ಸಾಹಿತ್ಯಾನುಸಂಧಾನ

heading1

ಮಯೂರಧ್ವಜನ ದೇಹಾರ್ಧ ದಾನ – ಲಕ್ಷ್ಮೀಶ -ಭಾಗ-೧

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎಸ್ಸಿ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ) (ಭಾಗ-೧)

ಜನನಾಥ ಕೇಳ್ ಮಯೂರಧ್ವಜ ಮಹೀಶ್ವರಂ

ದಿನನಾಥನುದಯದೊಳ್ ವಿಮಲ ಸಂಧ್ಯಾವಿಧಿಯ

ನನುಕರಿಸಿ ಕೃಷ್ಣನಿದ್ದೆಡೆಗೆ ತಾಂ ಪೋಗಿ ಕಂಡಪೆನೆಂಬ ಕಾರಿಯವನು

ಮನದೊಳಗೆ ನಿಶ್ಚಯಿಸಿ ಪೊಱಮಡುವನಾಗಿ ನಿಜ

ತನುಜನಂ ಕರೆಸಿ ಮಂತ್ರಿಗಳೆಲ್ಲರಂ ಬರಿಸಿ

ವಿನುತ ಭೂಸುರ ನೃಪಾಲಸ್ತೋಮದೊಡಗೂಡಿ ಕುಳ್ಳಿರ್ದನೋಲಗದೊಳು  ೧

ಪದ್ಯದ ಅನ್ವಯಕ್ರಮ:

ಜನನಾಥ ಕೇಳ್, ಮಯೂರಧ್ವಜ ಮಹೀಶ್ವರಂ, ದಿನನಾಥನ ಉದಯದೊಳ್, ವಿಮಲ ಸಂಧ್ಯಾವಿಧಿಯನ್ ಅನುಕರಿಸಿ, ತಾಂ ಕೃಷ್ಣನ್ ಇದ್ದ ಎಡೆಗೆ ಪೋಗಿ ಕಂಡಪೆನ್ ಎಂಬ ಕಾರಿಯವನು, ಮನದೊಳಗೆ ನಿಶ್ಚಯಿಸಿ ಪೊಱಮಡುವನಾಗಿ, ನಿಜ ತನುಜನಂ ಕರೆಸಿ, ಮಂತ್ರಿಗಳೆಲ್ಲರಂ ಬರಿಸಿ, ವಿನುತ ಭೂಸುರ, ನೃಪಾಲಸ್ತೋಮದ ಒಡಗೂಡಿ ಓಲಗದೊಳು ಕುಳ್ಳಿರ್ದನ್.

ಪದ-ಅರ್ಥ:

ಜನನಾಥ-ಜನಮೇಜಯ;  ಮಹೀಶ್ವರ-(ಮಹಿ+ಈಶ್ವರ) ರಾಜ;  ದಿನನಾಥ-ಸೂರ್ಯ;   ವಿಮಲ-ಪರಿಶುದ್ಧ;  ಸಂಧ್ಯಾವಿಧಿ- ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಮಾಡುವ ಜಪ ಮುಂತಾದ ಕರ್ಮ,  ಸಂಧ್ಯಾವಂದನೆ;  ಅನುಕರಿಸಿ-ನೆರವೇರಿಸಿ;   ಕೃಷ್ಣನಿದ್ದೆಡೆಗೆ-ಕೃಷ್ಣನಿದ್ದಲ್ಲಿಗೆ;  ಕಾರಿಯ-ಕಾರ್ಯ, ಕೆಲಸ;  ಪೊಱಮಡುವನಾಗಿ-ಹೊರಡಲು ಸಿದ್ಧನಾಗಿ;  ನಿಜ-ತನ್ನ;  ತನುಜನಂ-ಮಗನನ್ನು;   ಬರಿಸಿ-ಕರೆಸಿಕೊಂಡು;   ವಿನುತ-ಪ್ರಸಿದ್ಧರಾದ, ಮಾನ್ಯರಾದ;   ಭೂಸುರ-ಬ್ರಾಹ್ಮಣ;  ನೃಪಾಲ-ರಾಜ; ಸ್ತೋಮ-ಸಮೂಹ; ಒಡಗೂಡಿ-ಒಟ್ಟುಗೂಡಿಸಿಕೊಂಡು;  ಓಲಗ-ಸಭೆ, ಒಡ್ಡೋಲಗ.  

[ಪಾಂಡವರ ಮರಿಮಗ(ಅರ್ಜುನನ ಮಗ ಅಭಿಮನ್ಯು, ಅಭಿಮನ್ಯುವಿನ ಮಗ ಪರೀಕ್ಷಿತ, ಪರೀಕ್ಷಿತನ ಮಗ ಜನಮೇಜಯ)ನಾದ ಜನಮೇಜಯನ ಅಪೇಕ್ಷೆಯ ಮೇರೆಗೆ ಜೈಮಿನಿ ಮುನಿ ಆತನ ಪೂರ್ವಜರ ಕಥೆಯನ್ನು ಹೇಳುತ್ತಿದ್ದಾನೆ]

            ಜನಮೇಜಯನೇ ಕೇಳು, ಕೃಷ್ಣನು ತನ್ನ ರಾಜಧಾನಿ ರತ್ನಪುರಕ್ಕೆ ಆಗಮಿಸಿದ್ದಾನೆ ಎಂಬ ವಿಷಯವನ್ನು ತಿಳಿದುಕೊಂಡ ಅರಸ ಮಯೂರಧ್ವಜನು ಸೂರ್ಯೋದಯದ ಸಮಯದಲ್ಲಿ ಎದ್ದು, ಸ್ನಾನ, ಸಂಧ್ಯಾವಂದನೆ ಮೊದಲಾದ ನಿತ್ಯಕರ್ಮಗಳನ್ನು ನೆರವೇರಿಸಿಕೊಂಡು, ತಾನು ಸ್ವತಃ ಕೃಷ್ಣನಿರುವ ಸ್ಥಳಕ್ಕೆ ಹೋಗಿ ಆತನನ್ನು ಕಾಣಬೇಕೆಂಬ ಕಾರ್ಯವನ್ನು ಮನಸ್ಸಿನಲ್ಲಿಯೇ ನಿಶ್ಚಯಿಸಿಕೊಂಡು ಹೊರಡಲು ಸಿದ್ಧನಾಗಿ, ತನ್ನ ಮಗನಾದ ತಾಮ್ರಧ್ವಜನನ್ನು, ಮಂತ್ರಿಗಳನ್ನು  ಕರೆಸಿಕೊಂಡು ಮಾನ್ಯರಾದ ಬ್ರಾಹ್ಮಣರನ್ನು, ಇತರ ಸಾಮಂತ ರಾಜರನ್ನು ಒಡಗೂಡಿಕೊಂಡು ಸಮಾಲೋಚನೆಗಾಗಿ ತನ್ನ ಒಡ್ಡೋಲಗದ ಸಭೆಯಲ್ಲಿ ಆಸೀನನಾಗಿದ್ದನು.

 

ಅನ್ನೆಗಂ ವೃದ್ಧ ವಿಪ್ರಾಕಾರಮಂ ತಳೆದ

ಪನ್ನಗಾರಿಧ್ವಜಂ ನಿಜ ಶಿಷ್ಯ ಪಾರ್ಥನಂ

ತನ್ನೊಡನೆ ಕೂಡಿಕೊಂಡೊಯ್ಯನೊಯ್ಯನೆ ಹಯದ್ವಯದಿಂದೆ ಪತ್ನಿ ಸಹಿತ

ರನ್ನದೊಡವುಗಳ ಕತ್ತುರಿಯ ತಿಲಕದ ನೊಸಲ

ಮನ್ನೆಯರ ಗಡಣದಿಂ ದ್ವಿಜನಿಕರದಿಂದ ಸಂ

ಪನ್ನದೀಕ್ಷೆಯೊಳೆಸೆವ ಭೂಪನಲ್ಲಿಗೆ ಬಂದು ಕೇಳ್ ಸ್ವಸ್ತ್ಯಸ್ತು ನಿನಗೆಂದನು  ೨

ಪದ್ಯದ ಅನ್ವಯಕ್ರಮ:

ಅನ್ನೆಗಂ ವೃದ್ಧ ವಿಪ್ರಾಕಾರಮಂ ತಳೆದ ಪನ್ನಗಾರಿಧ್ವಜಂ(ಪನ್ನಗ+ಅರಿ+ಧ್ವಜಂ), ನಿಜಶಿಷ್ಯ ಪಾರ್ಥನಂ ತನ್ನೊಡನೆ ಕೂಡಿಕೊಂಡು, ಒಯ್ಯನೊಯ್ಯನೆ(ಒಯ್ಯನೆ+ಒಯ್ಯನೆ) ಹಯದ್ವಯದಿಂದೆ, ಪತ್ನಿ ಸಹಿತ ರನ್ನದ ಒಡವುಗಳ, ಕತ್ತುರಿಯ ತಿಲಕದ ನೊಸಲ, ಮನ್ನೆಯರ ಗಡಣದಿಂ, ದ್ವಿಜ ನಿಕರದಿಂದೆ, ಸಂಪನ್ನ ದೀಕ್ಷೆಯೊಳ್ ಎಸೆವ ಭೂಪನಲ್ಲಿಗೆ ಬಂದು, ಕೇಳ್ ನಿನಗೆ ಸ್ವಸ್ತಿ ಅಸ್ತು ಎಂದನು.

