ಸಾಹಿತ್ಯಾನುಸಂಧಾನ

heading1

ಕಳಬೇಡ

 

                 ‘ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ,  ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲಸಂಗಮದೇವನನೊಲಿಸುವ ಪರಿ’

                ಬಸವಣ್ಣನವರ ಸಾಮಾಜಿಕನ್ಯಾಯ ಹಾಗೂ ಆತ್ಮವಿಮರ್ಶೆಯ ಕುರಿತಾದ ಈ ಮಾತುಗಳು ಮೇಲುನೋಟಕ್ಕೆ ಬಹಳ ಸರಳವಾಗಿ ಕಂಡರೂ ಸಾಮಾಜಿಕನೆಲೆಯಲ್ಲಿ ಚಿಂತಿಸುತ್ತಾ ಹೋದಂತೆ ಅತ್ಯಂತ ಗಹನತೆಯನ್ನು ಪಡೆದುಕೊಳ್ಳುತ್ತವೆ. ಬಸವಣ್ಣನವರು ಈ ವಚನದಲ್ಲಿ ವ್ಯಕ್ತಿಸುಧಾರಣೆ ಹಾಗೂ ಸಮಾಜಸುಧಾರಣೆಗೆ ಸಂಬಂಧಿಸಿದಂತೆ ಏಳು ನಿಷೇಧಗಳನ್ನು ಹಾಗೂ ಅಪಮೌಲ್ಯಗಳನ್ನು ಉಲ್ಲೇಖಿಸಿದ್ದಾರೆ. ಇವುಗಳಲ್ಲಿ ಕಳವು ಅಥವಾ ಕಳ್ಳತನ ಮೊದಲನೆಯದು.

                ಭಾರತೀಯ ಪರಂಪರೆಯಲ್ಲಿ ‘ಕಳ್ಳತನ’ ಒಂದು ಸಾಮಾಜಿಕ ಅಪರಾಧವೆನಿಸಿಕೊಂಡಿದೆ. ಭಾರತೀಯ ವಾಙ್ಮಯಗಳೆಲ್ಲವೂ ಇದನ್ನು ನಿರಂತರ ಖಂಡಿಸುತ್ತಲೇ ಬಂದಿವೆ. ರಾಮಾಯಣ, ಮಾಹಾಭಾರತಗಳಲ್ಲಿಯೂ ಕಳ್ಳತನ, ಕೊಲೆಗಳಿಂದ ಉಂಟಾಗಬಹುದಾದ ನೈತಿಕ ಹಾಗೂ ಸಾಮಾಜಿಕ ಅಧಃಪತನಗಳನ್ನು ಹಲವಾರು ದೃಷ್ಟಾಂತಗಳ ಮೂಲಕ ಪ್ರತಿಪಾದಿಸಲಾಗಿದೆ. ಇವೆಲ್ಲವೂ ಭಾರತೀಯ ಪರಂಪರೆಯಲ್ಲಿ ಕಳ್ಳತನ ಹಾಗೂ ಕೊಲೆಗಳು ಎಷ್ಟು ಭೀಕರವಾಗಿವೆ ಎಂಬುದನ್ನೂ ಅವುಗಳಿಂದ ಉಂಟಾಗಬಹುದಾದ ಪರಿಣಾಮಗಳು ಎಷ್ಟರ ಮಟ್ಟಿಗೆ ಘೋರವಾಗಿರುತ್ತವೆ ಎಂಬುದನ್ನೂ ಸ್ಪಷ್ಟಪಡಿಸುತ್ತವೆ.

                ‘ಕಳವು’ ಮೇಲುನೋಟಕ್ಕೆ ಒಂದು ಸಾಮಾನ್ಯಕ್ರಿಯೆ ಎನ್ನಿಸಬಹುದಾದರೂ ಅದರಿಂದ ಉಂಟಾಗಬಹುದಾದ ಪರಿಣಾಮಗಳು ಅತ್ಯಂತ ಘೋರವಾದುವು. ಕಳ್ಳತನ ಎಂದ ಕೂಡಲೇ ‘ಯಾರಿಗೂ ತಿಳಿಯದಂತೆ ಅನ್ಯರ (ತನ್ನದಲ್ಲದ) ಸೊತ್ತುಗಳನ್ನು ಅಪಹರಿಸುವುದು’ ಎಂಬ ಕಲ್ಪನೆ ಮಾತ್ರ ಪ್ರತಿಯೊಬ್ಬನ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ಕಳವು ಸಂಭವಿಸಿದ ಅನಂತರ ಉಂಟಾಗಬಹುದಾದ ಪರಿಣಾಮಗಳನ್ನು ಯಾರೂ ಕಲ್ಪಿಸಿಕೊಳ್ಳುವುದಿಲ್ಲ. ನೈತಿಕವಲ್ಲದ ಯಾವುದೇ ಕಾರ್ಯದ ಪರಿಣಾಮ ಅದು ಘಟಿಸಿದ ಕಾಲಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಅದು ಘಟಿಸಿದ ಅನಂತರವೇ ತನ್ನ ದುಷ್ಪರಿಣಾಮಗಳನ್ನು ಬೀರುತ್ತಾ ಹೋಗುತ್ತದೆ. ಕಳ್ಳತನವೆನ್ನುವುದು ಒಬ್ಬ ವ್ಯಕ್ತಿಯ ಮಾತ್ರವಲ್ಲ, ಹಲವಾರು ವ್ಯಕ್ತಿಗಳ, ಹಲವು ಕುಟುಂಬಗಳ ಹಾಗೂ ಆ ಮೂಲಕ ಒಂದು ಸಮಾಜದ ಹಾಗೂ ದೇಶದ ನಾಶಕ್ಕೂ ಕಾರಣವಾಗುತ್ತದೆ.

