“ನೀ ಹೀಂಗ ನೋಡಬ್ಯಾಡ ನನ್ನ” ಎಂಬುದು ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ವರಕವಿ ದ. ರಾ. ಬೇಂದ್ರೆಯವರ ಪ್ರಸಿದ್ಧ ಭಾವಗೀತೆಗಳಲ್ಲಿ ಒಂದು. ಇದು ಸಹೃದಯರ ಮನಸ್ಸನ್ನು ಕರಗಿಸಿ ಆರ್ದ್ರಗೊಳಿಸುವ ಬೇಂದ್ರೆಯವರ ಭಾವಗೀತೆಗಳಲ್ಲಿ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ. ಈ ಭಾವಗೀತೆ ಗಂಡ-ಹೆಂಡಿರ ನಡುವಿನ ಅವಿನಾಭಾವ ಸಂಬಂಧವನ್ನು, ದಾಂಪತ್ಯಬದುಕಿನ ಏರಿಳಿತಗಳನ್ನು ಹಾಗೂ ನೋವು-ನಲಿವುಗಳನ್ನು ಪ್ರಸ್ತುತಪಡಿಸುವುದರಿಂದ ಇದನ್ನು ’ದಾಂಪತ್ಯಗೀತೆ’ ಎಂದೂ ಕರೆಯಬಹುದು.
ಬೇಂದ್ರೆ ಬಡತನದಲ್ಲಿಯೇ ಬೆಳೆದವರು. ಬಹಳ ಪ್ರತಿಭಾವಂತರಾದರೂ ಅವರಿಗೆ ಸರಿಯಾದ ಉದ್ಯೋಗ ಸಿಗದಿದ್ದರೂ ಸಿಕ್ಕ ಉದ್ಯೋಗಗಳನ್ನು ’ಪಾಲಿಗೆ ಬಂದುದೇ ಪಂಚಾಮೃತ’ ಎಂಬಂತೆ ಮನಪೂರ್ವಕ ನಿರ್ವಹಿಸಿದರು. ೧೯೧೯ರಲ್ಲಿ ಲಕ್ಷೀಬಾಯಿ ಅವರ ಮಡದಿಯಾಗಿ ಬಂದು ಅವರ ಕಷ್ಟಸುಖಗಳಲ್ಲಿ ಭಾಗಿಯಾದರು. ಈ ಮಧ್ಯೆ ’ನರಬಲಿ’ ಎಂಬ ಕವನವನ್ನು ಪ್ರಕಟಿಸಿ ಬ್ರಿಟಿಷ್ ಸರಕಾರದ ಕೆಂಗಣ್ಣಿಗೆ ಗುರಿಯಾಗಿ ಸೆರೆಮನೆವಾಸವನ್ನೂ ಅನುಭವಿಸಿದರು. ಉದ್ಯೋಗವನ್ನು ಕಳೆದುಕೊಂಡರು. ಬದುಕಿಗೆ ಆಧಾರವೇ ಇಲ್ಲದಿದ್ದಾಗ ಮಾಸ್ತಿಯವರು ತಮ್ಮ ’ಜೀವನ’ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಟ್ಟರು. ಶಿಕ್ಷಕರಾಗಿ, ಕೆಲವು ಕಾಲ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿ ನಿವೃತ್ತರಾದರು. ಹುಟ್ಟಿದ ಒಂಬತ್ತು ಮಂದಿ ಮಕ್ಕಳಲ್ಲಿ ಆರು ಮಕ್ಕಳನ್ನು ಕಳೆದುಕೊಂಡರು. ಒಂದೆಡೆ ಬಡತನದ ಕಷ್ಟ, ಇನ್ನೊಂದೆಡೆ ಉದ್ಯೋಗದ ಸಮಸ್ಯೆ, ಮತ್ತೊಂದೆಡೆ ತನ್ನ ಕಣ್ಣಮುಂದೆಯೇ ಒಂದರ ಮೇಲೊಂದರಂತೆ ಮಕ್ಕಳ ಸಾವು-ಇವೆಲ್ಲವುಗಳಿಂದ ಬೇಂದ್ರೆ ಜರ್ಜರಿತರಾದರೂ ನೊಂದು, ಬೆಂದು ಮಾನಸಿಕವಾಗಿ ಕುಸಿದ ಹೆಂಡತಿ ಲಕ್ಷ್ಮೀಬಾಯಿಯನ್ನು ಸಮಾಧಾನಿಸಿ ಧೈರ್ಯತುಂಬಿದರು.
ಒಂದು ಮಗುವಿನ ಸಾವಿನ ದುಃಖ ಮಾಸತೊಡುಗುವಷ್ಟರಲ್ಲಿಯೇ ಇನ್ನೊಂದು ಮಗು ಅನಾರೋಗ್ಯಕ್ಕೆ ತುತ್ತಾಗುತ್ತದೆ. ಮದ್ದಿಗೆ ಹಣವೂ ಇಲ್ಲದ, ಹೊಟ್ಟೆಗೆ ಹಿಟ್ಟೂ ಇಲ್ಲದ, ಕೈಹಿಡಿದ ಗಂಡನೂ ಹತ್ತಿರವಿಲ್ಲದ ಅಸಾಯಕಸ್ಥಿತಿಯಿಂದಾಗಿ ಮಗುವನ್ನು ಉಳಿಸಿಕೊಳ್ಳಲಾಗಲಿಲ್ಲ. ಉದ್ಯೋಗಾರ್ಥವಾಗಿ ಪರವೂರಿನಲ್ಲಿದ್ದ ಬೇಂದ್ರೆಯವರು ಮನೆಗೆ ಬರುತ್ತಿರುವಂತೆಯೇ ಜೀವನ್ಮರಣ ಸ್ಥಿತಿಯಲ್ಲಿರುವ, ಉಳಿಯುವ ಯಾವ ಭರವಸೆಯನ್ನೂ ಹೊಂದಿರದ ಮಗುವನ್ನು ತಮ್ಮ ಹೆಂಡತಿ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಗಂಡನನ್ನು ದೈನ್ಯವಾಗಿ ಬೀರಿದ ನೋಟ, ಮುಖದಲ್ಲಿನ ಹತಾಶಭಾವ, ವಿಶಾದದ ನಗು ಎಲ್ಲವೂ ಬೇಂದ್ರೆಯವರ ಮನಸ್ಸನ್ನು ಒಂದೊಂದಾಗಿ ಇರಿಯುತ್ತವೆ. ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆದ ಮಗುವಿನ ಸ್ಥಿತಿ, ತೀರಿಕೊಂಡ ಮಗುವನ್ನು ತನ್ನ ತೊಡೆಯ ಮೇಲಿರಿಸಿ ಕಂಗಾಲಾಗಿರುವ, ಬೇಂದ್ರೆಯವರನ್ನು ತದೇಕ ದೃಷ್ಟಿಯಿಂದ ನೋಡುತ್ತ ಮುಖದಲ್ಲಿ ಕ್ಷಣಕ್ಷಣಕ್ಕೂ ಕಾಣಿಸಿಕೊಳ್ಳುತ್ತಿರುವ ವಿಷಾದದ ಹುಚ್ಚುನಗೆ, ಮರಗಟ್ಟಿಹೋದಂತಿರುವ ಹೆಂಡತಿಯ ದಾರುಣಸ್ಥಿತಿ, ಇವೆಲ್ಲವನ್ನು ನೋಡಲಾರದೆ ಹೆಂಡತಿಯನ್ನು ಸಮಾಧಾನಿಸುವ ರೀತಿಯಲ್ಲಿ ಹುಟ್ಟಿಕೊಂಡ ಶೋಕಗೀತೆ ಇದು. ಬೇಂದ್ರೆಯವರ ಬದುಕಿನ ದರ್ಶನಗೀತೆಯೂ ಹೌದು. ಹೆಂಡತಿಯ ಈ ವಿಷಾದದ ನೋಟ ಹಾಗೂ ಅದರ ಭೀಕರತೆ, ತಾನು ಹೆಂಡತಿಯನ್ನು ಸಮಾಧಾನಿಸುವ ಬಗೆ ಕವನದ ರೂಪವನ್ನು ತಾಳುತ್ತದೆ. ಇದು ಸಹೃದಯರ ಮನಸ್ಸನ್ನು ಮತ್ತೆ ಮತ್ತೆ ಮುಟ್ಟುತ್ತದೆ, ಮುಟ್ಟಿ ತಟ್ಟುತ್ತದೆ, ಕರುಳನ್ನು ಹಿಂಡುತ್ತದೆ, ಮೈಯನ್ನು ನಡುಗಿಸುತ್ತದೆ.
ನೀ ಹೀಂಗ ನೋಡಬ್ಯಾಡ ನನ್ನ, ನೀ ಹೀಂಗ ನೋಡಿದರ ನನ್ನ,
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ
ಹೆಂಡತಿ ಗಂಡನನ್ನು ಅಥವಾ ಗಂಡ ಹೆಂಡತಿಯನ್ನು ನೋಡುವ ನೋಟವದು ಇಬ್ಬರೊಳಗೂ ಪ್ರೀತಿ, ಪ್ರೇಮಗಳನ್ನು ತುಂಬುವಂತಹುದು. ಲವಲವಿಕೆ ಮೂಡಿಸುವಂತಹುದು, ಕಷ್ಟ-ದುಃಖಗಳ, ಹಿಂಸೆ-ನೋವುಗಳ ಒತ್ತಡವನ್ನು ನಿವಾರಿಸುವಂತಹುದು. ಪರಸ್ಪರ ವಿಶ್ವಾಸವನ್ನು ಮೂಡಿಸುವಂತಹುದು. ಆದರೆ, ಇಂದು ಹೆಂಡತಿಯ ನೋಟ ಮಾತ್ರ ಎಂದಿನಂತಿಲ್ಲ. ಅದರೊಳಗೆ ನೋವಿದೆ, ದುಃಖವಿದೆ, ಅಸಹಾಯಕತೆಯಿದೆ, ಹಿಂಸೆಯಿದೆ, ಅಸಹನೆಯಿದೆ, ಹತಾಶೆಯಿದೆ, ಶೋಕವಿದೆ –ಹೀಗೆ ಹತ್ತಾರು ಬಗೆ. ಒಂದೆರಡನ್ನು ಎದುರಿಸಬಹುದು. ಆದರೆ ಹತ್ತಾರು ಭಾವಗಳನ್ನು ಒಮ್ಮೆಗೆ ಎದುರಿಸಲು ಹೇಗೆ ಸಾಧ್ಯವಾದೀತು?! ಬೇಂದ್ರೆಯವರಿಗೆ ಹೆಂಡತಿಯ ಆ ನೋಟವನ್ನು ಅರ್ಥಮಾಡಿಕೊಳ್ಳಲೂ ಆಗಲಿಲ್ಲ, ಎದುರಿಸಲೂ ಆಗಲಿಲ್ಲ. ಅದಕ್ಕಾಗಿಯೇ ಅವರು, ನೀನು ನನ್ನನ್ನು ಹೀಗೆ ನೋಡಬೇಡ, ನಿನ್ನ ಆ ನೋಟವನ್ನು ಎದುರಿಸುವ ಸಾಮರ್ಥ್ಯ ಈಗ ನನ್ನಲ್ಲಿಲ್ಲ. ನಿನ್ನ ದುಃಖದ, ನೋವಿನ, ಹಿಂಸೆಯ, ಹತಾಶೆಯ ನೋಟವನ್ನು ನಾನು ಎದುರಿಸಲಾರೆ. ನೀನು ಈ ರೀತಿಯಲ್ಲಿ ನನ್ನನ್ನು ನೋಡುತ್ತಿದ್ದರೆ ನಾನಾದರೂ ನಿನ್ನನ್ನು ಹೇಗೆ ತಿರುಗಿ ನೋಡಲಿ? ನಿನ್ನ ನೋಟವನ್ನು ನಾನು ಹೇಗೆ ಎದುರಿಸಲಿ? ಎಂಬುದು ಬೇಂದ್ರಯವರ ಅಳಲು.
