ಸಾಹಿತ್ಯಾನುಸಂಧಾನ

heading1

ವಚನಗಳು – ಅಂಬಿಗರ ಚೌಡಯ್ಯ

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಸಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ)

ಗುರುವೆಂಬೆನೆ ಹಲಬರ ಮಗ!

ಲಿಂಗವೆಂಬೆನೆ ಕಲ್ಲುಕುಟಿಗರ ಮಗ!

ಪ್ರಸಾದವೆಂಬೆನೆ ಒಕ್ಕಲಿಗರ ಮಗ!

ಪಾದೋದಕವೆಂಬೆನೆ ದೇವೇಂದ್ರನ ಮಗ!

ಈಸುವ ಹಿಡಿಯಲೂ ಇಲ್ಲ, ಬಿಡಲೂ ಇಲ್ಲ

ತನ್ನೊಳಗ ನೋಡೆಂದನಂಬಿಗರ ಚೌಡಯ್ಯ   ||೧||

(’ಗುರು’ ಎಂಬೆನೆ ಹಲವರ ಮಗ,   ’ಲಿಂಗ’ ಎಂಬೆನೆ ಕಲ್ಲುಕುಟಿಗರ ಮಗ,   ’ಪ್ರಸಾದ’ ಎಂಬೆನೆ ಒಕ್ಕಲಿಗರ ಮಗ,   ’ಪಾದೋದಕ’ ಎಂಬೆನೆ ದೇವೇಂದ್ರನ ಮಗ,   ಈಸುವ ಹಿಡಿಯಲೂ ಇಲ್ಲ,  ಬಿಡಲೂ ಇಲ್ಲ,  ತನ್ನ ಒಳಗ ನೋಡೆಂದನ್ ಅಂಬಿಗರ ಚೌಡಯ್ಯ)

(ಪದ-ಅರ್ಥ: ಹಲವರ ಮಗ-ಹಲವು ಮಂದಿಯ ಅನುಗ್ರಹದಿಂದ ಬೆಳೆದವನು, ಹಲವು ಮಂದಿಗಳ ಜ್ಞಾನವನ್ನು ಪಡೆದು ಜ್ಞಾನಿ ಎನಿಸಿಕೊಂಡವನು;  ಕಲ್ಲುಕುಟಿಗ-ಒಡ್ಡ, ಕಲ್ಲಿನ ಕೆಲಸ ಮಾಡುವವನು;  ಪ್ರಸಾದ-ದಾಸೋಹ;  ಒಕ್ಕಲಿಗ-ಭೂಮಿಯ ಒಡೆಯ;  ಜಮೀನ್ದಾರ; ಪಾದೋದಕ-ಪಾದ ತೊಳೆದ ನೀರು;  ದೇವೇಂದರ-ಸ್ವರ್ಗದ ಒಡೆಯ, ಮಳೆಯನ್ನು ಸುರಿಸುವವನು; ಈಸುವ-ಇಷ್ಟನ್ನೂ;  ತನ್ನೊಳಗ-ತನ್ನ ಅಂತರಂಗ.)

            ಭಕ್ತನಾದವನು ಅಥವಾ ಭಕ್ತನೆನಿಸಿಕೊಳ್ಳಬೇಕು ಎಂದು ಭಾವಿಸುವವನು ಮೊದಲು ತನ್ನ ಮನಸ್ಸನ್ನು ತಾನು ಅರಿತಿರಬೇಕು ಎಂಬುದನ್ನು ಅಂಬಿಗರ ಚೌಡಯ್ಯ ಈ ವಚನದಲ್ಲಿ ನಾಲ್ಕು ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿದ್ದಾನೆ.

            ’ಗುರು’ ಎಂಬವನು ಆ ಸ್ಥಾನವನ್ನು ಪಡೆಯುವುದಕ್ಕಿಂತ ಮೊದಲು ಹಲವು ಮಂದಿಯಿಂದ ಜ್ಞಾನವನ್ನು ಪಡೆದುಕೊಂಡಿರುವುದರಿಂದ ಆತ ಹಲವು ಮಂದಿಯ ಮಗ ಎನಿಸಿಕೊಳ್ಳುತ್ತಾನೆ. ’ಲಿಂಗ’ ಎಂಬುದು ತನ್ನಿಂದ ತಾನೇ ಆವಿರ್ಭವಿಸಿದ್ದಲ್ಲ. ಅದನ್ನು ಕಲ್ಲುಕುಟಿಗೆ ಕಲ್ಲನ್ನು ಕೆತ್ತಿ ಸಿದ್ಧಪಡಿಸಿರುವುದರಿಂದ ಲಿಂಗ ಎಂಬುದು ಕಲ್ಲುಕಟಿಗರ ಮಗ ಎನಿಸಿಕೊಳ್ಳುತ್ತಾನೆ. ’ಪ್ರಸಾದ’ ಎಂಬುದು ದಾಸೋಹದ ಒಂದು ರೂಪವಾದರೂ ಅದರಲ್ಲಿ ಬಳಸುವ ಧಾನ್ಯಗಳನ್ನು ದಾಸೋಹಿಗಳು ಸ್ವಂತವಾಗಿ ಬೆಳೆಸಿದ್ದಲ್ಲ. ಪ್ರಸಾದವು ಒಕ್ಕಲಿಗರು ಬೆಳೆಸಿದ ಧಾನ್ಯಗಳಿಂದ ತಯಾರಾದುದು. ಹಾಗಾಗಿ ಪ್ರಸಾದವೆಂಬುದು ಒಕ್ಕಲಿಗರ ಮಗ ಎನಿಸಿಕೊಳ್ಳುತ್ತದೆ. ’ಪಾದೋದಕ’ವೆಂಬುದು ಅತಿಥಿ ಸತ್ಕಾರದಲ್ಲಿ ಬಹುಮುಖ್ಯವಾದರೂ ಅಲ್ಲಿ ಬಳಸುವ ನೀರು ದೇವೇಂದ್ರನಿಂದ ಮಳೆಯ ರೂಪದಲ್ಲಿ ಲಭ್ಯವಾದುದು. ಆದುದರಿಂದ ಅದು ದೇವೇಂದ್ರನ ಮಗ. ಶಿವಭಕ್ತನಾದವನು ತನ್ನ ದೈನಂದಿನ ಅನುಷ್ಠಾನಗಳಲ್ಲಿ ಗೌರವಿಸುವ ಮತ್ತು ಬಳಸುವ ಗುರು, ಲಿಂಗ, ಪ್ರಸಾದ ಹಾಗೂ ಪಾದೋದಕಗಳಾವುವೂ ಆತನ ಸ್ವಂತದ್ದಲ್ಲ. ಅನ್ಯರಿಂದ ಪಡೆದಿರುವಂತಹವು. ಅನ್ಯರಿಂದ ಅನಾಯಾಸವಾಗಿ ಪಡೆದಿರುವುದನ್ನು ಸ್ವಂತದ್ದೆಂದು ಭಾವಿಸಿಕೊಳ್ಳುವುದು, ಅವುಗಳನ್ನು ಭಕ್ತಿಯ ಅನುಷ್ಠಾನಗಳಲ್ಲಿ ಬಳಸಿಕೊಂಡು ಅಥವಾ ಇತರರಿಗೆ ದಾನಮಾಡಿ ಭಕ್ತನೆನೆಸಿಕೊಳ್ಳುವುದಕ್ಕೆ ಪ್ರಯತ್ನಿಸುವುದು ಡಾಂಬಿಕತೆಯೇ ವಿನಾ ಸದ್ಭಕ್ತಿ ಎನಿಸಿಕೊಳ್ಳಲಾರದು.

            ಭಕ್ತಿಯ ಹಾಗೂ ಅದರ ಅನುಷ್ಠಾನದ ಸಂದರ್ಭಗಳಲ್ಲಿ ಭಕ್ತನೊಬ್ಬ ಯಾವೊಂದಕ್ಕೂ ಅಂಟಿದಂತಿದ್ದರೂ ಅಂಟದಂತಿರಬೇಕು. ಹಿಡಿದಂತಿದ್ದರೂ ಹಿಡಿಯದಂತಿರಬೇಕು. ಅಂಬಿಗರ ಚೌಡಯ್ಯನ ಪ್ರಕಾರ, ದೈನಂದಿನ ಅನುಷ್ಠಾನಗಳಲ್ಲಿ ಒಂದಿಷ್ಟನ್ನು ಸ್ವೀಕರಿಸಲೂ ಇಲ್ಲ, ಒಂದಿಷ್ಟನ್ನು ಬಿಡಲೂ ಇಲ್ಲ ಎಂದಾದರೆ ಅದುವೇ ನಿಜವಾದ ಭಕ್ತಿ ಎನಿಸಿಕೊಳ್ಳುತ್ತದೆ. ಇದನ್ನು ಸಾಧಿಸಬೇಕಾದರೆ ಭಕ್ತನಾದವನು ಅಥವಾ ಭಕ್ತನಾಗಬಯಸುವವನು ಮೊದಲು ತನ್ನ ಮನಸ್ಸನ್ನು ಹಾಗೂ ಅದರ ಅಂತರಾಳವನ್ನು ಅರಿತಿರಬೇಕು. ಇಲ್ಲದಿದ್ದರೆ ಎಲ್ಲವೂ ಬೂಟಾಟಿಕೆ ಎನಿಸಿಕೊಳ್ಳುತ್ತದೆ.

            ಹನ್ನೆರಡೆಯ ಶತಮಾನದಲ್ಲಿಯೇ ಭಕ್ತಿ ಹಾಗೂ ಭಕ್ತನ ಹೆಸರಿನಲ್ಲಿ ಸಾಕಷ್ಟು ಬೂಟಾಟಿಕೆ ಹಾಗೂ ಡಾಂಬಿಕತೆಗಳು ತುಂಬಿಕೊಂಡಿದ್ದವು ಎಂದು ತೋರುತ್ತದೆ. ಅದಕ್ಕಾಗಿಯೇ ಅಂಬಿಗರ ಚೌಡಯ್ಯ ಈ ವರ್ತನೆಯನ್ನು ಖಂಡಿಸುತ್ತಾನೆ. ಇಂದು ಇಪ್ಪತ್ತೊಂದನೆಯ ಶತಮಾನದಲ್ಲಿ ಎಲ್ಲವನ್ನೂ ಅನ್ಯರಿಂದ ತೆಗೆದುಕೊಂಡು, ಎರವಲು ಪಡೆದುಕೊಂಡು ಅಥವಾ ಎಗರಿಸಿಕೊಂಡು ಅನ್ಯರಿಗೆ ದಾನಮಾಡಿ, ಮೆಚ್ಚಿಸಿ ದೊಡ್ಡಮನುಷ್ಯರಾಗುವ, ದಾನಿ ಎನಿಸಿಕೊಳ್ಳುವ ಪ್ರಯತ್ನ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಜನ ಅದನ್ನೇ ಸರಿಯೆಂದೂ ವಾಸ್ತವವಾದುದನ್ನು ಸುಳ್ಳೆಂದೂ ಭಾವಿಸಿಕೊಳ್ಳುತ್ತಲೇ ಇದ್ದಾರೆ. ಅಂಬಿಗರ ಚೌಡಯ್ಯನ ಈ ವಚನ ಅಂದಿಗಿಂತ ಇಂದಿನ ಪರಿಸ್ಥಿತಿಯನ್ನು  ಹೆಚ್ಚು ವಿಡಂಬಿಸುತ್ತದೆ  ಎಂದೆನಿಸುತ್ತದೆ.

