ಸಾಹಿತ್ಯಾನುಸಂಧಾನ

heading1

ಶ್ರೀವಿಷ್ಣು ವಿಶ್ವಾದಿಮೂಲ-ಡಿ.ವಿ.ಜಿ.

೧. ಶ್ರೀವಿಷ್ಣು ವಿಶ್ವಾದಿಮೂಲ ಮಾಯಾಲೋಲ

    ದೇವ ಸರ್ವೇಶ ಪರಬೊಮ್ಮನೆಂದು ಜನಂ

    ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ

    ಆ ವಿಚಿತ್ರಕೆ ನಮಿಸೊ – ಮಂಕುತಿಮ್ಮ

ಅನ್ವಯಕ್ರಮ:

ಜನಂ, ಶ್ರೀವಿಷ್ಣು ವಿಶ್ವ ಆದಿಮೂಲ ಮಾಯಾಲೋಲ ದೇವ ಸರ್ವೆಶ ಪರಬೊಮ್ಮನ್ ಎಂದು ಆವುದನು ಕಾಣದೊಡಂ ಅಳ್ತಿಯಿಂ ನಂಬಿಹುದೊ ಆ ವಿಚಿತ್ರಕೆ ನಮಿಸೊ – ಮಂಕುತಿಮ್ಮ

ಪದ-ಅರ್ಥ:

ಶ್ರೀವಿಷ್ಣು– ಆದಿಪುರುಷ, ತ್ರಿಮೂರ್ತಿಗಳಲ್ಲೊಬ್ಬ; ವಿಶ್ವಾದಿಮೂಲ-ವಿಶ್ವಕ್ಕೆ ಕಾರಣಪುರುಷನಾದವನು; ಮಾಯಾಲೋಲ-ಪ್ರೀತಿಯುಳ್ಳವನು, ಆಕರ್ಷಿಸುವವನು; ದೇವ ಸರ್ವೇಶ-ಸರ್ವ ದೇವರಿಗೆ ಒಡೆಯನಾದವನು; ಪರಬೊಮ್ಮ-ಪರಬ್ರಹ್ಮ, ಮೂಲಸೃಷ್ಟಿಕರ್ತ; ಜನಂ-ಜನರು, ಮನುಷ್ಯರು;  ಆವುದನು-ಯಾವುದನ್ನು; ಕಾಣದೊಡಂ-ಕಾಣದಿದ್ದರೂ;  ಅಳ್ತಿಯಿಂ -ಪ್ರೀತಿಯಿಂದ, ವಿಶ್ವಾಸದಿಂದ; ವಿಚಿತ್ರ-ವೈಚಿತ್ರ್ಯ, ಸೋಜಿಗ; ನಮಿಸೊ-ಶರಣಾಗು.

            ನಮ್ಮ ಪರಂಪರಾಗತ ಧಾರ್ಮಿಕ, ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ ಶ್ರೀವಿಷ್ಣು ಸಕಲ ವಿಶ್ವಕ್ಕೆ ಆದಿಮೂಲನೆನಿಸಿಕೊಂಡಿದ್ದಾನೆ. ಆತನೇ ಈ ವಿಶ್ವದಲ್ಲಿ ಮೊದಲು ಆವಿರ್ಭವಿಸಿದವನು. ಹಾಗಾಗಿ ಆತ ಆದಿಪುರುಷ. ಈ ಭೂಮಿಯಲ್ಲಿನ ಸಕಲ ಜೀವರಾಶಿಗಳೂ ಸಸ್ಯಸಂಕುಲಗಳೂ ಪ್ರತಿಯೊಂದರ ಜೀವಿತಕ್ಕೆ ಅನುಕೂಲಕರವಾದ ಸಕಲವ್ಯವಸ್ಥೆಗಳು ಆತನಿಂದಲೇ ಸೃಷ್ಟಿಯಾಗಿವೆ. ಅವನು ಮಾಯಾಲೋಲ ಎನಿಸಿಕೊಂಡಿರುವುದರಿಂದಲೇ ಇದೆಲ್ಲವೂ ಸಾಧ್ಯವಾಗಿದೆ. ಹಾಗೆಯೇ ಆತನು ಸರ್ವದೇವರಿಗೂ ಪರಬ್ರಹ್ಮನಾಗಿದ್ದಾನೆ. ಹೀಗೆಂದು ಲೋಕದ ಜನರು ಯಾವುದನ್ನೂ ಕಣ್ಣಿಂದ ಕಾಣದಿದ್ದರೂ ಭಯಭಕ್ತಿಗಳಿಂದ, ಸಂತೋಷದಿಂದ, ಶ್ರದ್ಧೆಯಿಂದ ನಂಬಿಕೊಂಡು ಬದುಕುತ್ತಿದ್ದಾರೋ ಅಥವಾ ಬದುಕಿನಲ್ಲಿ ಸುಖ, ಸಂತೋಷ, ನೆಮ್ಮದಿಯನ್ನು ಕಂಡುಂಡು ಬಾಳುತ್ತಿದ್ದಾರೋ ಅಂತಹ ವೈಚಿತ್ರ್ಯಪೂರ್ಣವಾದ ತತ್ತ್ವಕ್ಕೆ ಶರಣಾಗಬೇಕೆನ್ನುತ್ತಾನೆ ಮಂಕುತಿಮ್ಮ.

