ಅರಿಯದ ಗುರು, ಅರಿಯದ ಶಿಷ್ಯಂಗೆ
ಅಂಧಕನ ಕೈಯ್ಯನಂಧಕ ಹಿಡಿದಡೆ
ಮುಂದನಾರು ಕಾಬರು ಹೇಳೆಲೆ ಮರುಳೆ
ತೊರೆಯಲದ್ದವನನೀಸಲರಿಯದವ
ತೆಗೆವ ತೆರನಂತೆಂದನಂಬಿಗ ಚೌಡಯ್ಯ
ವಚನದ ಅನ್ವಯಕ್ರಮ:
ಅರಿಯದ ಶಿಷ್ಯಂಗೆ ಅರಿಯದ ಗುರು, ಅಂಧಕನ ಕೈಯನ್ ಅಂಧಕ ಹಿಡಿದಡೆ, ಮುಂದನ್ ಆರು ಕಾಬರು ಹೇಳೆಲೆ ಮರುಳೆ? ತೊರೆಯಲಿ ಅದ್ದವನನ್ ಈಸಲ್ ಅರಿಯದವ ತೆಗೆವ ತೆರನಂತೆ ಎಂದನ್ ಅಂಬಿಗ ಚೌಡಯ್ಯ.
ಪದ-ಅರ್ಥ:
ಅರಿಯದವ-ಅಜ್ಞಾನಿ, ತಿಳಿಯದವನು, ಲೋಕಜ್ಞಾನವಿಲ್ಲದವನು; ಅಂಧಕ-ಕುರುಡ; ಮುಂದನ್-ಮುಂದಿನದನ್ನು, ಮುಂದಿನ ದೃಶ್ಯವನ್ನು; ಕಾಬರು-ಕಾಣುವವರು, ಗ್ರಹಿಸುವವರು; ತೊರೆ-ನದಿ, ಹೊಳೆ; ಈಸಲರಿಯದವ-ಈಜುಬಾರದವನು; ತೆಗೆವ ತೆರನಂತೆ-ರಕ್ಷಿಸುವ ರೀತಿಯಂತೆ.
ಅಂಬಿಗರ ಚೌಡಯ್ಯ ಈ ವಚನದಲ್ಲಿ, ಏನೂ ಅರಿಯದ ಗುರುವೊಬ್ಬನು ಏನನ್ನೂ ಅರಿಯದ ಶಿಷ್ಯನೊಬ್ಬನಿಗೆ ಬೋಧಿಸುವುದರಿಂದ ಉಂಟಾಗಬಹುದಾದ ಅನರ್ಥವನ್ನು ಎರಡು ದೃಷ್ಟಾಂತಗಳ ಮೂಲಕ ವಿವರಿಸಿದ್ದಾನೆ.
ಮೊದಲನೆಯದು, ಏನೂ ಅರಿಯದ ಗುರುವಿನೊಂದಿಗೆ ಅಥವಾ ಲೋಕಜ್ಞಾನವೇ ಇಲ್ಲದ ಗುರುವಿನೊಂದಿಗೆ ಏನನ್ನೂ ಅರಿಯದ ಶಿಷ್ಯನ ಸಾಹಚರ್ಯ ಅಥವಾ ಶಿಷ್ಯತ್ವವು ಕುರುಡನೊಬ್ಬನು ಇನ್ನೊಬ್ಬ ಕುರುಡನ ಕೈಯನ್ನು ಹಿಡಿದು ದಾರಿನಡೆಸುವ ಸ್ಥಿತಿಗತಿಗೆ ಸಮಾನವಾಗಿರುವುದು. ಎರಡನೆಯದು, ಏನೂ ಅರಿಯದ ಗುರುವಿನ ಏನನ್ನೂ ಅರಿಯದ ಶಿಷ್ಯನೊಂದಿಗಿನ ಸಾಹಚರ್ಯವು ಅಥವಾ ಶಿಷ್ಯತ್ವವು ಈಜುಬಾರದವನು ನೀರಲ್ಲಿ ಮುಳುಗಿದವನನ್ನು ರಕ್ಷಿಸಲು ಮಾಡಿದ ಪ್ರಯತ್ನಕ್ಕೆ ಸಮಾನವಾಗಿರುವುದು. ಎರಡೂ ವ್ಯರ್ಥವೆಂಬುದನ್ನು ಅಂಬಿಗರ ಚೌಡಯ್ಯ ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾನೆ.
