ಸಾಹಿತ್ಯಾನುಸಂಧಾನ

heading1

ಪತ್ನಿ-ಪುತ್ರ ವಿಕ್ರಯ-ರಾಘವಾಂಕ-ಭಾಗ-೧

 

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ (ಭಾಗ-೧)

ಎಡೆವಿಡದೆ ದಾರಿಯಱುಹಲು ಮಂತ್ರಿ ಮುಂದೆ ಸುತ

ನೆಡದ ದೆಸೆಯೊಳು ನಿಜಾಂಗನೆ ಹಿಂದೆ ಬರೆ ಭೂಮಿ

ಯೊಡೆಯನೊಡವೆಗಳೊಡೆತನಂಗಳನೊಡಂಬಟ್ಟು ಮುನಿಗಿತ್ತ ಚಿಂತೆ ತನ್ನ

ಬಿಡೆ ದಕ್ಷಿಣವ ಬಿಟ್ಟು ದಕ್ಷಿಣಾರ್ಥಂಗಳಂ

ಕೊಡುವೆನೆಂಬುತ್ತರವನುತ್ತರಿಸಲುತ್ತರಂ

ಬಿಡಿದು ನಡೆದಂ ನೆರವನಾರುವಂ ಹಾರದಾ ಧೀರ ಕಾಂತಾರಗೊಳಗೆ    ೧

ಪದ್ಯದ ಅನ್ವಯಕ್ರಮ:

ಎಡೆ ಬಿಡದೆ ದಾರಿಯ ಅಱುಹಲು ಮುಂದೆ ಮಂತ್ರಿ, ಎಡದ ದೆಸೆಯೊಳು ಸುತನ್, ಹಿಂದೆ ನಿಜ ಅಂಗನೆ ಬರೆ, ಭೂಮಿಯ ಒಡೆಯನ ಒಡವೆಗಳನ್ ಒಡೆತನಂಗಳನ್ ಒಡಂಬಟ್ಟು ಮುನಿಗೆ ಇತ್ತ ಚಿಂತೆ ತನ್ನ ಬಿಡೆ, ದಕ್ಷಿಣಾರ್ಥಂಗಳನ್ ಕೊಡುವೆನ್ ಎಂಬ ಉತ್ತರವನ್ ಉತ್ತರಿಸಲು  ದಕ್ಷಿಣವ ಬಿಟ್ಟು, ಉತ್ತರಂ ಪಿಡಿದು, ನೆರವನ್ ಆರುವಂ ಹಾರದ ಆ ಧೀರ   ಕಾಂತಾರದೊಳಗೆ ನಡೆದಂ.

ಪದ-ಅರ್ಥ:

ಎಡೆವಿಡದೆ-ನಿರಂತರ;  ದಾರಿಯಱುಹಲು-ದಾರಿ ತಿಳಿಸಲು;  ಮಂತ್ರಿ-ಹರಿಶ್ಚಂದ್ರನ ಮಂತ್ರಿ (ವಸುಕೀರ್ತಿ); ಮುಂದೆ-ಮುಂಭಾಗದಲ್ಲಿ; ಎಡದ ದೆಸೆಯೊಳು-ಎಡಭಾಗದಲ್ಲಿ;   ಅಂಗನೆ-ಹೆಂಡತಿ(ಚಂದ್ರಮತಿ);  ಬರೆ-ಬರುತ್ತಿರಲು;  ಭೂಮಿಯೊಡೆಯನೊಡವೆ (ಭೂಮಿಯ+ ಒಡೆಯನ+ ಒಡವೆ) – ವಿಶ್ವಾಮಿತ್ರನಿಗೆ ಸಲ್ಲಿಸಬೇಕಾದ ಸಂಪತ್ತು(ಯಾಗದಕ್ಷಿಣೆ);  ಒಡೆತನ-ಅರಸೊತ್ತಿಗೆ, ರಾಜಪದವಿ;   ಒಡಂಬಟ್ಟು-ಒಪ್ಪಿಕೊಂಡು;  ಮುನಿಗಿತ್ತ-ಮುನಿಗೆ ವಹಿಸಿಕೊಟ್ಟ; ಚಿಂತೆ-ಬೇಸರ, ನೋವು;  ಬಿಡೆ-ಬಿಡದಿರಲು;  ದಕ್ಷಿಣವ ಬಿಟ್ಟು-ದಕ್ಷಿಣ ದಿಕ್ಕನ್ನು ಬಿಟ್ಟು;  ದಕ್ಷಿಣಾರ್ಥಂಗಳಂ-ದಕ್ಷಿಣೆಯ ಹಣವನ್ನು;  ಕೊಡುವೆನ್-ಸಂದಾಯಮಾಡುತ್ತೇನೆ;  ಉತ್ತರ-ಭಾಷೆ, ಮಾತು;  ಉತ್ತರಿಸಲು-ಈಡೇರಿಸಲು;  ಉತ್ತರಂಬಿಡಿದು(ಉತ್ತರಂ+ಪಿಡಿದು)-ಉತ್ತರದಿಕ್ಕನ್ನು ಹಿಡಿದುಕೊಂಡು;  ನೆರವನಾರುವಂ-ಯಾರ ನೆರವನ್ನೂ;  ಹಾರದ-ನಿರೀಕ್ಷಿಸದ;  ಧೀರ-ಪರಾಕ್ರಮಿ(ಹರಿಶ್ಚಂದ್ರ);  ಕಾಂತಾರ-ಕಾಡು.

ದೇಶಭ್ರಷ್ಟನಾಗಿ ಕಾಶಿಯ ಕಡೆಗೆ ಹೊರಟ ಹರಿಶ್ಚಂದ್ರನ ಪರಿವಾರಕ್ಕೆ ಮಂತ್ರಿಯಾದ ವಸುಕೀರ್ತಿಯು ಮುಂದಿದ್ದುಕೊಂಡು ನಿರಂತರವಾಗಿ ದಾರಿನಡೆಯುತ್ತ ಉಳಿದವರಿಗೆ ದಾರಿಯನ್ನು ತಿಳಿಸುತ್ತಿರಲು, ಹರಿಶ್ಚಂದ್ರನು ತನ್ನ ಎಡಭಾಗದಲ್ಲಿ ಮಗ ಲೋಹಿತಾಶ್ವನನ್ನು, ಹಿಂಭಾಗದಲ್ಲಿ ಹೆಂಡತಿ ಚಂದ್ರಮತಿಯನ್ನು ಒಡಗೂಡಿಕೊಂಡು ನಡೆಯುತ್ತಿರಲು, ಮನಸ್ಸಿನಲ್ಲಿ ತನ್ನ ರಾಜಪದವಿ, ಸಂಪತ್ತನ್ನು ವಿಶ್ವಾಮಿತ್ರನಿಗೆ ಧಾರೆ ಎರೆದು, ಆತನ ಒಡೆತನವನ್ನು ಒಪ್ಪಿಕೊಂಡು, ತನ್ನ ಸರ್ವಸ್ವವನ್ನು ಆತನಿಗೆ ವಹಿಸಿಕೊಟ್ಟ ದುಃಖ, ನೋವು ಹರಿಶ್ಚಂದ್ರನನ್ನು ಕಾಡುತ್ತಿರಲು, ವಿಶ್ವಾಮಿತ್ರನಿಗೆ ದಕ್ಷಿಣೆಯ ಹೊನ್ನನ್ನು ಕೊಡುತ್ತೇನೆ ಎಂದು ನೀಡಿದ ಭಾಷೆಯನ್ನು ಈಡೇರಿಸಲು, ಪರಾಕ್ರಮಿಯಾದ ಹರಿಶ್ಚಂದ್ರನು ಯಾರ ನೆರವನ್ನೂ ಬಯಸದೆ, ದಕ್ಷಿಣ ದಿಕ್ಕನ್ನು ಬಿಟ್ಟು, ದಟ್ಟಕಾನನದೊಳಗೆ  ಉತ್ತರ ದಿಕ್ಕಿನ ಕಡೆಗೆ ಹೊರಟನು. 

(ವಿಶ್ವಾಮಿತ್ರನೊಂದಿಗಿನ ವಾಗ್ವಾದದ ಸಂದರ್ಭದಲ್ಲಿ ಆಡಿದ ಮಾತಿಗೆ ಕಟ್ಟುಬಿದ್ದು ತನ್ನ ರಾಜ್ಯ ಸರ್ವಸ್ವವನ್ನೂ ವಿಶ್ವಾಮಿತ್ರನಿಗೆ ಧಾರೆ ಎರೆದರೂ ಆತನಿಗೆ ಕೊಡಬೇಕಾದ ಬಹುಸುವರ್ಣ ಯಾಗದ ದಕ್ಷಿಣೆಯ ಹಣವನ್ನು ಪ್ರತ್ಯೇಕವಾಗಿ ಸಂದಾಯ  ಮಾಡಬೇಕಾದ ಅನಿವಾರ್ಯತೆ ಉಂಟಾಗಿ ಅದರ ಸಂಪಾದನೆಗೆಂದು ಹರಿಶ್ಚಂದ್ರ ತನ್ನ ಹೆಂಡತಿ, ಮಗನೊಂದಿಗೆ ರಾಜ್ಯವನ್ನು ತ್ಯಜಿಸಿ ಹೊರಡಬೇಕಾದ ದಾರುಣ ಪರಿಸ್ಥಿತಿಯೂ ಒದಗಿತು. ಹರಿಶ್ಚಂದ್ರನನ್ನು ಅನುಸರಿಸಿಕೊಂಡು ಆತನ ನಿಷ್ಠಾವಂತ ಮಂತ್ರಿ ವಸುಕೀರ್ತಿಯೂ ಹರಿಶ್ಚಂದ್ರನಿಗೆ ಜೊತೆಯಾಗಿ ಹೊರಟನು. ತಾನು ಮುಂದೆ ನಡೆಯುತ್ತ, ಹರಿಶ್ಚಂದ್ರನ ಪರಿವಾರಕ್ಕೆ ದಾರಿಯನ್ನು ತೋರಿಸತೊಡಗಿದನು. ಆತನ ಹಿಂದೆ ಹರಿಶ್ಚಂದ್ರನು ನಡೆಯುತ್ತ, ತನ್ನ ಎಡಭಾಗದಲ್ಲಿ ಮಗನನ್ನು ಕೈಹಿಡಿದು ನಡೆಸುತ್ತ, ಹಿಂಭಾಗದಲ್ಲಿ ಹೆಂಡತಿಯನ್ನು ಒಡಗೂಡಿಕೊಂಡು ನಡೆಯತೊಡಗಿದನು. ಹಲವು ಚಿಂತೆ, ಬೇಸರಗಳು ಆತನ ಮನಸ್ಸನ್ನು ನೋಯಿಸುತ್ತಿವೆ. ಒಂದೆಡೆ ಪರಂಪರೆಯಿಂದ ಬಂದ ತನ್ನ ರಾಜ್ಯ, ಅಧಿಪತ್ಯ, ಭಂಡಾರ, ಚತುರಂಗಬಲವೆಲ್ಲವನ್ನೂ ವಿಶ್ವಾಮಿತ್ರನಿಗೆ ಧಾರೆ ಎರೆಯಬೇಕಾದ ಅನಿವಾರ್ಯತೆ. ಇನ್ನೊಂದೆಡೆ, ಆತನ ಯಾಗದಕ್ಷಿಣೆಯ ಹಣವನ್ನು ಅವಧಿಯೊಳಗೆ  ಸಂಪಾದಿಸಿ ಕೊಟ್ಟು ತನ್ನ ಮಾತನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ, ಅವೆಲ್ಲವನ್ನೂ ತೀರಿಸಿಕೊಳ್ಳುವುದಕ್ಕೆ ದಾರಿಯ ಹುಡುಕಾಟ. ಮತ್ತೊಂದೆಡೆ, ದೇಶಭ್ರಷ್ಟನಾಗಿ ಬದುಕಬೇಕಾದ ದಯನೀಯ ಸ್ಥಿತಿ. ಅರಮನೆಯ ಸುಖದ ಬದುಕಿಗೆ ಹೊಂದಿಕೊಂಡಿದ್ದ ಹೆಂಡತಿ ಮಗನನ್ನು ಕಾಪಾಡಬೇಕಾದ ಪರಿಸ್ಥಿತಿ –ಹೀಗೆ ಹಲವು ರೀತಿಯ ನೋವು, ಅಸಹಾಯಕತೆ, ಬೇಸರ, ದುಃಖಗಳು ಆತನ ಮನಸ್ಸನ್ನು ಘಾಸಿಗೊಳಿಸುತ್ತಿದ್ದವು. ಆದರೂ ಪರಾಕ್ರಮಿಯಾದ ಹರಿಶ್ಚಂದ್ರನು ಧೈರ್ಯವನ್ನು ತಂದುಕೊಂಡು ಯಾರ ನೆರವನ್ನೂ ಬಯಸದೆ ಮೊದಲು ವಿಶ್ವಾಮಿತ್ರನಿಗೆ ನೀಡಿದ ಭಾಷೆಯನ್ನು ಉಳಿಸಿಕೊಳ್ಳಬೇಕೆಂಬ ದೃಢವಿಶ್ವಾಸದಿಂದ ದಟ್ಟವಾದ ಕಾಡಿನಲ್ಲಿ ನಡೆಯತೊಡಗಿದನು.)

