ಸಾಹಿತ್ಯಾನುಸಂಧಾನ

heading1

ತಾಳಿದವನು ಬಾಳಿಯಾನು

   ಮನುಷ್ಯಬದುಕಿನಲ್ಲಿ ಅನುಸರಿಸಬಹುದಾದ ಜೀವನಮೌಲ್ಯಗಳಲ್ಲಿ ‘ತಾಳ್ಮೆ’ ಕೂಡಾ ಒಂದಾಗಿದ್ದು, ಅದು ಮನುಷ್ಯನಲ್ಲಿ ಸಹನೆಯ ಗುಣವನ್ನು ಬೆಳೆಸುತ್ತದೆ. ಹಾಗಾಗಿಯೇ ‘ತಾಳಿದವನು ಬಾಳಿಯಾನು’ ಎಂಬ ಹಿರಿಯರ ಅನುಭವದ ಮಾತು. ಮನುಷ್ಯನಾದವನಿಗೆ ಬದುಕಿನಲ್ಲಿ ತಾಳ್ಮೆ ಅತ್ಯಂತ ಅವಶ್ಯಕ. ಅದು ಜೀವನಾನುಭವದ ಮೂಲಕ ಸಾಧಿತವಾಗುವ ಮೌಲ್ಯ. ಪ್ರತಿಯೊಬ್ಬನಲ್ಲಿನ ತಾಳ್ಮೆ ಬೇರೆಬೇರೆ ಮಟ್ಟದಲ್ಲಿದ್ದು, ಅದು ಆತನ ಜೀವನವಿಧಾನ, ಅನುಭವ, ಬೆಳೆದ ಪರಿಸರ, ಅಭಿರುಚಿ, ಆಹಾರಕ್ರಮ ಮೊದಲಾದವುಗಳ ಮೇಲೆ ಅವಲಂಬಿತವಾಗಿರುತ್ತದೆ. ಆದುದರಿಂದ ಕೆಲವರಲ್ಲಿ ತಾಳ್ಮೆ ಹೆಚ್ಚು. ಇನ್ನು ಕೆಲವರಲ್ಲಿ ಕಡಿಮೆ. ಆದರೆ ಕೆಲವರಲ್ಲಿ ಏನೂ ಇಲ್ಲ. ಆದುದರಿಂದಲೇ ಅವರಲ್ಲಿ ಕ್ಷಣಕ್ಷಣಕ್ಕೂ ಸಿಟ್ಟು, ಚಡಪಡಿಕೆ, ಗೊಂದಲ, ಸಿಡಿಮಿಡಿ.

                ಮನುಷ್ಯನಾಗಿ ಹುಟ್ಟಿದ ಮೇಲೆ ತಾಳ್ಮೆ ಅತ್ಯಂತ ಅವಶ್ಯಕ. ತಾಳ್ಮೆಯಿಲ್ಲದವನು ಕ್ಷಣಕ್ಷಣಕ್ಕೂ ಕೋಪೋದ್ರಿಕ್ತನಾಗಿ ತನ್ನ ಮಾನಸಿಕನೆಮ್ಮದಿಯನ್ನು ಕಳೆದುಕೊಳ್ಳುವುದರ ಜೊತೆಗೆ ಇತರರ ನೆಮ್ಮದಿಯನ್ನೂ ಕಳೆಯುತ್ತಾನೆ. ತಾನು ಸುಮ್ಮನಿರಲಾರ, ಇತರರನ್ನು ಸುಮ್ಮನಿರಿಸಲಾರ. ತಾನು ಬಾಳಲಾರ, ಅನ್ಯರನ್ನು ಬಾಳಗೊಡಲಾರ. ಅತಿಯಾದ ಕೋಪ, ಚಡಪಡಿಕೆಗಳು ಅವನ ಆರೋಗ್ಯದ ಮೇಲೆ ಕೆಟ್ಟಪರಿಣಾಮವನ್ನು ಬೀರುತ್ತವೆ. ತಾಳ್ಮೆಯುಳ್ಳವನು ಯಾವುದೇ ಪ್ರಸಂಗದಲ್ಲೂ ವಿಚಲಿತನಾಗಲಾರ, ತನ್ನ ಮಾನಸಿಕ ಸ್ತಿಮಿತವನ್ನೂ ಕಳೆದುಕೊಳ್ಳಲಾರ. ಅವನದು ಸಮತೂಕದ ವ್ಯವಹಾರ. ಹಾಗಾಗಿ ಆತ ಲೋಕಮಾನ್ಯ. ಯಾವುದೇ ಒತ್ತಡಗಳಿಲ್ಲದ, ಆರಕ್ಕೇರದೆ ಮೂರಕ್ಕಿಳಿಯದ ಬಾಳು. ಇದರಿಂದಲೇ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ, ಗೌರವ ಎಲ್ಲವೂ. ಅದಕ್ಕೇ ‘ತಾಳಿದವನು ಬಾಳಿಯಾನು’ ಎಂಬ ಹಿರಿಯರ ಕಿವಿಮಾತು. ಕೇಳದೆ, ತಾಳ್ಮೆಯಿಲ್ಲದೆ ಎಲ್ಲವನ್ನೂ ಕಳೆದುಕೊಂಡು ಕೆಲವೇ ಕಾಲ ಬಾಳುವುದಕ್ಕಿಂತ, ಕೇಳಿಕೊಂಡು ತಾಳ್ಮೆಯನ್ನು ಹೊಂದಿ ಎಲ್ಲವನ್ನೂ ಗಳಿಸಿಕೊಂಡು ಬಹುಕಾಲ ಬಾಳುವುದೇ ಹೆಚ್ಚು ಸೂಕ್ತವಲ್ಲವೇ? 

***

Leave a Reply

Your email address will not be published. Required fields are marked *