ಪದ-ಅರ್ಥ:

ಅನ್ನೆಗಂ-ಅಷ್ಟರಲ್ಲಿ;  ವೃದ್ಧ ವಿಪ್ರಾಕಾರ-ಮುದಿ ಬ್ರಾಹ್ಮಣನ ವೇಷ; ತಳೆದ-ಧರಿಸಿದ; ಪನ್ನಗಾರಿಧ್ವಜಂ-ಶ್ರೀಕೃಷ್ಣ (ಹಾವಿನ ವೈರಿಯಾದ ಗರುಡನನ್ನು ಧ್ವಜದಲ್ಲಿ ಚಿಹ್ನೆಯಾಗಿ ಉಳ್ಳವನು);   ನಿಜಶಿಷ್ಯ-ತನ್ನ ಶಿಷ್ಯ, ಅರ್ಜುನ;   ಒಯ್ಯನೆ-ಕ್ಷಿಪ್ರವಾಗಿ, ಬೇಗನೆ(ಒಯ್ಯನೊಯ್ಯನೆ ಎಂಬುದೊಂದು ದ್ವಿರುಕ್ತಿ);  ಹಯದ್ವಯದಿಂದೆ-ಎರಡು ಕುದುರೆಗಳ ಮೂಲಕ;  ಪತ್ನಿಸಹಿತ-ಪತ್ನಿಯನ್ನು ಒಡಗೂಡಿಕೊಂಡು;   ರನ್ನದ ಒಡವು-ರತ್ನದ ಆಭರಣ;   ಕತ್ತುರಿ-ಕಸ್ತೂರಿ;  ತಿಲಕದ ನೊಸಲ-ತಿಲಕದಿಂದ ಅಲಂಕೃತವಾದ ಹಣೆಯ; ಮನ್ನೆಯರ ಗಡಣದಿಂ-ಗೌರವಾನ್ವಿತರ ಸಮೂಹದಿಂದ;  ದ್ವಿಜನಿಕರ-ಬ್ರಾಹ್ಮಣರ ಸಮೂಹ;  ಸಂಪನ್ನದೀಕ್ಷೆ-ಯುಕ್ತವಾದ ನಿಯಮ; ಎಸೆವ-ಶೋಭಿಸುವ;  ಭೂಪ-ರಾಜ ಮಯೂರಧ್ವಜ;  ಸ್ವಸ್ತ್ಯಸ್ತು(ಸ್ವಸ್ತಿ+ಅಸ್ತು)-ಒಳ್ಳೆಯದಾಗಲಿ.

            ರತ್ನಪುರದ ಅರಮನೆಯ ಆಸ್ಥಾನದಲ್ಲಿ ರಾಜನಾದ ಮಯೂರಧ್ವಜನು ಒಡ್ಡೋಲಗವನ್ನು ನಡೆಸುತ್ತಿರುವಷ್ಟರಲ್ಲಿಯೇ, ಶ್ರೀಕೃಷ್ಣನು ಒಬ್ಬ ಮುದಿ ಬ್ರಾಹ್ಮಣನ ವೇಷವನ್ನು ತಳೆದು ತನ್ನ ಶಿಷ್ಯನಾದ ಬ್ರಾಹ್ಮಣವೇಷಧಾರಿ ಅರ್ಜುನನನ್ನು ಕೂಡಿಕೊಂಡು, ತನ್ನ ಪತ್ನಿಸಹಿತನಾಗಿ ಎರಡು ಪ್ರತೇಕ ಕುದುರೆಗಳನ್ನೇರಿಕೊಂಡು, ರತ್ನದ ಆಭರಣಗಳನ್ನು ಧರಿಸಿ, ಹಣೆಯಲ್ಲಿ ಕಸ್ತೂರಿ ತಿಲಕವನ್ನಿರಿಸಿಕೊಂಡು ಅಲಂಕೃತನಾಗಿ,  ಗೌರವಾನ್ವಿತರ ಹಾಗೂ ಬ್ರಾಹ್ಮಣರ ಸಮೂಹದೊಂದಿಗೆ ದೀಕ್ಷಾಬದ್ಧನಾಗಿರುವ ರಾಜ ಮಯೂರಧ್ವಜನ ಆಸ್ಥಾನಕ್ಕೆ ಬಂದು ’ರಾಜನೇ, ನಿನಗೆ ಒಳ್ಳೆಯದಾಗಲಿ’ ಎಂದು ಹರಸಿದನು.

 

ದ್ವಿಜತಿಲಕ ನೀನನುಗ್ರಹಿಸೆನಗೆ ಧನ್ಯನಾಂ

ನಿಜ ನಿಷ್ಯನಂ ಕೂಡಿಕೊಂಡು ಮಖಮಂಟಪಕೆ

ಬಿಜಯಮಾಡಿದ ಕಜ್ಜಮಾವುದೇತಱೊಳಾಸೆ ನಿನಗಾರ್ತಮೇನಿದಱೊಳು

ತ್ಯಜಿಸಬೇಡೊಂದುಮಂ ಪೇಳ್ದೊಡಾನೀವೆನಾ

ರಜಮಿಲ್ಲದೆಲ್ಲಮಂ ವಾಚಿಸೆಂದಾ ಶಿಖಿ

ಧ್ವಜನಾಡಲಾ ವಿಪ್ರನಿಂತೆಂದು ತನ್ನ ವೃತ್ತಾಂತಮಂ ವಿವರಿಸಿದನು  ೩

ಪದ್ಯದ ಅನ್ವಯಕ್ರಮ:

ನೀನು ದ್ವಿಜತಿಲಕ, ಎನಗೆ ಅನುಗ್ರಹಿಸು, ಆಂ ಧನ್ಯನ್, ನಿಜ ಶಿಷ್ಯನಂ ಕೂಡಿಕೊಂಡು ಮಖಮಂಟಪಕೆ ಬಿಜಯ ಮಾಡಿದ ಕಜ್ಜಂ ಆವುದು? ನಿನಗೆ ಏತಱೊಳ್ ಆಸೆ? ಇದಱೊಳು ನಿನಗೆ ಆರ್ತಂ ಏನ್? ಒಂದುಮಂ ತ್ಯಜಿಸಬೇಡ, ಪೇಳ್ದೊಡೆ ಆರಜಂ ಇಲ್ಲದೆ ಎಲ್ಲಮಂ ಆನ್ ಈವೆನ್, ವಾಚಿಸು ಎಂದು ಆ ಶಿಖಿಧ್ವಜನ್ ಆಡಲ್, ಆ ವಿಪ್ರನ್ ತನ್ನ ವೃತ್ತಾಂತಮಂ ಇಂತೆಂದು ವಿವರಿಸಿದನು.

ಪದ-ಅರ್ಥ:

ದ್ವಿಜತಿಲಕ-ಬ್ರಾಹ್ಮಣ ಶ್ರೇಷ್ಠ;   ಅನುಗ್ರಹಿಸು-ಆಶೀರ್ವದಿಸು;  ಆಂ ಧನ್ಯನ್-ನಾನು ಧನ್ಯನಾದೆನು; ನಿಜ-ತನ್ನ;  ಮಖಮಂಟಪ-ಯಜ್ಞಮಂಟಪ;  ಬಿಜಯಮಾಡಿದ-ಆಗಮಿಸಿದ;  ಕಜ್ಜ-ಕಾರ್ಯ, ಕೆಲಸ;  ಆವುದು-ಯಾವುದು?, ಏನು?;  ಏತಱೊಳ್-ಯಾವುದರಲ್ಲಿ; ಆರ್ತಮೇನ್-ಕಷ್ಟವೇನು?, ದುಃಖವೇನು?;  ತ್ಯಜಿಸಬೇಡವೊಂದುಮಂ-ಏನನ್ನೂ ಬಿಡಬೇಡ, ಏನನ್ನೂ ಮರೆಮಾಚಬೇಡ;   ಆರಜಮಿಲ್ಲದೆ-ಕಳವಳವಿಲ್ಲದೆ;   ವಾಚಿಸು-ಹೇಳಿಬಿಡು; ಶಿಖಿಧ್ವಜ-ಮಯೂರಧ್ವಜ; ಆಡಲ್-ಆಡಿದಾಗ, ಕೇಳಿದಾಗ; ವಿಪ್ರ-ಬ್ರಾಹ್ಮಣ; ಇಂತೆಂದು-ಹೀಗೆಂದು;  ವೃತ್ತಾಂತ-ಕಥೆ.