 

ಸುತನನಡಿಗಡಿಗೆತ್ತಿಕೊಂಬ ನಡೆಗೆಡುವ ನಿಜ

ಸತಿಯನಡಿಗಡಿಗೆ ಬೋಳೈಪ ಬಳಲುವ ಚಮೂ

ಪತಿಯನಡಿಗಡಿಗೆ ಬಿಡದುಪಚರಿಪ ಚಿತ್ತದಾವೇಶದಗ್ರದ ಭರದಲಿ

ಅತಿಬಿಸಿಲು ಗಾಳಿ ಕಲು ಮುಳು ಕ್ಷುತ್ಪಿಪಾಸೆ ಜಾ

ಡ್ಯತೆಗಳೆಂಬಿಂತಿವಱ ಕಾಟದಿಂ ಮೊಳೆವ ಧಾ

ವತಿಯನಱಿಯದೆ ನಡೆದನಕಟಕಟ ಭೂಮಿಪಂ ಕಾಲಕ್ಕೆ ಕೈಮುಗಿಯುತ  ೨

ಪದ್ಯದ ಅನ್ವಯಕ್ರಮ:

ಸುತನನ್ ಅಡಿಗಡಿಗೆ ಎತ್ತಿಕೊಂಬ, ನಡೆ ಕೆಡುವ ನಿಜ ಸತಿಯನ್ ಅಡಿಗಡಿಗೆ ಬೋಳೈಪ, ಬಳಲುವ ಚಮೂಪತಿಯನ್ ಬಿಡದೆ ಅಡಿಗಡಿಗೆ ಉಪಚರಿಪ, ಚಿತ್ತದ ಆವೇಶದ ಅಗ್ರದ ಭರದಲಿ ಅತಿ ಬಿಸಿಲು, ಗಾಳಿ, ಕಲು, ಮುಳು, ಕ್ಷುತ್ ಪಿಪಾಸೆ, ಜಾಡ್ಯತೆಗಳ್ ಎಂಬ ಇಂತು ಇವಱ ಕಾಟದಿಂ ಮೊಳೆವ ಧಾವತಿಯನ್ ಅಱಿಯದೆ ಅಕಟಕಟ ಭೂಮಿಪಂ ಕಾಲಕ್ಕೆ ಕೈಮುಗಿಯುತ ನಡೆದನ್

ಪದ-ಅರ್ಥ:

ಸುತ-ಮಗ(ಲೋಹಿತಾಶ್ವ);  ಅಡಿಗಡಿಗೆ-ಹೆಜ್ಜೆಹೆಜ್ಜೆಗೂ;  ಎತ್ತಿಕೊಂಬ-ಎತ್ತಿಕೊಳ್ಳುವ;  ನಡೆಗೆಡುವ-ನಡೆಯಲಾಗದೆ ಸೋಲುವ;  ನಿಜಸತಿ-ತನ್ನ ಹೆಂಡತಿ(ಚಂದ್ರಮತಿ);  ಬೋಳೈಪ-ಸಮಾಧಾನಿಸುವ;  ಬಳಲುವ-ಆಯಾಸಗೊಳ್ಳುವ;  ಚಮೂಪತಿ-ಸೇನಾಧಿಪತಿ, ಮಂತ್ರಿ;  ಬಿಡದೆ-ನಿರಂತರವಾಗಿ;  ಉಪಚರಿಪ-ಸಮಾಧಾನಿಸುವ; ಚಿತ್ತದಾವೇಶದಗ್ರ-ಮನಸ್ಸಿನ ಗೊಂದಲದ ಪರಾಕಾಷ್ಠೆ;  ಅತಿಬಿಸಿಲು-ಸುಡುಬಿಸಿಲು;  ಕಲು-ಕಲ್ಲು;  ಮುಳು-ಮುಳ್ಳು;  ಕ್ಷುತ್ಪಿಪಾಸೆ(ಕ್ಷುತ್+ಪಿಪಾಸೆ) ಹಸಿವು ಮತ್ತು ಬಾಯಾರಿಕೆ;  ಜಾಡ್ಯತೆ-ಜಡತೆ; ರೋಗ;  ಇಂತಿವಱ-ಇವೆಲ್ಲದರ;  ಕಾಟ-ತೊಂದರೆ;  ಮೊಳೆವ-ಹುಟ್ಟುವ;  ಧಾವತಿ-ಆಯಾಸ;  ಭೂಮಿಪಂ-ರಾಜ(ಹರಿಶ್ಚಂದ್ರ);  ಕಾಲಕ್ಕೆ ಕೈಮುಗಿಯುತ-ಎದುರಾದ ಪರಿಸ್ಥಿತಿಯನ್ನು ಒಪ್ಪಿಕೊಳುತ್ತ. 

ನಡೆಯಲಾಗದ ಮಗ  ಲೋಹಿತಾಶ್ವನನ್ನು ಹೆಜ್ಜೆಹೆಜ್ಜೆಗೂ ಎತ್ತಿಕೊಳ್ಳುವ, ದಾರಿ ನಡೆಯಲಾಗದೆ ಸೋಲುವ ತನ್ನ ಹೆಂಡತಿಯಾದ ಚಂದ್ರಮತಿಯನ್ನು ಹೆಜ್ಜೆಹೆಜ್ಜೆಗೂ ಸಮಾಧಾನಿಸುವ, ಆಯಾಸಗೊಳ್ಳುವ ಸೇನಾಧಿಪತಿ(ಮಂತ್ರಿ)ಯನ್ನು ನಿರಂತರ ಉಪಚರಿಸುವ, ಮನಸ್ಸಿನಲ್ಲಿನ ಗೊಂದಲದ ಪರಾಕಾಷ್ಠೆಯಲ್ಲಿಯೂ ಅತಿಯಾದ ಬಿಸಿಲು, ಗಾಳಿ, ಕಲ್ಲು, ಮುಳ್ಳು, ಹಸಿವು, ಬಾಯಾರಿಕೆ, ಜಡತೆ ಇವೆಲ್ಲದರ ತೊಂದರೆಗಳಿಂದ ಉಂಟಾಗುವ ಆಯಾಸವನ್ನು ಲೆಕ್ಕಿಸದೆ ಹರಿಶ್ಚಂದ್ರನು ಎದುರಾದ ಪರಿಸ್ಥಿತಿಯನ್ನು ಒಪ್ಪಿಕೊಳ್ಳುತ್ತ ನಡೆಯತೊಡಗಿದನು.

(ಹರಿಶ್ಚಂದ್ರನಾಗಲೀ ಚಂದ್ರಮತಿಯಾಗಲೀ ಲೋಹಿತಾಶ್ವನಾಗಲೀ ಅಥವಾ ಹರಿಶ್ಚಂದ್ರನ ಮಂತ್ರಿಯಾಗಲೀ ಅರಮನೆಯಲ್ಲಿಯೇ ಬೆಳೆದು ಪಟ್ಟಣದಲ್ಲಿ ಬದುಕಿದ್ದವರಲ್ಲದೆ ಕಾಡುಮೇಡುಗಳಲ್ಲಿ ಅಲೆದಾಡಿದವರಲ್ಲ. ಅನಿವಾರ್ಯವಾಗಿ ನಾಡನ್ನು ಬಿಟ್ಟು ಕಾಡಿನ ದಾರಿ ಹಿಡಿಯಬೇಕಾದ ಸಂದರ್ಭದಲ್ಲಿ ಕ್ಷಣಕ್ಷಣಕ್ಕೂ ಸಮಸ್ಯೆಗಳಾಗುವುದು ಸಹಜ. ಬಾಲಕ ಲೋಹಿತಾಶ್ವ ನಡೆಯಲಾಗದೆ ಬಳಲಿದಾಗ  ಆತನನ್ನು ಎತ್ತಿಕೊಂಡು ನಡೆಯುವ, ದಾರಿನಡೆಯಲಾಗದೆ ಬಳಲುತ್ತಿರುವ ಚಂದ್ರಮತಿಯನ್ನು ಹೆಜ್ಜೆಹೆಜ್ಜೆಗೂ ಸಮಾಧಾನಿಸುವ, ಆಯಾಸಗೊಳ್ಳುತ್ತಿರುವ ಮಂತ್ರಿಯನ್ನು ಕ್ಷಣಕ್ಷಣಕ್ಕೂ ಉಪಚರಿಸುವ ಜವಾಬ್ದಾರಿ ಹರಿಶ್ಚಂದ್ರನದು. ತಾನು ಸ್ವತಃ ಎಲ್ಲವನ್ನೂ ಕಳೆದುಕೊಂಡು ಮಾನಸಿಕವಾಗಿ, ದೈಹಿಕವಾಗಿ ಜರ್ಜರಿತನಾಗಿದ್ದರೂ ಅದನ್ನು ತೋರ್ಪಡಿಸಿಕೊಳ್ಳದೆ ತನ್ನವರನ್ನು ಸಮಾಧಾನಿಸುವ ಅನಿವಾರ್ಯತೆ ಒದಗುತ್ತದೆ. ಆತನಿಗೆ ರಾಜ್ಯವನ್ನು ಕಳೆದುಕೊಂಡ ದುಃಖ, ವೈಭವದ ಸುಪ್ಪತ್ತಿಗೆಯಲ್ಲಿ ಬದುಕಬೇಕಾದ ಹೆಂಡತಿ, ಮಗನನ್ನು ನಿರ್ಗತಿಕರನ್ನಾಗಿ ಮಾಡಿದ ದುಃಖ, ಅಸಹಾಯಕತೆಗಳ ಜೊತೆಗೆ ರಥದಲ್ಲೋ ಅಂಬಾರಿಯಲ್ಲೋ ಕುದುರೆಯ ಮೇಲೋ ವಿಹರಿಸುತ್ತಿದ್ದವನಿಗೆ, ಅರಮನೆಯಲ್ಲಿ ಬೇಕುಬೇಕಾದುದೆಲ್ಲವನ್ನೂ ಕ್ಷಣಮಾತ್ರದಲ್ಲಿ ಈಡೇರಿಸಿಕೊಂಡು ಸುಖವಾಗಿ ದಿನಗಳೆಯುತ್ತಿದ್ದವನಿಗೆ, ಅರಮನೆಯ ಸೇವಕವರ್ಗದಿಂದ ಪರಿಚಾರಿಕೆ ಮಾಡಿಸಿಕೊಳ್ಳುತ್ತಿದ್ದವನಿಗೆ ಇಂದು ಅವೆಲ್ಲವನ್ನೂ ಕಳೆದುಕೊಂಡು ರಾಜ್ಯಭ್ರಷ್ಟನಾಗಿ ಬರಿಗಾಲಲ್ಲಿ ನಡೆದುಕೊಂಡು ಹೆಂಡತಿ, ಮಗನನ್ನು ನಡೆಸಿಕೊಂಡು ಹೋಗುವ, ಜೊತೆಗೆ ಅಗಣಿತವಾದ ಸಾಲವನ್ನು ತೀರಿಸಿಕೊಳ್ಳುವ ಜವಾಬ್ದಾರಿಯನ್ನು ತಲೆಯ ಮೇಲೆ ಹೊತ್ತು ಸಾಗುವ ಅನಿವಾರ್ಯತೆ ಒದಗಿದೆ. ಇಷ್ಟಾದರೂ ಹರಿಶ್ಚಂದ್ರ ತನ್ನ ನೋವನ್ನು, ದುಃಖವನ್ನು, ಅಸಹಾಯಕತೆಯನ್ನು, ಹಸಿವು, ಬಾಯಾರಿಕೆಗಳನ್ನು ಲೆಕ್ಕಿಸದೆ ಉಳಿದವರನ್ನು ಹೆಜ್ಜೆಹೆಜ್ಜೆಗೂ ಸಮಾಧಾನಿಸುತ್ತ ನಡೆಯುತ್ತಿದ್ದಾನೆ. ಎದುರಾದ ಪರಿಸ್ಥಿತಿಯನ್ನು ಒಪ್ಪಿಕೊಂಡು ಮುಂದಿನ ಜವಾಬ್ದಾರಿ ಹಾಗೂ ಗುರಿಗಳನ್ನು ಮಾತ್ರ ಮನಸ್ಸಿನಲ್ಲಿಟ್ಟುಕೊಂಡವನಿಗೆ ತನಗಾಗುತ್ತಿರುವ ಆಯಾಸವಾಗಲೀ, ನೋವಾಗಲೀ, ದುಃಖವಾಗಲೀ ಆತನ ಗಮನಕ್ಕೆ ಬರುತ್ತಿಲ್ಲ.)

 

ಮಂದೈಪ ಬಿಸಿಲ ಬಿಸಿಯಿಂ ನೆತ್ತಿ ನೆಲನ ಬಿಸಿ

ಯಿಂದ ಕಾಲ್ ಕಡುಗಲಿಸಿ ಕವಿವ ಕಾದೆಲರ ಬಿಸಿ

ಯಿಂದ ದೇಹಂ ಕ್ಷುಧಾನಲನ ಬಿಸಿಯಿಂದೊಳಗು ತೃಷೆಯ ಬಿಸಿಯಿಂದ ಬಾಯಿ

ಬೆಂದು ಬಿರಿದರಳುತ್ತ ಸಾಯುತ್ತ ನೋಯುತ್ತ

ನಿಂದು ನಡೆದಳುಕುತ್ತ ಬಳುಕುತ್ತ ಬರಬರಲು

ಮುಂದೆ ಬಳಿಕೇವೊಗಳ್ವೆನಕಟ ನಿಷ್ಕರುಣಮುನಿ ನೆನೆದ ಕುಟಿಲದ ಕುಂದನು  ೩

ಪದ್ಯದ ಅನ್ವಯಕ್ರಮ:

ಮಂದೈಪ ಬಿಸಿಲ ಬಿಸಿಯಿಂ ನೆತ್ತಿ, ನೆಲನ ಬಿಸಿಯಿಂ ಕಾಲ್, ಕಡುಗಲಿಸಿ ಕವಿವ ಕಾದ ಎಲರ ಬಿಸಿಯಿಂದ ದೇಹಂ, ಕ್ಷುಧಾ ಅನಲನ ಬಿಸಿಯಿಂದ ಒಳಗು, ತೃಷೆಯ ಬಿಸಿಯಿಂದ ಬಾಯಿ, ಬೆಂದು ಬಿರಿದು, ಅರಳುತ್ತ, ಸಾಯುತ್ತ, ನೋಯುತ್ತ, ನಿಂದು ನಡೆದು, ಅಳುಕುತ್ತ, ಬಳುಕುತ್ತ, ಬರ ಬರಲು ಮುಂದೆ ಬಳಿಕ ಅಕಟ ನಿಷ್ಕರುಣ ಮುನಿ ನೆನೆದ ಕುಟಿಲದ ಕುಂದನು ಏ ಪೊಗಳ್ವೆನ್?

ಪದ-ಅರ್ಥ:

ಮಂದೈಪ-ದಟ್ಟವಾಗುವ;  ಬಿಸಿಲ ಬಿಸಿ-ಬಿಸಿಲಿನ ತಾಪ;  ನೆತ್ತಿ-ತಲೆ;  ನೆಲನ ಬಿಸಿ-ಭೂಮಿಯ ತಾಪ; ಕಡುಗಲಿಸಿ-ವ್ಯಾಪಕವಾಗಿ;  ಕವಿವ-ಮುತ್ತುವ; ಆವರಿಸುವ;  ಕಾದೆಲರ(ಕಾದ+ಎಲರ)-ಬಿಸಿಯಾದ ಗಾಳಿಯ;  ಕ್ಷುಧಾನಲನ ಬಿಸಿ-ಹಸಿವೆಯ ಬೆಂಕಿ;  ಬಿಸಿ-ತಾಪ;  ಒಳಗು-ಹೊಟ್ಟೆ;  ತೃಷೆ-ಬಾಯಾರಿಕೆ;  ಬೆಂದು-ಒಣಗಿ;  ಬಿರಿದರಳುತ್ತ-ಹೆಚ್ಚಾಗುತ್ತ;  ಸಾಯುತ್ತ-ಸಾವಿನ ಸಂಕಟವನ್ನು ಅನುಭವಿಸುತ್ತ; ನೋಯುತ್ತ-ನೋವನ್ನು ಅನುಭವಿಸುತ್ತ; ನಿಂದು ನಡೆದು-ಅಲ್ಲಲ್ಲಿ ನಿಂತುಕೊಂಡು ನಡೆಯುತ್ತ;  ಅಳುಕುತ್ತ-ಸೋಲುತ್ತ; ಬಳುಕುತ್ತ-ತೊನೆದಾಡುತ್ತ;  ಬರಬರಲು-ಬರುತ್ತಿರಲು;  ಏವೊಗಳ್ವೆನು-ಏನೆಂದು ಹೊಗಳಲಿ;  ನಿಷ್ಕರುಣ ಮುನಿ-ಕರುಣೆಯಿಲ್ಲದ ಮುನಿ(ವಿಶ್ವಾಮಿತ್ರ);  ನೆನೆದ-ಹೂಡಿದ;  ಕುಟಿಲ-ಕುತಂತ್ರ;  ಕುಂದು-ಕಾಟ.

