(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಬಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾದ ಪದ್ಯಭಾಗ)
ತೊರೆದ ತವಕದ ಮಱುಕದಿಂದತ್ತಲಿತ್ತ ಹರಿ
ಹರಿದು ಕಂಬನಿಯ ಕೈಯಿಂದ ಮುಂಗಾಣದಾ
ತುರದೊಳಲ್ಲಲ್ಲಿ ತಡವರಿಸಿ ಕೆಡೆದೆದ್ದು ಕಟ್ಟಳಲುರಿಯ ಸರದೊಳೊಱಲಿ
ಕರೆಯುತ್ತ ಹಳವಿಸುತ ಹಂಬಲಿಸಿ ಬಾಯ್ವಿಡುತ
ದೊರೆಗೆಡುತ ಮೊಱೆಯಿಡುತಲಳಲುತ್ತ ಬಳಲುತ್ತ
ಹರಹರ ಮಹಾದೇವ ಬಗನ ನುಂಗಿದ ಹುತ್ತಿನೆಡೆಗೆ ಬಂದಳು ಭರದೊಳು ೧೨
ಪದ್ಯದ ಅನ್ವಯಕ್ರಮ:
ತೊರೆದ ತವಕದ ಮಱುಕದಿಂದ ಅತ್ತಲಿತ್ತ ಹರಿಹರಿದು ಕಂಬನಿಯ ಕೈಯಿಂದ ಮುಂಗಾಣದೆ ಆತುರದೊಳ್ ಅಲ್ಲಲ್ಲಿ ತಡವರಿಸಿ ಕೆಡೆದು ಎದ್ದು, ಕಟ್ಟಳಲುರಿಯ ಸರದೊಳ್ ಒಱಲಿ ಕರೆಯುತ್ತ, ಹಳವಿಸುತ, ಹಂಬಲಿಸಿ ಬಾಯ್ವಿಡುತ ದೊರೆಗೆಡುತ ಮೊಱೆಯಿಡುತ, ಅಳಲುತ್ತ ಬಳಲುತ್ತ ಹರಹರ ಮಹಾದೇವ ಮಗನ ನುಂಗಿದ ಹುತ್ತಿನ ಎಡೆಗೆ ಭರದೊಳು ಬಂದಳು.
ಪದ-ಅರ್ಥ:
ತೊರೆದ ತವಕ-ಕೈಬಿಟ್ಟ ಕುತೂಹಲ; ಮಱುಕ-ಬೇಗುದಿ; ಹರಿಹರಿದು-ಓಡಾಡಿಕೊಂಡು; ಕಂಬನಿಯ ಕೈಯಿಂದ-ಕಣ್ಣೀರಿನ ಕಾರಣದಿಂದ; ಮುಂಗಾಣದೆ-(ಕಣ್ಣು ಮಂಜಾಗಿ) ಮುಂದೇನಿದೆ ಎಂದು ಕಾಣದೆ; ಕೆಡೆದೆದ್ದು-ಬಿದ್ದು ಎದ್ದು; ಕಟ್ಟಳಲುರಿ-ತೀಕ್ಷ್ಣವಾದ ದುಃಖದ ಉರಿ; ಸರದೊಳೊಱಲಿ-ಸ್ವರದಿಂದ ಅರಚಿ; ಹಳವಿಸುತ-ಗೋಳಾಡುತ; ಬಾಯ್ವಿಡುತ-ಬೊಬ್ಬೆಹಾಕುತ; ದೊರೆಗೆಡುತ-ಅಸ್ತಿತ್ವವನ್ನು ಕಳೆದುಕೊಳ್ಳುತ್ತ; ಮೊಱೆಯಿಡುತ-ಆರ್ತನಾದ ಮಾಡುತ್ತ; ಅಳಲುತ್ತ-ದುಃಖಿಸುತ್ತ, ಬಳಲುತ್ತ-ಆಯಾಸಪಡುತ್ತ.
ಮಗನ ಬಗೆಗಿನ ಕೈಬಿಟ್ಟ ತವಕದಿಂದ, ಮನಸ್ಸಿನ ಬೇಗುದಿಯಿಂದ, ಆ ಕಡೆಗೊಮ್ಮೆ ಈ ಕಡೆಗೊಮ್ಮೆ ಓಡಾಡಿಕೊಂಡು, ಕಣ್ಣೀರಿನ ಕಾರಣದಿಂದ ಮುಂದೇನಿದೆ ಎಂಬುದನ್ನು ಕಾಣದೆ, ಸಮತೋಲನ ತಪ್ಪಿ ಬಿದ್ದು, ಎದ್ದು, ತೀಕ್ಷ್ಣವಾದ ದುಃಖದ ಉರಿಯಿಂದಾಗಿ ಜೋರಾಗಿ ಅರಚಿಕೊಂಡು, ಮಗನನ್ನು ಕರೆಯುತ್ತ, ಗೋಳಾಡುತ್ತ, ಹಂಬಲಿಸುತ್ತ, ಬೊಬ್ಬೆಹಾಕುತ್ತ, ಅಸ್ತಿತ್ವವನ್ನು ಕಳೆದುಕೊಳ್ಳುತ್ತ, ಆರ್ತನಾದ ಮಾಡುತ್ತ, ದುಃಖಿಸುತ್ತ, ಆಯಾಸಪಡುತ್ತ ಹರಹರ ಮಹಾದೇವ ಎಂದುಕೊಳ್ಳುತ್ತ, ತನ್ನ ಮಗನನ್ನು ಸಾಯಿಸಿದ ಹುತ್ತದ ಕಡೆಗೆ ಬಂದಳು.
ವಿಷದ ಹೊಗೆ ಹೊಯ್ದು ಹಸುರಾದ ಮೈ ಮೀಱಿ ನೊರೆ
ಯೊಸರ್ವ ಗಲ್ಲಂ ಕಂದಿದುಗುರ್ಗಳರೆದೆಱೆದಗು
ರ್ವಿಸುವ ಕಣ್ ಹರಿದು ಹುಲುಹಿಡಿದು ಹರಹಿದ ಕೈಗಳುಂಬ ಹೊತ್ತುಣ ಹಡೆಯದೆ
ಹಸಿದು ಬೆಂಗಡರ್ದ ಬಸುಱಕಟಕಟ ಮಡಿದ ಗೋಣ್
ದೆಸೆಗುರುಳಿ ಹುಡಿಹೊಕ್ಕು ಬಱತ ಬಾಯ್ವೆರಸಂದು
ಬಸವಳಿದ ನಿಜಸುತನ ಕಂಡಳು ಹರಿಶ್ಚಂದ್ರನರಸಿ ಹುತ್ತಿನ ಮೊದಲೊಳು. ೧೩
ಪದ್ಯದ ಅನ್ವಯಕ್ರಮ:
ವಿಷದ ಹೊಗೆ ಹೊಯ್ದು ಹಸುರಾದ ಮೈ, ಮೀಱಿ ನೊರೆಯನ್ ಒಸರ್ವ ಗಲ್ಲಂ, ಕಂದಿದ ಉಗುರ್ಗಳ್, ಅರೆದೆಱೆದು ಅಗುರ್ವಿಸುವ ಕಣ್, ಹರಿದು ಹುಲುಹಿಡಿದು ಹರಹಿದ ಕೈಗಳ್ ಉಂಬ ಹೊತ್ತು ಉಣ ಹಡೆಯದೆ ಹಸಿದು ಬೆಂಗೆ ಅಡರ್ದ ಬಸುಱ್ ಅಕಟಕಟ ಮಡಿದ ಗೋಣ್ ದೆಸೆಗುರುಳಿ ಹುಡಿಹೊಕ್ಕು ಬಱತ ಬಾಯ್ ಬೆರಸು ಅಂದು ಹರಿಶ್ಚಂದ್ರನ ಅರಸಿ ಹುತ್ತಿನ ಮೊದಲೊಳು ಬಸವಳಿದ ನಿಜಸುತನ ಕಂಡಳು.
