ಸಾಹಿತ್ಯಾನುಸಂಧಾನ

heading1

ಕರುಣಾಳು ಬಾ ಬೆಳಕೆ – ಬಿ.ಎಂ.ಶ್ರೀ.

            ಆಂಗ್ಲಕವಿ ಜಾನ್ ಹೆನ್ರಿ ನ್ಯೂಮನ್ (೧೮೦೧-೧೮೯೦)ನ “ಲೀಡ್ ಕೈಂಡ್ಲಿ ಲೈಟ್” ಎಂಬ ಇಂಗ್ಲಿಷ್ ಕವಿತೆಯನ್ನು ’ಕನ್ನಡದ ಕಣ್ವ” ಎಂದು ಪ್ರಸಿದ್ಧರಾಗಿರುವ ಬಿ.ಎಂ.ಶ್ರೀ. (ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ)ಯವರು “ಪ್ರಾರ್ಥನೆ” ಎಂಬ ಹೆಸರಿನಲ್ಲಿ  ಕನ್ನಡಕ್ಕೆ ಅನುವಾದಿಸಿದ್ದಾರೆ. ಇದನ್ನು ಅನುವಾದ ಎನ್ನುವುದಕ್ಕಿಂತಲೂ ರೂಪಾಂತರ ಎನ್ನಬಹುದಾದರೂ ಅದಕ್ಕಿಂತಲೂ ಹೆಚ್ಚಾಗಿ ಇದೊಂದು ಕನ್ನಡದ ’ಸ್ವತಂತ್ರ ರಚನೆ’ ಎಂದೂ ಕರೆಯಬಹುದು. ೧೯೧೮ರಲ್ಲಿ ಪ್ರಕಟವಾದ ಬಿ.ಎಂ.ಶ್ರೀ.ಯವರ ’ಇಂಗ್ಲಿಷ್ ಗೀತೆಗಳು’ ಎಂಬ ಅನುವಾದಿತ ಸಂಕಲನದಲ್ಲಿ ಇದು ಮೊದಲ ಬಾರಿಗೆ ಪ್ರಕಟವಾಯಿತು. ಪ್ರಕಟವಾಗಿ ನೂರು ವರ್ಷಗಳು ಕಳೆದರೂ ಇದು ತನ್ನ ಭಾಷೆ, ಭಾವ, ಲಯ, ವಸ್ತು, ದಾರ್ಶನಿಕತೆ  ಹಾಗೂ ಜೀವನ ವಿಮರ್ಶೆಗಳಿಂದಾಗಿ ಸಾರ್ವಕಾಲಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ಇಂದಿಗೂ ನಿತ್ಯನೂತನವಾಗಿಯೇ ಸಹೃದಯರ ಮನಸ್ಸನ್ನು ಸೆಳೆಯುತ್ತಿದೆ, ರೋಮಾಂಚನಗೊಳಿಸುತ್ತಿದೆ. ಮಾತ್ರವಲ್ಲದೆ, ಹೊಸತಲೆಮಾರಿನ ಕವಿಗಳಿಗೆ ನಿರಂತರ ಸ್ಫೂರ್ತಿಯನ್ನು ನೀಡುತ್ತಲೇ ಇದ್ದು, ಕನ್ನಡದ ಅತ್ಯುತ್ತಮ ಭಾವಗೀತೆಯಲ್ಲಿ ಒಂದೆನಿಸಿಕೊಂಡಿದೆ.

            ಮನುಷ್ಯ ತನ್ನ ಯೌವನದಲ್ಲಿ ಪ್ರಾಯಸಹಜವಾದ ದುರಹಂಕಾರದಿಂದ, ಹಣ, ವಿದ್ಯೆ, ಆಸ್ತಿ, ಅಂತಸ್ತು ಮೊದಲಾದ ಮದಗಳಿಂದ   ಮೇಲಿಂದ ಮೇಲೆ ಅಪರಾಧಗಳನ್ನು ಮಾಡುತ್ತ, ಕೊನೆಗೆ ಎಲ್ಲವನ್ನೂ ಎಲ್ಲರನ್ನೂ ಕಳೆದುಕೊಂಡು ಅಸಹಾಯನಾಗಿ, ತನ್ನ ಕಷ್ಟಕಾಲದಲ್ಲಿ ತನ್ನ ಸ್ವಯಂಕೃತಾಪರಾಧಗಳನ್ನು ಹೇಳಿಕೊಳ್ಳುತ್ತ, ತನ್ನ ವರ್ತನೆ, ದುರಹಂಕಾರಗಳಿಗೆ ಪಶ್ಚಾತ್ತಾಪ ಪಡುತ್ತ, ಭಗವಂತನಿಗೆ ಶರಣಾಗಿ ಆತನಲ್ಲಿ ದಾರಿನಡೆಸೆಂದು ಬೇಡಿಕೊಳ್ಳುವ ಶರಣಾಗತಿ ಭಾವವನ್ನು ಈ ಕವಿತೆಯಲ್ಲಿ ಕಾಣಬಹುದು. ಕವಿ ಇಲ್ಲಿ ಭಗವಂತನ ಹೆಸರನ್ನು ಉಲ್ಲೇಖಿಸದೆ, ಬೆಳಕನ್ನು ಆತನ ಪ್ರತೀಕವೆಂದು ಪರಿಭಾವಿಸಿರುವುದು ಕಂಡುಬರುತ್ತದೆ. ಈ ಕವಿತೆಯಲ್ಲಿ ಉಲ್ಲೇಖಗೊಂಡಿರುವ ’ಕರುಣಾಳು ಬೆಳಕು’ ಎಂಬುದು ಒಂದೆಡೆ ಭಗವಂತನಿಗೆ, ಇನ್ನೊಂದೆಡೆ  ಹೆತ್ತವರಿಗೆ ಅಥವಾ ಪೋಷಕರಿಗೆ, ಮತ್ತೊಂದೆಡೆ ಗುರುಗಳಿಗೆ – ಹೀಗೆ ಮೂರು ರೀತಿಗಳಲ್ಲಿ ಅನ್ವಯಿಸಿ ಅರ್ಥೈಸುವುದಕ್ಕೂ ಅವಕಾಶಗಳನ್ನು ಕಲ್ಪಿಸುತ್ತದೆ. ಇದು ಹಲವು ರೀತಿಗಳಲ್ಲಿ ಅರ್ಥಪ್ರತೀತಿಯನ್ನು ಊಂಟುಮಾಡುವುದರಿಂದ ಕಾವ್ಯಮೀಮಾಂಸಕ ಭಟ್ಟತೌತನ “ಪ್ರಜ್ಞಾ ನವನವೋಲ್ಲೇಖಶಾಲಿನೀ ಪ್ರತಿಭಾ ಮತಾ ತದನುಪ್ರಾಣನಾಜೀವದ್ವರ್ಣನಾನಿಪುಣಃ ಕವಿಃ ತಸ್ಯ ಕರ್ಮಂ ಸ್ಮೃತಂ ಕಾವ್ಯಮ್” ಎಂಬ ಮಾತಿಗೆ ಈ ಭಾವಗೀತೆ, ಅದನ್ನು ರಚಿಸಿದ ಬಿ.ಎಂ.ಶ್ರೀ. ಹಾಗೂ ಅವರ ಪ್ರತಿಭೆ  ಒಂದು ಒಳ್ಳೆಯ ನಿದರ್ಶನವೂ ಆಗುತ್ತದೆ.

