ಸಾಹಿತ್ಯಾನುಸಂಧಾನ

heading1

ಮಾವನ ಮನೆಯಲ್ಲಿ

                “ಮೈಸೂರ ಮಲ್ಲಿಗೆ”ಯ ಮೂಲಕ ಕನ್ನಡನಾಡಿಗೆ ‘ಪ್ರೇಮಕವಿ’ ಎಂದೇ ಚಿರಪರಿಚಿತರಾದ, ನಾಡಿನ ಮಾತ್ರವಲ್ಲದೆ ಹೊರನಾಡಿನ ಪ್ರೇಮಿಗಳ, ನವದಂಪತಿಗಳ ನರನಾಡಿಗಳನ್ನು ಹೃದ್ಯವಾಗಿ ಮಿಡಿಯುವಂತೆ ಮಾಡಿದ ಮಧುರಕವಿ ಕೆ.ಎಸ್. ನರಸಿಂಹಸ್ವಾಮಿ. ಅವರು ತಮ್ಮ ಈ ಮೊದಲ ಕವನಸಂಕಲನದ ಮೂಲಕ ನಾಡಿನಾದ್ಯಂತ ಹೊಡೆದ ಜಯಭೇರಿಗೆ ಈ ಸಂಕಲನ ಕಂಡ ಮರುಮುದ್ರಣಗಳೇ ಸಾಕ್ಷಿ. ೧೯೪೨ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡು ಬರೋಬ್ಬರಿ ಎಂಬತ್ತು ವರ್ಷಗಳನ್ನು ಹೊಂದಿದರೂ ಈ ಕವನಸಂಕಲನ ಇಂದಿಗೂ ನವಯೌವನದಿಂದಲೇ ರಾರಾಜಿಸುತ್ತಿದೆ. ಇದೊಂದು ಚಿರಂಜೀವಿಯಾದ ಪ್ರೇಮಕಾವ್ಯ. ಪ್ರೀತಿ-ಪೇಮಗಳ ಅನನ್ಯತೆ, ಮಾಧುರ್ಯ, ಆದರ್ಶದಾಂಪತ್ಯ ಮೊದಲಾದ  ಹೆಗ್ಗಳಿಕೆಗಳನ್ನು ಮೈಗೂಡಿಸಿಕೊಂಡು ನಿತ್ಯನೂತನವಾಗಿ ಕಿರಿಯರಿಂದ ಹಿಡಿದು ಹಿರಿಯರವರೆಗೂ ಮನಸ್ಸಿಗೆ ಆಪ್ಯಾಯಮಾನವಾಗುವ, ಮೈಯನ್ನು ರೋಮಾಂಚನಗೊಳಿಸುವ ಅಮರ ಮಧುರ ಪ್ರೇಮಕಾವ್ಯ. “ಮೈಸೂರ ಮಲ್ಲಿಗೆ” ಅಂದಿಗೂ ಇಂದಿಗೂ ಎಂದೆಂದಿಗೂ ಪ್ರಸ್ತುತವಾದ ದಾಂಪತ್ಯಕಾವ್ಯ. ಕನ್ನಡದಲ್ಲಿ ದಾಂಪತ್ಯಗೀತೆಗೆ ಮುನ್ನುಡಿ ಬರೆದವರೆ ಕೆ.ಎಸ್. ನರಸಿಂಹಸ್ವಾಮಿ ಹಾಗೂ ಅದಕ್ಕೆ ಸರಿಸಾಟಿಯಾಗಿ ಜೊತೆಯಾದವರು ಅವರ ಮನದನ್ನೆ ವೆಂಕಮ್ಮ.

                ಕೆ.ಎಸ್. ನರಸಿಂಹಸ್ವಾಮಿ ಜೀವನದುದ್ದಕ್ಕೂ ಆರ್ಥಿಕ ಸಮಸ್ಯೆಗಳನ್ನು, ಸಾಂಸಾರಿಕ ತಾಪತ್ರಯಗಳನ್ನು ಎದುರಿಸಿ ಬದುಕಿದವರು. ೧೯೩೬ರಲ್ಲಿ ವೆಂಕಮ್ಮ ಅವರ ಮಡದಿಯಾಗಿ, ಮನೊಯೊಡತಿಯಾಗಿ ಅದಕ್ಕಿಂತಲೂ ಹೆಚ್ಚಾಗಿ ಮನದೊಡತಿಯಾಗಿ, ಸಖಿಯಾಗಿ,  ಮನದನ್ನೆಯಾಗಿ ಬಂದು ಮನೆ, ಮನಗಳನ್ನು ಬೆಳಗಿದರು. “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿರೂಪಾಯಿ” ಎಂದು ಅವರು ಸುಮ್ಮನೆ ಹಾಡಿದ್ದಲ್ಲ. ಪ್ರೀತಿ, ಪ್ರೇಮ, ವಿಶ್ವಾಸ, ರಸಿಕತೆಗಳಲ್ಲೆಲ್ಲ ಸಮಪಾಲು ಪಡೆದು ಸಮಬಾಳನ್ನು ಬಾಳಿದ ವೆಂಕಮ್ಮ ಕವಿಯ ದಾಂಪತ್ಯಗೀತೆಗಳ ರಚನೆಗೆ ಸ್ಫೂರ್ತಿಯಾದರು. ಅವರ ಕವನಗಳೆಲ್ಲವೂ ಒಂದಕ್ಕಿಂತ ಒಂದು ಮಿಗಿಲು. ಅದರಲ್ಲಿಯೂ ಜನಮಾನಸವನ್ನು ಸೂರೆಗೊಂಡ ದಾಂಪತ್ಯಗೀತೆ “ಮಾವನ ಮನೆಯಲ್ಲಿ” ಎಂಬ ಶೀರ್ಷಿಕೆಯ ‘ರಾಯರು ಬಂದರು ಮಾವನ ಮನೆಗೆ’.

