ಸಾಹಿತ್ಯಾನುಸಂಧಾನ

heading1

ನನ ಕೈಯ ಹಿಡಿದಾಕೆ

                “ಸರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ” – ಇದು ಬೇಂದ್ರೆಯವರ ನುಡಿಮುತ್ತು. ಅವರ ಬದುಕಿನಲ್ಲಿ ಇದು ಸಮಪಾಕವಾಗಿ ಬೆರೆತಿತ್ತು ಎನ್ನಬಹುದು. ಜೀವನದುದ್ದಕ್ಕೂ ಬಹಳಷ್ಟು ನೋವು, ಕಷ್ಟ, ದುಃಖಗಳನ್ನು ಅನುಭವಿಸಿದ ಬೇಂದ್ರೆ, ಅಳುನುಂಗಿ ನಗುಚೆಲ್ಲಿದ ಜೀವ. ಹಾಗಾಗಿಯೇ ಅವರ ಕವನಗಳಲ್ಲಿ ಜೀವನಧರ್ಮ, ಜೀವನಮರ್ಮ, ಜೀವನಕರ್ಮಗಳೆಲ್ಲವೂ ಹಾಸುಹೊಕ್ಕಾಗಿ ಹರಳುಗಟ್ಟಿದವು.

                ಬಡತನದಲ್ಲಿಯೇ ಹುಟ್ಟಿದ ಬೇಂದ್ರೆ ಎಳವೆಯಲ್ಲಿಯೇ ತಂದೆಯನ್ನು ಕಳೆದುಕೊಂಡು ಅವರಿವರು ನೆಂಟರ ಮನೆಯಲ್ಲಿ ಬೆಳೆದರು. ಬಡತನದೊಂದಿಗೆ ಸಹನೆಯೂ ಬೆಳೆಯಿತು. ೧೯೧೯ರಲ್ಲಿ ಲಕ್ಷ್ಮೀಬಾಯಿ ಬೇಂದ್ರೆಯವರ ಮನದನ್ನೆಯಾಗಿ, ಮನೋರಮೆಯಾಗಿ ಬಂದು ಮನೆ-ಮನಗಳನ್ನು ತುಂಬಿದರು. ಆದರೆ ಕಷ್ಟಗಳು ಕಳೆಯಲಿಲ್ಲ. ‘ಪತಿಯೇ ಪರದೈವ’ ಎಂದು ನಂಬಿ ಬೇಂದ್ರೆಯವರೊಂದಿಗೆ ಬಾಳದೋಣಿಯನ್ನೇರಿದ ಜೀವ ಬಡತನದ ಬಿರುಗಾಳಿಗೆ ತತ್ತರಿಸಿತು. ಮೇಲಿಂದ ಮೇಲೆ ನೋವು, ನಿರಂತರವಾದ ದುಃಖ-ದುರಿತಗಳು, ಬಡತನದ ಬೇಗೆ, ಪತಿಯ ಜೈಲುವಾಸ ಎಲ್ಲವೂ ಮುಗ್ಧೆ ಲಕ್ಷ್ಮೀಬಾಯಿಯನ್ನು ನೋವಿನ ಅಂಚಿಗೆ ತಳ್ಳಿದವು. ‘ಮನದನ್ನೆಯ ನಗುಮುಖವೇ ಜೀವನಾಡಿ’ ಎಂದು ಭಾವಿಸಿದ್ದ ಬೇಂದ್ರೆ ಕೂಡಾ ಇದರಿಂದ ಗಲಿಬಿಲಿಗೊಳ್ಳುವ ಸ್ಥಿತಿ. ಪತಿಯ ಜವಾಬ್ದಾರಿ ಹೆಚ್ಚು. ತನ್ನ ಕೈಹಿಡಿದು ತನ್ನನ್ನು ನಂಬಿ, ಎಲ್ಲರನ್ನೂ ಎಲ್ಲವನ್ನೂ ಬಿಟ್ಟುಬಂದ ಮನದನ್ನೆಯ ಹೃದಯಬೇಗೆ, ಮನಸ್ಸಿನ ಬೇಗೆಗಳು ಬೇಂದ್ರೆಯವರನ್ನು ತಟ್ಟುತ್ತವೆ. ಮನಸ್ಸನ್ನು ಕಿವುಚುತ್ತವೆ. ಆಕೆ ತನ್ನ ಕೈಹಿಡಿದಾಕೆ, ತಾನು ಆಕೆಯ ಕೈಯನ್ನು ಹಿಡಿದು ನಡೆಸುವಾತ. ಆಕೆ ನಗಿಸಬೇಕು, ತಾನು ನಗಬೇಕು. ಆಕೆ ಅಳುತ್ತಿದ್ದರೆ ತಾನಾದರೂ ಹೇಗೆ ನಗುವುದಕ್ಕೆ ಸಾಧ್ಯ?! ಈ ಹಿನ್ನೆಲೆಯಲ್ಲಿ ಬೇಂದ್ರೆಯವರಿಂದ ರಚನೆಯಾದ ಗೀತೆ, ‘ನನ ಕೈಯ ಹಿಡಿದಾಕೆ’. ನಿಜದ ಅರ್ಥದಲ್ಲಿ ಬೇಂದ್ರೆಯವರ ಬಾಳಗೀತೆ.

