ವಿಜಯ ಕೇಳಿತ್ತ ಬನದೊಳ್ ಚಂದ್ರಹಾಸನಂ
ಬುಜಮಿತ್ರನಪರಾಹ್ನಕೈದಲ್ಕೆ ನಿದ್ರೆಯಂ
ತ್ಯಜಿಸಿ ಮೊಗದೊಳೆದು ಮುಕ್ಕುಳಿಸಿ ಕಪ್ಪುರವೀಳೆಯಂಗೊಂಡು ಬಳಿಕ ಬಿಗಿಸಿ
ನಿಜವಾಜಿಯಂ ಬಂದಡರ್ದನುಚರರ್ವೆರಸಿ
ಋಜುವಾದ ಶಕುನಂಗಳಿಂ ಕೇಳುತೊಲಿದು ಪೌ
ರಜನಮಿವನಾರೆಂದು ನೋಡಲ್ಕೆ ನಗರಮಂ ಪೊಕ್ಕು ನಡೆತರುತಿರ್ದನು ೧೩
ಪದ್ಯದ ಅನ್ವಯಕ್ರಮ:
ವಿಜಯ ಕೇಳ್, ಇತ್ತ ಬನದೊಳ್ ಚಂದ್ರಹಾಸನ್ ಅಂಬುಜಮಿತ್ರನ್ ಅಪರಾಹ್ನಕ್ಕೆ ಐದಲ್ಕೆ ನಿದ್ರೆಯಂ ತ್ಯಜಿಸಿ, ಮೊಗ ತೊಳೆದು, ಮುಕ್ಕುಳಿಸಿ, ಕಪ್ಪುರ ವೀಳೆಯಂ ಕೊಂಡು ಬಳಿಕ ನಿಜವಾಜಿಯಂ ಬಿಗಿಸಿ, ಬಂದು ಅಡರ್ದ ಅನುಚರರ್ ಬೆರಸಿ ಋಜುವಾದ ಶಕುನಂಗಳಿಂ ಕೇಳುತ ಒಲಿದು ಪೌರಜನಂ ಇವನ್ ಆರೆಂದು ನೋಡಲ್ಕೆ ನಗರಮಂ ಪೊಕ್ಕು ನಡೆತರುತ ಇರ್ದನು.
ಪದ-ಅರ್ಥ:
ವಿಜಯ-ಅರ್ಜುನ; ಅಂಬುಜಮಿತ್ರಂ-ತಾವರೆಯ ಸಖನಾದ ಸೂರ್ಯ; ಐದಲ್ಕೆ-ಸಮೀಪಿಸಲು; ಕಪ್ಪುರವೀಳೆಯ-ಕರ್ಪೂರ ತಾಂಬೂಲ; ಕೊಂಡು-ಸ್ವೀಕರಿಸಿ; ನಿಜವಾಜಿ-ತನ್ನ ಕುದುರೆ; ಬಂದು ಅಡರ್ದ-ಬಂದು ಸೇರಿಕೊಂಡ; ಅನುಚರರ್-ಸ್ನೇಹಿತರು, ಜೊತೆಗಾರರು; ಋಜುವಾದ-ಶುಭಸೂಚಕವಾದ; ಶಕುನ-ಸುಳಿವು; ಒಲಿದು-ಖುಷಿಪಟ್ಟು; ಪೌರಜನಂ-ಪಟ್ಟಣದ ಜನರು; ಇವನಾರೆಂದು- ಇವನು ಯಾರು ಎಂದು; ನೋಡಲ್ಕೆ-ನೋಡುತ್ತಿರಲು.
ಅರ್ಜುನನೇ ಕೇಳು, ಈ ಕಡೆ ಸೂರ್ಯನು ಅಪರಾಹ್ನಕ್ಕೆ ಆಗಮಿಸಿದಾಗ, ಉದ್ಯಾನವನದಲ್ಲಿ ಚಂದ್ರಹಾಸನು ನಿದ್ದೆಯನ್ನು ತಿಳಿದೆದ್ದು, ಪಕ್ಕದ ಸರೋವರದಲ್ಲಿ ಮುಖ ತೊಳೆದು, ಮುಕ್ಕುಳಿಸಿ ಉಗಿದು, ಕರ್ಪೂರ ವೀಳೆಯ ತಾಂಬೂಲವನ್ನು ಹಾಕಿ, ತನ್ನ ಕುದುರೆಯನ್ನು ಸಿದ್ಧಗೊಳಿಸಿ, ಆಗತಾನೇ ಬಂದು ಸೇರಿಕೊಂಡ ಜೊತೆಗಾರರನ್ನು ಕೂಡಿಕೊಂಡು ಕುದುರೆಯನ್ನೇರಿ ಹೊರಡುತ್ತಿರುವಾಗ, ಉಂಟಾದ ಶುಭಶಕುನಗಳನ್ನು ನೋಡುತ್ತ, ಅವುಗಳ ಶುಭವಾರ್ತೆಗಳನ್ನು ಕೇಳುತ್ತ, ಪಟ್ಟಣದ ಜನರು, “ಇವನಾರು?” ಎಂದು ಹುಬ್ಬೇರಿಸಿ ನೋಡುತ್ತಿದ್ದಂತೆಯೇ ಪಟ್ಟಣವನ್ನು ಪ್ರವೇಶಿಸಿ ಅರಮನೆಯ ಕಡೆಗೆ ಬರುತ್ತಿದ್ದನು.
ವಿನಯದಿಂ ಮತ್ತೆ ನಸುನಗುವೆರಸಿ ನಿನ್ನ ದ
ರ್ಶನಮಿಂದಪೂರ್ವಮಾದುದು ಬಂದ ಕಾರ್ಯಮಂ
ತನಗೊಱೆವುದೆಂದು ಮದನಂ ಚಂದ್ರಹಾಸನಂ ಕೇಳ್ದೊಡಾತಂಗೆ ನಿನ್ನ
ಜನಕನೆನ್ನಂ ನಿನ್ನ ಬಳಿಗತಿರಹಸ್ಯದಿಂ
ದನುಮತಿಸಿ ಕಳುಹಲಾನೈತಂದೆನೆಂದು ಕುಱು
ಪಿನ ಮುದ್ರೆ ಸಹಿತ ನಿಜಕರದೊಳಿಹ ಪತ್ರಮಂ ಕೊಟ್ಟನಾತನ ಕೈಯೊಳು ೧೪
ಪದ್ಯದ ಅನ್ವಯಕ್ರಮ:
ವಿನಯದಿಂ ಮತ್ತೆ ನಸುನಗು ಬೆರಸಿ ನಿನ್ನ ದರ್ಶನಂ ಇಂದು ಅಪೂರ್ವಂ ಆದುದು, ಬಂದ ಕಾರ್ಯಮಂ ತನಗೆ ಒರೆವುದು ಎಂದು ಮದನಂ ಚಂದ್ರಹಾಸನಂ ಕೇಳ್ದೊಡೆ, ಆತಂಗೆ ನಿನ್ನ ಜನಕನ್ ಎನ್ನಂ ನಿನ್ನ ಬಳಿಗೆ ಅತಿರಹಸ್ಯದಿಂ ಅನುಮತಿಸಿ ಕಳುಹಲ್ ಆನ್ ಐತಂದೆನ್ ಎಂದು ಕುಱುಪಿನ ಮುದ್ರೆ ಸಹಿತ ನಿಜಕರದೊಳ್ ಇಹ ಪತ್ರಮಂ ಆತನ ಕೈಯೊಳು ಕೊಟ್ಟನ್.