 

ರಾಯರು ಬಂದರು ಮಾವನ ಮನೆಗೆ

         ರಾತ್ರಿಯಾಗಿತ್ತು;

ಹುಣ್ಣಿಮೆ ಹರಸಿದ ಬಾನಿನ ನಡುವೆ

        ಚಂದಿರ ಬಂದಿತ್ತು-ತುಂಬಿದ

        ಚಂದಿರ ಬಂದಿತ್ತು.

 

ಮಾವನ ಮನೆಯಲಿ ಮಲ್ಲಿಗೆ ಹೂಗಳ

        ಪರಿಮಳ ತುಂಬಿತ್ತು.

ಬಾಗಿಲ ಬಳಿ ಬಿಸಿನೀರಿನ

       ತಂಬಿಗೆ  ಬಂದಿತ್ತು-ಒಳಗಡೆ

       ದೀಪದ ಬೆಳಕಿತ್ತು.

 

ಘಮಘಮಿಸುವ ಮೃಷ್ಟಾನ್ನದ ಭೋಜನ

       ರಾಯರ ಕಾದಿತ್ತು.

ಬೆಳ್ಳಿಯ ಬಟ್ಟಲ ಗಸಗಸೆ ಪಾಯಸ

        ರಾಯರ ಕರೆದಿತ್ತು-ಭೂಮಿಗೆ

       ಸ್ವರ್ಗವೇ ಇಳಿದಿತ್ತು.

 

ಚಪ್ಪರಗಾಲಿನ ಮಂಚದ ಮೇಗಡೆ

      ಮೆತ್ತನೆ ಹಾಸಿತ್ತು.

ಅಪ್ಪಟ ರೇಸಿಮೆ ದಿಂಬಿನ ಅಂಚಿಗೆ

      ಚಿತ್ರದ ಹೂವಿತ್ತು-ಪದುಮಳು

      ಹಾಕಿದ ಹೂವಿತ್ತು.

 

ಚಿಗುರೆಲೆ ಬಣ್ಣದ ಅಡಕೆಯ ತಂದಳು

      ನಾದಿನಿ ನಸುನಗುತ;

ಬಿಸಿಬಿಸಿ ಹಾಲಿನ ಬಟ್ಟಲ ತಂದರು

      ಅಕ್ಕರೆಯಲಿ ಮಾವ-ಮಡದಿಯ

      ಸದ್ದೇ ಇರಲಿಲ್ಲ.

 

ಮಡದಿಯ ತಂಗಿಯ ಕರೆದಿಂತೆಂದರು;

     “ಅಕ್ಕನ ಕರೆಯಮ್ಮ”

ಮೆಲುದನಿಯಲಿ ನಾದಿನಿ ಇಂತೆಂದಳು;

     “ಪದುಮಳು ಒಳಗಿಲ್ಲ”-ನಕ್ಕಳು

      ರಾಯರು ನಗಲಿಲ್ಲ.

 

ಏರುತ ಇಳಿಯುತ ಬಂದರು ರಾಯರು

      ದೂರದ ಊರಿಂದ.

ಕಣ್ಣನು ಕಡಿದರು ನಿದ್ದೆಯು ಬಾರದು

      ಪದುಮಳು ಒಳಗಿಲ್ಲ-ಪದುಮಳ

      ಬಳೆಗಳ ದನಿಯಿಲ್ಲ.

 

ಬೆಳಗಾಯಿತು; “ಸರಿ, ಹೊರಡುವೆ”ನೆಂದರು

      ರಾಯರು ಮುನಿಸಿನಲಿ

ಒಳಮನೆಯಲಿ “ನೀರಾಯಿತು!” ಎಂದಳು

      ನಾದಿನಿ ರಾಗದಲಿ. “ಯಾರಿಗೆ?”

      ಎನ್ನಲು ಹರುಷದಲಿ.

