೪. ಏನು ಜೀವನದರ್ಥ? ಏನು ಪ್ರಪಂಚಾರ್ಥ?
ಏನು ಜೀವಪ್ರಪಂಚಗಳ ಸಂಬಂಧ?
ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು?
ಜ್ಞಾನ ಪ್ರಮಾಣವೇಂ? – ಮಂಕುತಿಮ್ಮ
ಅನ್ವಯಕ್ರಮ:
ಜೀವನದ ಅರ್ಥವೇನು? ಪ್ರಪಂಚದ ಅರ್ಥವೇನು? ಜೀವ, ಪ್ರಪಂಚಗಳ ಸಂಬಂಧವೇನು? ಇಲ್ಲಿ ಕಾಣದೆ ಇರ್ಪುದು ಏನಾನುಂ ಉಂಟೆ? ಅದೇನು? ಜ್ಞಾನ ಪ್ರಮಾಣಂ ಏನ್? ಮಂಕುತಿಮ್ಮ.
ಪದ-ಅರ್ಥ:
ಜೀವನ-ಬದುಕು, ಬಾಳುವೆ; ಅರ್ಥ– ದರ್ಶನ, ಅಭಿಪ್ರಾಯ, ಸಂದೇಶ; ಪ್ರಪಂಚ-ವಿಶ್ವ, ಲೈಕಿಕ ಜಗತ್ತು; ಜೀವ-ಪ್ರಾಣ, ಜೀವಾತ್ಮ; ಸಂಬಂಧ-ಹೊಂದಿಕೆ, ಬಾಂಧವ್ಯ, ಸಹವಾಸ; ಕಾಣದಿರ್ಪುದು-ಕಾಣದೇ ಇರುವಂತಹುದು, ದೃಷ್ಟಿಗೆ ಅಗೋಚರವಾಗಿ ಇರುವಂತಹುವುದು; ಏನಾನುಂ-ಏನಾದರೂ; ಉಂಟೇ-ಇದೆಯೇ, ಇರುವುದೆ?; ಜ್ಞಾನ-ತಿಳಿವಳಿಕೆ, ಅರಿವು; ಪ್ರಮಾಣವೇಂ? – ಆಧಾರವಲ್ಲವೇ?
ಈ ಜಗತ್ತು ಮನುಷ್ಯನಿಗೆ ಮಾತ್ರವಲ್ಲದೆ, ಸಕಲ ಜೀವಸಂಕುಲಗಳಿಗೂ ಸಸ್ಯಸಂಕುಲಗಳಿಗೂ ಬದುಕುವುದಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಹುಟ್ಟಿನಿಂದ ಸಾಯುವಲ್ಲಿಯವರೆಗೆ ಮನುಷ್ಯನು ಮಾತ್ರವಲ್ಲದೆ, ಈ ಜಗತ್ತಿನಲ್ಲಿರುವ ಎಲ್ಲಾ ಜೀವಸಂಕುಲಗಳೂ ಸಸ್ಯಸಂಕುಲಗಳೂ ಬದುಕುತ್ತವೆ, ಬದುಕುವುದಕ್ಕಾಗಿ ಹೆಣಗಾಡುತ್ತವೆ, ಹೋರಾಡುತ್ತವೆ. ತಮ್ಮ ಜೀವಿತಾವಧಿ ಮುಗಿದೊಡನೆ ಅಳಿಯುತ್ತವೆ. ಆದರೆ ಅವು ಯಾವುವೂ ಜೀವನದ ಅರ್ಥವೇನು? ಪ್ರಪಂಚದ ಅರ್ಥವೇನು? ಜೀವ ಮತ್ತು ಪ್ರಪಂಚಗಳ ಸಂಬಂಧವೇನು? ಎಂಬುದನ್ನು ತಿಳಿಯಬಯಸುವುದಿಲ್ಲ. ಅದು ಅವುಗಳ ಕಾರ್ಯವ್ಯಾಪ್ತಿಯೊಳಗೆ ಬರುವುದೂ ಇಲ್ಲ. ಅಲ್ಲದೆ, ಮನುಷ್ಯನಾದರೂ ಈ ಪ್ರಪಂಚದಲ್ಲಿ ದೃಷ್ಟಿಗೋಚರವಲ್ಲದುದು ಏನಾದರೂ ಇದೆಯೇ? ಅದು ತನ್ನ ಬದುಕಿಗೆ ಯಾವುದಾದರೂ ರೀತಿಯಿಂದ ಒಳಿತಾಗಿ ಪರಿಣಮಿಸಿದೆಯೆ? ಅಥವಾ ಕೆಡುಕಾಗಿ ಪರಿಣಮಿಸಿದೆಯೆ? ಈ ಮೊದಲಾದ ಸವಾಲುಗಳಿಗೆ ಪರಿಹಾರಗಳನ್ನು ತಿಳಿಯಬಯಸುವುದೂ ಇಲ್ಲ. ಯಾವುದೇ ಜಿಜ್ಞಾಸೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದಕ್ಕೆ ಬಯಸುವುದೂ ಇಲ್ಲ. ಇದು ಸಕಲ ಜೀವರಾಶಿಗಳ ಮಾತ್ರವಲ್ಲದೆ, ಬುದ್ಧಿಜೀವಿಯೆನಿಸಿರುವ ಮನುಷ್ಯನ ಒಂದು ಮೂಲಭೂತ ಸ್ವಭಾವವೂ ಹೌದು, ಹುಟ್ಟುಗುಣವೂ ಕೂಡಾ. ಲೋಕವ್ಯವಹಾರವನ್ನು ಗಮನಿಸಿದಾಗ ಈ ಲೋಕವೇ ಒಂದು ನಿರ್ದಿಷ್ಟವಾದ ಸೂತ್ರದಲ್ಲಿ ಬಂಧಿತವಾಗಿರುವಂತೆ, ಈ ಜಗತ್ತಿನಲ್ಲಿ ಪ್ರತಿಯೊಂದು ಕಾರ್ಯವೂ ನಿಗದಿತ ಸಮಯದಲ್ಲಿ, ನಿಗದಿತ ರೀತಿಯಲ್ಲಿ ಘಟಿಸುತ್ತಿರುವಂತೆ ಮತ್ತು ಈ ವ್ಯವಸ್ಥೆಯಲ್ಲಿ ನಿರ್ದಿಷ್ಟವಾದ ಸೂತ್ರಬದ್ಧತೆಯೊಂದು ಹಾಸುಹೊಕ್ಕಾಗಿದೆ ಎಂಬುದರ ಅರಿವಾಗುತ್ತದೆ. ಇದರ ಒಳಹೊರಗನ್ನು ಅರಿತುಕೊಳ್ಳಲು ಪ್ರಯತ್ನಿಸಬೇಕಾದುದು ಮನುಷ್ಯನ ಆದ್ಯಕರ್ತವ್ಯ. ದೃಷ್ಟಿಗೋಚರವಾಗದ, ಸ್ಪರ್ಶಕ್ಕೆ ಸಿಗದ ಇದರ ಅರಿಯುವಿಕೆಗೆ ಜ್ಞಾನಪ್ರಮಾಣವೇ ಆಧಾರ ಎಂಬುದು ಡಿ.ವಿ.ಜಿ.ಯವರ ಅಭಿಪ್ರಾಯ.
