ಸಾಹಿತ್ಯಾನುಸಂಧಾನ

heading1

ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ!

ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ!

ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ!

ಮನಕ್ಕೆ  ನೆನಹಾಗಿ ಕಾಡಿತ್ತು ಮಾಯೆ!

ನೆನಹಿಂಗೆ ಅಱಿವಾಗಿ ಕಾಡಿತ್ತು ಮಾಯೆ!

ಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ!

ಚೆನ್ನಮಲ್ಲಿಕಾರ್ಜುನ, ನೀನೊಡ್ಡಿದ ಮಾಯೆಯನಾರೂ ಗೆಲಬಾರದು!

                                                                                                -ಅಕ್ಕಮಹಾದೇವಿ

            ಅಕ್ಕ ಈ ವಚನದಲ್ಲಿ ಚೆನ್ನಮಲ್ಲಿಕಾರ್ಜುನ ಒಡ್ಡಿರುವ ಮಾಯೆಯನ್ನು ಮತ್ತು ಅದು ಹೊಂದಿರುವ ವಿರಾಟ್ ಸ್ವರೂಪವನ್ನು, ಅದು ವಿವಿಧ ಹಂತಗಳನ್ನು ದಾಟಿ ವಿಸ್ತಾರಗೊಳ್ಳುವುದನ್ನು, ಅದನ್ನು ಗೆಲ್ಲುವುದು ಅಸಾಧ್ಯವೆಂಬುದನ್ನೂ ವರ್ಣಿಸಿದ್ದಾಳೆ. ’ಮಾಯೆ’ ಎಂದರೆ ಸೆಳೆತ, ವ್ಯಾಮೋಹ ಎಂದರ್ಥ. ಹೆಣ್ಣು, ಹೊನ್ನು, ಮಣ್ಣು(‘ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆಯಲ್ಲ, ಮಣ್ಣು ಮಾಯೆಯಲ್ಲ, ಮನದ ಹಿಂದಣ ಆಸೆಯೇ ಮಾಯೆ’ ಎಂದು ಅಕ್ಕ ಬೇರೊಂದು ವಚನದಲ್ಲಿ ಸ್ಪಷ್ಟಪಡಿಸಿದ್ದಾಳೆ)ಗಳನ್ನು ಲೌಕಿಕಮಾಯೆಗಳೆಂದು ಕೆಲವರು ಕರೆದಿದ್ದಾರೆ. ಆದರೆ  ಚೆನ್ನಮಲ್ಲಿಕಾರ್ಜುನನು ಒಡ್ಡಿದ, ಕಂಡೂ ಕಾಣದ, ಸಿಕ್ಕರೂ ಸಿಗದ ಮಾಯೆಯನ್ನು ಆಲೌಕಿಕ ಮಾಯೆಯೆಂದು ಕರೆಯಬಹುದು. ಈ ಮಾಯೆಯನ್ನು ಗೆಲ್ಲುವುದು ಅಸಾಧ್ಯ ಎಂಬುದು ಅಕ್ಕನ ನಿಲುವು. ಅದನ್ನು ವಿವರಿಸುವುದಕ್ಕಾಗಿ ಆಕೆ ಅದರ ವಿರಾಟ್ ಸ್ವರೂಪವನ್ನು ಮನುಷ್ಯದೇಹದ ಉದಾಹರಣೆಯೊಂದಿಗೆ ಪ್ರಸ್ತುತಪಡಿಸಿದ್ದಾಳೆ.

            ಮನುಷ್ಯನ ಕಾಯ(ದೇಹ), ಕಾಯದೊಳಗಿನ ಪ್ರಾಣ, ಪ್ರಾಣದೊಳಗಿನ ಮನಸ್ಸು, ಮನಸ್ಸಿನೊಳಗಿನ ನೆನಪು ಎಲ್ಲವೂ ಒಂದಕ್ಕೊಂದು ಸೇರಿಕೊಂಡು ಪರಸ್ಪರ ಪ್ರತ್ಯೇಕಿಸಲಾಗದ ಅವಿನಾಭಾವ ಸಂಬಂಧವನ್ನು ಉಳ್ಳವುಗಳು. ಹಾಗೆಯೇ ಕಾಯಕ್ಕೆ ನೆರಳು, ಪ್ರಾಣಕ್ಕೆ ಮನಸ್ಸು, ಮನಸ್ಸಿಗೆ ನೆನಪು, ನೆನಪಿಗೆ ಅರಿವು ಪರಸ್ಪರ ಪ್ರತ್ಯೇಕಿಸಲಾಗದ ಅವಿನಾಭಾವ ಸಂಬಂಧವನ್ನು ಉಳ್ಳವುಗಳು.