ಪದ-ಅರ್ಥ:
ವಿಷದ ಹೊಗೆ-ವಿಷದ ತೀಕ್ಷ್ಣತೆ; ಮೀಱಿ-ಅಧಿಕವಾಗಿ; ಒಸರ್ವ-ಕಾರುತ್ತಿರುವ; ಗಲ್ಲ-ಕೆನ್ನೆ; ಕಂದಿದುಗುರ್ಗಳ್-ಮಾಸಿದ ಉಗುರುಗಳು; ಅಗುರ್ವಿಸುವ ಕಣ್-ಭಯಪಡಿಸುವ ಕಣ್ಣುಗಳು; ಹರಿದು –ಕೊಯ್ದು; ಹುಲುಹಿಡಿದು-ಹುಲ್ಲನ್ನು ಹಿಡಿದು; ಹರಹಿದ ಕೈಗಳ್-ಚಾಚಿಕೊಂಡಿರುವ ಕೈಗಳು; ಉಂಬ-ಊಟಮಾಡುವ; ಉಣಹಡೆಯದೆ-ಉಣ್ಣಲು ಸಿಗದೆ; ಬೆಂಗೆ-ಬೆನ್ನಿಗೆ; ಅಡರ್ದ-ಅಂಟಿಕೊಂಡಿರುವ; ಬಸುಱ್-ಹೊಟ್ಟೆ; ಮಡಿದ ಗೋಣ್-ಕುಸಿದ ಕುತ್ತಿಗೆ; ದೆಸೆಗುರುಳಿ-ದಿಕ್ಕುದಿಕ್ಕಿಗೆ ಉರುಳಿ ; ಹುಡಿ-ಧೂಳು; ಬಱತಬಾಯ್ವೆರಸು-ಒಣಗಿದ ಬಾಯಿಯಿಂದ ಕೂಡಿಕೊಂಡು; ಬಸವಳಿದ-ನಿಸ್ತೇಜನಾದ, ಶಕ್ತಿಗುಂದಿದ; ಮೊದಲೊಳು-ಪಕ್ಕದಲ್ಲಿ.
ವಿಷದ ತೀಕ್ಷ್ಣತೆಯಿಂದಾಗಿ ಹಸುರಾದ ಮೈ, ಮಿತಿಮೀರಿ ನೊರೆಯನ್ನು ಕಾರುತ್ತಿರುವ ಕೆನ್ನೆಗಳು, ಮಾಸಿದ ಉಗುರುಗಳು, ಭಯಪಡಿಸುವ ಕಣ್ಣುಗಳು, ಕೊಯ್ದ ಹುಲ್ಲಿನ ಸಮೇತ ಚಾಚಿಕೊಂಡಿರುವ ಕೈಗಳು, ಊಟಮಾಡುವ ಹೊತ್ತಿನಲ್ಲಿ ಉಣ್ಣುವುದಕ್ಕೆ ಏನೂ ಸಿಗದೆ ಬೆನ್ನಿಗೆ ಅಂಟಿಕೊಂಡಿರುವ ಹೊಟ್ಟೆ, ಕುಸಿದು ವಾಲಿರುವ ಕುತ್ತಿಗೆ, ದಿಕ್ಕುದಿಕ್ಕಿಗೆ ಹೊರಳಾಡಿದ್ದರಿಂದ ಧೂಳುತುಂಬಿಕೊಂಡು ಒಣಗಿದ ಬಾಯಿ, ಶಕ್ತಿಗುಂದಿ ನಿಸ್ತೇಜನಾಗಿ ಹುತ್ತದ ಪಕ್ಕದಲ್ಲಿ ಬಿದ್ದುಕೊಂಡಿರುವ ತನ್ನ ಮಗ ಲೋಹಿತಾಶ್ವನನ್ನು ಹರಿಶ್ಚಂದ್ರನ ಅರಸಿಯಾದ ಚಂದ್ರಮತಿಯು ಕಂಡಳು.
ಕಂಡ ಕಾಣ್ಕೆಯೊಳು ಶಿವಶಿವ ನಿಂದ ನಿಲವಿನಲಿ
ದಿಂಡುಗೆಡೆದಳು ಮೇಲೆ ಹೊರಳಿದಳು ಬಿಗಿಯಪ್ಪಿ
ಕೊಂಡು ಹೊಟ್ಟೆಯನು ಹೊಸೆಹೊಸೆದು ಮೋಱೆಯ ಮೇಲೆ ಮೋಱೆಯಿಟ್ಟೋವದೊಱಲಿ
ಮುಂಡಾಡಿ ಮುದ್ದುಗಯ್ದೋರಂತೆ ಕರೆದು ಕರೆ
ದಂಡಲೆದು ಲಲ್ಲೆಗರೆದತ್ತತ್ತು ಬಲವಳಿದು
ಬೆಂಡಾಗಿ ಜೀವವಿಕ್ಕೆಂಬಾಸೆಯಿಂದ ತೇಂಕುದಾಣಂಗಳಂ ಬಗೆದಳು ೧೪
ಪದ್ಯದ ಅನ್ವಯಕ್ರಮ:
ಕಂಡ ಕಾಣ್ಕೆಯೊಳು ಶಿವಶಿವ ನಿಂದ ನಿಲವಿನಲಿ ದಿಂಡಿಗೆಡೆದಳು, ಮೇಲೆ ಹೊರಳಿದಳು, ಬಿಗಿಯಪ್ಪಿಕೊಂಡು ಹೊಟ್ಟೆಯನ್ಜು ಹೊಸೆಹೊಸೆದು ಮೋಱೆಯ ಮೇಲೆ ಮೋಱೆಯಿಟ್ಟು ಓವದೆ ಒಱಲಿ, ಮುಂಡಾಡಿ ಮುದ್ದುಗೆಯ್ದು ಓರಂತೆ ಕರೆದು ಕರೆದು ಅಂಡಲೆದು, ಲಲ್ಲೆಗರೆದು ಅತ್ತು ಅತ್ತು ಬಲವಳಿದು ಬೆಂಡಾಗಿ ಜೀವವಿಕ್ಕು ಎಂಬಾಸೆಯಿಂದ ತೇಂಕುದಾಣಂಗಳನು ಬಗೆದಳು.
ಪದ-ಅರ್ಥ:
ಕಂಡಕಾಣ್ಕೆಯೊಳು-ನೋಡಿದ ಕ್ಷಣದಲ್ಲಿಯೇ; ನಿಂದ ನಿಲವಿನಲಿ-ನಿಂತ ಸ್ಥಿತಿಯಲ್ಲಿ; ದಿಂಡುಗೆಡೆ-ದೊಪ್ಪನೆ ಬೀಳು; ಹೊಸೆಹೊಸೆದು-ತಿಕ್ಕಿತಿಕ್ಕಿ; ಮೋಱೆ-ಮುಖ; ಓವದೊಱಲಿ-ಪ್ರೀತಿಯಿಂದ ಅರಚಿ; ಮುಂಡಾಡಿ-ಮುದ್ದಾಡಿ; ಓರಂತೆ-ಒಂದೇ ಸಮನೆ; ಅಂಡಲೆದು-ಅತ್ತಿತ್ತ ಚಲಿಸಿ; ಲಲ್ಲೆಗರೆ-ಮುದ್ದುಮಾಡು; ಬಲವಳಿದು-ಶಕ್ತಿಗುಂದಿ; ಬೆಂಡಾಗಿ-ಶಕ್ತಿಗುಂದಿ; ಜೀವವಿಕ್ಕೆಂಬಾಸೆ-ಜೀವವಿರಬಹುದೆಂಬ ಅಶೆ; ತೇಂಕುದಾಣ-ಉಸಿರ ತಾಣ; ಬಗೆದಳು-ಗಣಿಸಿದಳು.