ಈಗಾಗಲೇ ಐದು ಮಕ್ಕಳನ್ನು ಕಳೆದುಕೊಂಡಿರುವ ಹೆತ್ತತಾಯಿ ಇನ್ನು ಅತ್ತು ಮನಸ್ಸನ್ನು ಹಗುರಮಾಡಿಕೊಳ್ಳುವುದಕ್ಕಾದರೂ ಏನಿದೆ? ಇದುವರೆಗೆ ಅತ್ತೂ ಅತ್ತೂ ಮನಸ್ಸೇ ಜಡ್ಡುಗಟ್ಟಿದೆಯಲ್ಲ! ತನ್ನಷ್ಟೇ ನೋವನ್ನು, ದುಃಖವನ್ನು ತನ್ನ ಗಂಡನೂ ಅನುಭವಿಸುತ್ತಿದ್ದಾನೆ ಎಂಬುದು ಆಕೆಗೂ ಗೊತ್ತು. ಈಗಾಗಲೇ ಐದು ಮಕ್ಕಳನ್ನು ಕಳೆದುಕೊಂಡಿರುವ ದುಃಖ ಆತನಿಗೂ ಇದೆಯಲ್ಲ. ಈಗ ತಾನು ಅತ್ತುಬಿಟ್ಟರೆ ತನ್ನ ಗಂಡನ ದುಃಖದ ಕಟ್ಟೆಯೊಡೆಯಬಹುದು, ಗಂಡನಲ್ಲಿ ಮಗುವನ್ನು ಉಳಿಸಿಕೊಳ್ಳಲಾಗಲಿಲ್ಲವಲ್ಲ! ಎಂಬ ಅಪರಾಧಿ ಮನೋಭಾವ ಬೆಳೆಯಬಹುದು ಎಂಬ ಅರಿವು, ಆತಂಕಗಳು ಆಕೆಗಿವೆ. ಆಕೆಯ ಮನಸ್ಸು ಬೂದಿಮುಚ್ಚಿದ ಕೆಂಡವಾಗಿದೆ. ಆಕೆ ತನ್ನೆಲ್ಲ ನೋವು, ದುಃಖಗಳನ್ನು ತನ್ನೊಳಗೆ ಅಡಗಿಸಿ, ಅರಗಿಸಿಕೊಂಡು ಮೂಕಳಾಗಿದ್ದಾಳೆ. ಆದರೂ ತುಟಿಯವರಿಗೂ ಬರುತ್ತಿರುವ ಅಳುವನ್ನು ತಡೆಯುವುದಕ್ಕೆ ಮುಖದಲ್ಲಿ ಹತಾಶನಗುವನ್ನು ತಂದುಕೊಳ್ಳುತ್ತಿದ್ದಾಳೆ. ಆದರೆ ಇದುವರೆಗೂ ತನ್ನೊಂದಿಗೆ ಸಂಸಾರನಡೆಸಿ ಬದುಕಿನ ಕಷ್ಟ-ಸುಖಗಳನ್ನುಂಡ ತನ್ನ ಮನದನ್ನೆಯ ಮನಸ್ಸು ಗಂಡನಿಗೆ ಅರ್ಥವಾಗದೇ? ಅದಕ್ಕಾಗಿಯೇ ಗಂಡ ತನ್ನ ಹೆಂಡತಿಯ ನೋಟವನ್ನು ಎದುರಿಸಲಾರದೆ ನೀನು ಈ ರೀತಿಯಲ್ಲಿ ನನ್ನನ್ನು ನೋಡಬೇಡ, ನೀನು ಹೀಗೆ ನನ್ನನ್ನು ನೋಡುತ್ತಿದ್ದರೆ ನಾನಾದರೂ ನಿನ್ನನ್ನು ಹೇಗೆ ನೋಡಲಿ?! ನಿನ್ನ ನೋಟವನ್ನಾದರೂ ಹೇಗೆ ಎದುರಿಸಲಿ?! ಎಂದು ಪ್ರಶ್ನಿಸುತ್ತಾರೆ.
ಸಂಸಾರ ಎಂದ ಮೇಲೆ ಕಷ್ಟ, ಸುಖ, ದುಃಖ, ನೋವು, ನಲಿವು ಎಲ್ಲವೂ ಸಾಮಾನ್ಯ. ಗಂಡ ಹೆಂಡಿರಿಬ್ಬರೂ ಪರಸ್ಪರ ಸಮಾಧಾನಿಸಬೇಕಾದುದು ಧರ್ಮ. ಇಲ್ಲಿ ಇಬ್ಬರದೂ ಸಮಾನವಾದ ನೋವು, ದುಃಖ. ಹೆತ್ತ ತಾಯಿಯ ನೋವು, ಸಂಕಟಗಳು ಗಂಡನಿಗೂ ಅರ್ಥವಾಗುತ್ತದೆ. ತಾನು ಹೆಂಡತಿಯನ್ನು ಸಮಾಧಾನಿಸಬೇಕು. ಆದರೆ ಆಕೆ ತನ್ನನ್ನು ಎವೆಯಿಕ್ಕದೆ ಅಸಹಾಯಕಳಾಗಿ ನೋಡುತ್ತಿರುವ ನೋಟವನ್ನು ಗಂಡನಿಗೆ ಎದುರಿಸಲಾಗುತ್ತಿಲ್ಲ. ಹಾಗಿರುವಾಗ ಸಮಾಧಾನ ಹೇಳುವುದಾದರೂ ಹೇಗೆ?! ಎಂಬುದು ಗಂಡನ ಅಸಹಾಯಕತೆಯ ಅಳಲು.
ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದ, ಯಾಕ ನೋಡತೀ ಮತ್ತ ಮತ್ತ ಇತ್ತ?
ಸಾಗರದಲ್ಲಿ ಲೆಕ್ಕವಿಲ್ಲದಷ್ಟು ಅಲೆಗಳು, ಕೆಲವು ಚಿಕ್ಕವು, ಇನ್ನು ಕೆಲವು ದೊಡ್ಡವು. ಹಲವು ಅಲ್ಲೋಲಕಲ್ಲೋಲವನ್ನು ಉಂಟುಮಾಡುವಂತಹವು. ಅವುಗಳಿಗೆ ತಡೆ ಎಂಬುದಿಲ್ಲ. ಒಂದರ ಹಿಂದೆ ಇನ್ನೊಂದು ಸಿದ್ಧವಾಗಿಯೇ ಏಳುತ್ತವೆ. ತಮ್ಮ ತೆಕ್ಕೆಗೆ ಸಿಕ್ಕಿದ್ದನ್ನು ಸೆಳೆದು ಕಬಳಿಸುತ್ತವೆ. ಇವುಗಳ ತೆಕ್ಕೆಯೊಳಗೆ ಸಿಕ್ಕಿಹಾಕಿಕೊಂಡ ನಾವೆಯೊಂದು ತಪ್ಪಿಸಿ ದಡಸೇರುವುದಕ್ಕಾದರೂ ಸಾಧ್ಯವೇ? ಸಂಸಾರವೆಂಬುದೂ ಒಂದು ಸಾಗರ. ಸಾಗರದಲ್ಲಿ ನೀರಿನ ಅಲೆಗಳಾದರೆ, ಸಂಸಾರಸಾಗರದಲ್ಲಿ ದುಃಖದ ಅಲೆಗಳು. ಸಂಸಾರ ಸಾಗರದಲ್ಲಿ ಬದುಕೆಂಬುದು ಒಂದು ಬಂಡಿ. ಗಂಡ-ಹೆಂಡತಿಯರು ಈ ಬಂಡಿಯ ಜೋಡೆತ್ತುಗಳು. ಎರಡೂ ಸಮಾನಂತರವಾಗಿ ಹೆಜ್ಜೆಹಾಕಬೇಕು. ಒಂದು ಏರಿಗೆಳೆದು, ಇನ್ನೊಂದು ನೀರಿಗೆಳೆದರೆ ಸಂಸಾರದ ಬಂಡಿ ಸಾಗದು. ಈ ಬಂಡಿಯೊಳಗೆ ಸುಖ, ಸಂತೋಷಗಳಿಗಿಂತ ದುಃಖವೇ ಹೆಚ್ಚಾಗಿ ತುಂಬಿಕೊಂಡಿದೆ. ಸಾಗರದೊಳಗೆ ಅಲೆಗಳ ಅಬ್ಬರಕ್ಕೆ ಸಿಲುಕಿದ ನಾವೆಯ ಸ್ಥಿತಿಯಂತೆಯೆ ಸಂಸಾರಸಾಗರದೊಳಗೆ ಕಷ್ಟ, ದುಃಖ, ನೋವು, ಹಿಂಸೆಗಳೆಂಬ ಅಲೆಗಳ ಅಬ್ಬರಕ್ಕೆ ಬದುಕೆಂಬ ಬಂಡಿ ಸಿಲುಕಿ ನಲುಗುತ್ತದೆ. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಬದುಕೆಂಬ ಬಂಡಿಯನ್ನುಉರುಳದಂತೆ ನಡೆಸಬೇಕು. ಜತನದಿಂದ ಕಾಪಾಡಬೇಕು. ಅದು ಉರುಳಲೇ ಬೇಕೆಂಬುದು ದೈವೇಚ್ಛೆಯಾದರೆ ಯಾರೇನು ಮಾಡಲು ಸಾಧ್ಯ? ಒಂದು ಕಡೆಯಿಂದ ಹೊರಟ ಸಂಸಾರದ ಬಂಡಿ ಇನ್ನೊಂದು ದಡವನ್ನು ಸೇರಲೇ ಬೇಕಲ್ಲ! ಆದರೆ ಅದು ಎಲ್ಲಿದೆ? ಹೇಗಿದೆ? ತನಗದು ತಿಳಿದಿರದಿದ್ದರೂ ಕಲ್ಪನೆಯಂತೂ ಇದೆ.