            ಬ್ರಾಹ್ಮಣೋತ್ತಮರೇ, ನನ್ನನ್ನುಆಶೀರ್ವದಿಸಿ. ನಿಮ್ಮಿಂದ ನಾನೀಗ ಧನ್ಯನಾದೆನು. ತಮ್ಮ ಶಿಷ್ಯನನ್ನು ಒಡಗೂಡಿಕೊಂಡು ಯಜ್ಞಮಂಟಪಕ್ಕೆ ದಯಮಾಡಿಸಿದ್ದೀರಿ. ತಾವು ಆಗಮಿಸಿದ ಕಾರ್ಯವೇನು? ನಿಮಗೆ ಯಾವ  ಅಭಿಲಾಷೆಯಿದೆ? ನಿಮಗೆ ಒದಗಿರುವ ಕಷ್ಟವೇನು? ಯಾವುದನ್ನೂ ಬಿಟ್ಟುಬಿಡದೆ ತಿಳಿಸಿದರೆ ನಿಮ್ಮಾಸೆಗಳೆಲ್ಲವನ್ನೂ ಈಡೇರಿಸುತ್ತೇನೆ. ಯಾವುದೇ ಕಳವಳವಿಲ್ಲದೆ, ಸಂಕೋಚವಿಲ್ಲದೆ ನನ್ನಲ್ಲಿ ಹೇಳಿಬಿಡಿ ಎಂದು ಮಯೂರಧ್ವಜನು ಕೇಳಿದಾಗ ಆ ಬ್ರಾಹ್ಮಣನು ಹೀಗೆಂದು ತನ್ನ ಕಥೆಯನ್ನು ವಿವರಿಸಿದನು.

 

ಉರ್ವೀಂದ್ರ ಕೇಳಾದೊಡಾಂ ಧರ್ಮಪುರದೊಳ್ ಪೆ

ಸರ್ವಡೆದಿಹೆಂ ಕೃಷ್ಣಶರ್ಮನೆಂದೆನಗೆ ಸುತ

ನೊರ್ವನುಂಟಾತನ ವಿವಾಹಕ್ಕೆ ತವ ಪುರೋಹಿತ ಸತ್ಯಶೀಲನಲ್ಲಿ

ಒರ್ವ ಕನ್ನಿಕೆ ಮದುವೆಗಿಹಳೆಂದೊಡಲ್ಲಿಗ

ಕ್ಕರ್ವೆರಸಿ ಮಗನನೊಡಗೊಂಡು ಬರುತಿರ್ದೆಂ ಪೊ

ದರ್ವಡೆದಡವಿಯ ಪಥದೊಳ್ ಪಿಡಿದುದೊಂದು ಕೇಸರಿ ತನ್ನ ನಂದನನನು  ೪

ಪದ್ಯದ ಅನ್ವಯಕ್ರಮ:

ಆದೊಡೆ, ಉರ್ವೀಂದ್ರ ಕೇಳ್, ಆಂ ಧರ್ಮಪುರದೊಳ್ ಪೆಸರ್ ಪಡೆದಿಹೆಂ, ಎನಗೆ ಕೃಷ್ಣಶರ್ಮನ್  ಎಂದು ಒರ್ವ ಸುತನುಂಟು, ಆತನ ವಿವಾಹಕ್ಕೆ ತವ ಪುರೋಹಿತ ಸತ್ಯಶೀಲನಲ್ಲಿ ಒರ್ವ ಕನ್ನಿಕೆ ಮದುವೆಗೆ ಇಹಳ್ ಎಂದೊಡೆ ಅಲ್ಲಿಗೆ ಅಕ್ಕರ್ವೆರಸಿ ಮಗನನ್ ಒಡಗೊಂಡು ಬರುತಿರ್ದೆಂ ಪೊದರ್ ಪಡೆದ ಅಡವಿಯ ಪಥದೊಳ್  ತನ್ನ ನಂದನನನು ಒಂದು ಕೇಸರಿ ಪಿಡಿದುದು.

ಪದ-ಅರ್ಥ:

ಉರ್ವೀಂದ್ರ-ಭೂಪಾಲ, ರಾಜ;  ಪೆಸರ್ವಡೆದಿಹೆಂ-ಹೆಸರುವಾಸಿಯಾಗಿದ್ದೇನೆ, ಪ್ರಸಿದ್ಧನಾಗಿದ್ದೇನೆ;  ಸುತನೊರ್ವನುಂಟು-ಮಗನೊಬ್ಬನಿದ್ದಾನೆ;  ತವ-ನಿಮ್ಮ;  ಪುರೋಹಿತ-ಮದುವೆ ಮೊದಲಾದ ಶುಭಕಾರ್ಯಗಳನ್ನು ಮಾಡಿಸುವವನು;  ಕನ್ನಿಕೆ-ಮದುವೆಯಾಗದ ಹುಡುಗಿ, ಕನ್ಯೆ;  ಮದುವೆಗಿಹಳ್-ಮದುವೆಗಿದ್ದಾಳೆ, ಮದುವೆಗೆ ಸಿದ್ಧಳಾಗಿದ್ದಾಳೆ;  ಅಕ್ಕರ್ವೆರಸಿ-ಪ್ರೀತಿಯಿಂದ, ವಿಶ್ವಾಸದಿಂದ;  ಪೊದರ್ವಡೆದಡವಿಯ-ಪೊದರಿನಿಂದ ಕೂಡಿದ ಅಡವಿಯ; ಪಥದೊಳ್-ದಾರಿಯಲ್ಲಿ;  ಕೇಸರಿ-ಸಿಂಹ;  ನಂದನ-ಮಗ.

            ಅರಸನೇ, ನೀನಿಷ್ಟು ಭರವಸೆಯನ್ನು ನೀಡುವೆ ಎಂದಾದರೆ ಕೇಳು, ನಾನು ಧರ್ಮಪುರದಲ್ಲಿ ಹೆಸರುವಾಸಿಯಾದ ಬ್ರಾಹ್ಮಣನಾಗಿದ್ದೇನೆ. ನನಗೆ ಕೃಷ್ಣಶರ್ಮನೆಂಬ ಒಬ್ಬ ಮಗನಿದ್ದಾನೆ. ಆತನಿಗೆ ಮದುವೆಮಾಡಲು ನಿರ್ಧರಿಸಿ, ನಿಮ್ಮ ಪುರೋಹಿತನಾದ ಸತ್ಯಶೀಲನಲ್ಲಿ ಮದುವೆಪ್ರಾಯಕ್ಕೆ ಬಂದಿರುವ ಕನ್ಯೆಯೊಬ್ಬಳಿದ್ದಾಳೆ ಎಂದು ತಿಳಿದು, ತುಂಬಾ ಸಂತೋಷದಿಂದ ಮಗನನ್ನು ಒಡಗೂಡಿಕೊಂಡು ಇಲ್ಲಿಗೆ  ಬರುತ್ತಿದ್ದೆವು. ಪೊದರುಗಳಿಂದ ಕೂಡಿದ ಕಾಡಿನ ದಾರಿಯಲ್ಲಿ ಬರುತ್ತಿರುವಾಗ ಒಂದು ಸಿಂಹ ನನ್ನ ಮಗನ ಮೇಲೆರಗಿ ಆತನನ್ನು ಹಿಡಿದುಕೊಂಡಿತು ಎಂದನು.

 

ಆ ಸಿಂಗಮತಿಭರದೊಳೆಱಗಲಾ ಭೀತಿಗೆ ನೃ

ಕೇಸರಿ ಸ್ಮರಣೆಯಂ ಬಿಡದೆ ನಾನಕಟ ಹಾ

ಹಾ ಸೂನು ಹಾಯೆಂದು ಹಂಬಲಿಸಲದು ತನ್ನ ಘೋರ ನಖ ದಂಷ್ಟ್ರದಿಂದ

ಗಾಸಿಮಾಡದೆ ಪುತ್ರನಂ ಪಿಡಿದುಕೊಂಡಟ್ಟ

ಹಾಸದಿಂ ಮಾನವರ ತೆಱದಿಂದ ನುಡಿದುದೆಲೆ

ಭೂಸುರೋತ್ತಮ ತನ್ನ ಮಾತನಾಲಿಸು ಬಱಿದೆ ಹಲುಬಲೇನಪ್ಪುದೆಂದು  ೫

ಪದ್ಯದ ಅನ್ವಯಕ್ರಮ:

ಸಿಂಗಂ ಅತಿ ಭರದೊಳ್ ಎರಗಲ್ ಆ ಭೀತಿಗೆ ನೃಕೇಸರಿ ಸ್ಮರಣೆಯಂ ಬಿಡದೆ ನಾನ್ ಅಕಟ ಹಾ ಹಾ ಸೂನು ಹಾ ಎಂದು ಹಂಬಲಿಸಲ್ ಅದು ತನ್ನ ಘೋರ ನಖ ದಂಷ್ಟ್ರದಿಂದ ಗಾಸಿಮಾಡದೆ ಪುತ್ರನಂ ಪಿಡಿದುಕೊಂಡು ಅಟ್ಟಹಾಸದಿಂ ಮಾನವರ ತೆಱದಿಂದ ನುಡಿದುದು ಎಲೆ ಭೂಸುರೋತ್ತಮ ತನ್ನ ಮಾತನ್ ಆಲಿಸು, ಬಱಿದೆ ಹಲುಬಲ್ ಏನಪ್ಪುದು ಎಂದು.