ಮಗನನ್ನು ನೋಡಿದ ಕ್ಷಣದಲ್ಲಿಯೇ ಶಿವಶಿವ ನಿಂತ ಸ್ಥಿತಿಯಲ್ಲಿಯೇ ದೊಪ್ಪನೆ ಬಿದ್ದಳು. ಮಗನ ಮೇಲೆ ಹೊರಳಾಡಿದಳು, ಮಗನನ್ನು ಬಿಗಿಯಾಗಿ ಅಪ್ಪಿಕೊಂಡಳು. ಹೊಟ್ಟೆಯನ್ನು ತಿಕ್ಕಿತಿಕ್ಕಿ ಮಗನ ಮುಖದ ಮೇಲೆ ತನ್ನ ಮುಖವನ್ನಿರಿಸಿ ಪ್ರೀತಿಯಿಂದ ಅರಚಿ, ಮುದ್ದಾಡಿ, ಒಂದೇ ಸಮನೆ ಮಗನನ್ನು ಕರೆದು ಕರೆದು, ಅತ್ತಿತ್ತ ಚಲಿಸಿ, ಲಲ್ಲೆಗರೆದು, ಶಕ್ತಿಗುಂದಿ ಮಗನಲ್ಲಿ ಜೀವವಿರಬಹುದೆಂಬ ಆಸೆಯಿಂದ ಆತನ ಮೈಯ ವಿವಿಧ ಉಸಿರ ತಾಣಗಳನ್ನು ಗಣಿಸಿದಳು.
ಲಲನೆ ಮೂಗಿನೊಳುಸುರನಳ್ಳೆಯೊಳು ಹೊಯ್ಲನುಗು
ರೊಳು ರಜವನೆದೆಯೊಳಲ್ಲಾಟಮಂ ಕೈಯ ಮೊದ
ಲೊಳು ಮಿಡುಕನಂಗದೊಳು ನೋವನಕ್ಷಿಯೊಳು ಬೆಳ್ಪಂ ಭಾಳದೊಳು ಬೆಮರನು
ಲಲಿತಕಂಠದೊಳುಲುಕನಂಘ್ರಿಯೊಳು ಬಿಸಿಯನಂ
ಗುಲಿಗಳೊಳು ಚಿಟುಕನುಂಗುಟದೊಳರುಣಾಂಬುವಂ
ಸಲೆ ನಾಲಗೆಯೊಳಿಂಪ ರೋಮದೊಳು ಬಲ್ಪನಾರಯ್ದು ಕಾಣದೆ ನೊಂದಳು ೧೫
ಪದ್ಯದ ಅನ್ವಯಕ್ರಮ:
ಲಲನೆ, ಮೂಗಿನೊಳು ಉಸುರನು, ಅಳ್ಳೆಯೊಳು ಹೊಯ್ಲನು, ಉಗುರೊಳು ರಜವನು, ಎದೆಯೊಳ್ ಅಲ್ಲಾಟಮಂ, ಕೈಯ ಮೊದಲೊಳು ಮಿಡುಕನು, ಅಂಗದೊಳು ನೋವನು, ಅಕ್ಷಿಯೊಳು ಬೆಳ್ಪಂ, ಭಾಳದೊಳು ಬೆಮರನು, ಲಲಿತಕಂಠದೊಳು ಉಲುಕನು, ಅಂಘ್ರಿಯೊಳು ಬಿಸಿಯನ್, ಅಂಗುಲಿಗಳೊಳು ಚಿಟುಕನು, ಉಂಗುಟದೊಳ್ ಅರುಣಾಂಬುವಂ, ಸಲೆ ನಾಲಗೆಯೊಳ್ ಇಂಪನು, ರೋಮದೊಳ್ ಬಲ್ಪನು, ಆರಯ್ದು ಕಾಣದೆ ನೊಂದಳು.
ಪದ-ಅರ್ಥ:
ಲಲನೆ-ಚಂದ್ರಮತಿ; ಅಳ್ಳೆ-ಹೊಟ್ಟೆಯ ಒಂದು ಪಕ್ಕ; ಹೊಯ್ಲು-ಹೊಡೆತ; ರಜ-ಕೆಂಪುಬಣ್ಣ; ಕೈಯ ಮೊದಲ್-ನಾಡಿ; ಮಿಡುಕು-ಬಡಿತ; ಅಕ್ಷಿ-ಕಣ್ಣು; ಬೆಳ್ಪು-ಬಿಳುಪು; ಭಾಳ-ಹಣೆ; ಬೆಮರ್-ಬೆವರು; ಲಲಿತಕಂಠ-ಕೋಮಲವಾದ ಕುತ್ತಿಗೆ; ಉಲುಕು-ಬಡಿತ; ಅಂಘ್ರಿ-ಪಾದ; ಅಂಗುಲಿ-ಬೆರಳು; ಚಿಟುಕ-ನೆಟಿಕೆ; ಅರುಣಾಂಬು-ರಕ್ತ; ಸಲೆ-ಚೆನ್ನಾಗಿ; ನಾಲಗೆಯೊಳಿಂಪ-ನಾಲಗೆಯ ಮೃದುತ್ವ; ಬಲ್ಪನ್-ಸಾಮರ್ಥ್ಯವನ್ನು, ಆರಯ್ದು-ಪರೀಕ್ಷಿಸಿ; ಕಾಣದೆ-ಗ್ರಹಿಸಲಾರದೆ.
ಚಂದ್ರಮತಿಯು ಲೋಹಿತಾಶ್ವನ ಮೂಗಿನಲ್ಲಿ ಉಸುರನ್ನು, ಪಕ್ಕೆಯಲ್ಲಿ ಹೊಡೆತವನ್ನು, ಉಗುರಿನಲ್ಲಿ ಕೆಂಪನ್ನು, ನಾಡಿಯ ಬಡಿತವನ್ನು, ಅಂಗಾಂಗಗಳಲ್ಲಿ ನೋವನ್ನು, ಕಣ್ಣುಗಳಲ್ಲಿ ಬಿಳುಪನ್ನು, ಹಣೆಯಲ್ಲಿ ಬೆವರನ್ನು, ಕೋಮಲವಾದ ಕಂಠದಲ್ಲಿ ಬಡಿತವನ್ನು, ಪಾದಗಳಲ್ಲಿ ಬಿಸಿಯನ್ನು, ಬೆರಳುಗಳಲ್ಲಿ ನೆಟಿಕೆಯನ್ನು, ಉಂಗುಷ್ಟದಲ್ಲಿ ರಕ್ತಸಂಚಾರವನ್ನು, ನಾಲಗೆಯಲ್ಲಿ ಮೃದುತ್ವವನ್ನು, ರೋಮಗಳಲ್ಲಿ ಸಾಮರ್ಥ್ಯವನ್ನು ಚೆನ್ನಾಗಿ ಪರೀಕ್ಷಿಸಿ ಜೀವವಿರುವ ಸಂಕೇತಗಳಾವುದನ್ನೂ ಕಾಣದೆ ನೊಂದಳು.