ಮಗುವೇನೋ ಮಲಗಿದೆ. ಅದು ಮಲಗಿರಲೇಬೇಕೆಂಬುದು ದೇವರ ಇಚ್ಛೆಯಾದರೆ ಅದನ್ನು ತಡೆಯುವುದಕ್ಕೆ ನಾವು ಯಾರು? ಹುಟ್ಟಿದವನು ಒಂದಲ್ಲ ಒಂದು ದಿನ ಸಾಯಲೇಬೇಕು. ’ಜಾತಸ್ಯ ಮರಣಂ ಧ್ರುವಂ’ ಅನ್ನುತ್ತಾರಲ್ಲ! ಹಾಗೆ. ಕೆಲವರಿಗೆ ಅಳಿವು ಬೇಗ, ಇನ್ನು ಕೆಲವರಿಗೆ ತಡ. ಯಾರಿಗೆ ಯಾವಾಗ ಎಂದು ಯಾರು ಬಲ್ಲರು? ನಮ್ಮ ಸರದಿ ಬಂದಾಗ ನಾವೂ ಮಲಗಲೇಬೇಕು. ಸಂಸಾರವೆಂದರೆ ಇದೇ ತಾನೇ?! ಸುಖದ ಹಿಂದೆ ದುಃಖ, ದುಃಖದ ಹಿಂದೆ ಸುಖ. ಸಂಸಾರದಾದ್ಯಂತ ಕೇವಲ ದುಃಖವಾದರೂ ಎಲ್ಲಿದೆ? ಕೇವಲ ಸುಖವಾದರೂ ಎಲ್ಲಿ? ಸಂಸಾರಬಂಡಿ ಸಾಗಿದಂತೆ ಕಳೆದುಕೊಂಡುದರ ಬಗ್ಗೆ ಕಳೆದುಕೊಳ್ಳುತ್ತಿರುವುದರ ಬಗ್ಗೆ ತಲೆಕೆಡಿಸಿಕೊಂಡರೆ ಏನು ಪ್ರಯೋಜನ? ಕಳೆದುಕೊಂಡದ್ದು ಮರಳಿ ಬಾರದು, ಇದ್ದುದನ್ನು ಕಾಪಾಡುತ್ತ ಸಾಗಬೇಕು. ಬದುಕುವುದಷ್ಟೇ ನಮ್ಮ ಕರ್ತವ್ಯ, ಅದರ ಅಳಿವು, ಉಳಿವು ನಮ್ಮ ಕೈಯಲ್ಲಿಲ್ಲ. ಹೀಗಿರುವಾಗ ನಿನ್ನ ಈ ಅಸಾಹಾಯಕ, ದಯನೀಯ ಸ್ಥಿತಿಯನ್ನು, ನಿನ್ನ ಈ ಗಾಬರಿಗೊಂಡ ನೋಟವನ್ನು, ನಿನ್ನ ನೋಟದಲ್ಲಿನ ಎದೆನಡುಗಿರುವ ನಿಸ್ತೇಜತೆಯನ್ನು ನಾನು ಎದುರಿಸಲಾರೆ. ಬದುಕಿನುದ್ದಕ್ಕೂ ನೀನು ಅನುಭವಿಸಿರುವ ನೋವನ್ನು, ದುಃಖವನ್ನು ನಾನೂ ಸಹಿಸಿಕೊಳ್ಳಲಾರೆ. ನೀನು ಅಳುವನ್ನು ತಡೆದುಕೊಂಡು ನನ್ನ ಕಡೆಗೆ ಸವಾಲಿನ ನೋಟವನ್ನು ಬೀರುತ್ತಿದ್ದರೆ ನಾನಾದರೂ ಅದನ್ನು ಹೇಗೆ ತಡೆದುಕೊಳ್ಳಲಿ?! ಕರುಳಕುಡಿಯನ್ನು ಕಳೆದುಕೊಂಡ ನಿನ್ನ ತಾಯಿಹೃದಯದ ನೋವು ನಾನೂ ಅರ್ಥಮಾಡಿಕೊಳ್ಳಬಲ್ಲೆ. ನನ್ನದೂ ತಂದೆಹೃದಯ ತಾನೆ! ಆದರೆ, ಮಗುವನ್ನು ಕಳೆದುಕೊಂಡು ದುಃಖ ಮಡುಗಟ್ಟಿರುವ ನಿನ್ನ ಕಣ್ಣುಗಳ ನೋಟವನ್ನು ಮತ್ತೆ ಮತ್ತೆ ನನ್ನ ಕಡೇ ಬೀರುತ್ತಿದ್ದರೆ ನಾನಾದರೂ ಅದನ್ನು ಹೇಗೆ ಎದುರಿಸಲಿ?
ತಂಬಲಽ ಹಾಕದ ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರೀತು? ಯಾವ ಗಾಳಿಗೆ, ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣು ಕಂಡು ಮಾರೀಗೆ ಮಾರಿಯಾ ರೀತಿ
ಸಾವನಽ ತನ್ನ ಕೈ ಸವರಿತಲ್ಲಿ, ಬಂತೆಽನಗ ಇಲ್ಲದ ಭೀತಿ
ಗಂಡನಿಗೆ ತನ್ನ ಹೆಂಡತಿಯ ಮುಖ, ಕಣ್ಣುಗಳು, ತುಟಿಗಳು ಚಿರಪರಿಚಿತ. ಅವುಗಳ ರೂಪ ಲಾವಣ್ಯಗಳೂ ಕೂಡಾ. ಈ ಅಂಗಗಳೆಲ್ಲವೂ ಹೆಣ್ಣಿಗೆ ಸೌಂದರ್ಯವನ್ನು ನೀಡುವಂಥವು. ಗಂಡನ ಸುಖ, ಸಂತೋಷಗಳನ್ನು, ಇಮ್ಮಡಿಗೊಳಿಸುವಂಥವು, ನೋವನ್ನು ಮರೆಸುವಂಥವು, ಬಾಳಿನಲ್ಲಿ ಮತ್ತೆ ಮತ್ತೆ ಹುರುಪನ್ನು, ಹೊಸಚೈತನ್ಯವನ್ನು ತುಂಬುವಂಥವು. ಎಂತಹ ನೋವಿದ್ದರೂ, ದುಃಖವಿದ್ದರೂ ಬೇಸರವಿದ್ದರೂ ಹೆಂಡತಿಯ ಮುಖವನ್ನೊಮ್ಮೆ ನೋಡಿದಾಗ ಅವೆಲ್ಲವೂ ಮಾಯವಾಗುತ್ತವಲ್ಲ! ಗಂಡನನ್ನು ಬರಸೆಳೆದು ಮುದನೀಡುತ್ತವಲ್ಲ! ಅದೆಂತಹ ಮೋಡಿ, ಸೆಳೆತ, ಆಕರ್ಷಣೆ ನಿನ್ನ ಮುಖ, ಕಣ್ಣು, ತುಟಿಗಳಿಗೆ. ನನಗೋ ಬದುಕಿನ ಎಲ್ಲಾ ಕಷ್ಟ, ನಷ್ಟಗಳನ್ನು ಎದುರಿಸುವಲ್ಲಿ ಅವು ಮತ್ತೆ ಮತ್ತೆ ಧೈರ್ಯತುಂಬಿವೆಯಲ್ಲ! ಆದರೆ ಇಂದು ನಿನ್ನ ಮುಖದ ಸೌಂದರ್ಯ, ಕಣ್ಣುಗಳ ಹೊಳಪುಗಳೆಲ್ಲ ಮಾಯವಾಗಿವೆ! ಏಕೆ? ನಿನ್ನ ತುಟಿಗಳೋ ತಾಂಬೂಲವನ್ನು ಹಾಕದಿದ್ದರೂ ಅವು ಕೆಂಪು ಗಿಣಿಗಡಕ ಹಣ್ಣಿನ ಹಾಗೆ ಕೆಂಬಣ್ಣದಿಂದ ಹೊಳೆಯುತ್ತಿದ್ದುವಲ್ಲ! ಆದರೆ ಈಗ ಆ ತುಟಿಗಳ ಬಣ್ಣವೇ ಮಾಸಿಹೋಗಿ ಬಿಳಿಚಿಕೊಂಡಿವೆಯಲ್ಲ! ನಿನ್ನ ಅಂತಹ ಸುಂದರವಾದ ತುಟಿ ಹಾಗೂ ಅದರ ಬಣ್ಣವನ್ನು ಯಾವ ಗಾಳಿ ಹೊಡೆದುಕೊಂಡು ಹೋಯಿತು?! ಮಗುವಿನ ಅಗಲಿಕೆ ನಿನ್ನ ಸರ್ವಸ್ವವನ್ನೂ ನಾಶಮಾಡಿತಲ್ಲ! ಮುಖದಲ್ಲಿನ ಭೀತಿ, ಕಣ್ಣುಗಳಲ್ಲಿನ, ನಿಸ್ತೇಜತೆ, ತುಟಿಗಳಲ್ಲಿನ ಕಳವಳವನ್ನು ನಾನು ನೋಡುವುದಕ್ಕಾದರೂ ಹೇಗೆ ಸಾಧ್ಯ?!
