(ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ಬಿ.ಕಾಂ.(ಎನ್ ಇ ಪಿ) ಮೊದಲನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ-ಭಾಗ-೧)
ಕನ್ನಡದ ಆದ್ಯಗ್ರಂಥ ಕವಿರಾಜಮಾರ್ಗ. ಇದರ ಕರ್ತೃವಿನ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಇದನ್ನು ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗ ರಚಿಸಿದನೇ? ಅಥವಾ ಆತನ ಆಸ್ಥಾನಕವಿ ಶ್ರೀವಿಜಯ ರಚಿಸಿದನೇ? ಎಂಬ ಗೊಂದಲವನ್ನು ನಿವಾರಿಸಿಕೊಳ್ಳುವುದಕ್ಕೆ ಇದನ್ನು ರಚಿಸಿದವನು ಕವಿರಾಜಮಾರ್ಗಕಾರ ಎಂದೂ ಸಾಕಷ್ಟು ಮಂದಿ ಉಲ್ಲೇಖಿಸಿದ್ದಾರೆ. ಆದರೆ ಇದರ ಕರ್ತೃ ಅಮೋಘವರ್ಷ ನೃಪತುಂಗನ ಆಶ್ರಯದಲ್ಲಿದ್ದ ಶ್ರೀವಿಜಯನೆಂಬುದು ಸದ್ಯಕ್ಕೆ ಒಪ್ಪಿತವಾದ ವಿಚಾರ. ನೃಪತುಂಗ ಒಂಬತ್ತನೆಯ ಶತಮಾನದಲ್ಲಿ ಕರ್ನಾಟಕವನ್ನಾಳಿದುದರಿಂದ ಮತ್ತು ಶ್ರೀವಿಜಯ ಆತನ ಆಸ್ಥಾನಕವಿಯಾಗಿದ್ದುದರಿಂದ ಇದು ಒಂಬತ್ತನೆಯ ಶತಮಾನದಲ್ಲಿ ರಚನೆಯಾಗಿದೆ ಎಂದು ತಿಳಿಯಲಾಗಿದೆ. ಪೂರ್ವದ ಹಳೆಗನ್ನಡ ಭಾಷೆಯಲ್ಲಿ ರಚನೆಯಾಗಿರುವ ಈ ಕೃತಿಯು ದೋಷಾದೋಷಾನುವರ್ಣನನಿರ್ಣಯಂ, ಶಬ್ದಾಲಂಕಾರವರ್ಣನನಿರ್ಣಯಂ, ಹಾಗೂ ಅರ್ಥಾಲಂಕಾರ ಪ್ರಕರಣಂ ಎಂಬ ಮೂರು ಪರಿಚ್ಛೇದಗಳಿಂದ ಕೂಡಿದೆ. ಈ ಕೃತಿಯಲ್ಲಿ ಅದರ ಕರ್ತೃ ಶ್ರೀವಿಜಯನು ಕನ್ನಡ ನಾಡು, ನುಡಿಗಳಿಗೆ ಸಂಬಂಧಿಸಿದ ಹಾಗೂ ತನ್ನ ಕಾಲದ ಕಾವ್ಯಗಳ ಲಕ್ಷಣಗಳನ್ನು ಉಲ್ಲೇಖಿಸಿದ್ದಾನೆ. ಇದೊಂದು ಕಾವ್ಯಲಕ್ಷಣಗ್ರಂಥವಾಗಿದ್ದು, ಕನ್ನಡ ಸಾಹಿತ್ಯ, ಶಾಸ್ತ್ರ ವಿಚಾರಗಳ ಬಗಿಗೆನ ಹಲವಾರು ವಿಷಯಗಳ ಮೇಲೆ ಬೆಳಕುಚೆಲ್ಲುತ್ತದೆ. ಕನ್ನಡ ಭಾಷೆ ಹಾಗೂ ಸಾಹಿತ್ಯಗಳ ಚರಿತ್ರೆಯನ್ನು ಅರಿಯುವಲ್ಲಿಯೂ ಈ ಗ್ರಂಥ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ.
ಇಲ್ಲಿ ಆಯ್ದುಕೊಂಡಿರುವ ಭಾಗದಲ್ಲಿ ಕನ್ನಡ ನಾಡು, ನುಡಿಗಳಿಗೆ ಸಂಬಂಧಿಸಿದ ಹದಿನೆಂಟು ಕಂದಪದ್ಯಗಳಿವೆ. ಇದು ಕನ್ನಡನಾಡಿನ ವ್ಯಾಪ್ತಿ, ಅದರ ವಿಶೇಷತೆ, ಕವಿಗಳು, ಕನ್ನಡಭಾಷೆಯ ವಿಶೇಷತೆ ಹಾಗೂ ವೈವಿಧ್ಯ, ಕನ್ನಡಿಗರ ಜಾಣ್ಮೆ ಮೊದಲಾದ ವಿಷಯಗಳನ್ನು ಒಳಗೊಂಡಿದೆ.
ಬಗೆಬಗೆದು ಕೇಳ್ದು ಬುಧರೊಲ
ವೊಗೆದಿರೆ ಹೃದಯದೊಳೆ ತಾಳ್ದಿ ಮಣಿಹಾರಂಬೋಲ್
ಸೊಗಯಿಸುವ ವಚನವಿರಚನೆ
ನೆಗೞ್ದುಂ ಭಾವಿಸುವೊಡದಱ ಪೆಂಪತಿಸುಲಭಂ ೧
ಪದ್ಯದ ಅನ್ವಯಕ್ರಮ:
ಬಗೆ ಬಗೆದು ಕೇಳ್ದು ಬುಧರ ಒಲವು ಒಗೆದು ಇರೆ ಹೃದಯದೊಳೆ ತಾಳ್ದಿ ಮಣಿಹಾರಂಬೋಲ್ ಭಾವಿಸುವೊಡೆ ಸೊಗಯಿಸುವ ವಚನ ವಿರಚನೆ ನೆಗೞ್ದುಂ ಅದಱ ಪೆಂಪು ಅತಿ ಸುಲಭಂ.
ಪದ-ಅರ್ಥ:
ಬಗೆಬಗೆದು-ಮನಸ್ಸಿಟ್ಟು, ಮನಸ್ಸನ್ನು ಕೇಂದ್ರೀಕರಿಸಿ; ಬುಧರೊಲವೊಗೆದಿರೆ (ಬುಧರ+ ಒಲವು+ ಒಗೆದು +ಇರೆ)=ಪ್ರಾಜ್ಞರ ವಿಚಾರಗಳು ಒಳ(ಮನಸ್ಸನ್ನು)ಪ್ರವೇಸಿಸದೆ ಇದ್ದರೆ; ಹೃದಯದೊಳೆ-ಎದೆಯ ಮೇಲೆ; ಮಣಿಹಾರಂಬೋಲ್-ಮಣಿಗಳಿಂದ ಶೋಭಿತವಾದ ಹಾರದಂತೆ; ಸೊಗಯಿಸು-ಶೋಭಿಸು; ವಚನವಿರಚನೆ-ಮಾತುಗಳ ರಚನೆ, ಮಾತುಗಳ ವಿನ್ಯಾಸ; ನೆಗೞ್ದುಂ-ಕೈಕೊಂಡು, ಸ್ವೀಕರಿಸಿ; ಭಾವಿಪೊಡೆ-ಪರಿಭಾವಿಸಿದರೆ, ವಿಮರ್ಶಿಸಿದರೆ; ಪೆಂಪು-ಘನತೆ, ಕೀರ್ತಿ; ಅತಿಸುಲಭಂ-ಸುಲಭಸಾಧ್ಯ.
ಮನಸ್ಸನ್ನು ಕೇಂದ್ರೀಕರಿಸಿಕೊಂಡು ಪ್ರಾಜ್ಞರ ವಿಚಾರಗಳನ್ನು ಕೇಳಿದರೂ ಅವು ನಮ್ಮ ಮನಸ್ಸನ್ನು ಪ್ರವೇಶಿಸದೇ ಇದ್ದರೆ ಅವು ಮನುಷ್ಯನ ಎದೆಯ ಮೇಲೆ ಶೋಭಿಸುವ ಮಣಿಹಾರದಂತಿರುತ್ತವೆ. ಪ್ರಾಜ್ಞರ ಮಾತುಗಳನ್ನು ಅವುಗಳ ಅರ್ಥವನ್ನು ಮನಸ್ಸಿಟ್ಟು ಕೇಳಿ ಪರಿಭಾವಿಸುವುದಾದರೆ ಅವರ ಮಾತುಗಳ ರಚನೆ, ವಿನ್ಯಾಸಗಳು ನಮ್ಮ ಮನಸ್ಸನ್ನು ಪ್ರವೇಸಿಸಿ ಅವುಗಳ ಘನತೆ, ಕೀರ್ತಿಗಳು ಅತ್ಯಂತ ಸುಲಭವಾಗಿ ಪರಿಣಾಮಕಾರಿಯಾಗುತ್ತವೆ.
