ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ
ತನ್ನ ನೂಲು ತನ್ನನೇ ಸುತ್ತಿ ಸುತ್ತಿ ಸಾವ ತೆರನಂತೆ!
ಮನ ಬಂದುದ ಬಯಸಿ ಬಯಸಿ ಬೇವುತ್ತಿರುವೆನಯ್ಯ!
ಅಯ್ಯ, ಎನ್ನ ಮನದ ದುರಾಶೆಯ ಮಾಣಿಸಿ
ನಿಮ್ಮತ್ತ ತೋಱಾ ಚೆನ್ನಮಲ್ಲಿಕಾರ್ಜುನ
-ಅಕ್ಕಮಹಾದೇವಿ
ಅಕ್ಕಮಹಾದೇವಿ ಈ ವಚನದಲ್ಲಿ ಅಲೌಕಿಕಪುರುಷ ಚೆನ್ನಮಲ್ಲಿಕಾರ್ಜುನನನ್ನು ಗಂಡನೆಂದು ಭಾವಿಸಿ, ತಾನು ಅನುಭವಿಸಿದ ನೋವನ್ನು ಉದಾಹರಣೆಯೊಂದರ ಮೂಲಕ ಪ್ರಸ್ತುತಪಡಿಸಿದ್ದಾಳೆ. ತೆರಣಿ(ರೇಷ್ಮೆ)ಯ ಹುಳು ತಾನೇ ಕಾಳಜಿವಹಿಸಿ ತನ್ನ ದೇಹದಿಂದ ಉತ್ಪತ್ತಿಯಾಗುವ ನೂಲನ್ನು ತನ್ನ ಸುತ್ತ ಸುತ್ತಿ ಇರುವುದಕ್ಕೊಂದು ಮನೆ(ಗೂಡನ್ನು)ಯನ್ನು ಕಟ್ಟಿಕೊಳ್ಳುತ್ತದೆ. ಒಳಿತಿಗೆಂದು ತನ್ನ ದೇಹದ ಒಂದಂಗದಿಂದ ಉತ್ಪತ್ತಿಯಾದ ನೂಲನ್ನೇ ಬಳಸಿಕೊಂಡು ಮನೆಯನ್ನು(ಗೂಡನ್ನು) ಮಾಡಿಕೊಂಡರೂ ಅದು ಅದರೊಳಗೆ ಬೆಂದು ಸತ್ತುಹೋಗುತ್ತದೆ. ತನ್ನ ಬದುಕೂ ಇದಕ್ಕಿಂತ ಭಿನ್ನವಾಗಿಲ್ಲ ಎಂಬುದು ಅಕ್ಕನ ಅಳಲು.
‘ಚೆನ್ನಮಲ್ಲಿಕಾರ್ಜುನನೇ ತನಗೆ ಗಂಡ’ ಎಂಬ ಭಾವ ರೇಷ್ಮೆಯ ನೂಲಿನಂತೆ ಅಕ್ಕನ ಮನಸ್ಸಿನಲ್ಲಿಯೇ ಉತ್ಪತ್ತಿಯಾದುದು. ಆತನನ್ನು ಗಂಡನನ್ನಾಗಿ, ತನ್ನನ್ನು ಹೆಂಡತಿಯನ್ನಾಗಿ ಪರಿಭಾವಿಸಿಕೊಂಡು ಅಲೌಕಿಕ ಸುಖವನ್ನು ಅನುಭವಿಸಿದವಳು. ಆದರೆ ರೇಷ್ಮೆನೂಲಿನಂತಿರುವ ವಿರಹಭಾವವೇ ಆಕೆಯನ್ನು ಸುತ್ತಿಸುತ್ತಿ ತತ್ತರಿಸುವಂತೆ, ಹೈರಾಣಾಗುವಂತೆ ಮಾಡಿದೆ. ಆ ಸ್ಥಿತಿಯಲ್ಲಿ ಇರುವಂತಿಲ್ಲ, ಹೊರಬರುವಂತಿಲ್ಲ. ಅದಕ್ಕಾಗಿಯೇ ಆಕೆ ತನ್ನ ಮನದ ದುರಾಶೆಯನ್ನು ನಿವಾರಿಸಿ ಮುಕ್ತಿಯನ್ನು ನೀಡೆಂದು ಚೆನ್ನಮಲ್ಲಿಕಾರ್ಜುನನಲ್ಲಿ ವಿನಮ್ರಳಾಗಿ ಬೇಡಿಕೊಳ್ಳುತ್ತಾಳೆ.