ದುಃಖವೆಂಬುದು ಮನುಷ್ಯನ ಸುಖ, ಸಂತೋಷ, ಹುರುಪು, ಹುಮ್ಮಸ್ಸು ಎಲ್ಲವನ್ನೂ ನಾಶಮಾಡುತ್ತದೆ. ಅದರಲ್ಲೂ ಮಗುವಿನ ಅಗಲಿಕೆಯ ಶೋಕ ಮರ್ಮಾಘಾತವನ್ನೇ ನೀಡುತ್ತದೆ. ಕಷ್ಟದಲ್ಲೇ ಹುಟ್ಟಿ, ಕಷ್ಟವನ್ನೇ ಕೈಹಿಡಿದು, ಕಷ್ಟವನ್ನೇ ಹೊದ್ದುಕೊಂಡವಳು, ಕಷ್ಟದೊಂದಿಗೆ ಸಂಸಾರನಡೆಸಿದವಳು. ಒಂದರ ಹಿಂದೆ ಒಂದರಂತೆ ನಿರಂತರ ನೋವನ್ನು ಅನುಭವಿಸಿದವಳು, ಒಂದರ ಮೇಲೊಂದರಂತೆ ಮಕ್ಕಳನ್ನು ಕಳೆದುಕೊಂಡವಳು, ನಿರಂತರ ಬಡತನದ ಬೇಗೆಯಲ್ಲಿ ಬೆಂದವಳು, ಸಂಸಾರದ ಇತಿಮಿತಿಗಳೆಲ್ಲವನ್ನೂ ಅರ್ಥಮಾಡಿಕೊಂಡು ನನ್ನೊಂದಿಗೆ ಹೆಜ್ಜೆ ಇರಿಸಿದವಳು. ಇದುವರೆಗೂ ಸುಖವನ್ನು ಕಾಣಲಿಲ್ಲ. ದುಃಖವನ್ನು ಕಳೆದುಕೊಳ್ಳಲಿಲ್ಲ. ಇಂತಹ ಸ್ಥಿತಿಯಲ್ಲಿಯೂ ನಿನ್ನ ಗದ್ದ, ಗಲ್ಲ, ಹಣೆ, ಕಣ್ಣು ಮೊದಲಾದವು ನೋವುಂಡು ನಗು ಚೆಲ್ಲಿದವಲ್ಲ!. ನನಗೋ ಹೆಜ್ಜೆ ಹೆಜ್ಜೆಗೂ ಸ್ಫೂರ್ತಿಯಾದವು, ಕುಸಿದಾಗ ಧೈರ್ಯತುಂಬಿದವು, ನೋವನ್ನು ಮರೆಸಿದವು, ಮನಸ್ಸಿಗೆ ತಂಪೆರೆದವು. ಆದರೆ ಇಂದೇಕೋ ಅವು ತಮ್ಮ ಸಹಜತೆಯನ್ನು ಕಳೆದುಕೊಂಡಿವೆಯಲ್ಲ! ನಿನ್ನ ಮುಖದಲ್ಲಿ ಮಾರಿಯ ಭೀಕರತೆ ಕಾಣುತ್ತಿದೆಯಲ್ಲ! ಎದುರಿಸಲು ಸಾಧ್ಯವೇ ಇಲ್ಲದಿರುವಾಗ ಹೇಗೆ ಸಹಿಸಿಕೊಳ್ಳಲಿ ಅದನ್ನು. ನಿನ್ನ ಈ ಸ್ಥಿತಿಯನ್ನು ನೋಡುವಾಗ ಸಾವು ಮೆಲ್ಲನೆ ಕೈಸವರುತ್ತಿದೆಯೇನೋ ಎಂಬ ಭೀತಿ ನನ್ನನ್ನು ಆವರಿಸಿಕೊಳ್ಳುತ್ತಿದೆ. ತಪ್ಪುಮಾಡಿದೆನೇನೋ ಅನ್ನಿಸುತ್ತಿದೆ. ಗಂಡನಾಗಿ, ಮಗುವಿನ ತಂದೆಯಾಗಿ ನನ್ನ ಕರ್ತವ್ಯವನ್ನು ನಾನು ಪಾಲಿಸಿದೆನೆ?! ನಿನ್ನನ್ನು ಈ ಸ್ಥಿತಿಗೆ ತಂದೊಡ್ಡಿದೆನೇ? ಎಂಬ ಭೀತಿ ಮನದ ತುಂಬೆಲ್ಲ ಅವರಿಸಿಕೊಳ್ಳುತ್ತಿದೆ.
ನಡೆಯುವುದೆಲ್ಲವೂ ನಡೆದು ಹೋಗಿದೆ. ಉಳಿದುದನ್ನು ಉಳಿಸಿಕೊಳ್ಳಬೇಕು, ನಾನು ನಿನ್ನನ್ನು, ನೀನು ನನ್ನನ್ನು. ಇದುವರೆಗೂ ಪರಸ್ಪರ ಮುಖನೋಡಿ ಎಲ್ಲವನ್ನೂ ಮರೆತೆವಲ್ಲ! ಇನ್ನು ಮುಂದೆಯೂ ಮರೆಯಬೇಕಲ್ಲ! ಮಕ್ಕಳನ್ನು ಕಳೆದುಕೊಂಡು ನಿನ್ನ ಮುಖವನ್ನು ನೋಡಿ ನೋವನ್ನು, ದುಃಖವನ್ನು ಮರೆತೆ. ಯಃಕಶ್ಚಿತ್ ಮನುಷ್ಯ ನಾನು, ನನ್ನಿಂದ ಅಚಾತುರ್ಯ ನಡೆದಿರಬಹುದು, ಸಂಸಾರದ ಕಡೆಗೆ ಗಮನ ಕಡಿಮೆಯಾಗಿರಬಹುದು, ಇವೆಲ್ಲವೂ ವಿಧಿಲೀಲೆಯಾದರೆ ನಾನಾದರೂ ಏನು ಮಾಡಲಿ? ನನಗೂ ನನ್ನ ಬಗ್ಗೆ ನೋವಿದೆ, ದುಃಖವಿದೆ, ಕನಿಕರವಿದೆ, ತಾತ್ಸಾರವಿದೆ. ಆದರೆ ಈಗ, ನಾನು ಮಾತ್ರ ನಿನ್ನನ್ನು ಕಳೆದುಕೊಳ್ಳಲಾರೆ. ನನ್ನಿಂದಾಗದು.
ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣಽಗ ಅಂತ ತಿಳಿದು
ಬಿಡವೊಲ್ಲಿ ಇನ್ನುನೂ, ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲಽನ ಕಪ್ಪರಿಸಿ ನೆಲಕ ಬಿದ್ದರೆ ನೆಲಕೆ ನೆಲಿ ಎಲ್ಲಿನ್ನಽ
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ.
ಮದುವೆ ಅನ್ನುವುದು ಪ್ರತಿಯೊಬ್ಬ ಗಂಡು ಹೆಣ್ಣಿನ ಬದುಕಿನಲ್ಲಿ ಒಂದು ಅಪೂರ್ವವಾದ ಸಂದರ್ಭ. ಏನೇನೋ ಆಸೆ-ಆಕಾಂಕ್ಷೆಗಳು, ಹೊಸ ಹೊಸ ಕನಸುಗಳು, ಗಂಡನಿಗೆ ಹೆಂಡತಿಯ ಮೇಲೆ, ಹೆಂಡತಿಗೆ ಗಂಡನ ಮೇಲೆ ಏನೇನೋ ಭರವಸೆಗಳು, ಪರಸ್ಪರ ಗೌರವ, ಪ್ರೀತಿ, ವಿಶ್ವಾಸಗಳು. ಮದುವೆಯಲ್ಲಿ ಧಾರೆ ಎರೆದು ಕೊಡುವಾಗ ಹೆಣ್ಣಿಗೆ ಅದೇನೋ ಸಾರ್ಥಕ್ಯಭಾವ. ಈತ ನನ್ನ ಗಂಡ, ತನ್ನನ್ನು ದಾರಿನಡೆಸುವವನು, ಸುಖ, ಸಂತೋಷಗಳಲ್ಲಿ ಓಲಾಡಿಸುವವನು, ತಪ್ಪಿದರೆ ತಿದ್ದುವವನು, ಬದುಕನ್ನು ಸಾರ್ಥಕಗೊಳಿಸುವವನು ಎಂಬೆಲ್ಲ ಕನಸು. ಈ ಭರವಸೆ, ಈ ವಿಶ್ವಾಸ-ನಂಬಿಕೆಗಳು ಸುಳ್ಳಲ್ಲ. ಅಸಾಧುವೂ ಅಲ್ಲ, ಅಸಾಧ್ಯವೂ ಅಲ್ಲ.
ನೀನೂ ಮದುವೆಯಲ್ಲಿ, ನಿನ್ನನ್ನು ಧಾರೆ ಎರೆದು ಕೊಡುವಾಗ ಧಾರೆಯಿಂದ ನೆನೆದ ಕೈಯನ್ನು ಹಿಡಿದು ನಾನೊಬ್ಬ ತಣ್ಣಗಿನ ವ್ಯಕ್ತಿ ಎಂದು ಭಾವಿಸಿದೆ, ಈತನೊಂದಿಗೆ ಚೆನ್ನಾಗಿ ಬಾಳಬಲ್ಲೆ ಎಂದು ನಂಬಿದೆ, ಈತ ನನ್ನನ್ನು ಪ್ರೀತಿ, ವಿಶ್ವಾಸಗಳಿಂದ ಸುಖ ಸಂತೋಷಗಳಲ್ಲಿ ಓಲಾಡಿಸುತ್ತಾನೆ ಎಂದು ಭರವಸೆ ಇರಿಸಿದೆ. ಆದರೆ, ನನ್ನಿಂದ ಅದಾವುದನ್ನೂ ಈಡೇರಿಸಲಾಗಲಿಲ್ಲ. ನಿನ್ನ ಯಾವ ಕನಸೂ ಈಡೇರಲಿಲ್ಲ. ನನ್ನೊಂದಿಗೆ ಕಷ್ಟ, ಹಿಂಸೆ, ನೋವು, ಅಸಹಾಯಕತೆ, ದುಃಖಗಳನ್ನು ಉಟ್ಟುಂಡು ಬದುಕಬೇಕಾಯಿತಲ್ಲ! ನನ್ನನ್ನು ಮದುವೆಯಾದುದರಿಂದ ಬದುಕಿನಲ್ಲಿ ಯಾವೆಲ್ಲ ಕಷ್ಟ, ದುಃಖಗಳಿವೆಯೋ ಅವೆಲ್ಲವನ್ನೂ ಅನುಭವಿಸಬೇಕಾಯಿತಲ್ಲ!. ಉದ್ದೇಶಪೂರ್ವಕ ಅಲ್ಲದಿದ್ದರೂ ನಾನು ನಿನ್ನನ್ನು ಸುಖದಲ್ಲಿ ಬಾಳಿಸಲಾಗಲಿಲ್ಲ, ನಿನ್ನ ಕನಸುಗಳನ್ನು ಈಡೇರಿಸಲಾಗಲಿಲ್ಲ. ನಿನ್ನನ್ನು ಸುಖದಲ್ಲಿ ಬಾಳಿಸಬೇಕೆಂದ ಹಂಬಲವಿದ್ದರೂ ಅದನ್ನು ಕೈಗೂಡಿಸಲಾಗಲಿಲ್ಲ. ನಾನೊಬ್ಬ ಬೂದಿಮುಚ್ಚಿದ ಕೆಂಡ ಎಂಬುದು ತಿಳಿದಿದ್ದರೂ ನೀನು ನನ್ನನು ಬಿಟ್ಟುಬಿಡಲಿಲ್ಲ.