ಈ ಜಗತ್ತಿನಲ್ಲಿ ದಿನನಿತ್ಯ ನಡೆಯುವ ಕಾರ್ಯಕಲಾಪಗಳಲ್ಲಿ ನಿರ್ದಿಷ್ಟತೆ ಹಾಗೂ ಸೂತ್ರಬದ್ಧತೆಗಳು ದೃಷ್ಟಿಗೋಚರ, ಮನೋಗೋಚರವಾಗುತ್ತಲೇ ಇವೆ. ಸೂರ್ಯೋದಯ, ಸೂರ್ಯಾಸ್ತಗಳು; ನೀರಿಯ ಹರಿಯುವಿಕೆ, ಗಾಳಿಯ ಬೀಸುವಿಕೆ; ಸಸ್ಯಸಂಕುಲಗಳ ಬೆಳವಣಿಗೆ, ಕಾಲಮಾನಕ್ಕೆ ಅನುಗುಣವಾಗಿ ಅರಳುವ ಹೂವುಗಳ ವೈವಿಧ್ಯ, ಅವುಗಳು ಪಸರಿಸುವ ಸೌಗಂಧ ಹಾಗೂ ಅವುಗಳ ಚೆಲ್ವಿಕೆಯ ವೈವಿಧ್ಯ; ವೈವಿಧ್ಯಮಯವಾದ ಸಸ್ಯಸಮೃದ್ಧಿಯಿಂದ ಕೂಡಿದ ಪ್ರಾಕೃತಿಕ ಚೆಲುವು; ಮೋಡಗಳ ಚಿತ್ತಾರ, ಮಳೆಯ ಸುರಿತ, ಮಿಂಚು-ಸಿಡಿಲುಗಳ ಆರ್ಭಟ; ವೈವಿಧ್ಯಮಯವಾದ ಮಾರುತಗಳ ಬೀಸುವಿಕೆ; ಋತುಮಾನಕ್ಕೆ ಅನುಗುಣವಾದ ರುಚಿ, ಬಣ್ಣವೈವಿಧ್ಯಗಳಿಂದ ಕೂಡಿದ ಹಣ್ಣುಹಂಪಲುಗಳ ಸಮೃದ್ಧಿ; ಸಸ್ಯಸಂಕುಲಗಳ ಬೆಳವಣಿಗೆಯಲ್ಲಿನ ವೈವಿಧ್ಯ, ಒಂದೇ ಮಣ್ಣು, ನೀರು, ಗಾಳಿಗಳನ್ನು ಸೇವಿಸಿ ಬೆಳೆದರೂ ಬಗೆಬಗೆಯ ಬೆಳವಣಿಗೆ, ರೂಪ, ಆಕಾರಗಳನ್ನು ಹೊಂದಿ ಬಗೆಬಗೆಯ ಹೂವುಹಣ್ಣುಗಳನ್ನು ನೀಡುವ ಮರಗಿಡಬಳ್ಳಿಗಳಲ್ಲಿನ ವೈವಿಧ್ಯಮಯವಾದ ಸೊಬಗು – ಎಲ್ಲವೂ ಮಾನವನಿಗೆ ದೃಷ್ಟಿಗೋಚರವೂ ಹೌದು, ಮನಸ್ಸಿಗೆ ಉಲ್ಲಾಸಕರವೂ ಹೌದು. ಬದುಕಿಗೆ ಉಪಯೋಗಕಾರಿಯೂ ಹೌದು. ಇವೆಲ್ಲವನ್ನು ಅವಲೋಕಿಸಿ ಪರಾಮರ್ಶಿಸಿದಾಗ ಈ ಜಗತ್ತು ಒಂದು ನಿರ್ದಿಷ್ಟವಾದ ಸೂತ್ರದಲ್ಲಿ ಬಂಧಿತವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ ಈ ರೀತಿಯಲ್ಲಿ ಎಲ್ಲವನ್ನೂ ಒಂದು ವ್ಯವಸ್ಥೆಗೊಳಪಡಿಸಿ ಬಂಧಿಸಿದ ಸೂತ್ರ ಹಾಗೂ ಅದರ ಕಾರ್ಯವೈಖರಿ ಅಚ್ಚರಿಯೂ ಅಗೋಚರವೂ ಅಭೇದ್ಯವೂ ಆಗಿದೆ ಎಂಬ ಅರಿವನ್ನು ನಮ್ಮೊಳಗೆ ಮೂಡಿಸುತ್ತದೆ. ಇದನ್ನು ಗಮಿಸುವುದಕ್ಕೆ ನಮ್ಮ ಜ್ಞಾನವೇ ಆಧಾರವಲ್ಲದೆ ಬೇರೇನಲ್ಲ.