ದಟ್ಟವಾಗಿರುವ ಬಿಸಿಲಿನ ತಾಪದಿಂದಾಗಿ ತಲೆ, ಭೂಮಿಯ ತಾಪದಿಂದ ಪಾದಗಳು, ವ್ಯಾಪಕವಾಗಿ ಆವರಿಸುತ್ತಿರುವ ಬಿಸಿಗಾಳಿಯಿಂದ ದೇಹ,  ಹಸಿವಿನ ಬೆಂಕಿಯಿಂದ ಹೊಟ್ಟೆ, ಬಾಯಾರಿಕೆಯ ಬಿಸಿಯಿಂದ ಬಾಯಿ ಒಣಗಿ, ಇವೆಲ್ಲವೂ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದಂತೆಯೇ ಸುತ್ತಲೂ ಆವರಿಸಿಕೊಳ್ಳುತ್ತಿರುವ ಬಿಸಿಯಾದ ಗಾಳಿಯಿಂದಾಗಿ ಹೆಜ್ಜೆಹೆಜ್ಜೆಗೂ ನಡೆಯಲಾಗದೆ ಸೋಲುತ್ತ, ತೊನೆದಾಡುತ್ತ ಬರುತ್ತಿರಲು ನಿಷ್ಕರುಣ ಮುನಿ ಎನಿಸಿಕೊಂಡಿರುವ ವಿಶ್ವಾಮಿತ್ರನು ಹೂಡಿದ ಕುತಂತ್ರದ ಕಾಟವನ್ನು ಏನೆಂದು ವರ್ಣಿಸಲಿ?

(ಎಲ್ಲ ಸಂಪತ್ತನ್ನು, ಸೌಲಭ್ಯ ಸವಲತ್ತುಗಳನ್ನು ಕಳೆದುಕೊಂಡ ಹರಿಶ್ಚಂದ್ರ ಪರಿವಾರ ಸಮೇತನಾಗಿ ನಿರ್ಗತಿಕನಂತೆ ಹೊರಟಿದ್ದಾನೆ. ಅವನಾಗಲೀ ಆತನ ಹೆಂಡತಿ, ಮಗನಾಗಲೀ ಅದುವರೆಗೂ ಬಿಸಿಲಿನ ತಾಪಕ್ಕೆ ತಮ್ಮ ಒಡ್ಡಿಕೊಂಡವರಲ್ಲ. ಅರಮನೆಯಿಂದ ಹೊರಹೊರಡುವುದಕ್ಕೆ ರಥ, ಕುದುರೆಗಳ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಹಸಿವಾದಾಗ ಬೇಕುಬೇಕಾದ ಆಹಾರವ್ಯವಸ್ಥೆ, ಪರಿಚರ್ಯೆಯ  ವ್ಯವಸ್ಥೆಗಳೆಲ್ಲವೂ ಇದ್ದುವು. ಅವುಗಳಲ್ಲಿ ಯಾವ ಕೊರತೆಯೂ ಇರಲಿಲ್ಲ. ಆದರೆ ಇಂದು ಅವೆಲ್ಲವುಗಳನ್ನು ಕಳೆದುಕೊಂಡು, ಪ್ರಯಾಣಕ್ಕೆ ಸೂಕ್ತ ವ್ಯವಸ್ಥೆಯಿಲ್ಲದೆ ಬರಿಗಾಲಲ್ಲಿ ನಡೆಯುವ, ಕೊಡೆಯಿಲ್ಲದೆ ಬಿಸಿಲಿನ ಝಳಕ್ಕೆ ಮೈಯೊಡ್ಡುತ್ತ ಆಯಾಸಗೊಳ್ಳುವ, ಕಾಲಕಾಲಕ್ಕೆ ಊಟದ ವ್ಯವಸ್ಥೆಯಿಲ್ಲದೆ ಹಸಿದು ಕಂಗಾಲಾಗುವ, ಕುಡಿಯುವುದಕ್ಕೆ ನೀರಿಲ್ಲದೆ ಬಾಯೊಣಗಿ ಪರಿತಪಿಸುವ ದಾರುಣ ಪರಿಸ್ಥಿತಿ ಎದುರಾಗಿದೆ.  ತನ್ನ ಮನಸ್ಸಿನ ನೋವು, ದುಃಖ, ಅಸಹಾಯಕತೆ, ಸಾಲದ ಹೊರೆಗಳು ಆತನನ್ನು ಜರ್ಜರಿತನನ್ನಾಗಿ ಮಾಡುತ್ತಿವೆ. ಹೊರಗಿನ ಪ್ರಕೃತಿಯಲ್ಲಿನ ಪರಿಸ್ಥಿತಿಯೂ ಆತನ ಸ್ಥಿತಿಗತಿಗಳಿಗೆ ವ್ಯತಿರಿಕ್ತವಾಗಿ ಪರಿವರ್ತಿತವಾಗುತ್ತಿದೆ. ತನ್ನ ಕಷ್ಟಗಳ ಜೊತೆಗೆ ತನ್ನವರಿಗಾಗುತ್ತಿರುವ ಕಷ್ಟ, ಹಿಂಸೆ, ನೋವುಗಳನ್ನು ತಾನು ಕಣ್ಣಾರೆ ಕಂಡು ಮರುಗಬೇಕಾದ ಸ್ಥಿತಿಯೂ ಒದಗಿದೆ. ಮೊದಲೇ ಇವೆಲ್ಲವುಗಳಿಂದ ನೊಂದು ಕಂಗಾಲಾಗಿರುವ ಹರಿಶ್ಚಂದ್ರನನ್ನು ಇನ್ನಷ್ಟು ಕಷ್ಟಕ್ಕೀಡುಮಾಡಬೇಕೆಂದು ವಿಶ್ವಾಮಿತ್ರನು ಕುತಂತ್ರದ ಆಟವನ್ನು ಹೂಡಿದನು.)

 

ಮುಟ್ಟಿ ಕಾಶಿಯನು ಹೊಕ್ಕವನಲ್ಲ ಮುನಿರಿಣವ

ಕೊಟ್ಟಾತನಲ್ಲ ದಾನದ ಭೂಮಿಯಿಂದ ಪೊಱ

ಮಟ್ಟಾತನಲ್ಲಾಯು ತುಂಬಿ ಮಡಿದವನಲ್ಲ ಹೋಹಡಾನೊಬ್ಬನಸುವ

ಬಿಟ್ಟಾತನಲ್ಲ ನಿಜಸತಿಸುತರ್ ಮಂತ್ರಿ ಸಹ

ನಟ್ಟಡವಿಯೊಳಗೆ ದಳ್ಳುರಿಹೊಯ್ದು ದುರ್ಮರಣ

ವಟ್ಟು ಹೋಹಂತಾದುದೇ ಎಂದು ನೃಪತಿ ಮಱುಗುತ್ತ ಮತ್ತಿಂತೆಂದನು  ೪

ಪದ್ಯದ ಅನ್ವಯಕ್ರಮ:

ಕಾಶಿಯನು ಮುಟ್ಟಿ ಹೊಕ್ಕಾತನಲ್ಲ, ಮುನಿರಿಣವ ಕೊಟ್ಟಾತನಲ್ಲ, ದಾನದ ಭೂಮಿಯಿಂದ ಪೊಱಮಟ್ಟಾತನಲ್ಲ, ಆಯು ತುಂಬಿ ಮಡಿದವನಲ್ಲ, ಹೋಹಡೆ ಆನೊಬ್ಬನ್ ಅಸುವ ಬಿಟ್ಟಾತನಲ್ಲ, ನಿಜ ಸತಿ ಸುತರ್, ಮಂತ್ರಿ ಸಹ ನಟ್ಟಡವಿಯೊಳಗೆ ದಳ್ಳುರಿ ಹೊಯ್ದು ದುರ್ಮರಣವಟ್ಟು ಹೋಹಂತೆ ಆದುದೇ ಎಂದು ನೃಪತಿ ಮಱುಗುತ್ತ ಮತ್ತಿಂತೆಂದನು.

ಪದ-ಅರ್ಥ:

ಮುಟ್ಟಿ-ತಲುಪಿ;  ಹೊಕ್ಕವನಲ್ಲ-ಪ್ರವೇಶಿಸಿಲ್ಲ;  ಮುನಿರಿಣ-ಮುನಿಯ ಸಾಲ(ವಿಶ್ವಾಮಿತ್ರನಿಗೆ ಕೊಡಬೇಕಾದ ಹಣ);  ಕೊಟ್ಟಾತನಲ್ಲ-ತೀರಿಸಿಲ್ಲ;  ದಾನದ ಭೂಮಿ-ವಿಶ್ವಾಮಿತ್ರನಿಗೆ ದಾನಕೊಟ್ಟ ಭೂಮಿ(ಹರಿಶ್ಚಂದ್ರನ ರಾಜ್ಯ);  ಪೊಱಮಟ್ಟಾತನಲ್ಲ-ಹೊರಹೊರಟಿಲ್ಲ; ಆಯುತುಂಬಿ-ಆಯುಷ್ಯ ಭರ್ತಿಯಾಗಿ, ಪ್ರಾಯಕಳೆದು; ಮಡಿದವನಲ್ಲ-ಸತ್ತವನಲ್ಲ;  ಹೋಹಡೆ-ಸಾಯುವುದಾದರೆ; ಆನೊಬ್ಬನ್-ನಾನೊಬ್ಬನೇ;  ಅಸುವ-ಪ್ರಾಣವನ್ನು;  ಬಿಟ್ಟಾತನಲ್ಲ-ಬಿಡಬೇಕಲ್ಲದೆ;  ನಿಜಸತಿಸುತರ್-ತನ್ನ ಹೆಂಡತಿ ಮತ್ತು ಮಗ;  ನಟ್ಟಡವಿ-ದಟ್ಟವಾದ ಕಾಡು;  ದಳ್ಳುರಿ-ಕಾಡಿನಲ್ಲಿ ಹಬ್ಬಿದ ಬೆಂಕಿ;  ಹೊಯ್ದು-ಹೊಡೆದು, ತಾಗಿ;  ದುರ್ಮರಣವಟ್ಟು-ಅಸಹಜ ಮರಣಕ್ಕೀಡಾಗಿ, ಕೆಟ್ಟ ಮರಣಕ್ಕೆ ತುತ್ತಾಗಿ;  ಹೋಹಂತಾದುದೇ-ಹೋಗುವಂತಾಯಿತೇ;  ನೃಪತಿ-ರಾಜ(ಹರಿಶ್ಚಂದ್ರ);  ಮಱುಗುತ್ತ-ದುಃಖಿಸುತ್ತ; ಮತ್ತಿಂತೆಂದನು-ಮತ್ತೆ ಹೀಗೆಂದನು. 

ತಾನಿನ್ನೂ ಕಾಶಿಯನ್ನು ತಲುಪಿಲ್ಲ, ಕಾಶಿಯ ಪಟ್ಟಣವನ್ನು ಪ್ರವೇಶಿಸಿಲ್ಲ, ಮುನಿ ಋಣವನ್ನು ಇನ್ನೂ ತೀರಿಸಿಲ್ಲ, ವಿಶ್ವಾಮಿತ್ರಮುನಿಗೆ ದಾನಕೊಟ್ಟ ಭೂಮಿಯಿಂದ ಇನ್ನೂ ಹೊರಹೊರಟಿಲ್ಲ, ಸಾಯುವುದಕ್ಕೆ ಇನ್ನೂ ತನ್ನ ಆಯುಸ್ಸು ತುಂಬಿಲ್ಲ, ಸಾಯುವ ಸ್ಥಿತಿ ಬಂದರೆ ತಾನೊಬ್ಬನೇ ಸಾಯದೆ, ತನ್ನೊಂದಿಗೆ ತನ್ನ ಹೆಂಡತಿ, ಮಗ ಹಾಗೂ ಮಂತ್ರಿ ಕೂಡಾ ದಟ್ಟ ಕಾಡಿನೊಳಗೆ ಕಾಳ್ಗಿಚ್ಚಿಗೆ ಸಿಲುಕಿ ಸಾಯುವಂತಾಯಿತಲ್ಲ! ಎಂದು ಹರಿಶ್ಚಂದ್ರ ದುಃಖಿಸುತ್ತ ಮತ್ತೆ ಹೀಗೆಂದನು.

(ಹರಿಶ್ಚಂದ್ರ ಒಂದೆಡೆ ತಾನು ವಿಶ್ವಾಮಿತ್ರನಿಗೆ ಕೊಟ್ಟ ಮಾತಿನ ಪ್ರಕಾರ ಇನ್ನೂ ಕಾಶಿಪಟ್ಟಣಕ್ಕೆ ಹೋಗುವ ದಾರಿಯಲ್ಲಿಯೇ ಸಾಗುತ್ತಿದ್ದಾನೆ. ಅಸಾಧಾರಣವಾದ ಋಣದ ಹೊರೆ ಆತನ ತಲೆಯ ಮೇಲಿದೆ. ಅದನ್ನು ಆದಷ್ಟು ಬೇಗನೇ ತೀರಿಸಬೇಕಾಗಿದೆ. ಮೊದಲು ಋಣದ ಹೊರೆಯನ್ನು ಇಳಿಸಿಕೊಳ್ಳಬೇಕಾಗಿದೆ. ಹೀಗೆಂದು ಯೋಚಿಸುತ್ತ ನಡೆಯುತ್ತಿರುವ ಹರಿಶ್ಚಂದ್ರನ ಎದುರಲ್ಲಿ ಭೀಕರವಾಗಿ ಹಬ್ಬುತ್ತಿರುವ ದಾವಾಗ್ನಿ ಅವರೆಲ್ಲರನ್ನೂ ಸುಟ್ಟು ನಾಶಮಾಡಲು ಹವಣಿಸುತ್ತಿದೆ. ಕಾಳ್ಗಿಚ್ಚಿನಿಂದ ತಪ್ಪಿಸಿಕೊಳ್ಳುವಂತಿಲ್ಲ. ಕಾಳ್ಗಿಚ್ಚು ಹಬ್ಬುವ ರೀತಿಯನ್ನು ಪರಿಭಾವಿಸಿದರೆ ಅದು ತಮ್ಮೆಲ್ಲರನ್ನೂ ಸುಟ್ಟು ನಾಶಮಾಡುವುದಂತೂ ಸತ್ಯ. ಎಲ್ಲರೂ ಪ್ರಾಯಸಂದವರಾದರೆ ಯೋಚಿಸಬೇಕಾಗಿರಲಿಲ್ಲ. ಆದರೆ ಈ ಪ್ರಾಯದಲ್ಲಿ ತಾನಾಗಲೀ ತನ್ನ ಪರಿವಾರವಾಗಲೀ ಕಾಳ್ಗಿಚ್ಚಿಗೆ ಬಲಿಯಾಗುವುದು ನ್ಯಾಯವೆ? ಹೋಗಲಿ ತಾನೊಬ್ಬನಾದರೆ ಹಾಗಿರಲಿ, ತನ್ನೊಂದಿಗೆ ತನ್ನ ಹೆಂಡತಿ, ಮಗನಲ್ಲದೆ ತಮ್ಮೊಂದಿಗೆ ತನ್ನನ್ನೇ ನಂಬಿಕೊಂಡು ಬಂದಿರುವ ಮಂತ್ರಿಯೂ ಸಾಯುವಂತಹ ಪರಿಸ್ಥಿತಿ ಬಂತಲ್ಲ! ತನ್ನ ದೆಸೆಯಿಂದಾಗಿ ಅವರೆಲ್ಲರೂ ದುರ್ಮರಣಕ್ಕೆ ಈಡಾಗುವಂತಹ ದಾರುಣಸನ್ನಿವೇಶ ಪ್ರಾಪ್ತವಾಯಿತಲ್ಲ! ಎಂಬುದು ಹರಿಶ್ಚಂದ್ರನ ಅಳಲು. ಒಂದೆಡೆ ತಾನು ವಿಶ್ವಾಮಿತ್ರನಿಗೆ ನಲ್ವತ್ತೆಂಟು ದಿನಗಳೊಳಗೆ ಯಾಗದಕ್ಷಿಣೆಯನ್ನು ಸಂದಾಯಮಾಡುತ್ತೇನೆ ಎಂದು ನೀಡಿರುವ ಮಾತು, ಇನ್ನೊಂದೆಡೆ ಅದರ ಈಡೇರಿಕೆಗೆ ಅಡ್ಡಿಯಾಗಿರುವ ಈ ಕಾಳ್ಗಿಚ್ಚು. ಸಾಯುವಂತಿಲ್ಲ, ಬದುಕುವಂತೆಯೂ ಇಲ್ಲ ಎಂಬಂತಹ ಇಬ್ಬಗೆಯ ಸ್ಥಿತಿ ಹರಿಶ್ಚಂದ್ರನದು. ತಾನು ಋಣವನ್ನು ತೀರಿಸಲಾರದೆ ಸಾಯುವ ದಯನೀಯ ಸ್ಥಿತಿಯೂ ಬಂತಲ್ಲ! ಎಂದು ಹರಿಶ್ಚಂದ್ರ ಪರಿತಪಿಸುತ್ತಾನೆ.)