ಪದ-ಅರ್ಥ:

ಸಿಂಗಂ-ಸಿಂಹವು;  ಅತಿಭರದೊಳ್-ಅತ್ಯಂತ ಕ್ಷಿಪ್ರವಾಗಿ;  ಎರಗಲ್-ಎರಗಿದಾಗ, ಮೇಲೇರಿದಾಗ;  ನೃಕೇಸರಿ-ನರಸಿಂಹ; ಸ್ಮರಣೆ-ಧ್ಯಾನ; ನಖ-ಉಗುರು;  ದಂಷ್ಟ್ರ-ದಾಡೆ; ಗಾಸಿಮಾಡದೆ-ಗಾಯಗೊಳಿಸದೆ; ಮಾನವರ ತೆಱದಿಂದ-ಮನುಷ್ಯರ ರೀತಿಯಿಂದ;  ಭೂಸುರೋತ್ತಮ-ಬ್ರಾಹ್ಮಣಶ್ರೇಷ್ಠನೇ;  ಬಱಿದೆ-ಸುಮ್ಮನೆ; ಹಲುಬಲ್-ನೊಂದುಕೊಂಡರೆ; ಏನಪ್ಪುದು-ಏನಾಗುತ್ತದೆ?.

            ಆ ಸಿಂಹವು ಅತ್ಯಂತ ವೇಗವಾಗಿ ನನ್ನ ಮಗನ ಮೇಲೆ ಎರಗಿದಾಗ, ಅದು ಮೇಲೆರಗಿದ ಭೀತಿಗೆ ನಾನು ನರಸಿಂಹನ ನಾಮಸ್ಮರಣೆಯನ್ನು ಮಾಡುತ್ತ ಹಾ ಹಾ ಮನಗೇ ಎಂದು ಹಂಬಲಿಸಿದೆ. ಆಗ ಸಿಂಹವು ತನ್ನ ಹರಿತವಾದ ಉಗುರು ಹಾಗೂ ದಾಡೆ(ಹಲ್ಲು)ಗಳಿಂದ ಮಗನನ್ನು ಗಾಯಗೊಳಿಸದೆ  ಹಾಗೆಯೇ ಹಿಡಿದುಕೊಂಡು ಅಟ್ಟಹಾಸದಿಂದ ಮನುಷ್ಯರು ಮಾತಾಡುವ ರೀತಿಯಲ್ಲಿ,  ’ಎಲೆ ಬ್ರಾಹ್ಮಣನೇ ನನ್ನ ಮಾತನ್ನು ಕೇಳು. ನೀನು ಈ ರೀತಿಯಲ್ಲಿ ಭಯಭೀತನಾಗಿ ನೊಂದುಕೊಂಡರೆ ಏನು ತಾನೆ ಮಾಡಲು ಸಾಧ್ಯ?’ ಎಂದಿತು.

 

ಮಕ್ಕಳಿಲ್ಲದವರ್ಗೆ ಲೋಕಮಿಲ್ಲೆಂಬುದೇ

ನಕ್ಕಜವೆ ನಿಖಿಳನಿಗಮಾರ್ಥಮಿದು ತನಗೀಗ

ಸಿಕ್ಕಿದನಲಾ ನಿನ್ನ ತನುಸಂಭವಂ ಬಿಡಿಸಿಕೊಳಲಾರ್ಪರಾರು ಬಱಿದೆ

ಕಕ್ಕುಲತೆ ಬೇಡ ನಡೆ ಶಿಷ್ಯನಂ ಕರಕೊಂಡು

ಮಿಕ್ಕ ಸುತರುಳ್ಳೊಡಾರೈವುದೆನೆ ಮಗನ  ಮೇ

ಲಕ್ಕಱಾವರಿಸಿ ಕಡು ಶೋಕದಿಂದುಗ್ರ ಕೇಸರಿಗೆ ತಾನಿಂತೆಂದೆನು  ೬

ಪದ್ಯದ ಅನ್ವಯಕ್ರಮ:

ಮಕ್ಕಳಿಲ್ಲದವರ್ಗೆ ಲೋಕಂ ಇಲ್ಲಎಂಬುದು ಏನ್ ಅಕ್ಕಜವೆ? ನಿಖಿಳ ನಿಗಮಾರ್ಥಂ ಇದು, ತನಗೆ ಈಗ ಸಿಕ್ಕಿದನಲಾ ನಿನ್ನ ತನುಸಂಭವಂ ಬಿಡಿಸಿಕೊಳಲ್ ಆರ್ಪರ್ ಆರ್? ಬಱಿದೆ ಕಕ್ಕುಲತೆ ಬೇಡ, ಶಿಷ್ಯನಂ ಕರಕೊಂಡು ನಡೆ, ಮಿಕ್ಕ ಸುತರ್ ಉಳ್ಳೊಡೆ ಆರೈವುದು ಎನೆ, ಮಗನ ಮೇಲೆ ಅಕ್ಕರ್ ಆವರಿಸಿ ಕಡು ಶೋಕದಿಂದ ಉಗ್ರ ಕೇಸರಿಗೆ ತಾನ್ ಇಂತು ಎಂದೆನು.

ಪದ-ಅರ್ಥ:

ಮಕ್ಕಳಿಲ್ಲದವರ್ಗೆ-ಸಂತಾನವಿಲ್ಲದವರಿಗೆ; ಲೋಕಮಿಲ್ಲ-ಸದ್ಗತಿಯಿಲ್ಲ; ಅಕ್ಕಜ-ಆಶ್ಚರ್ಯ; ನಿಖಿಳ-ಸಮಸ್ತ;  ನಿಗಮಾರ್ಥ-ವೇದದ ಸಾರ;  ತನುಸಂಭವ-ಮಗ; ಆರ್ಪರು-ಸಮರ್ಥರು;  ಬಱಿದೆ-ಸುಮ್ಮನೆ;  ಕಕ್ಕುಲತೆ-ಹಂಬಲ;  ಮಿಕ್ಕ ಸುತರ್-ಬೇರೆ ಮಗಂದಿರು;  ಉಳ್ಳೊಡೆ-ಇದ್ದರೆ; ಆರೈವುದು-ಕಾಪಾಡುವುದು;  ಅಕ್ಕರ್-ಅಕ್ಕರೆ, ಪ್ರೀತಿ;  ಕಡುಶೋಕ-ಅತಿಯಾದ ದುಃಖ;  ಉಗ್ರಕೇಸರಿ-ಕ್ರೂರಿಯಾದ ಸಿಂಹ.

            ಮಕ್ಕಳಿಲ್ಲದವರಿಗೆ ಸದ್ಗತಿ ದೊರೆಯಲಾರದು ಎಂಬ ಮಾತಿನಲ್ಲಿ ಆಶ್ಚರ್ಯವೇನಿದೆ?  ವೇದದ ಸಾರವೇ ಇದು. ನನಗೆ ಈಗ ನಿನ್ನ ಮಗ ಸಿಕ್ಕಿದ್ದಾನೆ. ಈತನನ್ನು ಬಿಡಿಸಿಕೊಳ್ಳುವ ಸಮರ್ಥರು ನಿಮ್ಮಲ್ಲಿ ಯಾರಿದ್ದಾರೆ? ಸುಮ್ಮನೆ ಮಗನ ಬಗೆಗೆ ಹಂಬಲ ಬೇಡ, ಬಿಟ್ಟುಬಿಡು. ನಿನಗೆ ಬೇರೆ ಮಗಂದಿರು ಇದ್ದರೆ ಅವರನ್ನು ಜೋಪಾನವಾಗಿ ಕಾಪಾಡಿಕೊಳ್ಳುವಿಯಂತೆ. ನಿನ್ನ ಶಿಷ್ಯನ್ನು ಕರೆದುಕೊಂಡು ಹೊರಟುಹೋಗು ಎಂದು ಆ ಸಿಂಹ ಹೇಳಿದಾಗ, ಮಗನ ಮೇಲೆ ನನಗೆ ಪ್ರೀತಿ ಅತಿಯಾಗಿ ನಾನು ಅತ್ಯಂತ ದುಃಖದಿಂದ ಆ ಸಿಂಹಕ್ಕೆ ಹೀಗೆ ಹೇಳಿದೆನು.