ಈ ಜಗತ್ತಿನಲ್ಲಿ ನಿರ್ದಿಷ್ಟ ರೀತಿಯಲ್ಲಿ ವ್ಯವಸ್ಥೆಗೊಂಡಿರುವ ಸೂತ್ರಬದ್ಧವ್ಯವಸ್ಥೆಯಿಂದಲೇ ಈ ಭೂಮಿಯಲ್ಲಿ ಎಲ್ಲಾ ಆಗುಹೋಗುಗಳು ವ್ಯವಸ್ಥಿತವಾಗಿ ನಡೆದುಕೊಂಡುಬರುತ್ತಿವೆ. ಈ ವ್ಯವಸ್ಥೆ ತನ್ನಿಂದ ತಾನೇ ಅಧ್ವಾನಗೊಳ್ಳುವುದಿಲ್ಲ. ಆದರೆ, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಆಗಾಗ ಈ ವ್ಯವಸ್ಥೆಯನ್ನು ಅಧ್ವಾನಗೊಳಿಸುವುದರಿಂದ ಅಸಹಜವಾದ, ಅಪ್ರಾಕೃತಿಕವಾದ, ಜೀವಸಂಕುಲಕ್ಕೆ ಮಾರಕವಾದ ವಿಕೋಪಗಳು ಘಟಿಸುತ್ತವೆ. ಆದರೆ, ಅವುಗಳ ಹಿನ್ನೆಲೆಯನ್ನು ಮನುಷ್ಯ ಅರಿಯುವುದಕ್ಕಾಗಲೀ ತನ್ನಿಂದ ಘಟಿಸುತ್ತಿರುವ ಅಕಾರ್ಯಗಳ ಫಲವನ್ನು ಪರಾಮರ್ಶಿಸುವುದಕ್ಕಾಗಲೀ ಪ್ರಯತ್ನಿಸುತ್ತಿಲ್ಲ. ಈ ಬದುಕು ಅಪ್ರಯೋಜಕವಲ್ಲ, ಅದರ ಹಿಂದೆ ಹಲವಾರು ಆಶೋತ್ತರಗಳಿವೆ, ಗುರಿಗಳು ಕೂಡಾ. ಈ ಪ್ರಪಂಚವೂ ಇಲ್ಲಿ ಬದುಕುತ್ತಿರುವ ಜೀವಸಂಕುಲಕ್ಕೆ ಪೂರಕವಾಗಿಯೇ ರೂಪುಗೊಂಡಿದೆ. ಮಾತ್ರವಲ್ಲ, ಆ ಪೂರಕತೆ ನಿರಂತರವಾಗಿ ಮುಂದುವರಿದುಕೊಂಡು ಬರುತ್ತಿದೆ. ಇದರಿಂದಾಗಿಯೇ ಜೀವ ಹಾಗೂ ಪ್ರಪಂಚಗಳ ನಡುವೆ ಒಂದು ಅವಿನಾಭಾವ ಸಂಬಂಧ ಬೆಸೆದುಕೊಂಡಿದೆ. ಈ ಪ್ರಪಂಚವನ್ನು, ಇದರ ಆಗುಹೋಗುಗಳನ್ನು, ಇದರ ವ್ಯವಸ್ಥೆಯನ್ನು ಮೀರಿಹೋಗುವುದಕ್ಕೆ ಅಸಾಧ್ಯವೆಂಬುದನ್ನು ಅರಿತುಕೊಳ್ಳಲು ಪ್ರಯತ್ನಿಸಲೇಬೇಕು. ಈ ಸಂಬಂಧಗಳು ನಮ್ಮ ದೃಷ್ಟಿಗೋಚರವಲ್ಲದಿದ್ದರೂ ಜ್ಞಾನಗೋಚರವಾಗುತ್ತವೆ. ಕೆಲವು ದೃಷ್ಟಿಗೋಚರವಾಗಿವೆ, ಇನ್ನು ಕೆಲವು ಇಂದ್ರಿಯಗೋಚರವಾಗಿವೆ, ಮತ್ತೆ ಕೆಲವು ಅನುಭವಗೋಚರವಾಗಿವೆ. ಇವೆಲ್ಲವುಗಳನ್ನು ಮೀರಿ ಗೋಚರವಾಗದ ವಿಚಾರಗಳೂ ಹಲವಾರಿವೆ. ಇವುಗಳನ್ನು ಅರಿತುಕೊಳ್ಳುವುದಕ್ಕೆ ಮನುಷ್ಯ ಪ್ರಯತ್ನಿಸಿ ಸಾಧ್ಯವಾದಷ್ಟು ಪರಿಪೂರ್ಣತೆಯನ್ನು ಸಾಧಿಸುವುದಕ್ಕೆ ಪ್ರಯತ್ನಿಸಬೇಕು. ಕೇವಲ ಹುಟ್ಟಿ, ಬೆಳೆದು, ಮುಂದೊಂದು ದಿನ ಸಾಯುವುದರಲ್ಲಿ ಯಾವ ಪುರುಷಾರ್ಥವೂ ಇರುವುದಿಲ್ಲ.