            ದೇಹ’ ಹೋದಲ್ಲೆಲ್ಲ ಅದರ ‘ನೆರಳು’ ಹಿಂಬಾಲಿಸಿಕೊಂಡು ಬರುತ್ತದೆ. ಬೆಳಕಿದ್ದಾಗ ಸ್ಪಷ್ಟವಾಗಿ ಕಾಣಿಸಿಕೊಳ್ಳುವ ನೆರಳು ಬೆಳಕಿಲ್ಲದಿದ್ದಾಗ ಕಣ್ಣಿಗೆ ಕಾಣಿಸಲಾರದು. ಆದರೆ ಅದು ಹಿಂಬಾಲಿಸಿಕೊಂಡೇ ಇರುತ್ತದೆ,  ಇದ್ದೂ ಇಲ್ಲದಂತೆ. ಗಮನಕ್ಕೆ ಬಾರದಂತೆ. ಅದು ಕಾಯಕ್ಕೆ ಅಂಟಿಕೊಂಡು ಮಾಯೆಯಾಗಿ ಕಾಡುತ್ತದೆ.

            ಕಾಯದೊಳಗೆ  ‘ಪ್ರಾಣ’ ಹೇಗಿದೆಯೋ ಹಾಗೆಯೇ ಅದರೊಳಗೆ  ‘ಮನಸ್ಸು’ ತುಂಬಿಕೊಂಡೇ ಇರುತ್ತದೆ. ಮನಸ್ಸನ್ನು ಪ್ರಾಣದಿಂದ ಪ್ರತ್ಯೇಕಿಸಲಾಗದು. ಅದು ಹಿಡಿದಿಡಲಾಗದ್ದು. ಸ್ಥಿರಗೊಳಿಸಲಾಗದ್ದು. ಮರವನ್ನೇರಿದ ಮರ್ಕಟನ ಹಾಗೆ. ಎಲ್ಲೆಲ್ಲೋ ಆಡುತ್ತಿರುತ್ತದೆ. ಏನೆಲ್ಲವನ್ನು ಬಯಸುತ್ತದೆ, ಈಡೇರಿಸಿಕೊಳ್ಳುವುದಕ್ಕೆ ಹಾತೊರೆಯುತ್ತ ಪ್ರಾಣಕ್ಕೆ ಮಾಯೆಯಾಗಿ ಕಾಡುತ್ತದೆ.

                ‘ಮನಸ್ಸು’ ಎಲ್ಲಿದೆಯೋ ಅಲ್ಲಿ ‘ನೆನಪು’ ಇದ್ದೇ ಇರುತ್ತದೆ. ಅದು ನೆರಳಿನಂತೆ ಮನಸ್ಸನ್ನು ಹಿಂಬಾಲಿಸುತ್ತದೆ. ಜೀವಮಾನ ಪರ್ಯಂತ ಉಂಟಾದ ಅನುಭವ ನೆನಪಿನ ರೂಪದಲ್ಲಿ ಮನಸ್ಸಿನೊಳಗೆ ಸ್ಥಿರವಾಗುತ್ತದೆ. ‘ಮನಸ್ಸು’ ಬೇಕು, ‘ನೆನಪು’ ಬೇಡವೆನ್ನಲಾಗದು. ನೆನಪಿಲ್ಲದಿದ್ದರೆ ಮನುಷ್ಯ ಹೆಣಕ್ಕೆ ಸಮಾನ. ಹಾಗಾಗಿ ಮನಸ್ಸಿಗೂ ನೆನಪಿಗೂ ಅವಿನಾಭಾವ ಸಂಬಂಧ. ಈ ನೆನಪು ಮಾಯೆಯ ರೂಪದಲ್ಲಿ ಸದಾ ಮನಸ್ಸನ್ನು ಕಾಡುತ್ತಿರುತ್ತದೆ.