 

ಪದುಮಳು ಬಂದಳು ಹೂವನು ಮುಡಿಯುತ

      ರಾಯರ ಕೋಣೆಯಲಿ 

                                                             -ಕೆ.ಎಸ್. ನರಸಿಂಹಸ್ವಾಮಿ

                ಎಲ್ಲೋ ಹುಟ್ಟಿದ ಗಂಡು, ಇನ್ನೆಲ್ಲೋ ಹುಟ್ಟಿದ ಹೆಣ್ಣು ಪರಸ್ಪರ ಒಲಿದು, ಒಪ್ಪಿ ದಾಂಪತ್ಯಕ್ಕೆ ಕಾಲಿಟ್ಟು ಅವಿನಾಭಾವದಿಂದ ಬದುಕಿನುದ್ದಕ್ಕೂ ಒಂದಾಗಿ ಬಾಳುವುದೇ ವಾಸ್ತವಸೋಜಿಗ. ಮದುವೆಯಾದ ಆರಂಭಿಕ ದಿನಗಳಲ್ಲಿ ಗಂಡ-ಹೆಂಡತಿಯರೊಳಗೆ ಪ್ರೀತಿ, ಪ್ರೇಮ, ಮೋಹ, ಕಾಮಗಳು ಅತ್ಯಂತ ಸಹಜ. ಗಂಡ-ಹೆಂಡತಿಯರಿಗೆ ಪರಸ್ಪರರ ಮೇಲೆ ಅದೇನೋ ಆಕರ್ಷಣೆ; ಹೇಳಲಾಗದ, ವರ್ಣಿಸಲಾಗದ ಸೆಳೆತ; ಅಗಲಿ ಇರಲಾರದ ಬಂಧನ. ಮದುವೆಯಾಗಿ ಕೆಲವೇ ದಿನಗಳು ಕಳೆದಿವೆ. ಮನದನ್ನೆಯನ್ನು ತವರಲ್ಲಿ ಬಿಟ್ಟುಬಂದ ಮನದನ್ನ ತನ್ನ ಒಂಟಿತನಕ್ಕೆ ಬೇಸತ್ತು ಆಕೆಯನ್ನು ಕರೆತರಲೆಂದು ಆಕೆಯ ತವರಿಗೆ ಹೋಗುತ್ತಾನೆ. ಇಂದಿನಂತೆ ಬಸ್ಸು, ಕಾರುಗಳಿಲ್ಲ. ಎಲ್ಲೋ ಒಂದಷ್ಟು ದೂರದವರೆಗೆ ಎತ್ತಿನ ಬಂಡಿ. ಅಮೇಲೆ ನಡಿಗೆ. ಮದುವೆಯಾಗಿ ಮೊದಲ ಬಾರಿಗೆ ಹೆಂಡತಿಯ ತವರಿಗೆ ಹೊರಟ ಗಂಡನ ಪ್ರೀತಿ, ಪ್ರೇಮ, ಮೋಹ, ನಿರೀಕ್ಷೆ, ಕಾತರ, ಗಲಿಬಿಲಿ, ಗೊಂದಲದ ಸ್ಥಿತಿಗತಿಗಳ ಸಂದರ್ಭದಲ್ಲಿ ಸಾಕಾರಗೊಂಡ ಗೀತೆಯೇ ಈ ದಾಂಪತ್ಯಗೀತೆ.

                ಮದುವೆಯಾದ ಮೇಲೆ ಮೊದಲ ಬಾರಿಗೆ ಮಾವನ ಮನೆಗೆ ಬಂದ ರಾಯರಿಗೆ ಅತ್ತೆ ಮಾವರಿಗಿಂತ ಮನದನ್ನೆಯನ್ನು ನೋಡುವ ಹಂಬಲ. ಅತ್ತೆ, ಮಾವರ ಮುಂದೆ ಹೇಗೆ ನಡೆದುಕೊಳ್ಳಬೇಕು? ಹೇಗೆ ಮಾತಾಡಬೇಕು? ಎಂಬ ಸವಾಲು. ಮನದನ್ನೆ ಇದ್ದಾಳಲ್ಲ, ತಮ್ಮ ಮಧ್ಯೆ ಸೇತುವೆಯಾಗಿ ಎಂಬ ಸಮಾಧಾನ.  ಈ ಗುಂಗಿನಲ್ಲೇ  ಮನೆಯಿಂದ ಕಾಲ್ನಡಿಗೆಯಲ್ಲೇ ಹೊರಟ ರಾಯರು ಮಾವನಮನೆಗೆ ತಲುಪುವಾಗಲೇ ರಾತ್ರಿ.  ಹುಣ್ಣಿಮೆ ಚಂದ್ರ ತನ್ನ ಸುಂದರರೂಪವನ್ನು ತೋರಿ ತಂಪಾದ ಬೆಳದಿಂಗಳನ್ನು ಪಸರಿಸಿದ್ದ. ಈ ತಂಪಿನ ಸನ್ನಿವೇಶದಲ್ಲಿ ಹೆಂಡತಿ ಕಾಲಿಗೆ ನೀರು ತಂದು ನಗುಬೀರಿ ಸ್ವಾಗತಿಸಬಹುದೆಂಬ ನಿರೀಕ್ಷೆ. ಮನದನ್ನೆಯ ಮೆಲುನುಡಿಗಳ ಮೆಲುಕಾಟದಲ್ಲಿ ತನ್ನೂರಿನಿಂದ ಇಲ್ಲಿಯವರೆಗೆ ನಡೆದುಕೊಂಡು ಬಂದ ರಾಯರಿಗೆ ಆಯಾಸ ತಿಳಿಯುವುದಾದರೂ ಹೇಗೆ?