 

ನನ ಕೈಯ ಹಿಡಿದಾಕೆ ಅಳುನುಂಗಿ ನಗು ಒಮ್ಮೆ

ನಾನೂನು ನಕ್ಕೇನಽ

ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ

ಹುದುಲಾಗ ಸಿಕ್ಕೇನಽ

ಜಗದಾಗ ಯಾವಾಗ ನೆರಳು ಬೆಳಕಿನಾಗ

ಹಗಲಿರುಳು ಇದ್ದಾವಾ

ಎದ್ದೇನ ಬಿದ್ದೇನಽ ಕತ್ತಲು ಬಿಸಿಲೇನ

ನಕ್ಕಾವ ಗೆದ್ದಾವ!

ಹುಸಿನಗುತ ಬಂದೇವ ನಸುನಗುತ ಬಾಳೋಣ

ತುಸುನಗುತ ತೆರಳೋಣ

ಬಡನೂರು ವರುಷಾನ ಹರುಷಾದಿ ಕಳೆಯೋಣ

ಯಾಕಾರ ಕೆರಳೋಣ!

ಬಡತನ ಒಡೆತನ ಕಡೆತನಕುಳಿದಾವೇನ

ಎದೆಹಿಗ್ಗು ಕಡೆಮುಟ್ಟ

ಬಾಳಿನ ಕಡಲಾಗ ಅದನ ಮುಳುಗಿಸಬ್ಯಾಡ

ಕಡೆಗೋಲು ಹಿಡಿಹುಟ್ಟ

ನನ ಕೈಯ ಹಿಡಿದಾಕೆ ಅಳುನುಂಗಿ ನಗು ಒಮ್ಮೆ

ನಾನೂನು ನಕ್ಕೇನಽ

ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ

ಹುದುಲಾಗ ಸಿಕ್ಕೇನಽ

    -ಅಂಬಿಕಾತನಯದತ್ತ (ದ. ರಾ. ಬೇಂದ್ರೆ)

 

