ಹೊಯಿದವರೆನ್ನ ಹೊರೆದವರೆಂಬೆ,
ಬಯಿದವರೆನ್ನ ಬಂಧುಗಳೆಂಬೆ,
ನಿಂದಿಸಿದವರೆನ್ನ ತಂದೆತಾಯಿಗಳೆಂಬೆ,
ಆಳಿಗೊಂಡವರೆನ್ನ ಆಳ್ದರೆಂಬೆ,
ಜರೆದವರೆನ್ನ ಜನ್ಮಬಂಧುಗಳೆಂಬೆ,
ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆಂಬೆ
ಕೂಡಲಸಂಗಮದೇವಾ!
-ಬಸವಣ್ಣ
ಪ್ರಾಚೀನಕಾಲದಿಂದಲೂ ಭಾರತದಲ್ಲಿ ಹೊಡೆಯುವುದು, ಬಯ್ಯುವುದು, ನಿಂದಿಸುವುದು, ಜರೆಯುವುದು ಮೊದಲಾದವು ಅಪಮೌಲ್ಯಗಳು ಎನಿಸಿಕೊಂಡಿವೆ. ಏಕೆಂದರೆ ಇವೆಲ್ಲವುಗಳಿಂದಲೂ ಮನುಷ್ಯನಿಗೆ ಹಿಂಸೆಯಾಗುತ್ತದೆಯೇ ವಿನಾ ಹಿತವೆನಿಸುವುದಿಲ್ಲ. ಕೆಲವೊಮ್ಮೆ ಇವು ಧನಾತ್ಮಕವಾಗಿ ಪರಿಣಾಮಕಾರಿಯಾಗಬಲ್ಲವು. ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಬಸವಣ್ಣನವರು ಈ ವಚನದಲ್ಲಿ ಹೊಡೆಯುವುದು, ಬೈಯುವುದು, ನಿಂದಿಸುವುದು, ಜರೆಯುವುದು ಮೊದಲಾದವುಗಳಂತೆ ‘ಹೊಗಳುವುದು’ ಎಷ್ಟು ಕ್ರೂರವಾದ ಒಂದು ಅಪಮೌಲ್ಯ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಹೊಡೆಯುವುದು (ದಂಡಪ್ರಯೋಗ) ಒಂದು ದೈಹಿಕಹಿಂಸೆಯ ಕಾರ್ಯ. ಬಸವಣ್ಣನವರು ಹೊಡೆದು ಹಿಂಸೆಗೊಳಿಸಿದವರನ್ನು ತನ್ನನ್ನು ’ರಕ್ಷಿಸಿದವರು’ ಎಂದು ಭಾವಿಸಿಕೊಳ್ಳುತ್ತಾರೆ. ಮನುಷ್ಯನನ್ನು ದಾರಿಗೆ ತರುವ ಚತುರೋಪಾಯಗಳಲ್ಲಿ ದಂಡಪ್ರಯೋಗವೂ ಒಂದು. “ಕೃತಯುಗದೊಳು ಶ್ರೀಗುರು ಶಿಷ್ಯಂಗೆ ಬಡಿದು ಪಾಠವ ಕಲಿಸಿದೊಡೆ, ಶಿಷ್ಯ ಮಹಾಪ್ರಸಾದ ಎಂದನಯ್ಯ” ಎಂಬ ಅಲ್ಲಮ ಪ್ರಭುವಿನ ವಚನವೂ ಈ ಮಾತನ್ನು ಸಮರ್ಥಿಸುತ್ತದೆ. ತಪ್ಪಿದಾಗ ಗುರುಗಳ ಹೊಡೆತ ಶಿಷ್ಯನನ್ನು ಸರಿದಾರಿಗೆ ತಂದು ಸ್ವ ಉದ್ಧಾರ ಹಾಗೂ ಸಮಾಜೋದ್ಧಾರದ ಕಾರ್ಯಗಳಲ್ಲಿ ಮುನ್ನಡೆಸುವುದಾದರೆ ಹೊಡೆಯುವವರನ್ನು ತನ್ನ ರಕ್ಷಕರು ಎಂದು ಬಸವಣ್ಣನವರು ಭಾವಿಸುತ್ತಾರೆ.