 

ಅರಿಯದ ಗುರು, ಅರಿಯದ ಶಿಷ್ಯಂಗೆ

ಅಂಧಕನ  ಕೈಯ್ಯನಂಧಕ ಹಿಡಿದಡೆ

ಮುಂದನಾರು ಕಾಬರು ಹೇಳೆಲೆ ಮರುಳೆ

ತೊರೆಯಲದ್ದವನನೀಸಲರಿಯದವ

ತೆಗೆವ ತೆರನಂತೆಂದನಂಬಿಗ ಚೌಡಯ್ಯ  ||೨|| 

 (ಅರಿಯದ ಗುರು, ಅರಿಯದ ಶಿಷ್ಯಂಗೆ, ಅಂಧಕನ ಕೈಯನ್ ಅಂಧಕ ಹಿಡಿದಡೆ, ಮುಂದನ್ ಆರು ಕಾಬರು ಹೇಳೆಲೆ ಮರುಳೆ? ತೊರೆಯಲಿ ಅದ್ದವನನ್ ಈಸಲ್ ಅರಿಯದವ ತೆಗೆವ ತೆರನಂತೆ ಎಂದನ್ ಅಂಬಿಗ ಚೌಡಯ್ಯ.)

(ಪದ-ಅರ್ಥ: ಅರಿಯದವ-ಅಜ್ಞಾನಿ, ತಿಳಿಯದವನು;  ಅಂಧಕ-ಕುರುಡ;  ಮುಂದನ್-ಮುಂದಿನದನ್ನು, ಮುಂದಿನ ದೃಶ್ಯವನ್ನು;  ಕಾಬರು-ನೋಡುವರು;  ತೊರೆ-ನದಿ, ಹೊಳೆ;  ಈಸಲರಿಯದವ-ಈಜುಬಾರದವನು;  ತೆಗೆವ ತೆರನಂತೆ-ರಕ್ಷಿಸುವ ರೀತಿಯಂತೆ.)

            ಅರಿಯದ ಗುರುವು ಅರಿಯದ ಶಿಷ್ಯನಿಗೆ ಬೋಧಿಸುವುದರಿಂದ ಉಂಟಾಗಬಹುದಾದ ಅನರ್ಥವನ್ನು ಅಂಬಿಗರ ಚೌಡಯ್ಯ ಈ ವಚನದಲ್ಲಿ ಎರಡು ದೃಷ್ಟಾಂತಗಳ ಮೂಲಕ ವಿವರಿಸಿದ್ದಾನೆ.

            ಮೊದಲನೆಯದು, ಅರಿಯದ ಗುರುವಿನ ಅರಿಯದ ಶಿಷ್ಯನೊಂದಿಗಿನ ಸಾಹಚರ್ಯವು ಕುರುಡನೊಬ್ಬನು ಇನ್ನೊಬ್ಬ ಕುರುಡನ ಕೈಯನ್ನು ಹಿಡಿದು ದಾರಿನಡೆಸುವ ಸ್ಥಿತಿಗೆ ಸಮಾನವಾಗಿರುವುದು. ಎರಡನೆಯದು, ಅರಿಯದ ಗುರುವಿನ ಅರಿಯದ ಶಿಷ್ಯನೊಂದಿಗಿನ ಸಾಹಚರ್ಯವು ಈಜು ಬಾರದವನು ನೀರಲ್ಲಿ ಮುಳುಗಿದವನನ್ನು ರಕ್ಷಿಸಲು ಮಾಡಿದ ಪ್ರಯತ್ನಕ್ಕೆ ಸಮಾನವಾಗಿರುವುದು.

            ಲೋಕವಿಚಾರಗಳನ್ನು ಅರಿತುಕೊಂಡು ಅರಿಯದವನಿಗೆ ಬೋಧಿಸುವವನು, ಬೋಧಿಸಿ ಬುದ್ಧಿವಂತನನ್ನಾಗಿಸುವವನು ’ಗುರು’ ಎನಿಸಿಕೊಳ್ಳುತ್ತಾನೆ. ಹಾಗೆಯೇ ಅರಿಯದವನು ಅರಿತವನಿಂದ ಎಷ್ಟು ಸಾಧ್ಯವೋ ಅಷ್ಟನ್ನು ಅರಿತುಕೊಳ್ಳುವುದಕ್ಕೆ ಅಪೇಕ್ಷಿಸುವವನು ’ಶಿಷ್ಯ’ ಎನಿಸಿಕೊಳ್ಳುತ್ತಾನೆ. ಶಿಷ್ಯನಾಗಿ ಬರುವವನು ಅರಿತಿರಬೇಕಾದುದಿಲ್ಲ. ಆದರೆ ಅರಿಯುವ ಹಂಬಲ, ದೃಢಮನಸ್ಸು ಅಗತ್ಯವಾಗಿ ಬೇಕು. ಆದರೆ ಗುರುವಾದವನು ಎಲ್ಲವನ್ನೂ ಅರಿತಿರಬೇಕು. ಅರಿತಿದ್ದರೆ ಮಾತ್ರ ಆತ ಗುರುವೆನಿಸಿಕೊಳ್ಳುತ್ತಾನೆ,  ಮತ್ತು ಸ್ಥಾನಕೊಂದು ಮಹತ್ವವೂ ಸಲ್ಲುತ್ತದೆ.  ಇಲ್ಲದಿದ್ದರೆ ಆತ ಗುರುವಿನ ಸ್ಥಾನಕ್ಕೆ ಅನರ್ಹ. ಅರಿತ ಗುರುವಿನ ಸಂಪರ್ಕಕ್ಕೆ ಅರಿಯದ ಶಿಷ್ಯ ಬಂದರೆ ಅವನು ಅರಿತು ಬಾಳುವಂತಾಗುತ್ತಾನೆ. ಆದರೆ ಅರಿಯದ ಗುರುವಿನ ಸಂಪರ್ಕಕ್ಕೆ ಅರಿಯದ ಶಿಷ್ಯ ಬಂದರೆ ಅವರ ಸ್ಥಿತಿ  ಕುರುಡನೊಬ್ಬನ ಕೈಯನ್ನು ಇನ್ನೊಬ್ಬ ಕುರುಡ ಹಿಡಿದು ದಾರಿನಡೆದಂತಾಗುತ್ತದೆ. ಇಬ್ಬರೂ ಕುರುಡರಾಗಿರುವುದರಿಂದ ಇಬ್ಬರಿಗೂ ಏನೂ ಕಾಣಿಸದು. ಹಾಗಾಗಿ ದಾರಿನಡೆಯುವುದಾದರೂ ಹೇಗೆ? ಇಬ್ಬರೂ ಪದೇ ಪದೇ ಹೊಂಡಕ್ಕೆ ಬೀಳುವ ಪರಿಸ್ಥಿತಿ ಒದಗುತ್ತದೆ.  ಹಾಗೆಯೇ ನೀರಲ್ಲಿ ಮುಳುಗಿದವನನ್ನು ರಕ್ಷಿಸಬೇಕಾದರೆ ರಕ್ಷಿಸುವವನಿಗೆ ಈಜು ಕರಗತವಾಗಿರುಬೇಕಾಗುತ್ತದೆ. ಈಜು ಬಾರದವನು ನೀರಲ್ಲಿ ಮುಳುಗಿದವನನ್ನು ಕಾಪಾಡುತ್ತೇನೆ ಎಂದು ನೀರಿಗೆ ಧುಮುಕಿದರೆ ಇಬ್ಬರೂ ನೀರುಪಾಲಾಗುವುದು ಅನಿವಾರ್ಯ. ಅರಿಯದ ಗುರುವಿನ ಸ್ಥಿತಿ ಇದಕ್ಕಿಂತ ಭಿನ್ನವಲ್ಲ.

            ಗುರುವಾಗಬೇಕೆಂಬ ಹಂಬಲವುಳ್ಳವನು ಮೊದಲು ತಾನು ಎಲ್ಲವನ್ನೂ ಅರಿತುಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಅರಿತ ಮೇಲೆ ಬೋಧಿಸಬೇಕು. ಹೀಗೆ ಬೋಧಿಸುತ್ತಲೇ ಹೆಜ್ಜೆಹೆಜ್ಜೆಗೂ ಇನ್ನಷ್ಟು ತಿಳಿವಳಿಕೆಯನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಬಹುಶಃ ಅಂಬಿಗರ ಚೌಡಯ್ಯನ ಕಾಲದಲ್ಲಿ ಏನೂ ಅರಿಯದವರು ಗುರುಗಳೆಂದು ಹೇಳಿಕೊಂಡು ಬೋಧನೆಗೆ ತೊಡಗಿಕೊಳ್ಳುತ್ತಿದ್ದರೆಂದು ತೋರುತ್ತದೆ. ಇದರಿಂದ ಸಮಾಜವ್ಯವಸ್ಥೆ ಕುಸಿಯುತ್ತಿದ್ದುದನ್ನು ಕಣ್ಣಾರೆ ಕಂಡು ಅದನ್ನು ಈ ವಚನದಲ್ಲಿ ಎರಡು ದೃಷ್ಟಾಂತಗಳ ಮೂಲಕ ವಿಡಂಬಿಸಿದ್ದಾನೆ. ಇಂದಿನ ಸಾಮಾಜಿಕ ಸಂದರ್ಭದಲ್ಲಿಯೂ ಇದೇ ಸ್ಥಿತಿ ಮುಂದುವರಿದುಕೊಂಡು ಬಂದಿರುವುದು ಆಶ್ಚರ್ಯಕರವಾದರೂ ಸತ್ಯ.

 

ಕ್ರೀಯನರಿದವಂಗೆ ಗುರುವಿಲ್ಲ

ಆಚಾರವನರಿದವಂಗೆ ಲಿಂಗವಿಲ್ಲ

ಉತ್ಪತ್ತಿ ಸ್ಥಿತಿ ಲಯವನರಿದವಂಗೆ ಜಂಗಮವಿಲ್ಲ

ಪರಬ್ರಹ್ಮವನರಿದವಂಗೆ ಸರ್ವೇಂದ್ರಿಯವಿಲ್ಲ

ತನ್ನನರಿದವಂಗೆ ಹಿಂದೆ ಮುಂದೆ ಎಂಬುದೊಂದೂ

ಇಲ್ಲವೆಂದ ಅಂಬಿಗರ ಚೌಡಯ್ಯ  ||೩||

(ಕ್ರೀಯನ್ ಅರಿದವಂಗೆ ಗುರುವಿಲ್ಲ, ಆಚಾರವನ್ ಅರಿದವಂಗೆ ಲಿಂಗವಿಲ್ಲ, ಉತ್ಪತ್ತಿ ಸ್ಥಿತಿ ಲಯವನ್ ಅರಿದವಂಗೆ ಜಂಗಮವಿಲ್ಲ, ಪರಬ್ರಹ್ಮವನ ಅರಿದವಂಗೆ ಸರ್ವೇಂದ್ರಿಯವಿಲ್ಲ, ತನ್ನನ್ ಅರಿದವಂಗೆ ಹಿಂದೆ ಮುಂದೆ ಎಂಬುದು ಒಂದೂ ಇಲ್ಲ ಎಂದ ಅಂಬಿಗರ ಚೌಡಯ್ಯ)

(ಪದ-ಅರ್ಥ: ಕ್ರೀಯನ್-ಕ್ರಿಯೆಯನ್ನು, ಕಾರ್ಯವನ್ನು;  ಅರಿದವಂಗೆ-ತಿಳಿದವನಿಗೆ, ಅರಿತವನಿಗೆ;  ಉತ್ಪತ್ತಿ-ಹುಟ್ಟು, ಸೃಷ್ಟಿ;  ಸ್ಥಿತಿ-ಇರುವಿಕೆ, ಅಸ್ತಿತ್ವ;  ಲಯ-ನಾಶ;  ಪರಬ್ರಹ್ಮ-ಸೃಷ್ಟಿಯ ಮೂಲತತ್ತ್ವ)

            ಅಂಬಿಗರ ಚೌಡಯ್ಯ ಈ ವಚನದಲ್ಲಿ ತನ್ನನ್ನು ತಾನು ಅರಿತವನಿಗೆ ಯಾವ ಪ್ರತಿಬಂಧವೂ  ಇರುವುದಿಲ್ಲ  ಎಂಬುದನ್ನು  ನಾಲ್ಕು  ದೃಷ್ಟಾಂತಗಳ  ಮೂಲಕ  ವಿವರಿಸಿದ್ದಾನೆ.