ಪದ-ಅರ್ಥ:
ನಸುನಗುವೆರಸಿ-ನಸುನಗುವಿನಿಂದ ಕೂಡಿ; ತನಗೊರೆವುದು-ತನಗೆ ತಿಳಿಸುವುದು; ಜನಕನ್-ತಂದೆಯು; ಅನುಮತಿಸಿ-ಒಪ್ಪಿಸಿಕೊಂಡು; ಐತಂದೆನ್-ಆಗಮಿಸಿದೆನು; ಕುಱುಪಿನ-ಗುರುತಿನ; ನಿಜಕರ-ತನ್ನ ಕೈ;
ಚಂದ್ರಹಾಸನನ್ನು ನೋಡಿ ಮದನನು ವಿನಯದಿಂದ ಮತ್ತೆ ನಸುನಗುತ್ತ, ’ನಿನ್ನ ದರ್ಶನವು ಇಂದು ಬಹಳ ಅಪೂರ್ವವಾಯಿತು. ಬಂದ ಕೆಲಸ ಏನೆಂದು ನನಗೆ ತಿಳಿಸಬೇಕು’ ಎಂದು ಕೇಳಿದಾಗ, ಚಂದ್ರಹಾಸನು, ’ನಿನ್ನ ತಂದೆ ಅತಿರಹಸ್ಯದಿಂದ ಕಾರ್ಯವೊಂದನ್ನು ನಿಯೋಜಿಸಿ ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದರಿಂದ ನಾನು ಬಂದಿದ್ದೇನೆ.’ ಎಂದು ತನ್ನ ಕೈಯಲ್ಲಿರುವ ಗುರುತಿನ ಮುದ್ರೆಸಹಿತವಾದ ಪತ್ರವನ್ನು ಮದನನ ಕೈಗೆ ಕೊಟ್ಟನು.
ಇದ್ದವರನಾ ಸಭೆಯೊಳಿರಿಸಿ ಶಶಿಹಾಸನಂ
ಗದ್ದುಗೆಗೆ ನೆಲೆಗೊಳಿಸಿ ಮದನನಾಸ್ಥಾನದಿಂ
ದೆದ್ದಮಲನೆಂಬ ತನ್ನನುಜನಂ ಕೂಡಿಕೊಂಡೇಕಾಂತಭವನಕೈದಿ
ಹೊದ್ದಿಸಿದ ಮುದ್ರೆಯಂ ತೆಗೆದು ಪತ್ರವನೋದಿ
ತಿದ್ದಿದ್ದಕ್ಕರವನಱಿಯದೆ ನಿಜದ ಬರಹಮೆಂ
ದದ್ದನತಿ ಹರ್ಷಾರ್ಣವದೊಳಾಗ ಶತಯಾಗತನಯ ಕೇಳ್ ಕೌತುಕವನು ೧೫
ಪದ್ಯದ ಅನ್ವಯಕ್ರಮ:
ಆ ಸಭೆಯೊಳ್ ಇದ್ದವರನ್ ಇರಿಸಿ ಶಶಿಹಾಸನಂ ಗದ್ದುಗೆಗೆ ನೆಲೆಗೊಳಿಸಿ, ಮದನನ್ ಅಮಲನೆಂಬ ತನ್ನ ಅನುಜನನ್ ಕೂಡಿಕೊಂಡು ಆಸ್ಥಾನದಿಂ ಏಕಾಂತ ಭವನಕ್ಕೈದಿ ಹೊದ್ದಿಸಿದ ಮುದ್ರೆಯಂ ತೆಗೆದು, ಪತ್ರವನ್ನೋದಿ ತಿದ್ದಿದ ಅಕ್ಕರವನ್ ಅಱಿಯದೆ ನಿಜದ ಬರಹಂ ಎಂದು ಅತಿ ಹರ್ಷಾರ್ಣವದೊಳಗೆ ಅದ್ದನ್, ಶತಯಾಗತನಯ ಆಗ ಕೇಳ್ ಕೌತುಕವನು.
ಪದ-ಅರ್ಥ:
ಇದ್ದವರನ್-ಸಭೆಯಲ್ಲಿ ಆಸೀನರಾಗಿದ್ದವರನ್ನು; ಶಶಿಹಾಸನಂ-ಚಂದ್ರಹಾಸನನ್ನು; ಗದ್ದುಗೆ-ಪೀಠ; ನೆಲೆಗೊಳಿಸಿ-ಕುಳ್ಳಿರಿಸಿ; ಅನುಜ-ತಮ್ಮ; ಏಕಾಂತಭವನಕ್ಕೈದಿ-ಗುಪ್ತಸಮಾಲೋಚನೆಯ ಮಂದಿರಕ್ಕೆ ಆಗಮಿಸಿ; ಹೊದ್ದಿಸಿದ-ಕೂಡಿಸಿದ, ಸೇರಿಸಿದ; ತಿದ್ದಿದ ಅಕ್ಕರ-ತಿದ್ದಿದ ಅಕ್ಷರ; ಅಱಿಯದೆ-ತಿಳಿಯದೆ; ಅದ್ದನ್-ಮುಳುಗಿದನು; ಹರ್ಷಾರ್ಣವ-ಹರ್ಷವೆಂಬ ಸಮುದ್ರ; ಶತಯಾಗತನಯ-ನೂರುಯಾಗಗಳನ್ನು ಮಾಡಿದವನ ಮಗ(ದೇವೇಂದ್ರನ ಮಗ ಅರ್ಜುನ)
ಸಭೆಯಲ್ಲಿದ್ದವರನ್ನು ಅವರವರ ಸ್ಥಾನಗಳಲ್ಲಿಯೇ ಕುಳ್ಳಿರಿಸಿ, ಚಂದ್ರಹಾಸನನ್ನು ಉಚಿತವಾದ ಪೀಠದಲ್ಲಿ ಕುಳ್ಳಿರಿಸಿ, ಮದನನು ತನ್ನ ತಮ್ಮನಾದ ಅಮಲನನ್ನು ಜೊತೆಗೂಡಿಕೊಂಡು ಗುಪ್ತಸಮಾಲೋಚನ ಮಂದಿರಕ್ಕೆ ಆಗಮಿಸಿ, ಸೇರಿಸಿದ ಮುದ್ರೆಯನ್ನು ತೆಗೆದು, ಪತ್ರವನ್ನು ಓದಿಕೊಂಡು, ತಿದ್ದಿದ ಅಕ್ಷರವನ್ನು ಅರಿಯದೆ ನಿಜವಾದ ಬರಹವೆಂದು ಭಾವಿಸಿಕೊಂಡು ಮದನನು ಸಂತೋಷಸಾಗರದಲ್ಲಿ ಮುಳುಗಿದನು.