            ಪ್ರಸ್ತುತ, ಕರುಣಾಳು ಬೆಳಕನ್ನು ಭಗವಂತನಿಗೆ ಅನ್ವಯಿಸಿ ಈ ಭಾವಗೀತೆಯನ್ನು ವ್ಯಾಖ್ಯಾನಿಸಲಾಗಿದೆ.

ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ

ಕೈಹಿಡಿದು ನಡೆಸೆನ್ನನು

ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ,

ಕೈಹಿಡಿದು ನಡೆಸೆನ್ನನು

ಹೇಳಿ ನನ್ನಡಿಯಿಡಿಸು; ಬಲುದೂರ ನೋಟವನು

ಕೇಳೆನೊಡನೆಯೆ ಸಾಕು ನನಗೊಂದು ಹೆಜ್ಜೆ.

(ಮುಸುಕಿದ-ಆವರಿಸಿದ;  ಮಬ್ಬು-ನಸುಗತ್ತಲೆ;  ನಡೆಸು-ಸಲಹು, ಕಾಪಾಡು;  ಇರುಳು-ರಾತ್ರಿ, ಕಷ್ಟಕಾರ್ಪಣ್ಯಗಳು;  ಕನಿಕರಿಸಿ-ಕನಿಕರವನ್ನು ತೋರಿ, ದಯೆತೋರಿ; ನನ್ನಡಿಯಿಡಿಸು-ಪಾದಗಳ ಮೂಲಕ ನಡೆಯುವಂತೆ ಮಾಡು, ಶಕ್ತಿಶಾಲಿಯನ್ನಾಗಿ ಮಾಡು; ಬಲುದೂರ ನೋಟ-ದೂರದೃಷ್ಟಿ, ಭವಿಷ್ಯದ ದರ್ಶನ)

            ”ನನ್ನ ತಿಳಿಗೇಡಿತನದಿಂದಾಗಿ  ಬದುಕಿನಲ್ಲಿ ಅಂಧಕಾರವು ಆವರಿಸಿಕೊಂಡಿದೆ. ಹೆಜ್ಜೆ ಇಡುವುದಕ್ಕೆ ದಾರಿ ಕಾಣುತ್ತಿಲ್ಲ. ಕೈಕಾಲುಗಳು ನಡುಗುತ್ತಿವೆ, ಮೈಯೆಲ್ಲ ಬೆವರುತ್ತಿದೆ. ಮನಸ್ಸು ಗಲಿಬಿಲಿಗೊಂಡು ಮುಂದೇನು ಎಂಬುದೇ ತೋಚದಾಗಿದೆ. ಬದುಕಿನಲ್ಲಿ ಎಲ್ಲ ಭರವಸೆಗಳನ್ನು ಕಳೆದುಕೊಂಡಿದ್ದೇನೆ.  ಭಗವಂತನೇ, ನೀನು ಕರುಣಾಳು. ಪತಿತೋದ್ಧಾರಕ. ನನ್ನ ಬದುಕಿಗೆ ಆವರಿಸಿಕೊಂಡಿರುವ  ಈ ಮಬ್ಬುಗತ್ತಲೆಯಲ್ಲಿ ನನ್ನ ಕೈಹಿಡಿದು ನೀನೇ ದಾರಿನಡೆಸಬೇಕಾಗಿದೆ. ಭಯಹುಟ್ಟಿಸುವಂತಿರುವ ಈ ಇರುಳೆಲ್ಲ ಕತ್ತಲೆಯ ಗವಿಯಾಗಿ ಮಾರ್ಪಟ್ಟಿದೆ. ದೈಹಿಕ ಅಶಕ್ತತೆ, ಮಾನಸಿಕ ಅಶಕ್ತತೆಯ ಜೊತೆಗೆ ಕತ್ತಲೆಯ ಭೀಕರತೆ ಮೈನಡುಗಿಸುತ್ತಿದೆ. ನಾನೀಗ ಅಸಹಾಯಕನಾಗಿರುವುದರಿಂದ ನೀನು ಈಗ ನನ್ನ ಕೈಹಿಡಿದು ನನ್ನನ್ನು ದಾರಿನಡೆಸಬೇಕು. ಕತ್ತಲೆಯಲ್ಲಿ ದಾರಿಕಾಣದಾಗಿರುವುದರಿಂದ ಹೆಜ್ಜೆಹೆಜ್ಜೆಗೂ ವಾಸ್ತವವನ್ನು ತಿಳಿಸುತ್ತ ಹೆಜ್ಜೆ ಇಡುವುದಕ್ಕೆ ಸಹಕರಿಸಬೇಕು.’’

