ಸಾಹಿತ್ಯಾನುಸಂಧಾನ

heading1

ಕನ್ನಡದ ಮಾತು

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಬಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ)

            ಪ್ರೊ. ಮಾಲತಿ ಪಟ್ಟಣಶೆಟ್ಟಿಯವರ ’ಕನ್ನಡದ ಮಾತು’ ಎಂಬ ಕವನ ಕನ್ನಡನಾಡಿನ ಪ್ರಸಕ್ತ ಸ್ಥಿತಿಗತಿಗಳನ್ನು ವ್ಯಂಗ್ಯವಾಗಿ ಪ್ರಸ್ತುತಪಡಿಸುತ್ತದೆ.  ನಾಡಿನ ಏಕೀಕರಣಕ್ಕೆ ಭಾಷೆ, ಸಂಸ್ಕೃತಿಗಳೇ ಮುಖ್ಯವಾದ ಆಧಾರ. ಕನ್ನಡನಾಡಿನ ಹಲವು ಭಾಗಗಳು ಸ್ವಾತಂತ್ರ್ಯಪೂರ್ವದಲ್ಲಿ ಬೇರೆಬೇರೆ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದವು. ಸ್ವಾತಂತ್ರ್ಯಾನಂತರ ಈ ಭಾಗಗಳನ್ನು ಒಂದುಗೂಡಿಸಿ ಅಖಂಡ ಕನಡನಾಡನ್ನು ರಚಿಸುವ ನಮ್ಮ ಕನ್ನಡಾಭಿಮಾನಿಗಳ ಕನಸು ೧೯೫೬ರ ನವೆಂಬರ್ ೧ರಂದು ನನಸಾಯಿತು. ಆದರೆ ಏಕೀಕರಣದ ಸಂದರ್ಭದಲ್ಲಿ ಭಾಷೆ, ಸಂಸ್ಕೃತಿಗಳ ಮೇಲಿದ್ದ ಅಭಿಮಾನ, ಗೌರವಗಳು ಬರಬರುತ್ತ ಅಳಿದುಹೋಗತೊಡಗಿದವು. ಕನ್ನಡನಾಡಿನ ಏಕೀಕರಣದ ಕನಸು ಹಾಗೂ ನನಸನ್ನು ವಿಡಂಬನೆಯಾಗುಳ್ಳ ಈ ಕವನ ಏಕೀಕರಣದ ನೇತಾರರ ಕನಸಿನ ವಾಸ್ತವಿಕತೆಯನ್ನೂ ಅನಂತರದ ನನಸಿನ ಆಭಾಸವನ್ನು ವ್ಯಂಗ್ಯವಾಗಿ ವಿಶದೀಕರಿಸುತ್ತದೆ.