            ಮೊದಲನೆಯದು, ಒಬ್ಬ ವ್ಯಕ್ತಿಗೆ ತಾನು, ತನ್ನ ಇತಿಮಿತಿಗಳು, ತನ್ನ ಕರ್ತವ್ಯ, ತನ್ನ ಆಂತರ್ಯದ ತಿಳಿವಳಿಕೆ   ಮೊದಲಾದವುಗಳ  ಅರಿವು  ಇರುವುದಾದರೆ  ಆತನಿಗೆ  ಗುರುವಿನ ಅವಶ್ಯಕತೆಯಿಲ್ಲ.

            ಎರಡನೆಯದು, ಮಾತು ಹಾಗೂ ಅದರ ಮಹತ್ವ, ನಡೆಗೂ ನುಡಿಗೂ ಇರಬೇಕಾದ ಸಾಮರಸ್ಯ, ಆಚಾರ-ವಿಚಾರಗಳು ಹಾಗೂ ಅವುಗಳ ಅವಶ್ಯಕತೆ ಮತ್ತು ಅನುಸರಣೆ ಮೊದಲಾದವುಗಳ ಅರಿವು ಇರುವುದಾದರೆ ಅವನಿಗೆ ಲಿಂಗದ ಅವಶ್ಯಕತೆಯಿಲ್ಲ. ಮೂರನೆಯದು, ಹುಟ್ಟು, ಸ್ಥಿತಿ ಹಾಗೂ ಲಯವೆಂಬ ಜಗದ ಮೂರು ನಿಯಮಗಳನ್ನು,  ಅದರ ಆದ್ಯಂತಗಳನ್ನು, ಅದರ ರಹಸ್ಯವನ್ನು ಅರಿತಿರುವುದಾದರೆ ಆತನಿಗೆ ಜಂಗಮದ ಅವಶ್ಯಕತೆಯಿಲ್ಲ. ನಾಲ್ಕನೆಯದು, ಸೃಷ್ಟಿ, ಅದರ ಮೂಲ, ಅದರ ರಹಸ್ಯ, ಇವೆಲ್ಲವುಗಳಿಗೆ ಮೂಲವಾಗಿರುವ ಪರಬ್ರಹ್ಮವನ್ನು ಅರಿತುಕೊಂಡರೆ ಅವನಿಗೆ ಸರ್ವೇಂದ್ರಿಯಗಳ ಅವಶ್ಯಕತೆಯಿಲ್ಲ. ಹಾಗಾಗಿ  ಗುರು, ಲಿಂಗ, ಜಂಗಮ ಹಾಗೂ ಪರಬ್ರಹ್ಮಗಳ ಅರಿವಿನ ಜೊತೆಗೆ ತನ್ನನ್ನು ತಾನು ಅರಿತುಕೊಂಡರೆ ಅಂತಹವನಿಗೆ ಆದಿ ಅಂತ್ಯಗಳೆಂಬುದೇ ಇರುವುದಿಲ್ಲ ಎಂಬುದು ಅಂಬಿಗರ ಚೌಡಯ್ಯನ ನಿಲುವು.

            ಏನೂ ಅರಿಯದವನು ಗುರುವೆನಿಸಿಕೊಳ್ಳುವುದು, ತನ್ನ ಆಂತರ್ಯವನ್ನು ತಾನು  ಅರಿಯದೆ  ಅನ್ಯರಿಗೆ ಉಪದೇಶಿಸುವುದು; ಉತ್ತಮ ನಡೆ-ನುಡಿಗಳಿಲ್ಲದೆ, ಆಚಾರ-ವಿಚಾರಗಳಿಲ್ಲದೆ ಲಿಂಗವಂತನೆನಿಸಿಕೊಂದು ಅನ್ಯರನ್ನು ಮೆಚ್ಚಿಸುವುದಕ್ಕೆ ಪ್ರಯತ್ನಿಸುವುದು; ಹುಟ್ಟು-ಸಾವುಗಳ, ಬದುಕು-ವೈರಾಗ್ಯಗಳ ಸೂಕ್ಷ್ಮಗಳನ್ನು ಅರಿತುಕೊಳ್ಳದೆ, ಅರಿಯಲು ಪ್ರಯತ್ನಿಸದೆ ಜಂಗಮನೆನಿಸಿಕೊಳ್ಳುವುದು ಇವೆಲ್ಲವೂ ಡಾಂಬಿಕತೆಯನ್ನು ಸೂಚಿಸುತ್ತವೆ. ಈ ರೀತಿಯಲ್ಲಿ ಡಾಂಬಿಕತೆಯನ್ನು ಮೈಗೂಡಿಸಿಕೊಂಡವನು ಸದ್ಭಕ್ತನೆನಿಸಿಕೊಳ್ಳಲಾರ ಎಂಬುದು ಅಂಬಿಗರ ಚೌಡಯ್ಯನ ಅಭಿಪ್ರಾಯ.

            ಮನುಷ್ಯನಾಗಿ ಹುಟ್ಟಿದ ಮೇಲೆ ಸದ್ಭಕ್ತನೆನಿಸಿಕೊಳ್ಳಬೇಕಾದರೆ ಕ್ರಿಯೆ, ಆಚಾರ, ಹುಟ್ಟು-ಸಾವು, ಹಾಗೂ ಸೃಷ್ಟಿ ರಹಸ್ಯಗಳನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಸ್ವಂತವಾಗಿ ಏನನ್ನೂ ಸಾಧಿಸಿಕೊಳ್ಳದೆ, ಯಾರಿಂದಲೋ ತಿಳಿದದ್ದನ್ನು ತಾನು ಅನುಸರಿಸಲು ಪ್ರಯತ್ನಿಸುವುದಾದರೆ ಅಂತಹ ವ್ಯಕ್ತಿಗಳಿಗೆ ಗುರು, ಲಿಂಗ, ಜಂಗಮಗಳ ಅವಶ್ಯಕತೆ ಇರುತ್ತದೆ. ಆದರೆ ಸ್ವಪಯತ್ನದಿಂದ ಇವೆಲ್ಲವನ್ನೂ ಅರಿತುಕೊಳ್ಳತೊಡಗಿದ ಮೇಲೆ ಅವುಗಳ ಅವಶ್ಯಕತೆ ಒದಗುವುದಿಲ್ಲ ಎಂಬುದನ್ನು ಅಂಬಿಗರ ಚೌಡಯ್ಯ ಸ್ಪಷ್ಟಪಡಿಸಿದ್ದಾನೆ.

            ಇಂದೂ ಕೂಡಾ ಅರಿಯದೆ ಗುರುಸ್ಥಾನಕ್ಕೇರಿದವರು, ಅರಿತುಕೊಳ್ಳದೆ ಉಪದೇಶಿಸುವವರು; ಉತ್ತಮ ನಡೆ-ನುಡಿಗಳಿಲ್ಲದೆ, ಆಚಾರ-ವಿಚಾರಗಳಿಲ್ಲದೆ ಹಿರಿಯರೆನಿಸಿಕೊಳ್ಳುವರು; ಸೃಷ್ಟಿ, ಸ್ಥಿತಿ, ಲಯಗಳ ಬಗ್ಗೆ ಏನೂ ಅರಿಯದೆ, ನೈತಿಕವಾದುದೇನನ್ನೂ ಅನುಸರಿಸದೆ, ತಾಸುಗಟ್ಟಲೆ ಪ್ರವಚನ ನೀಡುವವರು ಲೋಕದಲ್ಲಿ ತುಂಬಿತುಳುಕಾಡುತ್ತಿದ್ದಾರೆ. ಆ ಮೂಲಕ ಸಾಮಾಜಿಕ ಅಸಮತೋಲನಕ್ಕೆ, ಅಧಃಪತನಕ್ಕೆ ಕಾರಣರಾಗುತ್ತಿದ್ದಾರೆ. ಹಾಗಾಗಿ ಅಂಬಿಗರ ಚೌಡಯ್ಯನ ಮಾತು ಅಂದಿಗೆ ಮಾತ್ರವಲ್ಲ, ಇಂದಿಗೆ ಹೆಚ್ಚು ಪ್ರಸ್ತುತ ಎನಿಸುತ್ತದೆ.

 

ಅರ್ಚನೆಯ ಮಾಡುವಲ್ಲಿ ಆವೇಶ ಅರಿತಿರಬೇಕು

ಪೂಜೆಯ ಮಾಡುವಲ್ಲಿ ಪುಣ್ಯಮೂರ್ತಿಯಾಗಿರಬೇಕು

ಕೊಡುವ  ಕೊಂಬಲ್ಲಿ ಸರ್ವಭೂತಹಿತನಾಗಿರಬೆಕು

ಇಂತೀ ಸಡಗರಿಸಿಗೊಂಡಿಪ್ಪಾತನ

ಅಡಿಗೆರಗುವೆನೆಂದ ಅಂಬಿಗರ ಚೌಡಯ್ಯ  ||೪||

 (ಅರ್ಚನೆಯ ಮಾಡುವಲ್ಲಿ ಆವೇಶ ಅರಿತಿರಬೇಕು, ಪೂಜೆಯ ಮಾಡುವಲ್ಲಿ ಪುಣ್ಯಮೂರ್ತಿ ಆಗಿರಬೇಕು, ಕೊಳು-ಕೊಡೆಯಲ್ಲಿ ಸರ್ವಭೂತ ಹಿತನಾಗಿ ಇರಬೇಕು, ಇಂತು ಈ ಸಡಗರಿಸಿ ಕೊಂಡಿಪ್ಪಾತನ ಅಡಿಗೆ ಎರಗುವೆನ್ ಎಂದ ಅಂಬಿಗರ ಚೌಡಯ್ಯ)

(ಪದ-ಅರ್ಥ:  ಅರ್ಚನೆ-ಆರಾಧನೆಯ ಒಂದು ವಿಧಾನ;  ಆವೇಶ-ಸ್ಫೂರ್ತಿ;  ಪುಣ್ಯಮೂರ್ತಿ-ಪುಣ್ಯವೇ ಮೈವೆತ್ತಂತಿರುವವನು; ಕೊಡುವ-ದಾನಮಾಡುವ, ನೀಡುವ;  ಕೊಂಬಲ್ಲಿ-ಪಡೆಯುವಲ್ಲಿ, ಸ್ವೀಕರಿಸುವಲ್ಲಿ;  ಸರ್ವಭೂತಹಿತನಾಗಿರು-ಸಮಾನ ದೃಷ್ಟಿಯನ್ನು ಹೊಂದಿರು; ಅಡಿಗೆ-ಪಾದಗಳಿಗೆ.)

