ಸಾಹಿತ್ಯಾನುಸಂಧಾನ

heading1

ಮುಳ್ಳಿಡಿದ ಮರವೇರಿದಂತಾದುದು-ಲಕ್ಷ್ಮೀಶ -ಭಾಗ-೧

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಬಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ. (ಭಾಗ-೧)

 

ಕಾಲಿಡಲ್ಕಾ ಶಿಲೆಯೊಳಾ ತುರಂಗದ ಖುರಂ

ಕೀಲಿಸಿತು ಭಿನ್ನಿಸದೆ ಕೂಡೆ ಬೆಚ್ಚಂದದಿಂ

ಮೇಲೆ ನಡೆಗೆಟ್ಟು ನಿಂದುದು ದರಿದ್ರನ ಮನೋರಥದಂತೆ ನಿಜ ತನುವಿನ

ಲೀಲೆಯಡಗಿರ್ದುದಾಕೃತಿಯ ಭಂಜಿಕೆಯೆನಲ್

ಭೂಲೋಲ ಕೇಳೈಕ್ಯಮಾಗಿರ್ದುದಾ ಕಲ್ಲೊ

ಳಾ ಲಲಿತ ವಾಜಿ ಪೂರ್ಣೇಂದುಮಂಡಲದೊಳೊಪ್ಪುವ  ಮೃಗಾಂಕದ ತೆರದೊಳು  ೧

ಪದ್ಯದ ಅನ್ವಯಕ್ರಮ:

ಭೂಲೋಲ ಕೇಳ್,  ಆ ಶಿಲೆಯೊಳ್ ಕಾಲಿಡಲ್ ಆ ತುರಂಗದ ಖುರಂ ಕೀಲಿಸಿತು, ದರಿದ್ರನ ಮನೋರಥದಂತೆ ಭಿನ್ನಿಸದೆ ಕೂಡೆ ಬೆಚ್ಚರದಿಂ ಮೇಲೆ ನಡೆ ಕೆಟ್ಟು ನಿಂದುದು, ಆ ಕೃತಿಯ ಭಂಜಿಕೆ ನಿಜ ತನುವಿನ ಲೀಲೆಯು ಅಡಗಿ ಇರ್ದುದು ಎನಲ್ ಆ ಲಲಿತ ವಾಜಿ ಪೂರ್ಣ ಇಂದುಮಂಡಲದೊಳ್ ಒಪ್ಪುವ ಮೃಗಾಂಕದ ತೆರದೊಳು ಐಕ್ಯಂ ಆಗಿ ಇರ್ದುದು.  

ಪದ-ಅರ್ಥ:

ಕಾಲಿಡಲ್-ಕಾಲನ್ನು ಊರಿದಾಗ;  ತುರಂಗ-ಕುದುರೆ;  ಖುರಂ-ಕುದುರೆಯ ಕಾಲಿನ ಗೊರಸು;  ಕೀಲಿಸು-ಬಿಗಿದುಕಟ್ಟು;  ಭಿನ್ನಿಸದೆ-ಕೀಳಲಾರದೆ;  ಕೂಡೆ-ಚೆನ್ನಾಗಿ;  ಬೆಚ್ಚಂದದಿಂ-ಬೆಚ್ಚಿಕೊಂಡು;  ನಡೆಗೆಟ್ಟು-ನಡೆಯಲಾರದೆ;  ದರಿದ್ರನ-ಬಡವನ, ಗತಿಯಿಲ್ಲದವನ;  ಮನೋರಥದಂತೆ-ಬಯಕೆಯಂತೆ, ಇಷ್ಟಾರ್ಥದಂತೆ;  ನಿಜ-ತನ್ನ;  ತನು-ದೇಹ;  ಲೀಲೆ-ಕ್ರಿಯೆ, ಚಟುವಟಿಕೆ;  ಅಡಗಿರ್ದುದು-ನಿಂತುಹೋಯಿತು;  ಭಂಜಿಕೆ-ಗೊಂಬೆ;    ಭೂಲೋಲ-ರಾಜ(ಅರ್ಜುನ);  ಐಕ್ಯಮಾಗಿರ್ದುದು-ಸೇರಿಕೊಂಡಿತು;  ಪೂರ್ಣೇಂದುಮಂಡಲ-ಪೂರ್ಣಚಂದ್ರ;  ಒಪ್ಪುವ-ಶೋಭಿಸುವ;  ಮೃಗಾಂಕ-ಜಿಂಕೆಯ ರೂಪ, ಮೃಗದ ರೂಪ.

ಅರ್ಜುನನೇ ಕೇಳು, ಕುದುರೆಯು ಆ ಶಿಲೆಯ ಮೇಲೆ ತನ್ನ ಗೊರಸನ್ನು ಊರಿದೊಡನೆಯೇ ಅದರ ಕಾಲುಗಳು ಅಲ್ಲಿಯೇ ಬಿಗಿದುಕಟ್ಟಿದಂತಾದವು. ಗತಿಯಿಲ್ಲದವನ ಬಯಕೆಯಂತೆ ಅದು ತನ್ನ ಕಾಲುಗಳನ್ನು ಅಲ್ಲಿಂದ ಕೀಳಲಾರದೆ ಅಲ್ಲಿಂದ ಮುಂದಕ್ಕೆ ನಡೆಯಲಾರದೆ ನಿಂತುಕೊಂಡಿತು. ತನ್ನ ದೇಹದ ಚಟುವಟಿಕೆಯೇ  ನಿಂತುಹೋದ (ತಟಸ್ಥವಾದ) ಒಂದು ಗೊಂಬೆಯಂತಾಗಿ ಅದು ಪೂರ್ಣಚಂದ್ರನಲ್ಲಿ ಐಕ್ಯವಾಗಿ ಶೋಭಿಸುವ ಜಿಂಕೆಯ ರೂಪದಂತೆ ಕುದುರೆಯು ಶಿಲೆಯ ಮೇಲೆ ಶೋಭಿಸಿತು.

(ಅರ್ಜುನನೇ ಕೇಳು, ಮುಂದೆ ಹೋಗುತ್ತಿದ್ದ ಯಾಗದ ಕುದುರೆಯು ಏಕಾಏಕಿ ದಾರಿಯಲ್ಲಿರುವ ಒಂದು ಶಿಲೆಯ ಮೇಲೆ ತನ್ನ ಕಾಲುಗಳನ್ನು ಊರಿದೊಡನೆಯೇ ಅದು ತಟಸ್ಥವಾಯಿತು. ಮಾತ್ರವಲ್ಲದೆ, ಶಿಲೆಯ ಮೇಲೆ ಊರಿದ ತನ್ನ ಗೊರಸನ್ನು ಕಿತ್ತು ಮುಂದಡಿಯಿಡಲಾರದೆ ಅಲ್ಲಿಯೇ ಸ್ಥಿರವಾಯಿತು. ಅದರ ಕಾಲುಗಳನ್ನು ಅಲ್ಲಿಯೇ ಬಿಗಿದುಕಟ್ಟಿದಂತಾಯಿತು. ಬಡವ ಅಥವಾ ಗತಿಯಿಲ್ಲದವನೊಬ್ಬ ತಾನು ಎಷ್ಟು ಬಯಕೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡರೂ ಅವುಗಳನ್ನು ಈಡೇರಿಸಿಕೊಳ್ಳುವುದಕ್ಕೆ ಎಷ್ಟೇ ಪ್ರಯತ್ನಪಟ್ಟರೂ ಅವು ಯಾವುದೂ ಈಡೇರದೆ ಹಾಗೆಯೇ ಸ್ಥಿರಗೊಳ್ಳುವ ಹಾಗೆ ಕುದುರೆಯು ಶಿಲೆಯ ಮೇಲಿಂದ ತನ್ನ ಕಾಲುಗಳನ್ನು ಕೀಳುವುದಕ್ಕೆ ಮಾಡಿದ ಯಾವ ಪ್ರಯತ್ನಗಳೂ ಸಫಲವಾಗದೆ ಕುದುರೆ ಅಲ್ಲಿಯೇ ತಟಸ್ಥವಾಗಬೇಕಾಯಿತು. ಮುಂದಡಿಯಿಡುವ ಅದರ ಎಲ್ಲಾ ಪ್ರಯತ್ನಗಳೂ ವಿಫಲವಾದವು. ಅದು ತನ್ನ ದೇಹದ ಎಲ್ಲಾ ಚಟುವಟಿಕೆಗಳನ್ನು ಕಳೆದುಕೊಂಡು ಶಿಲೆಯ ಗೊಂಬೆಯಂತಾಯಿತು. ಇನ್ನೊಂದು ರೀತಿಯಿಂದ ಹೇಳಬೇಕೆಂದರೆ, ಪೂರ್ಣಚಂದ್ರನಲ್ಲಿ ಐಕ್ಯವಾಗಿ ಶೋಭಿಸುವ ಜಿಂಕೆಯ ರೂಪದಂತೆ ಕುದುರೆಯು ಶಿಲೆಯ ಮೇಲೆ ಐಕ್ಯವಾಗಿದೆಯೇನೋ ಎಂಬಂತೆ ಕಾಣಿಸತೊಡಗಿತು.) 