ಹಡೆದೊಡಲು ಹುಡಿಯಾಯ್ತು ಮಗನೆ ಮಗನುಂಟೆಂದು
ಕಡಗಿ ಹೆಚ್ಚುವ ಮನಂ ಹೊತ್ತಿ ಹೊಗೆಯಿತ್ತು ಬಿಡ
ದಡರಿ ನಿಟ್ಟಿಸಿ ನಲಿವ ದಿಟ್ಟಿ ಕೆಟ್ಟುವು ಸೋಂಕಿ ಪುಳಕಿಸುವ ಕರಣಂಗಳು
ಕಡಿವಡೆದುವೊಸೆದು ಹೆಸರ್ಗೊಳುತಿಪ್ಪ ನಾಲಗೆಯ
ಕುಡಿಮುರುಟಿತೊಮ್ಮೊಮ್ಮೆ ನುಡಿಯನಾಲಿಪ ಕಿವಿಯ
ಹಡಿಗೆತ್ತುದೆಲೆ ಕಂದ ಎಂದೆನುತ್ತಿಂದುಮುಖಿ ಮಱುಗಿ ಬಾಯ್ವಿಟ್ಟಳಂದು ೧೬
ಪದ್ಯದ ಅನ್ವಯಕ್ರಮ:
ಹಡೆದ ಒಡಲು ಹುಡಿಯಾಯ್ತು ಮಗನೆ, ಮಗನ್ ಉಂಟೆಂದು ಕಡಗಿ ಹೆಚ್ಚುವ ಮನಂ ಹೊತ್ತಿ ಹೊಗೆಯಿತ್ತು ಬಿಡದೆ ಅಡರಿ ದಿಟ್ಟಿಸಿ ನಲಿವ ದಿಟ್ಟಿ ಕೆಟ್ಟುವು, ಸೋಂಕಿ ಪುಳಕಿಸುವ ಕರಣಂಗಳು ಕಡಿವಡೆದುವು, ಒಸೆದು ಹೆಸರ್ಗೊಳುತಿಪ್ಪ ನಾಲಗೆಯ ಕುಡಿ ಮುರುಟಿತು ಒಮ್ಮೊಮ್ಮೆ ನುಡಿಯನ್ ಆಲಿಪ ಕಿವಿಯ ಹಡಿಗೆತ್ತುದು ಎಲೆ ಕಂದ ಎಂದೆನುತ ಇಂದುಮುಖಿ ಅಂದು ಮಱುಗಿ ಬಾಯ್ವಿಟ್ಟಳ್.
ಪದ-ಅರ್ಥ:
ಒಡಲು-ಹೊಟ್ಟೆ, ಬಸಿರು; ಹುಡಿಯಾಯ್ತು-ನಾಶವಾಯಿತು; ಕಡಗಿ-ಉತ್ಸಾಹಿಸಿ; ಹೆಚ್ಚುವ-ಸಂಭ್ರಮಿಸುವ; ಹೊಗೆಯಿತ್ತು-ಹೊಗೆಯಾಡಿತು; ಅಡರಿ-ಆವರಿಸಿಕೊಂಡು; ನಿಟ್ಟಿಸಿ-ದೃಷ್ಟಿಸಿ; ದಿಟ್ಟಿ-ದೃಷ್ಟಿ; ಸೋಂಕಿ-ಸ್ಪರ್ಶಿಸಿ; ಪುಳಕಿಸುವ-ರೋಮಾಂಚನಗೊಳ್ಳುವ; ಕರಣಂಗಳು-ಇಂದ್ರಿಯಗಳು; ಕಡಿವಡೆ-ನಾಶವಾಗು; ಒಸೆದು-ಮೆಚ್ಚಿಕೊಂಡು; ಹೆಸರ್ಗೊಳುತಿಪ್ಪ-ಹೆಸರನ್ನು ಕರೆಯುತ್ತಿದ್ದ; ನಾಲಗೆಯ ಕುಡಿ-ನಾಲಗೆಯ ತುದಿ; ಮುರುಟಿತು-ಮುದುಡಿಕೊಂಡಿತು; ಹಡಿಗೆತ್ತುದು-ಬಾಗಿಲು ಕತ್ತರಿಸಿಹೋಯಿತು.
ಮಗನೇ, ನಿನ್ನನ್ನು ಕಳೆದುಕೊಂಡು ಹಡೆದ ಹೊಟ್ಟೆ ಹುಡಿಯಾಯಿತು, ಒಬ್ಬ ಮಗನಿದ್ದಾನೆ ಎಂದು ಉತ್ಸಾಹದಿಂದ ಸಂಭ್ರಮಿಸುವ ಮನಸ್ಸು ಹೊತ್ತಿ ಉರಿದು ಹೊಗೆಯಾಡುತ್ತಿದೆ. ನಿರಂತರ ನಿನ್ನನ್ನು ನೋಡಿ ನಲಿಯುವ ನನ್ನ ಕಣ್ಣುಗಳು ತಮ್ಮ ದೃಷ್ಟಿಶಕ್ತಿಯನ್ನು ಕಳೆದುಕೊಂಡವು. ನಿನ್ನನ್ನು ಸ್ಪರ್ಶಿಸಿ ರೋಮಾಂಚನಗೊಳ್ಳುವ ನನ್ನ ಇಂದ್ರಿಯಗಳು ನಾಶವಾದವು, ಮೆಚ್ಚಿಕೊಂಡು ನಿನ್ನ ಹೆಸರನ್ನು ಸದಾ ಕರೆದು ಸಂಭ್ರಮಿಸುತ್ತಿದ್ದ ನನ್ನ ನಾಲಗೆಯ ತುದಿ ಮುದುಡಿಹೋಯಿತು. ಆಗೊಮ್ಮೆ ಈಗೊಮ್ಮೆ ನಿನ್ನ ಮಾತುಗಳನ್ನು ಕೇಳಿ ಸಂಭ್ರಮಿಸುತ್ತಿದ್ದ ನನ್ನ ಕಿವಿಯ ಬಾಗಿಲು ಕತ್ತರಿಸಿಹೋಯಿತು ಎನ್ನುತ್ತ ಚಂದ್ರಮತಿ ಮರುಗಿ ಬೊಬ್ಬಿಟ್ಟಳು.
ಸಿರಿಹೋದ ಮಱುಕವನು ನೆಲೆಗೆಟ್ಟ ಚಿಂತೆಯನು
ಪರದೇಶಮಂ ಹೊಕ್ಕ ನಾಚಿಕೆಯನಱಿಯದ
ನ್ಯರ ಮನೆಯ ತೊತ್ತಾದ ಭಂಗವನು ನಿಮ್ಮಯ್ಯಗಜ್ಞಾತವಾದಳಲನು
ನೆರೆದು ಮನೆಯವರೆಯ್ದೆ ಕರಕರಿಪ ದುಃಖವನು
ತರಳ ನಿನ್ನಂ ನೋಡಿ ಮಱೆದು ಪರಿಣಾಮಮಂ
ಧರಿಸುತಿಪ್ಪೆನ್ನ ಗೋಣಂ ಕೊಯ್ದೆ ಇನ್ನಾರ ನೋಡಿ ಮಱೆದಪೆನೆಂದಳು ೧೭
ಪದ್ಯದ ಅನ್ವಯಕ್ರಮ:
ಸಿರಿಹೋದ ಮಱುಕವನು, ನೆಲೆಗೆಟ್ಟ ಚಿಂತೆಯನು, ಪರದೇಶಮಂ ಹೊಕ್ಕ ನಾಚಿಕೆಯನು, ಅಱಿಯದೆ ಅನ್ಯರ ಮನೆಯ ತೊತ್ತಾದ ಭಂಗವನು, ನಿಮ್ಮಯ್ಯಗೆ ಅಜ್ಞಾತವಾದ ಅಳಲನು, ನೆರೆದು ಮನೆಯವರ್ ಎಯ್ದೆ ಕರಕರಿಪ ದುಃಖವನು, ತರಳ ನಿನ್ನಂ ನೋಡಿ ಮಱೆದು ಪರಿಣಾಮಮಂ ಧರಿಸುತಿಪ್ಪ ಎನ್ನ ಗೋಣಂ ಕೊಯ್ದೆ, ಇನ್ನಾರ ನೋಡಿ ಮಱೆದಪೆನ್ ಎಂದಳು.