            ಅಂಬಿಗರ ಚೌಡಯ್ಯ ಈ ವಚನದಲ್ಲಿ ಎಂಥವರ ಕಾಲಿಗೆ ತಾನು ಶರಣಾಗುತ್ತೇನೆ ಹಾಗೂಅ ಅವರ ಅರ್ಹತೆಗಳೇನು? ಎಂಬುದನ್ನು ವಿವರಿಸಿದ್ದಾನೆ. ಮೊದಲನೆಯದಾಗಿ, ಅರ್ಚನೆ ಎಂಬುದು ಭಕ್ತನೊಬ್ಬನ ದೈನಂದಿನ ಒಂದು ಕರ್ತವ್ಯ. ಅದಕ್ಕೆ ಅದರದ್ದೇ ಆದ ಮಹತ್ವವೂ  ಮಾನ್ಯತೆಯೂ ಇತಿಮಿತಿಯೂ ಇದೆ. ಅದೊಂದು ಅಲೌಕಿಕವಾದ ಸ್ಥಿತಿ. ಇವೆಲ್ಲವನ್ನೂ ಅರ್ಥಮಾಡಿಕೊಂಡು ಒಬ್ಬ ಭಕ್ತ ಅರ್ಚನೆಯನ್ನು ಮಾಡುವ ಸಂದರ್ಭದಲ್ಲಿ ಅರ್ಚನೆಯಲ್ಲಿ ಆವೇಶ(ಸ್ಫೂರ್ತಿ)ಯನ್ನು ಹೊಂದಿರಬೇಕು. ಎರಡನೆಯದಾಗಿ, ಪೂಜನೆ ಎಂಬುದೂ ಒಬ್ಬ ಭಕ್ತನ ದೈನಂದಿನ ಅನುಷ್ಠಾನಗಳಲ್ಲಿ ಒಂದು. ಅದಕ್ಕೂ ಕೆಲವು ನಿಯಮಗಳಿವೆ, ಇತಿಮಿತಿಗಳಿವೆ, ವಿಧಿವಿಧಾನಗಳಿವೆ. ಇವುಗಳೆಲ್ಲವನ್ನೂ ಅರಿತುಕೊಂಡು ಭಕ್ತನೊಬ್ಬ ತನ್ನ ಇಷ್ಟದೇವನ ಪೂಜೆಯನ್ನು ಮಾಡುವ ಸಂದರ್ಭದಲ್ಲಿ ಪೂಜೆಯಲ್ಲಿ ತಲ್ಲೀನನಾಗಿ ಪುಣ್ಯವೇ ಮೈವೆತ್ತು ಬಂದಂತೆ ಇರಬೇಕು.  ಮೂರನೆಯದಾಗಿ, ಕೊಡುವುದು ಹಾಗೂ ಕೊಳ್ಳುವುದು ಮನುಷ್ಯರೊಳಗೆ ನಡೆಯುವ ಒಂದು ಸಹಜ ಪ್ರಕ್ರಿಯೆ. ಇದರಲ್ಲಿ ಮೋಸ, ವಂಚನೆ, ಡಾಂಬಿಕತೆ, ಪೂರ್ವಾಗ್ರಹಗಳು ನಡೆಯದೆ ಕೊಡುಕೊಳೆಗಳ ಉದ್ದೇಶವೇ ಕೈಗೂಡಬೇಕು.  ಭಕ್ತನೊಬ್ಬ ತಾನು ಕೊಡುವ ಮತ್ತು ತಾನು ಕೊಳ್ಳುವ ಸಂದರ್ಭಗಳಲ್ಲಿ ಎರಡರಲ್ಲಿಯೂ ತರತಮಭಾವವನ್ನು ಹೊಂದದೆ ಸಮಭಾವವನ್ನು ನಿಸ್ವಾರ್ಥಮನೋಭಾವವನ್ನು, ಹೊಂದಿರಬೇಕು. ಇಂತಹವರು ಮಾತ್ರ ಸದ್ಭಕ್ತರು ಎಂಬುದು ಅಂಬಿಗರ ಚೌಡಯ್ಯನ ನಿಲುವು. ಇಂತಹವರ ಪಾದಗಳಿಗೆ ಅಂಬಿಗರ ಚೌಡಯ್ಯ ಶರಣಾಗುವುದಕ್ಕೆ ಇಚ್ಛಿಸುತ್ತಾನೆ. ಇಂತಹವರ ಪಾದಗಳಿಗೆ ಎರಗಿದರೆ ಅದು ಶಿವನಿಗೆ ಎರಗಿದಂತೆ. ಈ ಸಮರ್ಪಣ ಭಾವ ಶಿವನಿಗೂ ಪ್ರಿಯವಾಗುತ್ತದೆ. ಶಿವಾನುಗ್ರಹಕ್ಕೂ ಕಾರಣವಾಗುತ್ತದೆ ಎಂಬುದು ಅವನ ವಾದ.

            ಡಾಂಬಿಕತೆ, ಮೋಸ, ವಂಚನೆ, ಪೂರ್ವಾಗ್ರಹಗಳು ಪ್ರತಿಯೊಂದು ಸಂದರ್ಭದಲ್ಲಿಯೂ ಮನುಷ್ಯನಲ್ಲಿ ಸೇರಿಕೊಳ್ಳಬಹುದಾದವುಗಳು. ಸ್ವಾರ್ಥ ಹೆಚ್ಚಾದಾಗ, ಅನ್ಯರನ್ನು ಮೆಚ್ಚಿಸುವ ಪ್ರವೃತ್ತಿ ಬೆಳೆದಾಗ, ಕೀರ್ತಿಯ ಅಮಲು ಏರತೊಡಗಿದಾಗ ಮನುಷ್ಯ ಮಾತ್ರವಲ್ಲ ಭಕ್ತನೂ ಡಾಂಬಿಕನಾಗುತ್ತಾನೆ. ಅವನ ಎಲ್ಲಾ ವರ್ತನೆಗಳು, ಆಚಾರ-ವಿಚಾರಗಳು, ನಡೆ-ನುಡಿಗಳು, ಕೊಡು-ಕೊಳೆಗಳು, ಪೂಜೆ-ಪುರಸ್ಕಾರಗಳು ಬೂಟಾಟಿಕೆಗಳಿಂದ ತುಂಬಿಕೊಳ್ಳುತ್ತವೆ. ಭಗವಂತನನ್ನು  ನಿಸ್ವಾರ್ಥದಿಂದ ಆರಾಧಿಸುವ ಪ್ರವೃತ್ತಿ ಹೊರಟುಹೋಗಿ ಜನಸಾಮಾನ್ಯರನ್ನು ಮೆಚ್ಚಿಸುವ, ಮೆಚ್ಚಿಸಿ ಲೋಕಮಾನ್ಯನಾಗುವ ಹಂಬಲವೇ ಮೈದುಂಬಿಕೊಳ್ಳುತ್ತದೆ. ಬಹುಶಃ ಹನ್ನೆರಡನೆಯ ಶತಮಾನದಲ್ಲಿ ಇಂತಹ  ಅರ್ಚನೆ, ಪೂಜನೆ, ಕೊಡು-ಕೊಳೆಗಳಲ್ಲಿ ನಡೆಯುತ್ತಿದ್ದಿರಬಹುದಾದ ಬೂಟಾಟಿಕೆಯ ವರ್ತನೆಯನ್ನು ಅಂಬಿಗರ ಚೌಡಯ್ಯ ಈ ವಚನದಲ್ಲಿ ಖಂಡಿಸಿದ್ದಾನೆ.

            ಇಂದಿನ ಇಪ್ಪತ್ತೊಂದನೆಯ ಶತಮಾನದಲ್ಲಿ ಪೂಜನೆ, ಅರ್ಚನೆ, ಮತ್ತು ಕೊಡು-ಕೊಳೆಗಳಲ್ಲಿ ಕೇವಲ ಸ್ವಾರ್ಥತೆಯೇ ತುಂಬಿತುಳುಕುತ್ತಿದೆ. ಯಾರನ್ನೋ ಮೆಚ್ಚಿಸಲು ಭಗವಂತನ ಪೂಜನೆ, ಅರ್ಚನೆಗಳು ಮಾಧ್ಯಮಗಳಾಗುತ್ತಿವೆ. ಆದರೆ ಒಂದಲ್ಲ ಒಂದು ದಿನ ಅಂಥವರ ಬಣ್ಣ ಬಯಲಾಗುತ್ತದೆ ಎಂಬುದನ್ನು ಅವರು ಮರೆತ್ತಿದ್ದಾರೆ. ಅಂಬಿಗರ ಚೌಡಯ್ಯನ ಮಾತುಗಳು ಇಂದಿಗೂ ಬೆಳಕುಬೀರುತ್ತಿರುವುದನ್ನು ಗಮನಿಸಿದರೆ ಆತನ ವಚನಗಳ ಸಾರ್ವಕಾಲಿಕತೆಯ ಅರಿವಾಗುತ್ತದೆ.

 

ಅಡವಿಯ ಹೊಗಿಸಿತ್ತು, ಹುಡುಕುನೀರಲದ್ದಿತ್ತು,

ಜಡೆಗಟ್ಟಿ ಭಸ್ಮವ ತೊಡೆಸಿತ್ತು, ಉಡೆವುಚ್ಚುಗೊಳಿಸಿತ್ತು,

ಹಿಡಿದೊತ್ತಿ ಕೇಶವ ಕೀಳಿಸಿತ್ತು, ಪಡಿಪುಚ್ಚಗೊಳಿಸಿತ್ತು ಊರೊಳಗೆಲ್ಲ

ಈ ಬೆಡಗಿನ ಮಾಯೆಯ ಬಡಿಹಾರಿ ಸಮಯಿಗಳ ನುಡಿಗೆ

ನಾಚುವನೆಂದ ಅಂಬಿಗ ಚೌಡಯ್ಯ  ||೫||

 (ಅಡವಿಯ ಹೊಗಿಸಿತ್ತು, ಹುಡುಕು ನೀರಲದ್ದಿತ್ತು, ಜಡೆಗಟ್ಟಿ ಭಸ್ಮವ ತೊಡೆಸಿತ್ತು, ಉಡೆವುಚ್ಚುಗೊಳಿಸಿತ್ತು, ಹಿಡಿದೊತ್ತಿ ಕೇಶವ ಕೀಳಿಸಿತ್ತು, ಊರೊಳಗೆಲ್ಲ ಪಡಿಪುಚ್ಚಗೊಳಿಸಿತ್ತು, ಈ ಬೆಡಗಿನ ಮಾಯೆಯ  ಬಡಿಹಾರಿ ಸಮಯಿಗಳ ನುಡಿಗೆ ನಾಚುವೆನ್ ಎಂದ ಅಂಬಿಗರ ಚೌಡಯ್ಯ.)