                ವ್ಯಕ್ತಿಯೊಬ್ಬ ಕಳವು ಮಾಡುವುದು ಅನ್ಯರ ಸೊತ್ತನ್ನು. ಅದು ಆತನ ಸಂಪಾದನೆಯಲ್ಲ. ಅದರ ಹಿಂದೆ ಆತನ ಯಾವ ಪರಿಶ್ರಮವೂ ಇರುವುದಿಲ್ಲ. ಹೀಗೆ ಯಾವ ಪರಿಶ್ರಮವೂ ಇಲ್ಲದೆ ಅನ್ಯರ ಸೊತ್ತನ್ನು ಗೊತ್ತಾಗದಂತೆಯೋ ಕಣ್ತಪ್ಪಿಸಿಯೋ ಅಥವಾ ಗೊತ್ತಿರುವಂತೆಯೋ ಅಪಹರಿಸುವುದೇ ಕಳ್ಳತನ. ದರೋಡೆ ಅಥವಾ ಡಕಾಯಿತಿ ಎಂಬುದು ಇದರ ಇನ್ನೊಂದು ಕ್ರೂರರೂಪ. ಕಳ್ಳತನ ಮಾಡಿದವನನ್ನು ಸಮಾಜ ‘ಕಳ್ಳ’ ಎಂಬ ಹೆಸರಿನಿಂದ ಗುರುತಿಸುತ್ತದೆ. ಒಬ್ಬ ವ್ಯಕ್ತಿಗೆ ಒಮ್ಮೆ ಕಳ್ಳತನದ ರುಚಿಹತ್ತಿದರೆ ಆತ ಅದನ್ನು ನಿರಂತರ ಮುಂದುವರೆಸಿಕೊಂಡು ಹೋಗುತ್ತಾನೆ. ಹೇಗೆ ಹುಲಿಯೊಂದು ಮನುಷ್ಯನ ಮಾಂಸದ ರುಚಿನೋಡಿದರೆ ನಿರಂತರ ಅದನ್ನೇ ಬಯಸಿ ಮನುಷ್ಯರನ್ನೇ ಕೊಲ್ಲಲು ಹವಣಿಸುತ್ತದೆಯೋ ಹಾಗೆ. ಕಳ್ಳತನ ಸಾಮಾಜಿಕವಾದ ಒಂದು ಅಪರಾಧ, ಅದರಿಂದ ತನ್ನ ಸ್ಥಾನಮಾನಗಳಿಗೆ ಹಾನಿಯಾಗುತ್ತದೆ ಎಂದು ತಿಳಿದಿದ್ದರೂ ಅದನ್ನು ಬಿಟ್ಟುಬಿಡಲು ಮನಸ್ಸು ಒಪ್ಪುವುದಿಲ್ಲ. ‘ಹಡಕಿಗೆ ಮೆಚ್ಚಿದ ಸೊಣಗ ಅಮೃತದ ಸವಿಯ ಬಲ್ಲುದೇ?’ ಎಂದು ಬಸವಣ್ಣನವರು ಇನ್ನೊಂದು ವಚನದಲ್ಲಿ ಮನಸ್ಸಿನ ಚಾಂಚಲ್ಯದ ಬಗ್ಗೆ ಉಲ್ಲೇಖಿಸುತ್ತಾರೆ. ’ಹಡಕು’ ಎಂದರೆ ಹೊಲಸು ಎಂದರ್ಥ. ಈ ಮಾತನ್ನು ಕಳ್ಳತನಕ್ಕೂ ಅನ್ವಯಿಸಿಕೊಳ್ಳಬಹುದು. ಕಳ್ಳತನವೂ ಒಂದು ರೀತಿಯಿಂದ ಹಡಕಿಗೆ ಸಮಾನವಾದುದು. ಹಡಕಿನ ರುಚಿಗೆ ಒಗ್ಗಿಹೋದ ನಾಯಿಗೆ ಅತ್ಯಂತ ಪ್ರಶಸ್ತವಾದ, ರುಚಿಕರವಾದ, ಸವಿಯಾದ ಅಮೃತ ರುಚಿಸದು. ಅದು ಮತ್ತೆ ಮತ್ತೆ ಹಡಕಿಗೆ ಮನಸೋಲುತ್ತದೆ. ಕಳ್ಳನೂ ಹಾಗೆಯೇ ಕಳ್ಳತನವೆಂಬ ಹಡಕಿಗೆ ಮನಸೋತ ಮೇಲೆ ಆತನಿಗೆ ನೈತಿಕತೆ ಎಂಬ ಅಮೃತ ರುಚಿಸದು.

