ಸಾಹಿತ್ಯಾನುಸಂಧಾನ

heading1

ಇದು ಮೊದಲು

 (ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಬಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ)

             ’ಇದು ಮೊದಲು’ ಎಂಬುದು  ಎಂ. ಗೋಪಾಲಕೃಷ್ಣ ಅಡಿಗರ ’ಕಟ್ಟುವೆವು ನಾವು’ ಕವನಸಂಕಲನದಲ್ಲಿನ ಪ್ರಸಿದ್ಧ ಕವನಗಳಲ್ಲಿ ಒಂದು. ಮನುಷ್ಯನ ಅರ್ಥಪೂರ್ಣ ಬದುಕಿಗೆ ಮೂಲಭೂತ ಅವಶ್ಯಕತೆಗಳು ಹೇಗೆ ಹಾಗೂ ಏಕೆ ಅನಿವಾರ್ಯವೆಂಬುದನ್ನು ಈ ಕವನ ಸಾರುತ್ತದೆ. ಮೂಲಭೂತ ಸೌಕರ್ಯಗಳ ಪೂರೈಕೆ ಒಬ್ಬ ವ್ಯಕ್ತಿಯನ್ನು ಮನುಷ್ಯನನ್ನಾಗಿಸುತ್ತದೆ. ಅವುಗಳ ಕೊರತೆ ವ್ಯಕ್ತಿಯನ್ನು ಮೃಗವನ್ನಾಗಿ ಪರಿವರ್ತಿಸುತ್ತದೆ. ಇವುಗಳ ಜೊತೆಗೆ ಜಾತಿ ಭೇದ, ವರ್ಗಭೇದ, ಸ್ಥಿತಿಗತಿಗಳ ಭೇದಗಳು ಮನುಷ್ಯ ಬದುಕನ್ನು ಇನ್ನಷ್ಟು ಹೈರಾಣಾಗಿಸುತ್ತವೆ ಎಂಬುದನ್ನು ಈ ಕವನ ಧ್ವನಿಸುತ್ತದೆ. ಇದು ಕಳೆದ ಶತಮಾನದ ಅರುವತ್ತರ ದಶಕದಲ್ಲಿ ರಚನೆಯಾದ ಕವನವಾದರೂ ಇಂದಿನ ಭಾರತದ ಸ್ಥಿತಿಗತಿಗಳಿಗೆ ಉತ್ತಮ ವಿಡಂಬನೆಯಾಗಿದೆ. 

            ಶ್ರಮಿಕವರ್ಗದ ಪ್ರತಿನಿಧಿಯಾಗಿರುವ ವ್ಯಕ್ತಿಯೊಬ್ಬ ತನ್ನ ಒಡೆಯನನ್ನು ಉದ್ದೇಶಿಸಿ ಮೊದಲು ತನಗೆ ಮೂಲಭೂತ ಸೌಕರ್ಯಗಳನ್ನು ಕೊಡು ಎಂದು ಬೇಡಿಕೊಳ್ಳುವುದರೊಂದಿಗೆ ಪ್ರಾರಂಭವಾಗುವ ಈ ಕವನ ಅವುಗಳ ಕ್ರಮಬದ್ಧವಾದ ಪೂರೈಕೆ ಮನುಷ್ಯರಲ್ಲಿ ಎಂತಹ ಬದಲಾವಣೆಗಳನ್ನು, ಆತ್ಮವಿಶ್ವಾಸವನ್ನು ತರಬಲ್ಲುದು ಎಂಬುದನ್ನು ಸೂಚಿಸುವುದರ ಜೊತೆಗೆ ನಮ್ಮ ದೇಶದ ಆರ್ಥಿಕ , ಸಾಮಾಜಿಕ, ರಾಜಕೀಯಕ್ಷೇತ್ರಗಳಲ್ಲಿನ ಯಥಾರ್ಥ ಸ್ಥಿತಿಗತಿಗಳನ್ನು ದಾಖಲಿಸುತ್ತಾ ಸಾಗುತ್ತದೆ.   

 

ಹಸಿದಿಹುದು ಹೊಟ್ಟೆ; ಕೊಡು ಅನ್ನವನು ನನ್ನ ತನು

ಕೋಡುತಿದೆ ಚಳಿಗೆ; ಕೊಡು ಬಟ್ಟೆಗಳನು

ಗಾಳಿ ಬೆಳಕಿನ ಗೋರಿಯಲ್ಲಿ ಹೂತಿರುವೆನಿದೊ;

ಕೊಡು ನನಗೆ ಸುವಿಶಾಲ ವಸತಿಗಳನು,

     ಇದು ಮೊದಲು ಆಮೇಲೆ ಉಳಿದುದೆಲ್ಲ

     ಅದುವರೆಗೆ ಉಳಿದೆಲ್ಲ ಮಾತು ಹೊಲ್ಲ.

            ಹಸಿದ ಹೊಟ್ಟೆಗೆ ಅನ್ನ, ಚಳಿಗೆ ಬೆಚ್ಚಗಿನ ಬಟ್ಟೆ, ರಕ್ಷಣೆಗೆ ಗಟ್ಟಿಮುಟ್ಟಾದ ಮನೆ-ಇವು ಮನುಷ್ಯ ಬದುಕಿಗೆ ಅಗತ್ಯವಾದ ಮೂಲಭೂತ ಅವಶ್ಯಕತೆಗಳು. ಹಸಿದ ಹೊಟ್ಟೆಗೆ ಅನ್ನವಿಲ್ಲದಿದ್ದಾಗ,  ಚಳಿಯಿಂದ ರಕ್ಷಣೆಗೆ ಉಡುವುದಕ್ಕೆ ಬಟ್ಟೆಯೇ ಇಲ್ಲದಿದ್ದಾಗ, ವಾಸಿಸುವುದಕ್ಕೆ ಮನೆಯೇ ಇಲ್ಲದಿದ್ದಾಗ ಬದುಕು ದುಸ್ತರ. ಅದಕ್ಕಾಗಿ ವ್ಯಕ್ತಿಯೊಬ್ಬ ತನ್ನ ಒಡೆಯನಲ್ಲಿ ಹೊಟ್ಟೆ ಹಸಿದಿರುವುದರಿಂದ ಅನ್ನವನ್ನು, ಚಳಿಗೆ ಮೈ ಥರಗುಟ್ಟುತ್ತಿರುವುದರಿಂದ ಉಡುವುದಕ್ಕೆ ಬಟ್ಟೆಗಳನ್ನು, ಗಾಳಿ ಬೆಳಕಿನ ಗೋರಿಯೊಳಗೆ ಹೂತಿರುವುದರಿಂದ ವಾಸಿಸುವುದಕ್ಕೆ ಪ್ರಶಸ್ತವಾದ ಮನೆಯನ್ನು ಬೇಡುತ್ತಿದ್ದಾನೆ. ಅವನು ಈ ಮೂಲಭೂತ ಸೌಕರ್ಯಗಳ ಕೊರತೆಯಿಂದ ಅಶಕ್ತನಾಗಿದ್ದಾನೆ, ಅಸಹಾಯಕನಾಗಿದ್ದಾನೆ, ಹಾಗಾಗಿ ಬೇಡುತ್ತಿದ್ದಾನೆ. ಒಡೆಯನ ಮಿಕ್ಕ ಯಾವ ಕೆಲಸಗಳನ್ನು ಮಾಡಬೇಕಿದ್ದರೂ ಈ ಮೂಲಭೂತ ಅವಶ್ಯಕತೆಗಳನ್ನು ಮೊದಲು ಪೂರೈಸಬೇಕು. ಹಾಗೆ ಪೂರೈಸದೆ ತನ್ನಿಂದ ಕೆಲಸ ಮಾಡಿಸಿಕೊಳ್ಳುವುದು ಮಾನವೀಯತೆಯಲ್ಲ. ಈ ಅವಶ್ಯಕತೆಗಳನ್ನು ಪೂರೈಸುವವರೆಗೆ ಉಳಿದ ಯಾವ ವಿಚಾರವೂ ಅನಗತ್ಯ ಎಂದು ಆತ ಸ್ಪಷ್ಟಪಡಿಸುತ್ತಾನೆ.  