                ಎಲ್ಲಿ ‘ನೆನಪು’ ಇದೆಯೋ ಅದರೊಳಗೆ ‘ಅರಿವು’ ಸೇರಿಕೊಂಡೇ ಇರುತ್ತದೆ. ಮನುಷ್ಯನ ಬೌದ್ಧಿಕ ಬೆಳವಣಿಗೆಗೆ ಅರಿವು ಬಹಳ ಮುಖ್ಯ. ಆದರೆ ಮನುಷ್ಯನಿಗೆ ಬುದ್ಧಿ ತಿಳಿದಂದಿನಿಂದಲೂ ಉಂಟಾದ ಅರಿವು ಅದು ಒಳಿತಿರಲಿ, ಕೆಡುಕಿರಲಿ, ಹಿತವಿರಲಿ, ಅಹಿತವಿರಲಿ ಮತ್ತೆ ಮತ್ತೆ ಮರುಕೊಳಿಸಿ ಭಗವಂತನ ಸಾಕ್ಷಾತ್ಕಾರದ ಹಾದಿಯಲ್ಲಿ ಮತ್ತೆ ಮತ್ತೆ ಕಾಡಿ ತಡೆಯೊಡ್ಡುತ್ತಿರುತ್ತದೆ. ಹಾಗಾಗಿ ಅರಿವು ಮಾಯೆಯ ರೂಪದಲ್ಲಿ ನಿರಂತರ ಕಾಡುತ್ತಿರುತ್ತದೆ. 

                ಹೀಗೆ ಕಾಯಕ್ಕೆ ನೆರಳಾಗಿ, ಪ್ರಾಣಕ್ಕೆ ಮನವಾಗಿ, ಮನಕ್ಕೆ ನೆನಪಾಗಿ, ನೆನಪಿಗೆ ಅರಿವಾಗಿ ಕಾಡುವ ಮಾಯೆ ಜನಸಮೂಹಕ್ಕೆ ಬೆಂಗೋಲಿನಂತೆ ಕಾಡುತ್ತಿರುತ್ತದೆ. ಜಗತ್ತಿನ ಯಾರೊಬ್ಬರೂ ಇದರಿಂದ ಮುಕ್ತವಾಗುವಂತಿಲ್ಲ. ಮನುಷ್ಯರು ಒಡ್ಡಿದ ಮಾಯೆಯನ್ನು ಅಥವಾ ಲೌಕಿಕಬದುಕಿನಲ್ಲಿ ಎದುರಾಗುವ ಮಾಯೆ(ಹೆಣ್ಣು, ಹೊನ್ನು, ಮಣ್ಣು)ಗಳನ್ನು ಪ್ರಯತ್ನಪಟ್ಟು ಗೆಲ್ಲಬಹುದಾದರೂ ಭಗವಂತ ಒಡ್ಡಿದ ಅಲೌಕಿಕಮಾಯೆಯನ್ನು ಗೆಲ್ಲಲಾಗದು ಎಂಬುದು ಅಕ್ಕನ ಅನುಭವ ಮಾತು. ಅದೊಂದು ಸೀಮಿತ ಸ್ವರೂಪ ಹಾಗೂ ವ್ಯಾಪ್ತಿಯನ್ನು ಹೊಂದಿರದೆ ವಿರಾಟ್ ಸ್ವರೂಪ ಹಾಗೂ ವ್ಯಾಪ್ತಿಯನ್ನು ಹೊಂದಿದೆ ಎಂಬುದು ಅಕ್ಕನ ನಿಲುವು.