                ಹೊರಗಡೆಯೆಲ್ಲ ಬೆಳದಿಂಗಳ ತಂಪು, ಮನೆಯಲ್ಲೆಲ್ಲ ಮಲ್ಲಿಗೆ ಹೂಗಳ ಕಂಪು. ಮನದನ್ನೆಯ ಮೋಹಕ ನಗುವಿನ ನಿರೀಕ್ಷೆಯಲ್ಲಿದ್ದ ರಾಯರಿಗೆ ಆಕೆ ಕಾಲಿಗೆ ನೀರುಕೊಡುವ ನೆಪದಲ್ಲಾದರೂ ಬಂದು ಕಣ್ಣಲ್ಲಿಯೇ ಮುದ್ದಾಡಬಹುದೆಂಬ ನಿರೀಕ್ಷೆ ಸುಳ್ಳಾಗಿ ಮನದಲ್ಲಿ ಕಸಿವಿಸಿ. ಮನದನ್ನೆಯ ಮುದ್ದುಮುಖವನ್ನು ಅವರ ಕಣ್ಣುಗಳು ಹುಡುಕಾಡಿ ಸೋತಾಗ ಒಳಗಡೆಯ ದೀಪದ ಬೆಳಕಾದರೂ ಹೇಗೆ ಹಿತವೆನಿಸೀತು?! ಅಳಿಯನಿಗಾಗಿ ಅತ್ತೆ ಘಮಘಮಿಸುವ  ಮೃಷ್ಟಾನ್ನಭೋಜನ ಸಿದ್ಧಪಡಿಸಿ, ಸ್ವರ್ಗವನ್ನೇ ಭೂಮಿಗಿಳಿಸಿದ್ದರು. ಅಳಿಯನೆಂಬ ಗೌರವದಿಂದ ಬಡಿಸಿ ಉಪಚರಿಸುತ್ತಿದ್ದರೂ ಬೆಳ್ಳಿಯ ಬಟ್ಟಲ ತುಂಬಿದ್ದ, ತಮಗಿಷ್ಟವಾದ ಬಿಸಿಬಿಸಿ ಗಸಗಸೆ ಪಾಯಸದ ಪರಿಮಳ ಮೂಗಿಗೆ ಬಡಿಯುತ್ತಿದ್ದರೂ ರಾಯರಿಗೆ ಊಟ ಸೇರಲಿಲ್ಲ. ಪಾಯಸ ರುಚಿಸಲಿಲ್ಲ. ಉಪಚಾರದ ಮಾತುಗಳು, ಬಡಿಸುತಿದ್ದ ಕೈಗಳೂ ಪ್ರೀತಿಯ ನೋಟವಾವುದೂ ಮನದನ್ನೆಯದಲ್ಲವಲ್ಲ! ಹೇಗೆ ಹಿತವಾದೀತು?! ಹೇಗೆ ಸ್ವರ್ಗಸಮಾನವಾದೀತು?!

                ಊಟವಾಯಿತಲ್ಲ?! ಬಾಯಿಗೆ ರುಚಿಸಿದರೆ ತಾನೆ! ಇನ್ನು ನಿದ್ದೆ. ಚಪ್ಪರಗಾಲಿನ ಮಂಚ, ಅದರ ಮೇಲ್ಗಡೆ ಮೆತ್ತನೆ ಹಾಸುಗೆ, ರೇಶಿಮೆಯ ದಿಂಬು. ದಿಂಬಿಗೆ ತನ್ನ ಮನದನ್ನೆ ಪದುಮಳು ಹಾಕಿದ ಕಸೂತಿಹೂವು. ಆಕೆ ಜೊತೆಯಲ್ಲಿರುತ್ತಿದ್ದರೆ ಹಾಸುಗೆಗೂ ದಿಂಬಿಗೂ ದಿಂಬಿನ ಮೇಲಿನ ಹೂವಿಗೂ ಒಂದು ಹೊಸ ಚೈತ್ಯನ್ಯ, ಹೊಸ ಚೆಲುವು, ಹೊಸ ಅರ್ಥ ಇರುತ್ತಿತ್ತೇನೋ! ಈಗಲಾದರೂ ಬಂದಾಳು ಎಂಬ ನಿರೀಕ್ಷೆ. ಆದರೆ ಆಕೆಯ ಸುಳಿವಿಲ್ಲ. ಮತ್ತೆ ನಿರೀಕ್ಷೆ ಸುಳ್ಳಾಯಿತು. ಊಟವಾದ ಮೇಲೆ ತಾಂಬೂಲ ತಾನೆ. ತನ್ನ ಪದುಮ ಅದನ್ನಾದರೂ ತಂದು ಉಪಚರಿಸಿಯಾಳೆಂಬ ನಿರೀಕ್ಷೆ ಮತ್ತೆ ಸುಳ್ಳಾಯಿತು. ನಾದಿನಿ ಚಿಗುರೆಲೆ ಬಣ್ಣದ ಅಡಕೆಯನ್ನು ತಂದಿರಿಸಿ ನಗುವಿನ ಮೂಲಕವೇ ಛೇಡಿಸಿದಳು. ಮಾವ ಬಿಸಿಬಿಸಿ ಹಾಲಿನ ಬಟ್ಟಲನ್ನು ತಂದಿರಿಸಿದರು. ಪದುಮಳ ಇಂಪುದನಿ, ಮಧುರಮಾತು, ತುಂಟನಗು ಯಾವುದೂ ಕೇಳಿಸಲಿಲ್ಲ. ತನ್ನ ಪದುಮ ಎಲ್ಲಿ? ಕೇಳುವುದಾದರೂ ಹೇಗೆ? ಅತ್ತೆ, ಮಾವರನ್ನು ಕೇಳಿದರೆ, ’ಏನು ಅಷ್ಟೊಂದು ಆಸೆಯೇ?’ ಎಂದು  ನಕ್ಕಾರು! ನಾದಿನಿಯನ್ನು ಕೇಳಿದರೆ ಛೇಡಿಸಿಯಾಳು! ಅವಳೊ ಮಹಾತುಂಟಿ, ಗೋಳುಹೊಯ್ಯಲು ಕಾದಿರುವವಳು. ರಾಯರಿಗೆ ಚಡಪಡಿಕೆ, ಗೊಂದಲ, ಕಸಿವಿಸಿ, ನೋವು, ಅಸಹಾಯಕತೆ, ತಳಮಳಗಳೆಲ್ಲ ಕ್ಷಣಕ್ಷಣಕ್ಕೂ ಹೆಚ್ಚಾಯಿತು.