            ಹೊಟ್ಟೆಗೆ ಅನ್ನವೇ ಇಲ್ಲದಿರುವಾಗ ದುಡಿಯಲು ಶಕ್ತಿ ಎಲ್ಲಿಂದ ಬಂದೀತು?! ಉಡಲು ಬಟ್ಟೆಗಳೇ ಇಲ್ಲದಿರುವಾಗ ಮಳೆ, ಗಾಳಿ, ಚಳಿಗಳಿಂದ ದೇಹಕ್ಕೆ ರಕ್ಷಣೆ ಹೇಗೆ ಸಿಕ್ಕೀತು?!  ವಾಸ್ತವ್ಯಕ್ಕೆ ಮನೆಯೇ ಇಲ್ಲದಿರುವಾಗ ಬದುಕಿಗೆ ನೆಮ್ಮದಿ ಹೇಗೆ ದೊರಕೀತು?! ಮನುಷ್ಯ ಯಾವ ಕೆಲಸವನ್ನು ಮಾಡಬೇಕಿದ್ದರೂ ಅನ್ನ, ಬಟ್ಟೆ, ಮನೆ-ಇವೆಲ್ಲವೂ ಅತ್ಯಂತ ಅಗತ್ಯ. ಒಡೆಯನೆನಿಸಿಕೊಂಡವನು ಆಳುಗಳನ್ನು ದುಡಿಸಿಕೊಳ್ಳಬೇಕಾದರೆ ಮೊದಲು ಈ ಮೂರೂ ಅವಶ್ಯಕತೆಗಳನ್ನು ಅಗತ್ಯವಿರುವಷ್ಟು ಒದಗಿಸಬೇಕು. ಅದಾವುದನ್ನೂ ಒದಗಿಸದೆ ಆಳುಗಳನ್ನು ದುಡಿಸುತ್ತೇನೆ, ದುಡಿಸಿ ಲಾಭಹೊಡೆಯುತ್ತೇನೆ, ಶ್ರೀಮಂತನಾಗುತ್ತೇನೆ ಎಂದು ಭಾವಿಸಿದರೆ, ಅಥವಾ ಹಾಗೆಯೇ  ನಡೆದುಕೊಂಡರೆ ಅದು ಮನುಷ್ಯತ್ವವಲ್ಲ. ಅದು ದಬ್ಬಾಳಿಕೆ, ಶೋಷಣೆ ಎನಿಸಿಕೊಳ್ಳುತ್ತದೆ. ಹಾಗಾಗಿ ಮೊದಲು ಮೂಲಭೂತ ಅವಶ್ಯಕತೆಗಳನ್ನು ಪೂರೈಸಬೇಕು. ಇಲ್ಲದಿದ್ದರೆ ಒಡೆಯನ ಯಾವ ಮಾತಿಗೂ ಮಾನ್ಯತೆ ಸಿಗಲಾರದು.    

 

ನನ್ನ ಬೆವರನು ಹೀರಿ ಹೀರಿ ಬೆಳೆದಿದೆ ಜಗದ

ಸಿರಿಯ ಸಸಿ, ಅದರ ಫಲವೆಲ್ಲ ನಿನಗೆ!

ನಗುವ ತೋಟದ ಹೊರಗೆ ಕೊಳೆ ಚರಂಡಿಯ ಮರೆಗೆ

ನಾರುವೆನು ನಾನು ಕ್ರಿಮಿ! ನಿನ್ನ ಜಗಕೆ

     ದಯೆಯ ಮಂಜನು ಸುರಿದು ನನ್ನ ಮನಕೆ

     ನೀನೆ ತಲೆದೂಗುತಿಹೆ ನಿನ್ನ ಗುಣಕೆ!

            ಜಗತ್ತಿನಲ್ಲಿ ಎಷ್ಟೋ ಮಂದಿ ಸಿರಿವಂತರಾಗಿದ್ದಾರೆ. ಆ ಸಿರಿವಂತಿಕೆಯ ಹಿಂದೆ ಸಾವಿರಾರು ಆಳುಗಳ ಬೆವರು ಸುರಿದಿದೆ. ಸಿರಿವಂತಿಕೆಯ ಸಸಿ ಈ ಆಳುಗಳ ಬೆವರನ್ನು ಹೀರಿ ಹೀರಿ ಬೆಳೆದು ಸಿರಿತನದ ಫಲವನ್ನು ನೀಡುತ್ತಿದೆ. ಸಿರಿವಂತಿಕೆಯ ಸಸಿಯನ್ನು ಬೆಳೆಸಿದವರು ಯಾರೋ? ಆದರೆ ಅದರ ಫಲವನ್ನು ಉಣ್ಣುವವರು ಕೆಲವರು ಮಾತ್ರ. ಸಸಿಯನ್ನು ಬೆಳೆಸಿದವರಿಗೆ ಅದರ ಫಲವನ್ನು ಉಣ್ಣುವ ಅಧಿಕಾರವಿಲ್ಲ. ಆಳುಗಳ ಪರಿಶ್ರಮದ ಫಲವಾಗಿ ಸಿರಿವಂತರ ಮನೆ, ಅವರ ಹೂದೋಟ, ಮನೆಯ ಪರಿಸರ ಎಲ್ಲವೂ ಕಂಗೊಳಿಸುತ್ತಿದೆ. ಆದರೆ ಅದರ ಸೌಂದರ್ಯಕ್ಕೆ, ಮೇಲ್ಮೆಗೆ ಶ್ರಮಿಸಿದ ಆಳುಗಳು ಮಾತ್ರ ಕೊಳೆತು ನಾರುವ ಚರಂಡಿಯ ಬದಿಯಲ್ಲಿ ಜೋಪಡಿಗಳ ಮರೆಯಲ್ಲಿ ಉಣ್ಣುವುದಕ್ಕೆ ಅನ್ನವಿಲ್ಲದೆ, ಉಡುವುದಕ್ಕೆ ಬಟ್ಟೆಯಿಲ್ಲದೆ, ವಾಸಿಸುವುದಕ್ಕೆ ಮನೆಯಿಲ್ಲದೆ ಕ್ರಿಮಿಗಳ  ರೀತಿಯಲ್ಲಿ ಬದುಕುತ್ತಿದ್ದಾರೆ. ಆಳುಗಳ ಪರಿಶ್ರಮದ ಮೂಲಕ ಬಂಗಲೆಗಳನ್ನು ಕಟ್ಟಿಸಿಕೊಂಡ, ಇತರ ಸವಲತ್ತುಗಳನ್ನು ರೂಢಿಸಿಕೊಂಡ ಸಿರಿವಂತರ ಪಾಲಿಗೆ ಈ ಆಳುಗಳು ಮನುಷ್ಯತ್ವವೇ ಇಲ್ಲದ ಕ್ರಿಮಿಗಳೆನಿಸಿದ್ದಾರೆ. ಸಿರಿವಂತರು ತಾವು ಮೆರೆಯುವುದಕ್ಕೆ ಕಾರಣರಾದ ಆಳುಗಳ ಹಾಗೂ ಅವರ ಬದುಕಿನ ಬಗ್ಗೆ ಅನ್ಯರನ್ನು ಮೆಚ್ಚಿಸುವುದಕ್ಕೆ ತೋರಿಕೆಯ ದಯೆಯನ್ನು ತೋರಿಸಿಕೊಂಡು ತಮ್ಮ ಉದಾರಗುಣವನ್ನು ತಾವೇ ಮೆಚ್ಚಿಕೊಂಡು  ತಾವೇ ತಲೆದೂಗುತ್ತಿದ್ದಾರೆ. ತಮ್ಮ  ಬೆನ್ನನ್ನು  ತಾವೇ ಚಪ್ಪರಿಸಿಕೊಳ್ಳುತ್ತಿದ್ದಾರೆ ಎಂದು ಆತ ವ್ಯಂಗ್ಯವಾಡುತ್ತಾನೆ.  