ಕೌಶಿಕನ ಅಧಿಕಾರಶಾಹಿತ್ವ, ಹೆತ್ತವರ ಒತ್ತಾಸೆಗಳಿಗೆ ತುತ್ತಾಗಿ ಆತನನ್ನು ಮದುವೆಯಾಗಿ, ವಿಷಮದಾಂಪತ್ಯಕ್ಕೆ ಹೇಸಿ, ಅಂದಿನ ಸಾಮಾಜಿಕಧೋರಣೆಗಳಿಗೆ ವಿರುದ್ಧವಾಗಿ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಚೆನ್ನಮಲ್ಲಿಕಾರ್ಜುನನ ನಿರೀಕ್ಷೆಯಲ್ಲಿ ಹೊರಟ ಅಕ್ಕ, ಅವನನ್ನು ಕಾಣದೆ ಪರಿತಪಿಸುತ್ತಾಳೆ. ಚೆನ್ನಮಲ್ಲಿಕಾರ್ಜುನ ತಾನು ಬೇಕೆಂದು ಬಯಸಿದ ಗಂಡ. ಆತನೊಂದಿಗಿನ ದಾಂಪತ್ಯ ತಾನು ಬೇಕೆಂದು ಬಯಸಿದ ಭಾವ. ಯಾವುದೂ ದಕ್ಕದೆ ವಿರಹದಿಂದ ಪರಿತಪಿಸುತ್ತಾಳೆ. ಮನಸ್ಸಿನಲ್ಲಿ ಏನೇನೋ ಭಾವಗಳನ್ನಿರಿಸಿಕೊಂಡು ಬೇಯುತ್ತಾಳೆ. ರೇಷ್ಮೆಹುಳು ತನ್ನ ನೂಲಿನ ಗೂಡಿನಲ್ಲಿ ತಾನೇ ಬೆಂದಂತೆ.
ಹನ್ನೆರಡನೆಯ ಶತಮಾನದ ಸಾಮಾಜಿಕ ಸಂದರ್ಭದಲ್ಲಿ ಅಕ್ಕನದು ಒಂದು ದಿಟ್ಟ ಕ್ರಾಂತಿಕಾರಕ ಹೆಜ್ಜೆ. ಮನಸ್ಸಿಗೆ ಒಲ್ಲದುದನ್ನು, ಆತ್ಮಸಾಕ್ಷಿಗೆ ವಿರುದ್ಧವಾದುದನ್ನು ದಿಟ್ಟತನದಿಂದ ವಿರೋಧಿಸಿ, ಲೌಕಿಕದಾಂಪತ್ಯ ಅಸಾಧ್ಯವೆಂದು ನಿರ್ಧರಿಸಿ ನಿರ್ದಾಕ್ಷಿಣ್ಯವಾಗಿ ವ್ಯವಸ್ಥೆಯನ್ನು ನಿರಾಕರಿಸಿ ಹೊರನಡೆದವಳು. ಒಂದೆಡೆ ಸಾಮಾಜಿಕ ಕಟ್ಟುಪಾಡುಗಳನ್ನು ಧಿಕ್ಕರಿಸಿದ್ದು; ಇನ್ನೊಂದೆಡೆ ಇನ್ನೂ ಹದಿಹರೆಯದ ಆಕೆಯನ್ನು ಕಾಮುಕಪುರುಷರು ಕಾಡಿ ಪೀಡಿಸಿದ್ದು; ಇಂತಹ ಅಸಹಜ, ಅಮಾನುಷ, ಅನೈತಿಕವ್ಯವಹಾರಗಳನ್ನು ಎದುರಿಸಿದ್ದು; ಲೋಕಸಹಜವಾದ ವರ್ತನೆಯನ್ನು ಮೀರಿ ಅಸಹಜವಾಗಿ ನಡೆದುಕೊಂಡಿದ್ದು ಇವೆಲ್ಲವೂ ಅಂದಿನ ಆಕೆಯ ಮಾನಸಿಕ ಗೊಂದಲಗಳನ್ನು ಮಾತ್ರವಲ್ಲದೆ ಲೋಕದ ಡಾಂಭಿಕರ ವಿರುದ್ಧ ಆಕೆಯ ಪ್ರತಿಭಟನೆಯನ್ನು ಸೂಚಿಸುತ್ತವೆ. ಆಕೆ ಲೌಕಿಕ ಪ್ರೇಮ-ಕಾಮಗಳನ್ನು ಮೀರಿ ಅಲೌಕಿಕವಾದುದನ್ನು ಬಯಸಿದವಳು, ಅದಕ್ಕಾಗಿ ಹಾತೊರೆದವಳು. ಅವಳ ಇಡೀ ಬದುಕು ಅದಕ್ಕೆ ದೃಷ್ಟಾಂತವೆನಿಸಿಕೊಳ್ಳುತ್ತದೆ.