ಬೆಸೆದುಕೊಂಡಿತು ನಮ್ಮ ಚೆಲುವ ಕನ್ನಡನಾಡು

ನೆಲಕೆ ನೆಲ, ಜಲಕೆ ಜಲ

ಗಿರಿಸಾನು ಕಾಡು ಕಂದರ ಬಾನು

ಸಿಕ್ಕಿಕೊಂಡವು ಕಣಕೆ ಕಣ

ಮುತ್ತಿಕೊಂಡವು ಮತ್ತೆ ಅಣುರೇಣುತೃಣಕಾಷ್ಠ

            ಭಾರತ ಸ್ವಾತಂತ್ರ್ಯವನ್ನು ಪಡೆದ ಮೇಲೆ, ನಾಡಿನ ನೇತಾರರ ಪರಿಶ್ರಮದಿಂದಾಗಿ ಕನ್ನಡ ಭಾಷಾ ಪ್ರದೇಶಗಳು ಏಕೀಕರಣಗೊಂಡವು. ಪ್ರಾಂತ್ಯಗಳು ಪರಸ್ಪರ ಬೆಸೆದುಕೊಂಡು ಚೆಲುವ ಕನ್ನಡನಾಡು ರಚನೆಯಾಯಿತು. ಬೇರೆಬೇರೆ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ನೆಲ, ಜಲಗಳು, ಬೆಟ್ಟದತಪ್ಪಲುಗಳು, ಕಾಡುಮೇಡುಗಳು, ಕಣಿವೆಕಂದರಗಳು ಪರಸ್ಪರ ಒಂದಕ್ಕೊಂದು ಕೂಡಿಕೊಂಡು ಏಕೀಕರಣದ ನೇತಾರರ ಕನಸಾಗಿದ್ದ ಚೆಲುವ ಕನ್ನಡನಾಡು ಉದಯವಾಯಿತು. ನಾಡಿನ ಅಣುರೇಣುತೃಣಕಾಷ್ಠಗಳಲ್ಲಿಯೂ ಕನ್ನಡತನ ಸೇರಿಕೊಂಡಿತು. ನೆಲಜಲಗಳ ಅಭಿವೃದ್ಧಿ, ನಾಡುನುಡಿಯ ಅಭಿವೃದ್ಧಿ, ಸ್ವಾವಲಂಬನೆಯ ಕನಸು ಎಲ್ಲೆಲ್ಲೂ ತುಂಬಿಕೊಂಡಿತು. ನಮ್ಮ ನಾಡು, ನಮ್ಮ ಭಾಷೆ, ನಮ್ಮ ಸಂಸ್ಕೃತಿ ಎಂಬ ಮಮಕಾರ, ಅಭಿಮಾನ. ಸುಂದರ ಕನಸೊಂದು ನನಸಾಗಿ ಸಂಭ್ರಮಪಟ್ಟಿದ್ದೂ ಆಯಿತು.

ನನಸುಗುಡಿಯಲ್ಲಿ ತ್ಯಾಗದುಡಿಯಲ್ಲಿ

ವಿಜಯೋತ್ಸವದ ತುತ್ತತುದಿಯಲ್ಲೂ

ತೆಕ್ಕೆಗೊಂಡವೆ ನಮ್ಮ ಮನಕೆ ಮನ?

ಜನಕ ಜನ?

            ಅಖಂಡ ಕನ್ನಡನಾಡಿನ ಕನಸು ಈಡೇರಿ ನೇತಾರರ ತ್ಯಾಗಕ್ಕೊಂದು ಮೆರುಗು. ನನಸುಗುಡಿಯಲ್ಲಿ ತ್ಯಾಗದುಡಿಯ ನಾದದೊಂದಿಗೆ ವಿಜಯೋತ್ಸವ. ಆದರೆ ಈ ವಿಜಯೋತ್ಸವದ ತುತ್ತತುದಿಯಲ್ಲಿಯೂ ನಮ್ಮೆಲ್ಲರ ಮೈಮನಗಳು ಒಂದಾದವೇ? ನಮ್ಮ ಕನ್ನಡ ಜನಗಳು ನಾಡಿಗಾಗಿ, ನುಡಿಗಾಗಿ ಒಂದಾದರೇ? ಎಂಬ ಸವಾಲು ನಮ್ಮ ಮುಂದಿದೆ. ಏಕೀಕರಣದ ಪೂರ್ವದಲ್ಲಿದ್ದ ತುಡಿತ, ಹಂಬಲ, ಅಭಿಮಾನ, ಹೆಮ್ಮೆಗಳು ಎಲ್ಲಿ ಸೋರಿಹೋದವು? ನಾಡು ಉದಯವಾಯಿತಲ್ಲ! ಇನ್ನೇನು ಕೆಲಸ? ಮನ-ಮನಗಳು ಸೇರಿಕೊಳ್ಳಲಿಲ್ಲ, ಜನ-ಜನಗಳು ಒಂದಾಗಲಿಲ್ಲ. ಹೀಗಿರುವಾಗ ಅಭಿವೃದ್ಧಿ ಹೇಗೆ ಸಾಧ್ಯ?  ಎಲ್ಲವೂ ಆರಂಭಶೂರತ್ವ ಮಾತ್ರ ಎನಿಸಿತಲ್ಲ!  

