ಸಾಹಿತ್ಯಾನುಸಂಧಾನ

heading1

ನಾಡು ನುಡಿ –ಶ್ರೀವಿಜಯ(ಭಾಗ-೨)

(ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ಬಿ.ಕಾಂ. (ಎನ್ ಇ ಪಿ) ಪ್ರಥಮ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ (ಭಾಗ-೨)

ಕುಱಿತವರಲ್ಲದೆ ಮತ್ತಂ

ಪೆಱರುಂ ತಂತಮ್ಮ ನುಡಿಯೊಳೆಲ್ಲರ್ ಜಾಣರ್

ಕಿಱುವಕ್ಕಳುಮಾ ಮೂಗರು

ಮಱಿಪಲ್ಕಱಿವರ್ ವಿವೇಕಮಂ ಮಾತುಗಳಂ  ೧೦

ಪದ್ಯದ ಅನ್ವಯಕ್ರಮ:

ಕುಱಿತವರು ಅಲ್ಲದೆ ಮತ್ತಂ ಪೆಱರುಂ ಕಿಱುಮಕ್ಕಳುಂ, ಮೂಗರುಂ ಎಲ್ಲರ್ ಜಾಣರ್. ತಮ್ಮ ತಮ್ಮ ನುಡಿಯೊಳ್,  ವಿವೇಕಮಂ ಮಾತುಗಳಂ ಅಱಿಪಲ್ಕೆ ಅಱಿವರ್.

ಪದ-ಅರ್ಥ:

ಕುಱಿತವರು-ತಿಳಿದವರು, ಪ್ರಾಜ್ಞರು;  ಮತ್ತಂ-ಮತ್ತೆಯೂ;  ಪೆಱರುಂ-ಅನ್ಯರೂ, ಪ್ರಾಜ್ಞರಲ್ಲದವರೂ;  ತಂತಮ್ಮ-ತಮ್ಮ ತಮ್ಮ; ನುಡಿಯೊಳ್-ಭಾಷೆಯಲ್ಲಿ, ಮಾತಿನಲ್ಲಿ; ಜಾಣರ್-ಬುದ್ಧಿವಂತರು;  ಕಿಱುಮಕ್ಕಳುಂ-ಎಳೆಯ ಮಕ್ಕಳೂ;  ಮೂಗರುಂ-ಮಾತು ಬಾರದವರೂ; ಅಱಿಪಲ್ಕೆ-ತಿಳಿಸಿದಾಗ, ವಿವರಿಸಿದಾಗ;  ಅಱಿವರ್– ತಿಳಿದುಕೊಳ್ಳುತ್ತಾರೆ;  

ಕನ್ನಡನಾಡಿನಲ್ಲಿ ತಿಳಿದವರು ಮಾತ್ರವಲ್ಲದೆ ಮತ್ತೆ ಉಳಿದ ಜನಗಳೂ (ಪ್ರಾಜ್ಞರಲ್ಲದವರೂ)ತಮ್ಮ ತಮ್ಮ ನುಡಿಗಳಲ್ಲಿ, ತಾವಾಡುವ ಭಾಷೆಯಲ್ಲಿ ಅತ್ಯಂತ ಬುದ್ಧಿವಂತರು ಎನಿಸಿಕೊಂಡಿದ್ದಾರೆ. ಮಾತ್ರವಲ್ಲದೆ, ಎಳೆಯ ಮಕ್ಕಳೂ ಮಾತು ಬಾರದವರೂ ಕಾವ್ಯವನ್ನು ವಿವರಿಸಿದಾಗ ಅರ್ಥೈಸಿಕೊಳ್ಳುವಷ್ಟು ಜಾಣರೆನಿಸಿಕೊಂಡವರು.

(ಕವಿರಾಜಮಾರ್ಗಕಾರನ ಪ್ರಕಾರ ಕನ್ನಡನಾಡಿನ ಸಮಸ್ತ ಜನರೂ ಬುದ್ಧಿವಂತರು, ಮೇಧಾವಿಗಳು ಎನಿಸಿಕೊಂಡವರು. ಓದು ಬರಹ ಬಲ್ಲವರ ಹಾಗೆ ಒದು ಬರಹವಿಲ್ಲದವರೂ (ಪ್ರಾಜ್ಞರಲ್ಲದವರೂ) ಕನ್ನಡವನ್ನು ಸುಲಲಿತವಾಗಿ ಆಡಬಲ್ಲರು, ಇತರ ಓದು ಬರಹ ಬಲ್ಲವರ ಮಾತುಗಳನ್ನು ಸುಲಭವಾಗಿ ಅರ್ಥೈಸಬಲ್ಲರು. ಅವರು ತಮ್ಮ ಮಾತುಗಳಲ್ಲಿಯೂ ಜಾಣರೆನಿಸಿಕೊಂಡವರು, ಮಾತ್ರವಲ್ಲ ಅನ್ಯರ ಮಾತುಗಳನ್ನು ಗ್ರಹಿಸುವುದರಲ್ಲಿ ಹಾಗೂ ಅವುಗಳ ಅರ್ಥವನ್ನು ಪರಿಭಾವಿಸುವುದರಲ್ಲಿ ನಿಷ್ಣಾತರೆನಿಸಿಕೊಂಡವರು. ಹಾಗಾಗಿ ಅಂದಿನ ಕನ್ನಡನಾಡಿನಲ್ಲಿ ಅರಿತವರು ಅರಿಯದವರೆಂಬ ಭೇದವೇ ಇರಲಿಲ್ಲ. ಹಿರಿಯರ ವಸ್ತುಸ್ಥಿತಿ ಹೀಗಾದರೆ, ಕಿರಿಯರೂ ಎಳೆಯ ಮಕ್ಕಳೂ ಮಾತೇ ಬಾರದವರೂ ತಾವು ಹಿರಿಯರಂತೆ ಮಾತುಗಳನ್ನಾಡಲು ಅಸಮರ್ಥರಾದರೂ ಹಿರಿಯರು, ಪ್ರಾಜ್ಞರು ಆಡಿದ ಮಾತುಗಳನ್ನು ಅರ್ಥೈಸಿಕೊಳ್ಳುವಷ್ಟು, ಅವುಗಳ ಸ್ವಾರಸ್ಯವನ್ನು ಗ್ರಹಿಸುವಷ್ಟು ಹಿರಿಯರಿಗೆ ಸರಿಮಿಗಿಲೆನಿಸಿಕೊಂಡವರು. ಹಾಗಾಗಿ ಕನ್ನಡನಾಡು ಬುದ್ಧಿವಂತರ, ಪ್ರತಿಭಾಶಾಲಿಗಳ, ಮೇಧಾವಿಗಳ ನಾಡು ಎನಿಸಿಕೊಂಡಿತ್ತು.)

 

ಅವಗುಣಮಿನಿತಾದೊಡಮಾ

ಕವಿತಾಬಂಧಮನಶೇಷಮಂ ದೂಷಿಸುಗುಂ

ಸವಿಳಾಸಲೋಲಲೋಚನ

ವಿವರಮನೆಡೆವತ್ತ ಕಸದವೋಲನವರತಂ  ೧೧

ಪದ್ಯದ ಅನ್ವಯಕ್ರಮ:

ಇನಿತು ಆದೊಡಂ ಅವಗುಣಂ ಆ ಕವಿತಾ ಬಂಧಮನ್ ಅಶೇಷಮಂ ದೂಷಿಸುಗುಂ ಸವಿಳಾಸ ಲೋಲಲೋಚನ ವಿವರಮನ್ ಎಡೆವತ್ತ ಕಸದವೋಲ್ ಅನವರತಂ.