(ಪ್ರಾಜ್ಞರ, ಗುರುಗಳ, ಹಿರಿಯರ, ಮೇಧಾವಿಗಳ ಮಾತುಗಳನ್ನು ಕೇವಲ ಕೇಳುವುದರಿಂದ ಅಥವಾ ಸುಮ್ಮನೆ ಆಲಿಸುವುದರಿಂದ ಅವುಗಳ ಅರ್ಥಸ್ವಾರಸ್ಯ, ಮರ್ಮ, ರಸಾನುಭವ ನಮ್ಮ ಮನಸ್ಸಿಗೆ ಗೋಚರಿಸಲಾರದು. ಹಾಗಾದಾಗ ಅಂತಹ ಮಾತುಗಳು ವ್ಯಕ್ತಿಯೊಬ್ಬ ತನ್ನ ಎದೆಯ ಮೇಲೆ ಅಲಂಕರಣಕ್ಕಾಗಿ, ಶೋಭೆಗಾಗಿ ಹಾಕಿಕೊಂಡಿರುವ ಮಣಿಹಾರದಂತಿರುತ್ತವೆ. ಮಣಿಹಾರವು ಕೇವಲ ನೋಡುಗರನ್ನು ರಂಜಿಸುತ್ತದೆಯೇ ವಿನಾ ತನಗಾಗಲೀ ನೋಡುವವರಿಗಾಗಲೀ ಯಾವ ಪರಿಣಾಮವನ್ನೂ ಉಂಟುಮಾಡಲಾರದು. ಕೇವಲ ನೋಟಕ್ಕೆ ಸೀಮಿತವಾಗುವ, ಕೇವಲ ಪ್ರತಿಷ್ಠೆಗೆ ಪೂರಕವಾಗುವ ಇಂತಹ ಅಲಂಕರಣದಿಂದ ಪ್ರಯೋಜನವಾದುದಾದರೂ ಏನು? ಎಂಬುದು ಕವಿರಾಜಮಾರ್ಗಕಾರನ ಪ್ರಶ್ನೆ. ಪ್ರಾಜ್ಞರ, ಗುರುಹಿರಿಯರ, ಕವಿಗಳ, ವಿದ್ವಾಂಸರ ಮಾತುಗಳೆಂದರೆ ಮನಸ್ಸಿಗೆ ಮಣಿಹಾರವಿದ್ದಂತೆ. ಅವು ಆಯಾ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಪರಿಣಾಮವನ್ನು ಬೀರುತ್ತವೆ. ರಸಾನುಭವಕ್ಕೆ ಕಾರಣವಾಗುತ್ತವೆ. ಸಂಸ್ಕಾರವನ್ನು ನೀಡುತ್ತವೆ. ಹಾಗಾಗಿ ಪ್ರಾಜ್ಞರ, ಅರಿತವರ, ಗುರುಗಳ, ಹಿರಿಯರ ಮಾತುಗಳನ್ನು ಮನಸ್ಸಿನೊಳಗೆ ಇಳಿಯುವಂತೆ ಸಾವಧಾನವಾಗಿ ಪರಿಭಾವಿಸಬೇಕು. ಹಾಗೆ ಪರಿಭಾವಿಸುವುದರಿಂದ ಅವರ ಮಾತುಗಳ ಅರ್ಥ, ಸ್ವಾರಸ್ಯ, ಹಿರಿಮೆಗರಿಮೆಗಳು ಸುಲಭವಾಗಿ ನಮ್ಮ ಮನಸ್ಸನ್ನು ಪ್ರವೇಶಿಸಿ ರಸಾನುಭವಕ್ಕೆ ಕಾರಣವಾಗುತ್ತದೆ ಎಂಬುದು ಕವಿರಾಜಮಾರ್ಗಕಾರನ ಅಭಿಪ್ರಾಯ.)
ಕುಱಿತಂತು ಪೆಱರ ಬಗೆಯಂ
ತೆಱೆದಿರೆ ಪೆಱರ್ಗಱಿಪಲಾರ್ಪವಂ ಮಾತಱಿವಂ
ಕಿಱಿದಱೊಳೆ ಪಿರಿದುಮರ್ಥಮ
ನಱಿಪಲ್ ನೆಱೆವಾತನಾತನಿಂದಂ ನಿಪುಣಂ ೨
ಪದ್ಯದ ಅನ್ವಯಕ್ರಮ:
ಅಂತು ಕುಱಿತು ಪೆಱರ ಬಗೆಯಂತೆ ಎಱೆದು ಇರೆ ಪೆಱರ್ಗೆ ಅಱಿಪಲ್ ಆರ್ಪವಂ ಮಾತು ಅಱಿವಂ, ಕಿಱಿದಱೊಳೆ ಪಿರಿದು ಅರ್ಥಮಂ ಅಱಿಪಲ್ ನೆಱೆವಾತನ್ ಆತನಿಂದಂ ನಿಪುಣಂ.
ಪದ-ಅರ್ಥ:
ಕುಱಿತಂತು-ಹಾಗೆ ಉದ್ದೇಶಿಸಿ; ಪೆಱರ-ಬೇರೆಯವರ; ಬಗೆಯಂ-ಮನಸ್ಸನ್ನು, ಆಂತರ್ಯವನ್ನು; ತೆಱೆದಿರೆ-ತೆರೆದುಕೊಳ್ಳುವಂತೆ, ಪೆಱರ್ಗೆ-ಅನ್ಯರಿಗೆ, ಬೇರೆಯವರಿಗೆ; ಅಱಿಪಲ್-ತಿಳಿಸಲು, ಮನದಟ್ಟುಮಾಡಿಸಲು; ಆರ್ಪಂ-ಸಮರ್ಥನಾದವನು; ಮಾತಱಿವಂ-ಮಾತು ಬಲ್ಲವನು; ಕಿಱಿದರೊಳೆ-ಕೆಲವೇ ಮಾತುಗಳಲ್ಲಿ, ಸಂಗ್ರಹಪೂರ್ಣ ಮಾತುಗಳಲ್ಲಿ; ಪಿರಿದರ್ಥಮಂ-ಹಿರಿದಾದ ಅರ್ಥವನ್ನು, ಗಹನವಾದ ಅರ್ಥವನ್ನು; ನೆಱೆವಾತಂ-ಸಾಮರ್ಥ್ಯವುಳ್ಳವನು, ಪ್ರತಿಭೆಯುಳ್ಳವನು; ನಿಪುಣಂ-ಜಾಣನು;
ಹಾಗೆ ಅನ್ಯರನ್ನು ಉದ್ದೇಶಿಸಿ ಮಾತನಾಡಿದಾಗ ಅವರ ಮನಸ್ಸು ಅಥವಾ ಅವರ ಆಂತರ್ಯ ತೆರೆದುಕೊಳ್ಳುವಂತೆ ಅನ್ಯರಿಗೆ ತನ್ನ ವಿಚಾರಗಳನ್ನು ಮನದಟ್ಟುಮಾಡಲು ಸಮರ್ಥನಾದವನು ಮಾತುಬಲ್ಲವನು ಎನಿಸಿಕೊಳ್ಳುತ್ತಾನೆ. ಕೆಲವೇ ಮಾತುಗಳಲ್ಲಿ ಸಂಗ್ರಹಪೂರ್ಣವಾಗಿ ಗಹನವಾದ ಅರ್ಥವನ್ನು ತುಂಬಿಸಿ ಹೇಳಬಲ್ಲವನು ಮಾತನ್ನು ಬಲ್ಲವನಿಗಿಂತಲೂ ಜಾಣನೆನಿಸಿಕೊಳ್ಳುತ್ತಾನೆ.