ಲೇಸಾದುದಯ್ಯನಿಂದೆನಗೆ ನೇಮಿಸಿ ಕಳುಹಿ
ದೀ ಸುವೊಕ್ಕಣೆಗಳ್ ಮಹಾಹಿತನ್ ತನಗೀತ
ನೀ ಸೀಮೆಗರಸಾದಪಂ ಸರ್ವಥಾಮಿತ್ರನಪ್ಪವಂ ನಿಶ್ಚಯಮಿದು
ಮೋಸವೆ ಕುಲಾಚಾರಗತಿಯನಾರೈವೊಡೆ ವಿ
ಲಾಸದಿಂ ವಿಷಯೆ ಮೋಹಿಸುವಂತೆ ಕುಡುವೆನಿದ
ಕೋಸರಿಸಲೇಕೆ ತಂಗಿಗೆ ತಕ್ಕ ವರನೀತನೆಂದು ಮದನಂ ತಿಳಿದನು. ೧೬
ಪದ್ಯದ ಅನ್ವಯಕ್ರಮ:
ಇಂದು ಅಯ್ಯನಿಂದ ಎನಗೆ ನೇಮಿಸಿ ಕಳುಹಿದ ಈ ಸುವೊಕ್ಕಣೆಗಳ್ ಲೇಸಾದುದು, ಈತನ್ ತನಗೆ ಮಹಾ ಹಿತನ್, ಈ ಸೀಮೆಗೆ ಅರಸು ಆದಪಂ ಸರ್ವಥಾ ಮಿತ್ರನಪ್ಪವಂ ಇದು ನಿಶ್ಚಯಂ, ಕುಲಾಚಾರ ಗತಿಯನ್ ಆರೈವೊಡೆ ಮೋಸವೆ? ವಿಲಾಸದಿಂ ವಿಷಯೆ ಮೋಹಿಸುವಂತೆ ಕುಡುವೆನ್, ಇದಕೆ ಓಸರಿಸಲೇಕೆ? ತಂಗಿಗೆ ಈತನ್ ತಕ್ಕ ವರನ್ ಎಂದು ಮದನಂ ತಿಳಿದನು.
ಪದ-ಅರ್ಥ:
ಲೇಸು-ಒಳಿತು; ಅಯ್ಯ-ಅಪ್ಪ; ನೇಮಿಸಿ-ವಹಿಸಿ, ಆದೇಶಿಸಿ; ಸುವೊಕ್ಕಣೆ-ಒಳ್ಳೆಯ ಬರಹ; ಮಹಾಹಿತನ್-ತುಂಬಾ ಹಿತನಾಗಿರುವವನು; ಸೀಮೆ-ರಾಜ್ಯ; ಸರ್ವಥಾಮಿತ್ರನಪ್ಪವಂ-ಯಾವತ್ತೂ ಮಿತ್ರನಾಗಿಯೇ ಇರುವವನು; ನಿಶ್ಚಯ-ಸತ್ಯ; ಕುಲಾಚಾರಗತಿ-ವಂಶದ ಆಚಾರವ್ಯವಸ್ಥೆ; ಆರೈವೊಡೆ-ಪರಿಶೀಲಿಸಿದರೆ; ವಿಲಾಸದಿಂ-ಪ್ರೀತಿಯಿಂದ; ವಿಷಯೆ ಮೋಹಿಸುವಂತೆ-ವಿಷಯೆ ಇಷ್ಟಪಡುವಂತೆ; ಕುಡುವೆನ್-ಮದುವೆಮಾಡಿ ಕೊಡುತ್ತೇನೆ; ಓಸರಿಸು-ಹಿಂಜರಿ, ಹಿಂದೇಟುಹಾಕು.
ಇಂದು ಅಪ್ಪನಿಂದ ನನಗೆ ವಹಿಸಿ ಕಳುಹಿಸಿದ ಈ ಪತ್ರದಲ್ಲಿನ ಒಳ್ಳೆಯ ಮಾತುಗಳು ಒಳಿತಾಗಿವೆ. ಈ ಚಂದ್ರಹಾಸನು ನಮಗೆ ತುಂಬಾಹಿತನಾದವನು, ಅಲ್ಲದೆ ಮುಂದೆ ನಮ್ಮ ರಾಜ್ಯಕ್ಕೆ ರಾಜನಾಗುವವನು, ಇದು ಸತ್ಯ. ನಮ್ಮ ವಂಶದ ಆಚಾರವ್ಯವಸ್ಥೆಯನ್ನು ಪರಿಭಾವಿಸುವುದಾದರೆ ಇದರಲ್ಲಿ ಮೋಸವೇನಿದೆ? ಅಪ್ಪನ ಮಾತಿನಂತೆ, ತಂಗಿಗೆ ಈ ಚಂದ್ರಹಾಸನು ತಕ್ಕ ವರನಾಗಿರುವುದರಿಂದ ಆಕೆ ಇಷ್ಟಪಡುವಂತೆ ಆಕೆಯನ್ನು ಆತನಿಗೆ ಮದುವೆಮಾಡಿಕೊಡುತ್ತೇನೆ, ಇದಕ್ಕೆ ಏಕೆ ಹಿಂಜರಿಯಲಿ? ಎಂದು ಮದನನು ಭಾವಿಸಿದನು.
ಮುನ್ನ ತಂದೆಯ ನಿರೂಪದ ಕಾರ್ಯಮದಱ ಮೇ
ಲೆನ್ನ ಮನವಿವನೊಳಕ್ಕಱ್ವೆಱಸುತಿದೆ ರೂಪ
ನುನ್ನಿಸುವೊಡನುಜೆಗೀತಂಗೆ ಪಾಸಟಿ ವಿಚಾರಿಸೆ ಕೃಷ್ಣಭಕ್ತನಿವನು
ಇನ್ನು ಸಂಶಯವಿಲ್ಲವೀ ಚಂದ್ರಹಾಸಂಗೆ
ಕನ್ನೈದಿಲೆಯಂದದಕ್ಷಿಯ ತಂಗಿಯಂ ಕೊಟ್ಟು
ಮನ್ನಿಸುವೆನೆಂದು ನಿಶ್ಚೈಸಿ ಮದನಂ ಮತ್ತೆ ಬಂದನೋಲಗ ಸಭೆಗೆ ೧೭
ಪದ್ಯದ ಅನ್ವಯಕ್ರಮ:
ಮುನ್ನ ತಂದೆಯ ನಿರೂಪದ ಕಾರ್ಯಂ, ಅದರ ಮೇಲೆ ಎನ್ನ ಮನವು ಇವನೊಳ್ ಅಕ್ಕಱ್ವೆಱಸುತಿದೆ, ರೂಪಂ ಉನ್ನಿಸುವೊಡೆ ಅನುಜೆಗೆ ಈತಂಗೆ ಪಾಸಟಿ, ವಿಚಾರಿಸೆ ಕೃಷ್ಣಭಕ್ತನಿವನು, ಇನ್ನು ಸಂಶಯಂ ಇಲ್ಲ, ಚಂದ್ರಹಾಸಂಗೆ ಕನ್ನೈದಿಲೆಯ ಅಂದದ ತಂಗಿಯಂ ಕೊಟ್ಟು ಮನ್ನಿಸುವೆನ್ ಎಂದು ನಿಶ್ಚಯಿಸಿ ಮದನಂ ಮತ್ತೆ ಓಲಗದ ಸಭೆಗೆ ಬಂದನ್.
ಪದ-ಅರ್ಥ:
ಮುನ್ನ-ಮೊದಲು; ನಿರೂಪದ ಕಾರ್ಯ-ಆಜ್ಞೆಯ ಕೆಲಸ; ಅಕ್ಕಱ್ವೆಱಸು(ಅಕ್ಕಱೆ+ಬೆಱಸು)-ಪ್ರೀತಿತುಂಬು; ಉನ್ನಿಸುವೊಡೆ-ಪರಿಭಾವಿಸುವುದಾದರೆ; ಅನುಜೆ-ತಂಗಿ; ಪಾಸಟಿ-ಜೋಡಿ, ಸರಿಸಾಟಿ; ಕನ್ನೈದಿಲೆಯಂದದ-ಕನ್ನೈದಿಲೆಯಂತೆ ಸುಂದರಳಾದ; ಮನ್ನಿಸು-ಗೌರವಿಸು.