            ಭಾರತ ಪ್ರಾಚೀನಕಾಲದಿಂದಲೂ ಆಧ್ಯಾತ್ಮಿಕವಾದ ಚಿಂತನೆಗಳಲ್ಲಿ ಮತ್ತು ಅವುಗಳ ಅನುಷ್ಠಾನಗಳಲ್ಲಿ ವಿಶ್ವಕ್ಕೇ ಮುಂಚೂಣಿಯಲ್ಲಿರುವ ಮಾತ್ರವಲ್ಲದೆ ಮಾರ್ಗದರ್ಶಿಯಾಗಿರುವ ದೇಶ. ವಿಶ್ವದ ಇತರ ಎಷ್ಟೋ ದೇಶಗಳಿಗೆ ತನ್ನ ಆಧ್ಯಾತ್ಮಿಕ ಚಿಂತನೆಗಳನ್ನು ಧಾರೆಯೆರೆದಿದೆ. ಮನುಷ್ಯನನ್ನು ಮೀರಿದ ಶಕ್ತಿಯೊಂದಿದೆ ಎಂದು ಬಲವಾಗಿ ನಂಬಿದವರು ಭಾರತೀಯರು. ಸಮಸ್ತ ವಿಶ್ವವನ್ನೇ ಆ ಶಕ್ತಿಯು ನಿರ್ವಹಿಸುತ್ತಿದೆ, ವ್ಯವಸ್ಥೆಗೊಳಿಸುತ್ತಿದೆ, ಕಾಪಾಡುತ್ತಿದೆ, ಇಲ್ಲಿನ ಸಕಲ ಜೀವರಾಶಿಗಳನ್ನೂ ಸಸ್ಯಸಂಕುಲಗಳನ್ನೂ ರಕ್ಷಿಸುತ್ತಿದೆ ಎಂದು ನಂಬಿದವರು. ಅಂತಹ ಶಕ್ತಿಯನ್ನು ಅವರು ಬೇರೆಬೇರೆ ಹೆಸರುಗಳಿಂದ ಕರೆದರು, ನಂಬಿದರು, ಕೊಂಡಾಡಿದರು, ಪೂಜಿಸಿದರು, ಗೌರವಿಸಿದರು. ದೃಷ್ಟಿಗೋಚರವಾಗದಿದ್ದರೂ ಈ ಲೋಕದ ಪ್ರತಿಯೊಂದು ಸಸ್ಯಗಳಲ್ಲಿ, ಜೀವರಾಶಿಗಳಲ್ಲಿ, ಪ್ರಪಂಚದ ಆಗುಹೋಗುಗಳಲ್ಲಿ  ಶಕ್ತಿಯೊಂದು ಮರೆಯಲ್ಲಿದ್ದು ಕಾರ್ಯವೆಸಗುತ್ತಿದೆ ಎಂಬುದನ್ನು ನಂಬಿ ಬದುಕಿದರು. ಅವರು ಅಂತಹ ಶಕ್ತಿಯನ್ನು ಶ್ರೀವಿಷ್ಣು ಎಂದು ಕರೆದರು. ಆತನೇ ಸವಸ್ತ ವಿಶ್ವಕ್ಕೂ ಮೂಲನೆಂದೂ ಸಕಲ ಜೀವರಾಶಿಗಳಿಗೂ ಸಸ್ಯಸಂಕುಲಗಳಿಗೂ ಶಕ್ತಿಪ್ರದಾಯಕನೆಂದೂ ಸಕಲ ದೇವರಿಗೂ ಒಡೆಯನೆಂದೂ ಪರಿಭಾವಿಸಿದರು.