 

ಕಡಗಿ ಕರ್ಬೊಗೆ ಸುತ್ತಿ ದಳ್ಳುರಿಗಳಲೆದು ಕೆಂ

ಗಿಡಿಗೆದಱಿ ಕೆಂಡಂಗಳಡಸಿ ಸುಡೆ ಮಿಡುಮಿಡನೆ

ಮಿಡುಕಿ ಬಾಯ್ವಿಟ್ಟೊಱಲಿ ಕಡೆದೊಡಲು ಮಡಿದು ಕೈಕಾಲ್ ಬೆಂದು ಸುಕ್ಕಿ ಸುಗಿದು

ಮಡದಿ ಸುತರಳಿವುದನು ಕಣ್ಣಾಱ ಕಂಡು ನಾಂ

ಕಡೆಯಲಳಿವುದಱಿಂದ ಮುನ್ನವೀ ಬೇಗೆಯೊಳ

ಗಡಗುವೆಂ ಹಿಡಿಯಬೇಡುಮ್ಮಳಿಸಬೇಡೆಂದು ನೃಪಬೀಳಲನುವಾದನು  ೫

ಪದ್ಯದ ಅನ್ವಯಕ್ರಮ:

ಕಡಗಿ ಕರ್ಬೊಗೆ ಸುತ್ತಿ, ದಳ್ಳುರಿಗಳ್ ಅಲೆದು, ಕೆಂಗಿಡಿ ಕೆದಱಿ, ಕೆಂಡಂಗಳ್ ಅಡಸಿ ಸುಡೆ, ಮಿಡುಮಿಡನೆ ಮಿಡುಕಿ, ಬಾಯ್ವಿಟ್ಟು ಒಱಲಿ, ಕೆಡೆದು, ಒಡಲು ಮಡಿದು, ಕೈಕಾಲ್ ಬೆಂದು, ಸುಕ್ಕಿ ಸುಗಿದು, ಮಡದಿ ಸುತರ್ ಅಳಿವುದನು ಕಣ್ಣಾಱ ಕಂಡು ನಾಂ ಕಡೆಯಲಿ ಅಳಿವುದರಿಂದ ಮುನ್ನ ಈ ಬೇಗೆಯೊಳ್ ಅಡಗುವೆಂ ಹಿಡಿಯಬೇಡ, ಉಮ್ಮಳಿಸಬೇಡ ಎಂದು ನೃಪ ಬೀಳಲ್ ಅನುವಾದನು.

ಪದ-ಅರ್ಥ:

ಕಡಗಿ-ಆವೇಶಗೊಂಡು;  ಕರ್ಬೊಗೆ-ಕಪ್ಪಾದ ಹೊಗೆ;  ಸುತ್ತಿ-ಆವರಿಸಿ;  ದಳ್ಳುರಿ-ದೊಡ್ಡ ಬೆಂಕಿಜ್ವಾಲೆ;  ಅಲೆದು-ವ್ಯಾಪಿಸಿ; ಕೆಂಗಿಡಿಗೆದಱಿ-ಕೆಂಪಾದ ಕಿಡಿಗಳನ್ನು ಕೆದರಿಕೊಂಡು;  ಸುಡೆ-ಸುಡುತ್ತಿರಲು;  ಮಿಡುಮಿಡನೆ ಮಿಡುಕಿ-ಒಂದೇಸಮನೆ ಚಲಿಸಿ; ಬಾಯ್ವಿಟ್ಟು-ಜೋರಾಗಿ;  ಒಱಲಿ-ಬೊಬ್ಬೆಹಾಕಿ; ಕೆಡೆದು-ಬಿದ್ದು, ಉರುಳಿ;  ಒಡಲು-ದೇಹ;  ಮಡಿದು-ನಾಶವಾಗಿ;  ಬೆಂದು-ಸುಟ್ಟು;  ಸುಕ್ಕಿಸುಗಿದು-ಅತಿಯಾಗಿ ಹೆದರಿಕೊಂಡು;  ಅಳಿವುದನು-ಸಾಯುವುದನ್ನು;  ಕಡೆಯಲಿ-ಕೊನೆಯಲ್ಲಿ;  ಅಳಿವುದಱಿಂದ-ಸಾಯುವುದರಿಂದ;  ಮುನ್ನ-ಮೊದಲೇ;  ಈ ಬೇಗೆಯೊಳ್-ಈ ಬೆಂಕಿಯಲ್ಲಿ;  ಅಡಗುವೆಂ-ಬಿದ್ದುಬಿಡುತ್ತೇನೆ;  ಹಿಡಿಯಬೇಡ-ತಡೆಯಬೇಡ;  ಉಮ್ಮಳಿಸಬೇಡ-ದುಃಖಿಸಬೇಡ;  ನೃಪ-ರಾಜ(ಹರಿಶ್ಚಂದ್ರ) ಅನುವಾದನು-ಸಿದ್ಧನಾದನು.    

ದಾವಾಗ್ನಿಯು ಆವೇಶಗೊಂಡು ಸುತ್ತುತ್ತ ದೊಡ್ಡದಾಗಿ ಬೆಂಕಿ ಜ್ವಾಲೆಯನ್ನು ಬೀರುತ್ತ, ಕಾಡೆಲ್ಲವನ್ನೂ ವ್ಯಾಪಿಸಿಕೊಂಡು ಕೆಂಪಾದ ಕಿಡಿಗಳನ್ನು, ಕೆಂಡಗಳನ್ನು ಕೆದರಿಕೊಂಡು, ತೆಕ್ಕೆಗೆ ಸಿಕ್ಕಿದ್ದನ್ನು ಸುಡುತ್ತ ಬರುತ್ತಿರಲು, ಅದನ್ನು ಕಂಡು ಹರಿಶ್ಚಂದ್ರ ಹಾಗೂ ಆತನ ಪರಿವಾರ ಹೆದರಿಕೊಂಡು ಒಂದೇ ಸಮನೆ ಬೊಬ್ಬಿಡುತ್ತ ಅತ್ತಿತ್ತ ಓಡಾಡುತ್ತಿರಲು, ಈ ಕಾಳ್ಗಿಚ್ಚಿನಲ್ಲಿ ತನ್ನ ಹೆಂಡತಿ ಮಗ ಸಿಕ್ಕಿಹಾಕಿಕೊಂಡು ದೇಹವಲ್ಲ ಸುಟ್ಟುಕೊಂಡು ಸತ್ತುಹೋಗುವುದನ್ನು ಕಲ್ಪಿಸಿಕೊಂಡು ಹರಿಶ್ಚಂದ್ರನು ತಾನಿದೆಲ್ಲವನ್ನೂ ಕಣ್ಣಾರೆ ಕಂಡು ಕೊನೆಯಲ್ಲಿ ಸಾಯುವುದಕ್ಕಿಂತ ಎಲ್ಲರಿಗಿಂತ ಮೊದಲೇ ಈ ಕಾಳ್ಗಿಚ್ಚಿನಲ್ಲಿ ಸುಟ್ಟು ಸತ್ತುಹೋಗುತ್ತೇನೆ, ನನ್ನನ್ನು ತಡೆಯಬೇಡ, ದುಃಖಿಸಬೇಡ  ಎಂದು ಚಂದ್ರಮತಿಯನ್ನು ಸಮಾಧಾನಿಸುತ್ತ ಬೆಂಕಿಯಲ್ಲಿ ಬೀಳಲು ಸಿದ್ಧನಾದನು.

(ವಿಶ್ವಾಮಿತ್ರ ಮುನಿಯು ಸೃಷ್ಟಿಸಿದ ದಾವಾಗ್ನಿಯು ಅತ್ಯಂತ ಭೀಕರವಾಗಿ ಕಾಡಿನಲ್ಲೆಲ್ಲ ಹಬ್ಬುತ್ತ ಹಿರಿದಾದ ಗಾತ್ರದಲ್ಲಿ ಜ್ವಾಲೆಗಳನ್ನು  ಪಸರಿಸುತ್ತ, ಬಗೆಬಗೆಯಿಂದ ಕಿಡಿಗಳನ್ನು, ಕೆಂಡಗಳನ್ನು ಕೆದರುತ್ತ, ತನ್ನ ತೆಕ್ಕೆಗೆ ಸಿಕ್ಕಿದ್ದನ್ನು ಸುಟ್ಟು ನಾಶಮಾಡುತ್ತ ಬರುತ್ತಿರುವುದನ್ನು ಕಂಡು ಹರಿಶ್ಚಂದ್ರ ಹಾಗೂ ಆತನ ಪರಿವಾರವು ಹೆದರಿ ಹೌಹಾರಿ ಬೊಬ್ಬೆ ಹಾಕತೊಡಗಿತು. ಯಾವ ಕಡೆ ಓಡಿದರೂ ಸುತ್ತುವರಿದ ಕಾಳ್ಗಿಚ್ಚಿನಿಂದ ತಮ್ಮನ್ನು ರಕ್ಷಿಸಿಕೊಳ್ಳುವ ದಾರಿ ಕಾಣದೆ, ಹೆದರಿ ಒಂದೇ ಸಮನೆ ಬೊಬ್ಬಿಡುತ್ತ  ಅತ್ತಿತ್ತ ಓಡಾಡುವ ಅನಿವಾರ್ಯತೆ ಒದಗಿತು.  ಎಲ್ಲವನ್ನೂ ಸುಡುತ್ತ ಬರುತ್ತಿರುವ ಬೆಂಕಿಯು ತಮ್ಮನ್ನು ಸುಟ್ಟು ನಾಶಮಾಡದೆ  ಇರಲಾರದು ಎಂಬುದು ದೃಢವಾಯಿತು. ಹರಿಶ್ಚಂದ್ರ ಹಾಗೂ ಆತನ ಪರಿವಾರಕ್ಕೆ ತಾವಿನ್ನು ಈ ದಾವಾಗ್ನಿಯಿಂದ ಬದುಕಿ ಉಳಿಯುವುದು ಅಸಾಧ್ಯವೆನಿಸಿತು. ಒಂದೆಡೆ ವಿಶ್ವಾಮಿತ್ರನಿಗೆ ಕೊಟ್ಟ ಮಾತು ಹುಸಿಯಾಗುತ್ತದೆ, ಇನ್ನೊಂದೆಡೆ ತಾನು ತನ್ನ ಹೆಂಡತಿ ಮಗ ಹಾಗೂ ಮಂತ್ರಿಯನ್ನು ತನ್ನ ಕೈಯಾರೆ ಬೆಂಕಿಗಾಹುತಿ ಮಾಡಿದಂತಾಗುತ್ತದೆ ಎಂದೆಲ್ಲ ನೊಂದುಕೊಂಡ ಹರಿಶ್ಚಂದ್ರ ತಾನು ಕಂಗಾಲಾದರೂ ಬೊಬ್ಬಿಡುತ್ತಿರುವ ತನ್ನ ಹೆಂಡತಿ, ಮಗನನನ್ನು ಸಂತೈಸಿ, ಹೇಗಾದರೂ ಬದುಕುವ, ತನ್ನ ಸತ್ಯದ ವ್ರತವು ಭಂಗವಾದಂತೆ ಕಾಪಾಡಿಕೊಳ್ಳುವ ಭರದಲ್ಲಿ ಎಷ್ಟೇ ಪ್ರಯತ್ನಿಸಿದರೂ ತನ್ನನ್ನು ತನ್ನವರನ್ನು ಕಾಪಾಡಿಕೊಂಡು ತಪ್ಪಿಸಿಕೊಳ್ಳುವ ದಾರಿ ಕಾಣದೆ ಪರಿತಪಿಸುತ್ತಾನೆ. ಒಂದೆಡೆ ತನ್ನ ಹೆಂಡತಿ ಮಗ ಬೆಂಕಿಯಲ್ಲಿ ಸುಟ್ಟುಹೋಗುವುದನ್ನು ತಾನು ಕಣ್ಣಾರೆ ಕಾಣುವ ಪ್ರಸಂಗ ಒದಗಿತಲ್ಲ! ಎಂಬ ನೋವು ಹರಿಶ್ಚಂದ್ರನನ್ನು ಕಾಡುತ್ತದೆ. ಆದರೆ ತಾನು ಅಂತಹ ಪ್ರಸಂಗವನ್ನು ತನ್ನ ಕಣ್ಣಾರೆ ನೋಡಿ ಅನಂತರ ತಾನು ಸಾಯುವುದಕ್ಕಿಂತ ಮೊದಲೇ ತಾನು ಬೆಂಕಿಗೆ ಆಹುತಿಯಾದರೆ ದಾರುಣ ಘಟನೆಯೊಂದನ್ನು ನೋಡುವ ಪ್ರಸಂಗದಿಂದ ತಪ್ಪಿಸಿಕೊಳ್ಳಬಹುದಲ್ಲ ಎಂದು ಯೋಚಿಸಿ ಹೆಂಡತಿ, ಮಗ, ಮಂತ್ರಿಯನ್ನು ಸಮಾಧಾನಿಸಿ ಬೆಂಕಿಗೆ ಬೀಳನು ಸಿದ್ಧನಾಗುತ್ತಾನೆ.)