            ”ನನ್ನ ಕಾಲುಗಳು ಶಕ್ತಿಯನ್ನು ಕಳೆದುಕೊಂಡು ಹೆಜ್ಜೆಯಿಡಲಾರದ, ಕಣ್ಣುಗಳು ದರ್ಶನವನ್ನು ಕಳೆದುಕೊಂಡು ಏನನ್ನೂ ನೋಡಲಾರದ, ಮನಸ್ಸು ಶೂನ್ಯವಾಗಿ ಏನನ್ನೂ ಅರಿಯಲಾರದ ಅತಂತ್ರಸ್ಥಿತಿಯಲ್ಲಿದ್ದೇನೆ. ಶಕ್ತಿಗುಂದಿದ ಕಾಲುಗಳಿಂದ ಮುಂದಡಿಯಿಡಲು ಸಾಧ್ಯವೇ? ಹಾಗಾಗಿ ನನ್ನ ಕಾಲುಗಳಿಗೆ ಹೆಜ್ಜೆಯಿಡುವ  ಶಕ್ತಿಯನ್ನು ಕರುಣಿಸು. ದೃಷ್ಟಿಶಕ್ತಿಯೇ ಇಲ್ಲದಿರುವ ಕಣ್ಣುಗಳಿಂದ ಏನನ್ನು ನೋಡಲು ಸಾಧ್ಯ? ಹಾಗಾಗಿ ಕಣ್ಣಿಗಳಿಗೆ ಗ್ರಹಿಕೆಯ ಶಕ್ತಿಯನ್ನು ಕರುಣಿಸು. ಮನಸ್ಸು ವಿವೇಚನೆಯಿಲ್ಲದೆ ಶೂನ್ಯವಾಗಿದೆ. ಹಾಗಾಗಿ ಮನಸ್ಸಿಗೆ ಅರಿವಿನ ಶಕ್ತಿಯನ್ನು ಕರುಣಿಸು. ಇವೆಲ್ಲವುಗಳ ಮೂಲಕ ಬದುಕಿಗೆ ಆಗುಹೋಗುಗಳ ದೂರದೃಷ್ಟಿಯ ಶಕ್ತಿಯನ್ನು ಕರುಣಿಸು. ನೀನು ಪತಿತೋದ್ಧಾರಕ, ಎಲ್ಲವನ್ನೂ ಕಳೆದುಕೊಂಡು ಶರಣಾದವರಿಗೆ ನೀನು ಕರುಣಾಳು ಬೆಳಕು. ಬೆಳಕು ಕತ್ತಲೆಯನ್ನು ಹೊಡೆದೋಡಿಸುವಂತೆ, ನೀನಿರಿಸುವ ಒಂದೇ ಒಂದು ಹೆಜ್ಜೆಯಾದರೂ ಅದು ಬಾಳಿನಲ್ಲಿ ಕವಿದಿರುವ ಅಂಧಕಾರವನ್ನು ಕರಗಿಸಬಲ್ಲುದು. ನೀನಿರಿಸುವ ಒಂದು ಹೆಜ್ಜೆಯ ಪ್ರೇರಣೆಯಿಂದ ನಾನು ಹತ್ತು ಹೆಜ್ಜೆಗಳನ್ನು ಇಡವಂತಾಗಲಿ. ಅದರಿಂದ ನನ್ನ ಬದುಕಿನಲ್ಲಿ ಆವರಿಸಿಕೊಂಡು ಭಯಹುಟ್ಟಿಸುತ್ತಿರುವ ಕತ್ತಲೆಯು ಮಾಯವಾಗಿ, ನನ್ನಲ್ಲಿ ವಿವೇಕ ಮೂಡಿ ನಾನು ಕಳಕೊಂಡಿರುವುದೆಲ್ಲವನ್ನು ಮರಳಿ ಪಡೆಯುವಂತಾಗಲಿ. ಸತ್ಯಾಸತ್ಯತೆಗಳ, ಸರಿತಪ್ಪುಗಳ, ಒಳಿತುಕೆಡುಕುಗಳ, ಧರ್ಮಾಧರ್ಮಗಳ ಅರಿವು ಮೂಡುವಂತಾಗಲಿ. ನೀನು ಕರುಣೆಯಿಂದ ಇರಿಸುವ ಒಂದು ಹೆಜ್ಜೆಯನ್ನು ಹೊರತುಪಡಿಸಿ ನಿನ್ನಲ್ಲಿ ನಾನು ಹೆಚ್ಚಿನದೇನನ್ನೂ ನಾನು ಬೇಡುವುದಿಲ್ಲ.”

ಮುನ್ನೆ ಇಂತಿರದಾದೆ; ನಿನ್ನ ಬೇಡದೆ ಹೋದೆ

ಕೈಹಿಡಿದು ನಡೆಸು ಎನುತ

ನನ್ನ ದಾರಿಯ ನಾನೆ ನೋಡಿ ಹಿಡಿದೆನು;- ಇನ್ನು

ಕೈಹಿಡಿದು ನಡೆಸು ನೀನು.