ಬಯ್ಯುವುದೂ ಒಂದು ಮಾನಸಿಕಹಿಂಸೆಯ ಕಾರ್ಯ. ತನ್ನನ್ನು ಬಯ್ಯುವವರನ್ನು ಬಸವಣ್ಣನವರು ಬಂಧುಗಳೆಂದು ಭಾವಿಸುತ್ತಾರೆ. ಇದು ಮನುಷ್ಯನನ್ನು ಮಾನಸಿಕವಾಗಿ ಕುಗ್ಗಿಸುವ ತಂತ್ರವಾದರೂ ಬಯ್ಗುಳಕ್ಕೆ ಒಳಗಾದವರಿಗೆ ತಮ್ಮದೇನಾದರೂ ತಪ್ಪುಗಳಿದ್ದಲ್ಲಿ ತಿದ್ದಿಕೊಳ್ಳುವುದಕ್ಕೆ ಅವಕಾಶ ದೊರೆಯುತ್ತದೆ. ತಪ್ಪುಮಾಡಿದಾಗ ಬಯ್ಯದೇ ಇದ್ದರೆ ವ್ಯಕ್ತಿ ತನ್ನ ತಪ್ಪನ್ನು ತಿದ್ದಿಕೊಳ್ಳದೆ ಅದನ್ನೇ ಮುಂದುವರೆಸುತ್ತಾನೆ. ವ್ಯಕ್ತಿಯೊಬ್ಬನಿಗೂ ತನ್ನನ್ನು ತಾನು ತಿದ್ದಿಕೊಳ್ಳುವುದಕ್ಕೆ ಪ್ರಾಜ್ಞರ ಬಯ್ಗುಳ ಕಾರಣವಾಗುವುದಾದರೆ ಆ ರೀತಿಯಲ್ಲಿ ಬಯ್ಯುವವರನ್ನು ಬಸವಣ್ಣನವರು ತನ್ನ ’ಬಂಧುಗಳು’ ಎಂದು ಭಾವಿಸುತ್ತಾರೆ.
ನಿಂದಿಸುವುದೂ ಒಂದು ಮಾನಸಿಕಹಿಂಸೆಯ ಕಾರ್ಯ. ನಿಂದೆಯೂ ಮನುಷ್ಯನನ್ನು ಮಾನಸಿಕವಾಗಿ ನೋಯಿಸಿ ಕುಗ್ಗಿಸುತ್ತದೆ. ಕೆಲವೊಮ್ಮೆ ಮಾತುಕೇಳದಿದ್ದಾಗ ನಿಂದನೆ ಅವಶ್ಯಕ. ಪ್ರಾಜ್ಞರ ನಿಂದನೆಯಿಂದಲೂ ಮನುಷ್ಯ ತನ್ನನ್ನು ತಾನು ತಿದ್ದಿಕೊಳ್ಳುವುದಕ್ಕೆ ಅವಕಾಶಗಳಿವೆ. ಕೆಲವೊಮ್ಮೆ ಹೆತ್ತವರೂ ಮಕ್ಕಳನ್ನು ಈ ರೀತಿಯಲ್ಲಿ ತಿದ್ದಿಲು ಪ್ರಯತ್ನಿಸುತ್ತಾರೆ. ಎಲ್ಲಾ ಸಂದರ್ಭಗಳಲ್ಲಿಯೂ ನಿಂದನೆ ಒಳಿತಲ್ಲ. ಹೀಗೆ ತನ್ನನ್ನು ನಿಂದೆಯ ಮೂಲಕ ತಿದ್ದುವ ಹಿರಿಯರನ್ನು ಬಸವಣ್ಣ ತನ್ನ ತಂದೆತಾಯಿಗಳೆಂದು ಗೌರವಿಸುತ್ತಾರೆ.
ಆಳಿಕೊಳ್ಳುವುದು ಒಂದರ್ಥದಲ್ಲಿ ಗುಲಾಮತನದ ಸಂಕೇತ. ರಾಜನ ಆಳ್ವಿಕೆ ಒಂದೆಡೆಯಾದರೆ, ಭಗವಂತನ ಆಳ್ವಿಕೆ ಇನ್ನೊಂದೆಡೆ. ರಾಜನ ಆಳ್ವಿಕೆ ಬೇಡ, ಭಗವಂತನ ಆಳ್ವಿಕೆ ಸಾಕು ಎಂದೆನಲಾಗದು. ಲೌಕಿಕಬದುಕಿನಲ್ಲಿ ಕೆಲವೊಮ್ಮೆ ರಾಜನ ಸಹಾಯವೂ ರಕ್ಷಣೆಯೂ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮನುಷ್ಯನೂ ತಾನು ರಾಜನ ಗುಲಾಮನೆಂದು ಭಾವಿಸಬಹುದಾದರೂ ರಾಜನ ಹಿರಿತನ, ಸಾಮರ್ಥ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಭಗವಂತನ ರಕ್ಷಣೆಯನ್ನು ಒಪ್ಪಿಕೊಳ್ಳುವ ತಾನು ರಾಜನ ಆಳ್ವಿಕೆಯನ್ನು ಒಪ್ಪಿಕೊಂಡು ಆತನೇ ತನ್ನನ್ನು ಆಳುವವನೆಂದು ಸಮ್ಮತಿಸುತ್ತೇನೆ ಎಂದು ಬಸವಣ್ಣನವರು ಭಾವಿಸುತ್ತಾರೆ.