 

ಅತಿವೃದ್ಧನಲ್ಪದಿನಮಿರ್ಪವಂ ಪುತ್ರವ

ರ್ಜಿತನಿನ್ನು ತಾನಿರ್ದು ಮಾಳ್ಪುದೇನೆನ್ನನಾ

ಹುತಿಗೊಂಡು ತನಗೆ ಗತಿಗೊಡುವ ಸುತನಂ ಬಿಡುವುದೆಂದು ನಾಂ ಬೇಡಿಕೊಳಲು

ಮೃತಿಯ ಬಯಸುವ ದುಃಖಿಗಾವ ಕಂಟಕಮಿಲ್ಲ

ಹತವಹುದು ಸುಖದಿಂದ ಬಾಳ್ವಂಗೆ ಕಾಲಕ

ಲ್ಪಿತದಿಂದೆ ದೊರಕಿದನಿವಂ ನಿನ್ನನೊಲ್ಲೆನಾಂ ಪೋಗೆಂದು ಹರಿ ನುಡಿದುದು   ೭

ಪದ್ಯದ ಅನ್ವಯಕ್ರಮ:

ಅತಿ ವೃದ್ಧನ್, ಪುತ್ರವರ್ಜಿತನ್, ಅಲ್ಪದಿನಂ ಇರ್ಪವಂ, ಇನ್ನು ನಾನ್ ಇರ್ದು ಏನ್ ಮಾಳ್ಪುದು? ಎನ್ನನ್ ಆಹುತಿಗೊಂಡು ತನಗೆ ಗತಿಗೊಡುವ ಸುತನಂ ಬಿಡುವುದು ಎಂದು ನಾಂ ಬೇಡಿಕೊಳಲು, ಮೃತಿಯ ಬಯಸುವ ದುಃಖಿಗೆ ಆವ ಕಂಟಕಂ ಇಲ್ಲ, ಸುಖದಿಂದ ಬಾಳ್ವಂಗೆ ಹತವಹುದು, ಇವಂ ಕಾಲ ಕಲ್ಪಿತದಿಂದೆ ದೊರಕಿದನ್, ಆಂ ನಿನ್ನನ್ ಒಲ್ಲೆನ್, ಪೋಗು ಎಂದು ಹರಿ ನುಡಿದುದು.

ಪದ-ಅರ್ಥ:

ಪುತ್ರವರ್ಜಿತನ್-ಮಗನನ್ನು ಕಳೆದುಕೊಂಡವನು; ಅಲ್ಪದಿನಂ ಇರ್ಪವಂ-ಕೆಲವೇ ದಿನ ಬದುಕುವವನು;  ಎನ್ನನ್ ಆಹುತಿಗೊಂಡು-ನನ್ನನ್ನು ಬಲಿತೆಗೆದುಕೊಂಡು; ಗತಿಗೊಡುವ-ಸದ್ಗತಿಯನ್ನು ಕೊಡುವ;   ಸುತನಂ ಬಿಡುವುದು-ಮಗನನ್ನು ಬಿಟ್ಟುಬಿಡುವುದು;   ಮೃತಿ-ಸಾವು; ಕಂಟಕಂ-ತೊಂದರೆ;   ಹತವಹುದು-ನಿರಾಶೆಯಾಗಬಹುದು;   ಕಾಲಕಲ್ಪಿತ-ಕಾಲಕ್ಕನುಗುಣವಾಗಿ;   ನಿನ್ನನ್ನೊಲ್ಲೆನ್-ನಿನ್ನನ್ನು ಒಪ್ಪಿಕೊಳ್ಳಲಾರೆ;   ಹರಿ-ಸಿಂಹ.

            ಎಲೆ ಸಿಂಹವೇ, ನಾನು ಮುದುಕನಾಗಿದ್ದೇನೆ. ಮೇಲಾಗಿ ಇನ್ನು ಕೆಲವೇ ಕಾಲ ಬಾಳುವವನು. ಇನ್ನು ನಾನು ಬದುಕಿ ಏನು ಪ್ರಯೋಜನ? ಹಾಗಾಗಿ ನನ್ನ ಮಗನ ಬದಲಿಗೆ ನನ್ನನ್ನು ಬಲಿತೆಗೆದುಕೊಂಡು ನನಗೆ ಸದ್ಗತಿಯನ್ನು ನೀಡುವ ನನ್ನ ಮಗನನ್ನು ಬಿಟ್ಟುಬಿಡು ಎಂದು ಬೇಡಿಕೊಂಡಾಗ, ಸಿಂಹವು, ಸಾವನ್ನು ಬಯಸುವ ದುಃಖಿಗೆ ಯಾವ ತೊಂದರೆಯೂ ಇಲ್ಲ, ದುಃಖದಲ್ಲಿ ಬಾಳುವವನಿಗೆ ಇದರಿಂದ ನಿರಾಶೆಯಾಗಬಹುದು. ನನಗೆ ಕಾಲಕ್ಕನುಗುಣವಾಗಿ ನಿನ್ನ ಮಗ ದೊರಕಿದ್ದಾನೆ. ನಿನ್ನ ಮಗನನ್ನು ಬಿಟ್ಟುಬಿಟ್ಟು ನಿನ್ನನ್ನು ನಾನು ಸ್ವೀಕರಿಸಲಾರೆ, ನೀನು ಹೊರಟುಹೋಗು ಎಂದಿತು.

 

ಎನ್ನೊಳಾ ಸಿಂಹವಾಡಿದ ನುಡಿಯನೀಗಳಾಂ

ನಿನ್ನೊಳೆಂಬುದು ನೀತಿಯಾದಪುದೆ ಸುತಹೀನ

ಮಿನ್ನೇಸು ದಾರುಣವೊ ಪೇಳಬೇಕಾಗಿಹುದು ನೃಪ ಕೇಳದರ ಮಾತನು

ಮುನ್ನ ಮುದಿಗೂಡು ತಪದಿಂದೊಣಗಿತಿದನೊಲ್ಲೆ

ನುನ್ನಿಸದಿರಾರ್ಪೊಡೀವುದು ಯಜ್ಞದೀಕ್ಷ ಸಂ

ಪನ್ನ ಫಲಪುಷ್ಟಮಾಗಿಹ ಮಯೂರಧ್ವಜನ ಮೈಯೊಳರ್ಧವನೆಂದುದು  ೮

ಪದ್ಯದ ಅನ್ವಯಕ್ರಮ:

ಎನ್ನೊಳ್ ಆ ಸಿಂಹವು ಆಡಿದ ನುಡಿಯನ್ ಈಗಳ್ ಆಂ ನಿನ್ನೊಳ್ ಎಂಬುದು ನೀತಿ ಆದಪುದೆ? ಸುತಹೀನಂ ಇನ್ನು ಏಸು ದಾರುಣವೊ ಪೇಳಬೇಕಾಗಿಹುದು, ನೃಪ ಕೇಳ್ ಅದರ ಮಾತನು, ಮುನ್ನ ಮುದಿಗೂಡು, ತಪದಿಂದ ಒಣಗಿತು ಇದನ್ ಒಲ್ಲೆನ್, ಉನ್ನಿಸದಿರು, ಆರ್ಪೊಡೆ ಯಜ್ಞದೀಕ್ಷ ಸಂಪನ್ನ ಫಲಪುಷ್ಟಂ ಆಗಿಹ ಮಯೂರಧ್ವಜನ ಮೈಯೊಳ್ ಅರ್ಧವನ್ ಈವುದು ಎಂದುದು.

ಪದ-ಅರ್ಥ:

ಎನ್ನೊಳ್-ನನ್ನಲ್ಲಿ;   ಸಿಂಹವಾಡಿದ-ಸಿಂಹವು ಹೇಳಿದ;   ನಿನ್ನೊಳೆಂಬುದು-ನಿನ್ನಲ್ಲಿ ಹೇಳಿದುದು;  ನೀತಿಯಾದಪುದೆ-ನೀತಿ ಎನಿಸುವುದೆ?, ಸರಿಯೆನಿಸುವುದೆ?;  ಸುತಹೀನಂ-ಮಗನಿಲ್ಲದವನು;  ಇನ್ನೇಸು-ಇನ್ನೆಷ್ಟು;  ದಾರುಣವೊ-ಕ್ರೂರವಾದುದೊ;   ಮುನ್ನ-ಮೊದಲೇ; ಮುದಿಗೂಡು-ಮುದಿಯಾದ ಎಲುಬಿನ ಗೂಡು;  ಉನ್ನಿಸದಿರ್-ಆಲೋಚಿಸಬೇಡ;  ಆರ್ಪೊಡೆ-ಸಾಧ್ಯವಾದರೆ;  ಈವುದು-ನೀಡುವುದು;  ಯಜ್ಞದೀಕ್ಷ ಸಂಪನ್ನ -ಯಜ್ಞದೀಕ್ಷೆಯಿಂದ ಕೂಡಿದ;  ಫಲಪುಷ್ಟಮಾಗಿಹ-(ಯಜ್ಞದ)ಪುಣ್ಯದಿಂದ ಸಂತೃಪ್ತನಾಗಿರುವ.