ಪದ-ಅರ್ಥ:

ಅವಗುಣಂ-ದೋಷವನ್ನು;  ಇನಿತಾದೊಡಂ-ಒಂದಿಷ್ಟಿದ್ದರೂ; ಆ ಕವಿತಾಬಂಧಮನ್-ಆ ಕಾವ್ಯರಚನೆಯನ್ನು, ಕಾವ್ಯಪ್ರಕಾರವನ್ನು;  ಅಶೇಷಮಂ-ಸಮಸ್ತವನ್ನೂ; ದೂಷಿಗುಂ-ನಿಂದಿಸುತ್ತಾರೆ;  ಸವಿಳಾಸಲೋಲಲೋಚನವಿವರಮನ್-ಚೆಲುವಿನಿಂದ ಕೂಡಿದ ಸುಂದರವಾದ ಕಣ್ಣನ್ನು;  ಎಡೆವತ್ತ-ಸೇರಿಕೊಂಡಿರುವ;  ಕಸದವೋಲ್-ಕಸದ ಹಾಗೆ;  ಅನವರತಂ-ಯಾವತ್ತೂ, ನಿತ್ಯವೂ.  

ಸಣ್ಣಪ್ರಮಾಣದ ದೋಷವಿದ್ದರೂ ಜನರು ಸಮಸ್ತ ಕಾವ್ಯರಚನೆಯನ್ನೂ ನಿಂದಿಸುತ್ತಾರೆ. ಈ ನಿಂದೆಯು  ಹೇಗಿರುತ್ತದೆ ಎಂದರೆ, ಚೆಲುವಿನಿಂದ  ಕೂಡಿದ ಸುಂದರವಾದ ಕಣ್ಣಿನೊಳಗೆ ಸೇರಿಕೊಂಡಿರುವ ಕಸದ ಹಾಗೆ.  ಒಳಗೆ ಸೇರಿಕೊಂಡ ಕಸವು ಕಣ್ಣನ್ನು ನಿರಂತರವಾಗಿ ಚುಚ್ಚುತ್ತಿರುತ್ತದೆ.  

(ಕವಿರಾಜಮಾರ್ಗಕಾರ ಈ ಪದ್ಯದಲ್ಲಿ ಒಳ್ಳೆಯ ಕಾವ್ಯ ಹೇಗಿರಬೇಕೆಂಬುದನ್ನು ವಿವರಿಸಿದ್ದಾನೆ. ಆತನ ಪ್ರಕಾರ, ಕಾವ್ಯವು ಸಕಲಗುಣಗಳಿಂದ ಕೂಡಿ ಸರ್ವಾಂಗ ಸುಂದರವಾಗಿರಬೇಕು.  ಅದು ದೋಷಗಳಿಂದ ಮುಕ್ತವಾಗಿರಬೇಕು. ಹಾಗಿದ್ದರೆ ಮಾತ್ರ ಅದು ಸರ್ವಜನ ಪ್ರಿಯವಾಗುತ್ತದೆ, ಮಾನ್ಯವಾಗುತ್ತದೆ. ಲೋಕದಲ್ಲಿ ಹಿರಿದಾದ ಸ್ಥಾನಮಾನಗಳನ್ನು ಪಡೆದುಕೊಳ್ಳುತ್ತದೆ. ಒಂದು ವೇಳೆ ಕಾವ್ಯದಲ್ಲಿ ಒಂದಿಷ್ಟು ದೋಷವಿದ್ದರೂ ಅದು ಸಹೃದಯರ ನಿಂದೆಗೆ ಕಾರಣವಾಗುತ್ತದೆ. ಇದರಿಂದಾಗಿ ಕಾವ್ಯಕ್ಕೆ ಅಸ್ತಿತ್ವಕ್ಕೆ ಧಕ್ಕೆಯೊದಗುತ್ತದೆ ಎಂಬುದನ್ನು ಕವಿರಾಜಮಾರ್ಗಕಾರ ಒಂದು ಉದಾಹರಣೆಯ ಮೂಲಕ ಸ್ಪಷ್ಟಪಡಿಸಿದ್ದಾನೆ. ಕಣ್ಣಿನೊಳಗೆ ಸೇರಿಕೊಂಡಿರುವ ಕಸ ಸಣ್ಣದೇ ಆದರೂ ಅದು ನಿರಂತರವಾಗಿ ಕಣ್ಣನ್ನು ಚುಚ್ಚುತ್ತ ಹಿಂಸಿಸುತ್ತಿರುತ್ತದೆ. ಸಹಿಸಲಸಾಧ್ಯವಾದ ವೇದನೆಯನ್ನು ಕೊಡುತ್ತಿರುತ್ತದೆ. ಕಾವ್ಯದಲ್ಲಿನ ಸಣ್ಣದೋಷವೂ ಕಣ್ಣಿನೊಳಗೆ ಸೇರಿಕೊಂಡಿರುವ ಕಸದಂತೆ.  ಸಹೃದಯರು ಈ ಸಣ್ಣದೋಷವನ್ನು ಗಮನದಲ್ಲಿರಿಸಿಕೊಂಡು ಸಮಸ್ತ ಕಾವ್ಯವನ್ನೇ ನಿಂದಿಸುತ್ತಾರೆ. ಹಾಗಾಗಿ ಕವಿಗಳಾದವರು ತಮ್ಮ ಕಾವ್ಯಗಳಲ್ಲಿ ಕಿಂಚಿತ್ತೂ ದೋಷವು ಸೇರಿಕೊಳ್ಳದಂತೆ ಎಚ್ಚರವನ್ನು ವಹಿಸಬೇಕು. ಅಂದರೆ ಸಮಗ್ರ ಕಾವ್ಯವೇ ದೋಷರಹಿತವಾಗಿದ್ದರೆ ಮಾತ್ರ ಅದು ಸರ್ವಜನ ಮಾನ್ಯವಾಗುತ್ತದೆ ಎಂಬುದು ಕವಿಗಳಿಗೆ ಮಾರ್ಗಕಾರನ ಕಿವಿಮಾತು.)

 

ಕಾಣನೇಗೆಯ್ದುಂ ತನ್ನ ದೋಷಮಂ

ಕಾಣದಂತೆಂದುಂ ಕಣ್ಗಳ್ ತಮ್ಮ ಕಾಡಿಗೆಯಂ

ಪೂಣಿಗನಾದುದಱಿಂ ಪೆಱರಿಂ

ಜಾಣರಿನೋದಿಸಿ ಪೇೞ್ವುದು ಕಬ್ಬಮಂ  ೧೨

ಪದ್ಯದ ಅನ್ವಯಕ್ರಮ:

ಎಂದುಂ ಕಣ್ಗಳ್ ತಮ್ಮ ಕಾಡಿಗೆಯಂ ಕಾಣದ ಅಂತು, ಏನೆಯ್ದುಂ ತನ್ನ ದೋಷಮಂ ಕಾಣನ್, ಆದುದಱಿಂ ಪೂಣಿಗನ್ ಪೆಱರಿಂ ಜಾಣರಿನ್ ಕಬ್ಬಮಂ ಓದಿಸಿ ಪೇೞ್ವುದು.

ಪದ-ಅರ್ಥ:

ಕಾಣನ್-ಕಾಣಲಾರ, ಅರಿಯಲಾರ;  ಏಗೆಯ್ದುಂ-ಏನು ಮಾಡಿದರೂ;  ತನ್ನ ದೋಷಮಂ-ತನ್ನ ನ್ಯೂನತೆಗಳನ್ನು;  ಕಾಣದಂತು-ಕಾಣದ ಹಾಗೆ;  ಎಂದುಂ-ಯಾವತ್ತೂ;  ಕಾಡಿಗೆಯಂ-ಕಜ್ಜಲವನ್ನು;  ಪೂಣಿಗನದುದಱಿಂ-ಜಾಣನಾಗಿರುವುದರಿಂದ;  ಪೆಱರಿಂ-ಬೇರೆಯವರಿಂದ;  ಜಾಣರಿನೋದಿಸಿ-ಬಲ್ಲವರಿಂದ ಓದಿಸಿಕೊಂಡು; ಕಬ್ಬಮಂ-ಕಾವ್ಯವನ್ನು.