(ಪದ-ಅರ್ಥ:  ಹೊಗಿಸಿತ್ತು-ಪ್ರವೇಶಿಸುವಂತೆ ಮಾಡಿತ್ತು;  ಹುಡುಕುನೀರು-ಕುದಿನೀರು;  ಜಡೆಗಟ್ಟಿ-ಜಟೆಕಟ್ಟಿ;  ತೊಡೆಸಿತ್ತು-ಪೂಸಿತ್ತು, ಬಳಿದಿತ್ತು;  ಉಡೆವುಚ್ಚು-ಕಾವಿಬಟ್ಟೆ ವ್ಯಾಮೋಹ;  ಪಡಿಪುಚ್ಚಗೊಳಿಸು-ಅಡ್ಡಿಪಡಿಸು,  ನಿರೋಧಿಸು; ಬೆಡಗಿನ ಮಾಯೆ- ರಹಸ್ಯ ಆಕರ್ಷಣೆ;  ಬಡಿಹಾರಿ-ವಾಚಾಳಿ, ಒಣಜಂಬದವನು;  ಸಮಯಿ-ಸಮಯಕ್ಕೆ ತಕ್ಕ ಮಾತಾಡುವವನು)

            ಈ ಲೋಕದಲ್ಲಿನ ರಹಸ್ಯವಾದ ಅಥವಾ ಗೂಢವಾದ ಆಕರ್ಷಣೆಯಿಂದ ತಪ್ಪಿಸಿಕೊಳ್ಳುವುದಕ್ಕೆ ವಿರಕ್ತಿಯನ್ನು ಹೊಂದಿ, ದೇಹಕ್ಕೆ, ಮನಸ್ಸಿಗೆ ವ್ಯತಿರಿಕ್ತವಾದ ಆಚರಣೆಗಳಿಗೆ ಮನಸೋತು ಒಣಜಂಬ ಕೊಚ್ಚಿಕೊಳ್ಳುವುದನ್ನು ಈ ವಚನದಲ್ಲಿ ಅಂಬಿಗರ ಚೌಡಯ್ಯ ವಿಡಂಬಿಸಿದ್ದಾನೆ.

            ಈ ಲೋಕ ಮಾಯೆಯಿಂದಲೇ ಕೂಡಿರುವಂತಹುದು. ಈ ಮಾಯೆಯನ್ನು ಎದುರಿಸಿಕೊಂಡು ಅದಕ್ಕೆ ಅಂಟಿಯೂ ಅಂಟದಂತೆ ಬಾಳಬೇಕಾದುದು ಪ್ರತಿಯೊಬ್ಬನ ಕರ್ತವ್ಯ. ಆದರೆ ಆ ಮಾಯೆಗೆ ಹೆದರಿಕೊಂಡು ಈ ಸಮಾಜವ್ಯವಸ್ಥೆಯಿಂದಲೇ ಹೊರಹೋಗಿ ನಿಶ್ಚಿಂತೆಯಿಂದ ಬದುಕುತ್ತೇನೆ ಎಂಬುದು ಮೂರ್ಖತನ ಎಂಬುದು ಅಂಬಿಗರ ಚೌಡಯ್ಯನ ಅಭಿಪ್ರಾಯ. ಕೆಲವು ಮನುಷ್ಯ ತಾವು ಉಳಿದವರಿಗಿಂತ ಮೇಲಿನವರು, ಮಾಯೆಯನ್ನು ಗೆದ್ದವರು, ತಾವು ಮಾತ್ರ ಸದ್ಭಕ್ತರಾಗಿರುವವರು, ತಾವು ಮಾತ್ರ ಶಿವಾನುಗ್ರಹಕ್ಕೆ ಪಾತ್ರರಾಗಿರುವವರು ಎಂದು ಒಣಜಂಬ ತೋರುವವರು ಅದನ್ನು ಸಾಧಿಸುವುದಕ್ಕೆ ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ.

            ಮೊದಲನೆಯದು, ಮಾಯೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಅಥವಾ ಮಾಯೆಯಿಂದ ದೂರವಿರುವುದಕ್ಕೆ ನಾಡನ್ನು ಬಿಟ್ಟು ಕಾಡುವಾಸಿಯಾಗುವುದು. ಎರಡನೆಯದು, ತಾನು ತನ್ನ ದೇಹ, ಮನಸ್ಸುಗಳನ್ನು ದಂಡಿಸಿ ಅವುಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವವನು ಎಂದು ತೋರಿಸುವುದಕ್ಕೆ ತಣ್ಣೀರನ್ನು ಬಿಟ್ಟು ಕುದಿನೀರನ್ನು ಎರೆದುಕೊಳ್ಳುವುದು. ಮೂರನೆಯದು, ಉಳಿದವರಿಗಿಂತ ಭಿನ್ನನೆಂದು ತೋರಿಸಿಕೊಳ್ಳುವುದಕ್ಕೆ ಕೂದಲನ್ನು ಜಟೆಕಟ್ಟಿಕೊಳ್ಳುವುದು. ನಾಲ್ಕನೆಯದು, ತಾನು ಪರಮ ಶಿವಭಕ್ತನೆಂದು ಅನ್ಯರನ್ನು ನಂಬಿಸುವುದಕ್ಕೆ ಮೈಮೇಲೆಲ್ಲ ಭಸ್ನವನ್ನು ಬಳಿದುಕೊಳ್ಳುವುದು. ತಾನೊಬ್ಬ ವಿರಕ್ತನೆಂದು ಬಿಂಬಿಸುವುದಕ್ಕೆ ಕಾವಿಬಟ್ಟೆಯ ವ್ಯಾಮೋಹವನ್ನು ಬೆಳೆಸಿಕೊಳ್ಳುವುದು. ಐದನೆಯದು, ತಾನು ಸನ್ಯಾಸಿ, ವಿರಕ್ತ, ಮೋಕ್ಷವನ್ನು ಅಪೇಕ್ಷಿಸುವವನು ಎಂದುಕೊಂಡು ತಲೆಯನ್ನು ಬೋಳಿಸಿಕೊಂಡು  ದೇಹವನ್ನು ದಂಡಿಸುವುದು. ಆರನೆಯದು, ಮಾನವನಿಗೆ ಸಹಜವಾಗಿರುವ ದೈಹಿಕ, ಮಾನಸಿಕ ವ್ಯಾಪಾರಗಳನ್ನು ನಿರ್ಲಕ್ಷಿಸಿ ಊರೊಳಗೆ ಲೋಕವ್ಯವಹಾರಕ್ಕೆ ಅಡ್ಡಿಪಡಿಸುವುದು. ಇವೆಲ್ಲವೂ ಒಂದರ್ಥದಲ್ಲಿ ಮಾಯೆಗಳೇ. ಈ ಮೊದಲಾದ ರಹಸ್ಯಮಾಯೆಗೆ ಒಳಗಾಗಿ ಒಣಜಂಬ ತೋರುವ ಸಮಯಸಾಧಕರ ಮಾತುಗಳನ್ನು ಕೇಳಿದಾಗ ತನಗೆ ನಾಚಿಕೆಯಾಗುತ್ತದೆ ಎಂದು ಅಂಬಿಗರ ಚೌಡಯ್ಯ ಸ್ಪಷ್ಟಪಡಿಸುತ್ತಾನೆ.

            ಮನುಷ್ಯ ಒಂದು ಮಾಯೆಯಿಂದ ದೂರವಿರುತ್ತೇನೆ ಎಂದು ಹೊರಟು ಇನ್ನೊಂದು ಮಾಯೆಯೊಳಗೆ ಸಿಕ್ಕಿಹಾಕಿಕೊಂಡರೂ ತಾನು ಶ್ರೇಷ್ಠ, ಸದ್ಭಕ್ತ, ಸಾಧಕ, ಶಿವಾನುಗ್ರಹಕ್ಕೆ ಪಾತ್ರನಾದವನು ಎಂದೆಲ್ಲ ಭಾವಿಸಿಕೊಂಡು ದೇಹ, ಮನಸ್ಸುಗಳನ್ನು ವಂಚಿಸುವುದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ. ಇದು ಬರೀ ಬೂಟಾಟಿಕೆ ಮಾತ್ರವಲ್ಲ, ಡಾಂಬಿಕತೆ  ಎನಿಸಿಕೊಳ್ಳುತ್ತದೆ ಎಂಬುದು ಅಂಬಿಗರ ಚೌಡಯ್ಯನ ನಿಲುವು. ಹಾಗಾಗಿಯೇ ಈ ರೀತಿಯ ವರ್ತನೆಗಳನ್ನು, ಆಚರಣೆಗಳನ್ನು ಆತ ಖಂಡಿಸುತ್ತಾನೆ. ಅಂಬಿಗರ ಚೌಡಯ್ಯನ ಕಾಲದಲ್ಲಿಯೇ ಇಂತಹ ಬೂಟಾಟಿಕೆಯವರಿಂದ ಸಾಮಾಜಿಕ ಅಸಮತೋಲನ ಉಂಟಾಗುತ್ತಿತ್ತೆಂದು ತೋರುತ್ತದೆ. ಇಂದಿನ ಆಧುನಿಕಕಾಲದಲ್ಲಂತೂ ಇಂತಹವರೇ ಎಲ್ಲೆಲ್ಲೂ ರಾರಾಜಿಸುತ್ತಿದ್ದಾರೆ.

 

ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ

ತಿರುಗಿ ಅವನ ಮನೆಯಲ್ಲಿ ಉಣಬಾರದೆಂದು

ಅಕ್ಕಿ ಕಣಕವ ಕೊಂಡುಹೋಗುವ ಗುರುವಿನ ಕಂಡಡೆ

ಕೆಡವಿ ಹಾಕಿ ಮೂಗನೆ ಕೊಯ್ದು ಇಟ್ಟಂಗಿಯ ಕಲ್ಲಿಲೆ ತಿಕ್ಕಿ

ಸಾಸಿವೆ ಹಿಟ್ಟನು ತಳಿದು ಮೇಲೆ ಲಿಂಬೆಯ ಹುಳಿಯನೆ ಹಿಂಡಿ

ಪಡವ ಗಾಳಿಗೆ ಹಿಡಿಯೆಂದಾತ ನಮ್ಮ ಅಂಬಿಗರ ಚೌಡಯ್ಯ  ||೬||

 (ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ, ತಿರುಗಿ ಅವನ ಮನೆಯಲ್ಲಿ ಉಣಬಾರದು ಎಂದು, ಅಕ್ಕಿ, ಕಣಕವ ತಕ್ಕೊಂಡು ಹೋಗುವ ಗುರುವಿನ ಕಂಡೆಡೆ ಕೆಡವಿಹಾಕಿ, ಮೂಗನೇ ಕೊಯ್ದು ಇಟ್ಟಂಗಿಯ ಕಲ್ಲಲೆ ತಿಕ್ಕಿ, ಸಾಸಿವೆ ಹಿಟ್ಟನು ತಳಿದು, ಮೇಲೆ ಲಿಂಬೆಯ ಹುಳಿಹಿಂಡಿ, ಪಡವಲಗಾಳಿಗೆ ಹಿಡಿ ಎಂದಾತ  ನಮ್ಮ ಅಂಬಿಗರ ಚೌಡಯ್ಯ)