            ರಾಜನಾದ ಮಯೂರಧ್ವಜನೆ, ಆ ಸಿಂಹವು ನನ್ನಲ್ಲಿ ಹೇಳಿದ ಮಾತುಗಳನ್ನು ಈಗ ನಾನು ನಿನ್ನಲ್ಲಿ ಹೇಳಿಕೊಂಡರೆ ಅದು ನೈತಿಕವೆನಿಸಲಾರದು. ಮಗನಿಲ್ಲದವನ ಸ್ತಿತಿಗತಿ ಇನ್ನೆಷ್ಟು ಕ್ರೂರವಾಗಬಹುದು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ರಾಜನೇ, ಸಿಂಹ ನನ್ನಲ್ಲಿ ಆಡಿದ ಮುಂದಿನ ಮಾತುಗಳನ್ನು ಕೇಳು. ’ನಿನ್ನ ದೇಹವು ಮೊದಲೇ ಮುದಿಗೂಡಾಗಿದೆ. ಅದರ ಮೇಲೆ ತಪಸ್ಸನ್ನಾಚರಿಸಿ ದೇಹವೆಲ್ಲವೂ ಒಣಗಿಹೋಗಿದೆ. ನಿನ್ನ ದೇಹವನ್ನು ನಾನು ಒಪ್ಪಿಕೊಳ್ಳಲಾರೆ. ನೀನು ಬೇರೇನೂ ಆಲೋಚಿಸಬೇಡ. ಸಾಧ್ಯವಾದರೆ ಯಜ್ಞದೀಕ್ಷೆಯಿಂದ ಕೂಡಿ ಯಜ್ಞದ ಫಲದಿಂದ ಪುಣ್ಯವಂತನೆನಿಸಿಕೊಂಡು ಸಂತೃಪ್ತನಾಗಿರುವ ರಾಜ ಮಯೂರಧ್ವಜನ ಮೈಯಲ್ಲಿ ಅರ್ಧಭಾಗವನ್ನು ನೀಡುವುದಕ್ಕೆ ಪ್ರಯತ್ನಿಸು’ ಎಂದಿತು.

 

ಕೇಳ್ದವನೀಶ್ವರಂ ಪ್ರಚ್ಛನ್ನ ಭೂಸುರಂ

ಪೇಳ್ದ ವೃತ್ತಾಂತಮಂ ಕೀರ್ತಿ ನಿಲ್ವುದು ನರರ

ಬಾಳ್ದಿಟಮಿಲ್ಲೆಂದು ನಿಶ್ಚೈಸಿ ವಿಪ್ರನಂ ಕರೆದು ನಿನಗೀ ತನುವನು

ಸೀಳ್ದು ಕೊಟ್ಟಪೆನೆಂದಭಯವಿತ್ತು ಬಳಿಕ ತಾ

ನಾಳ್ದಿಳೆಯನಾತ್ಮಜಂಗಪ್ಪೈಸಿ ಹರ್ಷಮಂ

ತಾಳ್ದನಿಬರೆಲ್ಲರಂ ಮಂಟಪದೊಳಿಹುದೆಂದು ಕುಳ್ಳಿರುಸಿ ಪೊಱಮಟ್ಟನು  ೯

ಪದ್ಯದ ಅನ್ವಯಕ್ರಮ:

ಅವನೀಶ್ವರಂ, ಪ್ರಚ್ಛನ್ನ ಭೂಸುರಂ ಪೇಳ್ದ ವೃತ್ತಾಂತಮಂ ಕೇಳ್ದು, ಕೀರ್ತಿ ನಿಲ್ವುದು, ನರರ ಬಾಳ್ ದಿಟಂ ಇಲ್ಲೆಂದು ನಿಶ್ಚೈಸಿ, ವಿಪ್ರನಂ ಕರೆದು ನಿನಗೆ ಈ ತನುವನು ಸೀಳ್ದು ಕೊಟ್ಟಪೆನ್ ಎಂದು ಅಭಯವ ಇತ್ತು, ಬಳಿಕ ತಾನ್ ಆಳ್ದ ಇಳೆಯನ್ ಆತ್ಮಜಂಗೆ ಅಪ್ಪೈಸಿ, ಹರ್ಷಮಂ ತಾಳ್ದನ್, ಅನಿಬರೆಲ್ಲರಂ ಮಂಟಪದೊಳ್ ಇಹುದೆಂದು ಕುಳ್ಳಿರಿಸಿ ಪೊಱಮಟ್ಟನು.

ಪದ-ಅರ್ಥ:

ಅವನೀಶ್ವರ-ರಾಜ (ಮಯೂರಧ್ವಜ);  ಪ್ರಚ್ಛನ್ನ-ಮಾರುವೇಷದ;  ಭೂಸುರ-ಬ್ರಾಹ್ಮಣ;  ಪೇಳ್ದ ವೃತ್ತಾಂತ-ಹೇಳಿದ ಸಂಗತಿ;  ಕೀರ್ತಿ ನಿಲ್ವುದು-ಕೀರ್ತಿ ಶಾಶ್ವತವಾಗಿರುತ್ತದೆ;  ನರರ ಬಾಳ್-ಮನುಷ್ಯರ ಬಾಳು;  ದಿಟಮಿಲ್ಲ-ನಿಜವಲ್ಲ, ಶಾಶ್ವತವಲ್ಲ;  ವಿಪ್ರನಂ-ಬ್ರಾಹ್ಮಣನನ್ನು;  ತನು-ದೇಹ;  ಸೀಳ್ದು ಕೊಟ್ಟಪೆನ್-ಸೀಳಿ ಕೊಡುತ್ತೇನೆ;  ಅಭಯವಿತ್ತು-ಮಾತುಕೊಟ್ಟು;  ತಾನಾಳ್ದ-ತಾನು ಆಳಿದ, ತಾನು ಪರಿಪಾಲಿಸಿದ;  ಇಳೆಯನ್-ಭೂಮಿಯನ್ನು, ರಾಜ್ಯವನ್ನು;  ಆತ್ಮಜಂಗೆ-ಮಗನಿಗೆ;  ಅಪ್ಪೈಸಿ-ಒಪ್ಪಿಸಿ;  ಅನಿಬರೆಲ್ಲರಂ-ಅಷ್ಟೂ ಮಂದಿಯನ್ನು;  ಮಂಟಪದೊಳ್-ಯಜ್ಞಮಂಟಪದಲ್ಲಿ; ಇಹುದೆಂದು-ಇರಬೇಕೆಂದು, ಕುಳಿತುಕೊಂಡಿರಬೇಕೆಂದು;  ಪೊಱಮಟ್ಟನು-ಹೊರಟನು.

            ವೇಷಧಾರಿಯಾದ ಬ್ರಾಹ್ಮಣನು ಹೇಳಿದ ಮಾತುಗಳನ್ನು ಕೇಳಿ, ರಾಜನಾದ ಮಯೂರಧ್ವಜನು,  ’ಜಗತ್ತಿನಲ್ಲಿ ಕೀರ್ತಿಯೇ ಶಾಶ್ವತವಾಗಿರುತ್ತದೆ. ಮನುಷ್ಯನ ಬಾಳು ಶಾಶ್ವತವಲ್ಲ’ ಎಂದು ನಿಶ್ಚಯಿಸಿ, ಬ್ರಾಹ್ಮಣನನ್ನು ಕರೆದು, ’ನಿನಗೆ ನನ್ನ ದೇಹವನ್ನು ಸೀಳಿ ಅರ್ಧಭಾಗವನ್ನು ಕೊಡುತ್ತೇನೆ’ ಎಂದು ಮಾತುಕೊಟ್ಟು, ಅನಂತರ ತನ್ನ ಮಗನಾದ ತಾಮ್ರಧ್ವಜನಿಗೆ ತಾನು ಆಳಿದ ರಾಜ್ಯವೆಲ್ಲವನ್ನೂ ಒಪ್ಪಿಸಿ, ಸಂತೋಷವನ್ನು ತಾಳಿಕೊಂಡು ಸಭೆಯಲ್ಲಿರುವ ಅಷ್ಟೂ ಮಂದಿಯನ್ನು ಯಜ್ಞಮಂಟಪದಲ್ಲಿಯೇ ಇರುವಂತೆ ಕುಳ್ಳಿರಿಸಿ ತಾನು ಅಲ್ಲಿಂದ ಹೊರಟನು.

 

ತರಿಸಿ ಗಂಗಾತೋಯಮಂ ಮಜ್ಜನಂ ಗೈದು

ಪರಮ ಸಾಲಗ್ರಾಮ ತೀರ್ಥಮಂ ಕೈಕೊಂಡು

ತರುಣ ತುಳಸೀದಳದ ಮಾಲೆಯಂ ಕಂಧರದೊಳಾಂತು ಪಂಟಪಕೆ ಬಂದು

ನೆರೆದ ಭೂಸುರಸಭೆಗೆ ಸಾಷ್ಟಾಂಗದಿಂದೆಱಗಿ

ಕರಯುಗಳಮಂ ಮುಗಿದು ನಿಂದು ಬಿನ್ನೈಸಿದಂ

ಧರಣೀಶ್ವರಾಗ್ರಣಿ ಮಯೂರಧ್ವಜಂ ಜನಾಧೀಶ  ಕೇಳ್ ಕೌತುಕವನು  ೧೦

ಪದ್ಯದ ಅನ್ವಯಕ್ರಮ:

ಧರಣೀಶ್ವರ ಅಗ್ರಣಿ ಮಯೂರಧ್ವಜಂ ಗಂಗಾ ತೋಯಂ ತರಿಸಿ, ಮಜ್ಜನಂ ಗೈದು, ಪರಮ ಸಾಲಗ್ರಾಮ ತೀರ್ಥಮಂ ಕೈಕೊಂಡು, ಕಂಧರದೊಳ್ ತರುಣ ತುಳಸೀದಳದ ಮಾಲೆಯಂ ಆಂತು, ಮಂಟಪಕೆ ಬಂದು, ನೆರೆದ ಭೂಸುರ ಸಭೆಗೆ ಸಾಷ್ಟಾಂಗದಿಂದ ಎಱಗಿ, ಕರಯುಗಳಮಂ ಮುಗಿದು ನಿಂದು, ಬಿನ್ನೈಸಿದಂ. ಜನಾಧೀಶ ಕೌತುಕವನು ಕೇಳ್.