 

ಗಾಳಿಯಂ ಮಿಕ್ಕು ನಡೆವಾ ಹಯಂ ಕಾಲ್ಗಳಂ

ಕೀಳಲಾರದೆ ನಿಂದುಧರೆಯೊಳೇನಚ್ಚರಿಯೊ

ಪೇಳಬೇಕೆಂದು ಚರರೈತಂದು ಪಾರ್ಥಂಗೆ ಕೈಮುಗಿದು ಬಿನ್ನೈಸಲು

ಕೇಳಿ ವಿಸ್ಮಿತನಾಗಿ ಬಂದು ನೋಡಿದನಲ್ಲಿ

ಗಾಳನಟ್ಟಿದನಬ್ಬರಿಸಿ ಸೆಳೆಗಳಿಂದ ಪೊ

ಯ್ದೇಳಿಸಿದೊಡದು ವಜ್ರ ಲೇಪವಾದುದು ಸಿಕ್ಕಿತಾ ಕುದುರೆ ಕಲ್ಲೆಡೆಯೊಳು  ೨

ಪದ್ಯದ ಅನ್ವಯಕ್ರಮ:

ಗಾಳಿಯಂ ಮಿಕ್ಕು ನಡೆವ ಆ ಹಯಂ ಕಾಲ್ಗಳಂ ಕೀಳಲ್ ಆರದೆ ಧರೆಯೊಳು ನಿಂದುದು, ಏನ್ ಅಚ್ಚರಿಯೊ ಪೇಳಬೇಕು ಎಂದು ಚರರ್ ಐತಂದು ಪಾರ್ಥಂಗೆ ಕೈಮುಗಿದು ಬಿನ್ನೈಸಲು, ಕೇಳಿ ವಿಸ್ಮಿತನ್ ಆಗಿ ಬಂದು ನೋಡಿದನ್ ಅಲ್ಲಿ ಗಾಳನ್ ಅಟ್ಟಿದನ್, ಅಬ್ಬರಿಸಿ ಸೆಳೆಗಳಿಂದ ಪೊಯ್ದು ಏಳಿಸಿದೊಡೆ ಅದು ವಜ್ರಲೇಪ ಆದುದು ಆ ಕುದುರೆ ಕಲ್ಲ ಎಡೆಯೊಳು ಸಿಕ್ಕಿತು.

ಪದ-ಅರ್ಥ:

ಗಾಳಿಯಂ ಮಿಕ್ಕು-ಗಾಳಿಯನ್ನೂ ಮೀರಿಸಿ;  ನಡೆವಾ-ನಡೆಯುವ;  ಹಯ-ಕುದುರೆ;  ಕೀಳಲಾರದೆ-ಎತ್ತಿ ಮುಂದಿಡಲಾರದೆ;  ಧರೆಯೊಳು-ಭೂಮಿಯ ಮೇಲೆ; ಕಲ್ಲಿನ ಮೇಲೆ;   ಚರರ್-ಗೂಢಚಾರರು;  ಐತಂದು-ಆಗಮಿಸಿ;  ಬಿನ್ನೈಸು-ವಿವರಿಸು;  ಗಾಳನಟ್ಟಿದನ್ –ತಂತ್ರವನ್ನು ಹೂಡಿದನು;  ಸೆಳೆ-ಬೆತ್ತ;  ಪೊಯ್ದು-ಹೊಡೆದು;  ಏಳಿಸಿದೊಡೆ-ಎಬ್ಬಿಸಿದಾಗ;  ವಜ್ರಲೇಪ-ವಜ್ರದ ಲೇಪದಂತಿರುವುದು, ಇದ್ದಲ್ಲಿಯೇ ಗಟ್ಟಿಯಾಗುವುದು;  ಸಿಕ್ಕಿತು-ಸಿಕ್ಕಿಹಾಕಿಕೊಂಡಿತು;  ಕಲ್ಲೆಡೆ-ಕಲ್ಲಿನ ನಡುವೆ.  

ಗಾಳಿಯ ವೇಗವನ್ನೂ ಮೀರಿಸಿ ಓಡುವ ಕುದುರೆಯು ಶಿಲೆಯ ಮೇಲೆ ಊರಿದ ಕಾಲುಗಳನ್ನು ಎತ್ತಿ ಮುಂದಿಡಲಾರದೆ ಕಲ್ಲಿನ ಮೇಲೆ ತಟಸ್ಥವಾದುದು ಭೂಮಿಯಲ್ಲಿ ಆಶ್ಚರ್ಯಕರವೆನಿಸಿತು. ಇದನ್ನು ಕಂಡ ಅರ್ಜುನನ ಗೂಢಚಾರರು ಆಶ್ಚರ್ಯಚಕಿತರಾಗಿ ಅರ್ಜುನನಲ್ಲಿಗೆ ಬಂದು ವಿವರಿಸಿದಾಗ ಅರ್ಜುನನೂ ಆಶ್ಚರ್ಯಚಕಿತನಾಗಿ ಬಂದು ನೋಡಿದನು. ವಿವಿಧ ತಂತ್ರಗಳನ್ನು ಹೂಡಿ, ಬೊಬ್ಬೆಹಾಕಿ, ಬೆತ್ತಗಳಿಂದ ಹೊಡೆದು ಕುದುರೆಯನ್ನು ಶಿಲೆಯಿಂದ ಎಬ್ಬಿಸಲು ಪ್ರಯತ್ನಿಸಿದರೂ ಅದು ಕೀಳಲಾರದ ವಜ್ರಲೇಪದಂತೆ ಶಿಲೆಯ ನಡುವೆ ಇನ್ನಷ್ಟು ಸ್ಥಿರಗೊಂಡಿತು.

(ಕುದುರೆಯ ಬೆಂಗಾವಲಿಗಿದ್ದ ಅರ್ಜುನನ ಸೈನಿಕರಿಗೆ ಕುದುರೆಯ ಈ ಸ್ಥಿತಿ ಪರಮ ಆಶ್ಚರ್ಯಕರವೆನಿಸಿತು. ಯಾಗದ ಕುದುರೆ ಸಾಮಾನ್ಯವಾದುದಲ್ಲ. ಅದು ಗಾಳಿಯ ವೇಗವನ್ನೂ ಮೀರಿಸಿ ಓಡಬಲ್ಲ, ಅತ್ಯಂತ ಶಕ್ತಿಶಾಲಿಯಾದ ಕುದುರೆ. ಅದನ್ನು ಹಿಡಿದು ಕಟ್ಟಿಹಾಕುವುದೇ ಸುಲಭಸಾಧ್ಯವಲ್ಲ, ಹಾಗಿರುವಾಗ ಕೇವಲ ಬಂಡೆಯೊಂದನ್ನು ಏರಿದೊಡನೆಯೇ ಅದು ಅಲ್ಲಿಯೇ ಸ್ಥಿರಗೊಳ್ಳುವುದಕ್ಕೆ ಕಾರಣಗಳೇನು? ತನ್ನ ಕಾಲುಗಳನ್ನು ಬಂಡೆಯ ಮೇಲಿಂದ ಎತ್ತಿ ಮುಂದಡಿಯಿಡಲಾರದೆ ಒದ್ದಾಡುವುದಕ್ಕೆ ಕಾರಣಗಳೇನು? ಎಂಬ ಆಶ್ಚರ್ಯಕರವಾದ ಹಾಗೂ ಕುತೂಹಲಕಾರಿಯಾದ ಸವಾಲುಗಳು ಅವರ ಮನಸ್ಸಿನಲ್ಲಿ ಮೂಡಿದವು. ಅವರು ಅದುವರೆಗೆ ಅಂತಹ ಘಟನೆಗಳನ್ನು ನೋಡಿರಲಿಲ್ಲ. ಒಡನೆಯೇ ಅರ್ಜುನನ ಗೂಢಚಾರರು ಇದೆಲ್ಲವನ್ನೂ ನೋಡಿ ಅರ್ಜುನಲ್ಲಿಗೆ  ಬಂದು ಕುದುರೆಯ ಸ್ಥಿತಿಯನ್ನು, ಅದು ಬಂಡೆಯ ಮೇಲೆ ಸ್ಥಿರವಾದುದನ್ನು ವಿವರಿಸಿದರು. ಅದೆಲ್ಲವನ್ನೂ ಕೇಳಿದ ಅರ್ಜುನನಿಗೂ ಆಶ್ಚರ್ಯವೂ ಕುತೂಹಲವೂ ಉಂಟಾಗಿ ಆತ ಸ್ವತಃ ಅಲ್ಲಿಗೆ ಬಂದು ಕುದುರೆಯನ್ನು ಪರಿಶೀಲಿಸಿದನು. ತನ್ನ ಪಡೆಯ ವೀರರ ಮೂಲಕ ವಿವಿಧ ತಂತ್ರಗಳನ್ನು ಹೂಡಿ ಕುದುರೆಯನ್ನು ಅಲ್ಲಿಂದ ಹೊರಡಿಸುವ ಸಕಲ ಪ್ರಯತ್ನಗಳನ್ನು ಮಾಡಿಸಿದನು. ಆದರೂ ಕುದುರೆ ಮಿಸುಕಾಡಲಿಲ್ಲ. ಬೆತ್ತಗಳಿಂದ ಹೊಡೆಸಿದಾಗಲೂ ಅಲುಗಾಡದೆ ವಜ್ರಲೇಪದ ಹಾಗೆ ಶಿಲೆಯ ನಡುವೆ ತಟಸ್ಥವಾಯಿತು.)