                ರಾಯರ ಚಡಪಡಿಕೆ, ಅಸಹಾಯಕತೆ, ನೋವುಗಳೆಲ್ಲ ಮಾವನಿಗೆ ಅರ್ಥವಾಯಿತು. ಅರ್ಥವಾಗಲೇಬೇಕಲ್ಲ! ಅವರೋ ಅದೆಲ್ಲವನ್ನೂ ದಾಟಿಬಂದವರಲ್ವೇ. ದಾಂಪತ್ಯದ ಸುಖ-ಸುಮ್ಮಾನಗಳನ್ನು, ದುಃಖ-ದುಮ್ಮಾನಗಳನ್ನು ಅರಿತವರು. ಆದರೆ ಅವರಿಗಾದರೂ ಅಳಿಯನ ಆಸೆ ಈಡೇರಿಸಲು ಸಾಧ್ಯವೇ? ಕೊನೆಗೆ ರಾಯರೇ ಸ್ವಲ್ಪ ಧೈರ್ಯಮಾಡಿ, ಸಂಕೋಚವನ್ನು ಬದಿಗಿರಿಸಿ ನಾದಿನಿಯಲ್ಲಿ  ಮೆಲ್ಲನೆ,  “ಅಕ್ಕನ ಕರೆಯಮ್ಮ” ಎಂದು  ಅಂಗಲಾಚಿದಾಗ, ಆಕೆಯೋ “ಪದುಮಳು ಒಳಗಿಲ್ಲ!” ಎಂದು ನಕ್ಕು ಛೇಡಿಸಿದಳು. ಆದರೆ ರಾಯರಿಗೆ ಅರ್ಥವಾಯಿತೋ ಇಲ್ಲವೋ! ನಗುವಂತೂ ಬರಲಿಲ್ಲ. ಬರುವುದಕ್ಕೆ ಸಾಧ್ಯವೇ? ತಾನು ಬಂದುದಾದರೂ ಏಕೆ? ತನ್ನ ಮುದ್ದಿನ ಹೆಂಡತಿಯ ಮುದ್ದುಮುಖವನ್ನು ನೋಡಲು, ಪ್ರೀತಿಪ್ರೇಮಗಳಿಂದ ಒಂದಷ್ಟು ಪಿಸುಮಾತಾಡಲು. ಆದರೆ ಮದುವೆಯಾಗಿಯೂ ಬ್ರಹ್ಮಚಾರಿತನ ಕಳೆಯಲಿಲ್ಲವಲ್ಲ! ಎಂಬ ಬೇಸರ.

                 ಹೆಂಡತಿಯನ್ನು ತವರಿಗೆ ಕಳುಹಿಸಿ ದಿನಗಳು ಕೆಲವೇ ಉರುಳಿದರೂ ಅದು ಯುಗವೇ ಉರುಳಿದಂತಿದೆಯಲ್ಲ! ರಾಯರೋ ದೂರದೂರಿಂದ ನಡೆದುಕೊಂಡು ಬಂದು ದಣಿದಿದ್ದಾರೆ. ಹೆಂಡತಿಯ ಮುಖದರ್ಶನವಾದರೂ ಆಗಿರುತ್ತಿದ್ದರೆ ಅವರ ದಣಿವು, ಆಯಾಸಗಳೆಲ್ಲವೂ ತನ್ನಿಂದ ತಾನೇ ಕರಗಿಹೋಗುತ್ತಿದ್ದವು. ಆದರೆ ಹಾಗಾಗಲಿಲ್ಲ. ಕಣ್ಣುಮುಚ್ಚಿದರೂ  ರಾಯರಿಗೆ ನಿದ್ದೆ ಬರಲಿಲ್ಲ. ಮನದನ್ನೆಯ ಮುದ್ದುಮುಖ(ಗಂಡನ ಪಾಲಿಗೆ ಹೆಂಡತಿ ಯಾವತ್ತಿದ್ದರೂ ಮುದ್ದು), ಆಕೆಯ ಪ್ರೀತಿತುಂಬಿದ ಮೆಲುಮಾತು, ಆಕೆಯ ಹಿತವಾದ ಆಲಿಂಗನ, ಒಲುಮೆಯ ನೋಟಗಳ ಮಹಾಪೂರವೇ ಇರುತ್ತಿದ್ದರೂ ರಾಯರಿಗೆ ನಿದ್ದೆಯೇ ಬರುತ್ತಿರಲಿಲ್ಲವೇನೋ?! ಬಹಳ ದಿನಗಳಾಗಿವೆಯಲ್ಲ ಅಗಲಿ!  ಆಕೆಯ ಮುಖದರ್ಶನವಿಲ್ಲ,  ಆಕೆಯ ಕೈಬಳೆಗಳ ಸದ್ದೂ ಇಲ್ಲ. ಮೆತ್ತನೆಯ ಹಾಸುಗೆ ರಾಯರಿಗೆ ಒರಟಾಯಿತು. ರಾತ್ರಿಯುದ್ದಕ್ಕೂ ರೇಶಿಮೆದಿಂಬು, ಅದರ ಮೇಲಿನ ಹೂವಿನ ಚಿತ್ರ ರಾಯರಿಗೆ ಮನದನ್ನೆಯಷ್ಟೇ ಪ್ರಿಯವಾಯಿತೇನೋ! ದಿಂಬಿನ ಅಂಚಿನ ಚಿತ್ರದ ಹೂವಿನ ಮೇಲೆ ಎಷ್ಟುಬಾರಿ ಕೈಯಾಡಿಸಿದರೋ ಬಲ್ಲವರಾರು?! 