                ಕಳ್ಳ ಒಂದೆರಡು ಬಾರಿ ಕಳವು ಮಾಡಿದ ಮೇಲೆ ಕಳವಿನ ರುಚಿಹತ್ತಿ ಆತನ ಮನಸ್ಸು ಕಳವಿಗೆ ಹೆಚ್ಚು ಪ್ರಚೋದಿಸಬಹುದು.  ಈ ಪ್ರಚೋದನೆ ಆತನಲ್ಲಿ ಕಳವಿನ ವಿಚಾರದಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಆದರೆ ಅಪರಾಧಿ ಒಂದಲ್ಲ ಒಂದು ದಿನ ಸಿಕ್ಕಿಬೀಳುವುದೂ ಅನಂತರ ಶಿಕ್ಷೆಯಾಗುವುದೂ ಖಚಿತ. ಹಿಂದಿನ ಕಾಲದಲ್ಲಾದರೆ ಹಂತ ಹಂತದ ನ್ಯಾಯವ್ಯವಸ್ಥೆ ಅಥವಾ ರಾಜರ ಆಸ್ಥಾನಗಳಲ್ಲಿ ವಿಚಾರಣೆ, ಅನಂತರ ಕಳವಿನ ಅಪರಾಧಕ್ಕೆ ಶಿಕ್ಷೆ. ಇಂದು ಕಾನೂನು ವ್ಯವಸ್ಥೆಯಿದೆ. ಪೊಲೀಸರ ಬೂಟುಗಾಲಿನ, ಬೆತ್ತದ ರುಚಿಯನ್ನು ಕಂಡ ಮೇಲೆ ನ್ಯಾಯಾಲಯದಲ್ಲಿ ವಿಚಾರಣೆ, ಅಪರಾಧ ಸಾಬೀತಾದರೆ ಒಂದಷ್ಟು ವರ್ಷಗಳ ಕಾಲ ಕಳ್ಳನಿಗೆ ಕಾರಾಗೃಹ ಶಿಕ್ಷೆ. ಕಾರಾಗೃಹ ಶಿಕ್ಷೆಯ ಸಂದರ್ಭದಲ್ಲಿ ಆತನ ಮನಸ್ಸು ಪರಿವರ್ತನೆಯಾದರೆ ಮುಂದೆ ‘ಹೊಸಬದುಕು(?!)’. ಮನಸ್ಸು ಪರಿವರ್ತನೆಯಾಗದಿದ್ದರೆ ಮತ್ತೆ ಅದೇ ಹಳೆಯ ಕಳ್ಳತನದ ಬದುಕು.  ಬಹುತೇಕ ಮಂದಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿ, ಅನಂತರ ಬಿಡುಗಡೆಗೊಂಡರೂ ಅವರಲ್ಲಿ ಎಳ್ಳಷ್ಟೂ ಬದಲಾವಣೆ ಕಾಣಲಾರದು. ಹಡಕಿಗೆ ಮೆಚ್ಚಿದ ಸೊಣಗನ ಸ್ಥಿತಿಯೇ ಮುಂದುವರಿಯಬಹುದು.