ಒಂದು ಮನದಲಿ ಹಲವು ಸ್ವಂತಿಕೆ ಮೊಳೆದು

ಒಂದು ಮನೆಯಲಿ ಹತ್ತು ಗೋಡೆಗಳು ಚಿಗಿತು

ಹನಿಯಲ್ಲೆ ಸಾಗರ ಕಟ್ಟುವ ಗುರಿ

ತೆನೆಯಲ್ಲೆ ರಾಶಿಯ ಹೇರುವ ಪರಿ

             ಮನಸ್ಸೊಂದು, ಆಲೋಚನೆಗಳು ಹಲವು. ದಿನಕೊಂದು ಹೊಸ ಸ್ವಂತಿಕೆ. ಯಾವುದೂ ಪ್ರಗತಿಪರವಲ್ಲ. ಯಾವುದೂ ಪರಸ್ಪರ ಪೂರಕವಲ್ಲ. ಮನಸ್ಸುಗಳು ಒಡೆದಂತೆ ಮನೆಗಳೂ ಒಡೆದವು. ಸ್ವಾರ್ಥ, ಅಧಿಕಾರಲಾಲಸೆ, ಭೃಷ್ಟಾಚಾರಗಳು ಮನೆಮಾಡಿ ಬೇರುಬಿಟ್ಟವು. ಅವರು ಇವರನ್ನು, ಇವರು ಅವರನ್ನು ನಂಬಿಸಲು, ನಂಬಿಸಿ ಕೊಳ್ಳೆಹೊಡೆಯಲು ಕಾತರಿಸಿದರು. ಜನರನ್ನು ನಂಬಿಸಿ ಲಾಭಹೊಡೆಯುವುದಕ್ಕೆ ಹನಿಯಲ್ಲೇ ಸಾಗರವನ್ನು ಕಟ್ಟುವ ಗುರಿ, ತೆನೆಯಲ್ಲೇ ರಾಶಿಯನ್ನು ಹೇರುವ ಪರಿಗಳು ಆರಂಭವಾದವು. ಇಂದಿನ ಪರಿ ಒಂದಾದರೆ, ನಾಳೆಯದು ಇನ್ನೊಂದು, ನಾಡಿದ್ದು ಮತ್ತೊಂದು. ಸ್ವಾರ್ಥಲಾಲಸೆಗಳ ಮುಂದೆ ನಾಡು-ನುಡಿಗಳ ಅಭಿವೃದ್ಧಿ ಯಾರಿಗೆ ಬೇಕಾಗಿದೆ?! ಎಂಬ ಮನೋಭಾವವೇ ಹುಟ್ಟಿ, ಬೆಳೆದು, ಬಲಿಯುತ್ತಿದೆಯಲ್ಲ!

ಪಟ್ಟಭದ್ರತೆಗಾಗಿ ಹಗಲಿರುಳು ಕುಣಿದಾಟ ಸೆಣಸಾಟ

ನಾಡಿನುದ್ದಗಲಕ್ಕೂ ಬರಿ ಸುಳ್ಳುಗಳದೆ ಬಯಲಾಟ

ಕನ್ನಡದ ಕಂದರಿಗೆ ಎಲ್ಲಿ ತೋರುವುದೀಗ ಚೆಲುವ ಕನ್ನಡನಾಡು?

ಔದಾರ್ಯ, ಔನ್ನತ್ಯ, ತ್ಯಾಗ, ಭಕ್ತಿಯ ಗುರುತು?

ಗೋಡೆಗೆ ನೇತ ಭೂಪಟದಲ್ಲೋ?

ಗೂಡಿಗೆ ಕುಳಿತ ಇತಿಹಾಸದ ಪುಟದಲ್ಲೋ?