               ಪತಿ-ಪತ್ನಿಯರೊಳಗೆ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯೂ ಅಲ್ಲ. ಪರಸ್ಪರ ಸಮಾನರು. ಒಬ್ಬರ ನಗು ಇನ್ನೊಬ್ಬರನ್ನು ನಗಿಸುತ್ತದೆ. ಒಬ್ಬರ ಅಳು ಇನ್ನೊಬ್ಬರನ್ನು ಅಳಿಸುತ್ತದೆ. ಕೈಹಿಡಿದವಳು ಅಳುನುಂಗಿ ನಗುಚೆಲ್ಲಿದರೆ ಕೈಹಿಡಿದಾತನೂ ನಗಬಲ್ಲ. ತನ್ನೆಲ್ಲ ನೋವನ್ನು ಮರೆಯಬಲ್ಲ. ನಗು ಅಳುವನ್ನೂ ದುಃಖವನ್ನೂ ಮರೆಸುತ್ತದೆ. ಲವಲವಿಕೆ ಮೂಡಿಸುತ್ತದೆ. ಬದುಕಿನಲ್ಲಿ ಕಷ್ಟ ಎಂಬುದು ಹುಚ್ಚು ಹಳ್ಳ(ಮಳೆಬಂದಾಗ ನೀರು ಶೇಖರಗೊಂಡು ಉಂಟಾದ ತಾತ್ಕಾಲಿಕ ಹಳ್ಳ). ದುಃಖವೆಂಬುದು ಅದರಲ್ಲಿನ  ಕಳ್ಳ ಹುದುಲು(ಹುಟ್ಟಿ ತಕ್ಷಣದಲ್ಲಿಯೇ ಮಾಯವಾಗುವ ಕ್ಷುಲ್ಲಕವಾದ ತೆರೆ). ಹುಟ್ಟಿಕೊಂಡು ಕೆಲವೇ ನಿಮಿಷಗಳೊಳಗೆ ಮರೆಯಾಗುತ್ತದೆ. ಬಾಳಿನಲ್ಲಿನ ದುಃಖವೂ ಹಾಗೆಯೇ,  ಕಳ್ಳಹುದುಲಿನ ತರಹ. ಇದನ್ನು ಅರಿಯದೆ ಕೈಹಿಡಿದವಳು ಅಳುತ್ತಿದ್ದರೆ ಕೈಹಿಡಿದಾತ ಆ ಅಳುವಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಬಲ್ಲ. ಮಳೆಬಂದಾಗ ಪ್ರವಾಹ ಹರಿಯುತ್ತದೆ. ಅನಂತರ ಯಥಾಸ್ಥಿತಿ. ಎಲ್ಲವೂ ಪ್ರಶಾಂತ. ಕವಿಯೂ ಅದನ್ನೇ ಬಯಸುತ್ತಾರೆ. ಕೈಹಿಡಿದಾಕೆಯ ನಗುವೇ ತನ್ನ ನಗು, ಆಕೆಯ ಅಳುವೇ ತನ್ನ ಅಳು. ಸಮಪಾಲು, ಸಮಬಾಳು ಎಂದರೆ ಇದಲ್ಲದೆ ಬೇರೇನು? ಇದುವೇ ಸಮರಸ, ಸಮಪಾಕ.

                ಜಗತ್ತಿನಲ್ಲಿ ಕೇವಲ ಸುಖವನ್ನೇ ಕಂಡವರು ಯಾರು? ಕೇವಲ ದುಃಖವನ್ನೇ ಉಂಡವರು ಯಾರು? ಇರುಳು ಬೆಳಕಿನಂತೆ ಅವೂ ವಾಸ್ತವ. ಒಂದನ್ನು ಅನುಸರಿಸಿ ಇನ್ನೊಂದು ಬರುತ್ತದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಬೀಳುವುದು, ಏಳುವುದು ಇದ್ದೇ ಇದೆ. ‘ಅಯ್ಯೋ ಬಿದ್ದೆವಲ್ಲ’ ಎಂಬ ದುಃಖ ಸಲ್ಲದು. ಕೆಚ್ಚೆದೆಯಿಂದ ಏಳಬೇಕು. ಮುನ್ನಡೆಯಬೇಕು. ಹಾಗೆಯೇ ಏಳುಬೀಳುಗಳಲ್ಲಿ ನಕ್ಕವನೇ ಗೆಲ್ಲುತ್ತಾನೆ, ಅತ್ತವನು ಸೋಲುತ್ತಾನೆ. ಈ ಸೋಲು ಗೆಲುವುಗಳ ಮಧ್ಯೆ ಬಾಳುವುದನ್ನು ಅರಿಯಬೇಕು. ಅದುವೇ ನಿಜದ ಬಾಳು.