(ಮಾತನ್ನು ಆಡುವುದು ಸುಲಭ. ಹೀಗೆ ಆಡಿದ ಮಾತುಗಳು ಸಹೃದಯರ ಮನಸ್ಸನ್ನು ಪ್ರವೇಶಿಸದೆ ಹೋದರೆ, ಅಥವಾ ಅಂತಹ ಮಾತುಗಳಿಂದ ಸಹೃದಯರಲ್ಲಿ ಯಾವ ಪರಿಣಾಮವೂ ಉಂಟಾಗದೇ ಹೋದರೆ ಅಂತಹ ಮಾತುಗಳಿಂದ ಪ್ರಯೋಜನವಾದರೂ ಏನು? ಹೀಗೆ ಮಾತುಗಳನ್ನಾಡುವುದು ಮಾತುಬಲ್ಲವರ ಲಕ್ಷಣವಲ್ಲ. ಆದರೆ ಆಡಿದ ಮಾತು ಅನ್ಯರ ಮನಸ್ಸಿನೊಳಗೆ ನೆಲೆಗೊಳ್ಳುವಂತೆ ಮಾಡುವುದು ಸುಲಭಸಾಧ್ಯವಲ್ಲ. ಅನ್ಯರನ್ನು ಉದ್ದೇಶಿಸಿ ಮಾತನಾಡುವಾಗ ಅವರ ಮನಸ್ಸನ್ನು, ಅವರ ಆಸಕ್ತಿಯನ್ನು ಮೊದಲು ಅರ್ಥೈಸಿಕೊಳ್ಳಬೇಕು. ಹಾಗೆ ಅರ್ಥೈಸಿಕೊಂಡು ಆಡಿದ ಮಾತುಗಳು ಅನ್ಯರ ಆಂತರ್ಯವನ್ನು ತೆರೆಯಲು ಸಮರ್ಥವಾಗುತ್ತವೆ. ಹೀಗೆ ತಮ್ಮ ಮಾತುಗಳಿಂದ ಅನ್ಯರ ಮನಸ್ಸು ಹಾಗೂ ಅವರ ಆಂತರ್ಯ ತೆರೆಸುವವರು ಮಾತುಬಲ್ಲವರು ಎನಿಸಿಕೊಳ್ಳುತ್ತಾರೆ. ಇಂತಹವರ ಮಾತುಗಳು, ಅವುಗಳ ಲಾಲಿತ್ಯ, ಅವುಗಳ ಅರ್ಥವಂತಿಕೆಗಳು ಕೇಳುಗರನ್ನು ಸೆಳೆದು ಅವರ ಮನಸ್ಸಿನ ಮೇಲೆ ಪರಿಣಾಮವನ್ನು ಬೀರುತ್ತವೆ. ಮಾತುಗಳನ್ನು ಆಡುವಾಗಲೂ ಜಾಳುತನವಾಗಲೀ ಮಾತಿನ ದುಂದುಗಾರಿಕೆಯಾಗಲೀ ಸಲ್ಲದು. ಕಿರಿದಾದ ಮಾತುಗಳಲ್ಲಿ ಹಿರಿದಾದ ಅರ್ಥವನ್ನು ಅಥವಾ ಕೆಲವೇ ಮಾತುಗಳಲ್ಲಿ ಗಹನವಾದ ಅರ್ಥವನ್ನು ತುಂಬಿಹೇಳುವುದು ಒಂದು ವಿಶಿಷ್ಟ ನೈಪುಣ್ಯವೆನಿಸಿಕೊಳ್ಳುತ್ತದೆ. ಈ ನೈಪುಣ್ಯವೆಂಬುದು ಕೆಲವರಿಗೆ ಮಾತ್ರ ಸಿದ್ಧಿಸಿರುತ್ತದೆ. ಇಂತಹವರು ಮಾತು ಬಲ್ಲವರಿಗಿಂತಲೂ ಜಾಣರೆನಿಸಿಕೊಳ್ಳುತ್ತಾರೆ ಎಂಬುದು ಕವಿರಾಜಮಾರ್ಗಕಾರನ ಅಭಿಪ್ರಾಯ.)
ಮಾತಱಿವರ್ ಕೆಲಬರ್ ಜಗ
ತೀತಳಗತ ಮನುಜರೊಳಗೆ ಮಾತಱಿವವರೊಳ್
ನೀತಿವಿದರಮಲಕವಿತಾ
ನೀತಿಯುತರ್ ಕೆಲರೆ ಪರಮಕವಿವೃಷಭರ್ಕ್ಕಳ್ ೩
ಪದ್ಯದ ಅನ್ವಯಕ್ರಮ:
ಜಗತೀತಳ ಮನುಜರೊಳಗೆ ಕೆಲಬರ್ ಮಾತಱಿವರ್, ಮಾತು ಅಱಿವವರೊಳ್ ನೀತಿವಿದರ್ ಅಮಲ ಕವಿತಾ ನೀತಿಯುತರ್, ಪರಮ ಕವಿ ವೃಷಭರ್ಕ್ಕಳ್ ಕೆಲರೆ.
ಪದ-ಅರ್ಥ:
ಮಾತಱಿವರ್-ಮಾತು ಬಲ್ಲವರು, ಮಾತಿನ ಮರ್ಮವನ್ನು ತಿಳಿದವರು; ಕೆಲಬರ್-ಕೆಲವರು ಮಾತ್ರ; ಜಗತೀತಳ-ಭೂಮಿ, ಲೋಕ; ಮಾತಱಿವವರೊಳ್-ಮಾತುಗಳನ್ನು ಬಲ್ಲವರಲ್ಲಿ, ಮಾತುಗಳ ಮರ್ವವನ್ನು ತಿಳಿದವರಲ್ಲಿ; ನೀತಿವಿದರ್-ನೀತಿಯನ್ನು ಬಲ್ಲವರು, ನೀತಿಜ್ಞರು; ಅಮಲ ಕವಿತಾ ನೀತಿಯಿತರ್-ಪರಿಶುದ್ಧವಾದ ಕಾವ್ಯನೀತಿಯನ್ನು ಬಲ್ಲವರು, ಯೋಗ್ಯವಾದ ಕಾವ್ಯವನ್ನು ರಚಿಸಬಲ್ಲವರು; ಪರಮಕವಿವೃಷಭರ್ಕಳ್-ಶ್ರೇಷ್ಠ ಕವಿಶ್ರೇಷ್ಠರು, ಶ್ರೇಷ್ಠ ಕಾವ್ಯವಿಶಾರದರು; ಕೆಲರೆ-ಕೆಲವರು ಮಾತ್ರ.
ಈ ಲೋಕದ ಮನುಷ್ಯರಲ್ಲಿ ಕೆಲವರು ಮಾತುಗಳನ್ನು ಆಡಲು ಅರಿತವರು. ಯಾರು ಹೀಗೆ ಮಾತುಗಳನ್ನು ಆಡಲು ಅರಿತಿದ್ದಾರೋ ಅಂತಹವರಲ್ಲಿ ನೀತಿಯನ್ನು ಬಲ್ಲವರು, ಪರಿಶುದ್ಧವಾದ ಕಾವ್ಯನೀತಿಯನ್ನು ಬಲ್ಲವರು, ಹಾಗೂ ಶ್ರೇಷ್ಠ ಕವಿಶ್ರೇಷ್ಠರೆನಿಸಿಕೊಂಡವರು ಕೆಲವೇ ಮಂದಿ ಮಾತ್ರ.