ಮಿರುಗುಬಣ್ಣಕೆ ಬೆರೆತು, ಭಯ ಮರೆತು, ಕೊಬ್ಬಿದೆನು;

ಮರೆದಾಯ್ತು; ನೆನೆಯದಿರು ಹಿಂದಿನದೆನೆಲ್ಲ

(ಮುನ್ನೆ-ಈ ಹಿಂದೆ, ಈ ಮೊದಲು;  ಇಂತಿರದಾದೆ-ಹೀಗಿರಲಾಗಲಿಲ್ಲ;  ಮಿರುಗುಬಣ್ಣ-ಮನಸ್ಸನ್ನು ಮರುಳುಮಾಡುವ ಆಕರ್ಷಣೆಗಳು, ಮನಸ್ಸನ್ನು ಸೆರೆಹಿಡಿಯುವ ವಿಷಯಗಳು;  ಬೆರೆತು-ಸೇರಿಕೊಂಡು, ಮರುಳಾಗಿ; ಭಯ ಮರೆತು-ಬದುಕಿನ ಇತಿಮಿತಿಗಳನ್ನು ಮರೆತು, ದುರಹಂಕಾರದಿಂದ ವರ್ತಿಸಿ; ಕೊಬ್ಬಿದೆನು-ದುರಹಂಕಾರ ಪಟ್ಟೆನು; ಮರೆದಾಯ್ತು-ಮರೆತುಬಿಟ್ಟೆ.)

            ಯೌವನದಲ್ಲಿ ನನ್ನಲ್ಲಿ ಬೆಳೆದುಬಂದ ಮದಗಳಿಂದಾಗಿ ಬುದ್ಧಿಗುರುಡನಾದೆ. ಹಾಗಾಗಿ ನಿನ್ನಲ್ಲಿ ಏನನ್ನೂ ಬೇಡಲಿಲ್ಲ. ಎಲ್ಲವನ್ನೂ ಕಳೆದುಕೊಂಡ ಮೇಲೆ ನಿನ್ನ ಅಸ್ತಿತ್ವದ ಹಾಗೂ ಅದರ ಮಹತ್ವದ ಅರಿವಾಗಿದೆ. ’ಕೆಟ್ಟ ಮೇಲೆ ಬುದ್ಧಿ’ ಎಂಬಂತೆ ಎಲ್ಲವನ್ನೂ ಕಳೆದುಕೊಂಡ ಮೇಲೆ ಸ್ವಲ್ಪ ವಿವೇಕ ಮೂಡಿದೆ.  ಈ ಹಿಂದಿನ ಬದುಕಿನಲ್ಲಿ ನಾನು ಹೀಗಿರಲು (ವಿವೇಕಿಯಂತೆ ಬದುಕಲು) ಸಾಧ್ಯವಾಗಿರಲಿಲ್ಲ. ಹಾಗಾಗಿ ಭಗವಂತನೇ, ಬದುಕಿನಲ್ಲಿ  ನನ್ನನ್ನು ನೀನು ಕೈಹಿಡಿದು ಧರ್ಮಮಾರ್ಗದಲ್ಲಿ ನಡೆಸೆಂದೂ ನನ್ನನ್ನು ಕಷ್ಟಕೋಟಲೆಗಳಿಂದ ರಕ್ಷಿಸೆಂದೂ ನನ್ನ ಬದುಕನ್ನು ಸಾರ್ಥಕಗೊಳಿಸೆಂದೂ  ನಿನ್ನಲ್ಲಿ ಯಾವತ್ತೂ ಬೇಡಲಿಲ್ಲ. ಏನನ್ನೂ ಬೇಡದೆ ನನ್ನ ಬದುಕಿನ ದಾರಿಯನ್ನು ನಾನೇ ಕಂಡುಕೊಂಡೆ. ನನ್ನಿಚ್ಛೆಯಂತೆ ದುಡಿದೆ, ವರ್ತಿಸಿದೆ, ಬದುಕಿದೆ. ಮದದಿಂದ ನಿನ್ನನ್ನು ಮರೆತು ನಾನು ನಾನೇ ಎಂದು ಮೆರೆದಾಡಿದೆ. ಮನುಷ್ಯನನ್ನು ಮೀರಿದ ಶಕ್ತಿಯೊಂದಿದೆ ಎಂಬುದನ್ನೂ ಅದಕ್ಕೆ ಯಾವತ್ತೂ ಶರಣಾಗಿಯೇ ಬದುಕಬೇಕೆಂಬುದನ್ನೂ ಬದುಕಿಗೆ ಭಗವಂತನ ಅನುಗ್ರಹ ಬೇಕೆಂಬುದನ್ನೂ  ಮರೆತುಬಿಟ್ಟು ಎಲ್ಲವನ್ನೂ ಕಳೆದುಕೊಂಡೆ. ಈಗ ನೀನು ಅದೆಲ್ಲವನ್ನು ನೆನೆಸಬೇಡ, ನೆನೆಯುವಂತೆ ಮಾಡಬೇಡ. ತಾಳಿಕೊಳ್ಳುವ ಶಕ್ತಿಯಿಲ್ಲ. ಹಾಗಾಗಿ ಈಗಲಾದರೂ ಕರುಣೆತೋರಿ ನೀನೇ ನನ್ನ ಕೈಹಿಡಿದು ದಾರಿನಡೆಸಿದರೆ ನಾನು ಹಿಂದಿನದೆಲ್ಲವನ್ನೂ ಮರೆತು ಹೊಸಮನುಷ್ಯನಾಗುತ್ತೇನೆ.