 

ಬಳಿಕ ಚಿಂತಿಸಿದನರ್ಜುನನಿದೇನಾದೊಡಂ

ಮುಳಿದ ಮುನಿಪನ ಶಾಪಮಾಗಬೇಕೀ ವನ

ಸ್ಥಳದೊಳಾಶ್ರಮಮುಂಟೆ ನೋಳ್ಪುದಗಲದೊಳೆಂದು ಚಾರರಂ ಕಳುಹಲವರು

ತೊಳಲಿ ನಿಮಿಷದೊಳರಸಿ ಬಂದು ಬಿನ್ನೈಸಲ್ಕೆ

ಫಲುಗುಣಂ ಪ್ರದ್ಯುಮ್ನ ವೃಷಕೇತು ಸಾಲ್ವಪತಿ

ಕಲಿ ಯೌವನಾಶ್ವ ನೀಲಧ್ವಜರನೈವರಂ ಕೂಡಿಕೊಂಡೈತಂದನು  ೩

ಪದ್ಯದ ಅನ್ವಯಕ್ರಮ:

ಬಳಿಕ ಅರ್ಜುನನ್ ಚಿಂತಿಸಿದನ್, ಇದೇನ್ ಆದೊಡಂ ಮುಳಿದ ಮುನಿಪನ ಶಾಪಂ ಆಗಬೇಕು, ಈ ವನಸ್ಥಳದೊಳ್ ಆಶ್ರಮವು ಉಂಟೆ? ಅಗಲದೊಳು ನೋಳ್ಪುದು ಎಂದು ಚಾರರಂ ಕಳುಹಲ್ ಅವರು ತೊಳಲಿ ನಿಮಿಷದೊಳ್ ಅರಸಿ ಬಂದು  ಬಿನ್ನೈಸಲ್ಕೆ ಫಲುಗುಣಂ, ಪ್ರದ್ಯುಮ್ನ, ವೃಷಕೇತು, ಸಾಲ್ವಪತಿ, ಕಲಿ ಯೌವನಾಶ್ವ, ನೀಲಧ್ವಜರನ್ ಐವರಂ ಕೂಡಿಕೊಂಡು ಅಯ್ತಂದನು.

ಪದ-ಅರ್ಥ:

ಚಿಂತಿಸಿದನ್-ಯೋಚಿಸಿದನು;  ಮುಳಿದ-ಸಿಟ್ಟಾದ, ಕೋಪಗೊಂಡ;  ಮುನಿಪ-ಋಷಿ;  ನೋಳ್ಪುದಗಲದೊಳು-ಉದ್ದಗಲಕ್ಕೂ ಹುಡುಕಬೇಕು;  ಚಾರರಂ-ಗೂಢಚಾರರನ್ನು; ಕಳುಹಲ್-ಕಳುಹಿಸಿಕೊಡಲು;  ತೊಳಲಿ-ಶೋಧಿಸಿ;  ಅರಸಿ-ಹುಡುಕಿ;  ಬಿನ್ನೈಸಲ್ಕೆ-ನಿವೇದಿಸಲು; ಫಲುಗುಣ-ಅರ್ಜುನ;  ಪ್ರದ್ಯುಮ್ನ-ಕೃಷ್ಣ ಹಾಗೂ ರುಕ್ಮಿಣಿಯರ ಮಗ;  ವೃಷಕೇತು-ಕರ್ಣನ ಮಗ;  ಸಾಲ್ವಪತಿ-ಪಾಂಡವ ಪಕ್ಷದ ಒಬ್ಬ ಸೇನಾನಿ;  ನೀಲಧ್ವಜ-ಮಾಹಿಷ್ಮತಿ ನಗರದ ರಾಜ;  ಅಯ್ತಂದನು-ಆಗಮಿಸಿದನು.

ಶಿಲೆಯ ಮೇಲೆ ಕಾಲಿರಿಸಿದ ಕುದುರೆಯು ಅಲುಗಾಡದಿದ್ದಾಗ ಅರ್ಜುನನು ಯೋಚಿಸಿದನು. ಇದೇನಾದರೂ ಕುಪಿತನಾದ ಮುನಿಯೊಬ್ಬನ ಶಾಪವಾಗಿರಬಹುದೆ? ಈ ಅರಣ್ಯದಲ್ಲಿ ಯಾವುದಾದರೂ ಮುನಿಯ ಆಶ್ರಮವಿದೆಯೇ? ಸುತ್ತಮುತ್ತಲಿನ ಪ್ರದೇಶಗಳನ್ನು ಹುಡುಕಿ ನೋಡಿ ಎಂದು ಅರ್ಜುನ ಆಜ್ಞಾಪಿಸಿದಾಗ ಆತನ ಸೇವಕರು ಸುತ್ತಮುತ್ತಲಿನ ಪ್ರದೇಶವನ್ನು ಹುಡುಕಿಕೊಂಡು ಬಂದು ಅರಣ್ಯದೊಳಗೊಂದು ಆಶ್ರಮವಿರುವುದನ್ನು ಅರ್ಜುನನಿಗೆ ನಿವೇದಿಸಿದರು. ಅವರ ಮಾತುಗಳನ್ನು ಕೇಳಿದ ಅರ್ಜುನನು ತನ್ನ ಕಡೆಯ ವೀರರಾದ ಪ್ರದ್ಯುಮ್ನ, ವೃಷಕೇತು, ಸಾಲ್ವಪತಿ, ಯೌವನಾಶ್ವ, ನೀಲಧ್ವಜ ಮೊದಲಾದ ಐದು ಮಂದಿಯನ್ನು ಕೂಡಿಕೊಂಡು ಆ ಆಶ್ರಮಕ್ಕೆ ಆಗಮಿಸಿದನು.

(ಶಿಲೆಯ ಮೇಲೆ ಅಲುಗಾಡದೆ ಸ್ಥಿರಗೊಂಡಿರುವ ಯಾಗದ ಕುದುರೆಯನ್ನು ಕಂಡು ಅರ್ಜುನನಿಗೆ ಆಶ್ಚರ್ಯವೂ ಆಘಾತವೂ ಆಯಿತು.  ಜೊತೆಗೆ ಅದನ್ನು ಅಲ್ಲಿಂದ ಹೊರಡಿಸದಿದ್ದರೆ ತಮ್ಮ ದಿಗ್ವಿಜಯ ಪೂರ್ಣಗೊಳ್ಳಲಾರದು. ಪೂರ್ಣಗೊಳ್ಳದೆ ತಾವು ಅದುವರೆಗೆ ಮಾಡಿದ ಎಲ್ಲಾ ಶ್ರಮಗಳೂ ವ್ಯರ್ಥವಾಗುತ್ತವೆ. ಏನಾದರೂ ಉಪಾಯವನ್ನು ಮಾಡಲೇಬೇಕೆಂದು ಯೋಚಿಸಿದನು. ಶಿಲೆಯ ಮೇಲೆ ಕುದುರೆಯು ಹತ್ತಿದೊಡನೆಯೇ ಅದು ತಟಸ್ಥವಾಗಬೇಕಾದರೆ ಆ ಸ್ಥಳ ಅಥವಾ ಆ ಶಿಲೆಯು ಯಾವುದಾದರೂ ಮುನಿಯ ಶಾಪಕ್ಕೆ ಗುರಿಯಾಗಿರಬೇಕು. ಇಲ್ಲದಿದ್ದಲ್ಲಿ ಇಂತಹ ಪ್ರಸಂಗವು ಸಂಭವಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಆ ಪ್ರದೇಶದ ಸುತ್ತಮುತ್ತಲಲ್ಲಿ ಯಾವುದಾದರೂ ಮುನಿಯ ಆಶ್ರಮವಿರಬೇಕು, ಅವರಿಗೆ ಈ ಶಿಲೆಯ ಸಕಲ ವಿಚಾರಗಳೂ ತಿಳಿದಿರಬಹುದು ಎಂದು ಯೋಚಿಸಿ ಕೂಡಲೇ ತನ್ನ ಸೇವಕರಿಗೆ ಆಜ್ಞಾಪಿಸಿದನು. ಅವರು ಕಾಡಿನ ಉದ್ದಗಲಕ್ಕೂ ಓಡಾಡಿಕೊಂಡು ಕೆಲವೇ ಹೊತ್ತಿನಲ್ಲಿ ಬಂದು ಅರ್ಜುನನಿಗೆ ತಾವು ಕಂಡುಹುಡುಕಿದ ಮುನಿಯ ಆಶ್ರಮ ಹಾಗೂ ಇತರ ವಿಷಯಗಳನ್ನು ತಿಳಿಸಿದರು. ಇದರಿಂದ ಅರ್ಜುನನ ಮನಸ್ಸಿನಲ್ಲಿನ ಪ್ರಶ್ನೆಗಳಿಗೆ ಸ್ವಲ್ಪ ಸಮಾಧಾನ ಸಿಕ್ಕಿದಂತಾಯಿತು. ಅವನು ತನ್ನ ಕಡೆಯ ವೀರರಾದ ಪ್ರದ್ಯುಮ್ನ, ವೃಷಕೇತು, ಸಾಲ್ವಪತಿ, ಯೌವನಾಶ್ವ ಹಾಗೂ ನೀಲಧ್ವಜರನ್ನು ಕೂಡಿಕೊಂಡು ತನ್ನ ಸೇವಕರು ತಿಳಿಸಿದ ಮುನಿಯ ಆಶ್ರಮಕ್ಕೆ ಆಗಮಿಸಿದನು.)