ಈ ಪ್ರಪಂಚದಲ್ಲಿ ಮನುಷ್ಯನಿಗೆ ದೃಷ್ಟಿಗೋಚರವಾಗದೇ ಇರುವಂತಹವು ಸಾಕಷ್ಟಿವೆ. ನಮ್ಮ ದೃಷ್ಟಿಗೆ ಗೋಚರವಾಗಿಲ್ಲ ಎಂದುಕೊಂಡು ಅವುಗಳನ್ನು ಅಲ್ಲಗಳೆಯುವಂತಿಲ್ಲ. ಈ ಪ್ರಕೃತಿಯಲ್ಲಿನ, ಈ ಪ್ರಪಂಚದಲ್ಲಿನ ಎಲ್ಲಾ ಆಗುಹೋಗುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಮ್ಮ ಗ್ರಹಿಕೆಯನ್ನು ಮೀರಿದ ಎಷ್ಟೋ ಘಟನೆಗಳು ಕಾಲಕಾಲಕ್ಕೆ ನಡೆದುಹೋಗುತ್ತಿರುವುದು ಅರಿವಾಗುತ್ತದೆ. ಅವುಗಳನ್ನು ದೃಷ್ಟಿಯಿಂದಾಗಲೀ ಸ್ಪರ್ಶದಿಂದಾಗಲೀ ಇಂದ್ರಿಯಗಳಿಂದಾಗಲೀ ಕಂಡುಕೊಳ್ಳುವುದು ಕಷ್ಟಸಾಧ್ಯ. ನಮ್ಮ ಮುಂದಿರುವ ಜಿಜ್ಞಾಸೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸಿದಂತೆ ಅನುಭವಗಳು ದಟ್ಟವಾಗುತ್ತವೆ. ಈ ಅನುಭವಗಳ ಹಿನ್ನೆಲೆಯಲ್ಲಿ ಜೀವನದ ಅರ್ಥ, ಪ್ರಪಂಚಾರ್ಥ, ಜೀವಪ್ರಪಂಚಗಳ ಸಂಬಂಧಗಳನ್ನು ಅರಿತುಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಇವೆಲ್ಲವುಗಳ ಅರಿವಿಕೆಗೆ ಜ್ಞಾನವೇ ಆಧಾರವೆಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಲೇಬೇಕು. ಇದನ್ನು ಅರ್ಥಮಾಡಿಕೊಳ್ಳುವುದರಿಂದ ಮನುಷ್ಯ ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಕ್ರಮಿಸಲು ಪ್ರಯತ್ನಿಸಬಹುದಾದರೆ ಈ ಪ್ರಯತ್ನದಲ್ಲಿಯೇ ಮನುಷ್ಯಬದುಕಿನ ಸಾಧನೆಯಿದೆ, ಸಾರ್ಥಕತೆಯೂ ಕೂಡಾ.
ಡಾ. ವಸಂತ ಕುಮಾರ್, ಉಡುಪಿ
*****