            ಭಾರತೀಯರು ಹೀಗೆ ನಂಬುವುದಕ್ಕೂ ಸಾಕಷ್ಟು ಕಾರಣಗಳಿವೆ. ಈ ಭೂಮಿ ಮನುಷ್ಯನ ಜೀವಿತಕ್ಕೆ ಮಾತ್ರವಲ್ಲದೆ, ಸಕಲ ಜೀವರಾಶಿಗಳ ಹಾಗೂ ಸಸ್ಯಸಂಕುಲಗಳ ಜೀವಿತಕ್ಕೂ ಅನುಕೂಲಕರವಾಗಿದೆ. ಉಸಿರಾಟಕ್ಕೆ ಗಾಳಿ, ಕುಡಿಯುವುದಕ್ಕೆ ನೀರು, ತಿನ್ನುವುದಕ್ಕೆ ಆಹಾರ ಇವೆಲ್ಲವುಗಳಿಗೂ ಇಲ್ಲಿ ವಿಪುಲ ಅವಕಾಶಗಳು ಕಲ್ಪಿತವಾಗಿವೆ. ಇವೆಲ್ಲವುಗಳನ್ನು ಭೂಮಿಯ ಮೇಲಿನ ಜೀವಿಗಳ, ಸಸ್ಯಸಂಕುಲಗಳ ಅವಶ್ಯಕತೆಗಳಿಗನುಗುಣವಾಗಿ ದೇವನು ಸೃಷ್ಟಿಸಿದ್ದಾನೆ. ಮನುಷ್ಯ ಇವಾವುದನ್ನೂ ತಾನಾಗಿ ಸೃಷ್ಟಿಸಿಕೊಳ್ಳುವುದಕ್ಕೆ ಅಸಮರ್ಥ. ಇವೆಲ್ಲವೂ ಭಗವಂತನ ಲೀಲೆ. ಆತನ ಈ ಲೀಲೆಗಳು ಮನುಷ್ಯನಿಗೆ ಮಾತ್ರವಲ್ಲದೆ ಸಕಲ ಜೀವರಾಶಿಗಳಿಗೂ ಪ್ರಕೃತಿಗೂ ಶಕ್ತಿತುಂಬುತ್ತದೆ, ಭರವಸೆ ನೀಡುತ್ತದೆ, ಮನಸ್ಸಿಗೆ ಸಾಂತ್ವಾನ ನೀಡುತ್ತದೆ. ಹರಿಯುವ ನದಿಗಳು, ಧುಮುಕುವ ಜಲಪಾತಗಳು, ವಿವಿಧ ರೀತಿ-ಆಕಾರಗಳಲ್ಲಿ ಬೆಳೆಯುವ ಗಿಡ, ಮರ, ಬಳ್ಳಿಗಳು, ಬೀಸುವ ತಂಗಾಳಿ,  ಆಗಸದಲ್ಲಿ ರಾರಾಜಿಸುವ ಮೋಡಗಳು, ಸೂರ್ಯೋದಯ ಹಾಗೂ ಸೂರ್ಯಾಸ್ತದ ಅನಿರ್ವಚನೀಯ ಸೊಬಗು-ಇವೆಲ್ಲವೂ ಸಕಲ ಜೀವರಾಶಿಗಳ ಬದುಕಿಗೆ ಸ್ಫೂರ್ತಿಯನ್ನು, ಭರವಸೆಯನ್ನು, ಸಾಂತ್ವಾನವನ್ನು, ಸಮಾಧಾನವನ್ನೂ ನೀಡುತ್ತಲೇ ಇವೆ. ಮತ್ತೆಮತ್ತೆ ಆಕರ್ಷಿಸುತ್ತಲೇ ಇವೆ. ಇವೆಲ್ಲವುಗಳ ಸೃಷ್ಟಿಗೆ ಕಾರಣೀಭೂತನಾದ ವಿಷ್ಣು ಮಾಯಾಲೋಲನಾಗಿರುವುದರಿಂದಲೇ ಇದು ಸಾಧ್ಯವಾಗಿದೆ.  