ಮೊದಲು ತಂದೆಯ ಆಜ್ಞೆಯ ಕೆಲಸ. ಅದರೊಂದಿಗೆ ಈ ಚಂದ್ರಹಾಸನ ಮೇಲೆ ತನ್ನ ಮನಸ್ಸು ಪ್ರೀತಿಯನ್ನು ತುಂಬುತ್ತಿದೆ. ಆತನ ರೂಪವನ್ನು ಪರಿಭಾವಿಸುವುದಾದರೆ ಚಂದ್ರಹಾಸ ತನ್ನ ತಂಗಿಯಾದ ವಿಷಯೆಗೆ ತಕ್ಕ ಜೋಡಿ. ಇನ್ನೂ ವಿಚಾರಿಸುವುದಾದರೆ ಈತ ಕೃಷ್ಣಭಕ್ತನಾಗಿದ್ದಾನೆ. ಇನ್ನು ಸಂಶಯಪಡುವ ಅಗತ್ಯವಿಲ್ಲ. ಚೆಲುವೆಯಾದ ತನ್ನ ತಂಗಿ ವಿಷಯೆಯನ್ನು ಈ ಚಂದ್ರಹಾಸನಿಗೆ ಮದುವೆಮಾಡಿ ಕೊಟ್ಟು ಗೌರವಿಸುತ್ತೇನೆ ಎಂದು ನಿಶ್ಚಯಿಸಿ ಮದನನು ಮತ್ತೆ ಓಲಗದ ಸಭೆಗೆ ಬಂದನು.
ಬಳಿಕ ಮದನನ ಹೇಳಿಕೆಯೊಳಂದು ವಿದಿತ ಮಂ
ಗಳ ವಿವಾಹೋಚಿತ ಕ್ರಿಯೆಗಳಂ ವಿರಚಿಸಿದ
ರಿಳೆಯ ದಿವಿಜರ್ ಪುರಂಧ್ರಿಯರೈದೆ ಮಜ್ಜನದ ಮಂಡನದ ಮಾಳ್ಕೆಗಳನು
ಅಳವಡಿಸಿದರ್ ಪಣೆಯೊಳೆಸೆವ ಬಾಸಿಗದ ಮದ
ವಳಿಗನಾಗಿರ್ದಂ ಕುಳಿಂದಜಂ ದೇವಪುರ
ನಿಳಯ ಲಕ್ಷ್ಮೀಕಾಂತನೊಲವಿಂದೆ ವಿಷವಮೃತವಹುದು ಪೊಸತೇನೆನಲ್ಕೆ ೧೮
ಪದ್ಯದ ಅನ್ವಯಕ್ರಮ:
ಬಳಿಕ ಮದನನ ಹೇಳಿಕೆಯೊಳ್ ಅಂದು ಇಳೆಯ ದಿವಿಜರ್ ವಿದಿತ ಮಂಗಳ ವಿವಾಹೋಚಿತ ಕ್ರಿಯೆಗಳಂ ವಿರಚಿಸಿದರ್, ಪುರಂಧ್ರಿಯರ್ ಎಯ್ದೆ ಮಜ್ಜನದ ಮಂಡನದ ಮಾಳ್ಕೆಗಳನು ಅಳವಡಿಸಿದರ್, ಕುಳಿಂದಜಂ ಪಣೆಯೊಳ್ ಎಸೆವ ಬಾಸಿಗದ ಮದವಳಿಗನಾಗಿ ಇರ್ದನ್, ದೇವಪುರನಿಳಯ ಲಕ್ಷ್ಮೀಕಾಂತನ ಒಲವಿಂದೆ ವಿಷವು ಅಮೃತವಹುದು. ಪೊಸತೇನು ಎನಲ್ಕೆ.
ಪದ-ಅರ್ಥ:
ಹೇಳಿಕೆ-ಆಜ್ಞೆ; ವಿವಾಹೋಚಿತ ಕ್ರಿಯೆ-ವಿವಾಹ ಸಂಬಂಧವಾದ ಕಾರ್ಯಗಳು; ವಿದಿತ-ಉಚಿತ, ಸಮರ್ಪಕ; ವಿರಚಿಸು-ವ್ಯವಸ್ಥೆಗೊಳಿಸು; ಇಳೆ-ಭೂಮಿ; ದಿವಿಜರ್-ಬ್ರಾಹ್ಮಣರು; ಪುರಂಧ್ರಿಯರ್-ಹಿರಿಯ ಮುತ್ತೈದೆಯರು; ಎಯ್ದೆ-ಚೆನ್ನಾಗಿ; ಮಜ್ಜನ-ಸ್ನಾನ; ಮಂಡನ-ಅಲಂಕರಣ; ಮಾಳ್ಕೆ-ಆಚರಣೆ, ಕಾರ್ಯ; ಅಳವಡಿಸು-ಕಟ್ಟು; ಪಣೆ-ಹಣೆ; ಎಸೆ-ಶೋಭಿಸು; ಬಾಸಿಗ-ಬಾಸಿಂಗ, ಮದುಮಕ್ಕಳು ಹಣೆಯಲ್ಲಿ ಕಟ್ಟಿಕೊಳ್ಳುವ ಅಲಂಕರಣ; ಮದವಳಿಗ-ಮದುಮಗ; ಕುಳಿಂದಜ-ಚಂದ್ರಹಾಸ(ಕುಳಿಂದನ ಮಗ); ಪೊಸತು-ಹೊಸತು.
ಮದುವೆಯ ನಿರ್ಧಾರದ ಅನಂತರ ಮದನನ ಆಜ್ಞೆಯ ಪ್ರಕಾರ ಬ್ರಾಹ್ಮಣರು ವಿವಾಹಕ್ಕೆ ಸಂಬಂಧಿಸಿದ ಸಮರ್ಪಕವಾದ ಕ್ರಿಯಾಕರ್ಮಗಳನ್ನು,. ಹಿರಿಯ ಮುತ್ತೈದೆಯರು ಮದುಮಕ್ಕಳಿಗೆ ಸ್ನಾನ, ಅಲಂಕರಣ ಮೊದಲಾದ ಆಚರಣೆಗಳನ್ನು ವ್ಯವಸ್ಥೆಗೊಳಿಸಿದರು. ಹಣೆಯಲ್ಲಿ ಶೋಭಿಸುವ ಬಾಸಿಂಗವನ್ನು ಕಟ್ಟಿಕೊಂಡ ಕುಳಿಂದನ ಮಗ ಚಂದ್ರಹಾಸನು ಮದುಮಗನಾದನು. ದೇವಪುರದಲ್ಲಿ ಸ್ಥಿರವಾಗಿರುವ ಲಕ್ಷ್ಮೀಕಾಂತನ ಒಲವಿನಿಂದ ವಿಷವೂ ಅಮೃತವಾಗುತ್ತದೆ, ಇದರಲ್ಲಿ ಹೊಸತೇನಿದೆ?