                ಮೇಲುನೋಟಕ್ಕೆ ಈ ವಚನದಲ್ಲಿ ಅಕ್ಕ ಮಾಯೆಯ ವಿರಾಟ್ ಸ್ವರೂಪವನ್ನು ವಿವರಿಸಿದರೂ ಇದು ಆಕೆಯ ಆತ್ಮವಿಮರ್ಶೆ. ಬುದ್ಧಿ ತಿಳಿದಂದಿನಿಂದ ಚೆನ್ನಮಲ್ಲಿಕಾರ್ಜುನನ ಭಕ್ತೆಯಾಗಿ, ತನ್ನನ್ನು ಆತನ ಪತ್ನಿಯಾಗಿ ಪರಿಭಾವಿಸಿ, ಆತನಿಗಾಗಿ ಹಂಬಲಿಸಿದ ಅಕ್ಕ ತನ್ನ ಹೆತ್ತವರ ಹಾಗೂ ಊರ ರಾಜ ಕೌಶಿಕನ ಒತ್ತಾಸೆಗೆ ಮಣಿದು ಆತನನ್ನು ಮದುವೆಯಾಗಬೇಕಾಯಿತು. ಅಲ್ಲಿ ಅರಮನೆಯಲ್ಲಿ ಒಂದೆಡೆ ಹೆಣ್ಣಿನ ಮಾಯೆಗೆ ಒಳಗಾಗಿ  ಕೌಶಿಕನೊಡ್ಡುವ ಲೌಕಿಕ ಮಾಯೆ, ಇನ್ನೊಂದೆಡೆ ಚೆನ್ನಮಲ್ಲಿಕಾರ್ಜುನನು ಒಡ್ಡುವ ಅಲೌಕಿಕಮಾಯೆಗಳ ಮಧ್ಯೆ ಆಕೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಾಳೆ. ಕೌಶಿಕನನ್ನು ಬಿಟ್ಟುಹೊರಟ ಅಕ್ಕ ಕಲ್ಯಾಣದವರೆಗೂ ಹಲವು ತೊಂದರೆಗಳನ್ನು ಎದುರಿಸುತ್ತಾಳೆ, ನೋವನ್ನು ಅನುಭವಿಸುತ್ತಾಳೆ. ಅರಮನೆಯಲ್ಲಿನ ಆಕೆಯ ನೆನಪುಗಳು ಆಕೆಗೆ ಅರಿವಿನ ರೂಪದಲ್ಲಿ ಮತ್ತೆಮತ್ತೆ ಕಾಡುತ್ತವೆ. ಒಂದೆಡೆ ನೆರಳಿನಂತೆ ಕಾಡುವ ಲೋಕದ ಕಾಮುಕಪುರುಷರು, ಇನ್ನೊಂದೆಡೆ ತನ್ನ ಮನಸ್ಸನ್ನು ಕಾಡುವ ಅಲೌಕಿಕಪುರುಷ ಚೆನ್ನಮಲ್ಲಿಕಾರ್ಜುನ.  ತನ್ನ ಕಾಯಕ್ಕೆ ನೆರಳಾಗಿ, ಪ್ರಾಣಕ್ಕೆ ಮನವಾಗಿ, ಮನಕ್ಕೆ ನೆನಪಾಗಿ, ನೆನಪಿಗೆ ಅರಿವಾಗಿ ಚೆನ್ನಮಲ್ಲಿಕಾರ್ಜುನನು ಒಡ್ಡಿದ ಮಾಯೆಯಲ್ಲಿ ಒಡ್ಡಾಡುತ್ತಾಳೆ. ಈ ಸಂದರ್ಭದಲ್ಲಿ’ ಮಾಯೆ’  ಎಂಬುದು ಆಕೆಗೆ ಸಾರ್ವತ್ರಿಕವಾಗಿ, ಸರ್ವಾಂತರ್ಯಾಮಿಯಾಗಿ ಕಂಡಿರಬೇಕೆನಿಸುತ್ತದೆ. ಇದು ಅನ್ಯರು ಕಾಣದ, ಆಕೆ ಮಾತ್ರ ಕಂಡ ಅನುಭಾವ.

                ಆಧುನಿಕಕಾಲದಲ್ಲಿ ’ಮಾಯೆ’ ಎಂಬುದು ಅಲೌಕಿಕ ರೂಪದಲ್ಲಿ ಯಾರನ್ನೂ ಕಾಡದೆ ಲೌಕಿಕರೂಪದಲ್ಲಿ ಹತ್ತಾರು ಬಗೆಗಳಲ್ಲಿ ಲೋಕದ ಜನರನ್ನು ಕಾಡುತ್ತಿದೆ. ಹಣ, ಹೊನ್ನು, ಆಸ್ತಿಪಾಸ್ತಿ, ಅಧಿಕಾರ, ಪ್ರಸಿದ್ಧಿ, ಸ್ವಜನಪಕ್ಷಪಾತ, ಜಾತೀಯತೆ ಮೊದಲಾದ ರೂಪದಲ್ಲಿ ಜಗತ್ತೆಲ್ಲವನ್ನೂ ವ್ಯಾಪಿಸಿಕೊಂಡಿದೆ. ಹಿಂದೆ ಶರಣರಿಗೆ ಮಾಯೆಯಿಂದ ಮುಕ್ತವಾಗುವ ಹಂಬಲವಿತ್ತು. ಆದರೆ ಇಂದು ಜನಸಾಮಾನ್ಯರು ಮಾತ್ರವಲ್ಲದೆ ಎಲ್ಲಾ ಸ್ತರದ ವ್ಯಕ್ತಿಗಳಿಗೂ ಮುಕ್ತರಾಗುವುದಕ್ಕೆ ಬದಲಾಗಿ ಅದರೊಳಗೆ ಸೇರಿಕೊಳ್ಳುವ ಹಂಬಲವೇ ಎದ್ದುಕಾಣುತ್ತಿದೆ. ಅಕ್ಕನ ಮಾತುಗಳ ರೀತಿಯಲ್ಲಿಯೇ ಹೇಳುವುದಾದರೆ ’ಆಧುನಿಕಕಾಲದ  ಮಾಯೆಯನ್ನು ಯಾರೂ ಗೆಲಲಾರರು’.

***

Leave a Reply

Your email address will not be published. Required fields are marked *