(ಪದ-ಅರ್ಥ: ಕುಲಹೀನ-ಅಂತ್ಯಜ, ಹೀನಕುಲದಲ್ಲಿ ಹುಟ್ಟಿದವನು, ಸಾಮಾಜಿಕವಾಗಿ ಕೆಳಹಂತದಲ್ಲಿರುವವನು;  ಅನುಗ್ರಹಮಾಡಿ-ದೀಕ್ಷೆಯನ್ನು ನೀಡಿ, ಶಿಷ್ಯನಾಗಿ ಸ್ವೀಕರಿಸಿ;  ಕಣಕ-ಕಲಸಿ ನಾದಿದ ಹಿಟ್ಟು;  ಇಟ್ಟಂಗಿಯ ಕಲ್ಲು-ಇಟ್ಟಿಗೆ ಕಲ್ಲು; ತಳಿದು-ಚಿಮುಕಿಸಿ; ಪಡವಲಗಾಳಿ-ಪಶ್ಚಿಮ ದಿಕ್ಕಿನ ಗಾಳಿ)

            ಜಾತಿಯ ಆಧಾರದ ಮೇಲೆ ಭೇದಭಾವವನ್ನು ತೋರುತ್ತ ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗುತ್ತಿರುವ ಡಾಂಬಿಕ ಗುರುಗಳನ್ನು, ಅವರ ವರ್ತನೆಗಳನ್ನು ಅಂಬಿಗರ ಚೌಡಯ್ಯ ಈ ವಚನದಲ್ಲಿ ಖಂಡಿಸುವುದರ ಜೊತೆಗೆ ಅಂತಹವರಿಗೆ ನೀಡಬೇಕಾದ ಶಿಕ್ಷೆಯನ್ನೂ ಸೂಚಿಸಿದ್ದಾನೆ.

            ಗುರು ಎಂದೆನಿಸಿಕೊಳ್ಳುವವನು ಜಾತಿ, ಮತ ಭೇದವನ್ನು ತ್ಯಜಿಸಿರಬೇಕು. ಕೇವಲ ಸಮಾಜದ ಜನರನ್ನು ಮೆಚ್ಚಿಸಲು ಜಾತಿಹೀನನೊಬ್ಬನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ಆತನ ಮನೆಯಲ್ಲಿ ಪ್ರಸಾದವನ್ನು ಸ್ವೀಕರಿಸಿದರೆ ಸಾಮಾಜಿಕವಾಗಿ ತನ್ನ ಸ್ಥಾನಮಾನ ಕುಸಿಯುತ್ತದೆ ಎಂದುಕೊಂಡು ಆತನಿಂದ ಅಕ್ಕಿ, ಕಣಕ ಮೊದಲಾದ ಪರಿಕರಗಳನ್ನು ಕೊಂಡು ಹೋಗಿ ಅವುಗಳನ್ನು ತನ್ನ ಮನೆಯಲ್ಲಿ ಬೇಯಿಸಿ ಉಣ್ಣುವ ಡಾಂಬಿಕ ಗುರುಗಳನ್ನು ಅಂಬಿಗರ ಚೌಡಯ್ಯ ಖಂಡಿಸುತ್ತಾನೆ. ಇಂತಹ ಗುರುಗಳನ್ನು ಕಂಡೊಡನೆಯೇ ಕೆಡವಿಹಾಕಿ, ಅವರ ಮೂಗನ್ನು ಕೊಯ್ದು, ಆ ಜಾಗದ ಮೇಲೆ ಇಟ್ಟಂಗಿಯ ಕಲ್ಲಿನಲ್ಲಿ ತಿಕ್ಕಿ, ಸಾಸಿವೆ ಹಿಟ್ಟನ್ನು ಚಿಮುಕಿಸಿ, ಅದರ ಮೇಲೆ ಲಿಂಬೆಹುಳಿಯನ್ನು ಹಿಂಡಿ ಇನ್ನಷ್ಟು ಉರಿಯುವಂತೆ ಮಾಡಿ ಪಡುವಣ ದಿಕ್ಕಿನಿಂದ ಬೀಸುವ ಗಾಳಿಗೆ ಹಿಡಿಯಬೇಕು ಎಂಬುದು ಅಂಬಿಗರ ಚೌಡಯ್ಯನು ಸೂಚಿಸುವ ಶಿಕ್ಷೆ. ಜಾತಿ, ಮತ ಭೇದಭಾವವನ್ನು ತೋರುತ್ತ ಸಾಮಾಜಿಕ ಅಸಮತೋಲನಕ್ಕೆ ಕಾರಣರಾಗುವ ಇಂತಹ ಡಾಂಬಿಕ ಗುರುಗಳಿಗೆ ಅದುವೇ ಸರಿಯಾದ ಮತ್ತು ಕರಾರುವಾಕ್ಕಾದ ಶಿಕ್ಷೆ ಎಂಬುದು ಆತನ ಅಭಿಪ್ರಾಯ.

            ಗುರು ಎಂಬ ಸ್ಥಾನ ಸುಲಭದಲ್ಲಿ ಲಭಿಸುವಂತಹುದಲ್ಲ. ಮಾನವ ಸಹಜವಾದ ಲೋಪದೋಷಗಳನ್ನು ಕಳೆದುಕೊಂಡು, ಸ್ವಾರ್ಥ, ಸ್ವಜಾತಿ ಹಾಗೂ ಸ್ವಜನ ಪಕ್ಷಪಾತಗಳಂತಹ ನೀಚಪ್ರವೃತ್ತಿಗಳನ್ನು ತ್ಯಜಿಸಿ ಎಲ್ಲರನ್ನೂ ಸಮಾನವಾಗಿ ಪರಿಭಾವಿಸಬೇಕು. ಒಬ್ಬ ವ್ಯಕ್ತಿಯನ್ನು ಶಿಷ್ಯನನ್ನಾಗಿ ಸ್ವೀಕರಿಸುವಾಗ ಆತನ ಜಾತಿ, ವರ್ಗ, ಮತ, ಪಂಥ, ಸ್ಥಿತಿಗತಿಗಳನ್ನು ಪರಿಭಾವಿಸುವುದು ಗುರುವಿನ ಸಂಕುಚಿತ ಮನೋಭಾವವನ್ನು ಸೂಚಿಸುತ್ತದೆ. ಲೋಕದ ಜನರನ್ನು ಮೆಚ್ಚಿಸುವುದಕ್ಕೆ, ತಾನು ನಿಷ್ಪಕ್ಷಪಾತಿ ಎಂದೋ ಜಾತಿ, ಮತ, ಭೇದವಿಲ್ಲದವನೆಂದೋ ತೋರಿಸಿಕೊಳ್ಳುವುದಕ್ಕೆ ಹೀನಜಾತಿಯವನನ್ನೂ ಶಿಷ್ಯನೆಂದು ಅನುಗ್ರಹಿಸಿ, ಆತನನ್ನು ಕೀಳಾಗಿ ಕಾಣುವುದಾದರೆ, ಆತನ ಮನೆಯಲ್ಲಿ ಉಣ್ಣುವುದಕ್ಕೆ ಹೇಸಿಕೊಳ್ಳುವುದಾದರೆ, ಅಂತಹ ಶಿಷ್ಯನ ಮನೆಯಿಂದಲೇ ಅಕ್ಕಿ, ಕಣಕಾದಿಗಳನ್ನು ಪಡೆದು ತನ್ನ ಮನೆಗೆ ಹೋಗಿ ಉಣ್ಣುವುದಾದರೆ ಆತನ ’ಗುರು’ ಸ್ಥಾನಕ್ಕೇನು ಬೆಲೆ? ಅಂತಹವರಿಗೆ ಇತರರನ್ನು ಶಿಷ್ಯರೆಂದು ಅನುಗ್ರಹಿಸುವುದಕ್ಕೆ ಯಾವ ನೈತಿಕತೆ ಇರುತ್ತದೆ? ಇಂತಹ ಗುರುಗಳು ಯಾವತ್ತೂ ಸಮಾಜಕಂಟಕರಾಗಿಯೇ ಇರುತ್ತಾರೆ. ಅಂತಹ ಗುರುಗಳನ್ನು ಲೋಕದಲ್ಲಿ ಪ್ರಚಲಿತವಿಲ್ಲದ, ಆದರೆ ಘೋರರೀತಿಯ ಶಿಕ್ಷೆಗೆ ಒಳಪಡಿಸಬೇಕು ಎಂಬುದು ಅಂಬಿಗರ ಚೌಡಯ್ಯನ ವಾದ. ಏಕೆಂದರೆ ಇಂತಹವರು ಜಾತಿ, ಮತ, ವರ್ಗಭೇದಗಳನ್ನು ಇನ್ನಷ್ಟು ಪೋಷಿಸುತ್ತಾರೆಯೇ ವಿನಾ ಅವುಗಳನ್ನು ತೊಡೆದುಹಾಕು ಸಮಾನತೆಯನ್ನು ಸಾಧಿಸುವುದಕ್ಕೆ ಪ್ರಯತ್ನಿಸುವುದಿಲ್ಲ. ಹಾಗಾಗಿ ಇವರು ಸಮಾಜಕಂಟಕರು.

            ಇಂದೂ ಇಂತಹ ಸಮಾಜಕಂಟಕ ಗುರುಗಳು ಲೋಕದಲ್ಲಿ ಎಲ್ಲೆಂದರಲ್ಲಿ ರಾರಾಜಿಸುತ್ತಿದ್ದಾರೆ. ಕ್ಷಣಕ್ಷಣಕ್ಕೂ ಜಾತಿ, ಮತ, ವರ್ಗ ಮೊದಲಾದ ನೆಲೆಗಳಲ್ಲಿ ಶಿಷ್ಯವರ್ಗವನ್ನು ಪರಿಭಾವಿಸುವ, ತನಗಾಗದವರನ್ನು ತುಳಿಯುವ, ತನ್ನ ಸಹವರ್ತಿಗಳ ಏಳಿಗೆಯನ್ನು ಸಹಿಸದೆ ಮಟ್ಟಹಾಕಲು ಪ್ರಯತ್ನಿಸುವ ಡಾಂಬಿಕ ಗುರುಗಳು ಸಮಾಜದ ಅಧಃಪತನಕ್ಕೆ ಹಾಗೂ ಆ ಮೂಲಕ ದೇಶದ ದುರ್ಬಲತೆಗೆ ಕಾರಣರಾಗುತ್ತಿದ್ದಾರೆ ಎಂಬುದು ಅಕ್ಷರಶಃ ಸತ್ಯ. ಅಂಬಿಗರ ಚೌಡಯ್ಯನ ಈ ಮಾತುಗಳು ಇಂದಿನ ಕಾಲಕ್ಕೆ ಬಹಳ ವ್ಯಾಪಕವಾಗಿ ಅನ್ವಯವಾಗುತ್ತಿವೆ ಎಂಬುದು ಮಾತ್ರವಲ್ಲ, ಅಂತಹ ವ್ಯಕ್ತಿಗಳಿಗೆ ಅವನು ಸೂಚಿಸುವ ಶಿಕ್ಷೆಯೂ ಇಂದಿಗೆ ಹೆಚ್ಚು ಅಗತ್ಯವೆಂಬುದನ್ನೂ ಸೂಚಿಸುತ್ತವೆ.