ಲೋಕವಿಚಾರಗಳನ್ನು ಅರಿತುಕೊಂಡು ಏನನ್ನೂ ಅರಿಯದವನಿಗೆ ಬೋಧಿಸುವವನು, ಬೋಧಿಸಿ ಬುದ್ಧಿವಂತನನ್ನಾಗಿಸುವವನು, ಮಾರ್ಗದರ್ಶನ ಮಾಡುವವನು, ಸಮಾಜಮುಖಿಯಾಗಿ ರೂಪಿಸುವವನು ’ಗುರು’ ಎನಿಸಿಕೊಳ್ಳುತ್ತಾನೆ. ಹಾಗೆಯೇ ಏನನ್ನೂ ಅರಿಯದವನು ಸಾಕಷ್ಟು ಅರಿತವನಿಂದ ಎಷ್ಟು ಸಾಧ್ಯವೋ ಅಷ್ಟನ್ನು ಅರಿತುಕೊಳ್ಳುವುದಕ್ಕೆ ಅಪೇಕ್ಷಿಸುವವನು, ತನ್ನನ್ನು ತಾನು ತಿದ್ದಿಕೊಳ್ಳುತ್ತ ಪರಿಪೂರ್ಣನೆನಿಸಿಕೊಳ್ಳುವುದಕ್ಕೆ ಪ್ರಯತ್ನಿಸುವವನು ’ಶಿಷ್ಯ’ ಎನಿಸಿಕೊಳ್ಳುತ್ತಾನೆ. ಶಿಷ್ಯನಾಗಿ ಬರುವವನು ಅರಿತಿರಬೇಕಾದುದಿಲ್ಲ. ಆದರೆ ಅರಿಯುವ ಹಂಬಲ, ದೃಢವಾದ ಮನಸ್ಸು, ಪ್ರಾಮಾಣಿಕತೆ ಹಾಗೂ ನಿಷ್ಠೆಗಳು ಅಗತ್ಯವಾಗಿ ಇರಬೇಕು. ಆದರೆ ಗುರುವಾಗಬಯಸುವವನು ಹಾಗೂ ಗುರುವಾದವನು ಮೊದಲು ಎಲ್ಲವನ್ನೂ ಅರಿತು ಲೋಕಜ್ಞಾನಿಯಾಗಿರಬೇಕು. ಹೀಗೆ ಎಲ್ಲವನ್ನೂ ಅರಿತಿದ್ದರೆ, ಅರಿಯಲು ಮತ್ತೆಮತ್ತೆ ಪ್ರಯತ್ನಿಸುತ್ತಿದ್ದರೆ, ಅರಿತುದನ್ನು ಶಿಷ್ಯನಿಗೆ ಮಾತ್ರ ಆತ ’ಗುರು’ ಎನಿಸಿಕೊಳ್ಳುತ್ತಾನೆ, ಹಾಗಿದ್ದರೆ ಮಾತ್ರ ಆ ಸ್ಥಾನಕ್ಕೊಂದು ಮಹತ್ವವೂ ಗೌರವವೂ ಸಲ್ಲುತ್ತದೆ. ಹಾಗಿಲ್ಲದಿದ್ದರೆ ಆತ ಅಯೋಗ್ಯ, ಗುರುವಿನ ಸ್ಥಾನಕ್ಕೆ ಅನರ್ಹ, ಕುರುಡನಿಗೆ ಸಮಾನ. ಅರಿತ ಗುರುವಿನ ಸಂಪರ್ಕಕ್ಕೆ ಅರಿಯದ ಶಿಷ್ಯ ಬಂದರೆ ಅವನು ಅರಿತು ಬಾಳುವಂತಾಗುತ್ತಾನೆ.