ಪದ-ಅರ್ಥ:
ಸಿರಿಹೋದ-ಸಂಪತ್ತನ್ನು ಕಳೆದುಕೊಂಡ; ಮಱುಕ-ದುಃಖ; ನೆಲೆಗೆಟ್ಟ-ನೆಲೆಯನ್ನು ಕಳೆದುಕೊಂಡ; ಪರದೇಶಮಂ ಪೊಕ್ಕ-ಅನ್ಯರ ದೇಶವನ್ನು ಪ್ರವೇಶಿಸಿದ; ತೊತ್ತಾದ –ಆಳಾದ; ಭಂಗ-ಸೋಲು; ನಿಮ್ಮಯ್ಯ-ನಿನ್ನ ತಂದೆ(ಹರಿಶ್ಚಂದ್ರ); ಅಜ್ಞಾತವಾದ-ಅಪರಿಚಿತರಾದ; ಅಳಲ್-ದುಃಖ; ನೆರೆದು-ಕೂಡಿಕೊಂಡು; ಎಯ್ದೆ-ಅಧಿಕವಾಗಿ; ಕರಕರಿಪ-ಕಿರಿಕಿರಿಯನ್ನುಂಟುಮಾಡುವ, ಕಿರುಕುಳ ನೀಡುವ; ತರಳ-ಮಗ; ಪರಿಣಾಮ-ಸಮಾಧಾನ; ಧರಿಸುತಿಪ್ಪ-ತಳೆಯುತ್ತಿದ್ದ; ಗೋಣಂ-ಕುತ್ತಿಗೆಯನ್ನು; ಇನ್ನಾರ-ಇನ್ನು ಯಾರನ್ನು.
ರಾಜ್ಯ, ಸಂಪತ್ತನ್ನು ಕಳೆದುಕೊಂಡ ದುಃಖವನ್ನು, ಒಂದು ರಾಜವಂಶದಲ್ಲಿ ಹುಟ್ಟಿ ಆ ದೇಶವನ್ನು ಬಿಟ್ಟು ಅನ್ಯರ ದೇಶವನ್ನು ಪ್ರವೇಶಿಸಿ ಬದುಕುತ್ತಿರುವ ನಾಚಿಕೆಗೇಡಿತನವನ್ನು, ತಿಳಿಯದೆ ಅನ್ಯರ ಮನೆಯಲ್ಲಿ ಆಳಾಗಬೇಕಾದ ಅನಿವಾರ್ಯ ಸೋಲನ್ನು, ನಿನ್ನ ತಂದೆಯಾದ ಹರಿಶ್ಚಂದ್ರನಿಗೆ ಅಪರಿಚಿತರಾಗಿಯೇ ಬದುಕಬೇಕಾದ ನೋವನ್ನು, ಕೆಲಸಕ್ಕಿದ್ದ ಮನೆಯವರೆಲ್ಲರೂ ಒಟ್ಟಾಗಿ ನಮಗೆ ನೀಡುತ್ತಿದ್ದ ಕಿರುಕುಳಗಳಿಂದಾಗುತ್ತಿದ್ದ ದುಃಖವನ್ನು, ಮಗನೇ ನಿನ್ನ ಮುಖವನ್ನು ನೋಡಿ ಎಲ್ಲಾ ನೋವನ್ನು ಮರೆತು ಸಮಾಧಾನವನ್ನು ತಳೆಯುತ್ತಿದ್ದೆ. ಆದರೆ ಈಗ ನೀನೇ ನನ್ನ ಕುತ್ತಿಗೆಯನ್ನು ಕೊಯ್ದೆಯಲ್ಲ! ಇನ್ನು ಮುಂದೆ ಯಾರ ಮುಖವನ್ನು ನೋಡಿ ನನ್ನ ದುಃಖ, ನೋವನ್ನು ಮರೆಯಲಿ? ಎಂದು ಚಂದ್ರಮತಿ ಗೋಳಾಡಿದಳು.
ಅತಿಲಜ್ಜೆಗೆಟ್ಟನ್ಯರಾಳಾಗಿ ದುಡಿದು ಧಾ
ವತಿಗೊಂಡು ಧನವನಾರ್ಜಿಸಿ ಹರಿಶ್ಚಂದ್ರ ಭೂ
ಪತಿ ನಮ್ಮ ಬಿಡಿಸುವಾರ್ತದ ಮೋಹದಿಂ ಹಸಿವು ನಿದ್ದೆಯಂ ತೊಱೆದು ಬಂದು
ಸುತನ ಕರೆಯೆಂದಡೇನೆಂಬೆನಾವುದ ತೋಱಿ
ಪತಿಯ ಮಱುಕವನು ಮಱೆಯಿಸುವೆನುಗ್ರಾಹಿಗಾ
ಹುತಿಯಾದನೆಂದು ಪೇೞ್ವೆನೆ ಎನ್ನ ಕಂದ ಎಂದಿಂದುಮುಖಿ ಬಾಯ್ವಿಟ್ಟಳು. ೧೮
ಪದ್ಯದ ಅನ್ವಯಕ್ರಮ:
ಹರಿಶ್ಚಂದ್ರ ಭೂಪತಿ, ಅತಿಲಜ್ಜೆಗೆಟ್ಟು ನಮ್ಮ ಬಿಡಿಸುವ ಆರ್ತದ ಮೋಹದಿಂ ಹಸಿವು ನಿದ್ದೆಯಂ ತೊಱೆದು, ಅನ್ಯರ ಆಳಾಗಿ ದುಡಿದು, ಧಾವತಿಗೊಂಡು ಧನವನ್ ಆರ್ಜಿಸಿ, ಬಂದು, ಸುತನ ಕರೆ ಎಂದಡೆ, ಏನೆಂಬೆನ್ ಆವುದ ತೋಱಿ ಪತಿಯ ಮಱುಕವನು ಮಱೆಯಿಸುವೆನ್ ಉಗ್ರ ಅಹಿಗೆ ಆಹುತಿಯಾದನ್ ಎಂದು ಪೇೞ್ವೆನೆ ಎನ್ನ ಕಂದ ಎಂದು ಇಂದುಮುಖಿ ಬಾಯ್ವಿಟ್ಟಳು.
ಪದ-ಅರ್ಥ:
ಅತಿಲಜ್ಜೆಗೆಟ್ಟು-ತೀರಾ ಲಜ್ಜಿತನಾಗಿ; ಧಾವತಿಗೊಂಡು-ತವಕಗೊಂಡು; ಧನವನಾರ್ಜಿಸಿ-ಹಣವನ್ನು ಸಂಪಾದಿಸಿ; ಆರ್ತದಮೋಹ-ಪ್ರೀತಿಯ ಮೋಹ; ತೊಱೆದು-ಬಿಟ್ಟು; ಮಱುಕ-ದುಃಖ; ಮಱೆಯಿಸು-ಶಮನಮಾಡು; ಉಗ್ರಾಹಿಗೆ-ಉಗ್ರ ಸರ್ಪಕ್ಕೆ; ಆಹುತಿ-ಬಲಿ; ಇಂದುಮುಖಿ-ಚಂದ್ರಮತಿ.
