ಸಾಹಿತ್ಯಾನುಸಂಧಾನ

heading1

ಹಾವಾಡಿಗನು ಮೂಕೊರತಿಯು

ಹಾವಾಡಿಗನು ಮೂಕೊರತಿಯು ತನ್ನ ಮಗನ ಮದುವೆಗೆ
ಶಕುನವ ನೋಡ ಹೋಹಾಗ,
ಇದಿರಲೊಬ್ಬ ಮೂಕೊರತಿ ಹಾವಾಡಿಗನ ಕಂಡು
ಶಕುನ ಹೊಲ್ಲೆಂಬ ಚದುರನ ನೋಡಾ!
ತನ್ನ ಸತಿ ಮೂಕೊರತಿ, ತನ್ನ ಕೈಯಲು ಹಾವು!
ತಾನು ತನ್ನ ಭಿನ್ನವನರಿಯದೆ
ಅನ್ಯರನೆಂಬ ಕುನ್ನಿಯನೇನೆಂಬೆ ಕೂಡಲಸಂಗಮದೇವ!
                                                                                                      -ಬಸವಣ್ಣ

    ತಮ್ಮ ಲೋಪದೋಷಗಳನ್ನು ಅರಿತುಕೊಳ್ಳದೆ, ತಾವು ಮಾತ್ರ ಶ್ರೇಷ್ಠರೆಂದು ಭಾವಿಸಿಕೊಂಡು ಸದಾ ಅನ್ಯರನ್ನು ಅವಮಾನಿಸುವ ಕುನ್ನಿ(ನಾಯಿ)ಗಳನ್ನು ಬಸವಣ್ಣನವರು ಈ ವಚನದಲ್ಲಿ ಒಂದು ಅರ್ಥಪೂರ್ಣ ದೃಷ್ಟಾಂತದ ಮೂಲಕ ವಿಡಂಬಿಸಿದ್ದಾರೆ. ಹಾವಾಡಿಗನೊಬ್ಬ ಹಾವನ್ನು ಕೈಯಲ್ಲಿ ಹಿಡಿದು ಮೂಕೊರತಿ(ಮೂಗಿಲ್ಲದವಳು)ಯಾದ ತನ್ನ ಹೆಂಡತಿಯನ್ನು ಒಡಗೂಡಿಕೊಂಡು ತನ್ನ ಮಗನ ಮದುವೆಗೆ ಜೋಯಿಸರಲ್ಲಿ ಶಕುನ(ಮುಹೂರ್ತ) ಕೇಳಲೆಂದು ಹೊರಡುತ್ತಾನೆ. ದಾರಿಯಲ್ಲಿ ಇನ್ನೊಬ್ಬ ಹಾವಾಡಿಗ ಕೈಯಲ್ಲಿ ಹಾವನ್ನು ಹಿಡಿದು ಮೂಕೊರತಿಯಾದ ತನ್ನ ಹೆಂಡತಿಯೊಂದಿಗೆ ಬರುತ್ತಿರುವುದನ್ನು ಕಂಡು ಅಪಶಕುನವೆಂದು ನಿಂದಿಸುತ್ತಾನೆ. ತನ್ನ ಕೈಯಲ್ಲಿಯೂ ಹಾವಿದೆ. ತನ್ನ ಹೆಂಡತಿಯೂ ಮೂಕೊರತಿಯಾಗಿದ್ದಾಳೆ. ಆದರೂ ಅದನ್ನು ಪರಿಭಾವಿಸದೆ ದಾರಿಯಲ್ಲಿ ಎದುರಾದ ತಮ್ಮಂತೆಯೇ ಇರುವ ಹಾವಾಡಿಗ ದಂಪತಿಗಳನ್ನು ಕಂಡು ಅಪಶಕುನವೆಂದು ತೆಗಳುವುದು ಸಮಂಜಸವೇ ಎಂಬುದು ಬಸವಣ್ಣನವರ ಪ್ರಶ್ನೆ.

        ಮನುಷ್ಯ ಮೊದಲು ತನ್ನ ನ್ಯೂನತೆಗಳನ್ನು, ಊನತೆಗಳನ್ನು, ಇತಿಮಿತಿಗಳನ್ನು, ಲೋಪದೋಷಗಳನ್ನು ಅರಿತುಕೊಳ್ಳಬೇಕು. ಅವುಗಳನ್ನು  ಅರಿತುಕೊಂಡು ನಿವಾರಿಸಿಕೊಳ್ಳದೆ, ತನ್ನನ್ನು ತಾನು ಸುಧಾರಿಸಿಕೊಳ್ಳದೆ, ತನ್ನ ವೈಕಲ್ಯಗಳನ್ನು ಮೀರದೆ ಬೇರೆಯವರನ್ನು ನಿಂದಿಸುವುದು, ಅವಮಾನಿಸುವುದು, ಹೀಗಳೆಯುವುದು ಮಾನವೀಯತೆಯಲ್ಲ.  ಬಸವಣ್ಣನವರ ಮಾತಿನಂತೆ ಇದು ಕುನ್ನಿಯ ವರ್ತನೆ. ಲೋಕದಲ್ಲಿ ಸಾಮಾನ್ಯವಾಗಿ ಬಹುತೇಕ ಮಂದಿ ತಮ್ಮನ್ನು ತಾವು ಶ್ರೇಷ್ಠರೆಂದೂ ಇತರರೆಲ್ಲರೂ ಕನಿಷ್ಠರೆಂದೂ ಭಾವಿಸುತ್ತಾರೆ. ಬಹುತೇಕರಲ್ಲಿ ಇಂದು ಮೇಲರಿಮೆಯ ಭಾವ ದಟ್ಟವಾಗಿದೆ. ಹಾಗಾಗಿ ಈ ರೀತಿಯ ವೈಪರೀತ್ಯಗಳು ನಿರಂತರ ಕಾಣಿಸಿಕೊಳ್ಳುತ್ತಾ ಇರುತ್ತವೆ. ಇಂತಹ ವರ್ತನೆಗಳು ಪರಸ್ಪರ ದ್ವೇಷ, ಮನಸ್ತಾಪ, ಅವಮಾನ, ಮಾನಸಿಕ ಹಿಂಸೆ ಮೊದಲಾದ ಅಪಮೌಲ್ಯಗಳೊಂದಿಗೆ ಅನ್ಯರ ನೆಮ್ಮದಿಯನ್ನು ಕಳೆದು ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗುತ್ತವೆ.