 

ಸುಡದಿರ್ದ ಪಾವಕನೊ ಬಿಸಿ ಮಾಣ್ದ ರವಿಯೊ ತಂ

ಪಿಡಿದಿರದ ಚಂದ್ರಮನೊ ವಿಷಕಂಠನಾಗದಿಹ

ಮೃಡನೊ ರಜಮಂ ಪೊರ್ದದಂಬುಜಾಸನನೊ ಫಣಿತಲ್ಪನಲ್ಲದ ವಿಷ್ಣುವೊ

ಕಡುತೇಜದೊಬ್ಬುಳಿಯೊ ಶಾಂತಿಯ ನಿಜಾಕಾರ

ದೊಡಲೊ ಪೇಳೆಂಬ ಸೌಭರಿಮುನಿಪನಾಶ್ರಮದ

ನಡುವೆ ಕುಳ್ಳಿರ್ದು ಸುಖಯೋಗದೊಳಿರಲ್ಕೆ ನಡೆತಂದರ್ಜುನಂ ಕಂಡನು  ೪

ಪದ್ಯದ ಅನ್ವಯಕ್ರಮ:

ಸುಡದೆ ಇರ್ದ ಪಾವಕನೊ, ಬಿಸಿ ಮಾಣ್ದ ರವಿಯೊ, ತಂಪಿಡಿದು ಇರದ ಚಂದ್ರಮನೊ, ವಿಷಕಂಠನಾಗದೆ ಇಹ ಮೃಡನೊ, ರಜಮಂ ಪೊರ್ದದ ಅಂಜುಜಾಸನನೊ, ಫಣಿತಲ್ಪನಲ್ಲದ ವಿಷ್ಣುವೊ, ಕಡುತೇಜದ ಒಬ್ಬುಳಿಯೊ, ಶಾಂತಿಯ ನಿಜಾಕಾರದ ಒಡಲೊ, ಪೇಳ್ ಎಂಬ ಸೌಭರಿಮುನಿಪನ್ ಆಶ್ರಮದ ನಡುವೆ ಕುಳ್ಳಿರ್ದು ಸುಖಯೋಗದೊಳ್ ಇರಲ್ಕೆ ನಡೆತಂದು ಅರ್ಜುನಂ ಕಂಡನು.

ಪದ-ಅರ್ಥ:

ಸುಡದಿರ್ದ-ಸುಡದೇ ಇರುವ;  ಪಾವಕ-ಬೆಂಕಿ, ಅಗ್ನಿ;  ಮಾಣ್ದ-ಸುಮ್ಮನಿರುವ;  ರವಿಯೊ-ಸೂರ್ಯನೊ;  ತಂಪಿಡಿದಿರದ-ತಂಪನ್ನು ಹೊಂದುವುದಕ್ಕೆ ಮರೆತುಬಿಟ್ಟ;  ಚಂದ್ರಮ-ಚಂದ್ರ;  ವಿಷಕಂಠನಾಗದಿಹ-ವಿಷಕಂಠವನ್ನೇ ಹೊಂದಿರದ;  ಮೃಡ-ಶಿವ;  ರಜಮಂ-ಪರಾಗವನ್ನು;  ಪೊರ್ದದ-ಹೊಂದದ, ಧರಿಸದ; ಅಂಜುಜಾಸನ-ಬ್ರಹ್ಮ(ತಾವರೆಯನ್ನು ಆಸನವಾಗಿ ಉಳ್ಳವನು);  ಫಣಿತಲ್ಪನಲ್ಲದ-ಹಾವಿನ ಹಾಸಿಗೆಯನ್ನು ಹೊಂದದಿರುವ;  ಕಡುತೇಜ-ಅತಿಯಾದ ಪ್ರಕಾಶ;  ಒಬ್ಬುಳಿ-ಗುಂಪು;  ಶಾಂತಿಯ ನಿಜಾಕಾರದೊಡಲ್-ಶಾಂತಿಯ ಆಕಾರವನ್ನು ಹೊಂದಿದ ಶರೀರ;  ಸೌಭರಿಮುನಿ-ನೀರಿನಲ್ಲಿ ತಪಸ್ಸು ಮಾಡಿ ಖ್ಯಾತಿಯನ್ನು ಹೊಂದಿದ ಒಬ್ಬ ಮುನಿ;  ಸುಖಯೋಗ-ಸಂತೋಷವನ್ನು ಹೊಂದುವ ಸ್ಥಿತಿ.   

ಸುಡುವ ತನ್ನ ಶಕ್ತಿಯನ್ನು ಕಳೆದುಕೊಂಡು ತಣ್ಣಗಾಗಿರುವ ಅಗ್ನಿಯೋ, ತನ್ನ ಶಾಖವನ್ನು ಕಳೆದುಕೊಂಡಿರುವ ಸೂರ್ಯನೋ, ತಂಪನ್ನು ಬೀರುವುದಕ್ಕೆ ಮರೆತುಬಿಟ್ಟಿರುವ ಚಂದ್ರನೋ, ವಿಷಕಂಠ ಎನಿಸದೆ ಇರುವ ಶಿವನೋ, ತಾವರೆಯ ಪರಾಗವನ್ನು ಸ್ಪರ್ಶಿಸದೇ ಇರುವ ಬ್ರಹ್ಮನೋ, ಶೇಷಶಯನವನ್ನು ಬಿಟ್ಟುಬಿಟ್ಟಿರುವ ವಿಷ್ಣುವೋ, ಅತಿಯಾದ ಪ್ರಕಾಶವನ್ನು ಹೊಂದಿರುವ ಗುಂಪೋ, ಶಾಂತಿಯನ್ನೇ ದೇಹವನ್ನಾಗಿ ಪಡೆದಿರುವ ಆಕಾರವೋ  ಎನ್ನುವಂತೆ ಆಶ್ರಮದಲ್ಲಿ ಧ್ಯಾನಸ್ಥನಾಗಿ ಸುಖಯೋಗದಲ್ಲಿ ತಲ್ಲೀನನಾಗಿರುವ ಸೌಭರಿಮುನಿಯನ್ನು ಅರ್ಜುನನು ನೋಡಿದನು.