ನೆಲಕ್ಕೆ ಮುಗಿಲಿನ ರಕ್ಷೆಯಿರುವಂತೆ ಹೆಂಡತಿಗೆ ಗಂಡನ ರಕ್ಶೆ. ಈ ಮುಗಿಲಿನ ರಕ್ಷಣೆಯಲ್ಲಿ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ನಂಬಿ ಬದುಕುತ್ತಿದ್ದೇವೆ. ನೀನೂ ಮದುವೆಯಾದಂದಿನಿಂದ ಯಾವುದೇ ಕಷ್ಟಬಂದರೂ ಗಂಡ ತನ್ನನ್ನು ರಕ್ಷಿಸುತ್ತಾನೆ, ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾನೆ ಎಂದೆಲ್ಲ ಕನಸುಕಂಡು ನನ್ನ ಮನೆಯ ಹೊಸ್ತಿಲು ತುಳಿದೆ. ಅದೇ ಭರವಸೆಯಿಂದ ನನ್ನೊಂದಿಗೆ ಬದುಕಿದೆ. ಬದುಕುತ್ತಿರುವೆ. ಆದರೆ, ಮುಗಿಲು ಕಳಚಿ ಭೂಮಿಯ ಮೇಲೆ ಬಿದ್ದರೆ ಇನ್ನು ಬದುಕಿಗೆ ನೆಲೆಯಾದರೂ ಎಲ್ಲಿ? ’ಮುಗಿಲು ಕಪ್ಪರಿಸಿ ನೆಲಕೆ ಬಿದ್ದರೆ ನೆಲಕೆ ನೆಲೆ ಎಲ್ಲಿ?’ ಎಂಬ ಗಾದೆ ಮಾತನ್ನು ನಂಬಿ ನೀನೇನೋ ನನ್ನ ಬದುಕಿನಲ್ಲಿ ಜೊತೆಯಾದೆ. ಏನು ಸಮಸ್ಯೆಯಾದರೂ ರಕ್ಷಣೆಗೆ ಗಂಡನಿದ್ದಾನೆ ಎಂದು ನಂಬಿ ಸಂಸಾರ ನಡೆಸಿದೆ. ಆದರೆ ಈಗ ವಿಧಿಲೀಲೆಯಿಂದ ಮಗುವನ್ನು ಕಳೆದುಕೊಂಡು ಆಕಾಶವೇ ತಲೆಮೇಲೆ ಕಳಚಿ ಬಿದ್ದಂತಾಗಿದೆ. ನೆಲಕ್ಕೇ ರಕ್ಷಣೆಯಿಲ್ಲದ ಮೇಲೆ ನಮಗಾದರೂ ಎಲ್ಲಿ ಸಿಕ್ಕೀತು? ನೀನೇನೋ ನನ್ನನ್ನು ದೇವರೆಂದೇ ನಂಬಿ ದಾಂಪತ್ಯ ನಡೆಸಿದೆ. ನಿನ್ನ ಯಾವ ಭರವಸೆಯನ್ನು ನನ್ನಿಂದ ಈಡೇರಿಸಲಾಗಲಿಲ್ಲ. ಮಕ್ಕಳನ್ನು ಉಳಿಸಲಾಗಲಿಲ್ಲ, ನಿನ್ನ ಕಷ್ಟಗಳನ್ನು ಪರಿಹರಿಸಲಾಗಲಿಲ್ಲ, ಸುಖವಾಗಿ ಬಾಳಿಸಲಾಗಲಿಲ್ಲ. ಯಾವ ಅನಾಹುತಗಳನ್ನೂ ನನ್ನಿಂದ ತಡೆಯಲಾಗಲಿಲ್ಲ. ದುಃಖದ ಮಡುವಾಯಿತಲ್ಲ ಬದುಕು? ಗಂಡನ ಕರ್ತವ್ಯವನ್ನು ಸಂಪೂರ್ಣವಾಗಿ ನಿಭಾಯಿಸಲಾರದ ನನ್ನನ್ನು ನೀನು ದೇವರೆಂದು ಇನ್ನೂ ನಂಬಿಕೊಂಡಿರುವೆಯೇನು?
ಇಬ್ಬನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲಽ
ಹುಣಿವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ!
ಗಂಡನ್ನು ಮೊದಲು ಆಕರ್ಷಿಸುವುದು ಹೆಣ್ಣಿನ ಸುಂದರವಾದ ಕಣ್ಣು. ಅದು ಮನಸ್ಸನ್ನು ಸೆರೆಹಿಡಿಯುತ್ತದೆ, ನಗುಬೀರುತ್ತದೆ, ಮುದನೀಡುತ್ತದೆ, ನೋವನ್ನು ಮರೆಸುತ್ತದೆ. ತನ್ನನ್ನೂ ಆಕರ್ಷಿಸಿದ್ದು ಅವೇ ಕಣ್ಣುಗಳು. ಮದುವೆಯ ಸಂದರ್ಭದಲ್ಲಿ, ಅನಂತರದ ದಾಂಪತ್ಯದ ದಿನಗಳಲ್ಲಿ ಆ ಕಣ್ಣುಗಳು ಎಷ್ಟು ಮಾತಾಡಿವೆ! ಎಷ್ಟು ಭರವಸೆಗಳನ್ನು ತೋರಿವೆ! ಎಲ್ಲವೂ ಇನ್ನೂ ಹಚ್ಚಹಸಿರು. ಆ ಹೊಳೆವ ಕಣ್ಣುಗಳ ಕುಡಿನೋಟದಲ್ಲಿ ತಾನೆಷ್ಟು ಕಾವ್ಯಪ್ರೇರಣೆಗಳನ್ನು ಪಡೆದಿದ್ದೇನೆ! ನಾನು ನೊಂದಾಗ ಅವು ಎಷ್ಟು ಸಾಂತ್ವಾನ ನೀಡಿವೆ! ಹೊಳೆವ ಕಣ್ಣುಗಳ ಹೆಣ್ಣು ನೀನು, ಇದುವರೆಗೂ ನನ್ನನ್ನು ದುರುಗುಟ್ಟಿಯೂ ನೋಡಿಲ್ಲ, ಕೆಕ್ಕರಿಸಿಯೂ ನೋಡಿಲ್ಲ. ಒಲವು ತುಂಬಿದ ನಿನ್ನ ಕಣ್ಣೋಟ ಇದುವರೆಗೆ ನನ್ನ ಬದುಕಿಗೆ ಸ್ಫೂರ್ತಿಯಾಗಿತ್ತಲ್ಲ! ಸದಾ ಹೊಳೆಯುತ್ತಿದ್ದ ಆ ಕಣ್ಣುಗಳು ಇಬ್ಬನಿ ತೊಳೆದರೂ ಹಾಲು ಮೆತ್ತಿಕೊಂಡಿರುವ ಕವಳಕಂಟಿಯ ಹಣ್ಣುಗಳಂತಿದ್ದವು. ಆದರೆ ಆ ಸುಂದರಕಣ್ಣುಗಳೇ ಇಂದು ಯಾವ ಭಾವವನ್ನೂ ತೋರದೆ ನಿಸ್ತೇಜಗೊಂಡಿವೆ! ಇವು ನಿನ್ನ ಕಣ್ಣುಗಳೆಂದೇ ನಂಬಲಾಗುತ್ತಿಲ್ಲ. ನೋವನ್ನು ಮರೆಸುವ ಮಮತೆಯ ಮಡುಗಳಾಗಿರುವ ನಿನ್ನ ಕಣ್ಣುಗಳೇ ಇಂದು ನೋವಿನ, ಅಸಹನೆಯ ಮಡುಗಳಾಗಿ ಬದಲಾಗಿ ನನ್ನನ್ನು ಭಯಭೀತಗೊಳಿಸುತ್ತಿವೆ, ಎದೆನಡುಗಿಸುತ್ತಿವೆ. ಹಿಂದೆ ನಿನ್ನ ಮುಖದಲ್ಲಿ ಸದಾ ಹೊಳೆಹೊಳೆಯುತ್ತಿದ್ದ ಕಣ್ಣುಗಳು ಈಗ ಇವು ನಿನ್ನವೇ?! ಎಂಬ ಸಂಶಯವನ್ನು ನನ್ನಲ್ಲಿ ಪದೇ ಪದೇ ಉಂಟುಮಾಡುತ್ತಿವೆ!
ನಿನ್ನ ಈ ದಯನೀಯ ಸ್ಥಿತಿಯನ್ನು ಕಣ್ಣಾರೆ ಕಂಡು ನನ್ನ ಜೀವ ದಿಗಿಲುಗೊಂಡಿದೆ. ಕಳವಳಗೊಳ್ಳುತ್ತಿದೆ. ಎಂದೂ ಯಾವತ್ತೂ ನಿನ್ನಲ್ಲಿ ಭಯಭೀತಗೊಳಿಸುವ ಈ ರೀತಿಯ ಕಳೆಯನ್ನು ಕಂಡಿರಲಿಲ್ಲ. ಹಡೆದ ಮಕ್ಕಳನ್ನು ಒಂದೊಂದಾಗಿ ಕಳೆದುಕೊಳ್ಳುತ್ತ ನಿನ್ನ ಮನಸ್ಸಿನ ಶಾಂತಿಯೆಲ್ಲವೂ ಬತ್ತಿಹೋಗಿ ಮನಸ್ಸು ಬರಡಾಗಿದೆ ಎಂಬುದು ನನಗೂ ಗೊತ್ತು. ನಡೆದ ದಾರುಣತೆಗೆ ಹೊಣೆ ನೀನೂ ಅಲ್ಲ, ನಾನು ಕೂಡಾ. ನಾವು ವಿಧಿಯ ಕೈಗೊಂಬೆಗಳು. ವಿಧಿ ಆಡಿಸಿದಂತೆ ನಾವು ಆಡಬೇಕಷ್ಟೇ. ಎದುರಾದ ಎಲ್ಲಾ ಕಷ್ಟಗಳನ್ನು, ನೋವನ್ನು, ಹಿಂಸೆಗಳನ್ನು, ದುಃಖಗಳನ್ನು ಸಹಿಸಿಕೊಂಡು, ಮುಂದೆ ಒಳಿತು ಕಾದಿದೆ ಎಂದು ನಂಬಿ ಮುಂದಡಿಯಿಡಬೇಕು. ಹೀಗೆ ಪ್ರತಿಯೊಂದು ಹೆಜ್ಜೆಗೂ ಗಂಡಹೆಂಡಿರ ಪರಸ್ಪರ ಸಹಕಾರ, ನಂಬಿಕೆ, ಭರವಸೆಗಳು ಬೇಕು. ಆದರೆ ಇಂದು ನಿನ್ನ ಈ ಸ್ಥಿತಿ ಮಾತ್ರ ಭಯಾನಕವಾಗಿದ್ದು ನನ್ನನ್ನು ಕಂಗೆಡಿಸಿದೆ. ಹುಣ್ಣಿಮೆ ಚಂದಿರನ ಚೆಲುವು ರಾತ್ರಿಯಲ್ಲಿ ಮಾತ್ರ ಕಾಣಲು ಸಾಧ್ಯ. ಅದೇ ಚಂದಿರ ಹಗಲಲ್ಲಿ ಎಲ್ಲಾ ಚೆಲುವನ್ನು ಕಳೆದುಕೊಂಡು ನಿಸ್ತೇಜನಾಗುತ್ತಾನೆ. ನಿನ್ನ ಮುಖವೂ ಹುಣ್ಣಿಮೆ ಚಂದಿರನ ಚೆಲುವನ್ನು ಬೀರುತ್ತ ನನ್ನ ಬದುಕಿಗೆ ತಂಪನ್ನು ಎರೆಯುತ್ತಿತ್ತು. ಹುಣ್ಣಿಮೆ ಚಂದಿರನಂತಿದ್ದ ನಿನ್ನ ಮುಖ ಇಂದು ಮುಗಿಲಲ್ಲಿ ತೇಲಿಬಂದ ಚಂದಿರನ ಹೆಣದಂತೆ ಕಾಣುತ್ತಿದೆ. ಹುಣ್ಣಿಮೆ ಚಂದಿರನಂತೆ ಬೆಳೆದು ಬೆಳಗಬೇಕಾದ ನಮ್ಮ ಮಗು ಹೆಣವಾಗಿ ನಿನ್ನ ಮಡಿಲಲ್ಲಿ ಮಲಗಿಕೊಂಡಿರುವಾಗ ನಿನ್ನ ಮುಖದಲ್ಲಿ ಭೀತಿ, ಶೋಕದ ಕಳೆ ತುಂಬಿಕೊಳ್ಳದೆ ಇರುವುದಕ್ಕಾದರೂ ಹೇಗೆ ಸಾಧ್ಯ?
ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚನಗಿ ಯಾಕ?
ಹನಿ ಒಡೆಯಿಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರ ಅತ್ತುಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ?
ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ
ಮನುಷ್ಯನ ತಾಳ್ಮೆಗೊಂದು ಮಿತಿ ಇದ್ದೇ ಇದೆ. ಆ ಮಿತಿಯನ್ನು ಮೀರಿದ ಕಷ್ಟಗಳು, ದುಃಖಗಳು, ಹಿಂಸೆಗಳು ಎದುರಾದಾಗ ತಾಳ್ಮೆ ಕೆಡುತ್ತದೆ, ಕಣ್ಣೀರು ಸುರಿಯುತ್ತದೆ, ಅಳು ಭೋರ್ಗರೆದು ಹೊಮ್ಮುತ್ತದೆ. ಎಲ್ಲವೂ ಸಹಜ. ಬದುಕಿನಲ್ಲಿ ನಿರಂತರ ಕಷ್ಣ, ದುಃಖಗಳನ್ನು ಅನುಭವಿಸಿದವಳು ನೀನು. ಮದುವೆಯಾದ ಮೇಲಾದರೂ ಸುಖ ಪಡೆದೇನು ಎಂದು ನಂಬಿಬಂದವಳು. ಆದರೆ ಯಾವ ಸುಖವನ್ನೂ ಪಡೆಯಲಿಲ್ಲ. ಕಷ್ಟಗಳು, ಹಿಂಸೆಗಳು, ಸಮಸ್ಯೆಗಳು ಒಂದರ ಮೇಲೊಂದರಂತೆ ಬಂದು ಮುತ್ತಿಕೊಂಡವು, ಮುತ್ತಿಕೊಳ್ಳುತ್ತಲೇ ಹೋದವು. ಸಂಸಾರ ನಿರ್ವಹಣೆಗಾಗಿ ನಾನೂ ಪರದಾಡಿದೆ, ನೀನೂ ಕೂಡಾ. ಮಕ್ಕಳ ಮುಖನೋಡಿಯಾದರೂ ದುಃಖವನ್ನು, ಕಷ್ಟಗಳನ್ನು, ಹಿಂಸೆಗಳನ್ನು ಮರೆಯೋಣವೆಂದುಕೊಂಡೆವು. ಆದರೆ ವಿಧಿಗೆ ಅದೂ ಸಹ್ಯವಾಗಲಿಲ್ಲ. ಬಡತನದ ಬೇಗೆ, ಮಕ್ಕಳ ಅಳಿವಿನ ಬೇಗೆ ಎಲ್ಲವೂ ನಿನ್ನನ್ನು ಮುತ್ತಿಕೊಂಡು ನಿನ್ನಲ್ಲಿನ ಕೋಮಲತೆಯನ್ನೇ ನಾಶಮಾಡಿ, ಬದುಕಿನ ಸೆಲೆಯನ್ನೇ ಬತ್ತಿಸಿವೆ ಎಂಬುದು ನನಗೂ ಗೊತ್ತು. ನಿನ್ನ ಕಣ್ಣುಗಳೊಳಗೆ ಕಂಬನಿಯ ಮಳೆ ಕಾಲೂರಿ ಧಾರಾಕಾರವಾಗಿ ಹೊರಚಿಮ್ಮುವುದಕ್ಕೆ ಕಾತರಿಸುತ್ತಿದೆ. ಆದರೂ ಅದೆಲ್ಲವನ್ನೂ ಕಷ್ಟಪಟ್ಟು ತಡೆದುಕೊಂಡು ನಡುನಡುವೆ ಹುಚ್ಚುನಗೆ ಬೀರುತ್ತಿರುವೆ ಏಕೆ? ಇನ್ನೇನು ಮೋಡ ಮಳೆಯನ್ನು ಹನಿಸುತ್ತದೆ ಎನ್ನುವಾಗಲೇ ಯಾವುದೋ ಗಾಳಿ ಬಂದು ತಡೆದಂತೆ, ನಿನ್ನ ಕಣ್ಣುಗಳಿಂದ ಹರಿಯಬೇಕಾದ ಕಂಬನಿಯನ್ನು ಯಾವುದೋ ವಿಷಾಧಭಾವ ಮತ್ತೆ ಮತ್ತೆ ತಡೆಯುತ್ತಿದೆ, ಗಾಳಿ ಮೋಡವನ್ನು ತಡೆದಂತೆ.
ಮನುಷ್ಯನ ಮನಸ್ಸಿಗೆ ಹಾಗೂ ಅದರ ತಾಳ್ಮೆಗೊಂದು ಮಿತಿ ಎಂಬುದಿದೆಯಲ್ಲ! ಆ ತಾಳ್ಮೆಯನ್ನು ಇನ್ನಷ್ಟು ಬಿಗಿಗೊಳಿಸುವುದು ನ್ಯಾಯವೇ? ಮಕ್ಕಳನ್ನು ಕಳಕೊಂಡಿದ್ದಾಯಿತು, ನಿನ್ನನ್ನೂ ನಾನು ಕಳೆದುಕೊಳ್ಳಬೇಕೆ?! ಹೇಗೆ ಸಾಧ್ಯ? ನಿನ್ನ ಮನದೊಳಗೆ ದುಃಖ, ಶೋಕಗಳು ಮಡುಗಟ್ಟಿವೆ ಎಂಬುದು ನನಗೂ ಗೊತ್ತು. ಅದನ್ನು ಇನ್ನಷ್ಟು ಮಡುಗಟ್ಟಿಸುವ ಹುಚ್ಚು ಹಂಬಲ ಏಕೆ? ಹರಿಯಬಿಡು ಅದನ್ನು. ಮಡುಗಟ್ಟಿದ ಶೋಕ, ದುಃಖವೆಲ್ಲ ಹರಿದು ಬರಿದಾಗಲಿ. ಆಗಲೋ ಈಗಲೋ ಹೊರಹೊಮ್ಮುವುದಕ್ಕೆ ಕಾತರಿಸುವ ಅಳುವನ್ನು ಇನ್ನೂ ಏಕೆ ತಡೆಹಿಡಿದಿರುವೆ? ಮನಸ್ಸು ಹಗುರವಾಗುವಷ್ಟು ಅತ್ತುಬಿಡು. ಕರಗಿಹೋಗಲಿ ದುಃಖವೆಲ್ಲ. ಹರಿದು ಹೋಗಲಿ ಶೋಕವೆಲ್ಲ. ಹಗುರವಾಗಲಿ ಮನಸ್ಸು. ಅದು ಬಿಟ್ಟು ಮತ್ತೆ ಮತ್ತೆ ಹುಚ್ಚುನಗೆ ಬೀರುತ್ತ, ದುಃಖವನ್ನು ಮರೆಸುವೆ ಏಕೆ? ಅಳುವನ್ನು ತಡೆಹಿಡಿಯುವುದಾದರೂ ಏಕೆ? ನಿನ್ನ ಆ ನಗು ಸಹಜವಲ್ಲ ಎಂಬುದು ನನಗಾದರೂ ತಿಳಿಯದೆ? ನಿನ್ನ ಬಿರಿಗಣ್ಣು ಭಯಹುಟ್ಟಿಸುತ್ತಿದೆ, ಎವೆಯಿಕ್ಕಿದರೆ ಕಣ್ಣುಗಳೊಳಗೆ ತುಂಬಿರುವ ಕಣ್ಣೀರ ಹನಿಗಳು ಎಲ್ಲಿ ಉದುರಿಹೋಗಿ ನಾನು ನೊಂದೇನು ಎಂಬ ಭಯ ಬೇಡ. ಎವೆಗಳನ್ನು ಬಡಿದು ಕಣ್ಣೀರನ್ನು ಕೆಡಹಿಬಿಡು, ಉದುರುತ್ತ ಬತ್ತಿ ಹೋಗಲಿ ನಿನ್ನ ದುಃಖ. ತುಟಿಕಚ್ಚಿ ಹಿಡಿದು ನಿನ್ನ ಅಳುವನ್ನು ತಡೆಯಬೇಡ. ಭೋರೆಂದು ತುಟಿಬಿಚ್ಚಿ ಅತ್ತುಬಿಡು. ದುಃಖ ಪ್ರವಾದೋಪಾದಿಯಲ್ಲಿ ಹರಿದುಹೋಗಲಿ. ಹಗುರವಾಗಲಿ ಮನಸ್ಸು.