ಸುತ್ರಾಮತನಯ ಕೇಳುತ್ಸವದೊಳೀಪರಿ ದಿ
ನತ್ರಯಂ ನಡೆಯಲ್ಕೆ ನಾಲ್ಕನೆಯ ದಿವಸದೊಳ್
ಚಿತ್ರಮಂ ವಿರಚಿಸಿದ ಪೊಳಲ್ವುಗಿಸಿ ನಾಗವಲ್ಲಿಯ ಸೊಡರ್ಗಳನೊದವಿಸಿ
ಕ್ಷತ್ರಿಯ ವಿವಾಹವೈಭವದೊಳಿದು ಪೊಸತೆನೆ ಧ
ರಿತ್ರಿಯೊಳ್ ಚಂದ್ರಹಾಸಂಗಾಯ್ತು ಮದುವೆ ಶತ
ಪತ್ರನಾಭನ ಕಿಂಕರರ್ಗೆ ಮಾಡಿದ ಮಿಥ್ಯೆಯದು ತಾನೆ ಪಥ್ಯಮೆನಲು ೧೯
ಪದ್ಯದ ಅನ್ವಯಕ್ರಮ:
ಸುತ್ರಾಮತನಯ ಕೇಳ್, ಉತ್ಸವದೊಳ್ ಈ ಪರಿ ದಿನತ್ರಯಂ ನಡೆಯಲ್ಕೆ, ನಾಲ್ಕನೆಯ ದಿವಸದೊಳ್ ಚಿತ್ರಮಂ ವಿರಚಿಸಿದ ಪೊಳಲ್ ಪುಗಿಸಿ, ನಾಗವಲ್ಲಿಯ ಸೊಡರ್ಗಳನ್ ಒದವಿಸಿ, ಕ್ಷತ್ರಿಯ ವಿವಾಹ ವೈಭವದೊಳ್ ಇದು ಪೊಸತು ಎನೆ ಧರಿತ್ರಿಯೊಳ್ ಶತಪತ್ರನಾಭನ ಕಿಂಕರರ್ಗೆ ಮಾಡಿದ ಮಿಥ್ಯೆ ನಾನೆ ಪಥ್ಯಂ ಎನಲು ಚಂದ್ರಹಾಸಂಗೆ ಮದುವೆ ಆಯ್ತು.
ಪದ-ಅರ್ಥ:
ಸುತ್ರಾಮತನಯ-ದೇವೇಂದ್ರನ ಮಗ (ಅರ್ಜುನ); ಉತ್ಸವದೊಳ್-ವಿಜೃಂಭಣೆಯಿಂದ; ಪರಿ-ರೀತಿ; ದಿನತ್ರಯ-ಮೂರು ದಿನಗಳು; ಚಿತ್ರಮಂ ವಿರಚಿಸಿದ-ಬಗೆಬಗೆಯಾಗಿ ಶೃಂಗರಿಸಿದ; ಪೊಳಲ್-ಪಟ್ಟಣ; ಪುಗಿಸಿ-ಪ್ರವೇಶಿಸುವಂತೆ ಮಾಡಿ; ನಾಗವಲ್ಲಿಯ ಸೊಡರ್-ಒಂದು ಬಗೆಯ ದೀಪ; ಒದವಿಸಿ-ಒದಗಿಸಿ; ಧರಿತ್ರಿ-ಭೂಮಿ; ಶತಪತ್ರನಾಭ-ವಿಷ್ಣು; ಕಿಂಕರರ್-ಸೇವಕರು, ಭಕ್ತರು; ಮಿಥ್ಯೆ-ಮೋಸ, ಸುಳ್ಳು; ಪಥ್ಯ-ಹಿತ, ಒಳಿತು.
ಅರ್ಜುನನೇ ಕೇಳು, ಈ ರೀತಿಯಲ್ಲಿ ವಿಜೃಂಭಣೆಯಿಂದ ಮೂರುದಿನಗಳ ಕಾಲ ವಿವಾಹ ನಡೆಯಲು, ನಾಲ್ಕನೆಯ ದಿವಸದಲ್ಲಿ ಪಟ್ಟಣವನ್ನು ವಿವಿಧ ರೀತಿಯಲ್ಲಿ ಅಲಂಕರಿಸಿ ಮದುಮಕ್ಕಳನ್ನು ಮೆರವಣಿಗೆ ಮಾಡಿಸಿ, ನಾಗವಲ್ಲಿಯ ದೀಪಗಳನ್ನು ಅಣಿಗೊಳಿಸಿ, ಕ್ಷತ್ರಿಯ ವಿವಾಹ ವೈಭವದಲ್ಲಿಯೇ ಇದು ಹೊಸತು ಎನ್ನುವಂತೆ ಮಾತ್ರವಲ್ಲದೆ, ವಿಷ್ಣುಭಕ್ತರಿಗೆ ಮಾಡಿದ ಮೋಸ ಅದು ಹಿತವಾಗಿ ಪರಿಣಮಿಸುವಂತೆ ಭೂಮಿಯಲ್ಲಿ ಚಂದ್ರಹಾಸನಿಗೆ ವಿಷಯೆಯೊಂದಿಗೆ ಮದುವೆಯಾಯಿತು.
ಮಾನವರ ತೆಱದೊಳಿಂತೆಂದೊರೆದು ಫಣಿ ಬಿಲಕೆ
ತಾನಿಳಿಯೆ ಕೇಳ್ದು ವಿಸ್ಮಿತನಾಗಿ ಮಂತ್ರಿ ದು
ಮ್ಮಾನದಿಂ ನಗರದ ಸಮೀಪಕೈತರೆ ವಾದ್ಯಘೋಷಿತಂ ಕಿವಿಯೊಳಿಡಿಯೆ
ಏನಿದುತ್ಸವಮೂರೊಳಗೆನೆ ಕಂಡವರ್ ನಿನ್ನ
ಸೂನು ಮದನಂ ಚಂದ್ರಹಾಸಂಗೆ ವಿಷಯೆಗೆ ವಿ
ಧಾನದಿಂ ಮದುವೆಯಂ ಮಾಡಿಸಿದಱೊಸಗೆ ಪೊಳಲೊಳಾದಪುದೆಂದರು ೨೦
ಪದ್ಯದ ಅನ್ವಯಕ್ರಮ:
ಮಾನವರ ತೆಱದೊಳ್ ಇಂತೆಂದು ಒರೆದು ಫಣಿ ಬಿಲಕೆ ತಾನ್ ಇಳಿಯೆ, ವಿಸ್ಮಿತನಾಗಿ ಕೇಳ್ದು, ಮಂತ್ರಿ ದುಮ್ಮಾನದಿಂ ನಗರದ ಸಮೀಪಕೆ ಐತರೆ, ವಾದ್ಯ ಘೋಷಿತಂ ಕಿವಿಯೊಳ್ ಇಡಿಯೆ, ಏನುದು ಉತ್ಸವಂ ಊರೊಳಗೆ ಎನೆ, ಕಂಡವರ್ ನಿನ್ನ ಸೂನು ಮದನಂ ಚಂದ್ರಹಾಸಂಗೆ ವಿಷಯೆಗೆ ವಿಧಾನದಿಂದ ಮದುವೆಯಂ ಮಾಡಿಸಿದರ ಒಸಗೆ ಪೊಳಲೊಳ್ ಆದಪುದು ಎಂದರು.
ಪದ-ಅರ್ಥ:
ತೆಱದೊಳ್-ರೀತಿಯಲ್ಲಿ; ಇಂತೆಂದು-ಹೀಗೆಂದು; ಒರೆದು-ತಿಳಿಸಿ; ಫಣಿ-ಹಾವು; ವಿಸ್ಮಿತನಾಗಿ –ಆಶ್ಚರ್ಯಚಕಿತನಾಗಿ; ದುಮ್ಮಾನದಿಂ- ಮನಸ್ಸಿನ ತಳಮಳದಿಂದ; ಐತರೆ-ಆಗಮಿಸಲು; ಕಿವಿಯೊಳಿಡಿಯೆ-ಕಿವಿಯಲ್ಲಿ ಜಡಿದಂತಾಗಿ; ಸೂನು-ಮಗ; ವಿಧಾನದಿಂ-ವಿಧಿಪೂರ್ವಕವಾಗಿ; ಒಸಗೆ-ಶುಭ ಸಮಾಚಾರ; ಪೊಳಲ್-ಪಟ್ಟಣ.
