ಸಾಹಿತ್ಯಾನುಸಂಧಾನ

heading1

ದಶಾನನ ಸ್ವಪ್ನಸಿದ್ಧಿ-ಕುವೆಂಪು – ಭಾಗ-೩

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ದೀರ್ಘಪಠ್ಯ- ಭಾಗ-೩)

ತಾನಂತು

ತನ್ನ ತಮ್ಮಂವೆರಸು ಶಿಶುವಾಗುತಾಶ್ರಮದಿ

ಜಾನಕಿಯ ತೊಡೆಯ ಮೇಲಾಡುತಿರ್ದದ್ಭುತಕೆ

ಬೆಬ್ಬಳಿಸುತೆಳ್ಚರ್ತು, ತನ್ನತನಮಂ ಮತ್ತೆ

ವಿಸ್ಮರಣ ಮರಣದಿಂದೆತ್ತಿ ಸುಸ್ಮೃತಿಗಳೆದು

ಸಂಸ್ಥಾಪಿಸುವನಂತೆವೋಲ್, ಕರೆದು ಕರೆದೊರಲಿ

ಕೂಗಿದನ್: “ಮಂಡೋದರೀ! ಮಯಾತ್ಮಜೇ! ಪ್ರಿಯೇ!

ರಕ್ಷಿಸೆನ್ನನ್!”

                     ಪಸುಳೆಯಳುಗೇಳ್ದು ಪೂಜಾ        ೨೨೦

ನಿಕೇತನಂಬೊಕ್ಕ ವಿಸ್ಮಿತೆ, ಮಯನ ನಂದನೆ,

ದಶಾಸ್ಯನಾ ದುಃಸ್ವಪ್ನಚೇಷ್ಟಿತಕೆ ತಳಮಳಿಸಿ,

ಮೀಸೆವೊತ್ತಂ ಮಹಾದೈತ್ಯ ಚಕ್ರೇಶ್ವರಂ

ಪೊಸತೆ ಪುಟ್ಟಿದ ಪಸುಳೆಯಂದದಿಂದಳುವಾ

ವಿಕಾರಕುರೆ ಬೆದರಿ, ತನ್ನಂಕತೂಲದಿನವನ

ತಲೆಗೆ ದಿಂಬೆಸಗಿ, ತೊಡಗಿದಳು ಪಣೆಬೆಮರೊರಸಿ

ಬೀಸಿ ಬಿಜ್ಜಣವಿಕ್ಕಿ ಶಿಶಿರೋಪಚಾರಮಂ.

ನುಡಿಸಿದಳ್ ನಾಥನಂ, ಪುರುಹೂತ ಜೇತನಂ,

ಪಸುಳೆವೊಲ್ ಭೀತನಂ! ಬಿಗಿದಪ್ಪಿ ಚುಂಬಿಸುತೆ

ಕರೆಕರೆದು ಮೈದಡವಿ ಮತ್ತೆ ಜಾಗ್ರಜ್ಜಗಕೆ        ೨೩೦

ಸ್ವಪ್ನದಿಂದಾತನಂ ತುಯ್ದೊಯ್ದು ತೆಗೆದೆತ್ತಿ

ತಂದಳ್ ಪತಿಪ್ರಾಣೆ. ಮೇಣ್ ತನ್ನಂ ಪೆಸರ್ ವಿಡಿದು

ಕರೆಯುತೆಳ್ಚರ್ತಂಗೆ: “ಬಳಿಯೊಳಿಹೆನಾಂ, ಸ್ವಾಮಿ:

ಬೆದರದಿರ್ ಪಾಳ್ಗನಸದರ್ಕ್ಕೆ!”

                                             “ಕನಸಲ್ತು ನಾಂ

ಕಂಡುದದು! ನಾನೀಗಳೆಲ್ಲಿಹೆನ್ ಪೇಳ್, ಪ್ರಿಯೆ?”

“ಲಂಕೆಯೊಳ್. ನಮ್ಮರಮನೆಯ ಶೈವಮಂದಿರದಿ!”

“ನನ್ನ ಮಯ್ಯೆಲ್ಲಿ? ಮೊಗಮೆಲ್ಲಿ?”

                                                   “ಇಲ್ಲಿಹವಿಲ್ಲಿ!”

“ನಾನಾರ್?”

                   “ದಶಗ್ರೀವನಸುರೇಶ್ವರಂ! ಮತ್ತೆ

ಮಂಡೋದರೀ ಜೀವಿತೇಶ್ವರಂ!”

                                                 “ಅಹುದಹುದೆ!

ಪ್ರಿಯೆ, ಬರಿಯ ಮರೆವಲ್ತು. ಪ್ರಜ್ಞಾಪ್ರಲಯದಿಂ  ೨೪೦

ಜಗುಳ್ದವೋಲಾದುದೆನ್ನಾತ್ಮಂ ಪುನರ್ಭವಕೆ,

ತನ್ನಹಂಕಾರದೀ ಪುರುಷಕಾರವನೆಲ್ಲಮಂ

ತೃಣಕೆಣೆ ವಿಸರ್ಜಿಸುತ್ತಗ್ನಿವೈತರಣಿಗೆ!

ಮಹಾ ಪ್ರಯತ್ನದಿನಲ್ತೆ ಪಿಂತಿರುಗಿದೆನ್!” ನಕ್ಕು

ನುಡಿದನ್: “ವಿನೋದಮಂ ಕೇಳ್, ನಲ್ಲೆ; ಆವುದೋ

ಋಷ್ಯಾಶ್ರಮದೊಳಾಂ ದಿವಂಗತ ಸಹೋದರಂ

ವೆರಸಿ ವೈದೇಹಿಗಾತ್ಮಜರಾಗಿ ತೊಡೆಯೇರ್ದು

ರೋದಿಸುತ್ತಿರ್ದವೋಲ್…”

ಅನ್ವಯಕ್ರಮ: 

ಅಂತು ತಾನ್ ತನ್ನ ತಮ್ಮಂ ಬೆರಸು ಶಿಶುವಾಗುತ ಆಶ್ರಮದಿ ಜಾನಕಿಯ ತೊಡೆಯ ಮೇಲೆ ಆಡುತಿರ್ದ ಅದ್ಭುತಕೆ ಬೆಬ್ಬಳಿಸುತ ಎಳ್ಚರ್ತು, ತನ್ನತನಮಂ ಮತ್ತೆ ವಿಸ್ಮರಣ ಮರಣದಿಂದ ಎತ್ತಿ ಸಂಸ್ಮೃತಿಗೆ ಎಳೆದು ಸಂಸ್ಥಾಪಿಸುವನ ಅಂತೆವೋಲ್, ಕರೆದು ಕರೆದು ಒರಲಿ ಕೂಗಿದನ್: “ಮಂಡೋದರೀ! ಮಯ ಆತ್ಮಜೇ! ಪ್ರಿಯೇ! ರಕ್ಷಿಸು ಎನ್ನನ್!”,  ಪಸುಳೆಯ ಅಳು ಕೇಳ್ದು ಪೂಜಾ ನಿಕೇತನಂ ಪೊಕ್ಕ ವಿಸ್ಮಿತೆ, ಮಯನ ನಂದನೆ, ದಶಾಸ್ಯನ ಆ ದುಃಸ್ವಪ್ನ ಚೇಷ್ಟಿತಕೆ ತಳಮಳಿಸಿ, ಮೀಸೆವೊತ್ತಂ ಮಹಾ ದೈತ್ಯ ಚಕ್ರೇಶ್ವರಂ ಪೊಸತೆ ಪುಟ್ಟಿದ ಪಸುಳೆಯಂದದಿ ಅಳುವ ಆ ವಿಕಾರಕೆ ಉರೆ ಬೆದರಿ, ತನ್ನ ಅಂಕತೂಲದಿನ್ ಅವನ ತಲೆಗೆ ದಿಂಬು ಎಸಗಿ, ಪಣೆ ಬೆಮರ್ ಒರೆಸಿ, ಬೀಸಿ ಬಿಜ್ಜಣ ಇಕ್ಕಿ, ಶಿಶಿರ ಉಪಚಾರಮಂ ತೂಡಗಿದಳು. ನಾಥನಂ ಪುರುಹೂತ ಜೇತನಂ, ಪಸುಳೆವೋಲ್ ಭೀತನಂ! ನುಡಿಸಿದಳು. ಬಿಗಿದು ಅಪ್ಪಿ ಚುಂಬಿಸುತೆ, ಕರೆಕರೆದು ಮೈದಡವಿ ಪತಿಪ್ರಾಣೆ ಮತ್ತೆ ಆತನಂ ತುಯ್ದು ಒಯ್ದು ತೆಗೆದು ಜಾಗ್ರತ್ ಜಗಕೆ ಸ್ವಪ್ನದಿಂದ ಎತ್ತಿ ತಂದಳ್. ಮೇಣ್ ತನ್ನಂ ಪೆಸರ್ ಪಿಡಿದು ಕರೆಯುತ್ತ ಎಳ್ಚೆತ್ತರ್ತಂಗೆ: “ಆಂ ಬಳಿಯೊಳ್ ಇಹೆನ್ ಸ್ವಾಮಿ; ಪಾಳ್ ಕನಸು, ಅದರ್ಕೆ ಬೆದರದಿರ್!”, “ನಾಂ ಕಂಡುದುದು ಕನಸು ಅಲ್ತು! ನಾನ್ ಈಗಳ್ ಎಲ್ಲಿಹೆನ್ ಪೇಳ್, ಪ್ರಿಯೆ?”, “ಲಂಕೆಯೊಳ್. ನಮ್ಮ ಅರಮನೆಯ ಶೈವಮಂದಿರದಿ!”,  “ನನ್ನ ಮೆಯ್ಯೆಲ್ಲಿ? ಮೊಗವೆಲ್ಲಿ?”, “ಇಲ್ಲಿಹವು ಇಲ್ಲಿ”, “ನಾನು ಆರ್?” , “ದಶಗ್ರೀವನ್ ಅಸುರೇಶ್ವರಂ! ಮತ್ತೆ ಮಂಡೋದರೀ ಜೀವಿತೇಶ್ವರಂ!”, “ಅಹುದು, ಅಹುದೆ! ಪ್ರಿಯೆ, ಬರಿಯ ಮರೆವು ಅಲ್ತು. ಪ್ರಜ್ಞಾಪ್ರಲಯದಿಂ ಎನ್ನಾತ್ಮಂ  ಪುನರ್ಭವಕೆ ಜಗುಳ್ದವೋಲ್ ಆದುದು, ತನ್ನ ಅಹಂಕಾರದ ಈ ಪುರುಷಾಕಾರವನ್ ಎಲ್ಲಮಂ ತೃಣಕೆ ಎಣೆ ಅಗ್ನಿ ವೈತರಣಿಗೆ ವಿಸರ್ಜಿಸುತ ಮಹಾ ಪ್ರಯತ್ನದಿನ್ ಅಲ್ತೆ ಪಿಂತಿರುಗಿದೆನ್!” ನಕ್ಕು ನುಡಿದನ್: “ವಿನಯದಿಂ ಕೇಳ್ ನಲ್ಲೆ: ಆವುದೋ ಋಷಿ ಆಶ್ರಮದೊಳ್ ಆಂ ದಿವಂಗತ ಸಹೋದರಂ ಬೆರಸಿ ವೈದೇಹಿಗೆ ಆತ್ಮಜರಾಗಿ ತೊಡೆ ಎರ್ದು ರೋದಿಸುತ ಇರ್ದವೋಲ್….”,