 

ಮುಳಿದು ಮೊಗೆದೆಲ್ಲರಂ ಕೊಲ್ಲದಿಂದೆನ್ನನೊ

ಬ್ಬಳನೆ ಕೊಂದಪುದೆ ಭೂಭುಜ ನಿಮ್ಮ ಕೂಡೆ ಸರಿ

ಯೊಳು ಜೀವವಂ ಬಿಡುವುದುಚಿತವಲ್ಲಿಂ ಬಳಿಕ ಬಿಡುವುದತ್ಯಧಮತನವು

ಎಳಸಿ ಮುತ್ತೈದೆತನದಲಿ ಮುಂದೆ ಹೋದಪೆಂ

ಕಳುಹಿಸಿಕೊಡಬೇಕೆಂದು ಮೈಯಿಕ್ಕಿ ಬೇಡಿಕೊಂ

ಡಳು ಗಂಡನಂ ಚಂದ್ರಮತಿ ಪತಿವ್ರತೆಯರಾನಂದನಿಧಿ ಲಲ್ಲೆಗಱೆದು   ೬

ಪದ್ಯದ ಅನ್ವಯಕ್ರಮ:

ಮುಳಿದು ಮೊಗೆದು ಎಲ್ಲರಂ ಕೊಲ್ಲದೆ ಇಂದು ಎನ್ನನ್ ಒಬ್ಬಳನೆ ಕೊಂದಪುದೆ ಭೂಭುಜ? ಇಂ ನಿಮ್ಮ ಕೂಡೆ ಸರಿಯೊಳು ಜೀವವಂ ಬಿಡುವುದು ಉಚಿತವಲ್ಲ, ಬಳಿಕ ಬಿಡುವುದು ಅತಿ ಅಧಮತನವು, ಎಳಸಿ ಮುತ್ತೈದೆತನದಲಿ ಮುಂದೆ ಹೋದಪೆಂ, ಕಳುಹಿಸಿಕೊಡಬೇಕು ಎಂದು ಪತಿವ್ರತೆಯರ ಆನಂದನಿಧಿ  ಚಂದ್ರಮತಿ ಮೈಯಿಕ್ಕಿ, ಲಲ್ಲೆಗಱೆದು ಗಂಡನಂ ಬೇಡಿಕೊಂಡಳು

ಪದ-ಅರ್ಥ:

ಮುಳಿದು-ಸಿಟ್ಟುಗೊಂಡು, ಕೋಪಗೊಂಡು;  ಮೊಗೆದು-ಬಾಚಿಕೊಂಡು, ಆಕ್ರಮಿಸಿಕೊಂಡು;  ಕೊಂದಪುದೆ-ಕೊಲ್ಲುವುದೆ?; ಭೂಭುಜ-ಮಹಾರಾಜ (ಹರಿಶ್ಚಂದ್ರ);  ಕೂಡೆ-ಜೊತೆಯಲ್ಲಿಯೇ;  ಸರಿಯೊಳು-ಸರಿಸಮಾನವಾಗಿ; ಉಚಿತವಲ್ಲ-ಸರಿಯಲ್ಲ, ಯುಕ್ತವಲ್ಲ;  ಅತ್ಯಧಮತನ-ಅತ್ಯಂತ ಕೆಟ್ಟದು;  ಎಳಸಿ-ಬಯಸಿ;  ಮುತ್ತೈದೆತನ-ಸುಮಂಗಲಿತನ;  ಮೈಯಿಕ್ಕಿ-ಕಾಲಿಗೆರಗಿ;  ಪತಿವ್ರತೆಯರಾನಂದನಿಧಿ-ಪತಿವ್ರತೆಯರಿಗೆ ಆನಂದದ ನಿಧಿಯಂತಿರುವವಳು; ಲಲ್ಲೆಗರೆದು-ಪ್ರೀತಿತೋರಿ, ರಮಿಸಿ.

ಹಬ್ಬಿರುವ ಕಾಳ್ಗಿಚ್ಚು ಇಂದು ನಮ್ಮೆಲ್ಲರನ್ನೂ ಸುಡದೆ ತನ್ನೊಬ್ಬಳನ್ನೇ ಸುಡುವುದೆ? ಇಂದು ನಿಮ್ಮ ಜೊತೆಯಲ್ಲಿಯೇ ನಿಮಗೆ ಸರಿಸಮಾನಳಾಗಿ ನಾನೂ ಸತ್ತುಹೋಗುವುದು ಉಚಿತವೆನಿಸುವುದಿಲ್ಲ. ಅಲ್ಲದೆ ನಿಮ್ಮ ಅನಂತರವೂ ಸತ್ತುಹೋಗುವುದೂ ಅಧಮತನವೆನಿಸಿಕೊಳ್ಳುತ್ತದೆ. ನಾನಾಗಿ ಬಯಸಿ ಮುತ್ತೈದೆತನದಲ್ಲಿ ಮುಂದೆ ಹೋಗುತ್ತೇನೆ. ನೀವು ನನ್ನನ್ನು ಹರಸಿ ಕಳುಹಿಸಿಕೊಡಬೇಕು ಎಂದು ಪತಿವ್ರತೆಯರ ಆನಂದನಿಧಿ ಎನಿಸಿರುವ ಚಂದ್ರಮತಿ ತನ್ನ ಗಂಡ ಹರಿಶ್ಚಂದ್ರನ ಪಾದಗಳಿಗೆ ನಮಸ್ಕರಿಸಿ, ಪ್ರೀತಿಯಿಂದ ಬೇಡಿಕೊಂಡಳು.

(ಕಾಡಿನಲ್ಲಿ ಹಬ್ಬಿರುವ ಕಾಳ್ಗಿಚ್ಚು ಎಲ್ಲೂ ಎಂದೂ ತಾರತಮ್ಯವನ್ನು ತೋರುವುದಿಲ್ಲ. ಅದು ತನ್ನ ತೆಕ್ಕೆಗೆ ಸಿಕ್ಕಿದ್ದೆಲ್ಲವನ್ನೂ ಸುಟ್ಟುಬಿಡುತ್ತದೆ. ಬೆಂಕಿ ಈಗ ತಮ್ಮೆಲ್ಲರನ್ನೂ ಸುತ್ತುವರಿದಿದೆ. ಅದು ಕೇವಲ ಹರಿಶ್ಚಂದ್ರನೊಬ್ಬನನ್ನೇ ಸುಡದೆ ಎಲ್ಲರನ್ನೂ ಸುಟ್ಟುಬಿಡುತ್ತದೆ. ಪ್ರಸಕ್ತ ಪರಿಸ್ಥಿತಿಗೆ, ಅಸಹಾಯಕತೆಗೆ, ಪರದೇಶಿತನಕ್ಕೆ ತಾನೇ ಕಾರಣನಾದೆನಲ್ಲ ಎಂಬ ಭಾವ ಹರಿಶ್ಚಂದ್ರನ ಮನಸ್ಸಿನಲ್ಲಿರುವುದು ಚಂದ್ರಮತಿಗೆ ತಿಳಿದಿದೆ. ಹಾಗಾಗಿಯೇ ಆತ ತಾನು ಮೊದಲು ಆಹುತಿಯಾಗುತ್ತೇನೆ ಎಂದು ನಿರ್ಧರಿಸಿದ್ದಾನೆ. ಆದರೆ, ಚಂದ್ರಮತಿಗೆ ಅದು ಸಮಂಜಸವೆನಿಸುವುದಿಲ್ಲ. ಗಂಡ ಮೊದಲು ತೀರಿಕೊಂಡು ತಾನು ವಿಧವೆಯೆನಿಸಿ ಅನಂತರ ತಾನು ಸಾಯುವುದು ಪರಂಪರಾಗತವಾದ ಮೌಲ್ಯಗಳಿಗೆ, ನಂಬಿಕೆಗಳಿಗೆ ವಿರುದ್ಧವಾದುದು, ಹಾಗೂ ಅದು ಅಧಮತನ ಎನಿಸಿಕೊಳ್ಳುತ್ತದೆ ಎಂದು ಆಕೆ ಭಾವಿಸುತ್ತಾಳೆ. ಅಲ್ಲದೆ, ಗಂಡನೊಂದಿಗೆ ತಾನೂ ಜೊತೆಜೊತೆಯಲ್ಲಿಯೇ ಬೆಂಕಿಗಾಹುತಿಯಾಗುವುದೂ ಮೌಲ್ಯಗಳಿಗೆ ವಿರುದ್ಧವಾದುದು. ಹಾಗಾಗಿ ಮೊದಲು ತಾನು ಬೆಂಕಿಗಾಹುತಿಯಾಗಿ ತನ್ನ ಮುತ್ತೈದೆತನವನ್ನು ಉಳಿಸಿಕೊಳ್ಳುತ್ತೇನೆ ಎಂದು ನಿರ್ಧರಿಸಿ ಗಂಡನ ಮೇಲೆ ಪ್ರೀತಿತೋರಿ, ಅಂಗಲಾಚಿ ತಾನು ಮುತ್ತೈದೆತನದಲಿ ಮುಂದೆಹೋಗುತ್ತೇನೆ, ಕಳುಹಿಸಿಕೊಡಬೇಕು ಎಂದು ಬೇಡಿಕೊಳ್ಳುತ್ತಾಳೆ. ಚಂದ್ರಮತಿ ಸಾಮಾನ್ಯ ಸ್ತ್ರೀಯಲ್ಲ, ಆಕೆ  ಪತಿವ್ರತೆಯರ ಆನಂದನಿಧಿ ಎನಿಸಿರುವವಳು. ಆಕೆ ಪತಿವ್ರತಾ ಶಿರೋಮಣಿಯಂತಿರುವುದರಿಂದ ಕಾಳ್ಗಿಚ್ಚು ಆಕೆಯನ್ನು ಘಾತಿಸುವ ಪ್ರಸಂಗವೇ ಇರಲಾರದು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.)    

 

ದೆಸೆಗಳಿಗೆ ನಮಿಸಿ ದೈವಕ್ಕೆಱಗಿ ರವಿಗೆ ವಂ

ದಿಸಿ ಕೋಟಿಭವಭವದೊಳೆನಗೀ ಹರಿಶ್ಚಂದ್ರ

ವಸುಧೇಶನೇ ಗಂಡನಾಗಲಿ ದಿಟಂ ಲೋಹಿತಾಶ್ವನೇ ಮಗನಾಗಲಿ

ವಸುಸತ್ಯಕೀರ್ತಿಯೇ ಮಂತ್ರಿಯಾಗಲಿ ತರುಣ

ಶಶಿಮೌಳಿಯೇ ದೈವವಾಗಲೆಮ್ಮಿಳೆಯ ಪಾ

ಲಿಸುವ ವಿಶ್ವಾಮಿತ್ರ ನಿತ್ಯನಾಗಲಿಯೆನುತ ಬೇಡಿಕೊಂಡಳು  ೭

ಪದ್ಯದ ಅನ್ವಯಕ್ರಮ:

ದೆಸೆ ದೆಸೆಗಳಿಗೆ ನಮಿಸಿ, ದೈವಕ್ಕೆ ಎಱಗಿ, ರವಿಗೆ ವಂದಿಸಿ, ಕೋಟಿ ಭವಭವದೊಳು ಈ ಹರಿಶ್ಚಂದ್ರ ವಸುಧೇಶನೇ ಎನಗೆ ಗಂಡನಾಗಲಿ, ಲೋಹಿತಾಶ್ವನೇ ಮಗನಾಗಲಿ, ವಸುಸತ್ಯಕೀರ್ತಿಯೇ ಮಂತ್ರಿಯಾಗಲಿ, ತರುಣ ಶಶಿಮೌಳಿಯೇ ದೈವವಾಗಲಿ, ಎಮ್ಮ ಇಳೆಯ ಪಾಲಿಸುವ ವಿಶ್ವಾಮಿತ್ರ ನಿತ್ಯನಾಗಲಿ ಎನುತ ಬೇಡಿಕೊಂಡಳು.

ಪದ-ಅರ್ಥ:

ದೆಸೆದೆಸೆಗಳಿಗೆ-ದಿಕ್ಕುದಿಕ್ಕುಗಳಿಗೆ;  ದೈವಕ್ಕೆಱಗಿ-ಇಷ್ಟದೇವರಿಗೆ ನಮಸ್ಕರಿಸಿ;  ಕೋಟಿ ಭವಭವದೊಳು-ಕೋಟಿ ಜನ್ಮಜನ್ಮಗಳಲ್ಲಿ;  ವಸುಧೇಶ-ರಾಜ;  ದಿಟಂ-ನಿಜವಾಗಿಯೂ; ವಸುಸತ್ಯಕೀರ್ತಿ-ಹರಿಶ್ಚಂದ್ರನ ಮಂತ್ರಿ;  ಶಶಿಮೌಳಿ-ಶಿವ (ಚಂದ್ರನನ್ನು ಜಟೆಯಲ್ಲಿ ಧರಿಸಿಕೊಂಡವನು);  ಇಳೆ-ಭೂಮಿ, ರಾಜ್ಯ;  ಪಾಲಿಸುವ-ಆಳುವ, ಕಾಪಾಡುವ;  ನಿತ್ಯನಾಗಲಿ-ಶಾಶ್ವತವಾಗಿ ಆಳಿಕೊಂಡಿರಲಿ.

ಹರಿಶ್ಚಂದ್ರನಿಂದ ಮುಂದೆ ಹೋಗಲು ಅನುಮತಿಯನ್ನು ಪಡೆದ ಚಂದ್ರಮತಿಯು ದಿಕ್ಕುದಿಕ್ಕುಗಳಿಗೆ ನಮಸ್ಕರಿಸಿ, ತನ್ನ ಇಷ್ಟದೇವರಿಗೆ ಮನಸ್ಸಿನಲ್ಲಿಯೇ ಸಾಷ್ಟಾಂಗವೆರಗಿ, ಸೂರ್ಯನಿಗೆ ನಮಸ್ಕರಿಸಿ, ಮುಂದಿನ ಕೋಟಿ ಕೋಟಿ ಜನ್ಮಗಳಲ್ಲಿಯೂ ತನಗೆ ರಾಜ ಹರಿಶ್ಚಂದ್ರನೇ ಗಂಡನಾಗಲಿ, ಲೋಹಿತಾಶ್ವನೇ ಮಗನಾಗಲಿ, ವಸುಸತ್ಯಕೀರ್ತಿಯೇ ಮಂತ್ರಿಯಾಗಲಿ, ಬಾಲಚಂದ್ರನನ್ನು ಧರಿಸಿರುವ ಶಿವನೇ ದೈವವಾಗಿರಲಿ, ನಮ್ಮ ದೇಶವನ್ನು ಪಾಲಿಸುತ್ತಿರುವ ವಿಶ್ವಾಮಿತ್ರನೇ ನಿರಂತರವಾಗಿ ಅದನ್ನು ಆಳಿಕೊಂಡಿರಲಿ ಎಂದು ಬೇಡಿಕೊಂಡಳು.