ಬಹುತೇಕವಾಗಿ ಕವಿಗಳು ತಮ್ಮ ಕಾವ್ಯಗಳಲ್ಲಿ ಯಾವುದೇ ದೋಷವನ್ನು ಕಾಣಲಾರರು. ಏನು ಮಾಡಿದರೂ ಅದು ಅವರ ಗಮನಕ್ಕೆ ಬರಲಾರದು. ಅದು ಹೇಗೆಂದರೆ ಕಣ್ಣುಗಳಿಗೆ ಹಚ್ಚಿದ ಕಾಡಿಗೆಯನ್ನು ಕಣ್ಣುಗಳು ಹೇಗೆ ಕಾಣಲಾರವೋ ಹಾಗೆ. ಕವಿಗಳು ಜಾಣರಾಗಿದ್ದರೂ ತಮ್ಮ ಕಾವ್ಯಗಳನ್ನು ಬೇರೆ ಕಾವ್ಯಶಾಸ್ತ್ರವನ್ನು ಬಲ್ಲವರಿಂದ ಓದಿಸಿ  ದೋಷಗಳನ್ನು ಪರಿಹರಿಸಿಕೊಳ್ಳಬೇಕು.

(ಕವಿಯಾಗಿರಲಿ, ಕಲಾವಿದನಾಗಿರಲಿ ಯಾರೊಬ್ಬರೂ ತಮ್ಮ ತಮ್ಮ ರಚನೆಗಳಲ್ಲಿನ ದೋಷಗಳನ್ನು ಕಾಣಲಾರರು. ಪ್ರತಿಯೊಬ್ಬರಲ್ಲಿಯೂ ತಾವು ರಚಿಸಿದ್ದು ಶ್ರೇಷ್ಠ, ಉತ್ತಮ, ಮೌಲಿಕವಾದುದು, ದೋಷರಹಿತವಾದುದು ಎಂಬ ಅಭಿಮಾನ, ಕುರುಡು ನಂಬಿಕೆ ಇದ್ದೇ ಇರುತ್ತದೆ. ಹಾಗಾಗಿ ತಮ್ಮ ತಮ್ಮ ಕಾವ್ಯಗಳಲ್ಲಿನ ದೋಷಗಳು ಅವರ ಅರಿವಿಗೆ ಬರುವುದಿಲ್ಲ. ಇನ್ನೊಂದೆಡೆ ಕೆಲವು ಕವಿಗಳು ತಮ್ಮಕಾವ್ಯಗಳಲ್ಲಿನ ದೋಷವನ್ನೂ ಗುಣವೆಂದು ಭಾವಿಸುವುದರಿಂದ ಸಹೃದಯರ ನಿಂದೆಗೆ ಗುರಿಯಾಗಬೇಕಾಗುತ್ತದೆ. ಈ ನಿಂದೆ ಕಾವ್ಯವೊಂದರ ಸ್ಥಾನಮಾನಗಳ ಕುಸಿತಕ್ಕೆ ಕಾರಣವಾಗಬಹುದು.   ಕವಿಗಳ ಈ ಮನೋಭಾವ ಹೇಗಿರುತ್ತದೆ ಎಂದರೆ, ಕಣ್ಣುಗಳಿಗೆ ಹಚ್ಚಿದ ಕಾಡಿಗೆ ಹಾಗೂ ಹಚ್ಚುವಿಕೆಯಲ್ಲಿನ ದೋಷಗಳು ನೋಡುವವರ ದೃಷ್ಟಿಗೆ ಮಾತ್ರ ಗೋಚರಿಸುತ್ತದೆಯೇ ವಿನಾ ಅದು ಹಚ್ಚಿಸಿಕೊಂಡ ಕಣ್ಣುಗಳಿಗೆ ಕಾಣಿಸದು. ಕಾವ್ಯದಲ್ಲಿನ ದೋಷಗಳೂ ಹೀಗೆಯೇ. ಅವುಗಳನ್ನು ರಚಿಸಿದ ಕವಿಗಳಿಗೆ ಕಾಣಿಸಲಾರವು. ಆದರೆ ಸಹೃದಯರು ಕಾವವನ್ನು ಓದುವಾಗ ಗುರುತಿಸಬಲ್ಲರು. ಹಾಗಾಗಿ ಪ್ರತಿಯೊಬ್ಬ ಕವಿಯೂ ತಮ್ಮ ಕಾವ್ಯಗಳು ದೋಷರಹಿತವಾಗಿವೆ ಎಂದು ಯಾವತ್ತೂ ತಿಳಿಯಬಾರದು. ರಚಿಸಿದ ಮೇಲೆ ಅವುಗಳನ್ನು ಮಾತುಬಲ್ಲವರಿಂದ, ಕಾವ್ಯಶಾಸ್ತ್ರವನ್ನು ತಿಳಿದವರಿಂದ ಓದಿಸಿಕೊಂಡು ಲೋಪದೋಷಗಳನ್ನು ಪರಿಹರಿಸಿಕೊಳ್ಳಬೇಕು.  ಹೀಗೆ ದೋಷ ಸಣ್ಣದಾದರೂ ಪರಿಹರಿಸಿಕೊಂಡ ಮೇಲೆ ಅದು  ಕಾಡಿಗೆ ಹಚ್ಚಿದ ಕಣ್ಣುಗಳಂತೆಯೆ ಶೋಭಿಸುತ್ತದೆ ಎಂಬುದು ಕವಿರಾಜಮಾರ್ಗಕಾರನ ನಿಲುವು.)

 

ನೆಲಸಿದ ಕಾವ್ಯಂ ಕಾವ್ಯ

ಕ್ಕೆ ಲಕ್ಷಣಂ ಸತತಮೆಂದೆ ಪೞಗನ್ನಡಮಂ

ಪೊಲಗಿಡಿಸಿ ನುಡಿವರಾಗಮ

ಬಲಹೀನರ್ ದೇಸಿಯಲ್ಲದೆಂದಱಿದಿರ್ದುಂ  ೧೩

ಪದ್ಯದ ಅನ್ವಯಕ್ರಮ:

ಸತತಂ ನೆಲಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ ಎಂದೆ ದೇಸಿಯಲ್ಲದು ಎಂದು ಅಱಿದು ಇರ್ದುಂ ಆಗಮ ಬಲಹೀನರ್ ಪೞಗನ್ನಡಂ ಪೊಲಗಿಡಿಸಿ ನುಡಿವರ್.

ಪದ-ಅರ್ಥ:

ನೆಲಸಿದ ಕಾವ್ಯಂ-ಶಾಶ್ವತವಾಗಿರುವ ಕಾವ್ಯ, ಪ್ರೌಢತೆಯಿಂದ ಕೂಡಿದ ಕಾವ್ಯ;  ಕಾವ್ಯಕ್ಕೆ ಲಕ್ಷಣಂ-ಕಾವ್ಯಕ್ಕೆ ಆಧಾರ,  ಕಾವ್ಯಕ್ಕೆ ಮಾದರಿ;  ಸತತಂ-ಯಾವತ್ತೂ, ನಿರಂತರವಾಗಿ;  ಪೞಗನ್ನಡಮಂ-ಹಳೆಗನ್ನಡವನ್ನು, ಕವಿರಾಜಮಾರ್ಗದ ಪೂರ್ವದ ಕನ್ನಡವನ್ನು;  ಪೊಲಗಿಡಿಸಿ-ಹಾಳುಗೆಡವಿ;  ನುಡಿವರ್-ಮಾತಾಡುತ್ತಾರೆ;  ಆಗಮಬಲಹೀನರ್-ಶಾಸ್ತ್ರವಿಚಾರಗಳನ್ನು ತಿಳಿಯದವರು;  ದೇಸಿಯಲ್ಲದೆಂದು-ಈ ನಾಡಿಗೆ ಸಂಬಂಧಿಸಿದಲ್ಲವೆಂದು;  ಅಱಿದಿರ್ದುಂ-ತಿಳಿದಿದ್ದರೂ. 