ಮನುಷ್ಯರ ರೀತಿಯಲ್ಲಿ ಹೀಗೆಂದು (ಇದುವರೆಗೂ ನಿನ್ನ ಆಲಯದಲ್ಲಿ ಸಂಪತ್ತನ್ನು ಕಾಯ್ದುಕೊಂಡಿದ್ದೆನು. ಈಗ ನಿನ್ನ ಮಗ ಮದನನಿಂದ ಅದು ನಷ್ಟವಾಯಿತು) ಹೇಳಿ ಹಾವು ತನ್ನ ಬಿಲವನ್ನು ಪ್ರವೇಶಿಸಿದಾಗ, ಆ ಮಾತುಗಳನ್ನು ಕೇಳಿದ ಮಂತ್ರಿ ದುಷ್ಟಬುದ್ಧಿ ಆಶ್ಚರ್ಯಚಕಿತನಾಗಿ, ಮನಸ್ಸಿನ ತಳಮಳದಿಂದ ಪಟ್ಟಣದ ಸಮೀಪಕ್ಕೆ ಬರುತ್ತಿರಲು, ಪಟ್ಟಣದಲ್ಲಿ ನಡೆಯುತ್ತಿದ್ದ ವಾದ್ಯಘೋಷಗಳು ಆತನ ಕಿವಿಯಲ್ಲಿ ಜಡಿದಂತಾಗಿ, ’ಊರಿನಲ್ಲಿ ಏನಿದು ಉತ್ಸವ?’ ಎಂದು ಕೇಳಿದಾಗ ಪ್ರಜೆಗಳು, ’ನಿನ್ನ ಮಗ ಮದನ ವಿಧಿಪೂರ್ವಕವಾಗಿ ಚಂದ್ರಹಾಸನಿಗೂ ವಿಷಯೆಗೂ ಮದುವೆಮಾಡಿಸಿದ್ದಾನೆ. ಅದರ ಶುಭಸಮಾಚಾರವೇ ಪಟ್ಟಣದಲ್ಲಿ ತುಂಬಿಕೊಂಡಿದೆ’ ಎಂದರು.
ಕೂರ್ದಸಿಯನಿಳುಹಿದಂತಾಯ್ತು ಕರ್ಣದೊಳಾಗ
ಕಾರ್ದುವಕ್ಷಿಗಳರುಣತೆಯನುಗ್ರಕೋಪದಿಂ
ಮೀರ್ದನೇ ತನ್ನ ನೇಮವನಕಟ ಮಗನೆಂದು ಪಲ್ಗಡಿಯುತೈತರಲ್ಕೆ
ಸಾರ್ದ ಸಂತೋಷದಿಂ ಬಂದು ಕಾಲ್ಗೆಱಗಿದೊಡೆ
ಚೀರ್ದು ಸುತನಂ ಬೈದು ಮಂತ್ರಿ ನಿಜಸದನಮಂ
ಸೇರ್ದು ಪೊನ್ನಂದಣಮಿನಿಳಿದಾತ್ಮಜಾತನಂ ನೋಡಿ ಮುಳಿದಿಂತೆಂದನು ೨೧
ಪದ್ಯದ ಅನ್ವಯಕ್ರಮ:
ಆಗ ಕರ್ಣದೊಳ್ ಕೂರ್ದ ಅಸಿಯನ್ ಇಳುಹಿದಂತಾಯ್ತು, ಉಗ್ರಕೋಪದಿಂ ಅಕ್ಷಿಗಳ್ ಅರುಣತೆಯನ್ ಕಾರ್ದುವು, ಮಗನ್ ತನ್ನ ನೇಮವನ್ ಮೀರ್ದನೇ ಅಕಟ ಎಂದು ಪಲ್ ಕಡಿಯುತ್ತ ಐತರಲ್ಕೆ, ಸಾರ್ದ ಸಂತೋಷದಿಂ ಬಂದು ಕಾಲ್ಗೆ ಎಱಗಿದೊಡೆ ಚೀರ್ದು ಸುತನಂ ಬೈದು, ಮಂತ್ರಿ ನಿಜಸದನಮಂ ಸೇರ್ದು ಪೊನ್ನ ಅಂದಣಮನ್ ಇಳಿದ ಆತ್ಮಜಾತನಂ ನೋಡಿ ಮುಳಿದು ಇಂತೆಂದನು.
ಪದ-ಅರ್ಥ:
ಕೂರ್ದ-ಹರಿತವಾದ; ಅಸಿ-ಖಡ್ಗ, ಕತ್ತಿ; ಇಳುಹು-ಚುಚ್ಚು; ಕರ್ಣ-ಕಿವಿ; ಕಾರ್ದುವು-ಕಾರಿದವು; ಅಕ್ಷಿಗಳ್ –ಕಣ್ಣುಗಳು; ಅರುಣತೆಯನ್-ರಕ್ತವನ್ನು; ಮೀರ್ದನ್-ಮೀರಿದನು; ನೇಮ- ಕರ್ತವ್ಯ; ಪಲ್ಗಡಿಯುತ-ಹಲ್ಲನ್ನು ಕಡಿಯುತ್ತ; ಐತರಲ್ಕೆ-ಆಗಮಿಸಲು; ಸಾರ್ದ-ಉಂಟಾದ; ಚೀರ್ದು-ಚೀರಿ; ನಿಜಸದನ-ತನ್ನ ಮನೆ; ಪೊನ್ನಂದಣ-ಹೊನ್ನಿನ ಪಲ್ಲಕ್ಕಿ; ಆತ್ಮಜಾತ-ಮಗ; ಮುಳಿದು-ಸಿಟ್ಟುಗೊಂಡು.
ಪುರಜನರ ಮಾತುಗಳನ್ನು ಕೇಳಿದಾಗ ದುಷ್ಟಬುದ್ಧಿಗೆ ಕಿವಿಗಳಲ್ಲಿ ಹರಿತವಾದ ಖಡ್ಗವನ್ನು ಚುಚ್ಚುದಂತಾಯಿತು. ಆತನ ಕಣ್ಣುಗಳು ಭಯಂಕರವಾದ ಕೋಪದಿಂದ ರಕ್ತವನ್ನೇ ಕಾರಿದವು. ಮಗ ಮದನ ತನ್ನ ಕರ್ತವ್ಯವನ್ನು ಮೀರಿದನೇ? ಎಂದು ಕೋಪದಿಂದ ಹಲ್ಲುಗಳನ್ನು ಕಟಕಟಿಸುತ್ತ ಬರುತ್ತಿರಲು, ಮದನ ತಂದೆಯನ್ನು ಕಂಡು ತನ್ನಲ್ಲಿ ಉಂಟಾದ ಸಂತೋಷದಿಂದ ತಂದೆಯ ಕಾಲಿಗೆ ನಮಸ್ಕರಿಸಿದಾಗ ದುಷ್ಟಬುದ್ಧಿ ಚೀರುತ್ತ ಮಗನನ್ನು ಬೈದು, ತನ್ನ ಮನೆಯನ್ನು ಸೇರಿಕೊಂಡಾಗ ತನ್ನ ಮಗ ಚಿನ್ನದ ಪಲ್ಲಕ್ಕಿಯಲ್ಲಿ ಬಂದು ಮನೆಯ ಮುಂದೆ ಇಳುದುದನ್ನು ನೋಡಿ ಮತ್ತೆ ಸಿಟ್ಟಾಗಿ ಹೀಗೆಂದನು.