                ‘ನಾಯಿಬಾಲ ಡೊಂಕು’ ಎಂದುಕೊಂಡು ನಾವು ಸುಮ್ಮನಿರುವಂತಿಲ್ಲ. ಇಲ್ಲಿ ಒಂದು ಕುಟುಂಬದ, ಒಂದು ಸಮಾಜದ ಮತ್ತು ಆ ಮೂಲಕ ಒಂದು ದೇಶದ ಭವಿಷ್ಯದ ಪ್ರಶ್ನೆಯಿದೆ. ನಾವು ಈ ಪ್ರಕರಣವನ್ನು ಇನ್ನೊಂದು ಕೋನದಿಂದಲೂ ಪರಿಭಾವಿಸಬೇಕಾಗುತ್ತದೆ. ಅನ್ಯರ ಸೊತ್ತನ್ನು ಒಮ್ಮೆ ಅಥವಾ ಹಲವು ಬಾರಿ ಕಳವು ಮಾಡಲಿ; ‘ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ’ ಎಂಬಂತೆ ಕದ್ದವ ಯಾವತ್ತೂ ‘ಕಳ್ಳ’ನೇ. ‘ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’. ಆತನನ್ನು ಸಮಾಜ ಯಾವತ್ತೂ ಕಳ್ಳನೆಂದೇ ಗುರುತಿಸುತ್ತದೆ. ಕಾರಾಗೃಹ ಶಿಕ್ಷೆಯ ಅನಂತರ ತಾನು ಸಂಭಾವಿತನಾಗಬೇಕೆಂದು ಪ್ರಯತ್ನಿಸಿದರೂ ಜನ ಅವನನ್ನು ಗುರುತಿಸುವುದು ಕಳ್ಳನೆಂದೇ. ಆತನ ಹೆಂಡತಿಯನ್ನು ‘ಕಳ್ಳನ ಹೆಂಡತಿ’ ಆತನ ಮಕ್ಕಳನ್ನು ‘ಕಳ್ಳನ ಮಕ್ಕಳು’, ಆತನ ಅಪ್ಪ-ಅಮ್ಮಂದಿರನ್ನು ‘ಕಳ್ಳನ ಅಪ್ಪ-ಅಮ್ಮಂದಿರು’, ಇನ್ನುಳಿದ ಸಂಬಂಧಿಗಳನ್ನು ‘ಕಳ್ಳನ ಅಣ್ಣ’, ‘ಕಳ್ಳನ ಅಕ್ಕ’, ‘ಕಳ್ಳನ ತಮ್ಮ’, ‘ಕಳ್ಳನ ತಂಗಿ’ ಎಂದು ಗುರುತಿಸುವುದು ಸಹಜ. ಒಬ್ಬನ ಅಪರಾಧಕ್ಕಾಗಿ ಮನೆಮಂದಿಗೆಲ್ಲ ಸಾಮೂಹಿಕವಾದ ಶಿಕ್ಷೆ. ಗಂಡನ ಅಪರಾಧಕ್ಕಾಗಿ ಹೆಂಡತಿಗೆ ಶಿಕ್ಷೆ, ತಂದೆಯ ಅಪರಾಧಕ್ಕಾಗಿ ಮಕ್ಕಳಿಗೆ ಶಿಕ್ಷೆ, ಮಗನ ಅಪರಾಧಕ್ಕಾಗಿ ಹೆತ್ತವರಿಗೆ ಶಿಕ್ಷೆ. ಹೀಗೆ ಒಬ್ಬನ ಅಪರಾಧಕ್ಕಾಗಿ ಮನೆಮಂದಿಯೆಲ್ಲ ಅವಮಾನ, ಅವಹೇಳನಗಳನ್ನು ಜೀವಮಾನಪೂರ್ತಿ ಅನುಭವಿಸಬೇಕಾದ ದಯನೀಯಪರಿಸ್ಥಿತಿ ಒದಗುತ್ತದೆ. ಒಬ್ಬ ವ್ಯಕ್ತಿ ತಾನು ಕಳ್ಳತನಕ್ಕೆ ತೊಡಗುವಾಗ ತನ್ನ ಸಮಾಜವಿರೋಧಿ ಕೃತ್ಯದ ಭವಿಷ್ಯದ ಪರಿಣಾಮಗಳ ಬಗ್ಗೆ ಯಾವತ್ತೂ ಚಿಂತಿಸುವುದಿಲ್ಲ.