ಪ್ರೌಢತೆಯಿಂದ ಕೂಡಿ ನೆಲೆಯೂರಿರುವ ಕಾವ್ಯವು ನಿರಂತರವಾಗಿ ಇತರ ಕಾವ್ಯಗಳಿಗೆ ಆಧಾರವಾಗಿರುತ್ತದೆ.   ಮಾದರಿ ಎನಿಸಿಕೊಳ್ಳುತ್ತದೆ. ಶಾಸ್ತ್ರ ವಿಚಾರಗಳನ್ನು ತಿಳಿಯದವರು ಹಳೆಗನ್ನಡವನ್ನು ಅದು ದೇಸಿಯಲ್ಲವೆಂದು ತಿಳಿದು  ಹಾಳುಗೆಡವಿ ನುಡಿಯುತ್ತಾರೆ.

(ಒಂದು ಕಾವ್ಯ ಶಾಶ್ವತವಾಗಿ, ಭದ್ರವಾಗಿ ನೆಲೆಯೂರುವುದು ಅದರ ಮೇಲ್ಮೆಯಿಂದ ಮತ್ತು ಅದರ ದೋಷರಹಿತತೆಯಿಂದ. ಹಾಗಾಗಿ ಕಾವ್ಯವನ್ನು ರಚಿಸುವವರು ಇದನ್ನು ಅರ್ಥಮಾಡಿಕೊಳ್ಳುವುದು ಅನಿವಾರ್ಯ. ಅಲ್ಲದೆ, ಹೀಗೆ ದೋಷರಹಿತವಾದ ಕಾವ್ಯವು ಪ್ರೌಢಕಾವ್ಯವೆನಿಸಿಕೊಂಡು ಲೋಕದಲ್ಲಿ ಶಾಶ್ವತವಾದ ಸ್ಥಾನಮಾನಗಳನ್ನು ಹೊಂದುತ್ತದೆ. ಮಾತ್ರವಲ್ಲದೆ, ಅದರ ಅನಂತರ ರಚನೆಯಾಗುವ ಸಮಸ್ತ ಕಾವ್ಯಗಳಿಗೆ ಮಾದರಿ ಎನಿಸಿಕೊಳ್ಳುತ್ತದೆ.  ಹಾಗಾಗಿ ಪ್ರತಿಯೊಬ್ಬ ಕವಿಯೂ ದೋಷರಹಿತವಾಗಿ ಕಾವ್ಯಗಳನ್ನು ರಚಿಸುವುದರೊಂದಿಗೆ ಅವು ಲೋಕಮನ್ನಣೆಯನ್ನು ಗಳಿಸುವಂತೆ, ಮುಂದಿನ ಕಾವ್ಯಗಳಿಗೆ ಮಾದರಿಯಾಗುವಂತೆ ರಚಿಸಬೇಕೆಂಬುದು ಮಾರ್ಗಕಾರನ ಅಭಿಪ್ರಾಯ. ತಿಳಿವಳಿಕೆ ಇಲ್ಲದವರು ಹಳೆಗನ್ನಡವನ್ನು ದೇಸಿಯಲ್ಲ(ಈ ನಾಡಿಗೆ ಸಂಬಂಧಿಸಿದ್ದಲ್ಲ) ಎಂದು ತಿಳಿದುಕೊಂಡು ಓದುವ ಕ್ರಮ ತಿಳಿಯದೆ, ಭಾವ, ಅರ್ಥ ಮೊದಲಾದವುಗಳನ್ನು ಹಾಳುಗೆಡವಿ ನುಡಿಯುತ್ತಾರೆ ಎಂದಿದ್ದಾನೆ. ಬಹುಶಃ ಕವಿರಾಜಮಾರ್ಗಕಾರನ ಕಾಲಕ್ಕಿಂತ ಹಿಂದಿನ ಕನ್ನಡವನ್ನು ಸರಿಯಾಗಿ ಓದುವ, ಅರ್ಥೈಸುವ ಕ್ರಮ ಕೆಲವರಿಗೆ ತಿಳಿದಿರಲಿಲ್ಲವೆಂದು ತೋರುತ್ತದೆ. ತಿಳಿಯದೆ ಭಾವಾರ್ಥ ಲೋಪವಾಗುವಂತೆ, ಅಥವಾ ಅಪಾರ್ಥ ಬರುವಂತೆ ಓದುವ ಕ್ರಮವನ್ನು ಮಾರ್ಗಕಾರ ತನ್ನ ಮಾತುಗಳ ಮೂಲಕ  ಟೀಕಿಸಿದ್ದಾನೆ. ದೇಸಿ ಯಾವುದು? ಮಾರ್ಗ ಯಾವುದು? ಹಾಗೂ ಭಾಷಾರೂಪಗಳು ಹೇಗಿವೆ ಎಂಬುದನ್ನು ಸಹೃದಯರು ಮೊದಲು ಅರ್ಥಮಾಡಿಕೊಳ್ಳಬೇಕೆಂಬುದು ಆತನ ಮಾತುಗಳಿಂದ ಸ್ಪಷ್ಟವಾಗುತ್ತದೆ.) 

 

ಸಮಸಂಸ್ಕೃತಂಗಳೊಳ್ ತ

ಳ್ತಮರ್ದಿರೆ ಕನ್ನಡಮನಱಿದು ಪೇೞ್ಗೆಂಬುದಿದಾ

ಗಮಕೋವಿದನಿಗದಿತಮಾ

ರ್ಗ್ಗಮಿದಂ ಬೆರಸಲ್ಕಮಾಗದೀ ಸಕ್ಕದದೊಳ್  ೧೪

ಪದ್ಯದ ಅನ್ವಯಕ್ರಮ:

ಸಮಸಂಸ್ಕೃತಂಗಳೊಳ್ ತಳ್ತು ಅಮರ್ದು ಇರೆ, ಕನ್ನಡಮನ್ ಅಱಿದು ಪೇೞ್ಗೆ ಎಂಬುದು ಇದು ಆಗಮ ಕೋವಿದ ನಿಗದಿತ ಮಾರ್ಗಂ ಇದಂ ಈ ಸಕ್ಕದದೊಳ್ ಬೆರಸಲ್ಕುಂ ಆಗದು

ಪದ-ಅರ್ಥ:

ಸಮಸಂಸ್ಕೃತಂಗಳೊಳ್-ಸಮಸಂಸ್ಕೃತಗಳಲ್ಲಿ(ಕನ್ನಡ ಹಾಗೂ ಸಂಸ್ಕೃತಗಳೆರಡಕ್ಕೂ ಸಮಾನವಾದ ಪದಗಳು); ತಳ್ತಮರ್ದಿರೆ-ಕೂಡಿ ಸೇರಿಕೊಂಡಿರಲು;  ಕನ್ನಡಮನಱಿದು-ಕನ್ನಡವನ್ನು ಅರಿತುಕೊಂಡು;  ಪೇೞ್ಗೆ-ಹೇಳಲಿ, ಮಾತಾಡಲಿ;  ಆಗಮಕೋವಿದ-ಶಾಸ್ತ್ರವನ್ನು ಬಲ್ಲವರು;  ನಿಗದಿತ-ನಿಶ್ಚಯವಾದ;  ಮಾರ್ಗಂ-ರೂಢಿ;  ಬೆರಸಲ್ಕಂ-ಬೆರೆಸುವುದಕ್ಕೆ, ಕಲಸುಮೇಲೋಗರ ಮಾಡುವುದಕ್ಕೆ;  ಆಗದು-ಕೂಡದು;  ಸಕ್ಕದ-ಸಂಸ್ಕೃತ.