ಪದ-ಅರ್ಥ:

ತಾನಂತು-ತಾನು ಹಾಗೆ;  ತಮ್ಮಂವೆರಸು-ತಮ್ಮನೊಂದಿಗೆ;  ಬೆಬ್ಬಳಿಸುತ-ಬೆರಗಾಗುತ್ತ;  ಎಳ್ಚರ್ತು-ಎಚ್ಚೆತ್ತು;  ವಿಸ್ಮರಣ-ಮರೆವು; ಸುಸ್ಮೃತಿ-ನೆನಪು;  ಸಂಸ್ಥಾಪಿಸು-ಸ್ಥಿರಗೊಳಿಸು; ಒರಲಿ-ಅರಚಿ;   ಮಯಾತ್ಮಜೇ-ಮಯನ ಮಗಳು(ಮಂಡೋದರೀ); ಪಸುಳೆಯಳು-ಹಸುಳೆಯ ಅಳು; ಪೂಜಾನಿಕೇತನಬೊಕ್ಕ(ಪೂಜಾನಿಕೇತನಂ+ಪೊಕ್ಕ)-ಪೂಜಾಮಂದಿರವನ್ನು ಪ್ರವೇಶಿಸಿದ;  ವಿಸ್ಮಿತೆ-ಆಶ್ಚರ್ಯಚಕಿತಳಾದವಳು;  ಮಯನ ನಂದನೆ– ಮಯನ ಮಗಳು;  ದಶಾಸ್ಯ-ಹತ್ತು ಮುಖಗಳುಳ್ಳವನು(ರಾವಣ);  ದುಃಸ್ವಪ್ನ-ಕೆಟ್ಟಕನಸು; ಚೇಷ್ಟಿತಕೆ-ಕಾರ್ಯಕ್ಕೆ, ಕೆಲಸಕ್ಕೆ;  ತಳಮಳಿಸಿ-ಗಾಬರಿಗೊಂಡು; ಮೀಸೆವೊತ್ತಂ-ಮೀಸೆ ಹೊತ್ತವನು, ಪರಾಕ್ರಮಶಾಲಿ;  ಮಹಾ ದೈತ್ಯ-ಮಹಾ ರಾಕ್ಷಸ;  ಚಕ್ರೇಶ್ವರ-ಚಕ್ರವರ್ತಿ;  ಪೊಸತೆ ಪುಟ್ಟಿದ-ಹೊಸದಾಗಿ ಹುಟ್ಟಿದ;  ಪಸುಳೆಯಂದದಿ-ಹಸುಳೆಯ ಹಾಗೆ;  ಉರೆ-ಅತಿಯಾಗಿ;  ತನ್ನಂಕತೂಲದಿನ್-ತನ್ನ ತೊಡೆಯೆಂಬ ಹಾಸಿಗೆಯನ್ನು;  ದಿಂಬೆಸಗಿ-ದಿಂಬಾಗಿ ಮಾಡಿ;  ಪಣೆಬೆಮರ್-ಹಣೆಯ ಬೆವರು; ಬಿಜ್ಜಣ-ಬೀಸಣಿಗೆ;  ಶಿಶಿರೋಪಚಾರ-ಶೈತ್ಯೋಪಚಾರ, ಭಯಭೀತರಾದವರಿಗೆ ಮಾಡುವ ಉಪಚಾರ;   ನಾಥನಂ-ಗಂಡನನ್ನು;  ಪುರುಹೂತ ಜೇತನಂ-ಇಂದ್ರನನ್ನು ಜಯಿಸುವವನು; (ರಾವಣ);  ಪಸುಳೆವೋಲ್ –ಹಸುಳೆಯ ಹಾಗೆ;  ಭೀತನಂ-ಹೆದರಿಕೊಂಡವನನ್ನು;  ಜಾಗ್ರಜ್ಜಗಕೆ-ಜಾಗ್ರತಾವಸ್ಥೆಗೆ, ಎಚ್ಚರಗೊಳ್ಳುವ ಸ್ಥಿತಿಗೆ;  ತುಯ್ದೊಯ್ದು(ತುಯ್ದು+ಒಯ್ದು)-ಎಳೆದೊಯ್ದು; ಪತಿಪ್ರಾಣೆ-ಪತಿಯ ಮೇಲೆ ಪ್ರಾಣವನ್ನಿರಿಸಿದವಳು, ಪತಿಯನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವವಳು;  ಮೇಣ್-ಮತ್ತು;  ಎಳ್ಚೆರ್ತಂಗೆ-ಎಚ್ಚರಗೊಂಡವನಿಗೆ;  ಪಾಳ್ಗನಸು-ಕೆಟ್ಟ ಕನಸು;  ಶೈವಮಂದಿರದಿ-ಶಿವಾಲಯದಲ್ಲಿ;  ದಶಗ್ರೀವನ್-ಹತ್ತು ತಲೆಯುಳ್ಳವನು(ರಾವಣ);  ಅಸುರೇಶ್ವರಂ-ರಾಕ್ಷಸರ ರಾಜ;  ಜೀವಿತೇಶ್ವರಂ-ಜೀವಕ್ಕೆ ಒಡೆಯ, ಗಂಡ;  ಪ್ರಜ್ಞಾಪ್ರಲಯದಿಂ-ತಿಳಿವಳಿಕೆಯ ಅಳಿವಿನಿಂದ;  ಜಗುಳ್ದವೋಲ್-ಜಾರಿದಂತೆ; ಪುನರ್ಭವಕೆ-ಮರುಹುಟ್ಟಿಗೆ;  ಪುರುಷಕಾರವನೆಲ್ಲಮಂ-ಮನುಷ್ಯ ಪ್ರಯತ್ನವೆಲ್ಲವನ್ನು; ತೃಣಕೆಣೆ(ತೃಣಕೆ+ಎಣೆ)-ಹುಲ್ಲಿಗೆ ಸಮಾನ; ವಿಸರ್ಜಿಸುತ-ತ್ಯಜಿಸುತ್ತ;  ಅಗ್ನಿವೈತರಣಿಗೆ-ಬೆಂಕಿ ಎಂಬ ವೈತರಣಿಗೆ(ನರಕದ ಬಳಿಯಲ್ಲಿ ಇರುವುದೆಂದು ನಂಬಲಾಗಿರುವ ನದಿ);  ವೈದೇಹಿಗಾತ್ಮಜರಾಗಿ-ಸೀತೆಗೆ ಮಕ್ಕಳಾಗಿ; ರೋದಿಸುತ್ತಿರ್ದವೋಲ್-ಅಳುತ್ತಿದ್ದ ಹಾಗೆ.   

            ಹಾಗೆ ತಾನು ತನ್ನ ತಮ್ಮನಾದ ಕುಂಭಕರ್ಣನೊಂದಿಗೆ ಮಗುವಾಗುತ್ತ ಆಶ್ರಮದಲ್ಲಿ ಸೀತೆಯ ತೊಡೆಯ ಮೇಲೆ ಆಡುತ್ತಿದ್ದ ಅದ್ಭುತಕ್ಕೆ ಗಾಬರಿಗೊಂಡು ಎಚ್ಚೆತ್ತುಕೊಂಡು, ಮತ್ತೆ ಮರೆವಿನ ಸಾವಿನಿಂದ ಎತ್ತಿ ನೆನಪಿನ ಸ್ಥಿತಿಗೆ ಎಳೆದು ಸ್ಥಿರಗೊಳಿಸುವ ಹಾಗೆ “ಮಂಡೋದರೀ, ಮಯಾತ್ಮಜೇ, ಪ್ರಿಯೇ ನನ್ನನ್ನು ರಕ್ಷಿಸು” ಎಂದು ಅರಚುತ್ತ ಅರಚುತ್ತ ಕೂಗಿದನು. ಹಸುಳೆಯ ಧ್ವನಿಯಂತಹ ಅರಚಾಟವನ್ನು ಕೇಳಿ, ಗಾಬರಿಗೊಂಡು ಪೂಜಾಮಂದಿರವನ್ನು ಪ್ರವೇಶಿಸಿದ ಮಂಡೋದರೀ ಆಶ್ಚರ್ಯಚಕಿತೆಯಾಗಿ ತನ್ನ ಗಂಡನಾದ ರಾವಣನ ದುಃಸ್ವಪ್ನಕ್ಕೆ ತಳಮಳಗೊಂಡು ಪರಾಕ್ರಮಶಾಲಿಯೂ ಮಹಾದೈತ್ಯನೂ ಚಕ್ರವರ್ತಿಯೂ ಎನಿಸಿಕೊಂಡ ರಾವಣನು ಆಗತಾನೇ ಹುಟ್ಟಿದ ಹಸುಳೆಯ ರೀತಿಯಲ್ಲಿ ವಿಕಾರವಾಗಿ ಅಳುತ್ತಿರುವ ರೀತಿಗೆ ಅತಿಯಾಗಿ ಹೆದರಿ, ತನ್ನ ತೊಡೆಗಳೆಂಬ ಹಾಸುಗೆಯನ್ನು ರಾವಣನ ತಲೆಗೆ ದಿಂಬಾಗಿ ಮಾಡಿದಳು. ಅವನ ಹಣೆಯ ಮೇಲಿನ ಬೆವರನ್ನು ಒರೆಸಿದಳು. ಬೀಸಣಿಗೆಯನ್ನು ಬೀಸಿ ಗಾಳಿಹಾಕಿ, ಶೈತ್ಯೋಪಚಾರವನ್ನು ಮಾಡಿದಳು. ಅನಂತರ ದೇವೇಂದ್ರನನ್ನೂ ಜಯಿಸುವ ಸಾಮರ್ಥ್ಯ ಹೊಂದಿದ, ಹಸುಳೆಯಂತೆ ಭಯಭೀತನಾದ  ಗಂಡನನ್ನು ಮಾತಾಡಿಸಿದಳು.  ಆತನನ್ನು ಬಿಗಿದಪ್ಪಿಕೊಂಡಳು, ಚುಂಬಿಸಿದಳು, ಕರೆಕರೆದು ಮೈದಡವಿ ಮತ್ತೆ ಗಂಡನನ್ನು ಸ್ವಪ್ನಾವಸ್ಥೆಯಿಂದ ಜಾಗ್ರತಾವಸ್ಥೆಗೆ ಎಳೆದೊಯ್ದುದಳು.