                ಕಳ್ಳ ತನ್ನ ಅಪರಾಧಕ್ಕಾಗಿ ಶಿಕ್ಷೆಯನ್ನು ಅನುಭವಿಸಿದ ಮೇಲೆ ಎಷ್ಟೇ ಸಭ್ಯನಾಗಿ ಬದುಕಲು ಪ್ರಯತ್ನಿಸಿದರೂ ಆತ ಮಾಡಿದ ಅಪರಾಧಗಳ ಕುಖ್ಯಾತಿ ಆತನನ್ನು ಬಿಟ್ಟುಹೋಗುವುದಿಲ್ಲ. ಮೈಗಂಟಿದ ಕೊಳೆಯನ್ನು ತೊಳೆದು ಕಳೆಯಬಹುದಾದರೂ ಈ ಅಪರಾಧದ ಪರಿಣಾಮವನ್ನು ತೊಳೆದು ಕಳೆಯುವಂತಿಲ್ಲ. ಒಮ್ಮೆ ಒಬ್ಬ ವ್ಯಕ್ತಿಯನ್ನು ಆತನ ವ್ಯವಹಾರಗಳನ್ನು ಗುರುತಿಸಿದ ಮೇಲೆ ಸಮಾಜ ಆ ವ್ಯಕ್ತಿಯ ಬಗೆಗಿನ ತನ್ನ  ದೃಷ್ಟಿಕೋನವನ್ನು ಅಷ್ಟು ಸುಲಭಾಗಿ ಬದಲಾಯಿಸಿಕೊಳ್ಳುವುದಿಲ್ಲ. ಆದುದರಿಂದ ಸಮಾಜದಲ್ಲಿ ಬದುಕುವಾಗ ಪ್ರತಿಯೊಂದು ವ್ಯವಹಾರದ ಸಂದರ್ಭದಲ್ಲೂ ತಮ್ಮ ತಮ್ಮ ಸ್ಥಾನಮಾನಗಳನ್ನು ಕಾಯ್ದುಕೊಳ್ಳಬೇಕಾದುದು ಜವಾಬ್ದಾರಿಯುತ ಮನುಷ್ಯರ ಕರ್ತವ್ಯ. ಕಳ್ಳತನದಂತಹ ಸಾಮಾಜಿಕ ಅಪರಾಧಗಳಿಂದ ಸಮಾಜದ ವ್ಯವಸ್ಥೆಯೇ ಕುಸಿಯುತ್ತದೆ. ಜನಜೀವನ ಅಸ್ತವ್ಯಸ್ತವಾಗುತ್ತದೆ. ಪರಸ್ಪರ ದ್ವೇಷವೂ ಹುಟ್ಟಿಕೊಳ್ಳಬಹುದು, ಕೊಲೆಗಳೂ ನಡೆಯಬಹುದು. ಅದಕ್ಕಾಗಿಯೇ ಬಸವಣ್ಣನವರು ‘ಕಳಬೇಡ’ ಎಂದು ಸ್ಪಷ್ಟಮಾತುಗಳಲ್ಲಿಯೇ ಎಚ್ಚರಿಸಿದ್ದಾರೆ.

                ಕಳವು ಮಾಡಿದ ವ್ಯಕ್ತಿಯ, ಆತನ ಮನೆಮಂದಿಯ ಪರಿಸ್ಥಿತಿ ಹೀಗಾದರೆ ವಸ್ತುಗಳನ್ನು ಕಳೆದುಕೊಂಡು ಪರದಾಡುವವರ ಪರಿಸ್ಥಿತಿ ಇನ್ನೊಂದು ಬಗೆಯದು. ಕಳ್ಳತನದ ಮೂಲಕ ಕಳೆದುಕೊಂಡವರು ಅದನ್ನು ಸಂಪಾದಿಸುವುದಕ್ಕೆ ಸಾಕಷ್ಟು ದುಡಿದಿರಬಹುದು, ಬೆವರುಸುರಿಸಿರಬಹುದು. ಅಂತಹ ಸಂಪತ್ತನ್ನು ಅಥವಾ ಸೊತ್ತನ್ನು ಅಪಹರಿಸಿರುವುದರಿಂದ ಅವರು ಹಾಗೂ ಅವರ ಮನೆಮಂದಿ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಎಲ್ಲವನ್ನೂ ಕಳೆದುಕೊಂಡು ಬೀದಿಪಾಲಾಗುವ ಪರಿಸ್ಥಿತಿಯೂ ಒದಗಬಹುದು. ಹಾಗಾಗಿ ಒಬ್ಬ ಮಾಡಿದ ಕಳವು ಇನ್ನೊಂದು ಕುಟುಂಬದ ನೆಮ್ಮದಿಯನ್ನೇ ಕಳೆದುಬಿಡಬಹುದು. ಅಥವಾ ಕುಟುಂಬವನ್ನೇ ಅಳಿಸಿಬಿಡಬಹುದು. ಈ ಕಾರಣಕ್ಕಾಗಿಯೇ ಕಳವು ಒಂದು ಸಾಮಾಜಿಕ ಅಪರಾಧವಾಗಿ ಪರಿಗಣಿತವಾಗಿದೆ. ಇಷ್ಟಾದರೂ ಅದು ಸಮಾಜದಿಂದ ದೂರವಾಗಿಲ್ಲ. ಕಳ್ಳತನದ ರುಚಿ ಕಂಡವನಿಗೆ ಅದನ್ನು ಬಿಡಲು ಮನಸ್ಸಾಗುತ್ತಿಲ್ಲ.