ಕನ್ನಡ ಹಾಗೂ ಸಂಸ್ಕೃತಗಳೆರಡಕ್ಕೂ ಸಮಾನವಾಗಿರುವ(ಸಮಸಂಸ್ಕೃತ) ಪದಗಳು ಒಂದಕ್ಕೊಂದು ಬೆಸೆದುಕೊಂಡಿರುವಂತೆ ಕನ್ನಡವನ್ನು ಆಡುವುದು ಮಾತ್ರವಲ್ಲದೆ ಅದೇ ರೀತಿಯಲ್ಲಿ ಕಾವ್ಯಗಳನ್ನು ರಚಿಸಬೇಕು ಎಂಬುದು ಶಾಸ್ತ್ರಗಳನ್ನು ಬಲ್ಲವರ ನಿಶ್ಚಯವಾದ ರೂಢಿಯ ಮಾತು. ಹೀಗಿರುವಾಗ ಕನ್ನಡಕ್ಕೆ ಹೊಂದದ ಸಂಸ್ಕೃತ ಪದಗಳನ್ನುಕಾವ್ಯದಲ್ಲಿ ಬೆರೆಸುವುದು ಸಮಂಜಸವಲ್ಲ.

(ಕನ್ನಡ ಪ್ರಾಚೀನಕಾಲದಿಂದಲೂ ಸಂಸ್ಕೃತದ ಪ್ರಭಾವಕ್ಕೆ ಒಳಗಾಗಿ ಬೆಳೆದುಬಂದಿರುವ ಭಾಷೆ. ಕನ್ನಡ ಕವಿಗಳು ಎರಡೂ ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದವರಾದುದರಿಂದ ಅವರ ಕಾವ್ಯಗಳಲ್ಲಿ ಸಹಜವಾಗಿಯೇ ಸಂಸ್ಕೃತಪದಗಳು ಬೆರೆತುಹೋದವು. ಆದರೆ ಈ ರೀತಿಯ ಬೆರೆಸುವಿಕೆ ಕನ್ನಡ ಭಾಷೆಯ ಸೊಗಡನ್ನು ಮರೆಮಾಡಬಲ್ಲುದು. ಸಂಸ್ಕೃತ ಹಾಗೂ ಕನ್ನಡ ಭಾಷೆಗಳೆರಡಕ್ಕೂ ಸಮಾನವಾದ ಹಲವು ಪದಗಳಿವೆ. ಅವುಗಳು ಸಮಸಂಸ್ಕೃತಗಳು ಎನಿಸಿಕೊಂಡಿರುವುದರಿಂದ ಅವುಗಳನ್ನು ಕನ್ನಡ ಕಾವ್ಯರಚನೆಯ ಸಂದರ್ಭಗಳಲ್ಲಿ ಬಳಸಿಕೊಳ್ಳುವುದರಿಂದ ಕಾವ್ಯ ಸೊಗಸನ್ನು, ಘನತೆಯನ್ನು, ಹೊಸತನವನ್ನು ಪಡೆದುಕೊಳ್ಳುತ್ತದೆ. ಅವುಗಳ ಬಳಕೆಯೂ ಸಮಯ, ಸಂದರ್ಭ, ಯುಕ್ತಾಯುಕ್ತತೆಗಳನ್ನು ಆಧರಿಸಿರಬೇಕು. ಹೀಗಿದ್ದರೆ ಮಾತ್ರ ಕಾವ್ಯ ಲೋಕಮಾನ್ಯವಾಗುತ್ತದೆ. ಶಾಶ್ವತವಾಗಿ ನೆಲೆಯೂರುತ್ತದೆ. ಆದರೆ ಸಂಸ್ಕೃತ ಭಾಷೆಯ ವ್ಯಾಮೋಹಕ್ಕೆ ಒಳಗಾಗಿಯೋ ಅಥವಾ ಅದೇ ಶ್ರೇಷ್ಠವಾದ ಭಾಷೆ ಎಂಬ ಭ್ರಮೆಗೆ ಒಳಗಾಗಿಯೋ ಬೇಕುಬೇಕೆಂದರಲ್ಲಿ ಕನ್ನಡ ಭಾಷೆಗೆ ಅದರ ಜಾಯಮಾನಕ್ಕೆ ಸರಿಹೊಂದದ ಸಂಸ್ಕೃತ ಪದಗಳನ್ನು ಇರಿಮಿತಿಯಿಲ್ಲದೆ ತುರುಕುವುದರಿಂದ ಕನ್ನಡ ಭಾಷೆಯ ಕಸುವು ಅಳಿದುಹೋಗಿ, ಕಾವ್ಯದ ಸ್ಥಾನಮಾನಗಳೂ ಕುಸಿಯಬಹುದು. ಈ ರೀತಿಯಲ್ಲಿ ಕನ್ನಡದಲ್ಲಿ ಸಂಸ್ಕೃತಪದಗಳ ಬೆರೆಸುವಿಕೆ ಕಾವ್ಯದ ಸೊಗಸಿಗೆ ತಡೆಯೊಡ್ಡುತ್ತದೆ ಎಂದು ಕವಿರಾಜಮಾರ್ಗಕಾರ ಅಭಿಪ್ರಾಯಪಡುತ್ತಾನೆ.)

 

ವಿದಿತ ಸಮಸಂಸ್ಕೃತೋದಿತ

ಪದಂಗಳೊಳ್ ಪುದಿದು ಬೆರಸಿ ಬರೆ ಕನ್ನಡದೊಳ್

ಮುದಮನವು ತರ್ಕುಮತಿಶಯ

ಮೃದಂಗ ಸಂಗೀತಕಾದಿ ಮಧುರರವಂಬೊಲ್  ೧೫

ಪದ್ಯದ ಅನ್ವಯಕ್ರಮ:

ವಿದಿತ ಸಮಸಂಸ್ಕೃತ ಉದಿತ ಪದಂಗಳೊಳ್ ಪುದಿದು ಬೆರಸಿ ಬರೆ ಅವು ಅತಿಶಯ ಮೃದಂಗ ಸಂಗೀತಕೆ ಆದಿ ಮಧುರ ರವಂಬೊಲ್  ಕನ್ನಡದೊಳ್ ಮುದಮನ್ ತರ್ಕುಂ.

ಪದ-ಅರ್ಥ:

ವಿದಿತ-ನಿಶ್ಚಿತವಾದ;  ಸಮಸಂಸ್ಕೃತ-ಕನ್ನಡ ಸಂಸ್ಕೃತಗಳೆರಡಕ್ಕೂ ಸಮಾನವಾದ ಪದಗಳು;  ಉದಿತ-ಹುಟ್ಟಿದ, ಸೃಷ್ಟಿಯಾದ;  ಪದಂಗಳೊಳ್-ಪದಗಳಲ್ಲಿ;  ಪುದಿದು-ವ್ಯಾಪಿಸಿಕೊಂಡು;  ಬೆರಸಿ ಬರೆ-ಸೇರಿಕೊಂಡು ಬರಲು; ಮುದಮನ್-ಹಿತವನ್ನು, ಆನಂದವನ್ನು;  ತರ್ಕುಂ-ತರುತ್ತವೆ;  ಅತಿಶಯ-ಶ್ರೇಷ್ಠವಾದ;  ಸಂಗೀತಕಾದಿ-ಸಂಗೀತಕ್ಕೆ ಮೊದಲಾಗಿ;  ಮಧುರರವಂಬೊಲ್-ಹಿತವಾದ ಧ್ವನಿಯಂತೆ.

ಕಾವ್ಯರಚನೆಯ ಸಂದರ್ಭದಲ್ಲಿ ನಿಶ್ಚಿತವಾದ ಸಮಸಂಸ್ಕೃತ ಪದಗಳು ಸೃಷ್ಟಿಯಾಗಿ ಕನ್ನಡದೊಂದಿಗೆ ಸೇರಿಕೊಂಡು ಬಂದರೆ ಅವು ಕನ್ನಡ ಭಾಷೆಯಲ್ಲಿ ಅತಿಶಯವಾದ ಮೃದಂಗ, ಸಂಗೀತ ಮೊದಲಾದವುಗಳ ಮಧುರವಾದ ಧ್ವನಿಯಂತೆ ಕೇಳುಗಳ ಮನಸ್ಸಿಗೆ ಆನಂದವನ್ನು ಹಿತವನ್ನು  ಉಂಟುಮಾಡುತ್ತವೆ. 