ಮೂಢ ನೀನೆಲನೆಲವೊ ಮದನ ನಿನ್ನೆಡೆಗೆ ನಾಂ
ಗೂಢದಿಂ ಬರೆಸಿ ಕಳುಹಿದೊಡುರುವ ಕಜ್ಜಮಂ
ರೂಢಿಯಿಂ ಮಾಡಿ ಕೆಡಿಸಿದೆ ಪಾಪಿ ಹೃದಯಶೂಲವೆನೆನಗೆ ಮೇದಿನಿಯೊಳು
ಗಾಢದಿಂ ಬಲಿದೆ ಸಾಮ್ರಾಜ್ಯ ಸಿಂಹಾಸನಾ
ರೂಢನಾಗಿರಲೊಲ್ಲದಾರ್ಜಿಸಿದ ವಿತ್ತಮಂ
ವೇಡೈಸಿದಖಿಳಜನಕಿತ್ತೆ ವನವಾಸವೇ ಗತಿ ನಿನಗೆ ಹೋಗೆಂದನು ೨೨
ಪದ್ಯದ ಅನ್ವಯಕ್ರಮ:
ಎಲನೆಲವೊ ಮದನ ನೀನ್ ಮೂಢನ್, ನಾಂ ನಿನ್ನೆಡೆಗೆ ಗೂಢದಿಂ ಉರುವ ಕಜ್ಜಮಂ ಬರೆಸಿ ಕಳುಹಿದೊಡೆ ರೂಢಿಯಿಂ ಮಾಡಿ ಕೆಡಿಸಿದೆ, ಪಾಪಿ, ಹೃದಯಶೂಲವೆನ್ ಎನಗೆ ಮೇದಿನಿಯೊಳು ಗಾಢದಿಂ ಬಲಿದೆ, ಸಾಮ್ರಾಜ್ಯ ಸಿಂಹಾಸನವನ್ ಆರೂಢನಾಗಿರಲ್ ಒಲ್ಲದೆ ಆರ್ಜಿಸಿದ ವಿತ್ತಮಂ ವೇಡೈಸಿದ ಅಖಿಳಜನಕ್ಕಿತ್ತೆ, ನಿನಗೆ ವನವಾಸವೇ ಗತಿ ಹೋಗೆಂದನು.
ಪದ-ಅರ್ಥ:
ಮೂಢ-ಮೂರ್ಖ; ನಿನ್ನೆಡೆಗೆ-ನಿನ್ನಲ್ಲಿಗೆ; ಗೂಢದಿಂ-ಗೌಪ್ಯವಾಗಿ; ಉರುವಕಜ್ಜ-ಶ್ರೇಷ್ಠವಾದ ಕೆಲಸ; ಹೃದಯಶೂಲ-ಎದೆನೋವು; ಮೇದಿನಿ-ಭೂಮಿ; ಗಾಢದಿಂ-ವಿಶೇಷವಾಗಿ; ಬಲಿದೆ-ಭದ್ರಪಡಿಸಿದೆ; ಆರೂಢನಾಗಿರಲ್-ಏರಿಕೊಂಡಿರಲು; ಒಲ್ಲದೆ-ಇಷ್ಟಪಡದೆ; ಆರ್ಜಿಸಿದ-ಸಂಪಾದಿಸಿದ; ವಿತ್ತ-ಹಣ, ಸಂಪತ್ತು; ವೇಡೈಸಿದ-ಸುತ್ತುವರಿದ, ಹಿಂಬಾಲಿಸಿದ; ಅಖಿಳ-ಸಮಸ್ತ.
ಎಲವೋ ಮದನ, ನೀನು ಮೂರ್ಖನೇ ಸರಿ. ನಾನು ನಿನ್ನಲ್ಲಿಗೆ ಗೌಪ್ಯವಾಗಿ ಬರೆದು ಕಳುಹಿಸಿದ ಶ್ರೇಷ್ಠವಾದ ಕಾರ್ಯವನ್ನು ಅದಕ್ಕೆ ತದ್ವಿರುದ್ಧ ರೀತಿಯಲ್ಲಿ ಮಾಡಿ ನನ್ನ ಉದ್ದೇಶವನ್ನೇ ಕೆಡಿಸಿದೆ. ಪಾಪಿ ನೀನು. ನಿನ್ನಿಂದ ನಾನು ಎದೆನೋವನ್ನು ಅನುಭವಿಸುವಂತಾಯಿತು. ಈ ಭೂಮಿಯಲ್ಲಿ ನಾನು ನಿನಗಾಗಿ ಅತ್ಯಂತ ವಿಶೇಷವಾಗಿ ಸಾಮ್ರಾಜ್ಯವನ್ನು ಭದ್ರಪಡಿಸಿದೆ. ನೀನು ಆ ಸಿಂಹಾಸನವನ್ನು ಏರುವುದಕ್ಕೆ ಇಷ್ಟಪಡದೆ, ನಾನು ಕಷ್ಟಪಟ್ಟು ಸಂಪಾದಿಸಿದ ಸಂಪತ್ತೆಲ್ಲವನ್ನೂ ನಿನ್ನನ್ನು ಹಿಂಬಾಲಿಸಿದ ಜನಗಳಿಗೆ ದಾನಮಾಡಿದೆ. ನಿನಗಿನ್ನು ವನವಾಸವೇ ಗತಿ ಹೋಗು ಎಂದನು.
ಪಿತನ ಮಾತಂ ಕೇಳ್ದು ಮದನನುರೆ ಬೆಱಗಾಗಿ
ಖತಿಯೇಕೆ ಜೀಯ ನಿಮ್ಮಡಿಗಳ ನಿರೂಪಮಂ
ಪ್ರತಿಪಾಲಿಸಿದೆನಲ್ಲದಾನತಿಕ್ರಮಿಸಿ ಮಾಡಿದ ಕಜ್ಜಮೇನಿದಱೊಳು
ಕ್ಷಿತಿಗೆ ಕೌತುಕವೆ ತಂದೆಯ ಮಾತಿಗಾಗಿ ರಘು
ಪತಿ ವರ್ತಿಸನೆ ವಿಪಿನವಾಸದೊಳ್ ಪತ್ರಸಂ
ಮತಿವಿಡಿದು ವಿಷಯೆಗೆ ವಿವಾಹಮಂ ವಿರಚಿಸಿದೊಡಾಯ್ತೆನಗೆ ವನವೆಂದನು ೨೩
ಪದ್ಯದ ಅನ್ವಯಕ್ರಮ:
ಪಿತನ ಮಾತಂ ಕೇಳ್ದು ಮದನನ್ ಉರೆ ಬೆಱಗಾಗಿ ಜೀಯ ಖತಿಯೇಕೆ? ನಿಮ್ಮಡಿಗಳ ನಿರೂಪಮಂ ಪ್ರತಿಪಾಲಿಸಿದೆನ್ ಅಲ್ಲದೆ ಇದಱೊಳು ಆನ್ ಅತಿಕ್ರಮಿಸಿ ಮಾಡಿದ ಕಜ್ಜಂ ಏನ್? ಕ್ಷಿತಿಗೆ ಕೌತುಕವೆ? ತಂದೆಯ ಮಾತಿಗಾಗಿ ರಘುಪತಿ ವಿಪಿನವಾಸದೊಳ್ ವರ್ತಿಸನೆ? ಪತ್ರ ಸಂಮತಿ ಪಿಡಿದು ವಿಷಯೆಗೆ ವಿವಾಹಮಂ ವಿರಚಿಸಿದೊಡೆ ಎನಗೆ ವನವಾಯ್ತು ಎಂದನು.