           ಕೆಲವರಿಗೆ ಕುರ್ಚಿಯ ಸೆಳೆತ, ಕೆಲವರಿಗೆ  ಅಧಿಕಾರದ ಸೆಳೆತ. ಸಿಕ್ಕ ಕುರ್ಚಿ, ಅಧಿಕಾರಗಳನ್ನು ಗಟ್ಟಿಗೊಳಿಸುವ ಹಂಬಲ. ಅದಕ್ಕಾಗಿ ಬಗೆಬಗೆಯಲ್ಲಿ ಕುಣಿದಾಟ, ಸೆಣಸಾಟ. ಜನರನ್ನು ನಂಬಿಸಿ ಪಂಗನಾಮ ಹಾಕಲು ಸುಳ್ಳುಗಳ ಸರಮಾಲೆ, ಏನೇನೋ ಆಟಗಳು. ನಮ್ಮ ನೇತಾರರು ಸೇರಿಕೊಂಡು ಒಂದುಗೂಡಿಸಿದ ಚೆಲುವಕನ್ನಡನಾಡು ಎಲ್ಲಿದೆ?  ಇಂದಿನ  ನಮ್ಮಮಕ್ಕಳಿಗೆ ಯಾವುದನ್ನು ಚೆಲುವಕನ್ನಡನಾಡು ಎಂದು ತೋರಿಸಲು ಸಾಧ್ಯ? ಹಿರಿಯರ ಔದಾರ್ಯ, ಔನ್ನತ್ಯ, ತ್ಯಾಗ, ಭಕ್ತಿಗಳ ಹುಗ್ಗುರುತಾಗಿದ್ದ ಕನ್ನಡನಾಡನ್ನು ಪರಿಚಯಿಸಲು ಹೇಗೆ ಸಾಧ್ಯ? ಮನೆಗಳಲ್ಲಿ, ಶಾಲೆಗಳಲ್ಲಿ, ಕಛೇರಿಗಳಲ್ಲಿ ಗೋಡೆಗೆ ನೇತುಹಾಕಲಾಗಿರುವ ಕನ್ನಡನಾಡಿನ ಭೂಪಟದಲ್ಲಿ ಇವೆಲ್ಲವನ್ನು ತೋರಲು ಸಾಧ್ಯವೇ? ಅಥವಾ ಈಗಾಗಲೇ ಇತಿಹಾಸಕ್ಕೆ ಸೇರಿಹೋಗಿರುವ ಕರ್ನಾಟಕದ ಇತಿಹಾಸದ ಪುಟಗಳೊಳಗೆ ಕನ್ನಡಿಗರ ಉದಾರತೆ, ಉನ್ನತಿಕೆ, ತ್ಯಾಗ, ಭಕ್ತಿಗಳನ್ನು ತೋರಿಸಲು ಸಾಧ್ಯವೇ?  ಸ್ವಾರ್ಥಸಾಧಕರ ಕೈಗೆ ಸಿಲುಕಿ ಕನ್ನಡನಾಡು, ಕನ್ನಡ ನುಡಿ, ಕನ್ನಡ ಸಂಸ್ಕೃತಿಗಳೆಲ್ಲ ಸೊರಗಿಹೋಗಿವೆಯಲ್ಲ!

ನಾಳೆ ಮಕ್ಕಳಿಗೆ ಕೊಡುವುದೇನು ಪಿತ್ರಾರ್ಜಿತ?

ನೀಡುವುದೇನು ಪರಂಪರೆ, ಸಂಸ್ಕೃತಿ, ಚರಿತಾರ್ಥ

ನಾಡುನುಡಿಗಾಗಿ ಸವೆದವರ ಕನಸು ನನಸನು

ದೋಚುತ್ತಿಲ್ಲವೆ ಹಾಡೆ ಹಗಲು ನಾವೆಲ್ಲ ಜನಗಳನು?

ಹೇಗೆ ಗುನುಗುನಿಸಲಿ ಈಗ ತುಟಿಬಿಡಿಸಿ ತಲೆ ಎತ್ತಿ

’ಉದಯವಾಯಿತು ನಮ್ಮ ಚೆಲುವ ಕನ್ನಡನಾಡು?’