    ಮನುಷ್ಯ ತನ್ನನ್ನು ತಾನು ಶ್ರೇಷ್ಠನೆಂದು ಭಾವಿಸಿಕೊಂಡರೂ ಇತರರನ್ನು ಕನಿಷ್ಠರೆಂದು ಭಾವಿಸಿಕೊಳ್ಳಬಾರದು. ದೈಹಿಕ ಆಕಾರ, ಸೌಷ್ಠವ, ಗುಣ, ಬಣ್ಣ, ಅಭಿರುಚಿ, ಅರ್ಹತೆ, ಪ್ರತಿಭೆಗಳು ಎಲ್ಲರಲ್ಲೂ ಒಂದೇ ರೀತಿಯಾಗಿರುವುದಿಲ್ಲ. ಸ್ಥಿತಿಗತಿಗಳೂ ಒಂದೇ ತೆರನಾಗಿರುವುದಿಲ್ಲ. ಮನುಷ್ಯನ ಶ್ರೇಷ್ಠತೆ ಇವಾವುದನ್ನೂ ಹೊಂದಿಕೊಂಡಿಲ್ಲ. ಲೋಕದ ಎಲ್ಲಾ ಮಾನವರು  ಸಮಾನವಾಗಿಲ್ಲ ಎಂಬ ಸತ್ಯವನ್ನು ಅರಿತುಬದುಕಬೇಕು ಎಂಬುದು ಬಸವಣ್ಣನವರ ಮಾತುಗಳ ಇಂಗಿತ. “ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ” ಎಂಬ ಬಸವಣ್ಣನವರ ಇನ್ನೊಂದು ವಚನವೂ ಇದನ್ನೇ ಸಮರ್ಥಿಸುತ್ತದೆ. 

     ಹನ್ನೆರಡನೆಯ ಶತಮಾನದಲ್ಲಿಯೇ ಇಂತಹ ವೈಪರೀತ್ಯಗಳು ಕಾಣಿಸಿಕೊಳ್ಳುತ್ತಿದ್ದುದರಿಂದ ಬಸವಣ್ಣನವರು ವಚನದ ಮೂಲಕ ಅದನ್ನು ವಿಡಂಬಿಸುವುದಕ್ಕೆ ಪ್ರಯತ್ನಿಸಿದರು. ಇಂದಿನ ಆಧುನಿಕಕಾಲದಲ್ಲಿ ’ಅನ್ಯರನೆಂಬ ಕುನ್ನಿ’ಯ  ನೀಚಪ್ರವೃತ್ತಿ ಸಮಾಜಕ್ಕಂಟಿದ ರೋಗವಾಗಿ ಬೆಳೆದು ಬಲಿಯುತ್ತಿದೆ. ಬಸವಣ್ಣನವರ ಮಾತು ಅಂದಿಗಿಂತಲೂ ಇಂದಿಗೆ ಹೆಚ್ಚು ಅರ್ಥಪೂರ್ಣವೆನಿಸುತ್ತದೆ. ಅಂದು ಶೈಕ್ಷಣಿಕ ವಿದ್ಯಾರ್ಹತೆ ಇಲ್ಲದಿದ್ದ ಸಂದರ್ಭದಲ್ಲಿ ಪ್ರಚಲಿತವಿದ್ದ ಈ ಮನೋವೃತ್ತಿಯನ್ನು ನಿರ್ಲಕ್ಷಿಸಬಹುದಾದರೂ ಇಂದಿನ ಆಧುನಿಕ ಶಿಕ್ಷಣವ್ಯವಸ್ಥೆಯಲ್ಲಿ ಸಮಾಜಸುಧಾರಕರೆನಿಸಿಕೊಂಡವರು, ಸದಾ ಧರ್ಮಬೋಧೆ ಮಾಡುವವರು, ವಿದ್ಯಾವಂತರೆನಿಸಿಕೊಂಡವರು, ಹಿರಿಯರೆನಿಸಿಕೊಂಡವರು, ವಿವಿಧ ಅಧಿಕಾರದಲ್ಲಿರುವವರು, ರಾಜಕಾರಣಿಗಳು ಮೊದಲಾದವರು ಅನ್ಯರನ್ನು ಹೀಗಳೆಯುವ ಕುನ್ನಿಗಳಾಗುತ್ತಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಪುರಾವೆಯೆನಿಸುತ್ತದೆ. ಈ ನಿಟ್ಟಿನಲ್ಲಿ ಬಸವಣ್ಣನವರ ವಿಡಂಬನೆಯ ಮಾತುಗಳು ಇಂದಿಗೂ ಅನ್ಯರನೆಂಬ ಕುನ್ನಿಗಳಿಗೆ ಚಾಟಿಯೇಟಿನಂತಿವೆ.

***

Leave a Reply

Your email address will not be published. Required fields are marked *