* * * * *
ಭಾರತೀಯ ತತ್ತ್ವಶಾಸ್ತ್ರದ ಸಂದರ್ಭದಲ್ಲಿ ನಾವು ಕೇಳುವ “ಪರಕಾಯ ಪ್ರವೇಶ” ಎಂಬ ಪದ, ಹಾಗೂ ಸಾಹಿತ್ಯ ಮೀಮಾಂಸೆಯ ಸಂದರ್ಭದಲ್ಲಿ ಆಗಾಗ ಕೇಳುವ “ಹೃದಯಸಂವಾದ” ಎಂಬ ಪದಗಳು ಮೇಲುನೋಟಕ್ಕೆ ಭಿನ್ನಭಿನ್ನವೆಂದೆನಿಸಿದರೂ ಆಳನೋಟದಲ್ಲಿ ಒಂದೇ ಎನಿಸುತ್ತವೆ. ಈ ಗೀತೆ ಅದಕ್ಕೊಂದು ಸಮರ್ಪಕವಾದ ದೃಷ್ಟಾಂತ ಎನಿಸುತ್ತದೆ. ಬೇಂದ್ರೆಯವರ ನೋವು ನಮ್ಮ ನೋವಾಗುತ್ತದೆ. ಅವರ ಹೆಂಡತಿಯ ಶೋಕ ನಮ್ಮ ಶೋಕವಾಗುತ್ತದೆ. ರಕ್ತಸಂಬಂಧ, ವಾಂಶಿಕಸಂಬಂಧಗಳಿಗೆ ಒಂದು ಮಿತಿಯಿದೆ. ಆದರೆ, ಮಾನವೀಯ ಸಂಬಂಧ ಎಲ್ಲವನ್ನೂ ಮೀರಿದುದು. ಈ ಗೀತೆಯಲ್ಲಿ ವ್ಯಕ್ತವಾಗುವುದೂ ಅದೇ ಮಾನವೀಯಸಂಬಂಧ. ಹಾಗಾಗಿಯೇ ಈ ಗೀತೆಯನ್ನು ಕೇಳುವಾಗ, ಓದುವಾಗ, ಅರ್ಥೈಸುವಾಗ ನಮ್ಮ ಮನಸ್ಸು ಕರಗುತ್ತದೆ. ಹೃದಯ ಮಿಡಿಯುತ್ತದೆ. ಬಹುಶಃ ದಾಂಪತ್ಯದ ಏಳು-ಬೀಳುಗಳನ್ನು, ನೋವಿನ ಆಳ-ಅಗಲಗಳನ್ನು, ಕ್ರೌರ್ಯದ ವಿವಿಧ ಮುಖಗಳನ್ನು ಬೇಂದ್ರೆಯವರಂತೆ ಬೇರೆ ಯಾರೂ ಚಿತ್ರಿಸಿಲ್ಲ. ಹಾಗೆ ಚಿತ್ರಿಸುವ ಸಂದರ್ಭಗಳೂ ಉಳಿದವರಿಗೆ ಎದುರಾಗಲಿಲ್ಲ. ಈ ಗೀತೆ ರಚನೆಯಾಗಿ ಎಂಬತ್ತು ದಶಕಗಳೇ ಮೀರಿಹೋದರೂ ಇಂದಿಗೂ ಸಹೃದಯರನ್ನು ಸೆಳೆಯುತ್ತದೆ, ಹೃದಯವನ್ನು ಕರಗಿಸುತ್ತದೆ, ಶೋಕದಲ್ಲಿ ಮೀಯಿಸುತ್ತದೆ. ಬದುಕಿನ ದರ್ಶನ ಮಾಡಿಸುತ್ತದೆ.
ಸಹೃದಯರು ಈ ಗೀತೆಯನ್ನು ಭಾವಗೀತೆ, ಶೋಕಗೀತೆ, ದಾಂಪತ್ಯಗೀತೆ, ದರ್ಶನಗೀತೆ –ಹೀಗೆ ಯಾವ ಹೆಸರಿಂದ ಬೇಕಾದರೂ ಕರೆದುಕೊಳ್ಳಬಹುದು. ಇವುಗಳಲ್ಲಿ ಎಲ್ಲವೂ ಸಾಧು, ಎಲ್ಲವೂ ಸಾಧ್ಯ. ಏಕಕಾಲದಲ್ಲಿ ಹತ್ತಾರು ಭಾವಗಳಿಗೆ ಮಾಧ್ಯಮವಾಗಬಲ್ಲ ಶಕ್ತಿ, ಸಾಮರ್ಥ್ಯ ಈ ಗೀತೆಗಿದೆ. ಭಾವತೀವ್ರತೆಗೆ ಅನುಗುಣವಾಗಿ ಭಾಷಾಭಿವ್ಯಕ್ತಿ ಉಂಟಾದಾಗ ಕ್ರಿಯೆ ಅಭಿನಯಗೊಳ್ಳುತ್ತದೆ. ಈ ಗೀತೆ ಅದಕ್ಕೊಂದು ಸಮರ್ಥ ಉದಾಹರಣೆ. ಕವಿ ತನ್ನ ಭಾವದ ಆದ್ಯಂತಗಳನ್ನು ಮೊದಲು ಗ್ರಹಿಸಿಕೊಂಡು ಅದನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳಬೇಕು. ಆ ಭಾವಕ್ಕನುಗುಣವಾದ ಪದಗಳೂ ಅನುಕ್ರಮವಾಗಿ ಜೋಡಣೆಗೊಳ್ಳಬೇಕು. ಬೇಂದ್ರೆಯವರು ಈ ಗೀತೆಯಲ್ಲಿ ಅವೆಲ್ಲವನ್ನು ಸಮರ್ಪಕವಾಗಿ, ಸುಲಲಿತವಾಗಿ, ಅರ್ಥವತ್ತಾಗಿ, ಭಾವಪೂರ್ಣವಾಗಿ ಜೋಡಣೆಗೊಳಿಸಿರುವುದನ್ನು ಕಾಣಬಹುದು. ಹಾಗಾಗಿಯೇ ಈ ಗೀತೆ ಸಹೃದಯರ ಮನಸ್ಸನ್ನು ಕರಗಿಸುತ್ತದೆ, ಹೃದಯವನ್ನು ಆರ್ದ್ರಗೊಳಿಸುತ್ತದೆ. ಕಂಬಿನಿ ಮಿಡಿಯುವಂತೆ ಮಾಡುತ್ತದೆ.
ಶಿಷ್ಟಕನ್ನಡಕ್ಕೆ ಎಷ್ಟು ಶಕ್ತಿ, ಸಾಮರ್ಥ್ಯಗಳಿವೆಯೋ ಅಷ್ಟೇ ಶಕ್ತಿ, ಸಾಮರ್ಥ್ಯಗಳು ಆಡುಕನ್ನಡಕ್ಕೂ ಇವೆ ಎಂಬುದನ್ನು ಬೇಂದ್ರೆಯವರು ತಮ್ಮ ಹಲವಾರು ಗೀತೆಗಳಲ್ಲಿ, ಕವನಗಳಲ್ಲಿ ಸಾಧಿಸಿತೋರಿಸಿದ್ದಾರೆ. ಆದರೆ ಅದು ಅತ್ಯಂತ ಹೆಚ್ಚು ಮಾರ್ಮಿಕವಾಗಿ ಹರಳುಗೊಂಡದ್ದು “ನೀ ಹೀಂಗ ನೋಡಬ್ಯಾಡ ನನ್ನ” ಎಂಬ ಗೀತೆಯಲ್ಲಿ. ಧಾರವಾಡ ಕನ್ನಡವನ್ನು ಅವರು ಈ ಗೀತೆಯಲ್ಲಿ ಸಂಪೂರ್ಣವಾಗಿ ದುಡಿಸಿಕೊಂಡಿದ್ದಾರೆ. ಮಾತ್ರವಲ್ಲ, ಧಾರವಾಡ ಕನ್ನಡದ ಸೊಗಸನ್ನು, ಸೊಗಡನ್ನು ಸೂರೆಮಾಡಿದ್ದಾರೆ. ಭವಿಷ್ಯದ ಕವಿಗಳಿಗೆ ಕನ್ನಡ ಕಾವ್ಯದ ಹೊಸಮಾರ್ಗಗಳನ್ನು ತೆರೆದುತೋರಿಸಿದ್ದಾರೆ. ಇಂದಿಗೂ ಮಾರ್ಗದರ್ಶಕರಾಗಿಯೇ ಇದ್ದಾರೆ. ಮುಂದೆಯೂ ಇರುತ್ತಾರೆ.
***
ಈ ಗೀತೆಯನ್ನು ದೃಶ್ಯ ಸಂಗೀತದೊಂದಿಗೆ ಕೇಳಿ, ನೋಡಿ. ಮನಸ್ಸು ಹಗುರವಾಗಲಿ.
(ಓದಿದ ಕನ್ನಡ ಸಹೃದಯಬಂಧುಗಳು ತಮ್ಮ ಅನಿಸಿಕೆಗಳನ್ನು ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ನಮೂದಿಸಬೇಕಾಗಿ ವಿನಂತಿ)
ವಂದನೆಗಳೊಂದಿಗೆ,
🙏
ಡಾ. ವಸಂತ್ ಕುಮಾರ್, ಉಡುಪಿ.
Excellent..
🙏
ಚೆನ್ನಾಗಿದೆ.ಉಪಯುಕ್ತ.
ಧನ್ಯವಾದಗಳು. 🙏
ಕವಿತೆಯ ವಿಸ್ತಾರತೆಯ ಸಂದರ್ಭದಲ್ಲಿಯೂ, ನಿಮ್ಮ ನಿರೂಪಣೆ ಮಿತಿಯಾಗಿದ್ದಾಗ್ಯೂ ಕೂಡ, ಒಂದಷ್ಟು ಜನರಿಗಾದರೂ ಉಪಯೋಗವಾಗುವುದರಲ್ಲಿ ಸಂಶಯವಿಲ್ಲ.
ದಾಂಪತ್ಯದಲ್ಲಿಯೂ ಕೊಡು-ಪಡೆದಿಕೋ ಎನ್ನುವ ಕಾಲಘಟ್ಟದಲ್ಲಿರುವ ಇಂದಿನ ವ್ಯವಸ್ಥೆಗೆ ಬೇಂದ್ರೆಯ ಪದ್ಯ ಪಾಠವಾಗಲಿಕ್ಕು ಉಂಟು, ಅಂತಹ ಗಟ್ಟಿತನವುಳ್ಳ ದಾಂಪತ್ಯವನ್ನು ಇಂದಿನ ವ್ಯವಸ್ಥೆಯಲ್ಲಿ ಕಲ್ಪನೆ ಮಾಡಿಕೊಳ್ಳಲು ಸಾಧ್ಯವೆ
ನಿಮ್ಮ ಸಹೃದಯತೆಗೆ ಧನ್ಯವಾದಗಳು. ಬೇಂದ್ರೆಯವರಂತಹ ಕವಿಗಳ ಹಲವು ಗೀತೆಗಳು ಅವರ ಅನುಭವದ ಮೂಸೆಯಲ್ಲಿ ಪುಟಗೊಂಡು ಬಂದವುಗಳು. ಅವು ಇಂದಿಗೂ ಮಾತ್ರವಲ್ಲ ಎಂದೆಂದಿಗೂ ನಮಗೆ, ನಮ್ಮ ಬದುಕಿಗೆ ದಾರಿದೀಪಗಳು. ಆದರೆ, ಬದುಕನ್ನು, ಅದರಲ್ಲೂ ದಾಂಪತ್ಯವನ್ನು ವ್ಯವಹಾರವನ್ನಾಗಿ ಮಾಡಿಕೊಂಡ ಇಂದಿನ ಹಲವು ಆಧುನಿಕರಿಗೆ ಇವು ಅಪ್ರಸ್ತುತವಾಗಬಹುದು. ದಾಂಪತ್ಯದಲ್ಲಿ ವ್ಯವಹಾರ ಸಲ್ಲದು ಎಂಬ ಕನಿಷ್ಟ ಪ್ರಜ್ಞೆಯೇ ಇಲ್ಲದಿರುವುದರಿಂದ ನಮ್ಮಲ್ಲಿ ದಾಂಪತ್ಯಗಳು ಮುರಿದುಬೀಳುತ್ತಿವೆ. ಒಂದು ಭವ್ಯ, ಆದರ್ಶ ಪರಂಪರೆಯ ಹಿನ್ನೆಲೆಯನ್ನು ಹೊಂದಿರುವ ಈ ನಾಡಿನಲ್ಲಿ ಹೀಗಾಗುತ್ತಿರುವುದು ವಿಪರ್ಯಾಸ.