           ’ಕೆಟ್ಟ ಮೇಲೆ ಬುದ್ಧಿ, ಸತ್ತ ಮೇಲೆ ದುಃಖ’ ಎಂಬುದು ಪ್ರಾಜ್ಞರ ಮಾತು. ಆದರೆ ಅಂದು ಅದನ್ನು ಅರ್ಥೈಸಿಕೊಳ್ಳುವ ವಿವೇಕ ತನ್ನಲ್ಲಿರಲಿಲ್ಲ. ಯೌವನದಲ್ಲಿ ಹತ್ತಾರು ಮದಗಳ ದಾಸನಾಗಿ ಬದುಕುತ್ತ ವಿವೇಕ ಮೂಡುವುದರೊಳಗೆ  ಎಲ್ಲವನ್ನೂ ಕಳೆದುಕೊಂಡು ಈಗ ಅಸಹಾಯಕನಾಗಿದ್ದೇನೆ. ಕೆಟ್ಟ ಮೇಲೆ ಬುದ್ಧಿಬರುವಂತೆ ನಿನ್ನ ಅಸ್ತಿತ್ವದ, ಅದರ ಅನಿವಾರ್ಯತೆಯ ಅರಿವು ಮೂಡಿದೆ. ಈಗ ನಿನ್ನ ಸಹಾಯವಿಲ್ಲದೆ ನಾನಿಂದು ಏನನ್ನೂ ಕೈಗೊಳ್ಳುವ ಸ್ಥಿತಿಯಲ್ಲಿಲ್ಲ. ಮನಸ್ಸು ಬದುಕಿನಲ್ಲಿನ ನೂರಾರು ಆಸೆ, ಆಕಾಂಕ್ಷೆಗಳಿಗೆ, ಸೆಳೆತಗಳಿಗೆ, ಆಮಿಷಗಳಿಗೆ ಬಲಿಯಾಯಿತು. ಅದೇ ಸರಿಯೆಂದೂ ಅದೇ ನಿಜವೆಂದೂ ಅದೇ ಒಳೆತೆಂದೂ ಅದೇ ಶ್ರೇಷ್ಠವೆಂದೂ ಸರ್ವಸ್ವವೆಂದೂ ನಂಬಿದೆ. ಎಲ್ಲರನ್ನೂ ಎಲ್ಲವನ್ನೂ ಮರೆತು ಎಲ್ಲವೂ ನಾನು, ಎಲ್ಲವೂ ನನ್ನಿಂದಲೇ ಸಾಧ್ಯವೆಂದು ನಂಬಿ ದುರಹಂಕಾರದಿಂದ ಬದುಕಿದೆ. ಇತರರನ್ನು ಕಡೆಗಣಿಸಿದೆ. ಅದರ ಫಲವಾಗಿ ಇಂದು ಎಲ್ಲವನ್ನೂ ಕಳೆದುಕೊಂಡು ಅಸಹಾಯಕನಾಗಿದ್ದೇನೆ, ಒಬ್ಬಂಟಿಯಾಗಿದ್ದೇನೆ, ಅತಂತ್ರನಾಗಿದ್ದೇನೆ, ಅಶಕ್ತನಾಗಿದ್ದೇನೆ. ಮನಸ್ಸಿನೊಳಗೆ ಶೂನ್ಯ ಆವರಿಸುತ್ತಿದೆ. ಈ ಸ್ಥಿತಿಯಲ್ಲಿ ನನ್ನ ಹಿಂದಿನ ಪ್ರಾರಬ್ಧಕರ್ಮಗಳನ್ನೆಲ್ಲ ಮರೆಯಲು ಪ್ರಯತ್ನಿಸುತ್ತಿದ್ದೇನೆ. ನೀನೂ ಹಿಂದಿನ ನನ್ನೆಲ್ಲ ಹೀನಬುದ್ಧಿಯನ್ನು, ದುರಹಂಕಾರವನ್ನು, ದುರ್ವರ್ತನೆಯನ್ನ, ಸ್ವಚ್ಛಂದತೆಯನ್ನು ನೀನು ಮತ್ತೆ ಮತ್ತೆ ನೆನೆಯದೆ, ಮತ್ತೆ ಮತ್ತೆ ನನಗೆ ನೆನಪಿಸದೆ ತಪ್ಪುಗಳನ್ನು ಮನ್ನಿಸಿ ನನ್ನನ್ನು ಕಾಪಾಡು. ನೀನೇ ಕರುಣಾಳು ಎಂದು ನಿನಗೆ ಶರಣಾಗಿದ್ದೇನೆ. ಇನ್ನು ಮುಂದಿನ ಬದುಕಿನಲ್ಲಾದರೂ ನೀನೇ ನನ್ನ ಕೈಹಿಡಿದು ನಡೆಸಬೇಕೆಂದೇ ನನ್ನ ಪ್ರಾರ್ಥನೆ.

ಇಷ್ಟು ದಿನ ಸಲಹಿರುವೆ  ಮೂರ್ಖನನು; ಮುಂದೆಯೂ

ಕೈಹಿಡಿದು ನಡೆಸದಿಹೆಯಾ?

ಕಷ್ಟದಡವಿಯ ಕಳೆದು, ಬೆಟ್ಟ ಹೊಳೆಗಳ ಹಾದು

ಇರುಳನ್ನು ನೂಕದಿಹೆಯಾ?

ಬೆಳಗಾಗ ಹೊಳೆಯದೇ ಹಿಂದೊಮ್ಮೆ ನಾನೊಲಿದು

ಈ ನಡುವೆ ಕಳಕೊಂಡ ದಿವ್ಯಮುಖ ನಗುತ?