            ಈ ಭೂಮಿಯ ಮೇಲಿನ ಪ್ರತಿಯೊಂದು ಸೃಷ್ಟಿಯಿಂದಲೂ ಮನುಷ್ಯನ ಮಾತ್ರವಲ್ಲದೆ ಸಕಲ ಜೀವರಾಶಿಗಳ ಬದುಕಿಗೂ ಒಂದು ನೆಲೆ, ಬೆಲೆ, ರಕ್ಷಣೆಗಳು ಪ್ರಾಪ್ತವಾಗಿವೆ. ಇವೆಲ್ಲವನ್ನು ಗಮನಿಸಿಯೇ ಮನುಷ್ಯ ಈ ಲೋಕದಲ್ಲಿ ಅಪೂರ್ವವಾದ, ಅಗೋಚರವಾದ ಒಂದು ಶಕ್ತಿಯಿದೆ, ಅದು ತನ್ನಂತಹ ಜೀವರಾಶಿಯನ್ನು ಕಾಪಾಡುತ್ತಿದೆ, ತನ್ನ ಮಾತ್ರವಲ್ಲದೆ ತನ್ನಂತಹ ಇತರ ಜೀವರಾಶಿಗಳ ಸುಖ, ಸಂತೋಷಗಳಿಗೂ ಬದುಕಿಗೂ ಕಾರಣವಾಗಿದೆ ಎಂಬುದನ್ನು ಅರಿತುಕೊಂಡು, ಅದು ತನ್ನ ಕಣ್ಣಿಗೆ ಗೋಚರಿಸದಿದ್ದರೂ ಮನೋಗೋಚರವಾಗಿರುವುದರಿಂದ ತಾನು ಕೈಗೊಳ್ಳುವ ಪ್ರತಿಯೊಂದು ಕೆಲಸಕಾರ್ಯಗಳ ಆರಂಭದಲ್ಲಿ ಆ ಶಕ್ತಿಗೆ ಕೈಮುಗಿದು ಪ್ರಾರ್ಥಿಸಿ ತನಗೆ ಈ ಲೋಕಕ್ಕೆ ಒಳಿತನ್ನು ಬಯಸುತ್ತಾನೆ. ’’ಲೋಕಾ ಸಮಸ್ತಾ ಸುಖಿನೋ ಭವಂತು” ಎಂಬುದೇ ಆತನ ಪ್ರಾರ್ಥನೆ.