            ಕೆಲವರ ಸಿರಿವಂತಿಕೆಗೆ ಹಲವರ  ಪರಿಶ್ರಮವಿದೆ. ಕೂಲಿಯಾಳುಗಳು ತಮ್ಮ ಹೊಟ್ಟೆಪಾಡಿಗೆ ದುಡಿದಿದ್ದರೂ ಬೆವರು ಬಸಿದಿದ್ದರೂ ಅದರ ಬಹುತೇಕ ಲಾಭವಾಗಿರುವುದು ಸಿರಿವಂತರಿಗೆ ಮಾತ್ರ. ಇಂತಹ ಬಡ ಕೂಲಿಯಾಳುಗಳಿಂದ ಕೆಲವರು ಶ್ರೀಮಂತರಾಗಿ ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸವಾಗಿದ್ದಾರೆ. ಮನೆಮುಂದೆ ಹೂದೋಟಗಳನ್ನು ನಿರ್ಮಿಸಿ ಭೋಗಜೀವನವನ್ನು ನಡೆಸುತ್ತಿದ್ದಾರೆ. ಪ್ರತಿಯೊಂದು ಕೆಲಸಗಳಿಗೂ ಕೂಲಿಯಾಳುಗಳು. ಆದರೆ ಸಿರಿವಂತರ ಮನೆಗಳನ್ನು ಕಟ್ಟುವುದಕ್ಕೆ, ಅವರ ಹೂದೋಟಗಳನ್ನು ನಿರ್ಮಿಸಿ ಕಾಪಾಡುವುದಕ್ಕೆ, ಅವರ ಮನೆಯೊಳಗೆ ದೈನಂದಿನ ಕೆಲಸಗಳನ್ನು ಮಾಡಿ ಮನೆಯನ್ನು ಓರಣವಾಗಿಡುವುದಕ್ಕೆ, ಕಾಲಕಾಲಕ್ಕೆ ಅಡುಗೆಮಾಡಿ ಬಡಿಸುವುದಕ್ಕೆ, ಬಂಗಲೆಯನ್ನು ಶುಚಿಯಾಗಿಡುವುದಕ್ಕೆ ಕೂಲಿಯಾಳುಗಳೇ ಕಾರಣರಾದರೂ ಈ ಕೂಲಿಯಾಳುಗಳ ಬದುಕು ಮಾತ್ರ ದುಸ್ತರವಾಗಿದೆ.

 

ಧರ್ಮಶಾಸ್ತ್ರದ, ಕಲೆಯ, ನೀತಿ ಧರ್ಮದ ಬಲೆಯ

ಹೆಣೆದು ಕರೆಯುವೆ ನನ್ನ ಬಳಿಗೆ!

ನಿನ್ನ ಮಾತಿಗೆ ಮರುಳು ನೊಣ ನಾನು ಈವರೆಗೆ,

ಬರುವ ಕಾಲವೆ ಬೇರೆ ನೋಡು ಹೊರಗೆ

     ಜೇಡನನ್ನೂ ನೊಣೆವ ಅತಿ ಪ್ರಚಂಡ

     ಕಾಣದೇ ಅಲ್ಲಿ ಆ ತಂಡ ತಂಡ?

            ಸಿರಿವಂತರಿಗೆ ಅಶಕ್ತರನ್ನು, ಅಸಹಾಯಕರನ್ನು, ನಿರ್ಗತಿಕರನ್ನು, ಕೂಲಿಯಾಳುಗಳನ್ನು ಸೆಳೆಯಲು ಧರ್ಮಶಾಸ್ತ್ರ, ಕಲೆ, ನೀತಿ, ಧರ್ಮ-ಹೀಗೆ  ಹತ್ತು ಹಲವು ಉಪಾಯಗಳು, ತಂತ್ರ-ಕುತ್ರಂತ್ರಗಳು. ಇವುಗಳ ಬಲೆಬೀಸಿಕೊಂಡು ಸಿರಿವಂತರು ತಮ್ಮ ಕೆಲಸಗಳಿಗಾಗಿ, ತಮ್ಮ ಲಾಭಕ್ಕಾಗಿ, ತಮ್ಮ ಶೋಕಿಗಾಗಿ ಹಲವಾರು ರೀತಿಗಳಿಂದ ಕೂಲಿಯಾಳುಗಳನ್ನು ಕೈವಶಗೊಳಿಸಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ಸಿರಿವಂತರ ಮರುಳುಮಾತಿಗೆ ಕೂಲಿಯಾಳುಗಳು ಮರುಳುನೊಣಗಳಂತೆ ಮುತ್ತಿಕೊಂಡು ಸಿರಿವಂತರ ಎಲ್ಲಾ ಚಾಕರಿಗಳನ್ನು ಮಾಡುತ್ತಾರೆ. ಆದರೆ ಅದಕ್ಕೆ ತಕ್ಕ ಪ್ರತಿಫಲ ಮಾತ್ರ ಗಗನಕುಸುಮ. ಈಗ ಕೂಲಿಯಾಳುಗಳಿಗೂ ವಾಸ್ತವದ ಅರಿವಾಗಿದೆ. ಇದುವರೆಗೂ ಮರುಳುನೊಣವಾಗಿದ್ದ ಕೂಲಿಯಾಳುಗಳು ತಮ್ಮ ಮೇಲಾಗಿರುವ ದಬ್ಬಾಳಿಕೆ, ಶೋಷಣೆಗಳನ್ನು ವಿರೋಧಿಸುವುದಕ್ಕೆ, ಪ್ರತಿಭಟಿಸುವುದಕ್ಕೆ ಸಿದ್ಧರಾಗಿದ್ದಾರೆ. ಶೋಷಣೆ, ಮೋಸ, ದಬ್ಬಾಳಿಕೆಗಳು ಒಂದು ಹಂತದವರೆಗೆ, ಒಂದು ಮಟ್ಟದವರೆಗೆ ನಡೆಯಬಹುದು. ಆದರೆ ಅವು ನಿರಂತರ ನಡೆಯಲಾರವು. ಕೂಲಿಯಾಳುಗಳಿಗೂ ಅದುವರೆಗಿನ ಬದುಕಿನ ಅನುಭವ ಪಾಠಕಲಿಸಿದೆ. ಇದೇ ರೀತಿ ಶೋಷಣೆ ಮುಂದುವರಿದರೆ ಮುಂದಿನ ಕಾಲವೇ ಸಿರಿವಂತರಿಗೆ ಪಾಠಕಲಿಸೀತು! ಎಂಬುದನ್ನು ಶೋಷಿತವರ್ಗ ಎಚ್ಚರಿಸುತ್ತದೆ. ಈ ಶೋಷಿತವರ್ಗವೇನಾದರೂ ಎಚ್ಚೆತ್ತರೆ, ತಿರುಗಿಬಿದ್ದರೆ ಎಂತಹ ಜೇಡನನ್ನೂ ಕಬಳಿಸುವಷ್ಟು ಶಕ್ತಿ, ಸಾಮರ್ಥ್ಯಗಳನ್ನು ಅದು ಪಡೆದುಕೊಳ್ಳಬಲ್ಲುದು. ಇದಕ್ಕೆ ಪೂರಕವಾಗಿ ಶೋಷಿತವರ್ಗ ತಂಡ ತಂಡವಾಗಿ ಮುಗಿಬೀಳಲು ಸಿದ್ಧವಾಗಿದೆ ಎಂದು ಶೋಷಿತವ್ಯಕ್ತಿ ಒಡೆಯನನ್ನು ಎಚ್ಚರಿಸುತ್ತಾನೆ.

            ಸಿರಿವಂತರು ತಮ್ಮ ಲಾಭಕ್ಕಾಗಿ, ಸ್ವಾರ್ಥಕ್ಕಾಗಿ ಬಡವರನ್ನು, ಕೂಲಿಯಾಳುಗಳನ್ನು ಏನೇನೋ ಆಮಿಷಗಳನ್ನೊಡ್ಡಿ, ಏನೇನೋ ತಂತ್ರಗಳನ್ನು ಹೂಡಿ, ಕುತಂತ್ರಗಳಿಂದ  ಮರುಳುಮಾಡಿ ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳುತ್ತಲೇ ಇದ್ದಾರೆ. ಆದರೆ ಅದು ಬಹಳ ಕಾಲ ನಡೆಯಲಾರದು. ಶೋಷಕರು ಮಾಡುವ ಮರುಳುತನ ಒಂದಲ್ಲ ಒಂದು ದಿನ ಬಯಲಾಗಿ ಎಲ್ಲರಿಗೂ ವಾಸ್ತವದ ಅರಿವಾಗುತ್ತದೆ. ಶೋಷಿತರಿಗೆ ಬಿದ್ದ ಪೆಟ್ಟು ಪಾಠಕಲಿಸುತ್ತದೆ. ಶೋಷಣೆಗೂ ಒಂದು ಮಿತಿಯಿದೆ, ಸಹನೆಗೂ ಕೂಡಾ. ಸಹನೆ ಮೀರಿದರೆ ಅದರ ಪರಿಣಾಮ ಯಾವತ್ತೂ ಘೋರವೇ ಆಗಿರುತ್ತದೆ. ಸಿರಿವಂತರ ಶೋಷಣೆ, ದಬ್ಬಾಳಿಕೆಗಳು ಶೋಷಿತರನ್ನು ಒಂದುಗೂಡಿಸುತ್ತವೆ. ಸಿರಿವಂತರ ಎಂತಹ ದಬ್ಬಾಳಿಕೆ, ದರ್ಪಗಳು ಎಷ್ಟಿದ್ದರೂ ಅವುಗಳನ್ನು ದಮನಮಾಡುವ ಶಕ್ತಿ ಶ್ರಮಿಕವರ್ಗಕ್ಕಿದೆ ಎಂಬುದು ಈ ಮಾತುಗಳಲ್ಲಿ ಸ್ಪಷ್ಟವಾಗುತ್ತದೆ.