                ಕಷ್ಟಗಳನ್ನು ಯಾರೂ ಕೇಳಿಕೊಂಡು ಬಂದುದಲ್ಲ. ಸುಖವನ್ನು ಯಾರೂ ಪಡೆದುಕೊಂಡು ಬಂದುದೂ ಅಲ್ಲ. ಬರುವಾಗ ಇದ್ದ ನಗುವನ್ನು ಅಳಿಸುವುದೂ ಹಿತವಲ್ಲ. ಬರುವಾಗ ಎಲ್ಲರೂ ಹುಸಿನಗುತ್ತಲೇ ಬಂದಿರುವಾಗ, ನಗುನಗುತ್ತಾ ಬಾಳುವುದೇ ಮೇಲು. ಹಾಗೆಯೇ ತುಸುನಗುತ್ತಾ ತೆರಳಬೇಕು. ಇದು ಮೂರು ದಿನಗಳ ಬಾಳು. ಯಾವುದೂ ನಮ್ಮ ಕೈಯಲ್ಲಿಲ್ಲ. ದೋಣಿ ಏರಿದಮೇಲೆ ಅದು ನಿರಂತರವಾಗಿಯೂ ಸಾಗಬಹುದು. ಬಿರುಗಾಳಿಗೆ ಸಿಲುಕಬಹುದು. ಮುಳುಗಲೂ ಬಹುದು. ಕಡೆಗೋಲು, ಹುಟ್ಟನ್ನು ಹಿಡಿದು ದೋಣಿಯನ್ನು ನಡೆಸುತ್ತಲೇ ಇರಬೇಕು. ನಮಗೆ ಅದರ ಮೇಲೆ ಹಿಡಿತವಿಲ್ಲ. ಪಡೆದು ಬಂದಿದ್ದೇವೆ. ಸ್ವೀಕರಿಸಿ ಬಾಳಬೇಕು. ಬಡತನವೇನು? ಸಿರಿತನವೇನು? ಹರುಷದಲ್ಲಿಯೇ ಕಳೆಯಬೇಕು. ಮನುಷ್ಯ ವಿಧಿಯ ಕೈಗೊಂಬೆಯಾಗಿರುವಾಗ ಕೆರಳುವುದರಲ್ಲಿ ಅರ್ಥವೇನಿದೆ? ಹಾಗೆ ಕೆರಳಿದರೆ ಲಾಭವಾದರೂ ಏನು? ‘ಪಾಲಿಗೆ ಬಂದುದೇ ಪಂಚಾಮೃತ’ ಎಂದು ಮನಸಾ ಸ್ವೀಕರಿಸಬೇಕು.

                ಬರುವಾಗ ಏನನ್ನೂ ತರಲಿಲ್ಲ. ಹೋಗುವಾಗ ಕೊಂಡುಗೋಗುವುದಕ್ಕೆ ಹೇಗೆ ಸಾಧ್ಯ? ಬಡತನವೂ ಶಾಶ್ವತವಲ್ಲ, ಒಡೆತನವೂ ಕೂಡಾ. ಕತ್ತಲನ್ನು ಅನುಸರಿಸಿ ಹಗಲೂ ಹಗಲನ್ನು ಅನುಸರಿಸಿ ಕತ್ತಲೂ ಬರುವಂತೆ, ಬಡತನವನ್ನು ಅನುಸರಿಸಿ ಒಡೆತನ, ಒಡೆತನವನ್ನು ಅನುಸರಿಸಿ ಬಡತನ. ಯಾವುದು ಶಾಶ್ವತ? ಈ ಮಧ್ಯೆ ಪಡೆದುಕೊಂಡ, ಗಳಿಸಿಕೊಂಡ ಎದೆಹಿಗ್ಗು ಸ್ಫೂರ್ತಿಯ ಸೆಲೆಯಾಗುತ್ತದೆ. ಧೈರ್ಯತುಂಬುತ್ತದೆ. ವಿಶ್ವಾಸತುಂಬುತ್ತದೆ. ಬಾಳಿಗೆ ಸಂಜೀವಿನಿಯಾಗುತ್ತದೆ. ಬಾಳೆಂಬ ಕಡಲಲ್ಲಿ ಸಂಸಾರವೆಂಬುದು ದೋಣಿ. ತಾವಾಗಿಯೇ ದೋಣಿಯನ್ನು ಮುಳಿಗಿಸಬಾರದು. ಇಬ್ಬರೂ ಹುಟ್ಟನ್ನು ಗಟ್ಟಿಯಾಗಿ ಹಿಡಿದು ದೋಣಿನಡೆಸಬೇಕು. ಇದರ ಸಾಗುವಿಕೆಗೆ ಇಬ್ಬರಲ್ಲಿನ ಎದೆಹಿಗ್ಗು ಮಾತ್ರ  ಮುಖ್ಯ. ಅದೇ ‘ಹುಟ್ಟು’, ದೋಣಿ ನಡೆಸುವ ಹುಟ್ಟು, ಚೈತನ್ಯದ ಮರುಹುಟ್ಟು.

                ಜೀವಿತದ ಕರ್ಮ-ಮರ್ಮಗಳೇ ಹೀಗಿರುವಾಗ ಅಳುನುಂಗಿ ನಗುಚೆಲ್ಲಬೇಕು. ಮೋಡ ದಟ್ಟೈಸಿ ಧಾರಾಕಾರ ಮಳೆಸುರಿದು ಮರುದಿನ ಆಕಾಶ ಶುಭ್ರವಾಗುವ ಹಾಗೆ ಅಳುನುಂಗಿ ನಕ್ಕಾಗ ಬಾಳು ಶುಭ್ರವಾಗುತ್ತದೆ, ಸಮರಸದ ಪರಿಪಾಕವಾಗುತ್ತದೆ ಎಂಬುದು ಕವಿಯ ಆಶಯ.  

                ಇದೊಂದು ಭಾವಗೀತಾತ್ಮಕವಾದ ದಾಂಪತ್ಯಗೀತೆ. ಇದರ ಕಿರಿದಾದ  ಪದಬಂಧ,  ಛಂದೋಬಂಧಗಳು, ಯುಕ್ತವಾದ ದೃಷ್ಟಾಂತಗಳು ಈ ಗೀತೆಯನ್ನು ನಿತ್ಯನೂತನವಾಗಿಸಿವೆ. ದುಃಖದ, ನೋವಿನ ಸನ್ನಿವೇಶವಾದುದರಿಂದ, ಹಾಗೂ ಪದಪ್ರಯೋಗದಲ್ಲಿ ಕೋಮಲತೆ ಇರುವುದರಿಂದಲೇ ಈ ಭಾವಗೀತೆ ಸಹೃಯದರ ಮನಸ್ಸನ್ನು ಕರಗಿಸುತ್ತದೆ. ಹೃದಯಸಂವಾದವನ್ನು ನಡೆಸುತ್ತದೆ.

                ಕೈಹಿಡಿದಾಕೆಗೆ ಕವಿ ಹೇಳುವ ಈ ಸಾಂತ್ವಾನದ ಮಾತುಗಳು ಕೇವಲ ತಮ್ಮ ಮನದನ್ನೆಗೆ ಮಾತ್ರವಲ್ಲದೆ ಇತರರಿಗೂ ಅನ್ವಯವಾಗುತ್ತವೆ. ಕವಿಯ ಈ ಮಾತುಗಳಲ್ಲಿ ಜೀವನದ ಕರ್ಮ-ಮರ್ಮಗಳೆಲ್ಲವೂ ಹಾಸುಹೊಕ್ಕಾಗಿವೆ. ಆದುದರಿಂದಲೇ ಈ ದಾಂಪತ್ಯಗೀತೆ ಸಹೃದಯರ ಮನಸ್ಸನ್ನು ಮಿಡಿಯುತ್ತದೆ. ಮತ್ತೆ ಮತ್ತೆ ಸೆಳೆಯುತ್ತದೆ. ರೋಮಾಂಚನಗೊಳಿಸುತ್ತದೆ. ಬಾಳಿನಲ್ಲಿ ಧೈರ್ಯ, ಉತ್ಸಾಹಗಳನ್ನು ತುಂಬುತ್ತದೆ. ಬಾಳಿಗೆ ದೀವಿಗೆಯಾಗುತ್ತದೆ, ಅರಿವಿನ ಗುರುವಾಗುತ್ತದೆ, ಸಮರಸದ ಸಮಪಾಕವಾಗುತ್ತದೆ. ಸರ್ವಕಾಲಕ್ಕೂ ಸರ್ವಸಂಸಾರಗಳಿಗೂ ತಿಳಿವಿನ, ಬೆಳಕಿನ, ಅರಿವಿನ ಬಾಳಬುತ್ತಿಯಾಗುತ್ತದೆ.