ಸಮಾನ ಆಸಕ್ತರಿಗೆ ಸಹೃದಯರಿಗೆ ಈ ವ್ಯಾಖ್ಯಾನದ ಕೊಂಡಿಯನ್ನು ಹಂಚಿಕೊಳ್ಳಬೇಕಾಗಿ ವಿನಂತಿ. ಧನ್ಯವಾದಗಳು.
Still I have a doubt….. ಕವಿಯ ಪತ್ನಿ ಕಣ್ಣ ನೀರನ್ನು ಯಾವ ರೀತಿ ತಡೆಯುತ್ತಳೆ
ನಿಮ್ಮ ಜಿಜ್ಞಾಸೆಗೆ ಧನ್ಯವಾದಗಳು.
ಕವಿ ಮತ್ತು ಅವರ ಪತ್ನಿ ಈಗಾಗಲೇ ಸಾಕಷ್ಟು(ಅವರು ಕಳೆದುಕೊಂಡಿರುವ ಒಟ್ಟು ಮಕ್ಕಳು ಆರು) ಮಕ್ಕಳನ್ನು ಕಳೆದುಕೊಂಡಿದ್ದಾರೆ. ಮೊದಲ ಮಗುವಿನ ಅಗಲಿಕೆಯ ನೋವು ಅತ್ಯಂತ ತೀವ್ರವಾಗಿರುತ್ತದೆ. ಒಂದೊಂದೇ ಮಕ್ಕಳನ್ನು ಕಳೆದುಕೊಳ್ಳತೊಡಗಿದಂತೆ ಅಗಲಿಕೆಯ ನೋವು ಮನಸ್ಸನ್ನು ಜಡಗಟ್ಟಿಸುತ್ತದೆ. ಜೀವನದಲ್ಲಿನ ಆಸೆ, ಆಕಾಂಕ್ಷೆ, ಒಲವು, ಮಮಕಾರಗಳೆಲ್ಲವೂ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳತೊಡಗುತ್ತವೆ. ಇತರ ಸಂದರ್ಭಗಳಲ್ಲಿಯೂ ಮನುಷ್ಯ ಕಷ್ಟ, ಹಿಂಸೆ, ದುಃಖ, ನೋವುಗಳನ್ನು ಎದುರಿಸುತ್ತಾ ಹೋದಂತೆ ತನ್ನ ಮುಂದೆ ನಡೆಯುವ ಘಟನೆಗಳ ಬಗೆಗಿನ ಆತನ ನೇರವಾದ ಸ್ಪಂದನ ಕಡಿಮೆಯಾಗುತ್ತ ಸಾಗುತ್ತದೆ. ಕಷ್ಟ, ಹಿಂಸೆ, ನೋವನ್ನು ಸಹಿಸಿಕೊಳ್ಳುವುದು, ಮನಸ್ಸನ್ನು ಗಟ್ಟಿಗೊಳಿಸಿಕೊಳ್ಳುವುದು, ಕ್ರಮೇಣ ಲೋಕರೂಢಿಗೆ ಒಗ್ಗಿಕೊಳ್ಳುವುದನ್ನು ಕಲಿಯುತ್ತಾನೆ. ಬೇಂದ್ರೆಯವರ ಅಥವಾ ಅವರ ಪತ್ನಿಯ ವಿಷಯದಲ್ಲಿಯೂ ಇದನ್ನೇ ನಾವು ಪರಿಭಾವಿಸಬೇಕಾಗುತ್ತದೆ. ಕಣ್ಣೀರು ಎಲ್ಲ ಸಂದರ್ಭಗಳಲ್ಲಿ ಹರಿಯಬೇಕೆಂದೇನೂ ಇಲ್ಲ. ನೋವು ಒಳಗೊಳಗೇ ಕುದಿಯುತ್ತಿರುತ್ತದೆ. ಇತರರ ಮುಂದೆ ಹೇಳಿಕೊಳ್ಳಲಾಗದ, ಹೇಳಿಕೊಂಡು ಅತ್ತು ಮನಸ್ಸನ್ನು ಹಗುರಮಾಡಿಕೊಳ್ಳಲಾಗದ, ಎದುರಾದ ಅನಾಹುತಗಳಿಗೆ ಪರಿಹಾರವನ್ನೇ ಕಂಡುಕೊಳ್ಳಲಾಗದ ಈ ಸ್ಥಿತಿ ಅತ್ಯಂತ ಘೋರವೂ ತೀಕ್ಷ್ಣವೂ ಆದುದು. ಬೇಂದ್ರೆಯವರ ಪತ್ನಿಯೂ ಇದನ್ನೇ ಅನುಭವಿಸಿದ್ದು. ಆದರೆ ಬೇಂದ್ರಯವರು ಪತ್ನಿಯ ಈ ಸ್ಥಿತಿಯನ್ನು ಕಂಡುಕೊಂಡರು. ಅವರು ಈಗಾಗಲೇ ಇಂತಹ ನೋವನ್ನು ಕಂಡುಂಡವರಾದುದರಿಂದ ಅದು ಸಾಧ್ಯವಾಯಿತು. ಇತರರಿಗೆ ಅದನ್ನು ಅರ್ಥೈಸಿಕೊಳ್ಳುವುದು ಕಷ್ಟ. ಈ ಗೀತೆಯ ಪ್ರತಿಸಾಲುಗಳನ್ನು ಮತ್ತೆ ಮತ್ತೆ ಆಲಿಸಿ ಅರ್ಥೈಸಿಕೊಳ್ಳಲು ಪ್ರಯತ್ನಿಸಿದರೆ ನಾವೂ ಈ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದೀತು.
ಈ ಬ್ಲಾಗಲ್ಲಿ ಇನ್ನೂ ಹಲವು ವ್ಯಾಖ್ಯಾನಗಳಿವೆ. ಅವುಗಳನ್ನೂ ಓದಿ. ಪ್ರತಿಕ್ರಿಯಿಸಿ. ಸಮಾನ ಆಸಕ್ತ ನಿಮ್ಮ ಸ್ನೇಹಿತವರ್ಗಕ್ಕೂ ಈ ಬ್ಲಾಗಿನ ಲಿಂಕನ್ನು ಶೇರ್ ಮಾಡಿ. ನಮಸ್ಕಾರ.
ಮನಸಿಗೆ ಎಷ್ಟೇ ತಳಮಳ ನೋವಿದ್ದರೂ ಅಲ್ಪವಾದರೂ ಮೌನದ ಜೊತೆ ಶಾಂತತೆಯನ್ನು ನೀಡುವಂತಹ ಅದ್ಬುತ ಗೀತೆ.
ನಿಮ್ಮ ಮಾತುಗಳು ನಿಜ. ಇಂತಹ ಕವನಗಳು ಉತ್ತಮ ಜೀವನ ಮೀಮಾಂಸೆಯಾಗಿವೆ. ಇದು ಬದುಕಿನ ತತ್ತ್ವಗೀತೆ. ಸಾಹಿತ್ಯ ಜನಜೀವನದ ಗತಿಬಿಂಬ ಎಂಬುದು ಇದೇ ತಾನೇ! ಲೋಕಾನುಭವ, ಜೀವನಾನುಭವ, ಬದುಕು ಸಮಾಜಗಳ ಕಾಳಜಿಯುಕ್ತ ಕಾವ್ಯ ಸಹೃದಯರಿಗೆ ಆನಂದಾನುಭವದ ಜೊತೆಗೆ ಬದುಕನ್ನು ನೇರ್ಪುಗೊಳಿಸಲು ಸಹಾಯಕವಾಗುತ್ತವೆ. ಈ ನಿಟ್ಟಿನಲ್ಲಿ ಬೇಂದ್ರೆ, ಕೆ. ಎಸ್. ನರಸಿಂಹಸ್ವಾಮಿ ಮೊದಲಾದವರ ಕವನಗಳು, ಕಾವ್ಯಗಳು ಮಾರ್ಗದರ್ಶಿಯಾಗಿವೆ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಸಮಾನಮನಸ್ಕ ಸ್ನೇಹಿತರಿಗೂ ಇದರ ಲಿಂಕನ್ನು ವಿನಿಮಯಮಾಡಿಕೊಳ್ಳಬೇಕಾಗಿ ವಿನಂತಿ.
ನಿಮ್ಮ ನಿರೂಪಣೆ ಓದಿ ಮನಸ್ಸು ಕರಗಿ ಕಣ್ಣಿನ ಮೂಲಕ ಬಿಸಿನೀರು ಆಗಿ ಕೆಳಗೆ ಇಳಿದು ಬಂತು, ನಿರೂಪಣೆ ಅದ್ಭುತ. ವಂದನೆಗಳು
ನಮಗೆಲ್ಲರಿಗೂ ಈ ದಾಂಪತ್ಯಗೀತೆ ಈ ಮಟ್ಟದಲ್ಲಿ ಆರ್ದ್ರತೆಯನ್ನು ಉಂಟುಮಾಡುವುದಾದರೆ ಅದನ್ನು ರಚಿಸಿದ ಕವಿ ಬೇಂದ್ರೆಯವರಿಗೆ ಹೇಗಾಗಿರಬಹುದು. ಇಂತಹವು ನಿಜವಾದ ಕವನಗಳು, ಕಾವ್ಯಗಳು. ಇಂತಹವು ನಮಗಿಂದು ಬೇಕಾಗಿವೆ. ಆದರೆ ಇನ್ನು ಮುಂದೆ ಅಂತಹವುಗಳನ್ನು ನಿರೀಕ್ಷಿಸುವುದು ಮೂರ್ಖತನವಾದೀತೇನೋ! ನಿಮ್ಮ ಅನಿಸಿಕೆಗಳುಗೆ ಧನ್ಯವಾದಗಳು. ನಿಮ್ಮ ಸಮಾನ ಮನಸ್ಕ ಸ್ನೇಹಿತರಿಗೂ ಇದರ ಲಿಂಕನ್ನು ವಿನಿಮಯಮಾಡಿಕೊಳ್ಳಬೇಕಾಗಿ ವಿನಂತಿ.