 

ಅಗ್ನಿ ದಿಟವೆಂದರೆ ತಾ ಹುಸಿ

ಕಾಷ್ಠವಿಲ್ಲದೆ; ಕಾಷ್ಠದಲ್ಲಡಗಿ ಸುಡದಿಪ್ಪ ಭೇದವನರಿತಡೆ

ಪ್ರಾಣಲಿಂಗಿ ಎಂದೆಂಬೆನೆಂದನಂಬಿಗ ಚೌಡಯ್ಯ  ||೭||

(ಕಾಷ್ಠವು ಇಲ್ಲದೆ ಅಗ್ನಿ ದಿಟ ಎಂದರೆ ತಾ ಹುಸಿ, ಕಾಷ್ಠದಲ್ಲಿ ಅಡಗಿ ಸುಡದಿಪ್ಪ ಭೇದವನ್ ಅರಿತಡೆ ಪ್ರಾಣಲಿಂಗಿ ಎಂದು ಎಂಬೆನ್ ಎಂದನ್ ಅಂಬಿಗ ಚೌಡಯ್ಯ)

(ಪದ-ಅರ್ಥ: ಅಗ್ನಿ-ಬೆಂಕಿ;  ದಿಟ-ಸತ್ಯ;  ಹುಸಿ-ಸುಳ್ಳು;  ಕಾಷ್ಠ-ಕಟ್ಟಿಗೆ;  ಸುಡದಿಪ್ಪ-ಸುಡದಿರುವ;  ಬೇಧ-ಬಗೆ, ರೀತಿ;  ಅರಿತಡೆ-ತಿಳಿದರೆ;  ಪ್ರಾಣಲಿಂಗಿ-ಪ್ರಾಣವನ್ನೇ ಲಿಂಗವೆಂದು ಭಾವಿಸಿಕೊಂಡಿರುವವನು)

            ಈ ಲೋಕದಲ್ಲಿ ಪ್ರತಿಯೊಂದು ಕ್ರಿಯೆಗೂ ತನ್ನ ಅಸ್ತಿತ್ವವನ್ನು ತೋರಿಸುವುದಕ್ಕೆ ಒಂದು ಅಥವಾ ಹಲವು ಮಾಧ್ಯಮಗಳು ಬೇಕಾಗುತ್ತವೆ. ಅದನ್ನು ಅರಿಯುವುದಕ್ಕೆ ಪ್ರಯತ್ನಿಸಿದವರು ಮಾತ್ರ ಪ್ರಾಣಲಿಂಗಿ ಎನಿಸಿಕೊಳ್ಳುತ್ತಾರೆ ಎಂಬುದನ್ನು ಅಂಬಿಗರ ಚೌಡಯ್ಯ ಈ ವಚನದಲ್ಲಿ ಒಂದು ದೃಷ್ಟಾಂತದ ಮೂಲಕ ವಿವರಿಸಿದ್ದಾನೆ.

            ಕಟ್ಟಿಗೆಯೇ ಇಲ್ಲದೆ ಬೆಂಕಿಗೆ ಅಸ್ತಿತ್ವವಿದೆ ಎನ್ನುವುದಾದರೆ ಅದು ಸುಳ್ಳು. ಬೆಂಕಿ ಉರಿಯುವುದಕ್ಕೆ ಕಟ್ಟಿಗೆ ಅತ್ಯಂತ ಅಗತ್ಯ. ಅಲ್ಲದೆ ಕಟ್ಟಿಗೆಯೊಳಗೆ ಬೆಂಕಿ ಕಾಣಿಸದ ರೂಪದಲ್ಲಿ ಅಡಗಿಕೊಂಡಿದ್ದರೂ ಅದು ತನ್ನಿಂದ ತಾನೇ ಮರವನ್ನು ಸುಡುವುದಿಲ್ಲ. ಹಾಲಿನೊಳಗೆ ಬೆಣ್ಣೆ ಅಡಗಿಕೊಂಡಿರುವಂತೆ, ನೀರಿನಲ್ಲಿ ಬೆಂಕಿ ಹುದುಗಿಕೊಂಡಿರುವಂತೆ. ಅವುಗಳಿಗೆ ಕಾರ್ಯ, ಕಾರಣಗಳು ಒದಗಿದಾಗ ಬೆಂಕಿ ಕಾಣಿಸಿಕೊಳ್ಳುತ್ತದೆ. ಬೆಂಕಿಯು ಕಟ್ಟಿಗೆಯಲ್ಲಿ ಸೂಕ್ಷ್ಮರೂಪದಲ್ಲಿ ಅಡಗಿಕೊಂಡಿದ್ದರೂ ಅದು ಕಟ್ಟಿಗೆಯನ್ನು ಸುಡುವುದಿಲ್ಲ. ಆದರೆ ಕಟ್ಟಿಗೆಯೊಳಗೆ ಬೆಂಕಿ ಅಡಗಿಕೊಂಡಿರುವ ಬಗೆಯನ್ನು ಅರಿತುಕೊಳ್ಳುವುದು ಸುಲಭದ ಮಾತಲ್ಲ. ಅದು ಎಲ್ಲರಿಗೆ ಸಾಧ್ಯವಾಗುವುದೂ ಇಲ್ಲ.

            ಪ್ರಾಣಲಿಂಗಿ ಎನಿಸಿಕೊಳ್ಳುವುದೂ ಸುಲಭದ ಮಾತಲ್ಲ. ವೀರಶೈವ ಮೋಕ್ಷಸಾಧನೆಯ ಸಂದರ್ಭದಲ್ಲಿ ಸಾಧಕನು ಏರಬೇಕಾದ ಹಂತಗಳನ್ನು ಸ್ಥಲಗಳು ಎಂದು ಕರೆಯಲಾಗುತ್ತದೆ. ಅವುಗಳೆಂದರೆ ಭಕ್ತಸ್ಥಲ, ಮಾಹೇಶ್ವರಸ್ಥಲ, ಪ್ರಸಾದಿಸ್ಥಲ, ಪ್ರಾಣಲಿಂಗಿಸ್ಥಲ, ಶರಣಸ್ಥಲ ಮತ್ತು ಐಕ್ಯಸ್ಥಲಗಳು. ಇವುಗಳನ್ನು ಒಟ್ಟಾಗಿ ಷಟ್ಸ್ಥಲಗಳು ಎಂದು ಕರೆಯಲಾಗುತ್ತದೆ.  ಇವುಗಳಲ್ಲಿ ನಾಲ್ಕನೆಯದು ಪ್ರಾಣಲಿಂಗಿಸ್ಥಲ. ಈ ಹಂತವನ್ನು ತಲುಪಬೇಕಾದರೆ ಮೊದಲ ಮೂರನ್ನು ದಾಟಿಬಂದಿರಬೇಕು. ಪ್ರಾಣಲಿಂಗಿಸ್ಥಲವನ್ನು ತಲುಪಿರುವವನು ತಾನು, ತನ್ನದು ಎಂಬ ಮೋಹವನ್ನು ತೊರೆದು ಎಲ್ಲವನ್ನೂ ಲಿಂಗಮಯವೆಂದು ಭಾವಿಸಬೇಕಾಗುತ್ತದೆ. ಹಾಗಾಗಿಯೇ ಈ ಹಂತಗಳಲ್ಲಿ ಒಂದೊಂದನ್ನು ದಾಟಿ ಬರುವಾಗ ಸಾಧನೆಯಲ್ಲಿ ಕಠಿಣತೆ, ನಿಷ್ಠೆ, ಅನುಷ್ಠಾನಗಳಲ್ಲಿ ತಾದಾತ್ಮ್ಯಗಳು ಅತ್ಯಂತ ಅಗತ್ಯ. ಇವೆಲ್ಲವನ್ನೂ ಸಮರ್ಪಕವಾಗಿ ಸಾಧಿಸಿದಾಗ ಮಾತ್ರ ಒಬ್ಬ ಪ್ರಾಣಲಿಂಗಿ ಎನಿಸಿಕೊಳ್ಳುತ್ತಾನೆ. ನಿಜವಾದ ಪ್ರಾಣಲಿಂಗಿಯನ್ನು ಗೌರವಿಸಬಹುದಲ್ಲದೆ, ತಾನು ಪ್ರಾಣಲಿಂಗಿ ಎಂದು ಹೇಳಿಕೊಳ್ಳುವವನನ್ನು ಒಪ್ಪಿಕೊಳ್ಳುವುದಾದರೂ ಹೇಗೆ? ಎಂಬುದು ಅಂಬಿಗರ ಚೌಡಯ್ಯನ ಪ್ರಶ್ನೆ. ಹಾಗಾಗಿಯೇ ಆತ  ಕಟ್ಟಿಗೆಯಲ್ಲಿರುವ ಅಗ್ನಿಯು ಕಟ್ಟಿಗೆಯನ್ನು ಸುಡದಿರುವ ಬಗೆ ಅಥವಾ ರೀತಿಯನ್ನು ತಿಳಿದಿರುವವನನ್ನು ಮಾತ್ರ ತಾನು ಪ್ರಾಣಿಲಿಂಗಿ ಎಂದು ಒಪ್ಪಿಕೊಳ್ಳುತ್ತೇನೆ ಎನ್ನುತ್ತಾನೆ.

            ಬಹುಶಃ ಅಂಬಿಗರ ಚೌಡಯ್ಯನ ಕಾಲದಲ್ಲಿ ಕೆಲವರು ಏನೂ ಸಾಧನೆ ಮಾಡದೆ, ಷಟ್ಸ್ಥಲಗಳ ಬಗ್ಗೆ ಏನನ್ನೂ ಅರಿತುಕೊಳ್ಳದೆ ತಮ್ಮನ್ನು ತಾವು ಭಕ್ತನೆಂದೋ, ಮಾಹೇಶ್ವರನೆಂದೋ, ಪ್ರಾಸಾದಿಗಳೆಂದೋ, ಪ್ರಾಣಲಿಂಗಿ ಎಂದೋ ಹೇಳಿಕೊಂಡು ಅನ್ಯರನ್ನು ನಂಬಿಸಿ, ವಂಚಿಸುತ್ತಿದ್ದರೆಂದು ತೋರುತ್ತದೆ. ಅದಕ್ಕಾಗಿಯೇ ಅಂಬಿಗರ ಚೌಡಯ್ಯ ಈ ರೀತಿಯ ವರ್ತನೆಯನ್ನು ಖಂಡಿಸಿದ್ದಾನೆ.