 (ಇಷ್ಟು ದಿನ ಸಲಹಿರುವೆ-ಇದುವರೆಗೆ ಕಾಪಾಡಿರುವೆ(ನನ್ನಿಂದ ತಪ್ಪಾಗಿದ್ದರೂ ಕೂಡಾ);  ಮೂರ್ಖ-ವಾಸ್ತವವನ್ನು ಅರಿಯದ ಮೂಢ;  ಕಷ್ಟದಡವಿ-ಕಷ್ಟಕಾರ್ಪಣ್ಯಗಳ ಬದುಕು;  ಬೆಟ್ಟ ಹೊಳೆಗಳ ಹಾದು-ಬದುಕಿನಲ್ಲಿನ ಸಮಸ್ಯೆ, ಅಪಾಯಗಳನ್ನು ನಿವಾರಿಸಿ; ಇರುಳು-ಸಂಕಷ್ಟಗಳು;  ನೂಕು-ನಿವಾರಿಸು;  ಬೆಳಗಾಗ ಹೊಳೆಯದೇ-ಬೆಳಗಾಗಲು ಹೊಳೆಯಲಾರದೇ?;  ಹಿಂದೊಮ್ಮೆ-ಹಿಂದಿನ ಬದುಕಿನಲ್ಲೊಮ್ಮೆ;  ದಿವ್ಯಮುಖ-ಸಂತಸದ ಕ್ಷಣಗಳು.)

            ಭಗವಂತನೇ ನೀನು  ಯಾರನ್ನೂ ದಂಡಿಸಲಾರೆ. ಒಳ್ಳೆಯವನಿರಲಿ, ಕೆಟ್ಟವನಿರಲಿ; ಯೋಗ್ಯನಿರಲಿ, ಅಯೋಗ್ಯನಿರಲಿ; ಧಾರ್ಮಿಕನಿರಲಿ, ಅಧಾರ್ಮಿಕನಿರಲಿ; ಸಭ್ಯನಿರಲಿ, ಅಸಭ್ಯನಿರಲಿ ಎಲ್ಲರನ್ನೂ ತನ್ನ ಕೃಪಾದೃಷ್ಟಿಯ ಪರಿಧಿಯೊಳಗೆ ರಕ್ಷಿಸುವೆ. ಯಾವ ಒಳಿತನ್ನೂ ಮಾಡದ, ಯಾವತ್ತೂ ಭಗವಂತನನ್ನು ನೆನೆಯದ, ಯಾರೊಬ್ಬರಿಗೂ ಹಿತಚಿಂತಕನೆನಿಸದ, ಇದುವರೆಗೂ ವಾಸ್ತವವನ್ನು ಅರಿಯದೆ ಮೂಢನಾಗಿರುವ ನನ್ನಂಥವನನ್ನು ಇದುವರೆಗೂ ಕಾಪಾಡಿಕೊಂಡು ಬಂದಿರುವೆ. ಹಾಗಿರುವಾಗ ಈಗ ಪಶ್ಚಾತ್ತಾಪದಲ್ಲಿ ಬೇಯುತ್ತ ಅಸಹಾಯಕನಾಗಿರುವ ನನ್ನನ್ನು ಮುಂದೆಯೂ ಕಾಪಾಡುತ್ತ ಕೈಹಿಡಿದು ನಡೆಸಲಾರೆಯಾ?  ಅಡವಿ ಹಾಗೂ ಅದರ ಸ್ಥಿತಿಗತಿಗಳು ಮನುಷ್ಯನನ್ನು ಭಯಭೀತಗೊಳಿಸುವಂತೆ ನನ್ನ ಬದುಕು ಕಷ್ಟದಡವಿಯಾಗಿ ನನ್ನನ್ನೇ ಭಯಭೀತಗೊಳಿಸುತ್ತಿದೆ. ಕಂಗಾಲಾಗಿಸುತ್ತಿರುವ ಈ ಕಷ್ಟಕಾರ್ಪಣ್ಯಗಳ ಬದುಕೆಂಬ ಅಡವಿಯಿಂದ ನನ್ನನ್ನು ಪಾರುಗೊಳಿಸು.  ನನ್ನ ಬದುಕಿಗೆ ಆವರಿಸಿಕೊಂಡಿರುವ ಸಕಲ ದುರಿತಗಳನ್ನು, ಸಂಕಷ್ಟಗಳನ್ನು ತಡೆದು, ಅವುಗಳನ್ನು ಬಗೆಹರಿಸಿ, ಬದುಕಿನಲ್ಲಿನ ಕತ್ತಲೆಯನ್ನು ನಿವಾರಿಸಿಕೊಂಡು ಹೊಸಬೆಳಕನ್ನು ನೀಡಲಾರೆಯಾ?