(ಕನ್ನಡ ಕಾವ್ಯರಚನೆಯ ಸಂದರ್ಭಗಳಲ್ಲೆಲ್ಲ ಕವಿಗಳು ಕನ್ನಡ ಪದಗಳ ಬಳಕೆಗೆ ಒತ್ತುನೀಡಬೇಕಾದುದು ಸಹಜವಾದರೂ ಕೆಲವು ಕವಿಗಳು ಬೇರೆಬೇರೆ ಸಂದರ್ಭಗಳಲ್ಲಿ ಹಲವಾರು ಹೊಸಪದಗಳನ್ನು ಸೃಷ್ಟಿಮಾಡುತ್ತಾರೆ. ಹೀಗೆ ಹೊಸಪದಗಳನ್ನು ಸೃಷ್ಟಿಸುವಾಗ ಕವಿಗಳು ಭಾಷೆಯ ಜಾಯಮಾನವನ್ನು, ಅದರ ಅನನ್ಯತೆಯನ್ನು ಗಮನದಲ್ಲಿಟ್ಟುಕೊಂಡಿರಬೇಕು. ಕಾವ್ಯರಚನೆಯ ಸಂದರ್ಭಗಳಲ್ಲಿ ನಿಶ್ಚಿತವಾಗಿ ಸಂಸ್ಕೃತ ಹಾಗೂ ಕನ್ನಡಕ್ಕೆ ಸಮಾನವಾದ ಸಮಸಂಸ್ಕೃತ ಪದಗಳನ್ನು ಬಳಸಿಕೊಳ್ಳುವುದು ಸಹಜವಾದರೂ ಅವುಗಳು ಕನ್ನಡದ ಜಾಯಮಾನಕ್ಕೆ ಹೊಂದುವಂತಿರಬೇಕು, ಮಾತ್ರವಲ್ಲದೆ ಕೇಳುವುದಕ್ಕೂ ಹಿತವಾಗಿರಬೇಕು. ಆಗ ಮಾತ್ರ ಅಂತಹ ಪದಗಳಿಂದಾಗಿ ಕಾವ್ಯಕ್ಕೆ ಹೊಸ ಮೆರುಗು, ಹೊಸತನ ಪ್ರಾಪ್ತವಾಗುತ್ತದೆ. ಮಾತ್ರವಲ್ಲ ವಿಶೇಷವಾದ ಪ್ರತಿಭಾಪೂರ್ಣವಾದ ಮೃದಂಗ, ಸಂಗೀತಾದಿ ಧ್ವನಿಗಳು ಸಹೃದಯರ ಮನಸ್ಸಿಗೆ ಹೇಗೆ ಹಿತವನ್ನು, ಆನಂದವನ್ನು ಉಂಟುಮಾಡುತ್ತವೆಯೋ ಹಾಗೆಯೇ ಸಮಸಂಸ್ಕೃತ ಪದಗಳು ಸಹೃದಯರ ಕಿವಿಗಳಿಗೆ ಇಂಪಾಗಿ ಕೇಳಿಸುತ್ತವೆ, ರೋಮಾಂಚನಗೊಳಿಸುತ್ತವೆ. ಕಾವ್ಯಗಳು ಈ ರೀತಿಯಲ್ಲಿ ರಚನೆಗೊಳ್ಳಬೇಕೆಂಬುದು ಕವಿರಾಜಮಾರ್ಗಕಾರನ ಅಭಿಪ್ರಾಯ.)

 

ಜಾಣರ್ಕ್ಕಳಲ್ಲದವರುಂ

ಪೂಣಿಗರಱಿಯದೆಯುಮಱಿದವೋಲವಗುಣದಾ

ತಾಣಮದಿನಿಸೆಡೆವೊತ್ತೊಡೆ

ಮಾಣದೆ ಜಡಿದದನೆ ಕೃತಿಗಳಂ ಕೆಡೆನುಡಿವರ್  ೧೬

ಪದ್ಯದ ಅನ್ವಯಕ್ರಮ:

ಪೂಣಿಗರ್ ಅಱಿಯದೆಯುಂ ಜಾಣರ್ಕಳ್ ಅಲ್ಲದವರುಂ ಅಱಿದವೋಲ್ ಅವಗುಣದ  ಆ ತಾಣಂ  ಅದು ಇನಿಸು ಎಡೆವೊತ್ತೊಡೆ ಮಾಣದೆ ಜಡಿದು ಅದನೆ ಕೃತಿಗಳಂ ಕೆಡೆ ನುಡಿವರ್.

ಪದ-ಅರ್ಥ:

ಜಾಣರ್ಕಳಲ್ಲದವರುಂ-ಬುದ್ಧಿವಂತರಲ್ಲದವರೂ;  ಪೂಣಿಗರ್-ಜಾಣರು, ಚತುರರು;   ಅಱಿಯದೆಯುಂ-ಅರಿಯದಿದ್ದರೂ;  ಅಱಿದವೋಲ್-ತಿಳಿದಿರುವಂತೆ;  ಅವಗುಣ-ದೋಷ;    ಇನಿಸು-ಇಷ್ಟು;  ಎಡೆವೊತ್ತೊಡೆ-ಮಧ್ಯೆ ಸೇರಿಕೊಂಡರೆ;  ಮಾಣದೆ-ಒಪ್ಪದೆ;  ಜಡಿದು-ತಗ್ಗಿಸಿ, ಕುಗ್ಗಿಸಿ;  ಕೆಡೆನುಡಿವರ್-ಕೆಟ್ಟಮಾತನ್ನಾಡುತ್ತಾರೆ.

ಬುದ್ಧಿವಂತರಾದರೂ ಕವಿಗಳು ತಿಳಿಯದೆ ಸಣ್ಣದಾದ  ಕಾವ್ಯದೋಷಗಳನ್ನು ಕಾವ್ಯದಲ್ಲಿ ಉಳಿಸಿಕೊಂಡರೆ ಅವುಗಳನ್ನು ಬುದ್ಧಿವಂತರಲ್ಲದವರೂ ತಾವು ತಿಳಿದಿರುವಂತೆ ಭಾವಿಸಿಕೊಂಡು ಅಂತಹ ಅವಗುಣದ ಆ ಸನ್ನಿವೇಶವನ್ನೇ ನೆಪವಾಗಿಸಿಕೊಂಡು ಕಾವ್ಯದ ಘನತೆಯನ್ನು ಕುಗ್ಗಿಸಿ ಕೆಟ್ಟಮಾತುಗಳನ್ನಾಡುತ್ತಾರೆ.