(ಲೋಕದ ಜನರಲ್ಲಿ ಎಲ್ಲರಿಗೂ ಮಾತನ್ನಾಡಲು ತಿಳಿದಿರುವುದಾದರೂ ಅವರೆಲ್ಲರೂ ಮಾತು ಬಲ್ಲವರಲ್ಲ. ಕೇಳುಗರ ಮನಸ್ಸನ್ನು ಅರಿಯದೆ, ಅವರ ಇಷ್ಟಾನಿಷ್ಟಗಳನ್ನು ಪರಿಭಾವಿಸದೆ ಮನಸ್ಸಿಗೆ ಬಂದಂತೆ ಮಾತುಗಳನ್ನಾಡುವುದು ಮಾತರಿತವರ ಲಕ್ಷಣವಲ್ಲ. ಹಾಗಾಗಿ ಲೋಕದಲ್ಲಿ ಅನ್ಯರ ಮನಸ್ಸನ್ನು ಅರಿತು ಆಡುವವರು, ಮಾತುಗಳನ್ನು ಪರಿಣಾಮಕಾರಿಯಾಗಿ ಆಡುವವರು ಕೆಲವರು ಮಾತ್ರ. ಇಂತಹವರನ್ನು ಮಾತರಿತವರು, ಮಾತು ಬಲ್ಲವರು, ಮಾತಿನ ಜಾಣರು ಎಂದು ಕರೆಯುತ್ತಾರೆ. ಮಾತಿನ ನೀತಿಯನ್ನು ಬಲ್ಲವರಿಗೆ ಮಾತುಗಳನ್ನು ಹೇಗೆ ಆಡಬೇಕು? ಎಷ್ಟು ಆಡಬೇಕು? ಅನ್ಯರ ಮನಸ್ಸಿಗೆ ಪರಿಣಾಮವನ್ನುಂಟುಮಾಡಲು ಮಾತು ಹೇಗಿರಬೇಕು? ಎಂಬಿತ್ಯಾದಿ ವಿಚಾರಗಳ ಪರಿಕಲ್ಪನೆ ಇರುತ್ತದೆ. ಮಾರ್ಗಕಾರನು ಮಾತರಿತವರಲ್ಲಿ ಮೂರು ವರ್ಗಗಳನ್ನು ಗುರುತಿಸುತ್ತಾನೆ. ಮೊದಲನೆಯವರು, ಮಾತಿನ ನೀತಿಯನ್ನು ಬಲ್ಲವರು. ಇವರಿಗೆ ತಾವಾಡುವ ಮಾತುಗಳ ಪರಿಜ್ಞಾನವಿರುತ್ತದೆ. ಮಾತುಗಳ ಇತಿಮಿತಿಗಳು ತಿಳಿದಿರುತ್ತವೆ. ಪರಿಣಾಮಕಾರಿ ಸಂವಹನಕ್ಕೆ ಎಷ್ಟುಬೇಕೋ ಅಷ್ಟನ್ನು ಯುಕ್ತವಾಗಿ ಮಾತಾಡಬಲ್ಲರು. ಎರಡನೆಯವರು, ಪರಿಶುದ್ಧವಾದ ಕಾವ್ಯನೀತಿಯನ್ನು ಬಲ್ಲವರು. ಕಾವ್ಯಗಳ ಉದ್ದೇಶ, ಪರಿಣಾಮ, ಕಾವ್ಯಲಕ್ಷಣಗಳು ಮೊದಲಾದವುಗಳನ್ನು ಅರಿತು ಆಡುವವರು. ಕಾವ್ಯಗಳಲ್ಲಿನ ಲೋಪದೋಷಗಳನ್ನು ಪರಿಭಾವಿಸಬಲ್ಲವರು. ಮೂರನೆಯವರು, ಶ್ರೇಷ್ಠರಾದ ಕವಿಪುಂಗವರು. ಇವರು ಕಿರಿದಾದ ಮಾತುಗಳಲ್ಲಿ ಹಿರಿದಾದ ಅರ್ಥವನ್ನು ತುಂಬಿಹೇಳಬಲ್ಲವರು, ಕೇಳುಗರಲ್ಲಿ ರಸಾನುಭವವನ್ನು ಉಂಟುಮಾಡಬಲ್ಲವರು. ತಮ್ಮ ಶ್ರೇಷ್ಟವಾದ ಕಾವ್ಯಗಳಿಂದ ಲೋಕದಲ್ಲಿ ಹಿರಿದಾದ ಹಾಗೂ ಶಾಶ್ವತವಾದ ಸ್ಥಾನಮಾನಗಳನ್ನು ಗಳಿಸಿಕೊಂಡವರು. ಈ ಮೂರು ವರ್ಗದವರು ಲೋಕದಲ್ಲಿ ವಿರಳ ಎಂಬುದು ಮಾರ್ಗಕಾರನ ಅಭಿಪ್ರಾಯ.)
ಪಾಪಮಿದು ಪುಣ್ಯಮಿದು ಹಿತ
ರೂಪಮಿದಹಿತಪ್ರಕಾರಮಿದು ಸುಖಮಿದು ದುಃ
ಖೋಪಾತ್ತಮಿದೆಂದಱಿಪುಗು
ಮಾ ಪರಮ ಕವಿಪ್ರಧಾನರಾ ಕಾವ್ಯಂಗಳ್ ೪
ಪದ್ಯದ ಅನ್ವಯಕ್ರಮ:
ಇದು ಪಾಪಂ, ಇದು ಪುಣ್ಯಂ, ಇದು ಹಿತರೂಪಂ, ಇದು ಅಹಿತ ಪ್ರಕಾರಂ, ಇದು ಸುಖಂ, ಇದು ದುಃಖೋಪಾತ್ತಂ, ಎಂದು ಆ ಕವಿ ಪ್ರಧಾನರ ಆ ಕಾವ್ಯಂಗಳ್ ಅಱಿಪುಗುಂ.
ಪದ-ಅರ್ಥ:
ಪಾಪಮಿದು-ಇದು ಪಾಪಕ್ಕೆ ಕಾರಣವಾದುದು; ಪುಣ್ಯಮಿದು-ಇದು ಪುಣ್ಯಕ್ಕೆ ಕಾರಣವಾದುದು; ಹಿತರೂಪಮಿದು-ಇದು ಬದುಕಿಗೆ ಹಿತಕರವಾದುದು; ಅಹಿತಪ್ರಕಾರಮಿದು-ಇದು ಬದುಕಿಗೆ ಅಹಿತಕರವಾದುದು; ಸುಖಮಿದು-ಇದು ಸುಖಕರವಾದುದು; ದುಃಖೋಪಾತ್ತಮಿದು-ಇದು ದುಃಖಕ್ಕೆ ಕಾರಣವಾಗುವಂತಹುದು; ಎಂದಱಿಪುಗುಂ-ಎಂದು ತಿಳಿಸುತ್ತವೆ; ಪರಮ-ಶ್ರೇಷ್ಠ; ಕವಿಪ್ರಧಾನರ್-ಮುಖ್ಯಕವಿಗಳು, ಮಹಾಕವಿಗಳು.
ಲೋಕದಲ್ಲಿ ಕವಿಪ್ರಧಾನರ ಕಾವ್ಯಗಳು ಇದು ಪಾಪಾತ್ಮಕವಾದುದು, ಇದು ಪುಣ್ಯಪ್ರದವಾದುದು, ಇದು ಬದುಕಿಗೆ ಹಿತಕರವಾದುದು, ಇದು ಬದುಕಿಗೆ ಅಹಿತಕರವಾದುದು, ಇದು ಸುಖಕ್ಕೆ ಕಾರಣವಾದುದು, ಇದು ದುಃಖಕ್ಕೆ ಮೂಲವಾದುದು ಎಂದು ತಿಳಿಸುತ್ತವೆ.
(ಲೋಕದ ಜನರನ್ನು ತಿದ್ದುವ ಕಾಯಕ ಪ್ರಾಚೀನಕಾಲದಿಂದಲೂ ನಡೆದುಕೊಂಡು ಬಂದಿದೆ. ಅದು ಬೇರೆ ಬೇರೆ ರೀತಿಗಳಿಂದ, ಬೇರೆಬೇರೆ ಮಾಧ್ಯಮಗಳ ಮೂಲಕ ನಡೆದಿದೆ. ಈ ರೀತಿಯ ವ್ಯಕ್ತಿಸುಧಾರಣೆ ಹಾಗೂ ಆ ಮೂಲಕ ಸಮಾಜಸುಧಾರಣೆಯಲ್ಲಿ ಕಾವ್ಯಗಳು ಬಹಳ ಪ್ರಮುಖ ಪಾತ್ರವನ್ನು ವಹಿಸಿವೆ. ಇವು ಲೋಕದಲ್ಲಿ ಮನುಷ್ಯನ ಬದುಕಿಗೆ ಮಾರ್ಗದರ್ಶನಮಾಡುತ್ತವೆ. ಮನುಷ್ಯನ ಬದುಕಿಗೆ ಪಾಪಾತ್ಮಕವಾದುದು ಯಾವುದು? ಪುಣ್ಯಪ್ರದವಾದುದು ಯಾವುದು? ಮನುಷ್ಯನ ಬದುಕಿಗೆ ಹಿತಕರವಾದುದು ಯಾವುದು? ಅಹಿತಕರವಾದುದು ಯಾವುದು? ಮನುಷ್ಯನಿಗೆ ದುಃಖಕ್ಕೆ ಕಾರಣವಾದುದು ಯಾವುದು? ಸುಖಕ್ಕೆ ಕಾರಣವಾದುದು ಯಾವುದು? ಹೀಗೆ ಹಲವು ವಿಧಗಳಿಂದ ಎಚ್ಚರಿಕೆಯನ್ನು ಕೊಡುವುವಲ್ಲದೆ, ಕಾವ್ಯಗಳು ಮನುಷ್ಯನಿಗೆ ನೀತಿಯ ದರ್ಶನವನ್ನು ಮಾಡಿಸುತ್ತವೆ. ಆ ಮೂಲಕ ಮನುಷ್ಯನನ್ನು ಪಾಪಾತ್ಮಕವಾದ ಕಾರ್ಯಗಳಿಂದ ಪುಣ್ಯಪ್ರದವಾದ ಕಾರ್ಯಗಳ ಕಡೆಗೆ, ಅಹಿತಕಾರಕವಾದ ಕಾರ್ಯಗಳಿಂದ ಹಿತಕಾರಕವಾದ ಕಾರ್ಯಗಳೆಡೆಗೆ, ದುಃಖಾತ್ಮಕವಾದ ಕಾರ್ಯಗಳಿಂದ ಸುಖಾತ್ಮಕವಾದ ಕಾರ್ಯಗಳೆಡೆಗೆ ಕೊಂಡೊಯ್ಯುವ, ಆಮೂಲಕ ಮನುಷ್ಯರನ್ನು ತಿದ್ದುವ, ಅವರನ್ನು ನಡೆನುಡಿಗಳಿಗೆ ಸಂಸ್ಕಾರವನ್ನು ನೀಡುವ ಕಾರ್ಯವನ್ನು ಕಾವ್ಯಗಳು ಸಾಧಿಸುತ್ತವೆ. ಹೀಗಾಗಿ ಕವಿಶ್ರೇಷ್ಠರು ರಚಿಸಿರುವ ಕಾವ್ಯಗಳಿಗೆ ಲೋಕದಲ್ಲಿ ಬಹಳ ಮನ್ನಣೆ ಸಲ್ಲುತ್ತದೆ ಎಂಬುದು ಮಾರ್ಗಕಾರನ ನಿಲುವು.)