 

ಒಡೆಯುತಿರೆ ಹಣತೆ ಹೊಸ ಬತ್ತಿ ಹೊಸೆಯುವೆ ಬತ್ತಿ

ಪೋಗುತಿರೆ ಸೆಲೆ ಕಣ್ಣ ನೀರ ಕರೆವೆ!

ಉರಿವೊಲೆಯ ಮೇಲೆ ಹೂಮಾಲೆ ತೂಗುವೆ; ಕಾಲು

ಕುಸಿದವಗೆ ಶಿಖರವನು ಹಾಡುತಿರುವೆ!

     ನನ್ನ ಮನದೊಳಗೇನ ಕಾಂಬೆ ನೀನು?

     ಹಸಿದ ಹುಲಿ! ಹೂಂಕಾರ ಕೇಳದೇನು?

            ಸಿರಿವಂತರು ತನ್ನಂತಹ ಶ್ರಮಿಕವರ್ಗವನ್ನು ಒಡೆಯುವುದಕ್ಕೆ ಪ್ರಯತ್ನಿಸಿದರೂ ಅದಕ್ಕೆ ಪರ್ಯಾಯವನ್ನು ಕಂಡುಕೊಳ್ಳುವ ಶಕ್ತಿ, ಸಾಮರ್ಥ್ಯಗಳು ತನ್ನಲ್ಲಿವೆ. ಸಿರಿವಂತರ ಶೋಷಣೆ, ದಬ್ಬಾಳಿಕೆಗಳಿಂದಾಗಿ ಬದುಕಿನ ಹಣತೆಯೇ ಒಡೆಯ  ತೊಡಗಿದರೆ ಅದನ್ನು ಮರುವ್ಯವಸ್ಥೆಗೊಳಿಸುವ, ಬದುಕಿನ ಜ್ವಾಲೆ ನಂದಿಹೋಗದಂತೆ ಭರವಸೆಯ ಬತ್ತಿಯನ್ನು ಮತ್ತೆ ಹೊಸೆಯುವ, ಬದುಕಿನ ಭರವಸೆಯ ಸೆಲೆ ಬತ್ತಿಹೋಗುತ್ತಿದ್ದರೆ ಕಣ್ಣನೀರನ್ನೇ ಸೆಲೆಯಾಗಿಸುವ, ಉರಿಯುತ್ತಿರುವ ಒಲೆಯ ಮೇಲೆ ಹೂಮಾಲೆಯನ್ನು ಬಾಡದಂತೆ ತೂಗುವ, ಕೈಕಾಲುಗಳಲ್ಲಿ ಶಕ್ತಿಯನ್ನು ಕಳೆದುಕೊಂಡವರಿಗೆ ಬೆಟ್ಟದಷ್ಟು ಆತ್ಮವಿಶ್ವಾಸವನ್ನು ತುಂಬುವ,  ಶಕ್ತಿ-ಸಾಮರ್ಥ್ಯಗಳು ತನ್ನಂತಹ ಶೋಷಿತ ಶ್ರಮಿಕರಲ್ಲಿವೆ. ಇದುವರೆಗಿನ ಶೋಷಣೆ, ದಬ್ಬಾಳಿಕೆಗಳು ಹಾಗಿರಲಿ. ಇನ್ನು ಮುಂದೆ ಅವೆಲ್ಲವೂ ನಡೆಯಲಾರವು. ತನ್ನ ಮನಃಸ್ಥಿತಿಯನ್ನು, ಅದರೊಳಗೆ ನಡೆಯುತ್ತಿರುವ ಶೋಷಣೆಯ ವಿರುದ್ಧದ ವಿಪ್ಲವವನ್ನು ನೀನು ಅರ್ಥಮಾಡಿಕೊಳ್ಳಲಾರೆ. ಸಿರಿವಂತರ ದಬ್ಬಾಳಿಕೆ, ಮೋಸ-ವಂಚನೆಗಳ ಫಲವಾಗಿ ತಾನೀಗ ಹಸಿದ ಹುಲಿಯಾಗಿರುವುದರಿಂದ ತನ್ನ ಹೂಂಕಾರ ನಿನಗೆ ಈಗಾಗಲೇ ಕೇಳಿರಬಹುದು. ಹಸಿದ ಹುಲಿಯ ಸಿಟ್ಟು, ಆಕ್ರೋಶ, ರೊಚ್ಚು, ಆರ್ಭಟಗಳು ಹಾಗೂ ಮುಂದೊದಗಬಹುದಾದ ಪರಿಣಾಮಗಳ ತೀವ್ರತೆಗಳು ಯಾರಿಗೂ ಅರ್ಥವಾಗದೆ ಇರಲಾರವು ಎಂದು ಶೋಷಿತ ವ್ಯಕ್ತಿ ಒಡೆಯನ ಮುಂದೆ ಸವಾಲೆಸೆಯುತ್ತಾನೆ.

            ಶ್ರಮಿಕವರ್ಗವನ್ನು ಹಲವು ತಂತ್ರ-ಕುತಂತ್ರಗಳಿಂದ ಮಟ್ಟಹಾಕುವ, ಅವರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ತಮಗೆ ಬೇಕಾದಂತೆ ನಡೆಸಿ, ದುಡಿಸಿಕೊಳ್ಳುವ ಸಿರಿವಂತರ ಹುನ್ನಾರಗಳು ಬಹಳ ದಿನಗಳ ಕಾಲ ನಡೆಯವು. ಸಿರಿವಂತರ ಪ್ರತಿಯೊಂದು ಶೋಷಣೆಯೂ ಶ್ರಮಿಕವರ್ಗಕ್ಕೆ ಹೊಸ ಹೊಸ ಪಾಠಗಳನ್ನು ಕಲಿಸಿರುವುದರಿಂದ ಅವುಗಳಿಗೆ ಪ್ರತಿಯಾಗಿ ಶ್ರಮಿಕವರ್ಗ ಪ್ರತಿಭಟನೆಯ ಬಿಸಿಯನ್ನು ಮುಟ್ಟಿಸುವುದಕ್ಕೆ ಸಿದ್ಧವಾಗಿಯೇ ಇದೆ. ಶ್ರಮಿಕವರ್ಗ ಮನಸ್ಸುಮಾಡಿದರೆ ಎಂತಹ ಅಸಾಧ್ಯದ ಕೆಲಸವನ್ನೂ ಮಾಡಿತೋರಿಸಬಲ್ಲುದು. ಹಾಗಿರುವಾಗ ಶೋಷಣೆಗಳಿಂದ ಪೆಟ್ಟುತಿಂದು ಹಸಿದ ಹುಲಿಯಂತಾಗಿರುವ ಈ ಶ್ರಮಿಕವರ್ಗ ಸಿರಿವಂತರ ಮೇಲೆಯೇ ಎಗರುವ ಸಮಯ, ಸಂದರ್ಭಗಳು ದೂರವಿಲ್ಲ. ಅಷ್ಟರೊಳಗೆ ಸಿರಿವಂತರು ಎಚ್ಚೆತ್ತುಕೊಳ್ಳಲೇಬೇಕು.