            ಈ ಭೂಮಿಯಲ್ಲಿ ವ್ಯವಸ್ಥೆಯೊಂದು ರೂಢಿಯಾಗಿದೆ. ಅದು ಕಾಲಕಾಲಕ್ಕೆ ಪರಿವರ್ತನೆಗೊಳ್ಳುತ್ತಲೇ ಇದೆ. ಮತ್ತೆ ಮತ್ತೆ ಹೊಸತನವನ್ನು ಪಡೆದುಕೊಳ್ಳುತ್ತಲೇ ಇದೆ. ಸಕಲಜೀವರಾಶಿಗಳ ಬದುಕಿಗೆ ಆಸರೆಯನ್ನು ಕಲ್ಪಿಸುತ್ತಲೇ ಇದೆ. ಈ ಸತ್ಯವನ್ನು ಅರಿತವರಿಗೆ ಇದೊಂದು ಸುಂದರವಾದ, ಹೆಜ್ಜೆಹೆಜ್ಜೆಗೂ ಅಲೌಕಿಕವಾದ ಅನುಭೂತಿಗಳನ್ನು ನೀಡುತ್ತಲೇ ಇದೆ. ಹಾಗಾಗಿಯೇ ಇಲ್ಲಿ ಸಕಲ ಜೀವರಾಶಿಯ ಬದುಕಿಗೆ ನೆಲೆ-ಬೆಲೆಗಳು ಕಲ್ಪಿತವಾಗಿವೆ. ಆದರೆ, ಇಂದಿನ ಆಧುನಿಕಕಾಲದಲ್ಲಿ ಅಗೋಚರವಾದರೂ ಮನೋಗೋಚರವಾಗುವ ಇಂತಹ ಲೋಕವೈಚಿತ್ರ್ಯಗಳ ಬಗ್ಗೆಯಾಗಲೀ ಅವುಗಳನ್ನು ಗೌರವಿಸಬೇಕೆಂಬ ಪ್ರಜ್ಞೆಯಾಗಲೀ ಕಂಡುಬರುತ್ತಿಲ್ಲ. ರೂಢಿಗತ ವ್ಯವಸ್ಥೆಯನ್ನು ಅಧ್ವಾನಮಾಡುವುದು, ನೀರು, ಗಾಳಿ, ಪರಿಸರವನ್ನು ಕೆಡಿಸುವುದು, ತನ್ನ ಸುಖ ಸಂತೋಷಕ್ಕಾಗಿ ಅನ್ಯರ ನೆಮ್ಮದಿಯನ್ನು ಕಸಿದುಕೊಳ್ಳುವುದು ನಿರಂತರ ಕಂಡುಬರುತ್ತಲೇ ಇದೆ. ವಿದ್ಯಾಭ್ಯಾಸ ಹೆಚ್ಚಿದಂತೆ ಬದುಕಿನ ಸೌಲಭ್ಯಗಳು ಹೆಚ್ಚಾಗಿವೆ, ಸಂಪಾದನೆಯೂ ಹೆಚ್ಚಾಗಿದೆ. ಆದರೆ ಲೋಕಜ್ಞಾನ, ತಿಳಿವಳಿಕೆ, ಸಹಬಾಳ್ವೆ, ಸಹಾನುಭೂತಿ, ಅನುಕಂಪ ಮೊದಲಾದ ಮೌಲ್ಯಗಳು ಮರೆಯಾಗುತ್ತಿವೆ. ಇವೆಲ್ಲವುಗಳ ಪರಿಣಾಮವೇ ಜೀವಹಾನಿ, ಆಸ್ತಿಪಾಸ್ತಿಹಾನಿ, ನೆಮ್ಮದಿಯ ಹಾನಿ. ಮಂಕುತಿಮ್ಮನ ಕಗ್ಗದ ಈ ಸಾಲುಗಳು ತತ್ಕಾಲಕ್ಕೆ ಮಾತ್ರವಲ್ಲ ಸರ್ವಕಾಲಕ್ಕೂ ಎಚ್ಚರಿಕೆಯ ಸಂದೇಶಗಳಾಗಿವೆ. ನಾಸ್ತಿಕರಾದವರೂ ಪ್ರಕೃತಿಯಲ್ಲಿನ ಅಗೋಚರವಾದ, ಅಪೂರ್ವವಾದ ಶಕ್ತಿಯನ್ನು ಒಪ್ಪಿಕೊಳ್ಳುವಂತೆ ವಿಶ್ವದಲ್ಲಿನ ಈ ಅಗೋಚರಶಕ್ತಿಗೆ ಶ್ರದ್ಧೆಯಿಂದ, ಭಕ್ತಿಯಿಂದ, ಗೌರವದಿಂದ ನಮಿಸುತ್ತಾ ಈ ನಾಡಿನ ಒಳಿತಿಗಾಗಿ, ಏಳಿಗೆಗಾಗಿ, ಸಮೃದ್ಧಿಗಾಗಿ ನಮ್ಮ ಅಭಿರುಚಿಗಳನ್ನು, ಆಸೆ-ಆಶೋತ್ತರಗಳನ್ನು, ನಿಲುವುಗಳನ್ನು, ಕಾರ್ಯಭಾರವನ್ನು ಮತ್ತೆ ಮತ್ತೆ ಪರಾಮರ್ಶಿಸಬೇಕಾದುದು ನಮ್ಮೆಲ್ಲರ ಕರ್ತವ್ಯ.

ಡಾ. ವಸಂತ್ ಕುಮಾರ್, ಉಡುಪಿ

*****

Leave a Reply

Your email address will not be published. Required fields are marked *