ಜರೆಯುವುದೂ ಒಂದು ಅಪಮೌಲ್ಯ. ಜರೆ ಎಂದರೆ ಧಿಕ್ಕರಿಸು, ವಿರೋಧಿಸು ಎಂದರ್ಥ. ಸಮಕಾಲೀನ ಸಮಾಜವ್ಯವಸ್ಥೆಯಲ್ಲಿ ಇದು ಒಂದು ಅಪಮೌಲ್ಯವಾದರೂ ಕೆಲವೊಮ್ಮೆ ಧಿಕ್ಕರಿಸಬೇಕಾದ ಪ್ರಸಂಗವೊದಗುತ್ತದೆ. ಮನುಷ್ಯ ಹಠಮಾರಿಯಾದಾಗ, ನಿರಂಕುಶವಾದಿಯಾದಾಗ, ವ್ಯಕ್ತಿಯ ಹಾಗೂ ಸಮಾಜದ ಒಳಿತಿಗಾಗಿ ಧಿಕ್ಕರಿಸಲೇಬೇಕಾಗುತ್ತದೆ. ಇದರಿಂದ ಎಷ್ಟೋ ಮಂದಿ ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತಾರೆ. ಬಸವಣ್ಣನವರೂ ತಮ್ಮ ವರ್ತನೆಗಳನ್ನು ಯಾರಾದರೂ ಧಿಕ್ಕರಿಸುವುದಾದರೆ ತಾನು ಅದರಿಂದ ತನ್ನನ್ನು ತಾನು ತಿದ್ದಿಕೊಳ್ಳುವುದಕ್ಕೆ ಸಾಧ್ಯವಾಗುವುದಾದರೆ ಅಂತಹವರನ್ನು ತನ್ನ ಜನ್ಮಬಂಧುಗಳೆಂದು ಭಾವಿಸುತ್ತಾರೆ.
ಹೊಡೆಯುವುದು, ಬಯ್ಯುವುದು, ನಿಂದಿಸುವುದು, ಆಳಿಗೊಳ್ಳುವುದು, ಜರೆಯುವುದು ಮೊದಲಾದವುಗಳಂತೆ ಹೊಗಳುವುದೂ ಒಂದು ಅಪಮೌಲ್ಯ ಎಂಬುದನ್ನು ಬಸವಣ್ಣನವರು ಪ್ರತಿಪಾದಿಸಿದ್ದಾರೆ. ಹೊಗಳಿಕೆ ಉಳಿದವುಗಳಿಗಿಂತ ಭಿನ್ನಸ್ವರೂಪದ್ದಾದರೂ ಅದು ಮನುಷ್ಯನನ್ನು ದಾರಿತಪ್ಪಿಸುವುದರಿಂದ, ಅಹಂಕಾರಿಯಾಗಿ ಬೆಳೆಸುವುದರಿಂದ ಸಮಾಜಘಾತುಕತನದಲ್ಲಿ ಮುಖ್ಯಪಾತ್ರವನ್ನು ವಹಿಸುತ್ತದೆ. ಶೂಲಕ್ಕೇರಿಸುವುದು ಮತ್ತು ಶಿರಚ್ಛೇಧಮಾಡುವುದು ಮರಣದಂಡನೆಯ ರೂಪದಲ್ಲಿ ಪ್ರಾಚೀನಕಾಲದಿಂದಲೂ ಕೊಲೆ ಮೊದಲಾದ ಅಪರಾಧಗಳಿಗೆ ನೀಡಲಾಗುತ್ತಿದ್ದ ಶಿಕ್ಷೆ. ಬಸವಣ್ಣನವರು ಹೊಗಳಿದವರನ್ನು ತನ್ನನ್ನು ಹೊನ್ನಶೂಲಕ್ಕೆ ಏರಿಸಿದರು ಎಂದು ಭಾವಿಸುತ್ತಾರೆ. ಅವರ ಪ್ರಕಾರ ಹೊಗಳುವುದು ಮರಣದಂಡನೆಗೆ ಸಮಾನವಾದುದು. ಶೂಲ ಹೊನ್ನಿನದಾದರೇನು? ಕಬ್ಬಿಣದ್ದಾದರೇನು? ಜೀವವನ್ನಂತೂ ತೆಗೆದೇ ಬಿಡುತ್ತದೆ.