ಅಧಿಕೃತಸತ್ಪುರುಷಾರ್ಥ
ಪ್ರಧಾನಧರ್ಮಾರ್ಥಕಾಮಮೋಕ್ಷಂಗಳವಾ
ಬುಧಜನ ವಿವಿಕ್ತ ಕಾವ್ಯ
ಪ್ರಧಾರಿತಾರ್ಥಂಗಳಖಿಳಭುವನಹಿತಂಗಳ್ ೫
ಪದ್ಯದ ಅನ್ವಯಕ್ರಮ:
ಪ್ರಧಾನ ಧರ್ಮ ಅರ್ಥ ಕಾಮ ಮೋಕ್ಷ ಅಧಿಕೃತ ಸತ್ಪುರುಷಾರ್ಥಂಗಳ್, ಅವು ಬುಧಜನ ವಿವಿಕ್ತ ಕಾವ್ಯ ಪ್ರಧಾರಿತ ಅರ್ಥಂಗಳ್ ಅಖಿಳ ಭುವನ ಹಿತಂಗಳ್
ಪದ-ಅರ್ಥ:
ಅಧಿಕೃತ-ಪ್ರಮಾಣಭೂತವಾದ; ಸತ್ಪುರುಷ– ಯೋಗ್ಯ; ಅರ್ಥಪ್ರಧಾನ-ಅರ್ಥಗರ್ಭಿತವಾದ, ಅರ್ಥಪೂರ್ಣವಾದ; ಧರ್ಮಾರ್ಥಕಾಮಮೋಕ್ಷಂಗಳ್-ಚತುವಿಧ ಪುರುಷಾರ್ಥಗಳು; ಬುಧಜನ-ಪ್ರಾಜ್ಞರು, ತಿಳಿದವರು, ಮೇಧಾವಿಗಳು; ವಿವಿಕ್ತಕಾವ್ಯ-ಶ್ರೇಷ್ಠಕಾವ್ಯ; ಪ್ರಧಾರಿತ-ಪ್ರಧಾನವಾಗಿ ಹೊಂದಿರುವ, ಪ್ರಧಾನವಾಗಿ ಒಳಗೊಂಡಿರುವ; ಅರ್ಥಂಗಳ್-ಶಬ್ದಾರ್ಥಗಳು, ಅಭಿಪ್ರಾಯಗಳು; ಭುವನಹಿತಂಗಳ್-ಲೋಕಕ್ಕೆ ಹಿತವಾದವುಗಳು, ಲೋಕಕ್ಕೆ ಶುಭವನ್ನುಂಟು ಮಾಡುವಂತಹುಗಳು.
ಕಾವ್ಯಗಳು ಪ್ರಾಜ್ಞರೂ ಪ್ರಮಾಣಭೂತರೂ ಯೋಗ್ಯರೂ ಆದ ಕವಿಗಳಿಂದ ರಚನೆಗೊಂಡಿವೆ. ಇವು ಅರ್ಥಗರ್ಭಿತವಾಗಿಯೂ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳಿಂದಲೂ ಕೂಡಿಕೊಂಡಿವೆ. ಅಲ್ಲದೆ, ಮೇಧಾವಿಗಳಿಂದ ಶ್ರೇಷ್ಠಕಾವ್ಯಗಳೆಂಬ ಹೆಗ್ಗಳಿಕೆಯನ್ನು ಹೊಂದಿ, ಶಬ್ದಾರ್ಥಗಳನ್ನು ಪ್ರಧಾನವಾಗಿ ಒಳಗೊಂಡು ಲೋಕಕ್ಕೆ ಹಿತಕರವಾದವುಗಳು ಎನಿಸಿಕೊಂಡಿವೆ.
(ಕಾವ್ಯಗಳು ಸಾಮಾನ್ಯರಿಂದ ರಚನೆಯಾದವುಗಳಲ್ಲ. ಅವು ಮಾತು ಬಲ್ಲವರಿಂದ, ಪ್ರಾಜ್ಞರಿಂದ, ಪ್ರಮಾಣಭೂತರಿಂದ, ಯೋಗ್ಯರಿಂದ ರಚನೆಗೊಂಡಿವೆ. ಇಂತಹವರನ್ನು ಕವಿಗಳು ಎಂದು ಕರೆಯುತ್ತಾರೆ. ಇವರು ಮೇಧಾವಿಗಳೆನಿಸಿಕೊಂಡಿದ್ದಾರೆ. ಕೆಲವೇ ಮಾತುಗಳಲ್ಲಿ ಹಲವಾರು ಅರ್ಥಗಳನ್ನು ತುಂಬಿಹೇಳಬಲ್ಲವರು. ಕವಿಗಳು ಮಾತುಬಲ್ಲವರಾಗಿರುವುದರಿಂದ ಅವರು ರಚಿಸಿದ ಕಾವ್ಯಗಳೂ ಅರ್ಥಗರ್ಭಿತವೆನಿಸಿಕೊಳ್ಳುತ್ತವೆ. ಕವಿಗಳು ಪ್ರಮಾಣಭೂತರಾಗಿರುವುದರಿಂದ ಅವರ ಕಾವ್ಯಗಳು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ನಾಲ್ಕು ವಿಧದ ಪುರುಷಾರ್ಥಗಳನ್ನು ಒಳಗೊಂಡು ಸಹೃದಯರಿಗೆ ವಿಶೇಷವಾದ, ಅಲೌಕಿಕವಾದ ರಸಾನುಭವವನ್ನು ಕೊಡುತ್ತವೆ. ಪಾಪ, ಪುಣ್ಯಾದಿಗಳನ್ನು, ಹಿತಾಹಿತಗಳನ್ನು ಬೋಧಿಸುತ್ತವೆ, ಮಾರ್ಗದರ್ಶನ ಮಾಡುತ್ತವೆ. ಹೀಗೆ ಹಲವಾರು ಹೆಗ್ಗಳಿಕೆಗಳು ಕಾವ್ಯಗಳಿಗೆ ಇರುವುದರಿಂದ ಅಂತಹ ಕಾವ್ಯಗಳು ಲೋಕದಲ್ಲಿ ಶ್ರೇಷ್ಠಕಾವ್ಯಗಳು ಎನಿಸಿಕೊಂಡು ಮೆರೆಯುತ್ತವೆ. ಕಾವ್ಯಗಳು ಶಬ್ದಾರ್ಥಗಳ ಭಂಡಾರವೂ ರಸಾನುಭವಗಳ ಕಣಜವೂ ಆಗಿರುವುದರಿಂದ ಲೋಕಕ್ಕೆ ಹಿತಕಾರಿ ಎನಿಸಿಕೊಳ್ಳುತ್ತವೆ. ಇಂತಹ ಕಾವ್ಯಗಳನ್ನು ವಾಚನ, ಮನನಗಳ ಮೂಲಕ ಅವುಗಳಲ್ಲಿರುವ ಮನುಜಹಿತಕಾರಿ ಹಾಗೂ ಲೋಕಹಿತಕಾರಿಯಾದ ವಿಚಾರಗಳನ್ನು ಸಹೃದಯರು ಅರಿತು ಮಾತರಿತವರು ಎನಿಸಿಕೊಳ್ಳಬೇಕು. ಹಾಗಿದ್ದರೆ ಮಾತ್ರ ಕವಿಗಳ ಶ್ರಮವೂ ಸಾರ್ಥಕ, ಸಹೃದಯರ ವಾಚನಶ್ರಮವೂ ಸಾರ್ಥಕವೆನಿಸಿಕೊಳ್ಳುತ್ತದೆ.)
ಲೋಕದೊಳದಱಿಂ ಕಾವ್ಯ
ಸ್ವೀಕರಣೋದ್ಯುಕ್ತನಕ್ಕೆ ಕವಿ ತನ್ನಱಿವಂ
ತಾಕಲ್ಪಾಂತಸ್ಥಾಯಿ
ಶ್ರೀಕೀರ್ತಿವಧೂಪ್ರಧಾನವಲ್ಲಭನಕ್ಕುಂ ೬
ಪದ್ಯದ ಅನ್ವಯಕ್ರಮ:
ಕವಿ, ಲೋಕದೊಳ್ ಕಾವ್ಯ ಸ್ವೀಕರಣ ಉದ್ಯುಕ್ತನಕ್ಕೆ ತನ್ನ ಅಱಿವಂತೆ, ಅದಱಿಂ ಆ ಕಲ್ಪಾಂತಸ್ಥಾಯಿ ಶ್ರೀಕೀರ್ತಿ ವಧೂ ಪ್ರಧಾನ ವಲ್ಲಭನ್ ಅಕ್ಕುಂ.