(ಹರಿಶ್ಚಂದ್ರನನ್ನು ಹೇಗೋ ಒಪ್ಪಿಸಿಕೊಂಡು ಆತನ ಅನುಮತಿಯನ್ನು ಪಡೆದು ತಾನು ಕಾಳ್ಗಿಚ್ಚನ್ನು ಎದುರಿಸಿ ಮುಂದೆ ಹೋಗುತ್ತೇನೆ ಎಂದು ಚಂದ್ರಮತಿ ನಿರ್ಧರಿಸುತ್ತಾಳೆ. ಕಾಳ್ಗಿಚ್ಚು ತನ್ನನ್ನಾಗಲಿ ತನ್ನ ಪರಿವಾರವನ್ನಾಗಲೀ ಬದುಕಗೊಡಲಾರದು ಎಂಬುದು ಆಕೆಗೂ ತಿಳಿದಿದೆ. ಸಾಯುವುದಕ್ಕಿಂತ ಮೊದಲು ಆಕೆ ತನ್ನ ಮನಸ್ಸಿನ ಇಚ್ಛೆಯನ್ನು ಹೇಳಿಕೊಳ್ಳುತ್ತಾಳೆ. ಮನುಷ್ಯನ ಅರ್ಥಪೂರ್ಣ ಹಾಗೂ ಪರಿಪೂರ್ಣ ಬದುಕಿಗೆ ಅಷ್ಟದಿಕ್ಕುಗಳ, ಅವುಗಳ ಅಧಿಪತಿಗಳಾದ ದಿಕ್ಪಾಲಕರ, ಸೂರ್ಯ, ಶಿವ ಮೊದಲಾದ ದೈವಗಳ ಅನುಗ್ರಹವೂ ಅತ್ಯಂತ ಮುಖ್ಯವೆಂಬುದನ್ನು ಮನಗಂಡ ಆಕೆ ಮೊದಲು ಅಷ್ಟದಿಕ್ಕುಗಳಿಗೆ ನಮಸ್ಕರಿಸಿ, ಅನಂತರ ತಾನು ನಿರಂತರ ನಂಬಿ ಆರಾಧಿಸಿಕೊಂಡು ಬಂದಿರುವ ಇಷ್ಟದೈವಕ್ಕೆ ಎರಗಿ, ಲೋಕವನ್ನು ಪಾಲಿಸುವ ಸೂರ್ಯನಿಗೆ ನಮಸ್ಕರಿಸಿ ಈ ಜನ್ಮವು ಇಲ್ಲಿಗೆ ಮುಕ್ತಾಯವಾಗುವುದಾದರೂ ಮುಂದಿನ ಕೋಟಿ ಕೋಟಿ ಜನ್ಮಗಳಲ್ಲಿಯೂ ರಾಜ ಹರಿಶ್ಚಂದ್ರನೆ ಗಂಡನಾಗಿ ದೊರೆಯುವಂತೆ ಅನುಗ್ರಹಿಸಬೇಕೆಂದು ಬೇಡುತ್ತಾಳೆ. ವರ್ಷಗಳ ಕಾಲ ಮಗನೊಬ್ಬನನ್ನು ಪಡೆಯಬೇಕೆಂದು ಹಂಬಲಿಸಿ ಹತ್ತಾರು ಯಾಗಯಜ್ಞ, ವ್ರತಾದಿಗಳನ್ನು ಮಾಡಿ ಲೋಹಿತಾಶ್ವನನ್ನು ಮಗನಾಗಿ ಪಡೆದರೂ ಆತನ ಸಾಧನೆಯನ್ನು, ಸಂತಸವನ್ನು, ಅಧಿಪತ್ಯವನ್ನು ಕಣ್ಣಾರೆ ಕಾಣುವ ಭಾಗ್ಯ ತಪ್ಪಿಹೋಗುತ್ತಿರುವುದರಿಂದ ಮುಂದಿನ ಜನ್ಮಜನ್ಮಗಳಲ್ಲಿ ಆತನೇ ಮಗನಾಗಲಿ ಎಂದು ಬೇಡಿಕೊಳ್ಳುತ್ತಾಳೆ. ಅರಮನೆಯಲ್ಲಿ ವಿಶ್ವಾಮಿತ್ರನ ಮಂತ್ರಿಯಾಗಿ ಸುಖವಾಗಿ ಇರಬಹುದಾಗಿದ್ದರೂ ತಮ್ಮ ಮೇಲಿನ ಅಭಿಮಾನ, ಗೌರವಗಳಿಂದ ಅವೆಲ್ಲವನ್ನೂ ತ್ಯಜಿಸಿ, ತಮ್ಮ ಸುಖದುಃಖಗಳಲ್ಲಿ ಪಾಲ್ಗೊಳ್ಳುತ್ತಿರುವ ವಸುಸತ್ಯಕೀರ್ತಿಯೇ ಮುಂದಿನ ಎಲ್ಲಾ ಜನ್ಮಗಳಲ್ಲಿಯೂ ಮಂತ್ರಿಯಾಗಿ ದೊರೆಯಲಿ, ಮುಂದಿನ ಎಲ್ಲಾ ಜನ್ಮಗಳಲ್ಲಿಯೂ ಶಿವನೇ ತಮಗೆ ಆರಾಧ್ಯದೈವವಾಗಿದ್ದು  ನಮ್ಮನ್ನು ಕಾಪಾಡುವಂತಾಗಲಿ,  ಈಗಾಗಲೇ ತಮ್ಮ ದೇಶವನ್ನು ಪರಿಪಾಲಿಸುತ್ತಿರುವ ವಿಶ್ವಾಮಿತ್ರನು ನಿರಂತರವಾಗಿ ಆ ದೇಶವನ್ನು ಪಾಲಿಸಿಕೊಂಡಿರಲಿ ಎಂದು ತನ್ನ ಮನದಿಚ್ಛೆಯನ್ನು ಬೇಡಿಕೊಳ್ಳುತ್ತಾಳೆ. ಗಂಡನ ಸತ್ಯವ್ರತದಿಂದಾಗಿ ತಾವು ಎಲ್ಲವನ್ನು ಕಳೆದುಕೊಂಡು ಪಾಡುಪಡಬೇಕಾಗಿ ಬಂದರೂ ಆಕೆ ಅದಾವುದನ್ನೂ ಪರಿಭಾವಿಸದೆ  ನಿಷ್ಕಲ್ಮಷ ಮನಸ್ಸಿನಿಂದ ಬೇಡಿಕೊಳ್ಳುವುದು ಆಕೆಯ ಪತಿವ್ರತಾಧರ್ಮದ ಮೇಲ್ಮೆಯನ್ನು ಸೂಚಿಸುತ್ತದೆ.)   

 

ಪೊಡವೀಶ ಕೇಳುಭಯಕುಲಶುದ್ಧೆಯಲ್ಲದಿ

ರ್ದಡೆ ನಿನ್ನನಲ್ಲದನ್ಯರನು ಲೆಕ್ಕಿಸಿದೆನಾ

ದಡೆ ಹಿಂದೆ ನಿನಗೊಂದನಿಕ್ಕಿ ನಾನೊಂದನುಂಡಡೆ ಮೂಱು ಕರಣವಱಿಯೆ

ಮೃಡನಲ್ಲದನ್ಯ ದೈವಕ್ಕೆ ನಮಿಸಿದಡೆನ್ನ

ಹೊಡೆದು ಮುಕ್ಕುವುದು ದಾವಾಗ್ನಿ ಮೇಣಲ್ಲದಿ

ರ್ದಡೆ ಬಟ್ಟೆಗೊಟ್ಟಪುದು ಕೇಳೆಂದು ಬೊಬ್ಬೆಗೊಡುವಾ ಪೊಳ್ತನೇವೊಗಳ್ವೆನು  ೮

ಪದ್ಯದ ಅನ್ವಯಕ್ರಮ:

ಕೇಳು ಪೊಡವೀಶ, ಉಭಯಕುಲ ಶುದ್ಧೆಯಲ್ಲದೆ ಇರ್ದಡೆ, ನಿನ್ನನ್ ಅಲ್ಲದೆ ಅನ್ಯರನು ಲೆಕ್ಕಿಸಿದೆನಾದಡೆ, ನಿನಗೊಂದನ್ ಇಕ್ಕಿ ತಾನೊಂದನ್ ಉಂಡಡೆ, ಮೂಱು ಕರಣವು ಅಱಿಯೆ ಮೃಡನನ್ ಅಲ್ಲದೆ ಅನ್ಯ ದೈವಕ್ಕೆ ನಮಿಸಿದಡೆ, ದಾವಾಗ್ನಿ ಎನ್ನ ಹೊಡೆದು ಮುಕ್ಕುವುದು, ಮೇಣ್ ಅಲ್ಲದೆ ಇರ್ದಡೆ ಬಟ್ಟೆ ಕೊಟ್ಟಪುದು ಕೇಳ್ ಎಂದು ಬೊಬ್ಬೆಗೊಡುವ ಆ ಪೊಳ್ತನ್ ಏವೊಗಳ್ವೆನು?

ಪದ-ಅರ್ಥ:

ಪೊಡವೀಶ(ಪೊಡವಿ+ಈಶ)-ರಾಜ;  ಉಭಯಕುಲ-ಎರಡು ಕುಲಗಳು(ತವರುಮನೆಯ ಕುಲ ಹಾಗೂ ಗಂಡನ ಮನೆಯ ಕುಲ);  ಶುದ್ಧೆ-ಪ್ರಾಮಾಣಿಕಳಾದವಳು, ನೈತಿಕತೆಯುಳ್ಳವಳು;  ನಿನ್ನನಲ್ಲದೆ –ನಿನ್ನ ಹೊರತಾಗಿ, ನಿನ್ನನ್ನು ಬಿಟ್ಟು;  ಲೆಕ್ಕಿಸಿದೆನಾದಡೆ-ಬಯಸಿದ್ದರೆ;  ಇಕ್ಕಿ-ಬಡಿಸಿ;  ಉಂಡಡೆ-ಊಟಮಾಡಿದರೆ; ಮೂಱುಕರಣ-ಮೂರು ಇಂದ್ರಿಯಗಳು(ಕಾಯ, ವಾಚಾ ಮನಸ್ಸು);  ಮೃಡ-ಶಿವ;  ಅನ್ಯದೈವ-ಬೇರೆ ದೇವರು;  ದಾವಾಗ್ನಿ-ಕಾಳ್ಗಿಚ್ಚು;  ಹೊಡೆದು ಮುಕ್ಕುವುದು-ಅಪ್ಪಳಿಸಿ ದಹಿಸುತ್ತದೆ;  ಮೇಣ್-ಅಥವಾ;  ಬಟ್ಟೆ ಕೊಟ್ಟಪುದು-ದಾರಿ ಬಿಟ್ಟುಕೊಡುತ್ತದೆ;  ಬೊಬ್ಬೊಗೊಡು-ಆರ್ಭಟಿಸು, ಬೊಬ್ಬೆಹಾಕು.  

ಹರಿಶ್ಚಂದ್ರನೇ ಕೇಳು, ತಾನು ಉಭಯಕುಲ(ತವರುಮನೆಯ ಹಾಗೂ ಗಂಡನ ಮನೆಯ ಕುಲ) ಶುದ್ಧೆಯಲ್ಲದೆ ಇದ್ದರೆ, ನಿನ್ನನ್ನು ಅಲ್ಲದೆ ಅನ್ಯ ಪುರುಷರನ್ನು ಬಯಸಿದ್ದರೆ, ನಿನಗೆ ಒಂದನ್ನು ಬಡಿಸಿ ತಾನು ಇನ್ನೊಂದನ್ನು ಉಂಡಿದ್ದರೆ, ದೇಹ, ಮಾತು ಹಾಗೂ ಮನಸ್ಸಿನಲ್ಲಿ ಶಿವನನ್ನು ಅಲ್ಲದೆ ಬೇರೆ ದೇವರಿಗೆ ನಮಸ್ಕರಿಸಿದ್ದರೆ, ಈ ಕಾಳ್ಗಿಚ್ಚು ನನ್ನನ್ನು ಆವರಿಸಿ ಸುಟ್ಟುಬಿಡುತ್ತದೆ. ಹಾಗಿಲ್ಲದೆ ತಾನು ಪತಿವ್ರತೆ ಹೌದಾಗಿದ್ದರೆ ಈ ಕಾಳ್ಗಿಚ್ಚು ನಮ್ಮನ್ನು ಎಳ್ಳಷ್ಟೂ  ಘಾಸಿಗೊಳಿಸದೆ ದಾರಿಯನ್ನು ಬಿಟ್ಟುಕೊಡುತ್ತದೆ ಎಂದು ಚಂದ್ರಮತಿ ಸ್ಪಷ್ಟಪಡಿಸಿದಳು.

(ತಮ್ಮನ್ನು ಸುತ್ತುವರಿದಿರುವ ಕಾಳ್ಗಿಚ್ಚು ಅಷ್ಟು ಸುಲಭದಲ್ಲಿ ತಮ್ಮನ್ನು ದಹಿಸಲಾರದು ಎಂಬ ಭರವಸೆ ಚಂದ್ರಮತಿಯಲ್ಲಿದೆ. ಗಂಡನಿಂದ ಮುಂದೆ ಹೋಗಲು ಅನುಮತಿಯನ್ನು ಪಡೆದುಕೊಂಡ ಅನಂತರ ಆಕೆ ತನ್ನ ಪಾತಿವ್ರತ್ಯವನ್ನು ಮುಂದಿಟ್ಟುಕೊಂಡು ಸ್ಪಷ್ಟವಾಗಿ ಹೇಳಿಕೊಳ್ಳುತ್ತಾಳೆ. ಹೆಣ್ಣಾದವಳು ಹುಟ್ಟಿದ ಮನೆಯ ಹಾಗೂ ಸೇರಿದ ಮನೆಯ ಕುಲಗಳನ್ನು ಉದ್ಧರಿಸುವವಳು. ಹಾಗಾಗಿ ಅವಳು ಉಭಯಕುಲಶುದ್ಧೆಯೆನಿಸಿಕೊಳ್ಳುತ್ತಾಳೆ.  ಹಾಗೆಯೇ ಪತಿವ್ರತೆಯಾದವಳು ಕೈಹಿಡಿದ ಗಂಡನಿಗೆ ಒಂದು ಬಗೆ ತನಗೊಂದು ಬಗೆಯ ಆಡುಗೆಯನ್ನು ಬಡಿಸದೆ ತಾನು ಬೇಯಿಸಿದ್ದನ್ನು ಗಂಡನಿಗೆ ಬಡಿಸಿ ತಾನೂ ಅದನ್ನೇ ಊಟಮಾಡುತ್ತಾಳೆ. ಒಬ್ಬ ಭಕ್ತ ತನ್ನ ಜೀವಿತಾವಧಿಯಲ್ಲಿ ತ್ರಿಕರಣಪೂರ್ವಕವಾಗಿ ಒಬ್ಬ ದೇವರನ್ನು ಭಜಿಸಿ ಆರಾಧಿಸುವುದು ಧರ್ಮವೆನಿಸಿಕೊಳ್ಳುತ್ತದೆ. ಹಾಗೆ ಮಾಡದೆ ಕ್ಷಣಕ್ಕೊಬ್ಬ, ದಿನಕ್ಕೊಬ್ಬ ದೇವರನ್ನು ಭಜಿಸಿ ಆರಾಧಿಸಿದರೆ ಅದು ಅಧರ್ಮವೆನಿಸಿಕೊಳ್ಳುತ್ತದೆ. ಹೀಗಿರುವಾಗ   ತಾನೇನಾದರೂ ಉಭಯಕುಲಶುದ್ಧೆಯಲ್ಲದಿದ್ದರೆ, ಗಂಡನಿಗೊಂದನ್ನು ಬಡಿಸಿ ತಾನೊಂದನ್ನು ಉಂಡಿದ್ದರೆ, ತ್ರಿಕರಣಪೂರ್ವಕವಾಗಿ ಶಿವನನ್ನಲ್ಲದೆ ಬೇರೆ ದೇವರಿಗೆ ನಮಿಸಿದ್ದರೆ ಈ ಕಾಳ್ಗಿಚ್ಚು ತನಗೆ ಅಪ್ಪಳಿಸಿ ತನ್ನನ್ನು ಸುಟ್ಟುನಾಶಮಾಡುತ್ತದೆ. ಒಂದು ವೇಳೆ ಹಾಗಿಲ್ಲದಿದ್ದರೆ ತಮ್ಮನ್ನು ಘಾಸಿಗೊಳಿಸದೆ ತನ್ನಷ್ಟಕ್ಕೆ ದಾರಿಯನ್ನು ಬಿಟ್ಟುಕೊಡುತ್ತದೆ ಎಂದು ಚಂದ್ರಮತಿ ಹರಿಶ್ಚಂದ್ರನಲ್ಲಿ ಸ್ಪಷ್ಟಪಡಿಸುತ್ತಾಳೆ.)  