ಆಧುನಿಕಕಾಲದಲ್ಲಿ ಯಾವ ಹೆಣ್ಣೂ ಭಗವಂತನನ್ನೇ ಗಂಡನೆಂದು ಪರಿಭಾವಿಸಿಲ್ಲ. ಅಕ್ಕನಿಗೆ ಒದಗಿದಂತಹ ವ್ಯತಿರಿಕ್ತ ಸನ್ನಿವೇಶ ಯಾರಿಗೂ ಎದುರಾಗಿಲ್ಲ. ಹಾಗಾಗಿ ಆ ನೆಲೆಯಲ್ಲಿ ಅಕ್ಕನ ಬದುಕಿನ ಈ ಘಟನೆ ತಾಳೆಯಾಗದಿದ್ದರೂ ಭಿನ್ನ ನೆಲೆಯಲ್ಲಿ ತಾಳೆಯಾಗುತ್ತದೆ. ಇಂದು ಮದುವೆ ಮಂಟಪದಲ್ಲಿಯೇ ಈ ಗಂಡ ತನಗೆ ಬೇಡವೆಂದೋ, ಮದುವೆಯ ದಿನದಂದೇ ತಾಳಿಯನ್ನು ಕಿತ್ತೊಗೆದು ಗಂಡ ಬೇಡವೆಂದೋ, ಮದುವೆಯಾದ ಕೆಲವೇ ಸಮಯದೊಳಗೆ ಬೇಡವೆಂದೋ, ಗಂಡನಿಗೆ ತನ್ನನ್ನು ಸುತ್ತಾಡಿಸಲು ಸಾಧ್ಯವಿಲ್ಲದಿದ್ದರಿಂದ ಬೇಡವೆಂದೋ; ಆತನಲ್ಲಿ ಮನೆ, ಆಸ್ತಿ ಏನೂ ಇಲ್ಲ ಹಾಗಾಗಿ ಬೇಡವೆಂದೋ; ಗಂಡ ಉದ್ಯೋಗ ಕಳೆದುಕೊಂಡಿದ್ದಾನೆ ಹಾಗಾಗಿ ಬೇಡವೆಂದೋ ಅಥವಾ ಇನ್ನೂ ಸಾಕಷ್ಟು ರೀತಿಗಳಿಂದ ಗಂಡನನ್ನೇ ತೊರೆಯುವ, ಇನ್ನೆಷ್ಟೋ ಮಂದಿಯನ್ನು ಮದುವೆಯಾದರೂ ತೃಪ್ತಿಪಡೆಯದ ಹೆಂಡತಿಯರ ಸಂಖ್ಯೆ ಏರುತ್ತಲೇ ಇದೆ. ಇತಿಹಾಸದಲ್ಲಿನ ಕೆಲವು ಘಟನೆಗಳು ಮತ್ತೆ ಮತ್ತೆ ಭಿನ್ನ ಭಿನ್ನ ನೆಲೆಗಳಲ್ಲಿ, ಭಿನ್ನ ಭಿನ್ನ ರೀತಿಗಳಲ್ಲಿ ಆಧುನಿಕಕಾಲದಲ್ಲಿ ಹೇಗೆ ಮರುಕೊಳಿಸುತ್ತವೆ ಎಂಬುದನ್ನು ಪರಿಭಾವಿಸಿದಾಗ ಆಶ್ಚರ್ಯವೂ ಆಗುತ್ತದೆ, ಅದಕ್ಕಿಂತಲೂ ಹೆಚ್ಚು ಕಳವಳವೂ ಆಗುತ್ತದೆ. ಅಕ್ಕನ ಮಾತುಗಳು ಭಿನ್ನಭಿನ್ನ ನೆಲೆಗಳಲ್ಲಿ ಇಂದಿನ ಸಮಾಜಕ್ಕೆ ಕನ್ನಡಿಹಿಡಿಯುವುದು ಒಂದು ವಿಡಂಬನೆ ಎನಿಸುತ್ತದೆ.
***
Super article
Thank you 🙏