ಇದ್ದುದನ್ನು ಇದ್ದಂತೆಯೇ ಹೇಳಿದರೆ ಅದು ಹೊಗಳಿಕೆಯಲ್ಲ. ಇಲ್ಲದ್ದನ್ನು ವ್ಯಕ್ತಿಯೊಬ್ಬನಲ್ಲಿ ಆರೋಪಿಸಿ ಆತನನ್ನು ನಾನಾ ಬಗೆಯಿಂದ ಪ್ರಶಂಸಾತ್ಮಕವಾಗಿ ವರ್ಣಿಸುವುದೇ ಹೊಗಳಿಕೆ. ಇದು ಮನುಷ್ಯನನ್ನು ಸೋಮಾರಿಯನ್ನಾಗಿ, ದುರಹಂಕಾರಿಯನ್ನಾಗಿ, ದುಷ್ಟನನ್ನಾಗಿ, ನಿರಂಕುಶನನ್ನಾಗಿ ಅದಕ್ಕಿಂತಲೂ ಹೆಚ್ಚಾಗಿ ಸಮಾಜದ್ರೋಹಿಯನ್ನಾಗಿ ಮಾಡುತ್ತದೆ. ಬಸವಣ್ಣನವರ ಕಾಲದಲ್ಲಿಯೇ ಹೀಗೆ ಜನರನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಿ ತಮ್ಮ ಬೇಳೆಬೇಯಿಸಿಕೊಳ್ಳುವ ದುಷ್ಟಪ್ರವೃತ್ತಿ ಅಧಿಕವಾಗಿತ್ತೆಂದು ತೋರುತ್ತದೆ. ಹಾಗಾಗಿಯೇ ವ್ಯಕ್ತಿಯ ಸಾಧನೆಗೆ ಅಡ್ಡಿಯಾಗುವ ಹೊಗಳಿಕೆಯನ್ನು ಬಸವಣ್ಣನವರು ಶೂಲಕ್ಕೆ ಹೋಲಿಸಿದ್ದಾರೆ.
ಆಧುನಿಕಕಾಲದಲ್ಲಿಯೂ ಹೊಗಳುಭಟ್ಟರೇ ರಾರಾಜಿಸುತ್ತಿದ್ದಾರೆ. ಸ್ವಂತ ತಿಳಿವಳಿಕೆ, ಸಾಮರ್ಥ್ಯ, ಅರ್ಹತೆ, ಬುದ್ಧಿಶಕ್ತಿಗಳಿಲ್ಲದವರು ತಮ್ಮ ಬೇಳೆಬೇಯಿಸುವುದಕ್ಕೆ ಹೊಗಳಿಕೆಯನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಹೊಗಳಿಕೆಯಿಂದ ಯಾರನ್ನೂ ಹೊಂಡಕ್ಕೆ ಹಾಕಬಹುದು, ತಮ್ಮ ದಾರಿಯಿಂದ ತಪ್ಪಿಸಬಹುದು, ಮಟ್ಟಹಾಕಬಹುದು, ಕೊಳ್ಳೆಹೊಡೆಯಬಹುದು ಎಂಬುದನ್ನು ಮನಗಂಡು ಇಂದು ಹೊಗಳಿಕೆಯನ್ನು ತಮ್ಮ ಪ್ರಧಾನ ಅಸ್ತ್ರವನ್ನಾಗಿ ಬಳಸಿಕೊಂಡು, ಅಯೋಗ್ಯರಾಗಿದ್ದೂ ಯೋಗ್ಯರಂತೆ ಮುಖವಾಡ ಹಾಕಿಕೊಂಡು ಮೆರೆಯುತ್ತಿದ್ದಾರೆ. ಒಂದರ್ಥದಲ್ಲಿ ಅಯೋಗ್ಯರು ಆಳುತ್ತಿದ್ದಾರೆ, ಯೋಗ್ಯರು ಆಳಿಸಿಕೊಳ್ಳುತ್ತಿದ್ದಾರೆ. ಎಲ್ಲವೂ ಕಾಲದ ಮಹಿಮೆ. ಬಸವಣ್ಣನವರ ದೂರದರ್ಶಿತ್ವಕ್ಕೆ ನಮೋ ಎನ್ನಬೇಡವೇ?!
***
ಅರ್ಥಪೂರ್ಣ ವಿವರಣೆ
ಧನ್ಯವಾದಗಳು. 🙏