ಪದ-ಅರ್ಥ:
ಲೋಕದೊಳ್-ಭೂಮಿಯಲ್ಲಿ; ಅದಱಿಂ– ಕಾವ್ಯರಚನೆಯಿಂದ; ಕಾವ್ಯಸ್ವೀಕರಣೋದ್ಯುಕ್ತನಕ್ಕೆ (ಕಾವ್ಯ+ ಸ್ವೀಕರಣ+ಉದ್ತ್ಯುಕ್ತನಕ್ಕೆ) –ಕಾವ್ಯವನ್ನು ಸ್ವೀಕರಿಸಲು ತೊಡಗುವುದಕ್ಕೆ, ಕಾವ್ಯಾಸ್ವಾದನಕ್ಕೆ ತೊಡಗುವುದಕ್ಕೆ; ತನ್ನ-ತಾನು(ವಿಭಕ್ತಿ ಪಲ್ಲಟ-ಪ್ರಥಮಾ ವಿಭಕ್ತಿಗೆ ಬದಲಾಗಿ ಷಷ್ಠೀ ವಿಭಕ್ತಿ ಪ್ರಯೋಗ); ಅಱಿವಂ– ತಿಳಿವಳಿಕೆಯನ್ನು ಹೊಂದುತ್ತಾನೆ, ಜ್ಞಾನವನ್ನು ಹೊಂದುತ್ತಾನೆ; ಕಲ್ಪಾಂತಸ್ಥಾಯಿ-ಕಲ್ಪಗಳವರೆಗೆ ಸ್ಥಿರವಾಗಿರುವಂತಹುದು; ಶಾಶ್ವತವಾಗಿ ಇವಂತಹುದು; ಶ್ರೀಕೀರ್ತಿವಧೂಪ್ರಧಾನವಲ್ಲಭನಕ್ಕುಂ (ಶ್ರೀ+ಕೀರ್ತಿವಧೂ+ಪ್ರಧಾನವಲ್ಲಭನ್+ ಅಕ್ಕುಂ)-ಸಂಪತ್ತೆಂಬ ವಧುವಿಗೆ ಪ್ರಶಸ್ತ ಒಡೆಯನಾಗಿ ಇರುತ್ತಾನೆ;
ಕವಿಯಾದವನು ಲೋಕದಲ್ಲಿ ಕಾವ್ಯರಚನೆಯಿಂದಾಗಿ ಕಾವ್ಯಾಸ್ವಾದನಕ್ಕೆ ತೊಡಗಿಕೊಳ್ಳುವುದಕ್ಕೆ ತಾನು ಸ್ವತಃ ತಿಳಿವಳಿಕೆಯನ್ನು ಹೊಂದುತ್ತಾನೆ. ಕಾವ್ಯರಚನೆ ಎಂಬುದು ಕಲ್ಪಾಂತರಸ್ಥಾಯಿಯಾದುದು. ಅದು ಕವಿ ಅಳಿದರೂ ಶಾಶ್ವತವಾಗಿ ನೆಲೆಗೊಂಡೇ ಇರುವಂತಹುದು. ಹಾಗಾಗಿ ಕಾವ್ಯರಚನೆಯಿಂದ ಕವಿಯಾದವನು ವಿಶೇಷ ಸಂಪತ್ತೆಂಬ ವಧುವಿಗೆ ಪ್ರಶಸ್ತನಾದ ಒಡೆಯನಾಗಿ ಮೆರೆಯುತ್ತಾನೆ.
(ಲೋಕದಲ್ಲಿ ಕವಿಗಳಿಂದ ರಚನೆಗೊಂಡ ಕಾವ್ಯಗಳನ್ನು ಓದಿ ತಮ್ಮ ತಿಳಿವಳಿಕೆಯನ್ನು ವಿಸ್ತರಿಸಿಕೊಳ್ಳುವ ಸಹೃದಯರು ಒಂದೆಡೆಯಾದರೆ, ಇನ್ನೊಂದೆಡೆ ಕವಿಗಳು ತಾವು ರಚಿಸಿದ ಕಾವ್ಯಗಳ ಮೂಲಕ ಸ್ವತಃ ಕಾವ್ಯಾಸ್ವಾದನಕ್ಕೆ ತೊಡಗಿಕೊಳ್ಳುವಂತಾಗುತ್ತದೆ. ತಾವು ರಚಿಸಿದ ಕಾವ್ಯಗಳಿಂದ ಲೋಕದಲ್ಲಿ ಮಹತ್ತರವಾದ ಸ್ಥಾನಮಾನ ಪ್ರಾಪ್ತಿಯಾಗುವುದು ನಿಜವಾದರೂ ಅದಕ್ಕಿಂತಲೂ ಹೆಚ್ಚಾಗಿ ಕವಿಗಳು ತಮ್ಮ ಕಾವ್ಯಗಳಿಂದಲೇ ವಿಶೇಷವಾದ ಜ್ಞಾನವನ್ನು ಪಡೆಯುವಂತಾಗುತ್ತದೆ. ಒಂದು ಕಾವ್ಯ ಇನ್ನೊಂದರ ರಚನೆಗೆ ಪೂರಕವೆನಿಸಿಕೊಳ್ಳುತ್ತದೆ. ಅದರಿಂದಲೇ ಕವಿಗಳ ಅನುಭವ ಪಕ್ವವಾಗುತ್ತಲೇ ಹೋಗುತ್ತದೆ. ಕಾಲಕಾಲದ ಅನುಭವ ಕಾವ್ಯಗಳಲ್ಲಿ ಹೊಸತನವನ್ನು, ವೈವಿಧ್ಯವನ್ನು, ಅರ್ಥನಿರ್ಭರತೆಯನ್ನು, ಅರ್ಥಸ್ವಾರಸ್ಯವನ್ನು ಮೈಗೂಡಿಸಿಕೊಳ್ಳುವುದಕ್ಕೆ ಸಹಾಯಮಾಡುತ್ತದೆ. ಹಾಗಾಗಿಯೇ ಕಾವ್ಯಗಳು ಕಲ್ಪಾಂತರಸ್ಥಾಯಿ ಎನಿಸಿಕೊಳ್ಳುತ್ತವೆ. ಕವಿಗಳು ಅಳಿದರೂ ಅವರ ಕಾವ್ಯಗಳು ಉಳಿದು ಕಾಲಾಂತರದವರೆಗೂ ಕವಿಗಳಿಗೆ ಗೌರವವನ್ನು, ಕೀರ್ತಿಯನ್ನು, ಹೆಗ್ಗಳಿಕೆಯನ್ನು, ಮನ್ನಣೆಯನ್ನು ತಂದುಕೊಡುತ್ತವೆ. ಕಾವ್ಯರಚನೆ ಎಂಬುದು ಕವಿಗಳಿಗೆ ಒದಗುವ ವಿಶಿಷ್ಟವಾದ, ವಿಶೇಷವಾದ ಸಂಪತ್ತು ಎನಿಸಿಕೊಳ್ಳುತ್ತದೆ. ಇದು ಕವಿಗಳಿಗೆ ಕೀರ್ತಿಯನ್ನು ತಂದುಕೊಡುವುದರಿಂದ ಕವಿಗಳು ಕೀರ್ತಿ ಎಂಬ ವಧುವಿಗೆ ಯೋಗ್ಯ ಒಡೆಯರೆನಿಸಿಕೊಳ್ಳುತ್ತಾರೆ ಎಂಬುದು ಕವಿರಾಜಮಾರ್ಗಕಾರ ಅಭಿಪ್ರಾಯಪಡುತ್ತಾನೆ.)
ಕಾವೇರಿಯಿಂದಮಾ ಗೋ
ದಾವರಿವರಮಿರ್ಪ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು
ಧಾವಲಯವಿಲೀನವಿಶದವಿಷಯವಿಶೇಷಂ ೭
ಪದ್ಯದ ಅನ್ವಯಕ್ರಮ:
ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡದು ಆ ಕನ್ನಡದೊಳ್, ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ.