(ಕವಿಗಳು ಮಾತುಬಲ್ಲವರಾದರೂ ಅವರು ಮನುಷ್ಯರೇ. ಕಾವ್ಯರಚನೆಯ ಭರದಲ್ಲಿ ತಿಳಿಯದೆ ಅಲ್ಲಲ್ಲಿ ಕೆಲವು ಸಣ್ಣಪುಟ್ಟ ದೋಷಗಳು ಕಾಣಿಸಿಕೊಳ್ಳಬಹುದು. ಅಥವಾ ಅವು ಕವಿಗಳ ಗಮನಕ್ಕೆ ಬಂದರೂ ಅವರು ಅವುಗಳನ್ನು ನಿರ್ಲಕ್ಷಿಸಿರಬಹುದು. ಆದರೆ ಆ ಸಣ್ಣಪುಟ್ಟ ದೋಷಗಳೂ ಕಾವ್ಯದ ಘನತೆಯನ್ನು ಕುಗ್ಗಿಸಬಲ್ಲವು. ಜಾಣರಾದವರಿಗೆ ಈ ದೋಷಗಳು ಗಮನಕ್ಕೆ ಬಂದರೆ ಅವರು ಅವುಗಳನ್ನು ನಿರ್ಲಕ್ಷಿಸಿ ಕಾವ್ಯವನ್ನು ಆಸ್ವಾದಿಸಬಲ್ಲರಾದರೂ ಜಾಣರಲ್ಲದವರು ಸುಮ್ಮನೆ ಕೂರಲಾರರು. ಅವರು ತಾವು ಮಾಹಾಜ್ಞಾನಿಗಳೆಂಬಂತೆ ವ್ಯವಹರಿಸಿ ಕಾವ್ಯದಲ್ಲಿನ ಸಣ್ಣಪುಟ್ಟ ದೋಷಗಳನ್ನೂ ಹಿರಿದುಗೊಳಿಸಿ ಕಾವ್ಯವನ್ನು ಕೆಟ್ಟಮಾತುಗಳಿಂದ ನಿಂದಿಸಿ ಕಾವ್ಯದ ಘನತೆಯನ್ನೇ ಕುಗ್ಗಿಸಬಲ್ಲರು. ಕವಿಗಳ ಮೇಲಿನ ಮತ್ಸರವೂ ಇದಕ್ಕೆ ಕಾರಣವಾಗಿರಬಹುದು. ಒಮ್ಮೆ ಕಾವ್ಯದ  ಘನತೆ ಕುಗ್ಗಿತೆಂದಾದರೆ ಮತ್ತೆ ಅದನ್ನು ಸರಿಪಡಿಸಿಕೊಳ್ಳಲು, ಅಥವಾ ಕಾವ್ಯದ ಸ್ಥಾನಮಾನಗಳನ್ನುಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಕವಿಗಳಾದವರು ತಮ್ಮ ಕಾವ್ಯಗಳನ್ನು ರಚಿಸಿದ ಮೇಲೆ ಅವುಗಳ ಪರಾಮರ್ಶೆಯನ್ನು ಅಗತ್ಯವಾಗಿ ಕೈಗೊಳ್ಳಬೇಕು. ತಾವು ಕೈಗೊಳ್ಳುವ ಜೊತೆಗೆ ಇತರ ಕಾವ್ಯಾಸಕ್ತರಿಂದ ಪರಾಮರ್ಶೆಗೆ ಒಳಪಡಿಸಬೇಕು. ಅವರು ಸೂಚಿಸುವ ದೋಷಗಳನ್ನು ಸರಿಪಡಿಸಿಕೊಂಡು ಅನಂತರ ಲೋಕಕ್ಕೆ ಸಮರ್ಪಿಸಬೇಕು ಎಂಬುದು ಕವಿಗಳಿಗೆ ಮಾರ್ಗಕಾರನ ಸಲಹೆ.)

 

ಅರಿದಾದಂ ಕನ್ನಡದೊ

ಳ್ತಿರಿಕೊಱೆಗೊಂಡಱಿಯೆ ಪೇೞ್ವೆನೆಂಬುದಿದಾರ್ಗಂ

ಪರಮಾಚಾರ್ಯರವೋಲ್ ಸೈ

ತಿರಲಱಿಯರ್ ಕನ್ನಡಕ್ಕೆ ನಾಡವರೊವಜರ್  ೧೭

ಪದ್ಯದ ಅನ್ವಯಕ್ರಮ:

ಕನ್ನಡದೊಳ್ ಆದಂ ಅರಿದು ತಿರಿಕೊಱೆಗೊಂಡು ಅಱಿಯೆ ಪೇೞ್ವೆನ್ ಎಂಬುದು ಇದು ಆರ್ಗಂ, ಪರಮ ಆಚಾರ್ಯರವೋಲ್ ಸೈತಿರಲ್ ಅಱಿಯರ್, ಕನ್ನಡಕ್ಕೆ ನಾಡವರ್ ಓವಜರ್.

ಅರಿದು-ತಿಳಿದು, ಗ್ರಹಿಸಿ;  ಆದಂ-ವಿಶೇಷವಾಗಿ, ಅತಿಶಯವಾಗಿ;  ಕನ್ನಡದೊಳ್-ಕನ್ನಡ ಭಾಷೆಯಲ್ಲಿ;  ತಿರಿಕೊಱೆಗೊಂಡು-ಯಾಚಿಸಿ ಪಡೆದುಕೊಂಡು;  ಅಱಿಯೆ-ತಿಳಿಯುವಂತೆ;  ಪೇೞ್ವೆನೆಂಬುದು-ಹೇಳುತ್ತೇನೆ ಎಂಬುದು;  ಆರ್ಗಂ-ತೃಪ್ತಿಕರವಾಗದು;  ಪರಮಾಚಾರ್ಯರವೋಲ್-ಶ್ರೇಷ್ಠ ಗುರುಗಳ ಹಾಗೆ;  ಸೈತಿರಲ್-ಸಮರ್ಪಕವಾಗಿರಲು;  ಅಱಿಯರ್-ತಿಳಿಯಲಾರರು;  ನಾಡವರ್-     ಪ್ರಜೆಗಳು;  ಒವಜರ್– ಗುರುಗಳು.

ಅವರಿವರಿಂದ ಕಾವ್ಯಕ್ಕೆ ಬೇಕಾದುದನ್ನು ಯಾಚಿಸಿ ಪಡೆದುಕೊಂಡು ಅನ್ಯರಿಗೆ ತಿಳಿಯುವಂತೆ ಕನ್ನಡದಲ್ಲಿ ವಿಶೇಷವಾಗಿ ಹೇಳುತ್ತೇನೆ ಎಂಬ ವಿಚಾರ ತೃಪ್ತಿಕರವೆನಿಸದು.  ಅಂತಹವರು ಶ್ರೇಷ್ಠಗುರುಗಳ ಹಾಗೆ ಸಮರ್ಪಕವಾದುದನ್ನು ತಿಳಿಯಲಾರರು, ತಿಳಿಸಲಾರರು. ಕನ್ನಡ ಭಾಷೆಗೆ ನಾಡಿನ ಜನರೇ ಗುರುಗಳೆನಿಸಿಕೊಂಡಿದ್ದಾರೆ.

(ಕಾವ್ಯರಚನೆಗೆ ವಿಶೇಷವಾದ ಪ್ರತಿಭೆ ಅತ್ಯಗತ್ಯ. ಮಾತ್ರವಲ್ಲದೆ ಇತರ ಕಾವ್ಯಗಳನ್ನು ಓದಿ ಅರ್ಥೈಸಿಕೊಳ್ಳುವ ಮನೋಭಾವವೂ ಅಗತ್ಯ. ಜೊತೆಗೆ ದೇಶಸಂಚಾರ, ಹಿರಿಯರೊಂದಿಗಿನ ಒಡನಾಟವೂ ಮುಖ್ಯ. ಇವೆಲ್ಲವುಗಳಿಂದ ಲೋಕಜ್ಞಾನ ಪ್ರಾಪ್ತವಾಗುತ್ತದೆ. ಅನುಭವವೂ ವೃದ್ಧಿಸುತ್ತದೆ. ಇವೆಲ್ಲವುಗಳನ್ನು ಸಾಧಿಸಿದ ಮೇಲೆ ಕಾವ್ಯವನ್ನು ಸುಲಭವಾಗಿ, ಸುಲಲಿತವಾಗಿ ರಚಿಸಬಹುದು. ಆದರೆ ವಿಶೇಷ ಪ್ರತಿಭೆಯೂ ಇಲ್ಲದೆ, ಭಾಷಾ ಜ್ಞಾನವೂ ಇಲ್ಲದೆ, ಹಿರಿಯರೊಂದಿಗಿನ ಒಡನಾಟವೂ ಇಲ್ಲದೆ ಅವರಿವರಿಂದ ಒಂದಷ್ಟು ಪದಗಳನ್ನು, ವಿಚಾರಗಳನ್ನು ಎರವಲು ಪಡೆದುಕೊಂಡು ಲೋಕಮಾನ್ಯವಾಗುವಂತೆ ಕನ್ನಡವನ್ನು ಆಡುತ್ತೇನೆ ಎನ್ನುವುದು ಅಥವಾ ಲೋಕಮಾನ್ಯವಾಗುವಂತಹ ಕಾವ್ಯವನ್ನು ರಚಿಸುತ್ತೇನೆ ಎನ್ನುವಂತಹುದು ಮೂರ್ಖತನ ಎನಿಸಿಕೊಳ್ಳುತ್ತದೆ. ಹೀಗೆ ಮಾಡುವ ಯಾವ ಕಾರ್ಯವೂ ತೃಪ್ತಿಕರವೆನಿಸಲಾರದು. ಅದು ಲೋಕಮಾನ್ಯವೂ ಆಗಲಾರದು. ಇದೊಂದು ವ್ಯರ್ಥ ಪ್ರಯತ್ನವಷ್ಟೆ. ಇಂತಹವರು ಲೋಕದಲ್ಲಿನ ಶ್ರೇಷ್ಠ ಗುರುಗಳ ಹಾಗೆ, ಪ್ರಾಜ್ಞರ ಹಾಗೆ, ಸಹಜವಾಗಿ ಮಾತರಿತವರ ಹಾಗೆ ಏನನ್ನೂ ಹೇಳಲಾರರು, ರಚಿಸಲಾರರು. ಯಾವುದನ್ನೂ ತೃಪ್ತಿಕರವಾಗಿ ತಿಳಿಸಲಾರರು. ಕನ್ನಡನಾಡಿನ ಜನರು ಸ್ವತಃ ಮಾತು ಬಲ್ಲವರಾಗಿರುವುದರಿಂದ ಯೋಗ್ಯರ ಮತ್ತು ಯೋಗ್ಯತೆ ಇಲ್ಲದವರ ಮಾತುಗಳನ್ನು ಸುಲಭವಾಗಿ ಪರಾಮರ್ಶೆ ಮಾಡಬಲ್ಲರು ಎಂಬುದು ಮಾರ್ಗಕಾರನ ನಿಲುವು.)