(ಯಾಗದ ಕುದುರೆಯು ಶಿಲೆಯ ಮೇಲೆ ತಟಸ್ಥಗೊಂಡ ತರುವಾಯ ಅರ್ಜುನನ ಸಹಚರರು ಅಲ್ಲೇ ಸನಿಹದಲ್ಲಿರುವ ಋಷಿ ಆಶ್ರಮವೊಂದನ್ನು ಕಂಡರು. ಅರ್ಜುನನು ತನ್ನವರೊಡಗೂಡಿಕೊಂಡು ಹೋಗಿ ನೋಡಿದಾಗ ಅಲ್ಲಿ ಒಬ್ಬ ಋಷಿಯು ಧ್ಯಾನಾಸಕ್ತನಾಗಿ ಸುಖಯೋಗದಲ್ಲಿರುವುದನ್ನು ಕಂಡನು. ಆ ಋಷಿಯ ತಪಸ್ಸಿನ ಸ್ಥಿತಿ ಹೇಗಿತ್ತೆಂದರೆ, ಅಗ್ನಿಯು ಸುಡುವ ತನ್ನ ಸಹಜಗುಣವನ್ನು ತ್ಯಜಿಸಿ ತಣ್ಣಗಾಗಿರುವಂತಿತ್ತು. ಅತ್ಯಂತ ತೀಕ್ಷ್ಣವಾದ ಪ್ರಕಾಶವನ್ನು ಬೀರುವ ಸೂರ್ಯನು ತನ್ನ ತೀಕ್ಷ್ಣತೆಯನ್ನು ತ್ಯಜಿಸಿ ತಂಪನ್ನು ಪಡೆದುಕೊಂಡಂತಿತ್ತು. ತನ್ನ ತಂಪಾದ ಕಿರಣಗಳನ್ನು ಪಸರಿಸಿ ಭೂಮಿಗೆ ತಂಪನ್ನು ನೀಡುವುದನ್ನೇ ಮರೆತ ಚಂದ್ರನಂತಿತ್ತು. ಹಾಲಾಹಲವನ್ನುಂಡು ವಿಷಕಂಠ ಎನಿಸಿರುವ ಶಿವ ಹಾಲಾಹಲವನ್ನು ಕುಡಿದೇ ಇಲ್ಲವೇನೋ ಎನ್ನುವಂತಿತ್ತು. ಸದಾ ತಾವರೆಯ ಮೇಲೆ ಸ್ಥಿರನಾಗಿದ್ದರೂ ತಾವರೆಯ ಪರಾಗವನ್ನು ಒಂದಿಷ್ಟೂ ಸೋಕಿಸಿಕೊಳ್ಳದ ಬ್ರಹ್ಮನಂತಿತ್ತು. ಶೇಷಶಯನವನ್ನು ಬಿಟ್ಟುಬಿಟ್ಟು ಇಲ್ಲಿಗೆ ಬಂದು ತಪಸ್ಸುಮಾಡುತ್ತಿರುವ ವಿಷ್ಣುವೋ ಎಂಬಂತಿತ್ತು. ಅತಿಯಾದ ಪ್ರಕಾಶವನ್ನು ತನ್ನೊಳಗೆ ಹೊಂದಿರುವ ಪ್ರಕಾಶಮಾನವಾದ ಗುಂಪೋ ಎನ್ನುವಂತಿತ್ತು. ಶಾಂತಿಯನ್ನೇ ದೇಹವನ್ನಾಗಿ ಪರಿವರ್ತಿಸಿಕೊಂಡು ಆಶ್ರಮದಲ್ಲಿ ಧ್ಯಾನವನ್ನು ಮಾಡುತ್ತ ಸುಖಯೋಗದಲ್ಲಿ ತಲ್ಲೀನನಾಗಿರುವನೋ ಎನ್ನುವಂತೆ ಅರ್ಜುನನಿಗೆ ಸೌಭರಿಮುನಿ  ಕಾಣಿಸಿದನು.ಇವೆಲ್ಲವುಗಳಿಂದ ಸೌಭರಿಮುನಿಯು ಒಬ್ಬ ಯೋಗಿಯಂತಿದ್ದು ಭಗವದನುಗ್ರಹಕ್ಕೆ ಪಾತ್ರನಾದಂತೆ ಕಾಣಿಸುತ್ತಿತ್ತು.)  

 

ಎಲೆ ಮುನೀಶ್ವರ ತವಾನುಗ್ರಹದೊಳಲ್ಲದೀ

ಶಿಲೆಯೊಳೊಂದಿದ ಹಯಂ ಬಿಡುವಂದಮಂ ಕಾಣೆ

ನುಳುಹಬೇಕೆಂದೆರಗಲರ್ಜುನನ ಮೊಗ ನೋಡಿ ನಗುತೆ ಸೌಭರಿ ನುಡಿದನು

ತಿಳುಹಿದಂ ಪಿಂತೆ ಭಾರತ ಯುದ್ಧ ಮಧ್ಯದೊಳ್

ನಳಿನನಾಭಂ ನಿನಗೆ ಮತ್ತೆಯುಮಹಂಕಾರ

ಮಳಿದುದಿಲ್ಲಕಟ ಜಗದೊಳ್ ಕೊಲ್ವರಾರ್ ಕಾವರಾರ್ ಬಲ್ಲೊಡುಸಿರೆಂದನು  ೫

ಪದ್ಯದ ಅನ್ವಯಕ್ರಮ:

ಎಲೆ ಮುನೀಶ್ವರ, ತವ ಅನುಗ್ರಹದೊಳ್ ಅಲ್ಲದೆ ಈ ಶಿಲೆಯೊಳ್ ಒಂದಿದ ಹಯಂ ಬಿಡುವ ಅಂದಮಂ ಕಾಣೆನ್, ಉಳುಹಬೇಕು ಎಂದು ಎರಗಲ್, ಅರ್ಜುನನ ಮೊಗ ನೋಡಿ ನಗುತೆ ಸೌಭರಿ ನುಡಿದನು, ನಳಿನನಾಭಂ ನಿನಗೆ ಪಿಂತೆ ಭಾರತ ಯುದ್ಧ ಮಧ್ಯದೊಳ್ ತಿಳುಹಿದಂ, ಮತ್ತೆಯುಂ ಅಹಂಕಾರಂ ಅಳಿದುದಿಲ್ಲ ಅಕಟ, ಜಗದೊಳ್ ಕೊಲ್ವರ್ ಆರ್? ಕಾವರ್ ಆರ್? ಬಲ್ಲೊಡೆ ಉಸಿರ್ ಎಂದನು.

ಪದ-ಅರ್ಥ:

ಮುನೀಶ್ವರ-ಮುನಿಶ್ರೇಷ್ಠ;  ತವ-ನಿಮ್ಮ;  ಅನುಗ್ರಹದೊಳ್-ಅನುಗ್ರಹದಿಂದ;  ಶಿಲೆಯೊಳೊಂದಿದ-ಶಿಲೆಯಲ್ಲಿ ಸೇರಿಕೊಂಡ;  ಹಯ-ಕುದುರೆ;  ಬಿಡುವಂದಮಂ-ಬಿಡಿಸುವ ರೀತಿಯನ್ನು; ಕಾಣೆನ್-ತಿಳಿಯಲಾರೆ;  ಉಳುಹಬೇಕು-ತಿಳಿಸಬೇಕು;  ತಿಳುಹಿದಂ-ತಿಳಿಸಿದನು;  ಪಿಂತೆ-ಹಿಂದೆ;  ಭಾರತಯುದ್ಧ ಮಧ್ಯದೊಳ್-ಮಹಾಭಾರತ ಯುದ್ಧದ ನಡುವೆ;  ನಳಿನನಾಭಂ-ಕೃಷ್ಣ(ವಿಷ್ಣು);  ಮತ್ತೆಯುಂ-ಮತ್ತೂ, ಇನ್ನೂ;  ಅಹಂಕಾರಮಳಿದುದಿಲ್ಲ-ಅಹಂಕಾರವು ಅಳಿಯಲಿಲ್ಲ;  ಜಗದೊಳ್-ಜಗತ್ತಿನಲ್ಲಿ, ಲೋಕದಲ್ಲಿ;  ಕೊಲ್ವರಾರ್-ಕೊಲ್ಲುವವರು ಯಾರು;  ಕಾವರಾರು-ಕಾಯುವವರು(ಕಾಪಾಡುವವರು) ಯಾರು;  ಬಲ್ಲೊಡುಸಿರ್-ತಿಳಿದಿದ್ದರೆ ಹೇಳು.

ಸೌಭರಿ ಮುನಿಯ ಆಶ್ರಮಕ್ಕೆ ಪರಿವಾರ ಸಮೇತನಾಗಿ ಬಂದ ಅರ್ಜುನನು ಮುನಿಯಲ್ಲಿ, ’ಎಲೆ ಮುನಿಶ್ರೇಷ್ಠನೆ, ನಿಮ್ಮ ಅನುಗ್ರಹವಿಲ್ಲದೆ ಈ ಶಿಲೆಯಲ್ಲಿ ಸ್ಥಿರಗೊಂಡಿರುವ ಕುದುರೆಯನ್ನು ಬಿಡಿಸುವುದಕ್ಕೆ ಸಾಧ್ಯವಿಲ್ಲ. ನೀವು ನಮ್ಮ ಮೇಲೆ ಕರುಣೆತೋರಬೇಕು’ ಎಂದು ವಿನಂತಿಸಿಕೊಂಡಾಗ, ಸೌಭರಿಮುನಿಯು, ’ಎಲೆ ಅರ್ಜುನನೇ, ಹಿಂದೆ ಮಹಾಭಾರತ ಯುದ್ಧದ ಮಧ್ಯದಲ್ಲಿ ಶ್ರೀಕೃಷ್ಣನು ನಿನಗೆ ಎಲ್ಲವನ್ನೂ ತಿಳಿಸಿದ್ದಾನೆ. ಆದರೂ ನಿನ್ನಲ್ಲಿರುವ ಅಹಂಕಾರವು ನಾಶವಾಗಲಿಲ್ಲ. ಈ ಲೋಕದಲ್ಲಿ ಕೊಲ್ಲುವವರು ಯಾರು? ಕಾಯುವವರು ಯಾರು? ಎಂಬುದನ್ನು ನೀನೇನಾದರೂ ಬಲ್ಲೆಯಾದರೆ ನನಗೂ ತಿಳಿಸು’ ಎಂದನು.