            ಮಂಡೋದರಿಯ ಉಪಚಾರದಿಂದ, ಅವಳು ತನ್ನ ಹೆಸರನ್ನು ಕೂಗಿದ್ದರಿಂದ ಎಚ್ಚೆತ್ತ ರಾವಣನಿಗೆ, “ನಾನು ನಿನ್ನ ಪಕ್ಕದಲ್ಲಿಯೇ ಇದ್ದೇನೆ. ಹೆದರಬೇಡ, ಅದು ಹಾಳು ಕನಸು” ಎಂದು ಸಮಾಧಾನಿಸಿದಾಗ, ರಾವಣನು, “ನಾನು ಕಂಡದ್ದು ಕನಸಲ್ಲ! ಈಗ ನಾನು ಎಲ್ಲಿದ್ದೇನೆ? ಹೇಳು, ಪ್ರಿಯೆ!”, ಎಂದು ಕೇಳಿದನು. ಆಗ ಮಂಡೋದರಿಯು, “ಲಂಕೆಯಲ್ಲಿರುವೆ, ನಮ್ಮ ಅರಮನೆಯ ಶೈವಮಂದಿರದಲ್ಲಿ!” ಎಂದಳು.  ಆಗ ರಾವಣನು, “ನನ್ನ ಮೈಯೆಲ್ಲಿ? ನನ್ನ ಮುಖವೆಲ್ಲಿ?” ಎಂದು ಗಾಬರಿಯಿಂದಲೇ ಕೇಳಿದನು. ಆಗ ಆಕೆ, “ಇಲ್ಲೇ ಇವೆಯಲ್ಲ!” ಎಂದು ಉತ್ತರಿಸಿದಾಗ, ಆತ, “ಹಾಗಾದರೆ ನಾನು ಯಾರು?” ಎಂದು ಪ್ರಶ್ನಿಸಿದನು. ಅದಕ್ಕೆ ಮಂಡೋದರಿಯು, “ದಶಕಂಠನಾದ ಅಸುರೇಶ್ವರನು! ಮತ್ತು ಮಂಡೋದರಿಯ ಜೀವಿತೇಶ್ವರನು” ಎಂದು ಉತ್ತರಿಸಿದಳು. ಆದರೆ ರಾವಣನಿಗೆ ಇನ್ನೂ ಗೊಂದಲ ಬಗೆಹರಿಯಲಿಲ್ಲ. ಅವನು ಮತ್ತೆ, “ಅಹುದುಹುದೆ! ಪ್ರಿಯೆ, ನನಗೆ ಕೇವಲ ಮರೆವು ಮಾತ್ರವಲ್ಲ, ನನ್ನ ಆತ್ಮವು ತಿಳಿವಳಿಕೆಯ ಅಳಿವಿನಿಂದ ಮರುಹುಟ್ಟಿಗೆ ಜಾರಿದಂತಾಯಿತು. ನನ್ನ ಅಹಂಕಾರದಿಂದ ಕೂಡಿದ ಈ ಮನುಷ್ಯಪ್ರಯತ್ನವೆಲ್ಲವೂ ಹುಲ್ಲಿಗೆ ಸಮಾನವೆಂದು ತಿಳಿದು ಅದೆಲ್ಲವನ್ನೂ ಅಗ್ನಿವೈತರಣಿಗೆ ವಿಸರ್ಜಿಸುತ್ತ, ಮಹಾ ಪ್ರಯತ್ನದಿಂದ ಹಿಂತಿರುಗಿದೆನು” ಎಂದು ನಕ್ಕುನುಡಿದನು. “ನಲ್ಲೆ ಮಂಡೋದರೀ, ವಿನೋದವನ್ನು ಮೊದಲು ಕೇಳು, ಯಾವುದೋ ಋಷಿಯ ಆಶ್ರಮದಲ್ಲಿ ನಾನು, ಸಹೋದರನಾದ ಕುಂಭಕರ್ಣನನ್ನು ಕೂಡಿಕೊಂಡು ಸೀತೆಗೆ ಮಕ್ಕಳಾಗಿ ಆಕೆಯ ಮಡಿಲಲ್ಲಿ ಅಳುತ್ತಿದ್ದ ಹಾಗೆ….”  ಎನ್ನುತ್ತಿದ್ದಂತೆಯೇ ಮುಂದೆ ರಾವಣನಿಗೆ ವಿವರಿಸಲು ಸಾಧ್ಯವಾಗಲಿಲ್ಲ.  

 

                                         ಮುನ್ನೊರೆಯಲಮ್ಮದೆಯೆ

ಕೆಮ್ಮನಿರ್ದಾಣ್ಮಂಗೆ ಮಯನ ಸುತೆ “ಕನಸಾಯ್ತೆ?”

ಎನೆ. ದೇವದಾನವ ಭಯಂಕರಂ ತಲೆಯೊಲೆದು   ೨೫೦

ಸುಯ್ದು “ಅಲ್ತಲ್ತು! ಅದು ಕನಸ ಪಾಂಗಲ್ತು!”

                                                                     “ಮೇಣ್?”

“ಅನುಭವ ವಿಶೇಷಮಂ ಪೇಳ್ವೆನೆಂತಾಂ, ಮಡದಿ?

ಪೋಲ್ವೆಗಮಸದಳಂ, ಅಸಾಮನ್ಯಮಾ ನಿರುಪಮಂ,

ನನಗುಮದು ಇದೆ ಮೊದಲ್! ಎಂತುಮದು ಕನಸಲ್ತು!”

“ಸೀತೆಯೊಳ್ ನಿನಗೀಗಳಿರ್ಪೊಂದು ಸಾತ್ತ್ವಿಕದ

ಭಾವಶುದ್ಧಿಯೆ ದಿಟಂ ಪ್ರತಿಮೆಯಂ ಪಡೆದುದಾ

ಸ್ವಪ್ನದೊಳ್”

                     “ತಂಗೆಯುಪದೇಶಮಾದುದೊ ನಿನಗೆ?”

“ಪೇಳ್ದಳತ್ತಿಗೆ ನಿನ್ನ ವೀರಧರ್ಮಂ ನೆನೆದ ಆ

ಭವ್ಯ ಪಥಮಂ!”

                          “ಸಮ್ಮತಮೊ ನಿನಗೆ? ಪೇಳ್, ದೇವಿ!

ಪಾಪಿಯಂ ಕೈಬಿಡದೆ ಪುಣ್ಯಕೊಯ್ಯುವ ದೇವಿ         ೨೬೦

ನನಗೆ ನೀನೊರ್ವಳೆಯೆ ದಲ್!” ಪ್ರಶಂಸೆಗೆ ಬಾಗಿ

ತನ್ನ ಕಾಲ್ವಿಡಿದವಳ ಕಣ್ಣೀರ್ ಒರಸಿ:  “ದಿಟಂ,

ದೇವಿ ನೀನೊರ್ವಳೆಯೆ ರಾವಣಗೆ! ಮೇಣ್ ಸೀತೆ!”

ಮನದಿ ಮೂಡಿದ ಮೈಥಿಲಿಯ ಚಿತ್ರಕಸುರಂ

ನಮಸ್ಕರಿಸಿ, ಮಂಡೋದರಿಯ ಮೆಯ್ಗೆ ಮುಳ್ಳೇಳೆ

ಪೇಳ್ದನಂತಸ್ಥಮಂ:  “ನಿನಗಿಂ ಮಿಗಿಲ್ ಸೀತೆ

ನನಗೆ ದೇವತೆ, ಮಾತೆ! ಶ್ರದ್ಧೆಗೆಟ್ಟಿರ್ದೆನಗೆ

ಶ್ರದ್ಧೆಯಂ ಮರುಕೊಳಿಸುತಾತ್ಮದುದ್ಧಾರಮಂ

ತಂದ ದೇವತೆ, ಪುಣ್ಯಮಾತೆ!”

ಅನ್ವಯಕ್ರಮ:

ಮುನ್ ಒರೆಯಲ್ ಅಮ್ಮದೆಯೆ ಕೆಮ್ಮನೆ ಇರ್ದ ಆಣ್ಮಂಗೆ ಮಯನ ಸುತೆ, “ಕನಸಾಯ್ತೆ?” ಎನೆ, ದೇವ ದಾನವ ಭಯಂಕರಂ ತಲೆಯೊಲೆದು ಸುಯ್ದು “ಅಲ್ತು ಅಲ್ತು! ಅದು ಕನಸ ಪಾಂಗಲ್ತು!”, “ಮೇಣ್?”, “ಮಡದಿ, ಆಂ ಅನುಭವ ವಿಶೇಷಮಂ ಎಂತು ಪೇಳ್ವೆನ್? ಪೋಲ್ವೆಗಂ ಅಸದಳಂ, ಅಸಾಮಾನ್ಯಂ ಆ ನಿರುಪಮಂ, ನನಗುಂ ಅದು ಇದೆ ಮೊದಲ್! ಎಂತುಂ ಅದು ಕನಸಲ್ತು!” ,

“ಈಗಳ್ ನಿನಗೆ ಸೀತೆಯೊಳ್ ಇರ್ಪುದು ಒಂದು ಸಾತ್ತ್ವಿಕದ ಭಾವಶುದ್ಧಿಯೆ ದಿಟಂ ಪ್ರತಿಮೆಯಂ ಪಡೆದುದು ಆ ಸ್ವಪ್ನದೊಳ್.” “ನಿನಗೆ ತಂಗೆಯ ಉಪದೇಶಂ ಆದುದೋ?”, “ಪೇಳ್ದಳ್ ಅತ್ತಿಗೆ ನಿನ್ನ ವೀರಧರ್ಮಂ ನೆನೆದ ಆ ಭವ್ಯ ಪಥಮಂ!”,   “ಸಮ್ಮತಮೋ ನಿನಗೆ? ಪೇಳ್, ದೇವಿ ನನಗೆ ನೀನ್ ಒರ್ವಳೆಯೆ ದಲ್!”, “ಪ್ರಶಂಸೆಗೆ ಬಾಗಿ ತನ್ನ ಕಾಲ್ ಪಿಡಿದ ಅವಳ ಕಣ್ಣೀರ್ ಒರಸಿ:  “ದಿಟಂ, ದೇವಿ ನೀನ್ ಒರ್ವಳೆಯೆ ರಾವಣಂಗೆ! ಮೇಣ್ ಸೀತೆ!”  ಮನದಿ ಮೂಡಿದ ಮೈಥಿಲಿಯ ಚಿತ್ರಕೆ ಅಸುರಂ ನಮಸ್ಕರಿಸಿ, ಮಂಡೋದರಿಯ  ಮೆಯ್ಗೆ ಮುಳ್ಳು ಏಳೆ ಅಂತಸ್ಥಮಂ ಪೇಳ್ದನ್: “ನಿನಗಿಂ ಮಿಗಿಲ್ ಸೀತೆ, ನನಗೆ ದೇವತೆ, ಮಾತೆ! ಶ್ರದ್ಧೆಗೆಟ್ಟು ಇರ್ದ ಎನಗೆ ಶ್ರದ್ಧೆಯಂ ಮರುಕೊಳಿಸುತ ಆತ್ಮನ ಉದ್ಧಾರಮಂ ತಂದ ದೇವತೆ, ಪುಣ್ಯಮಾತೆ!”  