ಪದ-ಅರ್ಥ:
ಕಾವೇರಿಯಿಂದಂ-ಕಾವೇರಿ ನದಿಯಿಂದ ಹಿಡಿದು; ಗೋದಾವರಿವರಂ-ಗೋದಾವರಿ ನದಿಯವರೆಗೆ; ಇರ್ಪ– ವ್ಯಾಪಿಸಿರುವ; ಕನ್ನಡದೊಳ್-ಕರ್ಣಾಟ ದೇಶದಲ್ಲಿ, ಕನ್ನಡನಾಡಿನಲ್ಲಿ; ಜನಪದ-ಪ್ರಾಂತ್ಯ; ವಸುಧಾವಲಯ-ಭೂಪ್ರದೇಶ; ವಿಲೀನ-ಸೇರಿಕೊಂಡ; ವಿಶದ ವಿಷಯ-ಸುಂದರವಾದ ಪ್ರದೇಶ; ವಿಶೇಷಂ-ಅತಿಶಯದಿಂದ ಕೂಡಿದ.
ಕಾವೇರಿ ನದಿಯಿಂದ ಹಿಡಿದು ಗೋದಾವರಿ ನದಿಯವರೆಗೆ ಚಾಚಿಕೊಂಡಿರುವ ನಾಡೇ ಕನ್ನಡನಾಡು. ಈ ಕರ್ಣಾಟದೇಶವು ವಿವಿಧ ಪ್ರಾಂತ್ಯಗಳಿಂದ, ಸುಂದರವಾದ ಭೂಪ್ರದೇಶಗಳಿಂದ ಕೂಡಿ ಅತಿಶಯವೆನಿಸಿಕೊಂಡಿದೆ.
(ಒಂಬತ್ತನೆಯ ಶತಮಾನದಲ್ಲಿ ಕರ್ಣಾಟ ದೇಶವು ಎಷ್ಟು ವಿಶಾಲವಾಗಿತ್ತು ಎಂಬುದನ್ನು ತಿಳಿದುಕೊಳ್ಳಲು ಕವಿರಾಜಮಾರ್ಗಕಾರನ ಈ ಮಾತುಗಳು ಸಹಕಾರಿಯಾಗಿವೆ. ದಕ್ಷಿಣದಲ್ಲಿ ಕಾವೇರಿ ನದಿಯಿಂದ ಹಿಡಿದು ಉತ್ತರದಲ್ಲಿ ಗೋದಾವರಿ ನದಿಯವರೆಗೆ ಚಾಚಿಕೊಂಡಿರುವ ನಾಡನ್ನು ಕನ್ನಡನಾಡು ಎಂದು ಕರೆಯಲಾಗುತ್ತದೆ. ಗೋದಾವರಿ ನದಿಯು ಮಹಾರಾಷ್ಟ್ರದ ಪಶ್ಚಿಮಭಾಗದಲ್ಲಿರುವ ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರದ ಬಳಿ ಹುಟ್ಟಿ, ಛತ್ತೀಸ್ ಗಢದ ಮೂಲಕ ಆಂಧ್ರಪ್ರದೇಶ(ತೆಲಂಗಾಣವನ್ನುಸೇರಿಕೊಂಡು)ದ ಪೂರ್ವಗೋದಾವರಿ ಜಿಲ್ಲೆ, ಹಾಗೂ ಪಾಂಡಿಚೇರಿಯ ಯಾಣಂ ಮೂಲಕ ಹರಿದು ಅಂತರ್ವೇದಿ ಬಳಿ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಕವಿರಾಜಮಾರ್ಗಕಾರನ ಪ್ರಕಾರ ಅಂದಿನ ಕನ್ನಡ ನಾಡು ಇಂದಿನ ನಾಡಿಗಿಂತ ವಿಶಾಲವಾಗಿ ಆಂಧ್ರಪ್ರದೇಶದ ಸ್ವಲ್ಪಭಾಗವನ್ನೂ ಒಳಗೊಂಡಿತ್ತು. ಈ ಎರಡು ಪ್ರಮುಖವಾದ ನದಿಗಳ ನಡುವೆ ನೆಲೆಗೊಂಡಿರುವ ಕನ್ನಡನಾಡು ವಿವಿಧ ಪ್ರಾಂತ್ಯಗಳಿಂದಲೂ ಸುಂದರವಾದ ಭೂಪ್ರದೇಶಗಳಿಂದಲೂ ಕೂಡು ಅತಿಶಯವಾದ ದೇಶ ಎನಿಸಿಕೊಂಡಿತ್ತು ಎಂಬುದು ಕವಿರಾಜಮಾರ್ಗಕಾರನ ಹೆಮ್ಮೆಯ ಮಾತು.)
ಅದಱೊಳಗಂ ಕಿಸುವೊೞಲಾ
ವಿದಿತ ಮಹಾ ಕೊಪಣ ನಗರದಾ ಪುಲಿಗೆಱೆಯಾ
ಸದಭಿಸ್ತುತಮಪ್ಪೊಂಕುಂ
ದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್ ೮
ಪದ್ಯದ ಅನ್ವಯಕ್ರಮ:
ಅದಱೊಳಗಂ ಕಿಸುವೊೞಲ್ ಆ ವಿದಿತ ಮಹಾ ಕೊಪಣ ನಗರದಾ ಪುಲಿಗೆಱೆಯಾ ಸತ್ ಅಭಿಸ್ತುತಂ ಅಪ್ಪೊಂ ಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್
ಪದ-ಅರ್ಥ:
ಅದಱೊಳಗಂ– ಆ ಗಡಿಗಳ ನಡುವೆ; ಕಿಸುವೊೞಲ್-ಈಗಿನ ಬಾಗಲಕೋಟೆ ಜಿಲ್ಲೆಯಲ್ಲಿನ ಪಟ್ಟದಕಲ್ಲು; ವಿದಿತ-ಪ್ರಸಿದ್ಧವಾದ; ಮಹಾಕೊಪಣ-ಈಗಿನ ಕೊಪ್ಪಳ; ಸದಭಿಸ್ತುತಂ(ಸತ್+ಅಭಿಸ್ತುತಂ)-ಉತ್ತಮ ಪ್ರಶಂಸೆಗೆ ಪಾತ್ರವಾದ; ಪುಲಿಗೆಱೆ-ಈಗಿನ ಧಾರವಾಡ ಜಿಲ್ಲೆಯ ಲಕ್ಷ್ಮೇಶ್ವರ; ಒಂಕುಂದ-ಬೆಳಗಾಗಿ ಜಿಲ್ಲೆಯ ಒಕ್ಕುಂದ; ನಡುವಣ-ಮಧ್ಯದಲ್ಲಿರುವ; ನಾಡೆ-ನಾಡು, ಪ್ರದೇಶ; ನಾಡೆ –ಚೆನ್ನಾಗಿರುವ, ಚೆಂದದ; ಕನ್ನಡದ ತಿರುಳ್-ತಿರುಳ್ಗನ್ನಡ.
ಇಂತಹ ಸುಂದರವಾದ ನಾಡಿನೊಳಗೆ ಕಿಸುವೊಳಲ್(ಇಂದಿನ ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು), ಪ್ರಸಿದ್ಧ ಪ್ರಾಂತ್ಯವೆಂದು ಹೆಸರುಪಡೆದ ಮಹಾಕೋಪಣ(ಇಂದಿನ ಕೊಪ್ಪಳ) ಹಾಗೂ, ಪುಲಿಗೆರೆ(ಇಂದಿನ ಧಾರವಾಡ ಜಿಲ್ಲೆಯ ಲಕ್ಷ್ಮೇಶ್ವರ) ಎಂಬ ಪ್ರಸಿದ್ಧವಾದ ನಗರಗಳು, ಉತ್ತಮ ಪ್ರಶಂಸೆಗೆ ಪಾತ್ರವಾದ ಒಂಕುಂದ(ಇಂದಿನ ಬೆಳಗಾವಿ ಜಿಲ್ಲೆಯ ಒಕ್ಕುಂದ) ಎಂಬ ಪ್ರದೇಶಗಳ ನಡುವೆ ನೆಲೆಗೊಂಡಿರುವ ಸುಂದರವಾದ ನಾಡೇ ತಿರುಳ್ಗನ್ನಡ ನಾಡು ಎಂದು ಪ್ರಸಿದ್ಧವಾಗಿತ್ತು.