 

ಹೊಟ್ಟೆಯಲಿ ಹುಟ್ಟಿದೀ ವಿಲಯಾಗ್ನಿ ಸಮ

ಏರುತಿದೆ ಎದೆಗೆ, ಮನುಜತೆಯ ಚಿತೆಗೆ

ಕಟ್ಟು ಕಟ್ಟಲೆಯೆಲ್ಲ ಇದಕೆ ಕಟ್ಟಿಗೆಯಾಗಿ

ಸುಟ್ಟೀತು ಮನುಕುಲವೆ ಇದರ ಹತಿಗೆ

     ನಿನ್ನ ನಂದನ ಬೂದಿಯಾಗದಂತೆ

     ನನ್ನದನು ಕೊಡು ತಾನು ತಣಿಯುವಂತೆ

            ಹೊಟ್ಟೆಯಲ್ಲಿ ಹುಟ್ಟಿಕೊಂಡಿರುವ ಹಸಿವಿನ ಬೆಂಕಿ ಪ್ರಳಯಾಗ್ನಿಯ ರೂಪವನ್ನು ಪಡೆದು ಹೊಟ್ಟೆಯಿಂದ ಎದೆಗೆ ಏರುತ್ತಿದೆ. ಎದೆಯಲ್ಲಿನ ಸ್ನೇಹ, ಪ್ರೀತಿ, ವಾತ್ಸಲ್ಯ, ಮಾನವೀಯತೆ, ಪರೋಪಕಾರ, ವಿಶ್ವಾಸ ಮೊದಲಾದ ಎಲ್ಲಾ ಮಾನವೀಯ ಭಾವಗಳು, ಮೌಲ್ಯಗಳು ಈ ಬೆಂಕಿಯ ತೀವ್ರತೆಗೆ ಸುಟ್ಟುಹೋಗುತ್ತಿವೆ. ಬದುಕಿನ ಕಟ್ಟುಕಟ್ಟಳೆಗಳೆಲ್ಲ ಮನುಷ್ಯತ್ವವೆಂಬ ಚಿತೆಗೆ ಕಟ್ಟಿಗೆಗಳಾಗುತ್ತಿವೆ. ಹಸಿದವರಿಗೆ ಅನ್ನ ನೀಡದೆ, ಉಡಲು ಇಲ್ಲದವರಿಗೆ ಉಡಲು ಬಟ್ಟೆನೀಡದೆ, ಮನೆಗಳ ಅಗತ್ಯವಿರುವವರಿಗೆ ಮನೆಗಳನ್ನು ಕಟ್ಟಿಕೊಡದೆ ನಿರಂತರ ಶೋಷಿಸುತ್ತಿರುವ ಸಿರಿವಂತರ ಶೋಷಣೆಯು ಬಡವರ ಎದೆಯಲ್ಲಿ ಬೆಂಕಿಯನ್ನು ಹೊತ್ತಿಸಿದೆ. ಹತ್ತಿಕೊಂಡ ಬೆಂಕಿ ಹೇಗೆ ಎಲ್ಲವನ್ನೂ ಸುಟ್ಟುಹಾಕಬಲ್ಲುದೋ ಹಾಗೆಯೇ ಬಡವರ ಹೊಟ್ಟೆಯ ಬೆಂಕಿ ಮನುಕುಲವನ್ನೇ ಸುಟ್ಟುಹಾಕಬಲ್ಲುದು. ಈ ಬೆಂಕಿಗೆ ಸಿರಿವಂತರ ಮನೆ, ಆಸ್ತಿ-ಪಾಸ್ತಿಗಳೆಲ್ಲವೂ ಸುಟ್ಟುಬೂದಿಯಾಗಬಹುದು. ಹಾಗಾಗಬಾರದು ಎಂದಾದರೆ, ತನಗೆ ನ್ಯಾಯವಾಗಿ ಸಲ್ಲಬೇಕಾದ ಅನ್ನ, ಬಟ್ಟೆ, ಹಾಗೂ ಮನೆಯನ್ನು ತಾನು ಮೆಚ್ಚುವಂತೆ, ತನಗೆ ಇಷ್ಟವಾಗುವಂತೆ, ತನಗೆ ತೃಪ್ತಿಯಾಗುವಂತೆ ಕೊಟ್ಟುಬಿಡಬೇಕು ಎಂದು ಶ್ರಮಿಕವ್ಯಕ್ತಿ ತನ್ನೊಡೆಯನಿಗೆ ಎಚ್ಚರಿಕೆಯನ್ನು ಕೊಡುತ್ತಾನೆ.

            ಮನುಷ್ಯನಲ್ಲಿನ ಹಸಿವಿನ ಬೆಂಕಿ ಸರಿಯಾದ ಸಮಯದಲ್ಲಿ ಹಾಗೂ ಸರಿಯಾದ ಕ್ರಮದಲ್ಲಿ ಉಪಶಮನಗೊಳ್ಳದಿದ್ದರೆ ಅದು ಇನ್ನಿಲ್ಲದ ಅನರ್ಥಗಳನ್ನು ತಂದೊಡ್ಡುತ್ತದೆ. ಅನ್ನ, ಬಟ್ಟೆ ಹಾಗೂ ಮನೆ – ಈ ಮೂರು ಮೂಲಭೂತ ಅವಶ್ಯಕತೆಗಳ ವಿಚಾರದಲ್ಲಿ ಅನ್ಯಾಯವಾದಾಗ, ಮೋಸವಾದಾಗ, ಶೋಷಣೆ ನಡೆದಾಗ ಮನುಷ್ಯ ವ್ಯಗ್ರನಾಗುತ್ತಾನೆ. ಈ ವ್ಯಗ್ರತೆ ಯಾವುದೇ ರೀತಿಯಲ್ಲಿ ವ್ಯತಿರಿಕ್ತ ಪರಿಣಾಮಗಳನ್ನು ಬೀರಬಹುದು. ಹೊಟ್ಟೆಯಲ್ಲಿ ಹುಟ್ಟುವ ಬೆಂಕಿ ಮನುಷ್ಯತ್ವವನ್ನೇ ನಾಶಮಾಡಿ ಮನುಷ್ಯನನ್ನು ಮೃಗವನ್ನಾಗಿಸುತ್ತದೆ. ಮನುಷ್ಯ ಈ ಹಂತಕ್ಕೆ ಬದಲಾಗಬಾರದು ಎಂದಿದ್ದರೆ ಆತನಿಗೆ ಅಗತ್ಯವಾಗಿರುವ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿ ಆತನನ್ನು ಮನುಷ್ಯನನ್ನಾಗಿಯೇ ಉಳಿಸಿಕೊಳ್ಳಬೇಕು.

 

ನ್ಯಾಯ ಅನ್ಯಾಯ ಸತ್ಯಾಸತ್ಯಗಳ ಅರಿವು

ಸುಟ್ಟು ಹೋಗಿವೆ ನೋಡು ಹಸಿವೆಯಲ್ಲಿ!

ನಾನು ಪಶು, ಶುದ್ಧ ಪಶು! ಹೊಟ್ಟೆ ತುಂಬಲಿ, ಬಳಿಕ

ಬಂದೇನು ನಾನು ನಿನ್ನ ಕೂಡ

     ನಿನ್ನ ಕನಸಿನ ನೂಲುದಾರಿಯಲ್ಲಿ

     ಏರೇನು ನಾ ಮುಗಿಲಿನೇಣಿಯಲ್ಲಿ!

          ಹೊಟ್ಟೆಯ ಹಸಿವು ಮನುಷ್ಯನಲ್ಲಿನ ಸತ್ಯ-ಅಸತ್ಯ, ನ್ಯಾಯ-ಅನ್ಯಾಯ, ಧರ್ಮಾ-ಅಧರ್ಮಗಳ ಪರಿಜ್ಞಾನವನ್ನೇ ಸುಟ್ಟುಬಿಡುತ್ತದೆ. ಇವೆಲ್ಲದರ ತಿಳಿವಳಿಕೆಗಳು ಹಸಿವಿನ ಬೆಂಕಿಯಲ್ಲಿ ಸುಟ್ಟುಹೋಗುತ್ತವೆ. ಮನುಷ್ಯ ಪಶುವಾಗುವುದಕ್ಕೆ ಬಹಳ ಸಮಯ ಬೇಕಿಲ್ಲ. ತನಗೆ ದೊರಕಬೇಕಾದ ಮೂಲಭೂತ ಸೌಕರ್ಯಗಳನ್ನು ಇನ್ನಾರೋ ಕಸಿದುಕೊಳ್ಳುತ್ತಿರುವಾಗ ಅಥವಾ ಅವುಗಳಿಗೆ ತಡೆಯೊಡ್ಡುತ್ತಿರುವಾಗ ಮನುಷ್ಯ ತನ್ನ ಮಾನಸಿಕ ಸ್ತಿಮಿತದೊಂದಿಗೆ ಮಾನವೀಯತೆಯನ್ನೂ ಕಳೆದುಕೊಳ್ಳುತ್ತಾನೆ. ಹೀಗೆ ಆತ ಮೃಗವಾಗುವುದಕ್ಕಿಂತ ಮೊದಲೇ ಅತನಿಗೆ ಸಲ್ಲಬೇಕಾದ ಅಗತ್ಯಗಳೆಲ್ಲವನ್ನೂ ಪೂರೈಸಬೇಕು. ಹಾಗೆ ಪೂರೈಕೆಯಾದಾಗ ಈ ಶ್ರಮಿಕನೂ ಭೇದವೆಣಿಸದೆ ಸಿರಿವಂತನೊಂದಿಗೂ ಹೆಜ್ಜೆಹಾಕಲು ಸಿದ್ಧನಾಗುತ್ತಾನೆ. ಸಿರಿವಂತ ಎಂತಹ ಕ್ಲಿಷ್ಟಕರವಾದ ಯೋಜನೆಯನ್ನು ಮುಂದಿಟ್ಟರೂ ತಾನದನ್ನು ನಿಭಾಯಿಸಿ, ನೆರವೇರಿಸಿಕೊಡಬಲ್ಲ. ತನ್ನ ಒಡೆಯನ ಯಾವುದೇ ಕನಸನ್ನೂ ನನಸಾಗಿಸಬಲ್ಲ. ಮುಗಿಲಿಗೆ ಏಣಿಯನ್ನಿರಿಸಿ ಗಗನಕ್ಕೂ ಏರಬಲ್ಲ. ಇವೆಲ್ಲವೂ ಹೊಟ್ಟೆಗೆ ಅನ್ನ, ಉಡುವುದಕ್ಕೆ ಬಟ್ಟೆ, ವಾಸಕ್ಕೆ ಮನೆಗಳ ಅವಶ್ಯಕತೆಗಳು ಪೂರೈಕೆಯಾದುದರ ಫಲ. ಅವುಗಳಿಗೆ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಶಕ್ತಿ, ಸಾಮರ್ಥ್ಯಗಳಿವೆ ಎಂಬುದು ಶೋಷಿತವ್ಯಕ್ತಿಯ ದೃಢನಂಬಿಕೆ.

