿ ಮುಗಿಸಿಬಿಟ್ಟು ಹೊರಟುಹೋಗು’ ಎಂದನು. ಆಗ ಚಂದ್ರಮತಿಯು  ಬಾಕಿ ಇರುವ ಎಲ್ಲಾ ಕೆಲಸಗಳನ್ನು ಬೇಗನೇ ಮುಗಿಸಿ ಬೇಗನೆ ಮನೆಯಿಂದ ಹೊರಟಳು.

 

ದಟ್ಟೈಸಿ ಮಡಲಿಱಿದ ಕಾಳದೊಳು ನಡುವಿರುಳು

ನಟ್ಟ ಮುಳ್ಳುಗಳನೆಡಹಿದ ಕಲ್ಲ ಹಾಯ್ದ ಮರ

ಮುಟ್ಟನೇಱಿದ ದಡನನಿಳಿದ ಕುಳಿಯಂ ಬಿದ್ದ ದರಿಗಳಂ ಹಿಡಿದ ಗಿಡುವ

ಬಿಟ್ಟಲತೆಯಂ ಬಿಚ್ಚಿದುಡುಗೆಯಂ ಮಱೆದು ಗೋ

ಳಿಟ್ಟು ಬಾಯ್ವಿಟ್ಟು ಮೊಱೆಯಿಡುತ ನಡೆತಂದು ಹುಲು

ವಟ್ಟೆಯೊಳು ಬೆಳೆದ ಹೆಮ್ಮರನ ಮಲಗಿಸಿ ನಿಂದ ಹುಳ್ಳಿಹೊರೆಯಂ ಕಂಡಳು.  ೧೧ 

ಪದ್ಯದ ಅನ್ವಯಕ್ರಮ:

ದಟ್ಟೈಸಿ ಮಡಲಿಱಿದ ಕಾಳದೊಳು ನಡುವಿರುಳು ನಟ್ಟ ಮುಳ್ಳುಗಳನ್, ಎಡಹಿದ ಕಲ್ಲ, ಹಾಯ್ದ ಮರಮುಟ್ಟನ್, ಏಱಿದ ದಡನನ್, ಇಳಿದ ಕುಳಿಯಂ, ಬಿದ್ದ ದರಿಗಳಂ, ಹಿಡಿದ ಗಿಡುವ, ಬಿಟ್ಟ ಲತೆಯಂ, ಬಿಚ್ಚಿದ ಉಡುಗೆಯಂ ಮಱೆದು, ಗೋಳಿಟ್ಟು ಬಾಯ್ವಿಟ್ಟು ಮೊಱೆಯಿಡುತ ನಡೆತಂದು ಹುಲುವಟ್ಟೆಯೊಳು ಬೆಳೆದ ಹೆಮ್ಮರನ ಮಲಗಿಸಿ ನಿಂದ ಹುಳ್ಳಿಹೊರೆಯಂ ಕಂಡಳು.

ಪದ-ಅರ್ಥ:

ದಟ್ಟೈಸಿ-ದಟ್ಟಯಿಸಿ, ದಟ್ಟವಾಗಿ; ಮಡಲಿಱಿದ-ಹಬ್ಬಿದ; ಕಾಳ-ಕತ್ತಲೆ; ನಟ್ಟ-ಚುಚ್ಚಿದ; ಹಾಯ್ದ-ಅಪ್ಪಳಿಸಿದ, ತಾಗಿದ; ಕುಳಿ-ಹಳ್ಳ; ದರಿ-ಕಂದರ, ಗವಿ; ಗಿಡು-ಸಣ್ಣಮರ, ಕುರುಚಲು ಮರ; ಬಿಟ್ಟಲತೆ-ನೇತಾಡುವ ಬಳ್ಳಿ; ಬಿಟ್ಟತಲೆ-ಕೆದರಿದ ತಲೆ; ಗೋಳಿಟ್ಟು-ದುಃಖಿಸಿ; ಬಾಯ್ವಿಟ್ಟು-ಹಂಬಲಿಸಿ, ಮೊಱೆಯಿಡು-ಆರ್ತನಾದ ಮಾಡು; ಹುಲುವಟ್ಟೆ-ಹುಲ್ಲಿನ ದಾರಿ, ಹುಲ್ಲುಗಾವಲ ದಾರಿ; ಹುಳ್ಳಿಹೊರೆ-ಪುರಲೆಯ ಹೊರೆ, ಕಟ್ಟಿಗೆಯ ಹೊರೆ.

ದಟ್ಟವಾಗಿ ಹಬ್ಬಿದ ಕತ್ತಲೆಯಲ್ಲಿ ಮಧ್ಯರಾತ್ರಿ ನಡೆಯುತ್ತಿರುವಾಗ ಕಾಲಿಗೆ ಚುಚ್ಚಿದ ಮುಳ್ಳುಗಳನ್ನು, ಎಡಹಿದ ಕಲ್ಲುಗಳನ್ನು, ಅಪ್ಪಳಿಸಿದ ಮರಗಳನ್ನು, ಏರಿಕೊಂಡು ನಡೆದ ದಡಗಳನ್ನು, ಇಳಿದ ಕಂದರಗಳನ್ನು, ನಡೆಯಲು ಆಧಾರವಾಗಿ ಹಿಡಿದ ಕುರುಚಲು ಮರಗಳನ್ನು, ಕೆದರಿದ ತಲೆಯನ್ನು, ಬಿಚ್ಚಿಹೋಗಿರುವ ಉಡುಗೆಯನ್ನು ಮರೆತು ದುಃಖಿಸುತ್ತ, ಹಂಬಲಿಸಿ, ಆರ್ತನಾದ ಮಾಡುತ್ತ, ನಡೆಯುತ್ತ ಹುಲ್ಲಿನಹಾದಿಯನ್ನು ಹಿಡಿದು ಬರುತ್ತಿರಲು ದಾರಿಯಲ್ಲಿ ಹೆಮ್ಮರವೊಂದಕ್ಕೆ ಒರಗಿಸಿದ ಪುರಲೆಯ ಹೊರೆಯನ್ನು ಕಂಡಳು.

(ಭಾಗ -೨ ರಲ್ಲಿ ಮುಂದುವರಿದಿದೆ)

Leave a Reply

Your email address will not be published. Required fields are marked *