(ಪ್ರಾಚೀನಕಾಲದಿಂದಲೂ ಭರತಖಂಡದೊಳಗೆ ಕನ್ನಡನಾಡು(ಕರ್ಣಾಟದೇಶ) ಬಹಳ ವಿಶಾಲವೂ ಸುಂದರವೂ ಆದ ನಾಡಾಗಿತ್ತು. ಈ ನಾಡಿನಾದ್ಯಂತ ಕನ್ನಡವೇ ಪ್ರಧಾನಭಾಷೆಯಾಗಿ ಪ್ರಚಲಿತವಾಗಿದ್ದರೂ ತಿರುಳ್ಗನ್ನಡವೆಂಬುದು ಕೆಲವು ಪ್ರಾಂತ್ಯಗಳಿಗೆ ಮಾತ್ರ ಸೀಮಿತವಾಗಿತ್ತು. ಒಂದೆಡೆ, ಕವಿರಾಜಮಾರ್ಗಕಾರನ ಕಾಲದಲ್ಲಿ ಕಿಸುವೊಳಲ್ ಎಂದು ಕರೆಯಲಾಗುತ್ತಿದ್ದ ಇಂದಿನ ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ಪ್ರಾಂತ್ಯ; ಇನ್ನೊಂದೆಡೆ, ಕನ್ನಡನಾಡಿನಲ್ಲಿಯೇ ಪ್ರಸಿದ್ಧಪ್ರಾಂತ್ಯವೆಂದು ಹೆಸರುಪಡೆದಿರುವ ಮಹಾಕೋಪಣ ಎಂದು ಕರೆಯಲಾಗುತ್ತಿದ್ದ ಇಂದಿನ ಕೊಪ್ಪಳ, ಹಾಗೂ ಪುಲಿಗೆಱೆ ಎಂದು ಪ್ರಸಿದ್ಧವಾಗಿರುವ ಇಂದಿನ ಲಕ್ಷ್ಮೇಶ್ವರ ಎಂಬ ನಗರಗಳು, ಸದಾ ಪ್ರಶಂಸೆಗೆ ಪಾತ್ರವಾಗಿದ್ದ ಇಂದಿನ ಬೆಳಗಾವಿ ಜಿಲ್ಲೆಯಲ್ಲಿ ನೆಲೆಗೊಂಡಿರುವ ಒಂಕ್ಕುಂದವೆಂದು ಕರೆಯಲಾಗುತ್ತಿದ್ದ ಒಕ್ಕುಂದ-ಈ ಮೊದಲಾದ ಪ್ರದೇಶಗಳ ನಡುವೆ ನೆಲೆಗೊಂಡಿರುವ ಸುಂದರವಾದ ಪ್ರಾಂತ್ಯಗಳಲ್ಲಿ ನೆಲೆಗೊಂಡಿರುವ ನಾಡು ಹಾಗೂ ಈ ಪ್ರದೇಶದಲ್ಲಿ ಪ್ರಧಾನವಾಗಿ ಚಾಲ್ತಿಯಲ್ಲಿದ್ದ ಭಾಷೆಯೇ ತಿರುಳ್ಗನ್ನಡ ಎಂಬುದು ಕವಿರಾಜಮಾರ್ಗಕಾರನ ಅಭಿಪ್ರಾಯ. ಆತನ ಪ್ರಕಾರ ಈ ತಿರುಳ್ಗನ್ನದ ಅಚ್ಚಕನ್ನಡವಾಗಿದ್ದು, ಕಾವ್ಯರಚನೆಗೆ ಪೂರಕವಾಗಿತ್ತು.ಅಲ್ಲದೆ ತಿರುಳ್ಗನ್ನಡ ಭಾಷೆಯಲ್ಲಿ ರಚಿಸಿದ ಕಾವ್ಯಗಳಿಗೆ ವಿಶೇಷ ಮನ್ನಣೆ ಪ್ರಾಪ್ತವಾಗುತ್ತಿತ್ತು.)
ಪದನಱಿದು ನುಡಿಯಲುಂ ನುಡಿ
ದುದನಱಿದಾರಯಲುಮಾರ್ಪರಾ ನಾಡವರ್ಗಳ್
ಚದುರರ್ ನಿಜದಿಂ ಕುಱಿತೋ
ದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್ ೯
ಪದ್ಯದ ಅನ್ವಯಕ್ರಮ:
ಪದನ್ ಅಱಿದು ನುಡಿಯಲುಂ, ನುಡಿದುದನ್ ಅಱಿದು ಆರಯಲುಂ, ಆರ್ಪರ್ ಆ ನಾಡವರ್ಗಳ್, ನಿಜದಿಂ ಚದುರರ್, ಕುಱಿತು ಓದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್
ಪದ-ಅರ್ಥ:
ಪದನ್-ಪದವನ್ನು, ಅಱಿದು-ಅರಿತುಕೊಂಡು, ಅರ್ಥೈಸಿಕೊಂಡು; ನುಡಿಯಲುಂ-ಮಾತನ್ನು ಆಡುವುದಕ್ಕೂ; ನುಡಿದುದನ್-ಆಡಿರುವುದನ್ನು; ಆರಯಲುಂ-ಪರಾಮರ್ಶಿಸುವುದಕ್ಕೂ; ಆರ್ಪರ್-ಸಮರ್ಥರು; ನಾಡವರ್ಗಳ್-ನಾಡಿನ ಜನರು; ಚದುರರ್-ಜಾಣರು; ನಿಜದಿಂ-ಸಹಜವಾಗಿ; ಸ್ವಾಭಾವಿಕವಾಗಿ; ಕುಱಿತೋದದೆಯುಂ-ಯಾವುದನ್ನೂ ಅಧ್ಯಯನಮಾಡದೆಯೂ; ಕಾವ್ಯಪ್ರಯೋಗ-ಕಾವ್ಯ ರಚನೆ; ಪರಿಣತಮತಿಗಳ್-ನಿಷ್ಣಾತರು.
ಈ ಕನ್ನಡ ನಾಡಿನ ಜನರು ಕನ್ನಡ ಪದಗಳನ್ನು ಅರಿತುಕೊಂಡು ಮಾತಾಡಲು, ಆಡಿದುದನ್ನು ಅರಿತುಕೊಂಡು ಪರಾಮರ್ಶಿಸಲು ಸಮರ್ಥರೆನಿಸಿಕೊಂಡವರು. ಅವರು ಜಾಣರು. ಯಾವುದನ್ನೂ ಅಧ್ಯಯನ ಮಾಡದೆಯೂ ಕಾವ್ಯರಚನೆಯಲ್ಲಿ ನಿಷ್ಣಾತರೆನಿಸಿಕೊಂಡವರು.
(ಕವಿರಾಜಮಾರ್ಗಕಾರನ ಪ್ರಕಾರ ಕನ್ನಡನಾಡಿನ ಜನರು ಬಹಳ ಬುದ್ಧಿವಂತರು. ಅವರು ಮಾತನ್ನು ಅರಿತವರು, ಕನ್ನಡದ ಒಳಹೊರಗನ್ನು ಬಲ್ಲವರು. ಹಾಗಾಗಿ ಪದಗಳ ಅರ್ಥವನ್ನು ಅರಿತುಕೊಂಡು ಮಾತನಾಡಬಲ್ಲರು. ಅನ್ಯರಿಗೆ ಅರ್ಥವಾಗುವಂತೆ, ಮಾತುಗಳ ಮೂಲಕ ತಮ್ಮ ವಿಚಾರಗಳು ಅವರ ಮನಸ್ಸನ್ನು ಒಳಪ್ರವೇಶಿಸುವಂತೆ ಮಾತನಾಡಬಲ್ಲರು. ಅನ್ಯರು ಆಡಿದ್ದನ್ನು ಅರಿತುಕೊಂಡು ಅರ್ಥೈಸಬಲ್ಲರು. ಅನ್ಯರ ಮಾತುಗಳನ್ನು ಪರಾಮರ್ಶಿಸಲೂ ಬಲ್ಲರು. ಹಾಗಾಗಿ ಕನ್ನಡನಾಡಿನ ಜನರು ಜಾಣರೂ ಮೇಧಾವಿಗಳೂ ಬಲ್ಲಿದರೂ ಎನಿಸಿಕೊಂಡವರು. ಕನ್ನಡಿಗರು ಜನ್ಮತಃ ಪ್ರತಿಭಾವಂತರು. ಕಾವ್ಯರಚನೆಯ ಅಸ್ಖಲಿತ ಪ್ರತಿಭೆಯನ್ನು ಹೊಂದಿದವರು. ಇತರರು ಅಧ್ಯಯನಮಾಡಿ ಕಾವ್ಯರಚನೆಗೆ ತೊಡಗಿದರೆ ಕನ್ನಡಿಗರು ಏನನ್ನೂ ಅಧ್ಯಯನ ಮಾಡದೇ ಕಾವ್ಯರಚನೆಗೆ ತೊಡಗಬಲ್ಲ ನಿಷ್ಣಾತರೆನಿಸಿಕೊಂಡವರು. ಅವರು ಹುಟ್ಟುಪ್ರತಿಭಾವಂತರು.)
(ಭಾಗ -೨ರಲ್ಲಿ ಮುಂದುವರಿದಿದೆ)
I think this is among the most significant information for me. And i am glad reading your article. But wanna remark on some general things, The web site style is perfect, the articles is really excellent : D. Good job, cheers