ಪದ-ಅರ್ಥ:
ಪಿತ-ತಂದೆ; ಉರೆ-ಅತಿಯಾಗಿ; ಖತಿ-ಸಿಟ್ಟು; ಜೀಯ-ಒಡೆಯ; ನಿಮ್ಮಡಿಗಳ-ನಿನ್ನ ಅಪೇಕ್ಷೆಯ; ನಿರೂಪ-ಆಜ್ಞೆ; ಪ್ರತಿಪಾಲಿಸು-ಈಡೇರಿಸು; ಅತಿಕ್ರಮಿಸಿ-ಮೀರಿ; ಕಜ್ಜ-ಕಾರ್ಯ, ಕೆಲಸ; ಕ್ಷಿತಿ-ಭೂಮಿ; ಕೌತುಕ-ಕುತೂಹಲ; ರಘುಪತಿ-ರಾಮ; ವಿಪಿನವಾಸ-ವನವಾಸ; ಪತ್ರಸಂಮತಿವಿಡಿದು-ಪತ್ರದಲ್ಲಿನ ಮಾತಿನಂತೆ; ವಿರಚಿಸಿದೊಡೆ-ನೆರವೇರಿಸಿದರೆ.
ತಂದೆ ದುಷ್ಟಬುದ್ಧಿಯ ಮಾತುಗಳನ್ನು ಕೇಳಿ ಮದನನು ಅತ್ಯಂತ ಬೆರಗಾಗಿ, ಒಡೆಯ, ಸಿಟ್ಟೇಕೆ? ನಿಮ್ಮ ಅಪೇಕ್ಷೆಯಂತೆಯೇ ನಿಮ್ಮಾಜ್ಞೆಯನ್ನು ನಾನು ನೆರವೇರಿಸಿದೆನು. ಅಲ್ಲದೆ ಇದರಲ್ಲಿ ನಾನು ಮಿತಿಮೀರಿ ವರ್ತಿಸಿದ ಕೆಲಸವಾದರೂ ಏನಿದೆ? ತಂದೆಯ ಮಾತಿನ ಪ್ರಕಾರವಾಗಿ ರಾಮ ಅಂದು ಹದಿನಾಲ್ಕು ವರ್ಷಗಳ ಕಾಲ ವನವಾಸವನ್ನು ಅನುಭವಿಸಿಲ್ಲವೇ? ನಿಮ್ಮ ಪತ್ರದ ಆಜ್ಞೆಯನ್ನು ನಂಬಿ ತಂಗಿಯಾದ ವಿಷಯೆಗೆ ಮದುವೆಯನ್ನು ನೆರವೇರಿಸಿದರೆ ನನಗೂ ವನವಾಸವೇ ಗತಿಯಾಯಿತಲ್ಲ! ಎಂದನು.
ಗನ್ನಗತಕದ ಮಾತು ಸಾಕೆನ್ನ ಕಣ್ಣ ಮುಂ
ದಿನ್ನಿರದೆ ಹೋಗೆಂದು ಮಂತ್ರಿ ಮಗನಂ ಬೈದು
ಮುನ್ನ ತಾಂ ಬರೆಸಿ ಕಳುಹಿದ ಪತ್ರಮಂ ತರಿಸಿ ನೋಡಿಕೊಂಡದಱೊಳಿರ್ದ
ಭಿನ್ನಿಸಿದ ಭಾವಾರ್ಥಮಂ ತಿಳಿದು ತಪ್ಪಿಲ್ಲ
ವೆನ್ನ ತನಯನೊಳಿನ್ನು ಲೋಕದೊಳ್ ವಿಧಿಲಿಖಿತ
ಮುನ್ನಿವಾರಿಪರುಂಟೆ ಶಿವಶಿವ ಪೊಸತೆಂದು ಬಿಸುಸುಯ್ದು ಬೆಱಗಾದನು ೨೪
ಪದ್ಯದ ಅನ್ವಯಕ್ರಮ:
ಗನ್ನಗತಕದ ಮಾತು ಸಾಕು, ಇನ್ನು ಎನ್ನ ಕಣ್ಣ ಮುಂದಿರದೆ ಹೋಗು ಎಂದು ಮಂತ್ರಿ ಮಗನಂ ಬೈದು, ಮುನ್ನ ತಾಂ ಬರೆಸಿ ಕಳುಹಿದ ಪತ್ರಮಂ ತರಿಸಿ ನೋಡಿಕೊಂಡು, ಅದಱೊಳ್ ಇರ್ದ ಭಿನ್ನಿಸಿದ ಭಾವಾರ್ಥಮಂ ತಿಳಿದು, ಎನ್ನ ತನಯನೊಳ್ ತಪ್ಪಿಲ್ಲ, ಇನ್ನು ಲೋಕದೊಳ್ ವಿಧಿಲಿಖಿತ ಮುನ್ನ ನಿವಾರಿಪರುಂಟೆ ಶಿವಶಿವ ಪೊಸತೆಂದು ಬಿಸುಸುಯ್ದು ಬೆಱಗಾದನು.
ಪದ-ಅರ್ಥ:
ಗನ್ನಗತಕ-ಮೋಸ; ಮುನ್ನ-ಹಿಂದೆ; ಭಿನ್ನಿಸಿದ-ವ್ಯತ್ಯಾಸಗೊಂಡ; ತನಯ-ಮಗ; ಮುನ್ನ –ಮೊದಲು; ನಿವಾರಿಪರ್-ನಿವಾರಿಸುವವರು; ಬಿಸುಸುಯ್ದು-ನಿಟ್ಟುಸಿರುಬಿಟ್ಟು.
ಮೋಸದ ಮಾತು ಸಾಕು, ಇನ್ನು ನನ್ನ ಕಣ್ಣ ಮುಂದೆ ಇರದೆ ಹೊರಟುಹೋಗು ಎಂದು ಮಂತ್ರಿ ಮಗನನ್ನು ಬೈದು, ಈ ಹಿಂದೆ ತಾನು ಬರೆಸಿ ಕಳುಹಿಸಿದ ಪತ್ರವನ್ನು ತರಿಸಿಕೊಂಡು ಓದಿ ಅದರಲ್ಲಿರುವ ವ್ಯತ್ಯಾಸಗೊಂಡ ಭಾವಾರ್ಥವನ್ನು ಅರಿತುಕೊಂಡು, ತನ್ನ ಮಗ ಮದನನಲ್ಲಿ ಯಾವ ತಪ್ಪೂ ಇಲ್ಲ, ಲೋಕದಲ್ಲಿ ವಿಧಿಲೀಲೆಗಳನ್ನು ನಿವಾರಿಸಿಕೊಳ್ಳುವುದಕ್ಕೆ (ತಪ್ಪಿಸುವುದಕ್ಕೆ) ಸಾಧ್ಯವೇ? ಶಿವಶಿವ ಇದು ಹೊಸತು ಎಂದು ದುಷ್ಟಬುದ್ಧಿ ನಿಟ್ಟುಸಿರು ಬಿಟ್ಟು ಬೆರಗಾದನು.
(೩ನೆಯ ಭಾಗದಲ್ಲಿ ಮುಂದುವರಿದಿದೆ)
You have remarked very interesting details! ps nice web site.Raise your business