(ಸೌಭರಿಮುನಿಯ ಆಶ್ರಮಕ್ಕೆ ಪರಿವಾರ ಸಮೇತನಾಗಿ ಬಂದ ಅರ್ಜುನ ಸೌಭರಿಮುನಿಗೆ ನಮಸ್ಕರಿಸಿ ತನಗೆ ಎದುರಾಗಿರುವ ಸಮಸ್ಯೆಯನ್ನು ಹೇಳಿಕೊಳ್ಳುತ್ತಾನೆ. ತಮ್ಮ ಯಾಗದ ಕುದುರೆಯು ಇಲ್ಲಿಯೇ ಸನಿಹದಲ್ಲಿರುವ ಶಿಲೆಯ ಮೇಲೆ ತಟಸ್ಥವಾಗಿದೆ. ಅದನ್ನು ಕದಲಿಸಲು ಸಾಧ್ಯವಾಗುತ್ತಿಲ್ಲ. ಈಗ ನಿಮ್ಮ ಅನುಗ್ರಹವಿಲ್ಲದೆ ಕುದುರೆಯನ್ನು ಅಲ್ಲಿಂದ ಬಿಡಿಸುವುದಕ್ಕೆ ಸಾಧ್ಯವೂ ಇಲ್ಲ. ಈ ಸಮಸ್ಯೆಯನ್ನು ಪರಿಹರಿಸುವ ಉಪಾಯವನ್ನು ತಿಳಿಸಬೇಕೆಂದು ಬೇಡಿಕೊಂಡನು. ಅರ್ಜುನನಿಗೆ ಹೇಗಾದರೂ ಕುದುರೆಯನ್ನು ಬಿಡಿಸಿಕೊಳ್ಳಲೇಬೇಕು ಎಂಬ ಹಠ. ಇಲ್ಲದಿದ್ದರೆ ತಮ್ಮ ಯಾಗ ಪರಿಸಮಾಪ್ತಿಯಾಗಲಾರದು. ಅರ್ಜುನನ ಈ ಮನಃಸ್ಥಿತಿಯನ್ನು, ಆತನ ಮಾತುಗಳ ಇಂಗಿತವನ್ನು ಅರಿತುಕೊಂಡ ಸೌಭರಿಮುನಿಯು, ಅರ್ಜುನನಲ್ಲಿ, ಈ ಹಿಂದೆ ಮಹಾಭಾರತ ಯುದ್ಧದ ಮಧ್ಯದಲ್ಲಿ ನಿನ್ನಲ್ಲಿನ ದುರಹಂಕಾರವನ್ನು ನೋಡಿ ಶ್ರೀಕೃಷ್ಣನೇ ನಿನಗೆ ಸಾಕಷ್ಟು ಬುದ್ಧಿವಾದವನ್ನು ಹೇಳಿದ್ದನು. ನಿನ್ನಲ್ಲಿ ಅರಿವನ್ನು ಮೂಡಿಸುವುದಕ್ಕೆ ಪ್ರಯತ್ನಿಸಿದ್ದನು. ಆದರೂ ನಿನ್ನಲ್ಲಿನ ದುರಹಂಕಾರವು ಇನ್ನೂ ಕಡಿಮೆಯಾಗಿಲ್ಲ. ಈ ಜಗತ್ತಿನಲ್ಲಿ ನಮ್ಮನ್ನು ಕಾಯುವವರು ಯಾರು? ಕೊಲ್ಲುವವರು ಯಾರು? ನಿನಗೇನಾದರೂ ತಿಳಿದಿದ್ದರೆ ಅದನ್ನು ತಿಳಿಸು ಎಂದು ಅರ್ಜುನನಿಗೆ ಸವಾಲನ್ನೆಸೆದನು. ಬದುಕಿನಲ್ಲಿ ಕೆಲವು ಕಾರ್ಯಗಳನ್ನು ವಿವೇಚನೆಯಿಂದ ಕೈಗೊಳ್ಳಬೇಕು, ಇನ್ನು ಕೆಲವನ್ನು ವಸ್ತುಸ್ಥಿತಿಯನ್ನು ಅರಿಯುತ್ತ ಕೈಗೊಳ್ಳಬೇಕು, ಮತ್ತೆ ಕೆಲವನ್ನು ಹಿರಿಯರ ಮಾರ್ಗದರ್ಶನದ ನೆಲೆಯಲ್ಲಿ ಕೈಗೊಳ್ಳಬೇಕು ಎಂಬುದು ಸೌಭರಿಮುನಿಯ ಮಾತಿನ ಅರ್ಥ. ಅರ್ಜುನನು ಈ ಹಿಂದೆಯೇ ಕೃಷ್ಣನಿಂದ, ಗುರುಹಿರಿಯರಿಂದ ಸಾಕಷ್ಟು ಮಾರ್ಗದರ್ಶನ, ಹಿತೋಪದೇಶ ಹಾಗೂ ಅರಿವನ್ನು ಪಡೆದುಕೊಂಡಿದ್ದರೂ ಅವೆಲ್ಲವೂ ಆತನ ಅಹಂಕಾರದಿಂದ ಮುಚ್ಚಿಹೋಗಿದೆ ಎಂಬುದು ಸೌಭರಿಮುನಿಯ ಮಾತಿನ ಇಂಗಿತ.)

 

ಕೊಟ್ಟಿಗೆಯ ಕಾಮಧೇನುವನೊಲ್ಲದಳ್ತಿಯಿಂ

ಕಟ್ಟರಣ್ಯದ ಪುಲಿಯನರಸಿ ಕರೆಯಲ್ಕೊದೆಯೆ

ಕಟ್ಟುವೆಯಲಾ ತುರಗಮೇಧಮೇಗೈವುದಾ ಹರಿಯ ಸಾನ್ನಿಧ್ಯಮಿರಲು

ಹುಟ್ಟಿತಿಲ್ಲವೆ ನಿನಗರಿವು ಧರ್ಮಸೂನು ಮತಿ

ಗೆಟ್ಟಿಹನೆ ಶಿವ ಶಿವ ವೃಥಾ ಪರಿಭ್ರಮವೆ ನಿಮ

ಗಟ್ಟಿತೆಂದಮರೇಂದ್ರ ತನಯನಂ ಜರೆದು ಸೌಭರಿ ನುಡಿದೊಡಿಂತೆಂದನು  ೬

ಪದ್ಯದ ಅನ್ವಯಕ್ರಮ:

ಕೊಟ್ಟಿಗೆಯ ಕಾಮಧೇನುವನ್ ಒಲ್ಲದೆ ಕಟ್ಟರಣ್ಯದ ಪುಲಿಯನ್ ಅರಸಿ ಅಳ್ತಿಯಿಂ ಕರೆಯಲ್ ಒದೆಯೆ ಕಟ್ಟುವೆಯಲಾ, ಆ ಹರಿಯ ಸಾನ್ನಿಧ್ಯಂ ಇರಲು ತುರಗಮೇಧಂ ಏಗೈವುದು? ಹುಟ್ಟಿತಿಲ್ಲವೆ ನಿನಗೆ ಅರಿವು, ಧರ್ಮಸೂನು ಮತಿಗೆಟ್ಟಿಹನೆ ಶಿವಶಿವ ವೃಥಾ ಪರಿಭ್ರಮವೆ ನಿಮಗೆ ಅಟ್ಟಿತೆಂದು ಸೌಭರಿ  ಅಮರೇಂದ್ರ ತನಯನಂ ಜರೆದು ನುಡಿದೊಡೆ  ಇಂತೆಂದನು.

ಪದ-ಅರ್ಥ:

ಕೊಟ್ಟಿಗೆಯ ಕಾಮಧೇನು -ಹಟ್ಟಿಯಲ್ಲಿರುವ ಹಸು;  ಒಲ್ಲದೆ-ಇಷ್ಟಪಡದೆ;  ಅಳ್ತಿಯಿಂ-ಪ್ರೀತಿಯಿಂದ;  ಕಟ್ಟರಣ್ಯ-ದಡ್ಡವಾದ ಕಾಡು; ಪುಲಿಯನರಸಿ-ಹುಲಿಯನ್ನು ಹುಡುಕಿ;  ಕರೆಯಲ್ಕೆ-ಹಾಲು ಹಿಂಡಲು, ಹಾಲು ಕರೆಯಲು;  ಒದೆಯೆ-ಒದೆಯಲು, ಹೊಡೆಯಲು;  ಕಟ್ಟುವೆಯಲಾ-ಬಂಧಿಸುವೆಯಲ್ಲವೆ;  ತುರಗಮೇಧಂ-ಅಶ್ವಮೇಧವು;  ಏಗೈವುದು-ಏನು ಮಾಡಲು ಸಾಧ್ಯ;  ಸಾನ್ನಿಧ್ಯ-ಒಡನಾಟ;  ಹುಟ್ಟಿತಿಲ್ಲವೆ-ಹುಟ್ಟಲಿಲ್ಲವೆ;  ಅರಿವು-ತಿಳಿವಳಿಕೆ;  ಧರ್ಮಸೂನು-ಧರ್ಮರಾಯ;  ಮತಿಗೆಟ್ಟಿಹನೆ-ಬುದ್ಧಿಗೆಟ್ಟಿರುವನೆ;  ವೃಥಾ ಪರಿಭ್ರಮವೆ-ಸುಮ್ಮನೆ ತಿರುಗಾಟವೆ;  ಅಟ್ಟಿತು-ಓಡಿಸಿತು;  ಅಮರೇಂದ್ರ ತನಯ-ಇಂದ್ರನ ಮಗನಾದ ಅರ್ಜುನ; ಜರೆದು-ನಿಂದಿಸಿ.