ಪದ-ಅರ್ಥ:

ಮುನ್ನ-ಮೊದಲು; ಒರೆಯಲ್-ತಿಳಿಸಲು;  ಅಮ್ಮದೆಯೆ-ಸಾಧ್ಯವಾಗದೆ; ಕೆಮ್ಮನಿರ್ದ-ಸುಮ್ಮನಿದ್ದ; ಆಣ್ಮಂಗೆ-ಗಂಡನಿಗೆ; ಮಯನ ಸುತೆ-ಮಯನ ಮಗಳು(ಮಂಡೋದರೀ);  ಕನಸಾಯ್ತೆ-ಕನಸು ಬಿತ್ತೇ?; ತಲೆಯನೊಲೆದು-ತಲೆಯನ್ನಾಡಿಸಿ; ಸುಯ್ದು-ನಿಟ್ಟುಸಿರುಬಿಟ್ಟು;  ಅಲ್ತಲ್ತು-ಅಲ್ಲಲ್ಲ; ಕನಸ  ಪಾಂಗಲ್ತು– ಕನಸಿನ ರೀತಿಯಲ್ಲ; ಮೇಣ್-ಮತ್ತೆ?;  ಪೇಳ್ವೆನೆಂತಾಂ (ಪೇಳ್ವೆನ್+ಎಂತು+ಆಂ)-ನಾನು ಹೇಗೆ ಹೇಳಲಿ?;  ಪೋಲ್ವೆಗಮಸದಳಂ (ಪೋಲ್ವೆಗಂ+ಅಸದಳಂ)-ಹೋಲಿಕೆಗೆ ಅಸಾಧ್ಯ;  ನಿರುಪಮಂ(ನಿರ್+ಉಪಮಂ)-ಉಪಮವಿಲ್ಲದ; ಎಂತುಂ-ಹೇಗೂ; ಸಾತ್ತ್ವಿಕ-ಸತ್ವಗುಣದಿಂದ ಕೂಡಿದ;  ಭಾವಶುದ್ಧಿ-ಮನಸ್ಸಿನ ಸ್ವಚ್ಛತೆ; ದಿಟಂ-ಸತ್ಯ;  ಪ್ರತಿಮೆಯಂ-ಸಂಕೇತವನ್ನು;  ತಂಗೆ-ಸೀತೆ;  ದಲ್-ನಿಶ್ಚಯವಾಗಿ;  ದಿಟಂ-ಸತ್ಯ; ಮೈಥಿಲಿ-ಸೀತೆ;  ಅಸುರಂ-ರಾವಣನು; ಮುಳ್ಳೇಳೆ-ಮುಳ್ಳುಗಳು ಏಳುವಂತೆ;  ಅಂತಸ್ಥಮಂ-ಮನಸ್ಸಿನೊಳಗಿನ ಅಭಿಪ್ರಾಯವನ್ನು;  ನಿನಗಿಂ-ನಿನಗಿಂತಲೂ; ಶ್ರದ್ಧೆಗೆಟ್ಟಿರ್ದ-ಶ್ರದ್ಧೆಯನ್ನು ಕಳೆದುಕೊಂಡ, ಶ್ರದ್ಧೆಯಿಲ್ಲದ.

            ಮುಂದೆ ಹೇಳಲು ಸಾಧ್ಯವಾಗದೆ ಸುಮ್ಮನಿದ್ದ ಗಂಡನಿಗೆ ಮಂಡೋದರಿಯು “ನಿನಗೆ ಕನಸು ಬಿತ್ತೆ?” ಎಂದಾಗ ದೇವ ಹಾಗೂ ದಾನವರ ಪಾಲಿಗೆ ಭಯಂಕರನಾದ ರಾವಣನು ತನ್ನ ತಲೆಯಾಡಿಸಿ ನಿಟ್ಟುಸಿರು ಬಿಟ್ಟು, “ಅಲ್ಲಲ್ಲ, ಅದು ಕನಸಿನ ರೀತಿಯೇ ಅಲ್ಲ” ಎಂದಾಗ, ಆಕೆ, “ಮತ್ತೆ?” ಎಂದು ಪ್ರಶ್ನಿಸಿದಳು. ಆಗ ರಾವಣನು, “ಅದೊಂದು ಅನುಭವ ವಿಶೇಷ. ಅದನ್ನು ಹೇಗೆ ಹೇಳಲಿ? ಅದು ಹೋಲಿಗೆ ಅಸಾಧ್ಯ, ಉಪಮೆಗೆ ಅಸಾಧ್ಯವಾದುದು. ನನಗೆ ಅದು ಇದೇ ಮೊದಲಬಾರಿ ಅನುಭವಕ್ಕೆ ಬಂದುದು. ಅದು ಯಾವ ರೀತಿಯಲ್ಲೂ ಕನಸಲ್ಲ!” ಎಂದಾಗ ಮಂಡೋದರಿಯು, “ನಿನಗೆ ಸೀತೆಯಲ್ಲಿರುವುದು  ಒಂದು ಸತ್ವಗುಣದಿಂದ ಕೂಡಿದ ಭಾವಶುದ್ಧಿಯೇ ಹೌದು. ಅದು ನಿನಗೆ ಕನಸಿನಲ್ಲಿ ಸಂಕೇತರೂಪವನ್ನು ಪಡೆಯಿತು” ಎಂದಳು.

            ಅಷ್ಟರಲ್ಲಿ ಮಂಡೋದರಿಯು, “ನಿನಗೆ ತಂಗಿಯಿಂದ ಏನಾದರೂ ಉಪದೇಶವಾಯಿತೆ?” “ಸೀತೆ ನಿನ್ನ ವೀರಧರ್ಮಕ್ಕೆ ಪೂರಕವಾದ  ಭವ್ಯಪಥವನ್ನು ಮೆಚ್ಚಿಕೊಂಡಳೇ?” ಎಂದು ಕೇಳಿದಾಗ, ರಾವಣನು, “ದೇವಿ ಮಂಡೋದರೀ, ನಿನಗೆ ಅದು ಸಮ್ಮತವೇ? ಪಾಪಿಯನ್ನು ಕೈಬಿಡದೆ ಪುಣ್ಯದ ಕಡೆಗೆ ಕೊಂಡೊಯ್ಯುವ  ದೇವಿ ಅವಳು. ನನಗೆ ಮಾತ್ರ ನೀನೊಬ್ಬಳೇ” ಎಂದಾಗ ಗಂಡನ ಪ್ರಶಂಸೆಗೆ ಸಂತಸಪಟ್ಟು, ಮಂಡೋದರಿ ಗಂಡ ರಾವಣನ ಕಾಲಿಗೆ ಎರಗಿದಾಗ ರಾವಣನು ಅವಳ ಕಣ್ಣೀರನ್ನು ಒರೆಸಿ, “ಸತ್ಯ, ಮಂಡೋದರಿ, ಈ ರಾವಣನಿಗೆ  ನೀನೊಬ್ಬಳೇ! ಮತ್ತು ಸೀತೆ!” ಎನ್ನುತ್ತ ಮನಸ್ಸಿನಲ್ಲಿ ಮೂಡಿದ ಸೀತೆಯ ಚಿತ್ರಕ್ಕೆ ರಾವಣನು ನಮಸ್ಕರಿಸಿ, ಮಂಡೋದರಿಯ ಮೈಗೆ ಮುಳ್ಳುಗಳೇಳುವಂತೆ ತನ್ನ ಮನಸ್ಸಿನೊಳಗಿನ ಅಭಿಪ್ರಾಯವನ್ನು ಹೇಳಿದನು. “ಸೀತೆ ನಿನಗಿಂತಲೂ ಮಿಗಿಲಾದವಳು, ನನ್ನ ಪಾಲಿಗೆ ದೇವತೆ, ಮಾತೆ! ಶ್ರದ್ಧೆಯನ್ನು ಕಳೆದುಕೊಂಡ ನನಗೆ ಶ್ರದ್ಧೆಯನ್ನು ಮರುಕೊಳಿಸುವಂತೆ ಮಾಡಿ ಆತ್ಮದ ಉದ್ಧಾರವನ್ನು ತೋರಿದ ದೇವತೆ, ಪುಣ್ಯಮಾತೆ!” ಎಂದನು.     

 

                                            “ನಾಂ ಧನ್ಯೆ ದಲ್!

ಬಾಳ್ ಸಾರ್ಥಕಂ! ಸಾವೊ ಬದುಕೊ? ಇನ್ನೆನಗಿರದು  ೨೭೦

ವ್ಯಥೆ: ತಿಳಿದೊಡೀ ನಿನ್ನ ಹೃದಯಂ, ತ್ರಿಮೂರ್ತಿಗಳ್

ಬಂದು ಮೀಯರೆ ಅಲ್ಲಿ?”

                                        “ನೀನೊರ್ವಳಲ್ಲದೆಯೆ

ಮತ್ತೆ ನಂಬುವರಾರದಂ?” “ಪಣಮಿಟ್ಟು ನಂಬಿಪೆಂ

ನನ್ನ ಮಾಂಗಲ್ಯಮಂ!”

                                    “ಬಿಡು ಮಹಾರಾಣಿ ನೀಂ;

ಆರ ನಂಬಿಸಿ ನಿನಗೆ ಆಗಬೇಕಾದುದೇನ್,

ಲಂಕೇಶ್ವರಿಗೆ?”

                       “ಸ್ವಾರ್ಥ ಸಾಧನೆಗೆ! ರಕ್ಷಿಸಲ್

ನನ್ನ ಮಾಂಗಲ್ಯಮಂ!”