 

ಹಲವು ನಗರಂಗಳಂ ಹಲವರಣ್ಯಂಗಳಂ

ಹಲವು ಗಿರಿಗಳ ಕಳಿದು ನಡೆತರಲು ಮುಂದೆ ಶತ

ಕಲಿಮಲಕುಲಾಪಕರ್ಷಣೆಯಾನು ವಿಪುಳಪಾತಕಕೋಟಿಕೋಟಿಯೆಂಬ

ಜಲಜವನಚಂದ್ರಕಳೆಯಾನು ಭವಭಯಕುಧರ

ಕುಲಿಶಾಭಿಧಾನೆಯಾನೆಂದು ಧರೆಗಱುಪಲೆಂ

ದುಲಿವಂತೆ ಘುಳುಘುಳುಧ್ವಾನದಿಂದೆಸೆವ ಗಂಗಾನದಿ ವಿರಾಜಿಸಿದಳು  ೯

ಪದ್ಯದ ಅನ್ವಯಕ್ರಮ:

ಹಲವು  ನಗರಂಗಳಂ, ಹಲವು ಅರಣ್ಯಂಗಳಂ, ಹಲವು ಗಿರಿಗಳ ಕಳಿದು ನಡೆತರಲು ಮುಂದೆ ಶತ ಕಲಿಮಲ ಕುಲ ಅಪಕರ್ಷಣೆ ಆನ್, ವಿಪುಳ ಕೋಟಿ ಕೋಟಿ ಪಾತಕ ಎಂಬ ಜಲಜವನ ಚಂದ್ರಕಳೆ ಆನು, ಭವಭಯಕುಧರ ಕುಲಿಶಾಭಿಧಾನೆ ಆನ್ ಎಂದು ಧರೆಗೆ ಅಱುಪಲೆಂದು ಉಲಿವಂತೆ ಎಸೆವ ಗಂಗಾನದಿ ಘುಳುಘುಳು ಧ್ವಾನದಿಂದ ವಿರಾಜಿಸಿದಳು.

ಪದ-ಅರ್ಥ:

ಕಳಿದು-ಕಳೆದು, ಕ್ರಮಿಸಿ; ಶತ-ನೂರು, ಅಸಂಖ್ಯ; ಕಲಿ-ಶೂರ, ಪರಾಕ್ರಮಿ;  ಮಲ-ಪಾಪ, ದೋಷ;  ಕುಲಾಪಕರ್ಷಣೆ-ಕುಲದ ದುರ್ದೆಶೆಯನ್ನು ಕಡಿಮೆಮಾಡುವವಳು;  ವಿಪುಳ-ಅಧಿಕ; ತುಂಬಾ;  ಪಾತಕ-ಪಾಪ; ಜಲಜವನ-ಸರೋವರ;  ಚಂದ್ರಕಳೆ-ಚಂದ್ರಬಿಂಬ;  ಭವಭಯ-ಸಂಸಾರಭಯ;  ಕುಧರ-ಬೆಟ್ಟ;  ಕುಲಿಶ-ವಜ್ರಾಯುಧ;  ಅಭಿಧಾನೆ– ಹೆಸರುಳ್ಳವಳು;  ಧರೆಗೆ-ಭೂಮಿಗೆ;  ಅಱುಪಲೆಂದು-ತಿಳಿಸಲೆಂದು;  ಉಲಿವಂತೆ-ಹೇಳುವಂತೆ;  ಧ್ವಾನ-ಸದ್ದು;  ಎಸೆವ-ಶೋಭಿಸುವ;  ವಿರಾಜಿಸು-ಪ್ರಕಾಶಿಸು.

ಚಂದ್ರಮತಿ ಕಾಳ್ಗಿಚ್ಚಿನ ಮಧ್ಯೆ ನಡೆಯುತ್ತಿದ್ದಂತೆ ಕಾಳ್ಗಿಚ್ಚು ದಾರಿ ಬಿಟ್ಟುಕೊಟ್ಟ ಮೇಲೆ ಅವರೆಲ್ಲರೂ ಆ ಕಾಡನ್ನು ದಾಟಿ ಹಲವು ನಗರಗಳನ್ನು, ಅನಂತರ ಹಲವು ಅರಣ್ಯಗಳನ್ನು ದಾಟಿಕೊಂಡು, ಹಲವು ಪರ್ವತಗಳನ್ನು ಹತ್ತಿ ಇಳಿದು ನಡೆಯುತ್ತಿರಲು ಮುಂದೆ ಅಸಂಖ್ಯ ಶೂರರ ಪಾಪಗಳನ್ನು, ಕುಲಗಳ ದುರ್ದೆಶೆಯನ್ನು ಕಡಿಮೆಮಾಡುವವಳು, ವಿಫುಲವಾಗಿ ಕೋಟಿ ಕೋಟಿ ಪಾಪವೆಂಬ ಸರೋವರಕ್ಕೆ ಚಂದ್ರಬಿಂಬದಂತಿರುವವಳು, ಸಂಸಾರಭಯವೆಂಬ ಬೆಟ್ಟಕ್ಕೆ ವಜ್ರಾಯುಧವೆಂಬ ಹೆಸರುಳ್ಳವಳು ತಾನೆಂದು ಲೋಕಕ್ಕೆ ತಿಳಿಸುವಂತೆ ಗಂಗಾನದಿಯು ಘುಳುಘುಳು ಎಂದು ಸದ್ದಿನೊಂದಿಗೆ ಹರಿಯುತ್ತ ಪ್ರಕಾಶಿಸಿದಳು.

(ಚಂದ್ರಮತಿ ಮುಂದೆ ಹೋಗುತ್ತಿದ್ದಂತೆಯೇ ಚಂದ್ರಮತಿಯ ಪತಿವ್ರತಾಧರ್ಮದ ಮುಂದೆ ವಿಶ್ವಾಮಿತ್ರ ಸೃಜಿಸಿದ ಕಪಟ ಅಗ್ನಿ ಆಕೆಯನ್ನು ದಹಿಸಲಾರದೆ ದಾರಿಯನ್ನು ಬಿಟ್ಟುಕೊಟ್ಟಿತು. ಅಲ್ಲಿಂದ ಆ ಅರಣ್ಯವನ್ನು ದಾಟಿ ಅನಂತರ ಹಲವು ಊರುಗಳನ್ನು ಕ್ರಮಿಸಿ, ಹಲವು ಪಟ್ಟಣ, ನಗರಗಳನ್ನು ದಾಟಿಕೊಂಡು, ಹಲವು ಗಿರಿ ಪರ್ವತಗಳನ್ನು ಏರಿ ಇಳಿದು, ಮತ್ತೂ ಹಲವು ಅರಣ್ಯಗಳನ್ನು ಕ್ರಮಿಸಿ ಕಾಶಿಯನ್ನು ಸಮೀಪಿಸಿದರು. ಕಾಶಿಯನ್ನು ಸೇರುತ್ತಿದ್ದಂತೆ ಅವರಿಗೆ ಗಂಗಾನದಿ ವಿಭಿನ್ನವಾಗಿ ಶೋಭಿಸಿತು. ಗಂಗಾನದಿಯು ಲೋಕದ ಅಸಂಖ್ಯ ಶೂರರ, ಜೀವಿಗಳ ಸಕಲ ಪಾಪಗಳನ್ನು ತೊಳೆದು ಅವರನ್ನು ಪುಣ್ಯವಂತರನ್ನಾಗಿ ಮಾಡುವವಳು, ಹಲವು ಕುಲಗಳ ದುರ್ದೆಶೆಗಳನ್ನು ದೂರಮಾಡಿ ಆ ಕುಲಗಳನ್ನು ಉದ್ಧರಿಸುವವಳು, ವಿಫುಲವಾದ ಕೋಟಿ ಕೋಟಿ ಪಾಪವೆಂಬ ಕಮಲಗಳ ಸರೋವರಕ್ಕೆ ಚಂದ್ರಬಿಂಬದಂತಿರುವವಳು, ಭೂಮಿಯಲ್ಲಿನ ಸಕಲ ಜೀವರಾಶಿಗಳ ಸಂಸಾರಭಯವೆಂಬ ಪರ್ವತಕ್ಕೆ ವಜ್ರಾಯುಧದಂತಿರುವವಳು ತಾನು ಎಂದು ಲೋಕದ ಜನರನ್ನು ಸಮಾಧಾನಪಡಿಸುವಂತೆ ಘುಳುಘುಳು ಎಂದು ನಿನಾದವನ್ನು ಉಂಟುಮಾಡುತ್ತ ಮಂದಗಮನೆಯಾಗಿ ಹರಿಯುತ್ತ ಶೋಭಿಸಿದಳು. ಗಂಗೆ ಪಾಪಶಮನೆಯಾದುದರಿಂದ ಆ ನದಿಯ ದರ್ಶನಮಾತ್ರದಿಂದಲೆ ನೊಂದ ಹರಿಶ್ಚಂದ್ರನ  ಹಾಗೂ ಆತನ ಪರಿವಾರದವರ ಮೈ ಮನಸ್ಸುಗಳು ಪ್ರಫುಲ್ಲಗೊಂಡವು.)   

 

ನಡೆಯೂಡೆ ಮದ್ದು ವಿಷವೊಡಲಿಂಗೆ  ಹಿತವೆಂಬ

ನುಡಿಯಂತೆ ಸುಖವಿಲ್ಲ ಪುಣ್ಯವುಂಟುಳಿದ ಹಲ

ವೆಡೆಯ ಸುಕ್ಷೇತ್ರಂಗಳೊಳಗವಱ ಪರಿಯಲ್ಲ ಸುಖವುಂಟು ಪುಣ್ಯವುಂಟು

ಕುಡಿವ ಪಾದೋದಕಂ ಪನ್ನೀರ ಪಾನವಾ

ದಡೆ ಧರಿಸುವ ಪ್ರಸಾದಂ ಸುಧಾಪಿಂಡವಾ

ದಡೆ ಬಿಡುವರಾರೆನಿಪ್ಪಂತೆ ಜನದಿಹಪರಕೆ ಸೊಗಸು ಕಾಶೀ ಕ್ಷೇತ್ರವು  ೧೦

ಪದ್ಯದ ಅನ್ವಯಕ್ರಮ:

ನಡೆಯೂಡೆ  ಮದ್ದು ವಿಷ, ಒಡಲಿಂಗೆ ಹಿತ ಎಂಬ ನುಡಿಯಂತೆ ಉಳಿದ ಹಲವು ಎಡೆಯ ಸುಕ್ಷೇತ್ರಂಗಳೊಳಗೆ ಪುಣ್ಯವುಂಟು ಸುಖವಿಲ್ಲ, ಅವಱ ಪರಿಯಲ್ಲ ಸುಖವುಂಟು ಪುಣ್ಯವುಂಟು, ಕುಡಿವ ಪಾದೋದಕಂ ಪನ್ನೀರ ಪಾನವಾದಡೆ ಧರಿಸುವ ಪ್ರಸಾದಂ ಸುಧಾಪಿಂಡವಾದಡೆ, ಬಿಡುವವರ್ ಆರ್ ಎನಿಪ್ಪಂತೆ ಕಾಶೀ ಕ್ಷೇತ್ರವು ಜನದ ಇಹಪರಕೆ ಸೊಗಸು.

ಪದ್ಯ-ಅರ್ಥ:

ನಡೆ-ಚೆನ್ನಾಗಿ, ಮನಃಪೂರ್ವಕವಾಗಿ; ಊಡೆ– ಕುಡಿದಾಗ; ಮದ್ದು-ಔಷಧ; ವಿಷ-ಕಹಿ; ಒಡಲಿಂಗೆ-ದೇಹಕ್ಕೆ;  ಹಲವೆಡೆಯ-ಹಲವು ಕಡೆಗಳ;  ಸುಕ್ಷೇತ್ರ-ಪುಣ್ಯಕ್ಷೇತ್ರ;  ಪರಿಯಲ್ಲ-ರೀತಿಯಲ್ಲ;  ಪನ್ನೀರು -ತೀರ್ಥ;  ಧರಿಸುವ-ಸ್ವೀಕರಿಸುವ; ಭಕ್ಷಿಸುವ;  ಸುಧಾಪಿಂಡ-ಅಮೃತದ ತುತ್ತು; ಎನಿಪ್ಪಂತೆ-ಅನ್ನಿಸುವಂತೆ;  ಜನದಿಹಪರಕೆ(ಜನದ+ಇಹ+ಪರಕೆ)-ಜನರ ಇಹಲೋಕ ಪರಲೋಕ.

ಮದ್ದನ್ನು ಮನಃಪೂರ್ವಕವಾಗಿ ಕುಡಿದಾಗ ಅದು ಬಾಯಿಗೆ ಕಹಿಯಾದರೂ ದೇಹಕ್ಕೆ ಹಿತವೆಂಬ ಮಾತಿನಂತೆ ನಾಡಿನ ಹಲವು ಕ್ಷೇತ್ರಗಳ ದರ್ಶನದಿಂದ ಕಣ್ಣುಗಳಿಗೆ ಸುಖವೆನಿಸಿದರೂ ಪುಣ್ಯ ಸಿಗಲಾರದು. ಆದರೆ ಕಾಶಿಕ್ಷೇತ್ರವು ಅಂತಹ ಕ್ಷೇತ್ರಗಳಂತಲ್ಲ, ಇಲ್ಲಿ ಸುಖವೂ ಇದೆ, ಪುಣ್ಯವೂ ಇದೆ. ಕುಡಿಯುವ ಪಾದೋದಕವು ತೀರ್ಥಪಾನವೆನಿಸಿದರೆ, ಭಕ್ಷಿಸುವ ಪ್ರಸಾದವೇ ಅಮೃತದ ತುತ್ತು ಅನ್ನಿಸಿಕೊಳ್ಳುವುದಾದರೆ ಅಂತಹ ಕ್ಷೇತ್ರದ ದರ್ಶನಕ್ಕೆ ಯಾರು ಹಿಂಜರಿಯುತ್ತಾರೆ? ಎನ್ನುವಂತೆ ಕಾಶೀಕ್ಷೇತ್ರವು ಜನರ ಇಹಲೋಕ ಹಾಗೂ ಪರಲೋಕಕ್ಕೂ ಸೊಗಸಾಗಿದೆ ಎಂಬಂತೆ ಶೋಭಿಸಿತು.