             ಈ ನಾಡು, ನುಡಿ, ಸಂಸ್ಕೃತಿಗಳು ನಮಗೆ ಪಿತ್ರಾರ್ಜಿತವಾಗಿ ದೊರಕಿದ ಬಳುವಳಿ. ಇದನ್ನು ನಾವು ನಮ್ಮ ಮಕ್ಕಳಿಗೆ ನೀಡಬೇಕು. ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದುದನ್ನು ನಾವು ಒಂದಷ್ಟು ಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗೆ ನೀಡಬೇಕು. ಅಥವಾ ಕನಿಷ್ಠ ಇರುವಂತೆಯೇ ಹಸ್ತಾಂತರಿಸಬೇಕು. ಆದರೆ ಈಗ ನಮ್ಮ ಮುಂದಿನ ಜನಾಂಗಕ್ಕೆ ಪಿತ್ರಾರ್ಜಿತವಾಗಿ ನೀಡುವುದಕ್ಕಾದರೂ ಏನಿದೆ? ಎಲ್ಲವನ್ನೂ ನಾವೇ ಹಾಳುಗೆಡವಿದ್ದೇವಲ್ಲ?! ನಾಡು, ನುಡಿಗಾಗಿ ಎಷ್ಟು ಮಂದಿ ದುಡಿದಿಲ್ಲ! ಶ್ರಮಿಸಿಲ್ಲ! ತ್ಯಾಗಮಾಡಿಲ್ಲ! ನಾಡು, ನುಡಿ, ಸಂಸ್ಕೃತಿಗಳ  ಹಾಗೂ ಅವುಗಳ ಅಭಿವೃದ್ಧಿಯ ಬಗೆಗಿನ ಅವರ ಕನಸುಗಳನ್ನು ನಾವೆಲ್ಲಿ ನನಸುಗೊಳಿಸಿದ್ದೇವೆ? ಎಲ್ಲವನ್ನೂ ಮರೆತ್ತಿದ್ದೇವಲ್ಲ! ನಾಡಿನ ಸಂಪತ್ತನ್ನು ಉಳಿಸುವುದನ್ನು ಬಿಟ್ಟು ಎಲ್ಲವನ್ನೂ ದೋಚುತ್ತಿದ್ದೇವಲ್ಲ! ಕನ್ನಡ ನುಡಿಯನ್ನೇ ಮರೆತುಬಿಡುತ್ತಿದ್ದೇವಲ್ಲ! ಹೀಗಿರುವಾಗ  ತಲೆ ಎತ್ತಿ, ತುಟಿಬಿಚ್ಚಿ, ಮನತುಂಬಿ “ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು” ಎಂದು ಗುನುಗುನಿಸುವುದಕ್ಕೆ ಸಾಧ್ಯವೇ?! ನಾಡು, ನುಡಿ, ಸಂಸ್ಕೃತಿಗಳ ಬಗೆಗೆ ನೈತಿಕತೆಯೇ ನಮ್ಮಲ್ಲಿಲ್ಲದಿರುವಾಗ ಅವುಗಳನ್ನು ಗೌರವಿಸಲು, ಅವುಗಳ ಬಗ್ಗೆ ಹೆಮ್ಮೆಪಟ್ಟುಕೊಳ್ಳಲು ಹೇಗೆ ಸಾಧ್ಯ?!   

ಮಗುವಿಗೊಂದು ಉಲಿ,

ನಾಡಿಗೊಂದು ನುಡಿ ಜನ್ಮಸಿದ್ಧ ಹಕ್ಕು!

ಆದರಿಲ್ಲಿ ಬಿಕ್ಕುತ್ತಿವೆ ಕನ್ನಡದ ಗಿಳಿಗಳು

ಬೆಚ್ಚುತ್ತಿವೆ ವಿಜಯೋತ್ಸಾಹಗಳು,

ಉಕ್ಕುತ್ತಿವೆ ವಿಷಮ ಭುಜಗಳು

ಜಾಗೃತಿ ಕಹಳೆಯನ್ನೂದಿ ನಿದ್ರಿಸಿದ್ದಾರೆ ಪ್ರಭೃತಿಗಳು!