            ಭಗವಂತನೇ, ”ತೃಣಮಪಿನಚಲತಿ ತೇನವಿನಾ” ಎಂಬುದು ನಿನ್ನ ಹಿರಿಮೆಯನ್ನು, ನಿನ್ನ ಅಗಾಧ ಶಕ್ತತೆಯನ್ನು, ನಿನ್ನ ಸರ್ವಾಂತರ್ಯಾಮಿಯತ್ವವನ್ನು ಕೊಂಡಾಡುವ ಮಾತು.  ಈ ಜಗತ್ತಿನಲ್ಲಿ ನಿನ್ನ ಕರುಣೆಯಿಲ್ಲದೆ ಹುಲ್ಲುಕಡ್ದಿಯೂ ಅಲುಗಾಡಲಾರದು. ಹೀಗಿರುವಾಗ ನಿನ್ನ ಕೃಪಾಕಟಾಕ್ಷವಿದ್ದರೆ, ಕರುಣೆಯಿದ್ದರೆ, ಒಲವಿದ್ದರೆ ಕತ್ತಲೆಯೆಲ್ಲವೂ ಮಾಯವಾಗಿ ಜಗತ್ತೆಲ್ಲ ಸುಂದರವಾಗಿ, ಮೋಹಕವಾಗಿ, ಆಕರ್ಷಕವಾಗಿ ಕಾಣಲಾರದೆ?! ನನ್ನ ಬದುಕೂ ನಿನ್ನ ದಯೆಯಿಂದ ಬೆಳಗಲಾರದೆ?! ನಿನ್ನ ಕರುಣೆಯಿಂದ ಬದುಕಿನಲ್ಲಿ ನಾನು ಕಳೆದುಕೊಂಡ, ಹಿಂದೆ ಒಂದೊಮ್ಮೆ ನಾನು ಕಂಡುಕೊಂಡ ಸುಖ, ಸಂತೋಷಗಳನ್ನು, ನಗುಮುಖವನ್ನು ಮತ್ತೆ ಮರಳಿ ಪಡೆಯಲಾರೆನೇ?! ತಡವಾದರೂ ಬದುಕಿನ ಕೊನೆಗಾಲದಲ್ಲಿ ನನಗೆ ಜ್ಞಾನೋದಯವಾಗುವಂತೆ ಕರುಣಿಸಿರುವೆ. ನನ್ನನ್ನು ನರಕಿ ಎಂದೋ ಸರ್ವಾಪರಾಧಿಯೆಂದೋ ತಿರಸ್ಕರಿಸದೆ ತಪ್ಪುಗಳನ್ನೆಲ್ಲ ಮನ್ನಿಸಿರುವೆ. ನಾನೀಗ ಅಸಹಾಯಕನಾಗಿ ನಿನಗೆ ಶರಣಾಗಿರುವುದರಿಂದ ನೀನೇ ನನ್ನ ಕೈಹಿಡಿದು ನಡೆಸಬೇಕು. ನಿನ್ನ ಔನ್ನತ್ಯವನ್ನು, ನಿನ್ನ ಸರ್ವಶಕ್ತತೆಯನ್ನು ಒಪ್ಪಿಕೊಂಡು, ನಿನಗೆ ಸದಾ ಶರಣಾಗುತ್ತಾ ಒಂದಷ್ಟು ಕಾಲ ನಾನು ಒಳ್ಳೆಯ ಬಾಳನ್ನು ಬಾಳುವಂತಾಗಬೇಕು. ಹಾಗಾಗಿ ಬದುಕಿನ ಕತ್ತಲೆಯಿಂದ ತನ್ನನ್ನು ಪಾರುಮಾಡಿ ಕೈಹಿಡಿದು ನಡೆಸುತ್ತ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತ ಉಳಿದಿರುವ ಮುಂದಿನ ಬದುಕನ್ನಾದರೂ ಸಂತೋಷದಲ್ಲಿ, ಪರಿಪೂರ್ಣತೆಯಲ್ಲಿ ಸಾಗಿಸುವಂತೆ ಕರುಣಿಸು.

            ಮನುಷ್ಯ ಹತ್ತು ಹಲವು ಕಾರಣಗಳಿಂದ ದಾರಿತಪ್ಪಿ ನಡೆಯುತ್ತಾನೆ. ಆಸ್ತಿಯ ಮದ, ಹಣದ ಮದ, ರೂಪದ ಮದ, ಪ್ರಾಯದ ಮದ, ಕುಲದ ಮದ, ವಿದ್ಯೆಯ ಮದ, ಅಧಿಕಾರದ ಮದ – ಹೀಗೆ ಹಲವಾರು ರೀತಿಯ ಮದಗಳಿಗೆ ಮರುಳಾಗಿ ಅವುಗಳ ದಾಸನಾಗಿ ಮೆರೆಯುತ್ತಾನೆ. ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಆದರೆ ಜೀವಿತದ ಕೊನೆಯ ಅವಧಿಯಲ್ಲಿ ಕೆಲವರಿಗಾದರೂ ತಾನು ಊರಿಗೆ ಉಪಕಾರಿಯಾಗಿ, ಸಮಾಜಕ್ಕೆ ಗೌರವಯುತವಾಗಿ ಬದುಕಿಲ್ಲವೆಂದೋ ಸಮಾಜದ, ತನ್ನವರ, ತನ್ನ ಸಹವರ್ತಿಗಳ ಜೊತೆಗೆ ಉತ್ತಮಸಂಬಂಧವನ್ನು ಹೊಂದಿಲ್ಲವೆಂದೋ ಜೀವಮಾನದಲ್ಲಿ ತಮ್ಮ ಸಾಧನೆ ಶೂನ್ಯವೆಂದೋ ಸಾಧಿಸಿ ಬದುಕನ್ನು ಸಾರ್ಥಕಗೊಳಿಸಿಲ್ಲವೆಂದೋ ಗಳಿಸಬೇಕಾದುದನ್ನು ಗಳಿಸಿಲ್ಲವೆಂದೋ ಅನ್ನಿಸಬಹುದು. ಎಲ್ಲಾ ಬಗೆಯ ಸಂಬಂಧಗಳು ಸಡಿಲಗೊಂಡು, ಎಲ್ಲರಿಂದಲೂ ತಿರಸ್ಕೃತನಾಗತೊಡಗಿ ತನಗೆ ಇನ್ನು ಯಾರೂ ಇಲ್ಲ ಅನ್ನಿಸತೊಡಗಿದಾಗ ಮದದಿಂದ ಏನನ್ನೂ ಸಾಧಿಸಲಾರೆನೆಂಬ ತಿಳಿವಳಿಕೆ ಮೂಡಿದಾಗ ಭಗವಂತನ ನೆನಪು ಸದಾ ಕಾಡುತ್ತದೆ, ’ಸಂಕಟ ಬಂದಾಗ ವೆಂಕಟರಮಣ’ ಎನ್ನುವ ಹಾಗೆ. ಆದರೆ ಬಹುತೇಕ ಮಂದಿಯಲ್ಲಿ ಶರಣಾಗತಿಭಾವವಾಗಲೀ ತನ್ನ ಪ್ರಾರಬ್ಧಕರ್ಮಗಳನ್ನು ಮನಸೋ ಇಚ್ಛೆ ಭಗವಂತನಲ್ಲಿ ನಿವೇದಿಸಿಕೊಳ್ಳುವ ದೀನಮನಃಸ್ಥಿತಿಯಾಗಲೀ ಇರುವುದಿಲ್ಲ. ಆದರೆ ಮೇಲಿನ ಭಾವಗೀತೆಯಲ್ಲಿ ಕಾವ್ಯದ ನಾಯಕ ತನ್ನೆಲ್ಲ ಪ್ರಾರಬ್ಧಕರ್ಮಗಳನ್ನು ಹೇಳಿಕೊಂಡು ಭಗವಂತನಿಗೆ ಶರಣಾಗಿ ಆತನಲ್ಲಿ ನಿವೇದಿಸಿಕೊಳ್ಳುವ ಸ್ಥಿತಿಯನ್ನು ಕಂಡುಕೊಳ್ಳಬಹುದು. ತನ್ನ ನೋವನ್ನು, ದುಃಖವನ್ನು, ತನ್ನ ಅಪರಾಧಗಳನ್ನು ತನಗೆ ತೀರಾ ಆತ್ಮೀಯರಾಗಬಲ್ಲವರಲ್ಲಿ, ತನಗೆ ಒಂದಿಷ್ಟು ಸಾಂತ್ವಾನ ಸಿಗಬಹುದೆಂಬ ಭರವಸೆಯುಳ್ಳವರಲ್ಲಿ ನಿವೇದಿಸಿಕೊಳ್ಳುವುದು ಆತನಲ್ಲಿನ ಪರಿವರ್ತನೆಯ ಹಂಬಲವನ್ನು ಸೂಚಿಸುತ್ತದೆ. ಇದು ಮನುಷ್ಯನ ಮನಸ್ಸು ಮಾಗಿದ, ಕೆಡುಕೆಲ್ಲವನ್ನೂ ಕಳೆದುಕೊಂಡು ಪರಿಪೂರ್ಣತೆಯತ್ತ ಸಾಗಲು ಹಾತೊರೆಯುವ, ಆ ಮೂಲಕ ಮನುಷ್ಯನಾಗುವ, ಬದುಕು ಮೌಲ್ಯವನ್ನು ಪಡೆದುಕೊಳ್ಳುವ ಸ್ಥಿತಿ. ಹಾಗಾಗಿ ಭಾವಗೀತೆಯೇ ಒಂದು ಜೀವನವಿಮರ್ಶೆ.