(’ಮದ್ದು ಅಧರಕ್ಕೆ ಕಹಿ, ಉದರಕ್ಕೆ ಸಿಹಿ’ ಎಂಬ ಮಾತಿದೆ. ಮದ್ದು ಯಾವತ್ತೂ ಕುಡಿದಾಗ ಕಹಿಯೆನಿಸಿಕೊಳ್ಳುತ್ತದೆ. ಆದರೆ, ಅದೇ ಮದ್ದು ಕುಡಿದ ಮೇಲೆ ಮನುಷ್ಯನ ದೇಹದಲ್ಲಿನ ಬಾಧೆಗಳನ್ನು ನಿವಾರಿಸಿ ದೇಹಕ್ಕೆ ಒಳಿತನ್ನು ಉಂಟುಮಾಡುತ್ತದೆ. ರೋಗಗಳನ್ನು ಪರಿಹರಿಸಿ ದೇಹವನ್ನು ಸುಸ್ಥಿತಿಯಲ್ಲಿಡುತ್ತದೆ. ಹಾಗೆಯೇ ಲೋಕದ ಹಲವು ತೀರ್ಥಕ್ಷೇತ್ರಗಳು ನಮ್ಮ ಕಣ್ಣೋಟಕ್ಕೆ ಸುಖವನ್ನು, ಹಿತವನ್ನು ಉಂಟುಮಾಡುತ್ತವೆ. ಆದರೆ ಅಂತಹ ಕ್ಷೇತ್ರಗಳಲ್ಲಿ ಯಾವ ಪುಣ್ಯವೂ ದೊರೆಯಲಾರದು. ಅಲ್ಲಿರುವುದು ಕೇವಲ ರಂಜನೆ ಮಾತ್ರ. ಕೇವಲ ರಂಜನೆಯಿಂದ ಮನುಷ್ಯನಿಗೆ ಆಗಬಹುದಾದ ಲಾಭವಾದರೂ ಏನು? ಆದರೆ ಕಾಶಿಕ್ಷೇತ್ರವು ಉಳಿದ ತೀರ್ಥಕ್ಷೇತ್ರಗಳಂತಲ್ಲ. ಇಲ್ಲಿ ನೋಡುವ ಕಣ್ಣುಗಳಿಗೆ ಸುಖವೂ ಹಿತವೂ ಇದೆ. ಮಾತ್ರವಲ್ಲ, ಅದರ ದರ್ಶನದಿಂದ ಮನುಷ್ಯನಿಗೆ ಪುಣ್ಯವೂ ಲಭಿಸುತ್ತದೆ. ಗಂಗೆಯ ಪಾದೋದಕವೇ ಪುಣ್ಯಪ್ರದವಾದ ತೀರ್ಥವೆನಿಸಿದರೆ, ಕಾಶಿ ವಿಶ್ವನಾಥನ ಪ್ರಸಾದವೇ ಅಮೃತದ ತುತ್ತು ಎನಿಸಿಕೊಳ್ಳುತ್ತದೆ. ಕಾಶಿಕ್ಷೇತ್ರದಲ್ಲಿ ಇಷ್ಟೆಲ್ಲ ಪುಣ್ಯವೂ ಪಾವನತ್ವವೂ ಇರುವುದರಿಂದಲೇ ಜನರು ಈ ಪುಣ್ಯಕ್ಷೇತ್ರವನ್ನು ಮತ್ತೆಮತ್ತೆ ಸಂದರ್ಶಿಸುವುದಕ್ಕೆ ಬಯಸುತ್ತಾರೆ. ಇಂದು ತಮಗೂ ಅಂತಹ ಪುಣ್ಯದರ್ಶನ ಪ್ರಾಪ್ತವಾಯಿತಲ್ಲ! ಎಂದು ಹರಿಶ್ಚಂದ್ರ, ಚಂದ್ರಮತಿಯರು ಸಂಭ್ರಮಿಸಿದರು.)

 

ಮುಗಿಲ ಬಸುಱಂ ಬಗಿದು ನೆಗೆದೊಗೆದು ಮೀಱಿ ಮೆಱೆ

ವಗಣಿತವೃಷಧ್ವಜಂಗಳ ಸೂರ್ಯಕೋಟಿಯಂ

ತೆಗೆದವೆಂಬಂತೆ ಮಾರ್ಪೊಳೆವ ಹೊಂಗಳಸಂಗಳೆಸೆವ ಶಿವನಿಳಯಂಗಳ

ಸೊಗಸಿಗೆಡೆಯಾಡಿಯಾಡುತ ಪಾಡುತೆಯ್ತಪ್ಪ

ಪೊಗಳಿ ಪೊಡೆಮಡುವ ಬಲಗೊಂಬ ನೋಡುವ ನಲಿವ

ನಗುವ ನಾನಾಜನವನೊತ್ತರಿಸಿ ನಡೆತಂದು ವಿಶ್ವಪತಿಯಂ ಕಂಡನು ೧೧

ಪದ್ಯದ ಅನ್ವಯಕ್ರಮ:

ಮುಗಿಲ ಬಸುಱಂ ಬಗಿದು, ನೆಗೆದು, ಒಗೆದು ಮೀಱಿ ಮೆಱೆವ ಅಗಣಿತ ವೃಷಧ್ವಜಂಗಳ, ಸೂರ್ಯಕೋಟಿಯಂ ತೆಗೆದವು ಎಂಬಂತೆ ಮಾರ್ಪೊಳೆವ ಹೊನ್ ಕಳಸಂಗಳ್ ಎಸೆವ ಶಿವನಿಳಯಂಗಳ, ಸೊಗಸಿಗೆ ಎಡೆಯಾಡಿ ಆಡುತ ಪಾಡುತ ಅಯ್ತಪ್ಪ, ಪೊಗಳಿ ಪೊಡೆಮಡುವ, ಬಲಗೊಂಬ, ನೋಡುವ, ನಲಿವ, ನಗುವ ನಾನಾಜನವನ್ ಒತ್ತರಿಸಿ ನಡೆತಂದು ವಿಶ್ವಪತಿಯಂ ಕಂಡನು.

ಪದ-ಅರ್ಥ:

ಮುಗಿಲ ಬಸುಱಂ-ಮೋಡದ ಹೊಟ್ಟೆಯನ್ನು, ಮೋಡದ ಗುಂಪನ್ನು;  ಬಗಿದು-ಸೀಳಿ;  ನೆಗೆದೊಗೆದು(ನೆಗೆದು+ಒಗೆದು)-ನೆಗೆದುಕಾಣಿಸಿಕೊಂಡು;  ಮೀಱಿ ಮೆಱೆವ-ಅಸಂಖ್ಯವಾಗಿ ಶೋಭಿಸುವ;  ಅಗಣಿತ-ಅಸಂಖ್ಯ, ಮಿತಿಯಿಲ್ಲದ;  ವೃಷಧ್ವಜಂಗಳ-ಪುಣ್ಯಧ್ವಜಗಳ;  ಸೂರ್ಯಕೋಟಿಯಂ-ಕೋಟಿ ಸಂಖ್ಯೆಯ ಸೂರ್ಯರನ್ನು;  ತೆಗೆದವೆಂಬಂತೆ-ಸೆಳೆದುವೋ ಎಂಬಂತೆ;  ಮಾರ್ಪೊಳೆವ-ಪ್ರತಿಬಿಂಬಿಸುವ, ಪ್ರಕಾಶಿಸುವ;  ಹೊಂಗಳಸಂಗಳ-ಹೊನ್ನಿನ ಕಳಶಗಳಿಂದ ಕೂಡಿದ;  ಶಿವನಿಳಯಂಗಳ-ಶಿವಾಲಯಗಳ;  ಸೊಗಸಿಗೆ-ಚೆಲುವಿಗೆ;  ಎಡೆ– ಮಧ್ಯೆ;  ಅಯ್ತಪ್ಪ-ಬರುತ್ತಿರುವ;  ಪೊಗಳಿ-ಹೊಗಳಿ;  ಪೊಡೆಮಡುವ-ನಮಸ್ಕರಿಸುವ;  ಬಲಗೊಂಬ-ಪ್ರದಕ್ಷಿಣೆಗೈಯುವ;  ಒತ್ತರಿಸಿ-ಒಂದು ಕಡೆಗೆ ಒತ್ತಿಕೊಂಡು; ನಡೆತಂದು-ಆಗಮಿಸಿ;  ವಿಶ್ವಪತಿ-ಕಾಶಿ ವಿಶ್ವನಾಥ, ವಿಶ್ವಕ್ಕೆ ಒಡೆಯನಾದವನು.

ಮೋಡಗಳ ಗುಂಪನ್ನು ಸೀಳಿ ನೆಗೆದು ಕಾಣಿಸಿಕೊಂಡು ಶೋಭಿಸುವ ಅಸಂಖ್ಯವಾಗಿ ಪುಣ್ಯಧ್ವಜಗಳನ್ನು ಕೋಟಿ ಸೂರ್ಯರ ಪ್ರಕಾಶವನ್ನು ಸೆಳೆದುವೋ ಎಂಬಂತೆ ಪ್ರಕಾಶಿಸುವ ಹೊನ್ನಿನ ಕಳಶಗಳನ್ನು, ಕಾಶಿಕ್ಷೇತ್ರದಲ್ಲಿ ಅಲ್ಲಲ್ಲಿ ಶೋಭಿಸುವ ಶಿವಾಲಯಗಳ ಸೊಬಗನ್ನು ನೋಡಿ ಮೆಚ್ಚುತ್ತ, ಸಂಭ್ರಮಪಡುತ್ತ, ಹಾಡುತ್ತ, ಹೊಗಳುತ್ತ ನಮಸ್ಕರಿಸುವ, ಪ್ರದಕ್ಷಿಣೆ ಬರುತ್ತಿರುವ, ನೋಡಿ ಸಂತಸಪಡುವ, ನಲಿಯುವ ನಾನಾ ರೀತಿಯ ಜನಗಳನ್ನು ಒಂದು ಕಡೆಗೆ ಒತ್ತಿಕೊಂಡು ಹರಿಶ್ಚಂದ್ರನು ತನ್ನ ಪರಿವಾರ ಸಮೇತನಾಗಿ ಆಗಮಿಸಿ ವಿಶ್ವಕ್ಕೆ ಒಡೆಯನಾದ ಕಾಶಿ ವಿಶ್ವನಾಥನನ್ನು ಕಂಡನು.

(ಕಾಶಿಕ್ಷೇತ್ರವು ಹಲವು ವಿಧಗಳಿಂದ ಸುಂದರವಾಗಿ ಶೋಭಿಸುತ್ತಿತ್ತು. ಅಲ್ಲಲ್ಲಿ ಕಟ್ಟಡಗಳ ಮೇಲೆ, ದೇವಾಲಯಗಳ ಗೋಪುರಗಳ ಮೇಲೆ ಅಸಂಖ್ಯ ಪುಣ್ಯಧ್ವಜಗಳು ಎತ್ತರದಲ್ಲಿ ಹಾರಾಡುತ್ತ ಆಗಸದಲ್ಲಿನ ಮೋಡಗಳನ್ನು ಅವುಗಳ ಗುಂಪನ್ನು ಸೀಳಿ ಮೇಲೆಕ್ಕೆ ಚಾಚಿಕೊಂಡು ಶೋಭಿಸುತ್ತಿದ್ದವು. ಶಿವಾಲಯಗಳ ಗರ್ಭಗುಡಿಗಳು, ಗೋಪುರಗಳ ಶಿಖರಗಳಲ್ಲಿ ಕೋಟಿ ಸೂರ್ಯರ ಪ್ರಕಾಶವನ್ನು ಸೆಳೆದುಕೊಂಡು ತಾವು ಶೋಭಿಸುತ್ತಿವೆಯೇನೋ ಎನ್ನುವಂತೆ ಹೊನ್ನಿನ ಕಳಶಗಳು ಪ್ರಕಾಶಮಾನವಾಗಿ ಹೊಳೆಯುತ್ತಿದ್ದವು. ಕಾಶಿಕ್ಷೇತ್ರದಲ್ಲಿ ಅಲ್ಲಲ್ಲಿ ಶಿವಾಲಯಗಳು ಮೆರೆಯುತ್ತ ಭಕ್ತರ ಕಣ್ಣುಗಳಿಗೆ ಶೋಭಾಯಮಾನವಾಗಿದ್ದವು. ಹೀಗೆ ಮೆರೆಯುತ್ತಿರುವ ಅಸಂಖ್ಯ ಪುಣ್ಯಧ್ವಜಗಳ ಸೊಬಗನ್ನು, ಹೊಳೆಯುವ ಹೊನ್ನಿನ ಕಳಶಗಳ ಪ್ರಕಾಶವನ್ನು, ಶಿವಾಲಯಗಳ ಸೊಬಗನ್ನು ನೋಡುತ್ತ ಭಕ್ತಜನರು ಕಾಶಿವಿಶ್ವನಾಥನನ್ನು ಸ್ತುತಿಸುತ್ತ, ಹಾಡುತ್ತ, ನೋಡುತ್ತ, ನಲಿಯುತ್ತ, ಪ್ರದಕ್ಷಿಣೆ ಬರುತ್ತ ಸಂಭ್ರಮಿಸುತ್ತಿರುವುದನ್ನು ಕಂಡು ಹರಿಶ್ಚಂದ್ರನು ತನ್ನ ಪರಿವಾರ ಸಮೇತನಾಗಿ ಆ ಭಕ್ತರ ಮಧ್ಯೆ ತಾನೂ ಸೇರಿಕೊಂಡು ಸಂಭ್ರಮಿಸುತ್ತ, ಅವರನ್ನು ಅತ್ತಿತ್ತ ಸರಿಸಿಕೊಂಡು ಮುಂದುವರಿದು, ಶಿವಾಲಯವನ್ನು ಪ್ರವೇಶಿಸಿ ವಿಶ್ವಕ್ಕೆ ಒಡೆಯನಾದ ಕಾಶಿ ವಿಶ್ವನಾಥನನ್ನು ಕಂಡನು. ಕಾಶಿ ವಿಶ್ವನಾಥನನ್ನು ಕಂಡಾಗ, ಕಾಶಿಯಲ್ಲಿನ ಭಕ್ತರ ಸಂಭ್ರಮವನ್ನು ಕಂಡಾಗ ಹರಿಶ್ಚಂದ್ರನಿಗೆ ತನ್ನ ಮನಸ್ಸಿನ ದುಗುಡ, ಗೊಂದಲಗಳು ಮರೆಯಾಗತೊಡಗಿದವು.)   

 

(ಭಾಗ-೨ರಲ್ಲಿ ಮುಂದುವರಿದಿದೆ)

 

One thought on “ಪತ್ನಿ-ಪುತ್ರ ವಿಕ್ರಯ-ರಾಘವಾಂಕ-ಭಾಗ-೧

Leave a Reply

Your email address will not be published. Required fields are marked *