ವಿಜಯಪತಾಕೆಯ ಕೆಳಗೆ ನರಳುತ್ತಿವೆ ವಿಜಯಘೋಷಗಳು

            ಮಗುವಿಗೊಂದು ಮಾತು, ನಾಡಿಗೊಂದು ನುಡಿ –ಇದು ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು. ಮಗುವೊಂದು ಹುಟ್ಟಿದಾಗ ಅದಕ್ಕೆ ನಮ್ಮದೇ ಭಾಷೆಯನ್ನು ಕಲಿಸಲೇಬೇಕಲ್ಲ! ನಮ್ಮ ಸಂಸ್ಕೃತಿಯನ್ನು ಪರಿಚಯಿಸಬೇಕಲ್ಲ! ಒಂದು ’ನಾಡು’ ಎಂದ ಮೇಲೆ ಅದಕ್ಕೊಂದು ಅಧಿಕೃತವಾದ ಭಾಷೆ ಇರಲೇಬೇಕಲ್ಲ! ಆದರೆ ಇಂದು ಆಧುನಿಕತೆ, ಜಗತೀಕರಣದಂತಹ ಸಂದರ್ಭದಲ್ಲಿ ಮಗುವಿಗೆ ಯಾವ ಭಾಷೆಯನ್ನು ಕಲಿಸೋಣ? ಯಾವುದನ್ನೂ ನಿರ್ಣಯಿಸಲಾರದ ಅತಂತ್ರ ಸ್ಥಿತಿಯಲ್ಲಿ ನಾವಿದ್ದೇವಲ್ಲ? ಗಿಳಿಗಳಂತೆ ಉಲಿಯಬೇಕಾದ ನಮ್ಮ ಮಕ್ಕಳು ಇತ್ತ ಕನ್ನಡವನ್ನೂ ಕಲಿತು ಆಡಲಾರದೆ, ಅತ್ತ ಅನ್ಯ ಭಾಷೆಯೂ ಸಲ್ಲದೆ ಬಿಕ್ಕುತ್ತಿದ್ದಾರೆ. ನಮ್ಮ ವಿಜಯೋತ್ಸಾಹಗಳು ಸತ್ವವನ್ನು ಕಳೆದುಕೊಳ್ಳುತ್ತಿವೆ. ಕನ್ನಡವನ್ನು, ಕನ್ನಡ ಸಂಸ್ಕೃತಿಯನ್ನು ಮಟ್ಟಹಾಕಲು ಭಾಷಾದ್ವೇಷಿಗಳು ಕಾಯುತ್ತಿದ್ದಾರೆ. ನಮ್ಮನಾಳುವ ನಾಯಕರು ಕನ್ನಡದ ಬಗ್ಗೆ ಜಾಗೃತಿ ಕಹಳೆಯನ್ನು ಊದುತ್ತಲೇ ನಿದ್ದೆಹೋಗಿದ್ದಾರೆ. ಹಾಗಾಗಿ ಕನ್ನಡನಾಡಿನ ಹಾಗೂ ಕನ್ನಡಭಾಷೆಯ ಬಗೆಗಿನ ವಿಜಯಘೋಷಗಳು ಸತ್ವವನ್ನು ಕಳೆದುಕೊಂಡು ಪೇಲವವಾಗಿವೆ.

ತಾಯ ಪಟ್ಟಕೆ ಅನುಮಾನಿಸುವವರ ಎದುರಲ್ಲಿ

ಕೊಚ್ಚಲೇನು ಈಗ ಕನ್ನಡದ ಮಾತು?