                ಇಂದಂತೂ ಕಳವು ಸರ್ವವ್ಯಾಪಿಯಾಗಿದೆ. ಹಲವಾರು ರೂಪಗಳನ್ನು ಪಡೆದುಕೊಂಡು ವಿಶ್ವವ್ಯಾಪಿಯಾಗಿದೆ. ಅದರ ರೀತಿಗಳೂ ಹಲವಾರು, ನೂರಾರು, ಸಾವಿರಾರು. ದಿನದಿಂದ ದಿನಕ್ಕೆ ಅದು ನವನವೀನ(ಸ್ಮಾರ್ಟ್) ರೂಪಗಳನ್ನು ಹೊಂದಿ ದೇಶದ ಆಳ ಅಗಲಕ್ಕೆ ತನ್ನ ಬೇರುಗಳನ್ನು ಚಾಚುತ್ತಾ ಆಳಕ್ಕಿಳಿದು ಗಟ್ಟಿಗೊಳ್ಳುತ್ತಿದೆ. ಇಂದು ಬಹುಮಂದಿಗೆ ಕಳವು ಬಹುಬೇಗನೆ ಹಣಗಳಿಸುವ, ಶ್ರೀಮಂತನಾಗುವ ಸುಲಭಮಾರ್ಗ. ಅದೊಂದು ಪ್ರತಿಷ್ಠೆಯ, ಘನತೆಯ, ಬುದ್ಧಿವಂತಿಕೆಯ, ತಾಕತ್ತಿನ ಸಂಕೇತ. ಹೆಚ್ಚಿನವು ಕಾನೂನಿನ ಹಿಡಿತದಿಂದಲೂ ತಪ್ಪಿಸಿಕೊಳ್ಳುತ್ತವೆ. ಇಂದು ಕಳವು ಎಷ್ಟರಮಟ್ಟಿಗೆ ವ್ಯಾಪಿಸಿದೆ ಎಂದರೆ ಸಮಾಜದಲ್ಲಿ ಕಳ್ಳ ಯಾರು? ಸಾಚಾ ಯಾರು? ಎಂಬುದನ್ನು ಕಂಡುಕೊಳ್ಳುವುದೇ ಕಷ್ಟವೆನಿಸಿದೆ. 

                ಆಧುನಿಕಕಾಲದಲ್ಲಿ ಹೆಚ್ಚಿನವರಿಗೆ ಕಳವು ಎಂಬುದು ಒಂದು ಪ್ರತಿಷ್ಠೆಯ ದಂಧೆ ಎನಿಸಿಕೊಂಡಿದೆ. ಹಿಂದೆ ಸೊತ್ತನ್ನು ಮಾತ್ರ ಕಳವು ಮಾಡುತ್ತಿದ್ದರೆ ಇಂದು ಭೂಮಿ, ಆಸ್ತಿ-ಪಾಸ್ತಿ, ಇನ್ನೊಬ್ಬರ ಠೇವಣಿ, ಅನ್ಯರ ಬ್ಯಾಂಕ್ ಖಾತೆಯಲ್ಲಿನ ಹಣ, ಆಸ್ತಿಪತ್ರಗಳು, ವಾಹನ ಮೊದಲಾದವುಗಳನ್ನಲ್ಲದೆ ಮಕ್ಕಳ, ಯುವಕರ, ಯುವತಿಯರ, ಪ್ರಾಣಿಗಳ ಕಳವೂ ಎಗ್ಗಿಲ್ಲದೆ ನಡೆಯುತ್ತಿದೆ. ಹಿಂದೆ ಕಳವು ಕದ್ದುಮುಚ್ಚಿ ನಡೆಯುತ್ತಿದ್ದರೆ ಇಂದು ರಾಜಾರೋಷವಾಗಿಯೇ ನಡೆಯುತ್ತಿದೆ. ಅನಕ್ಷರಸ್ಥರಿಗಿಂತ ಹೆಚ್ಚಾಗಿ ಇಂದು ಅಕ್ಷರಸ್ಥರೇ ಕಳವನ್ನು ಮುಖ್ಯದಂಧೆಯನ್ನಾಗಿ ಬೆಳೆಸಿಕೊಳ್ಳುತ್ತಿದ್ದಾರೆ. ಅನಕ್ಷರಸ್ಥರಿಗಾದರೋ ಸರಿತಪ್ಪುಗಳ ತುಸುಮಟ್ಟಿನ ಪರಿಜ್ಞಾನವೂ ತಮ್ಮ ಸ್ಥಾನಮಾನಗಳು ಕಳೆದುಹೋಗುವ ಹೆದರಿಕೆಯೂ ಜೊತೆಗೆ ಕಾನೂನಿನ ಭಯವೂ ಇದೆ. ಆದರೆ ಅಕ್ಷರಸ್ಥರಿಗೆ ಸರಿತಪ್ಪುಗಳ ಪ್ರಜ್ಞೆಯಿಲ್ಲ, ಸ್ಥಾನಮಾನ ಕುಸಿತದ ಹೆದರಿಕೆಯಿಲ್ಲ, ಕಾನೂನಿನ ಭಯವಂತೂ ಮೊದಲೇ ಇಲ್ಲ. ಇಂದು ನಡೆಯುತ್ತಿರುವ ಕಳ್ಳವ್ಯಾಪಾರಗಳನ್ನು, ಅವುಗಳ ವಿಧಗಳನ್ನು, ಸ್ವರೂಪಗಳನ್ನು ಪರಿಶೀಲಿಸಿದರೆ ನಾವು ಕ್ಷಣಕ್ಷಣಕ್ಕೂ ಆಘಾತಕ್ಕೆ ಒಳಗಾಗುತ್ತೇವೆ.