 

ಕವಿಗಳುಮನಾದಿಲೋಕೋ

ದ್ಭವರಪ್ಪುದಱಿಂದನಂತಗಣನಾನುಗತಂ

ಸವಿಶೇಷೋಕ್ತಿಗಳುಮನಂ

ತವಿಧಂಗಳನಂತ ಭೇದವದಱಿಂ ಮಾತುಂ  ೧೮

ಪದ್ಯದ ಅನ್ವಯಕ್ರಮ:

ಕವಿಗಳುಮಂ ಅನಾದಿಲೋಕ ಉದ್ಭವರ್ ಅಪ್ಪುದಱಿಂದ ಅನಂತ ಗಣನ ಅನುಗತಂ, ಅದಱಿಂ ಮಾತುಂ ಸವಿಶೇಷ ಉಕ್ತಿಗಳುಂ, ಅನಂತ ವಿಧಂಗಳ್ ಅನಂತ ಭೇದವು.

ಪದ-ಅರ್ಥ:

ಅನಾದಿಲೋಕೋದ್ಭವರಪ್ಪುದಱಿಂದ(ಅನಾದಿ+ಲೋಕ+ಉದ್ಭವರ್+ಅಪ್ಪುದಱಿಂ)-ಪುರಾತನ ಕಾಲದಿಂದ  ಲೋಕದಲ್ಲಿ ಹುಟ್ಟಿದವರಾದುದರಿಂದ;  ಅನಂತ-ಅಸಂಖ್ಯ;  ಗಣನ-ಎಣಿಕೆ;  ಅನುಗತಂ– ಅನುಸರಿಸಿ ಬಂದ;  ಸವಿಶೇಷ-ವಿಶೇಷತೆಗಳಿಂದ ಕೂಡಿದ;  ಉಕ್ತಿಗಳುಂ-ಮಾತುಗಳು, ಪದಗಳು;  ಭೇದ-ರೀತಿ;  ಮಾತುಂ-ನುಡಿ, ಪದ.   

ಕವಿಗಳೆನಿಸಿಕೊಂಡವರು ಪ್ರಾಚೀನಕಾಲದಿಂದಲು ಲೋಕದಲ್ಲಿ ಹುಟ್ಟಿಬೆಳೆದು ಸಾಧಿಸಿದವರು. ಹಾಗಾಗಿ ಅವರ ಸಾಧನೆಗಳು ಅನಂತವಾದವುಗಳು, ಅವುಗಳನ್ನು ಎಣಿಕೆ ಹಾಕುವುದಕ್ಕೆ ಅಸಾಧ್ಯ. ಅವರನ್ನು ಅನುಸರಿಸಿ ಬಂದಿರುವ ವಿಶೇಷತೆಗಳಿಂದ ಕೂಡಿದ  ಮಾತುಗಳು ಕಾಲದಿಂದ ಕಾಲಕ್ಕೆ ಭಿನ್ನಭಿನ್ನವಾಗಿವೆ. 

(ನಾಡಿನಲ್ಲಿ ಕವಿಗಳು ನಿನ್ನೆ  ಮೊನ್ನೆಯವರಲ್ಲ. ಯಾವಾಗ ಲೋಕದಲ್ಲಿರುವ ಘಟನೆಗಳನ್ನು ವಿಶೇಷರೂಪದಲ್ಲಿ ವಿಶೇಷವಾದ ಮಾತುಗಳಿಂದ ತಿಳಿಸುವ, ಅನ್ಯರನ್ನು ರಸಾನುಭವಕ್ಕೆ ತೊಡಗಿಸುವ ಪ್ರವೃತ್ತಿ ಬೆಳೆಯಿತೋ ಅಂದಿನಿಂದಲೇ ಕವಿಗಳು ಲೋಕಮಾನ್ಯರಾಗತೊಡಗಿದರು. ಅವರು ಪ್ರಾಚೀನಕಾಲದಿಂದಲೂ ಲೋಕದಲ್ಲಿ ಹುಟ್ಟಿಬೆಳೆದು ಕಾವ್ಯರಚನೆಯಲ್ಲಿ ತೊಡಗಿ ಅಪೂರ್ವವಾದುದನ್ನು ಸಾಧಿಸಿದವರು. ಕಾಲಕಾಲಕ್ಕೆ ಹೊಸತು ಹೊಸತನ್ನು ಕಂಡುಕೊಂಡು ನವನವೀನ ರೂಪದಲ್ಲಿ ಮಾತುಗಳನ್ನು ಹೊಸೆದವರು, ಕಾವ್ಯಗಳನ್ನು ರಚಿಸಿದವರು. ಹಾಗಾಗಿ ಅವರ ಸಾಧನೆಗಳು ಅನಂತವಾದವುಗಳು. ಅವುಗಳನ್ನು ಎಣಿಕೆ ಹಾಕುವುದು ಸಂಭಾವ್ಯವಲ್ಲ. ಹೇಗೆ ಕವಿಗಳ ಸಾಧನೆ ಅನಂತವೋ ಅವರು ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿರುವ ಮಾತುಗಳೂ, ಅರ್ಥಗಳೂ ವಿಚಾರಗಳೂ ವರ್ಣನೆಗಳೂ  ಅನಂತ. ಅವರ ಕಾವ್ಯಸ್ವರೂಪವೂ ಅನಂತ. ಅವರ ಪದಸೃಷ್ಟಿಯೂ ಅನಂತ. ಹೀಗೆ ಕಾಲದಿಂದ ಕಾಲಕ್ಕೆ ಕಾಲಕ್ಕನುಗುಣವಾಗಿ ಮಾತು, ರಚನೆ, ಭಾಷೆ ಮೊದಲಾದವುಗಳಲ್ಲಿ ವೈವಿಧ್ಯಗಳು ಕಾಣಿಸಿಕೊಂಡು ನಾಡಿನ ಸಹೃದಯರ ರಸಾನುಭವಕ್ಕೆ ಕಾರಣವಾಗಿವೆ. ಈ ನಿಟ್ಟಿನಲ್ಲಿ ಕವಿಗಳು ಅಭಿನಂದನೀಯರು ಎಂಬುದು ಮಾರ್ಗಕಾರನ ನಿಲುವು.)

***

Leave a Reply

Your email address will not be published. Required fields are marked *