                                     “ಕೈಲಾಸ ಸುಸ್ಥಿರಂ

ಮಾಂಗಲ್ಯಮೇಗಳುಂ ನಿನಗೆ!”

                                              “ಕೈಲಾಸಮುಂ

ನಿನ್ನ ಕೈಯಿಂದಲುಗಿತಲ್ತೆ?”

                                           “ಅಲುಗಿತು ವಲಂ!”

“ರಾಮನರ್ಧಾಂಗಿಯಂ ನಾನೆ ಕಪ್ಪಂಗೊಟ್ಟು  ೨೮೦

ತಪ್ಪೊಪ್ಪಿಕೊಳ್ವೆನ್ ಕ್ಷಮಾ ಭಿಕ್ಷೆಯಂ ಬೇಡಿ!”

“ಬೇಡ ನಿನಗಾ ಶ್ರಮಂ. ನನಗಿರಲಿ ಆ ಶಿಕ್ಷೆ!”

“ಶಿಕ್ಷೆಯೆಂದರಿಯದಿರ್”.

                                     “ಶಿಕ್ಷೆಯಲ್ತು, ತಿತಿಕ್ಷೆ.

ಮೇಣ್ ವೀರದೀಕ್ಷೆ!”

                               “ದೇವಿಯನುಯ್ವೊಡಾನೊಡನೆ

ಬಂದಪೆನ್!”

                    “ಸೀತೆ ನನ್ನಂ ಗೆಲ್ದಳದರಿಂದೆ

ರಾಮನಂ ತಂದು ಕಪ್ಪಂಗುಡುವೆನಾತನಂ

ಕದನಮುಖದೊಳ್ ಗೆಲ್ದು!”

                                           “ರಾಮನಪ್ರಾಕೃತಂ.

ಮಾರ್ಕೊಳಲ್, ಮುಕ್ತಿಯಲ್ಲದೆ ಬೇರೆ ಜಯಮುಂಟೆ?”

“ಕಾಳೆಗದೊಳಾತನಂ ಸೋಲಿಸದೆನಗೆ ಮುಕ್ತಿ

ತಾನಿಹುದೆ? ನನಗೆ ವರವಿತ್ತ ಮಾಹೇಶ್ವರಿಯ        ೨೯೦

ಜಿಹ್ವೆ ನನ್ನಿಯ ತವರ್, ತೊದಲಾಗದೇಗಳುಂ!”

“ತೊದಲಾಗದಾದೊಡಮನಂತ ಮುಖಿ ಅದು ಕಣಾ!

ನಾವೊಂದು ಮೊಗದೊಳಾಶಿಸಿದರದು ಬೇರೊಂದು

ನಮ್ಮೂಹೆಗಳವಲ್ಲದಿಹ ಮೊಗದಿ ಕೈಗೂಡಿ

ನಡಸುವುದು ತನ್ನಿಚ್ಛೆಯಂ!”

ಅನ್ವಯಕ್ರಮ:

“ನಾಂ ಧನ್ಯೆ ದಲ್! ಬಾಳ್ ಸಾರ್ಥಕಂ! ಸಾವೊ ಬದುಕೊ? ಇನ್ನು ಎನಗೆ ವ್ಯಥೆ ಇರದು. ನಿನ್ನ ಈ ಹೃದಯಂ ತಿಳಿದೊಡೆ, ತ್ರಿಮೂರ್ತಿಗಳ್ ಬಂದು ಅಲ್ಲಿ ಮೀಯರೆ?”, “ನೀನ್ ಒರ್ವಳ್ ಅಲ್ಲದೆಯೆ ಮತ್ತೆ ಆರ್ ಅದಂ ನಂಬುವರ್?”, “ನನ್ನ ಮಾಂಗಲ್ಯಮಂ ಪಣಂ ಇಟ್ಟು ನಂಬಿಪೆಂ!”, “ಬಿಡು, ಮಾಹಾರಾಣಿ, ನೀಂ ಆರ ನಂಬಿಸಿ ನಿನಗೆ ; ಲಂಕೇಶ್ವರಿಗೆ ಆಗಬೇಕಾದುದು ಏನ್?”, “ಸ್ವಾರ್ಥ ಸಾಧನೆಗೆ, ನನ್ನ ಮಾಂಗಲ್ಯಮಂ ರಕ್ಷಿಸಲ್!”, “ಕೈಲಾಸ ಸುಸ್ಥಿರಂ ಮಾಂಗಲ್ಯಂ ಏಗಳುಂ ನಿನಗೆ!”, “ಕೈಲಾಸಮುಂ ನಿನ್ನ ಕೈಯಿಂದ ಅಲುಗಿತಲ್ತೆ?”, “ಅಲುಗಿತು ವಲಂ!”, “ರಾಮನ ಅರ್ಧಾಂಗಿಯಂ ನಾನೆ ಕಪ್ಪಂಗೊಟ್ಟು ಕ್ಷಮಾ ಭಿಕ್ಷೆಯಂ ಬೇಡಿ ತಪ್ಪ ಒಪ್ಪಿಕೊಳ್ವೆನ್!”, “ನಿನಗೆ ಆ ಶ್ರಮಂ ಬೇಡ, ಆ ಶಿಕ್ಷೆ ನನಗಿರಲಿ”, “ಶಿಕ್ಷೆ ಎಂದು ಅರಿಯದಿರ್”, “ಶಿಕ್ಷೆ ಅಲ್ತು, ತಿತಿಕ್ಷೆ. ಮೇಣ್ ವೀರದೀಕ್ಷೆ!”, “ದೇವಿಯನ್ ಉಯ್ವೊಡೆ ಆನ್ ಒಡನೆ ಬಂದಪೆನ್!”, “ಸೀತೆ ನನ್ನಂ ಗೆಲ್ದಳ್ ಅದರಿಂದೆ ರಾಮನಂ ಕದನಮುಖದೊಳ್ ಗೆಲ್ದು ಆತನಂ ತಂದು ಕಪ್ಪಂ ಕುಡುವೆನ್!”, “ರಾಮನ್ ಅಪ್ರಾಕೃತಂ. ಮಾರ್ಕೊಳಲ್. ಮುಕ್ತಿಯಲ್ಲದೆ ಬೇರೆ ಜಯಂ ಉಂಟೆ?”, “ಕಾಳೆಗದೊಳ್ ಆತನಂ ಸೋಲಿಸದೆ ಎನಗೆ ಮುಕ್ತಿ ತಾನ್ ಅಹುದೆ? ನನಗೆ ವರವಿತ್ತ ಮಾಹೇಶ್ವರಿಯ ಜಿಹ್ವೆ ನನ್ನಿಯ ತವರ್, ಏಗಳುಂ ತೊದಲ್ ಆಗದು!”, “ತೊದಲ್ ಆಗದು ಆದೊಡಂ  ಅದು ಅನಂತ ಮುಖಿ ಕಣಾ! ನಾವ್ ಒಂದು ಮೊಗದೊಳ್ ಆಶಿಸಿದರೆ ಅದು ಬೇರೊಂದು ನಮ್ಮ ಊಹೆಗಳ್ ಅಲ್ಲದಿಹ ಮೊಗದಿ ಕೈಗೂಡಿ ತನ್ನಿಚ್ಛೆಯಂ ನಡಸುವುದು!”

ಪದ-ಅರ್ಥ :

ನಾಂ ಧನ್ಯೆ ದಲ್-ನಾನು ನಿಸ್ಸಂದೇಹವಾಗಿಯೂ ಧನ್ಯೆ;  ಇನ್ನೆನಗಿರದು-ಇನ್ನು ನನಗೆ ಇರದು; ಏಗಳುಂ-ಯಾವಾಗಲೂ;  ಅರ್ಧಾಂಗಿ-ಹೆಂಡತಿ;  ಕಪ್ಪಂಗೊಟ್ಟು-ಕಪ್ಪವಾಗಿ ಕೊಟ್ಟು; ತಿತಿಕ್ಷೆ-ತಾಳ್ಮೆ;  ಮೇಣ್-ಮತ್ತು;  ಉಯ್ವೊಡೆ-ಒಯ್ಯುವಾಗ;  ಕದನಮುಖ-ಯುದ್ಧ;  ಗೆಲ್ದು-ಗೆದ್ದು;  ಅಪ್ರಾಕೃತಂ-ಪಾಮರನಲ್ಲದವನು, ಬುದ್ಧಿವಂತ;  ಮಾರ್ಕೊಳಲ್-ಎದುರಿಸಲು;  ಕಾಳೆಗದೊಳ್-ಯುದ್ಧದಲ್ಲಿ; ನನ್ನಿ-ಸತ್ಯ; ತೊದಲಾಗದು-ಸುಳ್ಳಾಗದು;  ಏಗಳುಂ-ಯಾವತ್ತೂ;  ಅನಂತ ಮುಖಿ-ಕೊನೆಯಿಲ್ಲದ ಮುಖವುಳ್ಳದ್ದು;  ಅಳವಲ್ಲದಿಹ-ನಿಲುಕದ.