          ಮನುಷ್ಯನ ಮನಃಸ್ಥಿತಿಗಳು ಸಮರ್ಪಕವಾಗಿರುವಾಗಲೇ ಆತನಿಗೆ ಬೇಕಾದ ಮೂಲಭೂತ ಅವಶ್ಯಕತೆಗಳೆಲ್ಲವನ್ನು ಒದಗಿಸಬೇಕು. ಹೊಟ್ಟೆಯ ಹಸಿವು ಎಂಬುದು ಮನುಷ್ಯತ್ವವನ್ನೇ ನಾಶಮಾಡಿ ಆತನನ್ನು ಪಶುವನ್ನಾಗಿಸುತ್ತದೆ. ಒಮ್ಮೆ ಮನುಷ್ಯತ್ವ ಅಳಿದು ಪಶುತ್ವ ರೂಢಿಯಾಯಿತೆಂದರೆ ಅನಂತರ ಆತನನ್ನು ನಿಭಾಯಿಸುವುದು ತುಂಬಾ ಕಷ್ಟ. ಅದು ಇನ್ನಿಲ್ಲದ ಅನರ್ಥಗಳನ್ನು ತಂದೊಡ್ಡುತ್ತದೆ. ಧರ್ಮಾಧರ್ಮಗಳ, ಸತ್ಯಾಸತ್ಯತೆಗಳ, ನ್ಯಾಯಾನ್ಯಾಯಗಳ ಪರಿಜ್ಞಾನ ಅಳಿದು ಎಲ್ಲೆಲ್ಲೂ ಕ್ರೌರ್ಯವೇ ವಿಜೃಂಭಿಸುತ್ತದೆ. ವಿವಿಧ ಬಗೆಯ ಶೋಷಣೆಗಳು ಮನುಷ್ಯನಲ್ಲಿನ ಮಾನವೀಯತೆಯನ್ನೇ ನಾಶಮಾಡುವುದರಿಂದ ಅದಕ್ಕಿಂತ ಮೊದಲೇ ಈ ಅವಶ್ಯಕತೆಗಳು ಒದಗಿದವು ಎಂದಾದರೆ ಮನುಷ್ಯ ಅಸಾಧ್ಯವಾದುದನ್ನೂ ಸಾಧಿಸಬಲ್ಲ.

 

ಸುತ್ತುಮುತ್ತಲು ನನ್ನ ಬಳಸಿಹವು ದೀನತೆಯ

ಹೀನತೆಯ ಗೋಡೆಗಳು ಬಾನೆತ್ತರ,

ಅದರಾಚೆ ಚೆಲುವೊಲವು ರಸವು ಸಂಸ್ಕೃತಿ ನಲವು

ನಲಿವುದೆಂದರೆ ನೋಡು, ಇದೆ ಉತ್ತರ;

     ಒಡೆದು ಬೀಳಲಿ ಮೊದಲು ಕೋಟೆಯೆಲ್ಲ;

     ಇದು ಮೊದಲು ಆಮೇಲೆ ಉಳಿದುದೆಲ್ಲ!

             ಬಡವರನ್ನು, ಅಸಹಾಯಕರನ್ನು, ದುರ್ಬಲರನ್ನು ದೀನತೆಯಿಂದ, ಕನಿಕರದಿಂದ ನೋಡುವ ಪರಿಪಾಠ ಎಲ್ಲೆಲ್ಲೂ ಎದ್ದುಕಾಣುತ್ತದೆ. ಆದರೆ ಅವರಿಗೆ ಬೇಕಾಗಿರುವುದು ದೀನತೆಯಲ್ಲ, ಕನಿಕರವೂ ಅಲ್ಲ. ಕೇವಲ ಮಾನವೀಯತೆ, ಪ್ರೀತಿ, ವಿಶ್ವಾಸಗಳು ಮಾತ್ರ. ಈಗಾಗಲೇ ಸಿರಿವಂತರ ಹಾಗೂ ಬಡವರ ನಡುವೆ ಬಾನಿನಷ್ಟು ಎತ್ತರವಾದ ಭೇದಭಾವಗಳ ಗೋಡೆಗಳು ಗಟ್ಟಿಗೊಂಡಿವೆ. ಬಡವ-ಬಲ್ಲಿದರೆಂಬ ಅಂತರ ಎದ್ದುಕಾಣುತ್ತಿದೆ. ಬಡವರೂ ಅಸಹಾಯಕರೂ ದುರ್ಬಲರೂ ಮನುಷ್ಯರೇ ಆಗಿರುವುದರಿಂದ ಈ ರೀತಿಯ ಅಡೆತಡೆಗಳು, ಭೇದಭಾವಗಳು, ಮೇಲು-ಕೀಳುಗಳು ಏಕೆ? ಈ ಅಗತ್ಯವಿಲ್ಲದ ಕನಿಕರ, ಕರುಣೆಗಳೇಕೆ? ಅವರಿಗೆ ದೊರಕಬೇಕಾದುದು ಮೂಲಭೂತ ಸೌಕರ್ಯಗಳು ಮಾತ್ರ. ಅವುಗಳಿಂದ ವಂಚಿಸಿ ಸಿರಿವಂತರು ಕನಿಕರತೋರಿ ಸಾಧಿಸುವುದಾದರೂ ಏನನ್ನು? ಮೊದಲು ಈ ಭೇದಭಾವಗಳ ಗೋಡೆಗಳು ಮುರಿದುಬೀಳಬೇಕು. ಸಿರಿವಂತರ ಭದ್ರಕೋಟೆಗಳು ಒಡೆದು ನುಚ್ಚುನೂರಾಗಬೇಕು. ಹೀಗೆ  ಭೇದಭಾವಗಳ ಕೋಟೆಗಳು ಒಡೆದುಹೋದರೆ ಮಾತ್ರ ಬಡವ-ಬಲ್ಲಿದರೊಳಗಿನ ತಾರತಮ್ಯ ಅಳಿದು ಸಮಾನತೆ ಮೂಡುತ್ತದೆ. ಈ ವ್ಯವಸ್ಥೆ ಮೊದಲು ರೂಢಿಯಾಗಬೇಕು. ಆ ಮೇಲೆ ತನ್ನಿಂದ ತಾನೇ ಸಮಾನತೆ ಬೆಳೆಯುತ್ತಾ ಸಾಗುತ್ತದೆ ಎಂಬುದು ಶೋಷಿತವ್ಯಕ್ತಿಯ ದೃಢನಂಬಿಕೆ.