ಹಾಲು ಕರೆಯುವ ಮಹದಾಸೆಯಿಂದ ಕೊಟ್ಟಿಗೆಯಲ್ಲಿರುವ ಹಸುವನ್ನು ಬಿಟ್ಟುಬಿಟ್ಟು ದಟ್ಟವಾದ ಅರಣ್ಯದಲ್ಲಿನ ಹುಲಿಯನ್ನು ಹುಡುಕಿಕೊಂಡು ಪ್ರೀತಿಯಿಂದ ಹಾಲುಕರೆಯಲು ಪ್ರಯತ್ನಿಸಿದರೆ ಅದು ಒದೆಯುವುದೆಂದೋ ಮೇಲೆರಗುವುದೆಂದೋ ಅದರ ಕಾಲುಗಳನ್ನು ಕಟ್ಟಿ ಬಂಧಿಸುವುದಕ್ಕೆ ಸಾಧ್ಯವೆ?  ಅದು ಮೂರ್ಖತನವಲ್ಲವೆ? ಶ್ರೀಕೃಷ್ಣನ ಒಡನಾಟವೇ ನಿನಗಿರುವಾಗ ಅಶ್ವಮೇಧದ ಕುದುರೆಯನ್ನು ಯಾರು ಏನು ಮಾಡಲು ಸಾಧ್ಯ? ಹೇಗೆ ಬಂಧಿಸಿಡಲು ಸಾಧ್ಯ? ನಿನಗೆ ಇನ್ನೂ ಅರಿವು ಮೂಡಿಲ್ಲವೆ? ಧರ್ಮರಾಯನೂ ಬುದ್ಧಿಗೆಟ್ಟಿಹನೆ? ಶಿವಶಿವ, ನಿಮಗೆ ಸುಮ್ಮನೆ ತಿರುಗಾಟವೇ ಗತಿಯಾಯಿತಲ್ಲ! ಎಂದು ಸೌಭರಿಮುನಿ ಅರ್ಜುನನನ್ನು ನಿಂದಿಸಿದನು.

(ಹಾಲು ಕರೆಯಬೇಕೆನಿಸಿದರೆ ಕೊಟ್ಟಿಗೆಯಲ್ಲಿ ಸಾಕಿದ ಹಸುವಿನ ಹಾಲನ್ನು ಕರೆಯಬೇಕು. ಆದರೆ ಅದನ್ನು ಬಿಟ್ಟುಬಿಟ್ಟು ದಟ್ಟವಾದ ಅರಣ್ಯದಲ್ಲಿನ ಹೆಬ್ಬುಲಿಯ ಹಾಲನ್ನು ಕರೆಯುತ್ತೇನೆ ಎಂದು ಅದಕ್ಕೆ ಪ್ರಯತ್ನಿಸುವುದು ಸರಿಯೆ?. ಅದರಲ್ಲಿಯೂ ಕೊಟ್ಟಿಗೆಯಲ್ಲಿರುವ ಹಸು ಹಾಲು ಕರೆಯುತ್ತಿದ್ದಾಗ ಒದೆದರೆ ಅದರ ಕಾಲುಗಳನ್ನು ಕಟ್ಟಿಹಾಕಿ ಹಾಲು ಕರೆಯುವಂತೆ ಕಾಡಿನಲ್ಲಿರುವ ಹುಲಿ ಒದೆಯಬಹುದು, ಅಥವಾ ಮೇಲೆರಗಬಹುದೆಂದು ಹುಲಿಯ ಕಾಲುಗಳನ್ನು ಕಟ್ಟಿಹಾಕಿ ಹಾಲು ಕರೆಯಲು ಸಾಧ್ಯವೇ? ಹಾಗೆ ಮಾಡಿದರೆ ಅದು ಮೂರ್ಖತನವೆನಿಸಲಾರದೆ? ಪ್ರಶಸ್ತವಾಗಿ ಸಿಗುವಂತಿದ್ದಾಗ ಅಪ್ರಶಸ್ತಕ್ಕೆ ಕೈಹಾಕುವುದು, ಸುಲಭದಲ್ಲಿ ಸಿಗುತ್ತಿರುವಾಗ ಕ್ಲಿಷ್ಟಕರವಾದುದಕ್ಕೆ ಪ್ರಯತ್ನಿಸುವುದು ಮೂರ್ಖತನವಲ್ಲದೆ ಇನ್ನೇನು? ಅರ್ಜುನನಿಗೆ ಪ್ರತಿಯೊಂದು ಸಂದರ್ಭದಲ್ಲಿಯೂ ಶ್ರೀಕೃಷ್ಣನ ಒಡನಾಟ, ಆತನ ಅಭಯ ಇದ್ದೇ ಇದೆ. ಈಗಾಗಲೇ ಕೃಷ್ಣ ಅರ್ಜುನನನ್ನು ಸಾಕಷ್ಟು ಬಾರಿ ಕಾಪಾಡಿದ್ದಾನೆ. ಹೀಗಿರುವಾಗ ಯಾಗದ ಕುದುರೆಯು ಶಿಲೆಯ ಮೇಲೆ ಸ್ಥಿರಗೊಂಡಾಗ ಆತನ ಸಹಾಯವನ್ನು ನಿರೀಕ್ಷಿಸಬೇಕಲ್ಲದೆ, ಕಾಡೆಲ್ಲ ಸುತ್ತಾಡಿಕೊಂಡು ಇಲ್ಲಿಯವರೆಗೆ ಬಂದಿರುವುದು ಮೂರ್ಖತನವಲ್ಲವೆ? ಎಂಬುದು ಸೌಭರಿಮುನಿಯ ಪ್ರಶ್ನೆ. ಶ್ರೀಕೃಷ್ಣನ ಒಡನಾಟನೇ ಅರ್ಜುನನಿಗೆ ಇರುವಾಗ ಆತ ಅನ್ಯರ ಸಹಾಯವನ್ನು ಅಪೇಕ್ಷಿಸುವುದು ಎಷ್ಟು ಸರಿ? ಇಷ್ಟಾದರೂ ಅರ್ಜುನನಿಗೆ ಇನ್ನೂ ಅರಿವೇ ಮೂಡಿಲ್ಲ. ಹೋಗಲಿ ಧರ್ಮರಾಯನೂ ಬುದ್ಧಿಗೆಟ್ಟಿದ್ದಾನೆಯೇ? ಎಂದು ಸೌಭರಿಮುನಿ ಪ್ರಶ್ನಿಸುತ್ತಾನೆ. ಜೀವಮಾನವಿಡೀ ನಿಮಗೆ ಸುಮ್ಮನೆ ಕಾಡಿನೊಳಗೆ ತಿರುಗಾಟವೇ ಗತಿಯಾಯಿತಲ್ಲ! ಎಂದು ಸೌಭರಿಮುನಿ ಅರ್ಜುನನ್ನು ನಿಂದಿಸುತ್ತಾನೆ.)

 

ಹರಿಯನುಳಿದಾವು ಬದುಕುವರಲ್ಲ ಚಿತ್ತದೊಳ್

ಭರಿತನಾಗಿಹನಾವಗಂ ಧರ್ಮಸೂನು ಮರೆ

ದಿರನಾ ಮುರಾರಿಯ ನಿರೂಪದಿಂ ತೊಡಗಿ ಮಾಡುವನೀ ಮಹಾಕ್ರತುವನು

ತರಳತೆಯ ಮೆರೆವಗಿಂತರಿವನುಪದೇಶಿಪೊಡೆ

ಗುರುಗಳಲ್ಲವೆ ನೀವು ಧನ್ಯರಾದಪೆವಿನ್ನು

ಕರುಣದಿಂದೀ ಶಿಲೆಯೊಳೊಂದಿದ ತುರಗಮಂ ಬಿಡಿಸಿಕೊಡಬೇಕೆಂದನು  ೭

ಪದ್ಯದ ಅನ್ವಯಕ್ರಮ:

ಹರಿಯನ್ ಉಳಿದು ಆವು ಬದುಕುವರಲ್ಲ, ಆವಗಂ ಚಿತ್ತದೊಳ್ ಭರಿತನಾಗಿಹನ್, ಧರ್ಮಸೂನು ಮರೆದಿರನ್, ಆ ಮುರಾರಿಯ ನಿರೂಪದಿಂ ತೊಡಗಿ ಈ ಮಹಾಕ್ರತುವನು ಮಾಡುವನ್, ನೀವು ಗುರುಗಳಲ್ಲವೆ, ತರಳತೆಯ ಮೆರೆವಗೆ ಇಂತು ಅರಿವನು ಉಪದೇಶಿಪೊಡೆ ಧನ್ಯರಾದಪೆವು, ಇನ್ನು ಈ ಶಿಲೆಯೊಳ್ ಒಂದಿದ ತುರಗಮಂ ಕರುಣದಿಂದ ಬಿಡಿಸಿಕೊಡಬೇಕು ಎಂದನು.  