                ಅಂತೂ ಇಂತೂ ರಾಯರ ಪಾಲಿಗೆ ರಾತ್ರಿ ದೀರ್ಘವಾಯಿತು.   ರಾತ್ರಿಯಿಡೀ ಉರುಳುಸೇವೆಯ ಹರಕೆ. ಸಿಟ್ಟೂ ಬಂತು, ಮಾವನ ಮೇಲೆ, ಅತ್ತೆಯ ಮೇಲೆ, ನಾದಿನಿಯ ಮೇಲೆ, ಪದುಮಳ ಮೇಲೂ. ಉಳಿದವರು ಹಾಗಿರಲಿ, ಪದುಮಳಾದರೂ ಕನಿಷ್ಟ ಒಂದು ಸಲವಾದರೂ ತನ್ನ ಮುಖತೋರಿಸಬಾರದಿತ್ತೇ? ಮೆಲುದನಿಯಲ್ಲಾದರೂ ಮಾತಾಡಿಸಬಾರದಿತ್ತೇ? ಕಣ್ಣಲ್ಲೇ ಆಲಿಂಗಿಸಿಕೊಳ್ಳಬಾರದಿತ್ತೇ? ಒಂಟಿತನವಾದರೂ ಹೇಗೆ ಸಹನೆಯಾದೀತು?  ಅಂತೂ ಬೆಳಗಾದಾಗ,  “ಸರಿ ಹೊರಡುವೆ” ಎಂಬ ರಾಯರ ಮುನಿಸಿನ ಮಾತಿನಿಂದ ನಾದಿನಿಗೆ, “ಅಯ್ಯೋ ಪಾಪ” ಅನ್ನಿಸಿತೇನೋ! ಒಳಮನೆಯಿಂದಲೇ “ನೀರಾಯಿತು” ಎಂದಳು ರಾಗದಲ್ಲಿ. ಆದರೆ ಅಲ್ಲೂ ಗುಟ್ಟುಬಿಟ್ಟುಕೊಡದೆ “ಯಾರಿಗೆ?” ಎಂದು ಛೇಡಿಕೆಯ ಹರುಷದ ಮಾತು ಬೇರೆ. ಅತ್ತೆ-ಮಾವನರಿಗೆ, ಜೊತೆಗೆ ಪದುಮಳಿಗೂ ರಾಯರ ಪರದಾಟ ಅರ್ಥವಾಗಿದ್ದಿರಬೇಕು. ಆಗತಾನೇ ತಲೆತನಕ ಮಿಂದು ಹೊಸಸೀರೆಯುಟ್ಟು, ಕೈತುಂಬ ಬಳೆತೊಟ್ಟು, ಮುಡಿತುಂಬ ಮಲ್ಲಿಗೆ ಮುಡಿಯುತ್ತ ರಾಯರ ಕೋಣೆಗೆ ಕಾಲಿರಿಸಿದ ಪದುಮ ರಾಯರಿಗೆ ಅಪ್ಸರೆಯಾಗಿ ಕಂಡಿರಬೇಕು. ರಾಯರ ಮುನಿಸು, ಚಡಪಡಿಕೆ, ಅಸಮಾಧಾನ, ಕಸಿವಿಸಿಗಳೆಲ್ಲವೂ ಮಾಯವಾಗಿರಬೇಕು. ಮಾಯವಾಗಲೇ ಬೇಕಲ್ಲ! ಹೆಂಡತಿ ‘ಹೊರಗಿರುವುದು’ ಗಂಡನಿಗೆ ಮಾತ್ರವಲ್ಲ, ಹೆಂಡತಿಗೂ ಬಹುದೊಡ್ಡ ನಷ್ಟ ಎಂಬುದನ್ನು ಅರ್ಥೈಸಲಾರದವರು ಯಾರು? ನಾದಿನಿ ಮೆಲ್ಲನೆ ಬಾಗಿಲೆಳೆದಳೇನೋ! ಹಿಂದಿನ ದಿನದಿಂದ ಕ್ಷಣಕ್ಷಣವೂ ಯುಗವಾಗಿದ್ದದ್ದು ಈಗ ಯುಗವೂ ಕೇವಲ ಕ್ಷಣಕ್ಷಣಗಳಾಗಿ ಕಳೆದುಹೋದುವೇನೋ! ಮುಂದೇನಾಯಿತು?! ಕವಿ ಹೇಳಿಲ್ಲ. ನಾವೂ ಕೇಳಬಾರದು. 