ಬೇಂದ್ರೆಯವರ ಈ ಭಾವಗೀತೆಯನ್ನು ಸಂಗೀತದ ಹಿನ್ನೆಲೆಯಲ್ಲಿ ಕೇಳಿ, ಆನಂದಿಸಿ. 🙏

***

2 thoughts on “ನನ ಕೈಯ ಹಿಡಿದಾಕೆ

  1. ದ. ರಾ ಬೇಂದ್ರೆಯವರ ಈ ಗೀತೆಯನ್ನು ಅದೆಷ್ಟು ಬಾರಿ ಓದಿದರೂ ಪ್ರತಿ ಸಲವೂ ಹೊಸ ಅರ್ಥವನ್ನೇ ನೀಡುತ್ತದೆ. ಪ್ರತಿ ಬಾರಿ ಹೊಸ ಹುರುಪನ್ನು ನೀಡುತ್ತದೆ. ಓದಿದ ಪ್ರತಿ ಬಾರಿಯೂ ಬದುಕಿನ ಬಗೆಗಿನ ನಮ್ಮ ದೃಷ್ಟಿಕೋನವನ್ನು ಬೇರೆಯದೇ ವಿಧವಾಗಿ ಬದಲಾಯಿಸುವ ಈ ಗೀತೆಯನ್ನು ಬಹಳ ಸುಂದರವಾಗಿ ಮತ್ತು ಸವಿಸ್ತಾರವಾಗಿ , ಜೊತೆಗೆ ದ. ರಾ ಬೇಂದ್ರೆಯವರ ಬದುಕಿನ ಏರಿಳಿತಗಳ ಜೊತೆಗೆ ಈ ಗೀತೆ ಹೇಗೆ ಹೆಣೆದು ಕೊಂಡಿದೆ ಎಂದು ತುಂಬಾ ಸುಂದರವಾಗಿ ತಿಳಿಸಿಕೊಟ್ಟಿದ್ದೀರಿ. ತುಂಬಾ ಧನ್ಯವಾದಗಳು ಸರ್ 🙏

    1. ಬೇಂದ್ರೆಯವರ ಈ ದಾಂಪತ್ಯಗೀತೆಯನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡರೆ ವಿಚ್ಛೇದನ ದಂತಹ ಸಮಸ್ಯೆಗಳೇ ಹುಟ್ಟಿಕೊಳ್ಳಲಾರವು ಎನಿಸುತ್ತದೆ. ಈ ಬರಹದ ಬಗೆಗಿನ ನಿಮ್ಮ ಅನಿಸಿಕೆಗೆ ಕೃತಜ್ಞತೆಗಳು. ನಿಮ್ಮ ಮಾತಿನಂತೆ ಒಂದು ಭಾವಗೀತೆ ಅಥವಾ ಕವನ ಹೊಸ ಹೊಸ ಅರ್ಥವನ್ನು ಬಿಂಬಿಸುವಂತಾದರೆ, ಸಾಮಾಜಿಕ ಬದುಕನ್ನು ನೇರ್ಪುಗೊಳಿಸುವಂತಾದರೆ ಅದೇ ತಾನೇ ಆರೋಗ್ಯಪೂರ್ಣ ಹಾಗೂ ಮೌಲಿಕ ಸಾಹಿತ್ಯ!ಇಂತಹ ಸಾಹಿತ್ಯವೇ ನಮಗೆ ಬೇಕಾಗಿರುವುದು. 🙏

Leave a Reply

Your email address will not be published. Required fields are marked *