             ಕನ್ನಡಾಂಬೆಯನ್ನು ’ತಾಯಿ” ಎಂದು ಒಪ್ಪಲಾರದ, ಒಪ್ಪಲು ಅನುಮಾನಿಸುವವರ ಮುಂದೆ ಕನ್ನಡ ಭಾಷೆ, ಕನ್ನಡನಾಡು, ಕನ್ನಡ ಸಂಸ್ಕೃತಿಗಳ ಬಗ್ಗೆ ಹೇಗೆ ಮಾತಾಡಲು ಸಾಧ್ಯ? ಏನು ಮಾತಾಡಲು ಸಾಧ್ಯ? ನಾಡು, ನುಡಿ, ಸಂಸ್ಕೃತಿಗಳ ಬಗೆಗಿನ ಅಭಿಮಾನ ನಮಗೆ ರಕ್ತಗತವಾಗದಿದ್ದರೆ ಅವುಗಳ ಉಳಿವು, ಅಭಿವೃದ್ಧಿಯಾದರೂ ಹೇಗೆ ಸಾಧ್ಯ? ಅಭಿಮಾನಶೂನ್ಯರಾದವರ ಮುಂದೆ ಭಾಷೆ, ಸಂಸ್ಕೃತಿ, ನಾಡುಗಳ ಬಗೆಗಿನ ಮಾತುಗಳು ’ಕೋಣನ ಮುಂದೆ ಕಿನ್ನರಿ ಬಾರಿಸುವ ಕೆಲಸ’ವಾದೀತೇ ವಿನಾ ಯಾವುದೇ ರೀತಿಯ ಸ್ಪಂದನೆಗಳಿಗೆ ಪೂರಕವಾಗಲಾರವು.

            ನಾಡು-ನುಡಿಗಳನ್ನು ಗೌರವಿಸುವುದು, ಅವುಗಳನ್ನು ಸಮೃದ್ಧಸ್ಥಿತಿಯಲ್ಲಿಯೇ  ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಾಡಿನ ಏಕೀಕರಣಕ್ಕೆ ದುಡಿದ ಮಹನೀಯರ ಕಾಳಜಿ, ತ್ಯಾಗಗಳನ್ನು ನಾವಿಂದು ಮರೆತಿದ್ದೇವೆ. ನಮ್ಮ ಹಿರಿಯರು ನಮಗಾಗಿ ದುಡಿದ ಶ್ರಮವನ್ನು ನಾವಾದರೂ ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ನಮ್ಮ ಹಿರಿಯರು ನಮಗೆ ಕೊಡುಗೆಯಾಗಿ ನೀಡಿದ ನಾಡು, ನುಡಿ, ಸಂಸ್ಕೃತಿಗಳಿಗೆ ಮೊದಲ ಮನ್ನಣೆಯನ್ನು ನೀಡಿ, ನಮ್ಮ ಅಸ್ತಿತ್ವವನ್ನು ನಾವೇ ಕಾಪಾಡಿಕೊಳ್ಳಬೇಕಾಗಿದೆ. ಇವು ಅಳಿದರೆ ನಮಗೆ ಅಸ್ತಿತ್ವವೇ ಹೊರಟುಹೋಗಿ ಅನಾಮಧೇಯರಾಗುತ್ತೇವೆ. ಕನ್ನಡ ಎಂಬುದು ಕೇವಲ ಭಾಷೆಯಲ್ಲ. ಅದೊಂದು ಸಾಂಸ್ಕೃತಿಕ ಭಂಡಾರ, ಹಿರಿಯರಿಂದ ಬಳುವಳಿಯಾಗಿ ಬಂದ ಆಸ್ತಿ. ಅದನ್ನು ನಮ್ಮ ಬೇಜವಾಬ್ದಾರಿಯಿಂದ ಕಳೆದುಕೊಂಡರೆ ಮುಂದಿನ ಪೀಳಿಗೆಗೆ ನಾವು ಹಸ್ತಾಂತರಿಸುವುದಕ್ಕೆ ಏನೂ ಉಳಿದಿರುವುದಿಲ್ಲ. ನಾಡಿನ ಏಕೀರಣದ ನಮ್ಮ ಹೋರಾಟಗಾರರ ಕನಸು ಸದಾ ನನಸಾಗಿಯೇ ಇರಬೇಕಾದರೆ ನಮ್ಮ ತನು, ಮನಗಳಲ್ಲೂ ಕನ್ನಡ ಉಸಿರಾಗಬೇಕಾಗಿದೆ, ಕನ್ನಡತನವನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂಬ  ಆಶಯವನ್ನು ಈ ಕವಿತೆ ಧ್ವನಿಸುತ್ತದೆ.

***

 

 

Leave a Reply

Your email address will not be published. Required fields are marked *