            ರಾವಣನ ಮಾತಿಗೆ ಮಂಡೋದರಿಯು, “ಇನ್ನು ನಾನು ನಿಸ್ಸಂದೇಹವಾಗಿಯೂ ಧನ್ಯೆ. ನನ್ನ ಬಾಳು ಸಾರ್ಥಕವಾಯಿತು. ಸಾವೋ ಬದುಕೋ ನನಗೆ ಇನ್ನು ಯಾವುದೇ ವ್ಯಥೆ ಇರಲಾರದು. ನಿನ್ನ ಹೃದಯ ತಿಳಿಯಾದುದನ್ನು ಅರಿತರೆ ತ್ರಿಮೂರ್ತಿಗಳೂ ಅಲ್ಲಿ ಬಂದು ಮೀಯದೆ ಇರಲು ಸಾಧ್ಯವೆ?” ಎಂದು ಮಂಡೋದರೀ ತನ್ನ ಗಂಡನ ಮನಸ್ಸು ಪರಿವರ್ತನೆಯಾದುದನ್ನು ಮೆಚ್ಚಿಕೊಂಡಳು. ಆಗ ರಾವಣನು, “ನೀನು ಒಬ್ಬಳಲ್ಲದೆ ಮತ್ತೆ ಬೇರೆ ಯಾರು ಅದನ್ನು ನಂಬುತ್ತಾರೆ?” ಎಂದಾಗ ಮಂಡೋದರಿಯು, “ನನ್ನ ಮಾಂಗಲ್ಯವನ್ನು ಪಣಕ್ಕಿಟ್ಟು ನಂಬಿಸುತ್ತೇನೆ” ಎಂದಳು. ಆಗ ರಾವಣನು, “ಬಿಡು ಮಹಾರಾಣಿ, ನೀನು ಈಗ ಯಾರನ್ನು ನಂಬಿಸಿ ನಿನಗೆ, ಲಂಕೇಶ್ವರಿಗೆ ಆಗಬೇಕಾದುದೇನು?’ ಎಂದು ಪ್ರಶ್ನಿಸಿದನು. ಅದಕ್ಕೆ ಮಂಡೋದರಿಯು, “ಅದು ನನ್ನ ಸ್ವಾರ್ಥ ಸಾಧನೆಗೆ, ಮಾತ್ರವಲ್ಲ ನನ್ನ ಮಾಂಗಲ್ಯವನ್ನು ರಕ್ಷಿಸುವುದಕ್ಕೆ” ಎಂದಳು. ಆಗ ರಾವಣನು, “ನಿನ್ನ ಮಾಂಗಲ್ಯವು ಯಾವತ್ತು ಕೈಲಾಸದಂತೆ ಸುಸ್ಥಿರವಾಗಿಯೇ ಇದೆಯಲ್ಲ!” ಎಂದಾಗ ಆಕೆ, “ಕೈಲಾಸವೂ ನಿನ್ನಿಂದ ಒಮ್ಮೆ ಅಲುಗಾಡಿತಲ್ಲವೆ?” ಎಂದಳು.  ಆ ಮಾತಿಗೆ ರಾವಣನು, “ನಿಜ, ಅಲುಗಾಡಿತು!” ಎಂದನು.

            ಮಂಡೋದರಿಯು, “ರಾಮನ ಅರ್ಧಾಂಗಿಯಾದ ಸೀತೆಯನ್ನು ನಾನೆ ಸ್ವತಃ ಕಪ್ಪವಾಗಿ ಕೊಟ್ಟು, ರಾಮನಲ್ಲಿ ಕ್ಷಮಾಭಿಕ್ಷೆಯನ್ನು ಬೇಡಿ ತಪ್ಪನ್ನು ಒಪ್ಪಿಕೊಳ್ಳುತ್ತೇನೆ!” ಎಂದಾಗ, ರಾವಣನು, “ಮಂಡೋದರಿ, ನಿನಗೆ ಆ ಶ್ರಮವೇ ಬೇಡ, ಆ ಶಿಕ್ಷೆ ನನಗಿರಲಿ” ಎಂದು ಹೇಳಿದಾಗ ಅವಳು, “ಶಿಕ್ಷೆ ಎಂದು ತಿಳಿದುಕೊಳ್ಳಬೇಡ” ಎಂದಳು. ಅದಕ್ಕೆ ರಾವಣನು, “ಅದು ಶಿಕ್ಷೆಯಲ್ಲ, ತಾಳ್ಮೆ, ಮತ್ತು ವೀರದೀಕ್ಷೆ!” ಎಂದನು. ಆಗ ಮಂಡೋದರಿಯು, “ಸೀತೆಯನ್ನು ಕರೆದೊಯ್ಯುವಾಗ ನಾನೂ ನಿಮ್ಮೊಡನೆ ಬರುತ್ತೇನೆ” ಎಂದಳು. ಅದಕ್ಕೆ ರಾವಣನು, “ಸೀತೆ ನನ್ನನ್ನು ಗೆದ್ದಿದ್ದಾಳೆ. ಅದಕ್ಕಾಗಿ ಯುದ್ಧದಲ್ಲಿ ರಾಮನನ್ನು ಗೆದ್ದು, ಅವನನ್ನು ಸೆರೆಹಿಡಿದು, ಸೀತೆಗೆ ಕಪ್ಪವಾಗಿ ಒಪ್ಪಿಸುತ್ತೇನೆ!” ಎಂದನು. ಆಗ ಮಂಡೋದರಿಯು, “ರಾಮನನ್ನು ಯುದ್ಧದಲ್ಲಿ ಎದುರಿಸಲು ಆತ ಪ್ರಾಕೃತನಲ್ಲ(ದಡ್ಡನಲ್ಲ) ಅವನು ಅಪ್ರಾಕೃತ(ಬುದ್ಧಿವಂತ) ನಾಗಿದ್ದಾನೆ. ಮುಕ್ತಿಗಿಂತ ಹಿರಿದಾದ ಜಯವೆಂಬುದು ಇದೆಯೆ?” ಎಂದಾಗ, ರಾವಣನು, “ಯುದ್ಧದಲ್ಲಿ ರಾಮನನ್ನು ಸೋಲಿಸದೆ ನನಗೆ ಬೇರೆ ಮುಕ್ತಿ ಎಂಬುದು ಇದೆಯೆ? ನನಗೆ ಈಗಾಗಲೇ ವರವನ್ನು ನೀಡಿದ ಮಾಹೇಶ್ವರಿಯ ನಾಲಗೆ ಸತ್ಯದ ತವರಾಗಿದೆ. ಆಕೆಯ ಮಾತು ಯಾವತ್ತೂ ಸುಳ್ಳಾಗದು!” ಎಂದನು. ಅದಕ್ಕೆ ಮಂಡೋದರಿಯು, “ಸುಳ್ಳಾಗದು, ಆದರೂ ಅದು ಕೊನೆಯೇ ಇಲ್ಲದುದು. ನಾವು ಒಂದು ರೀತಿಯಲ್ಲಿ  ಅಪೇಕ್ಷಿಸಿದರೆ ಅದು ನಮ್ಮ ಊಹೆಗೂ ಮಿಗಿಲಾದ ಬೇರೊಂದು ರೀತಿಯಲ್ಲಿ ಕೈಗೂಡಿ ತನ್ನ ಇಚ್ಛೆಯಂತೆ ನಡೆಸುತ್ತದೆ!” ಎಂದು ವಿವರಿಸಿ ಹೇಳಿದಳು.   

 

                                             “ನೀಂ ಪರಿವ್ರತೆ.

ಅಮಂಗಳ ಮನೋರಥವನುಳಿದ ಶುಭಬುದ್ಧಿಯಿಂ

ಶುದ್ಧನಾನುಂ. ಜಗನ್ಮಾತೆ ವರವಿತ್ತಿಹಳ್.

ಚಿಂತೆಯೇಕಿನ್? ನೋಡು, ಮೂಡುದೆಸೆಯೊಳ್ ಕೆಂಪು

ಕಣ್ದೆರೆಯುತಿಹೆದಾಶೆಯೋಲ್. ಇಂದು ಏಕಾಂಗಿ

ನಡೆವೆನಾಂ ಕಾಳಗಕೆ. ಕೊಲ್ವುದಲ್ತೆನಗೆ ಗುರಿ             ೩೦೦

ಸೀತಾ ಶುಭೋದಯಕೆ ಗೆಲ್ವುದಲ್ಲದೆ ನನಗೆ

ಗುರಿ ಕೊಲ್ವುದಲ್ತು.”

                               “ವೈರಿಗೆ ತಿಳಿಯದೀ ಹೃದಯ

ಪರಿವರ್ತನಂ!”  “ತಿಳಿಯಬಾರದದೆ ವೀರತೆಗೆ

ದೀಕ್ಷೆ! ಪೇಳ್ದೊಡಮದಂ ನಂಬರಾರುಂ! ಪೇಳೆ

ಪೇಡಿತನಮಲ್ಲದನ್ಯಪ್ರಯೋಜನಮೆನಗೆ

ತೋರದು, ಮಹಾರಾಜ್ಞಿ, ಯಾಚಿಸುವೆನೊಂದನಾಂ

ನಿನ್ನನೀ ನನ್ನ ಪೂಣ್ಕೆಯನಾರ್ಗಮೊರೆಯದಿರು:

ಹೃದಯ ಗಹ್ವರದಲ್ಲಿ ಭವ್ಯಕೃತಿಯಾಗಿರಲಿ

ನನ್ನ ನನ್ನೀ ದಿವ್ಯಗುಹ್ಯಂ. ಜಗತ್ರಯಂ       

ತಿಳಿವುದೀ ಪೂಣ್ಕೆ ಕೈಗೂಡಲಲ್ಲದಿರೆ, ಪೋ,    ೩೧೦

ಪೇಳ್ದ ನೀನೆಯೆ ನಗೆಗೆ ಪಕ್ಕಾಗುವಣಕಮಂ

ಸಹಿಸದೆನ್ನಾತ್ಮಂ! ತೆರಳ್, ಪೋಗು, ಸೀತೆಯಂ

ಸೇವಿಸುತ್ತಿರು, ರಾಮನಂ ಗೆಲ್ದು ಸೆರೆವಿಡಿದು

ತರ್ಪನ್ನೆಗಂ!”

ಅನ್ವಯಕ್ರಮ:

ನೀಂ ಪತಿವ್ರತೆ. ಅಮಂಗಳ ಮನೋರಥಮನ್ ಉಳಿದ ಶುಭಬುದ್ಧಿಯಿಂ ಶುದ್ಧನ್ ಆನುಂ. ಜಗನ್ಮಾತೆ ವರವ ಇತ್ತಿಹಳ್. ಚಿಂತೆ ಏಕಿನ್? ನೋಡು, ಮೂಡುದೆಸೆಯೊಳ್ ಕೆಂಪು ಕಣ್ದೆರೆಯುತ ಇಹುದು ಆಶೆಯೋಲ್. ಇಂದು ಆಂ ಏಕಾಂಗಿ ಕಾಳಗಕೆ ನಡೆವೆನ್. ಎನಗೆ ಕೊಲ್ವುದು ಗುರಿ ಅಲ್ತು.”, “ವೈರಿಗೆ ತಿಳಿಯದೆ ಈ ಹೃದಯ ಪರಿವರ್ತನಂ!”, ”ತಿಳಿಯಬಾರದು, ಅದೆ ವೀರತೆಗೆ ದೀಕ್ಷೆ! ಪೇಳ್ದೊಡಂ ಅದಂ ಆರುಂ ನಂಬರ್! ಪೇಳೆ ಪೇಡಿತನಂ ಅಲ್ಲದೆ ಎನಗೆ ಅನ್ಯ ಪ್ರಯೋಜನಂ ತೋರದು. ಮಹಾರಾಜ್ಞಿ, ನಿನ್ನನ್ ಆಂ ಒಂದನ್ ಯಾಚಿಸುವೆನ್, ಈ ನನ್ನ ಪೂಣ್ಕೆಯನ್ ಆರ್ಗಂ ಒರೆಯದಿರು; ನನ್ನ ದಿವ್ಯ ಗುಹ್ಯಂ ನಿನ್ನ ಹೃದಯ ಗಹ್ವರದಲ್ಲಿ ಭವ್ಯಕೃತಿಯಾಗಿ ಇರಲಿ  . ಜಗತ್ ತ್ರಯಂ ತಿಳಿವುದು ಈ ಪೂಣ್ಕೆ ಕೈಗೂಡಲ್ ಅಲ್ಲದಿರೆ, ಪೋ, ಪೇಳ್ದ ನೀನೆಯೆ ನಗೆಗೆ ಪಕ್ಕಾಗುವ ಅಣಕಮಂ ಎನ್ನ ಆತ್ಮಂ ಸಹಿಸದು! ತೆರಳ್, ಪೋಗು. ರಾಮನಂ ಗೆಲ್ದು ಸೆರೆವಿಡಿದು ತರ್ಪ ಅನ್ನೆಗಂ! ಸೀತೆಯಂ ಸೇ॑ವಿಸುತ್ತಿರು.  