ಹರಿಶ್ಚಂದ್ರ ರಾಜನು ತಾನು ರಾಜವಂಶದಲ್ಲಿ ಹುಟ್ಟಿದರೂ ಅತ್ಯಂತ ಲಜ್ಜೆಗೆಟ್ಟು, ನಮ್ಮನ್ನು ಬಿಡಿಸುವ ಪ್ರೀತಿಯ ಮೋಹದಿಂದ ಹಸಿವು, ನಿದ್ರೆಗಳನ್ನು ಬಿಟ್ಟುಬಿಟ್ಟು ಅನ್ಯರಲ್ಲಿ ಆಳಾಗಿ ದುಡಿದು ತವಕದಿಂದ ಹಣವನ್ನು ಸಂಪಾದಿಸಿಕೊಂಡು ಬಂದು, ಮಗನನ್ನು ಕರೆ ಎಂದರೆ, ನಾನು ಏನೆಂದು ಹೇಳಲಿ? ಯಾರನ್ನು ತೋರಿಸಿ ಗಂಡನ ದುಃಖವನ್ನು ಶಮನಮಾಡಲಿ? ಮಗ ಲೋಹಿತಾಶ್ವನು ಉಗ್ರ ಸರ್ಪಕ್ಕೆ ಬಲಿಯಾದನೆಂದು ಹೇಳಲೆ? ಎಂದು ಚಂದ್ರಮತಿ ರೋಧಿಸಿದಳು.
ಅರಮನೆಯ ಮಣಿಗೃಹದ ಸೆಜ್ಜೆಯೊಳು ರಿಪುನೃಪರ
ಕರಿದಂತದಿಂ ಕಡೆದ ಕಾಲ ಮಂಚದೊಳಿಟ್ಟ
ವರಹಂಸತೂಲತಲ್ಪದೊಳು ಮಣಿವೆಳಗಿನೊಳು ಸಾಗಿಸುವ ಜೋಗೈಸುವ
ತರುಣಿಯರ ನಡುವೆ ಪವಡಿಸುವ ಸುಕುಮಾರನೀ
ನರವರಿಸದೀ ಕಾಡೊಳಿರುತ ಕತ್ತಲೆಯೊಳಾ
ಸುರದ ಕಲುನೆಲದೊಳೊಬ್ಬನೆ ಪವಡಿಸುವುದುಚಿತವೇ ಎಂದು ಬಾಯ್ವಿಟ್ಟಳು. ೧೯
ಪದ್ಯದ ಅನ್ವಯಕ್ರಮ:
ಅರಮನೆಯ ಮಣಿಗೃಹದ ಸೆಜ್ಜೆಯೊಳು ರಿಪುನೃಪರ ಕರಿದಂತದಿಂ ಕಡೆದ ಕಾಲಮಂಚದೊಳಿಟ್ಟ ವರಹಂಸತೂಲತಲ್ಪದೊಳು ಮಣಿವೆಳಗಿನೊಳು ಸಾಗಿಸುವ ಜೋಗೈಸುವ ತರುಣಿಯರ ನಡುವೆ ಪವಡಿಸುವ ಸುಕುಮಾರ ನೀನ್ ಅರವರಿಸದೆ ಈ ಕಾಡೊಳ್ ಇರುತ ಕತ್ತಲೆಯೊಳ್ ಆಸುರದ ಕಲುನೆಲದೊಳ್ ಒಬ್ಬನೇ ಪವಡಿಸುವುದು ಉಚಿತವೇ ಎಂದು ಬಾಯ್ವಿಟ್ಟಳು.
ಪದ-ಅರ್ಥ:
ಮಣಿಗೃಹ-ಮುತ್ತು, ರತ್ನಾದಿಗಳಿಂದ ಆಲಂಕೃತವಾದ ಮನೆ; ಸೆಜ್ಜೆ-ಹಾಸಿಗೆ; ರಿಪುನೃಪರ-ವೈರಿರಾಜರ; ಕರಿದಂತ-ಆನೆಯ ದಂತ; ವರ-ಶ್ರೇಷ್ಠ; ಹಂಸತೂಲತಲ್ಪ-ಹಂಸಗಳ ತುಪ್ಪುಳಗಳಿಂದ ಮಾಡಿದ ಹಾಸಿಗೆ; ಮಣಿವೆಳಗು-ಮಣಿಗಳಿಂದ ಹೊರಸೂಸುವ ಪ್ರಕಾಶ; ಸಾಗಿಸುವ-ಜೋಪಾನ ಮಾಡುವ; ಜೋಗೈಸುವ-ಜೋಕಾಲಿಯಲ್ಲಿ ಜೀಕುವ; ಪವಡಿಸು-ಮಲಗು; ಅರವರಿಸದೆ-ವಿಚಾರಿಸದೆ; ಆಸುರದ-ಒರಟಾದ.
ಅರಮನೆಯಲ್ಲಿ ರತ್ನಾದಿ ಹರಳುಗಳಿಂದ ಅಲಂಕೃತವಾದ ಮನೆಯಲ್ಲಿ, ವೈರಿರಾಜರ ಆನೆಗಳ ದಂತಗಳಿಂದ ರಚಿಸಿದ ಕಾಲುಗಳುಳ್ಳ ಮಂಚದಲ್ಲಿ, ಹಂಸಗಳ ತುಪ್ಪುಳಗಳಿಂದ ಮಾಡಿದ ಹಾಸಿಗೆಯಲ್ಲಿ ಸಖಿಯರಿಂದ ಜೋಪಾನ ಮಾಡುವ, ಜೋಕಾಲಿಯಲ್ಲಿ ಜೀಕುವ, ತರುಣಿಯರ ನಡುವೆ ಲಾಲಿಸಿಕೊಂಡು ಮಲಗಿ ನಿದ್ರಿಸುವ, ಸುಕುಮಾರನಾದ ನೀನು ವಿಚಾರಿಸದೆ ಈ ಒರಟು ನೆಲದಲ್ಲಿ ಮಲಗಿ ನಿದ್ರಿಸುವುದು ಉಚಿತವೇ? ಎಂದು ಚಂದ್ರಮತಿ ಹಲುಬಿದಳು.
ಇನ್ನಿನಿತಱಿಂದ ಮೇಲೆನ್ನೊಡೆಯನಱಸಿ ಬಂ
ದೆನ್ನನೊಯ್ದಡೆ ಬಳಿಕ ಸುಡಹಡೆಯನೆಂಬುದಂ
ತನ್ನಲ್ಲಿ ತಾನೆ ತಿಳಿದೆದ್ದು ಪುತ್ರನನೆತ್ತಿಕೊಂಡು ದೆಸೆದೆಸೆಗೆ ತಿರುಗಿ
ಮುನ್ನೆಲ್ಲರಂ ಸುಡುವ ಕಾಡಾವುದೆಂದು ನೋ
ಳ್ಪನೆಗಂ ಹಲವು ಕೆಲವುರಿಯ ಬೆಳಗಂ ಕಂಡು
ನನ್ನಿಕಾಱಂ ಕಾವ ಕಾಡತ್ತ ನಡೆವಾಗ ಬಟ್ಟೆಯೊಳದೇವೊಗಳ್ವೆನು ೨೦
ಪದ್ಯದ ಅನ್ವಯಕ್ರಮ:
ಇನ್ನು ಇನಿತಱಿಂದ ಮೇಲೆ ಎನ್ನ ಒಡೆಯನ್ ಅಱಸಿ ಬಂದು ಎನ್ನನ್ ಉಯ್ದೊಡೆ ಬಳಿಕ ಸುಡ ಹಡೆಯನ್ ಎಂಬುದಂ ತನ್ನಲ್ಲಿ ತಾನೆ ತಿಳಿದು ಎದ್ದು, ಪುತ್ರನನ್ ಎತ್ತಿಕೊಂಡು ದೆಸೆದೆಸೆಗೆ ತಿರುಗಿ ಮುನ್ನ ಎಲ್ಲರಂ ಸುಡುವ ಕಾಡ್ ಆವುದೆಂದು ನೋಳ್ಪ ಅನ್ನೆಗಂ ಹಲವು ಕೆಲವು ಉರಿಯ ಬೆಳಗಂ ಕಂಡು ನನ್ನಿಕಾಱಂ ಕಾವ ಕಾಡತ್ತ ನಡೆವಾಗ ಬಟ್ಟೆಯೊಳ್ ಅದ ಏವೊಗಳ್ವೆನು?