ಪದ-ಅರ್ಥ:

ಹರಿಯನುಳಿದು-ಕೃಷ್ಣನನ್ನು ಬಿಟ್ಟುಬಿಟ್ಟು;  ಆವು-ನಾವು;  ಭರಿತನಾಗಿಹನ್-ತುಂಬಿಕೊಂಡಿದ್ದಾನೆ;  ಆವಗಂ-ಯಾವತ್ತೂ;  ಧರ್ಮಸೂನು-ಧರ್ಮರಾಯ;  ಮರೆದಿರನ್-ಮರೆಯುವುದಕ್ಕೆ ಸಾಧ್ಯವಿಲ್ಲ;  ಮುರಾರಿ-ಕೃಷ್ಣ;  ನಿರೂಪದಿಂ-ಅಪ್ಪಣೆಯಂತೆ;  ತೊಡಗಿ-ಪ್ರಾರಂಭಿಸಿ;  ಮಹಾಕ್ರತು-ಮಹಾಯಾಗ (ಆಶ್ವಮೇಧಯಾಗ);  ತರಳತೆ-ಬಾಲ್ಯಾವಸ್ಥೆ, ಬಾಲಿಶತನ;  ಇಂತು-ಹೀಗೆ;  ಅರಿವನು-ತಿಳಿವಳಿಕೆಯನ್ನು;  ಉಪದೇಶಿಪೊಡೆ-ಉಪದೇಶಿಸಿದರೆ;  ಕರುಣದಿಂದ-ಕರುಣೆತೋರಿ;  ಶಿಲೆಯೊಳೊಂದಿದ-ಶಿಲೆಯಲ್ಲಿ ಸೇರಿಕೊಂಡಿರುವ;  ತುರಗ-ಕುದುರೆ.

ಕೃಷ್ಣನನ್ನು ಬಿಟ್ಟುಬಿಟ್ಟು ನಾವು ಬದುಕುವುದಕ್ಕೆ ಸಾಧ್ಯವಿಲ್ಲ. ಅವನು ನಮ್ಮೊಳಗೆ ಯಾವತ್ತೂ ತುಂಬಿಕೊಂಡಿದ್ದಾನೆ. ಧರ್ಮರಾಯನೂ ಆತನನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಶ್ರೀಕೃಷ್ಣನ ಅಪೇಕ್ಷೆಯ ಪ್ರಕಾರವೇ ಧರ್ಮರಾಯನು ಈ ಮಹಾಯಾಗ(ಅಶ್ವಮೇಧಯಾಗ)ವನ್ನು ಮಾಡುತ್ತಿದ್ದಾನೆ. ನೀವು ಗುರುಗಳಲ್ಲವೆ, ಬಾಲ್ಯಾವಸ್ಥೆಯಲ್ಲಿ ಅಥವಾ ಬಾಲಿಶತನದಿಂದ ಮೆರೆಯುತ್ತಿರುವ ನಮಗೆ ನೀವು ತಿಳಿವಳಿಕೆಯನ್ನು ಉಪದೇಶಿಸಿದರೆ ನಾವು ಧನ್ಯರಾದೆವು ಎಂದು ತಿಳಿಯುತ್ತೇವೆ. ಹಾಗಾಗಿ ಈ ಶಿಲೆಯಲ್ಲಿ ಸೇರಿಕೊಂಡಿರುವ ಈ ಕುದುರೆಯನ್ನು ತಾವು ಬಿಡಿಸಿಕೊಡಬೇಕು ಎಂದು ಅರ್ಜುನನು ಸೌಭರಿಮುನಿಯಲ್ಲಿ ಬೇಡಿಕೊಂಡನು.

(ಸೌಭರಿಮುನಿಯ ಮಾತುಗಳು ಅರ್ಜುನಾದಿಗಳನ್ನು ಸ್ವಲ್ಪಮಟ್ಟಿಗೆ ನೋಯಿಸುತ್ತವೆ. ಆದರೆ ಅದಕ್ಕೆ ಅರ್ಜುನನು ಬೇಸರಿಸಿಕೊಳ್ಳದೆ, ಕೃಷ್ಣನನ್ನು ಬಿಟ್ಟುಬಿಟ್ಟು ನಾವು ಏನನ್ನೂ ಕೈಗೊಳ್ಳಲು ಸಾಧ್ಯವಿಲ್ಲ, ಬದುಕುವುದಕ್ಕೂ ಸಾಧ್ಯವಿಲ್ಲ. ಅವನು ನಮ್ಮೊಳಗೆ ತುಂಬಿಕೊಂಡಿರುವಾಗ ಆತನನ್ನು ಮರೆಯುವುದಕ್ಕೂ ಸಾಧ್ಯವಿಲ್ಲ. ನಾವು ಯಾವುದೇ ಕಾರ್ಯವನ್ನು ಕೈಗೊಳ್ಳುವುದಿದ್ದರೂ ಆತನ ಅಪ್ಪಣೆಯ ವಿನಾ ಕೈಗೊಳ್ಳಲಾರೆವು. ಆತನ ಸಹಕಾರದಿಂದಲೇ ಮಹಾಭಾರತ ಯುದ್ಧವನ್ನು ಗೆದ್ದು ರಾಜ್ಯವನ್ನು ಮರಳಿ ಪಡೆದುಕೊಂಡಿರುವಾಗ ಧರ್ಮರಾಯನಾದರೂ ಕೃಷ್ಣನನ್ನು ಹೇಗೆ ಮರೆಯಲು ಸಾಧ್ಯ? ಈಗ ಕೃಷ್ಣನ ಮಾರ್ಗದರ್ಶನದಂತೆಯೇ ಧರ್ಮರಾಯನು ಅಶ್ವಮೇಧಯಾಗವನ್ನು ಕೈಗೊಂಡಿದ್ದಾನೆ. ನಮಗೆ ಕೇವಲ ಅವರಿಬ್ಬರ ಮಾರ್ಗದರ್ಶನ ಮಾತ್ರವಲ್ಲದೆ, ಗುರುಗಳಾದ ನಿಮ್ಮ ಮಾರ್ಗದರ್ಶನವೂ ಅತ್ಯಗತ್ಯ. ನಾವು ಸಾಮಾನ್ಯರು, ಲೋಕಸಹಜವಾದ ನ್ಯೂನತೆಗಳನ್ನು, ಬಾಲಿಶತನವನ್ನು ಮೈಗೂಡಿಸಿಕೊಂಡವರು. ಹಾಗಾಗಿ ಬಾಲಿಶತನದಿಂದ ನಾವು ಎಸಗಿರಬಹುದಾದ ಲೋಪದೋಷಗಳೆಲ್ಲವನ್ನೂ ಮನ್ನಿಸಿ, ಮಾತು ಕೃತಿಗಳಲ್ಲಿ ತಪ್ಪಿದ ನಮ್ಮನ್ನು ತಾವು ತಿದ್ದಿ ಉಪಕರಿಸಿದರೆ ನಾವು ನಿಮಗೆ ಕೃತಾರ್ಥರಾಗಿರುತ್ತೇವೆ. ಆಯಾ ಸ್ಥಳಗಳ ಮಹತ್ವವನ್ನು ಅರಿಯದೆ ನಾವು ದುಡುಕುವುದಕ್ಕೆ ಸಾಧ್ಯವಿಲ್ಲ. ತಾವು ಹಿರಿಯರು, ಗುರುಗಳು, ಮಾತ್ರವಲ್ಲದೆ ಈ ಸ್ಥಳದ ಇಲ್ಲಿನ ಆಗುಹೋಗುಗಳೆಲ್ಲವನ್ನೂ ಬಲ್ಲವರು. ಹಾಗಾಗಿ ಶಿಲೆಯಲ್ಲಿ ನೆಲೆಗೊಂಡಿರುವ ನಮ್ಮ ಯಾಗದ ಕುದುರೆಯನ್ನು ಬಿಡಿಸಿಕೊಟ್ಟು ನಮ್ಮ ದಿಗ್ವಿಜಯ ಸಾಂಗವಾಗಿ ಕೊನೆಗೊಳ್ಳುವಂತೆ ಸಹಕರಿಸಬೇಕು ಎಂದು ಬೇಡಿಕೊಂಡನು.)

( ಭಾಗ-೨ ರಲ್ಲಿ  ಮುಂದುವರಿದಿದೆ)

Leave a Reply

Your email address will not be published. Required fields are marked *