ಪದ-ಅರ್ಥ:

ಅಮಂಗಳ-ಅಶುಭ;  ಮನೋರಥವನ್-ಮನಸ್ಸಿನ ಅಭಿಲಾಷೆಯನ್ನು; ಉಳಿದ– ತ್ಯಜಿಸಿದ;  ಶುಭಬುದ್ಧಿ-ಒಳಿತಿನ ಅರಿವು;  ಮೂಡುದೆಸೆ-ಮೂಡಣ ದಿಕ್ಕು;  ಕೆಂಪು ಕಣ್ದೆರೆ-ಅರುಣೋದಯವಾಗು; ನಿನ್ನನ್-ನಿನ್ನಲ್ಲಿ(ವಿಭಕ್ತಿ ಪಲ್ಲಟ: ಸಪ್ತಮಿಗೆ ಬದಲಾಗಿ ದ್ವಿತೀಯ ವಿಭಕ್ತಿ ಪ್ರಯೋಗ); ಯಾಚಿಸುವೆನ್-ಬೇಡುತ್ತೇನೆ; ಪೂಣ್ಕೆ-ಪ್ರತಿಜ್ಞೆ, ಶಪಥ;  ಆರ್ಗಮೊರೆಯದಿರು(ಆರ್ಗಂ+ ಒರೆಯದೆ+ಇರು)- ಯಾರಿಗೂ ಹೇಳಬೇಡ;  ಹೃದಯ ಗಹ್ವರ-ಹೃದಯವೆಂಬ ಗವಿ; ಭವ್ಯಕೃತಿ-ಉತ್ಕೃಷ್ಟವಾದ ಕಾರ್ಯ:  ದಿವ್ಯಗುಹ್ಯಂ-ವಿಶೇಷವಾದ ರಹಸ್ಯ;  ಜಗತ್ರಯ-ಮೂರು ಲೋಕ(ಸ್ವರ್ಗ, ಮರ್ತ್ಯ, ಪಾತಾಳ); ನಗೆಗೆ ಪಕ್ಕಾಗುವಣಕಮಂ-ಹಾಸ್ಯಕ್ಕೆ ಗುರಿಯಾಗುವ ವಿನೋದವನ್ನು;  ಸೇವಿಸು-ಸೇವೆಮಾಡು;  ತರ್ಪನ್ನೆಗಂ-ತರುವವರೆಗೆ, ಕರೆದುಕೊಂಡು ಬರುವವರೆಗೆ. 

            “ಮಂಡೋದರೀ, ನೀನು ಮಹಾ ಪತಿವ್ರತೆಯಾಗಿರುವೆ. ಎಲ್ಲವನ್ನೂ ಅರಿಯುವ ಸಾಮರ್ಥ್ಯ ನಿನಗಿದೆ. ನಾನೀಗ ನನ್ನ ಮನಸ್ಸಿನ ಅಶುಭವಾದ ಅಭಿಲಾಷೆಗಳೆಲ್ಲವನ್ನು ತ್ಯಜಿಸಿ, ಒಳಿತಿನ ಅರಿವಿನಿಂದ ಶುದ್ಧನಾಗಿದ್ದೇನೆ. ಈಗಾಗಲೇ ಜಗನ್ಮಾತೆಯು ನನಗೆ ವರವನ್ನು ನೀಡಿದ್ದಾಳೆ. ಇನ್ನು ಚಿಂತೆಯೇಕೆ? ನೋಡು, ಅದೋ ಸೂರ್ಯೋದಯಕ್ಕೆ ಪೂರ್ವಭಾವಿಯಾಗಿ ಮೂಡುದಿಕ್ಕಿನಲ್ಲಿ ಅರುಣೋದಯವಾಗುತ್ತಿದೆ. ಮನಸಿನೊಳಗೆ ಆಸೆ ಮೂಡುವಂತೆ  ದಿಗಂತದಲ್ಲಿ ಕೆಂಪು ಬಣ್ಣ ಕಣ್ದೆರೆಯುತ್ತಿದೆ. ಇಂದು ನಾನು ಏಕಾಂಗಿಯಾಗಿಯೇ ಯುದ್ಧರಂಗಕ್ಕೆ ಹೊರಡುತ್ತೇನೆ. ಇಂದು ವೈರಿಗಳನ್ನು ಕೊಲ್ಲುವುದು ನನ್ನ ಗುರಿಯಲ್ಲ. ಸೀತಾ ಶುಭೋದಯಕ್ಕೆ ಗೆಲ್ಲುವುದಲ್ಲದೆ ಕೊಲ್ಲುವುದು ನನ್ನ ಗುರಿಯಲ್ಲ” ಎಂದು ರಾವಣ ತನ್ನ ಮನಸ್ಸಿನ ನಿರ್ಧಾರವನ್ನು ತಿಳಿಸಿದನು.

            ಮಂಡೋದರಿಯು, “ವೈರಿಗೆ ನಿನ್ನ ಹೃದಯ ಪರಿವರ್ತನೆಯ ವಿಚಾರ ತಿಳಿದಿಲ್ಲವೆ?” ಎಂದು ಪ್ರಶ್ನಿಸಿದಳು. ಅದಕ್ಕೆ ರಾವಣನು, “ವೈರಿಗೆ ತಿಳಿಯಬಾರದು ಎಂಬುದೇ ನನ್ನ ದೀಕ್ಷೆ. ಹೇಳಿದರೂ ಅದನ್ನು ಯಾರೂ ನಂಬಲಾರರು! ಒಂದು ವೇಳೆ ಹೇಳಿದರೂ ಅದು ಹೇಡಿತನವಲ್ಲದೆ ನನಗೆ ಬೇರೆ ಪ್ರಯೋಜನ ಇದೆ ಎಂದು ನನಗೆ ತೋರುವುದಿಲ್ಲ. ಮಹಾರಾಣಿ, ನಾನು ನಿನ್ನಲ್ಲಿ ಒಂದು ಮಾತನ್ನು ಬೇಡುತ್ತಿದ್ದೇನೆ. ನನ್ನ ಪ್ರತಿಜ್ಞೆಯನ್ನು ಯಾರಿಗೂ ತಿಳಿಸಬೇಡ. ನನ್ನ ಈ ವಿಶೇಷವಾದ ರಹಸ್ಯವು ನಿನ್ನ ಹೃದಯಗವಿಯೊಳಗೆ ಉತ್ಕೃಷ್ಠವಾದ ಕಾರ್ಯವಾಗಿಯೇ ಉಳಿಯಲಿ. ಈ ಪ್ರತಿಜ್ಞೆ ಕೈಗೂಡಿದರೆ ಮೂರೂ ಲೋಕಗಳಿಗೂ ಅದು ತಿಳಿಯುತ್ತದೆ. ಒಂದು ವೇಳೆ ಈ ಪ್ರತಿಜ್ಞೆ ಕೈಗೂಡದಿದ್ದರೆ  ನೀನು ನಗೆಗೀಡಾಗುವ ವಿನೋದವನ್ನು ನನ್ನ ಆತ್ಮ ಸಹಿಸಿಕೊಳ್ಳಲಾರದು. ನೀನೀಗ ಹೊರಡು, ನಾನು ರಾವಣನ್ನು ಸೆರೆಹಿಡಿದು ತರುವವರೆಗೆ ಸೀತೆಗೆ ಉಪಚಾರವನ್ನು  ಮಾಡುತ್ತಿರು!” ಎಂದು ಆಜ್ಞಾಪಿಸಿದನು.

  

                      ಮುಡಿಯನಡಿಗಿಟ್ಟು ನಮಿಸಿದಳ್.

ಶಿರದೊಳಾಂತಳು ಪತಿಚರಣಧೂಳಿಯಂ. “ಗೆಲ್ಗೆ

ನಿನ್ನೀ ಪವಿತ್ರತಮ ವಿಜಯಯಾತ್ರಾ  ರಣಂ!”

ಎಂಬ ಹೃದಯಧ್ವನಿಗೆ ಬಾಷ್ಪಂಗಂಳುರುಳುತಿರೆ

ಬೀಳ್ಕೊಂಡಳಿನಿಯನಂ ಲಂಕಾ ಮಹಾರಾಜ್ಞಿ!

ನೇಸರನ್ನೆಗಮುದಯ ದಿಗುರೇಖೆಯಂ ಬರೆದು

ಕೆತ್ತಿ ಬಿಡಿಸಿದನಿರುಳಿನಂಬರದಂಚಲದಿ, ಕಾಣ್,   ೩೨೦

ಉಷಾಗಮನಕೆತ್ತಿದೊಸಗೆಯ ತೋರಣಂಬೊಲ್.

ತ್ರಿಕೂಟಾದ್ರಿ ಶಿಖರಮಂದಿರದೆಳ್ತರದೊಳಿರ್ದ

ದಶಕಂಠನಾ ದಿವ್ಯದೃಶ್ಯಾವತರಣಮಂ

ನಿಡುವೊಳ್ತು ನೋಡಿದನ್. ತನಗೆ ತಾನೆಂದನ್:

“ಇದೇನಿಂದು ಪಿಂತೇಗಳೆನಗೆ ಪೊಳ್ತರೆಯಿಂತು

ಸೊಗಸಿತಿಲ್ಲೆನೆ ಸೊಬಗು ನನ್ನಂತರಾತ್ಮಮಂ

ಬೆಳಗುತಿದೆ? ಜೇನ್ಮಳೆಯೆ ಕರೆಯುತಿದೆ! ಪಾಲ್ ಪೊನಲ್

ನಾಳನಾಳದಿ ಪರಿಸುತಿರ್ಪುದಮೃತತ್ವಮಂ,

ಶಾಂತಿಯಂ, ವೀರ್ಯಮಂ, ಶಕ್ತಿಯಂ, ತೇಜಮಂ.