ಪದ-ಅರ್ಥ:
ಇನಿತಱಿಂದ-ಇಷ್ಟರಲ್ಲಿಯೇ, ಕೆಲವೇ ಸಮಯದಲ್ಲಿ; ಅಱಸಿ-ಹುಡುಕಿ; ಉಯ್ದೊಡೆ-ಕರೆದೊಯ್ದರೆ; ಸುಡಹಡೆಯನ್-ಸುಡಲು ಅವಕಾಶ ನೀಡಲಾರ; ಸುಡುವ ಕಾಡು-ಸುಡುಗಾಡು, ಶ್ಮಶಾನ; ನೋಳ್ಪನ್ನೆಗಂ-ನೋಡುವಷ್ಟರಲ್ಲಿ; ಉರಿಯ ಬೆಳಗು-ಬೆಂಕಿಯ ಬೆಳಕು; ನನ್ನಿಕಾಱಂ-ಸತ್ಯವಂತ, (ಹರಿಶ್ಚಂದ್ರ); ಕಾವ-ಕಾಯುವ; ಕಾಡತ್ತ-ಶ್ಮಶಾನದ ಕಡೆಗೆ; ಬಟ್ಟೆಯೊಳ್-ದಾರಿಯಲ್ಲಿ.
ಇನ್ನು ಕೆಲವೇ ಸಮಯದೊಳಗೆ ನನ್ನ ಒಡೆಯನು ಹುಡುಕಿಕೊಂಡು ಬಂದು ನನ್ನನ್ನು ಇಲ್ಲಿಂದ ಕರೆದೊಯ್ದರೆ ಅನಂತರ ಮಗನ ಹೆಣವನ್ನು ಸುಡಲು ಅವಕಾಶ ನೀಡಲಾರ ಎಂಬುದನ್ನು ಮನಸ್ಸಿನಲ್ಲಿಯೇ ತಿಳಿದುಕೊಂಡು, ಎದ್ದು ಮಗನ ಹೆಣವನ್ನು ಎತ್ತಿಕೊಂಡು ದಿಕ್ಕುದಿಕ್ಕಿಗೆ ತಿರುಗಿ ಎಲ್ಲರನ್ನು ಸುಡುವ ಶ್ಮಶಾನ ಎಲ್ಲಿದೆ ಎಂದು ಹುಡುಕುತ್ತಿರುವಾಗ ದೂರದಲ್ಲಿ ಬೆಂಕಿಯ ಬೆಳಕನ್ನು ಕಂಡು ಸತ್ಯವಂತನಾದ ಹರಿಶ್ಚಂದ್ರನು ಕಾಯುತ್ತಿರುವ ಶ್ಮಶಾನದ ಕಡೆಗೆ ಬರುತ್ತಿರುವಾಗ ದಾರಿಯಲ್ಲಿ ಭೀಕರವಾದ ಘಟನೆಗಳು ನಡೆದವು.
ಹಸಿಯ ತೊಗಲುಡಿಗೆ ಹಿಂಡಿಲುಗರುಳ ಚಲ್ಲಣಂ
ಕುಸುರಿಗಂಡದ ತೊಂಗಲಸ್ಥಿಗಳ ತೊಡಿಗೆ ದ
ಟ್ಟಿಸಿದ ರಕ್ತದ ಭೂರಿಕಣ್ಣಾಲಿಗಳ ಸೊಡರು ಕಾಳಿಜದ ಸುರುಗುಗಡುಬು
ಸಸಿದು ಕೊಬ್ಬಿದ ಮಿದುಳ ರಾಸಿಗೂಳೆಸೆಯೆ ಮಾ
ಮಸಕದಿಂ ಕಾಮಾಕ್ಷಿ ಚಾಮುಂಡಿಯರ ಮುಂದೆ
ಹೊಸತನಿಕ್ಕುವ ಭೂತಬೇತಾಳರಾಡಿದರು ಕೌಶಿಕಪ್ರೇರಣೆಯೊಳು ೨೧
ಪದ್ಯದ ಅನ್ವಯಕ್ರಮ:
ಹಸಿಯ ತೊಗಲ ಉಡಿಗೆ, ಹಿಂಡಿಲು ಕರುಳ ಚಲ್ಲಣಂ, ಕುಸುರಿಗಂಡದ ತೊಂಗಲ ಅಸ್ಥಿಗಳ ತೊಡಿಗೆ, ದಟ್ಟಿಸಿದ ರಕ್ತದ ಭೂರಿಕಣ್ಣಾಲಿಗಳ ಸೊಡರು, ಕಾಳಿಜದ ಸುರುಗು ಕಡುಬು, ಸಸಿದು ಕೊಬ್ಬಿದ ಮಿದುಳ ರಾಸಿ ಕೂಳ್ ಎಸೆಯೆ, ಮಾಮಸಕದಿಂ, ಕೌಶಿಕ ಪ್ರೇರಣೆಯೊಳು, ಕಾಮಾಕ್ಷಿ ಚಾಮುಂಡಿಯರ ಮುಂದೆ ಹೊಸತನ್ ಇಕ್ಕುವ ಭೂತ ಬೇತಾಳರು ಆಡಿದರು.
ಪದ-ಅರ್ಥ:
ಹಸಿಯ ತೊಗಲ ಉಡಿಗೆ-ಹಸಿ ಚರ್ಮದ ಉಡುಗೆ; ಹಿಂಡಿಲುಗರುಳ ಚಲ್ಲಣ-ಕರುಳ ಗೊಂಚಲಿನ ಚಡ್ಡಿ; ಕುಸುರಿಗಂಡ-ಕೊಚ್ಚಿದ ಮಾಂಸ; ತೊಂಗಲಸ್ಥಿಗಳ ತೊಡಿಗೆ-ಎಲುಬುಗಳ ಗೊಂಚಲಿನ ತೊಡಿಗೆ; ದಟ್ಟಿಸಿದ-ಭಯಭೀತಗೊಳಿಸಿದ; ಭೂರಿಕಣ್ಣಾಲಿ-ವಿಕಾರವಾಗಿ ಕಾಣುವ ಕಣ್ಣುಗುಡ್ಡೆ; ಸೊಡರು- ದೀಪ, ದೀವಿಗೆ; ಕಾಳಿಜ-ಹೃದಯಪಿಂಡ; ಸುರುಗುಗಡುಬು-ಒಣಗಿದ ಕಡುಬು; ಸಸಿದು-ಚದುರಿದ; ರಾಸಿಗೂಳ್-ರಾಶಿಬಿದ್ದಿರುವ ಕೂಳು, ಅನ್ನ; ಎಸೆಯೆ-ಶೋಭಿಸು, ಕಾಣು; ಮಾಮಸಕದಿಂ-ಅತಿಯಾದ ಸಿಟ್ಟಿನಿಂದ; ಭೂತಬೇತಾಳರಾಡಿದರು-ಭೂತ ಬೇತಾಳರು ಕುಣಿದರು; ಕೌಶಿಕ ಪ್ರೇರಣೆ-ವಿಶ್ವಾಮಿತ್ರನ ಪ್ರೇರಣೆ.