ಅರಿಯದ ಗುರುವಿನ ಸಂಪರ್ಕಕ್ಕೆ ಅರಿಯದ ಶಿಷ್ಯ ಬಂದರೆ ಅವರಿಬ್ಬರ ಸ್ಥಿತಿ ಒಬ್ಬ ಕುರುಡ ಇನ್ನೊಬ್ಬ ಕುರುಡನ ಕೈಯನ್ನು ಹಿಡಿದು ದಾರಿನಡೆದಂತಾಗುತ್ತದೆ. ಇಬ್ಬರೂ ಕುರುಡರಾಗಿರುವುದರಿಂದ ಇಬ್ಬರಿಗೂ ದೃಷ್ಟಿಗೆ ಏನೂ ಕಾಣಿಸದು, ಬುದ್ಧಿಗೆ ಏನೂ ಹೊಳೆಯದು. ಅರಿವಿಗೆ ಏನೂ ಬಾರದು. ಹೀಗಿರುವಾಗ ದಾರಿನಡೆಯುವುದಾದರೂ ಹೇಗೆ? ಇಬ್ಬರೂ ಪದೇ ಪದೇ ಎಡವಿಬೀಳುವ ಪರಿಸ್ಥಿತಿ ಒದಗುತ್ತದೆ. ಹಾಗೆಯೇ ನೀರಲ್ಲಿ ಮುಳುಗಿದವನನ್ನು ಅಥವಾ ಮುಳುಗುತ್ತಿರುವವನನ್ನು ರಕ್ಷಿಸಬೇಕಾದರೆ ಆತನಿಗೆ ನೀರಿನ ಅಗಾಧತೆ, ಸೆಳೆತ, ಆಳ-ಹರಹುಗಳ ಕೂಲಂಕಷ ಪರಿಚಯವಿರಬೇಕಾಗುತ್ತದೆ. ಈಜು ಕರಗತವಾಗಿರಬೇಕಾಗುತ್ತದೆ. ಇಂತಹವನು ನೀರಲ್ಲಿ ಮುಳುಗುತ್ತಿರುವವನನ್ನು ಲೀಲಾಜಾಲವಾಗಿ ರಕ್ಷಿಸಬಲ್ಲ, ಜೀವ ಉಳಿಸಬಲ್ಲ. ಈಜುವುದನ್ನೇ ಅರಿಯದವನು ನೀರಲ್ಲಿ ಮುಳುಗುತ್ತಿರುವವನನ್ನು ಕಾಪಾಡುತ್ತೇನೆ ಎಂದು ನೀರಿಗೆ ಧುಮುಕಿದರೆ ಇಬ್ಬರೂ ಇಬ್ಬರೂ ಅಳಿಯದೆ ಉಳಿಯಲು ಹೇಗೆಸಾಧ್ಯ? ಅರಿಯದ ಗುರುವಿನ ದುಸ್ಥಿತಿ ಇದಕ್ಕಿಂತ ಭಿನ್ನವಲ್ಲ. ಗುರುವಿಗೆ ತಿಳಿಸಲಾಗದು, ಶಿಷ್ಯನಿಗೆ ತಿಳಿಯಲಾಗದು.
ಗುರುವಾಗಬೇಕೆಂಬ ಹಂಬಲವುಳ್ಳವನು ಮೊದಲು ತನ್ನ ಇತಿಮಿತಿಗಳನ್ನು ಅರಿತುಕೊಂಡು ತಾನು ಸಾಧ್ಯವಾದಷ್ಟನ್ನೂ ಅರಿತುಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಅರಿತ ಮೇಲೆಯೇ ಬೋಧಿಸಬೇಕು. ಹೀಗೆ ಬೋಧಿಸುತ್ತಲೇ ಹೆಜ್ಜೆಹೆಜ್ಜೆಗೂ ಇನ್ನಷ್ಟು ತಿಳಿವಳಿಕೆಯನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ, “ವಾದೇ ವಾದೇ ಜಾಯತೇ ತತ್ತ್ವಬೋಧಃ” ಎಂಬಂತೆ. ಶಿಷ್ಯನಿಗೆ ತಿಳಿಸಿಹೇಳುತ್ತಿದ್ದಂತೆಯೇ ಹೊಸಹೊಸ ವಿಚಾರಗಳು, ತತ್ತ್ವವಿಚಾರಗಳು, ಲೋಕವ್ಯವಹಾರಗಳು ಗುರುವಿನ ಅರಿವಿಗೆ ಬರುತ್ತವೆ. ಹಾಗೆ ಬಂದುದನ್ನು ಮರಳಿ ಶಿಷ್ಯನಿಗೆ ತಿಳಿಸಿಹೇಳುವುದಕ್ಕೆ ಸಾಧ್ಯವಾಗುತ್ತದೆ. ಈ ಪ್ರಕ್ರಿಯೆಯಿಂದ ಗುರುವೂ ಬೆಳೆಯುತ್ತಾನೆ, ಶಿಷ್ಯನೂ ಕೂಡಾ. ಬಹುಶಃ ಅಂಬಿಗರ ಚೌಡಯ್ಯನ ಕಾಲದಲ್ಲಿ ಏನೂ ಅರಿಯದವರು ಗುರುಗಳೆಂದು ಹೇಳಿಕೊಂಡು ಬೋಧನೆಗೆ ತೊಡಗಿಕೊಳ್ಳುತ್ತಿದ್ದರೆಂದು ತೋರುತ್ತದೆ. ಇದರಿಂದ ಜನರಲ್ಲಿ ಬೌದ್ಧಿಕ ದಾರಿದ್ರ್ಯ ಉಂಟಾಗುತ್ತಿರುವುದನ್ನು, ಸಮಾಜವ್ಯವಸ್ಥೆ ಕುಸಿಯುತ್ತಿದ್ದುದನ್ನು ಕಣ್ಣಾರೆ ಕಂಡು ಅದನ್ನು ಈ ವಚನದಲ್ಲಿ ಎರಡು ದೃಷ್ಟಾಂತಗಳ ಮೂಲಕ ವಿಡಂಬಿಸಿದ್ದಾನೆ. ಆತ ಈ ಮಾತುಗಳನ್ನು ಹನ್ನೆರಡನೆಯ ಶತಮಾನದ ಸಾಮಾಜಿಕ ಆಂದೋಲನದ ಹಿನ್ನೆಲೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಿದ್ದರೂ ಅವು ಸಾರ್ವತ್ರಿಕವಾಗಿ, ಸಾರ್ವಕಾಲಿಕವಾಗಿ ಅನ್ವಯವಾಗುತ್ತವೆ ಎಂಬುದನ್ನು ಗಮನಿಸಬೇಕು. ಜೊತೆಗೆ ಆತನಲ್ಲಿದ್ದ ಸಾಮಾಜಿಕ ಕಾಳಜಿಯನ್ನೂ ಗುರುತಿಸಿಕೊಳ್ಳಬೇಕು.
ಇಂದಿನ ಸಾಮಾಜಿಕ, ರಾಜಕೀಯ ಸಂದರ್ಭಗಳಲ್ಲಿಯೂ ಇದೇ ಸ್ಥಿತಿಗತಿಗಳು ಮುಂದುವರಿದುಕೊಂಡು ಬಂದಿರುವುದು, ಪ್ರಸ್ತುತ ಮುಂದುವರಿಯುತ್ತ ತಾಂಡವವಾಡುತ್ತಿರುವುದು ಆಶ್ಚರ್ಯಕರವಾದರೂ ಸತ್ಯ. ಆಧುನಿಕಯುಗದಲ್ಲಿ ಲೋಕಜ್ಞಾನವುಳ್ಳ, ಅರಿತಿರುವ ಗುರುಗಳೂ ಇದ್ದಾರೆ. ಅವರಿಗೆ ಪ್ರಣಾಮಗಳು. ಅಂತಹವರ ಅಗತ್ಯ ಇಂದಿನ ಸಮಾಜಕ್ಕೆ, ದೇಶಕ್ಕೆ ಅತ್ಯಂತ ಅಗತ್ಯವೂ ಅನಿವಾರ್ಯವೂ ಆಗಿದೆ. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ಲಂಚ, ವಶೀಲಿ, ಪಿತೂರಿ, ಸ್ವಜನಪಕ್ಷಪಾತ, ಅನೈತಿಕತೆ ಮೊದಲಾದ ಅನಿಷ್ಟಗಳು ತಾಂಡವವಾಡುತ್ತಿರುವ ಇಂದಿನ ಸಂದರ್ಭಗಳಲ್ಲಿ ಏನನ್ನೂ ಅರಿಯದವರು, ಮೂಲಭೂತ ಅರ್ಹತೆ ಇಲ್ಲದವರು, ಅನೈತಿಕತೆಯನ್ನು ಬೆಳೆಸಿಕೊಂಡವರು, ಲೋಕದ ಆಗುಹೋಗುಗಳನ್ನು ತಿಳಿಯದವರು ’ಗುರು’ಸ್ಥಾನವನ್ನು ಆಕ್ರಮಿಸಿ ಕುಳಿತ್ತಿದ್ದಾರೆ. ಮಹಾಮೇಧಾವಿಗಳಂತೆ ಬೋಧಿಸುತ್ತ, ಮಾರ್ಗದರ್ಶನಮಾಡುತ್ತ ಮೆರೆಯುತ್ತಿದ್ದಾರೆ. ಅನೈತಿಕತೆಯನ್ನೇ ಮೈಗೂಡಿಸಿಕೊಳ್ಳುತ್ತ ಅದನ್ನೇ ಬೆಳೆಸಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಸಮಾಜದಲ್ಲಿ ಅನೈತಿಕತೆ, ಸೋಗಲಾಡಿತನ, ಡಾಂಬಿಕತೆ, ದುರಹಂಕಾರಗಳು ತಾಂಡವವಾಡುತ್ತಿವೆ. ಅರಿತವರನ್ನು, ನೈತಿಕತೆಯುಳ್ಳವರನ್ನು, ಲೋಕಜ್ಞಾನಿಗಳನ್ನು, ಗುರುಸ್ಥಾನದಲ್ಲಿರಿಸಿಕೊಂಡು ಮಾರ್ಗದರ್ಶನ ಮಾಡಬೇಕಾದವರನ್ನು ಅವಕಾಶ ವಂಚಿತರನ್ನಾಗಿ ಮೂಲೆಗುಂಪುಮಾಡುವ ಹುನ್ನಾರ ನಡೆಸುತ್ತಲೇ ಇದ್ದಾರೆ. ಪರಿಸ್ಥಿತಿ ಹೀಗಿರುವಾಗ ವ್ಯಕ್ತಿಗತ ಸುಧಾರಣೆಯನ್ನೋ ಆ ಮೂಲಕ ಸಮಾಜದ, ದೇಶದ ಪುನರುತ್ಥಾನವನ್ನೋ ಭದ್ರತೆಯನ್ನೋ ಹೇಗೆ ನಿರೀಕ್ಷಿಸಲು ಸಾಧ್ಯ? ಬಲ್ಲವರ ಮಾತೊಂದು ನೆನಪಾಗುತ್ತಿದೆ, “ಅಂದು: ಹಿಂದೊಬ್ಬ ಗುರುವಿದ್ದ, ಮುಂದೊಂದು ಗುರಿಯಿತ್ತು. ನುಗ್ಗಿದುದು ಧೀರದಂಡು. ಇಂದು: ಹಿಂದೆ ಗುರುವಿಲ್ಲ, ಮುಂದೆ ಗುರಿಯಿಲ್ಲ, ಮುಗ್ಗಿದುದು ಹೇಡಿಹಿಂಡು.” ಅಂಬಿಗರ ಚೌಡಯ್ಯನ ಮಾತುಗಳು ಇದನ್ನೇ ಸಾರುತ್ತಿದೆಯಲ್ಲ! ಆತನದು ಕೇವಲ ವಚನವಲ್ಲ, ಅದೊಂದು ಭವಿಷ್ಯವಾಣಿ.
ಡಾ. ವಸಂತ್ ಕುಮಾರ್, ಉಡುಪಿ
*****
ಎಲ್ಲೆಡೆ ವ್ಯಾಪಾರೀಕರಣಗೊಳ್ಳುತ್ತಿರುವ ಶಿಕ್ಷಣ ವ್ಯವಸ್ಥೆಯನದನ್ನೇ ಕುರಿತು ಹೇಳಿದಂತಿದೆ ವಚನ.ಸುಂದರ ವಿಶ್ಲೇಷಣೆ ಸರ್.ಧನ್ಯವಾದಗಳು