                ಇದು ಕನ್ನಡದ ದಾಂಪತ್ಯಗೀತೆಗಳಲ್ಲಿಯೇ ಅತ್ಯಂತ ಮಧುರವಾದ ಗೀತೆ. ಇಲ್ಲಿ ಕೋಮಲತೆಯಿದೆ, ಹಿತವಿದೆ, ಒನಪು-ಒಯ್ಯಾರಗಳಿವೆ, ಪ್ರೇಮಿಗಳ ನಾಡಿಮಿಡಿತವಿದೆ, ಸಂಭ್ರಮವೂ ಇದೆ. ಇಲ್ಲಿ ಕವಿ ವರ್ಣಿಸುವ ಚಡಪಡಿಕೆ, ಪರದಾಟ, ಕಸಿವಿಸಿ, ಸಮಯ-ಸಂದರ್ಭದೊಂದಿಗಿನ ಮುನಿಸುಗಳು ಕೇವಲ ರಾಯರದ್ದು ಮಾತ್ರವಲ್ಲ, ಅವೆಲ್ಲವೂ ಪದುಮಳದ್ದು ಕೂಡಾ. ಮನೆಯ ಹೊರಕೋಣೆಯಲ್ಲಿದ್ದು, ಗಂಡ ಮನೆಯೊಳಗಿದ್ದೂ ಮಾತಾಡಿಸಲಾರದೆ, ಮುಖತೋರಿಸಲಾರದೆ, ಕಣ್ಸನ್ನೆಯ ಮೂಲಕವಾದರೂ ತನ್ನ ಒಲವನ್ನು ತೋರಿಸಲಾರದೆ, ಒಬ್ಬಂಟಿಯಾಗಿ ಅದೆಷ್ಟು ವಿರಹವನ್ನು ಅನುಭವಿಸಿದಳೋ! ‘ಹೊರಗಿರುವ’ ಯಾತನೆ ಎಷ್ಟು ಮಂದಿಗೆ ಅರ್ಥವಾದೀತು?! ಉಳಿದ ಸಾಮಾನ್ಯರ ವಿಚಾರ ಹಾಗಿರಲಿ, ಸಹೃದಯರಾದ ನಮಗೆ ಅರ್ಥವಾಗಲಾರದೇ? ಹೋಗಲಿ, ವಿರಹದಲ್ಲೂ ಸೊಗಸಿದೆಯಲ್ಲ!, ನೋವಿನಲ್ಲೂ ಹಿತವಿದೆಯಲ್ಲ!

               ಈ ಗೀತೆಯಲ್ಲಿ ಗಂಡ ಹೆಂಡಿರ ನಡುವಿನ ಅವಿನಾಭಾವ ಸಂಬಂಧವನ್ನು ನಿರೂಪಿಸುವುದಕ್ಕೆ ಕವಿ ಒಂದು ವಿಶಿಷ್ಟ ವಿಧಾನವನ್ನು ಬಳಸಿಕೊಂಡಿದ್ದಾರೆ. ಗೀತೆಯಲ್ಲಿ ಕೇವಲ ಗಂಡನ ಚಡಪಡಿಕೆ, ಅಸಹಾಯಕತೆ, ನೋವು, ಪರದಾಟ, ಮುನಿಸು, ಗೊಂದಲಗಳನ್ನು ಸರಳವಾದ ಪದಗಳಿಂದ ಚಿತ್ರಿಸುವುದರ ಮೂಲಕ ಅವರಿಬ್ಬರ ಪ್ರೇಮದಾಂಪತ್ಯದ ಆಳ ಹರಹುಗಳನ್ನು ನಿರೂಪಿಸಿದ್ದಾರೆ. ೧೯೪೨ಕ್ಕೂ ಹಿಂದೆ ರಚನೆಯಾದ ಈ ದಾಂಪತ್ಯಗೀತೆ ಸರಿಸುಮಾರು ಎಂಬತ್ತು ವರ್ಷಗಳನ್ನು ದಾಟಿಬಂದರೂ ಇನ್ನೂ ನವತಾರುಣ್ಯದ ಹೊಸ್ತಿಲಲ್ಲಿಯೇ ಮೆರೆಯುತ್ತಿರುವುದು, ಹದಿಹರೆಯದವರಿಗೆ ಕಚಗುಳಿಯಿರಿಸಿ, ಖುಷಿಪಡಿಸಿ,  ರೋಮಾಂಚನಗೊಳಿಸುತ್ತಿರುವುದು, ಮೈಮನಸ್ಸುಗಳನ್ನು ಸೂರೆಗೊಳ್ಳುತ್ತಿರುವುದು,  ಅದರ ನಾವೀನ್ಯಕ್ಕೆ ಮಾತ್ರವಲ್ಲ ಭಾರತೀಯ ದಾಂಪತ್ಯಪರಿಕಲ್ಪನೆಯ ಚಿರಂತನತೆಗೆ ಸಾಕ್ಷಿ. ಇಂದಿಗೂ ಯುವಸಮುದಾಯ ಈ ಗೀತೆಯನ್ನು ಮತ್ತೆ ಮತ್ತೆ ಗುನುಗುನಿಸುತ್ತಿರುವುದು ಇದರ ಆಪ್ಯಾಯಮಾನತೆಗೆ ಇನ್ನೊಂದು ಪುರಾವೆ.  ಇದನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಆಧುನಿಕಕಾಲದ ದಂಪತಿಗಳಾರೂ ಪರಸ್ಪರ ಅಗಲುವುದಕ್ಕೆ ಮನಸ್ಸು ಮಾಡಲಾರರು ಎಂದೆನಿಸುತ್ತದೆ. ಕವಿಯ ಈ ದಾಂಪತ್ಯಪರಿಕಲ್ಪನೆ ಪರಿಶುದ್ಧವಾದ ಪ್ರೀತಿ-ಪ್ರೇಮಗಳ ನೆಲೆಗಟ್ಟಿನ ಮೇಲೆ ನಿಂತಿದೆಯೇ ವಿನಾ ಆಧುನಿಕ ವ್ಯಾವಹಾರಿಕ ನೆಲೆಗಟ್ಟಿನ ಮೇಲಲ್ಲ ಎಂಬುದನ್ನು ಸಹೃದಯರು  ಮೊದಲು ನೆನೆಪಿನಲ್ಲಿರಿಸಿಕೊಳ್ಳಬೇಕು.