 

ಅರಿವನರಿದಲ್ಲಿ ತಾನೆನ್ನದೆ, ಇದಿರೆನ್ನದೆ, ಮತ್ತೇನುವ ಸಂಪಾದಿಸದೆ

ಅರುಣನ ಕಿರಣದಲ್ಲಿ ಅರತ ಸಾರದಂತೆ

ಕಾದ ಹಂಚಿನ ಮೇಲೆ ಬಿಟ್ಟ ನೀರಿನಂತೆ

ಬಧಿರನ ಕಾವ್ಯದಂತೆ, ಚದುರನ ಒಳ್ಪಿನಂತೆ

ತಲೆದೋರದೆ ನಿಂದಾತನಡಿಗೆ ಎರಗುನೆಂದಾತ ಅಂಬಿಗರ ಚೌಡಯ್ಯ  ||೮||

 (ಅರಿವನ್ ಅರಿದಲ್ಲಿ, ತಾನ್ ಎನ್ನದೆ, ಇದಿರ್ ಎನ್ನದೆ, ಮತ್ತೇನುವ ಸಂಪಾದಿಸದೆ, ಅರುಣನ ಕಿರಣದಲ್ಲಿ ಅರತ ಸಾರದಂತೆ, ಕಾದ ಹಂಚಿನ ಮೇಲೆ ಬಿಟ್ಟ ನೀರಿನಂತೆ, ಬಧಿರನ ಕಾವ್ಯದಂತೆ, ಚದುರನ ಒಳ್ಪಿನಂತೆ ತಲೆದೋರದೆ ನಿಂದಾತನ ಅಡಿಗೆ ಎರಗುವೆನ್ ಎಂದಾತ ಅಂಬಿಗರ ಚೌಡಯ್ಯ)

(ಪದ-ಅರ್ಥ: ಅರಿವನರಿದಲ್ಲಿ-ತಿಳಿವಳಿಕೆಯನ್ನು ಪಡೆದವನಲ್ಲಿ;  ತಾನೆನ್ನದೆ-ತಾನು ಎಂಬ ಅಹಂಕಾರವನ್ನು ಹೊಂದದೆ;  ಇದಿರೆನ್ನದೆ-ವಿರೋಧಿಸದೆ, ಎದುರು ಮಾತನಾಡದೆ;   ಅರುಣ-ಸೂರ್ಯ; ಅರತ-ತೃಪ್ತವಾದ;  ಸಾರ-ಸತ್ವ;  ಕಾದ-ಬಿಸಿಯಾದ;  ಹಂಚು-ಕಾವಲಿ;  ಬಧಿರನ-ಕಿವುಡನ;  ಚದುರನ-ಜಾಣನ;  ಒಳ್ಪಿನಂತೆ-ಒಳಿತಿನಂತೆ, ಚೆಲುವಿನಂತೆ;  ತಲೆದೋರದೆ(ತಲೆ+ತೋರದೆ)-ಪ್ರದರ್ಶಿಸದೆ; ನಿಂದಾತ-ದೃಢವಾಗಿರುವವನು; ಎರಗು-ನಮಸ್ಕರಿಸು)

            ಪರಿಪೂರ್ಣನಾದ ವ್ಯಕ್ತಿ ಹೇಗಿರುತ್ತಾನೆ ಎಂಬುದನ್ನು ಅಂಬಿಗರ ಚೌಡಯ್ಯ ಕೆಲವು ಉದಾಹರಣೆಗಳ ಮೂಲಕ ಈ ವಚನದಲ್ಲಿ ವಿವರಿಸಿದ್ದಾನೆ. ಯಾರು ಅರಿವನ್ನು ಪಡೆದುಕೊಂಡಿದ್ದಾನೆಯೋ ಅವನು ಪರಿಪೂರ್ಣವ್ಯಕ್ತಿ ಎನಿಸಿಕೊಳ್ಳುತ್ತಾನೆ. ಅಂತಹವನಲ್ಲಿ ತಾನು, ತನ್ನದು ಎಂಬ ಅಹಂಕಾರ ಭಾವವೇ ಇರುವುದಿಲ್ಲ. ಅಥವಾ ಅನ್ಯ ವಿಷಯಗಳನ್ನು ವಿರೋಧಿಸಿ ತನ್ನ ವಿಚಾರಗಳೇ ಶ್ರೇಷ್ಠವೆಂದು ಸಾಧಿಸುವ ಹಠವೂ ಇರುವುದಿಲ್ಲ. ತಾನು ತನಗಾಗಿ ಇನ್ನಷ್ಟನ್ನು ಸಂಪಾದಿಸಬೇಕು, ಸಾಧಿಸಬೇಕು ಎಂಬ ಸ್ವಾರ್ಥಮನೋಭಾವವೂ ಇರುವುದಿಲ್ಲ. ನಾಲ್ಕು ಬಗೆಗಳಲ್ಲಿ ಆತನ ಈ ಅಸ್ತಿತ್ವವನ್ನು, ಆತನ ಮೇಲ್ಮೆಯನ್ನು ಗುರುತಿಸಿಕೊಳ್ಳಬಹುದು.

            ಮೊದಲನೆಯದಾಗಿ, ಅವನು ಸೂರ್ಯನ ಕಿರಣಗಳನ್ನು ಸ್ವೀಕರಿಸಿ ತೃಪ್ತವಾಗುವ ಸತ್ವದಂತೆ ತಾನು ಆರ್ಜಿಸಿರುವ ಸಾಧನೆಯ ಬಗ್ಗೆ ತೃಫ್ತಿಯನ್ನು ಹೊಂದಿರುತ್ತಾನೆ. ಎರಡನೆಯದಾಗಿ, ಬಿಸಿಯಾದ ಕಾವಲಿಯ ಮೇಲೆ ಬಿಟ್ಟ ನೀರಿನಂತೆ  ತನ್ನಲ್ಲಿ ಬರುವ ಸಮಸ್ತರನ್ನೂ ತನ್ನೊಳಗೆ ಒಳಗೊಳಿಸಿಕೊಳ್ಳುತ್ತಾನೆ. ಅವನಿಗೆ ತನ್ನವರು ಪರರು ಎಂಬ ಭೇದವೇ ಇರುವುದಿಲ್ಲ. ಮೂರನೆಯದಾಗಿ, ಕುರುಡನ ಕಾವ್ಯದಂತೆ ಎಲ್ಲಿಯೂ ನ್ಯೂನತೆಗಳನ್ನು ಗುರುತಿಸದೆ, ಎಲ್ಲೆಲ್ಲೂ ಆತ ಸೌಂದರ್ಯವನ್ನೇ, ಒಳಿತನ್ನೇ ಕಾಣುತ್ತಾನೆ. ನಾಲ್ಕನೆಯದಾಗಿ, ಜಾಣನ ಚೆಲುವಿನಂತೆ ಎಲ್ಲವೂ ನೈತಿಕವಾಗಿದ್ದು ಆತ್ಮವಿಶ್ವಾಸದಿಂದ ಕೂಡಿಕೊಂಡಿರುತ್ತದೆ. ಕೈಗೊಳ್ಳುವ ಪ್ರತಿಯೊಂದು ಕ್ರಿಯೆಯಲ್ಲಿಯೂ ಪರಿಪೂರ್ಣತೆಯಿರುತ್ತದೆ. ಇಂತಹ ಗುಣಗಳನ್ನು, ಲಕ್ಷಣಗಳನ್ನು ಮೈಗೂಡಿಸಿಕೊಂಡು ಯಾವುದೇ ಕ್ಷುಲ್ಲಕವಾದುದನ್ನು ತನ್ನಲ್ಲಿ ಇರಗೊಡದೆ ಅಥವಾ ಪ್ರದರ್ಶಿಸದೆ ದೃಢತೆಯಿಂದ ಬದುಕುವವನ ಪಾದಗಳಿಗೆ ತಾನು ನಮಸ್ಕರಿಸುತ್ತೇನೆ ಎನ್ನುತ್ತಾನೆ ಅಂಬಿಗರ ಚೌಡಯ್ಯ.

            ಅಂಬಿಗರ ಚೌಡಯ್ಯನ ಕಾಲದಲ್ಲಿ ವಿವಿಧ ರೀತಿಯಲ್ಲಿ ಜನರನ್ನು ವಂಚಿಸುತ್ತ ತಾವು ಮೇಧಾವಿಗಳು, ಭಕ್ತರು, ಶರಣರು, ಪ್ರಾಣಲಿಂಗಿಗಳು, ಪ್ರಾಸಾದಿಗಳೆಂದು ಹೇಳಿಕೊಂಡು, ಅನ್ಯರಿಂದ ಎಷ್ಟು ಸಾಧ್ಯವೋ ಅಷ್ಟನ್ನು ಪಡೆದುಕೊಳ್ಳುವ ಸ್ವಾರ್ಥಿಗಳ ಹಾವಳಿ ಮಿತಿಮೀರಿತ್ತು ಎಂದೆನಿಸುತ್ತದೆ. ಒಂದು ಕಡೆ ಯಾವ ಸಾಧನೆ, ಅನುಷ್ಠಾನಗಳಿಲ್ಲದೆ, ಇನ್ನೊಂದೆಡೆ ಧಾರ್ಮಿಕತೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತ, ಇನ್ನೊಂದೆಡೆ ಜನರನ್ನು ಬಗೆಬಗೆಯಲ್ಲಿ ನಂಬಿಸುತ್ತ ಅವರನ್ನು ಮೂರ್ಖರನ್ನಾಗಿ ಮಾಡುತ್ತಿದ್ದರೆಂದು ತೋರುತ್ತದೆ. ಅದಕ್ಕಾಗಿಯೇ ಅಂಬಿಗರ ಚೌಡಯ್ಯ ಸಾಧಕರ, ಮತ್ತು ಪರಿಪೂರ್ಣವ್ಯಕ್ತಿಗಳ ಲಕ್ಷಣಗಳನ್ನು ಉಲ್ಲೇಖಿಸಿ ತಾನು ಅಂತಹವರಿಗೆ ಮಾತ್ರ ಎರಗುತ್ತೇನೆ ಎಂದು ಸ್ಪಷ್ಟಪಡಿಸಿದ್ದಾನೆ.

            ಇಂದಿನ ಕಾಲದಲ್ಲಂತೂ ಏನೂ ಸಾಧಿಸದೆ; ಮನಸ್ಸು, ದೇಹಗಳನ್ನು ಶುದ್ಧವಾಗಿಟ್ಟುಕೊಳ್ಳದೆ; ಯಾವ ಕೆಲಸವನ್ನೂ ಮಾಡದೆ ಅಥವಾ ಹಿಡಿದ ಕೆಲಸವನ್ನು ಪ್ರಾಮಾಣಿಕವಾಗಿ ಎಂದೂ ಮಾಡದೆ;  ಅನ್ಯರನ್ನು ಕೊಳ್ಳೆಹೊಡೆಯುವ, ನಯವಂಚನೆಯಿಂದ ಇಷ್ಟಬಂದಂತೆ ಬದುಕುವ ಪ್ರವೃತ್ತಿ ಹಾಗೂ ಹತ್ತಾರು ವಿಧಗಳಿಂದ ಇತರರಿಗೆ ಮೋಸಮಾಡಿ ತಾವೇ ಮೆರೆಯುವ, ಸಾಧಕರನ್ನು ಮಟ್ಟಹಾಕುವ ಇಂತಹ ಎಡೆಬಿಡಂಗಿ ವ್ಯಕ್ತಿಗಳಿಂದಲೇ ಈ ಸಮಾಜ ತುಂಬಿತುಳುಕುತ್ತಿದೆ. ಇಂತಹವರ ಮಧ್ಯೆ ನಿಜವಾದ ಸಾಧಕರನ್ನು ಗುರುತಿಸಿ ಕಾಲಿಗೆರಗುವುದಕ್ಕೆ ಸಾಧ್ಯವೇ? ಎಂಬ ದೊಡ್ಡ ಸವಾಲು ನಮ್ಮ ಮುಂದಿದೆ. ಹಾಗಾಗಿ ಅಂಬಿಗರ ಚೌಡಯ್ಯನ ಮಾತುಗಳು ಇಂದಿಗೂ ಪ್ರಸ್ತುತವೆನಿಸುತ್ತವೆ.

***

 

Leave a Reply

Your email address will not be published. Required fields are marked *