ಹಸಿ ಚರ್ಮದ ಉಡುಗೆಗಳನ್ನು ತೊಟ್ಟುಕೊಂಡು, ಕರುಳುಗಳ ಗೊಂಚಲಿನ ಚಡ್ಡಿಯನ್ನು ಧರಿಸಿಕೊಂಡು, ಕೊಚ್ಚಿದ ಮಾಂಸದ, ಎಲುಬುಗಳ ಗೊಂಚಲಿನ ತೊಡಿಗೆಗಳನ್ನು ಧರಿಸಿಕೊಂಡು, ಭಯಭೀತಗೊಳಿಸುವಂತೆ ಭೀಕರವಾಗಿ ತೋರುವ ಕಣ್ಣುಗುಡ್ಡೆಗಳಿಂದ ಬೆಂಕಿಯನ್ನು ಕಾರುತ್ತ, ಒಣಗಿದ ಕಡುಬುಗಳಂತಿರುವ ಹೃದಯಪಿಂಡಗಳಿಂದ ಕೂಡಿ, ಅನ್ನದ ರಾಶಿಯಂತೆ ಚದುರಿಬಿದ್ದಿರುವ ಕೊಬ್ಬಿದ ಮಿದುಳುಗಳುಗಳು ಎದ್ದು ಕಾಣುವಂತೆ ವಿಶ್ವಾಮಿತ್ರನ ಪ್ರೇರಣೆಯಿಂದ ಅತಿಯಾದ ಸಿಟ್ಟಿನಿಂದ ಭೂತಬೇತಾಳರು ಕಾಮಾಕ್ಷಿ ಚಾಮುಂಡಿಯಂತಿರುವ ಚಂದ್ರಮತಿಯ ಮುಂದೆ ಭೀಕರವಾಗಿ ಭಯಭೀತವಾಗುವಂತೆ ಕುಣಿದಾಡಿದರು.
ಕೆಡದ ಮುಂಡದ ಬಿಟ್ಟ ತಲೆಯ ಚೆಲ್ಲಿದ ಕರುಳ
ಪಡಲಿಟ್ಟ ಕಾಳಿಜದ ಮಿದುಳ ಕೊಳ್ಗೆಸಱ ಹೊನ
ಲಿಡುವ ರಕುತದ ಕಡಲೊಳಡಿಯಿಡಲು ಬಾರದೆಂಬಂತೆ ವಿಶ್ವಾಮಿತ್ರನು
ಅಡವಿಯೊಳಗೆಯ್ದೆ ನಾನಾ ಭಯಂಕರವ ಸಾ
ಲಿಡಲದನು ಪುತ್ರಶೋಕಾಗ್ರವಿಷ್ಟತೆಯ
ಕುಡುಪಿನಿಂ ಲೆಕ್ಕಿಸದೆ ಬಂದು ಸುಡುಗಾಡೊಳಿಳುಹಿದಳು ತನಯನ ಶವವನು ೨೨
ಪದ್ಯದ ಅನ್ವಯಕ್ರಮ:
ಕೆಡೆದ ಮುಂಡದ, ಬಿಟ್ಟ ತಲೆಯ, ಚೆಲ್ಲಿದ ಕರುಳ, ಪಡಲಿಟ್ಟ ಕಾಳಿಜದ, ಮಿದುಳ ಕೊಳ್ಗೆಸಱ ಹೊನಲಿಡುವ ರಕುತದ ಕಡಲೊಳ್ ಆಡಿಯಿಡಲು ಬಾರದು ಎಂಬಂತೆ ವಿಶ್ವಾಮಿತ್ರನು ಅಡವಿಯೊಳಗೆ ಎಯ್ದೆ ನಾನಾ ಭಯಂಕರವ ಸಾಲಿಡಲ್ ಅದನು ಪುತ್ರ ಶೋಕಾವಿಷ್ಟತೆಯ ಕುಡುಪಿನಿಂ ಲೆಕ್ಕಿಸದೆ ಬಂದು ಸುಡುಗಾಡೊಳ್ ತನಯನ ಶವವನು ಇಳುಹಿದಳು.
ಪದ-ಅರ್ಥ:
ಕೆಡೆದ-ಬಿದ್ದಿರುವ; ಮುಂಡ-ತಲೆಯಿಲ್ಲದ ದೇಹ; ಬಿಟ್ಟತಲೆ-ಕೆದರಿದ ತಲೆ; ಪಡಲಿಟ್ಟ-ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ; ಕಾಳಿಜ-ಹೃದಯಪಿಂಡ; ಕೊಳ್ಗೆಸಱ-ಮಂದವಾದ ಕೆಸರು; ಹೊನಲಿಡುವ-ಪ್ರವಾಹವಾಗಿ ಹರಿಯುವ; ಅಡಿಯಿಡು-ಹೆಜ್ಜೆ ಇಡು; ಎಯ್ದೆ-ಚೆನ್ನಾಗಿ, ತುಂಬಾ; ಸಾಲಿಡಲು-ಒಂದಾದ ಮೇಲೊಂದರಂತೆ ರಾಶಿಹಾಕು; ಪುತ್ರಶೋಕಾಗ್ರಹವಿಷ್ಟತೆ-ಮಗನ ಸಾವಿನ ನೋವು; ಕುಡುಪು-ತೀವ್ರತೆ; ಲೆಕ್ಕಿಸದೆ-ಗಣಿಸದೆ, ಗಮನಿಸದೆ; ಸುಡುಗಾಡು-ಶ್ಮಶಾನ; ಇಳುಹಿದಳು-ಕೆಳಗಿಳಿಸಿದಳು.
ದಾರಿಯಲ್ಲಿ ಬಿದ್ದುಕೊಂಡಿರುವ ತಲೆಯಿಲ್ಲದ ದೇಹಗಳ, ಕೆದರಿದ ತಲೆಗಳ, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಹೃದಯಪಿಂಡಗಳ, ಮಂದವಾದ ಕೆಸರಿನಲ್ಲಿ ಹರಿಯುವ ರಕ್ತದ ಪ್ರವಾಹದಿಂದಾಗಿ ಕಾಲಿಡಲು ಸಾಧ್ಯವಿಲ್ಲ ಎಂಬಂತೆ ವಿಶ್ವಾಮಿತ್ರನು ಚಂದ್ರಮತಿಯು ಬರುತ್ತಿರುವ ಕಾಡಿನಲ್ಲಿ ನಾನಾ ಭಯಂಕರವಾದ ಘಟನೆಗಳನ್ನು ಒಂದಾದ ಮೇಲೊಂದರಂತೆ ಸೃಷ್ಟಿಸಿದಾಗ, ಮಗನ ಸಾವಿನ ಶೋಕದ ನೋವಿನ ತೀವ್ರತೆಯಿಂದ ಇದಾವುದನ್ನೂ ಲೆಕ್ಕಿಸದೆ ಚಂದ್ರಮತಿಯು ನಡೆದುಕೊಂಡು ಬಂದು ಶ್ಮಶಾನದೊಳಗೆ ತನ್ನ ಮಗನ ಹೆಣವನ್ನು ಕೆಳಗಿಳಿಸಿದಳು.
***