ಪದ-ಅರ್ಥ:

ಗಂಗಾತೋಯ-ಗಂಗಾಜಲ, ಗಂಗೆಯ ನೀರು;   ಮಜ್ಜನಂ ಗೈದು-ಸ್ನಾನಮಾಡಿ;  ಪರಮ-ಶ್ರೇಷ್ಠ;  ಸಾಲಗ್ರಾಮ-ಸಾಲಿಗ್ರಾಮ ಶಿಲೆ;  ತೀರ್ಥಮಂ ಕೈಕೊಂಡು-ತೀರ್ಥವನ್ನು ಸ್ವೀಕರಿಸಿ;  ತರುಣ ತುಳಸೀದಳ ಮಾಲೆ-ಎಳೆಯ ತುಳಸಿದಳಗಳ ಮಾಲೆ;  ಆಂತು-ಧರಿಸಿ;  ಕರಯುಗಳ-ಎರಡೂ ಕೈಗಳು;  ಜನಾಧೀಶ-ರಾಜ. 

            ಮಯೂರಧ್ವಜನು ಗಂಗಾಜಲವನ್ನು ತರಿಸಿಕೊಂಡು, ಸ್ನಾನಮಾಡಿ ಶ್ರೇಷ್ಠವಾದ ಸಾಲಗ್ರಾಮವನ್ನು ಪೂಜಿಸಿ ತೀರ್ಥವನ್ನು ಸ್ವೀಕರಿಸಿ, ಎಳೆಯ ತುಳಸಿದಳಗಳ ಮಾಲೆಯನ್ನು ಕೊರಳಲ್ಲಿ ಧರಿಸಿಕೊಂಡು, ಯಜ್ಞಮಂಟಪಕ್ಕೆ ಬಂದು ನೆರೆದಿರುವ ಬ್ರಾಹ್ಮಣರಿಗೆ ಸಾಷ್ಟಾಂಗವಾಗಿ ನಮಸ್ಕರಿಸಿ, ಎದ್ದು ನಿಂತು ಎರಡೂ ಕೈಗಳನ್ನು ಮುಗಿದು, ನೆರೆದ ಎಲ್ಲರಲ್ಲಿಯೂ ಭಿನ್ನವಿಸಿದನು. ಜನಮೇಜಯ ರಾಜನೇ ಆಗ ನಡೆದ ಕುತೂಹಲದ ವಿಚಾರವನ್ನು ಕೇಳು.

 

ಆ ಮಹಾಸ್ಥಾನದೊಳ್ ನೆರೆದಖಿಳ ಭೂಸುರ

ಸ್ತೋಮಂ ನಿರೀಕ್ಷಿಸುವುದಂದು ಬಲಿಯಧ್ವರಕೆ

ವಾಮನಂ ಬಂದಂತೆ ತನ್ನ ಮಖಕೀ ದ್ವಿಜಂ ತಾನೆ ಬಿಜಯಂಗೈದನು

ಶ್ರೀಮಾಧವಸ್ವರೂಪದೊಳೀಗಳರಿದು ತ

ನ್ನೀ ಮೈಯೊಳರ್ಧಮಂ ಕೊಯ್ದು ಕೊಟ್ಟಪೆನತಿ

ಪ್ರೇಮದಿಂದೀತಂಗೆ ಬದುಕಲೀತನ ಸುತಂ ಪೊಸತಾಗಲಿಳೆಗೆಂದನು  ೧೧

ಪದ್ಯದ ಅನ್ವಯಕ್ರಮ:

ಆ ಮಹಾಸ್ಥಾನದೊಳ್ ನೆರೆದ ಅಖಿಳ ಭೂಸುರಸ್ತೋಮಂ ನಿರೀಕ್ಷಿಸುವುದು ಅಂದು ಬಲಿಯ ಅಧ್ವರಕೆ ವಾಮನಂ ಬಂದಂತೆ ತನ್ನ ಮಖಕೆ ಈ ದ್ವಿಜಂ ಶ್ರೀ ಮಾಧವ ಸ್ವರೂಪದೊಳ್ ತಾನೆ ಬಿಜಯಂ ಗೈದನು. ಈಗಳ್ ಅರಿದು. ಅತಿ ಪ್ರೇಮದಿಂದ ತನ್ನ ಈ ಮೈಯೊಳ್ ಅರ್ಧಮಂ ಕೊಯ್ದು ಈತಂಗೆ ಕೊಟ್ಟಪೆನ್, ಈತನ ಸುತಂ ಬದುಕಲಿ, ಇಳೆಗೆ ಪೊಸತಾಗಲಿ ಎಂದನು.

ಪದ-ಅರ್ಥ:

ಮಹಾಸ್ಥಾನ-ವಿಶೇಷವಾದ ಸ್ಥಳ, ಯಾಗಮಂಟಪ;  ನೆರೆದ-ಸೇರಿದ;  ಅಖಿಳ-ಸಮಸ್ತ;  ಭೂಸುರಸ್ತೋಮ-ಬ್ರಾಹ್ಮಣ ಸಮೂಹ;  ಬಲಿಯ ಅಧ್ವರ-ಬಲಿಚಕ್ರವರ್ತಿಯ ಯಾಗ;  ವಾಮನಂ-ವಾಮನಾವತಾರಿ ವಿಷ್ಣು;  ಮಖ-ಯಾಗ;  ದ್ವಿಜಂ-ಬ್ರಾಹ್ಮಣನು; ಮಾಧವಸ್ವರೂಪದೊಳ್-ವಿಷ್ಣುರೂಪದಲ್ಲಿ; ಈಗಳ್-ಈ ಕ್ಷಣದಲ್ಲಿ; ಅರಿದು-ಅಪೂರ್ವವಾದುದು; ಅತಿಪ್ರೇಮದಿಂದ-ತುಂಬಾ ಪ್ರೀತಿಯಿಂದ;  ಸುತ-ಮಗ;  ಪೊಸತಾಗಲಿ-ಹೊಸತಾಗಲಿ, ಒಳ್ಳೆಯದಾಗಲಿ;   ಇಳೆಗೆ-ಭೂಮಿಗೆ.

            ಅಂದು ಬಲಿಚಕ್ರವರ್ತಿಯ ಯಾಗದ ಸಂದರ್ಭದಲ್ಲಿ ಯಾಗಮಂಟಪದಲ್ಲಿ ಸೇರಿದ ಬ್ರಾಹ್ಮಣಸಮೂಹ ನಿರೀಕ್ಷಿಸುತ್ತಿದ್ದಂತೆ, ವಿಷ್ಣು ವಾಮನ ಅವತಾರವನ್ನು ತಾಳಿಕೊಂಡು ಬಲಿಯ ಯಾಗಮಂಟಪಕ್ಕೆ ಬಂದಂತೆ, ಈಗ ತನ್ನ ಯಾಗಕ್ಕೆ ಅಪೂರ್ವವೆನ್ನುವಂತೆ ಶ್ರೀ ವಿಷ್ಣು ಈ ಬ್ರಾಹ್ಮಣನ ರೂಪದಲ್ಲಿ ಆಗಮಿಸಿದ್ದಾನೆ. ಈ ಕೂಡಲೇ ತುಂಬಾ ಪ್ರೀತಿಯಿಂದ ನನ್ನ ದೇಹವನ್ನು ಕೊಯ್ದು ಈತನಿಗೆ ನೀಡುತ್ತೇನೆ. ನನ್ನ ಅರ್ಧದೇಹದಿಂದಾಗಿ ಈತನ ಮಗನು ಬದುಕುವಂತಾಗಲಿ. ಇದರಿಂದ ಈ ಭೂಮಿಗೆ ಒಳ್ಳೆಯದಾಗಲಿ ಎಂದನು.

 

ಆ ಮಯೂರಧ್ವಜಂ ಬಳಿಕಲ್ಲಿ ವಿಪ್ರರಂ

ಹೇಮ ಮಣಿ ಗಜ ತುರಗ ವಸ್ತ್ರಭೂಷಣ ಧೇನು

ಭೂಮಿ ದಾನಂಗಳಿಂ ತಣಿಸಿ ನೆಡಿಸಿದನೆರಡು ಕಂಬಮಂ ನಡುವೆ ತನ್ನ

ಕೋಮಲಶರೀರಮಂ ಪುಗಿಸಿ ಕಾಂಚನಮಯ ಸು

ದಾನದಿಂ ತೋಳ್ ತೊಡೆಗಳಂ ಬಿಗಿಸಿಕೊಂಡು ನಿಂ

ದಾ ಮಹೀಸುರನ ಪದಕಮಲಗಳಂ ತೊಳೆದು ಸಾದರದೊಳಿಂತೆಂದನು  ೧೨

 

ಪದ್ಯದ ಅನ್ವಯಕ್ರಮ:

ಬಳಿಕ ಆ ಮಯೂರಧ್ವಜಂ ಅಲ್ಲಿ ವಿಪ್ರರಂ ಹೇಮ, ಮಣಿ, ಗಜ, ತುರಗ, ವಸ್ತ್ರ, ಭೂಷಣ, ಧೇನು, ಭೂಮಿ ದಾನಂಗಳಿಂ ತಣಿಸಿ, ಎರಡು ಕಂಬಮಂ ನೆಡಿಸಿದನ್, ನಡುವೆ ತನ್ನ ಕೋಮಲ ಶರೀರಮಂ ಪುಗಿಸಿ, ಕಾಂಚನಮಯ ಸುದಾನದಿಂ ತೋಳ್ ತೊಡೆಗಳಂ ಬಿಗಿಸಿಕೊಂಡು ನಿಂದು ಆ ಮಹೀಸುರನ ಪದಕಮಲಗಳಂ ತೊಳೆದು ಸಾದರದೊಳ್ ಇಂತೆಂದನು.  