            ಈ ಭಾವಗೀತೆಯಲ್ಲಿನ ಕರುಣಾಳು ಬೆಳಕನ್ನು ಭಗವಂತನಿಗೆ ಅನ್ವಯಿಸಿಕೊಂಡಂತೆ ಹೆತ್ತವರು ಹಾಗೂ ಗುರುಗಳಿಗೂ(ಅವರು ನಿಷ್ಪಕ್ಷಪಾತಿಗಳೂ ಧಾರ್ಮಿಕರೂ ನೈತಿಕತೆಯುಳ್ಳವರೂ ಆಗಿದ್ದರೆ ಮಾತ್ರ) ಅನ್ವಯಿಸಿಕೊಳ್ಳಬಹುದು. ಭಗವಂತನ ಸ್ಥಾನದಲ್ಲಿ ಹೆತ್ತವರನ್ನು ಇಲ್ಲವೇ ಪೋಷಕರನ್ನು ಅಥವಾ ಗುರುಗಳನ್ನು ಅನ್ವಯಿಸಿಕೊಳ್ಳುವುದರಿಂದ ಈ ಭಾವಗೀತೆ ಇನ್ನಷ್ಟು ಅರ್ಥವ್ಯಾಪ್ತಿಯನ್ನು ಪಡೆದುಕೊಳ್ಳುತ್ತದೆ. ಒಂದು ಆದರ್ಶ ಸಮಾಜವ್ಯವಸ್ಥೆಯ ಅನುಷ್ಠಾನದಲ್ಲಿ ಮುಖ್ಯಪಾತ್ರವನ್ನು ವಹಿಸುತ್ತದೆ. ಹೀಗೆ ಒಂದೇ ನೆಲೆಯಲ್ಲಿ ಹಲವಾರು ನೆಲೆಗಳಲ್ಲಿ ಅರ್ಥಪ್ರತೀತಿಯನ್ನು ಉಂಟುಮಾಡುವ ಸಾಹಿತ್ಯ ನವನವೋಲ್ಲೇಖಶಾಲಿನೀ ಎನಿಸಿಕೊಳ್ಳುತ್ತದೆ. ಅದು ನೂರ್ಕಾಲ ಬಾಳುತ್ತದೆ. ಈ ನಿಟ್ಟಿನಲ್ಲಿ ಬಿ.ಎಂ.ಶ್ರೀ.ಯವರ ಭಾವಗೀತೆ  ”ಪ್ರಾರ್ಥನೆ”ಯೂ ಒಂದಾಗಿದೆ.

ಡಾ. ವಸಂತ್ ಕುಮಾರ್, ಉಡುಪಿ

ಈ ಭಾವಗೀತೆಯನ್ನು ಸಂಗೀತದ ಹಿನ್ನೆಲೆಯಲ್ಲಿ ಆಸ್ವಾದಿಸಿ.

 *****

 

Leave a Reply

Your email address will not be published. Required fields are marked *