ನಿಧನ ನಿಧುವನ ಪದದ ಮಧುರ ಚೈತ್ಯನ್ಯಮಂ!”  ೩೩೦

ಅನ್ವಯಕ್ರಮ:

ಮುಡಿಯನ್ ಅಡಿಗಿಟ್ಟು ನಮಿಸಿದಳ್. ಪತಿಚರಣ ಧೂಳಿಯಂ ಶಿರದೊಳ್ ಆಂತಳು. “ಗೆಲ್ಗೆ ನಿನ್ನ ಈ ಪವಿತ್ರತಮ ವಿಜಯ ಯಾತ್ರಾ ರಣಂ!” ಎಂಬ ಹೃದಯಧ್ವನಿಗೆ ಬಾಷ್ಪಂಗಳ್ ಉರುಳುತ ಇರೆ ಲಂಕಾ ಮಹಾರಾಜ್ಞಿ ಇನಿಯನಂ ಬೀಳ್ಕೊಂಡಳ್! ಅನ್ನೆಗಂ ನೇಸರ್ ಇರುಳಿನ ಅಂಬರದ ಅಂಚಲದಿ ಉದಯ ದಿಗು ರೇಖೆಯಂ ಬರೆದು ಕೆತ್ತಿ ಬಿಡಿಸಿದನ್. ಕಾಣ್, ಉಷಾ ಗಮನಕೆ ಎತ್ತಿದ ಒಸಗೆಯ ತೋರಣಂಬೋಲ್. ತ್ರಿಕೂಟಾದ್ರಿ ಶಿಖರಮಂದಿರದ ಎಳ್ತರದೊಳ್ ಇರ್ದ ದಶಕಂಠನ ಆ ದಿವ್ಯ ದೃಶ್ಯ ಅವತರಣಮಂ ನಿಡುವೊಳ್ತು ನೋಡಿದನ್. ತನಗೆ ತಾನ್ ಎಂದನ್: “ಇದೇನ್ ಇದು ಪಿಂತು ಏಗಳ್ ಎನಗೆ ಪೊಳ್ತೆರೆ ಇಂತು ಸೊಗಸಿತಿಲ್ಲ ಎನೆ ಸೊಬಗು ನನ್ನ ಅಂತರಾತ್ಮಮಂ ಬೆಳಗುತಿದೆ? ಜೇನ್ಮಳೆಯೆ ಕರೆಯುತಿದೆ! ಪಾಲ್ ಪೊನಲ್  ನಾಳ ನಾಳದಿ ಅಮೃತತ್ವಮಂ, ಶಾಂತಿಯಂ, ವೀರ್ಯಮಂ, ಶಕ್ತಿಯಂ, ತೇಜಮಂ, ನಿಧನ ನಿಧುವನ ಪದ ಮಧುರ ಚೈತನ್ಯಮಂ ಪರಿಸುರ್ತಿಪುದು!”

ಪದ-ಅರ್ಥ:

ಮುಡಿಯನ್-ತಲೆಯನ್ನು;  ಆಡಿಗಿಟ್ಟು-ಪಾದದಲ್ಲಿರಿಸಿ;  ನಮಿಸಿದಳ್-ನಮಸ್ಕರಿಸಿದಳು;  ಶಿರದೊಳ್-ತಲೆಯಲ್ಲಿ;  ಆಂತಳು-ಧರಿಸಿದಳು;  ಪತಿಚರಣಧೂಳಿ-ಗಂಡನ ಪಾದದ ಧೂಳು; ಗೆಲ್ಗೆ-ಗೆಲ್ಲಲಿ, ಜಯಪಡೆಯಲಿ;  ಹೃದಯಧ್ವನಿ-ಅಂತರಾಳದ ಮಾತು;  ಬಾಷ್ಪಂಗಳ್-ಕಣ್ಣೀರ ಹನಿಗಳು;  ಉರುಳುತಿರೆ-ಉದುರುತಿರಲು;  ಇನಿಯನಂ-ಪ್ರಿಯತಮನನ್ನು;  ಲಂಕಾ ಮಹಾರಾಜ್ಞಿ-ಮಂಡೋದರಿ;  ನೇಸರ್-ಸೂರ್ಯ; ಅನ್ನೆಗಂ-ಅಷ್ಟರಲ್ಲಿ;  ಉದಯದಿಗು-ಮೂಡಣದಿಕ್ಕು;  ಅಂಚಲ-ಸೆರಗು;  ಉಷಾಗಮನ– ಉಷೆಯ ಆಗಮನ;  ಒಸಗೆಯ ತೋರಣಂಬೋಲ್– ಸಂತೋಷದ ತೋರಣದಂತೆ;  ತ್ರಿಕೂಟಾದ್ರಿ-ಮೂರು ಶಿಖರಗಳನ್ನು ಒಳಗೊಂಡ ಪರ್ವತ, (ಲಂಕಾಪಟ್ಟವವಿದ್ದ ಪರ್ವತ);  ಶಿಖರಮಂದಿರ-ಪರ್ವತದ ತುದಿಯಲ್ಲಿರುವ ಮಂದಿರ;  ದಶಕಂಠ-ರಾವಣ;  ದಿವ್ಯದೃಶ್ಯಾವತರಣ-ವಿಶೇಷವಾದ ದೃಶ್ಯ ಇಳಿದುಬರುವುದು; ನಿಡುವೊಳ್ತು– ಬಹುಹೊತ್ತು;  ಪಿಂತೇಗಳ್-ಹಿಂದೆಂದೂ; ಪೊಳ್ತರೆ  ಹೊತ್ತಾರೆ, ಪ್ರಾತಃಕಾಲ; ಇಂತು– ಹೀಗೆ;  ಸೊಗಸಿತಿಲ್ಲೆನೆ-ಸೊಗಸು ಎನಿಸಲಿಲ್ಲ ಎನ್ನುವಂತೆ;  ಜೇನ್ಮಳೆ-ಜೇನಿನ ಮಳೆ;  ಪಾಲ್ ಪೊನಲ್-ಹಾಲಿನ ಹೊನಲು; ನಾಳನಾಳದಿ-ನರನರಗಳಲ್ಲಿ;  ಪರಿಸುತಿರ್ಪುದು-ಹರಿಸುತ್ತಿದೆ; ಅಮೃತತ್ವಮಂ-ಚಿರಂಜೀವಿತನವನ್ನು;  ವೀರ್ಯಮಂ-ಶಕ್ತಿಯನ್ನು;  ನಿಧನ-ನಾಶ; ನಿಧುವನ-ಕಂಪನ.

            ರಾವಣನ ಆಜ್ಞೆಯನ್ನು ಶಿರಸಾವಹಿಸಿದ ಮಂಡೋದರಿ ತನ್ನ ತಲೆಯನ್ನು ಗಂಡನ ಪಾದಗಳಿಗೆ ತಾಗಿಸಿ ನಮಸ್ಕರಿಸಿದಳು. ಆತನ ಪಾದದ ಧೂಳನ್ನು ತನ್ನ ತಲೆಯಲ್ಲಿ ಧರಿಸಿದಳು. ಅವಳ ಹೃದಯವು, “ನಿನ್ನ ಈ ಪವಿತ್ರವಾದ ವಿಜಯಯಾತ್ರಾ ಯುದ್ಧವು ಗೆಲ್ಲುವಂತಾಗಲಿ!” ಎಂದು ಗಂಡನಿಗೆ, ಆತನ ವಿಜಯಯಾತ್ರೆಗೆ ಶುಭವನ್ನು ಹಾರೈಸಿತು. ಹೃದಯದ ಆ ಹಾರೈಕೆಯ ಧ್ವನಿಗೆ ಅವಳ ಕಣ್ಣುಗಳಿಂದ ಆನಂದದ ಕಂಬನಿ ಬಿಂದುಗಳು ಉರುಳತೊಡಗಿದವು. ಮಂಡೋದರಿಯು ಗಂಡನಾದ ರಾವಣನನ್ನು ಬೀಳ್ಕೊಂಡಳು. ಅಷ್ಟರಲ್ಲಿ ಸೂರ್ಯನು ರಾತ್ರಿಯ ಸೆರಗನ್ನು ಕಂಡರಿಸಿ ಬಿಡಿಸಿದನೋ ಎನ್ನುವಂತೆ ಮೂಡಣ ದಿಕ್ಕಿನಲ್ಲಿ ಬೆಳಕಿನ ರೇಖೆಯನ್ನು ಮೂಡಿಸಿದನು. ಅದು ಉಷೆಯ ಆಗಮನಕ್ಕೆ ಕಂಡರಿಸಿದ ಸಂತೋಷದ ತೋರಣದಂತೆ ಕಾಣಿಸಿತು.

            ಲಂಕೆಯ ತ್ರಿಕೂಟ ಪರ್ವತದ ಶಿಖರದ ಮೇಲಿನ ಮಂದಿರದಷ್ಟು ಎತ್ತರದಲ್ಲಿದ್ದ ರಾವಣನು ಉದಯಕಾಲದಲ್ಲಿ ವಿಶೇಷವಾದ ದೃಶ್ಯವು ಆಕಾಶದಿಂದ ಭೂಮಿಗೆ ಇಳಿದುಬರುತ್ತಿರುವುದನ್ನು ಬಹುಸಮಯದವರೆಗೆ ನೋಡಿದನು. ಅನಂತರ ತನ್ನಲ್ಲಿಯೇ, “ಇದೇನು, ಹಿಂದೆಂದೂ ನನಗೆ ಈ ರೀತಿಯಲ್ಲಿ ಪ್ರಾತಃಕಾಲವು ಸೊಗಸು ಎನಿಸಲಿಲ್ಲ ಎನ್ನುವಂತೆ   ಈ ದಿನ ಸೊಬಗು ನನ್ನ ಅಂತರಾತ್ಮವನ್ನು ಬೆಳಗುತ್ತಿದೆಯಲ್ಲ? ಜೇನಿನ ಮಳೆಯನ್ನೇ ಕರೆಯುತ್ತಿದೆ. ಹಾಲಿನ ಹೊನಲು ನನ್ನ ದೇಹದ ನರ ನರಗಳಲ್ಲಿ ಚಿರಂಜೀವಿತನವನ್ನು, ಶಾಂತಿಯನ್ನು, ಶಕ್ತಿಯನ್ನು, ನಾಶದ ಕಂಪನದ ಮಧುರವದ ಚೈತನ್ಯವನ್ನು ಹರಿಸುತ್ತಿದೆ.” ಎಂದುಕೊಂಡನು.

***

 

 

 

 

 

 

 

 

 

 

 

Leave a Reply

Your email address will not be published. Required fields are marked *