            ವಾಸ್ತವಾಗಿ ಸಿರಿವಂತರು ಮತ್ತು ಶ್ರಮಿಕವರ್ಗದ ನಡುವೆ ಒಂದು ದೊಡ್ಡ ಕಂದಕವೇ ಇದೆ. ಸಿರಿವಂತರು ತಾವು ಶ್ರಮಿಕವರ್ಗದಿಂದ ದೂರವಿದ್ದು ಅವರ ಮೇಲೆ ತೋರುವ  ತೋರಿಕೆಯ ದಯೆ, ಕನಿಕರಗಳು ಅಗತ್ಯವಿಲ್ಲದವು. ಇವು ಇಬ್ಬರ ನಡುವೆ ಭೇದಭಾವಗಳ ಕೋಟೆಗೋಡೆಗಳಾಗಿ ಸಮಾನತೆಗೆ ಅಡ್ಡಿಯನ್ನುಂಟುಮಾಡುತ್ತಿವೆ. ಎಲ್ಲಿಯವರೆಗೆ ಇವುಗಳನ್ನು ಕೆಡಹುವುದಕ್ಕೆ ಸಾಧ್ಯವಿಲ್ಲವೋ ಅಲ್ಲಿಯವರೆಗೆ ಸಿರಿವಂತರ ಹಾಗೂ ಶ್ರಮಿಕರ ನಡುವಿನ ಸಮಾನತೆ ಅಸಾಧ್ಯದ ಮಾತು. ಹಾಗಾಗಿ ಮೊದಲು ಈ ಭೇದಭಾವಗಳು ಅಳಿದು ಸಮಾನತೆಯ ವೇದಿಕೆ ಸೃಷ್ಟಿಯಾಗಬೇಕು. ಅನಂತರ ಎಲ್ಲವೂ ಒಂದೊಂದಾಗಿ ರೂಢಿಯಾಗಬಲ್ಲವು.

 

ಅನ್ನವನು ಕೊಡು ಮೊದಲು, ಬಟ್ಟೆಯನು ಕೊಡು ಉಡಲು

ಕಟ್ಟಿಕೊಡು ಮನೆಗಳನು ಬಳಿಕ ನೀನು

ಕವಿಯಾಗಿ ಬಾ, ನೀತಿವಿದನಾಗಿ ಬಾ, ಶಾಸ್ತ್ರಿ

ಯಾಗಿ ಧಾರ್ಮಿಕನಾಗಿ ಮನುಜತೆಯನು

     ಕಲಿಸು ಬಾ, ಇವನದನು ಕಲಿಯಬಲ್ಲ!

     ಇದು ಮೊದಲು ಆಮೇಲೆ ಉಳಿದುದೆಲ್ಲ!

            ಮನುಷ್ಯರೊಳಗೆ ಸಹಬಾಳ್ವೆ, ಸಮಾನತೆಗಳು ಮರಳಿ ಸ್ಥಾಪನೆಯಾಗಬೇಕಾದರೆ ಮೊದಲು ಹಸಿದ ಹೊಟ್ಟೆಗೆ ಅನ್ನವನ್ನು ಕೊಡಬೇಕು. ಮಳೆ, ಚಳಿ, ಗಾಳಿಗಳಿಂದ ರಕ್ಷಣೆಗೆ ಬಟ್ಟೆಗಳನ್ನು ಕೊಡಬೇಕು. ವಾಸಕ್ಕೆ ಯೋಗ್ಯವಾದ ಮನೆಗಳನ್ನು ಕಟ್ಟಿಕೊಡಬೇಕು. ಇವೆಲ್ಲವೂ ಮೊದಲ ಅವಶ್ಯಕತೆಗಳು. ಇವೆಲ್ಲವೂ ದೊರಕಿ ತಾನು ಸಂತೃಪ್ತಿಹೊಂದಿದ ಮೇಲೆ ಒಡೆಯನು ಕವಿಯಾಗಿ ಬಂದು ಸಾಹಿತ್ಯವನ್ನು ಕುರಿತು ಆಡಿದರೆ ಶೋಷಿತವ್ಯಕ್ತಿ ಅದನ್ನು ಸಾವಧಾನದಿಂದ ಕೇಳಿ ಅರಗಿಸಿಕೊಳ್ಳಬಲ್ಲ. ನೀತಿವಿದನಾಗಿ ನೈತಿಕತೆಯನ್ನು ವಿವರಿಸಿದರೆ ಈತ ಅದನ್ನೂ ಕೇಳಿಕೊಂಡು ಬದುಕಲ್ಲಿ ಅಳವಡಿಸಿಕೊಳ್ಳಬಲ್ಲ. ಶಾಸ್ತ್ರಿಯಾಗಿ ಬಂದು ಶಾಸ್ತ್ರವಿಚಾರಗಳನ್ನು ಬೋಧಿಸಿದರೆ ಈತ ಅಂತಹ ಗಹನವಾದ ಶಾಸ್ತ್ರವಿಚಾರಗಳನ್ನೂ ಅರಗಿಸಿಕೊಳ್ಳಬಲ್ಲ. ಧಾರ್ಮಿಕನಾಗಿ ಬಂದು ಧರ್ಮಸೂಕ್ಷ್ಮಗಳನ್ನು ವಿವರಿಸಿದರೆ ಈತ ಅದನ್ನೂ ಕೇಳಿ, ಅರ್ಥೈಸಿಕೊಂಡು ಅನುಸರಿಸಬಲ್ಲ. ಇವೆಲ್ಲವನ್ನೂ ಕೇಳಿ, ಅರಿತು, ಕಲಿತು, ಅನುಸರಿಸಿಕೊಂಡು ಒಬ್ಬ ಮನುಷ್ಯನಾಗಬಲ್ಲ. ಹಾಗಾಗಿ ಮನುಷ್ಯ ಮೃಗವಾಗುವುದಕ್ಕೆ ಅವಕಾಶವನ್ನು ಕಲ್ಪಿಸದೆ ಆತನನ್ನು ಸದಾ ಮನುಷ್ಯನಾಗಿಯೇ ಇರುವಂತೆ ಕಲ್ಪಿಸಲು ಅಗತ್ಯವಾದ ಮೂಲಭೂತ ಸೌಕರ್ಯಗಳಾದ ಅನ್ನ, ಬಟ್ಟೆ ಹಾಗೂ ಮನೆಗಳನ್ನು ಅವಶ್ಯಕತೆಗಳಿಗನುಗುಣವಾಗಿ ವ್ಯವಸ್ಥೆಗೊಳಿಸಿದರೆ ಸಿರಿವಂತರು ಹಾಗೂ ಬಡವರೊಳಗೆ, ಒಡೆಯ ಹಾಗೂ ಕಾರ್ಮಿಕರೊಳಗೆ ಸಮಾನತೆ ತನ್ನಿಂದ ತಾನೇ ಬೆಳೆದು ಬೆಸೆಯುತ್ತದೆ ಎಂಬುದು ಶೋಷಿತವ್ಯಕ್ತಿಯ ಸಮಾನತೆಯ ಸಂಕಲ್ಪ . 

            ಮನುಷ್ಯನಿಗೆ ನೈತಿಕಬಲವನ್ನು ತಂದುಕೊಡುವುದು ಅನ್ನ, ಬಟ್ಟೆ ಮತ್ತು ಮನೆಗಳೆಂಬ ಮೂರು ಮೂಲಭೂತ ಅವಶ್ಯಕತೆಗಳು. ಅವುಗಳಲ್ಲಿ ಕೊರತೆ ಕಂಡುಬಂದರೆ, ಅಥವಾ ಅನ್ಯರಿಂದ ಅವುಗಳಿಗೆ ಧಕ್ಕೆ ಒದಗಿದರೆ ಮನುಷ್ಯ ಕ್ರೂರಿಯಾಗಬಲ್ಲ. ಮನುಷ್ಯನ ಯಾವುದೇ ಸಾಧನೆಗಳಿಗೆ ಈ ಮೂರೂ ಅಗತ್ಯಗಳು ಬೇಕೇಬೇಕು. ಅವುಗಳು ಒದಗಿದರೆ ಮನುಷ್ಯನಲ್ಲಿ ತಾಳ್ಮೆ, ಸಹನೆ, ಸಹಕಾರ, ದಯೆ, ನೀತಿ, ಧರ್ಮ, ಸತ್ಯ, ನ್ಯಾಯ, ನಿಷ್ಠೆ ಮೊದಲಾದ ಎಲ್ಲ ಮಾನವೀಯ ಮೌಲ್ಯಗಳು ತನ್ನಿಂದ ತಾನೇ ಜಾಗೃತವಾಗುತ್ತವೆ. ಮನುಷ್ಯ-ಮನುಷ್ಯರೊಳಗೆ ಸಮಾನತೆ ಏರ್ಪಡಬೇಕೆಂದಾದರೆ ಇವು ಸಮಾನವಾಗಿ ಹಂಚಿಕೆಯಾಗಬೇಕು. ಆದರೆ ಎಷ್ಟೋ ಮಂದಿ ಈ ವ್ಯವಸ್ಥೆಯನ್ನೇ ಅಧ್ವಾನಮಾಡುತ್ತಿದ್ದಾರೆ. ಆ ಮೂಲಕ ಸಾಮಾಜಿಕ ಅಸಮತೋಲನಕ್ಕೆ ಕಾರಣರಾಗುತ್ತಿದ್ದಾರೆ. ಇದರ ಪರಿಣಾಮ ಕೇವಲ ಸಮಾಜದ ಮೇಲೆ ಮಾತ್ರವಲ್ಲದೆ ದೇಶದ ಮೇಲೆಯೂ ಕಾಣಿಸಿಕೊಳ್ಳುತ್ತಿದೆ.