ಪದ-ಅರ್ಥ:

ವಿಪ್ರರಂ-ಬ್ರಾಹ್ಮಣರನ್ನು;   ಹೇಮ-ಚಿನ್ನ, ಮಣಿ-ರತ್ನ;   ಗಜ-ಆನೆ;   ತುರಗ-ಕುದುರೆ;   ಭೂಷಣ-ಆಭರಣ;   ಧೇನು-ಗೋವು;  ತಣಿಸಿ-ತೃಪ್ತಿಹೊಂದುವಂತೆ ಮಾಡಿ;   ಕಾಂಚನಮಯ-ಚಿನ್ನದಿಂದ ತಯಾರಿಸಿದ; ಸುದಾನದಿಂ-ಹಗ್ಗದಿಂದ;  ಮಹೀಸುರ-ಬ್ರಾಹ್ಮಣ;  ಪದಕಮಲ-ಪಾದಕಮಲ;  ಸಾದರದೊಳ್-ಆದರಪೂರ್ವಕವಾಗಿ.

            ಅನಂತರ ಮಯೂರಧ್ವಜನು ಅಲ್ಲಿ ನೆರೆದಿರುವ ಬ್ರಾಹ್ಮಣರಿಗೆ ಚಿನ್ನ, ರತ್ನ, ಆನೆ, ಕುದುರೆ, ವಸ್ತ್ರ, ಒಡವೆ, ಗೋವು, ಭೂಮಿ ಮೊದಲಾದ ದಾನಗಳನ್ನು ನೀಡಿ ಅವರನ್ನು ತೃಪ್ತಿಪಡಿಸಿ,  ಯಾಗಮಂಟಪದಲ್ಲಿ ಎರಡು ಕಂಬಗಳನ್ನು ನೆಡಿಸಿ, ಅವುಗಳ ನಡುವೆ ತನ್ನ ಕೋಮಲವಾದ ಶರೀರವನ್ನು ಪುಗಿಸಿ, ತನ್ನ ತೋಳು ಹಾಗೂ ತೊಡೆಗಳನ್ನು ಚಿನ್ನದಿಂದ ತಯಾರಿಸಿದ ಹಗ್ಗದಿಂದ ಬಿಗಿದು ನಿಂತು,  ಬ್ರಾಹ್ಮಣನ ವೇಷದಲ್ಲಿದ್ದ ಕೃಷ್ಣನ ಪಾದಕಮಲಗಳನ್ನು ತೊಳೆದು ಆದರಪೂರ್ವಕವಾಗಿ ಹೀಗೆ ಹೇಳಿದನು.

 

ಭೂಸುರೋತ್ತಮ ನಿನಗೆ ತಾಂ ಕೊಡುವ ದೇಹಾರ್ಧ

ದೀ ಸುದಾನದೊಳಖಿಲ ಯಜ್ಞನಾಯಕನಾದ

ವಾಸುದೇವಂ ಪ್ರೀತನಾಗಲಸ್ಮತ್ಕುಲೋದ್ಭವರಾದ ಜೀವಿಗಳೊಳು

ಲೇಸಿಂದೆ ಪಾರ್ವಂಗೆ ತನುಧನವನೀವೆಡೆಯೊ

ಳೋಸರಿಸದಿರಲಿ ಬುದ್ಧಿಗಳೆಂದು ನೃಪತಿ ಕ

ಟ್ಟಾಸುರದ ಕೊಯ್ಗಾಱರಂ ಕರೆಸಿ ತೆಗೆಸಿದಂ ಮಸೆದ ಕೊಯ್ಗತ್ತಿಗಳನು  ೧೩

ಪದ್ಯದ ಅನ್ವಯಕ್ರಮ:

ಭೂಸುರೋತ್ತಮ, ನಿನಗೆ ತಾಂ ಕೊಡುವ ದೇಹಾರ್ಧದ ಈ ಸುದಾನದೊಳ್ ಅಖಿಲ ಯಜ್ಞನಾಯಕನಾದ ವಾಸುದೇವಂ ಸತ್ಕುಲ ಉದ್ಭವರಾದ ಜೀವಿಗಳೊಳು ಪ್ರೀತನಾಗಲಿ, ಲೇಸಿಂದೆ  ತನು ಮನ ಧನವನ್ ಪಾರ್ವಂಗೆ ಈವೆಡೆಯೊಳು ಬುದ್ಧಿ ಓಸರಿಸದಿರಲಿ ಎಂದು ನೃಪತಿ ಕಟ್ಟಾಸುರದ ಕೊಯ್ಗಾಱರಂ ಕರೆಸಿ ಮಸೆದ ಕೊಯ್ಗತ್ತಿಗಳನು  ತೆಗೆಸಿದಂ.  

ಪದ-ಅರ್ಥ:

ಭೂಸುರೋತ್ತಮ-ಬ್ರಾಹ್ಮಣಶ್ರೇಷ್ಠ;  ತಾಂ-ನಾನು;   ಸುದಾನ-ಒಳ್ಳೆಯ ದಾನ;   ಅಖಿಲ-ಸಮಸ್ತ; ಸತ್ಕುಲ-ಒಳ್ಳೆಯ ಕುಲ;  ಪ್ರೀತನಾಗಲಿ-ಸಂತುಷ್ಟನಾಗಲಿ; ಸತ್ಕುಲೋದ್ಭವರಾದ-ಉತ್ತಮ ಕುಲದಲ್ಲಿ ಹುಟ್ಟಿದ; ಲೇಸಿಂದೆ-ಒಳಿತಿನಿಂದ;  ಪಾರ್ವಂಗೆ-ಬ್ರಾಹ್ಮಣನಿಗೆ;  ತನು-ದೇಹ;  ಧನ-ಹಣ;  ಈವೆಡೆಯೊಳ್-ನೀಡುವ ಸಮಯದಲ್ಲಿ;  ಓಸರಿಸದಿರಲಿ-ಹಿಂಜರಿಯದಿರಲಿ;  ನೃಪತಿ-ರಾಜ(ಮಯೂರಧ್ವಜ); ಕಟ್ಟಾಸುರದ(ಕಡಿದು+ಆಸುರ)-ಅತಿ ಭಯಂಕರರಾದ; ಕೊಯ್ಗಾಱರಂ-ಕೊಯ್ಯುವವರನ್ನು;  ಮಸೆದ ಕೊಯ್ಗತ್ತಿ-ಹರಿತಗೊಳಿಸಿದ ಕೊಯ್ಯುವ ಕತ್ತಿ(ಗರಗಸ).

            ಬ್ರಾಹ್ಮಣೋತ್ತಮರೆ, ನಿಮಗೆ ನಾನು ಕೊಡುತ್ತಿರುವ ನನ್ನ ದೇಹದ ಅರ್ಧಭಾಗದ ದಾನದಿಂದ ಸಮಸ್ತ ಯಜ್ಞನಾಯಕನಾದ ವಾಸುದೇವನು ಉತ್ತಮಕುಲದಲ್ಲಿ ಹುಟ್ಟಿದವರೆಲ್ಲರ ಬಗ್ಗೆಯೂ ಸಂತುಷ್ಟನಾಗಲಿ. ಒಳಿತಿನಿಂದ ನಾನು ಬ್ರಾಹ್ಮಣನಿಗೆ ಕೊಡುತ್ತಿರುವ ಈ ದೇಹ ಹಾಗೂ ಧನಗಳ ದಾನಗಳಿಂದ ಮನಸ್ಸು, ಬುದ್ಧಿಗಳು ಹಿಂಜರಿಯದಿರಲಿ ಎಂದು ಹೇಳುತ ಮಯೂರಧ್ವಜನು ಅತಿಭಯಂಕರರಾದ ಕೊಯ್ಯುವ ಆಳುಗಳನ್ನು ಕರೆಸಿಕೊಂಡು ಹರಿತಗೊಳಿಸಿದ ಕೊಯ್ಯುವ ಕತ್ತಿ(ಗರಗಸ)ಗಳನ್ನು ತೆಗೆಸಿದನು.

(ಭಾಗ – ೨ರಲ್ಲಿ ಮುಂದುವರಿದಿದೆ)

 

Leave a Reply

Your email address will not be published. Required fields are marked *