                ಈ ಗೀತೆಯ ನಿತ್ಯನೂತನತೆಗೆ, ಚಿರಂತನತೆಗೆ ಹಾಗೂ ಪ್ರೇಮದಂತಹ ಸೂಕ್ಷ್ಮಭಾವದ ಚಿತ್ರಣಕ್ಕೆ ಕವಿ ಬಳಸಿರುವ ಪದಬಂಧ ಹಾಗೂ ಛಂದೋಬಂಧಗಳೂ ಮುಖ್ಯಕಾರಣ ಎನಿಸುತ್ತವೆ. ಕುಣಿದುಕುಣಿದು ಸಾಗುವ ಪದಬಂಧ ಗೀತೆಗೆ ಒಂದು ಸುಮಧುರವಾದ ಲಯವನ್ನು ತಂದುಕೊಟ್ಟಿದೆ. ನೇರ ಹಾಗೂ ಹಿತಮಿತವಾದ ಮಾತು, ಹೃದ್ಯವಾದ ನಿರೂಪಣೆ, ಸಾಂಕೇತಿಕತೆ, ಪ್ರೀತಿ-ಪ್ರೇಮಗಳ ನಿರೂಪಣೆಗೆ ಅನುಗುಣವಾದ ಪದಲಾಲಿತ್ಯಗಳೆಲ್ಲ ಗೀತೆಯ ಒಟ್ಟು ಸೌಂದರ್ಯಕ್ಕೆ, ಯಶಸ್ಸಿಗೆ ಕಾರಣವಾಗಿವೆ. ಅನುಭವದ ಮೂಸೆಯಲ್ಲಿ ಪರಿಪಕ್ವಗೊಂಡು ಸೃಷ್ಟಿಯಾದ ಈ ನಿತ್ಯನೂತನ ದಾಂಪತ್ಯಗೀತೆ ಸಹೃದಯರ ಮನಸೂರೆಗೊಳ್ಳುತ್ತದೆ, ಮುದನೀಡುತ್ತದೆ, ರೋಮಾಂಚನಗೊಳಿಸುತ್ತದೆ. 

 

ಕೆ.ಎಸ್. ನರಸಿಂಹಸ್ವಾಮಿಯವರ ಈ ದಾಂಪತ್ಯ ಗೀತೆಯನ್ನು ಸಂಗೀತದ ಹಿನ್ನೆಲೆಯಲ್ಲಿ ಕೇಳಿ, ಆನಂದಿಸಿ. 🙏

***

5 thoughts on “ಮಾವನ ಮನೆಯಲ್ಲಿ

  1. ಬರಹ ತುಂಬ ಚೆನ್ನಾಗಿದೆ ಸರ್. ಅಭಿನಂದನೆಗಳು.

  2. ಈ ಮೇಲಿನ ಸಾಲುಗಳನ್ನು ನಿಮ್ಮ ಮಾತುಗಳ ಮೂಲಕ ಕೇಳಿದೆವು ಆದರೆ ಇಂದು ಇನ್ನೂ ಹೆಚ್ಚಾಗಿ ಅರ್ಥಮಾಡಿಕೊಳ್ಳಲು ಈ ಬರಹ ರೂಪ ಅತ್ಯಂತ ಉಪಯುಕ್ತವಾದಯಿತು.🙏🙏🙏

Leave a Reply

Your email address will not be published. Required fields are marked *