ಉಪಸಂಹಾರ:

            ಭಾರತ ಸ್ವಾತಂತ್ರ್ಯವನ್ನು ಪಡೆದು ಎಪ್ಪತ್ತೈದು ವರ್ಷಗಳು ಸಂದುಹೋಗುತ್ತಿವೆ. ಭಾರತದಂತಹ ವೈವಿಧ್ಯಮಯ ಸಂಪನ್ಮೂಲಗಳನ್ನು ಯಥೇಷ್ಟವಾಗಿ ಹೊಂದಿರುವ ದೇಶ ಯಾಕೆ ಅಭಿವೃದ್ಧಿಯ ಪಥದಲ್ಲಿ ಕುಂಟುತ್ತಿದೆ? ಸಿರಿವಂತರು ಇನ್ನಷ್ಟು ಸಿರಿವಂತರಾಗಿ ಬೆಳೆಯುತ್ತಿದ್ದಾರೆ. ಬಡವರು ತಳಹಂತಕ್ಕೆ ಇಳಿಯುತ್ತಿದ್ದಾರೆ. ಬಡವರಿಗೆ ಸಿಗಬೇಕಾದ ಸವಲತ್ತುಗಳನ್ನು ಅಧಿಕಾರಿವರ್ಗ, ಸಿರಿವಂತರು ಕಬಳಿಸುತ್ತ ಅವರನ್ನು ಇನ್ನಷ್ಟು ಬಡತನದ ದಾರುಣತೆಗೆ ತಳ್ಳುತ್ತಿದ್ದಾರೆ.  ಹಾಗಾಗಿ ಸಾಮಾಜಿಕವಾದ ಅಸಮತೋಲನ ಅಗಾಧವಾಗಿ ಬೆಳೆಯುತ್ತಿದೆ. ಇನ್ನೊಂದೆಡೆ ದೇಶದ ಸಂಪತ್ತೂ ಕೊಳ್ಳೆಹೋಗುತ್ತಿದೆ. ಆರ್ಥಿಕತೆಯ, ರಾಜಕೀಯದ ಪ್ರತಿಯೊಂದು ಹಂತದಲ್ಲಿಯೂ ಭೃಷ್ಟಾಚಾರವೇ ತಾಂಡವವಾಡುತ್ತಿದೆ. ಶ್ರಮಿಕವರ್ಗ, ಬಡವರ್ಗಗಳು ಅಧಿಕಾರಸ್ಥರ, ಸಿರಿವಂತರ ದಾಳಗಳಾಗಿ ನಲುಗುತ್ತಿವೆ. ಅವರ ಸಾವು-ನೋವುಗಳಿಗೆ ಯಾವ ಬೆಲೆಯೂ ಇಲ್ಲವಾಗಿದೆ. ಬಡವರ ಅನ್ನವನು ಅಧಿಕಾರಸ್ಥರು, ಸಿರಿವಂತರು ಕಸಿದು ತಾವು ಕೊಬ್ಬುತ್ತಿದ್ದಾರೆ. ದೇಶದ್ರೋಹಿಗಳಾಗಿ ಬದಲಾಗುತ್ತಿದ್ದಾರೆ ಎಂಬುದನ್ನು ಈ ಕವನ ಸ್ಪಷ್ಟಪಡಿಸುತ್ತದೆ.

            ಸುಧಾರಣೆಗಳು ತಳಹಂತದಿಂದಲೇ ಪ್ರಾರಂಭವಾಗಬೇಕು. ಪ್ರಜೆಗಳ ಬದುಕಿಗೆ ಅವಶ್ಯಕವಾಗಿರುವ ಮೂಲಭೂತ ಅವಶ್ಯಕತೆಗಳು ಸಮಾನವಾಗಿ ಹಂಚಿಕೆಯಾಗಬೇಕು. ದೇಶದ ಸುಧಾರಣೆ ಎಂಬುದು ಆ ದೇಶದ ಜನಜೀವನದ ಸ್ಥಿತಿಗತಿಗಳು, ಸಾಮಾಜಿಕ ಸ್ಥಿತಿಗತಿಗಳನ್ನು ಮುಖ್ಯವಾಗಿ ನೆಚ್ಚಿಕೊಂಡಿರುವುದರಿಂದ ಬಡವ-ಸಿರಿವಂತರೊಳಗೆ ಸಾಧ್ಯವಾದಷ್ಟು ಸಮಾನತೆಯನ್ನು ಸಾಧಿಸುವುದಕ್ಕೆ ಪ್ರಯತ್ನಿಸಬೇಕು. ಆದರೆ ಸಿರಿವಂತಿಕೆ, ರಾಜಕೀಯ ಹಿನ್ನೆಲೆಗಳಲ್ಲಿ ಇವೆಲ್ಲವೂ ಅಧ್ವಾನಗೊಳ್ಳುತ್ತಿರುವುದು ವಿಪರ್ಯಾಸ. ನಮ್ಮೊಳಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತಿದೆ. ತಮ್ಮ ಸ್ವಂತ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂಬುದು ಬಹುತೇಕ ಸಿರಿವಂತರು, ರಾಜಕೀಯ ಧುರೀಣರು, ಅಧಿಕಾರಿವರ್ಗದವರು ಭಾವಿಸಿಕೊಂಡಿದ್ದಾರೆ. ಇವೆಲ್ಲದರ ಪರಿಣಾಮವಾಗಿಯೇ ಬಡವರ್ಗ, ಶ್ರಮಿಕವರ್ಗಗಳಲ್ಲಿ ಪಶುತ್ವ, ಅಮಾನವೀಯತೆಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಯಾರೊಬ್ಬರೂ ಇದರ ಹಿನ್ನೆಲೆಯನ್ನಾಗಲೀ ಅವುಗಳಿಗೆ ಪರಿಹಾರಗಳನ್ನಾಗಲೀ ಕಂಡುಕೊಳ್ಳುವುದಕ್ಕೆ ಪ್ರಯತ್ನಿಸುತ್ತಿಲ್ಲ ಎಂಬುದನ್ನು ಈ ಕವನ ಧ್ವನಿಸುತ್ತದೆ.

            ಕಳೆದ ಶತಮಾನದ  ಅರುವತ್ತರ ದಶಕದಲ್ಲಿ ರಚನೆಯಾದ ಈ ಕವನ ಇಂದಿಗೂ ಭಾರತದ ಸ್ಥಿತಿಗತಿಗಳಿಗೆ ವಿಡಂಬನೆಯಾಗಿದೆ. ದೇಶದ ಪರಿಸ್ಥಿತಿಗಳು ಹೇಳಿಕೊಳ್ಳುವಷ್ಟೇನೂ ಬದಲಾವಣೆಯಾಗಿಲ್ಲ. ದೇಶದಲ್ಲಿ ಮನುಷ್ಯತ್ವ ಅಳಿಯುತ್ತಿರುವುದರ ಬಗ್ಗೆಯಾಗಲೀ, ಮೃಗೀಯತ್ವ ಬೆಳೆಯುತ್ತಿರುವ ಬಗ್ಗೆಯಾಗಲೀ ಸಾಮಾಜಿಕ ಅಸಮತೋಲನ ಅಗಾಧವಾಗುತ್ತಿರುವ ಬಗ್ಗೆಯಾಗಲೀ ಯಾರಿಗೂ ಕಾಳಜಿ ಇದ್ದಂತಿಲ್ಲ. ಸಾಮಾಜಿಕ ಕಳಕಳಿಯ ಕವನವೊಂದು ಅದರ ರಚನೆಯ ಕಾಲಕ್ಕೆ ಮಾತ್ರ ಸೀಮಿತವಾಗದೆ ಭವಿಷ್ಯದ ಸ್ಥಿತಿಗತಿಗಳಿಗೂ ಗತಿಬಿಂಬವಾಗುತ್ತದೆ ಎಂಬುದಕ್ಕೆ ಈ ಕವನವೇ ಸಾಕ್ಷಿ ಎನಿಸುತ್ತದೆ.

***

Leave a Reply

Your email address will not be published. Required fields are marked *