                ಕಳವು ಇಂದು ಬೇರೆಬೇರೆ ರೂಪ, ಸ್ವರೂಪಗಳನ್ನು, ಸ್ಮಾರ್ಟ್ ರೂಪಗಳನ್ನು ಪಡೆದುಕೊಂಡು  ಭಾರತದಾದ್ಯಂತ ಮಹಾಮಾರಿಯಾಗಿ ಬೆಳೆಯುತ್ತಿದೆ. ವಿದೇಶಗಳಲ್ಲಿದ್ದುಕೊಂಡೇ ಭಾರತೀಯರ ಹಣವನ್ನು ದೋಚಲಾಗುತ್ತಿದೆ ಎಂಬುದನ್ನು ಪರಾಮರ್ಶಿಸತೊಡಗಿದರೆ ಕಳವು ಯಾವೆಲ್ಲ ಸ್ವರೂಪಗಳನ್ನು ಪಡೆದುಕೊಂಡು ಎಷ್ಟರಮಟ್ಟಿಗೆ ವಿಶ್ವವ್ಯಾಪಿಯಾಗಿ ಬೆಳೆಯುತ್ತಿದೆ ಎಂಬುದರ ಅರಿವಾಗುತ್ತದೆ. ಕಳ್ಳದಂಧೆಯಲ್ಲಿ ದಿನದಿಂದ ದಿನಕ್ಕೆ ಹಲವು ವಿಧಗಳು ಹುಟ್ಟಿಕೊಳ್ಳುತ್ತಿವೆ. ಒಂದನ್ನು ಭೇದಿಸಿದರೆ ಅದು ಇನ್ನೊಂದು ಹೊಸರೂಪದಲ್ಲಿ ಹುಟ್ಟಿಕೊಳ್ಳುತ್ತದೆ. ಜೀವನಸೌಲಭ್ಯಗಳು ಹೆಚ್ಚಿದಂತೆ ಮನುಷ್ಯ ಸೋಮಾರಿಯಾಗುತ್ತಿದ್ದಾನೆ. ಆದುದರಿಂದಲೇ ಇಂದಿನವರಿಗೆ ಕಳವು ಎಂಬುದು ಒಂದು ಸಾಮಾಜಿಕವಾದ ಅಪರಾಧವಾಗಿ ಕಾಣಿಸುತ್ತಿಲ್ಲ. ಅದೊಂದು ಪ್ರತಿಷ್ಠೆಯ ಉದ್ಯೋಗವಾಗಿ ಕಂಡುಬರುತ್ತಿದೆ. ರಾಜಕಾರಣಿಗಳು, ಬೇರೆಬೇರೆ ಇಲಾಖೆಗಳ ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳು, ಪೊಲೀಸ್ ಇಲಾಖೆಯಲ್ಲಿನ ಕೆಲವು ಅಧಿಕಾರಿಗಳು ಹತ್ತು ಹಲವು ಹಗರಣಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರುವುದೇ ಈ ಮಾತಿಗೆ ಒಳ್ಳೆಯ ಪುರಾವೆ ಎನಿಸಿಕೊಳ್ಳುತ್ತಿದೆ. (ಪ್ರಾಮಾಣಿಕರಾದ ರಾಜಕಾರಣಿಗಳು, ಇಲಾಖಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ನಮ್ಮ ದೇಶದಲ್ಲಿ ಇದ್ದಾರೆ. ಅಂತಹವರ ಬಗ್ಗೆ ಗೌರವವಿರಲಿ. ಅಂತಹವರಿಗೆ ನಮ್ಮ ಪ್ರಣಾಮಗಳು) ಕಳ್ಳದಂಧೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಕೆಲವು ಅಧಿಕಾರಿಗಳು ಕಳ್ಳವ್ಯವಹಾರದ ಮೂಲಕ ಹೊರಬರುವ ಚಾಣಾಕ್ಷತನವನ್ನೂ ಮೈಗೂಡಿಸಿಕೊಂಡಿದ್ದಾರೆ. ಕೆಲವು ಹಗರಣಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಸ್ಮಾರ್ಟ್ ಕಳ್ಳರು ಕಳ್ಳತನಮಾಡಿ ಅದನ್ನು ಇನ್ಯಾರದೋ ತಲೆಗೆ ಕಟ್ಟಿ ತಾವು ಕಳ್ಳತನದ ಅಪವಾದದಿಂದ ಬಚಾವಾಗುತ್ತಾರೆ. ಹಾಗಾಗಿಯೇ ಇಂದಿನ ಕಾಲದಲ್ಲಿ ಕಳ್ಳರನ್ನು ಪತ್ತೆಹಚ್ಚುವುದೇ ತುಂಬಾ ಕಷ್ಟ.

                ಹಿಂದೆ ಹೊಟ್ಟೆಯ ಹಸಿವು ಕಳವಿಗೆ ಪ್ರಚೋದಿಸಿದರೆ ಇಂದು ದುಡ್ದಿನ,  ಆಸ್ತಿಯ ಹಸಿವು. ಯಾವುದೇ ಶ್ರಮವಿಲ್ಲದೆ ಕೆಲವೇ ದಿನಗಳೊಳಗೆ ಶ್ರೀಮಂತನಾಗಬೇಕೆಂಬ ದುರಾಸೆ, ತಾನೊಬ್ಬನೇ ಲಾಭಗಳಿಸಬೇಕೆಂಬ ಸ್ವಾರ್ಥಮನೋಭಾವ, ಐಷಾರಾಮತೆಯಿಂದ ಬದುಕಬೇಕೆಂಬ ಹಪಹಪಿಕೆಗಳು ಕಳವಿಗೆ ಪ್ರಚೋದನೆ ನೀಡುತ್ತಿವೆ. ತನಗೆ ನೆಮ್ಮದಿಯಿಂದ ಬದುಕುವ, ತನ್ನ ಸಂಪಾದನೆಯನ್ನು ತಾನೇ ಅನುಭವಿಸುವ  ಹಕ್ಕಿರುವಂತೆಯೇ ಇತರರಿಗೂ ನೆಮ್ಮದಿಯಿಂದ ಬದುಕುವ, ಅವರ ಸಂಪಾದನೆಯನ್ನು ಅವರೇ ಅನುಭವಿಸುವ ಹಕ್ಕಿದೆ ಎಂಬುದನ್ನು ಕಳ್ಳರು ಮರೆತಿದ್ದಾರೆ. ತಾನು ಮಾತ್ರ ಚೆನ್ನಾಗಿರಬೇಕು, ಸುಖವಾಗಿರಬೇಕು, ನೆಮ್ಮದಿಯಿಂದ ಬಾಳಬೇಕು ಎಂಬ ಸ್ವಾರ್ಥಮನೋಭಾವವೇ ಎಲ್ಲೆಲ್ಲೂ ತುಂಬಿಕೊಂಡಿದೆ. ಈ ಸ್ಥಿತಿಗತಿಗಳು ಭಾರತೀಯ ಸಾಮಾಜಿಕತಳಹದಿಯನ್ನೇ ಬುಡಮೇಲು ಮಾಡುತ್ತಿವೆ. ಇದರಿಂದ ಪರಸ್ಪರ ದ್ವೇಷ, ಅಸೂಯೆ, ವೈಮಸ್ಸುಗಳು ಹುಟ್ಟಿಕೊಂಡು ಸಮಾಜವ್ಯವಸ್ಥೆ ಪ್ರತಿಹಂತದಲ್ಲಿಯೂ ಘಾಸಿಗೊಳ್ಳುತ್ತಿದೆ. ಇದರ ಕೆಟ್ಟಪರಿಣಾಮ ನಾಡಿನ ಹಾಗೂ ದೇಶದ ಆಂತರಿಕ ಭದ್ರತೆಯ ಮೇಲೂ ಕಾಣಿಸಿಕೊಳ್ಳುತ್ತಿದೆ. ಈ ರೀತಿಯ ಸಮಾಜದ್ರೋಹಿ ಚಟುವಟಿಕೆಗಳಿಂದ ದೇಶದ ನೈತಿಕತೆ ಕುಸಿಯುತ್ತದೆ ಎಂಬುದನ್ನು ಎಲ್ಲರೂ ಮನಗಾಣಬೇಕು. ಈ ಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೊಂದು ದಿನ  ವಿಶ್ವಕ್ಕೇ ಮಾದರಿಯಾಗಿರುವ ಭಾರತದೇಶ, ಭಾರತೀಯ ಸಮಾಜವ್ಯವಸ್ಥೆ ಹಾಗೂ ದೇಶದ ಅಖಂಡತೆ ಪೂರ್ತಿ ನಿರ್ನಾಮವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಹೀಗಿರುವಾಗ  ‘ಲೋಕಾ ಸಮಸ್ತಾ ಸುಖಿನೋ ಭವಂತು’ ಎಂಬ ನಮ್ಮ ಹಿರಿಯರ ಮಾತಿಗೆ ಏನು ಬೆಲೆ ಸಿಕ್ಕಂತಾಯಿತು?  

***

Leave a Reply

Your email address will not be published. Required fields are marked *